Advertisement
ಚಿತ್ರಾ ವೆಂಕಟರಾಜು ಹೊಸ ಸರಣಿ “ಚಿತ್ತು-ಕಾಟು” ಇಂದಿನಿಂದ

ಚಿತ್ರಾ ವೆಂಕಟರಾಜು ಹೊಸ ಸರಣಿ “ಚಿತ್ತು-ಕಾಟು” ಇಂದಿನಿಂದ

ಇದರೊಳಗೆ ಒಂದು ತಮಾಷೆಯೆಂದರೆ ಪಾತ್ರದ ಜತೆಗೆ ನಟನೂ ಇರುತ್ತಾನೆ. ಪರಸ್ಪರ ಒಬ್ಬರಿಗೊಬ್ಬರನ್ನು ಕಂಡರೆ ಆಗದ ನಟರು ರಂಗದ ಮೇಲೆ ಪ್ರೇಮಿಸುತ್ತಾರೆ‌. ಪ್ರೀತಿಸಿದ ಹುಡುಗಿ ಅಜ್ಜಿಯೋ, ಸನ್ಯಾಸಿಯೋ ಆಗಿಬಿಟ್ಟಿರುತ್ತಾಳೆ. ಪ್ರೀತಿಸಿದ ನಟ ಇನ್ನೊಬ್ಬಳೊಂದಿಗೆ ಡಾನ್ಸ್ ಮಾಡ್ತಿರೋದನ್ನ ಅವನ ಪ್ರೇಯಸಿ ಸೈಡ್ ವಿಂಗಿನಲ್ಲಿ ಕೂತು.. ‘ಇದು ನಾಟಕ ಇದು ನಾಟಕ’ ಅಂತ ತನ್ನನ್ನೇ ಸಮಾಧಾನಪಡಿಸಿಕೊಳ್ಳುತ್ತಾಳೆ. ಹೀಗೆ ರಂಗದ ಮೇಲೆ ನಡೆಯುವ ನಾಟಕಕ್ಕಿಂತ ಹೆಚ್ಚು ರೋಚಕವಾದ ಅನೇಕ ನಾಟಕಗಳುಪ್ರಕ್ರಿಯೆಯಲ್ಲಿ ನಡೆಯುತ್ತಲೇ ಇರುತ್ತದೆ.
ಕಲಾಲೋಕದ ಕುರಿತು ಚಿತ್ರಾ ವೆಂಕಟರಾಜು ಹೊಸ ಸರಣಿ “ಚಿತ್ತು-ಕಾಟು” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ

ನಾಟಕ… ಸುಳ್ಳಿನ ಮೂಲಕ ಸತ್ಯವನ್ನು ಒಟ್ಟಾಗಿ ಹುಡುಕುವ ಕಲೆ. ನಾಟಕವನ್ನು ಆಡಲು ತೆಗೆದುಕೊಂಡಾಗ ನಾಟಕದ ಕತೆ, ಪಾತ್ರಗಳು ಹೊಸದಾಗಿರುತ್ತವೆ. ಅದು ಹೊಸ ಜೀವನವನ್ನು ಇಣುಕಿ ನೋಡಿದಂತೆ. ಓದುತ್ತಾ ಓದುತ್ತಾ ನಮಗೆ ಅವು ಪರಿಚಿತವಾಗುತ್ತವೆ. ನಮ್ಮ‌ ಕಲ್ಪನೆಯಲ್ಲಿ ಪಾತ್ರ ಮುಖ ಪಡೆಯತೊಡಗುತ್ತದೆ. ವಿಚಿತ್ರವೆಂದರೆ ಪ್ರತಿ ಪಾತ್ರವೂ ಪ್ರತ್ರಿ ನಟನ ಕಲ್ಪನೆಯಲ್ಲೂ ಬೇರೆಯೇ ಆದರೆ ಅದರ ಹಿಂದೆ ಬಿದ್ದಿರುತ್ತೇವೆ.

