Advertisement
ಒಂದಾದ ಮೇಲೊಂದು…: ಎಚ್. ಗೋಪಾಲಕೃಷ್ಣ ಸರಣಿ

ಒಂದಾದ ಮೇಲೊಂದು…: ಎಚ್. ಗೋಪಾಲಕೃಷ್ಣ ಸರಣಿ

ಬ್ಯಾಚುಲರ್ ಲೈಫ್‌ನ ಅಂದಿನ ನನ್ನ ರಾತ್ರಿ ಶಿಫ್ಟ್ ಕತೆ ಬೇರೆ ತೆರನಾದದ್ದು. ಒಂದು ಕಿಮೀ ಹಿಂದಿನ ಸ್ಟಾಪ್‌ನಲ್ಲಿ ಇಳಿದು ಅಲ್ಲಿ ಬಿಸಿ ಬಿಸಿ ಬಾದಾಮಿ ಹಾಲು ಎರಡು ಲೋಟ ಸುರಿದುಕೊಳ್ಳೋದು. ಅದಕ್ಕೆ ಮೊದಲು ಬನ್ನು ಚೌ ಚೌ ಬ್ರೆಡ್ ಟೋಸ್ಟ್ ಮುಕ್ಕಿ ಹೊಟ್ಟೆ ಹಗುರ ಮಾಡಿಕೊಳ್ಳುವುದು. ಆಗಿನ್ನೂ ಬ್ರೆಡ್ ಬನ್ ಒಳಗೆ ಕಾಂಗ್ರೆಸ್ ಹಾಕಿಕೊಂಡು ಆ ಅಂತ ಬಾಯಿಯನ್ನು ಹಿಪಪಾಟಮಸ್ ತರಹ ಅಗಲಿಸಿ ತಿನ್ನುವ ಕಲ್ಚರೇ ಹುಟ್ಟಿರಲಿಲ್ಲ. ನನ್ನ ರೀತಿಯ ಎಂಟು ಹತ್ತು ಸಮಾನ ಮನಸ್ಕರು ನನಗೆ ಜತೆ ಆಗ.
ಎಚ್.
ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೮೦ನೇ ಬರಹ ನಿಮ್ಮ ಓದಿಗೆ

ಎಂಬತ್ತನೇ ಎಪಿಸೋಡು ಹೀಗೆ ಮುಗಿದಿತ್ತು…

ಇಂತಹ ಹಕ್ಕೊತ್ತಾಯಗಳನ್ನು ನನ್ನ ಮೇಲೆ ಸಹಾಯ ಕೇಳಿ ಬಂದವರು ಹೇರುತ್ತಿದ್ದರು!

ಇದರ ಎಫೆಕ್ಟ್ ಹೇಗಾಯಿತು ಅಂತ ನಿಮಗೆ ಹೇಳಲೇಬೇಕು. ಈ ಪುಸ್ತಕ ಲೈಬ್ರರಿಗೆ ಸಲ್ಲಿಸುವ ವೇಳೆಗೆ ಮೊದಲ ಮುದ್ರಣದ ಪ್ರತಿಗಳು ಖರ್ಚಾಗಿದ್ದವು. ಕೋರ್ಟ್‌ಗೆ ಹೋಗಿ “ಗೆದ್ದು ಬೀಗಿದ” ಹಮ್ಮು ಬೇರೆ. ಎರಡನೇ ಮುದ್ರಣಕ್ಕೆ ಹೋದಾಗ ಉಳಿತಾಯದ ಮೊರೆ ಹೋಗಿದ್ದು ಆಯಿತು.

ಮೊದಲನೇ ಮುದ್ರಣದಲ್ಲಿನ ಲ್ಯಾಮಿನೇಷನ್ ಬೇಡ ಅಂತ ಆಯಿತು. ಪುಸ್ತಕ ಕುರಿತ ಹಾಗೆ ಗೆಳೆಯರ ಅನಿಸಿಕೆ ನಾಲ್ಕು ಪುಟದಲ್ಲಿ ಹಾಕಿದ್ದೆ. ಅದನ್ನ ಒಂದು ಪುಟಕ್ಕೆ ಇಳಿಸಿ ಪತ್ರಿಕಾ ವಿಮರ್ಶೆಯ ತುಣುಕು ಸೇರಿಸಿದೆ. ಹೀಗೆ ಮೊದಲ ಮುದ್ರಣದ ಕತೆ ಆಯ್ತಾ… ನಂತರ ನಾಲ್ಕೋ ಐದೋ ಪುಸ್ತಕ ನನ್ನ ಪ್ರಕಾಶನ ಸಂಸ್ಥೆಯಿಂದಲೇ ಆದರೂ ಅದನ್ನು ಕಾರ್ಖಾನೆಯಲ್ಲಿ ಒಂದೇ ಒಂದು ಪ್ರತಿಯನ್ನು ಸಹ ಮಾರಲಿಲ್ಲ! ಬಹುಶಃ ಅನುಭವ ಪಾಠ ಕಲಿಸಿತ್ತು!

ಪುಸ್ತಕ ಬಿಡುಗಡೆಯ ಮಾಲಾರ್ಪಣೆ ಸಂದರ್ಭದ ಗೊಂದಲಗಳು ಈಚೆಗೆ ಅಂದರೆ ನಿನ್ನೆ ಮೊನ್ನೆ ನಡೆದ ಹಾಗೆ ನೆನಪಾಗುತ್ತಿವೆ ಮತ್ತು ಒಟ್ಟಿಗೆ ತಲೆಯಲ್ಲಿ ನುಗ್ಗಿ ಟ್ರಾಫಿಕ್ ಜಾಮ್ ಮಾಡಿವೆ. ಟ್ರಾಫಿಕ್ ಪೊಲೀಸರ ಹಾಗೆ  ಟ್ರಾಫಿಕ್ ಜಾಮ್ ನಿವಾರಿಸಿ ಕತೆ ಸಲೀಸಾಗಿ ಮಂಡ್ಯದ ಕಾಲುವೆಗಳಲ್ಲಿ  ಮಳೆಗಾಲದಲ್ಲಿ ನೀರು ಹರಿದ ಹಾಗೆ ಹರಿಯಬೇಕು…..

ಇನ್ನೂ ಇದೆ…

ಇನ್ನೂ ಇದೆ ಎನ್ನುವುದು ಈಗ ಮುಂದುವರೆಸಲು ತಮ್ಮ ಅನುಮತಿ ಇದೆ ಎಂದು ಭಾವಿಸುತ್ತೇನೆ.. ಹಕ್ಕೊತ್ತಾಯದ ಕತೆ ನಂತರ ನನ್ನನ್ನು ಮುಜುಗರಕ್ಕೆ ಲೇವಡಿಗೆ ಒಳಮಾಡಿದ ಪ್ರಸಂಗದಿಂದ ನನಗಾದ ಅನುಭವಗಳನ್ನು ತಮಗೆ ಹೇಳಲೇ ಬೇಕು. ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ನನ್ನ ಹೆಂಡತಿ ಮಾಲಾರ್ಪಣೆ ಮಾಡಬೇಕಾದ ಸಂದರ್ಭದಲ್ಲೇ ಬೇರೆಯವರು ಮಾಲಾರ್ಪಣೆ ಮಾಡಿದ ಸಂಗತಿ ಹೇಳಿದ್ದೆ ತಾನೇ…. ಈಗ ಅದಕ್ಕೆ ಸೇರಿದ ಕೆಲವು ಅಂಶಗಳು ಈಗ ತಮ್ಮ ಮುಂದೆ…

ಕಾರ್ಯಕ್ರಮ ಮುಗಿದ ಕೆಲವು ವಾರಗಳ ನಂತರ ಮಲ್ಲೇಶ್ವರದ ಒಂದು ಹೋಟೆಲ್‌ನಲ್ಲಿ ಹೆಂಡತಿ ಮಕ್ಕಳು ದೋಸೆ ತಿನ್ನುತ್ತಾ ಕೂತಿದ್ದೇವೆ… ಜನ ಸೀಟು ಇಲ್ಲದೇ ಸುತ್ತಲೂ ಕಾಯ್ತಾ ನಿಂತಿದ್ದಾರೆ. ಅದ್ಯಾರೋ ಗಂಡ ಹೆಂಡತಿ ಬಂದರು. ನನ್ನ ಬಳಿ ಗಂಡಸು ಬಂದರು.

