ಹಿಂದೆ ಅಡಿಕೆ ಸುಲಿತವೆಂಬುದೊಂದು ಸಂಭ್ರಮ. ಸಂಜೆ ಆರಾಗುತ್ತಿದ್ದಂತೆ ಮನೆ ಎದುರಿನ ಅಥವಾ ಹಿಂದಿನ ಅಡಿಕೆ ಚಪ್ಪರದ ಕೆಳಗೆ ಅಡಿಕೆ ಸುಲಿಯುವ ಹೆಂಗಳೆಯರು ಮೇಳೈಸುತ್ತಿದ್ದರು. ಕಿಲಕಿಲ ನಗು, ಮಾತು, ಹರಟೆ, ಹಾಸ್ಯ, ವಿನೋದಗಳ ನಡುವೆ ಮೆಟ್ಟುಗತ್ತಿಯ ಮೇಲೆ ಕುಳಿತು ತಮ್ಮ ಚುರುಕು ಕೈಗಳಿಂದ ಅಡಿಕೆಗಳನ್ನು ಹೆಕ್ಕಿಕೊಂಡು ಕತ್ತಿಯಲ್ಲಿಟ್ಟು ಸಿಪ್ಪೆ ತೆಗೆದು, ಅಡಿಕೆಯನ್ನು ಹೋಳು ಮಾಡಿ ಕತ್ತರಿಸಿ ಬುಟ್ಟಿಗೆ ತುಂಬುತ್ತಾರೆ. ಮಧ್ಯರಾತ್ರಿಯವರೆಗೂ ಈ ಕೆಲಸ ನಡೆಯುವುದರಿಂದ ಊರಿನ ಪ್ರಚಲಿತ ವಿದ್ಯಮಾನಗಳು, ಸದ್ಯದಲ್ಲೇ ನಡೆಯಲಿರುವ ಮದುವೆಗಳು, ನಡೆದ ಜಗಳಗಳು, ಸಾವು-ನೋವು, ಕಷ್ಟಸುಖಗಳು ಅಲ್ಪಸ್ವಲ್ಪ ಬಣ್ಣ ಹಚ್ಚಿಕೊಂಡು, ಅತಿರಂಜಿತವಾಗಿ ಇಲ್ಲಿ ಚರ್ಚಿತವಾಗುತ್ತವೆ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ ನಿಮ್ಮ ಓದಿಗೆ
ಮಲೆನಾಡಿನ ದೊಡ್ಡ ಹಬ್ಬ ದೀಪಾವಳಿ ಮುಗಿದು ಚಳಿಗಾಳಿ ಪ್ರಾರಂಭವಾಗಿದೆ. ಇಬ್ಬನಿ ಮುಸುಕಿದ ಮುಂಜಾವುಗಳಲ್ಲಿ ಅಂಗಳದ ಅಡಿಕೆ ತೋಟದ ಮರಗಳ ಸಂದಿಯಿಂದ ಬಾಲರವಿಯ ಹೊಂಗಿರಣ ಧರೆಯ ಸೋಕುವ ಆಹ್ಲಾದಕರ ದೃಶ್ಯ ಕಣ್ತುಂಬಿಕೊಳ್ಳುವ ಆನಂದ ಮತ್ತೆ ನನ್ನದಾಗಿದೆ. ಮೇ ತಿಂಗಳಿನಿಂದ ಅಕ್ಟೋಬರ್‌ನವರೆಗೂ ಇದ್ದ ವರುಣ ಅಂತೂ ವಿಶ್ರಾಂತಿಗಾಗಿ ನಿರ್ಗಮಿಸಿದ್ದಾನೆ. ಮೋಡಗಳ ಮರೆಯಲ್ಲಿ ಕುಳಿತು ಬೇಸರಗೊಂಡ ಭಾಸ್ಕರನೀಗ ತನ್ನ ಕಿರಣಗಳ ಲೀಲೆ ತೋರಲು ಹಾತೊರೆದು ಬಂದಿದ್ದಾನೆ.
