ಕರ್ನಾಟಕದಲ್ಲಿ ಕಲಿಯುವ ಮಕ್ಕಳ ಜೊತೆ ಒಂದು ಭಾವನಾತ್ಮಕ ಸಂಬಂಧವನ್ನು ಕಟ್ಟಿಕೊಳ್ಳುವುದಕ್ಕೆ ನನ್ನ ಕನ್ನಡ ಇನ್ನಿಲ್ಲದಂತೆ ಸಹಾಯ ಮಾಡಿದೆ. ಕೆಲವೊಮ್ಮೆ ಪರಿಕಲ್ಪನೆಗಳನ್ನ ಅರ್ಥಮಾಡಿಸುವಾಗ ಬಳಸಿಕೊಳ್ಳುತ್ತಿದ್ದ ದಿನನಿತ್ಯದ ಉದಾಹರಣೆಗಳಿಗೆ ಮತ್ತು ಹಾಸ್ಯಕ್ಕೆ ಕನ್ನಡವೇ ಜೀವವಾಗಿರುತ್ತಿತ್ತು. ಅದನ್ನೇ ಇಂಗ್ಲೀಷಿನಲ್ಲಿ ಹೇಳಿದ್ದಿದ್ದರೆ ಮಕ್ಕಳು ನಗುವುದಿರಲಿ, ನನಗೇ ಅಳು ಬರುತ್ತಿತ್ತೋ ಏನೋ. ಆದರೂ ಹೊರನಾಡಿನಿಂದ ಬಂದಿದ್ದ ಕೆಲವು ಮಕ್ಕಳಿಗೆ ಇಂಗ್ಲೀಷಿನಲ್ಲೂ ಹೇಳುವ ಪ್ರಯತ್ನ ಮಾಡುತ್ತಿದ್ದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಹನ್ನೊಂದನೆಯ ಬರಹ
ವೃತ್ತಿಯಲ್ಲಿ ಇಂಗ್ಲಿಷ್ ಅಧ್ಯಾಪಕಿಯಾಗಿದ್ದ ಮತ್ತು ಪ್ರವೃತ್ತಿಯಲ್ಲಿ (ಕನ್ನಡ) ಬರೆಯುವ ಮತ್ತು ಅನು-ವಾದಿಸುವ ನನ್ನನ್ನು ‘ನೀವು ಇಂಗ್ಲೀಷಾ? ಕನ್ನಡ ಅಂತ ಅಂದುಕೊಂಡೆವೆ!’ ಎಂದು ಹಲವಾರು ಮಂದಿ ಕೇಳಿರುವುದು ಆಶ್ಚರ್ಯದಿಂದಲೊ ಮೆಚ್ಚಿಗೆಯಿಂದಲೊ ಅರ್ಥವಾಗಿಲ್ಲ. ಒಮ್ಮೆ ಪ್ರತಿಷ್ಟಿತ ವ್ಯಕ್ತಿಯ ಬಿಳಿ-ಹೆಂಡತಿಯನ್ನು ಭೇಟಿಯಾದಾಗ ಆಕೆ ಯಾವುದರಲ್ಲಿ ಎಂ ಎ ಮಾಡಿದ್ದೀರಿ ಎಂದು ಲೋಕಾಭಿರಾಮ ಕೇಳಿದ್ದರು. ನಾನೂ ಅಷ್ಟೇ ಆರಾಮವಾಗಿ ‘ಸಾಹಿತ್ಯದಲ್ಲಿ’ ಅಂದೆ. ಪರಿಚಯಿಸಿದ ಐಐಎಂ ಪ್ರೊಫೆಸರು, ‘ನೋಡಿ, ಸಾಹಿತ್ಯ ಅಂತ ಮಾತ್ರ ಎಂದು ಹೇಳಿದರೆ “ಇಂಗ್ಲಿಷ್ ಸಾಹಿತ್ಯ” ಅಂತಲೇ ಅರ್ಥ. ಇದೂ ಒಂದು ರೀತಿಯ ಧಿಮಾಕು,’ ಎಂದು ಹಾಸ್ಯದಲ್ಲಿ ನಕ್ಕಿದ್ದರು. ಅದು ನನ್ನನ್ನ ಯೋಚನೆಗೆ ಹಚ್ಚಿತ್ತು.
ಹೊರಗೆ ಬಂದ ಮೇಲೆ, ‘ಇಲ್ಲ ಸರ್, ನಾನು ಕನ್ನಡ ಸಾಹಿತ್ಯದಲ್ಲಿ ಎಂ ಎ ಮಾಡಿದ್ದರೂ ಸಹ ಹಾಗೇ ಹೇಳಿರುತ್ತಿದ್ದೆ. ಯಾಕೆಂದರೆ ಸಾಹಿತ್ಯದ ವಿದ್ಯಾರ್ಥಿಗಳು ಒಂದೇ ಭಾಷೆಯ ಸಾಹಿತ್ಯವನ್ನು ಓದಿಕೊಂಡಿರಲು ಸಾಧ್ಯವೇ ಇಲ್ಲ,’ ಎಂದು ಸ್ಪಷ್ಟಪಡಿಸಿದ್ದೆ. ಅದೂ ಭಾರತದಂತಹ ಅದ್ಭುತ ಭಾಷಾ ಬಹುಳತೆ ಇರುವ ದೇಶದಲ್ಲಿ!
ನಿಜ ಹೇಳಬೇಕೆಂದರೆ ನಾನು ಇಂಗ್ಲಿಷ್ ಸಾಹಿತ್ಯದತ್ತ ಆಕರ್ಷಿತಳಾಗಿದ್ದು ಕನ್ನಡ ಸಾಹಿತ್ಯ ಓದುವ ಹುಚ್ಚಿದ್ದ ಕಾರಣದಿಂದಲೇ. ಚಿಕ್ಕಂದಿನಲ್ಲಿ ತ್ರಿವೇಣಿ, ಆರ್ಯಾಂಬಾ ಪಟ್ಟಾಭಿಯರ ಕಾದಂಬರಿಗಳಿಂದ ಪ್ರಾರಂಭವಾದ ಓದಿನ ಹುಚ್ಚು ಪುರುಷೋತ್ತಮನ ಸಾಹಸಗಳು ಪತ್ತೆದಾರಿಗೂ ದಾಟಿಕೊಂಡು ನಂತರ ಶಿವರಾಮ ಕಾರಂತ, ಭೈರಪ್ಪ, ಲಂಕೇಶ, ಕುವೆಂಪು, ಬೇಂದ್ರೆ, ಅಡಿಗರನ್ನು ತಲುಪಿತ್ತು.
ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಮಾಡಲು ಅಂಕಗಳು ಸಾಲದೆ ಇದ್ದಾಗ ಕನ್ನಡ ಇಂಗ್ಲಿಷ್ ಎರಡಕ್ಕೂ ಅರ್ಜಿ ಸಲ್ಲಿಸಿದ್ದೆ. ಮೊದಲ ಪಟ್ಟಿಯಲ್ಲಿ ಕನ್ನಡಕ್ಕೆ ಸಿಕ್ಕಿತ್ತು. ಮೂರನೆಯ ಪಟ್ಟಿಯಲ್ಲಿ ಇಂಗ್ಲೀಷಿಗೆ ಸಿಕ್ಕಿತು. ಹೊಟ್ಟೆಪಾಡಿನ ಸಲುವಾಗಿ ಸಹ ಎರಡನೆಯದನ್ನು ಆಯ್ದುಕೊಂಡು ಜೈ ಎಂದಿದ್ದೆ, ಅಷ್ಟೇ. ಜೊತೆಜೊತೆಯಲ್ಲಿ ಕನ್ನಡ ಸಾಹಿತ್ಯವನ್ನು ಓದಿಕೊಳ್ಳುವ, ಬರೆಯುವ ಅಭ್ಯಾಸ ಮಾತ್ರ ಮುಂದುವರಿದೇ ಇತ್ತು. ಇದು ಬಹುಭಾಷಿಕ ಕನ್ನಡ ನೆಲೆಯಲ್ಲಿ ನನ್ನ ಪ್ರಜ್ಞೆ ರೂಪುಗೊಂಡ ಹಾದಿಯತ್ತ ಹೊರಳಿ ನೋಡುವ ಪ್ರಯತ್ನ.
ಅದಕ್ಕೂ ಮುಂಚೆ, ಕನ್ನಡ ಸಾಹಿತ್ಯಲೋಕದ ಬಹುಭಾಷಿಕತೆಯ ಬಗ್ಗೆ ಕೆಲವು ಅಂಶಗಳನ್ನು ಗಮನಿಸಬಹುದು.
- ಗಿರೀಶ್ ಕಾರ್ನಾಡರೂ ಸೇರಿದಂತೆ, ಮೂವರು ಜ್ಞಾನಪೀಠ ಪುರಸ್ಕೃತರ ಮನೆಮಾತು ಕನ್ನಡವಾಗಿರಲಿಲ್ಲ.
- ರಾಷ್ಟ್ರಕವಿ ಗೋವಿಂದ ಪೈ ತಮ್ಮ ಪ್ರಜ್ಞೆಯನ್ನು ರೂಪಿಸಿದ ಕೊಂಕಣಿತಾಯಿ, ತುಳುತಾಯಿ, ಮತ್ತು ಕನ್ನಡತಾಯಿಯರಿಗೆ ನಮಿಸುತ್ತಾರೆ.
- ಜ್ಞಾನಪೀಠ ಪುರಸ್ಕೃತ ಬೇಂದ್ರೆಯವರು ಮರಾಠಿ ಭಕ್ತಿ ಸಂಪ್ರದಾಯದಿಂದ ಆಳವಾಗಿ ಪ್ರಭಾವಿತರಾಗಿದ್ದರು. ಅನಂತಮೂರ್ತಿಯವರು ಬೇಂದ್ರೆಯವರ ಮನೆಯೊಳಗೆ ಕನ್ನಡ ಮರಾಠಿಗಳ ನಡುವೆ ಗೊತ್ತೇ ಆಗದಂತೆ ಅಲ್ಲಿಂದಿಲ್ಲಿಗೆ ಜಾರಿಕೊಳ್ಳುತ್ತಿದ್ದ ರೀತಿಗೆ ಒಂದು ಕಡೆ ಅಚ್ಚರಿಯನ್ನು ವ್ಯಕ್ತಪಡಿಸಿದ್ದರು.
