ಯಕ್ಷಗಾನ ಭಾಗವತಿಕೆಯಲ್ಲಿ ಮದ್ದಳೆಯದ್ದು ಪ್ರಧಾನ ಪಾತ್ರ. ಬಲಿಪ ನಾರಾಯಣ ಭಾಗವತರಿಗೆ ಭಾಗವತಿಕೆ ಕಲಿಯುವುದಕ್ಕೆ ನೆರವಾದ ಮದ್ದಳೆಗಾರರು ಪ್ರಮುಖರೇ.  ಮದ್ದಳೆಗಾರರಾದ  ದಿವಂಗತ ಕುದುರೆಕೋಡ್ಲು ರಾಮ ಭಟ್ಟರು ಮತ್ತು ದಿವಂಗತ ಕೆಮ್ಮಣ್ಣು ನಾರ್ಣಪ್ಪಯ್ಯ ಅವರ ಪ್ರೋತ್ಸಾಹ, ತಿದ್ದುವಿಕೆಯು ಬಲಿಪರ ಭಾಗವತಿಕೆ ಶೈಲಿಯ ಮೇಲೆ ಬಹಳಷ್ಟು ಪ್ರಭಾವ ಬೀರಿದೆ. ಪ್ರಸ್ತುತ ಸರಣಿಯಲ್ಲಿ ಆ ಬಗ್ಗೆ ಬಲಿಪರು ಹೇಳಿಕೊಂಡಿದ್ದಾರೆ. ‘ಬಲಿಪ ಮಾರ್ಗ’ದಲ್ಲಿ ಕೃಷ್ಣ ಪ್ರಕಾಶ್ ಉಳಿತ್ತಾಯ ಬರಹ  ಇಲ್ಲಿದೆ. 

 

ಬಲಿಪ ನಾರಾಯಣ ಭಾಗವತರು ಮದ್ದಳೆಗಾರರಾದ  ದಿವಂಗತ ಕುದುರೆಕೋಡ್ಲು ರಾಮ ಭಟ್ಟರು ಮತ್ತು ದಿವಂಗತ ಕೆಮ್ಮಣ್ಣು ನಾರ್ಣಪ್ಪಯ್ಯ ಇವರಲ್ಲಿ ಅತ್ಯಂತ ಗೌರವವನ್ನು ಇರಿಸಿಕೊಂಡವರು. ಹಿರಿಯ ಬಲಿಪ ನಾರಾಯಣ ಭಾಗವತರ ನೆಚ್ಚಿನ ಮದ್ದಳೆಗಾರರಾಗಿದ್ದ ಈ ಮಹನೀಯರ ನುಡಿತಗಳು ಕೇಳ್ಮೆಯಲ್ಲಿ ಭಿನ್ನತರವಾಗಿದ್ದರೂ ಅವು ಬಲಿಪ ನಾರಾಯಣ ಭಾಗವತರ ಗಾನದೊಂದಿಗೆ ಅಪೂರ್ವರೀತಿಯಲ್ಲಿ ಸಾಂಗತ್ಯವನ್ನು ಹೊಂದುತ್ತಿದ್ದವು.  ಹಿರಿಯರೆನ್ನುವಂತೆ ಕುದುರೆಕೋಡ್ಲು ರಾಮ ಭಟ್ಟರ ಮದ್ದಳೆವಾದನ ನವಿರಾದದ್ದು. ನುಡಿಸಾಣಿಕೆಯಲ್ಲಿ ನಯ ನಾಜೂಕು ಇರುತ್ತಿತ್ತು. ಕುದುರೆಕೋಡ್ಲು ರಾಮ ಭಟ್ಟರು ಹಿರಿಯ ಬಲಿಪನಾರಾಯಣ ಭಾಗವತರಿಗೆ ಬಹುಕಾಲದ ಕಿರಿಯ ಒಡನಾಡಿ ಮದ್ದಳೆಗಾರರಾಗಿದ್ದರು. ಮೇಳದ ತಿರುಗಾಟವೂ ಬಲಿಪ ನಾರಾಯಣ ಭಾಗವತರ ಜತೆಗಿದ್ದುದೇ ಆಗಿದ್ದಿತು. ಆನಂತರದ ಕಾಲದಲ್ಲಿ ಕಿರಿಯ ಬಲಿಪ ನಾರಾಯಣ ಭಾಗವತರಿಗೆ ಜಾಗಟೆ ಕೊಟ್ಟು ಆಶೀರ್ವಾದ ಮಾಡಿ ಅವರನ್ನು ಭಾಗವತಿಕೆ ಮಾಡುವಂತೆ ಪ್ರೇರೇಪಿಸಿ ರೂಪಿಸಿದವರೂ ಕುದುರೆಕೋಡ್ಲು ರಾಮ ಭಟ್ಟರೇ.

ಕೆಮ್ಮಣ್ಣು ನಾರ್ಣಪ್ಪಯ್ಯನವರಲ್ಲಿ ಬೀಸು ಬಿರುಸಾದ ವಾದನ ಕೌಶಲವಿರುತ್ತಿತ್ತು. ನಾಜೂಕಿಗಿಂತಲೂ ಓಜಸ್ವಿಯಾದ ವಾದನ ವೈಶಿಷ್ಟ್ಯವೆಂದರೂ ಸರಿಯೇ. ತಾಡನದ ಸಾಂದ್ರತೆ ಅಧಿಕ. ಹಿರಿಯ ಬಲಿಪ ನಾರಾಯಣ ಭಾಗವತರಿಗೆ ಸರಿಜೋಡಿಯಾಗಿ ಭಾಗವತಿಕೆಗೆ ಮದ್ದಳೆಯ ಸಾಂಗತ್ಯ ಕೊಟ್ಟವರು. ಕಿರಿಯ ಬಲಿಪ ನಾರಾಯಣ ಭಾಗವತರು ಅತ್ಯಂತ ಗೌರವದಿಂದ ಕಾಣುತ್ತಿದ್ದ ಹಿರಿಯರು.

