“ಬಾಬಿಯಕ್ಕನ ಮನೆಗೆ ನಾಗಿ ಬಂದು ಈಗ ಏಳೆಂಟು ವರ್ಷಗಳಾದರೂ ಆಗಿವೆ. ಈ ಧೀರ್ಘ ಅವಧಿಯಲ್ಲಿ ನಾಗಿಯ ಸಂಪೂರ್ಣ ವ್ಯಕ್ತಿತ್ವವೇ ಬದಲಾಗಿದೆಯೆಂದರೆ ತಪ್ಪಲ್ಲ. ಬದಲಾಗಿದೆ ಎನ್ನುವುದಕ್ಕಿಂತ ಬಾಬಿಯಕ್ಕನ ಹಾಗೂ ಆ ಮನೆಯ ವಿಶಿಷ್ಟವಾದ ಪ್ರಭಾವದಿಂದ, ಅವಳ ವ್ಯಕ್ತಿತ್ವವು ರೂಪುಗೊಂಡಿದೆ ಎಂದರೆ ಹೆಚ್ಚು ಸರಿಯಾದೀತೇನೋ. ಅಂದಿನ ಏನೂ ಅರಿಯದ ಮುಗ್ದ ಬಾಲಕಿ ಕಿರುಗಣೆ ಹಾಕಿಕೊಂಡು, ಬಡಕಟೆಯಾಗಿ ಪಿಟ್ಟೆಯಂತಿದ್ದವಳು ಈಗ ಸವಳುಸವಳಾಗಿ ಉದ್ದಕ್ಕೆ ಬೆಳೆದು ಸೀರೆ ಸುತ್ತುತ್ತಿದ್ದಳು”
ಮಿತ್ರಾ ವೆಂಕಟ್ರಾಜ ಬರೆದ ಕಥೆ ಈ ಭಾನುವಾರದ ನಿಮ್ಮ ಓದಿಗೆ
ಬಾಬಿಯಕ್ಕ ಒಳಗೆ ಬಂದು ಸೀದಾ ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿ ಚಿಲಕ ಸಿಕ್ಕಿಸಿ ಮಂಚದ ಮೇಲೆ ಬಿದ್ದುಕೊಂಡಳು. ಅವಳಿಗೆ ಎಲ್ಲಿಲ್ಲದ ಸುಸ್ತಾಗಿತ್ತು. ಎರಡೂ ಕೈಗಳಿಂದ ತಲೆಯನ್ನು ಒತ್ತಿ ಹಿಡಿದರೂ ಅದು ಧಿಮಿಗುಡುತ್ತಿತ್ತು. ಅವಳ ದೊಡ್ಡಕ್ಕನ ಮಗ ಶ್ರೀನಿಧಿಯ ಕಣ್ಣಿನ ಆಳ, ಅಲ್ಲಿರುವ ಭಾವನೆಗಳ ಭಾರಕ್ಕೆ ಅವಳು ಸಂಪೂರ್ಣ ಜರ್ಜರಿತಳಾಗಿದ್ದಳು. ಅವನ ಜೋತು ಬಿದ್ದ ಕಣ್ಣ ರೆಪ್ಪೆಗಳ ತಿರುವು ಅವಳಿಗೆ ಏನೇನನ್ನೋ ನೆನಪಿಸಿತ್ತು.
ಸಂಜೆಯಾಯಿತು; ಕತ್ತಲಾಯಿತು. ಬಾಬಿಯಕ್ಕನ ಮುಚ್ಚಿದ ಬಾಗಿಲುಗಳು ತೆರೆಯುವ ಲಕ್ಷಣಗಳು ಮಾತ್ರ ಕಾಣಲಿಲ್ಲ.
ಅವಳ ತಂಗಿಯ ಮಗಳು ಆಶಾ ಬಾಗಿಲ ಹೊರಗೆ ನಿಂತು, ‘ದೊಡ್ಮ, ದೊಡಮಾ…..’ ಎಂದು ಕರೆದರೆ ನಿರುತ್ತರ. ಒಬ್ಬರನ್ನೊಬ್ಬರು ನೋಡಿಕೊಂಡು ವಿಚಿತ್ರ ಎಂದು ಕೈ ತಿರುಗಿಸಿದರು. ಬಾಗಿಲ ಸದ್ದಿಲ್ಲ, ಒಳಗಿಂದ ಸುದ್ದಿಶ್ವಾಸವಿಲ್ಲ. ಶ್ರೀನಿಧಿಯೂ ತಪ್ಪಿತಸ್ಥನಂತೆ ಬಂದು ನಿಂತು, ‘ಬಾಬಿಯಕ್ಕ, ಬಾಯಿಯಕ್ಕಾ…….’ ಎಂದು ಬಾಗಿಲಿಗೆ ಕೈ ಕುಟ್ಟಿ ನಿಂತ.
ರಾತ್ರಿ ಗಂಟೆ ಎಂಟಾದರೂ, ಊಟದ ಪಂಕ್ತಿ ಏಳಲಿಲ್ಲ. ಅಡುಗೆಯ ಪದ್ದಕ್ಕನಿಗೆ ತಡೆಯದೆ, ‘ಬಾಬಿಯಕ್ಕಾ, ಬಾಬಿಯಕ್ಕಾ, ಏಳು. ಊಟದ ಹೊತ್ತಾಯ್ತು. ಪಂಕ್ತಿ ಮಾಡುದಾ?’ ಎಂದಳು. ಬಾಗಿಲ ಮೇಲೆ ಕೈಯಿಟ್ಟು ಸವರುತ್ತ, ಬಾಗಿಲ ಸಂದಿಗೆ ಬಾಯಿಟ್ಟು ಕೇಳಿದಳು.
ಆಗ ಕೇಳಿತು ಒಂದು ಗುಡುಗು. ನಿರೀಕ್ಷಣೆಯಿದ್ದೂ ಕೆಲವು ಗುಡುಗುಗಳು ಬೆಚ್ಚಿಬೀಳಿಸುತ್ತವಲ್ಲ, ಅಂತಹದೊಂದು ಎದೆಯಾಳಕ್ಕೆ ಬಡಿಯುವ ಗಡಗುಟ್ಟುವ ದನಿ.
‘ನನ್ನ ಸುದ್ದಿಗೆ ಬಂದರೆ ಜಾಗ್ರತೆ. ಏನಾರೂ ಬೇಕಾದ್ರೆ ನಾನೇ ಕೇಳ್ತೆ. ಗೊತ್ತಾಯ್ತಲ್ದ?’
ಬಾಗಿಲ ಸಂದಿಯಿಂದ ತಪ್ಪಿಸಿಕೊಂಡ ಆ ಗುಡುಗು ಪದ್ದಕ್ಕನ ಕಿವಿಯನ್ನಪ್ಪಳಿಸಿ, ಅಲ್ಲಿದ್ದವರನ್ನೆಲ್ಲ ತಾಂಟಿ, ಇಡೀ ಮನೆಯಲ್ಲಿ ಪ್ರತಿಧ್ವನಿಸಿತು. ನಾಗಿಯ ಎದೆಯಲ್ಲಿ ಚಳಿಯ ನಡುಕ ಹುಟ್ಟಿತು. ಎದೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಮೂಲೆಯಲ್ಲಿ ಹುದುಗಿ ಕುಳಿತ ಅವಳಿಗೆ ದುಃಖ ಉಮ್ಮಳಿಸಿ ಬರುತ್ತಿತ್ತು.
ಊಟದ ಮನೆಯಲ್ಲಿ ಮೌನದ ಪಂಕ್ತಿ ನಡೆಯಿತು. ಅನ್ನ ಮೇಲೋಗರಗಳು ತಣಿದು ಮಣ್ಣು ಕಚ್ಚಿದ್ದವು. ಉಂಡವರು ಉಂಡರು. ಬಿಟ್ಟವರು ಬಿಟ್ಟರು. ಬಡಿಸುವವರ ಧ್ಯಾನವೂ ಎಲ್ಲೋ ಏನೋ. ಚಟ್ನಿ ಹಾಕುವಲ್ಲಿ ತಾಳ್ಳು ಬಡಿಸಿದರು. ತಾಳ್ಳಿನ ಜಾಗದಲ್ಲಿ ಹುಳಿ ಸುರಿದರು. ಶ್ರೀನಿಧಿ ಊಟದ ಕೋಣೆಗೆ ಬರದೆಯೇ ಸೀದಾ ಉಪ್ಪರಿಗೆಗೆ ಹೋಗಿಬಿಟ್ಟ. ಮೂಲೆಯಲ್ಲಿ ಹುದುಗಿ ಕುಳಿತ ನಾಗಿ ಅಲ್ಲಿಂದ ಏಳಲೇ ಇಲ್ಲ.
ರಾತ್ರಿಯಾಗಿ ಬೆಳಗಾಯಿತು. ಬಾಬಿಯಕ್ಕನ ಕೋಣೆಯಿಂದ ಯಾವ ಸದ್ದೂ ಇಲ್ಲ. ಬಾಬಿಯಕ್ಕನ ತಂಗಿ ಭಾಮಳಿಗೆ ಮುನ್ನಾದಿನ ಸಂಜೆಯೇ ಸುದ್ದಿ ಹೋಗಿತ್ತು. ಮನೆಯ ಬಲಬದಿಯ ಓಣಿಯ ಕೊನೆಯಲ್ಲೇ ಅವಳ ಮನೆ. ಅವಳು ಕೆಲಸ ಕಾರ್ಯಗಳನ್ನು ಅಲ್ಲಲ್ಲೇ ಬಿಟ್ಟು ಉಟ್ಟ ಸೀರೆಯಲ್ಲೇ ಬಂದವಳು, ಅಕ್ಕನ ಕೋಣೆಯ ಹೊರಗೆ ನಿಂತು, ‘ಅಕ್ಕ… ಅಕ್ಕಾ…’ ಎಂದು ಕರೆದದ್ದು ವ್ಯರ್ಥವಾಯಿತು. ಏನು ಮಾಡುವುದೆಂದು ತೋಚದೆ ಬಾಗಿಲ ಹೊರಗೆ ಶತಪಥ ತಿರುಗಿದಳು. ಆವತ್ತು ಅವಳು ಮನೆಗೂ ಹೋಗದೆ ಅಲ್ಲೇ ಉಳಿದಳು.
ಹೊಳೆಬದಿಯ ಏರಿನಲ್ಲಿರುವ ಇನ್ನೊಬ್ಬಳು ತಂಗಿ ಹೇಮಾಳಿಗೆ ಬೆಳಿಗ್ಗೆ ಫೋನು ಹೋಯಿತು. ಮಗನ ಸ್ಕೂಟರಿನ ಹಿಂದೆ ಕುಳಿತು ಅವಳು ಆಗಿಂದಾಗಲೇ ಬಂದವಳು, ಏನಾಯ್ತು? ಎನ್ನುತ್ತ, ‘ನಂಗೆ ನಿನ್ನೆ ಯಾಕೆ ಹೇಳಲಿಲ್ಲ?’ ಎಂಬ ಆಕ್ಷೇಪಣೆಯೊಡನೆ, ಮುಚ್ಚಿದ ಬಾಗಿಲ ಎದುರು ಕಂಗಾಲಾಗಿ ನಿಂತಳು.
ಬಾಬಿಯಕ್ಕನ ಗಂಡ ಪ್ರಹ್ಲಾದರಾಯ ಸ್ವರ ಎತ್ತರಿಸಿ ಮಾತನಾಡಿದ್ದನ್ನು ಯಾರೂ ಕೇಳಿದವರಿರಲಿಲ್ಲ. ಯಾವತ್ತೂ ಮೃದುದನಿಯಲ್ಲೇ ಮಾತನಾಡುವ ಆತ, ಕೋಣೆಯ ಹೊರಗೆ ಮುಜುಗರದಿಂದ ನಿಂತು ಬಾಗಿಲು ತಟ್ಟಿ, ‘ಮ್ಯಾಡಮ್….’ ಎಂದರು. ತಮಾಶೆಯಲ್ಲೋ, ಅಭಿಮಾನದಲ್ಲೋ ಮ್ಯಾಡಮ್ ಎಂದು ಕರೆಯಲು ಸುರುವಾದದ್ದು, ಕ್ರಮೇಣ ಅವರಿಗೆ ಅದೇ ರೂಢಿಯಾಗಿತ್ತು. ‘ಆ ಶ್ರೀನಿಧಿಗೆ ಬುದ್ಧಿ ಇಲ್ಲೆ. ನೀವ್ ಹೀಂಗ್ ಸಿಟ್ಟ್ ಮಾಡಿರೆ ಹ್ಯಾಂಗೆ?’ ಎಂದು ತನ್ನೊಂದಿಗೆ ನಿಂತಿದ್ದವರನ್ನು ಉದ್ದೇಶಿಸಿ ಎಂಬಂತೆ ಮಾತನಾಡಿದರು. ಆದರೆ ಯಾವುದಕ್ಕೂ ಒಳಗಿನ ಪ್ರತಿಕ್ರಿಯೆ ಮಾತ್ರ ಸೊನ್ನೆ.
