ಸಮುದಾಯದತ್ತ ಶಾಲೆ ಕಾರ್ಯಕ್ರಮಕ್ಕೆ ಅಲ್ಲಿನ ಶಾಲೆಗಳಿಗೆ ಅಲ್ಲಿನ ಅಧ್ಯಾಪಕರ ಜೊತೆಗೆ ನಡೆದುಕೊಂಡೇ ಹೋಗಿ ಬಂದಾಗ ಅಲ್ಲಿನ ನಿಜವಾದ ಪರಿಸ್ಥಿತಿಯ ಅರಿವಾಗುತ್ತಿತ್ತು. ಶಾಲೆವರೆಗೂ ಬಂದರೆ ಆ ಶಾಲೆಯ ಅಧ್ಯಾಪಕರು ಬಹಳ ಪ್ರೀತಿಯಿಂದ ‘ಸಾರ್ ನೀವು ಶಾಲೆವರೆಗೂ ಬರುತ್ತೀರಿ ಅನ್ನುವುದೇ ಸಂತೋಷ. ಯಾವ ಅಧಿಕಾರಿಯೂ ಇಲ್ಲಿವರೆಗೆ ಬಂದುದ್ದೇ ಇಲ್ಲ. ಶಾಲೆ ಎಲ್ಲಿದೆ ಅನ್ನುವುದು ನಮ್ಮನ್ನು ಬಿಟ್ಟರೆ ಯಾರಿಗೂ ತಿಳಿದಂತಿಲ್ಲ’ ಎಂದು ತಮ್ಮ ಪರಿಸ್ಥಿತಿಯನ್ನು ಹೇಳಿಕೊಳ್ಳುತ್ತಿದ್ದರು. ಗಣಿತ ಮೇಷ್ಟರ ಶಾಲಾ ಡೈರಿ ಸರಣಿಯಲ್ಲಿ ಅರವಿಂದ ಕುಡ್ಲ ಲೇಖನ
ನಾವು ಚಿಕ್ಕವರಾಗಿದ್ದಾಗ ಎಪ್ರಿಲ್ ತಿಂಗಳು ಎಂದರೆ ಫಲಿತಾಂಶ ಪ್ರಕಟವಾಗುವ ದಿನಗಳು. ಎಪ್ರಿಲ್ 10 ನೆಯ ತಾರೀಕು ಹತ್ತಿರ ಬಂದರೆ ನಮ್ಮ ಎದೆಯೆಲ್ಲ ಢವಢವ ಎನ್ನಲು ಪ್ರಾರಂಭವಾಗುತ್ತಿತ್ತು. ಪರೀಕ್ಷೆಯಲ್ಲಿ ನಮಗೆ ಎಷ್ಟು ಅಂಕ ಬಂದಿದೆಯೋ, ಅಂಕ ಪಟ್ಟಿ ನೋಡಿ ಅಪ್ಪ ಏನು ಹೇಳುತ್ತಾರೋ ಎಂದು ಯೋಚನೆಯಾಗಿ ಬಿಡುತ್ತಿತ್ತು. ಆದರೆ ನಾನು ಅಧ್ಯಾಪಕ ವೃತ್ತಿಗೆ ಬರುವಷ್ಟರಲ್ಲಿ ಫೇಲ್ ಎನ್ನುವ ಪರಿಪಾಠ ಹೋಗಿ ಎಲ್ಲರೂ ಪಾಸ್ ಆಗಿ ಮುಂದಿನ ತರಗತಿಗೆ ಹೋಗುವ ಪದ್ಧತಿ ಜಾರಿಗೆ ಬಂದಿತ್ತು. ಇದನ್ನು No detention policy ಎಂದು ಕರೆಯುತ್ತಿದ್ದರು.
