ರೀಲ್ಸ್‌ನಲ್ಲಿ ತೋರಿಸಿದ ಹಾಗೆ ಎರಡು ದಿನಗಳಲ್ಲಿ ಅದರಲ್ಲಿ ಸೃಷ್ಟಿಯ ಕುರುಹುಗಳು ಕಂಡುಬರಬೇಕಿತ್ತು. ದಿನ ಎರಡಾಯಿತು ಮೂರಾಯಿತು ಬೀಜ ಕದಲಲಿಲ್ಲ. ಬೀಜಗಳನ್ನು ಹೊರತೆಗೆದು ಕೈಯಲ್ಲಿಟ್ಟು ನೋಡಿದ. ತಿರುಗಿಸಿ ತಿರುಗಿಸಿ ನೋಡಿದರೂ ಬೀಜ ನಿಸ್ತೇಜವಾಗಿ ಬಿದ್ದುಕೊಂಡಿತ್ತು. ಅದು ಮೊಳಕೆಯೊಡೆಯುವ ಯಾವ ಮನಸ್ಸನ್ನೂ ಮಾಡಲಿಲ್ಲ. ಮೊದಮೊದಲು ಧ್ರುವನ ಈ ತಳಮಳವನ್ನು ನೋಡಿ ನಾನು ಜೋರಾಗಿ ನಗುತ್ತಿದ್ದೆ. ಮೊದಲೇ ಹೇಳಿದ್ದೆ ನಿಂಗೆ ಇದು ವರ್ಕ್ ಔಟ್ ಆಗಲ್ಲ ಅಂತ. ಸುಮ್ನೆ ಟೈಮ್ ವೇಸ್ಟ್. ರೀಲ್ಸ್‌ನಲ್ಲಿ ಸುಮ್ನೆ ತೋರಿಸಿ ನಮ್ಮನ್ನು ಮಂಗ ಮಾಡ್ತಾರೆ. ಅದನ್ನು ನಂಬಿದ ನೀನು ದೊಡ್ಡ ಮಂಗ ಅಂತ ಮಗನನ್ನು ತಮಾಷೆ ಮಾಡುತ್ತಿದ್ದೆ…
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರೆದ ಲಲಿತ ಪ್ರಬಂಧ ನಿಮ್ಮ ಓದಿಗೆ
ಗೆಳೆಯ ಯತೀಶ್ ಕಜ್ಜೋಡಿ ತನ್ನ ಮುಂಚೂರು ಮನೆಯ ಅಂಗಳದಲ್ಲಿ ಪುಟ್ಟ ಕೈತೋಟವನ್ನೇ ಮಾಡಿದ್ದಾನೆ. ಬಗೆಬಗೆಯ ಹೂವುಗಳನ್ನು ತರಕಾರಿಗಳನ್ನು ಗ್ರೋಬ್ಯಾಗ್ ಮತ್ತು ಚಟ್ಟಿಗಳಲ್ಲಿ ಬಹಳ ಮುತುವರ್ಜಿಯಿಂದ ಬೆಳೆಸಿದ್ದಾನೆ. ಮೂಲತಃ ಕೃಷಿಕನೂ ಆಗಿರುವ ಯತೀಶನ ಈ ಸೃಜನಶೀಲ ಕೃಷಿಯಿಂದಾಗಿ ಅವನ ಅಂಗಳ ಹೂಗಳಿಂದ ನಳನಳಿಸುತ್ತಿದೆ. ನಾನು ಹಾಗೆ ಅನ್ನುವಾಗ ಮನೆಯ ಅಂಗಳದಲ್ಲಿ ಹೂಗಳು ಅಷ್ಟು ಚಂದ ಅರಳಿ ಚಂದ ಕಾಣ್ಬೇಕು ಅಂದ್ರೆ ಯತೀಶ್ ಜೊತೆಜೊತೆಯಲ್ಲಿ ಅವನ ಹೆಂಡತಿ ಶಿಲ್ಪಾ ಕೂಡಾ ಅಷ್ಟೇ ನೋಡ್ಕೊಳ್ತಾಳೆ. ಸುಮ್ನೆ ಒಬ್ರಿಂದ ಏನೂ ಆಗೋದಿಲ್ಲ ಅನ್ನುತ್ತಾ ಪರೋಕ್ಷವಾಗಿ ನಾನು ಗಿಡಗಳ ಹತ್ತಿರ ಹೋಗೋದಿಲ್ಲ ಅನ್ನುವುದನ್ನು ಸಂಧ್ಯಾ ನೆನಪಿಸುತ್ತಾಳೆ.