ಆ ದಿನ ಬೆಳಿಗ್ಗೆ ಬಾಬಿಯಕ್ಕ ಸ್ನಾನ ಮಾಡಿ ಬಂದು ಎಂದಿನಂತೆ, ಗಂಜಿ ಹಾಕಿ ತೊಳೆದು ಇಸ್ತ್ರಿ ಹಾಕಿಟ್ಟ ಗರಿಗರಿಯಾದ ಸೀರೆಯೊಂದನ್ನು ಉಟ್ಟು, ಮುಖಕ್ಕೆ ತೆಳ್ಳಗೆ ಪೌಡರು ಹಚ್ಚಿ, ತಲೆ ಬಾಚುತ್ತ ಕುಳಿತಿದ್ದಾಗಲೇ ಇಷ್ಟೆಲ್ಲ ನಡೆದದ್ದು. ಅವಳ ಕೋಣೆಯಲ್ಲಿ ಆಳೆತ್ತರದ ಕನ್ನಡಿಯಿದ್ದರೂ, ಅಲ್ಲಿ ಕತ್ತಲೆಯೆಂದು ಪಡಸಾಲೆಯ ಕಿಟಿಕಿಯ ದಂಡೆಯಲ್ಲಿ ಎಂಟಿಂಚಿನ ಚೌಕ ಕನ್ನಡಿಯೊಂದನ್ನು ಒರಗಿಸಿ ಇಟ್ಟು, ಅದರ ಎದುರು ಮೊಣಕಾಲೂರಿ ತಲೆಬಾಚುವುದು ಅವಳ ಕಟ್ಟಳೆ. ಹಾಗೆ ತಲೆ ಬಾಚುವಾಗಲೇ ಹೆಚ್ಚಾಗಿ ಅಡುಗೆಯ ಪದ್ದಕ್ಕ, ‘ಹೌದನ, ಬಾಬಿಯಕ್ಕ, ಇವತ್ತು ಮೇಲಾರ ಎಂಥ ಮಾಡುದನ?’ ಎಂದು ಕೇಳುವುದು, ಮತ್ತು ಅವಳು – ಮಟ್ಟಿಬದನೆ ಬೋಳು ಹುಳಿ, ಅಲಸಂಡೆ ಕಾಯಿ ಸಾಸಿವೆ ಅರೆದು ಪಲ್ಯ, ಇತ್ಯಾದಿ ಇತ್ಯಾದಿ ಅಂದಿನ ಅಡುಗೆಯ ಪಟ್ಟಿ ಹೇಳುವುದು ವಾಡಿಕೆ. ಬಾಬಿಯಕ್ಕ ಊರಲ್ಲಿಲ್ಲದಿದ್ದರೆ ವಿನಃ, ಉಳಿದಂತೆ ಎಲ್ಲ ದಿನಗಳಲ್ಲೂ ಅವಳ ಹೇಳಿಕೆ ಪ್ರಕಾರವೇ ಅಡುಗೆ ಮಾಡುವುದು ಪದ್ದಕ್ಕನ ರಿವಾಜು. ಪದ್ದಕ್ಕ ಅಂತ ಅಲ್ಲ, ಬಾಬಿಯಕ್ಕನ ಹತ್ತಿರ ಕೇಳದೆ ಆ ಮನೆಯಲ್ಲಿ ಒಂದು ಹಿಡಿಕಡ್ಡಿಯನ್ನು ಆಚಿಂದ ಈಚೆಗೆ ಯಾರೂ ಇಟ್ಟವರಿಲ್ಲ. ಆ ಮನೆಯಲ್ಲಿ ಅವಳು ಎಳೆದದ್ದೇ ಗೆರೆ, ಅವಳು ಹಾಕಿದ್ದೇ ದಾರಿ.
ಬಾಬಿಯಕ್ಕ ಹುಟ್ಟಿ, ಬೆಳೆದು, ಮಾತ್ರವಲ್ಲ ಮದುವೆಯಾಗಿ ಬಾಳಿದ ಮನೆ ಅದು. ಅವಳ ಅಕ್ಕಂದಿರಿಬ್ಬರು ಮದುವೆಯಾದ ಒಂದೇ ವರ್ಷದಲ್ಲಿ ಒಂದೊಂದು ಮಗಳಂದಿರನ್ನು ಹೆತ್ತು ಸತ್ತ ಮೇಲೆ ಅವಳ ತಂದೆ ರಾಮಪ್ಪಯ್ಯನವರು ದುಃಖ ಭರಿಸಲಾರದೆ, ಬಾಬಿಯಕ್ಕನಿಗೆ ಮನೆ ಅಳಿಯನನ್ನೇ ಮಾಡಿಕೊಂಡಿದ್ದರು. ಅವಳನ್ನು ದೂರ ಕಳಿಸುವುದು ಅವರಿಗೆ ಬೇಡವಾಗಿತ್ತು. ವಕೀಲರಾದ ಅವರು ತಮ್ಮ ಕೈಕೆಳಗೆ ಕೆಲಸ ಮಾಡುವ, ಆಗಷ್ಟೇ ವಕೀಲಿ ಕಲಿತು ಬಂದ ಹುಡುಗ ಪ್ರಹ್ಲಾದನಿಗೆ ಬಾಬಿಯಕ್ಕನನ್ನು ಕೊಟ್ಟು ಮದುವೆ ಮಾಡಿದ್ದರು. ಈಗ ನಾಲ್ಕೈದು ವರ್ಷಗಳ ಹಿಂದೆ ರಾಮಪ್ಪಯ್ಯ ತೀರಿ ಹೋದ ಮೇಲೆ ಮನೆಯ ಆಡಳಿತದ ಹೊಣೆ ತಾನಾಗಿ ಅವಳ ಕೈ ಸೇರಿತ್ತು. ತಂದೆ ಇರುವಾಗಲೂ, ಮನೆಯ ಸಮಸ್ತ ಆಡಳಿತವನ್ನು ಬಾಬಿಯಕ್ಕನೇ ನೋಡಿಕೊಳ್ಳುತ್ತಿದ್ದಳೆಂದರೆ ಸರಿಹೋಗುತ್ತದೇನೋ. ಆ ಊರಿನಲ್ಲಿ ಮಾತ್ರವಲ್ಲ ಜಿಲ್ಲೆಯಲ್ಲೂ ಹೆಸರು ಮಾಡಿದ ವಕೀಲರಾಗಿದ್ದರೂ, ಮಗಳನ್ನು ಕೇಳದೆ ರಾಮಪ್ಪಯ್ಯನವರು ಯಾವ ಕೆಲಸಕ್ಕೂ ಕೈ ಹಾಕಿದವರಲ್ಲ. ಮಾತು ಮಾತಿಗೆ ಬಾಬೀ.. ಎಂದು ಕರೆದು ಕೇಳದಿದ್ದರೆ ಅವರಿಗೆ ಮನಸ್ಸಮಾಧಾನವಾಗುತ್ತಿರಲಿಲ್ಲ. ಅವಳ ಬಾಯಿಯಿಂದ, ‘ಆಯಿತು ಅಪ್ಪಯ್ಯ’ ಎಂದು ಬಂದ ಮೇಲೇ ಕೆಲಸ ಮುಂದುವರಿಸುತ್ತಿದ್ದರು. ಒಮ್ಮೊಮ್ಮೆ ಆಫೀಸು ಕಡತಗಳ ರಾಶಿಯ ಮಧ್ಯದಿಂದ ತಲೆ ಎತ್ತಿ, ಬಾಬೀ… ಎಂದು ಕೂಗಿದರೆಂದರೆ, ಅವಳು ಎಲ್ಲಿದ್ದರೂ ಅಲ್ಲಿಗೇ ಓಡಿ ಬಂದು ಅವರ ಮಾತಿಗೆ ಕಿವಿಕೊಡಬೇಕು; ಅಂದರೇ ಅವರಿಗೆ ಸಮಾಧಾನ. ಒಕ್ಕಲೆಬ್ಬಿಸುವುದಾದರೂ, ಜಾಗ ಮಾರುವುದಾದರೂ, ಬ್ಯಾಂಕಿನ ವ್ಯವಹಾರವೇ ಆದರೂ, ಮಗಳೊಟ್ಟಿಗೆ ಮಾತುಕತೆ ನಡೆಸದೆ ಹೆಜ್ಜೆ ಮುಂದೆ ಇರಿಸಿದ್ದವರಲ್ಲ.
ಅವಳ ಗಂಡ ಪ್ರಹ್ಲಾದರಾಯನಾದರೋ ಮನೆ ಅಳಿಯನಿಗೆ ತಕ್ಕ ಜಾಯಮಾನದವನೇ. ಮಾವನ ಎದುರಂತೂ ಸ್ವರ ಏರಿಸುವುದಿರಲಿ, ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಲೂ ಇರಲಿಲ್ಲ. ಇನ್ನು ಹೆಂಡತಿಯೆಂದರೂ ವಿಶೇಷ ಗೌರವವೇ. ಅವಳ ಅಭಿಪ್ರಾಯ, ತೀರ್ಮಾನಗಳೆಂದರೆ, ಮ್ಯಾಡಮ್ ಹೇಳಿದ ಮೇಲೆ ಅದು ಸಮವೇ ಇರಬೇಕು ಎನ್ನುವಂತಹ ಮನೋಧರ್ಮ.
ತಂದೆ ರಾಮಪ್ಪಯ್ಯನವರಿಂದ ತರಬೇತು ಪಡೆದ ಅವಳು ತುಂಬಿದ ಆ ಮನೆಯನ್ನು ಸಮರ್ಥವಾಗಿ ನಡೆಸಿಕೊಂಡು ಬರುತ್ತಿದ್ದ ಪರಿಗೆ ಎಲ್ಲರೂ ಅಚ್ಚರಿಪಡುತ್ತಿದ್ದುದಿತ್ತು. ಬಾಬಿಯಕ್ಕನಲ್ಲಿ ರಾಣಿಯ ವರ್ಚಸ್ಸಿದೆಯೆಂದು ಊರವರು ಮಾತನಾಡುತ್ತಿದ್ದರು. ಅವಳ ಮೋರೆಯಲ್ಲಿದ್ದ ಅಧಿಕಾರದ ಗತ್ತು, ಸೀರೆಯ ನೆರಿಗೆಯನ್ನು ಚಿಮ್ಮುತ್ತ ನೆಟ್ಟಗೆ ನಡೆಯುವ ಪರಿ, ಅಧಿಕಾರವಾಣಿಯಿಂದ ಮಾತನಾಡುವಾಗಿನ ಸ್ವರದ ಠೇಂಕಾರ ಈ ಮಾತಿಗೆ ಪುಷ್ಟಿ ಕೊಡುತ್ತಿದ್ದುವು. ಅವರ ಮನೆಯಲ್ಲಿ ಹೆಂಗಸರದೇ ಸಾಮ್ರಾಜ್ಯ ಎಂದು ಹೇಳುವವರೂ ಇದ್ದರು. ಆ ಮಾತಿನಲ್ಲೂ ಹುರುಳಿಲ್ಲದಿರಲಿಲ್ಲ. ಬಾಬಿಯಕ್ಕ, ಅವಳ ಇಬ್ಬರು ಹೆಣ್ಣುಮಕ್ಕಳು, ತೀರಿ ಹೋದ ಅಕ್ಕಂದಿರಿಬ್ಬರ ಮಗಳಂದಿರು, ಊರಲ್ಲೇ ಇದ್ದು ಹಬ್ಬ ಹುಣ್ಣಿಮೆ ಮತ್ತೊಂದೆಂದು ಆಗಿಂದಾಗ ಮನೆಗೆ ಬಂದಿರುತ್ತಿದ್ದ ತಂಗಿಯಂದಿರು, ಅವರ ಹೆಣ್ಣುಮಕ್ಕಳು, ದೂರದ ಸಂಬಂಧಿ ಯಮುನತ್ತೆ, ಅಡುಗೆಯ ಪದ್ದಕ್ಕ, ಪರಿಚಾರಿಕೆಯ ಸಣ್ಣಮ್ಮ, ಕರೆದ ಬಾಯಿಗೆಂದು ಊರಿಂದ ಕರೆತಂದ ಒಕ್ಕಲು ಹುಡುಗಿ ನಾಗಿ-ಬ್ರಾಹ್ಮಣರಾದರೂ ಅಳಿಯಕಟ್ಟಿನವರ ಮರ್ಜಿಯಿತ್ತು ಅವರ ಮನೆಯಲ್ಲಿ ಎನ್ನುವವರೇ ಎಲ್ಲರೂ.
ಆ ಮನೆಯಲ್ಲಿ ಹೇಗೆಂದರೆ, ಮನೆಯಲ್ಲಿ ಯಾರ್ಯಾರು ಇದ್ದಾರೆಂದು ಎಷ್ಟೋ ಸಲ ಮನೆಯವರಿಗೇ ತಿಳಿಯದಿರುವಂತಹ ಪರಿಸ್ಥಿತಿ ಇರುತ್ತಿದ್ದುದೂ ಇತ್ತು. ಊಟಕ್ಕೋ, ತಿಂಡಿಗೋ, ಇನ್ನೊಂದಕ್ಕೋ ಯಾರು ಯಾರೋ, ಮಕ್ಕಳ ಗೆಳೆಯರೋ, ಶಾಲೆಯ ಅಧ್ಯಾಪಕರೋ, ಬ್ಯಾಂಕಿನ ಸಿಬ್ಬಂದಿಗಳೋ, ಬಂದು ಹೋಗಿಕೊಂಡೇ ಇರುತ್ತಿದ್ದರು. ವಕೀಲರ ಮನೆಯೆಂದರೆ ಒಂದು ಛತ್ರ ಎಂದೇ ಹೇಳುವ ವಾಡಿಕೆ. ಬಾಬಿಯಕ್ಕನ ತಂದೆಯಿರುವಾಗಲಂತೂ, ಅವರು ಎಷ್ಟೋ ಸಲ ಮನೆ ಮಕ್ಕಳನ್ನು ಮನೆಗೆ ಬಂದ ನೆಂಟರೆಂದು ಪ್ರೀತಿಯಿಂದ ಮಾತನಾಡಿಸಿ, ಬಂದ ನೆಂಟರನ್ನು ಮನೆಮಕ್ಕಳೆಂದು ಬೈದ ಎಷ್ಟೋ ಪ್ರಸಂಗಗಳಿದ್ದವು.
