ಮನುಷ್ಯ ಮುಕ್ತವಾಗಿ ಮತ್ತು ಸ್ವಚ್ಛಂದವಾಗಿ ಬೇರೆಯವರ ಜೊತೆ ಕಲೆಯಲು ರಂಗಭೂಮಿಗೆ ಬರಬೇಕು. ಅಲ್ಲಿ ಇರುವ ಮಜವೇ ಬೇರೆ. ಪ್ರೀತಿಯಲ್ಲಿ, ಸಲಿಗೆಯಲ್ಲಿ ಮತ್ತು ಸ್ನೇಹದಲ್ಲಿ ಕಾಲೆಳೆಯುವ ಬಗೆಗಳು ಇಲ್ಲಿ ಪಡೆದುಕೊಳ್ಳುವ ಆಯಾಮವೇ ಬೇರೆ. ಆದರೆ ಇದೇ ಮಂದಿ ಸಂಜೆಯಾಗುತ್ತ ಮೇಕಪ್ಗೆ ಕೂತರೆ ಮತ್ತು ರಂಗಕ್ಕೆ ಬಂದರೆ ಅಲ್ಲಿ ಅವರ ಚಹರೆ ಬೇರೆ. ಶಿಸ್ತು ಬೇರೆ. ಈ ಎಲ್ಲ ತಿಳಿದು ಮತ್ತು ಸಮುದ್ರದ ಬಗೆಗೆ ನನ್ನಲ್ಲಿ ಮೊದಲಿಂದ ಇರುವ ಸೆಳೆತದಿಂದ ಹೊರಟೆ. ಟಿಟಿಯಲ್ಲಿ ಹುಡುಗರ ಗೇಲಿ. ಪರಸ್ಪರ ಕಾಲೆಳೆಯುವ ಗುಣ ನಗು ತರಿಸುತ್ತಿತ್ತು.
ಎನ್.ಸಿ. ಮಹೇಶ್ ಬರೆಯುವ “ರಂಗ ವಠಾರ” ಅಂಕಣ
ನನಗೆ ಈಚೀಚೆಗೆ ವ್ಯತ್ಯಾಸ ಸ್ಪಷ್ಟವಾಗುತ್ತಿದೆ. ಅದು ಜಗಳ ಮತ್ತು ಪ್ರೀತಿಯ ನಡುವಿನ ವ್ಯತ್ಯಾಸ. ರಂಗಭೂಮಿಯನ್ನು ಹಲವರು ಏನೇನೋ ಪ್ರತಿಮೆ ಮತ್ತು ರೂಪಕಗಳಲ್ಲಿ ವಿವರಿಸುತ್ತಾರೆ. ನಾನು ರಂಗಭೂಮಿಯನ್ನ ‘ಸುಳಿ’ಗೆ ಹೋಲಿಸುತ್ತೇನೆ. ಈ ಸುಳಿಯ ಸೆಳವಿಗೆ ಸಿಕ್ಕರೆ ಕಥೆ ಮುಗಿದ ಹಾಗೆಯೇ. ಅದು ತಂದೊಡ್ಡುವ ಅನಿರೀಕ್ಷಿತಗಳಿಗೆ ಲೆಕ್ಕವಿಲ್ಲ. ಅದು ಯಾವ ಸಂದರ್ಭದಲ್ಲಿ ನಮ್ಮ ಕಾಲನ್ನು ಧುತ್ತನೆ ಎಳೆದು ಒಯ್ಯುತ್ತದೆಂದು ಊಹಿಸಲೂ ಬರುವುದಿಲ್ಲ. ಮತ್ತೆ ನಮ್ಮನ್ನು ಎಲ್ಲಿ ಸಿಕ್ಕಿಸುತ್ತದೆ ಎಂದು ಅಂದಾಜಿಸಲೂ ಆಗುವುದಿಲ್ಲ. ಅಂಥ ಇಕ್ಕಟ್ಟಿನಲ್ಲಿ ಉಸಿರುಗಟ್ಟಿಸುತ್ತ ನಮ್ಮ ಕಾಲು ಹಿಡಿದು ಜಗ್ಗುತ್ತಿರುತ್ತದೆ. ನಾವು ತಳದ ಕೆಸರಿನಲ್ಲಿ ಸಿಕ್ಕು ಒದ್ದಾಡುತ್ತಿರುತ್ತೇವೆ. ಈ ಎಲ್ಲ ನಾನು ಹೇಳಿದ್ದು ನೀರೊಳಗೆ ನಡೆವ ಕ್ರಿಯೆಗಳ ಬಗೆಗೆ ಮಾತ್ರ. ಆದರೆ ರಂಗಭೂಮಿ ಈ ಎಲ್ಲವನ್ನೂ ನೆಲದ ಮೇಲೇ ಅನುಭವ ತಂದು ಅಂಗಡಿ ತೆರೆಯುತ್ತದೆ.
ಇಂಥ ರಂಗಭೂಮಿಯ ಸೆಳವಿಗೆ ಸಿಕ್ಕ ನಾನು ಅನೇಕ ಸಲ ತಾಳ್ಮೆಯಿಂದ ಇರಲು ಪ್ರಯತ್ನಿಸಿದ್ದೇನೆ. ಕಣ್ಣಿನಲ್ಲಿ ಕೆಂಡ ಕಾರುವ ಸನ್ನಿವೇಶ ನಿರ್ಮಾಣವಾಗಿದ್ದರೂ ನಕ್ಕು ಎದ್ದು ನಡೆಯುವ ಪ್ರಯತ್ನ ಮಾಡಿದ್ದೇನೆ. ಆದರೆ ನಮ್ಮ ಅಷ್ಟೂ ಸಂಯಮವನ್ನ ನಿಕಷಕ್ಕೆ ಒಡ್ಡಲಿಕ್ಕೇ ರಂಗಭೂಮಿ ಇದೆಯೇನೋ ಎಂದು ನನಗೆ ಬಹಳ ಸಲ ಅನಿಸಿದೆ. ಅದು ನಮ್ಮಲ್ಲಿ ಎಷ್ಟು ತಾಳ್ಮೆ ಇದೆ ಎಂದು ಮೊದಲು ಕಿಡಿಗೇಡಿಯಾಗಿ ಇಣುಕಿ ನೋಡುತ್ತದೆ. ನಮ್ಮಲ್ಲಿ ತಾಳ್ಮೆ ಹೆಚ್ಚೇ ಇದೆ ಅನಿಸಿದರೆ ಅದು ತನ್ನ ಚಾಲಾಕಿ ಆಟ ಆರಂಭಿಸುತ್ತದೆ. ನನಗೆ ಸಿಟ್ಟು ತರಿಸುವವರು, ಪರಮ ಕುಹಕಿಗಳನ್ನ ಹುಟ್ಟುಹಾಕುತ್ತದೆ. ನನ್ನ ತಾಳ್ಮೆಯ ಕಟ್ಟೆಗೆ ಹಲವರ ಸೊಕ್ಕಿನ ಅಲೆಗಳು ಬಂದು ಬಿರುಸಿನಲ್ಲಿ ಬಡಿಯುತ್ತಲೇ ಇದ್ದರೆ ಏನಾಗಬೇಕೊ ಅದು ಆಗೇ ಆಗುತ್ತದೆ. ಅಂಥ ಸಂದರ್ಭಗಳಲ್ಲಿ ನಾನು ಎಚ್ಚರ ಮರೆತು ಹಲವರ ವಿರುದ್ಧ ಜಗಳಕ್ಕೆ ನಿಂತಿದ್ದೇನೆ. ಜಗಳ ಅಂದರೆ ಅಂತಿಂಥ ಜಗಳವಲ್ಲ. ಅದು ಮಾತಿನ ಶಬ್ದದ ದನಿಯ ಜಗಳ ಅಲ್ಲ. ಬರವಣಿಗೆಯ ಜಗಳ. ಮಾತಾಡಲು ಮುಂದಾದರೆ ಯಾವ ಕ್ಷಣದಲ್ಲಾದರೂ ಎಲ್ಲದರ ಬಗ್ಗೆ ಹೇಸಿಗೆ ಹುಟ್ಟಿ ನಾನು ಕೋಪಿಸಿಕೊಂಡಿರುವುದರ ಬಗ್ಗೆಯೇ ವೈರಾಗ್ಯ ಭಾವ ಹುಟ್ಟಿಬಿಡಬಹುದು. ಆದರೆ ಬರೆಯಲು ಕೂತಾಗ ಜಗಳಕ್ಕೆ ವೈರಾಗ್ಯ ಬಂದದ್ದೇ ಇಲ್ಲ. ಅದು ಯಾವ ಪರಿ ಬಿರುಸು ಪಡೆದುಕೊಳ್ಳುತ್ತದೆ ಅಂದರೆ ಅಲ್ಲಿ ದಾಕ್ಷಿಣ್ಯಕ್ಕೆ ಅವಕಾಶವೇ ಇರುವುದಿಲ್ಲ. ಆ ಪರಿ ಸಿಟ್ಟು ಬರೆಯುವಾಗ ಸ್ಫೋಟಿಸುತ್ತಿರುತ್ತದೆ.
ಈ ಸಲುವಾಗಿ ನಾನು ರಂಗವಲಯದಲ್ಲಿ ಈವರೆಗೆ ಹಲವರ ಪ್ರಖರ ವಿರೋಧ ಕಟ್ಟಿಕೊಂಡಿದ್ದೇನೆ. ನನ್ನ ನೆನಪಾದಾಗಲೆಲ್ಲ ನನ್ನನ್ನ ಹಳಿಯುವ ಒಂದು ವರ್ಗವನ್ನ ಸೃಷ್ಟಿಸಿಕೊಂಡಿದ್ದೇನೆ. ಸಿಟ್ಟು ಮಾಡಿಕೊಳ್ಳುವುದೇ ಉಂಟಂತೆ, ಅದರಲ್ಲಿ ಮುಲಾಜು ಎಂಥದ್ದು ಎಂಬುದು ನನ್ನ ವಾದ. ಆದರೆ ನಾನು ಸ್ಫೋಟಿಸುವ ಪೂರ್ವದಲ್ಲಿ ಮತ್ತು ಕಟಕಿಯಾಡುವ ಪೂರ್ವದಲ್ಲಿ ಹಲವು ಸಲ- ಇದರಲ್ಲಿ ನನ್ನ ತಪ್ಪಿನ ಪಾಲು ಎಷ್ಟು ಮತ್ತು ಮಿಕ್ಕವರದು ಎಷ್ಟು ಎಂದು ಯೋಚಿಸಿಯೇ ಸಿಟ್ಟು ಮಾಡಿಕೊಳ್ಳುವುದು ನ್ಯಾಯ ಎಂದು ನನ್ನ ಪರವಾಗಿ ನಾನೇ ನ್ಯಾಯವಾದಿಯಾಗಿರುತ್ತೇನೆ. ವಿನಮ್ರತೆ ನಾನು ಎಂದೂ ಇಷ್ಟಪಡುವ ಗುಣ. ಅದೊಂದು ಇದ್ದರೆ ಎಂಥ ಸಿಟ್ಟನ್ನೂ ಮತ್ತು ಹಲವರ ದುಡುಕನ್ನೂ ಮಾಫಿ ಮಾಡಿಬಿಡಬಹುದು. ಆದರೆ ಎದುರಾಳಿಗಳು ಅಹಂಕಾರದಲ್ಲಿ ಸೆಟೆದು ನಿಂತರೆ ಆಗ ಪ್ರಳಯದ ಸಿಟ್ಟು ಲೇಖನಿ ಮೂಲಕ ಹರಿಯಲು ಆರಂಭಿಸುತ್ತದೆ. ಅದರಿಂದ ಮುಂದೆ ಆಗುವ ಪರಿಣಾಮಗಳ ಲೆಕ್ಕಾಚಾರಗಳೂ ನನ್ನ ಮನಸ್ಸಿನಲ್ಲಿ ಇರುವುದಿಲ್ಲ.
ಹಾಗೆ ನೋಡಿದರೆ ಇಲ್ಲಿ ಕೂಡ ಅಂಕಣ ಬರೆಯುವ ಬಹಳ ಸಲ ಲೇಖನಿಗೆ ಮುಲಾಜಿನ ಸೋಂಕು ತಗುಲಿಸದಂತೆ ಬರೆದು ಕಳುಹಿಸಿದ್ದೇನೆ. ಆದರೆ ನನ್ನ ಎಂದಿನ ಪ್ರೀತಿಯ ರಶೀದ್ ಅವರು ಅದ್ಯಾಕೊ ಕೆಂಡಕಾರುವ ನನ್ನ ಹಲವು ಅಂಕಣಗಳಿಗೆ ಜಾಲರಿಯಂತೆ ಅಡ್ಡನಿಂತು ಕೇವಲ ತಿಳಿಯಾದದ್ದಷ್ಟೇ ಬರಹದಲ್ಲಿ ಕಾಣುವಂತೆ ಎಚ್ಚರವಹಿಸಿದ್ದಾರೆ. ನಾನೂ ಅವರ ಹಾಗೆ ಇರಲು ಅಥವಾ ಅವರ ಹಾಗೆ ಸಂಯಮ ಮತ್ತು ತಮಾಷೆಯಾಗಿ ಬರೆಯಲು ನನಗೂ ಅವರಷ್ಟೇ ವಯಸ್ಸಾಗಬೇಕೇನೋ ಗೊತ್ತಿಲ್ಲ. ಕೆಲವೊಮ್ಮೆ ಬರೆಯುವಾಗ ಇದಕ್ಕೆ ಸ್ಪಷ್ಟ ವಿರೋಧ ಮತ್ತು ತಿದ್ದುಪಡಿ ಬರುತ್ತದೆ ಎಂದು ತಿಳಿದೂ ಬರೆದು ಕಳುಹಿಸಿರುತ್ತೇನೆ. ಅದು ಹಾಗೇ ಆದಾಗ ನನ್ನ ಮುಖದಲ್ಲಿ ಒಂದು ನಗೆ ತುಳುಕುತ್ತಿರುತ್ತದೆ. ಮತ್ತು ರಶೀದ್ ಬಗ್ಗೆ ಪ್ರೀತಿ ಮತ್ತಷ್ಟು ಹೆಚ್ಚುತ್ತಲೇ ಇರುತ್ತದೆ.