ಈ ನನ್ನ ಫ್ಯಾಮಿಲಿ ಗೆಳೆಯನ ಮನೆಗೆ ಇತ್ತೀಚೆಗೆ ಹೋದಾಗ ಹೊಸ ತಲೆಮಾರಿನ ತೀವ್ರ ಕುತೂಹಲದ ಕೃಷಿಕನಾಗಿ ರೂಪುಗೊಂಡಿರುವ ನನ್ನ ಮಗ ಧ್ರುವನ ಕಣ್ಣಿಗೆ ಹೊಸದಾಗಿ ಮೊಗ್ಗರಳಿ ಹೂವಾಗುತ್ತಿರುವ ತಾವರೆಯ ಸಣ್ಣ ಸಣ್ಣ ಕೊಳಗಳು ಕಣ್ಣಿಗೆ ಬಿತ್ತು. ಡೀ ಮಾರ್ಟ್‌ಗೆ ತಿಂಗಳ ರೇಷನ್‌ಗೆ ಅಂತ ಹೋದಾಗ ಹತ್ತಾರು ಗಿಡಗಳನ್ನು ನೆಡುವಂತಹ ಪ್ಲಾಸ್ಟಿಕ್ ಚಟ್ಟಿಗಳನ್ನು ತಂದು ಅಕ್ಕಪಕ್ಕದ ಸೈಟ್‌ಗಳಿಂದ ಮಣ್ಣು ತುಂಬಿಸಿ ಬಗೆಬಗೆಯ ಹೂವಿನ ಗಿಡಗಳನ್ನು ನೆಟ್ಟಿದ್ದಾನೆ. ಸ್ವಲ್ಪ ಚಿಗುರಿತು ಅನ್ನುವಾಗ ಆ ಗಿಡವನ್ನು ಎತ್ತಿ ಬೇರು ಬಂದಿದೆಯಾ ಅಂತ ಚೆಕ್ ಮಾಡಿ ಮತ್ತೆ ನೆಡುತ್ತಾನೆ. ಹಾಗಾಗಿ ಪ್ರತೀ ವಾರಕ್ಕೆ ಒಂದು ಹೊಸ ಗಿಡವನ್ನು ಮತ್ತೆ ಮತ್ತೆ ನೆಡುತ್ತಿರುತ್ತಾನೆ. ಗಿಡ ಸತ್ತಾಗ ಮಣ್ಣು ಸರಿ ಇಲ್ಲ. ಸರಿಯಾಗಿ ಗೊಬ್ಬರ ಹಾಕಿಲ್ಲ. ಅವರ ಮನೆಯಿಂದ ತಂದ ಗಿಡ ಸರಿ ಇಲ್ಲ ಅಂತ ಹೇಳುತ್ತಾ ನಮ್ಮ ಮನೆ ಹತ್ತಿರದ ನರ್ಸರಿಗೆ ಹೋಗುತ್ತಾನೆ ಹೊಸ ಗಿಡದ ಅನ್ವೇಷಣೆಗೆ. ಹಾಗಾಗಿ ತಿಂಗಳಲ್ಲಿ ಇಷ್ಟು ಅಂತ ನರ್ಸರಿಗೆ ಎತ್ತಿ ಇಡುವುದು ನನಗೆ ಅನಿವಾರ್ಯವಾಗಿದೆ.
ಹೋದ ಸಲ ಊರಿಗೆ ಹೋಗಿದ್ದಾಗ ಅಮ್ಮನ ಬಳಿ ಕಾಡಿ ಬಸಳೆಯ ದಂಟು ಮತ್ತು ಬೆಂಡೆಯ ಬೀಜಗಳನ್ನು ತಂದಿದ್ದ. ಅದೇ ಸಂಜೆ ಒಂದು ಚಟ್ಟಿಯ ಮಣ್ಣಿನಲ್ಲಿ ಎಲ್ಲಾ ಬೆಂಡೆಯ ಬೀಜಗಳನ್ನು ಹಾಕಿ ನೀರು ಹಾಕಿದ್ದ. ದಿನಾ ಶಾಲೆಗೆ ಹೋಗುವ ಮೊದಲು ಮನೆಯ ಸುತ್ತ ಒಂದು ರೌಂಡ್ ಹಾಕಿ ನೋಡಿ ಬರುತ್ತಾನೆ. ಎಷ್ಟು ಬೀಜಗಳನ್ನು ಇರುವೆ ತೆಗೆದುಕೊಂಡು ಹೋಗಿವೆ ಎಷ್ಟು ಬೀಜಗಳು ಮೊಳಕೆ ಒಡೆದಿವೆ ಅನ್ನುವ ವರದಿಯನ್ನು ಯಾರು ಕೇಳದಿದ್ದರೂ ಒಪ್ಪಿಸುವುದು ಅವನ ನಿತ್ಯದ ದಿನಚರಿ. ಒಂದು ವಾರದಿಂದ ಸುರಿದ ಜೋರು ಮಳೆಗೆ ಮೊಳಕೆ ಒಡೆದಿದ್ದ ಸಣ್ಣ ಸಣ್ಣ ಬೆಂಡೆಯ ಗಿಡಗಳು ಕೊಳೆತು ಹೋಗಿವೆ. ಬೆಂಡೆಯ ಗಿಡಗಳಿಗೆ ಹೆಚ್ಚು ನೀರು ಆಗುವುದಿಲ್ಲ ಪಪ್ಪಾ; ಮಳೆಗಾಲ ಮುಗ್ದ್ ಮೇಲೆ ಹಾಕಿದ್ರೆ ಗಿಡಗಳು ಚೆನ್ನಾಗಿ ಬರ್ತವೆ ಅಂತ ಹೇಳಿ ಯಾವ ಕಾಲದಲ್ಲಿ ಯಾವ ಗಿಡ ಹಾಕಿದ್ರೆ ಒಳ್ಳೆದು ಅಂತ ಯೂಟ್ಯೂಬ್‌ನಲ್ಲಿ ರೀಲ್ಸ್ ನೋಡಲು ಹೊಸ ನೆಪಗಳನ್ನು ಹುಡುಕಿಕೊಳ್ಳುತ್ತಾನೆ.