ನೀಳವಾದ ಮೂಗಿನಿಂದಾಗಿಯೋ, ಎದ್ದು ಕಾಣುವ ವ್ಯಕ್ತಿತ್ವದಿಂದಲೋ, ನರ್ಗೀಸಿನಂತಿದ್ದಾಳೆಂದೂ ಹೇಳುವವರಿದ್ದರು. ಯಾರಾದರೂ ಬಾಯಿಬಿಟ್ಟು “ನೀನು ನರ್ಗೀಸಿನ ಹಾಂಗೆ ಕಾಣ್ತಿಯ” ಎಂದರೆ ಉಕ್ಕುವ ನಗೆಯ ಮಧ್ಯೆಯೂ, ‘ಏ ಸಾಕಾ, ಸುಮ್‌ಸುಮ್‌ನೆ ಏನಾರೂ ಹೇಳ್ಬೇಡ್ವ’ ಅಂತ ಅಲ್ಲಗಳೆಯುತ್ತಿದ್ದಳಾದರೂ, ನರ್ಗೀಸ್ ಅವಳ ಮೆಚ್ಚಿನ ನಟಿಯಾಗಿದ್ದದ್ದಂತೂ ಹೌದು.
ಬಾಬಿಯಕ್ಕನದು ನೋಡಲು ಆಕರ್ಷಕ ವ್ಯಕ್ತಿತ್ವ. ಕೆಂಪು ಬಿಳಿಯ ಮೈಬಣ್ಣ. ಉದ್ದ ಮುಖದಲ್ಲಿ ಎದ್ದು ಕಾಣುವ ಸಂಪಿಗೆ ಮೂಗು. ಗಂಡನಿಗಿಂತ ಒಂದೂವರೆ ಎರಡಿಂಚಾದರೂ ಉದ್ದದ ಜೀವ. ಮದುವೆಯಾಗುವಾಗ ಅವಳಿಗೆ ಹದಿನೈದು ತುಂಬಿ ಹದಿನಾರು. ಮೆಟ್ರಿಕ್ ಮುಗಿದಿತ್ತಷ್ಟೆ. ಆಗ ಅವಳು ಅಷ್ಟು ಉದ್ದ ಇರಲಿಲ್ಲವಾದರೂ, ಮತ್ತೆ ಒಂದೇ ವರ್ಷದಲ್ಲಿ ಗಂಡನನ್ನು ಮೀರಿಸಿ ಬೆಳೆದವಳು, ಐದೂವರೆ ಅಡಿಗಿಂತಲೂ ಉದ್ದವಾಗಿ, ಅದಕ್ಕೆ ತಕ್ಕಷ್ಟು, ಅಥವಾ ತುಸು ಜಾಸ್ತಿಯೇ ಎನ್ನಬಹುದೇನೋ ಎಂಬಷ್ಟು, ತೋರವಾಗಿದ್ದಳಾಗಿ, ಸಭೆಗೆ ಬಂದರೆ ಎದ್ದುಕಾಣುವಂತಹ ಅಬ್ಬರದ ವ್ಯಕ್ತಿತ್ವ. ನೀಳವಾದ ಮೂಗಿನಿಂದಾಗಿಯೋ, ಎದ್ದು ಕಾಣುವ ವ್ಯಕ್ತಿತ್ವದಿಂದಲೋ, ನರ್ಗೀಸಿನಂತಿದ್ದಾಳೆಂದೂ ಹೇಳುವವರಿದ್ದರು. ಯಾರಾದರೂ ಬಾಯಿಬಿಟ್ಟು “ನೀನು ನರ್ಗೀಸಿನ ಹಾಂಗೆ ಕಾಣ್ತಿಯ” ಎಂದರೆ ಉಕ್ಕುವ ನಗೆಯ ಮಧ್ಯೆಯೂ, ‘ಏ ಸಾಕಾ, ಸುಮ್‌ಸುಮ್‌ನೆ ಏನಾರೂ ಹೇಳ್ಬೇಡ್ವ’ ಅಂತ ಅಲ್ಲಗಳೆಯುತ್ತಿದ್ದಳಾದರೂ, ನರ್ಗೀಸ್ ಅವಳ ಮೆಚ್ಚಿನ ನಟಿಯಾಗಿದ್ದದ್ದಂತೂ ಹೌದು.
ಕೋರ್ಟಿನ ಕೆಲಸ ಮುಗಿದ ಮೇಲೆ ಕಾರು ಸುಮ್ಮನೆ ಮನೆಯಲ್ಲೇ ಇರುತ್ತದೆಂದು, ಬಾಬಿಯಕ್ಕ ಕಾರು ಬಿಡುವುದನ್ನೂ ಕಲಿತಿದ್ದಳು. ಆ ಸಣ್ಣ ಊರಿನಲ್ಲಿ ಅರವತ್ತು ಎಪ್ಪತ್ತರ ದಶಕದಲ್ಲಿ ಕಾರು ಇರುವ ಮನೆಗಳೇ ಬೆರಳೆಣಿಕೆಯಷ್ಟಿರುವ ಕಾಲದಲ್ಲಿ, ಹೆಂಗಸೊಬ್ಬಳು ಕಾರು ಬಿಡುವುದೆಂದರೆ ತೀರ ವಿಶೇಷವಾಗಿತ್ತು. ಸಂಜೆಯ ಹೊತ್ತು ಒಮ್ಮೊಮ್ಮೆ ಅವಳು ತಂಗಿಯಂದಿರನ್ನು, ಮಕ್ಕಳನ್ನು ಕೂಡಿಸಿಕೊಂಡು ಹೊಳೆ ಬದಿಗೋ, ಕೋಡಿ ಬೀಚಿಗೋ, ನರಿಬೇಣದ ಉದ್ಯಾನಕ್ಕೋ ಕಾರು ಬಿಟ್ಟುಕೊಂಡು ಹೊರಟಳೆಂದರೆ, ಬೀದಿಯಲ್ಲಿ ಹೋಗುವವರೇ ಆಗಲಿ, ಅಂಗಡಿ ಬಾಗಿಲುಗಳಲ್ಲಿ ನಿಂತವರೇ ಆಗಲಿ, ಒಂದು ಗಳಿಗೆ ಬಾಯಿ ಬಿಟ್ಟು ನಿಂತು ನೋಡದೆ ಇರುತ್ತಿರಲಿಲ್ಲ. ಆಗ, ಅವಳ ಒಟ್ಟಿಗೆ ಕುಳಿತವರು ಬೆಟ್ಟು ಮಾಡಿ ಅವಳಿಗೆ ಅದನ್ನು ತೋರಿಸಿ, ‘ಬಾಬಿಯಕ್ಕ, ಅಲ್ಲ್ ಕಾಣ್, ನಿಂತ್ಕಂಡ್ ಕಾಂಬುದು.’ ಎಂದರೆ, ಬಾಬಿಗೆ ಅದೆಲ್ಲ ಕ್ಯಾರೇ ಇರಲಿಲ್ಲ. ‘ಬೇರೆ ಕಸುಬಿಲ್ಲ, ಕಾಂತೊ’ ಎಂದು ನಿಕಾಶೆ ಮಾಡಿಬಿಡುತ್ತಿದ್ದಳು.
ಚಿಕ್ಕಂದಿನಿಂದಲೇ ಮನೆಯ ಆಡಳಿತದ ನೊಗವನ್ನು ಹೊತ್ತು ಅವಳ ಮನಸ್ಸು ಕಠಿಣವಾಗಿದೆ, ಗಂಡಸರಂತೆ ವರ್ತಿಸುತ್ತಾಳೆ ಎನ್ನುತ್ತಿದ್ದರಾದರೂ, ಒಳಗಿನಿಂದ ಬೆಣ್ಣೆಯಂತಹ ಮೃದು ಹೃದಯವೊಂದೂ ಇದೆಯೆನ್ನುವ ಸತ್ಯ ಮಾತ್ರ ಕೆಲವರಿಗಷ್ಟೇ ಗೊತ್ತಿತ್ತು. ಅವಳೊಂದಿಗೆ ಸಿನೆಮಾ ನೋಡಲು ಹೋದವರಿಗಂತೂ ಸಿನೆಮಾಕ್ಕೇ ಸೀಮಿತವಾದ ಆ ಬೆಣ್ಣೆ ಹೃದಯದ ಪ್ರತ್ಯಕ್ಷ ದರ್ಶನ ಆಗಿಯೇ ಆಗುತ್ತಿತ್ತು.
ಊರಲ್ಲಿದ್ದ ಎರಡು ಟಾಕೀಸುಗಳಲ್ಲಿ ಯಾವ ಒಳ್ಳೆಯ ಸಿನೆಮಾ ಬಂದರೂ ಅವರ ಮನೆಯ ಪಟಾಲಂ ಹೊರಡುತ್ತಿತ್ತು. ಸಿನೆಮಾದ ಟಿಕೇಟು ಮುಂದಾಗಿಯೇ ಮನೆಬಾಗಿಲಿಗೆ ಬರಬೇಕು ಹಾಗೂ ಎರಡೇ ಮಾರು ದೂರದ ಟಾಕೀಸಿಗೂ ಕಾರಿನಲ್ಲಿಯೇ ಹೋಗಬೇಕು. ಕಾರಿನಿಂದಿಳಿದು, ಸೇನಾಧಿಪತಿಯಂತೆ ಬಾಬಿ ನಡೆಯುತ್ತಿದ್ದರೆ, ಅವಳ ಹಿಂದೆ ಮುಂದೆ ಆಚೆ ಈಚೆ ಉಳಿದವರು ಹೆಜ್ಜೆ ಹಾಕಬೇಕು. ಮನೆಯ ಹೆಂಗಸರು, ಗಂಡಸರು, ಮಕ್ಕಳಲ್ಲದೆ, ಒಬ್ಬಿಬ್ಬ ಮನೆಯಾಳುಗಳೂ ಗಾರ್ಡುಗಳಂತೆ ಜೊತೆಗಿರುತ್ತಿದ್ದರು. ಬಾಬಿಯಕ್ಕನ ಮನೆಯವರು ಸಿನೆಮಾಕ್ಕೆ ಹೋದರೆಂದರೆ ಅದು ಇಡೀ ಊರಿಗೇ ಸುದ್ದಿಯಾಗುತ್ತಿತ್ತು. ಇನ್ನು ಸಿನೆಮಾ ನೋಡಿ ಬಂದ ಮೇಲೆ ಪಡಸಾಲೆಯಲ್ಲಿ ಸುತ್ತಲೂ ಗೋಡೆಗೊರಗಿ ಕುಳಿತು ನಡೆಯುವ ಬಿರುಸಾದ ಚರ್ಚೆಯಲ್ಲಿ ಆ ಚಲನಚಿತ್ರದ ಮೇಲೆ ನಡೆಯುವ ಸೂಕ್ಷ್ಮ ಶಸ್ತ್ರಕ್ರಿಯೆಗೆ ಬಾಬಿಯದೇ ಅಧ್ಯಕ್ಷತೆ. ಯಾರ್ಯಾರ ನಟನೆ, ಯಾವ್ಯಾವ ಹಾಡು ಹೇಗೆ, ಏನು, ಯಾಕೆ, ಇತ್ಯಾದಿಯಾಗಿ ಎಳೆ ಎಳೆಯಾದ ವಿಮರ್ಶೆ ನಡೆಯಬೇಕು. ಪಡಸಾಲೆಯ ಮಧ್ಯದಲ್ಲಿ ಎತ್ತರದ ಹೊಸ್ತಿಲಿನ ಮೇಲೆ ಮುಂಗೈಯಿರಿಸಿ, ಬಾಗಿಲಿಗೊರಗಿ ಕುಳಿತ ಬಾಬಿಯಕ್ಕ ತೀರ್ಮಾನ ಹೊರಡಿಸಬೇಕು.