“ನಮಸ್ಕಾರ ಸಾ ಚೆನ್ನಾಗಿ ಇದೀರಾ….” ಅಂತ ಮಾತು ಶುರು ಮಾಡಿದರು. ಪರಿಚಯ ಅಷ್ಟು ಇರಲಿಲ್ಲ. ಆದರೂ ನಗು ನಗುತ್ತಾ ಒಂದೆರೆಡು ನಿಮಿಷ ಮಾತಾಡಿದೆ. ಮಾತಿನ ಮಧ್ಯೆ ನನ್ನಾಕೆ, ಮಕ್ಕಳನ್ನು ಪರಿಚಯ ಮಾಡಿಸಿದೆ. ಮನುಷ್ಯ ಅದೇನೋ ಗಲಿಬಿಲಿಗೊಂಡ ಅಂತ ಅನಿಸಿತು. ಅಷ್ಟು ಹೊತ್ತಿಗೆ ಎದುರಿನ ಟೇಬಲ್ ಖಾಲಿ ಆಯಿತು. ಅವರು ಅಲ್ಲಿ ಕೂತರು. ಕೈ ತೊಳೆಯಲು ವಾಶ್ ಬೇಸಿನ್ ಬಳಿ ನಿಂತಿದ್ದೆ.

“…….ಇವರದ್ದು ಪುಸ್ತಕ ರಿಲೀಸ್ ಆಯ್ತು ಆಗ ಹೋಗಿದ್ದೆ. ಅಲ್ಲಿ ಯಾರೋ ಬೇರೆಯವರನ್ನ ಇವರ ಹೆಂಡತಿ ಅಂತ ಹೇಳಿದ್ದರು. ಆಕೆನೇ ಗೆಸ್ಟ್‌ಗೆ ಹಾರ ಹಾಕಿದ್ದು ಅವತ್ತು. ಇಲ್ಲಿ ನೋಡಿದರೆ ಬೇರೆ ಇನ್ಯಾರನ್ನೋ ಹೆಂಡತಿ ಅಂತ ತೋರಿಸ್ತಾ ಇದಾರೆ….” ಆತ ತನ್ನ ಹೆಂಡತಿಗೆ ಹೇಳುತ್ತಿದ್ದ ಮಾತು ಕಿವಿಗೆ ಬೀಳಬೇಕೇ..?

ಈ ರೀತಿಯ ಪ್ರಸಂಗಗಳು ಸುಮಾರು ಸಲ ರಿಪೀಟ್ ಆಗಿ ಆಗಿ ನನಗೆ ಸಖತ್ ಇರುಸು ಮುರುಸು ಆಗಿದ್ದು ಅದು ಅಭ್ಯಾಸವೂ ಆಯಿತು. ನನ್ನಾಕೆಗೆ ಇದರ ಎಫೆಕ್ಟ್ ಬೇರೆ ತರಹ ಆಗಿದ್ದು. ಅವಳ ಕಾಲೇಜ್ ಗೆಳತಿಗೆ ಯಾರೋ ಈ ಸಂಗತಿಯನ್ನು ಸವಿವರವಾಗಿ ವರ್ಣಿಸಿದ್ದರು. ಒಂದೆರೆಡು ವಾರದ ನಂತರ ಸುದ್ದಿಗೆ ರೆಕ್ಕೆ ಪುಕ್ಕ ಬೆಳೆದು ಒಂದು ಕತೆ ಹಬ್ಬಿತ್ತು. ಕತೆ ಏನೆಂದರೆ ನಾನು ಜೋಡಿ ಕುದುರೆ ಸರದಾರ. slang ಭಾಷೆಯಲ್ಲಿ ಹೀಗಂದರೆ ಇಬ್ಬರು ಹೆಂಡಿರ ಗಂಡ. ಒಬ್ಬೊಬ್ಬರನ್ನು ಒಂದೊಂದು ಮನೇಲಿ ಇಟ್ಟಿದ್ದಾನೆ. ಸೆಕೆಂಡ್ ಶಿಫ್ಟ್ ಆದಮೇಲೆ ಮೊದಲು ಒಂದು ಹೆಂಡತಿ ಮನೆಗೆ ಹೋಗಿ ಆಮೇಲೆ ಇನ್ನೊಂದು ಮನೆಗೆ ಹೋಗ್ತಾನೆ! ಇದಕ್ಕೆ ಪುರಾವೆ ಅನ್ನುವ ಹಾಗೆ ಫ್ಯಾಕ್ಟರಿ ಬಸ್ಸು ಈ ಸ್ಟಾಪ್‌ಗೆ ಬಂದು ಕೆಲಸಗಾರರನ್ನು ಇಳಿಸಿ ಹೋದ ಎಷ್ಟೋ ಹೊತ್ತಾದ ಮೇಲೆ ಇವನು ಈ ಸ್ಟಾಪ್ ಮೂಲಕವೇ ಮನೆಗೆ ಹೋಗ್ತಾನೆ ಬೇಕಾದರೆ ಚೆಕ್ ಮಾಡಿ.. ಇದು ಕತೆಯ ಜಿಸ್ಟು …! ಇಂತಹ ಕತೆ ಸಿಕ್ಕಿದರೆ ಹಾಸ್ಯ ಬರೆಯುವ ಚಾಳಿ ಇರುವವರಿಗೆ ಸಿರುಂಡೆ. ಇದೇ ತಳಹದಿ ಮೇಲೆ ಕೆಲವು ಮಿಡಲ್ ಬಂತು ಅನ್ನಿ. ಈ ಸನ್ನಿವೇಶದ ವಿವರ ಹೇಳಿ ಇಂತಹ ಬುರುಡೆ ಕತೆ ಹಬ್ಬಿಸಿದವರಿಗೆ ನಾನು ಇರುವ ಕಡೆ ಫ್ಯಾಕ್ಟರಿ ಬಸ್ಸು ಬರೋಲ್ಲ ಅನ್ನೋದು ಗೊತ್ತಿರಲಿಲ್ಲ.

ಇದಕ್ಕೆ ಮೊದಲು ಒಂದು ಪುಟ್ಟ ನೆನಪು ಅದನ್ನು ನಿಮಗೆ ಹೇಳದೇ ಹೋದರೆ ನನಗೆ ಗಿಲ್ಟ್ ಕಾಡುತ್ತೆ. ಗಿಲ್ಟ್ ತಪ್ಪಿಸಿಕೊ ಬೇಕು ತಾನೇ?