ಇದರ ಉದ್ದೇಶ ಮಗುವಿನ ಅಮೂಲ್ಯವಾದ ಬಾಲ್ಯದ ದಿನಗಳನ್ನು ಮತ್ತೆ ಮತ್ತೆ ಅದೇ ತರಗತಿಯಲ್ಲಿ ಕಳೆಯುವ ಬದಲು ಸಕಾರಾತ್ಮಕವಾಗಿ ಯೋಚಿಸಲು ಪ್ರೇರೇಪಿಸುವುದು, ಹಾಗೆ ಕಳೆಯುವುದರಿಂದ ಉಂಟಾಗುವ ಅವಮಾನ, ಕೀಳರಿಮೆಗಳಿಂದ ಮಗು ಶಾಲೆ ಬಿಟ್ಟು ಬಿಡಬಹುದು. ಹೀಗೆ ಶಾಲೆಯಿಂದ ಹೊರಗೆ ಉಳಿದ ಮಗು ಜೀವನದಲ್ಲಿ ಶಿಕ್ಷಣದಿಂದ ವಂಚಿತವಾಗಬಾರದು ಮಾತ್ರವಲ್ಲ ಹೀಗೆ ಶಿಕ್ಷಣ ವಂಚಿತವಾದ ಮಗು ಬಹಳ ಸುಲಭವಾಗಿ ಬಾಲಕಾರ್ಮಿಕನಾಗುವ ಸಂಭವ ಇರುತ್ತದೆ. ‘ಹೇಗೂ ಶಾಲೆಗೆ ಹೋಗುವುದಿಲ್ಲ, ನಾಲ್ಕು ಕಾಸು ಸಂಪಾದನೆಯಾದರೂ ಮಾಡಿಬಿಡು’ ಎಂದು ಪೋಷಕರು ಮಗುವನ್ನು ಕೆಲಸಕ್ಕೆ ಕಳುಹಿಸುವ ಸಾಧ್ಯತೆಯೂ ಹೆಚ್ಚು. ಗಂಡುಮಕ್ಕಳ ಪರಿಸ್ಥಿತಿ ಹೀಗಾದರೆ, ಹೆಣ್ಣು ಮಕ್ಕಳು ಮನೆಯಲ್ಲಿ ತನಗಿಂತ ಚಿಕ್ಕವರನ್ನು ನೋಡಿಕೊಳ್ಳುವ ಕೆಲಸಕ್ಕೆ ನಿಯುಕ್ತಿಯಾಗುತ್ತಾಳೆ ಅಥವಾ ತನ್ನ ಪೋಷಕರ ಜೊತೆ ತಾನೂ ಕೂಲಿ ಕೆಲಸಕ್ಕೆ ಹೋಗುವ ಪರಿಸ್ಥಿತಿ ಎದುರಾಗುತ್ತದೆ. ಮುಂದೆ ಆಕೆಯನ್ನು ಬಹಳ ಬೇಗನೆ ಮದುವೆ ಮಾಡಿ ಕಳುಹಿಸುವ ಸಾಧ್ಯತೆಯೂ ಇದೆ. ಹೀಗೆ ಆಕೆ ತನ್ನ ಜೀವನದಲ್ಲಿ ಸಂಪೂರ್ಣವಾಗಿ ಶಿಕ್ಷಣದಿಂದ ವಂಚಿತವಾಗುವ ಸಾಧ್ಯತೆಯೂ ಇದೆ.
ಗುಡ್ಡದ ಮೇಲಿನ ಅವರ ಬದುಕು, ಅವರ ಕೃಷಿ, ವಿದ್ಯುತ್ ಸಂಪರ್ಕ ಇಲ್ಲದ ಮನೆಗಳು, ಅನಾರೋಗ್ಯ ಎದುರಾದರೆ ಅವರು ಮುಖ್ಯರಸ್ತೆ ತಲುಪಲು ಪಡುವ ಕಷ್ಟ ಎಲ್ಲವೂ ಕಣ್ಣಿಗೆ ಕಟ್ಟುವಂತಿತ್ತು. ಇವೆಲ್ಲವನ್ನೂ ಅನುಭವಿಸಿ ಬಂದ ಮಗುವನ್ನು ಪರೀಕ್ಷೆಯಲ್ಲಿ ಉತ್ತರ ಬರೆಯಲು ಸಾಧ‍್ಯವಾಗದೇ ಇದ್ದುದಕ್ಕೆ ಫೇಲ್ ಮಾಡುವುದಾದರೂ ಹೇಗೆ? ಮಾಡಿದರೂ ಆ ಮಗು ಮುಂದಿನ ವರ್ಷ ಶಾಲೆಗೆ ಬಂದೀತೇ?
ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಬಂದಾಗ ಶೈಕ್ಷಣಿಕ ವ್ಯವಸ್ಥೆ ಬದಲಾಯಿತು. ಆವಾಗಿನಿಂದ ವರ್ಷಪೂರ್ತಿ ಶಾಲೆಗೆ ಬಂದ ಮಗುವನ್ನು ಕೇವಲ ವಾರ್ಷಿಕ ಪರೀಕ್ಷೆಯ ಅಂಕದ ಆಧಾರದಲ್ಲಿ ಪಾಸ್ ಅಥವಾ ಫೇಲ್ ಎಂದು ನಿರ್ಧರಿಸುವ ಪದ್ಧತಿ ಬದಲಾವಣೆಯಾಗಿ ಮಗು ವರ್ಷಪೂರ್ತಿ ಕಲಿತ ಪ್ರತಿ ಪಾಠ, ಅದರಲ್ಲಿ ಮಾಡಲಾದ ಚಟುಚಟಿಕೆ, ಮಗುವಿನ ಭಾಗವಹಿಸುವಿಕೆ, ಪ್ರಾಜೆಕ್ಟ್ ನಲ್ಲಿ ಮಗು ತಯಾರಿಸಿದ ವಸ್ತುಗಳು, ಕೇವಲ ಬರವಣಿಗೆಯ ಉತ್ತರಕ್ಕೆ ಬದಲಾಗಿ ಮಗು ಪ್ರಶ್ನೆಗೆ ಮೌಖಿಕ ಉತ್ತರ ನೀಡಿದರೂ ಅದಕ್ಕೆ ಅಂಕ ನೀಡುವ ಪದ್ಧತಿ ಆರಂಭವಾಯಿತು. ಹೀಗೆ ತರಗತಿಗಳ ಪರಿಕಲ್ಪನೆಯಲ್ಲಿ ಒಂದಷ್ಟು ಬದಲಾವಣೆ ಪ್ರಾರಂಭವಾಯಿತು. ರೂಪಣಾತ್ಮಕ ಮೌಲ್ಯಮಾಪನ ಮತ್ತು ಆಂತರಿಕ ಮೌಲ್ಯಮಾಪನ, ಒಟ್ಟಾಗಿ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಎಂಬ ಹೆಸರುಗಳಿಂದ ಇದನ್ನು ಕರೆಯುತ್ತಾರೆ.
ವಾರ್ಷಿಕ ಪರೀಕ್ಷೆಯ ಬದಲು ವರ್ಷವನ್ನು ಎರಡು ಸೆಮಿಸ್ಟರ್ ಗಳಾಗಿ ವಿಂಗಡಿಸಿ ಮೌಲ್ಯಮಾಪನ ಮಾಡಲಾಗುತ್ತದೆ. ಆನಂತರ ಪೋಷಕರೆಲ್ಲರನ್ನೂ ಕರೆದು ಅವರ ಮಕ್ಕಳ ಕಲಿಕಾ ಪ್ರಗತಿಯನ್ನು ಪೋಷಕರಿಗೆ ತಿಳಿಸುವ ಪೋಷಕರ ಸಭೆ ವರ್ಷಕ್ಕೆ ಎರಡುಬಾರಿ ನಡೆಯುತ್ತದೆ. ಇದನ್ನು ಸಮುದಾಯದತ್ತ ಶಾಲೆ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಅಂದು ಪೋಷಕರನ್ನು ಕರೆದು ಮಕ್ಕಳ ಕಲಿಕೆ ಮತ್ತು ಪ್ರಗತಿಯ ಬಗ್ಗೆ ಅವರಿಗೆ ತಿಳಿಸುವುದು, ಮಕ್ಕಳು ಮಾಡಿದ ಕರಕುಶಲ ವಸ್ತುಗಳ ಪ್ರದರ್ಶನ, ಮಕ್ಕಳ ಪ್ರತಿಭಾ ಪ್ರದರ್ಶನವೂ ಇರುತ್ತದೆ. ಪ್ರಾಥಮಿಕ ಶಾಲೆಗಳಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮಕ್ಕೆ ವೀಕ್ಷರಾಗಿ ಪ್ರೌಢಶಾಲಾ ಶಿಕ್ಷಕರನ್ನು ನಿಯೋಜನೆ ಮಾಡಲಾಗುತ್ತಿತ್ತು.