ಅಮ್ಮ ಊರಿನ ಮನೆಯ ಹಿತ್ತಲಿನಲ್ಲಿ ಬಸಳೆ ನೆಟ್ಟು ಅದಕ್ಕೆ ಚಪ್ಪರ ಮಾಡುವುದನ್ನು ನೋಡಿದ್ದಾನೆ. ಅಲ್ಲಿಯೂ ಒಂದು ಪುಟ್ಟ ಚಪ್ಪರ ಅವನು ಮಾಡಿದ್ದಾನೆ. ಇಲ್ಲಿಂದ ಫೋನಿನಲ್ಲಿ ತನ್ನ ಅಜ್ಜಿಯ ಜೊತೆಗೆ ಮಾತಾಡುವಾಗ ತನ್ನ ಚಪ್ಪರ ಜೋರು ಗಾಳಿ ಮಳೆಗೆ ಏನಾಗಿದೆ ಅನ್ನುವ ಚಿಂತೆಯೇ ಅವನ ಮಾತುಕತೆ. ಹಾಗಾಗಿ ಅಲ್ಲಿಂದ ತಂದ ಬಸಳೆಯ ದಂಟುಗಳನ್ನು ಅದೇ ಮಾದರಿಯಲ್ಲಿ ನೆಟ್ಟು ಅದರ ಬಳ್ಳಿಗಳು ಚಿಗುರಿದ ನಂತರ ಸಣ್ಣ ಸಣ್ಣ ಕಟ್ಟಿಗೆಗಳಿಂದ ಚಪ್ಪರವನ್ನು ಮಾಡಿ ಅದರಲ್ಲಿ ಬಿಡುತ್ತಾನೆ. ಎಷ್ಟು ಸಾಯುತ್ತದೋ ಎಷ್ಟು ಉಳಿದು ಚಪ್ಪರವನ್ನು ಹಬ್ಬಿಕೊಳ್ಳುತ್ತದೋ ಅನ್ನುವ ಯಾವ ಚಿಂತೆಯೂ ಅವನಿಗಿಲ್ಲ. ತರ್ಬೇಕು ನೆಡ್ಬೇಕು ಚಪ್ಪರದ ಮೇಲೆ ಬಿಡ್ಬೇಕು ಅಷ್ಟೇ ಅವನ ಕರ್ಮ ಸಿದ್ಧಾಂತ.
ಹಾಗಾಗಿ ಯತೀಶನ ಅಂಗಳದಲ್ಲಿ ಚಂದಗೆ ಬೆಳೆದ ಹಸಿರು ಮತ್ತು ಹೂಗಳನ್ನು ನೋಡಿದಾಗ ಅವನ ಕಣ್ಣಿಗೆ ಯತೀಶ್ ಅಂಕಲ್ ತಾನು ಯೂಟ್ಯೂಬ್‌ನಲ್ಲಿ ನೋಡುತ್ತಿದ್ದ ಗಿಡಗಳ ಬೀಜಗಳ ಮಣ್ಣು ಗೊಬ್ಬರಗಳ ಸಕಲ ಜ್ಞಾನ ಹೊಂದಿರುವ ಫೇವರಿಟ್ ಯೂಟ್ಯೂಬರನ್ನು ನೋಡಿದಷ್ಟೇ ಸಂಭ್ರಮಗೊಂಡು ಅವನ ಕೈಹಿಡಿದು ಆಗ ತಾನೇ ಅರಳುತ್ತಿದ್ದ ತಾವರೆಯ ಹೂವಿನ ಬಳಿ ಕುಳಿತ. ಸಣ್ಣ ಟಿನ್‌ನಲ್ಲಿ ಸಪೂರ ಬಳ್ಳಿಯ ಹಾಗೆ ಹೊರಗೆ ಬಂದು ದೊಡ್ಡ ದೊಡ್ಡ ಎಲೆಯಾಗುವ ಮೊಗ್ಗಾಗುವ ಹೂವಾಗುವ ಗಿಡಗಳನ್ನು ಅವನು ನೋಡುತ್ತಿರುವುದು ಅದೇ ಮೊದಲು. ಗಿಡಗಳಿರುವ ಆ ಸಣ್ಣ ಸಣ್ಣ ಟಿನ್‌ಗಳನ್ನು ಅಗಲವಾದ ದೊಡ್ಡ ನೀರು ತುಂಬಿದ ಬಕೆಟ್‌ಗಳಲ್ಲಿ ಇಟ್ಟದ್ದು ಅವನ ಕುತೂಹಲಕ್ಕೆ ಕಾರಣವಾಯ್ತು ಮತ್ತು ಆ ನೀರಿನಲ್ಲಿ ಲವಲವಿಕೆಯಿಂದ ಓಡಾಡುತ್ತಿರುವ ಸಣ್ಣಸಣ್ಣ ಮೀನುಗಳನ್ನು ಕಂಡ ಮೇಲಂತೂ ಇದ್ರಲ್ಲೇನೋ ವಿಶೇಷವಿದೆ ಅಂತನಿಸಿಬಿಟ್ಟಿತು. ಅವನಿಗೆ ಬೇಕಾದ ಎಲ್ಲವೂ ಆ ಬಕೆಟ್‌ನಲ್ಲಿ ಕಂಡದ್ದೇ ತಡ ಆ ಗಿಡದ ಬಗ್ಗೆ ಬೀಜಗಳ ಬಗ್ಗೆ ತನಗೆ ಬೇಕಾದ ಮಾಹಿತಿ ಸಿಗುವ ತನಕವೂ ಅಲ್ಲಿಂದ ಕದಲಲಿಲ್ಲ.