ಕದಿರೇನಹಳ್ಳಿ ರಸ್ತೆಯಲ್ಲಿ ರಾತ್ರಿ ಎಂಟಕ್ಕೆ ಬರುತ್ತಿದ್ದೆ. ಯಾರೋ ಏ ಗೋಪಿ ಅಂತ ಕೂಗಿದರು! ಇಲ್ಲಿ ಯಾರಪ್ಪಾ ನನ್ನ ಪರಿಚಯದವರು, ಅದೂ ಏಕವಚನದ ಮಹಾನುಭಾವ ಅಂತ ನಿಂತೆ. ಸರಸರ ಹಿಂದಿನಿಂದ ಒಬ್ಬ ಬಂದ ನಾನು ಕಣೋ ರಂಗ….. ಅಂದ! ಕತೆ ಶಾರ್ಟ್ ಆಗಿ ಹೇಳಿಬಿಡ್ತೀನಿ. ಮೊದಲನೇ ಹೆಂಡತಿ ಮನೆಯಿಂದ ಎರಡನೇ ಹೆಂಡತಿ ಮನೆಗೆ ಹೋಗುತ್ತಿದ್ದ. ಇದೆಲ್ಲಾ ಪ್ರಾರಬ್ಧ ಕರ್ಮ… ಅಂದ…! ಅವನಿಗೂ ನನಗೂ ನಡುವೆ ನಡೆದ ಚರ್ಚೆ ಮತ್ತೆ ಯಾವಾಗಲಾದರೂ…

ಸಂಸಾರಿ ಜೀವನಕ್ಕೆ ಮೊದಲು ಅಂದರೆ ನನ್ನ ಬ್ಯಾಚುಲರ್ ಲೈಫ್ ಜೀವನದ ಒಂದು ಝಲಕ್ ನಿಮಗೆ ಹೇಳಬೇಕು. ಅದಕ್ಕೆ ಮೊದಲು “ಆ ಕಾಲ ಎಷ್ಟೊಂದು ಚೆನ್ನಿತ್ತಾ ಎಷ್ಟೊಂದು ಸೊಗಸಿತ್ತಾ….” ಬಿಡಿ ಅಂದಿನ ಲೈಫ್ ನೆನೆಸಿಕೊಳ್ಳದಿರುವುದು ವಾಸಿ, ಲೋಕದ ಆರೋಗ್ಯಕ್ಕೆ ತುಂಬಾ ಒಳ್ಳೆಯದು….

ಬ್ಯಾಚುಲರ್ ಲೈಫ್‌ನ ಅಂದಿನ ನನ್ನ ರಾತ್ರಿ ಶಿಫ್ಟ್ ಕತೆ ಬೇರೆ ತೆರನಾದದ್ದು. ಒಂದು ಕಿಮೀ ಹಿಂದಿನ ಸ್ಟಾಪ್‌ನಲ್ಲಿ ಇಳಿದು ಅಲ್ಲಿ ಬಿಸಿ ಬಿಸಿ ಬಾದಾಮಿ ಹಾಲು ಎರಡು ಲೋಟ ಸುರಿದುಕೊಳ್ಳೋದು. ಅದಕ್ಕೆ ಮೊದಲು ಬನ್ನು ಚೌ ಚೌ ಬ್ರೆಡ್ ಟೋಸ್ಟ್ ಮುಕ್ಕಿ ಹೊಟ್ಟೆ ಹಗುರ ಮಾಡಿಕೊಳ್ಳುವುದು. ಆಗಿನ್ನೂ ಬ್ರೆಡ್ ಬನ್ ಒಳಗೆ ಕಾಂಗ್ರೆಸ್ ಹಾಕಿಕೊಂಡು ಆ ಅಂತ ಬಾಯಿಯನ್ನು ಹಿಪಪಾಟಮಸ್ ತರಹ ಅಗಲಿಸಿ ತಿನ್ನುವ ಕಲ್ಚರೇ ಹುಟ್ಟಿರಲಿಲ್ಲ. ನನ್ನ ರೀತಿಯ ಎಂಟು ಹತ್ತು ಸಮಾನ ಮನಸ್ಕರು ನನಗೆ ಜತೆ ಆಗ. ಅಷ್ಟೂ ಜನ ಒಂದು ಕಿಮೀ ಹಿಂದೆ ಇಳಿದು ಸರಿರಾತ್ರಿಯಲ್ಲಿ ಬಾದಾಮಿ ಹಾಲಿನ ನಶೆ ಹತ್ತಿಸಿಕೊಂಡು ತಂಗಾಳಿಯಲ್ಲಿ ಅಥವಾ ತುಂತುರು ಮಳೆಯಲ್ಲಿ ಓಡಾಡುವುದು ಏನು ಸುಖ….! ಅನುಭವಿಸಿದವರಿಗೆ ಮಾತ್ರ ಅದು ಗೊತ್ತು. ಕತ್ತೆ ಬಲ್ಲುದೆ ಕಸ್ತೂರಿ ಘಮ ಘಮ?

ಅಂದಿನ ಕತೆ ನೆನಪು ಇಟ್ಟುಕೊಂಡು ಹೊಸ ಕತೆ ಹೀಗೆ ಹಬ್ಬಿದೆ ಅಂತ ಅನಿಸಿತ್ತು.

ಈ ಪ್ರಸಂಗಗಳಿಗೆ ಕಿರೀಟದ ಮಾದರಿ ಮತ್ತೊಂದು ಎಪಿಸೋಡು ನಡೆಯಿತು. ಅದನ್ನು ನಿಮಗೆ ಹೇಳಲೇ ಬೇಕು. ಈಗ ಅದಕ್ಕೆ, ತಮ್ಮ ಅನುಮತಿ ಮೇರೆಗೆ…

ಸಾಹಿತ್ಯದಲ್ಲಿ ತುಂಬಾ ಆಸಕ್ತಿ ಇರುವ ಸುಮಾರು ಮಿತ್ರರು ನನಗೆ ಈ ವೇಳೆಗೆ ಹೆಚ್ಚು ಆತ್ಮೀಯರಾಗಿದ್ದರು. ಕೆಲವರು ಸಾಹಿತಿಗಳ ಮನೆಗೆ ನಿಗದಿತವಾಗಿ ಭೇಟಿಸಿ ಕೆಲವು ಕತೆಗಳನ್ನು ಕಣ್ಣಾರೆ ಕಂಡಿದ್ದರು. ಕೆಲವು ಸಲ ಸಂಜೆ ಕಾಫಿ ಕುಡಿಯುತ್ತಾ ಕುಳಿತಾಗ ಇಂತಹ ಪ್ರಚಾರವಿಲ್ಲದ ಕತೆಗಳು ಕಿವಿಯ ಮೇಲೆ ಬೀಳುತ್ತಿತ್ತು. ಕೆಲವು ಹೊಲಸು ಅಂದರೆ ಹೊಲಸು, ಕೆಲವು ಗೌರವ ಹುಟ್ಟಿಸುವ ರೀತಿಯವು. ಆಗ ತಾನೇ ಆಪ್ತರಾಗಿದ್ದ ನನ್ನೊಬ್ಬ ಸಾಹಿತಿ ಮಿತ್ರರಿಗೆ ಆಗ ಐವತ್ತು ಆಗುವುದೋ ಐವತ್ತಕ್ಕೆ ಪಾದಾರ್ಪಣೆಯದೋ ಒಂದು ಸಂಭ್ರಮ. ಐವತ್ತರ ಹುಟ್ಟಿದ ಹಬ್ಬಕ್ಕೆ ದೊಡ್ಡದಾಗಿ ಒಂದು ವಾರದ ಕಾರ್ಯಕ್ರಮ ಅವರೇ ಲಿಸ್ಟ್ ಮಾಡಿಕೊಂಡಿದ್ದರು. ಅದರ ಪ್ರಕಾರ ಕಾರ್ಯಕ್ರಮ ಪಟ್ಟಿ ಹೀಗಿತ್ತು.. ಅದನ್ನು ತುಂಬಾ ಚಿಕ್ಕದಾಗಿ ಚೊಕ್ಕವಾಗಿ ಹೇಳಿ ಬಿಡುವೆ. ನಮ್ ನಿಮ್ ಸಮಯ ಇಂಪಾರ್ಟೆಂಟು. ಜತೆಗೆ ಅಕಸ್ಮಾತ್ ಈ ನೆನಪುಗಳು ಪ್ರಿಂಟ್ ಆಗಿಬಿಟ್ಟರೆ ಪೇಪರ್‌ಗಾಗಿ ಎಷ್ಟು ಲಕ್ಷ ಮರಗಳನ್ನು ಕಡಿಯಬೇಕು, ಅಷ್ಟೊಂದು ಮರಗಳು ಹೋದರೆ ಪರಿಸರದ ಮೇಲೆ ಅದರ ಪರಿಣಾಮ ಏನು? ನಮ್ಮ ಮುಂದಿನ ಪೀಳಿಗೆಗೆ ನಾವು ಎಂತಹ ಪ್ರಪಂಚ ಬಿಟ್ಟು ಹೋಗ್ತಾ ಇದೀವಿ ಎನ್ನುವ ಕಾಳಜಿ ನನಗೆ! ನಿಮಗೂ ಅದೇ ರೀತಿಯ ಕಾಳಜಿ ಇದೆ ಅಂತ ನನಗೆ ಗೊತ್ತು ಸರ. ಅದರಿಂದ ಕಾರ್ಯಕ್ರಮದ ಪಟ್ಟಿಯನ್ನು ಆದಷ್ಟೂ abridge ಮಾಡಿ ಅಂದರೆ ಸಂಗ್ರಹ ಮಾಡಿಬಿಟ್ಟು ತಮ್ಮೆದುರು ಮಡಗಿ ಬಿಡುತ್ತೇನೆ!

