Advertisement
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ವೈದೇಹಿ ಬರೆದ ಕತೆ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ವೈದೇಹಿ ಬರೆದ ಕತೆ

ಯಾಕೋ ನನಗೆ ಕೋರ್ಟುಮನೆ ಅಲೆದೇ ಸೋತು ಕುಸಿದುಹೋಗಿದ್ದ ಅಪ್ಪನ ಹೋರಾಟದ ಬಗ್ಗೆ ಹೇಳಲೇಬೇಕೆನಿಸಿತು. ಆಸ್ತಿಗಾಗಿ ಕುಟುಂಬದಲ್ಲೇ ಒಂದು ಆತ್ಮಹತ್ಯೆ ಆಯಿತು, ಒಂದು ಕೊಲೆ ಆಯಿತು, ಇದೆಲ್ಲ ನಮ್ಮ ಮಟ್ಟಿಗೆ ಎಂಥ ದೊಡ್ಡದು ಯೋಚಿಸಿ. ಅಪ್ಪ ಕಡೆಕಡೆಗೆ ತಮ್ಮದೇ ಕುಟುಂಬದೊಂದಿಗೆ ಕೋರ್ಟುಕಚೇರಿ ವ್ಯಾಜ್ಯ ಯಾಕಾದರೂ ಬೇಕಿತ್ತು ಅಂತ ಕೊರಗುತಿದ್ದರು ಅಷ್ಟಿಷ್ಟಲ್ಲ. ಹಾಗೆಂದು ‘ಜಗಳ ಬೇಡ, ಎಲ್ಲ ನಿಮಗೇ, ತಕೊಳ್ಳಿ’ ಅಂತ ಬಿಟ್ಟುಕೊಟ್ಟರೇನು? ಇಲ್ಲವಲ್ಲ. ಅದು ಸಾಧ್ಯವೂ ಇಲ್ಲ. ‘ಒಂದು ರೀತಿ ಮಹಾಭಾರತದಲ್ಲಿ ಬರುವ ಧರ್ಮವ್ಯಾಧನ ಕತೆಯಂತೆ ನಾವೆಲ್ಲ. ಪಾಲಿಗೆ ಬಂದ ಕರ್ತವ್ಯವನ್ನು ಮಾಡಿ ಮುಗಿಸುವುದೊಂದೇ ನಮ್ಮ ಧರ್ಮ’ ಎಂದು ಎಷ್ಟು ಸಲ ನೊಂದು ಹೇಳುತಿದ್ದರೋ.
ನಾನು ಮೆಚ್ಚಿದ ನನ್ನ ಕಥಾ ಸರಣಿಯ ಕೊನೆಯ ಕಂತಿನಲ್ಲಿ ವೈದೇಹಿ ಬರೆದ ಕತೆ “ಅಮುದ ಹೇಳಿದ ಕತೆ”

ಅವತ್ತು ಗೇಟು ಶಬ್ದ ಕೇಳಿ ಯಾರಪ್ಪ ಅಂತ ಹೊರಬಂದರೆ ಅವಳೆ, ಅಮುದ! ಓ ಬಂದೆಯ? ಎಂದೆ. ‘ಹೂ ಆಂಟಿ’ ಎನ್ನುತ್ತ ಒಳ ಬರುವವಳ ಮುಖದಲ್ಲಿ ಗೆಲುವಿರಲಿಲ್ಲ. ಉದ್ಯೋಗ ನಿಮಿತ್ತ ಬಂದು ನಮ್ಮ ಮನೆಯ ಮಹಡಿಯ ಮೇಲೆ ಬಾಡಿಗೆಗಿದ್ದ ಅಮುದ ದೀಪಾವಳಿ ರಜೆಗೆ ಊರಿಗೆ ಹೋದವಳು; ರಜೆ ಕಳೆದು ದಿನಗಳಾದರೂ ಬರದೆ, ಅಂತೂ ಅವತ್ತು ಬಂದು ಮುಟ್ಟಿಕೊಂಡಿದ್ದಳು. ಬಂದವಳಾದರೂ ಹೇಗಿದ್ದಳೆಂದರೆ, ಏನು? ಏನಾಯಿತು? ಅಂತ ಕೇಳಲೇ ಬೇಕು, ಹಾಗೆ. ಆದರೆ ಇನ್ನೂ ಬರುತಿದ್ದಾಳಷ್ಟೆ, ಸದ್ಯ ಏನೂ ಬೇಡ ಎಂದು ಸುಮ್ಮನಾದೆ. ಆಕೆಯೇ ‘ತುಂಬ ಹೇಳಲಿಕ್ಕಿದೆ, ಒಂದು ಲೋಟ ನೀರು ಕೊಡಿ ಆಂಟಿ. ನೀರು ಕುಡಿದು ಹೋಗುತ್ತೇನೆ. ಸಂಜೆ ಎಲ್ಲ ಹೇಳುತ್ತೇನೆ. ಈಗ ಬೇಗ ಸ್ನಾನಗೀನ ಮುಗಿಸಿ ಆಫೀಸಿಗೆ ಹೊರಟು ಬಿಡಬೇಕು’. ಎಂದಳು. ನೀರು ಕುಡಿದವಳು, ಏನಾದರೂ ತಿಂದು ಹೋಗು ಎಂದರೆ ಇಲ್ಲ ಹೊತ್ತಾಯಿತು, ಡೋಂಟ್ ವರಿ, ಕ್ಯಾಂಟೀನಿನಲ್ಲಿ ತಿನ್ನುತ್ತೇನೆ ಎನ್ನುತ್ತ ಸೀದ ಮೇಲ್ಮನೆಗೆ ಹೋದಳು.

ಮತ್ತೆ ಸಿಕ್ಕಿದ್ದು ಸಂಜೆಗೇ. ಆಫೀಸಿನಿಂದ ಮರಳಿದ ಅಮುದ ಮೆಟ್ಟಿಲು ಹತ್ತಿ ತನ್ನ ಮನೆಗೆ ಹೋಗುವುದರೊಳಗೆ ‘ಇರು ಇರು. ಹೊಟ್ಟೆಗೇನಾದರೂ ಹಾಕಿಕೊಂಡೇ ಹೋಗು. ನಾಳೆಯಿಂದ ಎಲ್ಲ ನೀನೇ ಮಾಡಿಕೊಳ್ಳುವಿಯಂತೆ.’ ಎಂದೆ. ಮುಖ ಇನ್ನೂ ಬೆಳಗ್ಗೆ ಇದ್ದ ಹಾಗೆಯೇ ಬಡಿಕೊಂಡೇ ಇತ್ತು. ಒಳಬಂದವಳಿಗೆ ತಿಂಡಿ ಎದುರಿಟ್ಟು ‘ಮೊದಲೊಂಚೂರು ತಿಂಡಿ ತಿಂದುಕೋ ಮಾರಾಯ್ತಿ’ ಎಂದೆ. ತಿಂಡಿಗೆ ಕೈ ಹಾಕಿದಳೇನೋ ಸರಿ. ಆದರೆ ಎಂದಿನ ಉಲ್ಲಾಸ ಇರಲಿಲ್ಲ. ಎಲ್ಲೋ ಕಳೆದು ಹೋದಂತೆ ಇದ್ದಾಳೆ. ಏನೇ ಏನಾಯಿತು? ಎಂದೆ. ಬೆಳಗ್ಗೆಯೂ ಹೀಗಿದ್ದೆ. ಆಗಿದ್ದೇನು? ಎಂದೆ. ನನ್ನೊಡನೆ ಹೇಳಬಾರದ? ಎಂದೆ.

ನಿಧಾನವಾಗಿ ಅಮುದ ‘ನಾನವರನ್ನು ನೋಡಲು ಹೋಗುವುದೇ ಬೇಡವಿತ್ತು ಆಂಟಿ. . .’ ಎನ್ನುತ್ತ ಸುರುಮಾಡಿದಳು.

*****

‘ನಮ್ಮಲ್ಲೊಬ್ಬರು ಮಿಲಿಟರಿಯಲ್ಲಿ ಪೈಲಟ್ ಆಗಿದ್ದ, ದ್ವಿತೀಯ ಯುದ್ಧದಲ್ಲಿ ನೇರ ಭಾಗವಹಿಸಿದ್ದ ದೊಡ್ಡಪ್ಪ ಇದ್ದಾರೆ ಎಂದಿದ್ದೆ, ನೆನಪಿದೆಯಾ ನಿಮಗೆ? ನಾನು ನೋಡಿಲ್ಲದೇ ಹೋದರೂ ಅವರ ಬಗ್ಗೆ ಬಹಳ ಕೇಳಿದ್ದೆ ಅಂತೆಲ್ಲ? ನಮ್ಮಲ್ಲಿ ಮಿಲಿಟರಿ ಸೇರಿದವರು ಅವರೊಬ್ಬರೆ. ನಿವೃತ್ತಿಯಾದ ಮೇಲೆ, ನೋಯ್ಡಾ ಹತ್ತಿರದ ಒಂದು ಹಳ್ಳಿಯಲ್ಲಿ ಇದ್ದು ಬಿಟ್ಟಿದ್ದರು. ಮುಂಚಿನಿಂದಲೂ ಕೆಲಸದ ಮೇಲೆ ದೂರವೇ ಇದ್ದವರು, ದೂರವೇ ಆಗಿಬಿಟ್ಟಿದ್ದರು. ಊರಿಗೆ ಬರುವುದನ್ನು ಯಾವಾಗಲೋ ನಿಲ್ಲಿಸಿದ್ದರು. ಹಾಗೆ ಯಾರನ್ನೂ ಹೆಚ್ಚು ಹಚ್ಚಿಕೊಂಡಿಲ್ಲ ಅಂತಲ್ಲ. ಅಥವಾ ನೆನಪು ಬಿಟ್ಟವರೂ ಅಲ್ಲ. ಹೇಗೆ ಗೊತ್ತು ಅಂದರೆ ಊರಿಂದ ಯಾರಾದರೂ ಅವರ ಮನೆಗೆ ಹೋದರೆಂದರೆ ಬಹಳಾ ಸಂತೋಷ ಪಡುತಿದ್ದರಂತೆ, ಆದರೆ ಹೋದವರು ಕಡಿಮೆ. ದೂರ ಅಂತ, ಅವನ ದೊಡ್ಡಸ್ತಿಕೆ ಅವನಿಗೆ ಅಂತ, ಅವನಿಗೆ ಬೇಡವಾದರೆ ನಮಗೂ ಬೇಡ ಅಂತ, ತಂತಮ್ಮ ಬದುಕಿನಲ್ಲೇ ಮುಳುಗಿಹೋಗಿ ಅಲ್ಲಿಗೆ ಹೋಗಲು ಅನುವೇ ಆಗಿಲ್ಲ ಅಂತ; ಪ್ರೀತಿಯಿದ್ದೂ ದೂರಕ್ಕೆ ದೂರವೇ ಇರುವ ಸ್ಥಿತಿ ಇರುತ್ತದೆಯಲ್ಲ, ಏನೇನೋ ತಪ್ಪು ಕಲ್ಪನೆ, ಕೀಳರಿಮೆ, ಸಕಾರಣ ನಿಷ್ಕಾರಣ ನೂರಾರು ಕಾರಣಗಳಿಂದ? ಹಾಗೆ ಅವರನ್ನು ಹೋಗಿ ಭೇಟಿಯಾದವರು ಬಹಳ ವಿರಳವೇ. ದೊಡ್ಡ ದೊಡ್ಡ ಕುಟುಂಬಗಳಲ್ಲಿ ಇದು ಸಾಮಾನ್ಯ ಅನ್ನಿ. ತೀರಾ ದೊಡ್ಡದಾಗುತ್ತ ಕೊನೆಕೊನೆಗೆ ಎಲ್ಲೋ ದೂರದವರೇ ಆಗಿಬಿಡುವ, ಒಮ್ಮೆಯೂ ಭೇಟಿಯಾಗದೆ ಬರಿಯ ಸ್ಮೃತಿಗಳಲ್ಲೇ ಸಂಚರಿಸುವ ವ್ಯಕ್ತಿಗಳ ದೊಡ್ಡ ಸಂಕೋಶ ಆಗಿಬಿಡುವ ವಾಸ್ತವವದು.

