ಹೆಚ್ಚು ಪ್ರಯಾಸವಿಲ್ಲದೆ ಬರೆಯುವ ಶೈಲಿ  ಕತೆಗಾರ ಅಬ್ದುಲ್ ರಶೀದ್ ಅವರಿಗೆ ಒಲಿದಿದೆ. ಅವರು ಹಾಗೆ ಬರೆದಂತಹ ಬರಹವು ತಿಳಿಹಾಸ್ಯದಿಂದ ಓದುಗರಿಗೆ ಕಚಗುಳಿ ಇಡುವುದು, ತನ್ನ ವಿಶಿಷ್ಟ ಕಾಣ್ಕೆಗಳಿಂದ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡುವುದು, ಕೆಲವು ಪಾತ್ರಗಳು ಹಾಗೂ ಪ್ರಸಂಗಗಳು ಮನಸ್ಸಿನ ಮೂಲೆಯಲ್ಲಿ ಮನೆ ಮಾಡುವುದು. ಎ೦ತಹ ಸ೦ದರ್ಭದಲ್ಲೂ ರಶೀದ್ ಅವರಲ್ಲಿನ ಕಥೆಗಾರ ಜಾಗೃತನಾಗಿರುತ್ತಾನೆ. ಹಾಗಾಗಿ, ಬಸ್ಸಿನಲ್ಲಿ ಪ್ರಯಾಣ ಮಾಡುವಾಗಲೋ, ಹಟ್ಟಿಯಲ್ಲೋ. ಕಾಡಿನಲ್ಲೋ, ರಸ್ತೆಯಲ್ಲೋ ಅವರಿಗೆ ಕಥೆ ಸಿಕ್ಕಿಬಿಡುತ್ತದೆ. ಹಾಗೆ ಕತೆಗಾರ ಅಬ್ದುಲ್ ರಶೀದ್ ಅವರಿಗೆ ಒಲಿದ ಕತೆಗಳ ಕುರಿತು ಸುಮತಿ ಮುದ್ದೇನಹಳ್ಳಿ ಅನಿಸಿಕೆ.

ಅಬ್ದುಲ್ ರಶೀದರ ಎರಡು ಕಥೆಗಳನ್ನ ವಿಮರ್ಶಾತ್ಮಕವಾಗಿ ನೋಡುವ ಉಮೇದು ಬಂದದ್ದು ಕ್ಲೀವಲೆಂಡ್ ನ ಕಸ್ತೂರಿ ಕನ್ನಡ ಓದುಗರ ಕೂಟದಲ್ಲಿ ಲೇಖಕರ ಎರಡು ಕಥೆಗಳನ್ನ ಚರ್ಚಿಸುವ ಪ್ರಮೇಯ ಬಂದಾಗ. ರಶೀದ್ ಅವರ ಬರವಣಿಗೆಯ ಶೈಲಿ ಎಂತಹುದು ಎಂದು ಅವರ ಅಂಕಣಗಳನ್ನ ಓದಿ ಸ್ವಲ್ಪ ಮಟ್ಟಿಗೆ ಅರಿತುಕೊಂಡಿದ್ದೇನೆ. ಲಘು ಹಾಸ್ಯ, ಅಲೆಮಾರಿತನ, ಕೊನೆಯಿರದ ಹುಡುಕಾಟ. ತಣ್ಣನೆಯ ನಿರ್ವಿಣ್ಣತೆ, ಇಷ್ಟೆಲ್ಲಾ ಇದ್ದೂ, ಎಲ್ಲ ಕೊಡವಿಕೊಂಡು ಸಟ್ಟನೆ ನಡೆದುಕೊಂಡು ಹೋಗಬಲ್ಲ ಒಬ್ಬ ವ್ಯಕ್ತಿ ಅವರ ಬರಹಗಳಲ್ಲಿ ಮಾತನಾಡುತ್ತಾನೆ.

ಹೆಚ್ಚು ಪ್ರಯಾಸವಿಲ್ಲದೆ ಬರೆಯುವ ಶೈಲಿ ರಶೀದ್ ಅವರಿಗೆ ಒಲಿದಿದೆ. ಹಾಗೆ ಬರೆದಂತಹ ಬರಹವು ತನ್ನ ತಿಳಿಹಾಸ್ಯದಿಂದ ಓದುಗರಿಗೆ ಕಚಗುಳಿ ಇಡುವುದು, ತನ್ನ ವಿಶಿಷ್ಟ ಕಾಣ್ಕೆಗಳಿಂದ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡುವುದು, ಕೆಲವು ಪಾತ್ರಗಳು ಹಾಗೂ ಪ್ರಸಂಗಗಳು ಮನಸ್ಸಿನ ಮೂಲೆಯಲ್ಲಿ ಮನೆ ಮಾಡುವುದು ಇತ್ಯಾದಿ, ಓರ್ವ ಓದುಗಳಾಗಿ ನನ್ನ ಓದಿನ ಅನುಭವ. ಇಂದಿನ ಓದಿಗೆ ನಾನು ಆರಿಸಿಕೊಂಡಿರುವ ರಶೀದ್‍ ಅವರ  ಎರಡು ಸಣ್ಣ ಕಥೆಗಳು: “ಮ್ಯಾರೇಜು ನಂತರ ತಮ್ಮಯ್ಯನು ಅರೆಸ್ಟಾದ ಕಥೆ”  ಹಾಗೂ “ಮೂಸಾ ಮೊದಲಿಯಾರರ ಮಗಳು ಮತ್ತು ಹೆಲಿಪೆಟ್ಟರ್ ಎಂಬ ದುಷ್ಟಜಂತು.”