ಸಾಹಿತಿ ಮಿತ್ರರ ಹೆಸರು ಗೋಪಣ್ಣ ಅಂತ ಇರಲಿ. ಇದು ಅವರ ನೈಜ ನಾಮ ಅಲ್ಲ. ಹಾಗೂ ಗೋಪಣ್ಣ ಎನ್ನುವ ಹೆಸರಿನ ಖ್ಯಾತ ಸಾಹಿತಿ ಇದ್ದ ಇರದ ಇರುವ ಬಗ್ಗೆ ಖಾತ್ರಿ ಇಲ್ಲ. ಇವೆಲ್ಲಕ್ಕಿಂತಲೂ ಹೆಚ್ಚಾಗಿ ಈಗಿನ ಪ್ರಸಂಗದ ನಾಯಕ ಇನ್ನೂ ಜೀವಂತ ಇದ್ದು ಇನ್ನೂ ಮುನ್ನೂರು ವರ್ಷ ಬದುಕಬಹುದು, ಹಾಗಿದ್ದಾನೆ. ಅಂತಹ ಹಿರಿಯರ ಮನಸ್ಸು ಅವರ ನಿಜ ಹೆಸರನ್ನು ಹಾಕಿ ಅವರಿಗೆ ಅವರ ಜೀವನದ ಸಂಧ್ಯಾ ಕಾಲದಲ್ಲಿ ನೋವು ಉಂಟು ಮಾಡುವ ಇರಾದೆ ಅಂದರೆ ಉದ್ದೇಶ ಅಂತ ಇವರೇ, ಉದ್ದೇಶ ಖಂಡಿತ ಇಲ್ಲ. ಅದರಿಂದ ಅವರ ಹೆಸರು ಆಗಲೇ ಹೇಳಿದ ಹಾಗೆ ಗೋಪಣ್ಣ ಮತ್ತು ಗೋಪಣ್ಣ ಮಾತ್ರ.

ಗೋಪಣ್ಣ ಅವನಿಗೆ ಐವತ್ತು ಮುಟ್ಟಿದಾಗ ಆಗಬೇಕಿದ್ದ ಸಾಹಿತ್ಯ ಕಾರ್ಯಕ್ರಮಗಳ ಒಂದು ರೂಪುರೇಷೆಯನ್ನು ನಾಲ್ಕು ನೂರು ಪುಟಗಳ ನೋಟು ಬುಕ್ಕಿನಲ್ಲಿ ಬರೆದಿದ್ದ. ಆಗಲೇ ಹೇಳಿದ ಹಾಗೆ ಇಡೀ ನಾನ್ನೂರು ಪುಟ ಇಲ್ಲಿ ಇರಿಸುವ ಉಮೇದು ಇಲ್ಲ.

ಗೋಪಣ್ಣನ ಮೊದಲ ಹತ್ತುವರ್ಷ ಇದು ಮೊದಲನೇ ದಿವಸದ ಕಾರ್ಯಕ್ರಮ. ಅದರಲ್ಲಿ ಮೂರು ಸೆಷನ್ನು. ಮೊದಲನೆಯದು ಇವನ ಅಜ್ಜಿ ಇವನು ಮಗು ಆಗುವ ಮೊದಲು ಅಂದರೆ ಗರ್ಭಾವಸ್ಥೆಯ ಚಿತ್ರಣ ಕೊಡುವುದು. ಎರಡನೆಯದರಲ್ಲಿ ಇವನ ತಾಯಿ ಮೊದಲ ಏಳು ವರ್ಷದಲ್ಲಿ ಈ ಮಹಾತ್ಮ ಮಾಡಿದ ಮಹಾಕಾರ್ಯ ವಿವರಣೆ. ಮೂರನೇ ಸೆಷನ್ ಇವನ ಚಿಕ್ಕಪ್ಪ ಇವನು ಶಾಲೆ ಸೇರಿದ್ದು, ಆಟ ಆಡಿದ್ದು ಇದರ ಕುರಿತು ಮಾತನಾಡುವುದು. ಮೊದಲನೇ ದಿವಸದ ಕಾರ್ಯಕ್ರಮಕ್ಕೆ ಅಂದರೆ ಉದ್ಘಾಟನೆ ಇತ್ಯಾದಿಗಳಿಗೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷರ ಉಪಸ್ಥಿತಿ.

ಎರಡನೇ ದಿವಸದ್ದು ಗೋಪಣ್ಣ ೧೧-೨೫ ಶೀರ್ಷಿಕೆ.

ಇದೂ ಸಹ ಮೂರು ಸೆಷನ್ನು ಇದರಲ್ಲಿ ಇವನು ಎಸ್ಸೆಲ್ಸಿ ಮುಗಿಸಿದ್ದು, ಪಿಯುಸಿ ಡ್ರಾಪ್ ಔಟ್ ಆಗಿದ್ದು ಮತ್ತು ಭುವನೇಶ್ವರಿ ತೆಕ್ಕೆಗೆ ಬಿದ್ದದ್ದು.

ಮೂರನೇ ದಿವಸ ಇವನ ಮೊದಲ ಕವನ ಪ್ರಿಂಟಾಗಿದ್ದು, ವಾಚಕರ ವಾಣಿಗೆ ಪತ್ರ ಸಾಹಿತ್ಯ ಶುರು ಮಾಡಿದ್ದು ಮತ್ತು ಮೊದಲ ಪ್ರೇಮ ಪ್ರಕರಣ. ಇದು ಗೋಪಣ್ಣ ೨೫-೩೦ ಶೀರ್ಷಿಕೆ

ನಾಲ್ಕನೇ ದಿವಸ ೩೦ರಿಂದ ಇಲ್ಲಿಯ ತನಕ ಶೀರ್ಷಿಕೆ. ಇದರಲ್ಲಿ ಇವನ ಸಾಹಿತ್ಯದ ಹೋರಾಟ, ಸಮಾಜಮುಖಿ ಜೀವನ, ಪರ್ಯಾಯ ವ್ಯವಸ್ಥೆಯ ಕಲ್ಲು ದಾರಿ, ಜಾತಿ ವ್ಯರ್ಜನೆ, ಬುದ್ಧ ಆಗಲು ಹೊರಟಿದ್ದು, ಬೇಡ ಎಂದು ನಿರ್ಧರಿಸಿದ್ದು…. ಅವನ ಪ್ರೇಮ ಕತೆ, ಕಲ್ಯಾಣೋತ್ಸವ, ಪುತ್ರಕಾಮೇಷ್ಟಿ…… ಹೀಗೆ. ನಾಲ್ಕು ದಿವಸದ ಒಂದು ಮಜಲಿನ ನಂತರ ಐದು ಆರು ಏಳು.. ಈ ದಿನಗಳ ಕಾರ್ಯಕ್ರಮ.