ಮಲೆನಾಡಿನ ರೈತರು ತೋಟದಲ್ಲಿ ಕೊನೆ ತೆಗೆಯುವ ಕೆಲಸವನ್ನು ಚುರುಕುಗೊಳಿಸಿದ್ದಾರೆ. ಅಡಿಕೆ ಬೆಳೆ ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆ. ಮಲೆನಾಡಿಗರ ಜೀವನಾಡಿ. ಹದಿಮೂರನೇ ಶತಮಾನದ ಕವಿ ಆಂಡಯ್ಯನ ‘ಕಬ್ಬಿಗರ ಕಾವಂ‘ ಎಂಬ ಚಂಪೂ ಕಾವ್ಯದಲ್ಲಿಯೇ ಈ ಅಡಿಕೆ ಮರದ ಉಲ್ಲೇಖವಿದೆ.
ಮಲ್ಲಿಗೆಯಲ್ಲದೆ ಸಂಪಗೆ
ಯಲ್ಲದೆ ದಾಳಿಂಬಮಲ್ಲದೊಪ್ಪುವ ಚೆಂದೆಂ
ಗಲ್ಲದೆ ಮಾವಲ್ಲದೆ ಕೌಂ
ಗಲ್ಲದೆ ಗಿಡುಮರಗಳೆಂಬುವಿಲ್ಲಾ ನಾಡೊಳ್
ಎಂಬ ಪದ್ಯದಲ್ಲಿ ಬಂದಿರುವ ಕೌಂಗು ಎಂಬ ಪದ ಅಡಿಕೆಯನ್ನು ಸೂಚಿಸುತ್ತದೆ. ಮಲೆನಾಡೆಂದರೆ ಪ್ರತಿ ಮನೆಯಲ್ಲಿ ಭತ್ತದ ಗದ್ದೆ, ಅಡಿಕೆ ತೋಟವಿರಲೇಬೇಕು.
ಕುವೆಂಪುರವರ ಹಸುರು ಪದ್ಯದಲ್ಲಿ
ಆಶ್ವೀಜದ ಶಾಲಿವನದ
ಗಿಳಿಯೆದೆ ಬಣ್ಣದ ನೋಟ
ಅದರೆಡೆಯಲಿ ಬನದಂಚಲಿ
ಕೊನೆವೆತ್ತಡಕೆಯ ತೋಟ
ಎಂದು ಗದ್ದೆಯಂಚಿನಲ್ಲಿ ಕೊನೆ ಹೊತ್ತು ಕಂಗೊಳಿಸುವ ಅಡಿಕೆ ತೋಟವನ್ನು ಬಣ್ಣಿಸುತ್ತಾರೆ.
ಈ ಸಲ ಸುರ್ದ ಮಳೆಗೆ ಕೊನೆ ಪೂರ್ರ ಉದುರ್ ಹೋಗ್ಯಾವೆ. ಇರ ಕೊನೆನಾದ್ರು ತಗ್ದು ಸುಲ್ದು ಒಣ್ಸಾಣ ಅಂದ್ರೆ ಈ ಮಳೆ ಸನಿ ಹಿಡ್ದಿದ್ದು ಬಿಡದೇ ಇಲ್ಲ…. ಅಂತ ಮೊನ್ನೆವರೆಗೂ ಗೊಣಗುತ್ತಿದ್ದ ಮಲೆನಾಡಿಗರಿಗೆ ಸೂರ್ಯದೇವನ ಕೃಪಾಕಟಾಕ್ಷ ಸಿಕ್ಕಿದೆ. ಕೊನೆ ತೆಗೆಯುವ ಕುಶಲಿಗರಿಗೆ ಫೋನಾಯಿಸಿ ಕೊನೆ ತೆಗೆಯುವ ದಿನವನ್ನು ನಿಗದಿಪಡಿಸುತ್ತಿದ್ದಾರೆ. ಉದ್ದದ ಕೊನೆದೋಟಿಯೆಂಬ ಸಾಧನದಲ್ಲಿ ತೆಗೆದ ಕೊನೆಗಳನ್ನು ತೋಟದಿಂದ ಮನೆಯತನಕ ಹೊತ್ತು ತರಲು ಆಳುಗಳಿಗೆ ಹೇಳಿಕಳಿಸುತ್ತಿದ್ದಾರೆ. ಈಗೆಲ್ಲಾ ಅಡಿಕೆ ಸುಲಿಯಲು ಯಂತ್ರಗಳು ಬಂದಿವೆ. ಆದರೆ ಹಿಂದೆ ಅಡಿಕೆ ಸುಲಿತವೆಂಬುದೊಂದು ಸಂಭ್ರಮ. ಸಂಜೆ ಆರಾಗುತ್ತಿದ್ದಂತೆ ಮನೆ ಎದುರಿನ ಅಥವಾ ಹಿಂದಿನ ಅಡಿಕೆ ಚಪ್ಪರದ ಕೆಳಗೆ ಅಡಿಕೆ ಸುಲಿಯುವ ಹೆಂಗಳೆಯರು ಮೇಳೈಸುತ್ತಿದ್ದರು. ಕಿಲಕಿಲ ನಗು, ಮಾತು, ಹರಟೆ, ಹಾಸ್ಯ, ವಿನೋದಗಳ ನಡುವೆ ಮೆಟ್ಟುಗತ್ತಿಯ ಮೇಲೆ ಕುಳಿತು ತಮ್ಮ ಚುರುಕು ಕೈಗಳಿಂದ ಅಡಿಕೆಗಳನ್ನು ಹೆಕ್ಕಿಕೊಂಡು ಕತ್ತಿಯಲ್ಲಿಟ್ಟು ಸಿಪ್ಪೆ ತೆಗೆದು, ಅಡಿಕೆಯನ್ನು ಹೋಳು ಮಾಡಿ ಕತ್ತರಿಸಿ ಬುಟ್ಟಿಗೆ ತುಂಬುತ್ತಾರೆ. ಮಧ್ಯರಾತ್ರಿಯವರೆಗೂ ಈ ಕೆಲಸ ನಡೆಯುವುದರಿಂದ ಊರಿನ ಪ್ರಚಲಿತ ವಿದ್ಯಮಾನಗಳು, ಸದ್ಯದಲ್ಲೇ ನಡೆಯಲಿರುವ ಮದುವೆಗಳು, ನಡೆದ ಜಗಳಗಳು, ಸಾವು-ನೋವು, ಕಷ್ಟಸುಖಗಳು ಅಲ್ಪಸ್ವಲ್ಪ ಬಣ್ಣ ಹಚ್ಚಿಕೊಂಡು, ಅತಿರಂಜಿತವಾಗಿ ಇಲ್ಲಿ ಚರ್ಚಿತವಾಗುತ್ತವೆ. ಈ ಹರಟೆಯನ್ನು ಆಲಿಸುವುದೇ ಒಂದು ಸಂತಸದ ವಿಷಯವಾಗಿತ್ತು. ಬಾಲ್ಯದಲ್ಲಿ ನಮಗೆ ಇದು ಮನರಂಜನೆಯ ಅತಿ ಮುಖ್ಯ ಕೇಂದ್ರವೇ ಆಗಿತ್ತು.
