ನಾಟಕೋತ್ಸವ ಮುಗಿದು ಅವರೆಲ್ಲ ಹೊರಟುಹೋದ ಮೇಲೆ ಮತ್ತೆ ನಮ್ಮ ದಿನಚರಿಗೆ ಹೊಂದಿಕೊಳ್ಳುವುದಕ್ಕೆ ಬಹಳ ಸಂಕಟವಾಗುತ್ತಿತ್ತು. ಕಿಂದರಿಜೋಗಿಯ ಕುಂಟನಂತೆ ‘ಅಯ್ಯೋ ಹೋಯಿತೆ ಆ ನಾಕ, ಅಯ್ಯೋ ಬಂದಿತೆ ಈ ಲೋಕʼ ಎನ್ನುವ ಭಾವನೆ ಬರುತ್ತಿತ್ತು. ಈಗಿನಷ್ಟು ನಾಟಕ ಪ್ರಯೋಗಗಳು ನೋಡಲು ಸಿಗುತ್ತಿರಲಿಲ್ಲವಾದ್ದರಿಂದ ನೀನಾಸಮ್ ತಿರುಗಾಟವನ್ನು ನಾವು ಕರೆಸಿದಷ್ಟು ವರ್ಷಗಳೂ ನಾಟಕ ಮಾಡಬೇಕು ಅನ್ನೋ ಆಸೆ ಹೆಚ್ಚಾಗುತ್ತಿತ್ತು. ತಿರುಗಾಟವು ನಾಟಕದ ಅನುಭವದ ಜತೆಗೆ ನಾಟಕದ ಬಗ್ಗೆ ಪ್ರೀತಿಯನ್ನು ಬಿಟ್ಟು ಹೋಗುತ್ತಿತ್ತು.
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿ
ರಂಗದ ಸೆಳೆತ
ಕಲಾವಿದನೊಬ್ಬ ಯಾವಾಗ ‘ತಾನು ಕಲಾವಿದನಾಗಬೇಕುʼ ಎಂದು ನಿರ್ಧರಿಸುತ್ತಾನೆ ಎನ್ನುವುದು ಬಹಳ ವಿಸ್ಮಯ ಹುಟ್ಟಿಸುವ ಸಂಗತಿ. ಯಾವುದೋ ಒಂದು ನಾಟಕವಾಗಲೀ, ಸಂಗೀತವಾಗಲೀ, ಚಿತ್ರವಾಗಲೀ… ಒಂದು ನಿರ್ದಿಷ್ಟ ಕ್ಷಣ ‘ಏನಾದರೂ ಮಾಡುವುದಾದರೇ ಇದನ್ನೇʼ ಎನ್ನುವುದನ್ನು ನಿರ್ಧರಿಸುತ್ತದೆ. ಪ್ರತಿಯೊಬ್ಬ ಕಲಾವಿದನಿಗೂ ಇಂಥ ಒಂದು ಕ್ಷಣ ಬಂದಿರುತ್ತದೆ. ಅದೊಂದು ಮಾಂತ್ರಿಕ ಕ್ಷಣ. ಯಾಕೆ? ಹೇಗೆ? ಎನ್ನುವ ಎಲ್ಲಾ ಜೀವನ್ಮರಣದ ಪ್ರಶ್ನೆಗಳನ್ನು ದಾಟಿ ಆ ಕ್ಷಣ ಅವನನ್ನು ಸೆಳೆದುಬಿಟ್ಟಿರುತ್ತದೆ. ಬೇರೆ ಎಲ್ಲ ತರ್ಕಗಳೂ ಆ ಸೆಳೆತದ ಮುಂದೆ ಕ್ಷುಲ್ಲಕ.
