ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿಗೆ ಚಹದಷ್ಟು ಪ್ರಿಯವಾದ ಪಾನೀಯ ಮತ್ತೊಂದಿಲ್ಲ. ಪರೀಕ್ಷೆಗೆ ಸಿದ್ಧತೆ ನಡೆಸುವ ಸಂದರ್ಭದಲ್ಲಿ ಚಹದ ಬೇಡಿಕೆ ಮತ್ತು ಪೂರೈಕೆ ತುಂಬ ಹೆಚ್ಚಾಗಿರುತ್ತದೆ. ಅರ್ಧ ತಾಸಿಗೊಮ್ಮೆ ಚಹ ಕುಡಿಯದಿದ್ದರೆ ಓದಲು ಮನಸ್ಸೇ ಬರುವುದಿಲ್ಲ. ಪರೀಕ್ಷೆಯ ಸೀಜನ್ನು ಬಂದಾಗ ಧಾರವಾಡದಲ್ಲಿ ಅರ್ಧ ರಾತ್ರಿಯವರೆಗೂ ಚಹದಂಗಡಿಗಳು ತೆರೆದಿರುತ್ತವೆ. ವಿದ್ಯಾರ್ಥಿಗಳು ನಿರಂತರವಾಗಿ ಓದುವುದು, ಬರೆಯುವುದು ಮತ್ತು ಪದೇ ಪದೇ ಚಹ ಕುಡಿಯುವುದು ನಡೆದೇ ಇರುತ್ತದೆ.
ಉತ್ತರ ಕರ್ನಾಟಕದಲ್ಲಿ ಜನಜೀವನದ ಭಾಗವೇ ಆಗಿರುವ ಚಹ ಸೇವನೆಯ ಕುರಿತು ವಿಕಾಸ ಹೊಸಮನಿ ಬರೆದ ಪ್ರಬಂಧ ನಿಮ್ಮ ಓದಿಗೆ

ಚಹ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದೆ. ಹಳೆಯ ಮೈಸೂರು ಮತ್ತು ಕರಾವಳಿ ಭಾಗದಲ್ಲಿ ಕಾಫಿ ಖ್ಯಾತಿ ಪಡೆದರೂ ಉತ್ತರ ಕರ್ನಾಟಕದಲ್ಲಿ ಮಾತ್ರ ಚಹಕ್ಕೇ ಅಗ್ರಸ್ಥಾನ. ಚಹ, ಎಲೆಯಡಿಕೆ ಮತ್ತು ತಂಬಾಕು ಉತ್ತರ ಕರ್ನಾಟಕದ ಮಂದಿಯ ದೌರ್ಬಲ್ಯವೂ ಹೌದು. ಊಟ, ತಿಂಡಿಯಿಲ್ಲದಿದ್ದರೂ ನಮ್ಮ ಜನ ಬದುಕಬಲ್ಲರು ಆದರೆ ಚಹ ಇರದಿದ್ದರೆ ಮಾತ್ರ ಬದುಕುವುದು ಸಾಧ್ಯವಿಲ್ಲ. ಉತ್ತರ ಕರ್ನಾಟಕದ ಮಂದಿಯ ದಿನಚರಿ ಆರಂಭವಾಗುವುದೇ ಬೆಳಗಿನ ಚಹದೊಂದಿಗೆ, ಮುಂದೆ ದಿನ ಸಾಗುವುದು ಸಹ ಚಹದೊಂದಿಗೆ, ಕೊನೆಗೆ ದಿನ ಮುಗಿಯುವುದೂ ಕೂಡ ಚಹದೊಂದಿಗೆ!