ಇಲ್ಲಿ ಪ್ರೀತಿಗೆ ಪರ್ಯಾಯವಾಗಿ ರಶೀದ್ ಅವರ ಹೆಸರನ್ನು ಸಾಂದರ್ಭಿಕವಾಗಿ ತೆಗೆದುಕೊಂಡರೂ ಇದರ ಆಚೆಗೂ ಕೆಲವು ಮಹತ್ವದ ಸಂಗತಿಗಳಿವೆ. ನನ್ನ ಕಟು ಆಕ್ಷೇಪಗಳಿಗೆ ಅವರು ಜರಡಿ ಹಿಡಿದ ಪ್ರತಿ ಸಲ ನಾನು ಬರೆದದ್ದನ್ನು ಮತ್ತೆ ಸಾವಧಾನವಾಗಿ ಓದಲು ಪ್ರಯತ್ನಿಸಿದ್ದೇನೆ. ಬರೆಯುವಾಗ ಇರುವ ಸಿಟ್ಟು ಬರೆದ ನಂತರ ಹಲವು ದಿನಗಳಲ್ಲಿ ತಗ್ಗಿರುತ್ತದೆ. ಆಗ ಅದನ್ನು ಓದಿದಾಗ ಮತ್ತು ರಶೀದ್ ದೃಷ್ಟಿಯಲ್ಲಿ ನೋಡಿದಾಗ ಸರಿ ಅನಿಸಲಿಕ್ಕೆ ಶುರುವಾಗಿದೆ. ಆಗ ಒಂದು ಚಿಕ್ಕ ಮುಗುಳ್ನಗೆ ನನ್ನ ಮುಖದಲ್ಲಿ ಹಾದುಹೋಗುತ್ತದೆ.
ರಂಗದವರ ಬಗ್ಗೆ ನನ್ನಲ್ಲಿ ಇರುವ ಕಟು ವಿರೋಧ ಹಲವು ಸಲ ಪ್ರಕಟವಾಗದೇ ಹೋಗಿ ಜರಡಿಗೆ ಸಿಕ್ಕಿಕೊಂಡು ಕೇವಲ ತಿಳಿ ಮಾತ್ರ ಸಿಕ್ಕಾಗ ಅದು ಅಸಹಾಯಕತೆ ಮೂಡಿಸುವ ಜೊತೆಗೆ ಹೊಸ ದೃಷ್ಟಿಕೋನವನ್ನೂ ನನಗೆ ಕೊಟ್ಟಿದೆ. ಯಾಕೆ ಸುಮ್ಮನೆ ಈ ಜಗಳ, ವಿರೋಧ ಉಸಾಬರಿಗಳೆಲ್ಲ? ಸುಮ್ಮನೆ ನಕ್ಕು ಹೆಜ್ಜೆ ಕದಲಿಸುವುದು ಉತ್ತಮ ಅಲ್ಲವೆ ಎಂದು ಅನಿಸಿದ್ದು ಇದೆ. ಇದನ್ನ ಆಚರಣೆಗೆ ತರುವುದು ಕಷ್ಟ. ಆದರೆ ರಶೀದ್ ಎಂಬ ಪ್ರೀತಿಯ ಜರಡಿ ನನ್ನಲ್ಲಿನ ಕರಟವನ್ನೆಲ್ಲ ಹಿಡಿದಿಟ್ಟು ತಿಳಿಯನ್ನು ಮಾತ್ರ ಕಾಣಿಸುವಾಗ ಅದು ತಂದಿರುವ ಬದಲಾವಣೆಯನ್ನೂ ಅಲ್ಲಗಳೆಯಲಿಕ್ಕೆ ಆಗುವುದೂ ಇಲ್ಲ.
ಇದು ನನ್ನಲ್ಲಿ ಉಂಟು ಮಾಡಿರುವ ದೊಡ್ಡ ಇಂಪ್ಯಾಕ್ಟ್ ಅಂದರೆ ಯಾರ ಬಗ್ಗೆ ಎಂಥ ಪ್ರಳಯದ ಸಿಟ್ಟು ಬಂದರೂ ಅದನ್ನು ಕಂಡು ನಕ್ಕು ಅಲ್ಲಿಂದ ಎದ್ದು ನಡೆಯುವುದು. ಇದನ್ನು ಮಾಡುತ್ತಾ ಬಂದೆ. ಕಟುವಿರೋಧಗಳನ್ನ ಮತ್ತು ವಿಮರ್ಶೆಗಳನ್ನ ನಿಲ್ಲಿಸಿದೆ. ಜಸ್ಟ್ ಸ್ಟಾರ್ಟೆಡ್ ಟು ಲವ್. ಅಟ್ಲೀಸ್ಟ್ ಆ ಮೊಮೆಂಟ್ಗೆ. ಅದು ನನ್ನಲ್ಲಿ ಒಂದು ನಿರಾಳಭಾವ ಮೂಡಿಸುತ್ತ ನನ್ನ ಮನಸ್ಸು ಬಿಗಿಯಾಗಿ ಹಿಡಿದಿಟ್ಟುಕೊಂಡಿದ್ದ ಕ್ಲಚ್ಗಳನ್ನ ಸಡಿಲಗೊಳಿಸಿತು. ಉಸಿರಾಟ ನಿರಾಳ ಮತ್ತು ಸ್ವಚ್ಛಂದ. ನಾನು ಪರಮ ನಿರ್ಲಿಪ್ತನಾಗಿಬಿಟ್ಟೆನೇನೋ ಅನಿಸುವಷ್ಟರ ಮಟ್ಟಿಗೆ ನಾನು ರಂಗದ ಕೆಲವು ಕಿರಿಕಿರಿ ಜೀವಿಗಳಿಂದ ದೂರ ಉಳಿದೆ. ಒಂದು ರೀತಿಯಲ್ಲಿ ನಾನು ಟಿ.ಎನ್. ಸೀತಾರಾಮ್ ಸರ್ ಅವರ ಧಾರಾವಾಹಿಯಾದ ‘ಮುಕ್ತ ಮುಕ್ತ ಮುಕ್ತ’ ದಂತೆ ಆಗಿದ್ದೆ.