ಈಗ, ಮೇಲೆ ನಡೆದ ಸಂಗತಿ ನಡೆದುದರ ಮೂಲ ಹುಡುಕಿದರೆ, ಅದು ಸಿನೆಮಾದಲ್ಲೇ ಇದೆಯೆಂದರೆ ಯಾರಿಗಾದರೂ ಆಶ್ಚರ್ಯವಾಗಬಹುದು. ಆವತ್ತು ಅವರೆಲ್ಲ ನೂತನ್-ಸುನಿಲ್‌ದತ್ ನಟಿಸಿದ ಹಿಂದಿ ಸಿನೆಮಾ ‘ಸುಜಾತಾ’ ನೋಡಿ ಬಂದಿದ್ದರು. ಆಗಲೇ, ಅಂದರೆ ಸಿನೆಮಾ ನೋಡಿ ಬಂದ ಮೇಲೆ ಯಥಾಪ್ರಕಾರ ಚರ್ಚೆ ನಡೆದು ಮೆಚ್ಚುಗೆಯ ಮಹಾಪೂರವೇ ಹರಿದು ಬರತೊಡಗಿದಾಗಲೇ, ಬಾಬಿಯ ದೊಡ್ಡಕ್ಕನ ಮಗ ಶ್ರೀನಿಧಿಯು ವಿಷಯದ ಪ್ರಸ್ತಾಪ ಮಾಡಿದ್ದ. ಅಂದರೆ, ಬ್ರಾಹ್ಮಣ ಹುಡುಗ ಸುನಿಲ್‌ದತ್ತ್ ಕೆಳಜಾತಿಯ ಹುಡುಗಿ ನೂತನಳನ್ನು ಪ್ರೀತಿಸುವ ಆ ಕತೆ ಎಲ್ಲರ ಮನಸೂರೆಗೊಂಡಿತ್ತು. ಅದೆಷ್ಟೋ ದಿನಗಳಿಂದ ಹೇಳಬೇಕೆಂದುಕೊಂಡೂ, ಹೇಳಲು ಎದೆಗಾರಿಕೆ ಬರದೆ ಒದ್ದಾಡುತ್ತಿದ್ದ ಶ್ರೀನಿಧಿಗೆ ಇದ್ದಕ್ಕಿದ್ದಂತೆ, ಹೇಳಿದ್ರೆ ಈಗಲೇ. ಈಗ ಬಿಟ್ರೆ ಇನ್ನ್ ಆಗ್ಲಿಕ್ಕಿಲ್ಲ, ಎಂದು ಅನಿಸಿ, ಅಳ್ಳೆ ಗಟ್ಟಿ ಮಾಡಿಕೊಂಡು ತನ್ನ ಮತ್ತು ನಾಗಿಯ ಬಗ್ಗೆ ಹೇಳುವ ಧೈರ್ಯ ಮಾಡಿದ್ದ.
ಕ್ಷಣಮಾತ್ರದಲ್ಲಿ ಸಿನೆಮಾ ಜಗತ್ತಿನಿಂದ ವಾಸ್ತವ ಪ್ರಪಂಚಕ್ಕೆ ಬಂದಿಳಿದ ಅವರೆಲ್ಲ ಮೊದಲು ಶ್ರೀನಿಧಿಯೇನೋ ಕುಶಾಲಿಗೆ ಹೇಳುತ್ತಿದ್ದಾನೆಂದೇ ಎಣಿಸಿದರು. ರೇಖಾ ಹಾಗೇ ಹೇಳಲಿಕ್ಕೂ ಹೇಳಿದಳು, ‘ಹೋಗ, ಹೋಗ, ಕುಶಾಲಿಗೂ ಹೊತ್ತ್ ಗೊತ್ತ್ ಅಂದ್ಹೇಳಿ ಇತ್ತ್’
‘ಏನಾ, ಮಾಣಿ, ನಿಂಗೆ ಮಂಡೆಗಿಂಡೆ ಸಮ ಉಂಟನ? ಡಾಕ್ಟ್ರತ್ರ ಹೋಯ್ಕ ಹ್ಯಾಂಗೆ?’ ಎಂದು ಭಾಮ ಚಾಟಿ ಬಾರಿಸಿದಳು.
‘ಅಬ್ಬೆಯಿಲ್ಲದ ಮಗು ಅಂತ ಕೊಂಡಾಟ ಮಾಡಿದ್ದು ತಲೆಗೇರಿತ್ತಾ ಕಾಂತ್ ಮಾಣಿಗೆ. ಮದಿ ಅಂದ್ರೆ ಆಟ ಅಂತ ಮಾಡ್ಕಂಡಿದ್ಯ? ಕಟ್ಟುಕಟ್ಲೆ ಕ್ರಮ ಅಂತ ಇಲ್ಯ? ಇನ್ನೊಂದ್ಸಲ ನಿನ್ನ ಬಾಯಿಯಿಂದ ಅಂಥ ಮಾತು ಬಂದ್ರೆ ಕಾಣು.’ ಎಂದಳು ಸಟ್ಟನೆ ಸರ್ತ ಕೂತ ಬಾಬಿಯಕ್ಕ.
ಮತ್ತೆ ತಗೋ, ಒಂದೆರಡಲ್ಲ, ತಲೆಗೊಂದರಂತೆ ಮಾತಿನ ಬಾಣಗಳು ಎರಗಿ ಅವನ ಬಾಯಿ ಸಂಪೂರ್ಣ ಕಟ್ಟಿ ಹೋಯಿತು. ನಾಗಿಗಂತೂ ಮುಖ ಎತ್ತದ ಹಾಗಾಗಿತ್ತು. ಮುಖ ತಗ್ಗಿಸಿ ಮೂಲೆಯಲ್ಲಿ ನಿಂತವಳು ಕಣ್ಣೆತ್ತಿ ಮೇಲೆ ನೋಡುವ ಸಾಹಸವನ್ನೂ ಮಾಡಲಿಲ್ಲ. ಈ ಮನೆಯಲ್ಲಿ ತನ್ನ ದಿನ ಇನ್ನು ಮುಗಿಯಿತು ಎನ್ನುವುದು ಅವಳಿಗೆ ತಕ್ಷಣ ಅರ್ಥವಾಯಿತು. ಧುಮ್ಮುಕ್ಕಿ ಬರುವ ಕಣ್ಣೀರನ್ನು ಹರಪ್ರಯತ್ನದಿಂದ ತಡೆಹಿಡಿದಿದ್ದಳಾಗಿ ಅವಳ ಮೋರೆಯೆಲ್ಲ ಬೀಗಿದಂತಾಗಿ ಕೆಂಪುಕೆಂಪಾಗತೊಡಗಿತ್ತು.
ಅಬ್ಬೆಯಿಲ್ಲದ ಮಗುವೆಂದು ಶ್ರೀನಿಧಿಯನ್ನು ಅವರು ಎಷ್ಟೇ ಮುದ್ದು ಮಾಡಿ ಬೆಳೆಸಿರಬಹುದು; ನಾಗಿಯ ಸ್ವಭಾವವನ್ನು ನಿಜಕ್ಕೂ ಮೆಚ್ಚಿದ ಅವರು ಅವಳನ್ನು ಎಂದೂ ಕೆಲಸದವಳಂತೆ ನಡೆಸಿಕೊಂಡಿರದೆ ಇರಬಹುದು. ಆದರೆ ಶ್ರೀನಿಧಿ, ನಾ ಮತ್ತ್ ನಾಗಿ…. ನಾವಿಬ್ಬರು…. ನಮಗಿಬ್ಬರಿಗೂ… ನಾವು ಮದುವೆ ಆಪುದೆಂತ ಮಾಡಿತ್ತು. ಎಂದು ತೊದಲಿಕೊಂಡೇ ಆರಂಭಿಸಿದ ಆ ಮಾತನ್ನು ನಂಬುವ ಅಥವಾ ಅದನ್ನು ಒಪ್ಪುವ ಮನಸ್ಸು ಬಿಡಿ, ಅದನ್ನು ಪೂರ್ತಿಯಾಗಿ ಕೇಳಲಿಕ್ಕೂ ಅಲ್ಲಿ ಯಾರೂ ಸಿದ್ಧರಿರಲಿಲ್ಲ.
ಅವರೆಲ್ಲರಿಗೆ ಆದ ದೊಡ್ಡ ಆಘಾತವೆಂದರೆ, ಅದೇ ಮನೆಯಲ್ಲಿ, ಜನಜಂಗುಳಿಯೆಂದು ಧಾರಾಳವಾಗಿ ಹೇಳಬಹುದಾದ ಅಷ್ಟೊಂದು ಮಂದಿಯೆಡೆಯಲ್ಲಿ, ತಮ್ಮ ಮೂಗಿನಡಿಯಲ್ಲಿಯೇ, ಒಂದು ಪ್ರೇಮಕತೆ ನಡೆಯುತ್ತಿರಬಹುದೆಂಬುದರ ಕಡೆಗೆ ತಮ್ಮ ಯಾರೊಬ್ಬರ ಗಮನವೂ ಇದ್ದಿರಲಿಲ್ಲವೆಂದರೆ? ಅಂತಹದೊಂದು ಪ್ರಕರಣ ಅಲ್ಲಿ ನಡೆಯುವ ಸಾಧ್ಯತೆಯ ಬಗ್ಗೆ ಒಂದು ನೂಲುತುಂಡಿನಷ್ಟಾದರೂ ಸಂಶಯವೂ ಬರಲಿಲ್ಲವೆಂದರೆ?
ನಿಧಾನವಾಗಿ ವಿಷಯದ ಸಾಂದ್ರತೆ ಅವರೊಳಗೆ ಇಳಿಯುತ್ತಿದ್ದಂತೆ, ಅವರೆಲ್ಲರಿಗೆ ಆದ ದೊಡ್ಡ ಆಘಾತವೆಂದರೆ, ಅದೇ ಮನೆಯಲ್ಲಿ, ಜನಜಂಗುಳಿಯೆಂದು ಧಾರಾಳವಾಗಿ ಹೇಳಬಹುದಾದ ಅಷ್ಟೊಂದು ಮಂದಿಯೆಡೆಯಲ್ಲಿ, ತಮ್ಮ ಮೂಗಿನಡಿಯಲ್ಲಿಯೇ, ಒಂದು ಪ್ರೇಮಕತೆ ನಡೆಯುತ್ತಿರಬಹುದೆಂಬುದರ ಕಡೆಗೆ ತಮ್ಮ ಯಾರೊಬ್ಬರ ಗಮನವೂ ಇದ್ದಿರಲಿಲ್ಲವೆಂದರೆ? ಅಂತಹದೊಂದು ಪ್ರಕರಣ ಅಲ್ಲಿ ನಡೆಯುವ ಸಾಧ್ಯತೆಯ ಬಗ್ಗೆ ಒಂದು ನೂಲುತುಂಡಿನಷ್ಟಾದರೂ ಸಂಶಯವೂ ಬರಲಿಲ್ಲವೆಂದರೆ? ನಾಗಿಯನ್ನು ಕೆಲಸಕ್ಕೆ ಕರೆದಾಗಲೆಲ್ಲ ಅವಳು ಹಿಂದಿನ ಹಿತ್ತಿಲ ಕಡೆಯಿಂದ ಓಡಿ ಬರುತ್ತಾ, ಮಾವಿನಕಾಯಿ ಬಿದ್ದಿತ್ತು, ಹೆಕ್ಕಲು ಹೋಗಿದ್ದೆ ಎನ್ನುವಾಗ, ಏನಿದು ಈಗೀಗ ಮಾವಿನಕಾಯಿ ಬೀಳುವುದು ಜಾಸ್ತಿಯಾಗಿದೆ, ಎಂದುಕೊಂಡರೇ ಹೊರತು, ಬೇರೇನೋ ಮಸಲತ್ತು ನಡೆದಿರಬಹುದೆಂಬುದರ ಕಡೆಗೆ ಯಾರ ಗಮನವೂ ಹೋಗಿರಲಿಲ್ಲವಲ್ಲ. ತಂದಿಟ್ಟ ತಾಂವು ಕಾಗದಗಳು ಬೇಗನೇ ಮುಗಿದುಹೋಗುವುದನ್ನು ಕಂಡೂ, ಯಾರಾದರೂ ಪ್ರೇಮಪತ್ರ ಬರೆಯುತ್ತಾರೆಂಬ ಸಂದೇಹ ಒಬ್ಬರಿಗಾದರೂ ಬಂದಿದ್ದರೆ ಕೇಳಿ. ಬದಲು, ‘ಮ್ಯಾತ್ಸ್ ಪ್ರಾಕ್ಟೀಸ್ ಎಲ್ಲ ಜೋರಲ್ಲಿ ಆಗ್ತ ಉಂಟಂತ ಕಾಣ್‌ತ್’ ಎಂದು ಬಾಬಿಯಕ್ಕನ ಗಂಡ ಖುಶಿಪಟ್ಟುಕೊಂಡು ಮತ್ತಷ್ಟು ಕಾಗದಗಳ ಕಟ್ಟನ್ನು ತಂದು ಜೋಡಿಸಿಟ್ಟಿದ್ದರು.
ಮಣಿಪಾಲದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಶ್ರೀನಿಧಿ ಪ್ರತಿ ವಾರಾಂತ್ಯದಲ್ಲಿ ಮಾತ್ರವಲ್ಲ, ವಾರದ ನಡುವೆಯೂ ಮನೆಗೆ ಓಡಿ ಬರುತ್ತಿದ್ದರೆ, ‘ಮಾಣಿಗೆ ಮನೆ ಎಣ್ಣುವುದು ಜಾಸ್ತಿ; ಪಾಪ ಹೋಸ್ಟೆಲ್ಲ್ ಊಟ ಆತ್ತಿಲ್ಲ ಅದ್ಕೆ’ ಎಂದುಕೊಂಡರೇ ವಿನಃ ಇಲ್ಲಿನ ಸೆಳೆತ ಬೇರೆ ಏನಿರಬಹುದೆಂದು ತಲೆಖರ್ಚು ಮಾಡಲು ಹೋದವರಿರಲಿಲ್ಲ. ಅಷ್ಟೊಂದು ಜನರನ್ನು ಸೀಳಿಕೊಂಡು ಅತ್ತಿತ್ತ ಸಿಡಿಯುತ್ತಿದ್ದ ನೋಟದ ಬಾಣಗಳನ್ನಾಗಲೀ, ಹುಬ್ಬಿನ ಸಂಕೇತಗಳನ್ನಾಗಲೀ, ಕೈಯ ಸನ್ನೆಗಳನ್ನಾಗಲೀ ನೋಡಿದವರಿರಲಿಲ್ಲವೋ, ನೋಡಿಯೂ ಅರ್ಥೈಸುವವರಿರಲಿಲ್ಲವೋ, ಅಂತೂ… ಸಿನೆಮಾಗಳಲ್ಲಿ ಸೂಕ್ಷಾತಿಸೂಕ್ಷ್ಮ ಸಂವೇದನೆಗಳನ್ನು, ಕ್ಷಣಮಾತ್ರದಲ್ಲಿ ಗ್ರಹಿಸಿ ಹಿಡಿಯುವ ಮಂದಿಗೆ ಕಣ್ಣೆದುರು ಹರಿಯುತ್ತಿದ್ದ ಭಾವತರಂಗಗಳು ಅಗೋಚರವಾಗಿದ್ದುಬಿಟ್ಟಿದ್ದವು.
ಪ್ರತಿಯೊಬ್ಬರಿಗೂ, ಸಂಗತಿ ತಮ್ಮರಿವಿಗೆ ಬರದೆಹೋದುದರ ಸಿಟ್ಟು, ಅಪಮಾನ, ಅಸಹಾಯಕತೆಗಳನ್ನು ಅಲ್ಲಗಳೆಯುವ ಅವಸರ ಒಂದೆಡೆಯಾದರೆ, ಮನೆತನದ ಮರ್ಯಾದೆಗೆ ಪೆಟ್ಟಾಗಕೂಡದೆಂಬ ಧಾವಂತ ಇನ್ನೊಂದೆಡೆ. ನಾಗಿಯ ತಂದೆಯನ್ನು ಕೂಡಲೇ ಕರೆಸಿ ಅವಳನ್ನು ಊರಿಗೆ ಕಳುಹಿಸಿಕೊಡುವುದೆಂಬ ನಿರ್ಣಯವನ್ನು ಆಗಿಂದಾಗಲೇ ಕೈಕೊಂಡು, ವಿಷಯಕ್ಕೆ ಪೂರ್ಣವಿರಾಮವನ್ನೂ ಹಾಕಿಯೇ ಬಿಟ್ಟರು.
ಮುಲ್ಲೆಯಲ್ಲಿ ನಿಂತೇ ಇದ್ದ ನಾಗಿಗೆ ಇನ್ನು ತಡೆಯಲಾಗಲಿಲ್ಲ. ಕೈಯ್ಯಲ್ಲಿದ್ದ ಕರವಸ್ತ್ರದಿಂದ ಮುಖ ಮುಚ್ಚಿಕೊಂಡು ಅಲ್ಲಿಂದ ಓಡಿದಳು. ಸೆಂಟಿನ ನವಿರಾದ ಪರಿಮಳ ಅವಳ ಮೂಗಿಗೆ ಬಡಿದದ್ದೇ, ಕೆಲವೇ ಗಂಟೆಗಳ ಮೊದಲು ಸಿನೆಮಾ ನೋಡುತ್ತಾ, ಇದೇ ಕರವಸ್ತ್ರದಿಂದ ಬಾಬಿಯಕ್ಕ ಕಣ್ಣೊರೆಸಿಕೊಳ್ಳುತ್ತಿದ್ದುದು ಅವಳಿಗೆ ನೆನಪಾಯಿತು. ಯಾವುದೇ ಸಿನೆಮಾಕ್ಕೆ ಹೋಗಿರಲಿ, ಬಾಬಿಯ ಪಕ್ಕದ ಸೀಟಿನಲ್ಲಿ ನಾಗಿಯೇ ಕುಳಿತುಕೊಳ್ಳಬೇಕೆಂಬುದು ಬಾಯಿಬಿಟ್ಟು ಹೇಳದ ಒಂದು ನಿಯಮವಾಗಿತ್ತು. ಅಲ್ಲಿ ಕುಳಿತವಳಿಗೆ ಕೆಲವು ಚಿಲ್ಲರೆ ಕೆಲಸಗಳೂ ಇದ್ದವು ಎನ್ನಿ,-ಕಣ್ಣೀರು ಬಂದರೆ ಕರವಸ್ತ್ರ ಕೊಡುವುದು, ಬಾಯಿ ಒಣಗಿದರೆ ಶುಂಠಿ ಮಾತ್ರೆ ಒದಗಿಸುವುದು. ಬಾಯಾರಿದರೆ ನೀರು ಕುಡಿಸುವುದು-ಎಲ್ಲ ನಾಗಿಯೇ. ಇನ್ನು ಕಡಲೆಕಾಯಿ ತಿನ್ನುವಾಗ ಪೊಟ್ಟಣ ಇರಬೇಕು ನಾಗಿಯ ಕೈಯ್ಯಲ್ಲಿ; ಆ ಪೊಟ್ಟಣದಿಂದ ಒಂದೊಂದೇ ಕಾಳನ್ನು ತೆಗೆದು ಬಾಬಿಯಕ್ಕ ತನ್ನ ಬಾಯಿಗೆ ಹಾಕಿಕೊಳ್ಳಬೇಕು. ಆವತ್ತಿನ ಸಿನೆಮಾದಲ್ಲಿ ಕೆಲಸದ ಹುಡುಗಿಯಾಗಿದ್ದ ನೂತನಳ ದೀನಾವಸ್ಥೆಯು ಬಾಬಿಯ ಕಣ್ಣಲ್ಲಿ ಸ್ವಲ್ಪ ನೀರನ್ನೇನೂ ಇಳಿಸಿರಲಿಲ್ಲ. ಸಿನೆಮಾ ಮುಗಿದ ಮೇಲೆ ಆ ಒದ್ದೆ ಕರವಸ್ತ್ರವು ನಾಗಿಯ ಕೈಯ್ಯಲ್ಲೇ ಉಳಿದುಬಿಟ್ಟಿತ್ತು. ಈಗ ಅದೇ ಕರವಸ್ತ್ರವು ತಂದ ನೆನಪಿನಿಂದ ನಾಗಿಗೆ ಇನ್ನಷ್ಟು ದುಃಖ ಬಂತು. ಮೆಟ್ಟಿಲಿಳಿದು ಅಂಗಳ ದಾಟಿ ಸೀದ ಹಟ್ಟಿಯ ಹಿಂದಿನ ಭಾಗಕ್ಕೆ ಹೋಗಿ ಗೋಡೆಗೊರಗಿ ನಿಂತು ಮನಸಾರ ಅತ್ತಳು.
ಹಳ್ಳಿಯಿಂದ ಈ ಮನೆಗೆ ಬರುವಾಗ ನಾಗಿಗೆ ಹದಿಮೂರೋ ಹದಿನಾಲ್ಕೋ ವರ್ಷ. ನವರಾತ್ರಿಯ ಆಚರಣೆಗೆಂದು ಮನೆಯವರೆಲ್ಲ ಹಳ್ಳಿಗೆ ಹೋಗಿದ್ದಾಗ ಹಬ್ಬದ ಕೆಲಸಕಾರ್ಯಕ್ಕೆ ಒಡತಿಗೆ ಸಹಾಯವಾದೀತೆಂದು ಅವರ ಒಕ್ಕಲು ಮಾಲಿಂಗ ತನ್ನ ಮಗಳನ್ನು ತನ್ನೊಟ್ಟಿಗೆ ಕರೆದು ಕೊಡುಬಂದಿದ್ದ, ಹುಡುಗಿಯ ಮುಖ ಲಕ್ಷಣ, ಚುರುಕುತನದ ಓಡಾಟ ನೋಡಿದ ಬಾಬಿಯಕ್ಕ, ‘ಏನಾ ಮಾಲಿಂಗ, ಸಾಲೆ ಬಿಡ್ಸಿದ್ ಯಾಕಾ ಹೆಣ್ಣಿನ್ನ?’ ಎಂದು ಜೋರು ಮಾಡಿದ್ದಳು.
‘ಇನ್ನು ಮದಿ ಮಾಡ್ಕಲ್ದ ಒಡ್ತಿ, ಜಾಸ್ತಿ ಕಲ್ತ್ ಜೋರಾತ್ರೆ ಹೆಣ್ಣ್ ಹುಡ್ಗೀರ್’ ಎಂದಿದ್ದ.
‘ನಿನ್ನ ಮಂಡೆ. ಮದಿ ಮಾಡ್ತ ಅಂತೆ. ಇಷ್ಟ್ ಸಣ್ಣದಕ್ಕೆ ಮದಿ ಮಾಡೀರೆ, ಹಿಡ್ಕಂಡ್ ಹೋತ್ರ್ ನಿನ್ನ ಪೋಲೀಸ್ರು.’ ಎಂದು ಹೆದರಿಸಿದ್ದಳು. ಹಾಗೆಯೇ, ಹುಡುಗಿಯನ್ನು ಕುಂದಾಪುರಕ್ಕೆ ಕರೆದುಕೊಂಡು ಹೋಗುವ ಯೋಚನೆ ಬಂದಿತ್ತು ಅವಳಿಗೆ. ಅಲ್ಲಿ ಕೆಲಸಕ್ಕೆ ಕೈಕಾಲಿಗೊಂದರಂತೆ ಜನಗಳಿದ್ದರೂ, ಕರೆದ ಬಾಯಿಗೆ ಒಂದು ಹುಡುಗಿಯಿದ್ದರೆ ಒಳ್ಳೆಯದೆಂದು ಬಹುದಿನಗಳಿಂದ ಅವಳ ಮನಸ್ಸಿನಲ್ಲಿತ್ತು. ಒಡತಿ ಹೇಳಿದ ಮೇಲೆ ಮಾಲಿಂಗನೂ ಏನೂ ಹೇಳುವಂತಿರಲಿಲ್ಲ.
ಹೀಗೆ ಬಾಬಿಯಕ್ಕನ ಮನೆಗೆ ನಾಗಿ ಬಂದು ಈಗ ಏಳೆಂಟು ವರ್ಷಗಳಾದರೂ ಆಗಿವೆ. ಈ ಧೀರ್ಘ ಅವಧಿಯಲ್ಲಿ ನಾಗಿಯ ಸಂಪೂರ್ಣ ವ್ಯಕ್ತಿತ್ವವೇ ಬದಲಾಗಿದೆಯೆಂದರೆ ತಪ್ಪಲ್ಲ. ಬದಲಾಗಿದೆ ಎನ್ನುವುದಕ್ಕಿಂತ ಬಾಬಿಯಕ್ಕನ ಹಾಗೂ ಆ ಮನೆಯ ವಿಶಿಷ್ಟವಾದ ಪ್ರಭಾವದಿಂದ, ಅವಳ ವ್ಯಕ್ತಿತ್ವವು ರೂಪುಗೊಂಡಿದೆ ಎಂದರೆ ಹೆಚ್ಚು ಸರಿಯಾದೀತೇನೋ. ಅಂದಿನ ಏನೂ ಅರಿಯದ ಮುಗ್ದ ಬಾಲಕಿ ಇಂದು ವಿದ್ಯಾವಂತೆ, ತಿಳುವಳಿಕಸ್ತೆಯಾಗಿ ಬೆಳೆದು ನಿಂತ ಇಪ್ಪತ್ತರ ಯುವತಿಯಾಗಿದ್ದಳು. ಕಿರುಗಣೆ ಹಾಕಿಕೊಂಡು, ಬಡಕಟೆಯಾಗಿ ಪಿಟ್ಟೆಯಂತಿದ್ದವಳು ಈಗ ಸವಳುಸವಳಾಗಿ ಉದ್ದಕ್ಕೆ ಬೆಳೆದು ಸೀರೆ ಸುತ್ತುತ್ತಿದ್ದಳು.