ಐದನೇ ದಿವಸ ಗೋಪಣ್ಣ ಮತ್ತು ಮಹಿಳೆಯರು ಇದಕ್ಕೆ ಸಂಬಂಧಪಟ್ಟ ಸೆಷನ್ಸ್ ಮೂರೂ ಹೊತ್ತು. ಗೋಪಣ್ಣ ಮತ್ತು ಹವ್ಯಾಸಗಳು ಇದರಲ್ಲಿ ಅವನ ಅಂಚೆ ಚೀಟಿ ಸಂಗ್ರಹಣೆ, ಫೋಸ್ಟ್ ಕಾರ್ಡ್ ಸಂಗ್ರಹಣೆ

ಆರನೇ ದಿವಸ ಗೋಪಣ್ಣ ಮತ್ತು ಬಂಡಾಯ… ಇದರಲ್ಲಿ ಗೋಪಣ್ಣ ಹೇಗೆ ಸಾಹಿತ್ಯದಲ್ಲಿ ಹೊರಳು ದಾರಿ ಹಿಡಿದ ಮತ್ತು ಪಟ್ಟಭದ್ರರ ಹಿಡಿತಕ್ಕೆ ಸೆಡ್ಡು ಹೊಡೆದ ಇದೂ ಮೂರೂ ಸೆಷನ್

ಏಳನೇ ದಿವಸ ಗೋಪಣ್ಣ ಮುಂದೆ ನಡೆವ ಹಾದಿ… ಮತ್ತು ಸಮಾರೋಪ. ಸಮಾರೋಪಕ್ಕೆ ಅಂದು ಹೆಸರು ಮಾಡಿದ್ದ ಖ್ಯಾತ ಕವಿಗಳು. ಮಿಕ್ಕ ದಿವಸಗಳಲ್ಲಿ ಪತ್ರಿಕೆ ಸಂಪಾದಕರು, ಎಂ. ಎಲ್. ಏ ಗಳು, ಸಂಸ್ಕೃತಿ ಮಂತ್ರಿಗಳು, ಮುಖ್ಯ ಮಂತ್ರಿಗಳು, ರಾಷ್ಟ್ರಪತಿ, ಪ್ರಧಾನಿ, ವಿಶ್ವವಿದ್ಯಾಲಯದ ಉಪಕುಲಪತಿಗಳು… ಹೀಗೆ ಖ್ಯಾತನಾಮರುಗಳು ಭಾಗವಹಿಸುವ ಯೋಜನೆ ಹಮ್ಮಿಕೊಂಡಿದ್ದ. ನೋಡಿ ಮೊದಲೇ ಹೇಳಿಬಿಡುತ್ತೇನೆ ಇದು ಖಂಡಿತ ನಗುವ ವಿಷಯ ಅಲ್ಲ!

ಒಂದು ಕಡೆ ಇವನಿಗೆ ಬರಲೇ ಬೇಕಿದ್ದ ಪ್ರಶಸ್ತಿಗಳನ್ನು ಪಟ್ಟಿ ಮಾಡಿದ್ದ. ಪಟ್ಟಿಯಲ್ಲಿ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿಗಳು, ರಾಜ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಅಕಾಡೆಮಿ ಪುರಸ್ಕಾರ ಸೇರಿದಂತೆ ಜ್ಞಾನಪೀಠ ಸರಸ್ವತಿ ಸಮ್ಮಾನ ಬ್ರೂಕ್ಲಿನ್… ಹೀಗೆ ಹೆಸರು ಕೇಳಿದ್ದ ಕೇಳದೇ ಇರುವ ಹಲವು ಸಹಸ್ರ ಹೆಸರುಗಳು ರಾರಾಜಿಸುತ್ತಾ ಇದ್ದವು.

ಇದು ಹಿನ್ನೆಲೆ ಇದು ನಿಮ್ಮ ಮನಸ್ಸಿನಲ್ಲಿ ಒಂದು ಮೂಲೆಯಲ್ಲಿ ಭದ್ರವಾಗಿ ಮೊಳೆ ಹೊಡೆದು ಕೊಂಡು ಕೂತು ಅಥವಾ ಮಲಗಿ ಇರಲಿ.

ಈಗ ಮತ್ತೆ ಕತೆಗೆ. ಗೋಪಣ್ಣ ನಾಲ್ಕುನೂರು ಪುಟಗಳ ಮೇಲಿನ ಸಂಗತಿ ಒಳಗೊಂಡಿದ್ದ ಅವನ ನೋಟು ಬುಕ್ಕು ತೋರಿಸಬೇಕಾದರೆ ಮಲ್ಲೇಶ್ವರದ ಮೂಲೆಯ ಒಂದು ಹೋಟೆಲ್ಲಿನಲ್ಲಿ ಎದುರು ಬದುರು ಕೂತಿದ್ದೆವು. ಸಂಜೆ ಐದರ ಸಮಯ. ಕಿಟಕಿ ಮೂಲಕ ಸಂಜೆ ಬಿಸಿಲು ಎದುರಿನ ಟೇಬಲ್ ಮೇಲೆ ಬೀಳುತ್ತಿತ್ತು. ಅದರ ಒಂದು ಭಾಗ ಗೋಪಣ್ಣ ಮುಖದ ಮೇಲೆ. ಅವನೆದುರು ನಾನು ಕೂತಿದ್ದೆ. ಅಂದ ಹಾಗೆ ಗೋಪಣ್ಣನಿಗೆ ನಿಶ್ಚಿತ ಆದಾಯ ಇರಲಿಲ್ಲ. ಯಾಕೆ ಇರಲಿಲ್ಲ ಅಂದರೆ ಈತ ಎಲ್ಲೂ ಕೆಲಸಕ್ಕೆ ಹೋಗುತ್ತಿರಲಿಲ್ಲ. ಯಾಕೆ ಹೋಗುತ್ತಿರಲಿಲ್ಲ ಅಂದರೆ ಅವನಿಗೆ ಮತ್ತೊಬ್ಬರ ಕೈಕೆಳಗೆ ದುಡಿಯುವ ದರ್ದು ಇರಲಿಲ್ಲ. ನನ್ನ ಕಾಲ ಮೇಲೆ ನಾನು ನಿಲ್ಲಬೇಕು ಎನ್ನುವುದು ಅವನು ಹುಟ್ಟಿನಿಂದ ಬೆಳೆಸಿಕೊಂಡು ಬಂದಿದ್ದ ಒಂದು ಸಿದ್ಧಾಂತ. ಸಿದ್ಧಾಂತಕ್ಕೆ ಬದ್ಧ ಅಂದರೆ ಕಮಿಟ್ ಆಗಿದ್ದ ನೋಡಿ ಅದರಿಂದ ತೇಪೆದಾರಿ ಕೆಲಸಕ್ಕೆ ಹೋಗಿರಲಿಲ್ಲ ಅವನು. ಹಾಗಿದ್ದರೆ ಅವನಿಗೆ ಊಟ ಪಾಠ ಹೇಗೆ ಅಂದರೆ ಹೆಂಡತಿ ಕೆಲಸಕ್ಕೆ ಹೋಗುತ್ತಿದ್ದರು!

ಇಬ್ಬರೂ ಹೋಟೆಲಿನಲ್ಲಿ ಎದುರು ಬದುರು ಕೂತು ಬೈಟು ಕಾಫಿ ಹೀರಬೇಕಾದರೆ ಅವನ ಮತ್ತು ನನ್ನ ಗೋಪಣ್ಣ ಐವತ್ತು ಮಾತುಕತೆ ನಡೆದದ್ದು. ಅವನು ಹೆಗಲ ಚೀಲದಿಂದ ನೋಟು ಬುಕ್ಕು ತೆರೆದು ನನ್ನ ಮುಂದೆ ಅವನ ಯೋಜನೆ ವಿವರಿಸಿದ್ದು….

ಗೋಪಣ್ಣಸಾರ್, ಈ ಯೋಜನೆ ನೋಡಿದರೆ ಒಂದಿಪ್ಪತ್ತು ಲಕ್ಷ ಬೇಕಾಗುತ್ತೆ ಅಲ್ಲವೇ… ಅಂದೆ.

“ಹೂಂ ಅಷ್ಟಾಗಬಹುದು….” ಅಂದ.

“ದುಡ್ಡಿಗೆ ಏನು ಮಾಡ್ತೀರಿ….” ಅಂದೆ.

“ಇಡೀ ಕಾರ್ಯಕ್ರಮ ಸಾಹಿತ್ಯ ಅಕಾಡೆಮಿ ವಹಿಸಿಕೊಳ್ಳಲಿ… ಆಗ ಹೆಚ್ಚು ಹೊರೆ ನಮ್ಮ ಮೇಲಿರಲ್ಲ…… ಶಾರ್ಟ್ ಬಂದರೆ ನೀವು ಇದಿರಲ್ಲಾ….”

“ಅಕಾಡೆಮಿ ಇದಕ್ಕೆ ಒಪ್ಪುತ್ತಾ….”

“ಯಾಕೆ ಒಪ್ಪುಲ್ಲ?…..”

ಯಾಕೆ ಒಪ್ಪಬೇಕು? ನನ್ನ ಪ್ರಶ್ನೆ ಗಂಟಲಲ್ಲಿ ಉಳಿಯಿತು.

“ಬನ್ನಿ ಈಗಲೇ ಹೋಗಿ ಇವರಿಗೆ ಫೋನ್ ಮಾಡಿ ಫಿಕ್ಸ್ ಮಾಡೋಣ…” ಅಂದ. ಎಂದಿನಂತೆ ಬಿಲ್ ನಾನೇ ಕೊಟ್ಟೆ. ಪಾಪ ಬಡವ ಸಾಹಿತಿ ಅಂತ ನಾನೇ ಯಾವಾಗಲೂ ಬಿಲ್ ಹೊರೆ ಹೊರುತ್ತಿದ್ದೆ…!

ಎಂಟನೇ ಕ್ರಾಸಿನ ಒಂದು ಫೋನ್ ಬೂತ್‌ಗೆ ಹೋದೆವು. ಆಗ ಇನ್ನೂ ಮೊಬೈಲ್ ಫೋನುಗಳು ಹುಟ್ಟಿರಲಿಲ್ಲ. ಯಾರನ್ನಾದರೂ ಸಂಪರ್ಕಿಸಬೇಕು ಅಂದರೆ ಫೋಸ್ಟು ಟೆಲಿಗ್ರಾಮು ಫೋನ್ ಮೂಲಕ ಮಾತ್ರ. ಬೆಂಗಳೂರು ಆದರೆ ಬೂತ್ ಮೂಲಕ ನಾಣ್ಯ ಹಾಕಿ ಫೋನು ಮಾಡುವುದು. ಬೂತ್ ಹತ್ತಿರ ಹೋದ ನಂತರ ಗೋಪಣ್ಣ ಜೇಬಿನಿಂದ ಒಂದು ಪುಟ್ಟ ನೋಟ್ ಬುಕ್ ತೆಗೆದ. ಅದನ್ನು ಸರಸರ ತಿರುಗಿಸಿದ. ಹಣೆ ಚಚ್ಚಿಕೊಂಡ. ಹೆಗಲ ಚೀಲ ತೆಗೆದು ಅದನ್ನು ಟೇಬಲ್ ಮೇಲೆ ಬೋರಲು ಮಾಡಿದ. ಎಂಟುಹತ್ತು ಪುಸ್ತಕ, ನಾನೂರು ಪೇಜ್‌ನ ಕಾರ್ಯಕ್ರಮದ ವಿವರದ ಪುಸ್ತಕ ಒಂದು ಬೆಂಕಿಪೊಟ್ಟಣ…. ಹೀಗೆ ಸಮಗ್ರ ಆಸ್ತಿ (ಸಮಗ್ರ ಸಾಹಿತ್ಯ.. ನೆನಪಿಗೆ ಬಂತೇ ಸರ?) ಟೇಬಲ್ ಮೇಲೆ ತಬ್ಬಲಿ ಹಾಗೆ ಹರಡಿಕೊಂಡು ಅನಾಥ ಮಗುವಿನ ಹಾಗೆ ಬಿದ್ದಿತ್ತು. ಅಲ್ಲಿನ ರಾಶಿಯ ನಡುವಿನಿಂದ ಒಂದು ಪುಸ್ತಕ ತೆಗೆದ. ಅದನ್ನು ಪರಪರ ಪೇಜ್ ತೆಗೆದ. ಯಾವುದೋ ಪೇಜ್ ಬಂಗಾದ (ದಾರಿ ಇದು ಬಂದಾಗ ಆಗಬೇಕು ಬಂಗಾದ ಅಲ್ಲ… ಹಾಗೇ ಇದು ಸಾರಿ ಆಗಬೇಕು ದಾರಿ ಅಲ್ಲ. ಐಡಿಯಾಗಳು overlap ಆದಾಗ ಮೆದುಳಿಗೆ ಕನ್ಫ್ಯೂಸ್ ಆಗಿ ಪದಗಳು ಹಿಂದೆ ಮುಂದೆ ಆಗ್ತವಂತೆ ಕೆಲವು ಸಲ ಅಕ್ಷರಗಳು ಈ ಪಾಡು ಪಡುತ್ತವಂತೆ! ನನ್ನಂತಹ ಜೀನಿಯಸ್‌ಗಳಿಗೆ ಇದು ಕಾಮನ್ ಅಂತೆ… ನನ್ನದು ಸೆಕೆಂಡ್ ಟೈಪ್ ಕೇಸು!). ಪರ ಪರ ಪೇಜ್ ಹರಿಯುವ ಹಾಗೆ ತೆರೆದು ಒಂದು ಪುಟದ ಮೇಲೆ ಕಣ್ಣು ಓಡಿಸಿದ.

“ಹಾ. ಸಿಕ್ತು…..” ಅಂದ

ಜುಬ್ಬದ ಜೇಬು ತಡಕಿದ, ನಂತರ ಎಡ ಜೇಬು ತಡಕಿದ. ನಿಮಗೆ ಗೊತ್ತಿದೆಯೋ ಇಲ್ಲವೋ ಆಗ ಅಂದರೆ ನಲವತ್ತು ಐವತ್ತು ವರ್ಷಗಳ ಹಿಂದೆ ಜುಬ್ಬಾಗಳಿಗೆ ಎದೆಮೇಲೆ ಜೇಬು ಇರುತ್ತಾ ಇರಲಿಲ್ಲ. ಜುಬ್ಬಾ ನಂತರ ಪೈಜಾಮದ ಎರಡೂ ಜೇಬು ತಡಕಾಡಿದ. ಪೈಜಾಮಗಳಿಗೆ ಆಗ ಹಿಪ್ ಪಾಕೆಟ್ ಕೀ ಚೈನ್ ಪಾಕೆಟ್ ಇರಲಿಲ್ಲ ಇವರೇ..