“ಮ್ಯಾರೇಜು ನಂತರ ತಮ್ಮಯ್ಯನು ಅರೆಸ್ಟಾದ ಕಥೆ”ಯ ಆರಂಭದಲ್ಲಿ ‘ಬರೆದು ಮುಗಿಸಿದರೆ ನಡೆದ ಪ್ರಮಾದಗಳಿಗೆ ಮಾಫಿ ದೊರೆಯಬಹುದು ಎಂಬ ಆಸೆಯಿಂದ ಬರೆಯುತ್ತಲೇ ಇರುವೆ’ ಎಂದು ತಪ್ಪೊಪ್ಪಿಗೆ ಮಾಡಿಕೊಳ್ಳುವ ಲೇಖಕನ ಧಾಟಿ  ಕಾಲರಿಡ್ಜ್ ನ “ದ ರೈಮ್ ಆಫ್ ದ ಏನ್ಶೆಂಟ್ ಮರಿನರ್” (Coleridge’s “The Rhyme of the Ancient Mariner”)ನ್ನು ನೆನಪಿಗೆ ತರುತ್ತದೆ. ಕಾಲರಿಡ್ಜನ ಕವನದಲ್ಲಿ ಕಾಣಿಸಿಕೊಳ್ಳುವ ಪುರಾತನ ನಾವಿಕನಿಗೆ ಒಂದು ಶಾಪದ ಪರಿಣಾಮವಾಗಿ ಯಾರನ್ನಾದರೂ ಕಂಡಾಕ್ಷಣ, ತನ್ನ ಕ್ರೌರ್ಯ ಮತ್ತು ನಂತರ ಹುಟ್ಟಿದ ಪಶ್ಚಾತ್ತಾಪದ ಕುರಿತು ಹೇಳಿಕೊಳ್ಳಲೇಬೇಕೆಂಬ ತುಡಿತ ಉಂಟಾಗುತ್ತಿರುತ್ತದೆ. ರಶೀದರಿಗೆ ಯಾವ ಶಾಪದ ಉಪಟಳವಿಲ್ಲದಿದ್ದರೂ ಒಬ್ಬ ಹುಟ್ಟು ಕಥೆಗಾರನಾಗಿ ಕಥೆ ಹೇಳುವುದು ಅವರ ಸಹಜ ತುಡಿತವೇ ಆಗಿರಬಹುದು. ‘ನೀ ಬದುಕುತ್ತಿರುವ ಇದು ಯಾವುದೂ ನಿನ್ನವಲ್ಲ. ಅದು ನೀನು ಈ ಎಲ್ಲರಿಂದ ಕಡ ಪಡೆದುಕೊಂಡಿರುವ ಶಾಪಗಳು ಮತ್ತು ಪ್ರೀತಿಯ ಒಟ್ಟು ಮೊತ್ತ. ಬರೆದು ಅದನ್ನು ತೀರಿಸು. ಅದು ಮುಗಿದಾಗಲೇ ನಿನಗೂ ಮುಕ್ತಿ’ ಎಂದು ಕರ್ತಾರನಂತೆ ಹಲ್ಲು ಕಿಸಿದು ಅಪ್ಪಣೆ ಕೊಡುವ ಶಾಪಗ್ರಸ್ತ ದೇವತೆಗಳು.’ ಎಂದು ಮುಂದಿನ ಸಾಲುಗಳಲ್ಲಿ ಬರೆದಿರುವುದು ನನ್ನ ಈ ಹೋಲಿಕೆಗೆ ಪುಷ್ಟಿ ಕೊಡುತ್ತದೆ. ಹೀಗೆ ಆರಂಭವಾಗುವ ಈ ತಮ್ಮಯ್ಯನ ಕಥೆ ಹೇಳುವ ಪ್ರಸಂಗ ಒಂದು ತಪ್ಪೊಪ್ಪಿಗೆಯಲ್ಲಿ ಕೊನೆಗೊಳ್ಳುತ್ತದೆ. ಕಥೆಯ ಕೊನೆಯಲ್ಲಿ ತಮ್ಮಯ್ಯನ ಅರೆಸ್ಟಾಗಿದ್ದು ಪರೋಕ್ಷವಾಗಿ ತಮ್ಮ ನೇರ ಪ್ರಸಾರ ಕಾರ್ಯಕ್ರಮದಿಂದಲೋ ಏನೋ ಎಂಬಲ್ಲಿಗೆ ಲೇಖಕರ ಅಪರಾಧೀ ಪ್ರಜ್ಞೆ ವ್ಯಕ್ತವಾಗುತ್ತದೆ. ಬಹುಶಃ ಇನ್ನೊಂದು ಕಥೆಯನ್ನು ಇನ್ನಷ್ಟು ಚಂದವಾಗಿ ಓದುಗರಿಗೆ ತಲುಪಿಸಿದರೆ ತನ್ನ ಮನಸ್ಸಿನ ತಹತಹ ನೀಗೀತು ಎಂಬಂತಹ ವ್ಯಕ್ತಿ ರಶೀದರು ಸೃಷ್ಟಿಸಿರುವ ಈ ಕಥೆಗಾರ.

