ಕೋವಿಡ್ ಮೊದಲನೇ ಅಲೆಯ ಕಾರಣದಿಂದ ಹಲವರು ಕೆಲಸ ಕಳೆದುಕೊಳ್ಳುತ್ತಿದ್ದರು. ಮತ್ತೊಂದಿಷ್ಟು ಕಡೆ ಪರ್ಸಂಟೇಜ್ ಸ್ಯಾಲರಿಗೆ ಬಂದು ನಿಂತಿತ್ತು. ಸಂಯೋಜಕರಾಗಿ ಕೆಲಸ ಮಾಡುತ್ತಿದ್ದ ಮಿಸಸ್ ಪ್ರೆಸಿಲ್ಲಾ ಅವರನ್ನು ಹೆಚ್ಚುವರಿ ಹುದ್ದೆಗಳನ್ನು ವಜಾ ಮಾಡುವ ನೆಪ ಹೇಳಿ ಕೆಲಸದಿಂದ ತೆಗೆದು ಹಾಕಿದ್ದರು. ಅವರೇ ರೆಫರ್ ಮಾಡಿದ್ದ, ನಾನು ಕೆಲಸ ಮಾಡುತ್ತಿದ್ದ ಸಂಸ್ಥೆಗೆ ಇಂಗ್ಲಿಷ್ ಭಾಷಾ ಅಧ್ಯಾಪಕರಾಗಿ ಸೇರಿಕೊಂಡರು. ನಾವೀಗ ಸಹೋದ್ಯೋಗಿಗಳಾಗಿದ್ದೆವು.
ಜಂಕ್ಷನ್ ಪಾಯಿಂಟ್ ಅಂಕಣದಲ್ಲಿ ದಾದಾಪೀರ್ ಜೈಮನ್ ಬರಹ
ಇನ್ನಿದು ಸಾಧ್ಯವಾಗುವುದಿಲ್ಲ ಎನಿಸಿದಾಗ ಪೇಸ್ಟಿನ ದೇಹವನ್ನು ಅಂಗಾತ ಮಲಗಿಸಿ ಬಾಚಣಿಗೆಯೋ ಲಟ್ಟಣಿಗೆಯೋ ಇಟ್ಟು ಉರುಳಿಸಿ ಕೊನೆಗೊಂದು ಪೇಸ್ಟಿನ ಬಿಂದು ತರಿಸಿಯೇ ತೀರುತ್ತೆವಲ್ಲ ಆ ರೀತಿ ನಾನೂ ಎಲ್ಲಿಯೋ ಯಾವುದರಲ್ಲೋ ಹೇಗೋ ಒಗ್ಗಿಕೊಂಡು ಬಾವಿಯೊಳಗಿನ ಕಪ್ಪೆ ಆಗಿಬಿಟ್ಟು ನನ್ನ ಇಡೀ ಜೀವನವೇ ಒಂದು ದರ್ಬೇಸಿ ಸಂಸ್ಥೆಯಲ್ಲಿ ಬಸಿದು ಹೋಗುತ್ತದೆ ಎನ್ನುವಾಗ ಒಳಗಿನ ಎಲ್ಲಾ ಶಕ್ತಿಯನ್ನು ಒಗ್ಗೂಡಿಸಿಕೊಂಡು ಉತ್ಸಾಹದ ಬಿಂದುವೊಂದನ್ನು ಆವಾಹಿಸಿಕೊಂಡು ಫೈಲಿನಲ್ಲಿ ಸೀವಿ ಇರಿಸಿಕೊಂಡು ಸಂದರ್ಶನಕ್ಕೆ ಹೊರಟಿದ್ದೆ. ಅವರು ನಾನು ಹೋದ ಎರಡನೇ ಶಿಕ್ಷಣ ಸಂಸ್ಥೆಯಲ್ಲೇ ಸಂದರ್ಶಕರಾಗಿ ಬಂದಿದ್ದರು. ಲಿಖಿತ ಪರೀಕ್ಷೆ, ಡೆಮೋ ಎಲ್ಲಾ ಮುಗಿಸಿ ಮ್ಯಾನೇಜ್ಮೆಂಟಿನ ಮುಂದೆ ಕೊನೆಯ ಸುತ್ತಿನ ಮಾತುಕತೆಯಲ್ಲಿ ಸಂಬಳದ ವಿಷಯಕ್ಕಾಗಿ ಅಸಮಾಧಾನಗೊಂಡು ಹೊರಬಂದೆ. ಯಾವುದಕ್ಕೂ ಇರಲಿ ಎಂದು ಸೀವಿಯ ಒಂದು ಕಾಪಿಯನ್ನು ಸಂಯೋಜಕರಿಗೆ ಕೊಟ್ಟು ಹೋಗಿ ಎಂದಿದ್ದರಿಂದ ಕೊಡಲು ಅವರ ಮುಂದೆ ಕೂತೆ.