ಹೀಗೆಯೇ ನಾಟಕ, ರಂಗಭೂಮಿ ಎನ್ನುವುದನ್ನು ನಾನು ಹೊರಗೆಲ್ಲೋ ನೋಡಿ ಕಲಿತದ್ದಲ್ಲ. ನೆನಪು ಇದ್ದಾಗಿನಿಂದ ಮನೆಯಲ್ಲಿಯೇ ನಾಟಕದ ವಾತಾವರಣ ಇತ್ತು. ರಂಗಾಯಣ ಆರಂಭವಾದ ಸಮಯ. ಮೈಸೂರು ಕಲಾಮಂದಿರದಲ್ಲಿ ‘ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ʼ ನಾಟಕ.. ಅಪ್ಪ – ಅಮ್ಮ ನಾಟಕಕ್ಕೆ ಕರ್ಕೊಂಡು ಹೋಗಿದ್ದರು. ಮೈಸೂರಿಗೆ ಹೋಗಿ ನಾಟಕ ನೋಡಿಕೊಂಡು ಮತ್ತೆ ಚಾಮರಾಜನಗರಕ್ಕೆ ಬರುವುದು ಈಗಲೂ ಕಷ್ಟದ ಕೆಲಸವೇ. ನಾಟಕ ಮುಗಿಸಿ ರಾತ್ರಿ ಹೋಟೆಲ್ ಅಲ್ಲಿ ಊಟ ಮಾಡ್ತಾ ಕೂತರೆ ಕೊನೆಯ ಬಸ್ ಮಿಸ್ ಆಗುತ್ತದೆ. ಹಾಗೇ ಹೋದರೆ ಮನೆಗೆ ಹೋಗುವ ತನಕ ಏನೂ ಇರುವುದಿಲ್ಲ. ಹಾಗಾಗಿ ನಮ್ಮಮ್ಮ ದಾರಿಗೆ ಮತ್ತು ರಾತ್ರಿಗೆ ತಿನ್ನೋದಕ್ಕೆ ಡಬ್ಬಿ ತಯಾರಿ ಮಾಡಿಕೊಂಡು ಹೊರಡಬೇಕಿತ್ತು.
ನಾವು ಸಮಯಕ್ಕೆ ಮುನ್ನವೇ ಮೈಸೂರು ತಲುಪಿದೆವು. ಆದರೆ ಅಲ್ಲಿ ‘ಮಕ್ಕಳಿಗೆ ಪ್ರವೇಶವಿಲ್ಲ’ ಎಂಬ ನಿಯಮ ಇತ್ತು(ಗಲಾಟೆ ಮಾಡುತ್ತಾರೆ ಎಂಬ ಕಾರಣಕ್ಕೆ). ನಮಗೆ ಆತಂಕ ಶುರುವಾಯಿತು. ನಮ್ಮಮ್ಮ “ನೀವೇ ಹೋಗಿ ರಿಕ್ವೆಸ್ಟ್ ಮಾಡಿಕೊಳ್ಳಿ” ಅಂತ ನಮಗೆ ಹೇಳಿದರು. ನನಗೆ ಮುಜುಗರ. ನನ್ನ ತಮ್ಮ ಹೋಗಿ ಯಾರನ್ನೋ ಕೇಳಿದ. ಕೊನೆಗೆ ‘ಗಲಾಟೆ ಮಾಡಬಾರದು’ ಅಂತ ನಿಯಮದೊಂದಿಗೆ ನಮ್ಮನ್ನು ಒಳಗೆ ಬಿಟ್ಟರು.
ನಾಟಕ ಪೂರಾ ನನಗೆ ನೆನಪಿಲ್ಲ. ಆದರೆ ತಲೆಯ ಮೇಲೆ ಇಟ್ಟಿಗೆ ಕಟ್ಟಿದಂತೆ ಇದ್ದ ಗೋಡೆ ಪಾತ್ರ. ರಂಗದ ಬಲಬದಿಯಲ್ಲಿ ದೊಡ್ಡ ಬಲೆ, ಕತ್ತೆಯ ಮುಖವಾಡ, ಈಗ ನೊಡಿದ್ದೇನೋ ಅನ್ನುವಷ್ಟು ಖಚಿತವಾಗಿ ನೆನಪಿದೆ. ಕಲಾಮಂದಿರದ ಹಿಂದಿನ ಗೋಡೆ ಬಹುಶಃ ಇರಲಿಲ್ಲ. ಹಿಂದೆ ದೊಡ್ಡ ಬಯಲು. ಕತ್ತಲು. ನಾಟಕದ ಕೊನೆಗೆ ನಾಟಕದಲ್ಲಿನ ಜೋಡಿಗಳು ಈಗಿನ ಭೂಮಿಗೀತದ ಸ್ಥಳದಲ್ಲಿ ರಂಗದ ಎಡದಿಂದ ಬಲಕ್ಕೆ ಮೆರವಣಿಗೆ ಹೊರಡುತ್ತಿದ್ದಾಗ ಮೇಲಿನಿಂದ ಮಳೆ ಬೀಳುವಂತೆ ನೀರು ಹಾಕುತ್ತಿದ್ದರು. ನಾಟಕದಲ್ಲಿ ಮಳೆಯ ಎಫ಼ೆಕ್ಟ್ ಇಲ್ಲಿಯವರೆಗೂ ನಾನು ನೋಡಿಲ್ಲ. ಆದರೆ ಅಷ್ಟು ಚಿಕ್ಕ ವಯಸಿನಲ್ಲಿ ಆ ನಾಟಕ ನೀಡಿದ ಅನುಭವ ನನ್ನನ್ನು ಗಟ್ಟಿಯಾಗಿ ಸೆಳೆದುಬಿಟ್ಟಿತು. ನಾಟಕ, ಅಭಿನಯ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿಬಿಟ್ಟಿತ್ತು. ವಾಪಸ್ ನಮ್ಮೂರಿಗೆ ಬಸ್ಸಿನಲ್ಲಿ ಬರುವಾಗ ಅರೆ ನಿದ್ದೆ ಅರೆ ಎಚ್ಚರದಲ್ಲಿ ನಾಟಕದ ಸೆಟ್, ಸಂಗೀತ, ಅದರ ಕಾಸ್ಟ್ಯೂಂ ಗಳ ಗುಂಗು ಇರುತ್ತಿತ್ತು. ಸಣ್ಣವಯಸ್ಸಿನಲ್ಲಿ ನೋಡಿದ ಇಂಥ ಪ್ರದರ್ಶನಗಳೇ ಇಂದಿಗೂ ನಾಟಕವನ್ನು ಬಿಡದಂತೆ ಹಿಡಿದಿಟ್ಟುಕೊಂಡಿರುವುದು.
ನೀನಾಸಂ ತಿರುಗಾಟ
ನಾಟಕದ ಬಗ್ಗೆ ಇದ್ದ ಸೆಳೆತವನ್ನು ಹೆಚ್ಚಿಸಿದ್ದು ನೀನಾಸಮ್ ತಿರುಗಾಟ. ನಾನು ಇನ್ನೂ ಗೊಂಬೆಗಳೊಂದಿಗೆ ಆಡುವ ವಯಸ್ಸು. ನಮ್ಮ ಊರಿಗೆ ಹಲವಾರು ಬಾರಿ ತಿರುಗಾಟ ನಾಟಕಗಳ ಆಯೋಜನೆ ಮಾಡುತ್ತಿದ್ದರು. ತಿರುಗಾಟ ಬರುತ್ತದೆ ಅಂದಾಗಿನಿಂದ ಮನೆಯಲ್ಲಿ ಯಾವುದೋ ಯಜ್ಞದ ಹಾಗೆ ತಯಾರಿ ನಡೆಯುತ್ತಿತ್ತು. ಮೀಟಿಂಟ್‌ಗಳು, ಟಿಕೆಟ್ ಮಾರುವುದು, ಲೆಕ್ಕ ಇಡುವುದು… ಆಗ ಪೋಸ್ಟರ್‌ಗಳನ್ನು ಮಾಡಿಸಿಕೊಂಡು ಬರುತ್ತಿದ್ದರು. ಮನೆಯಲ್ಲೇ ಮೈದಾ ಹಿಟ್ಟಿನ ಅಂಟನ್ನು ಮಾಡಿ ನಮ್ಮ ತಂಡದವರು ರಾತ್ರಿ ಊರೆಲ್ಲಾ ಮಲಗಿದ ಮೇಲೆ ಸೈಕಲ್‌ಗಳಲ್ಲಿ ಪೋಸ್ಟರ್ ಹಚ್ಚಲು ಹೋಗುತ್ತಿದ್ದರು. ನನಗೂ ರಾತ್ರಿ ಅವರೊಂದಿಗೆ ಪೋಸ್ಟರ್ ಹಚ್ಚಲು ಹೋಗೋ ಆಸೆ. ಮೊದಲು ಚಿಕ್ಕಮಕ್ಕಳು ಅಂತ ಕಳಿಸುತ್ತಿರಲಿಲ್ಲ. ಮುಂದೆ ಒಬ್ಬಳೇ ಹುಡುಗಿ ಅಂತ ಕಳಿಸುತ್ತಿರಲಿಲ್ಲ. ಮನೆಯಲ್ಲಿ ನಡುರಾತ್ರಿಯವರೆಗೂ ಹರಟೆ. ಇಡೀ ಊರ ಸುದ್ದಿ, ಮಾತುಕತೆ ನಡೆಯುತ್ತಿತ್ತು.