ಬಂದ ಸುರುವಿನಲ್ಲಿ, ಅವಳ ಕೆಲಸಕಾರ್ಯಗಳೆಂದರೆ, – ಕುಡಿಯಲು ನೀರು ತಂದುಕೊಡುವುದು, ಯಾರನ್ನಾದರೂ ಕರೆದು ಬರುವುದು, ತಲೆ ಬಾಚುವುದು – ಇಂತಹ ಪುಡಿ ಜಂಬರಗಳೇ. ಎಲ್ಲರೂ ಈ ಹೆಣ್ಣಿನ ಚುರುಕೇ, ಈ ಹೆಣ್ಣಿನ ಬುದ್ಧಿಯೇ, ಚಿಡ್ ಮಣ್ಣ್ ಚಿಟ್ಟಿ ಇದು, ಎಂದು ಹೊಗಳಿ ಹೊಗಳಿ, ಒಂದು ದಿನ ಅವಳನ್ನು ಶಾಲೆಗೂ ಸೇರಿಸುವಂತಾಯಿತು. ಅದು ಆದದ್ದು ಹೀಗೆ: ಬಾಬಿಯ ಸಣ್ಣಕ್ಕನ ಮಗಳು ರೇಖಾ, ಆಗ ಎಂಟನೆಯ ತರಗತಿಯಲ್ಲಿದ್ದವಳಿಗೆ ಲೆಕ್ಕ ಎಂದರೆ ಹಾಗಲಕಾಯಿ ತಿಂದಂತೆ. ಅವಳು ಬೀಜಗಣಿತದ ಲೆಕ್ಕವನ್ನು ಬಿಡಿಸಲಾಗದೆ ಒದ್ದಾಡುತ್ತಿದ್ದಾಗ, ಅಲ್ಲೆ ಪುಸ್ತಕಗಳನ್ನು ಒರೆಸಿಡುತ್ತಿದ್ದ ನಾಗಿ ತಾನೇ ಮಾಡಿಕೊಟ್ಟಳಂತೆ. ಇದು ಮನೆ ತುಂಬ ಸುದ್ದಿಯಾಯಿತು. ಕಣ್ಣುಗಳು ಅರಳಿದವು. ಹೃದಯಗಳು ಕರಗಿದವು. ಮತ್ತೆ ತಡವಾಗಲಿಲ್ಲ. ಬಾಬಿಯಕ್ಕ, ‘ಹೆಣ್ಣೆ, ನಿಂಗೆ ಶಾಲೆಗ್ ಹೋಯ್ಕ?’ ಎಂದು ಕೇಳಿಯೂ ಆಯ್ತು. ಹೋಗಿ ಸೇರಿಸಿಯೂ ಆಯ್ತು. ರೇಖಾಳ ಜೊತೆಯಲ್ಲೇ ಮನೆಮಗಳಂತೆ ಶಾಲೆಗೆ ಹೋಗುತ್ತ, ಮೆಟ್ರಿಕ್ ವರೆಗೆ ಕಲಿತು ಮುಗಿಸಿದ್ದೂ ಆಯಿತು.
ಉಟ್ಟುತೊಡುವ ವಿಷಯದಲ್ಲಾಗಲೀ, ತಿಂಡಿತೀರ್ಥದ ಮಟ್ಟಿಗಾಗಲೀ, ಆ ಮನೆಯಲ್ಲಿ ಮನೆಯವರು ಕೆಲಸದವರು ಎಂಬ ಭೇಧ ಯಾವತ್ತೂ ಇರಲಿಲ್ಲ. ಒಮ್ಮೆ ಹಾಗೇ ಆಗಿತ್ತು, ಮಧ್ಯಾಹ್ನ ಮಕ್ಕಳು ಶಾಲೆಯಿಂದ ಬಂದು ಉಣ್ಣುತ್ತಿದ್ದಾಗ, ಪದ್ದಕ್ಕ ತುಪ್ಪ ಬಡಿಸುತ್ತಿದ್ದವಳು, ರೇಖಾ ಮತ್ತಿತರ ಮನೆಯ ಮಕ್ಕಳಿಗೆ ಎರಡೆರಡು ಚಮಚ ಸುರಿದವರು, ನಾಗಿಗೆ ಒಂದೇ ಚಮಚ ಹಾಕಿಕೊಂಡು ಹೋದಳು. ಬಾಬಿಯಕ್ಕ ಅಲ್ಲೇ ನಿಂತಿದ್ದವಳು, ‘ಪದ್ದಕ್ಕ, ಅವಳಿಗೂ ಎರಡು ಚಮಚ ಹಾಕು, ಅವಳೂ ತಾಯಿ ಹೊಟ್ಟೆಲ್ಲೇ ಹುಟ್ಟಿ ಬಂದವಳು.’ ಎಂದಿದ್ದಳು. ಅಂದರೆ, ಅವರೆಲ್ಲ ಅಲ್ಲಿ ನಿಜವಾದ ಅರ್ಥದಲ್ಲಿ ಕೆಲಸದವರಾಗಿರುತ್ತಲೂ ಇರಲಿಲ್ಲ. ಕೆಲಸದವರು ಎಂದರೆ ಅವರು ಹಳತು ಹಪ್ಪಟು ಹರ್ಕಟು ವಸ್ತ್ರಗಳನ್ನೇ ಉಡಬೇಕು ಎನ್ನುವ ಕ್ರಮ ಬಾಬಿಯಕ್ಕನ ಅಮ್ಮನ ಕಾಲದಿಂದಲೂ ಅಲ್ಲಿ ಗೊತ್ತಿರಲಿಲ್ಲ. ಮನೆಯವರು ನಾಲ್ಕು ಸಲ ಉಟ್ಟು ಬೇಜಾರು ಬಂತೆಂದರೆ, ಆ ಸೀರೆಯನ್ನೋ, ಲಂಗವನ್ನೋ, ಶರ್ಟನ್ನೋ ತೆಗೆದು ಯಾರಿಗಾದರೂ ಕೊಟ್ಟುಬಿಡುವುದೇ ಅಲ್ಲಿನ ಕ್ರಮ. ನಾಗಿಯಂತೂ ಶಾಲೆಗೆ ಹೋಗುವ ಹುಡುಗಿ. ಮನೆಮಕ್ಕಳಂತೆ ಅವಳಿಗೂ ಹೊಸ ಸೀರೆ ರವಿಕೆಗಳು ಬರುತ್ತಿದ್ದವು.
ಒಂದು ಸಲ ಕಾರ್ಕಡ ದೊಡ್ಡಮ್ಮ ಬಂದವರು, ‘ಹೌದನ, ಬಾಬಿ, ನಮ್ಮ್ ಜಾತಿ ಹೆಣ್ಣಿನಾಂಗ್ ಕಾಣುತ್ತಲ್ಲ ಇದು! ಏನು ಒಪ್ಪ, ಏನು ವೈನ!’ ಎಂದು ಅಚ್ಚರಿಪಟ್ಟಿದ್ದರು. ಅಷ್ಟೇ ಅಲ್ಲ, ‘ಜಾಗ್ರತೆ, ಇನ್ಯಾರಾರೂ ಜಾತಕ ಕೇಳ್ಕಂಡ್ ಬಪ್ಪುಕಿತ್ತು ಕಾಣು,’ ಎಂದು ನೆಗೆಯಾಡಿದ್ದರು. ಯಾವ ಬಾಯಲ್ಲಿ ಅವರು ಹಾಗೆ ಹೇಳಿದ್ದರೋ, ಈಗ ಯಾರ್ಯಾರು ಯಾಕೆ, ಮನೆ ಮಾಣಿಯೇ ಕಣ್ಣು ಹಾಕಿತಲ್ಲ ಎಂದು ಅವರಿಗೆಲ್ಲ ಪಿಚ್ಚೆನಿಸಿತು.
ಇತ್ತೀಚೆಗೆ, ಎಷ್ಟರಮಟ್ಟಿಗೆಂದರೆ ಹಳ್ಳಿಗೆ ಹೋಗಲಿಕ್ಕೇ ಹಿಂದೇಟು ಹಾಕುವಷ್ಟು, ಈ ಮನೆಗೆ, ಮನೆಯ ಆಗುಹೋಗುಗಳಿಗೆ ನಾಗಿ ಒಗ್ಗಿಕೊಂಡುಬಿಟ್ಟಿದ್ದಳು. ಮನೆಯವರಿಗೂ ಅಷ್ಟೆ, ಅರಿವಿಲ್ಲದೆಯೇ, ಅವಳ ಇರವು ಅಭ್ಯಾಸವಾಗಿ ಹೋಗಿತ್ತು. ಬಾಬಿಯಕ್ಕನಿಗಂತೂ ಆ ಹೆಣ್ಣಿಲ್ಲದ್ರೆ ದಿನ ಹೋಗ ಎಂಬಷ್ಟರ ಮಟ್ಟಿಗಾಗಿ, ನಾಗಿ ಅವಳ ಬಲಗೈ ಬಂಟಿಯೇ ಆಗಿದ್ದಳು; ಧೋಬಿಯ ಲೆಕ್ಕ, ಹಾಲಿನ ವಿಲೇವಾರಿಗಳಲ್ಲದೆ, ಒಕ್ಕಲುಮಕ್ಕಳ ಲೇವಾದೇವಿಯನ್ನೂ ಬರೆದಿಡುವವಳು ನಾಗಿಯೇ. ಬಾಬಿಯಕ್ಕನಿಗೆ ತಾಲೂಕು ಆಫೀಸು ಅಥವಾ ಕೃಷಿ ಇಲಾಖೆಗೆ, ಇನ್ನು ಮಹಿಳಾ ಸಮಾಜದ ಸಭೆಗಳಿಗೆ ಹೋಗಲಿಕ್ಕಿದ್ದರೆ ಜೊತೆಯಲ್ಲಿ ನಾಗಿ ಬೇಕೇ. ಇನ್ನು ಉಳಿದವರಿಗೂ ಅಷ್ಟೆ. ಹೇಮಾಳಿಗೆ ಮೈಗ್ರೇನಿನ ತಲೆನೋವು ಬಂತೆಂದರೆ, ‘ಏ ನಾಗಿ, ಮಸಾಜು ಮಾಡ್ ಮಾರಾಯ್ತಿ’ ಅಂತ ಓಡಿಬರುತ್ತಿದ್ದಳು. ಇನ್ನು ಸೀರೆಗಳಿಗೆ ಫಾಲ್ ಹಾಕುವುದು, ರೇಡಿಯೋದಲ್ಲಿ ಬರುವ ಹಿಂದಿ ಸಿನೆಮಾ ಹಾಡುಗಳನ್ನು ಬರೆದುಕೊಡುವುದು, ಹೇಳುತ್ತಾ ಹೋದರೆ ಪಟ್ಟಿಗೆ ಕೊನೆಯಿಲ್ಲ.
ಧೋಬಿಯ ಲೆಕ್ಕ, ಹಾಲಿನ ವಿಲೇವಾರಿಗಳಲ್ಲದೆ, ಒಕ್ಕಲುಮಕ್ಕಳ ಲೇವಾದೇವಿಯನ್ನೂ ಬರೆದಿಡುವವಳು ನಾಗಿಯೇ. ಬಾಬಿಯಕ್ಕನಿಗೆ ತಾಲೂಕು ಆಫೀಸು ಅಥವಾ ಕೃಷಿ ಇಲಾಖೆಗೆ, ಇನ್ನು ಮಹಿಳಾ ಸಮಾಜದ ಸಭೆಗಳಿಗೆ ಹೋಗಲಿಕ್ಕಿದ್ದರೆ ಜೊತೆಯಲ್ಲಿ ನಾಗಿ ಬೇಕೇ
ಜಾತಿ ಅಂತಸ್ತುಗಳನ್ನು ಮೀರಿ, ಅವಳು ಆ ಮನೆಯವರಿಗೆ ಆತ್ಮೀಯಳಾಗಿದ್ದಳು. ಆದರೆ ಈಗ ಇದ್ದಕ್ಕಿದ್ದಂತೆ ಬದಲಾದ ನಿಷ್ಪತ್ತಿಯಲ್ಲಿ, ಎಲ್ಲವೂ ಅಡಿಮೇಲಾಗಿತ್ತು. ಸಂಬಂಧಗಳು ಏರ್ಪಡುವಾಗ ಈ ಜಾತಿ-ಅಂತಸ್ತುಗಳೇ ಪ್ರಮುಖ ಪಾತ್ರ ವಹಿಸುತ್ತದೆನ್ನುವ ಕಟುಸತ್ಯದ ಪೂರ್ಣ ಅಂದಾಜು ಶ್ರೀನಿಧಿಗಾಗಲೀ, ನಾಗಿಗಾಗಲೀ ಇದ್ದಂತಿರಲಿಲ್ಲ.
ಈಗ ಮಾತ್ರ, ತಲೆಗೊಂದರಂತೆ ಹೊರಟ ವಾಗ್ಬಾಣಗಳಲ್ಲಿ, ಬಪ್ಪಾಗ ಇಲಿ ಹಾಂಗ್ ಇರ್ತೋ, ಹೋತ ಹೋತ ಹುಲಿ ಹಾಂಗ್ ಆತೊ, ಮೆಟ್ಟನ್ನ ಎಲ್ಲಿಡ್ಕೋ ಅಲ್ಲಿಟ್ಟ್‌ರೇ ಚಂದ, ನೆಸಿ ಕೊಟ್ಟ ನಾಯಿ ನೆಸಲ್ ನೆಕ್ಕಿತಂಬ್ರು……. ಎಂದು ಏನೇನೋ ಮಾತುಗಳು ಕೇಳಿಬಂದಿದ್ದವು. ದೊಡ್ಡವರು ಸಣ್ಣವರೆನ್ನದೆ, ಮೇಲಿನಿಂದ ಕೆಳಗಿನವರೆಗೆ, ಅಂದರೆ, ಬಾಬಿಯಕ್ಕನಿಂದ ಹಿಡಿದು, ಪದ್ದಕ್ಕನಾದಿಯಾಗಿ, ಕೆಲಸದ ಸೋಮಿಯವರೆಗೆ ಪ್ರತಿಯೊಬ್ಬರೂ ನಾಗಿಯನ್ನು ಖಂಡಿಸುವವರೇ. ಅವರಿಬ್ಬರ ಬಗ್ಗೆ ಸಹಾನುಭೂತಿಯ ಒಂದೇ ಒಂದು ಸೊಲ್ಲು ಯಾರೇ ಒಬ್ಬರ ಬಾಯಿಯಿಂದಲೂ ಬಂದಿರಲಿಲ್ಲ.
