ಮೂಲತಃ ಹಿಮಾಲಯದ ವಾಸಿಗಳಾದ ಈ ಹಕ್ಕಿಗಳು ಹಿಮಾಲಯದಲ್ಲೇ ಅಲ್ಲದೆ, ಉತ್ತರದಲ್ಲಿ ಪಾಕಿಸ್ತಾನದಿಂದ ಹಿಡಿದು ನೇಪಾಳ ಮತ್ತು ಈಶಾನ್ಯ ಭಾರತದಲ್ಲಿ ಸಿಕ್ಕಿಂವರೆಗೂ ವ್ಯಾಪಿಸಿವೆ. ಚಳಿಗಾಲದಲ್ಲಿ ದಕ್ಷಿಣ ಭಾರತ ಮತ್ತು ಶ್ರೀಲಂಕಾದವರೆಗೂ ವಲಸೆ ಹೋಗುತ್ತವೆ. ಅಲ್ಲದೆ, ನವರಂಗ ಹಕ್ಕಿಗಳು ಕೆಲವೊಮ್ಮೆ ಮಧ್ಯ ಭಾರತ ಮತ್ತು ಪಶ್ಚಿಮ ಘಟ್ಟಗಳಲ್ಲಿಯೂ ಸಂತಾನೋತ್ಪತ್ತಿ ನಡೆಸುತ್ತವೆ. ಹಾಗಾಗಿ ಇವು ಸ್ಥಳೀಯ ವಲಸೆಯನ್ನೂ ಮಾಡುತ್ತವೆ ಎಂದು ಹೇಳಬಹುದು.
ಡಾ. ಎಸ್.ವಿ. ನರಸಿಂಹನ್ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ “ನವರಂಗ”ಯ ಕುರಿತ ಬರಹ ಇಲ್ಲಿದೆ
ನಮ್ಮ ಇಂದಿನ ಹಕ್ಕಿ ನವರಂಗ. ನವರಂಗ ಎಂದರೆ ಒಂಬತ್ತು ಬಣ್ಣಗಳು. ನಿಮಗೆ ಆಶ್ಚರ್ಯವಾಗಬಹುದು; ಸರಿಸುಮಾರು ಭಾರತದ ಹೆಚ್ಚಿನ ಭಾಷೆಗಳಲ್ಲಿ ಈ ಹಕ್ಕಿಯನ್ನು ನವರಂಗ ಎಂದೇ ಕರೆಯುತ್ತಾರೆ! ಇಂಗ್ಲೀಷಿನಲ್ಲಿ Indian Pitta ಮತ್ತು ವೈಜ್ಞಾನಿಕವಾಗಿ Pitta brachyura ಎಂದು ಕರೆಯುತ್ತಾರೆ. ನೋಡಲು ಅತ್ಯಂತ ಆಕರ್ಷಕವಾದ ನವರಂಗ, ಸುಮಾರು 19 ಸೆಂಮೀ ಗಾತ್ರದ ದುಂಡುದುಂಡಾದ ಹಕ್ಕಿ. ಅದರ ಮೈಮೇಲೆ ಉಜ್ವಲ ನೀಲಿ, ಹಸಿರು, ಬಿಳಿ, ಕಪ್ಪು ಮತ್ತು ಬೂದು ಬಣ್ಣ; ಕಣ್ಣಿಗೆ ಕಪ್ಪು ಪಟ್ಟಿ; ಕಪ್ಪು ನೆತ್ತಿ; ಬಿಳಿ ಗಲ್ಲ; ತಿಳಿ ಹಸಿರುಗಂದು ಕೆಳಮೈ; ಕೆಂಪು ಕಿಬ್ಬೊಟ್ಟೆ; ಹಾರುವಾಗ ರೆಕ್ಕೆಗಳ ತುದಿಯಲ್ಲಿ ಸ್ಪಷ್ಟವಾದ ಬಿಳಿ ಮಚ್ಚೆ! ಒಂಬತ್ತು ಬಣ್ಣಗಳಾದುವಲ್ಲ!