ಟಿಕೆಟ್ ಮಾರಾಟ
ಆಗ ನಾಟಕ ತಂಡಗಳನ್ನು ಕರೆಸಿ ನಾಟಕ ಆಡಿಸುವುದು ಹೊಸದು. ಹಾಗಾಗಿ ನಾಟಕ ಪ್ರಚಾರವೂ ಆಗುತ್ತದೆ, ಟಿಕೆಟ್‌ಗಳ ಮಾರಾಟವೂ ಆಗುತ್ತದೆ ಎಂದು ಐದಾರು ಜನರ ಗುಂಪು ಮಾಡಿಕೊಂಡು ಸಾಮೂಹಿಕವಾಗ ಟಿಕೆಟ್ ಮಾರುವ ಕೆಲಸ ಮಾಡುತ್ತಿದ್ದರು. (ನಾಲ್ಕೈದು ಜನ ಒಟ್ಟಿಗೆ ಹೋದರೆ ಮುಜುಗರಕ್ಕಾದರೂ ಟಿಕೆಟ್ ಕೊಳ್ಳುತ್ತಾರೆ ಅನ್ನುವುದೂ ಒಂದು ವಿಷಯ). ಅದಕ್ಕೆ ನಾನೂ ನನ್ನ ತಮ್ಮ ಹೋಗಬಹುದಿತ್ತು. ಹೀಗೆ ಟಿಕೆಟ್ ಮಾರುವಾಗ ನಮ್ಮೂರಿನ ಪ್ರಸಿದ್ಧ ‘ಮುಕ್ಕಣ್ಣೇಶ್ವರಿ ಬಾರ್ʼ ನ ಮಾಲೀಕರಿಗೂ ಟಿಕೆಟ್ ಕೊಡುವುದಿತ್ತು. ಗುಂಪಿನ ಜೊತೆಗೆ ಬಾರ್ ಒಳಗೆ ಹೋಗಿ ಟಿಕೆಟ್ ಮಾರಿದ್ದೆವು. ಆಗ ಅದು ಆ ವಯಸ್ಸಿಗೆ ಬಹಳ ರೋಮಾಂಚಕಾರಿ ಅನುಭವ. ತೊಟ್ಟಿ ಮನೆಯಂತಿದ್ದ ಬಾರ್‌ನ ಮಂದ ದೀಪ ವಿಚಿತ್ರವಾಗಿ ಕಂಡಿತ್ತು. ಟಿಕೆಟ್ ಮಾರುವ ನೆಪದಲ್ಲಿ ನಮ್ಮೂರಿನ ಎಲ್ಲಾ ಜಾಗಗಳಿಗೂ ಭೇಟಿ ಕೊಡುವ ಅವಕಾಶ ಸಿಗುತ್ತಿತ್ತು. ಇನ್ನೂ ನಮ್ಮೂರಿನಲ್ಲಿ ನಾಟಕ ಆಯೋಜನೆ ಮಾಡಿದಾಗ ಜನರ ಬಳಿ ಹೋಗಿ ಟಿಕೆಟ್ ಮಾರಬೇಕು. ಮೈಸೂರು ಮತ್ತು ಬೆಂಗಳೂರಿನ ಹಾಗೆ ರಂಗಮಂದಿರಕ್ಕೆ ಬಂದು ಟಿಕೆಟ್ ಕೊಂಡು ನಾಟಕ ನೋಡುವ ಪದ್ಧತಿ ಇಷ್ಟು ವರ್ಷವಾದರೂ ಬೆಳೆದು ಬಂದಿಲ್ಲ. ಹೀಗೆ ನಾಟಕ ತಂಡ ಬರುವುದಕ್ಕೆ ಸುಮಾರು ಒಂದೂವರೆ ತಿಂಗಳಿನ ಹಿಂದಿನಿಂದಲೇ ತಯಾರಿ ನಡೆಯುತ್ತಿತ್ತು.