ರಶೀದರ ಕಥೆಗಾರ ಚುರುಕು ಬುದ್ಧಿಯವನು. ಈತ ಯಾವ ಕಥೆಯನ್ನ ನಂಬಬೇಕು, ಯಾವುದನ್ನು ದಂತಕಥೆಯೆಂದು ತಳ್ಳಿ ಹಾಕಬೇಕು ಎಂಬ ಪರಿಬುದ್ಧಿ ಉಳ್ಳವನು. ಈ ಕಥೆಗಾರ ‘ತಮ್ಮಯ್ಯನ ಮ್ಯಾರೇಜು ಜೀವನವು ಯಾಕೋ ಸರಿಯಾಗಿಲ್ಲ’ ಎಂದು ತಮ್ಮಯ್ಯನ ಜೀವನದ ವಿವರಗಳನ್ನು ಕೇಳಿಯೇ ಅಂದಾಜಿಸಬಲ್ಲ. ಆದರೆ ಈ ಕಥೆಗಾರ ತನ್ನನ್ನು ಬಿಂಬಿಸಿಕೊಳ್ಳುವ ರೀತಿ ಮಾತ್ರ ತಾನು ಅತೀ ಸಾಮಾನ್ಯ ಎನ್ನುವ ರೀತಿಯಲ್ಲಿ. ಇದಕ್ಕೆ ಉದಾಹರಣೆಯಾಗಿ, ಈ ಕಥೆಯಲ್ಲಿ ಬರುವ ವೃದ್ಧ ಮಹಿಳೆ, “ಅಯ್ಯೋ ನೀವು ಹೀಗಿದ್ದೀರಾ, ರೇಡಿಯೋದಲ್ಲಿ ಸ್ವರ ಕೇಳಿ ನಾನು ಹೇಗೆಲ್ಲಾ ಇರಬಹುದು ಎಂದುಕೊಂಡಿದ್ದೆ” ಎಂದು ಭ್ರಮನಿರಸನ ಹೊಂದುವುದನ್ನ ಕಥೆಗಾರ ಹೇಳಿಕೊಳ್ಳುವುದು. ತನ್ನ ಕುರಿತಾಗಿ ಅಹಂ ಮೆರೆಯದೇ ತನ್ನ ಕಥೆಯನ್ನ ದೊಡ್ಡದು ಮಾಡುವ ವಿಶೇಷ ಕಲೆ ಈ ಕಥೆಗಾರನಿಗೆ ಒಲಿದಿದೆ. ಬಹುಶಃ ಇದು ಓದುಗರನ್ನು ಗೆಲ್ಲುವ ಪ್ಲಸ್ ಪಾಯಿಂಟ್ ಎಂದು ಕೂಡಾ ಹೇಳಬಹುದು. ಈ ಕಥೆಗಾರ ತಾನು ಕಂಡ ಕಥೆಯನ್ನ ಬಹಳ ಮಟ್ಟಿಗೆ ಇದ್ದ ಹಾಗೆಯೇ ಹೇಳುವ ಪ್ರಯತ್ನ ಮಾಡಿದರೂ, ಆಗೀಗೊಮ್ಮೆ ಚಿಕ್ಕ ಟಿಪ್ಪಣಿಗಳನ್ನು ಕೊಡುತ್ತಿರುತ್ತಾನೆ ಮತ್ತು ಈ ಮೂಲಕವಾಗಿ ಓದುಗರಿಗೆ ದಾರಿ ತೋರಿಸುತ್ತಿರುತ್ತಾನೆ—ಯಾರೂ ಕೇಳಿರದಿದ್ದರೂ ಗ್ರಾಮದ ಅರಣ್ಯ ಸಮಿತಿಯ ಅಧ್ಯಕ್ಷ ತಾನು ಎಂದು ತೋರಿಸಿಕೊಳ್ಳಲು ಕಾಗದ ಪತ್ರಗಳನ್ನು ಕೈಯ್ಯಲ್ಲಿ ಹಿಡಿದುಕೊಂಡು ಬರುವ ತಮ್ಮಯ್ಯ, ಬಹುಶಃ ಕೀಳರಿಮೆಯಿಂದಲೋ ಅಥವಾ ಹೆಸರು ಕೆಡಿಸಿಕೊಂಡ ಕಾರಣಕ್ಕೋ ಈ ರೀತಿಯ ಪೋಸ್ ಕೊಡುತ್ತಿರಬಹುದೆ ಎಂಬ ಸೂಚನೆ ಇಲ್ಲಿ ಸಿಗುತ್ತದೆ.