‘ಹೌದಪ್ಪ. ಹೇಳಹೋದರೆ ಹತ್ತಿರದ, ಆದರೆ ನಿತ್ಯ ಬಳಕೆಯಲ್ಲಾಗಲೀ ವ್ಯವಹಾರದಲ್ಲಾಗಲೀ ದೂರವಿರುವ, ಮನೆಯಲ್ಲಿ ನಡೆವ ಮಾತುಕತೆಯ ಮುಖಾಂತರವೇ ಜೀವಿಸಿಕೊಳ್ಳುವ ಸಂಬಂಧಗಳಾದರೂ ಎಷ್ಟಿವೆ!’

‘ಹೂಂ ಈ ನಮ್ಮ ಪೈಲಟ್ ದೊಡ್ಡಪ್ಪನೂ ಅಷ್ಟೆ. ನಮ್ಮ ಪೀಳಿಗೆಯವರಿಗೆ ಒಂದು ರೀತಿ ಕಥನದಲ್ಲೇ ಬೆಳೆದ ನಾಯಕನಾಗಿ ಬಿಟ್ಟಿದ್ದರು. ಅವರ ಕುರಿತು ನಾವು ಕೇಳಿದ ದಂತಕತೆಗಳಿಗೊಂದು ಮಿತಿಯಿತ್ತೆ? ಅವರ ಶಿಸ್ತು, ಅವರ ಪೈಲಟ್ ವೇಷಭೂಷಣ, ಅವರು ಭಾಗವಹಿಸಿದ ಯುದ್ಧಗಳು, ಅವರ ಸಾಹಸಗಳು, ಸಾಧನೆಗಳು, ಅವರ ಮೆಡಲುಗಳು, ಸನ್ಮಾನಗಳು; ಹೌದೋ ಅಲ್ಲವೊ ಎಷ್ಟು ನಿಜವೋ ಎಷ್ಟು ಊಹೆಯೋ; ‘ನಮ್ಮಲ್ಲೊಬ್ಬ ಮಿಲಿಟರಿಯಲ್ಲಿದ್ದಾನೆ, ವೀರಾಧಿವೀರನಾತ, ಯುದ್ಧದಲ್ಲಿ ಪ್ರತ್ಯಕ್ಷ ಭಾಗವಹಿಸಿದ ಸಾಹಸಿ’ ಎಂದು ಇನ್ನೂ ಮುಂತಾಗಿ ಹೇಳಿಕೊಳ್ಳುವ ಬಯಕೆಯಿಂದ, ಹೆಗ್ಗಳಿಕೆಯಿಂದ ರೂಪುಗೊಂಡ ಕಪೋಲಕಲ್ಪಿತ ಚಿತ್ರವೋ, ಅಂತೂ ಅವರ ಕುರಿತು ಒಂದು ರಾಶಿ ಕತೆ, ಸಣ್ಣದಿನಿಂದಲೂ ಕೇಳಿ ಕೇಳಿ ಬೆಳೆದದ್ದಕ್ಕೋ ಏನೊ, ಯಾವಾಗಿಂದಲೂ ನಾನೊಮ್ಮೆ ಅವರನ್ನು ನೋಡಲೇಬೇಕು, ನೋಡಿಯೇ ಶುದ್ಧ ಅಂತ ಬಹಳ ಅನಿಸುತಿತ್ತು. ಅವರ ಸಾಹಸಗಾಥೆಯನ್ನು ಪ್ರತ್ಯಕ್ಷ ಅವರಿಂದಲೇ ನೇರ ಕಿವಿಯಾರ ಕೇಳಬೇಕೆಂಬ ಭಯಂಕರ ಆಸೆಯಿತ್ತು. ಆದರೆ ಅವರು ಇಷ್ಟರೊಳಗೆ ಮೇಲೆ ಹೋಗಿರಬಹುದು ಅಂತಲೆ ಎಣಿಸಿದ್ದೆ. ಮೊನ್ನೆ ಮನೆಗೆ ಹೋದೆನಲ್ಲ, ಸುಮ್ಮನೆ ಹಿರಿಯ ತಲೆಗಳ ಬಗ್ಗೆಯೆಲ್ಲ ಮಾತಾಡುತ್ತ, ಕುಳಿತಿದ್ದೆವು. ಆಗ ಈ ದೊಡ್ಡಪ್ಪನದೂ ಪ್ರಸ್ತಾಪ ಬಂತು. ಅವರಿನ್ನೂ ಇದ್ದಾರೆ, ನೂರಕ್ಕೆ ಸಮೀಪಿಸುತ್ತಿದ್ದಾರೆ ಆದರೂ ಅವರ ಪ್ರಾಯಕ್ಕೆ ಹಾಗೆ ಗಟ್ಟಿಯೇ ಇದ್ದಾರೆ – ಅಂತೆಲ್ಲ ಕೇಳಿದೆ. ಕೇಳಿದ್ದೇ ನನ್ನ ಆಶ್ಚರ್ಯಕ್ಕೆ ಮಿತಿಯೇ ಇರಲಿಲ್ಲ. ಇದ್ದಾರೆಯೆ! ಅವರು ಇನ್ನೂ ಇದ್ದಾರೆ ಅಂತಾದರೆ -ನಾನು ಇನ್ನೂ ನೋಡಿಲ್ಲ, ಶೀಘ್ರ ನೋಡಬೇಕು ಅಂತವೇ ಅರ್ಥ ಅಂತ ನನ್ನನ್ನು ನಾನೇ ಹುರಿದುಂಬಿಸಿಕೊಂಡೆ.

ಊರಿಗಾದರೂ ಎಷ್ಟು ಸಲ ಹೋಗಿಲ್ಲ ಆಂಟಿ ನಾನು? ಸುಮ್ಮನೆ ಹುಡಿ ಪಟ್ಟಾಂಗದಲ್ಲೇ ಮುಳುಗುತಿದ್ದೆ ಹೊರತು ಅವರನ್ನು ನಾನು ನೋಡಿ ಬರಬಹುದು ಎಂದು ಒಮ್ಮೆಯಾದರೂ ಹೊಳೆದಿದ್ದರೆ! ಆ ದೂರ ನಿರುತ್ಸಾಹಗೊಳಿಸಿತ್ತು ಬಹುಶಃ. ಹಾಗೆ ಕಂಡರೆ ಏನು ಮಹಾ ದೂರ, ಈಗಿನ ಕಾಲದಲ್ಲಿ, ಅದೂ ಕೈ ತುಂಬ ನಾನೇ ಸ್ವತಃ ಸಂಪಾದನೆ ಮಾಡುತ್ತಿರುವಾಗ! ಆದರೆ ಹೋಗಲೇಬೇಕೆಂದು ಅನಿಸಿದ್ದು ಈ ಸಲ ಮಾತ್ರ ಅಂದರೆ! ಹೇಳುತ್ತಾರಲ್ಲ, ‘ಎಲ್ಲದಕ್ಕೂ ಒಂದು ಮುಹೂರ್ತ ಬರಬೇಕು’ ಅಂತ. ಅದು ಹೌದೇಹೌದು.

ನಾನಲ್ಲಿಗೆ ಹೋಗಿ ಬರುವ ನಿರ್ಧಾರ ತಿಳಿಸುತ್ತಲೂ ‘ಯಾಕೆ ಈಗ, ಬೇಡ. ಒಟ್ಟಿಗೆ ಇರುವುದೇ ಕಮ್ಮಿ ನಾವು. ರಜೆಯಲ್ಲಾದರೂ ಇಲ್ಲೇ ಇರು’ ಎಂದರು ಇವರು. ಮಗನಂತೂ ಪಾಪ ಏನೇನೋ ಪ್ಲಾನ್ ಹಾಕಿದ್ದ. ಏನು ಮಾಡಿದರೂ ಹೊರಡಲು ಬಿಡಲೊಲ್ಲ. ‘ಇಲ್ಲ ಪುಟ್ಟಾ, ಇದೊಂದು ಛಾನ್ಸ್. ಈಗ ಬಿಟ್ಟರೆ ಮತ್ತೆ ಅವರು ಸಿಗುವರೋ ಇಲ್ಲವೋ ಹೇಗೆ ಹೇಳುವುದು? ನಾನಲ್ಲಿಗೆ ಹೋಗಲೇ ಬೇಕು. ಹೋಗಲೇ ಬೇಕು ಅಂತ ಎಷ್ಟು ಅನಿಸುತ್ತಿದೆ ಅಂದರೆ ಈಗಲೇ ಈ ತಕ್ಷಣ ಅಲ್ಲಿಗೆ ತಲುಪಬೇಕು ಅನ್ನುವಷ್ಟು’ ಎಂದೆ. ಹೀಗೆನ್ನುವಾಗ ನನ್ನಲ್ಲಿ – ನಾಳೆಯೆಂದರೆ ಅವರು ತೀರಿಕೊಂಡು ಬಿಟ್ಟರೆ ಎಂಬ ದುಗುಡ, ಏರಿ ಬಿಟ್ಟಿದೆ! ಇಷ್ಟು ದಿನ ಇಲ್ಲದ್ದು! ಇಂಥ ಒತ್ತಡ ನೋಡಿ ಆಂಟಿ, ಒಮ್ಮೊಮ್ಮೆ ಹೇಗೆ ತಾನಾಗಿ ಪಟಾರನೆ ಸ್ಪೋಟಗೊಳ್ಳುತ್ತದೆ!

ನನ್ನ ಗಂಡನಿಗೆ ನನ್ನ ಹಟಸ್ವಭಾವ ಗೊತ್ತು, ಅಲ್ಲದೆ ದೊಡ್ಡಪ್ಪನನ್ನು ನೋಡಬೇಕೆಂದು ನಾನು ಬಹುಕಾಲದಿಂದ ಆಸೆ ಪಡುತ್ತಿದ್ದುದೂ ಗೊತ್ತು. ಸರಿ, ಇನ್ನೇನು, ಹೋಗಿ ಬಾ ಎಂದರು. ಅತ್ತೆ ಮಾವ ಪಾಪ, ಯಾವತ್ತೂ ಯಾವುದಕ್ಕೂ ಬೇಡ ಅನ್ನುವವರಲ್ಲ. ಆದರೆ ಮಗ ಮಾತ್ರ, ತಾನೂ ಬರುವೆ ಎಂದು ಒಂದೇ ಸಮ ಗೋಗರೆದ. ಅವನಿಗೂ ನಮ್ಮಿಂದೆಲ್ಲ ಕೇಳಿಕೇಳಿ ಅವರೆಂದರೆ ಒಂದು ದಂ ಆರಾಧನೆ ಇದ್ದೇ ಇತ್ತು. ಹೇಗೋ ಅಂತೂಇಂತೂ ಅವನನ್ನು ಸಮಾಧಾನ ಮಾಡಿ ನಾನೊಬ್ಬಳೇ ಹೊರಡಲು ತಯಾರಾದೆ. ಕಷ್ಟಾ ಪಟ್ಟು ಎಲ್ಲೆಲ್ಲಿಗೋ ಸಂಪರ್ಕ ಮಾಡಿ ಅವರ ಫೋನು ನಂಬರು ಪಡೆದು ಫೋನು ಮಾಡಿದೆ. ಫೋನಿಗೆ ಅವರ ಮೊಮ್ಮಗನ ಹೆಂಡತಿಯಂತೆ, ಹೆಸರು ರುಮಾ, ಸಿಕ್ಕಿದಳು. ಮೆಲ್ಲ ನಾನು ಯಾರೆಂತ ಹೇಳುತ್ತಲೂ ಉತ್ಸಾಹದಿಂದ ಬಹಳ ಒಳ್ಳೆಯದು, ಬನ್ನಿ ಬನ್ನಿ, ಬೋಗಿ ನಂಬರ್ ಹೇಳಿ, ನಾನೆ ಬಂದು ಕರಕೊಂಡು ಹೋಗುತ್ತೇನೆ, ಚಿಂತೆ ಬೇಡ, ಎಂದಳು. ಅವಳ ದನಿಯಲ್ಲಿನ ಉಮೇದು ಅಂದರೆ, ಹೊರಟಿರುವ ನನ್ನನ್ನೂ ಆವರಿಸುವಷ್ಟು. ತಡಮಾಡದೆ, ತತ್ಕಾಲ್ ಟಿಕೆಟ್ ಪಡೆದು ಹೊರಟೇ ಬಿಟ್ಟೆ.