ಹೀಗೆ ನಿಯೋಜನೆಗೊಂಡು ನನ್ನ ಹೈಸ್ಕೂಲಿನ ಸುತ್ತಲಿನ ಕೆಲವಾರು ಪ್ರಾಥಮಿಕ ಶಾಲೆಗಳನ್ನು ನೋಡುವ ಸಲುವಾಗಿಯೇ ಅಲ್ಲಿಗೆ ಹೋಗುತ್ತಿದ್ದೆ. ಆ ಹಳ್ಳಿಗಳಿಂದ ಬರುತ್ತಿದ್ದ ಮಕ್ಕಳು ‘ಈ ಬಾರಿ ನಮ್ಮ ಹಳ್ಳಿಗೆ ಬನ್ನಿ’ ಎಂದು ಒತ್ತಾಯದಿಂಲೇ ಕರೆಯುತ್ತಿದ್ದರು. ಕುದುರೆಮುಖ ಬೆಟ್ಟದ ತುದಿಗೆ ಚಾರಣ ಹೋಗುವ ಮಾರ್ಗದಲ್ಲಿ ಮುಖ್ಯ ರಸ್ತೆಯಿಂದ ನಾಲ್ಕು ಕಿಲೋಮೀಟರ್ ಗುಡ್ಡ ಹತ್ತಿದರೆ ಸಿಗುವ ಮುಳ್ಳೋಡಿ, ನಮ್ಮ ಸಂಸೆ ಶಾಲೆಯ ದಾರಿಯಲ್ಲೇ ನಾಲ್ಕು ಕಿಲೋಮೀಟರ್ ನಿರ್ಜನ ಕಾಡಿನದಾರಿಯಲ್ಲಿ ಮುಂದುವರೆದರೆ ಸಿಗುವ ಎಸ್.ಕೆ.ಮೇಗಲ್, ಬಾಳ್ಗಲ್ ಅರಣ್ಯ ತನಿಖಾ ಠಾಣೆಯಿಂದ ನಾಲ್ಕು ಕಿಲೋಮೀಟರ್ ಬೆಟ್ಟ ಏರಿದರೆ ಸಿಗುವ ಜೋಗೀ ಕುಂಬ್ರಿ, ಬಸರೀಕಟ್ಟೆಯಿಂದ ಕಾಫಿ ತೋಟದ ಬಳಸುದಾರಿಯಲ್ಲಿ ಮೂರು ಕಿಲೋಮೀಟರ್ ಹೋದರೆ ಸಿಗುವ ಶಂಕರಕೂಡಿಗೆ ನನಗೆ ಬಹಳ ವಿಭಿನ್ನವಾದ ಅನುಭವ ನೀಡಿದ ಜಾಗಗಳು.
ಈ ಶಾಲೆಗಳನ್ನು ತಲುಪಬೇಕಾದರೆ ಅಕ್ಷರಶಃ ಚಾರಣವನ್ನೇ ಮಾಡಬೇಕು. ಮುಖ್ಯ ರಸ್ತೆಯಿಂದ ಶಾಲಾ ಮೇಷ್ಟ್ರು ಪ್ರತಿದಿನ ನಡೆದುಕೊಂಡೇ ಹೋಗಬೇಕು. ನಡೆದುಕೊಂಡೇ ಬರಬೇಕು. ಮಳೆಗಾಲದಲ್ಲಿ ಕೆಸರಿನಿಂದ ಜಾರುವ ರಸ್ತೆಯಲ್ಲಿ ಜಿಗಣೆ ಕಚ್ಚಿಸಿಕೊಂಡು ನಡೆಯುವುದು ಸಾಹಸದ ಕೆಲಸ. ಇಲಾಖೆಯ ಯಾವ ಅಧಿಕಾರಿಯೂ ಆ ಶಾಲೆಗಳಿಗೆ ತಪ್ಪಿಯೂ ಭೇಟಿ ನೀಡುತ್ತಿರಲಿಲ್ಲ. ಫೋನ್ ಮಾಡಲು ಅಲ್ಲಿ ಮೊಬೈಲ್ ಸಂಪರ್ಕವೂ ಸಿಗುತ್ತಿರಲಿಲ್ಲ. ಮಾಹಿತಿ ಏನಾದರೂ ಬೇಕಿದ್ದರೆ ಕ್ಲಸ್ಟರ್ ಕೇಂದ್ರ ಸಂಸೆ ಅಥವಾ ಕಳಸಕ್ಕೇ ಬಂದು ಮಾಹಿತಿ ನೀಡಬೇಕಾಗಿತ್ತು.