- ಮೊದಲ ಜ್ಞಾನಪೀಠ ಪುರಸ್ಕೃತ ಕುವೆಂಪು ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿ ಇಂಗ್ಲೀಷಿನಲ್ಲಿ ಸಾಕಷ್ಟು ಪದ್ಯ, ಪ್ರಬಂಧಗಳನ್ನು ಬರೆದಿದ್ದರು.
- ಎ. ಕೆ. ರಾಮಾನುಜನ್ ತಮ್ಮ ‘ಬಹು-ಮಾತು’ ಹಿನ್ನೆಲೆ ತಮ್ಮ ಸಾಹಿತ್ಯವನ್ನು ಹೇಗೆ ಪ್ರಭಾವಿಸಿದೆ ಎನ್ನುವುದರ ಬಗ್ಗೆ ಬರೆಯುತ್ತಾರೆ. ಮೈಸೂರಿನಲ್ಲಿ ಬೆಳೆದ ರಾಮಾನುಜನ್ನರ ಬೀದಿ-ಮಾತು ಕನ್ನಡ, ಮನೆಯೊಳಗಿನ ಅಡುಗೆಮನೆ-ಮಾತು ತಮಿಳು, ಮತ್ತು ಉಪ್ಪರಿಗೆ—ಮಾತು ಇಂಗ್ಲಿಷ್! ಕನ್ನಡದ ವಚನಗಳನ್ನು ಮತ್ತು ತಮಿಳಿನ ಸಂಗಮ್ ಸಾಹಿತ್ಯವನ್ನು ಇಂಗ್ಲಿಷಿಗೆ ಅನುವಾದಿಸಿರುವ ರಾಮಾನುಜನ್ನರ ಅದ್ಭುತ ಪ್ರತಿಭೆಯನ್ನು ಹೆಚ್ಚು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಲು ಅವರ ಸಂಶೋಧನಾ ಸಾಹಿತ್ಯದತ್ತ ಒಮ್ಮೆ ಕಣ್ಣು ಹಾಯಿಸಿದರೆ ಸೂಕ್ತ.
ಅಂದರೆ ಈ ಪೀಠಿಕೆಯ ಅರ್ಥ ಇಷ್ಟೇ. ಆಧುನಿಕ ಭಾರತೀಯ ಸಾಹಿತ್ಯದ ಲೋಕದಲ್ಲಿ ಏಕಭಾಷೆ ಎನ್ನುವುದು ಸಾಧ್ಯವೇ ಇಲ್ಲ. ಭಾಷಿಕ ಮತ್ತು ಸಾಂಸ್ಕೃತಿಕ ಅಂತರ್-ಪರಾಗಸ್ಪರ್ಶ ಅಲ್ಲಿ ಅನಿವಾರ್ಯ.
ರಾಮಚಂದ್ರ ಗುಹಾ ತಮ್ಮ The Rise and Fall of Bilingual Intellectuals ಎಂಬ ದೀರ್ಘ ಪ್ರಬಂಧದಲ್ಲಿ 1920-70ರ ನಡುವಿನ ಅರೆ ಶತಮಾನವನ್ನು ‘ಭಾಷಾ-ಕೌಶಲ್ಯದ ಕಾಲ’ ಎಂದು ಗುರುತಿಸುತ್ತಾರೆ. ನಂತರದ ಭಾಷಾ-ತಬ್ಬಲಿ ಕಾಲಕ್ಕೆ ಅದು ವಿರೋಧದಂತೆ ಕಾಣಿಸಿದರೆ ಆಶ್ಚರ್ಯವೇನೂ ಇಲ್ಲ. ಕೆಲವು ಅಪವಾದಗಳನ್ನು ಹೊರತುಪಡಿಸಿ ಆ ಕಾಲದ ರಾಜಕೀಯ ಮುತ್ಸದ್ಧಿಗಳು, ವಿದ್ವಾಂಸರು, ಮತ್ತು ಸೃಜಶೀಲ ಬರಹಗಾರರೆಲ್ಲ ಇಂಗ್ಲೀಷಿನಲ್ಲಿ ಮತ್ತು ಕಮ್ಮಿ ಎಂದರೆ ಒಂದಾದರೂ ಭಾರತೀಯ ಭಾಷೆಯ ನೆಲೆಗಳಲ್ಲಿ ನಿರಾಳವಾಗಿದ್ದದ್ದು ಕಾಣಿಸುತ್ತದೆ.
ಗುಹಾ ಆ ದಶಕಗಳ ಹೆಚ್ಚಿನ ಸೃಷ್ಟಿಶೀಲ ಬರಹಗಾರರು ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಅಂಶದತ್ತಲೂ ಗಮನ ಸೆಳೆಯುತ್ತಾರೆ. ಹರೀಶ್ ತ್ರಿವೇದಿ ಪಟ್ಟಿ ಹಾಕುವಂತೆ ಕನ್ನಡದ ಗೋಪಾಲಕೃಷ್ಣ ಅಡಿಗ, ಅನಂತಮೂರ್ತಿ; ಹಿಂದಿಯ ಹರಿವಂಶರಾಯ್ ಬಚ್ಚನ್ (ಅಮಿತಾಭರ ತಂದೆ) ಮತ್ತು ನಿರ್ಮಲ್ ವರ್ಮಾ; ಮತ್ತು ಉರ್ದುವಿನ ಗೋರಖಪುರಿ ಅವರಲ್ಲಿ ಕೆಲವು ಹೆಸರುಗಳು. ಗುಹಾರ ಪ್ರಕಾರ ಬಹು-ಭಾಷಿಕತೆ ಎನ್ನುವುದು ಕೇವಲ ಭಾಷೆಗೆ ಸಂಬಂಧಪಟ್ಟ ವಿದ್ಯಮಾನವಲ್ಲ. ಅದು ಗ್ರಹಿಸುವ, ಸ್ಪಂದಿಸುವ ಮತ್ತು ಅಭಿವ್ಯಕ್ತಿಸುವ ನೆಲೆಗಳಲ್ಲಿ ಇರುವ ಬಹು-ತನವೂ ಹೌದು.
ಆ ನಂತರದಲ್ಲಿ ಏನಾಯ್ತು? ಹಲವಾರು ಸಾಮಾಜಿಕ ಮತ್ತು ರಾಜಕೀಯ ಕಾರಣಗಳಿಗೆ ಬರಹಗಾರರು ತಮ್ಮನ್ನು ಒಂದೇ ಭಾಷೆಗೆ ಸೀಮಿತಪಡಿಸಿಕೊಂಡರು. ಒಂದೋ ಇಂಗ್ಲಿಷಿಗೆ ಅಥವಾ ತಮ್ಮ ಮನೆಮಾತಿಗೆ. ಹೀಗೆ ‘ಬಹು-ತನ’ದಿಂದ ಏಕಕ್ಕೆ ಹೊರಳಿಕೊಂಡ ಸಮಾಜಶಾಸ್ತ್ರೀಯ ಅಧ್ಯಯನದ ವ್ಯಾಪ್ತಿ ಈ ಲೇಖನವನ್ನೂ ಮೀರಿದ್ದು.

ನಾನು, ದುಭಾಷಿ
ಅರವತ್ತರ ದಶಕದಲ್ಲಿ ಹುಟ್ಟಿದ ನಾನು ಅನಿವಾರ್ಯವಾಗಿ ಒಬ್ಬ ದುಭಾಷಿ. ಮನೆಮಾತು ಕನ್ನಡವಾಗಿ, ಶೈಕ್ಷಣಿಕ ಅರ್ಹತೆ, ಮತ್ತು ವೃತ್ತಿ ಇಂಗ್ಲೀಷಾಗಿ, ಬರಹ ಆತ್ಮಕತೆಯಾದಾಗ ಕನ್ನಡಕ್ಕೇ ಹೊರಳಿಕೊಳ್ಳುವ ಅನಿವಾರ್ಯಕ್ಕೆ ಪಕ್ಕಾಗಿ, ಸಂಶೋಧನೆಯಲ್ಲಿ ಮತ್ತು ಭಾಷಾಂತರದಲ್ಲಿ ಎರಡೂ ಲೋಕಗಳ ನಡುವೆ ಓಡಾಡುವ ಅನುಭವಕ್ಕೆ ತೆರೆದುಕೊಂಡು, ಬದುಕು ಸಾಗಿ ಬಂದಿದೆ. ಅಷ್ಟೇ ಅಲ್ಲ, ಒಬ್ಬ ಹೆಣ್ಣಾಗಿ (ಯಾಕೆಂದರೆ ಭಾಷೆ ತನ್ನ ಬುಡಮಟ್ಟದಲ್ಲೇ ಪುರುಷಾಧಿಕಾರವನ್ನು ಮೈಗೂಡಿಸಿಕೊಂಡಿದೆ) ಭಾಷೆಯ ಜೊತೆಯೇ ದಿನನಿತ್ಯದ ಬದುಕಿನಲ್ಲಿ ಗುದ್ದಾಡಬೇಕಾದ ಕರ್ಮಕ್ಕೂ ಸಿಕ್ಕಿದವಳು.
ಭಾಷೆಯ ಒಂದು ನಿಲುವಿನ ಪ್ರಕಾರ ಹುಟ್ಟಿನಿಂದಲೇ ಜೊತೆಯಾಗಿ ಬರೋ ಭಾಷೆ ಅಂದ್ರೆ ಮನೆಮಾತು ಒಂದು ವಿಶಿಷ್ಟ ಪ್ರಜ್ಞೆಯನ್ನ ರೂಪಿಸುತ್ತೆ. ಹಾಗಾಗಿ ನನ್ನದು ಕನ್ನಡ ಪ್ರಜ್ಞೆ. ಕನಾರಳ್ಳಿ ಕುಟುಂಬದ ಕನ್ನಡ ನನಗೆ ಕ್ರಮೇಣವಾಗಿ ಕನಾರಳ್ಳಿಯಲ್ಲಿರೋ ಎಲ್ಲ ಸಾಮಾಜಿಕ ಮತ್ತು ಕೌಟುಂಬಿಕ ತಾರತಮ್ಯಗಳ ಪರಿಚಯ ಮಾಡಿಸ್ತಾ ಬೆಳೆಸ್ತು ಅಂತ ಅನ್ನಿಸುತ್ತೆ. ಅಪ್ಪನ feudal ಕನ್ನಡ, ಕಾಫಿತೋಟ ಮತ್ತೆ ಗದ್ದೆ ಕೆಲಸಕ್ಕೆ ಬರ್ತಾ ಇದ್ದಿದ್ದ ಆಳುಗಳ ಕೊಡವ ಮಿಶ್ರಿತ ಕನ್ನಡ, ದೊಡ್ಡ ಕುಟುಂಬದ ಹೊಣೆ ಹೊತ್ತಿದ್ದ ಅಮ್ಮನ ಯಜಮಾನಿ ಕನ್ನಡ, ಅಕ್ಕಂದಿರ ಮೆತ್ತಗಿನ ಕನ್ನಡ ಮತ್ತು ಅಣ್ಣಂದಿರ ಸ್ವಲ್ಪ ಜೋರಾದ ಕನ್ನಡ, ಜೊತೆಗೆ ದಿನಕ್ಕೆ ಹತ್ತಾರು ರೊಟ್ಟಿಗಳನ್ನ ತಟ್ಟಲೆಂದೇ ಬರುತ್ತಿದ್ದ ಹಿರಿ ಹೆಂಗಸರ ಕನ್ನಡ, ಹೀಗೇ ಹಲವಾರು ಕನ್ನಡಗಳು ನನ್ನ ಪ್ರಜ್ಞೆಯನ್ನ ನಿಧಾನವಾಗಿ ಬೆಳೆಸುತ್ತಿದ್ದವು. ಕೆಲವೊಮ್ಮೆ ಈ ಪಟ್ಟಿಯ ಕನ್ನಡಗಳು ನಿಜವಾಗಿ ಕನ್ನಡವೇ ಎಂಬುವಷ್ಟು ಬೇರೆಯಾಗಿರುತ್ತಿದ್ದವು. ಆದರೆ ಗ್ರಹಿಕೆಗೆ ಅದು ಒಂದು ಸಮಸ್ಯೆಯೇ ಆಗಿರಲಿಲ್ಲ.