ಚಹ, ಚಹಾ, ಚಾ, ಚಾಯ್, ಟೀ, ಕೆಟೀ, ಮಸಾಲಾ ಟೀ, ಕಾರ್ಡಮಮ್ ಟೀ, ಗ್ರೀನ್ ಟೀ, ಬ್ಲ್ಯಾಕ್ ಟೀ, ಸ್ಪೇಷಲ್ ಟೀ, ರಾಯಲ್ ಟೀ, ಮಸಾಲಾ ಚಾಯ್, ಅದ್ರಕ್ ಚಾಯ್, ಖಡಕ್ ಚಾಯ್, ಡಬಲ್ ಖಡಕ್ ಚಾಯ್, ಮಲಾಯಿ ಚಾಯ್, ಹೈದ್ರಾಬಾದಿ ಚಾಯ್, ಬಾಂಬೆ ಚಾಯ್, ಬಾಂಬೆ ಸ್ಪೇಷಲ್ ಚಾಯ್, ಇರಾನಿ ಚಾಯ್, ಮದ್ರಾಸಿ ಚಾಯ್, ಕೇರಳ ಕಟ್ಟಣ ಚಾಯ್, ಮಲ್ನಾಡ್ ಮಸಾಲಾ ಟೀ, ಜಾಕ್ಪಾಟ್ ಟೀ, ಸ್ಟೂಡೆಂಟ್ ಸ್ಪೇಷಲ್ ಟೀ, ಮಾಧುರಿ ಸ್ಪೇಷಲ್ ಟೀ, ಕರಿಷ್ಮಾ ಸ್ಪೇಷಲ್ ಟೀ, ಅನುಷ್ಕ ಸ್ಪೇಷಲ್ ಟೀ, ಶಬನಂ ಸ್ಪೇಷಲ್ ಟೀ ಮತ್ತು ಆಯೇಷಾ ಸ್ಪೇಷಲ್ ಟೀ ಸೇರಿದಂತೆ ನೂರಾರು ವಿಧದ ವೈವಿಧ್ಯಮಯ ಚಹಗಳಿವೆ.

‘ದೇವನೊಬ್ಬ ನಾಮ ಹಲವು’ ಎಂಬ ಸೆಕ್ಯುಲರಿಸಂ ತತ್ವ ಚಹಕ್ಕೆ ಬಿಲ್‌ಕುಲ್ ಅನ್ವಯಿಸುವುದಿಲ್ಲ. “ಹೆಸರು ಬೇರೆಯಾದರೇನಂತೆ ಎಲ್ಲ ಚಹ ಒಂದೇ ಅಲ್ಲವೆ?” ಎಂದು ಕೇಳುವವರ ವಿಷಯದಲ್ಲಿ ನನಗೆ ಅಪಾರ ಸಹಾನುಭೂತಿಯಿದೆ. ಒಂದೋ ಇವರು ಚಹ ಕುಡಿಯುವವರಲ್ಲ ಅಥವಾ ಕಾಫಿ ಕುಡಿಯುವವರಿರಬಹುದು ಇಲ್ಲದಿದ್ದರೆ ಬೋರ್ನವೀಟಾ, ಹಾರ್ಲಿಕ್ಸ್, ಕಾಂಪ್ಲ್ಯಾನ್ ಮತ್ತು ಬೂಸ್ಟುಗಳಂತಹ ಪಾನೀಯ ಕುಡಿಯುವ ನವಭಾರತೀಯರಿರಬಹುದು. ಚಹದ ಸವಿ ಚಹ ಕುಡಿದವರಿಗೇ ಗೊತ್ತು. ಚಹ ಕುಡಿಯದವರೊಂದಿಗೆ ಚಹದ ಬಗೆಗೆ ಮಾತಾಡುವುದು ಸನ್ಯಾಸಿಯೊಂದಿಗೆ ಸಂಸಾರದ ಕುರಿತು ಮಾತಾಡಿದಂತೆ ವ್ಯರ್ಥವೆಂದೇ ನನ್ನ ಸ್ಪಷ್ಟ ಅಭಿಪ್ರಾಯ.

ಉತ್ತರ ಕರ್ನಾಟಕದಲ್ಲಿ ಯಾರೇ ಭೇಟಿಯಾದರೂ ಉಭಯ ಕುಶಲೋಪರಿ ನಡೆಸಿದ ಕೂಡಲೇ ಚಹಕ್ಕೆ ಆಹ್ವಾನಿಸುತ್ತಾರೆ. ಚಹಕ್ಕೆ ಆಹ್ವಾನ ನೀಡುವುದು ಪ್ರೀತಿ ಮತ್ತು ವಿಶ್ವಾಸದ ಹೆಗ್ಗುರುತು. ಬರೀ ಉಭಯ ಕುಶಲೋಪರಿ ನಡೆಸಿ ಚಹಕ್ಕೆ ಆಹ್ವಾನಿಸದಿದ್ದರೆ ಅವರ ನಡುವಿನ ಸಂಬಂಧ ಕೆಡುತ್ತಿದೆ ಅಥವಾ ಕೆಟ್ಟಿದೆಯೆಂದೇ ತಿಳಿಯಬೇಕು. ಉತ್ತರ ಕರ್ನಾಟಕದಲ್ಲಿ ಯಾರಾದರೂ ಚಹಕ್ಕೆ ಕರೆದಾಗ ಹೋಗದಿದ್ದರೆ ಅದು ಕರೆದವರಿಗೆ ಅವಮಾನ ಮಾಡಿದಂತೆ. ನಮ್ಮ ಮಂದಿ ಪರಸ್ಪರ ಭೇಟಿಯಾದಾಗ ಇವರು ಅವರನ್ನೋ ಅವರು ಇವರನ್ನೋ ತುಂಬ ಪ್ರೀತಿಯಿಂದ ಚಹಕ್ಕೆ ಕರೆಯುತ್ತಾರೆ.

ಚಹ ಕುಡಿದು ಬಂದೆವು

ಹೊಟೇಲಿನಲ್ಲಿ ಇವರಾರೂ ಬರೀ ಚಹ ಕುಡಿಯುವುದಿಲ್ಲ. ಇಡ್ಲಿ, ವಡೆ, ಪುರಿ, ಪಲಾವು, ಸಾದಾ ದೋಸೆ, ಖಾಲಿ ದೋಸೆ, ಮಸಾಲೆ ದೋಸೆ, ಬೆಣ್ಣೆ ದೋಸೆ, ಉತ್ತಪ್ಪ, ಉಪ್ಪಿಟ್ಟು, ಕೇಸರಿಬಾತು, ಬಿಸಿಬೇಳೆ ಬಾತು, ಜಾಮೂನು, ರಸಗುಲ್ಲ, ಮೈಸೂರು ಬಜ್ಜಿ, ಉಳ್ಳಾಗಡ್ಡಿ ಬಜ್ಜಿ, ಆಲೂಗಡ್ಡಿ ಬಜ್ಜಿ, ಗದುಗಿನ ಬದನೆಕಾಯಿ ಬಜ್ಜಿ, ಮಿರ್ಚಿ, ಮಂಡಕ್ಕಿ, ಬೆಳ್ಳುಳ್ಳಿ ಮಂಡಕ್ಕಿ, ಗಿರ್ಮಿಟ್, ಹಾವೇರಿಯ ಟೊಮ್ಯಾಟೊ ಗಿರ್ಮಿಟ್ ಸೇರಿದಂತೆ ವಿವಿಧ ಬಗೆಯ ರುಚಿಕರವಾದ ತಿಂಡಿ, ತಿನಿಸುಗಳನ್ನು ತಿಂದ ನಂತರವೇ ಚಹ ಕುಡಿಯುತ್ತಾರೆ. ಇಷ್ಟೆಲ್ಲ ತಿಂಡಿ, ತಿನಿಸುಗಳನ್ನು ತಿಂದು ಬಂದರೂ ಸಹ ನಮ್ಮ ಉತ್ತರ ಕರ್ನಾಟಕದ ಮಂದಿ ಚಹ ಕುಡಿದು ಬಂದೆವು ಎಂದೇ ಹೇಳುತ್ತಾರೆ!