ಇವರಿಬ್ಬರ ಜತೆಗೂ ಬಲಿಪ ನಾರಾಯಣ ಭಾಗವತರು ಭಾಗವತಿಕೆ ಮಾಡಿದ್ದಾರೆ. ಇವರ ಬಗೆಗೆ ಹೇಳುವಾಗ ಬಲಿಪರ ಕಣ್ಣುಗಳು ಮಿಂಚುತ್ತವೆ. ಹೃದಯ ಮಗುವಿನಂತೆ ಕುಣಿಯುತ್ತದೆ. ಅವರ ಹಿರಿತನದ ಮುಂದೆ ತಾವು ಮಗುವಾಗುತ್ತಾರೆ. ತಮ್ಮದೇ ಶೈಲಿಯಲ್ಲಿ ಇವರಿಬ್ಬರ ವಾದನ ಕೌಶಲವನ್ನು ಕುರಿತು ಬಲಿಪ ನಾರಾಯಣ ಭಾಗವತರ ಮಾತು ಹೀಗಿದೆ-
‘ಕುದುರೆಕೋಡ್ಲು ರಾಮ ಭಟ್ಟರ ಚೆಂಡೆ ಮದ್ದಳೆ ಎರಡರಲ್ಲೂ ಸೈ. ಮದ್ದಳೆವಾದನ ಶುದ್ಧ ಯಕ್ಷಗಾನೀಯ ಮದ್ದಳೆವಾದನ. ಎಡ-ಬಲಗಳ ಹೊಂದಾಣಿಕೆ ಅಷ್ಟು ಸುಖ. ಚೆಂಡೆಯನ್ನು ¨ಭಾಗವತರು ಹಾಡುವ ಶ್ರುತಿಗೆ ಸುರ್ ತಾನ್ (ಸುಲ್ತಾನ್) ನುಡಿಸಲು ಆರಂಭಿಸಿದ್ದು ಕುದುರೆಕೋಡ್ಲು ರಾಮ ಭಟ್ಟರು ಎಂಬ ಮಾತೂ ಇದೆ. ಅವರು ನುಡಿಸುವ ಛಾಪು(ಮದ್ದಳೆಯ ಬಲ ಭಾಗಕ್ಕೆ ಹಸ್ತದಿಂದ ತಾಡಿಸಿದಾಗ ಹೊರಡುವ ಷಡ್ಜ ಸ್ವರ) ಅಂದರೆ ಶುದ್ಧ. ಅದರಲ್ಲಿ ಆಧಾರ ಶ್ರುತಿಯಲ್ಲದೆ ಬೇರೇನೂ ಕೇಳಿಸದು! (ಅಂದರೆ, ಛಾಪು ಶುದ್ಧವಾಗಿದ್ದು ಅಲ್ಲಿ ಅಶುದ್ಧವಾದ ಬೇರೆಯಾವುದೇ ನಾದ ಬಾರದು. ಅದು ಹೊರಡಿಸುವುದು ಶುದ್ಧ ಷಡ್ಜವನ್ನು ಮಾತ್ರ.).

“ಪದದಿಂದ ಸ್ವಲ್ಪವೂ ಭಾರ ಅವರ ಮದ್ದಳೆಯ ನುಡಿತ ಇರಲಿಕ್ಕಿಲ್ಲ”. ಅಂದರೆ ಬಲಿಪರು ವಿವರಿಸ ಹೊರಟಿರುವುದು  ರಾಮ ಭಟ್ಟರು ಮದ್ದಳೆಯ ನುಡಿಸಿದಾಗ ಹೊರಡಿಸುವ ಶಬ್ದದ ಪ್ರಮಾಣ ಭಾಗವತಿಕೆಯ ಸ್ವರಭಾರಕ್ಕಿಂತ ಅಥವಾ ಸ್ವರಪ್ರಮಾಣಕ್ಕಿಂತ ಅಧಿಕವಿರದು ಎಂಬುದನ್ನು. “ಅವರ ಮದ್ದಳೆ ಎಲ್ಲೂ ಮದ್ದಳೆಗೆ ಒರಸಿಕೊಂಡು ಹೋಗದು”. ಇದು ಬಹಳ ಸುಂದರವಾದ ಉಕ್ತಿ. ಅಂದರೆ ನುಡಿಸುವಾಗ ನುಡಿತದ ಅಕ್ಷರಗಳು ಎಲ್ಲೂ ಅಸ್ಪಷ್ಟವಾಗಿರದು. ತಾಡನಗಳೆಲ್ಲವೂ ದೃಢವಾಗಿದ್ದು ಆದರೆ ಮೃದುವಾಗಿ ಇರುತ್ತಿದ್ದವು. ಪದ್ಯದ ಭಾರಕ್ಕಿಂಥ ಅಧಿಕವಾದ ನಾದವನ್ನು ಹೊರಡಿಸದೆ ಪದ್ಯದ ಒಳಗಿದ್ದಿರುತ್ತಿತ್ತು. ಪದ್ಯವನ್ನು ಮೀರಿ ಎಂದೂ ಹೋಗುತ್ತಿರಲಿಲ್ಲ. ಭಾಗವತಿಕೆಯನ್ನು “ತಿಂದು ಹಾಕುತ್ತಿರಲಿಲ್ಲ”. ಅಂಥ ನಮ್ಯತೆ ಮದ್ದಳೆವಾದನದಲ್ಲಿರುತ್ತಿತ್ತು.  ಉಕ್ಕಿನಡ್ಕದ ಭಗವತಿ ಮೇಳದಲ್ಲಿ ಬಳ್ಳಂಬೆಟ್ಟು ಮೇಳದಲ್ಲಿ ರಾಮಭಟ್ಟರು ಮತ್ತು ಶಿವ ಮದ್ಲೆಗಾರರ ಒಂದು ಗಂಟೆ ನಲವತ್ತು ನಿಮಿಷದ ಪೀಠಿಕೆ. ಮೇಳದ ಯಜಮಾನರು ಬಂದು ಇಬ್ಬರಲ್ಲೂ ದಯವಿಟ್ಟು ನಿಲ್ಲಿಸಿ ಎಂದು ಕೇಳಿಕೊಂಡಾಗಲೇ ಇಬ್ಬರೂ ನಿಲ್ಲಿಸಿದರಂತೆ. ಅಂದಿನ ಭಾಗವತಿಕೆಗೆ ಜೋಡಾಟದ ಭಾಗವತಿಕೆ ಚಕ್ಕುಲಿ ಶಂಭಟ್ಟರು ಮತ್ತು ಬಲಿಪ ನಾರಾಯಣ ಭಾಗವತರು.