ಆ ಮಾತುಗಳನ್ನು ಕೇಳಿಸಿಕೊಳ್ಳುವುದು, ನಾವು ಮೆಟ್ಟುಗತ್ತಿಯ ಮೇಲೆ ಕುಳಿತು ಅವರಂತೆಯೇ ಅಡಿಕೆ ಸುಲಿಯುವುದು ಇಡೀ ದಿನದ ಶಾಲೆ, ಓದು, ಬರಹದ ಒತ್ತಡದಿಂದ ಪಾರಾಗಿ ಹೊಸ ಲೋಕವೊಂದರಲ್ಲಿ ತೇಲುವ ಸುಖಾನುಭವ ನೀಡುತಿತ್ತು. ಇನ್ನೂ ಈ ಗೋಷ್ಠಿಯಲ್ಲಿ ಮಧ್ಯೆ ಮಧ್ಯೆ ನೀಡಲಾಗುವ ಕಾಫಿ, ಚಹಾ, ಮಂಡಕ್ಕಿ, ಅವಲಕ್ಕಿ, ಮೊದಲಾದ ತಿಂಡಿ ತಿನಿಸುಗಳ ವಿಲೇವಾರಿ ನಮ್ಮ ಸಂತಸವನ್ನು ಇಮ್ಮಡಿಸುತಿತ್ತು. ಮಧ್ಯರಾತ್ರಿ ಹೊತ್ತಿಗೆ ಅಡಿಕೆ ಸುಲಿದವರೆಲ್ಲರೂ ತಾವು ಸುಲಿದ ಅಡಿಕೆಯನ್ನು ಕೊಳಗದಲ್ಲಿ ಅಳತೆ ಮಾಡಿ ಲೆಕ್ಕ ಬರೆಸಿಡುತ್ತಿದ್ದರು. ನಂತರ ಅವರನ್ನೆಲ್ಲಾ ಮನೆಯ ಹತ್ತಿರಕ್ಕೆ ಕಳಿಸಿಕೊಡಲು ಅಪ್ಪನೊಂದಿಗೆ ನಾವೂ ಹೋಗಿ ಬರುತ್ತಿದ್ದೆವು. ಕೆಲವರು ತಮ್ಮ ಅನುಕೂಲಕ್ಕೆ ತಕ್ಕಂತೆ ಇಡೀ ದಿನ ಸುಲಿದು ಸಂಜೆ ಮನೆಗೆ ಹೋಗುತ್ತಿದ್ದರು. ಅವರು ರಾತ್ರಿ ಸುಲಿಯಲು ಬರುತ್ತಿರಲಿಲ್ಲ.

ಹೀಗೆ ಅಡಿಕೆ ಸುಲಿತವೆಂಬುದು ಒಂದು ಗುಂಪು ಕಾರ್ಯವಾಗಿ ಗ್ರಾಮೀಣ ಭಾಗದಲ್ಲಿ ಜನರು ಪರಸ್ಪರ ಬೆರೆಯಲು ಅವಕಾಶ ನೀಡುತಿತ್ತು. ಆದರೆ ಯಂತ್ರಗಳು ಬಂದಿರುವ ಈ ಕಾಲದಲ್ಲಿ ಎಷ್ಟೋ ಜನರ ಉದ್ಯೋಗವನ್ನು ಕಸಿದುಕೊಂಡಿರುವುದಲ್ಲದೆ ಜನರ ನಡುವಿನ ಈ ಒಡನಾಟ ಮತ್ತು ಬಾಂಧವ್ಯವೂ ಸಹ ಕಣ್ಮರೆಯಾಗಿರುವುದು ವಿಷಾದದ ಸಂಗತಿ. ಇಂದಿನ ಮಕ್ಕಳಿಗೆ ನಮಗೆ ಸಿಕ್ಕ ಈ ಸಂಭ್ರಮ ಮತ್ತು ಆನಂದ ಸಿಗುತ್ತಿಲ್ಲ.
ಸುಲಿದ ಅಡಿಕೆಯನ್ನು ಬೇಯಿಸುವುದು, ಒಣಗಿಸುವುದು ಇನ್ನೊಂದು ಪ್ರಮುಖ ಕೆಲಸ. ಸೂರ್ಯ ಮೂಡುವ ಮೊದಲೇ ಮನೆಯ ಹೊರಗೆ ಅಡಿಕೆ ಬೇಯಿಸಲೆಂದೇ ಮಾಡಿದ ಮಣ್ಣಿನ ಒಲೆಯಲ್ಲಿ ಬೆಂಕಿ ಉರಿಸಲಾಗುತ್ತದೆ. ಈ ಒಲೆಗೆ ಸಗಣಿಯಿಂದ ಬಳಿದು ಒಪ್ಪ ಮಾಡಿರುತ್ತಾರೆ. ಈ ಒಲೆಯ ಮೇಲೆ ಬೃಹದಾಕಾರದ ತಾಮ್ರದ ಹಂಡೆಯಿಟ್ಟು ಅದರಲ್ಲಿ ಚೊಗರು ಹಾಕಿ ಕುದಿಸಿ ಅದಕ್ಕೆ ಹಸಿ ಅಡಿಕೆ ಹಾಕಿ ಬೇಯಿಸಲಾಗುತ್ತದೆ. ಇವೆಲ್ಲವೂ ಹದವರಿತು ಮಾಡಬೇಕು. ಬೆಂದ ಬಿಸಿ ಬಿಸಿ ಅಡಿಕೆಯನ್ನು ದೊಡ್ಡ ಲೋಹದ ಕೈಯಿಂದ ಮೊಗೆದು ಬಿದಿರಿನ ತಟ್ಟಿಯಲ್ಲಿ ಹರಡಿ ಒಣಗಿಸಲಾಗುತ್ತದೆ. ದೊಡ್ಡ ಅಂಗಳದ ತುಂಬಾ ಬಿದಿರಿನ ತಟ್ಟಿಗಳಲ್ಲಿ ಬೆಂದು ಹೊಗೆಯಾಡುವ ಅಡಿಕೆಗಳು ಘಮದೊಂದಿಗೆ ಬಿಸಿಲಿಗೆ ಒಡ್ಡಿಕೊಳ್ಳುತ್ತವೆ.
ಮನೆ ಮುಂದೆ ಹಾಕಿದ ಅಡಿಕೆ ಚಪ್ಪರದ ಮೇಲೆ ಏಣಿಯ ಸಹಾಯದಿಂದ ಹೋಗಿ ಅಲ್ಲಿಯೂ ತಟ್ಟಿಗಳ ಮೇಲೆ ಅಡಿಕೆ ಹರಡುತ್ತಾರೆ. ಹಿಂದೆಲ್ಲಾ ಅಡಿಕೆಗೆ ಬೇಗನೇ ಒಳ್ಳೆಯ ಬಿಸಿಲು ತಾಕಲೆಂದು ಈ ವಿಧಾನ ಅನುಸರಿಸುತ್ತಿದ್ದರು. ಈ ಚಪ್ಪರ ಬೇಸಿಗೆ ಮುಗಿಯುವವರೆಗೂ ಮನೆ ಮುಂದೆ ಇದ್ದು ನೆರಳು ಒದಗಿಸುತ್ತಿತ್ತು. ಮನೆಗೆ ಬಂದು ಹೋಗುವವರು ಈ ಚಪ್ಪರದ ನೆರಳಿನಲ್ಲಿ ಕುಳಿತು ಮಾತನಾಡುವುದು, ಕೆಲಸದ ಆಳುಗಳ ವಿಶ್ರಾಂತಿಯ ತಾಣವೂ ಇದಾಗಿ ಸೌಕರ್ಯ ನೀಡುತ್ತಿತ್ತು. ಆದರೆ ಈಗೀಗ ಈ ಚಪ್ಪರ, ತಟ್ಟಿಗಳು ಕಣ್ಮರೆಯಾಗಿ ಅವುಗಳ ಸ್ಥಾನವನ್ನು ಆಧುನಿಕ ಅಡಿಕೆ ಒಣಗಿಸುವ ಟ್ರೇಗಳು ಆಕ್ರಮಿಸಿವೆ.
ಮಲೆನಾಡಿನಲ್ಲಿ ಅನಿರ್ದಿಷ್ಟಾವಧಿ ಸುರಿಯುವ ವಿಪರೀತ ಮಳೆ ಅಡಿಕೆ ಇಳುವರಿಯನ್ನು ಕುಂಠಿತಗೊಳಿಸಿದೆ. ಕೊಳೆರೋಗ, ಎಲೆಚುಕ್ಕಿ ರೋಗ ಅಡಿಕೆ ಬೆಳೆಗಾರ ರೈತರನ್ನು ಕಂಗೆಡಿಸಿವೆ. ಇರುವ ತೋಟದಲ್ಲಿ ಬಂದ ಕೊನೆಯಲ್ಲಿ ಸಾಕಷ್ಟು ಅಡಿಕೆಗಳು ಮೊದಲೇ ಉದುರಿ ಕೊಳೆಯುತ್ತವೆ. ಈ ಎಲ್ಲಾ ಸಮಸ್ಯೆಗಳನ್ನು ಎದುರಿಸುತ್ತಲೇ ಮೊದಲಿನಿಂದಲೂ ಬಂದ ಅಡಿಕೆ ಬೇಸಾಯ ಮುಂದುವರಿಯುತ್ತಿದೆ.