ಕೊನೆಗೂ ತಂಡ ಬರುವ ದಿನ ಎಲ್ಲರಗೂ ಉತ್ಸಾಹ. ಯಾವುದೋ ಲೋಕದಿಂದ ಇಳಿದು ಬಂದವರಂತೆ ಕಲಾವಿದರು ಬಸ್ ಇಳಿಯುತ್ತಿದ್ದರು. ಹುಡುಗಿಯರೂ ಹುಡುಗರು ಯಾವ ಮುಜುಗರವಿಲ್ಲದೇ ಒಟ್ಟಿಗೇ ಕೆಲಸ ಮಾಡುವುದು, ಹುಡುಗಿಯರು ಹುಡುಗರ ಸಮನಾಗಿ ಇರುವುದು ಚಿಕ್ಕ ಮಕ್ಕಳಾದ ನಮಗೆ ಆಶ್ಚರ್ಯ ಹುಟ್ಟಿಸುತ್ತಿತ್ತು. ನಾವು ನಮ್ಮ ಊರುಗಳಲ್ಲಿ ಅಷ್ಟು ಮುಕ್ತವಾಗಿರುವವರನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಕಲಾವಿದರೆಲ್ಲರೂ ನಮ್ಮ ಗೊಂಬೆಗಳನ್ನಿಟ್ಟುಕೊಂಡು ತಮ್ಮ ತಮ್ಮಲ್ಲೇ ತಮಾಷೆ ಮಾಡಿಕೊಳ್ಳುವುದು, ನಾವು ಅವರು ಕೇಳಿದ್ದನ್ನು ಕೊಡುವುದು ಮಾಡುತ್ತಿದ್ದೆವು. ಎರಡು ಮೂರು ದಿನ ತಂಡ ನಮ್ಮೂರಲ್ಲಿರುತ್ತಿತ್ತು. ನಮ್ಮ ಮನೆಯಲ್ಲೇ ಅವರೆಲ್ಲರಿಗೂ ಅಡುಗೆ ಮಾಡುತ್ತಿದ್ದರು. ಎಷ್ಟು ಜನ ಇದ್ದಾರೆ ಅಂತ ನಮ್ಮಮ್ಮ ಕೇಳಿದರೆ ಅವರಿಗೆ ಗೊತ್ತಾಗದ ಹಾಗೆ ಎಣಿಸಿಕೊಂಡು ಹೋಗಿ ಲೆಕ್ಕ ಹೇಳುವುದು, ನಮ್ಮ ತಂಡದವರೇ ಅವರಿಗೆ ಅಡುಗೆ ಬಡಿಸುವುದು. ನಾಟಕಕ್ಕೆ ಸ್ಥಳೀಯವಾಗಿ ಬೇಕಾದ ವಸ್ತುಗಳನ್ನು ಹೊಂದಿಸಿಕೊಡುವುದು… ಹೀಗೆ ಇಡೀ ತಂಡವೇ ಒಂದು ಕುಟುಂಬದಂತೆ ಆಗಿಬಿಡುತ್ತಿತ್ತು. ಹೀಗೆ ಅವರೆಲ್ಲ ನಮ್ಮೂರಿನಲ್ಲಿ ಇದ್ದಷ್ಟು ದಿನವೂ ನಮಗೆ ಹಬ್ಬ. ನಮ್ಮ ತಂಡದ ಹಿರಿಯರು ಇಡೀ ಪ್ರಪಂಚವೇ ತಮ್ಮ ಮೇಲೆ ಬೀಳುತ್ತದೆಯೋ ಎನ್ನುಂತೆ ಗಡಿಬಿಡಿಯಲ್ಲಿ ಓಡಾಡುವುದನ್ನು ನೋಡಿ ನಾಟಕ ಮಾಡಬೇಕು ಅಂದರೆ ಇಷ್ಟು ಟೆನ್ಷನ್ ಮಾಡ್ಕೊಳೋದು ಅನಿವಾರ್ಯ ಅನ್ನೋ ಭಾವನೆ ಬೇರೂರಿತ್ತು.

