ಇನ್ನೊಂದು ಎಂಟು ಹತ್ತು ಮಾರು ದೂರ ಸಾಗಿದರೆ, ಆ ದಾರಿ ಸಿಗುತ್ತಿತ್ತು. ನಾನು ರಸ್ತೆಗುಂಟ ಓಡುತ್ತ ಬರುತ್ತಿದ್ದೆ. ಮಬ್ಬುಗತ್ತಲು ಬೇರೆ. ಸುಮಾರು ನಾಲ್ಕುಮಾರು ದೂರದಲ್ಲಿ, ರಸ್ತೆಯ ನಡುವೆ ಒಂದು ಕಪ್ಪು ಆಕಾರ ಕೆಟ್ಟರೂಪದಲ್ಲಿ ಕೂಗುತ್ತ ಇಷ್ಟೆತ್ತರ ಎದ್ದು ನಿಂತಿತು. ಅದು ಕರಡಿ ಎಂದು ಒಂದು ಅಂದಾಜಿನಲ್ಲಿ ನಾನು ಗುರುತಿಸಿ, ನಡುಗಿ ಹೋದೆ. ಒಂದು ಕ್ಷಣ ಏನೂ ಮಾಡಲೂ ತೋಚಲಿಲ್ಲ. ನನ್ನ ಎಡಕ್ಕೆ ಒಂದು ಚಿಕ್ಕ ಕಾಲುದಾರಿ ಕಂಡಿತು. ಅದು ನಮ್ಮನೆಗೆ ಹೋಗುವ ದಾರಿ ಅಲ್ಲವೆಂದು ಗೊತ್ತಿದ್ದರೂ ಅನಿವಾರ್ಯವಾಗಿ ಅದೇ ದಾರಿ ಹಿಡಿದು ಓಡತೊಡಗಿದೆ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಹದಿಮೂರನೆಯ ಕಂತು
ನಮ್ಮ ಕಾಡು ಎಷ್ಟು ದಟ್ಟವಾಗಿದ್ದರೂ, ಹುಲಿ, ಕರಡಿಗಳೆಲ್ಲ ಇರಲಿಲ್ಲ ಬಿಡಿ. ಆದರೆ, ಆಗಾಗ ಅವು ಎಲ್ಲಿಂದಲೋ ನಮ್ಮೂರಿನ ಕಾಡಿಗೆ ಅತಿಥಿಗಳಂತೆ ಬಂದು ಹೋಗುತ್ತಿದ್ದವು. ಆಗ ಊರಲ್ಲೆಲ್ಲ ಒಂದು ಥರದ ಭಯದ ವಾತಾವರಣ. ಸಾಕಿದ ದನಕರುಗಳು ಕಾಡಿಗೆ ಹೋಗಿ ಮೆಂದು ಮನೆಗೆ ಬರುವ ತನಕವೂ ಎಲ್ಲರ ಮನೆಯಲ್ಲೂ ಒಂದು ಥರದ ಆತಂಕ. ಆದರೂ ಪ್ರತೀಸಲ ಈ ಥರ ಹುಲಿಯ ಆಗಮನವಾದಾಗಲೂ ಒಂದು ಮೂರು ನಾಲ್ಕು ದನ ಕರುಗಳಾದರೂ ನಾಪತ್ತೆಯಾಗುವುದು ಸಾಮಾನ್ಯವಾಗಿತ್ತು. ಕೆಲಸಕ್ಕೆ ಬಂದ ಆಳುಗಳು ಅಪ್ಪಯ್ಯನ ಮುಂದೆ, “ಆ ಮುದಿ ಹೆಗಡೇರ ಮನೆ ಹೋರೀನಾ ಹುಲೀ ಹಿಡೀತಂತೆ ಮಾರ್ರೆ. ಮತ್ತೆ ದೊಡ್ ಬ್ಯಾಣದವರ ಮೂರು ಕರುಗಳು ಮನೀಗೇ ಬಂದಿಲ್ಯಂತೆ. ಹುಲೀದೇ ಕೆಲಸಾ ಅಂತಿದ್ರು.” ಎಂಬಿತ್ಯಾದಿ ಭಯಂಕರ ವಾರ್ತೆಗಳನ್ನ ಬಿತ್ತರಿಸುತ್ತಿದ್ದರೆ, ನಮಗೆಲ್ಲ ಹೇಳಿಕೊಳ್ಳಲಾರದ ಸಂಕಟ. ಆ ದನಕರುಗಳ ಜೊತೆಗೆ ಒಡನಾಡುತ್ತ ಬೆಳೆದ ನಮಗೆ, ಅವುಗಳ ಸಾವು ನೋವುಗಳ ಸುದ್ದಿ ತಡೆದು ಕೊಳ್ಳಲಾಗುತ್ತಿರಲಿಲ್ಲ.