ಬೇಯಿಸಿ, ಒಣಗಿಸಿದ ಅಡಿಕೆಯನ್ನು ಹಸ, ಗೊರಬಲು, ಬೆಟ್ಟೆ ಹೀಗೆ ಬೇರೆಬೇರೆಯಾಗಿ ವಿಂಗಡಿಸುವ ಕೆಲಸಕ್ಕೆ ಅಡಿಕೆ ಆರಿಸುವುದು ಎನ್ನುತ್ತಾರೆ.
ಅಡಿಕೆ ಮರವು ಬಹುಪಯೋಗಿಯಾಗಿದೆ. ಇದರ ಹಾಳೆಯಿಂದ ಸಮಾರಂಭಗಳಲ್ಲಿ ಉಪಯೋಗಿಸುವ ಊಟದ ತಟ್ಟೆ, ಲೋಟಗಳನ್ನು ತಯಾರಿಸುತ್ತಾರೆ. ಇದರ ಸೋಗೆಯನ್ನು ಮನೆಯ ಮೇಲ್ಛಾವಣಿಗೆ ಹೊದಿಸಲು ಮತ್ತು ಚಪ್ಪರ ಹಾಕಲು ಉಪಯೋಗಿಸಲಾಗುತ್ತದೆ. ಮರದ ದಿಮ್ಮಿಯನ್ನು ಕಾಲು ಸಂಕ(ಚಿಕ್ಕ ಸೇತುವೆ) ಮಾಡಲು, ಮನೆಯ ಮಾಡು, ಚಪ್ಪರ ಹಾಕಲು ಬಳಸುತ್ತಾರೆ. ಆಧುನಿಕ ಸಂಶೋಧನೆಗಳಿಂದ ಅಡಿಕೆಯಲ್ಲಿ ಅನೇಕ ಔಷಧೀಯ ಗುಣಗಳಿವೆ ಎಂದು ತಿಳಿದು ಬಂದಿದೆ. ಅಡಿಕೆಯಿಂದ ಚಾಕೊಲೇಟ್ ಮೊದಲಾದ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ.
ಅಡಿಕೆಯು ಒಂದು ಶುಭವಸ್ತುವೆನಿಸಿದ್ದು ಮದುವೆ ಮೊದಲಾದ ಶುಭ ಸಮಾರಂಭಗಳಲ್ಲಿ ತಾಂಬೂಲ, ಬಾಗಿನ ನೀಡಲು ಬಳಸುತ್ತಾರೆ. ಅಡಿಕೆ ಹಿಂಗಾರವನ್ನು ದೇವರಿಗೆ ಸಮರ್ಪಿಸುವ ಸಂಪ್ರದಾಯವಿದೆ.

ಯಾವುದೇ ಒಳ್ಳೆಯ ಭೋಜನದ ನಂತರ ಎಲೆ ಅಡಿಕೆ ತಿನ್ನುವುದು ವಾಡಿಕೆ. ಇದು ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ. ಹೀಗೆ ಅಡಿಕೆಯು ವಾಣಿಜ್ಯ ಬೆಳೆಯಾಗಿ ರೈತರ ಜೀವನಕ್ಕೆ ಆಧಾರವಾಗಿ, ಶುಭ ಸಂದರ್ಭದಲ್ಲಿ ಕಳೆ ನೀಡುವ ಶಕ್ತಿಯಾಗಿ, ಮಲೆನಾಡಿನ ಅಸ್ಮಿತೆಯ ಹೆಗ್ಗುರುತಾಗಿ ಮನೆಮನಗಳಲ್ಲಿ ಶಾಶ್ವತ ಸ್ಥಾನ ಪಡೆದಿದೆ. ಇಂತಹ ಬೆಳೆ ಅಳಿಯದೇ ಉಳಿಯುವಂತಾಗಬೇಕು. ಪ್ರಕೃತಿಯ ಕೃಪೆ ಈ ಬೆಳೆಗೆ ಸದಾ ರಕ್ಷೆ ನೀಡಲಿ ಎಂಬುದೇ ಆಶಯ.