ರೋಮಿಯೋ ಪಾತ್ರಧಾರಿ ರೋಮಿಯೋನನ್ನು ಕಲ್ಪಿಸಿಕೊಂಡಿರುವುದು ಒಂದಾದರೆ ಜ್ಯೂಲಿಯೆಟ್ ಪಾತ್ರಧಾರಿ ಜ್ಯೂಲಿಯೆಟ್ಟನ್ನು ಮತ್ತು ರೋಮಿಯೋನನ್ನು ಕಲ್ಪಿಸಿಕೊಂಡಿರುವುದು ಬೇರೆ. ಹೀಗೆ ತಮ್ಮ ತಮ್ಮದೇ ಕಲ್ಪನೆಯಲ್ಲಿ ಅರಳಿದ ಇಲ್ಲದ ಪಾತ್ರಗಳ ಜತೆಗೆ ಪ್ರೀತಿ, ಪ್ರೇಮ, ಜಗಳ… ತಮ್ಮ ತಮ್ಮ ಅನುಭವಕ್ಕೆ, ಗ್ರಹಿಕೆಗೆ ಸಿಕ್ಕ ವಿವರಗಳೊಂದಿಗಿನ ಪಯಣ. ಇದು ಬದುಕಿನ ಒಂದು ತುಣುಕು. ನಾವು ಅಂದುಕೊಂಡದ್ದು ಅದು ಇರುವುದು ಈ ಅಸಂಬದ್ಧತೆಗಳ ಮಧ್ಯೆ ಸುಸಂಬದ್ಧವಾದ ಒಂದು ನಾಟಕ ಪ್ರಯೋಗ. ಒಳಗೆ ಅದುಮಿಟ್ಟ ಪ್ರೀತಿ ಪ್ರೇಮ ದ್ವೇಷ ಎಲ್ಲವೂ ನೂರಾರು ಜನಗಳೆದುರಿಗೆ, ಪ್ರಖರ ಬೆಳಕಿನಲ್ಲಿ. ಇದು ಸಂತೆಯಲ್ಲಿ ಬತ್ತಲಾದಂತೆ.

ಪಾತ್ರದೊಂದಿಗೆ ನಟನ ಪಯಣ ಬಹಳ ವಿಚಿತ್ರವಾದುದು. ಓದಿನ ಮೊದಲ ದಿನಗಳಲ್ಲಿ ನಮ್ಮೊಳಗೆ ಆಗುವ ಅಚ್ಚರಿ, ಸಂತಸಗಳಿಗೇ ಸಿಕ್ಕಿಬೀಳುವ ಹಾಗಿಲ್ಲ. ಅದರಾಚೆಗೂ ಪಾತ್ರವೇ ನಮ್ಮನ್ನು ಕರೆದುಕೊಂಡು ಹೋಗುತ್ತದೆ. ನಮ್ಮ ತಯಾರಿಯೇನಿದ್ದರೂ ಅದಕ್ಕೆ ನಮ್ಮನ್ನು ಬಿಟ್ಟುಕೊಡುವುದಷ್ಟೇ. ಪಾತ್ರದ ಮಾತನ್ನು ನಟರು ಆಡುತ್ತಾರೆ, ಅದರ ನಡಿಗೆಯನ್ನು ರೂಢಿಸಿಕೊಳ್ಳುತ್ತಾರೆ, ಅದರಂತೆ ಬಟ್ಟೆ ಹಾಕಿಕೊಳ್ಳುತ್ತಾರೆ… ಹೀಗೆ ಅದರೊಂದಿಗಿನ ಸಂಬಂಧ ಆಳವಾಗುತ್ತಾ ಹೋಗುತ್ತದೆ. ರಿಹರ್ಸಲ್ ಮುಗಿದ ಮೇಲೂ ಒಮ್ಮೊಮ್ಮೆ ನಟರ ನಡವಳಿಕೆಯಲ್ಲಿ ಪಾತ್ರ ಇಣುಕಿದರೆ ಆಶ್ಚರ್ಯವಿಲ್ಲ. ನಾಟಕ ಒಬ್ಬನಿಂದ ಆಗುವುದಿಲ್ಲವಲ್ಲ! ಇದೇ ರೀತಿ ಹಲವು ಪಾತ್ರಗಳನ್ನು ಆವಾಹಿಸಿಕೊಂಡ ಎಷ್ಟೊಂದು ಕಲಾವಿದರು. ತಮ್ಮ ತಮ್ಮ ಕಲ್ಪನೆಯ ಪಾತ್ರದೊಂದಿಗೆ ಉಳಿದ ಪಾತ್ರಗಳೊಂದಿಗೆ ತಿಂಗಳುಗಳು ರಂಗದ ಮೇಲೆ ಪ್ರಯಾಣ ಮಾಡುತ್ತಾರೆ.