ಇವು ಗಿಡ್ಡಕತ್ತಿನ ಹಕ್ಕಿಗಳು. ಗಟ್ಟಿಮುಟ್ಟಾದ, ತುಸು ಬಾಗಿದ ಕೊಕ್ಕು; ನೀಳ, ಬಲಿಷ್ಟ ಕಾಲುಗಳು, ಸಣ್ಣ, ಉರುಟಾದ ರೆಕ್ಕೆಗಳು; ಮೊಂಡುಬಾಲ. ದೇಹದ ಆಕಾರಕ್ಕೆ ಹೋಲಿಸಿದರೆ ಉದ್ದವೆನಿಸುವ ಕಾಲುಗಳನ್ನು ಹೊಂದಿರುವ ಇವು ಹಾರುವುದಕ್ಕಿಂತ ನೆಲದಲ್ಲಿ ಓಡಾಡುವುದೇ ಹೆಚ್ಚು. ಅಧಿಕ ನೆರಳು ಇರುವ ಮರಗಿಡಗಳ ಮಧ್ಯೆ, ದೇವರ ಕಾಡು, ಕಾಫಿ, ಎಸ್ಟೇಟುಗಳ ನೆಲದ ಮೇಲೆ, ಕುಪ್ಪಳಿಸಿಕೊಂಡು, ನೆಲದ ಮೇಲೆ ಒಂಟಿಯಾಗಿ ಓಡಾಡುವ ಪಕ್ಷಿ. ಬಾಲವನ್ನು ಮೇಲೆಕ್ಕೂ-ಕೆಳಕ್ಕೂ ಆಡಿಸುತ್ತಾ, ಒಣ ತರಗೆಲೆಗಳನ್ನು ಮೊಗಚುತ್ತಾ, ಅದರಡಿ ಹುದುಗಿರುವ ಅಕಶೇರುಕ, ಕ್ರಿಮಿ-ಕೀಟ, ಮರಿಹುಳಗಳನ್ನು ಹುಡುಕಿ ತಿನ್ನುತ್ತವೆ.
ಬೆಳಿಗ್ಗೆ-ಸಂಜೆ, ಎರಡು ಸ್ವರದ, ಮಾಧುರ್ಯಭರಿತ, ಸ್ನಿಗ್ಧ ಮತ್ತು ಕಿವಿಗೆ ಇಂಪಾದ, ವೀ..ಪ್ಯು…. ಸಿಳ್ಳು; ಅದಕ್ಕೆ ವಿವಿಧ ದಿಕ್ಕುಗಳಿಂದ ಮತ್ತೆರಡು ಹಕ್ಕಿಗಳ ಮರುತ್ತರ.
ಮುಂಜಾನೆ, ಸೂರ್ಯೋದಯವಾಗುತ್ತಿದ್ದಂತೆಯೇ, ಕರಾರುವಕ್ಕಾಗಿ 6 ಗಂಟೆಗೆ, ಪ್ರತಿಯೊಂದು ನವರಂಗ ಹಕ್ಕಿ ಒಂಟಿಯಾಗಿ, ಬೇಟೆಯಾಡಲು ತನ್ನ ಸ್ಥಾನವನ್ನು ಆಯ್ಕೆ ಮಾಡಿಕೊಳ್ಳುತ್ತದೆ. ದಿನವೆಲ್ಲ ಹೊಟ್ಟೆ ಹೊರೆದುಕೊಂಡು, ಸಂಜೆ 6 ಗಂಟೆಗೆ ಪುನಃ ಗುಂಪು ಸೇರಿ, ಮರಗಳಲ್ಲಿ ವಾಸ್ತವ್ಯ ಹೂಡುತ್ತವೆ. ಸಮಯಪಾಲನೆಯನ್ನು ಇವುಗಳಿಂದ ಕಲಿಯಬೇಕು.
ಮೂಲತಃ ಹಿಮಾಲಯದ ವಾಸಿಗಳಾದ ಈ ಹಕ್ಕಿಗಳು ಹಿಮಾಲಯದಲ್ಲೇ ಅಲ್ಲದೆ, ಉತ್ತರದಲ್ಲಿ ಪಾಕಿಸ್ತಾನದಿಂದ ಹಿಡಿದು ನೇಪಾಳ ಮತ್ತು ಈಶಾನ್ಯ ಭಾರತದಲ್ಲಿ ಸಿಕ್ಕಿಂವರೆಗೂ ವ್ಯಾಪಿಸಿವೆ. ಚಳಿಗಾಲದಲ್ಲಿ ದಕ್ಷಿಣ ಭಾರತ ಮತ್ತು ಶ್ರೀಲಂಕಾದವರೆಗೂ ವಲಸೆ ಹೋಗುತ್ತವೆ. ಅಲ್ಲದೆ, ನವರಂಗ ಹಕ್ಕಿಗಳು ಕೆಲವೊಮ್ಮೆ ಮಧ್ಯ ಭಾರತ ಮತ್ತು ಪಶ್ಚಿಮ ಘಟ್ಟಗಳಲ್ಲಿಯೂ ಸಂತಾನೋತ್ಪತ್ತಿ ನಡೆಸುತ್ತವೆ. ಹಾಗಾಗಿ ಇವು ಸ್ಥಳೀಯ ವಲಸೆಯನ್ನೂ ಮಾಡುತ್ತವೆ ಎಂದು ಹೇಳಬಹುದು.