ಈ ಕಥೆಯಲ್ಲಿ ಬರುವ ಎರಡು ಉಪಕಥೆಗಳು—ಅತ್ತಿಗೆ ಮೈದುನನ ಕಥೆ ಮತ್ತು ಹೆಬ್ಬುಲಿಯ ಕಥೆ—ಸಾರಾಸಗಟಾಗಿ ನಂಬಲಾಗದ ದಂತಕಥೆಗಳು. ವನ್ಯಮೃಗಗಳ ಕುರಿತಾಗಿ ಕಾಡುಜನಾಂಗದ ಜನಮಾನಸದಲ್ಲಿ ಇರಬಹುದಾದ ಭಯದ ಕುರಿತಾದ ಕಥೆಗಳು. ತಮ್ಮಯ್ಯ ಕೂಡಾ ಅಂದಿನ ರಾತ್ರಿ ಸಾಕಷ್ಟು “ಅತಾರ್ಕಿಕ ಮತ್ತು ಅಶ್ಲೀಲ” ಕಥೆಗಳನ್ನು ಹೇಳುತ್ತಾನೆ. ತಮ್ಮಯ್ಯನ ವ್ಯಕ್ತಿತ್ವ ಮತ್ತು ವೈಯುಕ್ತಿಕ ಅಭಿರುಚಿಗಳು ಹೇಗಿರಬಹುದೆಂದು ಅಂದಾಜಿಸಲು ಈ ಕಥೆಗಳು ನೆರವಾಗುತ್ತವೆ. ಒಟ್ಟಿನಲ್ಲಿ ಒಂದು ಕಥೆಗಳ ಕಣಜವೇ ಈ ಪುಟ್ಟ ಕಥೆಯಲ್ಲಿ ಬರುವುದು ಆಸಕ್ತಿಕರ ಅಂಶವಾಗಿದೆ. ಅಬ್ದುಲ್ ರಶೀದ್ ಅವರಿಗೆ ತಮ್ಮ ವೃತ್ತಿ ಬದುಕಿನಲ್ಲೇ ಸಾಕಷ್ಟು ಅನೂಹ್ಯ, ಅಪೂರ್ವ ಕಥೆಗಳು ದೊರಕುವ ಅವಕಾಶವಿದೆ. ಎಂತಹ ಸಂದರ್ಭದಲ್ಲೂ ರಶೀದ್ ಅವರಲ್ಲಿನ ಕಥೆಗಾರ ಜಾಗೃತನಾಗಿರುತ್ತಾನೆ. ಹಾಗಾಗಿ, ಬಸ್ಸಿನಲ್ಲಿ ಪ್ರಯಾಣ ಮಾಡುವಾಗಲೋ, ಹಟ್ಟಿಯಲ್ಲೋ. ಕಾಡಿನಲ್ಲೋ, ರಸ್ತೆಯಲ್ಲೋ ಇವರಿಗೆ ಕಥೆ ಸಿಕ್ಕಿಬಿಡುತ್ತದೆ.

(ಅಬ್ದುಲ್ ರಶೀದ್)

ಹಾಗೆ ಬರೆದಂತಹ ಬರಹವು ತನ್ನ ತಿಳಿಹಾಸ್ಯದಿಂದ ಓದುಗರಿಗೆ ಕಚಗುಳಿ ಇಡುವುದು, ತನ್ನ ವಿಶಿಷ್ಟ ಕಾಣ್ಕೆಗಳಿಂದ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡುವುದು, ಕೆಲವು ಪಾತ್ರಗಳು ಹಾಗೂ ಪ್ರಸಂಗಗಳು ಮನಸ್ಸಿನ ಮೂಲೆಯಲ್ಲಿ ಮನೆ ಮಾಡುವುದು ಇತ್ಯಾದಿ, ಓರ್ವ ಓದುಗಳಾಗಿ ನನ್ನ ಓದಿನ ಅನುಭವ.