ಇದೆಲ್ಲ ಶಾಲೆಗೆ ಹೋಗೋದಕ್ಕೆ ಮುಂಚೆ. ನನ್ನ ತಲೆಮಾರಿನವರಿಗೆ ಮೊದಲ ಬಾರಿಗೆ ಶಾಲೆಗೆ ಹೋದಾಗ ಸಿಗುತ್ತಿದ್ದದ್ದು ಎರಡೇ ಪುಸ್ತಕಗಳು. ಒಂದು, ಕನ್ನಡ ಸಚಿತ್ರ ಅಕ್ಷರ ಮಾಲಿಕೆ; ಅ ಅರಸ, ಆ ಆನೆ, ಇ, ಇಲಿ, ಈ ಈಶ್ವರ ಇತ್ಯಾದಿ. ಅದು ನಿಧಾನವಾಗಿ ಸಣ್ಣ ಸಣ್ಣ ಪದ್ಯಗಳನ್ನ ಕೊಡೋದಕ್ಕೆ ಆರಂಭಿಸಿದಾಗ ದಿನವಿಡೀ ಅದನ್ನೇ ಗುನುಗ್ತಾ ಗೊಣಗ್ತಾ ಇರ್ತಿದ್ದೆನಂತೆ. ಪ್ರತಿಯೊಂದು ಭಾಷೆಗೂ ಒಂದು ರೀತಿಯ ಸಂಗೀತ ಇರುತ್ತಂತೆ. ನನಗೆ ಶಿಷ್ಟ ಕನ್ನಡದ ಸಂಗೀತದ ಪರಿಚಯ ಆಗಿದ್ದು ಈ ಪದ್ಯಗಳ ಮೂಲಕವೇ.
ಇನ್ನೊಂದು ಮಗ್ಗಿ ಪುಸ್ತಕ. ಇವತ್ತಿಗೂ ನನಗೆ ಕೂಡಿಸಲು, ಕಳೆಯಲು, ಗುಣಿಸಲು ಮತ್ತು ಭಾಗಿಸಲು ಸಾಧ್ಯವಾಗುವುದು ಕನ್ನಡದಲ್ಲೇ. ಆದರೆ ಮಗ್ಗಿಗೂ ಒಂದು ಸಂಗೀತ ಇತ್ತಲ್ಲ. ಒಂಭೊಂಭೋತ್ಲ ಎಂಭತ್ತೊಂದು ಅಂತ ರಾಗವಾಗಿ ಹೇಳೋದು ಲೆಕ್ಕಕ್ಕಿಂತ ಭಾಷೆಯ ಸಂಗೀತವೇ. ಆ ರಾಗದಲ್ಲಿ ಇಂಗ್ಲೀಷ್ ಟೇಬಲ್ಸನ್ನ ಹೇಳೋದಕ್ಕೆ ಬರೋಲ್ಲ. ಕುವೆಂಪು ಇಂಗ್ಲೀಷಿನ ಮಾಸ್ಟರ್ ಅನ್ನೋ ಪದ ಕನ್ನಡದಲ್ಲಿ ಮೇಷ್ಟ್ರು ಅಂತಾನೇ ಆಗುತ್ತೇ ಹೊರತು ಇನ್ನೇನೂ ಆಗೋದಕ್ಕೆ ಸಾಧ್ಯ ಇಲ್ಲ ಅಂತ ಹೇಳಿದ್ದನ್ನ ಅರ್ಥ ಮಾಡ್ಕೊಂಡಿದ್ದು ನನ್ನ ಮಗ್ಗಿ ಸಂಗೀತದ ನೆನಪಿನ ಮೂಲಕವೇ.
ಜೊತೆಗೆ ಮನೆಗೆ ಬಂದು ಬೀಳುತ್ತಿದ್ದ ಸುಧಾ, ಪ್ರಜಾಮತ ಮತ್ತು ಪಕ್ಕದ ಮನೆಯವರು ತರಿಸುತ್ತಿದ್ದ ಮಯೂರ ಕಸ್ತೂರಿಗಳು ನನ್ನ ಕನ್ನಡ ಲೋಕವನ್ನು ವಿಸ್ತರಿಸಿದ್ದವು. ಪ್ರಜಾಮತದಲ್ಲಿ ಇರುತ್ತಿದ್ದ ‘ಗುಪ್ತಸಮಾಲೋಚನೆ’ಯನ್ನೂ ಸಹ ಮಹಾ ಮುಗ್ಧತನದಲ್ಲಿ ಜಂಭದಿಂದ ಜೋರಾಗಿ ಓದುತ್ತಿದ್ದಾಗ ಆ ಅಣ್ಣನೆಂಬ ಖಳನಾಯಕ ಬಂದು ಫಳೀರನೆ ಕೆನ್ನೆಗೆ ಹೊಡೆದಿದ್ದು ಇವತ್ತಿಗೂ ಕಾಡುವ ಒಂದು ದುಃಸ್ವಪ್ನ!
ಐದನೇ ಕ್ಲಾಸಿನಲ್ಲಿ ಎಬಿಸಿಡಿ ಕಲಿಯೋ ತನಕ ನನಗೆ ಕನ್ನಡ ಪದ್ಯ ಮತ್ತೆ ಕನ್ನಡ ಮಗ್ಗಿ ಒಂದು ರೀತಿಯ ಗೀಳಾಗಿತ್ತು. ನಂತರ ನಾನು ಇಂಗ್ಲಿಷ್ ಕಲಿತಿದ್ದು ಅಥವಾ ನನ್ನ ಕನ್ನಡ ಕಲಿಕೆ ಇನ್ನಷ್ಟು ಚುರುಕಾಗಿದ್ದು ಭಾಷಾಂತರ ಎಂಬ ಪ್ರಕ್ರಿಯೆಯ ಮೂಲಕ. ಆಗ ಅದು ತಿಳಿದಿರಲಿಲ್ಲ ಎನ್ನುವುದು ಬೇರೆ ವಿಷಯ.
ಕನ್ನಡ ಸಾಕೇ? ಸಂಸ್ಕೃತ ಬೇಕೇ?
ಯಾರೋ ಮಹಾಶಯ ನಾನು ಚಿಕ್ಕವಳಿದ್ದಾಗ ಢಣಾ ಢಣ್ ಅಂತ ಭಗವದ್ಗೀತೆಯ ಭಾಗವನ್ನು ಉದ್ಧರಿಸಿದಾಗ ಆ ಠೀವಿಗೋ ಏನೊ, ನಾನೂ ಸಂಸ್ಕೃತವನ್ನು ಕಲಿಯಬೇಕು ಅಂತ ಅಂದುಕೊಂಡಿದ್ದಂತೂ ಹೌದು.
ಎಂಟನೆಯ ತರಗತಿಗೆ ಬರುವವರೆಗೂ ನಮಗೆ ಸ್ಕೂಲಿನಲ್ಲಿ ಮೊದಲ ಭಾಷೆಯಾಗಿ ಕನ್ನಡ ಮಾತ್ರ ಇತ್ತು. ಹೈಸ್ಕೂಲಿನಲ್ಲಿ ಬುದ್ಧಿವಂತರ ಕಣ್ಣೆಲ್ಲ ಸ್ಟೇಟ್-ರ್ಯಾಂಕನ್ನು ಗಳಿಸುವ ಕಡೆ ಇದ್ದರಿಂದ, ಸುಲಭವಾಗಿ ಅಂಕ ಗಳಿಸುವ ಸಲುವಾಗಿ ಸಂಸ್ಕೃತ ಆಯ್ದುಕೊಂಡಿದ್ದರು.
ಮತ್ತೆ ನಾನು?
ಒಮ್ಮೆ ಎರಡೂ ಪಠ್ಯಪುಸ್ತಕಗಳ ಕಡೆ ಕಣ್ಣು ಹಾಯಿಸಿದೆ.
ಒಂದರಲ್ಲಿ ಅರ್ಥವೇ ಆಗದ ಉದ್ದುದ್ದ ಪದಗಳಿದ್ದರೆ ಇನ್ನೊಂದರಲ್ಲಿ ಮೈಮರೆಸುವ ಪದ್ಯಗಳಿದ್ದವು. ಕನ್ನಡವೆನೆ ಕುಣಿದಾಡುವುದೆನ್ನೆದೆ … ಕುಣಿಯೋಣು ಬಾರ, ಕುಣಿಯೋಣು ಬಾ… ಇಂದು ಕೆಂದಾವರೆಯು ನಳನಳಿಸಿ ದಾರಿಯಲಿ …
ಮಾರ್ಕ್ಸ್ ಮನೆ ಹಾಳಾಗ! ಓದಿದರೆ ಕನ್ನಡವೇ ಅಂತ ಶಪಥ ಮಾಡಿದೆ. ಸಂಸ್ಕೃತ ಮೂಲೆ ಸೇರಿತು. ಮೂರು ವರ್ಷ ಕನ್ನಡ ಭಾಷೆಯ ಸಂಗೀತವನ್ನು ಆಸ್ವಾದಿಸುತ್ತಾ ಮಜವಾಗಿ ಕಳೆದೆ. ಅದೊಂದು ರೀತಿಯ ಕನ್ನಡ-ಹನಿಮೂನು!