ಸ್ಟೇಶನ್ನಿನಲ್ಲಿ ಇಳಿದು ಅತ್ತಿತ್ತ ನೋಡುವಂತೆಯೇ ಇಲ್ಲ! ಬೋಗಿಯ ಎದುರಲ್ಲೇ ಕಾಯುತ್ತ ನಿಂತಿದ್ದಳು ರುಮಾ. ‘ನೀವು ಬರುವುದು ಕೇಳಿ ದಾದಾಗೆ ಒಂದು ಸಂತೋಷ ಆಗಿದೆ, ಅಷ್ಟಿಷ್ಟಲ್ಲ…..’ ಎಂದು ಬ್ಯಾಗ್ ತೆಗೆದುಕೊಂಡು ಖುಶಿಹೆಜ್ಜೆಯಲ್ಲಿ ಮುಂದೆ ಹೊರಟಳು. ಡ್ರೈವ್ ಮಾಡುತ್ತ ದಾರಿಯುದ್ದಕ್ಕೂ ಮಾತಾಡುತ್ತಲೇ ಇದ್ದಳು. ಆಂಟಿ, ನೀವು ಅವಳನ್ನು ನೋಡಬೇಕು. ಎಷ್ಟೂ ಮಾತು. ಹಾಗಂತ ಒಂದು ಚೂರು ಬೋರಾಗುವುದಿಲ್ಲ, ಹಾಗೆ ರುಚಿರುಚಿ. ತಮಾಷೆ, ನಗೆ ಎಲ್ಲವೂ. ನೋಡಿ ಅವಳು, ನಮ್ಮ ಜಾತಿಯಲ್ಲ. ನಮ್ಮ ಭಾಷೆಯವಳಲ್ಲ, ಹೋಗಲಿ, ನಮ್ಮ ಪ್ರದೇಶದವಳೂ ಅಲ್ಲ. ಆದರೆ ನಾವು ಹರಟಿದ್ದೆಂದರೆ ಯಾವಾಗಿಂದಲೂ ಪರಿಚಿತರು ಎಂಬ ಹಾಗೆ. ಗಂಡ ಕೆಲಸ ನಿಮಿತ್ತ ದಿನಾ ನೋಯ್ಡಾಕ್ಕೆ ಹೋಗಿ ಬರುತ್ತಾರಂತೆ. ನೋಯ್ಡಾದಲ್ಲಿನ ತಮ್ಮ ಅಪಾರ್ಟ್ಮೆಂಟನ್ನು ಬಾಡಿಗೆಗೆ ಕೊಟ್ಟು ದಾದಾಗೋಸ್ಕರ ಇಲ್ಲಿದ್ದೇವೆ. ಅವರು ಇಲ್ಲಿಂದ ಹೊರಡಲು ಒಪ್ಪುವುದಿಲ್ಲ, ಹಟ ಮಾಡುತ್ತಾರೆ. ತಾವೂ ನೋಡಿಕೊಳ್ಳದೆ ಹೋದರೆ ದಾದಾಗೆ ಯಾರಿದ್ದಾರೆ ಅಂತೆಲ್ಲ ನುಡಿದಳು. ಅಷ್ಟರೊಳಗೆ ಮನೆ ಬಂತು. ಮನೆ ಸುತ್ತಾ ಅಂಥಾ ತೋಟ. ಹಣ್ಣುಹೂವು ಯಾವುದು ಬೇಕು ಎಲ್ಲವೂ, ಕಣ್ಣು ತುಂಬುವಂತೆ. ದೊಡ್ಡಪ್ಪನ ವಿಚಾರ ಬಂದಾಗೆಲ್ಲ ಅಪ್ಪ ಹೇಳುತಿದ್ದರು -ಅವ ನಿಜವಾಗಿಯೂ ಒಬ್ಬ ಒಳ್ಳೆಯ ಕೃಷಿಕ ಆಗುವವನು. ಕೃಷಿ ಅಂದರೆ ಪಂಚಪ್ರಾಣ ಅವಂಗೆ, ಅಂಥವ ಅಲ್ಲಿ ಹೋದ, ಸೈನ್ಯಕ್ಕೆ, ಇಂಗ್ಲಿಷ್‌ನವರ ಕೈಕೆಳಗೆ, ಅದೂ ಯುದ್ಧವಿಮಾನದ ಪೈಲಟ್ ಆಗಿ! ಏನು ವಿಧಿಯೋ! ಅಂತ. ಹೇಳಿದ್ದೆನಲ್ಲ ನಿಮಗೆ, ನನ್ನ ತಂದೆಯೂ ಅವರೂ ದೊಡ್ಡಪ್ಪ ಚಿಕ್ಕಪ್ಪನ ಮಕ್ಕಳು ಅಂತ. ನನ್ನ ತಂದೆ ಸತ್ತು ಪಾಪ ಎಲ್ಲಿದ್ದಾರೊ, ಇವರು, ಅವರಿಗಿಂತ ತುಂಬಾನೇ ದೊಡ್ಡವರು, ಇನ್ನೂ ಇದ್ದಾರೆ ಅಂದರೆ!

*****

‘ದಾದಾಗೆ ಇವತ್ತು ಬೆಳಗಿಂದ ಗಂಟೆ ನೋಡುವುದೇ ಕೆಲಸ. ಮಗುವಿನಂತೆ ಹೇಗೆ ಗೆಲುವಾಗಿದ್ದಾರೆ ನೋಡುವಿರಂತೆ ನೀವೇ’ ಎಂದು ಹೇಳುತ್ತ ಒಳಗೆ ಕರೆದೊಯ್ದಳು ರುಮಾ.

ಒಳಗೆ, ಪ್ರವೇಶದ ಹಾಲಿನಲ್ಲಿಯೇ, ಕಪಾಟಿನಲ್ಲಿ ಅವರಿಗೆ ದೊರೆತ ಪದಕಗಳು, ಅಭಿನಂದನಾಪತ್ರಗಳು, ಅವರು ಅವತ್ತು ತೊಡುತಿದ್ದ ಸಮವಸ್ತ್ರ ಸಮೇತ ಶ್ರದ್ಧೆಯಿಂದ ಜೋಡಿಸಿಟ್ಟದ್ದು ಕಾಣುತಿತ್ತು. ಸೈನಿಕನ ವೀರಮೂರ್ತಿಯೊಂದು ಅಂಥ ಮನೆಗಳ ಅವಿಭಾಜ್ಯ ಅಂಗವೆಂಬಂತೆ ಒಂದು ಮೂಲೆಯಲ್ಲಿ ಖಡ್ಗ ಹಿಡಿದು ತಲೆಯೆತ್ತಿ ನಿಂತಿತ್ತು. ನಾನು ದೃಷ್ಟಿ ಹಾಯಿಸುತಿದ್ದಂತೆ,

‘ಇದೆಲ್ಲ ನಾನೇ ಜೋಡಿಸಿಟ್ಟದ್ದು. ದಾದಾ ಯಾಕೊ ಎಲ್ಲವನ್ನ ಮೂಟೆ ಕಟ್ಟಿ ಲಾಫ್ಟ್‌ಗೆ ಎಸೆದಿದ್ದರು. ಈಗ ಅವರು ರೂಮು ಬಿಟ್ಟು ಹೊರ ಬರುವುದಿಲ್ಲವಲ್ಲ, ನಾನೆ ಎಲ್ಲ ತೆಗೆದು ಜೋಡಿಸಿಟ್ಟೆ. ನೋಡುತ್ತ ತಮ್ಮ ಅಪ್ಪನ ದಾದಾ ಎಂಥ ದೊಡ್ಡ ಮನುಷ್ಯ ಅಂತ ಹೇಳದೆಯೇ ಮಕ್ಕಳಿಗೆ ತಿಳಿಯಲಿ ಅಂತ. ಇರುತ್ತೀರಲ್ಲ ಎರಡು ದಿನ, ನಿಧಾನವಾಗಿ ವಿವರವಾಗಿ ನೋಡಬಹುದು. . . . ಮೊದಲು ಫ್ರೆಶ್ ಆಗಿ. ಇನ್ನೊಂದು ಅರ್ಧಗಂಟೆ, ದಾದಾ ತಯಾರಾಗುತ್ತಾರೆ. ತಯಾರಾಗಿ ಮಂಚದ ಮೇಲೆ ದಿಂಬಿಗೊರಗಿ ಶಿಸ್ತಾಗಿ ಕುಳಿತ ಮೇಲೆ, ಸಹಾಯಕ ಓಕೆ ಮಾಡಿದ ಮೇಲೆಯೇ ಸೈ, ನಾವಾದರೂ ಅವರನ್ನು ನೋಡುವುದು. ಅಷ್ಟರವರೆಗೆ ನಮಗೂ ಅವರ ಕೋಣೆಗೆ ಪ್ರವೇಶವಿಲ್ಲ…

‘ನೋಡುವುದಷ್ಟೇ ಅಲ್ಲ, ಫೋಟೊ ತೆಗೆಯಬೇಕು, ಮೆಲ್ಲ ಒಂದಷ್ಟು ಪ್ರಶ್ನೆ ಹಾಕಿ ಅವರ ಅನುಭವಗಳನ್ನೆಲ್ಲ ರೆಕಾರ್ಡು ಮಾಡಿಕೊಳ್ಳ ಬೇಕೆಂತಲೂ ಇದೆ ನಂಗೆ’ ಎಂದೆ.

‘ಸರಿಯೆ. ಆದರೆ ಛೆ, ಅವರು ಹೇಳಬೇಕಲ್ಲ! ನೀವು ಒಂದು ಹತ್ತು ವರ್ಷ ಮುಂಚೆ ಬಂದಿದ್ದರೆ! ಬೇಕಾದಷ್ಟು ವಿಷಯ ಸಿಗುತಿತ್ತು. ಈಗೀಗ ಭಾರೀ ಅಂತರ್ಮುಖಿಯಾಗುತಿದ್ದಾರೆ. ನೀವು ಬರುತ್ತೀರೆಂದು ಕೇಳಿ ನನಗೆ ಒಂದಿಷ್ಟು ಜಾಸ್ತಿ ಖುಶಿಯಾಗಿದ್ದೂ ಅದಕ್ಕೇ. . . ಅವರು ಇನ್ನಷ್ಟು ಒಳಗೊಳಗೇ ಇಳಿದರೆ ಈ ವಯಸ್ಸಿನಲ್ಲಿ ಯಾವ ಅವಸ್ಥೆ ತಲುಪುತ್ತಾರೋ ಎಂಬ ಆತಂಕ. ಮಗ ಸೊಸೆ ಹೆಂಡತಿ ಒಮ್ಮೆಗೇ ಅಪಘಾತದಿಂದ ಸತ್ತ ಮೇಲೆ ಅವರು ಮುಂಚಿನಂತೆ ಆಗೇ ಇಲ್ಲ. ನೀವು ಆ ಸಮಯದಲ್ಲಿ ಅವರನ್ನು ನೋಡಬೇಕಿತ್ತು. ಏಕ್‌ದಂ ತಾನು ವಿವಿಧ ಯುದ್ಧದಲ್ಲಿ ಹೋರಾಡಿದ ಕತೆ, ಎದುರು ಸೈನ್ಯವನ್ನು ಬಗ್ಗು ಬಡಿದ ಕತೆ, ಹೇಳುವುದು, ಹೆಮ್ಮೆಯಿಂದ ಹೇಳುವುದಲ್ಲ, ಹೇಳುತ್ತ ಹೇಳುತ್ತ ಅಳುವುದು! ಮಗ ಸೊಸೆ ಮತ್ತು ಹೆಂಡತಿಯ ಫೋಟೋದ ಎದುರು ನಿಂತು, ನನ್ನನ್ನು ಕ್ಷಮಿಸಿ. ಶಾಸ್ತಿಯಾಗಿದೆ. ಶಾಸ್ತಿ ಈ ರೀತಿ ಅಂತ ಊಹಿಸಿರಲಿಲ್ಲ. ಈಗ ಅನುಭವಿಸಲೇ ಬೇಕು, ಅನುಭವಿಸಿ ಮುಗಿಸಿ ಬೇಗ ಬರುತ್ತೇನೆ… ಅಂತೆಲ್ಲ ಹೇಳುವುದು, ಫೋಟೋಕ್ಕೆ ಹೂವು ಏರಿಸುವುದು, ತೆಗೆಯುವುದು, ಏರಿಸುವುದು ತೆಗೆಯುವುದು. . . ಒಂಥರ ಹುಚ್ಚರ ಹಾಗೆಯೇ ಇದ್ದರು. ಈಗ ಎಷ್ಟೋ ವಾಸಿ. ದೊಡ್ಡದಾಗಿ, ಮುಂಚಿನಂತೆಯೇ ನಗುತ್ತಾರೆ, ಮಾತಾಡುತ್ತಾರೆ. ಆದರೆ ಅದೆಲ್ಲ ಅಭ್ಯಾಸ ಬಲದಿಂದ. ಆಳದಲ್ಲಿ ಅವರು ಪೂರಾ ಸಪ್ಪೆಗಟ್ಟಿದ್ದಾರೆ. . . ದಿನಾ ನೋಡುವ ನನಗೇ ಗೊತ್ತು ಅದು. . .’