ನಮ್ಮ ಎರಡನೆಯ ಕಥೆ “ಮೂಸಾ ಮೊದಲಿಯಾರರ ಮಗಳು ಮತ್ತು ಹೆಲಿಪೆಟ್ಟರ್ ಎಂಬ ದುಷ್ಟಜಂತು” ಕೊಡಗಿನ ರಬ್ಬರ್ ತೋಟಗಳಲ್ಲಿ ಸ್ಥಾಪಿತವಾಗಿದೆ. ಮೊದಲ ಪ್ಯಾರಾಗ್ರಾಫ್ನಲ್ಲಿ ಖುರಾನ್ ನ ಚರಾಚರಗಳ ಸೃಷ್ಟಿಯಿಂದ ಮೊದಲ್ಗೊಳ್ಳುವ ಅಧ್ಯಾಯವನ್ನು ನೆನೆದು, ತಮ್ಮ ರಬ್ಬರ್ ತೋಟಗಳ ಮೇಲೆ ನೀಲಿ ದ್ರಾವಣ ಸಿಂಪಡಿಸುವ ‘ಹೆಲಿಪೆಟ್ಟರ್’ ಕೂಡಾ ದೇವರ ಸೃಷ್ಟಿಯೇ? ಎಂಬ ಗೊಂದಲದಲ್ಲಿ ಇರುವ ಮುಗ್ಧೆ ಆಮೀನಾಬೀಬಿಯನ್ನು ಪರಿಚಯ ಮಾಡಿಕೊಡುವುದರೊಂದಿಗೆ ಕಥೆ ಆರಂಭವಾಗುತ್ತದೆ. ಈಕೆಗೆ ಅಮದ್ ಕುಟ್ಟಿ ಹೆಲಿಕ್ಯಾಪ್ಟರನ್ನು ವರ್ಣಿಸುವ ರೀತಿಗೆ “ಖಿಯಾಮತ್” ನ ಅಂತಿಮ ದಿನ ಬಂದಿರುವಷ್ಟು ಬೆರಗಾಗುತ್ತದೆ. ಜೊತೆಗೆ ತೀರದ ಕುತೂಹಲವೂ ಹುಟ್ಟಿಕೊಳ್ಳುತ್ತದೆ. ಹೆಲಿಪೆಟ್ಟರನ್ನು ಖಿಯಾಮತ್ತಿನ ಹುಂಜದ ಜೊತೆಗೆ ಹೋಲಿಸಿ, ಆ ಹುಂಜದಷ್ಟೇ ವಿನಾಶವನ್ನು ಈ ಹೆಲಿಕ್ಯಾಪ್ಟರ್ ತರಬಹುದೇ ಎಂದು ಬೆರಗುಪಡುತ್ತಾಳೆ. ಬೆಟ್ಟ ಗುಡ್ಡಗಳನ್ನು, ಮನೆ, ಮರ, ಸಕಲ ಚರಾಚರಗಳನ್ನು ನಾಶ ಮಾಡುವ ಖಿಯಾಮತ್ತಿನ ಹುಂಜದೊಂದಿಗೆ ಹೋಲಿಕೆ ಮಾಡಿಕೊಂಡು ದಂಗಾಗಿರುವ ಆಮೀನಾಬೀಬಿಯ ಮೃದು ಮನಸ್ಸಿನಲ್ಲಿ ಬರಲಿರುವ ವಿನಾಶದ ಕುರಿತು ಒಂದು ಅಸ್ಪಷ್ಟ ಭಯವಿದೆ. ಈಕೆಯ ಭಯ ಮತ್ತು ಮುಗ್ಧತೆಯ ಚಿತ್ರಣದ ಮೂಲಕ ಲೇಖಕರು ತಾವು ಹೇಳಲಿರುವ ಕಥೆಯ ಮುನ್ಸೂಚನೆ ಕೊಡುತ್ತಾರೆ.