ಒಂದು ಕಾಲದಲ್ಲಿ ಅಂದರೆ, ಬಹುಶಃ ಅಪ್ಪಯ್ಯ ಸಣ್ಣವನಿರುವಾಗಿನ ಕಾಲದಲ್ಲಿ ನಮ್ಮ ಸುತ್ತಲಿನ ಕಾಡುಗಳಲ್ಲೂ ಹುಲಿ ಇದ್ದವಂತೆ. ಆ ಕುರಿತು ಅಪ್ಪಯ್ಯ ತುಂಬ ರೋಚಕವಾದ ಕಥೆ ಹೇಳುತ್ತಿದ್ದರು. ಅದು ಒಬ್ಬ ಹೆಗಡೆಯವರ ಕಥೆ. ಅವರು ದೈತ್ಯಾಕಾರದ ಆಳಂತೆ. ಅಷ್ಟೇ ಧೈರ್ಯಶಾಲಿ. ಒಮ್ಮೆ ಕಾಡಲ್ಲಿ ಬರುವಾಗ ಹುಲಿ ಎದುರಾದರೆ, ಅದನ್ನು ಅವರು ಗುದ್ದಿ, ಗುದ್ದಿ ಕೊಂದುಬಿಟ್ಟರಂತೆ. ಅದು ಸಾಮಾನ್ಯದ ಹುಲಿಯಾಗಿರಲಿಲ್ಲವಂತೆ. “ಜಮಖಾನ ಪಟ್ಟೆಯ” ಇಷ್ಟೆತ್ತರದ ಹುಲಿಯಂತೆ. ಅಪ್ಪಯ್ಯ ಈ ಕಥೆ ಎಷ್ಟು ಸಲ ಹೇಳಿದರೂ ನಾನು ಅಷ್ಟೇ ರೋಮಾಂಚಿತಳಾಗುತ್ತಿದ್ದೆ. ಕಾಣದ ಆ ಹುಲಿಯ ಭಯಂಕರ ಆಕಾರ ನೆನೆದು ಭಯಪಡುತ್ತಿದ್ದುದೂ ಸುಳ್ಳಲ್ಲ ಬಿಡಿ. ನಮಗೆ ತಿಳುವಳಿಕೆ ಬರುವ ಹೊತ್ತಲ್ಲಿ, ಹುಲಿ ಆಗೀಗ ಕಳ್ಳರಂತೆ ನಮ್ಮ ಕಾಡಿಗೆ ಬಂದು, ಅಡಗಿ, ಬೇಟೆ ಆಡುತ್ತಿತ್ತು. ಅದು ಯಾರ ಕಣ್ಣಿಗೆ ಬೀಳದಿದ್ದರೂ ಅದರ ಕೂಗು ಮಾತ್ರ ಆಗೀಗ ಜನರ ಕಿವಿ ತಲುಪುತ್ತಿತ್ತು. ಒಮ್ಮೊಮ್ಮೆ ಅಪ್ಪಯ್ಯ ಆಯಿ ಬೆಳಗ್ಗೆ ಆಸರಿಗೆ ಕುಡಿಯುತ್ತ, “ನಿನ್ನೆ ರಾತ್ರಿ ಅಚ್ಚೆ ದಿಂಬದ ಬದಿಗೆ ಯಾ ನಮನೀ ಹುಲಿ ಕೂಗ್ತಿತ್ತು” ಎಂದು ತಮ್ಮಷ್ಟಕ್ಕೇ ಮಾತಾಡಿಕೊಳ್ಳುವುದಿತ್ತು. ಒಮ್ಮೆ ಮಲಗಿದರೆ, ಹೊತ್ತುಕೊಂಡು ಹೋದರೂ ಎಚ್ಚರವಾಗದಷ್ಟು ಮೈ ಮರೆತು ನಿದ್ರಿಸುತ್ತಿದ್ದ ನಮಗೆ ಅದೆಲ್ಲ ಹೇಗೆ ಕೇಳಲು ಸಾಧ್ಯ? ಆದರೆ, ಅವರ ಮಾತು ಕೇಳಿಯೇ ಭಯದಿಂದ ಎದೆಯೊಡೆದು ಹೋಗುತ್ತಿತ್ತು. ಆದರೂ ಅದರ ದನಿ ಹೇಗಿರಬಹುದೆಂಬ ಕುತೂಹಲದಿಂದ ಆಯಿಯನ್ನು ಕೇಳಿದ್ದೆ. ಆಯಿ, ನಮಗೆಲ್ಲ ಅರ್ಥವಾಗುವಂತೆ, ಈ ಮಾಳ ಬೆಕ್ಕು (ಗಂಡು ಬೆಕ್ಕು) ‘ಆವ್’ ‘ಆವ್’ ಅಂತ ಕೂಗ್ತದಲ್ಲಾ ಅದೇ ಥರಾ. ಆದರೆ, ಅದರ ನಾಲ್ಕು ಪಟ್ಟು ಎತ್ತರದ ದನಿ ಅದರದ್ದು’ ಎಂದು ಉತ್ತರಿಸಿದ್ದಳು. ಮತ್ತೆ ಯಾವಾಗಲೋ ಒಮ್ಮೆ ಮಾಳ ಬೆಕ್ಕು ಕೂಗಿದಾಗ, ಹುಲಿಯ ಕಲ್ಪನೆ ಮಾಡಿಕೊಂಡು ಹೆದರಿದ ನೆನಪು.