ಕಡೆಂಗೋಡ್ಲು ಶಂಕರಭಟ್ಟರ ಈ ಪದ್ಯವನ್ನು ಕೇಳ ಕೇಳುತ್ತಲೇ ಊಹಿಸಿಕೊಳ್ಳುವ ಭರದಲ್ಲಿ ಕಣ್ಣುಪಾಪೆಗಳು ಮೇಲೆ ಹೋಗಿದ್ದವು. ಪಶ್ಚಿಮ ಕರಾವಳಿಯನ್ನು ನೋಡುವ ಆಸೆ ಚಿಗುರೊಡೆದಿತ್ತು.
ಪಡುವಣ ಕಡಲಿನ ತೆಂಗಿನ ಮಡಲಿನ
ಮರೆಯಲಿ ಮೆರೆವುದು ನಾಡೊಂದು
ಸೃಷ್ಟಿಯ ಮಾತೆಯ ಮೀಸಲು ಸೊಬಗಿನ
ಹೊದಿಕೆಯ ಹೊದ್ದಿಹ ಬೀಡೊಂದು!
ಹಾಗೆಯೇ ನಾನು ಹುಟ್ಟಿ ಬೆಳೆದಿದ್ದ ಕೊಡಗು ಕಾವ್ಯದಲ್ಲಿ ಮೈದಳೆದಾಗ ದಿವ್ಯವನ್ನೇ ಕಣ್ಣೆದುರು ಕಂಡಂತೆನ್ನಿಸಿತ್ತು:
ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಭಿಮ್ಮನೆ ಬಂದಳೋ?
ಎಲ್ಲಿ ಮೋಹನ ಗಿರಿಯ ಬೆಡಗಿನ ರೂಪಿನಿಂದಲಿ ನಿಂದಳೋ?
ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ?
ಎಲ್ಲಿ ನೆಲವನು ತಣಿಸಿ, ಜನಮನ ಹೊಲದ ಕಳೆ ಕಳೆ ಕಳೆವಳೋ?
ಆ ಎಳೆಯ ವಯಸ್ಸಿನಲ್ಲಿ ಬದುಕು-ಸಾವುಗಳ ಬಗ್ಗೆ ಯೋಚಿಸುವಂತೆ ಮಾಡಿದ್ದು ದಿನಕರ ದೇಸಾಯಿಯವರ ಪದ್ಯ!
ನನ್ನ ದೇಹದ ಬೂದಿ-ಗಾಳಿಯಲಿ ತೂರಿ ಬಿಡಿ
ಹೋಗಿ ಬೀಳಲಿ ಬತ್ತ ಬೆಳೆಯುವಲ್ಲಿ.
ಬೂದಿ-ಗೊಬ್ಬರದಿಂದ ತೆನೆಯೊಂದು ನೆಗೆದು ಬರೆ
ಧನ್ಯವಾಯಿತು ಹುಟ್ಟು ಸಾವಿನಲ್ಲಿ.
ಇಷ್ಟಾದರೂ ಅಂಕಗಳನ್ನು ಪಡೆಯಲೆಂದೇ ಸಂಸ್ಕೃತವನ್ನು ಆರಿಸಿಕೊಂಡಿದ್ದ ಬುದ್ದಿವಂತ ವಿದ್ಯಾರ್ಥಿಗಳಿಗಿಂತ ಹತ್ತನೆಯ ತರಗತಿಯ ರಾಜ್ಯಮಟ್ಟದ ಪರೀಕ್ಷೆಯಲ್ಲಿ ನಮ್ಮ ಶಾಲೆಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದು ಒಂದು ದೊಡ್ಡ ಸುದ್ದಿಯಾಗಿತ್ತು. ಅಲ್ಲಿಯತನಕ ಕನ್ನಡದಲ್ಲಿ ಯಾರೂ ಅಷ್ಟು ಪಡೆದಿರಲಿಲ್ಲವಂತೆ! ಎಮ್ ಎ ಮುಗಿಸುವ ಹೊತ್ತಿಗೆ ಭಾಷಾ ರಾಜಕೀಯದಲ್ಲಿದ್ದ ಜಾತಿಯ ಆಯಾಮ ಅಲ್ಪಸ್ವಲ್ಪ ಅರ್ಥವಾಗಿತ್ತು. ಜೊತೆಗೆ ಸೆಮಿನಾರುಗಳಲ್ಲಿ ಪಾಂಡಿತ್ಯ ಪ್ರದರ್ಶನಕ್ಕೆಂದೇ ಸಂಸ್ಕೃತ ಬಳಸುವ ಖದೀಮರಿಗೇನೂ ಕೊರತೆ ಇರಲಿಲ್ಲ. ‘ಭಗವದ್ಗೀತೆಯಲ್ಲಿ ಕೃಷ್ಣ ಹೇಳ್ತಾನೆ … ’ ಅಂತ ಯಾರಾದರೂ ಶುರು ಮಾಡಿದರೆ ಅಲ್ಲಿಂದ ಕಾಲು ಕೀಳುತ್ತಿದ್ದೆ. ಇನ್ನೂ ಕೊರೆಯಹತ್ತಿದರೆ ಎಂಥ ಖೂಳನೂ ಸ್ವಸಮರ್ಥನೆಗೆ ಧರ್ಮಶಾಸ್ತ್ರಗಳನ್ನ ಬಳಸಿಕೊಳ್ಳಬಲ್ಲ ಎಂದ ಶೇಕ್ಸ್ಪಿಯರನನ್ನು ಕೋಟಿಸಿ (quote) ಬಾಯಿ ಮುಚ್ಚಿಸುತ್ತಿದ್ದೆ. ಸಂಸ್ಕೃತ ಕಲಿಯಬೇಕೆಂಬ ಕೀರಲು ದನಿಯೂ ಅಲ್ಲಿಗೆ ಸ್ತಬ್ಧವಾಯಿತು. ವೇದ, ಸಂಸ್ಕೃತ ಇತ್ಯಾದಿಗಳು ಒಂದು ಜಾತಿಯ ಕೈಲಿ ಸಾಂಸ್ಕೃತಿಕ ಆಯುಧವಾಗಿ ಬದಲಾಗಿದ್ದರಿಂದ ನಾನೊಬ್ಬಳು ಅ-ವೇದ, ಅ-ಸಂಸ್ಕೃತ ಹೆಣ್ಣೇ ಎಂದು ಶಪಥ ಮಾಡಿದೆ. ನನಗೆ ಕ್ರಿಶ್ಚಿಯನ್ ಸ್ಕೂಲಿನ ಸಿಸ್ಟರಿಣಿಯರು ಪ್ರೀತಿಯಿಂದ ಇಂಗ್ಲೀಷ್ ಕಲಿಸಿದ್ದರು. ತಪ್ಪಾಗಿ ಮಾತಾಡಿದಾಗಲೂ ‘ನಾಲಿಗೆ ಹೇಗೆ ತಾನೆ ಹೊರಳಬೇಕು ಶೂದ್ರಮುಂಡೆದಕ್ಕೆ?’ ಎಂದು ಹೀಯಾಳಿಸಿರಲಿಲ್ಲ. ಹೀಗೆ ಹೃದಯದ ಭಾಷೆ ಕನ್ನಡವಾಗಿ ಬುದ್ಧಿಯ ಭಾಷೆ ಇಂಗ್ಲೀಷಾಯಿತು. ಮತ್ತೇನೂ ಬೇಕೆನಿಸಲಿಲ್ಲ.
ಪರ–ನಾಲಿಗೆಯ ಕಲಿಸುವಾಗ
ಕೆಲಸವೇನೋ ಸಿಕ್ಕಿತು. ಯಾವುದೋ ಮೂಲೆಯ ಪ್ರಿಯೂನಿವರ್ಸಿಟಿ ಕಾಲೇಜಿನಲ್ಲಿ ಇಂಗ್ಲೀಷ್ ಪಾಠ ಹೇಳೋದಕ್ಕೆ ಸ್ವಲ್ಪ ಕಷ್ಟ ಅಂತ ಸಹ ಅನ್ನಿಸಲು ಸುರುವಾಗಿತ್ತು. ಕನ್ನಡ ಮಾಧ್ಯಮದ ಮಕ್ಕಳಿಗೆ ನನ್ನ ಎರಡೂ ಭಾಷೆಯಲ್ಲಿನ ಪರಿಜ್ಞಾನವನ್ನ ಉಪಯೋಗಿಸಿಕೊಂಡು ಇಂಗ್ಲೀಷ್ ಕಲಿಸುತ್ತೇನೆ ಅಂತೇನೋ ಅಂದುಕೊಂಡಿದ್ದೆನಲ್ಲ? ಅದು ಅಷ್ಟು ಸುಲಭವಲ್ಲ ಅಂತ ಗೊತ್ತಾಗೋದಕ್ಕೆ ತುಂಬ ಕಾಲ ಹಿಡಿಯಲಿಲ್ಲ. ಕಾರಣ ಇಷ್ಟೇ: ಯಾವುದೇ ಒಂದು ಭಾಷೆಯಲ್ಲಿ ನಿಜವಾದ ಆಸಕ್ತಿ ಇದ್ದರೆ ಇನ್ನೊಂದು ಭಾಷೆಯನ್ನು ಕಲಿಸುವುದು ಸುಲಭ. ಆದರೆ ಮನೆಮಾತು ಕನ್ನಡವಾಗಿದ್ದ ಮಾತ್ರಕ್ಕೆ ಮಕ್ಕಳಿಗೆ ಶಾಲೆಯಲ್ಲಿ ಕಲಿಯಬೇಕಾಗಿದ್ದ ಕನ್ನಡದಲ್ಲಿ ಆಸಕ್ತಿ ಇತ್ತು ಅಂತೇನಲ್ಲ. ಯಾವುದೇ ಭಾಷೆಯನ್ನ ಶಾಸ್ತ್ರೀಯವಾಗಿ ಕಲಿಯುವ ಅಥವಾ ಸಾಹಿತ್ಯವನ್ನು ಓದುವ ಆಸಕ್ತಿ ಇದ್ದವರು ತುಂಬ ಕಮ್ಮಿ. ಹಾಗಾಗಿ ಅವರಿಗೆ ಸರಿಯಾಗಿ ಕನ್ನಡವೂ ಬರಲಿಲ್ಲ, ಇಂಗ್ಲೀಷ್ ಅಂತೂ ದೂರದಿಂದಲೇ ಹಾರಿಹೋಯ್ತು. ಒಮ್ಮೆ ನನ್ನ ವಿದ್ಯಾರ್ಥಿನಿಯೊಬ್ಬಳು ಇಂಗ್ಲೀಷಿನಲ್ಲಿ ಪಾಸಾಗದ್ದಕ್ಕೆ ನನ್ನ ಹತ್ತಿರ ಬಂದು ‘ಮೇಡಂ, ನಾನು ಕನ್ನಡ ಮೀಡಿಯಂ ಹುಡುಗಿ’ ಅಂತ ಸಬೂಬು ಹೇಳಲು ಪ್ರಯತ್ನಿಸಿದಾಗ ‘ಹೌದಾ ಮರಿ? ನಿನಗೆ ಕನ್ನಡದಲ್ಲಿ ಎಷ್ಟು ಮಾರ್ಕ್ಸ್ ಬಂದಿದೆ?’ ಅಂತ ಕೇಳಿದ್ದಕ್ಕೆ ಪೆಚ್ಚಾಗಿ ‘ಮೂವತ್ತೊಂಬತ್ತು’ ಎಂದು ಹಿಂಜರಿಕೆಯ ಧ್ವನಿಯಲ್ಲಿ ಹೇಳಿದ್ದು ನೆನಪಿದೆ.