‘ಆರ್ ಯು ನಾಟ್ ಹ್ಯಾಪಿ ಅಬೌಟ್ ಸಿಟಿಸಿ ಆಫರ್ಡ್?’ ಎಂದು ಕೇಳಿದರು.
‘ನೋ ಮ್ಯಾಮ್’ ಎಂದಷ್ಟೇ ಹೇಳಿದೆ.
‘ಓಕೆ ಲಿಸ್ಸನ್. ಐ ರೆಫರ್ ಯು ಟು ವನ್ ಇನ್ಸ್ಟಿಟ್ಯೂಶನ್. ದೇ ಪೇ ಯು ವೆಲ್. ವಿಲ್ ಯು ಗೊ?’ ಎಂದು ಕೇಳಿದರು. ನಾನು ಖಂಡಿತಾ ಹೋಗುವೆ ಎಂದಾಗ ನಂಬರ್ ಕೊಟ್ಟು ಇವರಿಗೆ ಕರೆ ಮಾಡಿ ನನ್ನ ಹೆಸರು ಹೇಳು ಅವರು ಸಂದರ್ಶನ ಫಿಕ್ಸ್ ಮಾಡ್ತಾರೆ ಎಂದರು. ‘ಮ್ಯಾಮ್ ಯುವರ್ ನೇಮ್?’ ಎಂದು ಕೇಳಿದ್ದಕ್ಕೆ ‘ಪ್ರೆಸಿಲಾ ಮಾರಿಸನ್ ಡಾಸನ್’ ಎಂದರು. ನಾನು ಅಷ್ಟುದ್ದದ ಇಂಗ್ಲೀಷ್ ಹೆಸರನ್ನು ಮೊದಲ ಬಾರಿಗೆ ಕೇಳಿದ್ದೆ. ಆಗ ಅದು ಕಷ್ಟವೆನಿಸಿ ಮಿಸಸ್ ಪ್ರೆಸಿಲ್ಲಾ ಎಂದಷ್ಟೇ ಸೇವ್ ಮಾಡಿಕೊಂಡಿದ್ದೆ. ಹೊರಡುವ ಮುನ್ನ ‘ಐ ಡಿಡ್ ನಾಟ್ ಮೀಟ್ ಯು ಅಟ್ ಆಲ್. ರಿಮೆಂಬರ್!’ ಎಂದು ಈ ಇನ್ವೆಸ್ಟಿಗೆಟಿವ್ ಸಿನಿಮಾಗಳಲ್ಲಿ ಒಂದು ಮಾಹಿತಿ ಬಿಟ್ಟುಕೊಟ್ಟು ಹೇಳುತ್ತಾರಲ್ಲ ಅದೇ ರೀತಿ ಹೇಳಿದರು. ಥಟ್ಟನೆ ನನಗದು ಹೊಳೆದು ನಗುವೂ ಬಂತು. ತಡೆದುಕೊಂಡು ‘ಶ್ಯೂರ್’ ಎಂದಷ್ಟೇ ಹೇಳಿದೆ. ಕೊನೆಗೆ ಥ್ಯಾಂಕ್ಸ್ ಹೇಳಿ ಅವರ ಕ್ಯಾಬಿನ್ನಿಂದ ಎದ್ದವನು ಏನೋ ನೆನಪಾಗಿ ಕೇಳಲೇಬೇಕೆನಿಸಿ ಮತ್ತೆ ಕೂತೆ. ಅವರು ಕತ್ತೆತ್ತಿ ನೋಡಿದರು. ಆಗ ಮೊದಲ ಬಾರಿಗೆ ಅವರನ್ನು ಗಮನಿಸಿದ್ದೆ. ಮೇಲ್ದುಟಿಯ ಮೇಲೆ ಎಡಭಾಗದಲ್ಲಿ ಒಂದು ಮಚ್ಚೆ ಇತ್ತು. ತಲೆಯ ಮೇಲೆ ಕೂದಲು ಅಷ್ಟೇನು ಸೋಂಪಾಗಿಲ್ಲದಿದ್ದರೂ ಇರುವಷ್ಟೇ ಕೂದಲನ್ನು ಬಳಸಿ ಒಂದು ಪೋನಿ ಕಟ್ಟಿಕೊಂಡಿದ್ದರು. ತಿಳಿ ನೀಲಿ ಬಣ್ಣದ ಚೂಡಿದಾರ್ ಮತ್ತು ಕತ್ತು ಬಳಸಿ ಒಂದು ಬಿಳಿ ಬಣ್ಣದ ಒಂದು ದುಪ್ಪಟಾವನ್ನು ಹೊದ್ದುಕೊಂಡಿದ್ದರು. ಚಕ್ಕನೆ ಅವರ ಉಡುಗೆ ರಿಜಿಸ್ಟರ್ ಆಗುವ ಹೊತ್ತಿನಲ್ಲಿಯೇ ಮತ್ತೊಮ್ಮೆ ಹುಬ್ಬು ಕುಣಿಸಿದರು.
