ವಿರೂಪಾಕ್ಷ ಗೌಡ ಕೆ. ಅವರು ಬಾಚಿಗೊಂಡನಹಳ್ಳಿ ಎಂಬಲ್ಲಿ 1935ರ ಜುಲೈ 1ರಂದು ಹುಟ್ಟಿದರು. ಕರ್ನಾಟಕ ವಿಶ್ವವಿದ್ಯಾಲಯದ ಕಾಮರ್ಸ್ ಪದವೀಧರರು. ಕವಿ, ಸಾಹಿತಿ, ಜಾನಪದ ಸಂಕಲನಗಳ ಸಂಪಾದಕರು. ಬಳ್ಳಾರಿ ಜಿಲ್ಲೆಯ ಸಾಹಿತ್ಯಕ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ಇವರದು. ಸುಗ್ಗಿಯ ಕಣ, ಆಕಾಶ ಮಲ್ಲಿಗೆ, ದರ್ಶನ ಮುಂತಾದ ಪ್ರಮುಖ ಕೃತಿಗಳನ್ನು ರಚಿಸಿದ್ದಾರೆ. ಅವರು ಬರೆದ ಈ ಯುದ್ಧ ಎಂಬ ಕವನ ಇಂದಿನ ಕನ್ನಡ ಕಾವ್ಯ ಲೋಕದ ಕುಸುಮ ಸರಣಿಯಲ್ಲಿ ನಿಮ್ಮ ಓದಿಗಾಗಿ.
ಈ ಯುದ್ಧ
ಒಳ್ಳೆಣ್ಣೆ, ಡಾಲ್ಡಾ ಹಾಕಿ ಅಡಿಗೆ ಮಾಡಿದರೂ
ಈ ತರದ ಸೊಡರು ಬರಲಿಕ್ಕಿಲ್ಲ
ನಳರಾಜ ಹುಟ್ಟಿ ಮಾಣಿ ಭಟ್ಟನಾದರೂ
ಕರಿದು ಈ ಸುವಾಸನೆಯ ತರಲಿಕ್ಕಿಲ್ಲ.
ಹೊಡೆಯುತ್ತಿದೆ ಘಮ ಘಮನೆ ಹೊಡೆ ಹೊತ್ತ ಜೊಳ
ಹೆಸರು-ಮಡಿಕೆಯ ಬಳ್ಳಿ ಬೂಟು ಹೊದಿಕೆ
ಬಯೋನಟ್ ಸಹಿತ ಬಂದೂಕ ಹೊತ್ತಂತೆ ಸಾಲು
ಡಿವಿಜನ್ನಿಗೊಬ್ಬೊಬ್ಬ ತೆನೆಯ ಕಮಾಂಡರು
ಅಲ್ಲೊಂದು ಇಲ್ಲೊಂದು ನಿಶಾನೆ ಹಿಡಿದಿದೆ ತೈರು
ಕೋಟೆಯನು ಕಟ್ಟಿದೊಲು ನಾಲ್ಕು ಕಡೆ ವಡ್ಡು
ಕಂದಕವ ಕಡಿದಂತೆ ಬಳಿಯೆ ಬದುವು
ಕರಿಕೆ ಹೂ ಬಿಟ್ಟಿಹುದು ಗರಿ ಮೇಲೆ ಮಂಜು
ಮಕಮಲ್ಲು ಬಟ್ಟೆಯೊಲು ಮಿದುವು ಮಿಂಚು
ಗುಬ್ಬಿ ಕಾಯುವ ಕವಣೆ
ಎತ್ತರದ ಛಾವಿ ಪ್ಯಾಟೆನ್ ಟ್ಯಾಂಕು
ದೇಶದ ಆಹಾರ ಸಮಸ್ಯೆ ಜೊತೆ ಯುದ್ಧ ಸಾರಿ
ಹೊಲಗದ್ದೆಯಲ್ಲಿರುವ ಬಾಕಿ ಡ್ರೆಸ್ಸಿನ ಸೈನ್ಯ
ಹಗಲಿರುಳು ದುಡಿಯುತಿದೆ. ಮದ್ದು , ಗುಂಡು
ಹಿಟ್ಟು, ಬಟ್ಟೆ, ಉತ್ಪತ್ತಿಸುವ ಜಿನ್ನಿನಂತೆ
ವಿಶ್ರಾಂತಿ ಪಡೆದೀತು ಮುಂದಾರು ತಿಂಗಳು
ಈಗಂತು ಶಿಸ್ತಿನಲಿ ಅಣಿಯಾಗಿದೆ
ಚೈನ ಪಾಕಿಸ್ತಾನಕ್ಕಿಟ್ಟು ಭಟ್ಟಂಗಿ
ಜಯತು ಜಯ ಹಾಡಿದೆ
ಗಿಡ ಮರದ ರೇಡಿಯೋ
(ಗುಬ್ಬಿ ಗಿಣಿಗಳೆ ಬ್ಯಾಂಡು)
ಬಯಕೆ ಬಾಳುವೆಯಲ್ಲಿ ಮೈಗೂಡಲಿ
ಹೊಲಗದ್ದೆಯಲ್ಲಿರುವ ಈ ಯುದ್ಧ
ಸದ್ದು, ಗದ್ದಲ ಮುಗಿಸಿ ಸಂತೃಪ್ತಿ ತರಲಿ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