ಒಮ್ಮೆ ನಮ್ಮ ದನದ ಕೊಟ್ಟಿಗೆಗೆ “ಕಿರುಬ” ನುಗ್ಗಿತ್ತು. ಆಗೆಲ್ಲ ಕೊಟ್ಟಿಗೆಗೆ ಗೋಡೆ ಇರಲಿಲ್ಲ. ಅಡಿಕೆ ದಬ್ಬೆಯ ಮರೆ ಮಾತ್ರ ಇತ್ತು. (ಆಗ ನಮ್ಮ ಮನೆ ಕೂಡಾ ಅಷ್ಟೊಂದು ಗಟ್ಟಿಮುಟ್ಟಾಗಿ ಇರಲಿಲ್ಲ ಬಿಡಿ.) ಅಂಥಹ ಒಂದು ರಾತ್ರಿ ಕೊಟ್ಟಿಗೆಗೆ ಚಿರತೆ ನುಗ್ಗಿತ್ತು. ಹೊರಗಡೆ ಚಿಕ್ಕ ಸಪ್ಪಳವಾದರೂ ತಾಸುಗಟ್ಟಲೆ ಬೊಗಳುವ ನಾಯಿ, ಅಂದು ಮೂಗಾಳಿಯಿಂದಲೇ ಗ್ರಹಿಸಿ, ಬಾಯಿ ಮುಚ್ಚಿಕೊಂಡು, ಮೂಲೆಯಲ್ಲಿ ‘ರಬ್ಬಿ’ ಮಲಗಿತ್ತು. ಕೊಟ್ಟಿಗೆಯಲ್ಲೊಂದು ಎಳೆಗರುವಿತ್ತು. ಅದನ್ನು ಹಿಡಿಯಲೆಂದೇ ಅದು ಬಂದಿರಬಹುದೆಂದು ಮರುದಿನ ಎಲ್ಲರೂ ಮಾತಾಡುತ್ತಿದ್ದರು. ಆ ಮಧ್ಯರಾತ್ರಿಯ ವೇಳೆ ಕೊಟ್ಟಿಗೆಯಲ್ಲಿ ಆಕಳು ದೊಡ್ಡ ದನಿ ತೆಗೆದು ಕೆಟ್ಟ ರೂಪದಲ್ಲಿ ಕೂಗಿದಾಗ ಅಪ್ಪಯ್ಯ ಆಯಿ ಲಾಟೀನು ತೆಗೆದುಕೊಂಡು ಕೊಟ್ಟಿಗೆಗೆ ಓಡಿದ್ದರು. ಅವರು ಬರುವಷ್ಟರಲ್ಲಿ ಅದು ಪರಾರಿಯಾಗಿತ್ತಂತೆ. ಕರುವನ್ನು ರಕ್ಷಿಸಿಕೊಳ್ಳಲು ಅದರ ತಾಯಿ ಅಷ್ಟು ಜೋರಾಗಿ ಕೂಗಿದೆ. ಉಳಿದ ದನಗಳೂ ಕಟ್ಟಿದ್ದ ಹಗ್ಗ ಹರಿದುಕೊಳ್ಳಲು ಚಡಪಡಿಸುತ್ತಿದ್ದವಂತೆ. ಪಾಪ ಅಷ್ಟರಲ್ಲೇ ಕರುವಿನ ಉಸಿರು ನಿಂತೇ ಹೋಗಿತ್ತು. ಆದರೆ ಅದಕ್ಕೆ ಯಾವ ಗಾಯವೂ ಆಗಿರಲಿಲ್ಲವಂತೆ. “ಅದಕ್ಕೆ ಕಿರುಬನ್ನ ನೋಡಿಯೇ ರಾವು ಹೊಡೀತು.” ಅಂತ ಅಪ್ಪಯ್ಯ ಹೇಳುತ್ತಿದ್ದರು. ನನಗೆ ಇದೆಲ್ಲ ಗೊತ್ತಾಗಿದ್ದು ಬೆಳಗ್ಗೆಯೇ. ಮುಂದೆ ತಿಂಗಳು ಗಟ್ಟಲೇ ಮನೆಯಲ್ಲಿ ಎಲ್ಲರೊಳಗೂ ಆ ನೋವು ತುಂಬಿ ತುಳುಕುತ್ತಿತ್ತು. ಮನೆ ಮಕ್ಕಳಂತೆ ಜೀವಕ್ಕೆ ಜೀವವಾಗಿ ಜತನ ಮಾಡುತ್ತಿದ್ದ ದನ ಕರುಗಳಿಗೆ ಹಾಗೇ ನಾತಿ, ಬೆಕ್ಕುಗಳಿಗೆ ಏನಾದರೂ ಆಯಿತೆಂದರೆ, ದುಃಖ ತಡೆಯಲಾಗುತ್ತಿರಲಿಲ್ಲ.