ಕೆಮ್ಮಣ್ಣು ನಾರ್ಣಪ್ಪಯ್ಯನವರ ನುಡಿತಗಳಾದರೋ ಓಜಸ್ವಿ. ನುಡಿಗಳ ಪಾಟಾಕ್ಷರಗಳ ಗಡಣವೂ, ತಾಡನ ಸಾಂದ್ರತೆಯೂ ಮತ್ತು ಕೊಡುವ ಛಾಪುವಿನ ಗತ್ತು ಗಾಂಭೀರ್ಯವೂ ದೊಡ್ಡದೇ ಆಗಿತ್ತು. ಹಿರಿಯ ಬಲಿಪ ನಾರಾಯಣ ಭಾಗವತರೂ ಮತ್ತು ಕೆಮ್ಮಣ್ಣು ನಾರ್ಣಪ್ಪಯ್ಯನವರ ಜೋಡಿ ಮಾಡಿದ ಮೋಡಿಯೂ ನೆನಪಲ್ಲಿರುವಂಥದ್ದು ಎಂದು ಕಿರಿಯ ಬಲಿಪ ನಾರಾಯಣ ಭಾಗವತರು ನೆನಪಿಸಿಕೊಳ್ಳುತ್ತಾರೆ.

ನಾರ್ಣಪ್ಪಯ್ಯನವರು ಕಿರಿಯ ಬಲಿಪರಲ್ಲಿ ಹೇಳುತ್ತಿದ್ದ ಮಾತು-ಪ್ರೇಕ್ಷಕರಿಗೆ ನಮ್ಮ ಕಲೆ (ನುಡಿಸಾಣಿಕೆ-ಹಾಡು) ಬೇಕು ಬೇಕು ಅಂತ ಮಾಡಬೇಕು ನಾವು ಎಂದು. ಹಾಗೆಯೇ ಮದ್ದಳೆ-ಭಾಗವತಿಕೆಯನ್ನು ಮೆರೆಸಿದ್ದಾರೆ ಎಂಬುದು ಬಲಿಪರ ಅನುಭವದ ಮಾತು. ಅಗರಿ ಶ್ರೀನಿವಾಸ ಭಾಗವತರು ಮತ್ತು ವಿದ್ವಾನ್ ದಾಮೋದರ ಮಂಡೆಚ್ಚರೊಡನೆಯೂ ಮದ್ದಳೆ ನುಡಿಸಿದ್ದಾರೆ. ಅವರೊಡಗಿನ ಜತೆಗಾರಿಕೆಯಲ್ಲಿ ಮೂಡುಬಿದಿರೆಯಲ್ಲಿ ನಡೆದ ತಾಳಮದ್ದಳೆಯಲ್ಲಿ ಮುಕ್ಕಾಲು ಗಂಟೆಗಳ ಕಾಲ ಪ್ರೇಕ್ಷಕರಿಂದ ಅದೂ ಆಟ (ಯಕ್ಷಗಾನ, ತಾಳಮದ್ದಳೆಯಲ್ಲ) ಬರಿಯ ಕಿರಿಯ ಬಲಿಪ ನಾರಾಯಣ ಭಾಗವತರು ಮತ್ತು ಕೆಮ್ಮಣ್ಣು ನಾರ್ಣಪ್ಪಯ್ಯನವರ ಮದ್ದಳೆವಾದನಕ್ಕೆ ಪ್ರೇಕ್ಷಕರ ಗಡಚಿಕ್ಕುವ ಚಪ್ಪಾಳೆಯ ಕರತಾಡನವನ್ನು ಈಗಲೂ ವಿಸ್ಮಯವೆಂಬಂತೆ ನೆನಪಿಸಿಕೊಳ್ಳುತ್ತಾರೆ.