ಸಮುದಾಯದತ್ತ ಶಾಲೆ ಕಾರ್ಯಕ್ರಮಕ್ಕೆ ಅಲ್ಲಿನ ಶಾಲೆಗಳಿಗೆ ಅಲ್ಲಿನ ಅಧ್ಯಾಪಕರ ಜೊತೆಗೆ ನಡೆದುಕೊಂಡೇ ಹೋಗಿ ಬಂದಾಗ ಅಲ್ಲಿನ ನಿಜವಾದ ಪರಿಸ್ಥಿತಿಯ ಅರಿವಾಗುತ್ತಿತ್ತು. ಶಾಲೆವರೆಗೂ ಬಂದರೆ ಆ ಶಾಲೆಯ ಅಧ್ಯಾಪಕರು ಬಹಳ ಪ್ರೀತಿಯಿಂದ ‘ಸಾರ್ ನೀವು ಶಾಲೆವರೆಗೂ ಬರುತ್ತೀರಿ ಅನ್ನುವುದೇ ಸಂತೋಷ. ಯಾವ ಅಧಿಕಾರಿಯೂ ಇಲ್ಲಿವರೆಗೆ ಬಂದುದ್ದೇ ಇಲ್ಲ. ಶಾಲೆ ಎಲ್ಲಿದೆ ಅನ್ನುವುದು ನಮ್ಮನ್ನು ಬಿಟ್ಟರೆ ಯಾರಿಗೂ ತಿಳಿದಂತಿಲ್ಲ’ ಎಂದು ತಮ್ಮ ಪರಿಸ್ಥಿತಿಯನ್ನು ಹೇಳಿಕೊಳ್ಳುತ್ತಿದ್ದರು.
ಬೆರಳೆಣಿಕೆಯ ಮಕ್ಕಳಿಗೆ ಅಲ್ಲಿ ಒಬ್ಬರೇ ಶಿಕ್ಷಕ. ಜೊತೆಗೊಬ್ಬರು ಅಡುಗೆ ಸಿಬ್ಬಂದಿ. ಮೇಷ್ಟ್ರು ಬಂದರಷ್ಟೇ ಪಾಠ. ಇಲ್ಲದಿದ್ದರೆ ಬರೇ ಬಿಸಿ ಊಟ. ಗುಡ್ಡದ ಮೇಲಿನ ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯರ ಪರಿಸ್ಥಿತಿ ಅರಿವಾದಾಗ ಮಾತುಬಾರದೆ ನಾನೇ ಮೂಕನಾಗಿ ಬಿಡುತ್ತಿದ್ದೆ. ಅಲ್ಲಿನ ಮಕ್ಕಳು ಮುಂದೆ ಹೈಸ್ಕೂಲು ಶಿಕ್ಷಣಕ್ಕಾಗಿ ನಮ್ಮ ಶಾಲೆಗೇ ಬರುತ್ತಿದ್ದರು. ಅವರ ಮನೆಗಳಿಗೂ ಭೇಟಿ ನೀಡದೇ ಬರಲು ಅವರ ಪೋಷಕರು ಬಿಡುತ್ತಿರಲಿಲ್ಲ. ಗುಡ್ಡದ ಮೇಲಿನ ಅವರ ಬದುಕು, ಅವರ ಕೃಷಿ, ವಿದ್ಯುತ್ ಸಂಪರ್ಕ ಇಲ್ಲದ ಮನೆಗಳು, ಅನಾರೋಗ್ಯ ಎದುರಾದರೆ ಅವರು ಮುಖ್ಯರಸ್ತೆ ತಲುಪಲು ಪಡುವ ಕಷ್ಟ ಎಲ್ಲವೂ ಕಣ್ಣಿಗೆ ಕಟ್ಟುವಂತಿತ್ತು. ಇವೆಲ್ಲವನ್ನೂ ಅನುಭವಿಸಿ ಬಂದ ಮಗುವನ್ನು ಪರೀಕ್ಷೆಯಲ್ಲಿ ಉತ್ತರ ಬರೆಯಲು ಸಾಧ‍್ಯವಾಗದೇ ಇದ್ದುದಕ್ಕೆ ಫೇಲ್ ಮಾಡುವುದಾದರೂ ಹೇಗೆ? ಮಾಡಿದರೂ ಆ ಮಗು ಮುಂದಿನ ವರ್ಷ ಶಾಲೆಗೆ ಬಂದೀತೇ? ಎನ್ನುವ ಪ್ರಶ್ನೆ ಮನಸ್ಸಿನಲ್ಲಿ ಸುಳಿಯದೇ ಇರುತ್ತಿರಲಿಲ್ಲ. ನಿತ್ಯ ಚಾರಣ ಮಾಡುವ ಈ ಶಾಲೆಗಳ ಮೇಷ್ಟ್ರು ಮತ್ತು ಮಕ್ಕಳ ಬದುಕನ್ನು ಅಳೆಯುವ ಅಳತೆಗೋಲಾದರೂ ಯಾವುದು? ನಾನು ಆ ವರೆಗೆ ಬದುಕಿದ ಮಹಾನಗರಗಳ ಧಾವಂತದ ಬದುಕಿನ ಮುಂದೆ ಈ ಹಳ್ಳಿ ಮಕ್ಕಳ ಬದುಕು ಕಂಬಳಿಹೊದ್ದು ಮಲಗಿದೆಯೇ ಎಂದು ಅನಿಸುತ್ತಿತ್ತು.
ನನ್ನ ತರಗತಿಯಲ್ಲಿ ಪವಿತ್ರ ಎಂಬ ಹುಡುಗಿ ಇದ್ದಳು. ಬಹಳ ಬಡ ಕುಟುಂಬದಿಂದ ಬಂದ ಮಗು. 5-14 ವರ್ಷದವರೆಗೆ ಮಗು ಶಾಲೆಯಿಂದ ಹೊರಗೆ ಉಳಿಯುವಂತಿಲ್ಲ ಎಂಬ ನಿಯಮ ಜಾರಿಯಾದ ಕಾರಣದಿಂದಲೇ ಆಕೆ ಹೈಸ್ಕೂಲ್ ಮುಖ ನೋಡಲು ಸಾದ್ಯವಾಗಿತ್ತು. ಇಲ್ಲದೇ ಇದ್ದರೆ ಅಂತಹ ಹಳ್ಳಿಯ ಮನೆಯಿಂದ ಹತ್ತು ಕಿಲೋಮೀಟರ್ ದೂರದ ಪ್ರೌಢಶಾಲೆಗೆ ಆಕೆಯ ತಂದೆ ಕಳುಹಿಸುತ್ತಿರಲಿಲ್ಲ. ಆಕೆ ಕಲಿಕೆಯಲ್ಲಿ ಬಹಳ ಚುರುಕಾಗಿದ್ದಳು. ನೇರ ನಡೆ ನುಡಿಯ ಹುಡುಗಿ. ತಾನು ತಪ್ಪು ಮಾಡಿದ್ದರೆ ಆಕೆಯೇ ಬಂದು ಅದನ್ನು ಒಪ್ಪಿಕೊಳ್ಳುವ ಸ್ವಭಾವ. ಪಾಠದಲ್ಲಿ ಏನಾದರೂ ಅರ್ಥವಾಗದೇ ಇದ್ದರೆ ಅದನ್ನು ತರಗತಿಯಲ್ಲಿ ಅಥವಾ ಬಿಡುವಿನ ವೇಳೆಯಲ್ಲಿ ಬಂದು ಕೇಳಲು ಸ್ವಲ್ಪವೂ ಹಿಂಜರಿಕೆ ಇಲ್ಲದ ಹುಡುಗಿ. ಹತ್ತನೇ ತರಗತಿಯಲ್ಲಿ 80% ಅಂಕದೊಂದಿಗೆ ಪಾಸಾಗಿದ್ದ ಆಕೆಯ ಓದನ್ನು ಅಲ್ಲಿಯೇ ನಿಲ್ಲಿಸಲು ಅವಳ ತಂದೆ ನಿರ್ಧಾರ ಮಾಡಿದ್ದ.
