ಮಣಿ ಅವಳನ್ನು ತಬ್ಬಿಕೊಂಡು ಮಲಗೇ ಇದ್ದನು. ಸೆಲ್ವಿ, “ಇದಕ್ಕೆ ನಾನು, ನಿನ್ನನ್ನು ಹತ್ತಿರಕ್ಕೆ ಸೇರಿಸ್ತಾಇರಲಿಲ್ಲ” ಎಂದಳು. ಆದರೆ ಅವನು ಅವಳನ್ನು ಬಿಡಲಿಲ್ಲ. ಸೆಲ್ವಿ ಮಣಿಯಿಂದ ಬಿಡಿಸಿಕೊಳ್ಳಲು ಹರಸಾಹಸ ಮಾಡಬೇಕಾಯಿತು. ಸೆಲ್ವಿ ಮತ್ತೆ, “ನಿನ್ನನ್ನ ಮನೆಗೆ ಸೇರಿಸಿಕೊಂಡಿದ್ದೆ ತಪ್ಪಾಯಿತು” ಎಂದು ಅವನಿಂದ ಬಿಡಿಸಿಕೊಂಡು ಎದ್ದು ಬಾಗಿಲನ್ನು ನಿಧಾನವಾಗಿ ತೆರೆದು ಹೊರಕ್ಕೆ ನೋಡಿದಳು. ಆಕಾಶದಲ್ಲಿ ನಕ್ಷತ್ರಗಳು ಹೊಳೆಯುತ್ತಿದ್ದವು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಏಳನೆಯ ಕಂತು ನಿಮ್ಮ ಓದಿಗೆ
ಅಧ್ಯಾಯ – 4
ಕಾಲೇಜ್ ಕ್ಯಾಂಟೀನ್‌ನಲ್ಲಿ ಸೆಲ್ವಿ ಮತ್ತು ಅವಳ ಗೆಳತಿಯರು ಕುಳಿತಿದ್ದಾರೆ. ಮಣಿ ಬಂದಿದ್ದೆ ಹುಡುಗಿಯರು ಅವನಿಗೆ ದಾರಿ ಮಾಡಿಕೊಟ್ಟು ಅವನು ಸೆಲ್ವಿ ಪಕ್ಕದಲ್ಲಿ ಬಂದು ಕುಳಿತುಕೊಂಡ. ಮಣಿ, “ವಡಿವೇಲು” (ವೇಟರ್) ಎಂದಿದ್ದೆ, ವಡಿವೇಲು ಬಂದು ನಿಂತುಕೊಂಡ. ಮಣಿ, “ಇವರಿಗೆ ಏನೇನು ಬೇಕೊ ಎಲ್ಲಾ ಕೊಡಪ್ಪ. ನಾನು ಬಿಲ್ ಕೊಡ್ತೀನಿ” ಎಂದ. ವಡಿವೇಲು ಅವರನ್ನು ಕೇಳಿಕೊಂಡು ಕಿಚನ್ ಒಳಗೋದ. ಅಷ್ಟರಲ್ಲಿ ಸ್ವಾಮಿ ಮತ್ತು ಅವನ ಗುಂಪು ಬಂದಿತು. ಸ್ವಾಮಿಯ ಗುಂಪಿನ ಹತ್ತಿರಕ್ಕೆ ಬಂದ ಮಣಿ, “ಬ್ರದರರ್ಸ್ ನಿಮಗೂ ಏನೇನು ಬೇಕೊ ತೆಕೊಳ್ಳಿ. ಈಹೊತ್ತು ನಾನು ಬಿಲ್ ಕೊಡ್ತೀನಿ” ಎಂದ. ಮಣಿ ಆ ಕಡೆಗೆ ಹೋಗಿದ್ದೆ ಸ್ವಾಮಿ, “ನನ್ನ ಮಗ ಎಲ್ಲಿಂದ ದುಡ್ಡ ತಂದನೊ ಏನೋ ಆಯಿತು. ಆರ್ಡರ್ ಮಾಡ್ರೊ” ಎಂದ. ಆದರೆ ಅಲ್ಲಿ ಇದ್ದಿದ್ದೆ ಬೊಂಡಾ ಬಜ್ಜಿ ಟೀ ಮಾತ್ರ. ಎಲ್ಲರೂ ತಿಂದು ಮುಗಿಸಿದ್ದೆ ಮಣಿ ಬಿಲ್ ಕೊಟ್ಟ. ಅಷ್ಟರಲ್ಲಿ ಬೆಲ್ ಹೊಡೆದು ಎಲ್ಲರೂ ತರಗತಿಗಳ ಕಡೆಗೆ ಹೊರಟರು. ಮಣಿ ಸೆಲ್ವಿಯ ಉದ್ದವಾದ ಜಡೆಯನ್ನು ಹಿಡಿದುಕೊಂಡು ಸಣ್ಣಗೆ ಓಲಾಡಿಸಿ “ನಿನ್ನ ಜಡೆಯಲ್ಲಿ ಒಂದು ಕೂದಲೂ ಸಹ ಬೀಳಬಾರದು ಭದ್ರ. ತರಗತಿ ಮುಗಿಸಿಕೊಂಡು ಬಂದುಬಿಡು. ಹೊರಗಡೆ ಕಾಯ್ತಾರ್ತೀನಿ” ಎಂದ. ಸೆಲ್ವಿ, “ಮಣಿ ನಿಂದು ಮತ್ತೆ ಅತಿಯಾಗ್ತಾ ಇದೆ. ಕೆನ್ನೆ ಸ್ವಲ್ಪ ಹುಷಾರಾಗಿ ನೋಡಿಕೊ” ಎಂದಳು. ಹುಡುಗಿಯರೆಲ್ಲ ನಕ್ಕರು. ಅವನು ಏನೂ ಮಾತನಾಡದೆ ಹೊರಕ್ಕೆ ಹೋದ.