‘ಹ್ಞ!’

ಮಗ ಸೊಸೆ ಹೆಂಡತಿಯೆಲ್ಲ ಸತ್ತ ಸುದ್ದಿ, ದೊಡ್ಡಪ್ಪ ಈ ಪರಿಯಲ್ಲಿ ತಳಮಳಿಸಿದ ಸುದ್ದಿ ತಿಳಿದೇ ಇರಲಿಲ್ಲ. ಅದೆಲ್ಲ ಊರು ತಲುಪಿಯೆ ಇರಲಿಲ್ಲ. ಅಬ್ಬ ಕುಟುಂಬದಲ್ಲೇ ಇಷ್ಟು ದೊಡ್ಡ ದುರಂತ ನಡೆದೂ ಅದು ತಿಳಿಯದೇ ಹೋಗುವ ವಿಚಿತ್ರ ನೋಡಿ ಆಂಟಿ! ಸಂಪರ್ಕ ಕಡಿಯುವುದಲ್ಲ, ಸಂಪರ್ಕವೇ ಇಲ್ಲದಿರುವುದಕ್ಕೆ ಉದಾಹರಣೆ ಇದು.

*****

ಅರ್ಧಗಂಟೆ ಕಳೆಯಿತು.

ದೊಡ್ಡಪ್ಪನ ಕೋಣೆಯಿಂದ ಸನ್ನೆ ಬಂತು. ನಾವು ಕೋಣೆಯ ಸನಿಹ ಬರುತ್ತಲೂ ‘ಬಂದಳೆ ಬಂದಳೆ?’ ಧ್ವನಿ. ಕೇಳಿ ರೋಮಾಂಚಿತಳಾದೆ ನಾನು.

‘ಹೂಂ, ದಾದಾ, ಇಲ್ಲಿ ನೋಡಿ’

ಒಳಬಂದು ನಾನವರ ಮಂಚದ ಹತ್ತಿರಕ್ಕೆ ಸರಿದು ನಿಂತುಕೊಂಡೆ.

‘ಬಾ ಬಾ ಮಗೂ, ಇಲ್ಲಿ ಬಾ, ಕುಳಿತುಕೋ. ನಿನ್ನ ಹೆಸರೇನು ಅಂದೆ? ಅಮುದ. . . ಹ್ಞಂ?. .’

ಮಂಚದ ಬಳಿ ಇದ್ದ ಕುರ್ಚಿಯಲ್ಲಿ ಕುಳಿತುಕೊಂಡೆ. ಕಣ್ಣು ಅವರಲ್ಲೇ ನೆಟ್ಟು ಬಿಟ್ಟಿತು. ಅಯ್ಯಯ್ಯಬ್ಬ ಈ ವ್ಯಕ್ತಿಯನ್ನು ಒಮ್ಮೆ ನೋಡಿಯೇನು ಅಂತ ಎಣಿಸಿಯೇ ಇರಲಿಲ್ಲವೆ ನಾನು! ಮಂಚದಲ್ಲಿ ಕಾಲು ನೀಡಿ ಒರಗಿ ಕುಳಿತಿದ್ದರು. ಮುಖದಲ್ಲಿ ನಿತ್ರಾಣ ಕವಿದಿದ್ದರೂ ಅವರ ಕುರಿತು ಲಾಗಾಯ್ತಿನಿಂದಲೂ ಕೇಳುತ್ತ ಕೆತ್ತಿಕೊಂಡ ಧೀಮಂತ ಚಿತ್ರಕ್ಕೆ ಕೊಂಚವೂ ವ್ಯತ್ಯಯ ಬಂದಿರಲಿಲ್ಲ.

ರುಮಾ ಕುಡಿಯಲು ತಂದು ಕೊಟ್ಟಳು. ‘ಆರಾಮವಾಗಿ ಮಾತಾಡುತ್ತಿರಿ.’ ಎಂದಳು. ‘ಅವರಿಗೆ ಆಯಾಸವಾಗುತ್ತದೆ ಅಂತ ಆತಂಕ ಬೇಡ. ಮಾತಾಡಲು ಜನ ಬೇಕೀಗ ಅವರಿಗೆ. ಅದೂ, ಅವರ ಊರಿಂದಲೇ ನೀವು ಬಂದಿದ್ದೀರಿ ಎಂದ ಮೇಲೆ ಅವರಿಗೆ ಎಕ್ಸ್ಟ್ರಾ ಎನರ್ಜಿ ಬಂದ ಹಾಗೆ, ತಿಳಿಯಿರಿ. . .ʼ ಒಳ ಹೋದಳು. ಈಕೆಯಿಂದಾಗಿ ವೃದ್ಧಾಪ್ಯವನ್ನು ಗೌರವದಿಂದ ಕಳೆಯುತಿದ್ದ ದೊಡ್ಡಪ್ಪನನ್ನು ಕಂಡು, ಎಷ್ಟು ಸಮಾಧಾನವಾಯ್ತು ಎನ್ನಲಿ!

ನಾನಂತೂ ಕುತೂಹಲ ಆವಾಹನೆಯಾದಂತೆ ಕುಳಿತಿದ್ದೆ. ಅವರ ಕುರಿತು ಕೇಳಿದ ಸಾಹಸ ಕತೆಗಳನ್ನು ಆದಷ್ಟೂ ಅವರ ಬಾಯಿಯಿಂದಲೇ ಕೇಳಬೇಕೆಂದು ಹಂಬಲಿಸಿ ಹಂಬಲಿಸಿ ಬಂದಿದ್ದೆನಲ್ಲ. ಎಷ್ಟು ದಿನದ ದೀರ್ಘ ಹಂಬಲವಾಗಿತ್ತು ಇದು.

‘ಏನು ಮತ್ತೆ? ಊರ ಕಡೆ ಸುದ್ದಿ? ಹೇಳು ಹೇಳು, ಕೇಳುತ್ತ ನಾನು ಪ್ರಾಣ ಬಿಟ್ಟರೆ ಆ ಎಲ್ಲ ಪುಣ್ಯ ನಿನಗೆ’ ಎಂದರು ದೊಡ್ಡಪ್ಪ. ಬಹುಶಃ, ವರ್ಷ ಸಂದ ಮೇಲೆ ನಡುವೆ ಗೋಡೆಗಳೆಲ್ಲ ಶಿಥಿಲವಾಗಿ ಯಾರನ್ನು ಕಂಡರೂ ಹೊಸಬರು ಅಂತ ಅನಿಸುವುದೇ ಇಲ್ಲವೇನೋ, ಅಲ್ಲ ಆಂಟಿ? ‘ನೀನು ನಮ್ಮ ರಘುರಾಮನ ಮಗಳು ಎಂದ ಮೇಲೆ ಮುಗಿಯಿತು. ನಿನ್ನೊಡನೆ ನಾನು ಮಾತು ಆಡಬೇಕಿಲ್ಲ, ಮಾತೇ ತಾನಾಗಿ ಆಡುತ್ತದೆ. ಏನು ಮಾಡಿಕೊಂಡಿದ್ದೀ? ಗಂಡ ಏನು? ರಘುರಾಮ ಹೇಗೆ ಹೋದ? ಏನಾಗಿತ್ತು ಅವಂಗೆ? ಅಮ್ಮನೂ ಹೋದಳೋ, ಅಯ್ಯೊ, ಅವಳಿಂದಾಗಿ ಆ ಮನೆ ಉಳಿಯಿತು, ಇಲ್ಲವಾದರೆ ಎಂದೋ ಅದು ಸ್ಮಶಾನವಾಗುತಿತ್ತು…. ಇತ್ಯಾದಿಯಾಗಿ ಇನ್ನೂ ಅನೇಕರ ಇರ-ಪರ ಗಳ ಕುರಿತು, ಊರಿನ ಕುರಿತು, ಪ್ರಶ್ನೆಗಳು ಉತ್ತರಗಳು ಮಾಲಿಂಗೇಶ್ವರ ದೇವಸ್ಥಾನದ ಜಾತ್ರೆಯ ನೆನಪು, ನಮ್ಮೂರಿನ ಪ್ರಾಥಮಿಕ ಶಾಲೆಯ ನೆನಪು ಎಲ್ಲ ಕಳೆದವು. ವರ್ಣನೆಗೆ ತಕ್ಕನಾಗಿಯೇ ನಡುನಡುವೆ ಆ ಜೀರ್ಣಸ್ಥಿತಿಯಲ್ಲಿಯೂ ಮಿಲಿಟರಿಯ ದೊಡ್ಡ ನಗೆ ನಗುವರು. ಅದಕ್ಕೆ ಸರಿಗಟ್ಟಿ ಬರುವ ದೊಡ್ಡ ಕೆಮ್ಮನ್ನೂ ಎಗ್ಗಿಲ್ಲದೆ ಕೆಮ್ಮಿ ಕೊಳ್ಳುವರು. ಎಷ್ಟು ಗಂಭೀರವೋ ಅಷ್ಟೇ ವಿನೋದಿ ಅಂತ ಹೆಸರಾದವರು ಅವರು. ಆ ಪ್ರಸನ್ನ ಮುಖ ನೋಡಿ ನನಗೂ ಒಂಥರ ಧೈರ್ಯ ಬಂದಿತ್ತು. ಆಪ್ತತೆ ಬಂದಿತ್ತು. ಅವರು “ಈಗಲೂ ಊರಲ್ಲಿ ‘ಇವತ್ತು ಒಂದು ಸತ್ಯನಾರಾಯಣಕ್ಕೆ ಹೋಗಲಿಕ್ಕಿದೆ, ನಾಳೆ ಓ ಅವರ ಮಗಳ ಮದುವೆ ಅಲ್ಲವೆ? ನಮಗೆ ಹೇಳಿಕೆ ಉಂಟು, ಹೋಗುವುದೇ ಆಯಿತೆ? ನಾಡಿದು ಒಂದು ದಿನ ಮನೆಯಲ್ಲಿ, ಆಚೆ ನಾಡಿದು ಮಗನ ಅತ್ತೆಯ ‘ಶಾರದ’ (ಶ್ರಾದ್ಧ ಶಬ್ದವನ್ನು ಊರಿನ ರೂಢಿನುಡಿಯಲ್ಲಿ ಹಾಗೆ ನುಡಿದದ್ದೇ ಗಹಗಹ ನಗುತ್ತ ನಡುವೆ ನಗೆ ತಡೆಯಲು ಬರುತಿದ್ದ ಕೆಮ್ಮನ್ನು ತಡೆಯುತ್ತ) ಮತ್ತೆ ಒಂದು ನಾಮಕರಣ ಉಂಟಲ್ಲ ಮಾರಾಯರೆ, ನಮ್ಮ ಮಗಳನ್ನು ಕೊಟ್ಟ ಮನೆಯಲ್ಲಿ, ಅವಳ ಮೈದುನನ ಮಗುವಿಗೆ…. ಅಂತೂ ಒಂದು ವಾರವಿಡೀ ಊ. . .ಟವೆ’ ಊರಲ್ಲಿನ ಹೆಂಗಸರು ಮಾತಾಡುವ ಮಾದರಿ ರಾಗದಲ್ಲಿಯೇ ಹೇಳುತ್ತ, ಇಲ್ಲಿನ ಗಂಡಸರು ಕೈ ಬಾಯಿ ಹಾರಿಸಿ ಮಾತಾಡುವ ಪರಿಯನ್ನೂ ಫೋಟೋ ಕಾಪಿಯಂತೆ ಅಭಿನಯಿಸುತ್ತ ‘ಊರಲ್ಲಿ ಈಗಲೂ ಎಲ್ಲ ಹೀಗೆಯೆ ಉಂಟ?’ ಎಂದು ಅವರ ಟಿಪಿಕಲ್ ನಗೆ ನಕ್ಕರು. ನನಗೋ, ಈ ವಯಸ್ಸಿನಲ್ಲಿ ಅದನ್ನು ಕರಾರುವಾಕ್ಕಾಗಿ ಹೇಗೆ ಮರೆಯದೆ ಹಿಡಿದಿಟ್ಟಿದ್ದಾರೆಂಬ ವಿಸ್ಮಯ. ಛೆ! ನೀವು ಹೇಗೆ ಇದನ್ನೆಲ್ಲ ನೆನಪಿಟ್ಟುಕೊಂಡಿದ್ದೀರಿ ದೊಡ್ಡಪ್ಪಾ! ಅಂದೆ. ‘ನನಗೇ ಗೊತ್ತಿರಲಿಲ್ಲ. ಈಗ ಲೈಫೆಲ್ಲ ಮುಗಿಸಿ ನೇಪಥ್ಯಕ್ಕೆ ಬಂದು ಕುಳಿತಿದ್ದೇನೆ ನೋಡು, ಹಳೆಯ ಸ್ಮರಣೆಗಳು ತದ್ವತ್ ದಾಳಿ ಮಾಡುತ್ತವೆ. ನೀನಿವತ್ತು ಬಂದೆ, ಕೇಳಲಿಕ್ಕೆ ಒಂದು ಜನ ಬಂತಲ್ಲ, ಸರಿ, ಮರುಳುಕಟ್ಟಿದೆ’ ಎಂದರು…. ಅವರ ಈ ಮುಖ ಇಷ್ಟು ಸುಲಭವಾಗಿ ನನಗೂ ಸಿಗುತ್ತದೆ ಅಂತ ಅಂದುಕೊಂಡೇ ಇರಲಿಲ್ಲವಲ್ಲ ನಾನು. ನನಗಾದ ಸಂಭ್ರಮ ಲೆಕ್ಕ ಹಾಕಿ.