ಕೆಮ್ಮಣ್ಣು ನಾರ್ಣಪ್ಪಯ್ಯನವರ ಮದ್ದಳೆವಾದನದಲ್ಲಿ ಪ್ರೇಕ್ಷಕರನ್ನು ಹಿಡಿದಿಡುವ ಏರಿಳಿತಗಳ ಸಮ್ಮಿಳಿತವಿರುತ್ತಿತ್ತು. ಕೇವಲ ಚಾಪು ಮತ್ತು ಮೆಲುದನಿಯ ನುಡಿಗಳಿಂದ ಪದ್ಯದ ಒಂದು ಘಟ್ಟಕ್ಕಾಗುವಾಗ ಗಡಚಿಕ್ಕುವ ಪಾಟಸಮೂಹಗಳಿಂದ ಭಾಗವತಿಕೆಯನ್ನು ಅಲಂಕರಿಸುವ ವ್ಯುತ್ಪತ್ತಿಯುಳ್ಳ ಮದ್ದಳೆವಾದನ ಕ್ರಮವಾಗಿದ್ದಿರಬಹುದು. ಕೆಮ್ಮಣ್ಣು ನಾರ್ಣಪ್ಪಯ್ಯನವರು ಬಹುಕಾಲ ಮೇಳದ ತಿರುಗಾಟವನ್ನು ಮಾಡಿದವರಲ್ಲ. ಅವರ ಶಿಷ್ಯರಾದ ನೆಡ್ಲೆ ನರಸಿಂಹ ಭಟ್ಟರಂಥವರನ್ನು ಯಕ್ಷಗಾನಕ್ಕೆ ಕೊಟ್ಟ ಕೀರ್ತಿ ಇವರ ಪಾಲಿಗಿದೆ. ನಾರ್ಣಪ್ಪಯ್ಯರ ಮದ್ದಳೆವಾದನದಲ್ಲಿ ಪದ್ಯದ ನಡುವೆ ಬಿಡುವ ವಿರಾಮದ ಜಾಗದಲ್ಲಿ ನುಡಿಸುವ ಪೆಟ್ಟುಗಳು ಅತ್ಯಂತ ಮನೋಹರವಾಗಿತ್ತಂತೆ. ಪದ್ಯಹೇಳುವಾಗ ನಮ್ಯವಾದ ಮೃದು ನುಡಿಗಲೂ ಇತ್ತಂತೆ. ಅಂಥ ಮದ್ಲೆಗಾರರು ಇನ್ನೊಬ್ಬರಿಲ್ಲ ಎಂಬುದು ಬಲಿಪರ ಅಭಿಪ್ರಾಯ.

ಕೆಮ್ಮಣ್ಣು ನಾರ್ಣಪ್ಪಯ್ಯನವರಿಗೆ ಕಿರಿಯ ಬಲಿಪ ನಾರಾಯಣ ಭಾಗವತರೊಡನೆ ಮೇಳದ ತಿರುಗಾಟ ಮಾಡಬೇಕೆಂಬ ಬಯಕೆಯೂ ಇತ್ತು. ಅದನ್ನು ನೇರವಾಗಿ ಬಲಿಪರಲ್ಲಿ ಹೇಳಿದ್ದರು. ಬಲಿಪರ ಆ ತಿರುಗಾಟದಲ್ಲಿ ಮದ್ಲೆಗಾರ (ಪ್ರಧಾನ ಮದ್ಲೆಗಾರರಾಗಿ) ನೆಡ್ಲೆ ನರಸಿಂಹ ಭಟ್ಟರಿಂದ್ದುದರಿಂದ ಇದು ಅನಿವಾರ್ಯವಾಗಿ ಇದು ನೆರವೇರಲಿಲ್ಲ. ಆದರೂ ಆಟ ಹತ್ತಿರವಿದ್ದಾಗಲೆಲ್ಲ ಬಲಿಪರ ಜತೆಯಾಗಿ ಪೀಠಿಕೆಗೆ ಮದ್ಲೆಗೆ ಕೂತರೆ ಬೆಳಗಿನವರೆಗೂ ಮದ್ದಳೆ ನುಡಿಸಿ ಹೋಗುತ್ತಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲೂ ನಾರ್ಣಪ್ಪಯ್ಯನವರು ದುಡಿಯುತ್ತಿದ್ದು ತಮ್ಮ ವೃದ್ಧಾಪ್ಯದಲ್ಲಿ ಮೂಡುಬಿದ್ರೆಯ ಜೈನ ಬಸದಿಯ ಸಮೀಪದ ಮನೆಯಲ್ಲಿ ವಾಸವಾಗಿದ್ದು ಯಕ್ಷಗಾನ ಕಲೆಯನ್ನು ಪ್ರೀತಿಸಿದ ಕಲಾವಂತರಾಗಿದ್ದ ಮಹನೀಯ ಕಲಾವಿದರು.

ಕೆಮ್ಮಣ್ಣು ನಾರ್ಣಪ್ಪಯ್ಯನವರ ಮದ್ದಳೆವಾದನದಲ್ಲಿ ಪ್ರೇಕ್ಷಕರನ್ನು ಹಿಡಿದಿಡುವ ಏರಿಳಿತಗಳ ಸಮ್ಮಿಳಿತವಿರುತ್ತಿತ್ತು. ಕೇವಲ ಚಾಪು ಮತ್ತು ಮೆಲುದನಿಯ ನುಡಿಗಳಿಂದ ಪದ್ಯದ ಒಂದು ಘಟ್ಟಕ್ಕಾಗುವಾಗ ಗಡಚಿಕ್ಕುವ ಪಾಟಸಮೂಹಗಳಿಂದ ಭಾಗವತಿಕೆಯನ್ನು ಅಲಂಕರಿಸುವ ವ್ಯುತ್ಪತ್ತಿಯುಳ್ಳ ಮದ್ದಳೆವಾದನ ಕ್ರಮವಾಗಿದ್ದಿರಬಹುದು