ರಂಗಭೂಮಿಯ ವಲಯದಲ್ಲಿ ನಿತ್ಯ ನಡೆಯುವ ದುಡುಕುಗಳನ್ನ ತಂದು ಕಿವಿಗೆ ಸುರಿಯುವವರಿಗೇನೂ ಕಡಿಮೆ ಇಲ್ಲ. ಕಿವಿ ಹೊಕ್ಕ ಆ ಸಂಗತಿಗಳು ಮನಸ್ಸನ್ನ ಕೆಡಿಸದಿದ್ದರೆ ಅವುಗಳಿಗೆ ನೆಮ್ಮದಿ ಎಲ್ಲಿ? ಆದರೆ ಎಂಥ ಸಂಗತಿಗಳು ಕಿವಿ ಹೊಕ್ಕು ಕೆರಳಿಸಲು ಪ್ರಯತ್ನಿಸಿದಾಗಲೂ ಒಂದು ಕ್ಷಣ ಜರಡಿಯನ್ನ ನೆನಸಿಕೊಂಡುಬಿಟ್ಟರೆ ಅಲ್ಲಿಗೆ ಸ್ಥಿತಪ್ರತಜ್ಞತೆ ತಂತಾನೇ ಬರುತ್ತದೆ ಎನ್ನುವುದು ನನ್ನ ಈಚಿನ ಅನುಭವ. ಇದನ್ನ ದಾಟಿಯೂ ಕೇವಲ ಪ್ರೇಮವೊಂದೇ ಸತ್ಯ ಎಂಬುದನ್ನು ನಗುತ್ತ ಅರ್ಥಮಾಡಿಕೊಂಡ ಕ್ಷಣದಿಂದ ನಾನು ಬದಲಿಸಿದ್ದೇನೆ.
ಈ ಜರ್ನಿಯಲ್ಲಿ ನಾನು ಯಾರಿಗೆ ಇಷ್ಟವಾದೆನೊ ಗೊತ್ತಿಲ್ಲ. ‘ಬೈಂದೂರಿಗೆ ನಿಮ್ಮ ನಾಟಕ ತೆಗೆದುಕೊಂಡು ಹೋಗುತ್ತಿದ್ದೇವೆ. ಅಲ್ಲಿ ನಾಟಕೋತ್ಸವದಲ್ಲಿ ಪ್ರದರ್ಶನ. ಜೊತೆಗೆ ನೀವು ಅಂದಿನ ಗೆಸ್ಟ್ ಆಗಬೇಕು ಅಂತ ಅಲ್ಲಿನವರು ಬಯಸ್ತಿದ್ದಾರೆ. ಏನಂತೀರಿ..?’ ಎಂದು ಫೋನ್ ಮಾಡಿ ಧುತ್ತನೆ ಕೇಳಿದರು ರಾಜೇಂದ್ರ ಕಾರಂತ್ ಸರ್.
ವಿನಮ್ರತೆ ನಾನು ಎಂದೂ ಇಷ್ಟಪಡುವ ಗುಣ. ಅದೊಂದು ಇದ್ದರೆ ಎಂಥ ಸಿಟ್ಟನ್ನೂ ಮತ್ತು ಹಲವರ ದುಡುಕನ್ನೂ ಮಾಫಿ ಮಾಡಿಬಿಡಬಹುದು. ಆದರೆ ಎದುರಾಳಿಗಳು ಅಹಂಕಾರದಲ್ಲಿ ಸೆಟೆದು ನಿಂತರೆ ಆಗ ಪ್ರಳಯದ ಸಿಟ್ಟು ಲೇಖನಿ ಮೂಲಕ ಹರಿಯಲು ಆರಂಭಿಸುತ್ತದೆ. ಅದರಿಂದ ಮುಂದೆ ಆಗುವ ಪರಿಣಾಮಗಳ ಲೆಕ್ಕಾಚಾರಗಳೂ ನನ್ನ ಮನಸ್ಸಿನಲ್ಲಿ ಇರುವುದಿಲ್ಲ.
ನಾನು ಆ ಕ್ಷಣ ನಕ್ಕೆ. ‘ಸರ್ ಇದೆಂಥದು.. ಸಾಕಷ್ಟು ಹಿರಿಯರು ಇದ್ದಾರೆ. ಅವರೆಲ್ಲ ಇರುವಾಗ ನಾನು ಗೆಸ್ಟ್ ಆಗಿ ವೇದಿಕೆ ಮೇಲೆ ಕೂರುವುದು ಸಲ್ಲದ ಸಂಗತಿ. ಜೊತೆಗೆ ಮುಜುಗರ ಕೂಡ. ಹಾಗಾಗಿ ಬೇಡ’ ಅಂದೆ.
ರಾಜೇಂದ್ರ ಕಾರಂತ್ ಸರ್ ಬಿಡಲಿಲ್ಲ. ‘ಬನ್ನಿ ಅಲ್ಲಿನ ಜನ ನಿಮ್ಮನ್ನ ಕಾಣುವಂತೆ ಆಗಲಿ. ಗುರುತಿಸಲಿ. ಸಮುದ್ರ ಇದೆ; ಅದಕ್ಕೆ ನಿಮ್ಮನ್ನ ಎತ್ತಾಕ್ತೀವಿ. ಹಾಗೆಯೇ ಮುಜುಗರಕ್ಕೆ ನಮ್ಮಲ್ಲಿ ಮಾತ್ರೆ ಇದೆ. ಕೊಡ್ತೀವಿ ಬನ್ನಿ’ ಅಂದರು.
ಇದೆಂಥ ಪ್ರೀತಿ! ನಾನು ಈಗೀಗ ನಾಟಕ ರಚನೆ ಅಂದುಕೊಂಡು ಅದಕ್ಕೆ ತೊಡಗುತ್ತಿರುವವನು. ಈ ರಂಗದಲ್ಲಿ ನನ್ನವು ದೃಢವಾದ ಹೆಜ್ಜೆಗಳು ಎಷ್ಟು ಎಂದು ಕೇಳಿಕೊಳ್ಳಲೂ ಭಯಗೊಳ್ಳುತ್ತಿರುವವನು ನಾನು.
ಆದರೆ ರಾಜೇಂದ್ರ ಕಾರಂತ್ ಸರ್ ಅವರಲ್ಲಿರುವ ಪ್ರತಿಭೆ ದೊಡ್ಡದು. ಅವರು ಚೆಂದ ನಟಿಸಬಲ್ಲರು ಮತ್ತು ಅಷ್ಟೇ ಚೆಂದ ಬರೆಯಬಲ್ಲರು. ಟಿ.ಎನ್ ಸೀತಾರಾಂ ಸರ್ರಂಥ ಸೀತಾರಾಂ ಸರ್ ಅವರು ರಾಜೇಂದ್ರ ಕಾರಂತ್ ಅವರ ನಾಟಕಗಳ ಬಗ್ಗೆ ಬರೆಯುತ್ತ ‘ನನಗೆ ಹೊಟ್ಟೆಕಿಚ್ಚಾಗುವಂತೆ ಬರೆಯುವವರು’ ಎಂದಿದ್ದಾರೆ.