ಈಗ ಮಣಿ ಮತ್ತು ಸೆಲ್ವಿಯ ಪ್ರೀತಿ ಕಾಲೇಜ್ ಒಳಗೂ ಹೊರಗೂ ವಿಪರೀತವಾಗಿ ಎಲ್ಲೆ ಮೀರಿಹೋಗಿತ್ತು. ಮೊದಲಿಗೆ ಮಣಿ ಮಾತ್ರ ತರಗತಿಗಳಿಗೆ ಚಕ್ಕರ್ ಹಡೆಯುತ್ತಿದ್ದರೆ ಈಗ ಸೆಲ್ವಿ ಕೂಡ ಅವನ ಜೊತೆಗೆ ಸೇರಿಕೊಂಡು ತರಗತಿಗಳಿಗೆ ಚಕ್ಕರ್ ಹೊಡೆಯುತ್ತಿದ್ದಳು. ರಾಬರ್ಟ್ಸನ್‌ಪೇಟೆಯ ಕೃಷ್ಣ, ಒಲಂಪಿಯಾ, ಗೇ ಟಾಕೀಸ್ ಮತ್ತು ಆಂಡರ್ಸನ್‌ಪೇಟೆಯ ಲಕ್ಷ್ಮೀ ಟಾಕೀಸ್‌ಗಳಲ್ಲಿ ಯಾವುದೇ ಹೊಸ ಸಿನಿಮಾ ಬಂದರೂ ಸಾಕು. ಮೊದಲ ದಿನವೇ ಅವರಿಬ್ಬರು ಅಲ್ಲಿರುತ್ತಿದ್ದರು. ಅವರಿಬ್ಬರ ಪ್ರೀತಿ ಮೊದಲನೆ ಹಂತ ದಾಟಿಹೋಗಿ ಎರಡನೆ ಹಂತಕ್ಕೆ ಪ್ರವೇಶ ಪಡೆದಿತ್ತು. ಮಧ್ಯೆಮಧ್ಯೆ ಸೈಕಲ್ ತೆಗೆದುಕೊಂಡು ಹಳ್ಳಿಗಳ ಕಡೆಗೆ ವಿಹಾರ ಹೋಗುವುದು ನಡೆಯುತ್ತಿತ್ತು. ಇವರ ಪ್ರೀತಿ ಪ್ರೇಮ ಹಾಗೂ ಹೀಗೂ ಅವರ ಕಾಲೋನಿಗಳವರೆಗೂ ತಲುಪಿದ್ದರೂ ಅವರ ಮನೆಗಳ ಒಳಕ್ಕೆ ಇನ್ನೂ ಹೋಗಿರಲಿಲ್ಲ. ಹಾಗೆ ಹೋದರೂ ಕೂಡ ಕಾಲೋನಿಗಳ ಜನರು ಅಷ್ಟೇನೂ ತಲೆ ಕೆಡಿಸಿಕೊಳ್ಳುವುದಿಲ್ಲ. ಏನಾದಾರೂ ಮಾಡಿಕೊಳ್ಳಲಿ ಚೆನ್ನಾಗಿ ಓದಿಕೊಂಡರೆ ಸಾಕು ಎನ್ನುವುದು ಅವರ ಅಂತಿಮ ತೀರ್ಮಾನ. ಕೆಜಿಎಫ್‌ನ ಗಣಿ ನಗರದಲ್ಲಿ ಇದೆಲ್ಲ ಮಾಮೂಲಿಯಾಗಿತ್ತು. ಆದರೆ ಕೆಲವೊಮ್ಮೆ ಜಗಳ, ಗಲಾಟೆ ಮತ್ತು ಹೊಡೆದಾಟಗಳು ನಡೆಯುತ್ತಿದ್ದವು.