ಇದರೊಳಗೆ ಒಂದು ತಮಾಷೆಯೆಂದರೆ ಪಾತ್ರದ ಜತೆಗೆ ನಟನೂ ಇರುತ್ತಾನೆ. ಪರಸ್ಪರ ಒಬ್ಬರಿಗೊಬ್ಬರನ್ನು ಕಂಡರೆ ಆಗದ ನಟರು ರಂಗದ ಮೇಲೆ ಪ್ರೇಮಿಸುತ್ತಾರೆ‌. ಪ್ರೀತಿಸಿದ ಹುಡುಗಿ ಅಜ್ಜಿಯೋ, ಸನ್ಯಾಸಿಯೋ ಆಗಿಬಿಟ್ಟಿರುತ್ತಾಳೆ. ಪ್ರೀತಿಸಿದ ನಟ ಇನ್ನೊಬ್ಬಳೊಂದಿಗೆ ಡಾನ್ಸ್ ಮಾಡ್ತಿರೋದನ್ನ ಅವನ ಪ್ರೇಯಸಿ ಸೈಡ್ ವಿಂಗಿನಲ್ಲಿ ಕೂತು.. ‘ಇದು ನಾಟಕ ಇದು ನಾಟಕ’ ಅಂತ ತನ್ನನ್ನೇ ಸಮಾಧಾನಪಡಿಸಿಕೊಳ್ಳುತ್ತಾಳೆ. ಹೀಗೆ ರಂಗದ ಮೇಲೆ ನಡೆಯುವ ನಾಟಕಕ್ಕಿಂತ ಹೆಚ್ಚು ರೋಚಕವಾದ ಅನೇಕ ನಾಟಕಗಳುಪ್ರಕ್ರಿಯೆಯಲ್ಲಿ ನಡೆಯುತ್ತಲೇ ಇರುತ್ತದೆ. ಇದೆಲ್ಲದರ ಜತೆಗೆ ಎಲ್ಲವನ್ನೂ ಪಕ್ಕಕ್ಕಿಟ್ಟು ಮೊದಲನೇ ಬೆಲ್ ಆದದ್ದೇ ಎಲ್ಲರೂ ಒಂದು ಶೃತಿಗೆ ಬರುತ್ತಾರೆ.

ಈಗ ನಟರೊಳಗಿಂದ ಪಾತ್ರಗಳು ರಂಗದ ಮೇಲೆ ಬರುತ್ತವೆ. ಪ್ರೇಕ್ಷಕ ಪ್ರಭುಗಳು ನಡೆಯುತ್ತಿರುವ ನಾಟಕದ ಜೊತೆಗೆ ತಮ್ಮ ಬದುಕನ್ನು ನೋಡಿಕೊಳ್ಳುತ್ತಾರೆ. ಎದುರಿಗೆ ನಡೆಯುತ್ತಿರುವುದು ಎಲ್ಲರಿಗೂ ಒಂದು ನೆಪ. ಒಟ್ಟಾಗಿ ನಗುತ್ತಾರೆ, ಅಳುತ್ತಾರೆ, ಸಮಾಧಾನ ಮಾಡಿಕೊಳ್ಳುತ್ತಾರೆ.