ಒಟ್ಟಾರೆ ಅವರ ಮಾತುಗಾರಿಕೆ ನನ್ನನ್ನು ಹಗುರವಾಗಿಸಿತು. ತುಸು ಧೈರ್ಯ ಬಂದು ಮೆಲ್ಲ ಕೇಳಿದೆ ‘ದೊಡ್ಡಪ್ಪ, ನಿಮ್ಮ ಬಗ್ಗೆ ಎಷ್ಟೆಲ್ಲ ಕತೆ ಕೇಳಿದೆ. ಈಗ ನಿಮ್ಮ ಬಾಯಿಂದಲೇ. . .’

ಮಾತು ಕಡಿದು ಅವರೆಂದರು- ನಮ್ಮ ತೋಟದಲ್ಲಿ ಐದಾರು ಬಗೆಯ ಹಲಸು ಇತ್ತಲ್ಲ, ಉಂಟಾ ಈಗಲೂ? ಒಂದನ್ನು ನಾನೆ ಖುದ್ದು ನೆಟ್ಟದ್ದು. ಮತ್ತೆ ಹಿತ್ತಲ ಮೂಲೆಯಲ್ಲಿ ದೊಡ್ಡದೊಂದು ಪನ್ನೇರಲೆ ಮರ? ಅಯ್ಯೊ ಅದರ ಒಂದು ಹಣ್ಣೆಂದರೆ ಲೋಕವೆಲ್ಲ ಹುಡುಕಿದರೂ ಸಿಗಲಿಕ್ಕಿಲ್ಲ, ಅಂಥಾ ರುಚಿ. ಅದು ಇದೆಯನ ಈಗ?

ಅರೆ, ಪ್ರಶ್ನೆಗೆ ತಕ್ಕ ಉತ್ತರ ಕೊಡುವ ದಿನ ಹೋಯಿತು ಎನ್ನುತಿದ್ದಾರೆಯೆ ದೊಡ್ಡಪ್ಪ.

‘ಎಲ್ಲಿರುತ್ತದೆ ದೊಡ್ಡಪ್ಪ ಅವೆಲ್ಲ, ಹೇಗೆ? ಅಯ್ಯಮ್ಮ, ದೊಡ್ಡ ಯುದ್ಧದಂತೆಯೇ ನಡೆದ ಆಸ್ತಿ ವ್ಯಾಜ್ಯದ ಕತೆ ನಿಮ್ಮವರೆಗೆ ಬಂದೇ ಇಲ್ಲವೆ ಹಾಗಾದರೆ? ಗದ್ದೆ ತೋಟ ಒಂದೂ ಇಲ್ಲ ದೊಡ್ಡಪ್ಪ ಈಗ. ಹೈವೇ ಹತ್ತಿರ ಇದ್ದ ಆಸ್ತಿಯಂತೂ ಕೈ ತಪ್ಪಿ ಸಿಕ್ಕಿದವರ ಪಾಲಾಗಿ, ಅವರು ಅಲ್ಲಿದ್ದ ಮರಗಳನ್ನೆಲ್ಲ ಕಡಿಸಿ ಸೈಟು ಮಾಡಿದ್ದಾರೆ ಅಂತ ಕೇಳಿದೆ. ಅಲ್ಲೊಂದು ರೇಟು ಅಂದರೆ ಸಾಮಾನ್ಯದವರು ಮುಟ್ಟುವಂತಿಲ್ಲ. . . ಅಂದ ಹಾಗೆ ಎರಡನೇ ಜಾಗತಿಕ ಯುದ್ಧದಲ್ಲಿ ನೀವು ಕೂಡ ಇದ್ದಿರಂತೆ. . . ಪೈಲಟ್ ಆಗಿ? ಅದನ್ನೊಂಚೂರು ಹೇಳಿ ದೊಡ್ಡಪ್ಪ. . .’ ಟೇಪ್ ಆನ್ ಮಾಡಿದೆ.

‘ಕಡೆಗೂ ಅದನ್ನು ಮಾರಿಯೇ ತಿಂದರೆ? ದುಡಿಯಲು ಗೊತ್ತಿಲ್ಲ, ಗೊತ್ತಿರುವುದು ಜಗಳ ಒಂದೇ. ಮತ್ತೇನು ಮಾಡಿಯಾರು?’. . . ತನ್ನೊಳಗೆ ಎಂಬಂತೆ ತಗ್ಗು ದನಿಯಲ್ಲಿ ನನಗೂ ಕೇಳುವಂತೆ ಗುಣುಗಿದರು ದೊಡ್ಡಪ್ಪ.

‘ದೊಡ್ಡಪ್ಪ, ನಾನು ಬಂದದ್ದು ಯಾಕೆ ಗೊತ್ತ?’

‘ಯಾಕೆ?’

‘ನಿಮ್ಮ ಕತೆ ನಿಮ್ಮಿಂದಲೇ ಕೇಳುವುದಕ್ಕೆ . . .’

ತಡೆದು ನುಡಿದರು, ‘ಒಬ್ಬಳೇ ಬಂದೆಯಲ್ಲ, ಗಂಡನನ್ನೂ ಕರಕೊಂಡು ಬರಬಹುದಿತ್ತು…. ಮಕ್ಕಳು?’

‘ಅವರೆಲ್ಲಿ ಬರುತ್ತಾರೆ? ಸದ್ಯಕ್ಕೆ ಗಂಡ ಮಗ ಅತ್ತೆ ಮಾವ ಎಲ್ಲ ಒಂದು ಕಡೆ, ನಾನು ಮಾತ್ರ ಉದ್ಯೋಗದ ನಿಮಿತ್ತ ಇನ್ನೊಂದೇ ಕಡೆ’ ಮಾತಾಡುತ್ತ ಫೋಟೋ ಕ್ಲಿಕ್ಕಿಸತೊಡಗಿದೆ.

‘ಮಗ, ಎಷ್ಟು ದೊಡ್ಡವ?’

‘ಅಯ್ಯೊ, ಇನ್ನೂ ಸಣ್ಣದು, ಎಂಟು ವರ್ಷ ಅಷ್ಟೆ. ಬರುತ್ತೇನೆ ತಾನೂ ನಿಮ್ಮನ್ನು ನೋಡಲಿಕ್ಕೆ ಅಂತು. ಇನ್ನೊಮ್ಮೆ ಖಂಡಿತಾ ನಿನ್ನನ್ನು ಕರಕೊಂಡು ಬರುತ್ತೇನೆ ಅಂತ ಹೇಳಿ ಬಿಟ್ಟು ಬಂದೆ. ‘ಏನಾಗುತ್ತಿ?’ ಅಂತ ಯಾರಾದರೂ ಕೇಳಿದರೆ ಸಾಕು, ಕೈಯಲ್ಲೇ ವಿಮಾನ ಹಾರಿಸಿ ‘ಪೈಲಟ್ ದೊಡ್ಡಜ್ಜನ ಹಾಗೆ, ಆರ್ಮಿಯಲ್ಲಿ, ಪೈಲಟ್!’ಎನ್ನುತ್ತದೆ. ನೀವು ಅಷ್ಟು ಫೇಮಸ್ ದೊಡ್ಡಪ್ಪಾ! ಹೇಳುವಾಗ ಅದರ ಠೀವಿ ನೋಡಬೇಕು ನೀವು….’ ನಕ್ಕೆ.

ದೊಡ್ಡಪ್ಪ ಒಮ್ಮೆಗೇ ಗಂಭೀರರಾದರು.

ನಗುತ್ತಾರೆ ಅಂದುಕೊಂಡ ನನಗೆ ಅವರ ಗಾಂಭೀರ್ಯ ಕಂಡು ಪೆಚ್ಚಾಯಿತು. ಜಾಸ್ತಿ ಮಾತಾಡಿದೆನೆ? ಒಮ್ಮೊಮ್ಮೆ ಹೀಗೆಯೇ, ದೊಡ್ಡವರು ನಮ್ಮೊಡನೆ ಸಲಿಗೆಯಿಂದ ಮಾತಾಡಿದೊಡನೆ ಏರಿಕೊಂಡು ನಾವೂ ಸಲಿಗೆ ಮಾತಾಡುವ ತಪ್ಪು ಮಾಡುವುದಿದೆ. ಯೇ ದೇವರೆ, ನನಗಾದರೂ ಯಾಕೆ ಬೇಕಿತ್ತು ಅಧಿಕಪ್ರಸಂಗ? ಎಷ್ಟು ಬೇಕೊ ಅಷ್ಟು ಮಾತಾಡಿ, ಅವರ ಮಾತಿಗೆ ಹೂಂಗುಟ್ಟಿ ಹ್ಞಾಂಗುಟ್ಟಿ ಎದ್ದು ಹೋಗುವ ಬದಲು…. ಕೆಮೆರಾ ಮುಚ್ಚಿ ಬಂದು ಕುರ್ಚಿಯಲ್ಲಿ ಕುಳಿತೆ.

ಸುಮಾರು ಹೊತ್ತು ಮೌನವೇ ಇದ್ದರು ದೊಡ್ಡಪ್ಪ. ನಾನೂ ಸುಮ್ಮನೆ ಇದ್ದೆ. ಉಸಿರುಗಟ್ಟಿದಂತೆ.