ಆಮೀನಾಬೀಬಿ ನಾಗರೀಕತೆಯ ಹಾಗೂ ಕೃತಕತೆಯ ಸೋಂಕಿಲ್ಲದ, ತನ್ನ ಬಾಪಾನ ಪ್ರೀತಿಯಲ್ಲಿ ಮುದ್ದಾಗಿ ಬೆಳೆದ ಹುಡುಗಿ. ಇಂತಹ ಮನಸ್ಥಿತಿಯ ಹುಡುಗಿ ಆಗಿರುವುದರಿಂದಾಗಿಯೇ ತನ್ನ ಬಾಪಾನಿಗೆ ಮಧ್ಯಾಹ್ನದ ಗಂಜಿಗೆ ನೆಂಚಿಕೊಳ್ಳಲು ಮೊಡಂಜಿಯಂತಹಾ ಮೀನಿನ ತುಂಡುಗಳನ್ನು ಕೊಟ್ಟ, ಈ ಹೆಲಿಪೆಟ್ಟರ್ ಎಂಬ ಕುದರತ್ತಿನ ಮದ್ದನ್ನು ನೀರಿಗೆ ಬಿಟ್ಟ ಅದರ ಜಿನ್ನಿನಂತಹಾ ಡ್ರೈವರನ್ನು ನೋಡದಿದ್ದರೆ ತಾನು ಮೂಸಾ ಮೊದಲಿಯಾರರ ಮಗಳು ಆಮೀನಾಬೀಬಿಯೇ ಅಲ್ಲ ಎಂದು ಗಟ್ಟಿ ಮಾಡಿಕೊಂಡುಬಿಡುತ್ತಾಳೆ. ತನಗರಿವಿಲ್ಲದೇ ತಾನು ಕಂಡರಿಯದ ಹೆಲಿಕ್ಯಾಪ್ಟರ್ ಚಾಲಕನ ಮೇಲೆ ಮೋಹ ಬೆಳೆಸಿಕೊಂಡು ಬಿಡುತ್ತಾಳೆ. ಈ ಹೆಲಿಪೆಟ್ಟರ್ ಎಂಬ ಜಂತು ತಮ್ಮ ರಬ್ಬರ್ ತೋಟಗಳಲ್ಲಿ ಎಂತಹ ವಿನಾಶ ತಂದೀತು ಎಂಬ ಸ್ಪಷ್ಟ ಅರಿವಿಲ್ಲದೆ, ಬಾಪಾನಿಗೆ ರುಚಿಕಟ್ಟಾದ ಮೀನು ತಯಾರಿಸಲಿಕ್ಕೆ ಅನುವು ಮಾಡಿಕೊಟ್ಟಿದ್ದಕ್ಕೆ ಸಂಭ್ರಮ ಪಡುವ ಈಕೆಯ ಅಮಾಯಕತೆಗೆ ಮರುಕ ಹುಟ್ಟುತ್ತದೆ. ಅಮೀನಾಬಿಯ ಮುಗ್ಧತೆ ಯಾವ ಮಟ್ಟದ್ದು ಎಂದರೆ, ತನ್ನನ್ನು ಅನಾಮತ್ತಾಗಿ ಎತ್ತಿಕೊಂಡು ಹೋದ ವ್ಯಕ್ತಿ ಬೆಳ್ಳಕ್ಕಾರನೇ, ಅದರಲ್ಲೂ ಆತ ಮನುಷ್ಯ ರೂಪದಲ್ಲಿರುವ ಜಿನ್ನೇ ಎಂದು ತಿಳಿದುಕೊಳ್ಳುತ್ತಾಳೆ. ಕಥೆಯ ಕೊನೆಯವರೆಗೂ ಆತ ಅಮದ್ ಕುಟ್ಟಿಯೆಂದು ಈಕೆಗೆ ತಿಳಿಯುವುದೇ ಇಲ್ಲ.

ಆಮೀನಾಳ ಮನಸ್ಸಿನಲ್ಲಿ ಈ ಹೆಲಿಕ್ಯಾಪ್ಟರ್ ಎಂಬ ದುಷ್ಟ ಜಂತು ತನ್ನ ಕೋಳಿಮರಿಗಳನ್ನು ಎತ್ತಿಕೊಂಡು ಹೋದ ಗಿಡುಗಕ್ಕೆ ಹಾಗೂ ಇಬಿಲೀಸ್ (ದೆವ್ವಗಳ ನಾಯಕ) ಎಂಬ ಖುರಾನಿನ ಒಂದು ಪಾತ್ರಕ್ಕೂ ಸಮಾನವಾಗಿ ಕಾಣುತ್ತದೆ. ದುಷ್ಟತೆಯ ಪ್ರತಿರೂಪವಾಗಿ ಭಾವಿಸಿಕೊಂಡರೂ, ಹೆಲಿಕಾಪ್ಟರನ್ನು ಪ್ರತ್ಯಕ್ಷ ಕಂಡಾಗ, ಮಕ್ಕಳು ಏರೋಪ್ಲೇನ್ ಚಿಟ್ಟೆಯನ್ನು ಮುಗ್ಧವಾಗಿ ನೋಡುವ ಹಾಗೆ ನೋಡುತ್ತಾಳೆ. ಈಕೆಯ ಬಾಯಲ್ಲಿ ಇದು ‘ಹೆಲಿಪೆಟ್ಟರ್’ ಆಗಿಬಿಡುತ್ತದೆ. ಉರುಟು ತಲೆಯ ಅದರ ಕನ್ನಡಿ, ನಾಲ್ಕು ರೆಕ್ಕೆಗಳು, ಗುಡಾಣದಂತಹ ಹೊಟ್ಟೆ, ಇತ್ಯಾದಿಗಳು ಆಕೆಗೆ ಜೀರುಂಡೆಯನ್ನೇ ನೆನಪಿಸುತ್ತವೆ. ಈ ಎಲ್ಲ ಅಂಶಗಳೂ ಅಮೀನಾಳ ಶುದ್ಧ ಮನಸ್ಸು, ಹೊಸತನ್ನು ತನ್ನ ಧರ್ಮದ ಉಲ್ಲೇಖಗಳ ಮೂಲಕ ಅರ್ಥ ಮಾಡಿಕೊಳ್ಳುವ ರೀತಿಯನ್ನ ಕಟ್ಟಿಕೊಡುತ್ತದೆ. ಇದೇ ಹೆಲಿಕ್ಯಾಪ್ಟರ್ ಮೂಸಾ ಮೊದಲಿಯಾರರ ಬಾಯಲ್ಲಿ ‘ಎಲಿಕಾಫಿರ್’ ಆಗುತ್ತದೆ. ಆಮೀನಾ ತಾನು ಹೆಲಿಪೆಟ್ಟರನ್ನು ನೋಡಲು ಹೋಗಲು ಅನುಮತಿ ಕೇಳಿದಾಗ, ಮೊದಲಿಯಾರರು ಅನುಮತಿ ಕೊಡುವುದಿಲ್ಲ, ಆಕೆ ಮೊಯಿಲಿಯಾರರ (ಸಂಪ್ರದಾಯಸ್ಥ, ದೈವಭಕ್ತ ಕುಟುಂಬದ) ಮಗಳು ಎಂಬುದನ್ನು ನೆನಪಿಸುತ್ತಾರೆ. ಜೊತೆಗೆ, ‘ಹೊಳೆಯನ್ನು ದಾಟಿ’ ಹೋಗುವುದು ಒಂದು ರೀತಿಯಲ್ಲಿ ಲಕ್ಷ್ಮಣ ರೇಖೆಯನ್ನು ಮೀರಿ ಹೋದಂತೆ ಎನ್ನುವ ಭಾವ ಮೊದಲಿಯಾರರ ಮಾತಿನಲ್ಲಿರುತ್ತದೆ, ಇಷ್ಟಲ್ಲದೇ ಕೆಟ್ಟ ಜನರ ಕಣ್ಣು ಬಿದ್ದೀತು, ಕೆಟ್ಟದಾದೀತು ಎಂಬ ಚಿಂತೆ ಮೊದಲಿಯಾರರದು. ಹೊಳೆಯಾಚೆಗೆ ಕಾಫಿರ (ಮುಸ್ಲಿಮೇತರರು, ಇಸ್ಲಾಮಿಗೆ ವಿದುದ್ಧವಾದವರು) ಹೆಣ್ಣು ಗಂಡುಗಳು ಇರುವರು ಎಂದು ನಂಬಿರುವ ಈ ವ್ಯಕ್ತಿಯ ಮನದಲ್ಲಿ ಬೇರೂರಿರುವ ಹೊರಪ್ರಪಂಚದ ಕುರಿತಾದ ಶಂಕೆ, ಭಯಗಳನ್ನು ಹಾಗೂ ಬೋಳೆತನವನ್ನು ತೋರ್ಪಡಿಸುತ್ತದೆ.

ಆಮೀನಾಳ ಮುಗ್ಧತೆಯನ್ನು ಚಿತ್ರಿಸಲು ಪ್ರಾಯಶಃ ಲೇಖಕರು ಐದೂ ಇಂದ್ರಿಯಗಳ ಸಂವೇದನೆಯನ್ನು ಬಳಸಿಕೊಳ್ಳುತ್ತಾರೆ. ಇದನ್ನು ಹೆಣೆಯುವ ರೀತಿ ಅಪೂರ್ವವಾಗಿರುತ್ತದೆ. ಜೊತೆಯಲ್ಲಿ ಜೀವಂತ ಚಿತ್ರಗಳನ್ನು ಮನಸ್ಸಿನಲ್ಲಿ ಕಡೆದಿಡುತ್ತದೆ. ಬಹುಶಃ ಇಂತಹ ಪರಿಸರದಲ್ಲಿ ಬೆಳೆಯದಿದ್ದರೆ ಹೀಗೆ ಬರೆಯಲು ಅಸಾಧ್ಯವೆನೋ ಅನ್ನಿಸುತ್ತದೆ. ಅಂತಹ ಎರಡು ಸಾಲುಗಳನ್ನು ಗಮನಕ್ಕೆ ತೆಗೆದುಕೊಳ್ಳುವುದಾದರೆ, ಆಮೀನಾಬಿ ‘ಚಿರಿಚಿರಿ ಎಂದು ನಗುವ ಚಪ್ಪಲಿಯನ್ನು ಮೆಟ್ಟಿಕೊಂಡಳು’ ಹಾಗೂ ‘ಪೆಟ್ಟಿಗೆಯಲ್ಲಿ ಕರ್ಪೂರ ಸೂಸುತ್ತಿದ್ದ ವಸ್ತ್ರಗಳನ್ನು ತೊಟ್ಟುಕೊಂಡು’ ತಯರಾದಳು ಎಂದು ಬರೆದಿರುವುದು ಆಕೆಗೆ ಹೆಲಿಕ್ಯಾಪ್ಟರ್ ನೋಡಲು ಉಂಟಾಗಿರುವ ಸಂಭ್ರಮವನ್ನು ಸೂಚಿಸುತ್ತದೆ.