ಅಲ್ಲಿಂದ ಹೊರಡುವಾಗ ಧ್ರುವನ ಕುತೂಹಲ ಮತ್ತು ಆಸಕ್ತಿ ನೋಡಿ ಯತೀಶ್ ಅವನಿಗೊಂದು ತಾವರೆಯ ಗಿಡವನ್ನು ಕೊಟ್ಟು ಹೇಗೆ ನೆಡ್ಬೇಕು ಅಂತ ವಿವರಿಸಿದ. ಅದೇ ಉತ್ಸಾಹದಲ್ಲಿ ಮನೆಗೆ ಬಂದದ್ದೂ ಆಯಿತು. ಮನೆಯಲ್ಲಿದ್ದ ಬಕೆಟ್‌ಗಳನ್ನು ಉಪಯೋಗಿಸಿ ನೆಟ್ಟದ್ದೂ ಆಯಿತು. ದಿನವೂ ಅದರ ಸುತ್ತಾ ಪ್ರದಕ್ಷಿಣೆ ಹಾಕುತ್ತಾ ಮೀನು ಯಾವಾಗ ಅದ್ರಲ್ಲಿ ಬಿಡುವುದು ಅಂತ ಲೆಕ್ಕಾಚಾರ ಹಾಕುತ್ತಾ ಕುಳಿತ. ಆದರೆ ಯಾಕೋ ದಿನ ಕಳೆದಂತೆ ಆ ಗಿಡ ಚಿಗುರುವುದರ ಬದಲಾಗಿ ಬಾಡುತ್ತಾ ಹೋಯಿತು. ಹೊಸ ಪರಿಸರಕ್ಕೆ ಹೊಂದಾಣಿಕೆ ಆಗದಕ್ಕೋ ಏನೋ ಕೊನೆಗೊಂದು ದಿನ ಸಂಪೂರ್ಣವಾಗಿ ಸತ್ತುಹೋಗಿ ಮನೆಯ ದೊಡ್ಡ ಬಕೆಟ್‌ಗೆ ಮುಕ್ತಿ ಕೊಟ್ಟಿತು. ನಿಜವಾದ ಕಷ್ಟ ಶುರುವಾದದ್ದೇ ಅಲ್ಲಿಂದ. ತಾವರೆ ಗಿಡ ಸತ್ತುಹೋದ ತೀವ್ರವಾದ ಬೇಸರದಲ್ಲಿ ಎರಡು ದಿನ ಸುಮ್ಮನೆ ಕುಳಿತ. ಮೂರನೆಯ ದಿನದಿಂದ ಮತ್ತೆ ಯೂಟ್ಯೂಬ್‌ನಲ್ಲಿ ತಾವರೆಯ ಗಿಡಗಳನ್ನು ಬೆಳೆಸುವುದರ ಕುರಿತಾಗಿ ಒಂದು ಕೋರ್ಸನ್ನೇ ಮಾಡಿದ. ಕಾರ್ಟೂನ್ ಗೇಮ್ಸ್ ಯಾವುದೂ ಇಲ್ಲ. ಬರೇ ತಾವರೆ ತಾವರೆ ತಾವರೆ! ಬೀಜದಿಂದ ಶುರುವಾಗಿ ಹೂ ಅರಳುವ ತನಕದ ಮಾಸ್ಟರ್ ಡಿಗ್ರಿಯನ್ನು ಯೂಟ್ಯೂಬ್ ರೀಲ್ಸ್‌ನಲ್ಲೇ ಪಡೆದುಕೊಂಡ.
ಅಷ್ಟು ಜ್ಞಾನ ಪಡೆದುಕೊಂಡ ನಂತರ ಇನ್ನು ಪ್ರಯೋಗ ಮಾಡದೇ ಬಿಡುವುದುಂಟೇ? ತಾವರೆ ಬೀಜ ಬೇಕು ಅಂತ ಕಾಡಲು ಶುರು ಮಾಡಿದ. ಬೀಜದಿಂದ ಗಿಡ ಮಾಡ್ಲಿಕ್ಕೆ ಆಗಲ್ಲ. ಸುಮ್ನೆ ತೋರಿಸ್ತಾರೆ ರೀಲ್ಸ್‌ನಲ್ಲಿ. ಗಿಡ ಆದರೂ ಅದನ್ನು ಇಲ್ಲಿ ಪರಿ ಮಾಡ್ಲಿಕ್ಕೆ ಆಗ್ಲಿಕ್ಕಿಲ್ಲ. ನಾನು ತಂದು ಕೊಡಲ್ಲ ಅಂತ ಹೇಳಿದ ಮೇಲೆ ಅಸಲಿ ಅಸಹಕಾರ ಚಳುವಳಿ ಶುರು ಮಾಡಿದ. ದಿನಾ ಶಾಲೆ ಮುಗಿದ ನಂತರ ನಾವು ಆಡುವ ಕ್ರಿಕೆಟ್ ಆಟದಲ್ಲಿ ಸರಿಯಾಗಿ ಬೌಲಿಂಗ್ ಮಾಡದೆ ಸತಾಯಿಸಿದ. ತಪ್ಪಿದ್ದದ್ದನ್ನು ಸರಿ ಮಾಡಿ ಬರೆಯುವ ನೆಪದಲ್ಲಿ ಇರೆಸರ್‌ನಿಂದ ಉಜ್ಜಿ ಉಜ್ಜಿ ನೋಟ್ಸ್ ಬುಕ್‌ನ ಪುಟ ಹರಿದ. ನಾನೊಬ್ಬನೇ ಸ್ನಾನ ಮಾಡುತ್ತೇನೆ, ನೀವು ಮಾಡಿಸೋದು ಬೇಡ ಅಂತ ಹೇಳಿ ಬಾತ್ರೂಮಿನ ಬಾಗಿಲು ಹಾಕ್ಕೊಂಡು ಬಕೆಟ್ ಗಟ್ಟಲೆ ನೀರು ವೇಸ್ಟ್ ಮಾಡಿದ. ಇನ್ನೇನು ಪ್ಲಾನ್ ಹಾಕಿಕೊಂಡಿದ್ನೋ ಗೊತ್ತಿಲ್ಲ. ಅಷ್ಟಕ್ಕೇ ನಾನು ಅವನ ಚಳುವಳಿಗೆ ಮಣಿದು ಮನೆ ಹತ್ತಿರದ ನರ್ಸರಿಯಿಂದ ಐದು ತಾವರೆಯ ಬೀಜಗಳನ್ನು ತಂದುಕೊಟ್ಟೆ. ಅದೇ ಕ್ಷಣ ಕದನ ವಿರಾಮ ಘೋಷಿಸಿ ಎರಡು ಗ್ಲಾಸ್ ಬಾಟಲ್‌ನಲ್ಲಿ ನೀರು ತುಂಬಿಸಿ ತಾವರೆಯ ಬೀಜಗಳನ್ನು ಹಾಕಿದ.