ಹೊಟೇಲು, ರೆಸ್ಟೋರೆಂಟು, ದರ್ಶಿನಿ, ಭವನ, ವಿಲಾಸ, ರೆಸಿಡೆನ್ಸಿ ಎಂಬ ಬೆಡಗಿನ ಹೆಸರುಗಳು ನಮ್ಮ ಉತ್ತರ ಕರ್ನಾಟಕದ ಮಂದಿಗೆ ರುಚಿಸುವುದಿಲ್ಲ. ಈಗಲೂ ಚಹದಂಗಡಿ ಎಂಬ ಹೆಸರೇ ನಮ್ಮ ಮಂದಿಗೆ ಪ್ರಿಯವಾದದ್ದು. ಇದರಲ್ಲೇನೋ ಒಂದು ತರಹದ ಆತ್ಮೀಯತೆಯಿದೆ. ನಮ್ಮ ಉತ್ತರ ಕರ್ನಾಟಕದ ಚಹದಂಗಡಿಗಳ ವೈವಿಧ್ಯಮಯ ಹೆಸರುಗಳು ನೀಡುವ ಮನರಂಜನೆ ಅಷ್ಟಿಷ್ಟಲ್ಲ.

“ಮಂಜು ಮಾಮಾ ಚಹದಂಗಡಿ”, “ಮಾಸ್ತರ ಮಾಮಾ ಚಹದಂಗಡಿ”, “ಬಳ್ಳಾರಿ ಭಾಗ್ಯಮ್ಮ ಚಹದಂಗಡಿ”, “ಬಾಗೇವಾಡಿ ಭವಾನಿ ಚಹದಂಗಡಿ”, “ಬ್ರಹ್ಮಚಾರಿ ಭರಮಣ್ಣ ಚಹದಂಗಡಿ”, “ಬೆಂಕಿ ಬಸೂ ಚಹದಂಗಡಿ”, “ಮರಾಠಿ ಮಲ್ಲಪ್ಪ ಚಹಾ ಕ್ಲಬ್ಬು”, “ಬಾಳವಂತ ಬಸವಣ್ಣಿ ಚಹಾ ಕ್ಲಬ್ಬು”, “ಕಮ್ಯೂನಿಷ್ಟ ಕೃಷ್ಣಪ್ಪ ಚಹಾ ಕ್ಲಬ್ಬು”, “ಕಾಂಗ್ರೆಸ್ ಯಲ್ಲಪ್ಪ ಚಹಾ ಕ್ಲಬ್ಬು”, “ಸಲಾಂ ವಲೈಕುಂ ಚಾಯ್ ದುಖಾನು”, “ಶಬನಂ ಸ್ಪೇಷಲ್ ಚಾಯ್ ದುಖಾನು”, “ಹಸೀನಾ ಸ್ಪೇಷಲ್ ಚಾಯ್ ದುಖಾನು”, “ಬಾಪ್ ಬೇಟಾ ಚಾಯ್ ದುಖಾನು”, “ಯೇ ದಿಲ್ ಫಿರ್ ಮಾಂಗೇ ಖಡಕ್ ಚಾಯ್ ದುಖಾನು”, “ಜಬರ್ದಸ್ತ್ ಖಡಕ್ ಚಾಯ್ ದುಖಾನು”, “ಮಾಸ್ಟರ್ ಮಂಜು ಟೀ ಸೆಂಟರ್”, “ಸೌಭಾಗ್ಯತ್ತೆ ಸ್ಪೇಷಲ್ ಟೀ ಸೆಂಟರ್”, “ಅಣ್ತಮ್ಮ ಟೀ ಸೆಂಟರ್”, “ಫ್ರೆಂಡ್ಸ್ ಟೀ ಸೆಂಟರ್” ಹೀಗೆ ಹೆಸರುಗಳ ಪಟ್ಟಿ ತುಂಬ ಉದ್ದವಿದೆ.