ಮೆಲ್ಲಗೆ ಎಲ್ಲೋ ಅಂತರಂಗದಲ್ಲೇ ತಿರುತಿರುಗಿ ವಾಪಸಾದವರಂತೆ- ಅದೂ, ಯಾಕೆ ಸೇರಿದೇ ಮಿಲಿಟರಿಗೇ ಅಂತ ನಿನ್ನ ಪ್ರಶ್ನೆ.(ನಾನೆಲ್ಲಿ ಕೇಳಿದೆ?) ನನಗೇ ಗೊತ್ತಿದ್ದರೆ! ಆಸ್ತಿ ಇತ್ತು ನಿಜ, ಅದರಲ್ಲಿ ಪಾಲುದಾರರು ಎಷ್ಟಿದ್ದರು! ನಾನೂ ಅಲ್ಲಿಯೇ ಹೊಕ್ಕಿಕೊಂಡು ಮಾಡುವುದೇನು, ಜಗಳ ವ್ಯಾಜ್ಯ ಮಾರಾಮಾರಿ ರಾಜಿ, ಅದು ಆದಿಯಿಂದಲೂ ಇದ್ದದ್ದೇ. ನೋಡೀ ನೋಡೀ, ಸಾಕಾಗಿ ಮೆಲ್ಲ ನನ್ನ ಪಾಲನ್ನೇ ಒಗೆದು ಈಚೆ ದಾಟಿಕೊಂಡೆ. . . ಸರಿಯೆ. ಆದರೆ ಜಗಳ ಬೇಡ ಅಂತ ದಾಟಿಕೊಂಡವ ತಲುಪಿದ್ದು ಎಲ್ಲಿಗೆ? ಅದಕ್ಕಿಂತ ದೊಡ್ಡ ಜಗಳದ ರಣರಂಗಕ್ಕೆ! ವಿಧಿ. ಎಲ್ಲ ವಿಧಿ. (ಸ್ವಗತದಂತೆ) ಯಾರೂ ಅದರಿಂದ ತಪ್ಪಿಸಿಕೊಳ್ಳುವಂತಿಲ್ಲ. ಅಷ್ಟೆಲ್ಲ ನನ್ನಿಂದ ಆಗಬೇಕು, ಯಾರದೆಲ್ಲ ಆಯುಷ್ಯ ನನ್ನಿಂದಲೇ ಮುಗಿಯಬೇಕು ಅಂತ ಬರೆದಿತ್ತು, ಅದು ಆಯಿತು. ಆ ಗೀತಾಚಾರ್ಯ ಹೇಳುವಂತೆ. . . . ಯುದ್ಧಸ್ವ! ಯುದ್ಧ ಮಾಡು, ದೈವ ನಿಯಮ ಅಂದರೆ ಏನೆಂತ ಮಾಡಿದೆ? ಹಣೆಬರಹ. ತಕ್ಕ ಕರ್ಮಫಲವೂ.

ನಿಟ್ಟುಸಿರು. ಹುರಿಮೀಸೆಯೊಮ್ಮೆ ಸಣ್ಣಗೆ ನಡುಗಿದ ಹಾಗಾಯಿತು.

ನಾನು ಮೆಲ್ಲನೆದ್ದು ಅವರ ಬಳಿ ಹೋಗಿ ನಿಂತೆ. ಕೈ ಹಿಡಿದುಕೊಂಡೆ. ‘ಅಷ್ಟೆಲ್ಲ ಕೊರಗಬೇಡಿ. ನಮ್ಮ ನಮ್ಮ ಪಾಲಿಗೆ ಬಂದ ಯುದ್ಧವನ್ನು ಅದು ಸಣ್ಣದೋ ದೊಡ್ಡದೋ ನಾವು ಮಾಡಲೇ ಬೇಕಲ್ಲವೆ ದೊಡ್ಡಪ್ಪಾ.’ ಎಂದೆ.

‘ನಿನಗೆ ಅರ್ಥವಾಗದು ಮಗೂ’

ಯಾಕೋ ನನಗೆ ಕೋರ್ಟುಮನೆ ಅಲೆದೇ ಸೋತು ಕುಸಿದುಹೋಗಿದ್ದ ಅಪ್ಪನ ಹೋರಾಟದ ಬಗ್ಗೆ ಹೇಳಲೇಬೇಕೆನಿಸಿತು. ಆಸ್ತಿಗಾಗಿ ಕುಟುಂಬದಲ್ಲೇ ಒಂದು ಆತ್ಮಹತ್ಯೆ ಆಯಿತು, ಒಂದು ಕೊಲೆ ಆಯಿತು, ಇದೆಲ್ಲ ನಮ್ಮ ಮಟ್ಟಿಗೆ ಎಂಥ ದೊಡ್ಡದು ಯೋಚಿಸಿ. ಅಪ್ಪ ಕಡೆಕಡೆಗೆ ತಮ್ಮದೇ ಕುಟುಂಬದೊಂದಿಗೆ ಕೋರ್ಟುಕಚೇರಿ ವ್ಯಾಜ್ಯ ಯಾಕಾದರೂ ಬೇಕಿತ್ತು ಅಂತ ಕೊರಗುತಿದ್ದರು ಅಷ್ಟಿಷ್ಟಲ್ಲ. ಹಾಗೆಂದು ‘ಜಗಳ ಬೇಡ, ಎಲ್ಲ ನಿಮಗೇ, ತಕೊಳ್ಳಿ’ ಅಂತ ಬಿಟ್ಟುಕೊಟ್ಟರೇನು? ಇಲ್ಲವಲ್ಲ. ಅದು ಸಾಧ್ಯವೂ ಇಲ್ಲ. ‘ಒಂದು ರೀತಿ ಮಹಾಭಾರತದಲ್ಲಿ ಬರುವ ಧರ್ಮವ್ಯಾಧನ ಕತೆಯಂತೆ ನಾವೆಲ್ಲ. ಪಾಲಿಗೆ ಬಂದ ಕರ್ತವ್ಯವನ್ನು ಮಾಡಿ ಮುಗಿಸುವುದೊಂದೇ ನಮ್ಮ ಧರ್ಮ’ ಎಂದು ಎಷ್ಟು ಸಲ ನೊಂದು ಹೇಳುತಿದ್ದರೋ. ನೀವು ಲೋಕ ರಾಜಕೀಯದ ಕಾರಣಕ್ಕೆ ಹೋರಾಡಿದರೆ, ಅಲ್ಲಿ ಅಪ್ಪ ಕುಟುಂಬ ರಾಜಕೀಯದಿಂದಾಗಿ ಹೋರಾಡಬೇಕಾಯ್ತು. ಯುದ್ಧದ ಕಲ್ಪನೆ ವಿಚಿತ್ರ ದೊಡ್ಡಪ್ಪಾ. . . ಶಾಸ್ತಿ ಗೀಸ್ತಿ ಅಂತ ಮನಸ್ಸು ಸಣ್ಣ ಮಾಡಿಕೋ ಬೇಡಿ. ಹೋರಾಟ ಬೇರೆ, ಶಾಸ್ತಿ ಬೇರೆಯೇ. ಅದಕ್ಕೂ ಇದಕ್ಕೂ ತಾಳೆ ಹಾಕಬೇಡಿ. . . ಅಂತೆಲ್ಲ ಹೇಳಬೇಕೆನಿಸಿತು. ಆದರೆ ಅವರೆದುರು ಹೀಗೆಲ್ಲ ಮಾತಾಡಲು ಧೈರ್ಯ ಎಲ್ಲಿತ್ತು ನನಗೆ?
 

ಸಮಯ ಓಡಿತು. ರುಮಾ ತಿಂಡಿಯನ್ನು ಅಲ್ಲಿಯೇ ತಂದುಕೊಟ್ಟಳು. ‘ದಾದಾ ತಿನ್ನುವುದು ಎರಡು ಪೀಸ್ ಬ್ರೆಡ್ ಮಾತ್ರ. ನಿಮಗಾಗಿ ಉಪ್ಮಾ ಮಾಡಿದೆ. ಹೇಗಾಗಿದೆಯೋ!’

‘ಓ, ಉಪಮಾ ಕಾಳಿದಾಸಸ್ಯ! ನನಗೂ ಒಂಚೂರು ಅದನ್ನೇ ಕೊಡು’ ಎಂದರು ದೊಡ್ಡಪ್ಪ, ನಗೆ ಉರುಳಿಸುತ್ತ.

‘ಬೇಡ ದಾದಾ, ನಿಮಗದು ಜೀರ್ಣ ಬರುವುದಿಲ್ಲ.’

‘ಕೊಡು ಎಂದೆನಲ್ಲ.’

ಅವರ ಹಟಕ್ಕೆ ನಾನೆದ್ದು ನನ್ನ ಪ್ಲೇಟಿಂದ ತುಸು ಅವರ ಪ್ಲೇಟಿಗೆ ಹಾಕಿದೆ. ತಿಂದು, ‘ಏನಂದರೂ, ನಿನ್ನಮ್ಮ ಉಪ್ಪಿಟ್ಟು ಮಾಡುತ್ತಿದ್ದಳು ನೋಡು, ಅದರ ಸಮ ನಾನು ಎಲ್ಲಿಯೂ ತಿಂದೇ ಇಲ್ಲ’ ಎಂದರು.

‘ಅಬ್ಬ, ಏನು ಖುಶಿ ಇವತ್ತು ದಾದಾ ನಿಮಗೆ! ನೋಡಿ ಅಮುದ! ಊಟ ತಿಂಡಿ ಪ್ರೀತಿ ವಿಶ್ವಾಸ ಎಲ್ಲ ಕೊಡಬಹುದು, ಈ ಇಂತಹ ಸಂತೋಷ ಹೇಗೆ ಕೊಡಲು ಸಾಧ್ಯ ಹೇಳಿ. ಸೌರವ್ ಮತ್ತು ಆರ್ದ್ರಾ ಇರಬೇಕಿತ್ತು, ಈಗ. ನೋಡಿ ಎಷ್ಟು ಆಶ್ಚರ್ಯ ಪಡುತಿದ್ದವೋ.’

‘ಅಂದ ಹಾಗೆ ಅವರು ಎಲ್ಲಿ? ಚೆಚೆ, ಮರೆತದ್ದೇ ಅಲ್ಲವೆ ನಾನು. . .’ ಹೇಳುತ್ತ ನಾನು ಹೊರಗೆ ನನ್ನ ಬ್ಯಾಗು ಇದ್ದಲ್ಲಿಗೆ ಬಂದು ದೀಪಾವಳಿಗೆ ಆ ಮಕ್ಕಳಿಗೆಂದು ಕೊಂಡ ಪಟಾಕಿ ಪಾರ್ಸೆಲನ್ನು ಹೊರತೆಗೆದು ತಂದು

‘ಅವರನ್ನು ಕರೆ ರುಮಾ’.

ರುಮಾ ಹತ್ತಿರ ಬಂದು, ತಾನೇ ನಿಧಾನವಾಗಿ ಪಾರ್ಸೆಲನ್ನು ಚೀಲದೊಳಗೆ ವಾಪಾಸು ಇಡುತ್ತ, ಪಿಸುವಾಗಿ ‘ಅವರಿಲ್ಲ. ರಜೆಗೆ ನನ್ನ ಅಮ್ಮನ ಮನೆಗೆ ದೆಹಲಿಗೆ ಹೋಗಿದ್ದಾರೆ’ ಎಂದು ಅಜ್ಜನ ಕಡೆಗೊಮ್ಮೆ ನೋಡಿ, ‘ದಾದಾಗೆ ಇದೆಲ್ಲ ಆಗುವುದಿಲ್ಲ.’ ಎಂದಳು.

‘ವಯಸ್ಸಾದ ಮೇಲೆ, ಹೌದು, ನನ್ನಮ್ಮ ಸಾ ಪಟಾಕಿ ಶಬ್ದ ಆಯಿತೆಂದರೆ ನಡುಗುತಿದ್ದಳು’ ಎಂದೆ.