ಈ ಇಬ್ಬರ ನಡುವೆ ನಾನು ಎಷ್ಟರವನು ಮತ್ತು ನನ್ನ ಸ್ಥಾನ ಎಂಥದ್ದು? ಆದರೆ ರಾಜೇಂದ್ರ ಕಾರಂತ್ ಸರ್ ಕರೆಯುತ್ತಿದ್ದಾರೆ ಅಂದರೆ.. ಹೋಗದೆ ಇರುವುದು ಹೇಗೆ? ಮಿಗಿಲಾಗಿ ಪ್ರೀತಿಯ ಅಫೀಮಿನ ಎದುರು ಬೇರೆ ನಶೆ ಕೆಲಸ ಮಾಡಬಲ್ಲದು ಹೇಗೆ? ನಾನು ಗೆಸ್ಟ್ ಎನ್ನುವುದನ್ನು ಮರೆತೆ. ವೇದಿಕೆ ಮತ್ತು ಭಾಷಣ ಮೊದಲಿಂದ ವರ್ಜ್ಯ. ಅದರ ಬಗ್ಗೆ ಒಲವು ಹುಟ್ಟಲಿಲ್ಲ. ಯಾಕೋ ಕಾರಂತ್ ಸರ್ ‘ಸಮುದ್ರ’ ಅಂದದ್ದು ನನ್ನ ಕಿವಿಯಲ್ಲಿ ರಿಂಗಣಿಸಲು ಆರಂಭಿಸಿತು.
ಈ ನಗರದ ದಟ್ಟ ದರಿದ್ರ ಟ್ರಾಫಿಕ್ಕು, ಅವೇ ಹಳೇ ವೈಮನಸ್ಯಗಳಿಗೆ ಒಂದು ಬ್ರೇಕ್ ಬೇಕಿತ್ತು. ಸಮುದ್ರದ ತೆರೆಗಳು ಪಾದಗಳನ್ನ ಸೋಕಲು ಮತ್ತು ತಾಕಲು ಬಿಡುವುದು ಚೆಂದದ ಅನುಭವ. ಎಲ್ಲಕ್ಕಿಂತ ಹೆಚ್ಚಿಗೆ ಚಡ್ಡಿ ಹಾಕಿಕೊಂಡು ಸಮುದ್ರದ ತೆರೆಗಳಿಗೆ ಪೂರಾ ಮೈ ಒಡ್ಡುವ ತರುಣರ ಹುಚ್ಚಾಟ ನೋಡುವುದು ಚೆಂದ. ಮಿಗಿಲಾಗಿ ಹೊಸ ಊರು, ಜಾಗ, ಅಲ್ಲಿಯ ರಂಗವಾತಾವರಣ, ಅವರ ವಿಚಾರ.. ಹೀಗೆ ಏನೇನೊ ಲಹರಿ ಮನಸ್ಸಿನಲ್ಲಿ ಕಲಕಿ ‘ಸರಿ ಸರ್ ಬರ್ತೇನೆ’ ಅಂದುಬಿಟ್ಟೆ.
ಮನುಷ್ಯ ಮುಕ್ತವಾಗಿ ಮತ್ತು ಸ್ವಚ್ಛಂದವಾಗಿ ಬೇರೆಯವರ ಜೊತೆ ಕಲೆಯಲು ರಂಗಭೂಮಿಗೆ ಬರಬೇಕು. ಅಲ್ಲಿ ಇರುವ ಮಜವೇ ಬೇರೆ. ಪ್ರೀತಿಯಲ್ಲಿ, ಸಲಿಗೆಯಲ್ಲಿ ಮತ್ತು ಸ್ನೇಹದಲ್ಲಿ ಕಾಲೆಳೆಯುವ ಬಗೆಗಳು ಇಲ್ಲಿ ಪಡೆದುಕೊಳ್ಳುವ ಆಯಾಮವೇ ಬೇರೆ. ಆದರೆ ಇದೇ ಮಂದಿ ಸಂಜೆಯಾಗುತ್ತ ಮೇಕಪ್ಗೆ ಕೂತರೆ ಮತ್ತು ರಂಗಕ್ಕೆ ಬಂದರೆ ಅಲ್ಲಿ ಅವರ ಚಹರೆ ಬೇರೆ. ಶಿಸ್ತು ಬೇರೆ.
ಈ ಎಲ್ಲ ತಿಳಿದು ಮತ್ತು ಸಮುದ್ರದ ಬಗೆಗೆ ನನ್ನಲ್ಲಿ ಮೊದಲಿಂದ ಇರುವ ಸೆಳೆತದಿಂದ ಹೊರಟೆ. ಟಿಟಿಯಲ್ಲಿ ಹುಡುಗರ ಗೇಲಿ. ಪರಸ್ಪರ ಕಾಲೆಳೆಯುವ ಗುಣ ನಗು ತರಿಸುತ್ತಿತ್ತು. ವಯಸ್ಸು ಹೆಚ್ಚಿದಂತೆಲ್ಲ ಉತ್ಸಾಹ ಕುಗ್ಗುವುದು ಸಹಜ. ಆದರೆ ಅದನ್ನು ವಿರುದ್ಧಾರ್ಥಕವಾಗಿ ಹೆಚ್ಚಿಸುವುದು ರಂಗಭೂಮಿ ಮಾತ್ರವೇ ಇರಬೇಕು. ಇದಕ್ಕೆ ಕಾರಂತ್ ಸರ್ ಉತ್ಸಾಹ ಕಾರಣ ಸಾಕ್ಷಿಯಾಗಿತ್ತು.
ಬೈಂದೂರಿನಲ್ಲೊಂದು ಐಬಿ. ಅಲ್ಲಿ ನಮಗೆ ವಾಸ್ತವ್ಯ. ಆದರೆ ಬೈಂದೂರಿನಲ್ಲಿಯ ವಿಶೇಷತೆಯೇ ಬೇರೆ. ನಮ್ಮ ಕಡೆ ಸೂರ್ಯ ಕೊಂಚ ಮೃದು. ಸಹೃದಯಿ. ಬೈಂದೂರಿನ ಸೂರ್ಯನಿಗೆ ಅದ್ಯಾರ ಮೇಲೆ ಪ್ರಕಾಂಡ ಸಿಟ್ಟೋ ಗೊತ್ತಿಲ್ಲ. ಸಮುದ್ರದ ನೀರಲ್ಲೇ ಅಷ್ಟು ಉಪ್ಪು ಇದ್ದರೂ ನಮ್ಮ ಮೈಯ ಬೆವರಿಂದ ಉಪ್ಪು ತೆಗೆಸುವ ಇರಾದೆ ಅವನಿಗೆ. ಸ್ನಾನ ಮಾಡಿ ಬಂದಕೂಡಲೇ ಮತ್ತೆ ಬೆವರು ಇಳಿಸುವ ಹುಚ್ಚು ಖಯಾಲಿ. ಬೆಳ್ಳಂಬೆಳ್ಳಗೆ ಎದ್ದ ಕೂಡಲೇ ಅವನಿಗೆ ಏನೋ ರೊಚ್ಚು. ಉರಿ ಉರಿ ಮುಖ. ಆದರೂ ಎಲ್ಲರಿಗೂ ಸಮುದ್ರ ದಡಕ್ಕೆ ಹೋಗುವ ತುಡಿತ. ಫ್ರೆಶಪ್ ಆಗಿದ್ದು ಆಯಿತು. ಹುಡುಗರು ಪ್ಯಾಂಟು ಕಳಚಿಟ್ಟು ಚಡ್ಡಿಗಳನ್ನ ಏರಿಸಿಕೊಂಡರು. ಹೋಗುವ ದಾರಿ ನಡುವೆ ತಿಂಡಿ. ಹಾಗೇ ತಿಂಡಿ ತಿನ್ನುತ್ತ ಅಲ್ಲಿನ ಭಾಷೆಗೆ ಕಿವಿಗೊಟ್ಟಿದ್ದೆ. ನಮ್ಮಲ್ಲಿ ಶುಗರ್ ಲೆಸ್ ಮತ್ತು ಪ್ಲಸ್ ಎಂಬ ಎರಡು ಪ್ರಭೇದದ ಕಾಫಿಗಳಿವೆ. ಅಲ್ಲಿ ಶುಗರ್ಲೆಸ್ ಕಾಫಿಗೆ ‘ಚೆಪ್ಪೆ ಕಾಫಿ’ ಎನ್ನುತ್ತಾರೆ. ಏನಿದು ಚೆಪ್ಪೆ ಎಂದು ಯೋಚಿಸುತ್ತಿದ್ದಾಗ ಚೆಪ್ಪೆ ಅಂದರೆ ಸಪ್ಪೆ ಎಂದರ್ಥ ಎಂದು ಒಬ್ಬರು ಹೇಳಿದರು.