ರೀಲ್ಸ್‌ನಲ್ಲಿ ತೋರಿಸಿದ ಹಾಗೆ ಎರಡು ದಿನಗಳಲ್ಲಿ ಅದರಲ್ಲಿ ಸೃಷ್ಟಿಯ ಕುರುಹುಗಳು ಕಂಡುಬರಬೇಕಿತ್ತು. ದಿನ ಎರಡಾಯಿತು ಮೂರಾಯಿತು ಬೀಜ ಕದಲಲಿಲ್ಲ. ಬೀಜಗಳನ್ನು ಹೊರತೆಗೆದು ಕೈಯಲ್ಲಿಟ್ಟು ನೋಡಿದ. ತಿರುಗಿಸಿ ತಿರುಗಿಸಿ ನೋಡಿದರೂ ಬೀಜ ನಿಸ್ತೇಜವಾಗಿ ಬಿದ್ದುಕೊಂಡಿತ್ತು. ಅದು ಮೊಳಕೆಯೊಡೆಯುವ ಯಾವ ಮನಸ್ಸನ್ನೂ ಮಾಡಲಿಲ್ಲ. ಮೊದಮೊದಲು ಧ್ರುವನ ಈ ತಳಮಳವನ್ನು ನೋಡಿ ನಾನು ಜೋರಾಗಿ ನಗುತ್ತಿದ್ದೆ. ಮೊದಲೇ ಹೇಳಿದ್ದೆ ನಿಂಗೆ ಇದು ವರ್ಕ್ ಔಟ್ ಆಗಲ್ಲ ಅಂತ. ಸುಮ್ನೆ ಟೈಮ್ ವೇಸ್ಟ್. ರೀಲ್ಸ್‌ನಲ್ಲಿ ಸುಮ್ನೆ ತೋರಿಸಿ ನಮ್ಮನ್ನು ಮಂಗ ಮಾಡ್ತಾರೆ. ಅದನ್ನು ನಂಬಿದ ನೀನು ದೊಡ್ಡ ಮಂಗ ಅಂತ ಮಗನನ್ನು ತಮಾಷೆ ಮಾಡುತ್ತಿದ್ದೆ. ಆದರೆ ಒಂದು ವಾರದ ನಂತರವೂ ಬೀಜ ಮೊಳಕೆಯೊಡೆಯುವ ಸೂಚನೆಯೇ ಸಿಗದಿದ್ದಾಗ ಮತ್ತೆ ತನ್ನ ಪ್ರಯತ್ನ ವಿಫಲ ಆಯ್ತು ಅಂತ ಗೊತ್ತಾದಾಗ ಮಗರಾಯ ಡಲ್ ಆದ. ಆಗ ಮಾತ್ರ ಅವನ ಕುಂದಿದ ಮುಖ ನೋಡಿ ನನಗೂ ಬೇಸರವಾಯ್ತು.
ಆ ಬೀಜ ಸರಿ ಇರ್ಲಿಲ್ಲ ದ್ರುವ. ನರ್ಸರಿಯವ ತನ್ನ ಗಿಡ ಸೇಲ್ ಆಗ್ಲಿ ಅಂತ ಒಳ್ಳೆಯ ಬೀಜಗಳನ್ನೇ ಕೊಡ್ಲಿಲ್ಲ. ಅದ್ಕೇ ಅವು ಮೊಳಕೆ ಒಡಿಲಿಲ್ಲ. ಏನ್ ಮಾಡ್ಲಿಕ್ಕಾಗುತ್ತೆ ಅಂತ ಅವನಿಗೆ ಸಮಾಧಾನ ಹೇಳಿದೆ. ಹೇಗಾದರೂ ಮಾಡಿ ಒಂದು ತಾವರೆಯ ಗಿಡ ಮಾಡ್ಬೇಕು ಅಂತ ಪ್ರಯತ್ನ ಪಟ್ಟು ಆ ಬೀಜಗಳನ್ನು ವಾರದ ಕಾಲ ನೋಡಿಕೊಂಡಿದ್ದ. ಅವನ ಬೇಸರ ಸಹಜವೇ. ನಾನೂ ಪರೋಕ್ಷವಾಗಿ ಈ ಕೆಲಸದಲ್ಲಿ ಅವನ ಜೊತೆಯಲ್ಲಿಯೇ ಇದ್ದೆ. ಹಾಗಾಗಿ ಅವನ ಬೇಸರ ನನಗೂ ತಲುಪಿ ಅವನಿಗೆ ಸಹಾಯ ಮಾಡ್ಬೇಕು ಅಂತ ನಿಜವಾಗಿಯೂ ಅನ್ನಿಸಿತು. ಇದೇ ಮನಸ್ಥಿತಿಯಲ್ಲಿದ್ದಾಗ ನನಗೆ ನನ್ನ ನೆಚ್ಚಿನ ಕವಿ ಗಂಗಾಧರ ಚಿತ್ತಾಲರ ಕವಿತೆಯೊಂದು ನೆನಪಿಗೆ ಬಂತು.
ಮನೆಮಕ್ಕಳು ಖಾಲಿ ಟಿನ್ನುಗಳಲ್ಲಿ ಮಾಡಿದ ಕೃಷಿಯನ್ನು ಕಂಡು ಗಂಗಾಧರ ಚಿತ್ತಾಲರು ಪರಮ ಕುತೂಹಲ ತಾಳುತ್ತಾರೆ. ಈ ಸೋಜಿಗದ ಸುತ್ತ ನೆರೆದ ಮಕ್ಕಳ ಮಧ್ಯೆ ಸೇರಿ ನಾನೂ ಕುಳಿತೆ, ಮೈಮರೆತೆ ಮಗುವಾಗಿ ಅಂತ ತಾನು ಮಗುವಾದ ಪರಿಯನ್ನು ಹೇಳುತ್ತಾರೆ. ಸಂಪರ್ಕ ಅನ್ನುವ ನನ್ನ ಇಷ್ಟದ ಅವರ ಕವಿತೆಯ ಸಾಲುಗಳು ಈ ಬೆರಗನ್ನು ಅದ್ಭುತವಾಗಿ ಕಟ್ಟಿಕೊಡುತ್ತವೆ.