ನಾಟಕ ಮುಗಿದ ಮೇಲೆ, ಪ್ರೇಕ್ಷಕರೆಲ್ಲ ಹೋದ ಮೇಲೆ ಒಂದು ನಿಶ್ಯಬ್ಧ, ಮೌನ. ನಾಟಕ ಮುಗಿದ ರಾತ್ರಿ ಹೆಚ್ಚಿನವರಿಗೆ ನಿದ್ದೆ ಬರುವುದಿಲ್ಲ. ತನ್ನ ಭಾವನೆಗಳೆಲ್ಲಾ ಪಾತ್ರದ ಮೂಲಕ ಹೊರಗೆ ಹೋಗಿ ನಿರಾಳ ಭಾವ. ಒಂದು ಪ್ರದರ್ಶನ ಮುಗಿದ ನಂತರದ ನಿರಾಳತೆಯ ಅನುಭವ ಅನನ್ಯ. ಈ ನಿರಾಳತೆಗಾಗಿಯೇ ಇಷ್ಟು ತಿಂಗಳ ಸಾಹಸ! ನಾಟಕ ಪ್ರದರ್ಶನ ಚನ್ನಾಗಿ ಆದರೆ ಈ ನಿರಾಳತೆ ಆದರೆ ಪ್ರದರ್ಶನ ಕೆಟ್ಟು ಹೋದರೂ ನಿದ್ದೆ ಬರುವುದಿಲ್ಲ. ಆ ಚಡಪಡಿಕೆ ಯಾವ ಶತ್ರುವಿಗೂ ಬೇಡ. ಒಂದು ಕೆಟ್ಟ ಪ್ರದರ್ಶನ ದ ಅನುಭವದಿಂದ ಹೊರಬರಲು ಹತ್ತಾರು ಒಳ್ಳೆಯ ಪ್ರದರ್ಶನದಲ್ಲಿ ಭಾಗಿಯಾಗಬೇಕಾಗುತ್ತದೆ ಎನ್ನುತ್ತಾನೆ ರಷ್ಯಾದ ಅಭಿನಯದ ಗುರು ಸ್ತಾನಿಸ್ಲಾವಸ್ಕಿ. ನಿಜ. ಅದು ಕಣ್ಣೆದುರೇ ಆಗಿ ಹೋದ ಪ್ರಮಾದದ ಹಾಗೆ. ಕಣ್ಣೆದುರೇ ಅದು ಘಟಿಸುತ್ತಿದ್ದರೂ ಏನೂ ಮಾಡಲಾಗದ ಅಸಹಾಯಕತೆ. ಸರಿ ಮಾಡಲೇ ಆಗದ ತಪ್ಪಿನ ಹಾಗೆ. ಆ ದಿನ ಕರ್ಟನ್ ಕಾಲ್ ಆದಮೇಲೆ ಯಾರಿಗೂ ಯಾರನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಧೈರ್ಯ ಇರುವುದಿಲ್ಲ.

ಹೊತ್ತ ಪಾತ್ರವನ್ನು ಈಗ ನಟ ಇಳಿಸಬೇಕು. ಅದು ಅಷ್ಟು ಸುಲಭವಾಗಿ ಆಗುವುದಲ್ಲ. ಎಷ್ಟು ಬೇಗ ಆ ಪಾತ್ರದಿಂದ ಹೊರಬರುತ್ತಾರೋ ಅದೇ ಒಳ್ಳೆಯ ನಟನ ಲಕ್ಷಣವಂತೆ! ಆದರೆ ಕೆಲವು ಪಾತ್ರಗಳು ಚರ್ಮದೊಳಕ್ಕೆ ಇಳಿದು ಹೋಗಿಬಿಟ್ಟಿರುತ್ತದೆ. ಪಾತ್ರದ ಒಂದು ಅಂಶ ನಟನ ವ್ಯಕ್ತಿತ್ವಕ್ಕೂ ಇಳಿದುಬಿಟ್ಟಿರುತ್ತದೆ. ಅದು ಯಾವಾಗ ಯಾವ ರೂಪದಲ್ಲಿ ಹೊರಗೆ ಬರುತ್ತದೆ ಹೇಳಲಾಗುವುದಿಲ್ಲ. ಪಾತ್ರ ನಟನೊಳಗೆ ನಟ ಪಾತ್ರದೊಳಗೆ ಹೋಗುವ ಈ ಪ್ರಕ್ರಿಯೆಗೆ ಎಷ್ಟೊಂದು ವಿಧಗಳು! ಪ್ರತಿ ಪಾತ್ರವು ಬೇರೆ ಬೇರೆ ನಟನೊಂದಿಗೆ ಬೇರೆ ಬೇರೆ ರೀತಿಯಾಗಿ ಹೊಮ್ಮುತ್ತದೆ. ಪಾತ್ರ ಒಂದೇ ಆದರೂ ಅದರ ದೃಷ್ಟಿಕೋನ ಬೇರೆಯದೇ. ಒಂದೇ ಬಗೆಯ ಅಡುಗೆಯನ್ನು ಬೇರೆಬೇರೆಯವರು ಮಾಡಿದಾಗ ಬದಲಾಗುವ ರುಚಿಯ ಹಾಗೆ!