ಪ್ರದರ್ಶನದ ಮುಂಚೆ ಎರಡು ಟೆಂಟ್‌ಗಳನ್ನು ಕಟ್ಟಿಕೊಳ್ಳುತ್ತಿದ್ದರು. ಅದರೊಳಗೆ ಮಧ್ಯ ಕನ್ನಡಿಗಳು ಎರಡೂ ಬದಿಗೂ ಮೇಕಪ್ ಮಾಡಿಕೊಳ್ಳುವಾಗ ಆ ಬಲ್ಬಿನ ಬೆಳಕಲ್ಲಿ ಇಷ್ಟು ಹೊತ್ತೂ ತಮಾಷೆ ಮಾಡಿಕೊಂಡಿದ್ದ ಕಲಾವಿದರೆಲ್ಲ ಮೇಕಪ್ ಮಾಡಿಕೊಳ್ಳುತ್ತಾ ಬಹಳ ಗಂಭೀರವಾಗಿ ಯುದ್ಧಕ್ಕೆ ಸಜ್ಜಾಗುವಂತೆ ತಯಾರಾಗುತ್ತಿದ್ದರು. ನಾಟಕ ಮುಗಿದಮೇಲೆ ಅವರನ್ನೆಲ್ಲಾ ಮಾತಾಡಿಸೋದಕ್ಕೆ ಮುಜುಗರ. ಅವರು ಹೋದ ನಂತರ ನಮ್ಮ ನಾಟಕ ಪ್ರಾರಂಭ. ನೆನಪಿರುವಷ್ಟು ಸಂಭಾಷಣೆಗಳನ್ನು ನಾವೇ ಅಭಿನಯಿಸಿಕೊಳ್ಳುವುದು.. ಡಾನ್ಸ್ ಮಾಡುವುದು. ಹೀಗೆ ಒಂದು ನಾಟಕ ತಂಡ ಹೋದಮೇಲೆ ನಮ್ಮಲ್ಲಿ ಎಷ್ಟೋ ದಿನಗಳ ತನಕವೂ ಅದರ ಅನುರಣನ ಇರುತ್ತಿತ್ತು. ನಾಟಕದ ಪಾತ್ರಗಳನ್ನು ನಾವೆಲ್ಲಾ ಒಬ್ಬರಿಗೊಬ್ಬರಿಗೆ ಆರೋಪಿಸಿಕೊಂಡು ತಮಾಷೆ ಮಾಡಿಕೊಳ್ಳುತ್ತಿದ್ದೆವು ಮತ್ತು ಇದೆಲ್ಲಾ ಆ ನಟ ನಟಿಯರಿಗೆ ಗೊತ್ತಾಗದಂತೆ ಒಳಗೊಳಗೇ ಮಾತಾಡಿಕೊಳ್ಳುತ್ತಿದ್ದೆವು.
ಇಂತಹ ಕ್ಷಣಗಳು ನಮ್ಮಲ್ಲಿ ಅನೇಕರನ್ನು ಸೆಳೆಯುತ್ತಿತ್ತು. ಅವರಂತೆ ನಾವೂ ರಂಂಗದ ಮೇಲೆ ಬರಬೇಕು ಅನ್ನೋ ಆಸೆ ಹುಟ್ಟಿಸುತ್ತಿತ್ತು.
ಆಗ, ತಂಡದಲ್ಲಿ ಬರುತ್ತಿದ್ದ ನಟರು ತಮ್ಮ ಕೆಲಸದಲ್ಲಿ ಬಹಳ ಪ್ರೊಫ಼ೆಶನಲ್ ಆಗಿರುತ್ತಿದ್ದರು. ನಮ್ಮೂರಿನಲ್ಲಿ ಹೊಟೆಲ್‌ಗಳನ್ನು ಬುಕ್ ಮಾಡಿ ಉಳಿಸುವ ವ್ಯವಸ್ಥೆ ಹಾಗೂ ಹಣ ಎರಡೂ ಇರುತ್ತಿರಲಿಲ್ಲ. ಬಂದ ನಟರು ಇದ್ದ ವ್ಯವಸ್ಥೆಗೇ ಹೊಂದಿಕೊಂಡು ನಮ್ಮ ತಂಡದವರ ಜತೆ ಬಹಳ ಸ್ನೇಹ ವಿಶ್ವಾಸದಿಂದ ಇರುತ್ತಿದ್ದರು. ಎರಡು ಮೂರು ವರ್ಷ ತಿರುಗಾಟ ಮಾಡುತ್ತಿದ್ದ ಕಲಾವಿದರಿಗೆ ನಾವು – ನಮಗೆ ಅವರು ಹಳಬರಾಗುತ್ತಿದ್ದೆವು. ಹೀಗೆ ನಾಟಕ ನೆಪದಲ್ಲಿ ಒಂದು ಊರಿನಿಂದ ಒಂದು ಊರಿಗೆ ಸಂಬಂಧ ಸೃಷ್ಟಿಯಾಗುತ್ತಿತ್ತು. ಬೇರೆ ಯಾವುದೋ ಊರಿನಿಂದ ಪ್ರಯಾಣ ಮಾಡಿ ಬಂದ ನಟ ನಟಿಯರು ರಂಗದ ಮೇಲೆ ಅಭಿನಯ ಮಾಡುವಾಗ ಗಂಧರ್ವರಂತೆ ಅನಿಸುತ್ತಿತ್ತು. ಇವರೇನಾ ಅವರು ಅನ್ನುವಷ್ಟು ಆಶ್ಚರ್ಯವಾಗುತ್ತಿತ್ತು. ನಾಟಕ ಮುಗಿದ ಮೇಲೆ ಅವರನ್ನು