ವಿಷಯ ಗೊತ್ತಾದ ನಾವುಗಳು ಅಂಕಪಟ್ಟಿ ಪಡೆಯಲು ಬಂದಿದ್ದ ಆಕೆಯ ತಂದೆಯನ್ನು ವಿಚಾರಿಸಿದಾಗ ಆತ ಹೇಳಿದ ಕಾರಣ ಹೀಗಿತ್ತು. ತನಗಿರುವ ಎರಡು ಮಕ್ಕಳಲ್ಲಿ ಈಕೆ ಚಿಕ್ಕವಳು. ದೊಡ್ಡವನು ಗಂಡುಮಗ. ಅವನು ಡಿಪ್ಲೊಮಾ ಓದುತ್ತಿದ್ದಾನೆ. ಅವನು ಓದಿ ಕೆಲಸಕ್ಕೆ ಹೋದರೆ ಮುಂದೆ ಕುಟುಂಬಕ್ಕೂ ತಂಗಿಯ ಮದುವೆಗೂ ಆಧಾರವಾಗುತ್ತಾನೆ. ಇವಳನ್ನು ಓದಿಸಲು ನನಗೆ ಆರ್ಥಿಕ ಸಾಮರ್ಥ್ಯ ಸಾಲದು. ಅದಕ್ಕೇ ಇವಳನ್ನು ಇನ್ನು ಮುಂದೆ ಓದಿಸುವುದಿಲ್ಲ ಎನ್ನುವ ಕಾರಣ ನೀಡಿದ. ಓದಿನಲ್ಲಿ ಚುರುಕಾಗಿದ್ದ ಪವಿತ್ರನ ಓದು ಅಲ್ಲಿಗೇ ನಿಲ್ಲುವುದು ನಮಗ್ಯಾರಿಗೂ ಇಷ್ಡವಿರಲಿಲ್ಲ.
‘ಈಕೆ ಕಲಿಕೆಯಲ್ಲಿ ಬಹಳ ಚುರುಕಾಗಿದ್ದಾಳೆ. ಓದು ಮುಂದುವರೆಸಿದರೆ ಮುಂದೆ ಒಳ್ಳೆಯ ಟೀಚರ್ ಆಗುವ ತಾಳ್ಮೆ ಮತ್ತು ಸಾಮರ್ಥ್ಯ ಆಕೆಯಲ್ಲಿದೆ. ಇನ್ನು ಎರಡು ವರ್ಷಗಳಲ್ಲಿ ಅವಳ ಅಣ್ಣನ ಓದು ಮುಗಿಯುತ್ತದೆ ಅಲ್ಲಿಯವರೆಗೂ ಅವಳ ಓದಿಗೆ ಬೇಕಾದ ಹಣಕಾಸಿನ ವ್ಯವಸ್ಥೆಯನ್ನು ದಾನಿಗಳ ನೆರವು ಪಡೆದು ಮಾಡುವುದಾದರೆ ಮಗಳನ್ನು ಮುಂದೆ ಓದಿಸುತ್ತೀರಾ’ ಎಂದು ಕೇಳಿದೆವು.
ಮಗಳನ್ನು ಮುಂದೆ ಓದಿಸಲು ತಂದೆ ತಯಾರಾದ. ಆಕೆ ಪದವಿಪೂರ್ವ ಕಾಲೇಜಿನ ಮೆಟ್ಟಿಲು ಏರಿದಳು. ಅಲ್ಲಿಯೂ ಶ್ರದ್ಧೆಯಿಂದ ಓದಿದ ಹುಡುಗಿ ವಿದ್ಯಾರ್ಥಿವೇತನ ಪಡೆದು ಪದವಿಯಲ್ಲಿ ಬಿಎಸ್ಸಿ ಸೇರಿದಳು. ಅಷ್ಟು ಹೊತ್ತಿಗೆ ಆಕೆಯ ಅಣ್ಣ ತನ್ನ ಶಿಕ್ಷಣ ಮುಗಿಸಿ ಕೆಲಸಕ್ಕೆ ಸೇರಿದ್ದ. ಅಣ್ಣ ತನ್ನ ತಂಗಿಯ ಓದಿಗೆ ಆಸರೆಯಾಗಿ ನಿಂತ. ಬೇರೆ ಊರಿನಲ್ಲಿ ಹಾಸ್ಟೆಲ್ ನಲ್ಲಿ ಇದ್ದ ಆಕೆಯ ಹಾಸ್ಟೆಲ್ ನ ಹಣವನ್ನು ಆತನೇ ಭರಿಸುತ್ತಿದ್ದ. ಹೀಗೆ ಓದು ಮುಂದುವರೆಸಿದ ಹುಡುಗಿ ಪದವಿ, ಸ್ನಾತಕೋತ್ತರ ಪದವಿ ಮತ್ತು ಶಿಕ್ಷಕ ಶಿಕ್ಷಣ ತರಬೇತಿ ಮುಗಿಸಿ ಇಂದು ಕಾಲೇಜೊಂದರಲ್ಲಿ ಅಧ್ಯಾಪಿಕೆಯಾಗಿ ಕೆಲಸ ಮಾಡುತ್ತಿದ್ದಾಳೆ.
ಶಿಕ್ಷಕನಾಗಿ ಇದಕ್ಕಿಂತ ಹೆಚ್ಚಿನ ಸಾರ್ಥಕ್ಯಭಾವ ಇನ್ನೊಂದಿಲ್ಲ.
ಅರವಿಂದ ಕುಡ್ಲ ವೃತ್ತಿಯಿಂದ ಶಾಲಾ ಶಿಕ್ಷಕರು. ರಂಗಭೂಮಿ, ಫೋಟೋಗ್ರಫಿ, ಓದು, ಶಿಕ್ಷಣ ಮತ್ತು ಚಾರಣ ಇವರ ಆಸಕ್ತಿಯ ವಿಷಯಗಳು. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯ ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಅರವಿಂದ ಸರ್, ಎಲ್ಲ ಮಕ್ಕಳನ್ನು ಯಾಕೆ ಪಾಸ ಮಾಡಬೇಕು ಮತ್ತು ಮಗುವಿನ ನಿರಂತರ ಮೌಲ್ಯ ಮಾಪನ ವಿಚಾರಗಳು ಅತ್ಯಂತ ಸೂಕ್ತವಾಗಿವೆ. ಕಾಡಿನ ಮಕ್ಕಳ ಶಿಕ್ಷಣಕ್ಕೆ ಸಹಾಯವಾಗಿ ಅವರ ಬದುಕಿಗೆ ಬೆಳಕಾಗುವ ನಿಮ್ಮ ವೃತ್ತಿಯೇ ಶ್ರೇಷ್ಠ ಮತ್ತು ನಿಮ್ಮ ಬದುಕೇ ಸಾರ್ಥಕ. ಪವಿತ್ರಾ ಅವರ ಓದಿಗೆ ನೆರವಾಗಿ ಅವರು ಇಂದು ಒಬ್ಬ ಅಧ್ಯಾಪಕೀಯಾಗಿ ಸೇವೆ ಸಲ್ಲಿಸುತ್ತಿರುವದು ಅತ್ಯಂತ ಹೆಮ್ಮೆಯ ವಿಷಯ. ಇದಕ್ಕಿಂತ ಹೆಚ್ಚಿನ ಸಾರ್ಥಕ್ಯ ಭಾವ ಜೀವನದಲ್ಲಿ ಇನ್ನೊಂದಿಲ್ಲ ಅಂತ ನಮಗೂ ಕೂಡ ಅನಿಸಿತು. ನಿಮ್ಮ ಶಿಕ್ಷಕ ವೃತ್ತಿಯ ಸೇವೆ ಹೀಗೆಯೇ ನಿರಂತರ ಮುಂದುವರೆಯಲಿ ಎಂಬ ಸದಾಶಯ ನಮ್ಮದು.
Kudos