ಇವು ಜೂನ್ದಿಂದ ಆಗಸ್ಟ್ವರೆಗೆ ಸಂತಾನೋತ್ಪತ್ತಿ ನಡೆಸುತ್ತವೆ. ನೆಲದ ಮೇಲೆ ಹಾಗೂ ತಗ್ಗಿನ ಗಿಡಗಳ ಮೇಲೆ, ಕಡ್ಡಿ-ಹುಲ್ಲಿನಿಂದ ತಯಾರಿಸಿದ ಗೂಡು ಕಟ್ಟುತ್ತವೆ. ತಿಳಿನೀಲಿ ಚುಕ್ಕೆಗಳಿರುವ ಬಿಳಿಯ 4 ರಿಂದ 5 ಮೊಟ್ಟೆಗಳನ್ನಿಟ್ಟು ಮರಿಮಾಡುತ್ತವೆ.
ಅಳಿವಿನ ಅಂಚಿನಲ್ಲಿ ಇರುವ ನಿರುಪದ್ರವಿಯಾಗಿರುವ ಈ ಹಕ್ಕಿಗಳು ವಲಸೆ ಬಂದ ಸಮಯದಲ್ಲಿ ಕರ್ನಾಟಕದ ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ, ಹಾಗೂ ಮೈಸೂರಿನ ಚಾಮುಂಡಿಬೆಟ್ಟಗಳಲ್ಲಿಯೂ ಕಾಣಸಿಗುತ್ತವೆ.

ಡಾ. ಎಸ್.ವಿ. ನರಸಿಂಹನ್ ವೈದ್ಯರು. ಕೊಡಗಿನ ವಿರಾಜಪೇಟೆಯಲ್ಲಿ ನೆಲೆಸಿದ್ದಾರೆ. ಆರೋಗ್ಯ ರಕ್ಷಣೆಯೊಂದಿಗೆ ಪರಿಸರ ರಕ್ಷಣೆಯ ಬಗೆಗೂ ಅಪಾರ ಕಾಳಜಿ ಹೊಂದಿದ್ದಾರೆ. ಕಳೆದ ನಲವತ್ತೊಂದು ವರ್ಷಗಳಿಂದ ಡಾ. ನರಸಿಂಹನ್ರವರು ಕೈಯಿಂದ ಕುಂಚಿಸಿದ ಸುಮಾರು ಎಂಭತ್ತೆರಡು ಸಾವಿರ ‘ವನ್ಯಜೀವಿ ಸಂದೇಶ ಪತ್ರ’ಗಳು ಪ್ರಪಂಚದಾದ್ಯಂತ ತಲುಪಿವೆ. ಇದೊಂದು ಲಿಮ್ಕಾ ದಾಖಲೆ. ವಿಜ್ಞಾನ ಬರವಣಿಗೆಯಲ್ಲೂ ಆಸಕ್ತಿ ಹೊಂದಿರುವ ಇವರು, ಕನ್ನಡ ಭಾಷೆ, ಸಂಗೀತ-ಸಾಹಿತ್ಯ, ಖಗೋಳ, ಪರಿಸರ ಮುಂತಾದ ವಿಷಯಗಳಲ್ಲಿ ಶಾಲಾ-ಕಾಲೇಜುಗಳಲ್ಲಿ, ರೇಡಿಯೋ, ಟಿವಿ ಮತ್ತು ಪತ್ರಿಕಾ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಸಿದ್ದಾರೆ. ಕೊಡಗಿನ ಸಂಪೂರ್ಣ ಪಕ್ಷಿಸಂಕುಲದ ನಿಖರ ಮಾಹಿತಿಯುಳ್ಳ ‘ಕೊಡಗಿನ ಖಗರತ್ನಗಳು’ ಪುಸ್ತಕದಲ್ಲಿ ತಾವೇ ಎಲ್ಲ ಹಕ್ಕಿಗಳ ಚಿತ್ರಗಳನ್ನೂ ಬರೆದದ್ದು ಮತ್ತೊಂದು ಲಿಮ್ಕಾ ದಾಖಲೆ. ‘2013ರ ಕೊಡಗಿನ ವರ್ಷದ ವ್ಯಕ್ತಿ’ಪುರಸ್ಕೃತರು