ಈ ಘಟನೆ ಅಪ್ಪಯ್ಯನನ್ನು ಅದೆಷ್ಟು ಕಾಡಿತ್ತೆಂದರೆ, ಮನೆ ಹಳೆಯದಾದರೂ ತೊಂದರೆ ಇಲ್ಲ. ಮೊದಲು ದನುಕರಗಳಿಗೆ ಭದ್ರತೆ ಬೇಕು ಎನ್ನುತ್ತ, ಕಲ್ಲು ಕಂಭ ನೆಡಿಸಿ, ಮಣ್ಣಿನ ಗೋಡೆ ಏರಿಸಿ, ಭದ್ರವಾದ ಬಾಗಿಲು ಹಾಕಿಸಿ, ಅವುಗಳ ನೆಲೆಯನ್ನು ಸುರಕ್ಷಿತಗೊಳಿಸಿದರು. ನಂತರ, ಮನೆಯ ರಿಪೇರಿ ಮಾಡಿಸಿದ್ದು. ಆ ಮೂಕ ಜೀವಿಗಳ ಕುರಿತಾದ ಅಪ್ಪಯ್ಯನ ಕಾಳಜಿ, ಕಳಕಳಿಗೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕೆ?
ಹಾಂ…ಕರಡಿಯ ಕುರಿತಾದ ಒಂದು ರೋಚಕ ಘಟನೆ ನೆನಪಾಯ್ತು. ನಾನಾಗ ೫ ನೇ ತರಗತಿಯಲ್ಲಿ ಓದುತ್ತಿದ್ದೆ. ಮನೆಯಿಂದ ಶಾಲೆಗೆ ೫-೬ ಕಿ.ಮೀ ನಡೆದೇ ಹೋಗಬೇಕಿತ್ತು. ಬೆಳಗ್ಗೆ ೭-೩೦ ಗೆ ಮನೆ ಬಿಟ್ಟರೆ, ಮತ್ತೆ ಸಂಜೆಯೇ ತಿರುಗಿ ಬರುತ್ತಿದ್ದೆ. ಅದು ಬಹುಶಃ ಡಿಸೆಂಬರ್ ತಿಂಗಳು ಇರಬೇಕು. ನಮ್ಮ ಶಾಲೆಯಲ್ಲಿ ಗ್ಯಾದರಿಂಗ್ ತಯಾರಿ ನಡೆದಿತ್ತು. ನಮ್ಮ ಮಾಸ್ತರ್ರು ಮಕ್ಕಳಿಂದ ಒಂದು ನಾಟಕ ಆಡಿಸುವ ತಯಾರಿ ನಡೆಸಿದ್ದರು. ನನ್ನನ್ನೂ ಅದರಲ್ಲಿ ಸೇರ್ಪಡೆ ಮಾಡಿಕೊಂಡಿದ್ದರು. ಅದು ನನ್ನ ಬದುಕಿನಲ್ಲಿ ಅಭಿನಯಿಸಿದ ಮೊದಲ ನಾಟಕ. ಅಲ್ಲಿಯವರೆಗೆ ನಾಟಕ ಅಂದರೇನು ಅಂತಲೂ ಗೊತ್ತಿರಲಿಲ್ಲ ನನಗೆ. ನಾಟಕದ ಹೆಸರು ನೆನಪಿಲ್ಲ. ಆದರೆ, ಅದು ಲಂಕಾಸುರ ರಾವಣನ ಕಥೆ ಅನ್ನುವುದಷ್ಟೇ ನೆನಪು. ಹಿರಿಯ ವಿದ್ಯಾರ್ಥಿಗಳಿಗೆ ದೊಡ್ಡ ಪಾತ್ರ. ನಾನು ಮತ್ತೂ ನನ್ನ ಗೆಳತಿ ನಿಮ್ಮಿಗೆ (ನಿರ್ಮಲಾ ಶೇಠ್) ರಾವಣನ ದರ್ಬಾರಿನಲ್ಲಿ ನಿಲ್ಲುವ ಭಟರ ಪಾತ್ರ. ಆರಂಭದ ಆ ಒಂದು ಡೈಲಾಗ್ ಇನ್ನೂ ನೆನಪಿದೆ. ರಾವಣ, ದರ್ಬಾರಿಗೆ ಬರುತ್ತಾನೆ. ಬಂದು ಕುಳಿತವನೇ ಸುತ್ತ ನೋಡಿ “ಇದೇನು ಎಲ್ಲೆಡೆ ಮೌನ? ನಿತ್ಯವೂ ಬಂದು ನರ್ತನ ಮಾಡುತ್ತಿದ್ದ ನಮ್ಮ ರಾಜ ನರ್ತಕಿಯರೆಲ್ಲಿ?” ಎಂದು ಸಿಟ್ಟಿನಿಂದ ಹೂಂಕರಿಸುತ್ತಾನೆ. ಆಗ ನಾವು ಇಬ್ಬರು ಭಟರೂ ಅವನೆದುರು ತಲೆ ಬಗ್ಗಿಸಿ ಕರಮುಗಿದು ನಿಂತು, “ಬರುತ್ತಲಿದ್ದಾರೆ ಸ್ವಾಮಿ. ಬರುತ್ತಲಿದ್ದಾರೆ” ಎನ್ನುತ್ತೇವೆ.
ಈ ಪಾತ್ರಕ್ಕೆ ನನ್ನ ಆಯ್ಕೆ ಮಾಡಿದ ದಿನ, ನಾನು ಮನೆಗೆ ಕುಣಿದಾಡುತ್ತಲೇ ಬಂದಿದ್ದೆ. “ಆಯೀ ಮಾಸ್ತರ್ರು ನಂಗೂ ನಾಟಕದಲ್ಲಿ ಪಾರ್ಟ್ ಕೊಟ್ಟಿದಾರೆ” ಎಂದು ಖುಶಿಯಿಂದ ಹೇಳಿದೆ. ಆಯಿ ಮೊದಲು ಸುತಾರಾಂ ಒಪ್ಪಲಿಲ್ಲ. ಕೊನೆಗೆ ಅತ್ತೂ ಕರೆದು ಒಪ್ಪಿಸಿಯಾಯ್ತು. ಅದೂ, ‘ಮನೆಗೆ ಕತ್ತಲಾಗುವುದರೊಳಗೆ ಬರಬೇಕು’ ಎಂದು ತಾಕೀತು ಮಾಡಿದ್ದರು. ನಮಗೆ ದಿನಾ ಕೊನೆಯ ಪಿರಿಯಡ್ ಅಂದರೆ, ಅದು ಆಟದ ಪಿರಿಯಡ್. ನಾಟಕದ ರಿಹರ್ಸಲ್ ಆ ಪಿರಿಯಡ್‌ನಲ್ಲೇ ಶುರುಮಾಡಿಕೊಂಡು, ನನ್ನ ಪಾತ್ರದ ರಿಹರ್ಸಲ್ ಮುಗಿದ ತಕ್ಷಣ, ಮಾಸ್ತರ್ರು ನನ್ನನ್ನು ಮನೆಗೆ ಕಳಿಸಿಬಿಡುತ್ತಿದ್ದರು. ಅಲ್ಲಿರುವ ಎಲ್ಲರಿಗಿಂತ ನನ್ನ ಮನೆ ದೂರ ಅಂತ ಅವರಿಗೆ ಗೊತ್ತಿತ್ತಲ್ಲಾ.. ಹಾಗಾಗಿ ಆಯಿಗೆ ಮಾತುಕೊಟ್ಟಂತೇ ದಿನಾ ಸರಿಯಾದ ವೇಳೆಗೆ ಮನೆ ಸೇರುತ್ತಿದ್ದೆ.