ಎಂದೂ ಯಾರಿಗೂ ಬೈಯ್ಯದ ಬಾಬಿಯಕ್ಕನ ಗಂಡನೂ ಶ್ರೀನಿಧಿಯನ್ನು ಕರೆದು, ‘ಕಲಿತದ್ದು ದಂಡ ನೀನು. ಅಜ್ಜಯ್ಯನ ಹೆಸರಿಗೆ ಮಸಿ ಬಳಿತಿಯ?’ ಎಂದು ಬೈದದ್ದಾಯಿತು. ಅಂತರ್ಜಾತೀಯ ವಿವಾಹವೆಂದರೆ ಜನರು ಹೆದರುತ್ತಿದ್ದ ಕಾಲ ಇದು. ಹೆದರಿಕೆ ಮಾತ್ರವಲ್ಲ ಅಸಡ್ಡೆ, ತಾತ್ಸಾರ ಕೂಡಾ. ಊರಿನ ಪ್ರಮುಖ ಕ್ರಿಶ್ಚಿಯನ್ ಕುಟುಂಬದ ಹುಡುಗಿಯೊಬ್ಬಳು ಮೆಡಿಕಲ್ ಕಲಿಯುವಾಗ, ಅದೇ ಊರಿನ ಶೆಟ್ಟಿ ಹುಡುಗನೊಬ್ಬನನ್ನು ಪ್ರೀತಿಸಿದ್ದು, ಬಹುದೊಡ್ಡ ಕತೆಯಾಗಿ ಎರಡೂ ಕುಟುಂಬದವರು ಅಡ್ಡ ಬಂದು ಆ ಮದುವೆ ನಡೆಯದಂತೆ ತಡೆದದ್ದು ಮರೆತು ಹೋಯಿತಾ ಎಂದೂ ಕೇಳಿದರು. ಹೀಗಿರುವಾಗ, ಬ್ರಾಹ್ಮಣ ಮನೆತನದಲ್ಲಿ ಹೀಗೇನಾದರೂ ಆದರೆ, ಅದರ ಪರಿಣಾಮವೆಂಬುದು – ಜಾತಿಬಾಂಧವರಿಂದ ಹಿಡಿದು ಪುರೋಹಿತವರ್ಗದ ವರೆಗೆ – ಎಲ್ಲಿಂದ ಎಲ್ಲಿಯವರೆಗೆ ಮುಟ್ಟಬಹುದೆಂದು ಊಹಿಸಲಿಕ್ಕೂ ಸಾಧ್ಯವಿಲ್ಲ. ಮನೆಯಲ್ಲಿ ಮದುವೆಯಾಗುವ ಹೆಣ್ಣು ಮಕ್ಕಳು ಬೇರೆ ಇದ್ದಾರೆ. ಅಜ್ಜಯ್ಯ ಇದ್ದಿದ್ದರೆ ಎದೆಯೊಡೆದು ಸಾಯುತ್ತಿದ್ದರೇನೋ ಎಂದೂ ಹೇಳಿದರು. ಅದಲ್ಲದೆ, ಇಲ್ಲಿ ಪ್ರಶ್ನೆ ಜಾತಿಯದಷ್ಟೇ ಆಗಿರದೆ, ಅಂತಸ್ತಿನದೂ ಆಗಿತ್ತು.
ಬಾಬಿಯಕ್ಕನ ಕೋಣೆಯ ಹೊರಗೇ ಬೀಡುಬಿಟ್ಟ ಮನೆಮಂದಿಯೆಲ್ಲ ಶ್ರೀನಿಧಿಯನ್ನು ದುರುದುರು ನೋಡುವವರೇ. ಹೋಗು ಕ್ಷಮೆ ಕೇಳು, ನೀ ಮಾಡಿದ್ದು ಕ್ಷಮೆಗೂ ಹೇಳ್ಸಿದ್ದಲ್ಲ, ಎನ್ನುವ ಧೂಷಣಾ ಭಾವವೇ ಅವರ ಕಣ್ಣುಗಳಲ್ಲಿ ತುಂಬಿತ್ತು. ಇಲ್ಲದಿದ್ದರೆ, ನಾಗಿಯನ್ನು ಹಳ್ಳಿಗೆ ಕಳಿಸಿಕೊಡುವುದೆಂತಲೂ, ಶ್ರೀನಿಧಿ ಇನ್ನು ಆ ವಿಷಯ ಎತ್ತಕೂಡದೆಂದೂ ಮುಂಚಿನ ದಿನ ಎಲ್ಲವೂ ಸೈಸಾಲ್ ಆಗಿಯಾಗಿತ್ತು. ಪುನಃ ವಿಷಯ ಎತ್ತುವ ಮೂರ್ಖತನ ಮಾಡಿದ್ದಾದರೂ ಯಾಕಿವ? -ಎಂದು ಕೆಲವರು ಅವನ ಕಿವಿಹಿಂಡಿದರೆ, ಇನ್ನು ಕೆಲವರು ತಲೆ ಕುಟ್ಟಿದರು. ಎಲ್ಲರಿಂದ ತಪ್ಪಿಸಿಕೊಂಡ ಶ್ರೀನಿಧಿಯು ಕೂದಲು ಕೆದರಿಕೊಂಡು, ಮೋರೆ ಬಾಡಿಸಿಕೊಂಡು ಉಪ್ಪರಿಗೆಯ ಕೋಣೆಯಲ್ಲಿ ಬರೇ ನೆಲದ ಮೇಲೆ ಅಂಗಾತ ಬಿದ್ದುಕೊಂಡುಬಿಟ್ಟಿದ್ದ.
ಯಾರದಾದರೂ ಕಣ್ಣಿಗೆ ಬಿದ್ದಳೆಂದರೆ,-ನಾಚಿಕೆಯಿಲ್ಲದವಳು, ಮನೆಹಾಳಿ, ತೋರ್ಸ್‍ಬೇಡ ನಿನ್ನ್ ಸುರ್ಪ, ಸಾಕು ನಿನ್ನ ಹೋಯ್‌ಮಲಿ, ಎಂಬಿತ್ಯಾದಿ ಸಹಸ್ರನಾಮಗಳೊಂದಿಗೆ ಹೋಗಾಚೆ ಎಂದು ಓಡಿಸಲ್ಪಡುತ್ತಿದ್ದಳು. ಎಣ್ಣಿ ಎಣ್ಣಿ ಮರಕಿ, ಮುಖವೆಲ್ಲ ಸೋರಿ ಹೋಗಿ, ಕಣ್ಣುಗಳು ನಿಸ್ತೇಜವಾಗಿ, ಎರಡೇ ದಿನಗಳಲ್ಲಿ ಬಚ್ಚಿ ಬೆಂಡಾಗಿ ಬಲಿಪಶುವಿನಂತಾಗಿದ್ದ ಅವಳು ಒರಲುಕೊಟ್ಟಿಗೆಯ ಮುಲ್ಲೆಯಲ್ಲಿ ಮಡಚಿದ ಕಾಲುಗಳೆರಡನ್ನೂ ಕೈಗಳಿಂದ ಅವಚಿ ಹಿಡಿದು, ಮುಖವನ್ನು ಕಾಲ್ಗಂಟಿನ ಮೇಲಿರಿಸಿ, ಮುದ್ದೆಯಾಗಿ ಹುದುಗಿ ಕುಳಿತಿದ್ದಳು.
ನಾಗಿಯ ಅವಸ್ಥೆಯಂತೂ ಯಾರಿಗೂ ಬೇಡ. ಮನೆಯವಳಂತೆ, ಮಗಳಂತೆ, ಎಂದೆನ್ನುತ್ತಿದ್ದುದರ ಅರ್ಥ ಇಷ್ಟೆಯೇ ಎಂದು ನಾಗಿಗೆ ದುಃಖ ಒತ್ತರಿಸಿಬರುವಂತಾಗಿತ್ತು. ತಾನಿನ್ನು ಹಳ್ಳಿಗೆ ಹೋಗಲೇಬೇಕಾಯಿತು. ಅಲ್ಲಿಗೂ ಹೊಂದದ, ಒಲ್ಲಿಗೂ ಸಂದದ ಬಾಳ್ವೆಯಾಯಿತು ತನ್ನದು ಎಂದುಕೊಂಡಳು. ಹಿಂದಿನ ದಿನದವರೆಗೂ ಎಲ್ಲರಿಗೂ ಬೇಕಾದವಳಾಗಿದ್ದ ಅವಳನ್ನು, ಈಗ ಯಾರಿಗೂ ಕಂಡರಾಗುತ್ತಿರಲಿಲ್ಲ. ಯಾರದಾದರೂ ಕಣ್ಣಿಗೆ ಬಿದ್ದಳೆಂದರೆ,-ನಾಚಿಕೆಯಿಲ್ಲದವಳು, ಮನೆಹಾಳಿ, ತೋರ್ಸ್‍ಬೇಡ ನಿನ್ನ್ ಸುರ್ಪ, ಸಾಕು ನಿನ್ನ ಹೋಯ್‌ಮಲಿ, ಎಂಬಿತ್ಯಾದಿ ಸಹಸ್ರನಾಮಗಳೊಂದಿಗೆ ಹೋಗಾಚೆ ಎಂದು ಓಡಿಸಲ್ಪಡುತ್ತಿದ್ದಳು. ಎಣ್ಣಿ ಎಣ್ಣಿ ಮರಕಿ, ಮುಖವೆಲ್ಲ ಸೋರಿ ಹೋಗಿ, ಕಣ್ಣುಗಳು ನಿಸ್ತೇಜವಾಗಿ, ಎರಡೇ ದಿನಗಳಲ್ಲಿ ಬಚ್ಚಿ ಬೆಂಡಾಗಿ ಬಲಿಪಶುವಿನಂತಾಗಿದ್ದ ಅವಳು ಒರಲುಕೊಟ್ಟಿಗೆಯ ಮುಲ್ಲೆಯಲ್ಲಿ ಮಡಚಿದ ಕಾಲುಗಳೆರಡನ್ನೂ ಕೈಗಳಿಂದ ಅವಚಿ ಹಿಡಿದು, ಮುಖವನ್ನು ಕಾಲ್ಗಂಟಿನ ಮೇಲಿರಿಸಿ, ಮುದ್ದೆಯಾಗಿ ಹುದುಗಿ ಕುಳಿತಿದ್ದಳು.
ಸಿನೇಮಾ ನೋಡಿ ಬಂದ ಮರುದಿನ ಬೆಳಿಗ್ಗೆ ಬಾಬಿಯಕ್ಕ ತಲೆಬಾಚುತ್ತಿರುವಾಗಲೇ ಶ್ರೀನಿಧಿ ಅಲ್ಲಿಗೆ ಬಂದದ್ದು. ಎಡಕೈಯಲ್ಲಿ ಹಿಡಿದ ಚೌರಿಯನ್ನು ಉದ್ದಕ್ಕೂ ಬಾಚಿ, ಫಟಕ್ಕನೆ ಒಮ್ಮೆ ಕೊಡಕಿ, ಅದನ್ನು ತಲೆಯ ಹಿಂಭಾಗದಲ್ಲಿಟ್ಟು, ಕೂದಲಿನೊಟ್ಟಿಗೆ ಹೆಣೆದು, ತುದಿಗೊಂದು ಕಪ್ಪು ದಾರ ಬಿಗಿದು ಮೇಲಕ್ಕೆತ್ತಿ ಉರುಟುರುಟಾಗಿ ಸುತ್ತಿ ಅಂಬಡೆ ಕಟ್ಟಿ ಪಿನ್ನು ಚುಚ್ಚುವಾಗಲೇ, ಶ್ರೀನಿಧಿ ಬಂದು ಅವಳ ಹಿಂದೆ ನಿಂತು, ‘ಸಿನೆಮಾ ಕಂಡ್ಕಂಡ್ ಅಷ್ಟೆಲ್ಲ ಕರಗುವ ನಿನ್ನ ಹೃದಯದ ನಿಜರೂಪ ಇದೇಯಾ, ಬಾಬಿಯಕ್ಕಾ?’ ಎಂದದ್ದು. ಮಾತು ಇಷ್ಟೇ ಆದರೂ ಅದು ಅವಳ ಮರ್ಮಸ್ಥಾನಕ್ಕೆ ತಾಗಿತ್ತು.
ಅವಳು ಕೈಯ್ಯಲ್ಲಿದ್ದ ಹಣಿಗೆಯಿಂದಲೇ ರಪ್ಪೆಂದು ಅವನ ಮುಖಕ್ಕೆ ಬೀಸಿದ್ದಳು. ‘ಬಾಬಿಯಕ್ಕ…’ ಎಂದು ಅವನು ಮುಖವನ್ನು ಅಡ್ಡಕ್ಕೆ ತಿರುಗಿಸಿದರೂ, ಹಣಿಗೆಯ ಹಲ್ಲಿನ ಅಚ್ಚು ಕೆಂಪಾಗಿ ಅವನ ಕೆನ್ನೆಯ ಮೇಲೆ ಮೂಡಿಯಾಗಿತ್ತು. ಪುನಃ ಕೈ ಎತ್ತಿದವಳನ್ನು ಪದ್ದಕ್ಕ ಹಿಡಿದೆಳೆಯಬೇಕಾಯ್ತು. ಹಣಿಗೆ ಹಾರಿ ಎಲ್ಲಿಯೋ ಬಿದ್ದಿತ್ತು. ಸಿಟ್ಟಿನಲ್ಲಿ ಅವಳ ಮುಖ ಕೆಂಪು ರಟ್ಟುತಿತ್ತು. ‘ಮುಚ್ಚು ಬಾಯಿ, ಕೋಡಂಗಿ.’ ಎಂದು ಕಿರಿಚಿ ಅವಳು ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಳು.