ಅಂಕಗಳ ವಿಷಯ ಹೋಗಲಿ. ಬೆಂಗಳೂರಿಗೆ ಬಂದ ಮೇಲೆ ನಾನು ಇಂಗ್ಲೀಷ್ ಭಾಷೆಯನ್ನ ಕಲಿಸುವುದಕ್ಕೆ ಅಲ್ಲದಿದ್ದರೂ ಸಹ ಇಂಗ್ಲೀಷ್ ಪಠ್ಯದಲ್ಲಿದ್ದ ಕೆಲವು ಪರಿಕಲ್ಪನೆಗಳನ್ನ ಅರ್ಥ ಮಾಡಿಸುವುದಕ್ಕೆ ಕನ್ನಡದ ಬಳಕೆ ತುಂಬ ಉಪಯೋಗಕ್ಕೆ ಬಂದಿದ್ದಿದೆ. ಅಷ್ಟೇ ಅಲ್ಲ, ಕರ್ನಾಟಕದಲ್ಲಿ ಕಲಿಯುವ ಮಕ್ಕಳ ಜೊತೆ ಒಂದು ಭಾವನಾತ್ಮಕ ಸಂಬಂಧವನ್ನು ಕಟ್ಟಿಕೊಳ್ಳುವುದಕ್ಕೆ ನನ್ನ ಕನ್ನಡ ಇನ್ನಿಲ್ಲದಂತೆ ಸಹಾಯ ಮಾಡಿದೆ. ಕೆಲವೊಮ್ಮೆ ಪರಿಕಲ್ಪನೆಗಳನ್ನ ಅರ್ಥಮಾಡಿಸುವಾಗ ಬಳಸಿಕೊಳ್ಳುತ್ತಿದ್ದ ದಿನನಿತ್ಯದ ಉದಾಹರಣೆಗಳಿಗೆ ಮತ್ತು ಹಾಸ್ಯಕ್ಕೆ ಕನ್ನಡವೇ ಜೀವವಾಗಿರುತ್ತಿತ್ತು. ಅದನ್ನೇ ಇಂಗ್ಲೀಷಿನಲ್ಲಿ ಹೇಳಿದ್ದಿದ್ದರೆ ಮಕ್ಕಳು ನಗುವುದಿರಲಿ, ನನಗೇ ಅಳು ಬರುತ್ತಿತ್ತೋ ಏನೋ. ಆದರೂ ಹೊರನಾಡಿನಿಂದ ಬಂದಿದ್ದ ಕೆಲವು ಮಕ್ಕಳಿಗೆ ಇಂಗ್ಲೀಷಿನಲ್ಲೂ ಹೇಳುವ ಪ್ರಯತ್ನ ಮಾಡುತ್ತಿದ್ದೆ. ಇಂಗ್ಲೀಷ್ ಮಾಧ್ಯಮದಲ್ಲೇ ಓದಿದ ಕೆಲವು ಕನ್ನಡದ ಮಕ್ಕಳೇ ‘She is an English teacher, why is she using Kannada yaa?’ ಎಂದು ಮೊದಮೊದಲು ಗೊಣಗಿದರೂ ಕ್ರಮೇಣ ಸುತ್ತಮುತ್ತಲ ಬದುಕಿಗೆ ಸಂಬಂಧವೇ ಇಲ್ಲದಂತೆ ಭಾಷೆಯನ್ನು ಕಲಿಯುವುದು ಅಥವಾ ಕಲಿಸುವುದು ಅಸಾಧ್ಯ ಎಂಬ ನನ್ನ ವಾದ ಅರ್ಥವಾದವರಂತೆ ಹಾಯಾಗಿ ಕೂತು ಉಲ್ಲಾಸದಿಂದ ಭಾಗವಹಿಸಿದ ನೆನಪುಗಳಿವೆ. ವಿಲಿಯಂ ಬ್ಲೇಕನನ್ನ ಬೋಧಿಸುವಾಗ ಬಸವಣ್ಣನನ್ನು ಹೇಗೆ ತರದೇ ಇರಲಿ? ಸ್ತ್ರೀವಾದವನ್ನು ಪರಿಚಯಿಸುವಾಗ ಅಕ್ಕನನ್ನು ಬಿಡುವುದು ಹೇಗೆ? ಗ್ರೀಕ್ ದುರಂತ ನಾಟಕವನ್ನ ಕಾರ್ನಾಡರಿಲ್ಲದೇ ಪಾಠ ಮಾಡಿದರೆ? ಹೀಗೆ ಪಟ್ಟಿಯನ್ನು ಎಷ್ಟೂ ಬೇಕಾದರೂ ಬಳಸಬಹುದು.
ಆಫ್ರಿಕಾದ ಕೆಲವು ಮಕ್ಕಳು ಡಿಗ್ರಿ ಮುಗಿಸಿ ಹೋಗುವಾಗ, ‘ನಾವಿಲ್ಲಿ ಬಂದಿದ್ದು ಬರೀ ಇಂಗ್ಲೀಷ್ ಕಲಿಯಲು ಮಾತ್ರ ಅಲ್ಲ. ಇಲ್ಲಿಯ ಭಾಷೆಯ ಸಂಗೀತವನ್ನೂ ಕೇಳಬೇಕಿತ್ತು. ಕ್ಲಾಸಿನೊಳಗೆ ನೀವು ಅದನ್ನ ನಮಗೆ ಪರಿಚಯಿಸುತ್ತಿದ್ದ ಪ್ರಯತ್ನಗಳಿಗೆ ತುಂಬ ಥ್ಯಾಂಕ್ಸ್!’ ಎಂದು ತಬ್ಬಿ ಮುತ್ತಿಟ್ಟು ಹೇಳಿದ್ದರು. ಭಾಷೆ ಅಂದರೆ ಸಂಗೀತ ಎನ್ನುವ ಪರಿಕಲ್ಪನೆ ಬಹುಶಃ ಆಫ್ರಿಕನ್ನರಿಗೆ ಚೆನ್ನಾಗಿ ಅರ್ಥವಾಗುತ್ತೋ ಏನೋ!
ಪರದೇಶಿ–ಆದಾಗ
ಇರಲಿ, ನನ್ನ ಕನ್ನಡ ನಾನು ಪರದೇಶವಾಸಿಯಾದಾಗ ಬೇರೆಯದೇ ಆದ ರೂಪಗಳನ್ನ ಪಡೆದುಕೊಳ್ಳೋದಿಕ್ಕೆ ಪ್ರಾರಂಭಿಸಿತು. ಆಗ ನನಗೆ ಹೊಳೆದಿದ್ದು: ರಾಷ್ಟ್ರ ಎನ್ನುವ ಪರಿಕಲ್ಪನೆ ಸ್ವಲ್ಪ ಮಟ್ಟಿಗಾದರೂ ದೂರವೇ ಉಳಿಯಬಲ್ಲದು ಅದಕ್ಕೇ ಬೆನೆಡಿಕ್ಟ್ ಆಂಡರ್ಸನ್ ಹೇಳುವಂತೆ ರಾಷ್ಟ್ರ ಎನ್ನುವುದು ಒಂದು ಕಲ್ಪಿತ ಸಮುದಾಯ. ಕನ್ಫ್ಯೂಷಿಯಸ್ ಇನ್ನಷ್ಟು ಸ್ಪಷ್ಟವಾಗಿ ಬಾಲ್ಯದಲ್ಲಿ ತಿಂದ ಆಹಾರದ ಬಗ್ಗೆ ಇರುವ ಮೋಹವೇ ದೇಶಭಕ್ತಿ ಅಂತಾನೆ.
ಹಾಗೆ ನೋಡಿದರೆ ನಾನು ಎಲ್ಲಿದ್ದೆನೋ ಆ ದೇಶದಲ್ಲಿ ನೆಮ್ಮದಿಯಾಗಿಯೇ ಇದ್ದೆ. ಅಂದರೆ ಸುರಕ್ಷೆಯ ನೆಲೆಯಲ್ಲಿ ಆರಾಮವೆನ್ನಿಸಿತ್ತು. ಹಾಗಾಗಿ ಭಾರತ ದೇಶ ನನ್ನನ್ನ ಕಾಡಲಿಲ್ಲ. ಆದರೆ ತುಂಬ ಕಾಡಿದ್ದು ಕನ್ನಡ ಮಾತ್ರ. ಇಲ್ಲಿದ್ದಾಗ ಹಲವಾರು ತರದ ಕನ್ನಡ ದಿನನಿತ್ಯ ನನ್ನ ಕಿವಿಗೆ ಬೀಳ್ತಾ ಇತ್ತಲ್ಲ, ನನ್ನ ಅಮ್ಮ ಮತ್ತು ಅಜ್ಜಿಯರ ಕನಾರಳ್ಳಿ ಕನ್ನಡ, ಆಚೆ ಪಕ್ಕದ ಮನೆಯವರ ಕರಾವಳಿ ಕನ್ನಡ, ಈಚೆ ಪಕ್ಕದ ಮನೆಯವರ ತಮಿಳ್ಗನ್ನಡ, ಧಮಕಿ ಹಾಕುವನಂತೆ ತರಕಾರಿ ಮಾರಲು ಬರುತ್ತಿದ್ದವನ ಕಿರಿಚು ಕನ್ನಡ, ಮನೆಗೆಲಸಕ್ಕೆ ಬರುತ್ತಿದ್ದ ಮಾದಮ್ಮನ ಕನ್ನಡ ಇತ್ಯಾದಿಗಳು ನಿದ್ದೆ ಎಚ್ಚರಗಳಲ್ಲಿ ಕಾಡಹತ್ತಿದ್ದವು. ಆ ದಿನಗಳಲ್ಲಿ ಕೇವಲ ಓದಿನಿಂದಲೇ ಪಡೆದುಕೊಳ್ಳಬೇಕಾಗಿದ್ದ ನನ್ನ ಕನ್ನಡ ನಲುಗಿದ್ದು ಹೀಗೆ.