ಆದರೆ, ಅದೊಂದು ದಿನ ಅಷ್ಟ್ಯಾಕೆ ತಡೆದು ಮನೆಗೆ ಹೊರಟೆನೊ ನೆನಪಾಗ್ತಿಲ್ಲ. ಬಹುಶಃ ನನ್ನ ರಿಹರ್ಸಲ್ ಮುಗಿದ ಮೇಲೂ ಅಲ್ಲೆ ಮೈ ಮರೆತು ಕುಳಿತು ಇತರ ಪಾತ್ರಗಳ ನಟನೆ ನೋಡುತ್ತಿದ್ದೆ ಅನ್ನಿಸುತ್ತದೆ. ಒಮ್ಮೆಲೆ ಮನೆಯ ನೆನಪಾಗಿ ಹೊರಟು ನಿಂತಿದ್ದೆ. ಛಳಿಗಾಲದ ಸಮಯ. ಹಗಲು ಸಣ್ಣದು. ಆಗಲೇ ಕತ್ತಲಾವರಿಸತೊಡಗಿತ್ತು. ಗಾಭರಿಯಿಂದ ಪಾಟೀ ಚೀಲ ಹೆಗಲಿಗೇರಿಸಿ ಓಡುತ್ತಲೇ ಮೂರು ಕಿ.ಮೀ ದಾಟಿದ್ದೆ. ಅದೇ ದೊಡ್ಡ ರಸ್ತೆಯಲ್ಲೇ ಸಾಗಿದರೆ, ನಮ್ಮನೆಗೆ ಇನ್ನೆರಡು ಕಿಲೋ ಮೀಟರ್. ಆದರೆ, ರಸ್ತೆಯಿಂದ ಎಡಕ್ಕೆ ಹೊರಳಿ, ಕಿರಿದಾದ ಕಾಡು ಹಾದಿ ಹಿಡಿದರೆ, ಅರ್ಧದಷ್ಟು ಅಂತರ ಕಡಿಮೆಯಾಗುತ್ತಿತ್ತು. ಅದಕ್ಕೇ ನಾನು ಯಾವಾಗಲೂ ಆ ಕಿರುದಾರಿಯನ್ನೇ ಬಳಸುತ್ತಿದ್ದೆ. ಆ ದಿನವೂ ಹಾಗಂದುಕೊಂಡೇ ಹೊರಟಿದ್ದೆ. ಇನ್ನೊಂದು ಎಂಟು ಹತ್ತು ಮಾರು ದೂರ ಸಾಗಿದರೆ, ಆ ದಾರಿ ಸಿಗುತ್ತಿತ್ತು. ನಾನು ರಸ್ತೆಗುಂಟ ಓಡುತ್ತ ಬರುತ್ತಿದ್ದೆ. ಮಬ್ಬುಗತ್ತಲು ಬೇರೆ. ಸುಮಾರು ನಾಲ್ಕುಮಾರು ದೂರದಲ್ಲಿ, ರಸ್ತೆಯ ನಡುವೆ ಒಂದು ಕಪ್ಪು ಆಕಾರ ಕೆಟ್ಟರೂಪದಲ್ಲಿ ಕೂಗುತ್ತ ಇಷ್ಟೆತ್ತರ ಎದ್ದು ನಿಂತಿತು. ಅದು ಕರಡಿ ಎಂದು ಒಂದು ಅಂದಾಜಿನಲ್ಲಿ ನಾನು ಗುರುತಿಸಿ, ನಡುಗಿ ಹೋದೆ. ಒಂದು ಕ್ಷಣ ಏನೂ ಮಾಡಲೂ ತೋಚಲಿಲ್ಲ. ನನ್ನ ಎಡಕ್ಕೆ ಒಂದು ಚಿಕ್ಕ ಕಾಲುದಾರಿ ಕಂಡಿತು. ಅದು ನಮ್ಮನೆಗೆ ಹೋಗುವ ದಾರಿ ಅಲ್ಲವೆಂದು ಗೊತ್ತಿದ್ದರೂ ಅನಿವಾರ್ಯವಾಗಿ ಅದೇ ದಾರಿ ಹಿಡಿದು ಓಡತೊಡಗಿದೆ. ಆದರೆ ಅಲ್ಲಿಂದ ಕಾಡೊಳಗೇ ಒಂದು ಒಳದಾರಿ ನಮ್ಮನೆ ತಲುಪುವ ಕಿರು ದಾರಿಗೆ ಸೇರಿಸುತ್ತದೆ ಎಂದು ನನಗೆ ತಿಳಿದಿತ್ತು. ಅದೇ ಅಂದಾಜಿನಲ್ಲಿ ಸಾಗುತ್ತ ಹೋಗಿ, ಅಂತೂ ನಮ್ಮನೆ ದಾರಿ ಸೇರಿದೆ. ಎಲ್ಲೆಲ್ಲೂ ಕತ್ತಲು. ಒಂದು ಅಂದಾಜಿನಲ್ಲಿ ಅಂತೂ ಸರಿಯಾಗಿ ನಡೆಯುತ್ತ ಮನೆ ಸಮೀಪಿಸಿದ್ದೆ. ನಮ್ಮನೆ ಹಿತ್ತಲ ಬಾಗಿಲಲ್ಲಿ ನಿಂತರೆ, ಎತ್ತರದ ದಿಬ್ಬ. ದಿನಾ ಅದೇ ದಿಬ್ಬ ಇಳಿದು ಗದ್ದೆ ದಾಟಿ ನಾನು ಮನೆಗೆ ಬರುತ್ತಿದ್ದೆ. ನಾನು ಅಳುತ್ತ ಓಡೋಡಿ ಬರುತ್ತಿದ್ದೆ. ಆಯಿ, ಮನೆಯ ಹಿತ್ತಲ ಬಾಗಿಲಲ್ಲಿ ಲಾಟೀನು ಹಿಡಿದು ನಿಂತು ಜೋರಾಗಿ “ಮಣೀ, ಏ… ಮಣೀ” (ಮನೆಯಲ್ಲಿ ನನ್ನ ಹಾಗೇ ಕರೆಯೋದು) ಎಲ್ಲಿದ್ದೀಯೆ? ಎಂದು ಕೂಗುತ್ತಿದ್ದುದು ಕೇಳಿತು. ನಾನೂ ಅಷ್ಟೇ ಜೋರಾಗಿ “ಆಯೀ” ಎನ್ನುತ್ತ ಮತ್ತಷ್ಟು ಜೋರು ಓಡಿ, ದಿಬ್ಬ ಇಳಿಯತೊಡಗಿದ್ದೆ. ಪಾಪ ಆಯಿ ಅದೆಷ್ಟು ಕಂಗಾಲಾಗಿದ್ದಳೋ ಏನೋ. ಲಾಟೀನು ಹಿಡಿದು ಗದ್ದೆಗೆ ಬಂದರು. ನನ್ನ ಕಂಡಿದ್ದೇ ತಡ. ಗಾಭರಿಯೆಲ್ಲ ಸಿಟ್ಟಾಗಿ ಮಾರ್ಪಟ್ಟಿತ್ತು. ಮನೆ ತಲುಪುವ ತನಕವೂ ಬೈಗುಳದ ಮಳೆ ಸುರಿಯುತ್ತಲೇ ಇತ್ತು. ನಾನು “ಆಯಿ ಕರಡಿ ಸಿಕ್ಕಿತ್ತು” ಎಂದು ಹೇಳಿದರೆ ನಂಬಲೇ ಇಲ್ಲ. “ತಡವಾಗಿ ಬಂದು ಸುಳ್ಳು ನೆವ ಹೇಳ್ತೀಯಾ?” ಎಂದು ಮತ್ತಷ್ಟು ಬೈದಳು ಆಯಿ. ಆಗಿನ ಜನರೇ ಹಾಗೆ. ತಮ್ಮ ಪ್ರೀತಿ, ಕಾಳಜಿ ಎಲ್ಲವೂ ಬೈದೋ, ಹೊಡೆದೋ ವ್ಯಕ್ತಪಡಿಸುವ ವಾಡಿಕೆ. ಈಗಿನವರಂತೇ ತಬ್ಬಿಕೊಳ್ಳುವುದು, ಮುದ್ದು ಮಾಡುವುದು ಯಾವುದೂ ಇರಲೇ ಇಲ್ಲ. ಹಾಗಂತ ಅವರಿಗೆ ಪ್ರೀತಿ ಇಲ್ಲ ಅಂತಲ್ಲ. ತೋರಿಸುವ ರೀತಿ ಸ್ವಲ್ಪ ಬೇರೆ ಅಷ್ಟೇ. ಮತ್ತೆ ಅಪ್ಪಯ್ಯನಿಂದ ಮತ್ತಷ್ಟು ಬೋನಸ್ ಸಿಕ್ಕಿತ್ತು.