ಮಾತನಾಡಿಸಲು ಮುಜುಗರ. ಅವರನ್ನು ನಟರಾಗಿ ನೋಡಬೇಕೋ ಪಾತ್ರವಾಗಿ ನೋಡಬೇಕೊ! ಮತ್ತೆ ಈ ಲೋಕಕ್ಕೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತಿತ್ತು. ಮೊದಲನೇ ನಾಟಕ ಮುಗಿದು ಮಾರನೆಯ ದಿನ ಆ ನಟನಟಿಯರೊಂದಿಗೆ ನಾವು ಊರಿನ ರಸ್ತೆಗಳಲ್ಲಿ ಓಡಾಡುತ್ತಿದ್ದರೆ ಅವರ ಜತೆ ಊರಿನ ಜನ ನಮ್ಮನ್ನೂ ಅಭಿಮಾನದಿಂದ ನೋಡುತ್ತಿದ್ದರು. ನಮಗೆ ಅವರೊಂದಿಗೆ ಓಡಾಡುವುದಕ್ಕೆ ಹೆಮ್ಮೆಯೋ ಹೆಮ್ಮೆ. ಕೆಲಸ ಇರಲಿ ಇಲ್ಲದಿರಲಿ ಮನೆಯಿಂದ ರಂಗಮಂದಿರ -ರಂಗಮಂದಿರದಿಂಗ ಮನೆಗೆ ಅದೆಷ್ಟು ಸಲ ಓಡಾಡುತ್ತಿದೆವೋ!
ನಾಟಕೋತ್ಸವ ಮುಗಿದು ಅವರೆಲ್ಲ ಹೊರಟುಹೋದ ಮೇಲೆ ಮತ್ತೆ ನಮ್ಮ ದಿನಚರಿಗೆ ಹೊಂದಿಕೊಳ್ಳುವುದಕ್ಕೆ ಬಹಳ ಸಂಕಟವಾಗುತ್ತಿತ್ತು. ಕಿಂದರಿಜೋಗಿಯ ಕುಂಟನಂತೆ ‘ಅಯ್ಯೋ ಹೋಯಿತೆ ಆ ನಾಕ, ಅಯ್ಯೋ ಬಂದಿತೆ ಈ ಲೋಕʼ ಎನ್ನುವ ಭಾವನೆ ಬರುತ್ತಿತ್ತು. ಈಗಿನಷ್ಟು ನಾಟಕ ಪ್ರಯೋಗಗಳು ನೋಡಲು ಸಿಗುತ್ತಿರಲಿಲ್ಲವಾದ್ದರಿಂದ ನೀನಾಸಮ್ ತಿರುಗಾಟವನ್ನು ನಾವು ಕರೆಸಿದಷ್ಟು ವರ್ಷಗಳೂ ನಾಟಕ ಮಾಡಬೇಕು ಅನ್ನೋ ಆಸೆ ಹೆಚ್ಚಾಗುತ್ತಿತ್ತು. ತಿರುಗಾಟವು ನಾಟಕದ ಅನುಭವದ ಜತೆಗೆ ನಾಟಕದ ಬಗ್ಗೆ ಪ್ರೀತಿಯನ್ನು ಬಿಟ್ಟು ಹೋಗುತ್ತಿತ್ತು.
ನಾಟಕ ಕರೆಸಿ ನಾಟಕ ನೋಡುವುದಕ್ಕಿಂತಲೂ ನಮ್ಮನ್ನು ಹೆಚ್ಚು ಸೆಳೆಯುತ್ತಿದ್ದುದು ಅದರ ತಯಾರಿಯ ದಿನಗಳು. ಒಟ್ಟಿಗೆ ಕೆಲಸ ಮಾಡುವ ಖುಶಿ. ಏನೋ ದೊಡ್ಡದನ್ನು ನಾವೆಲ್ಲಾ ಒಟ್ಟಿಗೆ ಸೇರಿ ಮಾಡುತ್ತಿದ್ದೇವೆ ಎಂಬ ಭಾವನೆ. ನಾವು – ನಾನು, ನನ್ನ, ನಮ್ಮ ಮನೆಯ ಮಾಲೀಕರ ಮಗ ಅಜಿತ್ (ಅವರು ಸಾಣೆಹಳ್ಳಿ ಯ ರಂಗಶಾಲೆಯ ಪದವೀಧರ) ಚಿಕ್ಕವರಾಗಿದ್ದಾಗ ಯಾವ ಪಾತ್ರವೂ ಇಲ್ಲದಿದ್ದರೂ ಕುಳಿತು ತಾಲೀಮು ನೋಡುತ್ತಿದ್ದೆವು. ನಿರ್ದೇಶಕರು ನಟರ ಮೇಲೆ ರೇಗಾಡಿದಾಗ ಅವರನ್ನು ಆಡಿಕೊಂಡು ನಗುತ್ತಿದ್ದೆವು. ನಮಗೆ ನಾಟಕ ಅನ್ನುವುದು ನಿಜವಾದ ಅರ್ಥದಲ್ಲಿ ‘ಆಟʼ ವೇ ಆಗಿತ್ತು. ನಮಗೆ ಪಾತ್ರವೇ ಇರುತ್ತಿರಲಿಲ್ಲವಾದ್ದರಿಂದ ಸ್ವಾರ್ಥವೂ ಇರುತ್ತಿರಲಿಲ್ಲ.