ದೇವರ ಕೋಣೆಯ ಬಾಗಿಲಲ್ಲಿ ಜಪಮಾಲೆ ಹಿಡಿದು ಕುಳಿತಿದ್ದ ಕಣ್ಣು ಕಾಣದ ಯಮುನತ್ತೆಯೋ ಈ ಮೂರು ದಿನಗಳಲ್ಲಿ ಅತ್ತಿತ್ತ ಹೋಗುವವರೊಡನೆ, ಗಳಿಗೆಗೊಂದಾವೃತ್ತಿ ಅಥವಾ ತನ್ನಷ್ಟಕ್ಕೆ ಎಂಬಂತೆ, ಬಾಬಿ ಬಂದ್ಳಾ? ಅಂತಲೋ, ಬಾಗ್ಲು ತೆಗ್‌ದ್ಳ? ಅಂತಲೋ ಕೇಳಿಕೊಂಡೇ ಇದ್ದರು. ಬಾಬಿಯ ಕೋಣೆಯ ಬಾಗಿಲ ಹೊರಗೇ ಕುಳಿತು ಬೆಳಗು ಮಾಡುತ್ತಿದ್ದ ಪದ್ದಕ್ಕನಿಗಂತೂ ರಾತ್ರಿ ಇಡೀ ಅರ್ಧಮ್ಮರ್ಧ ಕನಸುಗಳು, ಅಲ್ಲದ ಭ್ರಮೆಗಳು. ಒಮ್ಮೆಯಂತೂ ನಡುರಾತ್ರಿಯ ಹೊತ್ತಿಗೆ ತೂಕಡಿಸುತ್ತ ಕುಳಿತವಳಿಗೆ, ಶ್ರೀನಿಧಿ ಮತ್ತು ನಾಗಿ ಬಾಬಿಯ ಕೋಣೆಯಿಂದ ಹೊರಗೆ ಹೋಗುತ್ತಿದ್ದಂತೆ ಅನಿಸಿ, ದಡಬಡಿಸಿ ಎದ್ದು ಕಣ್ಣು ತೆಗೆದರೆ ಯಾರೂ ಇಲ್ಲ; ಮುಚ್ಚಿದ ಬಾಗಿಲು ಮುಚ್ಚಿದಂತೆ.
ನಾಲ್ಕನೆಯ ಹಗಲಿನ ಕೊನೆಗೆ ಬಾಬಿಯಕ್ಕನ ಕೋಣೆಯೊಳಗಿಂದ ಮಂಚದ ಕರಕರ ಶಬ್ದ ಕೇಳಿತು. ಅವಳ ಕೋಣೆಯ ಬಾಗಿಲಿಗೇ ಒರಗಿಕೊಂಡಿದ್ದ ಮನೆಮಂದಿಯ ಕಿವಿಗಳೆಲ್ಲ ನೆಟ್ಟಗಾದವು. ಸ್ವಲ್ಪ ಹೊತ್ತಿನಲ್ಲಿ ಚಿಲಕ ಕೆಳಗಿಳಿದ ಸದ್ದು ಕೇಳಿದ್ದೇ ಎಲ್ಲರೂ ಗಡಬಡಿಸಿ ಎದ್ದರು. ಮೂರು ದಿನಗಳ ಉಪವಾಸದಿಂದಾಗಿ ಅವಳ ಕಣ್ಣಿನ ಅಡಿ ಕಪ್ಪು ಕರೆ ಕಟ್ಟಿತ್ತಾದರೂ, ಕಣ್ಣೊಳಗಿನ ಹೊಳಪು ಮಾಸಿರಲಿಲ್ಲ. ಜಾರಿ ಬೆನ್ನ ಮೇಲೆ ಬಿದ್ದ ಸೂಡಿಯ ಎಡೆಯಿಂದ ತಪ್ಪಿಸಿಕೊಂಡ ಕೂದಲೆಳೆಗಳು ಗಾಳಿಗೆ ಅವಳ ಮುಖದ ಸುತ್ತು ಹಾರಾಡುತ್ತಿದ್ದುವು. ಬಲಗೈ ಹೆಬ್ಬೆಟ್ಟನ್ನು ಬಾಯಿಯ ಕಡೆಗೆ ಒಯ್ದಂತೆ ಮಾಡಿ, ನೀರು ಬೇಕೆನ್ನುವ ಸನ್ನೆ ಮಾಡಿದ್ದೇ, ಬಾಬಿಯಕ್ಕನಿಗೆ ನೀರು… ನೀರು… ಎಂಬ ಸಂದೇಶ ಒಬ್ಬರಿಂದ ಒಬ್ಬರಿಗೆ ರವಾನಿಸಲ್ಪಟ್ಟು, ಕಾದಾರಿದ ನೀರಿಗೆ ಸ್ವಲ್ಪ ಫ್ರಿಡ್ಜಿನ ನೀರು ಬೆರೆಸಲ್ಪಟ್ಟು ಸಣ್ಣ ಕೌಳಿಗೆಯೊಂದರಲ್ಲಿ ನೀರು ಬಂತು. ಲೋಟೆಗೆ ಬಗ್ಗಿಸಿ ಕೊಟ್ಟ ನೀರನ್ನು ತುಸುವೇ ಕುಡಿದು, ‘ಸ್ನಾನಕ್ಕೆ ಹೋತೆ,’ ಎಂದದ್ದೇ ಸುರುವಾಯ್ತು ಓಡಾಟ.
ಒಬ್ಬರು ಬೈರಾಸ ತಂದರೆ, ಇನ್ನೊಬ್ಬರು ಮೀಯುವ ತುಂಡು ಹಿಡಿದು ಬಂದರು. ಕೈ ಹಿಡಿದು ಬಚ್ಚಲಿಗೆ ಕರೆದೊಯ್ಯುವವರು ಒಬ್ಬರಾದರೆ, ಜೊತೆಯಲ್ಲಿ ಹೆಜ್ಜೆ ಹಾಕುವವರು ನಾಲ್ಕು ಮಂದಿ. ನೀರು ತೋಡಿಟ್ಟದ್ದೂ ಆಯಿತು; ಚಿಲಕ ಹಾಕಿದರೆ ನೋಡು ಎಂದು ಆಣೆ ಮಾಡಿ ಹೇಳಿದ್ದೂ ಆಯಿತು.
ಮೀಯುವ ತುಂಡನ್ನು ಸುತ್ತಿಕೊಂಡು, ತಲೆಗೆ ಬೈರಾಸ ಕಟ್ಟಿ ಹೊರಗೆ ಬಂದ ಬಾಬಿಯಕ್ಕ, ಕಾಪಿ ಎಂದದ್ದೊಂದು ಗೊತ್ತು, ಸ್ಟೀಲಿನ ಲೋಟೆ ತುಂಬ ಬಿಸಿಬಿಸಿ ನೊರೆ ಕಾಫಿ ತಯಾರು. ಸೀರೆಯುಡುವಾಗ ಬಾಬಿಯಕ್ಕ, ‘ನಾಲಿಗೆ ಎಲ್ಲ ಕಹಿ ಕುಟ್ಟಿದೆ ಪದ್ದಕ್ಕ. ಒಗ್ಗರಣೆ ಮೆಣಸು ಹಾಕಿ ಉದ್ದಿನ ಹಿಟ್ಟಿನ ಗೊಜ್ಜು ಮಾಡು. ಒಂದು ಮುಷ್ಟಿ ಉಣ್ತೆ.’ ಎಂದಳು.
‘ಹಾಂಗೆ ಆಯ್ಲಿ,’ ಎಂದು ಪದ್ದಕ್ಕ, ಅಂತೂ ಊಟದ ವಿಷಯ ಬಂತಲ್ಲ ಎಂಬ ಸಮಾಧಾನದಲ್ಲಿ ಒಳಗೆ ಓಡಿದಳು.
ಈ ಸಂಗತಿ ನಡೆದು ಈಗ ಮೂವತ್ತು ವರ್ಷಗಳೇ ಮೀರಿವೆ. ಅದು ಆಗ ಆ ಊರಲ್ಲಿ ಎಬ್ಬಿಸಿದ ತರಂಗಗಳ ಬಗ್ಗೆ ನಾನೀಗ ಏನೂ ಹೇಳುವುದಿಲ್ಲ. ಆದರೆ ಬಾಬಿಯಕ್ಕನಂತವರ ಮಾತನ್ನೂ ಮೀರಿ, ಅವಳ ಫರ್ಮಾನಿಗೆ ವಿರೋಧವಾಗಿ ಅದು ಹೇಗೆ ಆ ಮದುವೆ ನಡೆಯಿತು ಎಂದು ಎಲ್ಲರೂ ಇವತ್ತಿಗೂ ಆಶ್ಚರ್ಯ, ಅನುಮಾನಪಡುತ್ತಲೇ ಇರುವಂತಾಯಿತು.
ಬೈರಾಸವನ್ನು ಎರಡೂ ಕೈಯ್ಯಲ್ಲಿ ಹಿಡಿದು, ಸಪೂರವಾಗಿಸಿ, ಕೂದಲಿಗೆ ಛಟೀರ್ ಎಂದು ಸಿಡಿಸಿ ನೀರು ಹಾರಿಸಿ, ತಲೆಕೂದಲನ್ನು ಒರೆಸುತ್ತ ಜಗಲಿಗೆ ಬಂದ ಬಾಬಿಯಕ್ಕ ಬೈರಾಸವನ್ನು ಜಗಲಿಯ ಗಳದಲ್ಲಿ ನೇತು ಹಾಕಿ ಊಟಕ್ಕೆ ಕುಳಿತಳು. ತಂಗಿಯಂದಿರು, ಮಕ್ಕಳು ಎಲ್ಲರೂ ಸುತ್ತಮುತ್ತ ನಿಂತು ಅವಳಿಗೆ ಬಡಿಸಿದರು; ತಿನಿಸಿದರು; ಗಾಳಿ ಹಾಕಿದರು.
ಅಂತೂ ಬಾಬಿಯಕ್ಕನ ಓಲೈಕೆಯಲ್ಲೇ ಮನೆಮಂದಿಯೆಲ್ಲಾ ಎಷ್ಟೊಂದು ಮುಳುಗಿದ್ದರೆಂದರೆ, ಬೇರೆ ಯಾವ ಸುದ್ದಿಯೂ ಅವರ ಗೋಷ್ಟಿಗೇ ಬಂದಿರಲಿಲ್ಲ. ಶ್ರೀನಿಧಿ ಮಾಯವಾದದ್ದಾಗಲೀ, ನಾಗಿ ಕಾಣೆಯಾದದ್ದಾಗಲೀ ಅವರ ಗಮನಕ್ಕೆ ಬರುವಾಗ ತುಂಬ ತಡವಾಗಿತ್ತು.
ಈ ಸಂಗತಿ ನಡೆದು ಈಗ ಮೂವತ್ತು ವರ್ಷಗಳೇ ಮೀರಿವೆ. ಅದು ಆಗ ಆ ಊರಲ್ಲಿ ಎಬ್ಬಿಸಿದ ತರಂಗಗಳ ಬಗ್ಗೆ ನಾನೀಗ ಏನೂ ಹೇಳುವುದಿಲ್ಲ. ಆದರೆ ಬಾಬಿಯಕ್ಕನಂತವರ ಮಾತನ್ನೂ ಮೀರಿ, ಅವಳ ಫರ್ಮಾನಿಗೆ ವಿರೋಧವಾಗಿ ಅದು ಹೇಗೆ ಆ ಮದುವೆ ನಡೆಯಿತು ಎಂದು ಎಲ್ಲರೂ ಇವತ್ತಿಗೂ ಆಶ್ಚರ್ಯ, ಅನುಮಾನಪಡುತ್ತಲೇ ಇರುವಂತಾಯಿತು. ಪದ್ದಕ್ಕ ಒಮ್ಮೆ ಸಿಕ್ಕಿದಾಗ ಅಮ್ಮ ಇದೇ ಮಾತನ್ನು ಕೇಳಿದ್ದಕ್ಕೆ, ‘ಅವಳಿಗೆ ವಿರುದ್ಧವಾಗಿ ಅಂತ ನೀವ್ ಹ್ಯಾಂಗ್ ಹೇಳ್ತ್ರಿ?’ ಅಂದಳಂತೆ.
(ಕಲೆ:ರೂಪಶ್ರೀ ಕಲ್ಲಿಗನೂರ್)
ಹೆಸರಾಂತ ಕಥೆಗಾರ್ತಿ. ಮೂಲತಃ ಕುಂದಾಪುರದವರು. ಈಗ ಮುಂಬೈ ವಾಸಿ. “ಮಾಯಕದ ಸತ್ಯ”, “ರುಕುಮಾಯಿ” ಮತ್ತು “ಹಕ್ಕಿ ಮತ್ತು ಅವಳು” ಇವರ ಕಥಾಸಂಕಲನಗಳು. “ಪಾಚಿಕಟ್ಟಿದ ಪಾಗಾರ” ಕಾದಂಬರಿ.