ಅಲ್ಲಿಂದ ಹೊರಟು ಸಮುದ್ರದ ದಡ ತಲುಪಿದಾಗ ಅದರ ಅಗಾಧತೆ, ವಿಸ್ತಾರ, ಆಳ ಮುಂತಾದವುಗಳ ಬಗೆಗೆ ನನ್ನಲ್ಲಿ ತರಂಗಗಳು ಏಳಲು ಆರಂಭಿಸಿದವು. ಹುಡುಗರು ಮತ್ತು ಜೊತೆಗೆ ಒಬ್ಬರು ಹಿರಿಯರು ಅಲೆಗಳಿಗೆ ಮೈಒಡ್ಡಲು ಸಮುದ್ರ ಸ್ನಾನದ ಹೆಸರಿನಲ್ಲಿ ಮುಂದೆ ಸಾಗಿದರು.
ಕೆಲ ಸಮಯದ ಹಿಂದಷ್ಟೇ ನಾನು ರಂಗಭೂಮಿಯನ್ನ ‘ಸುಳಿ’ಗೆ ಹೋಲಿಸಿದ್ದೆ. ಅದು ಕೇವಲ ಬಾಯ್ಮಾತು ಅಲ್ಲ. ಅಂದಿನ ನಮ್ಮ ನಾಟಕದಲ್ಲಿ ನಟಿಸುತ್ತಿದ್ದ ನಟರೊಬ್ಬರಿಗೆ ಯಾಕೋ ಸಮುದ್ರದ ಅಲೆಗಳಿಗೆ ಮೈಯೊಡ್ಡುವ ಕಾಯಕ ಬಿಟ್ಟು ನುಣ್ಣನೆಯ ಮರಳಿನ ಮೇಲೆ ನಾಟಕೀಯವಾಗಿ ಓಡೋಣ ಅನಿಸಿದೆ. ಮತ್ತೊಬ್ಬರಿಗೆ ತಮ್ಮ ಮೊಬೈಲ್ ಕೊಟ್ಟು ತಾವು ಓಡುವ ಪರಿಯನ್ನ ಸೆರೆ ಹಿಡಿಯಿರಿ ಎಂದು ಮರಳಿನ ಮೇಲೆ ಕೆಲವು ಹೆಜ್ಜೆಗಳನ್ನ ಕದಲಿಸಿದ್ದಾರೆ ಅಷ್ಟೇ… ಪಾದದ ಮೇಲ್ಭಾಗ ಕಳಕ್ ಎಂದಿದೆ. ವಿಪರೀತ ನೋವು ಶುರುವಾಗಿ ಊತ ಹೆಚ್ಚುತ್ತಾ ಹೋಗಿದೆ. ಇನ್ನು ಆಗುವುದಿಲ್ಲ ಅನಿಸಿದಾಗ ಅವರನ್ನು ಬೈಂದೂರಿನ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿ ಎಕ್ಸರೇ ತೆಗೆದರು. ‘ಎರಡು ದಿನ ನಡೆಯಬಾರದು. ರೆಸ್ಟ್ ತೆಗೆದುಕೊಳ್ಳಬೇಕು’ ಎಂದಿದ್ದಾರೆ ವೈದ್ಯರು. ಸಂಜೆ ನಾಟಕ! ಇದು ಸುಳಿ. ಸಮುದ್ರದಲ್ಲಿ ಸುಳಿಗಳಿರುವುದಿಲ್ಲ. ಅದೇನಿದ್ದರೂ ಆಳದ ದರ್ಶನ ಮಾಡಿಸುವ ರುದ್ರ ಆಟ. ನದಿಯ ಸುಳಿ ಸಮುದ್ರಕ್ಕೆ ತನ್ನ ಝಲಕು ಕಾಣಿಸಲು ಹೀಗೆ ಮಾಡಿತೋ ಎಂದು ಯೋಚಿಸುತ್ತ ಐಬಿಗೆ ಬಂದೆ. ರಣರಣ ಬಿಸಿಲು. ಸೂರ್ಯನಿಗೆ ‘ನಿನ್ನ ಹೆಸರು ಉರಿಯಪ್ಪ ಇರಬೇಕು’ ಎಂದುಕೊಂಡು ಮೈಮೇಲೆ ಒಂದು ವಸ್ತ್ರ ಬಿಟ್ಟು (ಅನಿವಾರ್ಯವಾಗಿ) ಮಿಕ್ಕ ಎಲ್ಲವನ್ನೂ ಕಳಚಿ ಎಸಿ ಆನ್ ಮಾಡಿ ಜೊತೆಗೆ ಫ್ಯಾನ್ ತಿರುಗಿಸಿ ಕೂತರೂ ಉರಿಯಪ್ಪನ ಪ್ರತಾಪ ಅಪರಿಮಿತ.