***
ಒಂದು ರಾತ್ರಿ ಮಣಿ ಮಲಗಿಕೊಳ್ಳುವ ಕಮ್ಯೂನಿಟಿ ಹಾಲ್ ಕಡೆಗೆ ಹೋಗುವುದರ ಬದಲಿಗೆ ಸೆಲ್ವಿ ಇದ್ದ ಕಾಲೋನಿ ಕಡೆಗೆ ಹೆಜ್ಜೆಯಾಕತೊಡಗಿದನು. ಸೆಲ್ವಿಯ ಅಪ್ಪ ಮತ್ತು ಅಣ್ಣ ಇಬ್ಬರೂ ಗಣಿಗಳಲ್ಲಿ ಕೆಲಸ ಮಾಡುವುದರಿಂದ ಕಾಲೋನಿಯಲ್ಲಿ ಇಬ್ಬರಿಗೂ ಎರಡು ಮನೆಗಳು ಪಕ್ಕಪಕ್ಕದಲ್ಲಿಯೇ ಅಲಾಟ್ ಆಗಿದ್ದವು. ಒಂದು ಮನೆಯಲ್ಲಿ ಅಪ್ಪಅಮ್ಮನ ಜೊತೆಗೆ ಸೆಲ್ವಿ ಮಲಗಿಕೊಳ್ಳುತ್ತಿದ್ದರೆ ಇನ್ನೊಂದು ಮನೆಯಲ್ಲಿ ದೊಡ್ಡಣ್ಣ ಅತ್ತಿಗೆ ಮಲಗಿಕೊಳ್ಳುತ್ತಿದ್ದರು. ಈಗ ದೊಡ್ಡಣ್ಣ ಮತ್ತು ಅತ್ತಿಗೆ ಮಗುವಿನೊಂದಿಗೆ ಒಂದು ವಾರ ಅತ್ತಿಗೆಯ ಊರಿಗೆ ಹೋಗಿದ್ದರು. ಆ ಮನೆಯಲ್ಲಿ ಸೆಲ್ವಿ ಓದಿಕೊಂಡು ಮಲಗಿಕೊಳ್ಳುವುದಾಗಿ ಅಪ್ಪಅಮ್ಮನಿಗೆ ತಿಳಿಸಿದ್ದಳು. ಎರಡೂ ಮನೆಗಳು ಪಕ್ಕದಲ್ಲಿಯೇ ಇದ್ದರಿಂದ ಅವಳ ತಂದೆ ಅಯ್ಯಪ್ಪ ಆಗಲಿ ಚೆನ್ನಾಗಿ ಓದಿಕೊಳ್ಳಮ್ಮ ಎಂದಿದ್ದರು. ಸೆಲ್ವಿ ಊಟ ಮಾಡಿ ಬಂದು ಪಕ್ಕದ ಮನೆಯಲ್ಲಿ ವಿದ್ಯುತ್ ದೀಪದ ಬೆಳಕಿನಲ್ಲಿ ಓದಿಕೊಳ್ಳುತ್ತಿದ್ದಳು.
ರಾತ್ರಿ 1ಂ ಗಂಟೆ. ಕಾಲೋನಿಯಲ್ಲಿ ಜನರ ಓಡಾಟ ತೀರಾ ಕಡಿಮೆ ಅಥವಾ ಇಲ್ಲ ಎನ್ನುವಂತಿತ್ತು. ದೂರದೂರಕ್ಕೆ ನಿಂತಿರುವ ಒಂಟಿ ಕಂಬಗಳ ತಂತಿಗಳಲ್ಲಿ ನೇತಾಡುತ್ತಿರುವ ವಿದ್ಯುತ್ ದೀಪಗಳು ತೂಕಡಿಸುತ್ತಿರುವಂತೆ ಮಬ್ಬಾಗಿ ಉರಿಯುತ್ತಿದ್ದವು. ನಾಯಿಗಳು ಅಲ್ಲಲ್ಲಿ ಮನೆಗಳ ಮುಂದಿನ ಕಲ್ಲು ಬಂಡೆಗಳ ಮೇಲೆ ಕೆಳಗೆ ಸೇರಿಕೊಂಡು ತೂಕಡಿಸುತ್ತಿದ್ದವು. ಕೆಲವು ಬಿಡಾಡಿ ನಾಯಿಗಳು ಆಕಳಿಸುತ್ತಾ ಅಲ್ಲಿ ಇಲ್ಲಿ ಮನೆಗಳ ತಿರುವುಗಳಲ್ಲಿ ನಿಂತುಕೊಂಡಿದ್ದವು. ಮಣಿ ಮುಖ್ಯ ರಸ್ತೆಯನ್ನು ದಾಟಿ ಸೆಲ್ವಿ ಇರುವ ಬೀದಿಗೆ ಕಳ್ಳ ಬೆಕ್ಕಿನಂತೆ ನಿಧಾನವಾಗಿ ಹೆಜ್ಜೆ ಇಡುತ್ತಾ ಬಂದ. ಅದೇ ಸಮಯಕ್ಕೆ ಸರಿಯಾಗಿ ಸೆಲ್ವಿ ಮನೆ ಹಿಂದಿನ ಬಾಗಿಲಿಂದ ಹೊರಕ್ಕೆ ಬಂದು ನಿಂತುಕೊಂಡಳು. ಮನೆಯ ಹಿಂದೆ ಸಣ್ಣ ಕೈತೋಟವಿದ್ದು ಅದಕ್ಕೆ ಬಿದಿರು ದಬ್ಬೆಗಳ ಬೇಲಿಯನ್ನು ಹಾಕಲಾಗಿದೆ. ಸೆಲ್ವಿ ಹೃದಯ ಢವ.. ಢವ.. ಎಂದು ಹೊಡೆದುಕೊಳ್ಳತೊಡಗಿತು. ಅದೇ ಸಮಯಕ್ಕೆ ಮಣಿ ಒಂದು ಮನೆಯ ತಿರುವಿನಲ್ಲಿ ಕಾಣಿಸಿಕೊಂಡಿದ್ದೆ ನಾಯಿಯೊಂದು ಅವನ ಕಡೆಗೆ ನೋಡಿ ಯಾರೋ ಕಾಲೋನಿಯವನೇ ಇರಬೇಕು ಎಂದು ಸುಮ್ಮನಾಯಿತು. ಮನೆ ಗೋಡೆಯ ಪಕ್ಕದಲ್ಲಿ ಕಾಣಿಸಿಕೊಂಡ ಸೆಲ್ವಿಯನ್ನು ನೋಡಿದ ಮಣಿ ನಿಧಾನವಾಗಿ ನೆಲದ ಮೇಲೆ ಸೋಕಿಸೋಕದಂತೆ ಹೆಜ್ಜೆಗಳನ್ನು ಇಡುತ್ತಾ ಅವಳ ಕಡೆಗೆ ನಡೆದುಬಂದ.
ಇನ್ನಾವುದೊ ನಾಯಿ ಮಣಿಯನ್ನು ನೋಡಿ ಸಣ್ಣದಾಗಿ ಎರಡು ಸಲ ಬೌ.. ಬೌ.. ಎಂದಿತು. ಸೆಲ್ವಿ ನೆಲಕ್ಕೆ ಬಗ್ಗಿ ಬರಿಕೈಯಲ್ಲಿ ಆ ನಾಯಿಯ ಕಡೆಗೆ ಕಲ್ಲು ಎಸೆದಂತೆ ಮಾಡಿದಳು. ಸೆಲ್ವಿಯ ಗುರುತಿರುವ ಆ ನಾಯಿ ಸೆಲ್ವಿ ಯಾಕೆ ಈ ಹೊತ್ತಿನಲ್ಲಿ ಇಲ್ಲಿ ನಿಂತಿದ್ದಾಳೆ ಎನ್ನುತ್ತ ನಾಲ್ಕು ಹೆಜ್ಜೆ ಹಿಂದಕ್ಕೆ ಓಡಿಹೋಗಿ ಗೋಡೆಯ ಮರೆಯಲ್ಲಿ ನಿಂತುಕೊಂಡು ಸೆಲ್ವಿ ಮತ್ತು ಮಣಿಯನ್ನು ನೋಡತೊಡಗಿತು. ಮಣಿ ಸದ್ದು ಬರದಂತೆ ಎಚ್ಚರವಹಿಸಿ ಜೋರಾಗಿ ಹೆಜ್ಜೆಗಳನ್ನಾಕುತ್ತ ಸೆಲ್ವಿ ಹತ್ತಿರಕ್ಕೆ ನಡೆದು ಹೋಗುತ್ತಿರುವುದನ್ನು ನೋಡಿದ ನಾಯಿ ಏನೋ ಮಾಮ್ಲ ಇರಬೇಕೆಂದುಕೊಂಡರೂ ನನಗ್ಯಾಕೆ ಬೇಕು ಅವರ ಗೊಡವೆ ಎಂದು ಮತ್ತೆ ಬೊಗಳಲಿಲ್ಲ. ಮಣಿ ಹತ್ತಿರಕ್ಕೆ ಬರುತ್ತಿದ್ದಂತೆ ಸೆಲ್ವಿ ಗೋಡೆಯ ಮರೆಗೆ ಬಂದು ತೋಟದ ಬಾಗಿಲು ಒಳಕ್ಕೆ ಹೋದಳು. ಮಣಿ ಈಗ ಆಕಡೆ ಈಕಡೆ ನೋಡುತ್ತ ಉದ್ದನೆ ಹೆಜ್ಜೆಗಳಾಕುತ್ತ ತೋಟದ ಒಳಕ್ಕೆ ಸೇರಿಕೊಂಡ. ಸೆಲ್ವಿ ತೋಟದ ಬಾಗಿಲು ಮುಚ್ಚಿಕೊಂಡು ಅವನ ಕೈಹಿಡಿದುಕೊಂಡು ಮನೆ ಒಳಕ್ಕೆ ಹೋಗಿ ನಿಧಾನವಾಗಿ ಬಾಗಿಲು ಮುಚ್ಚಿಕೊಂಡಳು. ಅಲ್ಲಿಗೆ ಅವರಿಬ್ಬರ ಯೋಜನೆಯ ಮೊದಲ ಭಾಗ ಯಶಸ್ವಿಯಾಗಿತ್ತು.