ಅದು ಕೂಡ್ಲು ಮೇಳದ ಆಟ. ಅಜ್ಜ ಕೆಮ್ಮಣ್ಣು ನಾರ್ಣಪ್ಪಯ್ಯ ಮತ್ತು ಬಲಿಪ ನಾರಾಯಣ ಭಾಗವತರು ಒಟ್ಟಿಗೆ ಹೋದದ್ದನ್ನು ನೆನಪಿಸಿಕೊಳ್ಳುತ್ತಾರೆ. ಇದು ಜರುಗಿದ್ದು ಕಾಂತಾವರದಲ್ಲಿ ನಡೆದ ಆಟ. ಅಂದಿನ ಕೆಮ್ಮಣ್ಣು ನಾರ್ಣಪ್ಪಯ್ಯನವರ ಮದ್ದಳೆಯ ಶೈಲಿಯ ಬಗೆಯನ್ನು ನೆನಪಿಸಿ ಕೊಂಡ ಬಗೆ ಇದು. ಅಜ್ಜ ಬಲಿಪರ ಹಾಡು ಅಂಗದ ಸಂಧಾನ ಪ್ರಸಂಗ. ಶಂಕರನಾರಾಯಣ ಸಾಮಗರ ಅಂಗದ.

ಪಾರ್ತಿಸುಬ್ಬ ಕವಿಯ ಕುರುಂಜಿ ಅಷ್ಟತಾಳದ ಹಾಡು “ಯಾರಯ್ಯಾ ಕಪಿ ಯಾರಯ್ಯ” ಎಂದು ಹಾಡನ್ನು ಎತ್ತಿಕೊಂಡಲ್ಲಿಗೆ ಛಾಪು -ಮದ್ದಳೆಯ ಕರಣೆಗೆ ಹಸ್ತದಿಂದ ತಾಡಿಸುವಾಗ “ತಾಂ” ಎಂಬ ನಾದ ಬರುತ್ತದೆ; ಅದಕ್ಕೆ ಚಾಪು ಎಂದು ಹೆಸರಿಸುತ್ತಾರೆ- ಬರೇ ಛಾಪು ಮಾತ್ರ ನುಡಿಸಿದರು.

‘ಯಾರಯ್ಯ ಬಂದವ ನೀನು’ ಇನ್ನೊಂದು ಛಾಪು ನುಡಿಸಿದರು-ನಾರ್ಣಪ್ಪಯ್ಯ.

“ನಿನ್ನನ್ಯಾರಟ್ಟಿದರು ಕಾರ್ಯವೇನು” ಎಂದು ಹಾಡಿದಲ್ಲಿಗೆ ಎರಡು ಛಾಪು (ತಾಂ ತಾಂ) ನುಡಿಸಿದರು.

“ನೋಡೆ ಮೂರುಕಣ್ಣವನಾದರೇನು” ಅಲ್ಲಿಗೆ ಮೂರು ಛಾಪು (ತಾಂ ತಾಂ ತಾಂ) ನುಡಿಸಿದರಂತೆ.

“ದ್ವಾರಪಾಲಕರನಂಜಿಸಿಹೊಕ್ಕುಬಲುಮೊನೆಗಾರನಂದದಿಬಲುಗರ್ವದಿಕುಳಿತಿರ್ಪೆ” ಇಲ್ಲಿ ಸಣ್ಣದನಿಯ ನುಡಿತಗಳಿಂದ ಮಧುರ ಗುಣದ ಪಾಟಸಮುಚ್ಛಯಗಳಿಂದ ನುಡಿಸುತ್ತಾ “ಕುಳಿತಿರ್ಪೆ” ಎಂಬಲ್ಲಿಗೆ ಓಜಸ್ವಿಯಾದ ವಿಧವಿಧದ ಘನವಾದ ಪಾಟಾಕ್ಷರಗಳನ್ನು ಮದ್ದಳೆಯಲ್ಲಿ ನುಡಿಸಿದಾಗ ಪಡಿಮೂಡಿದ ವಿಸ್ಮಯವನ್ನು ಬಲಿಪರು  ನೆನಪಿಸಿ ಹೇಳುತ್ತಾರೆ.

ಇಲ್ಲಿ ಸಣ್ಣ ನಾದವನ್ನು ಹೊರಡಿಸುತ್ತಾ ಮದ್ದಳೆಯಲ್ಲಿ ನುಡಿಗಳನ್ನು ನುಡಿಸಿ ಉಡಾಪೆಗಾಗುವಾಗ (ಯಕ್ಷಗಾನದಲ್ಲಿ ಅಷ್ಟತಾಳದಿಂದ ಏಕತಾಳಕ್ಕೆ ತಿರುಗುವ ಪ್ರಸಕ್ತಿಗೆ ಉಡಾಪೆಗೆ ತಿರುಗುವುದು ಎಂಬ ವಾಗ್ರೂಢಿ ಇದೆ) ಓಜಸ್ವಿಯಾದ “ತಕತಕತಾಂ” ಎಂಬ ನುಡಿತಕ್ಕೆ ಇಡೀ ಸಭೆಯೇ ನಿಬ್ಬೆರಗಾಗುವಂತೆ ನುಡಿಸಿದ್ದರು. ಇದು ಅಂದಿನ ನುಡಿತವನ್ನು ಬೆರಗುಗಣ್ಣಿನಿಂದ ಬಲಿಪರು ವಿವರಿಸುವ ರೀತಿ. ನಾರ್ಣಪ್ಪಯ್ಯನವರು ಹೇಳುತ್ತಿದ್ದರಂತೆ ಕಿರಿಯ ಬಲಿಪ ನಾರಾಯಣ ಭಾಗವತರಲ್ಲಿ ಹೇಳುತ್ತಿದ್ದರಂತೆ ಅಷ್ಟತಾಳದಲ್ಲಿ ನಲವತ್ತೆಂಟು ಪದ್ಯ ಹಾಡಿದರೆ ನಲವತ್ತೆಂಟು ರೀತಿಯ ನುಡಿತಗಳನ್ನು ನುಡಿಸುವೆ ಎಂದು ಇದು ಅವರ ವಾದನ ವಿದ್ವತ್ತೆಗೆ ಸಾಕ್ಷಿ. ಬಲಿಪರಿಗೂ ನಾರ್ಣಪ್ಪಯ್ಯನವರ ಮದ್ದಳೆಗೆ ಹಾಡುವುದೆಂದರೆ ಹಬ್ಬ. ಅವರ ಮದ್ದಳೆವಾದನ ಮಾತ್ರವಲ್ಲ ಜತೆಗಿನ ಪದ್ಯವನ್ನೂ ಮೇಲೆ ಹಾಕಿ ಬಿಡುವ ಶಕ್ತಿ ಇವರ ಮದ್ದಳೆವಾದನದಲ್ಲಿತ್ತು ಎಂಬುದು ಬಲಿಪರ ಅಭಿಪ್ರಾಯ. ಅವರ ಜತೆಗೆ ತುಂಬ ಕಾರ್ಯಕ್ರಮಕ್ಕೆ ಜತೆಯಾಗಿದ್ದರಂತೆ. ನರಸಿಂಹ ಭಟ್ಟರು ಅವರ ಶಿಷ್ಯರಾದರೂ ನಾರ್ಣಪ್ಪಯ್ಯರ ರೀತಿಯ ಮದ್ದಳೆವಾದನವಲ್ಲ.