ಮರುದಿನ ಅಪ್ಪಯ್ಯ ಬಂದವರ ಮುಂದೆಲ್ಲ ಈ ಸುದ್ದಿ ಹೇಳಿದ್ದ. ಯಾರೂ ಒಪ್ಪಲಿಕ್ಕೇ ತಯಾರಿಲ್ಲ!! ಅದು “ಬುಡಾಣ್ ಸಾಬ ಸಾಕಿದ ಕರಿ ಕುನ್ನಿ” ಅಂತ ಯಾರೋ ಸಮಜಾಯಿಶಿ ಕೊಟ್ಟರು. ‘ಆದರೆ ಕುನ್ನಿ ಅಷ್ಟೆತ್ತರಕ್ಕೆ, ಅಗಲಕ್ಕೆ ಇರ್ತದೇನು? ಅದು ಕೂಗುತ್ತ ಮೈ ಮುರಿದು ನಿಲ್ಲೋದು ನಾನೇ ಕಂಡಿದ್ದೇನೆ’ ಎನ್ನುವ ನನ್ನ ವಾದಕ್ಕೆ ಬೆಲೆಯೇ ಇರಲಿಲ್ಲ.

ಆದರೆ, ಎಲ್ಲವೂ ಅನಿವಾರ್ಯ. ಮರುದಿನ ಬೆಳಗ್ಗೆ ಮತ್ತೆ ಅದೇ ದಾರಿಯಲ್ಲಿ ನಡೆದು ಶಾಲೆಗೆ ಹೋಗಲೇ ಬೇಕಿತ್ತು. ನಾನು ಹೆದರಿದ್ದೇನೆ ಅಂತೆಲ್ಲ ಯಾರೂ ತಲೆಕೆಡಿಸಿಕೊಳ್ಳಲಿಲ್ಲ. ಆದರೆ, ಅವತ್ತಿನಿಂದ ಸಂಜೆ ತಡವಾಗದಂತೆ ನಾನೇ ಜಾಗ್ರತೆ ವಹಿಸತೊಡಗಿದ್ದೆ.
ಮುಂದುವರಿಯುವುದು…

ರೂಪಾ ರವೀಂದ್ರ ಜೋಶಿ ಮೂಲತಃ ಶಿರಸಿ ತಾಲ್ಲೂಕಿನ ದಾನಂದಿ ಗ್ರಾಮದವರು. ಸಧ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ವೃತ್ತಿಪರ ಲೆಕ್ಕಪತ್ರ ಬರಹಗಾರರಾಗಿ ಕೆಲಸ ಮಾಡುತ್ತಿರುವ ಇವರಿಗೆ ವಿವಿಧ ಪ್ರಕಾರದ ಸಾಹಿತ್ಯ ಬರವಣಿಗೆ ಹಾಗೂ ಅಧ್ಯಯನದಲ್ಲಿ ಮತ್ತೂ ರಂಗಭೂಮಿಯಲ್ಲೂ ಆಸಕ್ತಿ. ಸಾಗುತ ದೂರಾ ದೂರಾ (ಕಥಾ ಸಂಕಲನ), ಅಜ್ಞಾತೆ (ಸಾಮಾಜಿಕ ಕಾದಂಬರಿ) ೨೦೧೭ (ಲೇಖಿಕಾ ಪ್ರಶಸ್ತಿ ದೊರೆತಿದೆ), ಕಾನುಮನೆ (ಪತ್ತೆದಾರಿ ಕಾದಂಬರಿ) ೨೦೧೯ (ಕ ಸಾ ಪ ದತ್ತಿ ಪ್ರಶಸ್ತಿ ದೊರೆತಿದೆ, ಶೃಂಖಲಾ (ಸಾಮಾಜಿಕ ಕಾದಂಬರಿ) ೨೦೨೦ ( ರತ್ನಮ್ಮ ಹೆಗ್ಗಡೆ ಪ್ರಶಸ್ತಿ ದೊರೆತಿದೆ), ವಾಟ್ಸಪ್ ಕಥೆಗಳು (ಕಿರುಕಥಾ ಸಂಕಲನ), ಹತ್ತರ ಕೂಡ ಹನ್ನೊಂದು (ಪ್ರಬಂಧಗಳ ಸಂಕಲನ), ಚಿಗುರು ಬುತ್ತಿ (ಮಕ್ಕಳ ಕಾದಂಬರಿ) ಇವರ ಪ್ರಕಟಿತ ಕೃತಿಗಳು.
