ಅಪ್ಪನ ಮೊಂಡ ಕುಡ

ಧಕ್ ಧಕ್ ಧಕ್
ಎತ್ತಿ ಕುಣಿಸುತ್ತದೆ ಅಪ್ಪನನ್ನು ಈ ಕುಡ
ಒಮ್ಮೊಮ್ಮೆ ಕೆಡವುತ್ತದೆ ಕೂಡ
ಅಪ್ಪನ ಕುಂಟೆಯ ಕುಡವೀಗ
ಮೊಂಡವಾಗಿದೆ
ಮಾತು ಕೇಳುವುದಿಲ್ಲ

ಹಣಿಸಬೇಕಿದೆ
ಆದರೆ
ಮೊನ್ನೆ ಬಿದ್ದ ಮಳೆಗೆ
ಕಮ್ಮಾರನ ಜೋಪಡಿಯಲ್ಲೀಗ
ಇದ್ದಿಲು ಹಸಿ-ಹಸಿ
ಉರುವಲಿಲ್ಲ!

ಫಸಲನು ಕಬಳಿಸಿಬಿಡುವಷ್ಟು
ಹೊಲದಲ್ಲೀಗ ಜೇಕು ಬೆಳೆದಿದೆ
ಕುಡ ಮೊಂಡವಾಗಿದೆ
ಸ್ವಲ್ಪ ದೂರ ಹರಗುವಷ್ಟರಲ್ಲಿ
ಮತ್ತೆ
ಧಕ್ ಧಕ್ ಧಕ್

ಎತ್ತುಗಳು ಕಾಲ ಕಸುವ ಹಾಕಿ
ಮೀಟಿದರೂ ಒಮ್ಮೊಮ್ಮೆ
ಎದ್ದು ಬರುವುದಿಲ್ಲ ಈ ಕುಡ
‘ಹೆಳವನ ಮಾಡೆನ್ನನು’ ಎಂದನಲ್ಲ ಬಸವ
ಅಷ್ಟು ಮೊಂಡೇನು?
ಕುಂಟೆಗುಂಟ ಅಂಗಾತ ಬಿದ್ದ ಕುಡವ
ಹೋಳು ಮಗ್ಗಲಾಗಿಸಿದ ಎಡಗೈಯ ಆಸರೆಗೆ
ಮೇಲೇಳುತ್ತದೆ ಕುಡ
ಬಲಗೈಯ ಕುರ್ಚಿಗೆ
ಕುಡವ ಸರ್ರನೆಳೆಯುವಾಗ
ಗುಪ್ಪೆಯಾಗಿ ನೆಲಕ್ಕೆ ಬೀಳುತ್ತದೆ
ಗರಿಕೆ, ಜೇಕು, ಕಡ್ಡಿ, ಕಸ ಇತ್ಯಾದಿ

ಬೆವರ ಹನಿಗಳು ತೊಟ್ಟಿಕ್ಕುತ್ತವೆ ನೆಲಕ್ಕೆ
ಉಸ್ಸೆನ್ನುತ್ತಾನೆ ಅಪ್ಪ ಕಳೆಯ ಕಂಡು
ಮತ್ತೆ ಕುಂಟೆಯ ಅಂಗಾತ ಕೆಡುವುತ್ತಾನೆ
ನಿಟ್ಟುಸಿರ ಬಿಟ್ಟು
ಮೊಂಡ ಕುಡವ ಹಳಿಯುತ್ತಾ..

ಅಲ್ಲಿ ದೂರದ ಹೊಲದಲ್ಲಿನ ಸಂಕಷ್ಟ
ಊರಿಂದ ದೂರವಿದ್ದು ಓದುವ
ನನಗೂ ಈಗೀಗ ಸ್ಪಷ್ಟ ;
ವಿಸ್ಮೃತಿಗೊಳಗಾಗದ ಕುಡಗಳು
ಯಾವ ಕುಲುಮೆಯಿಂದ
ಬಂದಿದ್ದವು ಎಂದು?
ನೆನಪಾಗುತ್ತದೆ ಎಲ್ಲ
ಶತಮಾನದಿಂದ ಮೊಂಡಾದ ಕುಡಗಳ
ಸಂತತಿ ಇಲ್ಲಿ ಬಹಳಿವೆ ಎಂದು

ಕೇಳಿದರಂತೆ ನೆನ್ನೆ
ಅಪ್ಪ ಕುಡ ಹಣಿಸಲೆಂದು ಹೋದಾಗ
ನಿನ್ನದು ಜಟ್ಕಾನಾ ಅಥವಾ ಹಲಾಲ್?
ಅದಕ್ಕೆ ಅಪ್ಪ…
‘ನನ್ನದು ಮೊಂಡ ಕುಡ’
ಎಂದನಂತೆ!

ಈ ಎಲ್ಲವನೂ ಬಡಿಬಡಿದು
ಹಣಿಯಬೇಕು
ಹತ್ತಿದ ಜಂಗು ತಿಕ್ಕಬೇಕು
ಕಸ ಕಿತ್ತು ಹೊಲ ಸ್ವಚ್ಛ ಮಾಡಬೇಕು
ಎಂದುಕೊಳ್ಳುವಾಗಲೆಲ್ಲ
ನೆನಪಾಗುತ್ತಾನೆ
ಸಂಗನ ಬಸವ