ಇವರುಗಳ ವಿದ್ವತ್ತೆ ಕೇವಲ ಮದ್ದಳೆವಾದನದಲ್ಲಿ ಮಾತ್ರವಲ್ಲ ಪ್ರಸಂಗ ಜ್ಞಾನ ಅರ್ಥಜ್ಞಾನದಲ್ಲೂ ಇತ್ತು. ಭಾಗವತನಿಗೆ ಒತ್ತಾಸೆಯಾಗಿ ನಿಲ್ಲುವಂಥ ಪ್ರಸಂಗದ ನಡೆಯ ಬಗೆಗೂ ಮತ್ತು ಪ್ರಸಂಗದ ದಾರಿ ಬಿಟ್ಟು ಹೋಗುವ ವೇಷಧಾರಿ ಅರ್ಥಧಾರಿಗಳಿಗೂ ಎಚ್ಚರಕೊಡುವ ವ್ಯುತ್ಪನ್ನವೂ ಇವರಲ್ಲಿದ್ದವು. ತಾಳಮದ್ದಳೆ-ಯಕ್ಷಗಾನದಲ್ಲಿ ಪದ್ಯದ ಆಶಯ ಬಿಟ್ಟೋ ಅಥವಾ ಪದ್ಯದ ಅರ್ಥಮೀರಿಯೋ ಮಾತನಾಡಿದರೆ ಆಗಿನ ಮದ್ದಳೆಗಾರರು ಛಾಪು ನುಡಿಸಿ ಭಾಗವತನಿಗೆ ಸೂಚನೆ ಕೊಡುವ ಕ್ರಮವೂ ಇದ್ದಿತ್ತು.

ಇದನ್ನು ಲೆಕ್ಕಿಸದೆ ಅರ್ಥಧಾರಿ ಮಾತನಾಡಲು ತೊಡಗಿದರೆ ಮೇಲಿಂದಮೇಲೆ ಛಾಪು ಕೊಡುವ ಛಾತಿಯೂ ಮದ್ದಳೆಗಾರರಿಗಿತ್ತು. ಅಂಥವನ್ನು ಉಳಿದವರು ಗೌರವಿಸುವ ಸೌಜನ್ಯವೂ ಕಾಣಬಹುದಿತ್ತು. ಇಂಥ ಮದ್ದಳೆಗಾರರೇ ಕುದುರೆಕೋಡ್ಲು ರಾಮ ಭಟ್ಟರು ಮತ್ತು ಕೆಮ್ಮಣ್ಣು ನಾರ್ಣಪ್ಪಯ್ಯನವರು. ಅರ್ಕುಳದಲ್ಲಿ ನಡೆದ ತಾಳಮದ್ದಳೆಯಲ್ಲಿ ನೆಡ್ಲೆ ನರಸಿಂಹ ಭಟ್ಟರ ಚೆಂಡೆವಾದನ, ಕೆಮ್ಮಣ್ಣು ನಾರ್ಣಪ್ಪಯ್ಯನವರ ಮದ್ದಳೆವಾದನ ಮತ್ತು ಕಿರಿಯ ಬಲಿಪ ನಾರಾಯಣ ಭಾಗವತರ ಭಾಗವತಿಕೆ. ಅತಿಕಾಯ-ರಾವಣವಧೆ ಪ್ರಸಂಗ. “ಕಂಡನು ದಶವದನ” ಪದ್ಯದ ಬಲಿಪ-ಕೆಮ್ಮಣ್ಣು-ನೆಡ್ಲೆಯವರ ಪ್ರಸ್ತುತಿಗೆ ಶೇಣಿ ಗೋಪಾಲಕೃಷ್ಣ ಭಟ್ಟರು ಯಾವುದೇ ಅರ್ಥಮಾತನಾಡದೆ “ಇದೇ ಸಾಕಲ್ಲ……. ರಾಮನ ಸಾಕ್ಷಾತ್ಕಾರವಾಯ್ತಲ್ಲ..” ಎಂದು ಅರ್ಥ ಮಾತನಾಡದೆ ನಿಲ್ಲಿಸಿದರಂತೆ. ಈ ಘಟನೆಯನ್ನು ಅತ್ಯಂತ ರೋಚಕವಾಗಿ ವಿವರಿಸುತ್ತಾರೆ ಬಲಿಪರು.