ಅಪ್ಪಅಮ್ಮನ ಮನೆ ಪಕ್ಕದಲ್ಲಿಯೆ ಇರುವುದರಿಂದ ಸೆಲ್ವಿ ಮಾತನಾಡದಂತೆ ಮಣಿಗೆ ಎಚ್ಚರಿಕೆ ಕೊಟ್ಟಳು. ಸುಮಾರು ಹೊತ್ತು ಮಣಿ ಅವಳನ್ನು ಮಾತನಾಡಲು ಬಿಡದೇ ತಬ್ಬಿಕೊಂಡೇ ಇದ್ದನು. ಅವಳಿಗೂ ಅದೇ ಬೇಕಾಗಿತ್ತು. ಅವರಿಬ್ಬರಿಗೂ ಇಂತಹ ಅವಕಾಶ ಯಾವಾಗಲೂ ದೊರಕಿರಲಿಲ್ಲ. ಅಣ್ಣ ಅತ್ತಿಗೆ ಊರಿನಲ್ಲಿ ಇಲ್ಲದ ಕಾರಣ ಇಬ್ಬರಿಗೂ ಇಂತಹ ಒಂದು ಒಳ್ಳೆ ಅವಕಾಶ ದೊರಕಿತ್ತು. ಮಂಚದ ಮೇಲೆ ಮಲಗಿಕೊಂಡರೆ ಸದ್ದು ಬರುತ್ತದೆಂದು ಹಾಸಿಗೆಯನ್ನು ನೆಲದ ಮೇಲೆ ಹಾಸಿದ್ದ ಕಾರಣ ಇಬ್ಬರೂ ಹಾಸಿಗೆ ಮೇಲೆ ಮಲಗಿಕೊಂಡರು. ಹೊಸ ಪ್ರೇಮಿಗಳು ಪಡೆಯುವ ಮರೆಯಲಾರದಂತಹ ಎಲ್ಲಾ ಅನುಭವಗಳನ್ನು ಆ ರಾತ್ರಿ ಅವರಿಬ್ಬರು ಪಡೆದುಕೊಂಡರು. ವಯಸ್ಸು, ಪ್ರೀತಿ ಎಲ್ಲವನ್ನೂ ಮಾಡಿಸುತ್ತದೆ ಎನ್ನುವುದು ಈಗ ಅವರಿಬ್ಬರ ಮಧ್ಯೆ ಸಾಬೀತಾಗಿತ್ತು.