‘ಆದರೆ ದಾದಾನ ವಿಷಯ ಬೇರೆ. ನನ್ನ ಗಂಡ ಇವತ್ತಿಗೂ ಪಟಾಕಿ ಬಿಡುವುದಿಲ್ಲ. ನಂಬುತ್ತೀರ? ಬರೀ ಪುಕ್ಕಲು. ಕಾರಣ ದಾದಾ ಸಣ್ಣದಿನಲ್ಲಿ ಪಟಾಕಿ, ಪಿಸ್ತೂಲು ಒಂದನ್ನೂ ಅವರಿಗೆ ಕೊಡಿಸಲಿಲ್ಲವಂತೆ. ಮಗ ಕೊಡಿಸಿದರೆ ಮೊಮ್ಮಗನನ್ನು ಪುಸಲಾಯಿಸಿ ಅವನ್ನೆಲ್ಲ ಟುಸ್ ಮಾಡಿ, ಬೇರೆ ಆಟದ ಸಾಮಾನು ಕೊಡಿಸುತಿದ್ದರಂತೆ. ಅಲ್ಲ ದಾದಾ, ಅದೇನು? ನನ್ನ ಮಕ್ಕಳಿಗೂ ಹಾಗೇ ಮಾಡಿದಿರಿ. ಒಮ್ಮೆ ಸೌರವ್ ಪಿಸ್ತೂಲು ತಂದು ಮನೆ ತುಂಬಾ ಢಮಾರ್ ಮಾಡುತಿದ್ದ. ನೆನಪಿದೆಯ. ಅವತ್ತಿಂದ ಅವನ ಪಿಸ್ತೂಲು ಎಲ್ಲಿ ಮಾಯಕವಾಯಿತೋ ದೇವರೇ ಬಲ್ಲ. ಒಟ್ಟಾರೆ ಆಟಕ್ಕೂ ಪಿಸ್ತೂಲು, ಅಟಂಬಾಂಬು, ಪಟಾಕಿ ಮನೆಯೊಳಗೆ ಬರಬಾರದು ದಾದಾಗೆ. ಅದಕ್ಕೇ ಮಕ್ಕಳು ನಾನೀ ಮನೆಗೆ ಕಾಲುಕಿತ್ತಿವೆ’ ನಕ್ಕಳು.

ಯಾರೇ ಆಗಿದ್ದರೂ ಈ ಅಜ್ಜನ ಮೇಲೆ ಸಿಟ್ಟು ಮಾಡುತಿದ್ದರು ಹೌದ ಆಂಟಿ? ರುಮಾ ಪಾಪ, ತುಂಬ ಗ್ರಹಿಕೆಯವಳು. ಅವಳ ಮಾತಿಗೆ –

‘ಓ. ಇದು ಅಬಿನಾತನ್ ಸಿಂಡ್ರೋಮ್’ ಎಂದೆ ನಾನು.

‘ಅ್ಞ? ಹಾಗೆಂದರೆ?’ಎಂದಳು ರುಮಾ.

*****

‘ಹೌದೌದು, ಏನು ಹಾಗಂದರೆ?’–ಅಮುದಳನ್ನು ಕೇಳಿದೆ ನಾನೂ.

‘ಅಬಿ ನಾತನ್ ಅಂತ, ಆತನ ಹೆಸರು ಆಂಟಿ. ಆತ ಹೀಗೇ, ಫೈಟರ್ ವಿಮಾನದ ಪೈಲಟ್. ಪರ್ಸಿಯಾ ದೇಶದಲ್ಲಿ ಹುಟ್ಟಿದ ಇಸ್ರೇಲಿ. ಇಲ್ಲಿ ಬಂದು ಬಿದ್ದ. ಇಲ್ಲಿ ಅಂದರೆ ಮುಂಬೈಯಲ್ಲಿ. ನೀರಿನ ಋಣ ಎನ್ನುತ್ತಾರಲ್ಲ, ಅದಕ್ಕೆ ಬೆಸ್ಟ್ ಉದಾಹರಣೆ ಅವ. ಇಂಡಿಯಾದಲ್ಲಿ ರಾಯಲ್ ಏರ್ ಫೋರ್ಸ್‌ನಲ್ಲಿ ಪೈಲಟ್ ಆಗಿದ್ದ. ವಿಭಜನೆಯ ಸಂದರ್ಭದಲ್ಲಿ ಪಾಕಿಸ್ಥಾನದಿಂದ ಹಿಂದೂಗಳನ್ನು ವಿಮಾನದಲ್ಲಿ ಕರೆತಂದವ. ಹೇಳಲು ಹೋದರೆ ಅದೆಲ್ಲ ತುಂಬ ಇದೆ. ಅಂಥವ ಅರಬ ಇಸ್ರೇಲಿ ಯುದ್ಧದ ಸಮಯ ಮಶಾಲ್ ಅಂತ, ಸ್ವಯಂ ಸೇವಕರ ಗುಂಪು, ಅದರಲ್ಲಿ ಪೈಲಟ್ ಆಗಿ ಸೇರಿಕೊಂಡ. ಪ್ಯಾಲಸ್ತೀನ್ ಮತ್ತು ಇಸ್ರೇಲಿ ಯುದ್ಧದಲ್ಲಿ ಪ್ಯಾಲಸ್ತೀನರ ಮೇಲೆ ಬಾಂಬು ಹಾಕಿ, ನಮ್ಮ ಸಾಮ್ರಾಟ್ ಅಶೋಕನ ಹಾಗೆ, ಸಾವು ನೋವು ನರಳಾಟಗಳನ್ನೆಲ್ಲ ಕಣ್ಣಾರೆ ಕಂಡು ಪಶ್ಚಾತ್ತಾಪ ಪಟ್ಟು, ಅಹಿಂಸೆಯ ಮಾರ್ಗ ಹಿಡಿದ. ಗಾಂಧಿಯನ್ ಫಿಲಾಸಫಿಯ ದೊಡ್ಡ ಆರಾಧಕನಾದ. ಸೈನ್ಯ ಬಿಟ್ಟು ತನ್ನದೇ ಹೋಟೆಲ್ ತೆಗೆದ, ಬಿಸಿನೆಸ್ ಮಾಡಿದ, ಅದನ್ನು ಬಿಟ್ಟು ಶಾಂತಿ ಪ್ರಚಾರಕ್ಕಾಗಿ ಹಡಗನ್ನು ಖರೀದಿಸಿ, ಅದನ್ನು ನಡು ಕಡಲಲ್ಲಿಟ್ಟು ‘ವಾಯ್ಸ್ ಆಫ್ ಪೀಸ್’ ಹೆಸರಿನ ರೇಡಿಯೋ ಸ್ಟೇಶನ್ ನಡೆಸಿದ. ಕೊನೆಗೆ ಅದನ್ನೂ ನಿಲ್ಲಿಸಿದವ, ಹಡಗನ್ನು ಮಾರಿದರೆ ಕೊಂಡವರು ಅದನ್ನು ಒಡೆಯುತ್ತಾರೆಂಬ ಆತಂಕದಿಂದ ಅದನ್ನು ಮುಳುಗಿಸಿ… ಅವನ ಕತೆ ತುಂಬ ಇದೆ ಆಂಟಿ. ಒಮ್ಮೆ ಪುರುಸೋತಿನಲ್ಲಿ ಹೇಳುತ್ತೇನೆ. ರುಮಾ ಮಾತು ಕೇಳುತ್ತ ಅವನ ನೆನಪು ಯಾಕಾಯಿತೆಂದರೆ ಇಸ್ರೇಲಿನ ಒಂದೂರಲ್ಲಿ ಮಕ್ಕಳು ಅವನ ಕರೆಯ ಮೇರೆಗೆ ಹಿಂಸೆ ವಿರುದ್ಧದ ಪ್ರತಿಭಟನೆಯ ಸಂಕೇತವಾಗಿ ತಮ್ಮ ಆಟದ ಕೋವಿಗಳನ್ನೆಲ್ಲ ನಾಶ ಮಾಡಿದವಂತೆ. ಆ ಮಕ್ಕಳಿಗೆ ನಾತನ್ ಒಳ್ಳೆ ಕ್ರಿಯೇಟಿವ್ ಆಟದ ಸಾಮಾನುಗಳನ್ನು ಕೊಡಿಸಿದನಂತೆ..

*****

‘ಅ್ಞ ? ಹಾಗೆಂದರೆ?’ಎಂದಳು ರುಮಾ.

‘ಅಬಿ ನಾತನ್, ಅವನ ಬಗ್ಗೆ ಗೊತ್ತೆ ನಿನಗೆ? ಹ್ಞಂ!’ ಅಚ್ಚರಿಯಿಂದ ಬಾಯಿಕಳೆದು ಕೇಳಿದರು ದೊಡ್ಡಪ್ಪ.

‘ಹೂಂ ದೊಡ್ಡಪ್ಪಾ. ಅದು ಹೇಗೆಂದರೆ, ಪೇಪರಿನಲ್ಲಿ ಆತನ ಒಂದು ಸಂದರ್ಶನ ಬಂದಿತ್ತು ಒಮ್ಮೆ, ಆತ ನಮ್ಮಲ್ಲಿಗೆ ಬಂದ ಸಂದರ್ಭದಲ್ಲಿ’

‘ಏನು, ಆತ ಎಲ್ಲ ಬಿಟ್ಟು ಅಲ್ಲಿಗೆ ಬಂದಿದ್ದನೆ?’

‘ಹೌದು, ಕೊನೆಗಾಲದಲ್ಲೊಮ್ಮೆ ಆತ ಕರ್ನಾಟಕಕ್ಕೆ ಬಂದಿದ್ದ. ಸರ್ವೋದಯ ಇಂಟರ್‌ನ್ಯಾಶನಲ್ ಟ್ರಸ್ಟ್ ಮೆಂಬರ್ ಆಗಿದ್ದನಂತೆ ಅವ, ಅದರ ಸಭೆಗೋ ಎಂತದಕ್ಕೋ, ಸರಿಯಾಗಿ ನೆನಪಿಲ್ಲ. ಅರೆ-ಪಕ್ಷವಾತದಲ್ಲಿ ನರಳುತಿದ್ದ. ಆ ಟೈಮಲ್ಲಿ ಅವನದೊಂದು ಇಂಟರವ್ಯೂ ಬಂದಿತ್ತು. ನನಗೆ ಯಾಕೆ ಅಷ್ಟು ನೆನಪು ಅಂದ್ರೆ, ಆತನೂ ನಿಮ್ಮ ಹಾಗೆ ಒಬ್ಬ ಯುದ್ಧವಿಮಾನದ ಪೈಲಟ್ ಆಗಿದ್ದನಲ್ಲ. ಹಾಗಾಗಿ ಆಸಕ್ತಿ ಬಂದು ನಿಮ್ಮ ನೆನಪಲ್ಲೇ, ಆ ಇಡೀ ಇಂಟರವ್ಯೂ ಓದಿದ್ದೆ.. .

‘ಓ ಹೌದ!’

‘ಹ್ಞೂ. ಅದರಲ್ಲಿ ಗಾಂಧಿಯವರನ್ನು ತುಂಬಾ ನೆನೆದಿದ್ದ ಆತ. ಪ್ಯಾಲಸ್ತೀನರ ಮೇಲೆ ಬಾಂಬು ಹಾಕಿದ್ದಕ್ಕೆ ಉದ್ದಕ್ಕೂ ಒಂದು ಪಶ್ಚಾತ್ತಾಪ ಪಟ್ಟಿದ್ದ ಅಷ್ಟಿಷ್ಟಲ್ಲ. ಅವನೂ ಚಿಂತಿಸಿದ್ದು ಹೀಗೆಯೇ. ತನಗೆ ಸಿಕ್ಕ ಶಿಕ್ಷೆ ಇದು, ಈ ಪಕ್ಷವಾತ. ಅಷ್ಟೇ ಅಲ್ಲ, ತಾನು ತಂದೆತಾಯಿಗೂ ತುಂಬ ನೋವು ಕೊಟ್ಟವ, ತನ್ನಂಥವನಿಗೆ ಈ ಶಿಕ್ಷೆ ಸರಿಯೇ. ದೇವರನ್ನು ದೂರುವುದಿಲ್ಲ ತಾನು ಎಂದಿದ್ದ. ನಮಗೆ ಬಂದ ಕಷ್ಟಗಳಿಗೆಲ್ಲ ಹೀಗೆ ತಾಳೆ ಹಾಕುತ್ತ ಹೋದರೆ ಅದು ಆಗುಹೋಗುವ ಮಾತೆ ದೊಡ್ಡಪ್ಪ? ಕಷ್ಟ ಯಾರಿಗೆ ಬರುವುದಿಲ್ಲ, ಹೇಳಿ.’