‘ಮ್ಯಾಮ್, ವೈ ಆರ್ ಯು ಡುಯಿಂಗ್ ದಿಸ್? ದಟ್ ಟೂ ಫಾರ್ ಅ ಸ್ಟ್ರೇಂಜರ್ ?’
‘ನಂಬರ್ 1: ಯುವರ್ ಸೀವಿ ಇಸ್ ಇಂಪ್ರೆಸಿವ್. ನಂಬರ್ 2: ಮೈ ಸನ್ ಫಿನಿಷಡ್ ಎಂಜಿನಿಯರಿಂಗ್ ಅಂಡ್ ಸರ್ಚ್ಯಿಂಗ್ ಫಾರ್ ಜಾಬ್. ಐ ನೊ ದ ಸ್ಟ್ರಗಲ್ಸ್ ಆಫ್ ಯಂಗ್ ಪೀಪಲ್. ಗಾಡ್ ಬ್ಲೆಸ್ ಯು ಯಂಗ್ ಮ್ಯಾನ್’ ಎಂದಿದ್ದರು. ಆ ಹೊತ್ತಿಗೆ ಅದೆಲ್ಲಿತ್ತೋ ಏನೋ ಹೊಕ್ಕಳದಾಳದಿಂದ ಉಕ್ಕಿ ಗಂಟಲ ಸೆರೆ ಉಬ್ಬಿ ಕಣ್ಣಲ್ಲಿ ತೇವ ನಿಂತು ಮಿನುಗು… ಮಂಜು. ಯಾವುದೋ ಪರ ಊರಿನಲ್ಲಿ ಸಿಗುವ ಜನ ವಿನಾಕಾರಣ ಮಾಡುವ ಸಹಾಯ ಮರುಭೂಮಿಯಲ್ಲಿ ಒರತೆ ಸಿಕ್ಕಾಗ ಆಗುವ ಸಂತಸಕ್ಕೆ ಸಮ. ನನಗೂ ಅದಾಗಿತ್ತು. ಥ್ಯಾಂಕ್ಸ್ ಹೇಳಿ ಎದ್ದು ಬಂದಿದ್ದೆ. ಕೊನೆಗೂ ಆ ಕೆಲಸ ನನಗೆ ಸಿಕ್ಕಿತ್ತು.
ಹೊರಡುವ ಮುನ್ನ ‘ಐ ಡಿಡ್ ನಾಟ್ ಮೀಟ್ ಯು ಅಟ್ ಆಲ್. ರಿಮೆಂಬರ್!’ ಎಂದು ಈ ಇನ್ವೆಸ್ಟಿಗೆಟಿವ್ ಸಿನಿಮಾಗಳಲ್ಲಿ ಒಂದು ಮಾಹಿತಿ ಬಿಟ್ಟುಕೊಟ್ಟು ಹೇಳುತ್ತಾರಲ್ಲ ಅದೇ ರೀತಿ ಹೇಳಿದರು. ಥಟ್ಟನೆ ನನಗದು ಹೊಳೆದು ನಗುವೂ ಬಂತು. ತಡೆದುಕೊಂಡು ‘ಶ್ಯೂರ್’ ಎಂದಷ್ಟೇ ಹೇಳಿದೆ.