ಇತ್ತೀಚೆಗೆ ನಮ್ಮ ತಂಡದಲ್ಲಿ ನಾಟಕಕ್ಕೆ ಸಂಬಂಧಿಸಿ ದ ಕೆಲಸಗಳನ್ನು ಹೇಳಿದಾಗ, ಸಣ್ಣ ಹುಡುಗರು “ಇದು ತಮ್ಮ ಕೆಲಸವಲ್ಲ” ಎನ್ನುವ ಅಭಿಪ್ರಾಯ ತೋರುತ್ತಾರೆ. ನಾಟಕ ಎನ್ನುವುದು ಕೇವಲ ರಂಗದ ಮೇಲೆ ಮಾಡುವ ಅಭಿನಯ, ಅದು ಮಾತ್ರ ಮುಖ್ಯ ಎನ್ನುವ ಭಾವನೆ ಹಲವರಲ್ಲಿರುತ್ತದೆ. ಆದರೆ ನಮ್ಮನ್ನು ಇಷ್ಟು ವರ್ಷ ಈ ನಾಟಕ, ರಂಗಭೂಮಿ ಗಟ್ಟಿಯಾಗಿ ಹಿಡಿದಿಟ್ಟುಕೊಂಡಿರುವುದು ನಾವೆಲ್ಲಾ ಸ್ವಾರ್ಥವಿಲ್ಲದೇ ಒಟ್ಟಿಗೆ ಸೇರಿ ಮಾಡಿದ ಕೆಲಸಗಳ ಮುಖಾಂತರವೇ ಹೊರತು ಕೇವಲ ನಾಟಕದಲ್ಲಿ ಮಾಡಿದ ಅಭಿನಯ ಮತ್ತು ಚಪ್ಪಾಳೆಗಳ ಮೂಲಕವಲ್ಲ.

ಚಿತ್ರಾ ವೆಂಕಟರಾಜು, ಚಾಮರಾಜನಗರದವರು. ನಟಿ. ಕಳೆದ ೧೮ ವರ್ಷಗಳಿಂದ ಸರ್ಕಾರಿ ಪ್ರೌಢಶಾಲೆಯಲ್ಲಿ ರಂಗಶಿಕ್ಷಣ ದ ಶಿಕ್ಷಕಿಯಾಗಿಕೆಲಸ ನಿರ್ವಹಿಸುತ್ತಿದ್ದಾರೆ. ನೀನಾಸಮ್ ರಂಗಶಿಕ್ಷಣ ಕೇಂದ್ರದಿಂದ ರಂಗಶಿಕ್ಷಣ ದಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ. ಚಾಮರಾಜನಗರದ ‘ಶಾಂತಲಾ ಕಲಾವಿದರುʼ ತಂಡದಲ್ಲಿ ರಂಗಭೂಮಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಕಲಾಶಿಕ್ಷಣ, ಸಾಹಿತ್ಯ, ಸಂಗೀತ, ನೃತ್ಯ, ಸಿನೆಮಾದಲ್ಲಿ ಆಸಕ್ತಿ. ಇವರು ಅಭಿನಯಿಸಿದ ಅಮೃತಾ ಪ್ರೀತಂ ಅವರ ಬದುಕನ್ನು ಆಧರಿಸಿದ ಏಕವ್ಯಕ್ತಿ ರಂಗಪ್ರಯೋಗ “ಮೈ ತೆನ್ನು ಫಿರ್ ಮಿಲಾಂಗಿ” ಹಲವಾರು ಪ್ರದರ್ಶನಗಳನ್ನು ಕಂಡಿದೆ.