‘ಹ್ಞ ಹ್ಞ’

ಕಿಟಿಕಿಯಂಚಲಿ ಕುಳಿತು ಆಲಿಸುತಿದ್ದ ರುಮಾ ‘ಆತ ಅಲ್ಲಿಗೆ ಬಂದ ಎಂಬುದೇ ನಂಗೆ ಆಶ್ಚರ್ಯ. ಕೊನೆಗೊಮ್ಮೆ ತಾನು ಬೆಳೆದ ನಾಡಿಗೆ ಬಂದು ಹೋದ ಋಣ ನೋಡಿ’ ಎಂದವಳು, ‘ಬನ್ನಿ, ಒಳ ಬನ್ನಿ, ಇವತ್ತು ಹೇಗೂ ಇರುತ್ತೀರಿ… ‘ ಎನ್ನುತ್ತ ಬನ್ನಿ ಎಂಬಂತೆ ಸನ್ನೆ ಮಾಡಿದಳು. ನನಗದು ಗೋಚರವಾದರೂ ಒಳಗೆ ಅಷ್ಟು ಬೇಗ ಹೋಗಲು ಇಷ್ಟವಿರಲಿಲ್ಲ. ಅದಕ್ಕೆ ಸರಿಯಾಗಿ ಮಾತು ಮುಂದರಿಯುವಂತೆ ಪ್ರಶ್ನೆ ಹಾಕಿದರು ದೊಡ್ಡಪ್ಪ.

‘ತಾನು ಬಾಂಬ್ ಹಾಕಿದ ಹಳ್ಳಿಗೆ ಹೋಗಿದ್ದು, ಅಲ್ಲಿ ಒಬ್ಬ ಮುದುಕಿಯನ್ನು ಕಂಡು ಸಮಾಧಾನ ಮಾಡಿದ್ದು. . . ಇದನ್ನೆಲ್ಲ ಹೇಳಿದನೆ?’

‘ಹೂಂ, ಹೇಳಿದ. ಏನು ಗೊತ್ತ, ಆತ ಆ ಹಳ್ಳಿಗೆ ಭೇಟಿ ನೀಡಿದಾಗ ಅಲ್ಲಿ ಅಂದಿನ ಆ ದಾರುಣ ಕತೆಯನ್ನು ಹೇಳಲು ಉಳಿದವಳು ಆ ಮುದುಕಿ ಮಾತ್ರ ಅಂತೆ. ಆತ ಅವಳಿಗೆ ಮನೆ ಕಟ್ಟಿಸಿ, ಬೇಕಾದ ಸಾಮಾನು ಸರಂಜಾಮುಗಳನ್ನೆಲ್ಲ ಕೊಡಿಸಿದರೆ ಆಕೆ ‘ಏನು, ನಿನ್ನ ಅಪರಾಧ ಸಾರಿಸಿಕೊಳ್ಳೋಕೆ ಇದನೆಲ್ಲ ಮಾಡ್ತಿದೀಯ?’ಎಂದು ಮುಖಕ್ಕೇ ಹೇಳಿದಳಂತೆ. ಅದಕ್ಕೆ ಆತ ‘ಅಯ್ಯೊ ಅದು ಅಸಾಧ್ಯ ತಾಯಿ’ ಎಂದನಂತೆ. ಸಂದರ್ಶನದಲ್ಲಿ ಎಲ್ಲ ಹೇಳಿಕೊಂಡಿದ್ದ. ಆ ಮೇಲೊಮ್ಮೆ ಆ ಅದೇ ಮುದುಕಿ ಆತ ಹುಶಾರಿಲ್ಲದೆ ಆಸ್ಪತ್ರೆಯಲ್ಲಿದ್ದಾಗ ನೋಡಿ ಹೋಗಲು ಬಂದಿದ್ದನ್ನೂ.’

‘. . .ಮತ್ತು ಮಕ್ಕಳ ಆಟದ ಕೋವಿಗಳನ್ನೆಲ್ಲ ಸುಟ್ಟದ್ದು?’

‘ಹೂಂ ಅದನ್ನೂ…. ಕಾರ್ಯಕ್ರಮ ಮುಗಿದೊಡನೆ ಆತ ಕೇರಳದ ಕೋಟೆಕಲ್ಲಿಗೆ ಹೊರಡುವವ, ಪಕ್ಷವಾತದ ಚಿಕಿತ್ಸೆಗೆ… ಹಾಗೆ ವರದಿಯಿತ್ತು. ಹಿಂಸೆ-ಅಹಿಂಸೆಯ ತನ್ನ ಬದುಕಿನ ಅನುಭವ ಕುರಿತು ಒಂದು ಪುಸ್ತಕ ಬರೆಯುತಿದ್ದಾನೆ ಅಂತಲೂ. . .’

(ವೈದೇಹಿ)

ನಾನು ವಿವರವಾಗಿ ಹೇಳುತ್ತಲೇ ಇದ್ದೇನೆ, ಬೇರೆ ಗಮನವೇ ಇಲ್ಲದೆ. ದೊಡ್ಡಪ್ಪ ಇದ್ದಕ್ಕಿದ್ದಂತೆ ಬಿಕ್ಕ ತೊಡಗಿದರು ಕಣ್ಣೀರು ಕಪೋಲಗಳ ಮೇಲೆ ಹರಿಯತೊಡಗಿತು…. ಜೋರಾಗಿ ಸಶಬ್ದವಾಗಿ ಉಸಿರು ಬಿಡಲಾರಂಭಿಸಿದರು…

ಇದೇನು ಅಂತ ನೋಡುವಷ್ಟರಲ್ಲಿ ಏನೋ ಹೇಳಲು ಹೋದವರು ಹೇಳಲಾಗದೆ ತೊದಲುತ್ತ ಕಣ್ಣುಮೇಲೆ ಮಾಡಿದರು. ಆಚಿಂದ ಧಾವಿಸಿ ಬಂದಳು ರುಮಾ. ನಮ್ಮ ಗಾಬರಿ ಕಕ್ಕಾಬಿಕ್ಕಿ ಕೇಳಬೇಕೆ! ದೊಡ್ಡಪ್ಪಾ, ದಾದಾ, ನಾವು ಬೊಬ್ಬೆಹೊಡೆದೆವು… ಬೊಬ್ಬೆ ಕೇಳಿ ಸಹಾಯಕನೂ ಓಡಿ ಬಂದು ಸಾಬ್, ಸಾಬ್ ಎಂದು ಅವರನ್ನು ಅಲ್ಲಾಡಿಸ ತೊಡಗಿದ. ಅವರೋ ಉಸಿರು ಸಿಗದೆ ವಿಲಿಗುಡುತಿದ್ದರು. ಅಯ್ಯೊ, ಇದೇನಾಯಿತು! ಇವರು ಬೇರೆ ಇಲ್ಲ ಎನ್ನುತ್ತ ಡಾಕ್ಟರಿಗೆ ಫೋನುಮಾಡಿದಳು ರುಮಾ.

ಡಾಕ್ಟರು ಬಂದ ಸ್ವಲ್ಪ ಹೊತ್ತಿಗೆ ದೊಡ್ಡಪ್ಪನಿಗೆ ಪ್ರಜ್ಞೆ ಬಂತು. ಆದರೆ ಏನು ಮಾಡಿದರೂ ಏಳಲೊಲ್ಲರು. ಎಡಬಾಯಿ ವಾರೆಯಾಗಿತ್ತು, ಎಡಕೈ ಎಡಕಾಲು ನಿಶ್ಚೇಷ್ಟವಾಗಿತ್ತು.

ನಾನಾದರೂ ಯಾಕೆ ದೊಡ್ಡಪ್ಪನೆದುರಿಗೆ ಅವನ ಹೆಸರು ತೆಗೆದೆ ಹೇಳಿ ಆಂಟಿ, ಪಾಪ, ರುಮಾ, ಕಣ್ಸನ್ನೆ ಮಾಡುತ್ತಲೇ ಇದ್ದಳು. ನನಗೆ ಸ್ವಲ್ಪವೂ ಸೂಕ್ಷ್ಮ ಗೊತ್ತಾಗದೇ ಹೋಯಿತೆ?

ಯಾಕಾದರೂ ಅಲ್ಲಿಗೆ ಹೋದೆ, ಯಾವತ್ತೂ ಹೋಗದವಳು, ರಜೆಯಲ್ಲಿ ಎಲ್ಲರೊಡನೆ ಸುಮ್ಮನೆ ಮನೆಯಲ್ಲಿರುವುದು ಬಿಟ್ಟು?

ಕೂಡಲೇ ಹೊರಡಲು ಆಗಲೇ ಇಲ್ಲ ನನಗೆ, ರುಮಾಳ ಸಹಾಯಕ್ಕೆ ಇನ್ನೂ ನಾಕು ದಿನ ನಿಂತು ಹಿಂದೆ ಬಂದೆ, ಬರುವವರೆಗೂ ಅವರು ಒಂದು ಹನಿಯೂ ಚೇತರಿಸಿಕೊಂಡಿರಲಿಲ್ಲ. ಬಂದ ಮೇಲೆಯೂ, ಹಾಗೆಯೇ ಇದ್ದಾರಂತೆ ಆಂಟಿ.

ಕೊನೆಕಾಲಕ್ಕೆ ಅವರು ಪಕ್ಷವಾತದಿಂದ ನರಳಲು ನಾನೇ ನಿಮಿತ್ತಳಾದೆನೆ?

ತಿಂಡಿ ತಿನ್ನಲಾಗದೆ ಪ್ಲೇಟು ದೂಡಿ ಎದ್ದು ನಿಂತಳು ಅಮುದ. ಕಣ್ಣು ಕಂಬನಿ ಒತ್ತಿಟ್ಟು ಕೆಂಪಾಗಿತ್ತು.

ಅಮುದ, ಈ ಮನೆ ಬಿಟ್ಟು ಪತಿಯ ಊರಿಗೆ ವರ್ಗ ತೆಗೆದುಕೊಂಡು ಹೊರಟು ಹೋಗಿ ವರ್ಷಗಳೇ ಸಂದವು. ಆದರೆ ಅವಳು ಹೇಳುತ್ತ ನಾನು ಕೇಳುತ್ತ ಆಮೇಲೆ ಇಬ್ಬರೂ ಸ್ತಬ್ದ ಕುಳಿತ ಆ ಸಂಜೆಯ ಕತೆ ಮೇಲೆಮೇಲೆ ನೆನಪಾಗುತ್ತಲೇ ಇರುತ್ತದೆ.

. . .ಎದುರಿಗೆ ಇವತ್ತಿನ ಪೇಪರು ಇದೆ. ಮುಖಪುಟದಲ್ಲೇ ರಕ್ತದೋಕುಳಿ ಸುದ್ದಿ.

ಶೌರ್ಯ ಸಾಹಸ ಪದಕ ಗೌರವ ಸನ್ಮಾನ ಪರಿತಾಪ ಪಶ್ಚಾತ್ತಾಪದ ಮಾತು ಶಿಕ್ಷೆ ಜೀವಬಲಿ ರಕ್ತಪಾತ ಕೋರ್ಟು ಕಛೇರಿ ಕಾನೂನು ವಿವಿಧ ಫೋಟೊಗಳಲ್ಲಿ ವಿವಿಧ ಪೋಸುಗಳಲ್ಲಿ ವಿವಿಧ ಊರು ದೇಶ ಕಾಲಗಳಲ್ಲಿ ವಿವಿಧ ವರದಿಗಳಲ್ಲಿ ವಿವಿಧ ಪುಟಗಳಲ್ಲಿ ವಿವಿಧ ನೋಟಗಳಲ್ಲಿ . . .

(ಸರಣಿ ಮುಕ್ತಾಯ)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