ಸೆಲ್ವಿ, “ಮಣಿ 4 ಗಂಟೆ ಆಗಿದೆ. ಇನ್ನು ಜನರು ಒಬ್ಬೊಬ್ಬರಾಗಿ ಮನೆಗಳಿಂದ ಹೊರಕ್ಕೆ ಬರ್ತಾರೆ. ಐದು ಗಂಟೆಗೆ ಕೊಳಾಯಿಗಳಲ್ಲಿ ನೀರು ಬರುತ್ತೆ. ಹಾಲು ಕರೆಯಲು ಜನ ಏಳ್ತಾರೆ. ನೀನು ಬೇಗನೆ ಹೊರಟೋಗಬೇಕು” ಎಂದಳು. ಆದರೆ ಮಣಿ ಅವಳನ್ನು ತಬ್ಬಿಕೊಂಡು ಮಲಗೇ ಇದ್ದನು. ಸೆಲ್ವಿ, “ಇದಕ್ಕೆ ನಾನು, ನಿನ್ನನ್ನು ಹತ್ತಿರಕ್ಕೆ ಸೇರಿಸ್ತಾಇರಲಿಲ್ಲ” ಎಂದಳು. ಆದರೆ ಅವನು ಅವಳನ್ನು ಬಿಡಲಿಲ್ಲ. ಸೆಲ್ವಿ ಮಣಿಯಿಂದ ಬಿಡಿಸಿಕೊಳ್ಳಲು ಹರಸಾಹಸ ಮಾಡಬೇಕಾಯಿತು. ಸೆಲ್ವಿ ಮತ್ತೆ, “ನಿನ್ನನ್ನ ಮನೆಗೆ ಸೇರಿಸಿಕೊಂಡಿದ್ದೆ ತಪ್ಪಾಯಿತು” ಎಂದು ಅವನಿಂದ ಬಿಡಿಸಿಕೊಂಡು ಎದ್ದು ಬಾಗಿಲನ್ನು ನಿಧಾನವಾಗಿ ತೆರೆದು ಹೊರಕ್ಕೆ ನೋಡಿದಳು. ಆಕಾಶದಲ್ಲಿ ನಕ್ಷತ್ರಗಳು ಹೊಳೆಯುತ್ತಿದ್ದವು. ಮಣಿ ಪ್ಯಾಂಟು ಶರ್ಟ್ ಹಾಕಿಕೊಂಡು ಬಾಗಿಲಲ್ಲಿ ಬಂದು ಹೊರಕ್ಕೆ ಇಣಿಕಿ ನೋಡಿದ. ಸೆಲ್ವಿ ತೋಟದಲ್ಲಿ ಗಿಡಗಳ ನಡುವೆ ಅರೆಕೊರೆ ಬಟ್ಟೆಗಳಲ್ಲಿ ನಿಂತುಕೊಂಡಿದ್ದಳು. ಮಣಿ ಹೊರಕ್ಕೆ ಬಂದು ತೋಟದ ಬಾಗಿಲು ತೆರೆದುಕೊಂಡು ಹೊರಬಿದ್ದ. ಎರಡು ನಾಯಿಗಳು ಎಲ್ಲಿದ್ದವೊ ಒಮ್ಮೆಲೆ ಅವನ ಹಿಂದೆ ಬಿದ್ದುಬಿಟ್ಟವು. ಸೆಲ್ವಿ ಒಳಕ್ಕೆ ಹೋಗಿ ಬಾಗಿಲು ಮುಚ್ಚಿಕೊಂಡಳು.
ಮಣಿ ನಿಧಾನವಾಗಿ, ನಂತರ ಜೋರಾಗಿ ಮತ್ತೇ ಒಂದೇ ಓಟ ಓಡಿದ. ಮಣಿ ಯಾವಾಗ ಓಡಲು ಪ್ರಾರಂಭಿಸಿದನೋ ಇವನು ಈ ಕಾಲೋನಿಯವನಲ್ಲ ಎಂದು ತಿಳಿದುಕೊಂಡ ನಾಯಿಗಳು ಅವನ ಹಿಂದೆ ಬೊಗಳುತ್ತಾ ಅಟ್ಟಿಸಿಕೊಂಡು ಓಡಿದವು. ಮಣಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಓಡುತ್ತಿದ್ದವನು ಒಮ್ಮೆಲೆ ನಿಂತುಕೊಂಡು ರಸ್ತೆಯ ಪಕ್ಕದಲ್ಲಿ ಬಿದ್ದಿದ್ದ ಕಲ್ಲುಗಳನ್ನು ತೆಗೆದುಕೊಂಡು ನಾಯಿಗಳ ಕಡೆಗೆ ಜೋರಾಗಿ ಬೀಸಿದನು. ನಾಯಿಗಳು ತಮ್ಮ ಗಡಿ ಬಂದುಬಿಟ್ಟಿತೊ ಎಂಬುದಾಗಿ ಅನುಮಾನ ಬಂದು ಒಮ್ಮೆಲೆ ನಿಂತುಕೊಂಡು ಮಣಿಯ ಕಡೆಗೆ ನೋಡಿದವು. ಮಣಿ ಮತ್ತೆ ಓಡುತ್ತಾ ನಾಲ್ಕೇ ನಿಮಿಷಗಳಲ್ಲಿ ಉದ್ದಂಡಮ್ಮಾಳ್ ದೇವಸ್ಥಾನದ ಮುಂದೆ ಅರಳಿ ಮರದ ಕೆಳಗೆ ನಿಂತುಕೊಂಡಿದ್ದನು. ಸೆಲ್ವಿ ಅನಾಥಳಂತೆ ಹಾಸಿಗೆ ಮೇಲೆ ಬಿದ್ದುಕೊಂಡು, ಇನ್ನು ಯಾವಾಗಲೂ ಇವನನ್ನು ಮನೆ ಹತ್ತಿರಕ್ಕೆ ಸೇರಿಸಬಾರದು ಎಂದುಕೊಂಡಳು. ಮನಸ್ಸು ಏನು ಮಾಡಬಾರದು ಎನ್ನುತ್ತದೊ ಪ್ರೀತಿ ಅದನ್ನು ಮಾಡಿಸಿಬಿಡುತ್ತದೆ ಎಂದುಕೊಂಡಳು.