“ಮೋಜೆನಿಸಿ ನೋಡುತ್ತಾ ಕುಳಿತೆ –
ಹೊಲಗದ್ದೆ ಕಾಣದೀ ಮರಿ-ಕೃಷೀವಲರೆಲ್ಲ
ಖಾಲಿ ಟಿನ್ನುಗಳಲ್ಲಿ ಬೀದಿ ಧೂಳನು ತಂದು ಪಾತಿ ಕಟ್ಟಿ,
ಸುಕ್ಕಿದೊಣಕಲು ಬೀಜವಿಷ್ಟು ಹೂಳಿ,
ಬಾಟ್ಲಿ ನೀರಿನಲೆ ಪರ್ಜನ್ಯ ಸುರಿಸಿ,
ಕೃತಕೃತ್ಯರಂತೆ ಸುಗ್ಗಿ ಕನಸು ಕಾಣುತ ನಿಂತ ಮುಗ್ಧಠೀವಿ!”
ಯಾವುದೇ ಕಾರಣಕ್ಕೂ ದೊಡ್ಡವರು ಮಾಡುವ ಕೃಷಿಗಿಂತ ಈ ಮಕ್ಕಳು ಟಿನ್‌ನಲ್ಲಿ ಮಾಡಿದ ಜೀವಸೃಷ್ಟಿ ಕಡಿಮೆಯಾದುದಲ್ಲ. ಉಪಯುಕ್ತತೆಯಲ್ಲ ಮುಖ್ಯವಾದುದು. ಸೃಷ್ಟಿಯ ಬೆರಗೇ ಮುಖ್ಯವಾದುದು. ಸ್ಪಿರಿಟ್ ಈಜ್‌ದ ಸೇಮ್ ಅಂತ ಈ ಕವಿತೆಯನ್ನು ವ್ಯಾಖ್ಯಾನಿಸುತ್ತಾ ಎಚ್ಚೆಸ್ವಿ ಬರೆದಿದ್ದರು.
ಈ ಸ್ಪಿರಿಟ್ ಈಜ್ ದ ಸೇಮ್ ಅನ್ನುವ ಮಾತು ನನ್ನನ್ನು ತುಂಬಾ ಕಾಡಿತು. ಅಪ್ಪ ಕೃಷಿ ಮಾಡುತ್ತಿದ್ದ ದಿನಗಳಲ್ಲಿ ತರಕಾರಿಗಳನ್ನು ಬೆಳೆಸಲು ಪಡುತ್ತಿದ್ದ ಕಷ್ಟ ಸುಖ ಸಂಭ್ರಮಗಳೆಲ್ಲಾ ಕಣ್ಣೆದುರಿಗೆ ಬಂತು. ಅದೇ ದೃಷ್ಟಿಯಿಂದ ನೋಡಿದಾಗ ಮಗನ ಈ ತಾವರೆಯ ಕೃಷಿಯ ಪ್ರಯತ್ನ ಸಣ್ಣದೆನಿಸಲಿಲ್ಲ. ಎರಡರಲ್ಲೂ ವ್ಯಾತ್ಯಾಸವಿಲ್ಲ. ಸ್ಪಿರಿಟ್ ಈಜ್ ದ ಸೇಮ್!
ನರ್ಸರಿಯಿಂದ ತಂದ ಬೀಜ ಸರಿ ಇರ್ಲಿಲ್ಲ ಅಂತ ನಾನು ಹೇಳಿದ್ದನ್ನೇ ಗಟ್ಟಿಯಾಗಿ ನಂಬಿಕೊಂಡ ಮಗರಾಯ ಒಳ್ಳೆಯ ಬೀಜ ಎಲ್ಲಿ ಸಿಗುತ್ತೆ ಅಂತ ಮತ್ತದೇ ರೀಲ್ಸ್‌ಗೆ ಮೊರೆಹೋದ. ಆನ್ಲೈನ್‌ನಿಂದಲೂ ತರಿಸಿಕೊಳ್ಳಬಹುದು ಅಂತ ಗೊತ್ತಾದಾಗ ಅವನ ಆಜ್ಞೆಯ ಮೇರೆಗೆ ಅಲ್ಲಿಂದ ಆರ್ಡರ್ ಮಾಡಿ ಹದಿನೈದು ಬೀಜಗಳನ್ನು ತರಿಸಿಕೊಟ್ಟೆ. ಈ ಸಲ ತಂದ ಬೀಜಗಳನ್ನು ಸೀದಾ ನೀರಿಗೆ ಹಾಕಲಿಲ್ಲ. ಬೇರೇನೋ ರೀತಿಯನ್ನು ನೋಡಿದ್ದ. ಸ್ಯಾಂಡ್ ಪೇಪರ್ ಬೇಕು ಅಂದ. ತಂದುಕೊಟ್ಟೆ. ಆ ಪೇಪರ್‌ನಲ್ಲಿ ಬೀಜದ ಎರಡೂ ಬದಿಯನ್ನು ಅದರ ಮೇಲಿನ ಪದರ ಹೋಗುವವರೆಗೆ ತಿಕ್ಕಿದ. ಹೋದ ಸಲ ನಾವು ಹೀಗೆ ರಬ್ ಮಾಡದೆ ಹಾಕಿದ್ದೇ ಮಿಸ್ಟೇಕ್. ಅದಕ್ಕೇ ಅದ್ರಲ್ಲಿ ಮೊಳಕೆ ಬರ್ಲಿಲ್ಲ ಪಪ್ಪ ಅಂತ ನನಗೂ ಅದನ್ನು ಮಾಡಿ ತೋರಿಸಿದ. ನನಗೆ ಇದು ಎಡಿಸನ್ ಬಲ್ಬ್ ಕಂಡುಹಿಡಿಯುವ ಪ್ರಯತ್ನಗಳ ಹಾಗೆ ಕಂಡಿತು. ಅವನು ಒಂದು ಸಾವಿರ ವಿಫಲ ಪ್ರಯತ್ನಗಳನ್ನು ಮಾಡಿದಾಗ ಅದನ್ನು ಹಂಗಿಸಿದವರಿಗೆ ಹೇಳಿದ್ನಂತೆ. ನಾನು ಸೋತಿಲ್ಲ, ಬದಲಾಗಿ ಹೀಗೆ ಮಾಡಿದರೆ ಬಲ್ಬ್ ಉರಿಯಲ್ಲ ಅನ್ನುವ ಒಂದು ಸಾವಿರ ಮಾದರಿಗಳನ್ನು ತೋರಿಸಿದ್ದೇನೆ. ಖಂಡಿತಾ ಮುಂದೆ ಸಕ್ಸಸ್ ಆಗ್ತೇನೆ ಅಂತ. ಅವನೇನೋ ಅವನ ಪ್ರಯತ್ನದಲ್ಲಿ ಸಕ್ಸಸ್ ಆದ. ನಮ್ಮದು ಯಾಕೋ ಡೌಟ್ ಅನ್ನಿಸಿತು. ಆದರೂ ಅವನು ಹೇಳಿದ ಹಾಗೆ ನಾನೂ ಎರಡು ಬೀಜಗಳನ್ನು ರಬ್ ಮಾಡಿ ನೀರಿನಲ್ಲಿ ಹಾಕಿದೆ. ಒಳ್ಳೆಯ ಬಿಸಿಲು ಬರುವ ಕಡೆಯಲ್ಲಿ ಅವನ್ನೆಲ್ಲಾ ಇಟ್ಟ. ಈ ಸಲ ಅವನ ಮುಖದಲ್ಲಿ ಕಾನ್ಫಿಡೆನ್ಸ್ ಕಾಣುತ್ತಿತ್ತು.
ಮೊನ್ನೆ ಮಾತ್ರ,
ಒಂದೆರಡು ಕಣ ಅಲ್ಲಿ ಇಲ್ಲಿ ಅಲುಗಿದ ಕುರುಹು.
ನಿನ್ನೆಯೋ
ಒಳಗಿನೊಳಗೇ ಏನೊ
ಮೈಮುರಿದು ನಿದ್ದೆತಿಳಿದೇಳ್ವ ಥರ
ಇಂದೋ-
ಕಣ್ಣಮುಂದೇ ತೆರೆದ ಅದ್ಭತೋದ್ಭವ ಪ್ರಹರ!
ಚಿಣ್ಣರೊಲು ದೂಡಿ ಕೊಂಬೂದಿ ಹಣಿಕಿಕ್ಕಿ
ಇಣಿಕಿವೆ ಸುತ್ತ ನೂರಾರು ಅಂಕುರ!
ಅಂತ ಆ ಟಿನ್ನುಗಳಲ್ಲಿ ಬೀಜ ಮೊಳಕೆ ಒಡೆದ ಕ್ಷಣಗಳನ್ನು ಕುರಿತು ಬರೆಯುತ್ತಾರೆ ಗಂಗಾಧರ ಚಿತ್ತಾಲ. ತಾನು ಹಾಕಿದ ತಾವರೆ ಬೀಜದ ಮೊದಲ ಮೊಳಕೆಯನ್ನು ಕಂಡು ನನ್ನ ಮಗನೂ ಅಷ್ಟೇ ಸಂಭ್ರಮಪಟ್ಟ. ತನ್ನ ಬೆರಳಿನಿಂದ ಮುಟ್ಟಿ ಹಿಗ್ಗಿದ. ನನಗೆ ಮೂರು ಮೂರು ಸಲ ಆ ಬೀಜ ತುಂಬಿದ ಗ್ಲಾಸ್ ಎತ್ತಿ ಬೆಳಕಿಗೆ ಇಟ್ಟು ತೋರಿಸಿದ. ಅವನ ಸಂಭ್ರಮದಲ್ಲಿ ಈ ಸಲ ನಾನೂ ಪೂರ್ತಿ ಪಾಲುಗೊಂಡೆ. ನಾನೂ ಮೈಮುರಿದು ನಿದ್ದೆತಿಳಿದೇಳ್ವ ಥರ ಖುಷಿಪಟ್ಟೆ. ಮಗನ ಜೊತೆಯಲ್ಲಿಯೇ ಮಗುವಾದೆ.
ಇದೆಲ್ಲಾ ಆಗಿ ವಾರ ಕಳೆದಿದೆ. ಈಗಂತೂ ನಾಲ್ಕೈದು ತಾವರೆ ಗಿಡಗಳ ಒಡೆಯನಾಗಿದ್ದಾನೆ ಧ್ರುವ! ಅದನ್ನು ಅವನ ಟೀಚರ್ ಯತೀಶ್ ಕಜ್ಜೋಡಿ ತೋರಿಸಿದ ಹಾಗೆ ಸಣ್ಣ ಟಿನ್‌ನಲ್ಲಿ ನೆಟ್ಟು ಅದನ್ನು ದೊಡ್ಡ ನೀರು ತುಂಬಿದ ಬಕೆಟ್‌ನಲ್ಲಿಟ್ಟಿದ್ದಾನೆ. ಒಳ್ಳೆಯ ಎಲೆಗಳು ಬಂದಿವೆ. ಮೀನು ತಂದು ಕೊಡಬೇಕು ಅಂತ ಈಗಾಗಲೇ ಡಿಮಾಂಡ್ ಬಂದಿದೆ. ಅವನೀಗ ತಾವರೆ ಹೂವಿನ ಧ್ಯಾನದಲ್ಲಿದ್ದಾನೆ!