ಮಧ್ಯಾಹ್ನ ಕಳೆದು ಸಂಜೆಯಾಗಿಬಿಟ್ಟರೆ ಸಾಕು ಎನ್ನುವುದು ನನ್ನ ಪ್ರಾರ್ಥನೆಯಾಗಿತ್ತು. ಸಂಜೆಯೂ ಆಯಿತು. ಆದರೆ ಉರಿಯಪ್ಪನ ಉರಿ ಮಾತ್ರ ಆರಿರಲಿಲ್ಲ. ನಾಟಕೋತ್ಸವದ ಆಯೋಜಕರು ಒಬ್ಬೊಬ್ಬರಾಗಿ ಭೇಟಿಯಾಗಿ ಕೈಕುಲುಕಲು ಆರಂಭಿಸಿದರು. ಅಲ್ಲಿ ‘ಲಾವಣ್ಯ’ ಎನ್ನುವ ರಂಗತಂಡ ನಾಟಕೋತ್ಸವ ಆಯೋಜಿಸಿತ್ತು. ಮಹತ್ವದ ಸಂಗತಿಯೆಂದರೆ ಲಾವಣ್ಯಕ್ಕೆ ಆ ಹೊತ್ತು ನಲವತ್ತೈದರ ಹರೆಯ. ರಂಗದ ಪರಿಸರವನ್ನು ನಿರ್ಮಿಸಬೇಕು ಎಂಬುದು ಆ ತಂಡದ ಸರ್ವ ಸದಸ್ಯರ ಮನಸ್ಸಿನಲ್ಲಿ ಇದೆ. ಅದಕ್ಕೆ ಅವರು ಕಟಿಬದ್ಧರಾಗಿ ನಿಂತು ಕೆಲಸ ಮಾಡುತ್ತಿದ್ದದ್ದು ನಿಚ್ಚಳವಾಗಿ ಕಾಣುತ್ತಿತ್ತು. ಸಂತೋಷವೂ ಆಗುತ್ತಿತ್ತು.
ಸಂಜೆ ಕಾರ್ಯಕ್ರಮ ಶುರು. ನಾನು ವೇದಿಕೆ ಹತ್ತಬೇಕಾದ ಅನಿವಾರ್ಯ. ಹತ್ತಿ ಕೂತೆ. ನನ್ನ ಮಾತಿನ ಸರದಿ ಬಂತು. ಹೋಗಿ ಮಾತಾಡಿದೆ. ಹೇಳಲು ಏನಿರುತ್ತದೆ? ನಾಟಕೋತ್ಸವಗಳ ಆಯೋಜನೆ ಮತ್ತು ಅದರ ಕಷ್ಟಗಳು…ಇತ್ಯಾದಿ ಬಗ್ಗೆ ಮಾತಾಡಿದೆ. ಜೊತೆಗೆ ಇದೆಲ್ಲದರ ಹಿಂದೆ ಇರುವ ರಂಗದ ಬಗೆಗಿನ ಪ್ರೀತಿ ಈ ಎಲ್ಲ ಕೆಲಸ ಮಾಡಿಸುತ್ತಿದೆ ಎಂದೂ ಹೇಳಿದೆ. ಆದರೆ ನನ್ನ ಮನಸ್ಸಿನಲ್ಲಿ ಸುಳಿ ತಿರುಗುತ್ತಿದ್ದ ವಿಚಾರ ಒಂದೇ. ‘ಲಾವಣ್ಯ’ ಎಂದು ಹೆಸರು ಯಾಕೆ ಇಟ್ಟಿದ್ದಾರೆ ಎಂಬುದು. ಕೆಲವರನ್ನ ಕೇಳಿದೆ. ಸಮಂಜಸ ಉತ್ತರ ಸಿಗಲಿಲ್ಲ. ಕಡೆಗೆ ನಾನೇ ಕಂಡುಕೊಂಡೆ. ನಾ. ಕಸ್ತೂರಿ ಅವರ ಪ್ರಕಾರ ‘ಲಾವಣ್ಯ’ ಪದಕ್ಕೆ ಇರುವ ಅರ್ಥ ‘ಲವಣದಿಂದ ಆದವಳು’ ಎಂದು. ಆದರೆ ಬೈಂದೂರಿಗೆ ಲಿಂಗಭೇದವಿಲ್ಲ. ಅದು ಸ್ತ್ರೀಲಿಂಗ ಮತ್ತು ಪುಲ್ಲಿಂಗ ಇಬ್ಬರ ಮೈಯಿಂದ ಬೆವರಿನಲ್ಲಿ ಲವಣವನ್ನ ತೆಗೆಸಬಲ್ಲದು. ಹಾಗಾಗಿ ಲಾವಣ್ಯ ಹೆಸರು ಅನ್ವರ್ಥ. ಹೀಗೆ ಏನೊ ಹೇಳಿ ತಮಾಷೆ ಮಾಡಿದೆ. ಅಲ್ಲಿನವರು ನಕ್ಕರು. ನನಗೆ ಖುಷಿಯಾಯಿತು. ಯಾಕೆಂದರೆ ಅಲ್ಲಿನ ಮಂದಿ ನಗುವುದಿಲ್ಲ ಎಂದು ಕೆಲವರು ನನ್ನನ್ನು ಹೆದರಿಸಿದ್ದರು.
ಉರಿಯಪ್ಪನಿಗೆ ನಾನು ನಾಮಕರಣ ಮಾಡಿದ್ದು ಅವನಿಗೆ ಸಿಟ್ಟು ತರಿಸಿತೇನೋ. ನಾನು ಮಾತಿಗೆ ನಿಂತ ಕೆಲ ಕ್ಷಣಕ್ಕೇ ಮಳೆಗೆ ಸುರಿಯಲು ಆದೇಶಿಸಿದಂತೆ ಕಂಡಿತು. ತುಂತುರ ಮಳೆ ಆರಂಭವಾಗೇ ಬಿಟ್ಟಿತು. ಜನ ಎದ್ದು ಪಕ್ಕದಲ್ಲೇ ಇದ್ದ ದೇವಸ್ಥಾನದ ಬಳಿಗೆ ಧಾವಿಸಿದರು. ಇನ್ನು ಮಾತಾಡುವುದೇನು? ಮುಕ್ತಾಯ ಮಾಡಿ ಬಂದು ಕೂತೆ. ಮಳೆ ಮಾಯ. ಅಲಾ ಉರಿಯಪ್ಪಾ… ಎಂದುಕೊಂಡೆ.
ನಾಟಕ ಇರುವಾಗ ಮಾತು ಯಾರಿಗೆ ಬೇಕು ಎಂಬಂತೆ ಕೆಲವರು ಕೂತಿದ್ದರು. ಕೆಲವರು ವಾಚ್ ನೋಡಿಕೊಳ್ಳುತ್ತಿದ್ದರು. ಕಡೆಗೆ ನಾಟಕ ಶುರುವಾದಾಗ ರಾತ್ರಿ ಎಂಟು ಮೀರಿತ್ತು. ಹೇಗೂ ಉರಿಯಪ್ಪ ಮಳೆಗೆ ಹನಿಯಲು ಕೊಂಚ ಆಸ್ಪದ ಕೊಟ್ಟಿದ್ದ ಕಾರಣ ಹೊರಗೆ ತಣ್ಣಗೆ ಗಾಳಿ ಬೀಸುತ್ತಿತ್ತು. ಒಳಗೆ ಕೂತು ಮಾಡುವುದೇನು ಅಂದುಕೊಂಡು ಬಂದು ಜನರ ನಡುವೆ ಕೂತೆ. ಕಾಲು ಆ ಪರಿ ಉಳುಕಿಸಿಕೊಂಡು ಬ್ಯಾಂಡೇಜ್ ಹಾಕಿಕೊಂಡಿರುವ ನಟರೊಬ್ಬರು ಆ ನೋವಿನಲ್ಲೂ ಹೇಗೆ ನಟಿಸಬಲ್ಲರು ಎಂಬುದು ನನ್ನನ್ನು ಮೀಟುತ್ತಲೇ ಇತ್ತು. ಮಿಗಿಲಾಗಿ ಬೆಂಗಳೂರಿನ ವಲಯದಲ್ಲಿ ಜನರ ನಡುವೆ ಕೂತು ನಾಟಕ ನೋಡುವುದು ಬೇರೆ ಅನುಭವ. ಹೊಸ ಊರಿನಲ್ಲಿ ಹೊಸ ಪ್ರೇಕ್ಷಕರ ನಡುವೆ ಕೂತು ನೋಡೋಣ ಅನಿಸಿ ಕೂತೆ. ಅಲ್ಲಿನವರ ಸ್ವೀಕರಣದ ರೀತಿಯ ಬಗೆಗೆ ನನ್ನಲ್ಲಿ ಕುತೂಹಲವಿತ್ತು.