ಇನ್ನು, ಹೆಲಿಕ್ಯಾಪ್ಟರಿನ ಕುರಿತಾದ ಕುತೂಹಲದಿಂದಾಗಿ ಅದನ್ನು ನೋಡಲು ಹೋಗುವ ಆಮೀನಾಳ ಮುಗ್ಧತೆಯ ಹರಣವಾಗುತ್ತದೆ, ಬೆಳ್ಳಕ್ಕಾರನೇ ತನ್ನ ಎತ್ತಿಕೊಂಡು ಹೋಗಿದ್ದು ಎಂಬ ಮೌಢ್ಯದಲ್ಲಿ ಅಮದ್ ಕುಟ್ಟಿಯ ಜೊತೆಯಲ್ಲಿ ಪ್ರಣಯವಾಗುತ್ತದೆ. ಇತ್ತಕಡೆ ಮನೆಯಲ್ಲಿ, ಈಕೆಯ ಮುದ್ದಿನ ಬೆಕ್ಕು ಪೂಚೆಕುಟ್ಟಿಯ ಪ್ರಾಣ ಹೋಗುತ್ತದೆ. ನಾಗರೀಕತೆಯ ಸೋಂಕಿಲ್ಲದ ಕೊಡಗಿನ ರಬ್ಬರ್ ತೋಟಗಳಲ್ಲಿ ಈ ಹೆಲಿಕ್ಯಾಪ್ಟರ್ ಬಂದು ಕ್ರಿಮಿನಾಶಕ ಸಿಂಪಡಿಸುವ ಮುಖಾಂತರ ಸದ್ಯಕ್ಕೆ  ಮೀನಿನಂತಹ ನಿರುಪದ್ರವಿ ಜೀವಿಗಳನ್ನು ನಾಶ ಪಡಿಸುತ್ತದೆ. ಆದರೆ, ಮುಂಬರುವ ದಿನಗಳಲ್ಲಿ ಒಟ್ಟಾರೆ ನಿಸರ್ಗದ ವಿನಾಶಕ್ಕೆ ಕಾರಣವಾಗುತ್ತದೆ. ಇದನ್ನು ಭಯಾನಕ ಕ್ರೌರ್ಯ ತುಂಬಿದ ಕಥೆಯನ್ನು ಮಾಡಿ, ಕಹಿ ಸ್ವಾದ ತರಿಸದ ಲೇಖಕರು, ನಿಧಾನವಾಗಿ ಆದರೆ ನಿಶ್ಚಿತವಾಗಿ ಆಗಲಿರುವ ವಿನಾಶವನ್ನು ಓದುಗರ ಊಹೆಗೆ ಬಿಡುತ್ತಾರೆ. ನಮ್ಮನ್ನು ನವಿರಾಗಿ ಯೋಚನೆಗೆ ಹಚ್ಚಿ ತಮ್ಮ ಮುಂದಿನ ಕಥೆ ಹೇಳಲು ಹೊರಟೇ ಬಿಡುತ್ತಾರೆ.

ಮನಸ್ಸಿನಲ್ಲಿ ಉಳಿದುಕೊಳ್ಳುವ ಸಣ್ಣ ಕಥೆಯ ಲಕ್ಷಣವೆಂದರೆ, ಗೂಗಲ್ ಮ್ಯಾಪಿನಲ್ಲಿ ಚಿಕ್ಕ ಬಿಂದು ಹುಡುಕಿಕೊಂಡು ಅದನ್ನ ಮ್ಯಾಗ್ನಿಫೈ ಮಾಡಿದ ಹಾಗೆ ಇರುತ್ತದೆ ಎನ್ನಲಾಗುತ್ತದೆ. ರಶೀದರ ಕಥೆಗಳೂ ಸಹ ನಕ್ಷೆಯಲ್ಲಿನ ಚಿಕ್ಕ ಬಿಂದುವನ್ನು ಹುಡುಕಿ ಅದರ ಗುಣ ಲಕ್ಷಣಗಳನ್ನು ಓದುಗರೊಂದಿಗೆ ಬಿಚ್ಚಿಡುತ್ತಾ ಹೋಗುತ್ತವೆ: ಸೂಕ್ಷ್ಮ ಬಿಂದುವಾಗಿದ್ದುದು ಜೀವಂತವಾಗಿಬಿಡುತ್ತದೆ, ಓದುಗರನ್ನು ಗೆದ್ದುಬಿಡುತ್ತದೆ.