ಇಪ್ಪತ್ತನೆಯ ಶತಮಾನವನ್ನು ಭಾಷೆಯ ಯುಗ ಎಂದು ಗುರುತಿಸುತ್ತಾರೆ. ಯಾಕೆಂದರೆ ಭಾಷೆಯ ಬಗ್ಗೆ ಹಲವಾರು ಚಿಂತನೆಗಳು ಮತ್ತು ಜಿಜ್ಞಾಸೆಗಳು ನಡೆದಿದ್ದು ಈ ಶತಮಾನದಲ್ಲೇ. ಈ ಭಾಷೆಯ ಬಗೆಗಿನ ಚಿಂತನೆಗಳು ಅತ್ಯಂತ ಮಹತ್ವವೆನ್ನಿಸುವ ರೀತಿಯಲ್ಲಿ ಉಳಿದ ಚಿಂತನಾಧಾರೆಗಳನ್ನ ಪ್ರಭಾವಿಸಿವೆ. ಕೆಲಸಕ್ಕೆ ಸೇರಿದ ಮೇಲೆ ಮಾಡಲು ಹೋದ ನನ್ನ ಎಮ್ ಫಿಲ್ ಅಧ್ಯಯನದಲ್ಲಿ ನಾನು ಇವೆಲ್ಲ ಚಿಂತನಾಕ್ರಮಗಳಿಗೆ ಎದುರಾಗಿದ್ದೆ. ಅವೆಲ್ಲ ಹೆಚ್ಚಿನ ಮಟ್ಟಿಗೆ ನನಗೆ ಸ್ಪಷ್ಟವಾಗಿ ಅರ್ಥ ಆಗಿದ್ದು ನಾನು ಅನುವಾದ ಮಾಡೋದಕ್ಕೆ ಪ್ರಾರಂಭಿಸಿದಾಗ.
ಭಾಷೆ ಮತ್ತು ಜೆಂಡರ್
ನನಗೆ ತುಂಬ ಆಸಕ್ತಿಯನ್ನ ಹುಟ್ಟಿಸುವ ಒಂದು ವಿಷಯ, ಭಾಷೆ ಮತ್ತು ಜೆಂಡರ್. ಜೆಂಡರ್ ಎಂದರೆ ಲಿಂಗಗಳ ನಡುವೆ ಸಾಮಾಜಿಕ ಬದುಕಿನಲ್ಲಿ ಇರುವ ತರತಮ. ಪ್ರಖ್ಯಾತ ಸ್ತ್ರೀಸಂವೇದನಾ ಪರ ಆಫ್ರೋ-ಅಮೆರಿಕನ್ ಚಿಂತಕಿ ಬೆಲ್ ಹುಕ್ಸ್ ಹೇಳೋ ಹಾಗೆ ಹೆಣ್ಣಿಗೆ ಭಾಷೆ ಸಹ ಒಂದು ಹೋರಾಟದ ನೆಲೆಯೇ. ಯಾಕೇ ಅಂದ್ರೆ ಭಾಷೆ ಸಮಾಜದಲ್ಲಿರೋ ಎಲ್ಲ ಮೌಲ್ಯಗಳ ಮೊತ್ತ ರೂಪವಾದ್ದರಿಂದ ಅದು ಎಲ್ಲಾ ಸಾಮಾಜಿಕ ತಾರತಮ್ಯಗಳನ್ನ ಪ್ರತಿನಿಧಿಸ್ತಾ ಇರುತ್ತೆ.
ತುಂಬ ಮೇಲ್ಪದರದ ಮಟ್ಟಿಗೆ, ಸಮಸ್ತರನ್ನೂ ಪ್ರತಿನಿಧಿಸೋದಕ್ಕೆ ಪುಲ್ಲಿಂಗಗಳಾದ ಒಬ್ಬ, ಮನುಷ್ಯಕುಲ, ಪ್ರತಿಯೊಬ್ಬ, ಅಂಚೆಯವ, ಇತ್ಯಾದಿಗಳನ್ನ ಬಳಸ್ತೀವಿ. ಶಿಷ್ಟ ಲೋಕದಲ್ಲಿ ಅಥವಾ politically correct ಆಗಿ ಮಾತನಾಡಬೇಕು ಅನ್ನೋ ಕಾಳಜಿ ಇರೋವರು ಮಾತ್ರ ಅವನು/ಅವಳು ಇತ್ಯಾದಿಗಳನ್ನ ಬಳಸ್ತಾರೆ.
ಆದ್ರೆ ಈ ಬಿಡಿ ಬಿಡಿ ಪದಗಳ ಉದಾಹರಣೆಯನ್ನ ಬಿಟ್ಟು, ಸ್ವಲ್ಪ ಹರವಾದ ವಿಷಯಗಳನ್ನ ಗಮನಿಸಬಹುದು. ಉದಾಹರಣೆಗೆ ಹೆಣ್ಣನ್ನ ವರ್ಣಿಸೋದಿಕ್ಕೆ, ಅವಳ ಯೋಗ್ಯತೆಯನ್ನ ಅಳೆಯೋದಕ್ಕೆ, ಹೆಂಗಸರಿಗೆ ಶಿಫಾರಸ್ಸು ಪತ್ರ ಕೋಡೋವಾಗ, ಹೆಣ್ಣು-ವಿಶಿಷ್ಟ ಉದ್ಯೋಗಗಳಿಗೆ ಕೊಡುವ ಜಾಹೀರಾತಿನಲ್ಲಿ, ಅಷ್ಟೇ ಏಕೆ, ಹೆಂಗಸರಿಗೆ ಶ್ರದ್ಧಾಂಜಲಿ ಸಲ್ಲಿಸುವಾಗ ಸಹ ಉಪಯೋಗಿಸಲ್ಪಡುವ ಪದಗಳೇ ಬೇರೆ.
ಕೆಲವು ಅಂಶಗಳನ್ನ ಇಲ್ಲಿ ಪಟ್ಟಿ ಮಾಡಬಹುದು ಅಂತನ್ನಿಸುತ್ತೆ:
- ಒಂದು ಸಂಶೋಧನೆಯ ಪ್ರಕಾರ ವಿಶ್ವವಿದ್ಯಾಲಯಗಳಲ್ಲಿ ಪ್ರೊಫೆಸರ್ರುಗಳ ಹುದ್ದೆಗೆ ಸಂಬಂಧಪಟ್ಟ ಹಾಗೆ ಹೆಂಗಸರು ತರುವ ಶಿಫಾರಸ್ಸು ಪತ್ರಗಳು ಉದ್ಯೋಗನ ಗಿಟ್ಟಿಸಿಕೊಳ್ಳೋದು ಕಮ್ಮಿ. ಅಕಡೆಮಿಕ್ ನೆಲೆಯಲ್ಲಿ ಅಂತಹ ಶಿಫಾರಸ್ಸುಗಳಿಗೆ ಸಾಕಷ್ಟು ದಮ್ ಇಲ್ಲ ಎನ್ನುವ ನಿಲುವು ಇದೆ.
- ಮತ್ತೆ ಕೆಲವು ಹುದ್ದೆಗಳಿಗೆ ಸಂಬಂಧಪಟ್ಟ ಜಾಹೀರಾತುಗಳು ಹೇಗಿರ್ತಾವೆ ಅಂದರೆ ಅದನ್ನು ಓದಿದ ಹೆಂಗಸರು ಅರ್ಜಿ ಹಾಕೋದಕ್ಕೇ ಹೋಗೋಲ್ಲ. ವಿಚಿತ್ರ ಏನು ಅಂದರೆ ಆ ಭಾಷೆಯ ಕಾರಣವಾಗಿಯೇ ನಾವು ಅರ್ಜಿ ಹಾಕಲಿಲ್ಲ ಎನ್ನುವುದನ್ನ ಹೆಣ್ಣು ಅಭ್ಯರ್ಥಿಗಳೂ ಒಪ್ಪಿಕೊಳ್ಳೊಲ್ಲ. ಅಷ್ಟರ ಮಟ್ಟಿಗೆ ಭಾಷಾ ರಾಜಕೀಯ ನಮ್ಮ ಕಣ್ಣಿಗೆ ಕಾಣದ ಹಾಗೆ ಬುದ್ಧಿಗೆ ನಿಲುಕದ ಹಾಗೆ ಇರುತ್ತೆ.
- ಇದು ಬಿಡಿ ಬಿಡಿ ಪದಗಳ ಪ್ರಶ್ನೆ ಅಷ್ಟೇ ಅಲ್ಲ, ಭಾಷೆಯಲ್ಲಿ ಬಳಕೆಯಲ್ಲಿರುವ ಕೆಲವು ಒಟ್ಟು ಪರಿಕಲ್ಪನೆಗಳೂ ಸಹ ಎಷ್ಟರಮಟ್ಟಿಗೆ ಸ್ತ್ರೀವಿರೋಧಿಯಾಗಿರ್ತಾವೆ ಅನ್ನೋದನ್ನ ಗಮನಿಸಬೇಕು. ಗಂಡಸನ್ನ ಹೊಗಳೋದಕ್ಕೆ ಹೆಚ್ಚು ಪದಗಳಿರೋ ಹಾಗೇನೇ ಹೆಂಗಸನ್ನ ಬೈಯೋದಕ್ಕೆ ಇನ್ನಷ್ಟು ಪದಗಳಿರ್ತಾವೆ. ಅದರಲ್ಲೂ ಹೆಣ್ಣಿನ ನೈತಿಕತೆಯನ್ನ ಪ್ರಶ್ನಿಸುವಾಗ ಬೈಯೋದಕ್ಕೆ ನೂರಾರು ಪದಗಳಿವೆ. ಗಂಡಿಗೆ? ಬೆಳೆಯೋವಾಗ ಭಾಷೆಯನ್ನು ಸುಪ್ತಮನಸ್ಸಿನ ಮೂಲಕ ಹೀರ್ಕೋತೀವಿ ಅಂತ ಒಂದು ವಾದವಿದೆ. ಇಷ್ಟೊಂದು ಸ್ತ್ರೀವಿರೋಧಿ ಪದಗಳನ್ನ ದಯಪಾಲಿಸೋ ಒಂದು ಭಾಷೆ ಯಾವ ರೀತಿಯ ವಿಚಾರವನ್ನ ತಲೆಯಲ್ಲಿ ಊರೋ ಹಾಗೆ ಮಾಡ್ತಾ ಇರುತ್ತೆ ಅನ್ನೋದಕ್ಕೆ ಇದೊಂದು ಸಣ್ಣ ಉದಾಹರಣೆ ಅಷ್ಟೇ.
ಈ ರೀತಿಯ ಜೆಂಡರಿಂಗ್ ಎಷ್ಟರ ಮಟ್ಟಿಗೆ ನಮ್ಮ ಯೋಚನಾಕ್ರಮಗಳನ್ನ ಪ್ರಭಾವಿಸುತ್ತಿರುತ್ತೆ ಅನ್ನೋದಕ್ಕೆ ಒಂದು ಉದಾಹರಣೆ ಕೊಡಬಹುದು. ಲೆರಾ ಬೊರೋಡಿಟ್ಸ್ಕಿ ಅನ್ನುವ ಭಾಷಾಶಾಸ್ತ್ರಜ್ಞೆ ಒಂದು ಸಲ ಸೇತುವೆ ಅನ್ನುವ ವಸ್ತುವನ್ನ ವರ್ಣಿಸಿ ಅಂತ ಜರ್ಮನ್ ಮತ್ತು ಸ್ಪ್ಯಾನಿಶ್ ಭಾಷೆಯನ್ನ ಮಾತಾಡುವವರಿಗೆ ಹೇಳ್ತಾಳೆ. ಸೇತುವೆ ಜರ್ಮನ್ ಭಾಷೆಯಲ್ಲಿ ಸ್ತ್ರೀಲಿಂಗ ಮತ್ತು ಸ್ಪ್ಯಾನಿಷ್ ಭಾಷೆಯಲ್ಲಿ ಪುಲ್ಲಿಂಗ. ಜರ್ಮನ್ನರು ಸೇತುವೆಯನ್ನ beautiful, elegant and fragile ಅಂತ ಹೇಳಿದ್ರೆ ಸ್ಪ್ಯಾನಿಷ್ಷರು towering, dangerous and strong ಅನ್ನೋ ಪದಗಳನ್ನ ಬಳಸಿ ವರ್ಣನೆಯನ್ನ ನೀಡಿರ್ತಾರೆ.
ಭಾಷೆಗಳು ಪೂರ್ತಿ ಲಿಂಗಮಯವಾಗಿ ಬಿಟ್ಟರೆ ಏನಾಗುತ್ತೆ? ಉದಾಹರಣೆಗೆ ಜರ್ಮನ್, ಸ್ಪ್ಯಾನಿಶ್, ಅಷ್ಟೇ ಏಕೆ ನಮ್ಮ ಹಿಂದಿಯೂ ಸಹ ಇತ್ಯಾದಿ. ಅಲ್ಲಿ ಮೇಜು, ಕುರ್ಚಿ ಅಂಥಾ ಜಡವಸ್ತುಗಳೂ ಸಹ gendered ಆಗಿರ್ತಾವೆ. ಒಂದು ಸಂಶೋಧನೆಯ ಪ್ರಕಾರ ಅಂತಹ ಸಮುದಾಯಗಳಲ್ಲಿ ಲಿಂಗ ತಾರತಮ್ಯ ಹೆಚ್ಚಾಗಿರುತ್ತೆ. ಉದಾಹರನೆಗೆ ಸ್ಪ್ಯಾನಿಶ್ ಮತ್ತು ಜರ್ಮನ್ ಭಾಷಾ ಸಮುದಾಯಗಳಲ್ಲಿ ಇಂಗ್ಲೀಷ್ ಭಾಷಾಸಮುದಾಯದ ಸದಸ್ಯರಿಗಿಂತ ಹೆಚ್ಚಾಗಿ ಲಿಂಗತಾರತಮ್ಯ ಮನೋಭಾವ ಎದ್ದು ಕಾಣಿಸ್ತಾ ಇರುತ್ತೆ.
ಕನ್ನಡದಲ್ಲಿ ಸಹ ಇಂಗ್ಲೀಷ್ ಭಾಷೆಯ ತರಹವೇ grammatical gender ಇದೆ. ಅಲ್ಲಿ ಮೂಲಪದ ಪುಲ್ಲಿಂಗವೇ. ಸ್ತ್ರೀರೂಪವನ್ನು ಅದರಿಂದ ಪಡೆಯಲಾಗಿದೆ. ಉದಾಹರಣೆಗೆ ಅವಳು ಅನ್ನೋದು ಅವ ಅಥವಾ ಅವನು ಶಬ್ದದ ಒಂದು ರೂಪ. ಹಾಗೆಯೇ ಸಾಹಿತಿ ಅಂದ್ರೆ ಮೇಲ್ಜಾತಿಯ ಗಂಡಸು. ಹೆಂಗಸಾಗಿದ್ರೆ ಮಹಿಳಾ-ಸಾಹಿತಿ, ದಲಿತನಾಗಿದ್ರೆ ದಲಿತ-ಸಾಹಿತಿ, ಮುಸ್ಲಿಮ್ ಆಗಿದ್ರೆ ಮುಸ್ಲಿಮ್-ಸಾಹಿತಿ, ಹೀಗೇ hyphenated identities ಮೊರೆ ಹೋಗ್ಬೇಕಾಗುತ್ತೆ.
ಆದ್ರೆ ಜೆಂಡರ್ ಅನ್ನೋದು ಈ ಪದಗಳಲ್ಲಷ್ಟೇ ಇರೋಲ್ಲ. ಅದು ಹೆಸರುಗಳಲ್ಲಿಯೂ ಇರುತ್ತೆ. ನಾನು ‘ಮನೆಕೆಲಸದ ಮಾದಮ್ಮನ ಕನ್ನಡ’ ಅಂತ ಈ ಹಿಂದೆ ಹೇಳಿದೆ. ‘ಮನೆಕೆಲಸದ ಮಧುಮೀತಾ’ ಅಂತ ಹೇಳಿದರೆ ಏನೋ ಆಭಾಸ ಅಂತ ಅನ್ನಿಸುತ್ತಲ್ಲ?
ಜಾತಿ, ಧರ್ಮ, ಕುಲ, ಜೆಂಡರ್ ಎಲ್ಲವನ್ನೂ ಒಳಗೊಳ್ಳುವ ಹೆಸರಿನ ರಾಜಕೀಯದ ಬಗ್ಗೆ ಸ್ನೇಹಿತ ಶಿವಸುಂದರ್ ಒಂದು ಘಟನೆ ಹೇಳಿದ್ದು ನೆನಪಾಗುತ್ತೆ. ಒಮ್ಮೆ Institute of Dalit Studies ನಿಂದ ಈಗ್ಗೆ ಒಂದು ಹತ್ತು ಹದಿನೈದು ವರ್ಷಗಳ ಹಿಂದೆ ಒಂದು ಪ್ರಯೋಗವನ್ನ ಮಾಡಿದ್ರಂತೆ. ಯಾವುದೋ ಉನ್ನತ ಟೆಕ್ಕಿ ಕಂಪೆನಿಗೆ ನಾಲ್ಕು ಹೆಸರುಗಳಲ್ಲಿ ಅರ್ಜಿಗಳನ್ನ ಕಳುಹಿಸಲಾಯಿತು. ಒಂದು ಮೇಲ್ಜಾತಿಯಲ್ಲಿ ಸಾಮಾನ್ಯವಾಗಿದ್ದ ಗಂಡಸಿನ ಹೆಸರು, ಇನ್ನೊಂದು ದಲಿತ ಹೆಸರು, ಮುಸ್ಲಿಮ್ ಹೆಸರು ಮತ್ತು ನಾಲ್ಕನೆಯದು ಒಬ್ಬ ಹೆಂಗಸಿನ ಹೆಸರು. ಅದರಲ್ಲಿ ವಿದ್ಯೆ ಮತ್ತು ಅನುಭವ ಕಡಿಮೆ ಇದ್ದದ್ದು ಮೇಲ್ಜಾತಿಯ ಹೆಸರಿನ ವ್ಯಕ್ತಿಗೆ. ಆದರೂ ಸಂದರ್ಶನಕ್ಕೆ ಕರೆ ಬಂದಿದ್ದು ಅವನಿಗೇ. ಅಂದರೆ ನಾವು ಬಳಸುವ ಭಾಷೆಯಲ್ಲೇ ಎಲ್ಲ ತಾರತಮ್ಯಗಳೂ ಜೀವಂತವಾಗಿರುತ್ತವೆ ಅನ್ನೋದಕ್ಕೆ ಇದೊಂದು ಸಣ್ಣ ನಿದರ್ಶನ ಅಷ್ಟೇ.
ತೋರಿಕೆಗೆ ‘ಮರ್ಯಾದಸ್ಥ’ ಅಂತನ್ನಿಸುವ ಭಾಷೆಯಲ್ಲೂ ಲಿಂಗ-ತಾರತಮ್ಯ ಜೀವಂತವಾಗಿರುತ್ತಲ್ಲ? ಅದಕ್ಕೆ ಇದಿರಾಗುವ ಬಗೆ ಹೇಗೆ? ಕೆಲವು ವರ್ಷಗಳ ಹಿಂದೆ ಜಯನಗರದ ಒಂದು ಪ್ರಸಿದ್ಧ ಹೋಟೆಲ್ಲಿಗೆ ರಾತ್ರಿ ಊಟಕ್ಕೆ ಅಂತ ಹೋದ್ವಿ. ಎಂಟೂ ಮುಕ್ಕಾಲಿಗೆ ಹೋದವರು ಹೆಸರು ಬರೆಸಿದಾಗ, ಒಂಭತ್ತೂವರೆಗೆ ಬನ್ನಿ ಅಂತ ಅಪ್ಪಣೆಯಾಯ್ತು. ಬೇರೆ ಏನೋ ಕೆಲಸವಿದ್ದರಿಂದ ಅದನ್ನು ಮುಗಿಸಿಕೊಂಡು ಒಂಭತ್ತೂವರೆ ‘ಪಂಕ್ತಿ’ಗೆ ಬಂದೆವು. ಅದೇ ಕೊನೆಯ ಪಂಕ್ತಿಯಂತೆ.