ಅವನ ತಾವರೆಯ ಧ್ಯಾನ ನನಗೆ ಕುಮಾರವ್ಯಾಸನ ಒಂದು ಪದ್ಯವನ್ನು ನೆನಪಿಗೆ ತಂದಿತು. ಕೀಚಕನ ಹಿಂಸೆಯಿಂದ ನೊಂದ ದ್ರೌಪದಿ ಇರುಳಿನಲ್ಲಿ ಭೀಮನ ಬಳಿ ಬಂದು ತನ್ನ ಪರಿಸ್ಥಿತಿಯನ್ನು ಹೇಳಿ ತೀರಾ ನೊಂದುಕೊಳ್ಳುತ್ತಾಳೆ. ನೀನು ಅವನನ್ನು ಕೊಲ್ಲುವ ಭರವಸೆ ಕೊಡದಿದ್ದರೆ ಈ ರಾತ್ರಿಯೇ ತನ್ನ ಬದುಕಿನ ಕೊನೆಯ ರಾತ್ರಿ ಅಂತ ಹೇಳಿ ಬಿಕ್ಕಿಬಿಕ್ಕಿ ಅಳುತ್ತಾಳೆ. ಭೀಮ ಅವಳಿಗೆ ಭರವಸೆಯನ್ನು ಕೊಡುತ್ತಾನೆ. ಆಗ ಬರುವ ಪದ್ಯ ಇದು.
ಹರುಷದಲಿ ಹೆಚ್ಚಿದಳು ಪುರುಷರ
ಪುರುಷನಲ್ಲಾ ಭೀಮ ತನ್ನಯ
ಪರಮ ಸುಕೃತೋದಯವಲಾ ನೀನೊಬ್ಬನೆಂದೆನುತ
ಅರಸಿ ಕಾಂತನ ಬೀಳುಕೊಂಡಳು
ತಿರುಗಿದಳು ನಿಜ ಭವನಕಿತ್ತಲು
ತರಣಿ ತೆಗೆದನು ತಾವರೆಯ ಬಾಗಿಲಿನ ಬೀಯಗವ!
ಭೀಮ ಆ ರಾತ್ರಿ ಅವಳಿಗೆ ಹೊಸ ಭರವಸೆಯ ಬೆಳಕನ್ನು ದಯಪಾಲಿಸಿದ್ದಾನೆ. ಭೀಮನನ್ನು ಬೀಳ್ಕೊಟ್ಟು ದ್ರೌಪದಿ ರಾಜರಸ್ತೆಗೆ ಬರುವಾಗ ಪೂರ್ವದಲ್ಲಿ ಬೆಳಕಾಗುತ್ತದೆ. ಕೀಚಕನ ಹಿಂಸೆಯಿಂದ ದಾರಿ ತೋರದೆ ಕತ್ತಲಲ್ಲಿ ಮೊಗ್ಗಾಗಿದ್ದ ದ್ರೌಪದಿಯ ಮುಖ ಭೀಮನ ಭರವಸೆಯ ಬೆಳಕಿನಿಂದ ಅರಳಿ ಹೂವಾಯಿತು ಅನ್ನುವುದನ್ನು ಕವಿ ತಾವರೆಯ ಮೊಗ್ಗು ಹೇಗೆ ಸೂರ್ಯನ ಕಿರಣ ತಾಕಿ ಹೂವಾಗುತ್ತದೆ ಅನ್ನುವ ರೂಪಕದ ಮೂಲಕ ಹೇಳುತ್ತಾನೆ. ಸೂರ್ಯನ ಕಿರಣ ತಾವರೆ ಹೂವಿನ ಬಾಗಿಲನ್ನು ಎಷ್ಟು ಸೂಕ್ಷ್ಮವಾಗಿ ಎಷ್ಟು ನವುರಾಗಿ ತೆರೆಯುತ್ತದೆ ಅನ್ನುವುದನ್ನು ಕವಿ ಹೇಳುವ ಬಗೆಯೆ ರೋಮಾಂಚಕ.
ಮಗ ಕೂಡಾ ಕಾಯುತ್ತಿದ್ದಾನೆ ತನ್ನ ಗಿಡದಲ್ಲಿ ಹುಟ್ಟುವ ತಾವರೆಯ ಮೊಗ್ಗುಗಳಿಗಾಗಿ. ಅವನ ಜೊತೆಯಲ್ಲಿ ಈಗ ನಾನೂ, ತರಣಿ ತೆಗೆವನು ತಾವರೆಯ ಬಾಗಿಲಿನ ಬೀಗವ ಅನ್ನುವ ನಿರೀಕ್ಷೆಯಲ್ಲಿದ್ದೇನೆ!

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಮೂಲತಃ ಉಡುಪಿಯವರು. ಈಗ ಮಂಗಳೂರು ವಾಸಿ ಮುಸುಕು ತೆರೆದು, ತೂಗುದೀಪ, ಇರುವುದೆಲ್ಲವ ಬಿಟ್ಟು ಇವರ ಪ್ರಕಟಿತ ಕವನ ಸಂಕಲನಗಳು. ಪ್ರೇಮದ ಶರಧಿಗೆ, ಆಕಾಶಬುಟ್ಟಿ, ಒಲವ ಶ್ರಾವಣ ಇವರ ಭಾವಗೀತೆ ಸಿ ಡಿ ಗಳು