ನಾಟಕ ಮಾಡುವಾಗ ಮನುಷ್ಯ ವರ್ತನೆಗಳನ್ನು ಅನ್ವೇಷಿಸಿಕೊಳ್ಳುತ್ತಾರೆ. ಬದುಕಿನಲ್ಲಿ ನಡೆಯುವುದನ್ನೇ ರಂಗದ ಮೇಲೆ ಮಾಡಿದಾಗ ಹಲವೊಮ್ಮೆ ಕ್ಲೀಷೆಯಾಗುತ್ತದೆ. ಆಗ, ನಿಜವಾದ ವರ್ತನೆ ಹೇಗಿರಬಹುದು? ಅದರ ಹುಡುಕಾಟ ನಡೆಯುತ್ತದೆ. ನಾಟಕ ಇರುವುದು ಎಲ್ಲವನ್ನೂ ಆಡುವುದರಲ್ಲಿ ಆಡದೇ ಇರುವುದನ್ನು ಕಾಣಿಸುವುದರಲ್ಲಿ

ಇಲ್ಲಿ ಯಾವುದು ನಿಜವಾದ ನಾಟಕ? ಯಾವುದು ಬದುಕು? ಯಾವುದು ಸುಳ್ಳು? ಯಾವುದು ನಿಜ?!

About The Author

ಚಿತ್ರಾ ವೆಂಕಟರಾಜು

ಚಿತ್ರಾ ವೆಂಕಟರಾಜು, ಚಾಮರಾಜನಗರದವರು. ನಟಿ. ಕಳೆದ ೧೮ ವರ್ಷಗಳಿಂದ ಸರ್ಕಾರಿ ಪ್ರೌಢಶಾಲೆಯಲ್ಲಿ ರಂಗಶಿಕ್ಷಣಶಿಕ್ಷಕಿಯಾಗಿಕೆಲಸ ನಿರ್ವಹಿಸುತ್ತಿದ್ದಾರೆ. ನೀನಾಸಮ್ರಂಗಶಿಕ್ಷಣ ಕೇಂದ್ರದಿಂದ ರಂಗಶಿಕ್ಷಣ ದಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ. ಚಾಮರಾಜನಗರದಶಾಂತಲಾ ಕಲಾವಿದರುʼ ತಂಡದಲ್ಲಿ ರಂಗಭೂಮಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಕಲಾಶಿಕ್ಷಣ, ಸಾಹಿತ್ಯ, ಸಂಗೀತ, ನೃತ್ಯ, ಸಿನೆಮಾದಲ್ಲಿ ಆಸಕ್ತಿ. ಇವರು ಅಭಿನಯಿಸಿದ ಅಮೃತಾ ಪ್ರೀತಂ ಅವರ ಬದುಕನ್ನು ಆಧರಿಸಿದ ಏಕವ್ಯಕ್ತಿ ರಂಗಪ್ರಯೋಗ “ಮೈ ತೆನ್ನು ಫಿರ್ಮಿಲಾಂಗಿ" ಹಲವಾರು ಪ್ರದರ್ಶನಗಳನ್ನು ಕಂಡಿದೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