***
ಎರಡನೆ ಪಿಯುಸಿ ತರಗತಿಯಲ್ಲಿ ಭೂವಿಜ್ಞಾನದ ಲಕ್ಷರರ್ ಪ್ರತಾಪ್ ಸಿಂಗ್ ಅವರು ಗಣಿಗಳ ಒಳಗಾಗುವ ರಾಕ್‌ಬರ್ಸ್ಟ್ ಅಥವಾ ಶಿಲಾಸ್ಪೋಟದ ಬಗ್ಗೆ ಪಾಠ ಮಾಡುತ್ತಿದ್ದರು. “… ಆಳದ ಗಣಿಗಳಲ್ಲಿ ಸುರಂಗಗಳನ್ನು ತೋಡುತ್ತಿದ್ದಾಗ ಮೇಲೆ ಮತ್ತು ಸುತ್ತಲಿನ ಗಟ್ಟಿ ಶಿಲೆಗಳ ಮಧ್ಯೆ ಉಂಟಾಗುವ ಬಿರುಕುಗಳ ಮೂಲಕ ಒತ್ತಡ ಹೆಚ್ಚುತ್ತಾ ಹೋಗಿ ದಿಢೀರನೆ ಅಗಾಧವಾದ ಶಕ್ತಿ ಬಿಡುಗಡೆಯಾಗಿ ಶಿಲೆಗಳು ಕುಸಿಯುತ್ತವೆ. ಆ ವೇಳೆಯಲ್ಲಿ ಅಲ್ಲಿ ಕೆಲಸ ನಡೆಯುತ್ತಿದ್ದರೆ ಕಾರ್ಮಿಕರು ಶಿಲೆಗಳ ಕೆಳಗೆ ಸಿಕ್ಕಿಕೊಂಡುಬಿಡುತ್ತಾರೆ. ಗಣಿಗಳ ಒಳಗೆ ಡ್ರಿಲ್ಲಿಂಗ್ ಮಾಡುವಾಗ, ಶಿಲೆಗಳನ್ನು ಕತ್ತರಿಸುವಾಗಿ ಮತ್ತು ಕಲ್ಲುಮಣ್ಣು ಬಾಚಿ ತಗೆಯವಾಗ ಉತ್ಪತ್ತಿಯಾಗುವ ಅಗಾಧ ನುಣ್ಣನೆ ಧೂಳು ಉಸಿರಾಟದ ಮೂಲಕ ಕಾರ್ಮಿಕರ ದೇಹ ಸೇರುತ್ತದೆ. ಜಗತ್ತಿನಾದ್ಯಂತ ಗಣಿಗಳಲ್ಲಿ ಕೆಲಸ ಮಾಡುವಾಗ ಅಪಘಾತಗಳಲ್ಲಿ ಸಿಕ್ಕಿಕೊಂಡು ಮತ್ತು ನುಣ್ಣನೆ ಧೂಳನ್ನು ಉಸಿರಾಡುವುದರಿಂದ ಸಿಲಿಕೋಸಿಸ್ ಕಾಯಿಲೆಯಿಂದ ಸಾವಿರಾರು ಕಾರ್ಮಿಕರು ಪ್ರಾಣ ಕಳೆದುಕೊಳ್ಳುತ್ತಾರೆ…” ಎಂದು ವಿವರಿಸುತ್ತಿದ್ದರು.