ಕೋವಿಡ್ ಮೊದಲನೇ ಅಲೆಯ ಕಾರಣದಿಂದ ಹಲವರು ಕೆಲಸ ಕಳೆದುಕೊಳ್ಳುತ್ತಿದ್ದರು. ಮತ್ತೊಂದಿಷ್ಟು ಕಡೆ ಪರ್ಸಂಟೇಜ್ ಸ್ಯಾಲರಿಗೆ ಬಂದು ನಿಂತಿತ್ತು. ಸಂಯೋಜಕರಾಗಿ ಕೆಲಸ ಮಾಡುತ್ತಿದ್ದ ಮಿಸಸ್ ಪ್ರೆಸಿಲ್ಲಾ ಅವರನ್ನು ಹೆಚ್ಚುವರಿ ಹುದ್ದೆಗಳನ್ನು ವಜಾ ಮಾಡುವ ನೆಪ ಹೇಳಿ ಕೆಲಸದಿಂದ ತೆಗೆದು ಹಾಕಿದ್ದರು. ಅವರೇ ರೆಫರ್ ಮಾಡಿದ್ದ, ನಾನು ಕೆಲಸ ಮಾಡುತ್ತಿದ್ದ ಸಂಸ್ಥೆಗೆ ಇಂಗ್ಲಿಷ್ ಭಾಷಾ ಅಧ್ಯಾಪಕರಾಗಿ ಸೇರಿಕೊಂಡರು. ನಾವೀಗ ಸಹೋದ್ಯೋಗಿಗಳಾಗಿದ್ದೆವು.
ಕನ್ನಡ ಮಾಧ್ಯಮದಲ್ಲಿ ಓದಿ ಇಂಗ್ಲಿಷ್ ಭಾಷೆಯನ್ನು ಮ್ಯಾನೇಜ್ ಮಾಡುವಷ್ಟು ಕಲಿಯುವ ನನ್ನಂತ ಮಕ್ಕಳಿಗೆ ನಮ್ಮ ಇಂಗ್ಲೀಷುಗಳ ಬಗ್ಗೆ ಸದಾ ಕೀಳರಿಮೆ ಇರುತ್ತದೆ. ಅದನ್ನು ಹೋಗಲಾಡಿಸಿಕೊಳ್ಳಲು ಇಂಗ್ಲೀಷ್ ಎಂದ ತಕ್ಷಣ ಕಿವಿ ನಿಮಿರಿಸಿಕೊಳ್ಳುವ ಸ್ವಭಾವವಿರುವುದು ಅತ್ಯವಶ್ಯಕ. ನನಗೆ ಬಿಡುವಿದ್ದಾಗಲೆಲ್ಲ ಅವರ ತರಗತಿಗೆ ಹೋಗಿ ಕೂರುತ್ತಿದ್ದೆ. ಅವರು ವ್ಯಾಕರಣದ ಜೊತೆಗೆ ಫಾನಟಿಕ್ಸ್ ಕೂಡ ಕಲಿಸುತ್ತಿದ್ದರು.
ಲಿಜೆನ್ ಅಲ್ಲ ಕನ್ರಯ್ಯ ಅದು ‘ಲಿಸ್ಸೆನ್’
ಬಯೋಲಜಿ ಹೇಳುವಾಗ ‘ಯೋ’ ಶಬ್ದಕ್ಕೆ ಒತ್ತುಕೊಡಬೇಕು. ಬ’ಯೋ’ಲಜಿ… ಹೀಗೆ.
ವ್ಯಾಕರಣದ ನಿಯಮಗಳಿಗೆ ತುಂಬಾ ಒತ್ತು ಕೊಡುತ್ತಿದ್ದರು. ಮಾತನಾಡುವ ಇಂಗ್ಲೀಷನ್ನೇ ಚೆನ್ನಾಗಿ ಮಾತನಾಡಬೇಕು ಎನ್ನುತ್ತಿದ್ದರು. ಮಕ್ಕಳು ತಪ್ಪು ಮಾಡಿದಾಗ ‘ಏಯ್, ಸ್ಪೆಸಿಮೆನ್, ಲಿಸ್ಸೆನ್’ ಎಂದು ಶುರುಮಾಡುತ್ತಿದ್ದರು. ಅವರ ಇಡೀ ಜೀವನ ನಿಯಮಬದ್ಧವಾಗಿತ್ತು. ನಿಯಮ ಪ್ರಕಾರ ನಡೆಯುವುದು ಅವರ ಜೀವನ ತತ್ವವೇ ಆಗಿತ್ತು. ನನ್ನ ಕೆಲಸ ನಾನು ಮಾಡುತ್ತೇನೆ ಉಳಿದವರ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ ಎನ್ನುತ್ತಿದ್ದರು.