ಕುದುರೆಕೋಡ್ಲು ರಾಮ ಭಟ್ಟರ ಬಗ್ಗೆ ಹೇಳುತ್ತಾ ಬಲಿಪ ನಾರಾಯಣ ಭಾಗವತರು ತಮ್ಮ ತಿರುಗಾಟದ ಮೊದಲ ವರುಷಗಳಲ್ಲಿ ಪದ್ಯದ ಮುಕ್ತಾಯದ ಸಮಯದಲ್ಲಿ ರಾಗಾಲಾಪ ತುಸು ಹೆಚ್ಚಾಗುತ್ತಿದ್ದುದನ್ನು ನೆನಪಿಸಿಕೊಂಡರು. ಇದನ್ನು ನೇರ್ಪುಮಾಡಿದ್ದು ರಾಮ ಭಟ್ಟರು.  ಹೀಗೆ ಮುಕ್ತಾಯದ ಸಂದರ್ಭದ ಹಾಡನ್ನೆಲ್ಲಾ ಬಲಿಪರು ಹೆಚ್ಚಿನ ರಾಗಾಲಾಪದಲ್ಲೇ ಮುಕ್ತಾಯಕ್ಕೆ ಜಾಗಟೆ ಎತ್ತುವ ಸಂದರ್ಭ ರಾಮ ಭಟ್ಟರು ಮುಕ್ತಾಯ ನುಡಿಸದೆ ಬಿಡ್ತಿಗೆಯ ನುಡಿತವನ್ನು ನುಡಿಸಿದ್ದರು ಚೆಂಡೆಯಲ್ಲಿ.

ಬಲಿಪರು ಮುಕ್ತಾಯದ ನಿರ್ದಿಷ್ಟ ಆವರ್ತ ಮುಗಿದೊಡನೆಯೇ ಜಾಗಟೆ ಕೆಳಗಿಳಿಸಲು ಯೋಚಿಸುತ್ತಿರುವಾಗ ರಾಮ ಭಟ್ಟರ ನುಡಿತ ಮುಗಿದಿರಲಿಲ್ಲ. ಇದ್ಯಾಕೆ ಹೀಗೆಂಬ ದೃಷ್ಟಿಯಿಂದ ಬಲಿಪರು ರಾಮ ಭಟ್ಟರನ್ನು ನೋಡಿದಾಗ, ರಾಮ ಭಟ್ಟರು “ಪದ್ಯ ಮುಗಿತಾ?” ಎಂದು ಕೇಳಿದರು. “ಹೌದು” ಎಂದ ಬಲಿಪರಿಗೆ “ಹ್ಹೋ! ನಾನು ಬಿಡ್ತಿಗೆಗೆ ಜಾಗ ಕೊಟ್ಟದ್ದು ಅಂತ ತಿಳಿದುಕೊಂಡೆ” ಎಂದರು. ಬಲಿಪರಿಗೆ ತಾನು ತಪ್ಪಿದೆ ಎಂದು ಗೋಚರವಾಯ್ತು. ಮತ್ತೆ ರಾಮ ಭಟ್ಟರಲ್ಲಿ ವಿಚಾರಿಸಲಾಗಿ ಅವರಂದ ಮಾಹಿತಿ ಬಿಡಿತ (ಪದ್ಯ ಎತ್ತುಗಡೆಯಾದೊಡನೆ ಮದ್ದಳೆ-ಚೆಂಡೆ ನುಡಿಸಲು ಕೊಡುವ ಜಾಗ) ಪೂರ್ವದಲ್ಲಿ ನಾಲ್ಕಾವರ್ತದ ರಾಗಾಲಾಪ ಬೇಕು. ಇದು ಮದ್ದಳೆಗಾರರಿಗೆ ಬಿಡಿತಕ್ಕೆ ಸೂಚನೆ. ಮತ್ತು ಪದ್ಯದ ಸಾಹಿತ್ಯ ಮುಗಿದೊಡನೆ ಮುಕ್ತಾಯಕ್ಕೆ ಪೂರ್ವ ಭಾಗವತ ಮಾಡುವ ಆಲಾಪ ಬಿಡಿತದಷ್ಟು ಅಳತೆಯದಾಗಿರಬಾರದು. ಮತ್ತೂ ಒಂದು ಕ್ರಮವೆಂದರೆ ಬಿಡಿತಕ್ಕೆ ಎಷ್ಟು ತಾಳಾವರ್ತ ಆವರ್ತವಿದೆಯೋ ಅಷ್ಟು ಕಾಲಮಾತ್ರ ಬಿಡಿತ ಪೂರ್ವ ಆಲಾಪವಿರಬೇಕು. ಈ ಮಾಹಿತಿ ಬಹು ಮಹತ್ತ್ವದ್ದು. ಹಿಂದಿನ ಕಾಲದಲ್ಲಿ ಇದೆಲ್ಲ ಸ್ಥಾಪಿತವಾಗಿದ್ದದ್ದು ಎಂದು ಬಲಿಪರು ಹೇಳುತ್ತಾರೆ. ಇದರಲ್ಲಿ ಯಾವುದೇ ಸಂದೇಹವಿರಲಿಲ್ಲ. ಈಗಿನ ಅತಿ ಆಲಾಪ ಪ್ರಸಕ್ತಿಯ ಸಂದರ್ಭದಲ್ಲಿ ಈ ಮಾಹಿತಿ ಮಹತ್ತ್ವದ್ದು. ಇದು ಬಲಿಪ ನಾರಾಯಣ ಭಾಗವತರ ಹಾಡಿಕೆಯಲ್ಲಿ ಸ್ಪುಟವಾಗಿ ಗೊತ್ತಾಗುವಂಥದ್ದು. ಬಿಡಿತಪೂರ್ವ ಆಲಾಪದ ಅಳತೆಯು ಬಿಡಿತಕ್ಕಿರುವ ಅಳತೆಗೆ ಸಾಂಗತ್ಯವನ್ನು ಹೊಂದಿದಂಥದ್ದಾಗಿದೆ. ಮತ್ತು ಪದ್ಯದ ಮುಕ್ತಾಯಕ್ಕೆ ಸಣ್ಣ ಆಲಾಪವು  ಮದ್ದಳೆ ಚೆಂಡೆವಾದಕರಿಗೆ ಸ್ಫುಟವಾದ ಸೂಚನೆಯಾಗುತ್ತದೆ.