ಇರಲಿ, ಮೊದಲ ಬಾರಿಗೆ ಬಂದ ಐಟಮ್ಮುಗಳಲ್ಲಿ ಕೋಸಂಬರಿಯೂ ಒಂದು. ನನ್ನ ತಂಗಿ ಅದರ ರುಚಿ ನೋಡಿ ‘ಸ್ವಲ್ಪ ಹೋಗ್ತಾ ಇದೆ ಅನ್ನಿಸುತ್ತೆ,’ ಅಂದಳು. ಬಡಿಸುತ್ತಿದ್ದವರನ್ನು ಕರೆದು ಕೇಳಿದಾಗ, ಹಾಗಲ್ಲ, ಇನ್ನೂ ಇಲ್ಲ ಅಂತ ಏನೇನೋ ನೆಪ ಹೇಳಲು ಪ್ರಾರಂಭಿಸಿದರು. ರೇಗಿ ಮ್ಯಾನೇಜರನ್ನ ಕರೀರಿ ಅಂದೆ. ಆತ ನೀವೇ ಕೊನೆಯ ಬ್ಯಾಚು, ಹಾಗೇ ಇರುತ್ತೆ ಅಂತ ಮಹಾ ದುರಹಂಕಾರದಲ್ಲಿ ಹೇಳಿದಾಗ, ಇದೇನು ಧರ್ಮಛತ್ರವಾ, ನಮಗೇನು ಡಿಸ್ಕೌಂಟ್ ಊಟ ಕೊಡ್ತಾ ಇದೀರಾ, ಅಂತ ಚೆನ್ನಾಗಿ ತರಾಟೆಗೆ ತೆಗೆದುಕೊಂಡೆ. ಆದರೆ ನನಗೆ ಮಹಾ ಕೋಪ ಬರಿಸಿದ್ದು ಆತ ‘ಹಾಗಲ್ಲಮ್ಮ, ಹೀಗಮ್ಮ’ ಅಂತ ಹೇಳುತ್ತಿದ್ದಾಗ. ಕಣ್ಣು ದೊಡ್ಡದಾಗಿ ಬಿಡುತ್ತಾ ‘ನಾನು ಅಮ್ಮ ಅಲ್ಲ,’ ಅಂದೆ. ಆತ ಮಹಾ ಜಾಣನಂತೆ, ‘ನಾವು ಮರ್ಯಾದೆಯಿಂದ ಅಮ್ಮ ಅಂತ ಹೇಳ್ತಾ ಇದೀವಲ್ಲ?’ ಅಂದ. ಇಂಗ್ಲೀಷಿನಲ್ಲಿ ಅದಕ್ಕೆ benevolent sexism ಅಂತ ಕರೀತಾರೆ.. ‘ಹೌದಾ, ಹಾಗಾದರೆ ಇಲ್ಲಿ ನನ್ನ ಬದಲಿಗೆ ನನ್ನದೇ ವಯಸ್ಸಿನ ಗಂಡಸಿದ್ದಿದ್ದರೆ ಹಾಗಲ್ಲಪ್ಪಾ ಹೀಗಪ್ಪಾ ಅಂತ ಹೇಳಿ ಕೆನ್ನೆಗೆ ಹೊಡೆಸಿಕೊಳ್ತಿದ್ರಾ?’ ಅಂದಾಗ ಆ ವ್ಯಕ್ತಿ ತೆಪ್ಪಗಾಗಿತ್ತು. ನಂತರ ಎಲ್ಲವೂ ಫ್ರೆಶ್ಶಾಗಿ ಬಿಸಿಬಿಸಿಯಾಗಿ ಬಂದದ್ದು ಬೇರೆಯದೇ ಕತೆ.
ಇದು ಬರೀ ನನ್ನ ಕನ್ನಡಕ್ಕೆ ಸಂಬಂಧಿಸಿದ ಪ್ರಶ್ನೆ ಅಲ್ಲ. ಒಂದು ಸಲ ವೆಲ್ಲಿಂಗ್ಟನ್ನಿನಲ್ಲಿ ಏನೋ ಕೊಳ್ಳಲು ನಾನೂ ಮತ್ತು ಗೆಳತಿ ಲಿಂಡಾ ಹೋಗಿದ್ದೆವು. ಹೋಗುವಾಗಲೇ ಬಾಗಿಲಲ್ಲಿ ನನ್ನ ಅರ್ಧ ವಯಸ್ಸಿನ ಯುವಕನೊಬ್ಬ ‘hello girls! May I help you?’ ಅಂತ ಅಂದಿದ್ದನ್ನು ಕೇಳಿ ಬೆಂಕಿಯಾಗಿದ್ದೆ. ಇರಲಿ, ಇನ್ನೊಂದು ಸಲ ಇವ ಏನಾದರೂ ಹೀಗೆ ಹೇಳಲಿ, ಇದೆ ಅವನಿಗೆ ಹಬ್ಬ’ ಅಂತ ಅಂದುಕೊಂಡು ಒಳಗೆ ಹೋಗಿದ್ದೆ. ಲಿಂಡಾಳ ಹತ್ತಿರ ನನ್ನ ಅಸಮಧಾನವನ್ನ ವ್ಯಕ್ತಪಡಿಸಿದಾಗ ಅವಳಿಗೆ ಅದೇನೂ ಸಮಸ್ಯೆಯಂತೆ ಕಂಡುಬರಲಿಲ್ಲ.
ನಮಗೆ ಬೇಕಿದ್ದು ಸಿಗದೆ ವಾಪಸ್ಸು ಹೋಗುವಾಗ ಅದೇ ಯುವಕ, ‘sorry girls, we don’t seem to have what you wanted,’ ಅಂತ ಹೇಳಿದಾಗ ಮಾತ್ರ ಕೈಯಲ್ಲಿದ್ದ ಬ್ಯಾಗನ್ನು ಕೆಳಗಿಟ್ಟು ತಯಾರಾದೆ. ದಿನ ನಿತ್ಯದ ಬದುಕಿನಲ್ಲಿ ಸಿಕ್ಕವರ ಹತ್ತಿರವೆಲ್ಲಾ sexism in everyday language ಬಗ್ಗೆ ತಲೆಕೊರೆಯೋದಕ್ಕೆ ಆಗೋಲ್ಲವಲ್ಲ? ಅದಕ್ಕೇ ಸುಮ್ಮನೆ ಒಂದು ಹೋಲಿಕೆಯನ್ನ ಹಿಡಿದು ಮಾತಾಡೋದನ್ನ ಕಲಿತಿದ್ದೀನಿ. ಆ ಹೋಲಿಕೆನ ನಾನು ಬಳಸಿಕೊಳ್ಳಲೇಬೇಕಾದ್ದು ಒಂದು ರೀತಿಯಲ್ಲಿ ವ್ಯಂಗ್ಯವೂ ಹೌದು. ‘I object to your way of addressing two middle aged women as girls, I find it highly disrespectful’ ಅಂತ ಅಂದೆ. ಆತ ಅಮಾಯಕನೇ, ಪಾಪ. ಕಕ್ಕಾಬಿಕ್ಕಿಯಾಗಿಬಿಟ್ಟ. ‘Why, I just meant …. ‘ ಬ್ಬೆ ಬ್ಬೆ ಬ್ಬೆ ಅಂದ. ‘Whatever you mean, Would you address two men of our age as boys? Or would you even address two young men as boys?’ ಅಂದಾಗ ಅವನಿಗೆ ಫಕ್ಕನೆ ಹೊಳೆದಿತ್ತು. ಈಗನ್ನಿಸುತ್ತೆ, ನನಗೆ ಅದಕ್ಕಿಂತ ಬೇಸರವಾಗಿದ್ದು ಅದರ ಬಗ್ಗೆ ಲಿಂಡಾಗೆ ಏನೂ ಅನ್ನಿಸಲಿಲ್ಲವಲ್ಲ ಅಂತ. ಆಕೆ ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವೀಧರೆ ಬೇರೆ. ಅಂದರೆ ಸ್ತ್ರೀವಿರೋಧಿ ಭಾಷೆಯ ಬಳಕೆಯನ್ನ ಸ್ತ್ರೀಯರೇ ಒಪ್ಪಿಕೊಳ್ಳುವ ಹಾಗೆ ಈ ವ್ಯವಸ್ಥೆ ಮಾಡಿರುತ್ತಲ್ಲ?
‘ನಾಲಿಗೆ’ ಹೆಣ್ಣಿಗೆ ಸೇರಿದ್ದಲ್ಲ. ಆದರೂ ಹೆಂಗಸರು ಮಾತಾಳಿಗಳು!

ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕಿ, ಲೇಖಕಿ, ಮತ್ತು ಭಾಷಾಂತರಕಾರ್ತಿ. ವೈದೇಹಿ (An Afternoon with Shakuntala and Other Stories) ಮತ್ತು ಅಗ್ರಹಾರ ಕೃಷ್ಣಮೂರ್ತಿಯವರ ಕೃತಿಗಳು (Love and Water Flow Together) [(ಕುವೆಂಪು ಭಾಷಾಭಾರತಿ ಪ್ರಶಸ್ತಿ (2023) ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಅನುವಾದಿತ ಪುಸ್ತಕ ಪ್ರಶಸ್ತಿ (2023)] ಇಂಗ್ಲೀಷಿಗೆ ಅನುವಾದಿಸಲ್ಪಟ್ಟ ಕೃತಿಗಳು. ‘ಹೇಳುತೇನೆ ಕೇಳು: ಮಹಿಳೆಯರ ಆತ್ಮಕಥೆಗಳು’; ‘ಕಥೆ ಹೇಳುವೆ’; ‘ಬರ್ತಿಯಾ?… ಎಷ್ಟು?…: ಭಾರತೀಯ ಸೂಳೆಲೋಕದ ಕಥೆಗಳು’; ನಯನತಾರ ಸೆಹಗಲ್ ಅವರ ‘ಚಿಟ್ಟೆಗಳ ಪಾಡು’ ಇತ್ಯಾದಿ ಅವರ ಕನ್ನಡ ಭಾಷಾಂತರ ಕೃತಿಗಳು. ರೂಮಿಕಾವ್ಯದ ಭಾಷಾಂತರ ಕೃತಿ ‘ದಿವ್ಯದಲ್ಲಿ ಹಿಸ್ಸೆಯಿಲ್ಲ: ಕಡುಪ್ರೇಮಿಯ ಎದೆಯ ಹಾಡು’ ಬಿಡುಗಡೆಗೆ ಸಿದ್ಧವಿದೆ.