ಮಜಾ ಎಂದರೆ ನಾವು ಪಿಕ್ನಿಕ್‌ಗೆ ಹೋಗುವಾಗ ತೆಗೆದುಕೊಂಡು ಹೋಗುವಷ್ಟು ಬುತ್ತಿಯನ್ನು ದಿನವೂ ತರುತ್ತಿದ್ದರು. ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ತಿಂಡಿಗೆ, ಮಧ್ಯಾಹ್ನದ ಊಟಕ್ಕೆ, ಊಟ ಮತ್ತು ಉಪಹಾರದ ನಡುವೆ ತಿನ್ನುವುದಕ್ಕೆ, ಸಂಜೆ ಕಾಫಿಗೂ ಮುನ್ನ ಒಂದಷ್ಟು ಸಲಾಡ್ ಇತ್ಯಾದಿ. ಬೆಳಿಗ್ಗೆ ಎಂಟು ಮುಕ್ಕಾಲಿಗೆ ಬಂದು ಅವರ ಒಂದನೇ ಬ್ಯಾಗನ್ನು ತೆರೆದು ಎಲ್ಲಾ ಬಾಕ್ಸುಗಳನ್ನು ಹರವಿ ಊಟಕ್ಕೆ ಕೂರುತ್ತಿದ್ದರು. ಪುಸ್ತಕಗಳನ್ನು ಇಟ್ಟುಕೊಳ್ಳಲು ಅವರಿಗೆ ಕೊಟ್ಟಿದ್ದ ಬೀರುವಿನ ಕಾಲುಭಾಗವನ್ನು ಉಪ್ಪಿನಕಾಯಿ, ಉಪ್ಪು, ಮುರ್ಕು ಇತ್ಯಾದಿಗಳನ್ನು ತುಂಬಿಸಿಟ್ಟಿದ್ದರು. ಮಕ್ಕಳು ಆ ಕಬರ್ಡಿಗೆ ‘ಪ್ರೆಸಿಲ್ಲಾ ಕಿಚನ್’ ಎಂದು ಹೆಸರಿಟ್ಟಿದ್ದರು. ಅವರು ತಿನ್ನುವುದಕ್ಕಾಗಿಯೇ ಬದುಕಿದ್ದಾರೆ ಎಂದು ಜನರು ಆಡಿಕೊಂಡರೆ ‘ಅಯೋ, ನನ್ನ ಆರೋಗ್ಯ ನನಗೆ! ನಾನು ಕ್ಯಾನ್ಸರ್ ಸರ್ವೈವರ್. ಶುಗರ್ ಬೇರೆ ಬೋನಸ್. ತುಂಬಾ ಹಸಿವಾಗತ್ತೆ. ಎರಡೆರಡು ತಾಸಿಗೆ ಏನಾದ್ರೂ ತಿಂತಾನೆ ಇರ್ಬೇಕು.’ ಎಂದು ಹೇಳಿ ಯಾರಿಗೂ ಕೇರ್ ಮಾಡದೇ ತಿನ್ನುತ್ತಿದ್ದರು. ಆ ವಿಷಯ ಕೇಳಿದಾಗ ನಾನಾಗ್ಲೇ ಭಾರತಿ ಬಿ. ವಿ ಅವರ ‘ಸಾಸಿವೆ ತಂದವಳು’ ಪುಸ್ತಕ ಓದಿದ್ದೆ. ಆಮೇಲೆ ನನ್ನ ಮಟ್ಟಿಗಂತೂ ಅವರ ಮೇಲಿದ್ದ ಗೌರವ ಹೆಚ್ಚಾಯ್ತು. ಆ ಪುಸ್ತಕ ನನಗೆ ಕ್ಯಾನ್ಸರ್ ರೋಗಿಗಳನ್ನು ಹೇಗೆ ನಮ್ಮಂತಯೇ ಒಬ್ಬರ ಹಾಗೆ ನೋಡುವುದನ್ನು ಕಲಿಸಿತು. ಅತಿಯಾದ ಸಿಂಪಥಿ ವಾಕರಿಕೆ ಬರಿಸುವುದಲ್ಲವೇ?! ಏನೋ ಮಾತಿನ ನಡುವೆ ಇದೆಲ್ಲ ನಿಮಗೆ ಕಷ್ಟ ಆಯ್ತಾ ಎಂದು ಕೇಳಿದೆ. ‘ಐ ಸರ್ವೈವ್ಡ್ ಬೈ ಗಾಡ್ಸ್ ಗ್ರೇಸ್’ ಎಂದು ಎಲ್ಲಾ ಕ್ರೆಡಿಟ್ಟನ್ನು ದೇವರಿಗೆ ಕೊಟ್ಟುಬಿಟ್ಟರು.