ಇಂಥ ಮಹನೀಯ ಮದ್ಲೆಗಾರರ ಬಗೆಗಿನ ಮಾತುಗಳನ್ನು ಕೇಳಿದಾಗ ನಮ್ಮಲ್ಲಿ ಅವರ ಕಲಾವಂತಿಕೆಯ ಸ್ವರೂಪದ ಅರಿವಾಗುತ್ತದೆ. ಅವರ ನುಡಿಸಾಣಿಕೆಯ ಮಹತ್ತ್ವ ಮತ್ತು ಕಲಾನಿಷ್ಠ ಪ್ರಸ್ತುತಿಯ ಅರಿವಾಗುತ್ತದೆ. ಒಬ್ಬೊಬ್ಬರ ನುಡಿತವೂ ಒಂದೊಂದು ಗುಣವನ್ನು ಅಭಿವ್ಯಕ್ತಿಸುವಂಥದ್ದು. ಒಬ್ಬರದ್ದು ಮೃದು ಮಧುರ ಗುಣವಾಗಿದ್ದರೆ ಮತ್ತೊಬ್ಬರದ್ದು ಓಜಸ್ವಿಯಾಗಿ ಇರುತ್ತಿತ್ತು. ಆದರೂ ಇವು ಯಕ್ಷಗಾನ ಭಾಗವತಿಕೆಯ ಒಳಗೇ ಇದ್ದು ಹಾಡಿಕೆಯನ್ನು ದಾಟಿ ಹೋಗುತ್ತಿರಲಿಲ್ಲ ಎಂಬುದು ನಮ್ಮ ಪ್ರಧಾನ ವಿವಕ್ಷೆಯಾಗಿರಬೇಕು.

ಕುದುರೆಕೋಡ್ಲು ರಾಮ ಭಟ್ಟರು ಹೇಳುತ್ತಿದ್ದ ಹದಿಮೂರು ಘಾತದ ಝಂಪೆಯ ಕುರಿತಾಗಿ ಮಾತನಾಡುತ್ತಾ ಬಲಿಪರು ತಮಗೆ ಕುದುರೆಕೋಡ್ಲು ರಾಮ ಭಟ್ಟರು, ಸುಬ್ಬಣ್ಣಿ ಮದ್ಲೆಗಾರರ ಕಾಲದಲ್ಲಿ ಇದ್ದ ಈ ರೀತಿಯ ಝಂಪೆಯನ್ನು ಹಾಡಲು ಹೇಳುತ್ತಿದ್ದರು. ಇದು ಆರಂಭವಾಗುವುದು ಝಂಪೆಯ ಮೊದಲ ಮೂರು ಜಾಗಟೆ ಪೆಟ್ಟು ಮುಗಿದು ಅನಂತರದ ಐದು ಜಾಗಟೆ ಪೆಟ್ಟಿನ ಆರಂಭಕ್ಕೆ. ಅದಕ್ಕೆ ಅನುಸಾರಿಯಾಗಿ ಜಾಗಟೆಯಲ್ಲಿ “ಟ್ಟ ಟ್ಟ ಟ್ಟ ಟ್ಟ ಟ್ಟಾ ಟ್ಟ ಟ್ಟ ಟ್ಟ ಟ್ಟ ಟ್ಟಾ ಟ್ಟ ಟ್ಟ ಟ್ಟಾ” ಈ ರೀತಿಯ ಜಾಗಟೆಯ ಘಾತಗಳು ಹಾಕುತ್ತಿದ್ದರು. ಇದು ಸರಿಯಾಗಿ ಹದಿಮೂರು ಜಾಗಟೆಯ ಪೆಟ್ಟುಗಳಾಗಿರುತ್ತಿದ್ದುವು. ಅದಕ್ಕೆ ಅನುಸಾರಿಯಾದ ಮದ್ಲೆಯ ತತ್ಕಾರವೂ ಇತ್ತೆನ್ನಿ. ಅದು- ತಾಂ ತಾಂ ದಿಂದತ್ತಾಂ, ತಕ್ಧಿನ ಧಿನ್ನಕ ದಿದ್ದಾ ದಿದ್ದಾ ಧೋಂ” ಎಂಬುದು. ಈ ರೀತಿಯಾದ ಹಾಡನ್ನು ಅಜ್ಜ ಬಲಿಪ ನಾರಾಯಣ ಭಾಗವತರು, ಪುತ್ತಿಗೆ ರಾಮಕೃಷ್ಣ ಜೋಯಿಸರು ಮತ್ತು ಅಗರಿ ಶ್ರೀನಿವಾಸ ಭಾಗವತರೂ ಹಾಡುತ್ತಿದ್ದರು ಎಂಬುದನ್ನು ಬಲಿಪ ನಾರಾಯಣ ಭಾಗವತರು ಹೇಳುತ್ತಾರೆ.