ನಾಟಕ ಆರಂಭವಾಯಿತು. ಜನರ ಮಧ್ಯೆ ಕೂತು ಅವರ ಸ್ಪಂದನ ಗ್ರಹಿಸಲು ಶುರುಮಾಡಿದೆ. ಬೆಂಗಳೂರಿಗರ ಸ್ಪಂದನಕ್ಕೂ ಬೈಂದೂರಿನವರ ಸ್ಪಂದನಕ್ಕೂ ಎಷ್ಟೊಂದು ವ್ಯತ್ಯಾಸ! ನಾಟಕವನ್ನು ಗ್ರಹಿಸುವ ವಿಧಾನ ಮತ್ತು ಬಗೆಯೇ ಬೇರೆ. ಆ ಹೊತ್ತು ನಾನು ಕಂಪಾರಿಟಿವ್ ಸ್ಟಡಿ ಆರಂಭಿಸಲಿಕ್ಕೆ ಹೋಗದೆ ನಾವು ನಾಟಕ ಕಟ್ಟುವ ಪೂರ್ವದಲ್ಲಿ ನಡೆಸುವ ಕಸರತ್ತುಗಳು, ನಡೆಸುವ ಘನಗಂಭೀರ ಚರ್ಚೆಗಳು, ಇಂಟಲೆಕ್ಚುವಲ್ಸ್ಗಳ ಮಾತುಗಳಿಗೆ ಕಿವಿಯಾಗಿ ನಾಟಕ ನೇರ್ಪು ಮಾಡಿಕೊಳ್ಳುವುದು.. ಏನೆಲ್ಲಾ ಕಸರತ್ತುಗಳು..! ಬೆಂಗಳೂರು ಹೊರತುಪಡಿಸಿ ಒಂದು ಊರಿನಲ್ಲೇ ಇಷ್ಟೊಂದು ಭೇದ ಇದ್ದರೆ ಇನ್ನು ಉಳಿದ ಊರುಗಳ ಪ್ರೇಕ್ಷಕರ ನೋಟಕ್ರಮಗಳು!
ಒಂದು ಇಂಟಲೆಕ್ಚುವಲ್ ವಲಯದಿಂದ ಹೊರಬರುವ ನಾಟಕ ಹಲವು ಊರುಗಳ ಪ್ರೇಕ್ಷಕರಿಗೆ ಮುಖಾಮುಖಿಯಾಗುವ ಘಟ್ಟ ಬಂದಾಗ ಚಿತ್ರ ಹೇಗಿರುತ್ತದೆ ಎಂಬುದನ್ನು ಬೈಂದೂರಿನಲ್ಲಿ ಕಂಡುಕೊಂಡೆ. ಆಶಯ ನಿಮಗೆ ತಲುಪಲಿ ಬಿಡಲಿ ನಾವು ಮಾಡಿದ್ದೇ ನಾಟಕ ಎನ್ನುವ ಜಿಗುಟು ಭಾವದಲ್ಲೇ ಸುಮ್ಮನೆ ನಾಟಕ ಮಾಡುತ್ತಾ ಸಾಗಬೇಕಾ? ಅಥವಾ ಪ್ರೇಕ್ಷಕರ ಸ್ಪಂದನೆಯನ್ನೂ ಗಣನೆಗೆ ತೆಗೆದುಕೊಳ್ಳಬೇಕಾ ಎಂಬುದು ಕಾಡಲಿಕ್ಕೆ ಶುರುವಾಯಿತು.
ಆದರೆ ಈ ಎಲ್ಲ ಪ್ರಶ್ನೆಗಳಿಗಿಂತ ಹಿತವಾಗಿದದ್ದು ಅಲ್ಲಿ ಬೀಸುತ್ತಿದ್ದ ತಂಗಾಳಿ. ನಾನು ನಿರಾಳ ಮೈಯೊಡ್ಡಿ ಕೂತೆ. ತಂಗಾಳಿ ತರುವಷ್ಟು ಹಿತ ಈ ನಾಟಕ ಮತ್ತು ಪ್ರೇಕ್ಷಕರರ ಬಗೆಗೆ ನಡೆಸುವ ಜಿಜ್ಞಾಸೆ ಯಾಕೆ ತರಲಾರದು ಎಂದು ಮತ್ತೆ ಯೋಚಿಸತೊಡಗಿದೆ. ಕೋಪದಲ್ಲಿ ಕುದಿಯುವಾಗ ಮತ್ತು ಸೆಖೆಯಲ್ಲಿ ಬೇಯುವಾಗ ಪ್ರೀತಿ ಮತ್ತು ತಂಗಾಳಿ ಬೆಟರ್ ಅನಿಸಿತು.
ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಕೆಲ ಕಾಲ ಕನ್ನಡ ಉಪನ್ಯಾಸರಾಗಿ ಹಾಗೂ ‘ಕನ್ನಡ ಪ್ರಭ’ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಣೆ. ಸಾಹಿತ್ಯ, ಸಂಗೀತ ಮತ್ತು ರಂಗಭೂಮಿ ಆಸಕ್ತಿಯ ಕ್ಷೇತ್ರಗಳು. ‘ಬೆಳಕು ಸದ್ದುಗಳನ್ನು ಮೀರಿ’, ‘ ಸರಸ್ವತಿ ಅಕಾಡಮಿ’ (ಕಥಾಸಂಕಲನ) ‘ ತಮ್ಮ ತೊಟ್ಟಿಲುಗಳ ತಾವೇ ಜೀಕಿ’ (ಕಾದಂಬರಿ) ಪ್ರಕಟಿತ ಕೃತಿಗಳು. ಪ್ರಸ್ತುತ ‘ಡ್ರಾಮಾಟ್ರಿಕ್ಸ್’ ಎಂಬ ರಂಗತಂಡದಲ್ಲಿ ನಾಟಕ ರಚನೆ ಮತ್ತು ನಿರ್ದೇಶನದಲ್ಲಿ ಸಕ್ರಿಯ.