‘ಒಂದು ರೂ ಕೊಟ್ಟು ಹತ್ತು ರೂ ಕೆಲ್ಸ ತೆಗಿ’ ಎನುವ ಖಾಸಗಿ ಸಂಸ್ಥೆಗಳ ನಿಯಮದ ತೀವ್ರತೆ ಕೆಲಸಗಾರರ ರಜೆಗೆ, ಇಂಕ್ರಿಮೆಂಟ್ ಕಟ್ ಇತ್ಯಾದಿಗಳಿಗೆ ಕಾರಣವಾದಾಗ ಗಟ್ಟಿಯಾಗಿ ಎದುರಾ ಬದುರಾ ನಿಂತು ಕಣ್ಣಿಗೆ ಕಣ್ಣು ಕೊಟ್ಟು ಅವರ ಸುಲಲಿತ ಇಂಗ್ಲೀಷಲ್ಲಿ ಮಾತನಾಡುವುದನ್ನು ನೋಡುವುದೇ ಒಂದು ಚೆಂದ! ಇವೆಲ್ಲಾ ಮಾಡಿ ಯಾಕೆ ಟಾರ್ಗೆಟ್ ಆಗ್ತೀರಾ ಎಂದು ಸುಮ್ಮನೆ ತಮಾಷೆ ಮಾಡುತ್ತಾ ಕೇಳಿದ್ದೆ. ಅದಕ್ಕವರು ‘ಐಯಾಮ್ ಅ ಪ್ರೊಟೆಸ್ಟಂಟ್. ದಟ್ ಇಸ್ ಮೈ ಲೆಗಸಿ.’ ಎಂದು ಘನಗಾಂಭಿರ್ಯದಲ್ಲಿ ಹೇಳಿದ್ದರು.
ದಾಂಪತ್ಯದ ಒಡಕು, ಒಬ್ಬರೇ ನಿಂತು ಮನೆ ಕಟ್ಟಿಸಿದ್ದು, ಅದಕ್ಕೆ ಹಣ ಉಳಿಸಲು ಸಂಜೆ ಟ್ಯೂಟೋರಿಯಲ್ ತಗೊಂಡಿದ್ದು, ಐವತ್ತಾರರ ಆಸುಪಾಸಿನ ಈಗಲೂ ದಣಿವನ್ನು ನೀಗಿಸಿಕೊಳ್ಳುತ್ತಲೆ ದುಡಿಯೋದು ಅಚ್ಚರಿ ಎನಿಸುವಾಗಲೇ ನಾವಿಬ್ಬರೂ ನಮಗೆ ಒಪ್ಪವಾಗದ ವಿಚಾರಗಳ ಬಗ್ಗೆ ತರಗತಿಯಲ್ಲೇ ಕಚ್ಚಾಡಿದ್ದೇವೆ. ಅದೆಲ್ಲಾ ಆದಾಗಲೂ ಅವರೇ ಸಂಜೆ ಫೋನ್ ಮಾಡಿ ಮಾತಾಡಿಸಿದ್ದಿದೆ. ‘ಗುಡ್, ಯಂಗ್ ಪೀಪಲ್ ಶುಡ್ ಸ್ಪೀಕಪ್ ದೇರ್ ಹಾರ್ಟ್’ ಎಂದು ಕರೆಯ ಕೊನೆಯಲ್ಲಿ ದೃಢವಾದ ದನಿಯಲ್ಲೇ ಸೇರಿಸುತ್ತಾರೆ.
