೯-೨-೧೯೩೩ರಲ್ಲಿ ರಾಮಚಂದ್ರರು ಹುಟ್ಟಿದ್ದು ಯರ್ಮುಂಜ ಗ್ರಾಮದಲ್ಲಿ. ತಂದೆ ಜನಾರ್ಧನ ಜೋಯಿಸರು, ತಾಯಿ ದೇವಕಿ ಅಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಕಬಕದ ಕೊವೆತ್ತಿಲ ಎಂಬ ಗ್ರಾಮದಲ್ಲಿ ನಡೆಯಿತು. ಮಾಧ್ಯಮಿಕ ಶಿಕ್ಷಣ ಪುತ್ತೂರಿನ ಬೊರ್ಡ್ ಹೈಸ್ಕೂಲಿನಲ್ಲಿ. ಹೈಸ್ಕೂಲಿನಲ್ಲಿ ದ್ದಾಗಲೇ ಬರಹವನ್ನು ರೂಢಿಸಿಕೊಂಡು ಪ್ರಾರಂಭಿಸಿದ ಹಸ್ತ ಪತ್ರಿಕೆ ‘ಬಾಲವಿಕಟ.’ ಮೊದಲ ಕವನ ‘ಬಾಪೂಜಿಗೆ ಬಾಷ್ಪಾಂಜಲಿ’ ಬರೆದದ್ದು ೧೯೪೮ರಲ್ಲಿ. 

ಹದಿನೈದನೇ ವಯಸ್ಸಿಗೆ ಬರೆಯಲು ಶುರು ಮಾಡಿ ತಮ್ಮ ಇಪ್ಪತ್ತೆರಡನೇ ವಯಸ್ಸಿಗೆ ತೀರಿಕೊಂಡರು. ಅದ್ಭುತ ಪ್ರತಿಭೆಯ ಬರಹಗಾರ, ರಾಮಚಂದ್ರ  ಅವರ ಮೊದಲ ಕತೆ ‘ಆರಿದ ಹಂಬಲ’, ಅರುಣ ಪತ್ರಿಕೆಯಲ್ಲಿ ಪ್ರಕಟಗೊಂಡಿತು. ಎರಡನೆಯ ಕಥೆ ‘ಸ್ನೇಹಿತರು’, ಬೆಟಗೇರಿ ಕೃಷ್ಣಶರ್ಮರು ನಡೆಸುತ್ತಿದ್ದ ‘ಜಯಂತಿ’ ಪತ್ರಿಕೆಯಲ್ಲಿ ಮೊದಲ ಬಹುಮಾನ ಪಡೆಯಿತು. ಮೆಟ್ರಿಕ್ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಹೊತ್ತಿಗೆ ‘ಪಾಂಚಜನ್ಯ’ ಹಸ್ತಪತ್ರಿಕೆ ಪ್ರಾರಂಭಿಸಿದರು. ಪಾಂಚಜನ್ಯದ ವಿಶೇಷಾಂಕಕ್ಕೆ ಗೋವಿಂದ ಪೈ, ಶಿವರಾಮ ಕಾರಂತರು, ಸೇಡಿಯಾಪು ಕೃಷ್ಣಭಟ್ಟರು, ಗೋಪಾಲಕೃಷ್ಣ ಅಡಿಗರು ಬರೆಯುತ್ತಿದ್ದರು.  ಕಡೆಂಗೋಡ್ಲು ಶಂಕರಭಟ್ಟರ ‘ರಾಷ್ಟ್ರಮತ’ ಪತ್ರಿಕೆಯಲ್ಲಿ ಸಹ ಸಂಪಾದಕರಾಗಿ ಬಿಡುವಿಲ್ಲದ ದುಡಿದರು. ಅನಾರೋಗ್ಯ ಸಂದರ್ಭದಲ್ಲಿಯೂ ‘ ಚಿಕಿತ್ಸೆಯ ಹುಚ್ಚು ಮತ್ತು ಇತರ ಕಥೆಗಳು’  ಮತ್ತೊಂದು ಕಥಾಸಂಕಲನ ಪ್ರಕಟವಾಯಿತು. ಅವರು ಬರೆದ ಕವಿತೆಯೊಂದು ಇಂದಿನ ಕನ್ನಡ ಕಾವ್ಯ ಲೋಕದ ಕುಸುಮ ಸರಣಿಯಲ್ಲಿ ನಿಮ್ಮ ಓದಿಗಾಗಿ. 

 ಯಾರಿಲ್ಲಿಗೆ ಬಂದರು ಕಳೆದಿರುಳು

ಯಾರಿಲ್ಲಿಗೆ ಬಂದರು ಕಳೆದಿರುಳು
ಏ ಗಾಳಿ,
ಆ ಕಥೆಯನೊರೆದು ಮುಂದಕೆ ತೆರಳು
ನೆನೆದು ನೆನೆದು ತನು ಪುಳಕಗೊಳ್ಳು ತಿದೆ
ನುಡಿವೆನೆ ದನಿ ನಡಗುತಿದೆ.

ಸ್ಮೃತಿ ವಿಸ್ಮೃತಿಗಳ ಕಂಬನಿ ಮಾಲೆ
ಎಲ್ಲೆಲ್ಲೂ ತೂಗುತಿದೆ
ಕಳೆದಿರುಳಿನ ಬೆಳದಿಂಗಳ ಮರೆಯಲಿ
ಏನೂ ಅರಿಯದ ಮುಗ್ದೆ ಯ ಕಿವಿಯಲಿ
ಯಾರೇನನು ಪಿಸು ನುಡಿದರು ಹೇಳು
ಏಗಾಳಿ,ಆ ಕಥೆಯನೊರೆದು ಮುಂದಕೆ ತೆರಳು.

ನಸುಕಿನ ಬೆಳಕಿನೊಳೆಂಥ ಬಳಲಿಕೆ
ಮೂಡಲ ಹಣೆ ಕಡುಗೆಂಪು!
ಮರ ಮರದೆಡೆಯಲಿ ಕೂಕು ಆಟ
ಭೂಮಿಗೆ ಮೈಮರೆವು
ಅಲ್ಲಿ ಇಲ್ಲಿ ಗಿಡ ಬಳ್ಳಿ ಮರಗಳು
ಯಾವ ನೆನಪಿನಲೊ ಮೈಮರೆತಿಹವು
ಹೃದಯದೊಳೇನನು ಎರೆದರು ಕೊರೆದರು?
ಏ ಗಾಳಿ,
ಆ ಕಥೆಯನೊರೆದು ಮುಂದಕೆ ತೆರಳು.

ಮೈಯೆಲ್ಲಾ ಗಡಗುಟ್ಟುತಲಿದೆಯೇ
ಬೆದರಿಸಿದವರಾರು?
ಮುಖ ತೊಯ್ದಿದೆ, ಕಣ್ಣೀರಿನ ಹನಿಯನು
ಹರಿಯಿಸಿದವರಾರು?
ಯಾರೂ ಕಾಣದ ಆ ಮರೆಯೊಳಗೆ

ಕುಲುಕುಲು ಎನುತಿದೆ ಮೆಲುನಗೆಯ ನೊರೆ
ನಿನ್ನೆಯ ಹಾಡಿನ ದನಿಯಿನ್ನೂ ಗುಣು-
ಗುಣಿಸುವ ಮಾಯೆಯಿದೆಂಥದು ಹೇಳು

ಏ ಗಾಳಿ,
ಆ ಕಥೆಯನೊರೆದು ಮುಂದಕೆ ತೆರಳು.

(ಪರಿಚಯ, ಭಾವ ಚಿತ್ರದ ಕೃಪೆ: ಕಣಜ)