“ಹಾಳಾದೋಳು ಜೇಬಿನಿಂದ ದುಡ್ಡು ಉಡೀಸ್ ಮಾಡಿ ಬಿಟ್ಟಿದ್ದಾಳೆ….” ಅಂತ ಮುಖ ಪೆಚ್ಚು ಮಾಡಿಕೊಂಡ. ಮನೆ ಕೆಲಸದವಳು ಅಥವಾ ಹೆಂಡತಿಯದು ಈ ಉಡೀಸ್ ಕೆಲಸ ಇರಬಹುದು ಅಂತ ನನ್ನ ಗೆಸ್ಸಿಂಗ್.

“ಕಾಯಿನ್ ಕೊಡಿ….” ಅಂದ. ಆಗ ಫೋನಿನ ಸಂಪರ್ಕ ಗಳಿಸಲು ಕಾಯಿನ್ ಹಾಕಬೇಕಿತ್ತು. ನಾಲ್ಕಾಣೆ ಯಾ ಎಂಟಾಣೆ ಇರಬಹುದು. ಕಾಯಿನ್ ಕೊಟ್ಟೆ.

ಫೋನು ಡಯಲ್ ಮಾಡಿದ. ಆ ಕಡೆ ರಿಸೀವರ್ ತೆಗೆದರು ಅಂತ ಕಾಣುತ್ತೆ. ಕಾಯಿನ್ ಒಳಗೆ ಹಾಕಿ ಅಲೋ ಅಲೋ ಅಂದ. ಫೋನು ಡಿಸ್ಕನೆಕ್ಟ್ ಆಯಿತು ಅಂತ ಕಾಣುತ್ತೆ. ಫೋನು ಡಬ್ಬಕ್ಕೆ ಒಂದು ಬಾರಿಸಿದ. ಇದನ್ನು ನಾವು ಆ ಕಾಲದಲ್ಲಿ ಫೋನಿನ ಕೆನ್ನೆಗೆ ಬಾರಿಸುವುದು ಎನ್ನುತ್ತಿದ್ದೆವು. ಕೈ ನನ್ನ ಮುಂದೆ ಹಿಡಿದ

“ಇನ್ನೊಂದು ಕಾಯಿನ್ ಕೊಡಿ…” ಅಂದ!

ಇನ್ನೂ ಒಂದು ಕಾಯಿನ್ ಕೊಟ್ಟೆ. ಮೂರುನಾಲ್ಕು ಕಾಯಿನ್ ಹೀಗೆ ಫೋನಿನ ಹೊಟ್ಟೆ ಒಳಗೆ ಸೇರಿತು. ನನ್ನ ಜೇಬು ಪೂರ್ತಿ ಹುಡುಕಿ ಇನ್ನೂ ನಾಲ್ಕು ಕಾಯಿನ್ ತೆಗೆದು ಇಟ್ಟುಕೊಂಡಿದ್ದೆ. ನಾನು ಅವತ್ತಿಗೂ ಇವತ್ತಿಗೂ ಪರೋಪಕಾರಿ ಪಾಪಣ್ಣ ತಾನೇ?

ಈ ಸಲ ಫೋನಿನ ಕನೆಕ್ಷನ್ ಸಿಕ್ಕೇ ಬಿಟ್ಟಿತು. ಕಿವಿ ಬಳಿ ಫೋನು ಹಿಡಿದು ಬೆಂಗಳೂರಿನ ಇನ್ನೊಂದು ಮೂಲೆಗೆ ಕೇಳಿಸುವ ಹಾಗೆ ಹಲೋಹಲೋಹಾಲೋಹಲೋ ಹಾಡಿದ.

ಅತ್ತಲಿಂದಲೂ ರೆಸ್ಪಾನ್ಸ್ ಬಂತು..

“ಹಲೋ ಹಲೋ……. ಸಾರ್ ಇದ್ದಾರಾ ಕೊಡಿ…” ಅಂದ.

ಆ ತುದಿಯಿಂದ ಅದೇನು ಉತ್ತರ ಬಂತೋ ತಿಳಿಯದು. ಫೋನಿನಲ್ಲಿ ಮಾತು ಸ್ಪಷ್ಟವಾಗಿ ಕೇಳದ ಕಾಲ ಅದು. ಅಂತಹ ಕಾಲದಲ್ಲಿ ಪಾಪ, ಗೋಪಣ್ಣ ಎನ್ನುವ ಈ ದುರ್ದೈವಿ ಜನ್ಮ ತಳೆದವನು. ಎರಡು ಮೂರು ಸಲ

“ಹಲೋ ಹಲೋ……. ಸಾರ್ ಇದ್ದಾರಾ ಕೊಡಿ…” ಅಂತ ಕೇಳಿದ. ಫೋನು ಮೂರು ನಿಮಿಷಕ್ಕೆ ಕಟ್ ಆಗುವ ಹಾಗೆ ಆಗಿನ ಸಿಸ್ಟಮ್ ಇದ್ದದ್ದು. ಮೂರು ನಿಮಿಷ ಆಯ್ತೋ ಇಲ್ಲವೋ ತಿಳಿಯದು. ಫೋನು ಕಟ್ ಆಯಿತು.

ಗೋಪಣ್ಣ ತ್ರಿವಿಕ್ರಮನ ವಂಶಕ್ಕೆ ಸೇರಿದವನು. ಇವನು ಯಾರು ತ್ರಿವಿಕ್ರಮ ಅಂತ ಗೊಂದಲಕ್ಕೆ ಒಳಗಾಗಬೇಡಿ. ಚಂದಮಾಮ ಕತೆಯಲ್ಲಿ ಬೇತಾಳ ಕತೆಗಳನ್ನು ನೀವು ಚಿಕ್ಕವರಿದ್ದಾಗ ಓದಿದ್ದೀರಿ ತಾನೇ? ಮರದ ಮೇಲಿನಿಂದ ಶವವನ್ನು ಕೆಳಗೆ ಇರಿಸಿ ನಂತರ ಅದನ್ನು ಹೊತ್ತು ನಡೆಯಲು ಆರಂಭಿಸುತ್ತಾನೆ. ಹೆಗಲಿನ ಮೇಲಿನ ಶವದಲ್ಲಿರುವ ಬೇತಾಳ ರಾಜಾ ನಿನ್ನ ಆಯಾಸ ಕಡಿಮೆ ಮಾಡಲು ಕತೆಯೊಂದನ್ನು ಹೇಳುತ್ತೇನೆ ಅನ್ನುತ್ತೆ ತಾನೇ? ಈ ರಾಜನೇ ನಮ್ಮ ತ್ರಿವಿಕ್ರಮ!

ಇವನಿಗೆ ಅದೆಷ್ಟೋ ಲಕ್ಷ ಸಲ ಶವವನ್ನು ಮರದ ಮೇಲಿನಿಂದ ಇಳಿಸಿ ಹೆಗಲ ಮೇಲೆ ಹೊತ್ತರೂ ಬೇಸರ ಬೇಜಾರು ಏನೂ ಆಗುವುದಿಲ್ಲ. ನಮ್ಮ ಗೋಪಣ್ಣ ನೂ ಸಹ ಹಾಗೆಯೇ. ಅದರಿಂದ ಅವನು ತ್ರಿವಿಕ್ರಮನ ವಂಶಜ.

ಎರಡು ಮೂರು ಸಲ ಫೋನಿನ ಹೊಟ್ಟೆ ಕಾಯನ್ನು ನುಂಗಿತಾ, ನುಂಗಿ ನೀರು ಕುಡಿಯಿತಾ…?

ಮತ್ತೆ ಮೊದಲಿನ ಪ್ರೋಸೆಸ್ ರಿಪೀಟ್ ಮಾಡಿದ, ಫೋನು ಹೊಡೆದ. ಈ ಸಲ ಫೋನಿನ ಲಿಂಕು ಸಿಕ್ಕಿತಾ? ಇವನ ಧ್ವನಿ ಅವರ ಕಿವಿ ಮುಟ್ಟಿ ಬಿಟ್ಟಿತಾ

“ಹಲೋ ಹಲೋ……. ಸಾರ್ ಇದ್ದಾರಾ ಕೊಡಿ…” ಅಂತ ಮತ್ತೆ ಕೇಳಿದನಾ? ಅವನ ಮುಖ ಪೆಚ್ಚಾಯಿತಾ…

ಫೋನು ತಗುಲಿ ಹಾಕಿದನಾ? ಫೋನು ತಗುಲಿ ಹಾಕೋದು ಅಂದರೆ ನಿಮಗೆ ವಿಷದವಾಗಿ ಹೇಳಬೇಕು. ಆ ಕಾಲದಲ್ಲಿ ಪಬ್ಲಿಕ್ ಕಾಲ್ ಬೂತ್‌ಗಳಲ್ಲಿ ಒಂದು ಪೆಟ್ಟಿಗೆ ಇರುತ್ತಿತ್ತು, ಫೋನಿನ ರಿಸೀವರ್ ಇಡಲು ಒಂದು ಹ್ಯಾಂಗರ್ ಇರುತ್ತಿತ್ತು. ಫೋನಿನ ಉಪಯೋಗದ ನಂತರ ಅದನ್ನು ಸ್ವಸ್ಥಾನದಲ್ಲಿ ನೇತುಹಾಕಬೇಕಿತ್ತು. ಗೋಪಣ್ಣ ಈಗ ಅದನ್ನೇ ಮಾಡಿದ್ದು.

ನಾನು ಒಂದು ಆರು ಹೆಜ್ಜೆ ಹಿಂದೆ ನಿಂತಿದ್ದೆ. ನನ್ನ ಬಳಿ ಬಂದ. ಕೈ ಮುಂದೆ ಚಾಚಿದ ‘ಕಾಯಿನ್ ಕೊಡಿʼ ಅಂದ! “ತಿರುಗ ಮಾಡಬೇಕು…” ಅಂತ ಸೇರಿಸಿದ

ಕಾಯಿನ್ ಖಾಲಿ ಆಗಿತ್ತು. ಜತೆಗೆ ಮತ್ತೆ ಇವನು ಅಲ್ಲಿಗೇ ಫೋನು ಮಾಡಬೇಕು ಅಂದರೆ ಒಂದು ಮನೇಲೆ ಎಷ್ಟು ಲ್ಯಾಂಡ್ ಲೈನ್ ಇರುತ್ತೆ ಎನ್ನುವ ಸಂಶಯ ಹುಟ್ಟಬೇಕೇ….?

“ಕಾಯಿನ್ ಖಾಲಿ….”‌ ಅಂದೆ. “ತಿರುಗ ಅವರ ಮನೆಗೇ ಫೋನು ಮಾಡ್ತೀರಾ? ಅವರ ಮನೇಲಿ ಎಷ್ಟು ಲ್ಯಾಂಡ್ ಲೈನ್ ಫೋನು ಇಟ್ಟುಕೊಂಡಿದ್ದಾರೆ…. ಯಾಕೆ ಅವರು ಸಿಕ್ಕಲಿಲ್ಲವಾ….?” ಅಂತ ಸಪ್ಲಿಮೆಂಟರಿ ಮೇಲೆ ಸಪ್ಲಿಮೆಂಟರಿ ಉದುರಿಸಿ ವಿರೋಧ ಪಕ್ಷದ ನಾಯಕ ಮುಖ್ಯ ಮಂತ್ರಿಯ ಮೇಲೆ ಎಸೆಯುವ ಹಾಗೆಯೇ ಎಸೆದೆ.

“ಈಗ ಅವರು ಇನ್ನೊಂದು ಮನೆಗೆ ಹೋಗಿದ್ದಾರೆ…..” ಅಂದ. ಇನ್ನೊಂದು ಮನೆ ಅಂದರೇನು? ಅವರೋಕಡು ಬಡವರು, ಕಡು ಬಡವ ಸಾಹಿತಿಗಳು… ಎಷ್ಟು ಮನೆ ಇಟ್ಟುಕೊಳ್ಳಲು ಸಾಧ್ಯ……? ಈ ದಾಟಿಯಲ್ಲಿ ನನ್ನ ಮನಸ್ಸು ಓಡುತ್ತಿದೆ. ಗೋಪಣ್ಣ ವಿವರಿಸಲು ಬಾಯಿ ತೆರೆದ…

ಓದುಗ ಮಹಾಶಯಾ ಸಂಬಂಧವಿಲ್ಲದೆ ಯಾವ್ಯಾವುದೋ ಸಂದಿಯಲ್ಲಿ ಕತೆ ನಮ್ಮ ಕನ್ನಡ ಧಾರಾವಾಹಿ ಟಿವಿ ಸೀರಿಯಲ್‌ಗಳ ಹಾಗೆ ಓಡುತ್ತಿದೆ ಅಂತ ನಿಮ್ಮ ತಲೆಯಲ್ಲಿ ಒಂದು ಅಪ್ಪಟ ನ್ಯೂ ಥಿಂಕಿಂಗ್ ಹುಟ್ಟಿದೆ ಅಂತ ಗೊತ್ತು.. ಕೊಂಚ ತಡೆದುಕೊಳ್ಳಿ. ಗೋಪಣ್ಣನ ಮೂಲಕ ನಿಮಗೆ ಒಂದು ದೊಡ್ಡ ಗುಟ್ಟು ಬಿಟ್ಟು ಕೊಡುತ್ತೇನೆ. ತಲೆಯ ತುಂಬಾ ಈ ಗುಟ್ಟಿನ ಸಂಗತಿಗಳು ಸೇರಿಕೊಂಡು ಸಿಕ್ಕು ಸಿಕ್ಕು ಮತ್ತು ಗೋಜಲಾಗಿವೆ. ಸಿಕ್ಕು ಬಿಡಿಸಿ ಮುಂದಿನದನ್ನು ತಮ್ಮ ಮುಂದೆ ಹಾರವಳು ಅಲ್ಲ ಹರವಲು (again ಇದು over lapping ಖಾಹಿಲೆ ಸರ) ಕೊಂಚ ಮಮಯ ಅಲ್ಲ ಸಮಯ ಕೊಡಿ ಮೇಡಂಮೋರೆ…. ತಲೆಯಲ್ಲಿನ ಗೋಜಲು ಗೋಜಲು ಕಡಿಮೆಯಾಗಿ ಬಗ್ಗಡ ತುಂಬಿದ ಕೆರೆ ತಿಳಿಯಾಗಿ ನಮ್ಮ ನಿಮ್ಮ ಮುಖ ಕಾಣುವ ಹಾಗಾಗಲು  ಕಾಯೋಣ… ಕಾಯೋದರಲ್ಲಿ ಇರೋ ಸುಖ ಅದೆಷ್ಟು ಚೆಂದ ಸರ…

ಮುಂದುವರೆಯುವುದು…

About The Author

ಎಚ್. ಗೋಪಾಲಕೃಷ್ಣ

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