ನನಗಂತೂ ಪರವೂರಿನಲ್ಲಿ ಖಾಯಿಲೆ ಬಂದು ಬಿದ್ದರೆ ಯಾರು ನೋಡಿಕೊಳ್ಳುತ್ತಾರೆ ಎನಿಸಿದಾಗೆಲ್ಲ ಭಯವಾಗುತ್ತದೆ. ಆರೋಗ್ಯವೆ ಭಾಗ್ಯ ಎನಿಸುತ್ತದೆ. ಆಗೆಲ್ಲಾ ಮಿಸೆಸ್ ಪ್ರೆಸಿಲ್ಲಾ ನೆನಪಾಗುತ್ತಾರೆ. ಪ್ರೆಸಿಲ್ಲಾ ಅವರ ಟೈಮ್ ಟು ಟೈಮ್ ಊಟ ನೆನಪಾಗುತ್ತದೆ. ಅವರು ಬಾಕ್ಸು ತೆಗೆದಾಗ ಹೊಮ್ಮವ ಅಡುಗೆ ಘಮ ಸ್ವರ್ಗದ ಸೀಮೆಯ ಸುವಾಸನೆಯ ಹಾಗೆ ಮತ್ತೆ ಮತ್ತೆ ಮರುಕಳಿಸುತ್ತದೆ. ಅವರ ಊಟದ ರುಚಿಯೇ ಅವರನ್ನು ನಿತ್ಯ ಬದುಕುವಂತೆ ಮಾಡಿದೆಯೇನೋ ಅನಿಸುತ್ತದೆ. ಯಾಕೆಂದರೆ ಊಟದ ರುಚಿ ಬದುಕಿನ ರುಚಿಯೂ ಹೌದಲ್ಲವೇ?! ಮತ್ತೊಂದು ವಿಷಯ; ಇನ್ನೇನು ಆಗುವುದೇ ಇಲ್ಲ ಅನಿಸಿದಾಗಲೆಲ್ಲ ಉತ್ಸಾಹ ಅಡಗಿ ಕೂತಿರುತ್ತದೆ. ಪೇಸ್ಟಿನಲ್ಲಿರುವ ಹಾಗೆ. ಬಾಚಣಿಗೆಯೋ ಲಟ್ಟಣಿಗೆಯಿಂದಲೋ ಅದನ್ನು ಹೊರಗೆ ತೆಗೆಯಬೇಕು. ಮಿಸಸ್ ಪ್ರೆಸಿಲ್ಲಾ ಮಾರಿಸನ್ ಡಾಸನ್ ಅವರ ಜೀವನದ ಹಲವು ಮುಖ್ಯ ಜಂಕ್ಷನ್ನುಗಳಲ್ಲಿ ಮಾಡಿದರಲ್ಲ, ಹಾಗೆ!
ಸಾಹಿತ್ಯ, ರಂಗಭೂಮಿ ಮತ್ತು ಸಿನಿಮಾ ಇವರ ಆಸಕ್ತಿಯ ಕ್ಷೇತ್ರಗಳು. ಇವರ ಹಲವು ಕವಿತೆಗಳು, ಕಥೆಗಳು ನಾಡಿನ ಪ್ರಮುಖ ಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಇಕ್ಬಾಲುನ್ನೀಸಾ ಹುಸೇನ್ ಅವರ ‘ಪರ್ದಾ & ಪಾಲಿಗಮಿ’ ಕಾದಂಬರಿಯನ್ನು ಕನ್ನಡಕ್ಕೆ ತಂದಿದ್ದಾರೆ. ಛoದ ಪುಸ್ತಕ ಪ್ರಕಾಶನ ಅದನ್ನು ಹೊರತಂದಿದೆ. Dmitrij Gawrisch ಅವರ ‘ಬ್ಯಾರೆನ್ ಲ್ಯಾಂಡ್’ ಎನ್ನುವ ಜರ್ಮನ್ ನಾಟಕವನ್ನು ಅನುವಾದ ಮಾಡಿದ್ದಾರೆ. ನೀಲಕುರಿಂಜಿ ಇವರ ಪ್ರಥಮ ಪ್ರಕಟಿತ ಕಥಾಸಂಕಲನ.