ಮೂಲೆಯಲ್ಲಿ ಕುಳಿತಿದ್ದ ವಿದ್ಯಾರ್ಥಿಯೊಬ್ಬಳು ತಲೆ ಬಗ್ಗಿಸಿಕೊಂಡು ಅಳತೊಡಗಿದಳು. ಪ್ರತಾಪ್ ಸಿಂಗ್ ಅವರು “ಏನಮ್ಮ ನಿನ್ನ ಹೆಸರು ಯಾಕೆ ಅಳ್ತಾ ಇದ್ದೀಯಾ?” ಎಂದಿದ್ದೆ ಆ ಹುಡುಗಿ ಎದ್ದು ನಿಂತುಕೊಂಡಳು. ಅವಳ ಕಣ್ಣುಗಳು ಕೆಂಪಾಗಿ ಊದಿಕೊಂಡಿದ್ದವು. ಸ್ವಲ್ಪ ಆತಂಕಗೊಂಡ ಮೇಷ್ಟ್ರು, “ಯಾಕೆ ಏನಾಯಿತು?” ಮತ್ತೆ ಪ್ರಶ್ನಿಸಿದರು. ಆಕೆ ಏನೂ ಹೇಳಲಿಲ್ಲ. ಸೆಲ್ವಿಯನ್ನು ಕೇಳಿದರು. ಸೆಲ್ವಿ ಹೇಳೂವುದೊ ಬೇಡವೊ ಎಂದುಕೊಳ್ಳವಷ್ಟರಲ್ಲಿ ಪಾರ್ವತಿ, ಎದ್ದುನಿಂತು “ಅವಂಗಪ್ಪ ಪಿಟ್ಟಕುಪೋರಾರ್ ಸರ್” ಎಂದಳು. ಮೇಷ್ಟ್ರಿಗೆ ಅರ್ಥವಾಗದೆ “ಹಾಗಂದರೆ ಏನು?” ಎಂದರು. ಪಾರ್ವತಿ, “ಸರ್ ಅವರ ತಂದೆಯನ್ನ ಗಣಿಯಿಂದ ಆನ್‌ಫಿಟ್ ಅಂತ ತೆಗೆದುಹಾಕ್ತಾರಂತೆ” ಎಂದಳು. ಸ್ವಾಮಿ ಇತರ ವಿದ್ಯಾರ್ಥಿಗಳೆಲ್ಲ ಅವಳ ಕಡೆಗೆ ನೋಡಿದರು. ತಮಿಳು ಗೊತ್ತಿಲ್ಲದ ಮೇಷ್ಟ್ರು “ಓ ಹೌದಾ!” ಎಂದರು. ಪಾರ್ವತಿ, “ನಿಮ್ಮ ಅಪ್ಪನ ಜಾಗದಲ್ಲಿ ನಿಮ್ಮ ಅಣ್ಣನಿಗೆ ಗಣಿಯಲ್ಲಿ ಕೆಲಸ ಸಿಗುತ್ತೆ ಬಿಡೆ” ಎಂದಳು. ರಾಜಿ, “ನಮ್ಮಣ್ಣ ಆರು ಜನ ಮಕ್ಕಳನ್ನು ನೋಡಿಕೊಳ್ತಾರಾ? ನಮ್ಮಪ್ಪನಂತೆ. ನಮ್ಮಣ್ಣ ಯಾರನ್ನೋ ಮದುವೆ ಮಾಡಿಕೊಂಡು ನಮ್ಮನ್ನೆಲ್ಲ ಮನೆಯಿಂದ ಹೊರಗಾಕಿದರೆ ನಾವೆಲ್ಲ ಏನು ಮಾಡುವುದು?” ಎಂದು ಮುಖವನ್ನು ಕೆಳಕ್ಕೆ ಹಾಕಿಕೊಂಡು ಮತ್ತೆ ಅಳತೊಡಗಿದಳು.
ಮೇಷ್ಟ್ರಿಗೆ ಏನು ಹೇಳುಬೇಕೊ ತಿಳಿಯದೆ ಕನಿಕರದಿಂದ ಅವಳ ಕಡೆಗೆ ನೋಡತೊಡಗಿದರು. ಅಷ್ಟರಲ್ಲಿ ಬೆಲ್ ಹೊಡೆದು ಎಲ್ಲರೂ ಎದ್ದು ಬೇರೆ ತರಗತಿಯ ಕಡೆಗೆ ಹೊರಟರು. ಆ ಹುಡುಗಿಯನ್ನು ಸುತ್ತಲಿದ್ದ ಹುಡುಗಿಯರು ಸಮಾಧಾನ ಮಾಡಿ ಎಬ್ಬಿಸಿಕೊಂಡು ಬಂದರು. ಹಳ್ಳಿ ಕಡೆಯಿಂದ ಬರುತ್ತಿದ್ದ ಸ್ವಾಮಿಗೆ ಏನೂ ಅರ್ಥವಾಗದೆ ತಬ್ಬಿಬ್ಬಾಗಿ “ಈ ಗಣಿಗಳ ಒಂದೊಂದೂ ವಿಷಯ ಕೇಳುತ್ತಿದ್ದರೆ ಒಂದೊಂದು ಸಲ ತಲೆ ತಿರುಗುತ್ತೆ” ಎಂದ ಮಹೇಂದ್ರನಿಗೆ. ಮಹೇಂದ್ರ ಪಾಲ್ಗಾಟ್ ಕಾಲೋನಿಯಿಂದ ಬರುತ್ತಿದ್ದು ಅವರಪ್ಪನೂ ಕೂಡ ಗಣಿಯಲ್ಲಿ ಕೆಲಸ ಮಾಡುತ್ತಿದ್ದಾಗ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದ ಕಾರಣ ಅವನ ತಾಯಿಗೆ ಮೈನಿಂಗ್ ಆಸ್ಪತ್ರೆಯಲ್ಲಿ ದಾದಿ ಕೆಲಸ ಕೊಟ್ಟಿದ್ದರು.

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