ನಮ್ಮ ಉತ್ತರ ಕರ್ನಾಟಕದ ಚಹದಂಗಡಿಗಳ ವಿಶೇಷತೆಯೆಂದರೆ ಪ್ರೊಪ್ರೈಟರುಗಳೇ ಸ್ವತಃ ಗಿರಾಕಿಗಳಿಗೆ ಚಹ ತಂದುಕೊಡುತ್ತಾರೆ. ಉಳಿದ ಅನೇಕ ದೊಡ್ಡ ಹೋಟೆಲುಗಳಲ್ಲಿ ಪ್ರೊಪ್ರೈಟರುಗಳು ಯಾರೆಂದೇ ಗಿರಾಕಿಗಳಿಗೆ ಗೊತ್ತಿರುವುದಿಲ್ಲ. ಚಹ ಮಾಡುವವನೊಬ್ಬ, ಚಹ ತಂದು ಕೊಡುವವನೊಬ್ಬ ಮತ್ತು ಚಹದ ದುಡ್ಡು ತೆಗೆದುಕೊಳ್ಳುವವನೊಬ್ಬ. ಎಲ್ಲ ಕೆಲಸಕ್ಕೂ ಬೇರೆ ಬೇರೆ ವ್ಯಕ್ತಿಗಳು.

ಧಾರವಾಡದ “ಬಾಗೇವಾಡಿ ಭವಾನಿ ಚಹದಂಗಡಿ”ಯಲ್ಲಿ ಹಾಗಿಲ್ಲ. ಪ್ರೊಪ್ರೈಟರಳಾದ ಭವಾನಿಯೇ ಸ್ವತಃ ಚಹ ತಯಾರಿಸುತ್ತಾಳೆ, ಭವಾನಿಯೇ
ಸ್ವತಃ ಚಹ ತಂದು ಕೊಡುತ್ತಾಳೆ ಮತ್ತು ಭವಾನಿಯೇ ಸ್ವತಃ ದುಡ್ಡು ತೆಗೆದುಕೊಳ್ಳುತ್ತಾಳೆ. ಇನ್ನೂ ವಿಶೇಷವೆಂದರೆ ಭವಾನಿ ಗಿರಾಕಿಗಳೊಂದಿಗೆ ತುಂಬ ವಿಶ್ವಾಸದಿಂದ ನಡೆದುಕೊಳ್ಳುತ್ತಾಳೆ. ಅವರವರ ಅಂತಸ್ತಿಗೆ ತಕ್ಕಂತೆ ಗಿರಾಕಿಗಳಿಗೆ ಮರ್ಯಾದೆ ಕೊಟ್ಟು ಮಾತನಾಡಿಸುತ್ತಾಳೆ. ಒಟ್ಟಿನಲ್ಲಿ “ಚಹದಂಗಡಿ ಸರ್ವಂ ಭವಾನಿಮಯಂ” ಎಂದು ಹೇಳಬಹುದು. ಇಂತಿಪ್ಪ “ಬಾಗೇವಾಡಿ ಭವಾನಿ ಚಹದಂಗಡಿ” ಅಪಾರ ಖ್ಯಾತಿ ಪಡೆದಿದ್ದರಲ್ಲಿ ಆಶ್ಚರ್ಯವೇನಿದೆ?

ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿಗೆ ಚಹದಷ್ಟು ಪ್ರಿಯವಾದ ಪಾನೀಯ ಮತ್ತೊಂದಿಲ್ಲ. ಪರೀಕ್ಷೆಗೆ ಸಿದ್ಧತೆ ನಡೆಸುವ ಸಂದರ್ಭದಲ್ಲಿ ಚಹದ ಬೇಡಿಕೆ ಮತ್ತು ಪೂರೈಕೆ ತುಂಬ ಹೆಚ್ಚಾಗಿರುತ್ತದೆ. ಅರ್ಧ ತಾಸಿಗೊಮ್ಮೆ ಚಹ ಕುಡಿಯದಿದ್ದರೆ ಓದಲು ಮನಸ್ಸೇ ಬರುವುದಿಲ್ಲ. ಪರೀಕ್ಷೆಯ ಸೀಜನ್ನು ಬಂದಾಗ ಧಾರವಾಡದಲ್ಲಿ ಅರ್ಧ ರಾತ್ರಿಯವರೆಗೂ ಚಹದಂಗಡಿಗಳು ತೆರೆದಿರುತ್ತವೆ. ವಿದ್ಯಾರ್ಥಿಗಳು ನಿರಂತರವಾಗಿ ಓದುವುದು, ಬರೆಯುವುದು ಮತ್ತು ಪದೇ ಪದೇ ಚಹ ಕುಡಿಯುವುದು ನಡೆದೇ ಇರುತ್ತದೆ. ಧಾರವಾಡದಲ್ಲಿ ಓದುತ್ತಿದ್ದಾಗ ನಾನು ಮತ್ತು ನನ್ನ ಕೆಲವು ಮಿತ್ರರು ಸಾಕಷ್ಟು ಬಾರಿ ಚಹ ಕುಡಿದುಕೊಂಡೇ ಹತ್ತು ಹಲವು ಪರೀಕ್ಷೆಗಳಿಗೆ ಸಿದ್ಧತೆ ನಡೆಸಿದ್ದೇವೆ. ನಮ್ಮ ಪರೀಕ್ಷೆಗಳಿಗೆ ಚಹದಿಂದಾದ ಅನುಕೂಲಗಳನ್ನು ನೆನೆದರೆ ಚಹದ ಕುರಿತ ಪ್ರೀತಿ ಹೆಚ್ಚಾಗುತ್ತದೆ.

ವಿದ್ಯಾರ್ಥಿಗಳು ಮತ್ತು ಮಕ್ಕಳು ಚಹ ಕುಡಿಯಬಾರದೆಂದು ಅನೇಕ ಹಿರಿಯರು ಉಪದೇಶ ನೀಡುತ್ತಾರೆ. ಆದರೆ ಹೀಗೆ ಕಿರಿಯರಿಗೆ ಚಹ ಕುಡಿಯಬಾರದೆಂದು ಉಪದೇಶ ನೀಡುವ ಹಿರಿಯರೇ ಲೀಟರುಗಳ ಲೆಕ್ಕದಲ್ಲಿ ಚಹ ಕುಡಿಯುತ್ತಾರೆ. ಮಕ್ಕಳ ವಿಷಯದಲ್ಲಿ ಈ ಹಿರಿಯರ ವಾದವನ್ನು ಒಪ್ಪಬಹುದಾದರೂ ವಿದ್ಯಾರ್ಥಿಗಳ ವಿಷಯದಲ್ಲಿ ಮಾತ್ರ ಈ ವಾದವನ್ನು ಒಪ್ಪಲು ಸಾಧ್ಯವಿಲ್ಲ. ಸಾರಾಯಿ ಕುಡಿದು ಹಾಳಾದವರಿದ್ದಾರೆ, ಜೂಜಾಡಿ ಹಾಳಾದವರಿದ್ದಾರೆ ಮತ್ತು ಪರ ಸ್ತ್ರೀ ಸಂಗ ಮಾಡಿ ಹಾಳಾದವರಿದ್ದಾರೆ. ಆದರೆ ಇದುವರೆಗೂ ಚಹ ಕುಡಿದು ಹಾಳಾದವರನ್ನು ನಾನಂತೂ ಕಂಡಿಲ್ಲ. ನಾನಾದರೋ ಚಹ ಕುಡಿಯಿರೆಂದೇ ಸಲಹೆ ನೀಡುತ್ತೇನೆ.

ಚಹವೆಂದ ಕೂಡಲೇ ನನಗೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪಿ.ಯು.ಸಿ. ಓದುತ್ತಿದ್ದ ದಿನಗಳು ನೆನಪಾಗುತ್ತವೆ. ಅವು ಮಳೆಗಾಲದ ದಿನಗಳು. ಅದು ಜುಲೈ ತಿಂಗಳ ಒಂದು ಸಂಜೆ. ಜಿಟಿಜಿಟಿ ಮಳೆ, ಥಂಡಿಗಾಳಿ ಮತ್ತು ಕಣ್ಣಿಗೆ ಹಬ್ಬವುಂಟುಮಾಡಿದ್ದ ತರಹೇವಾರಿ ಹುಡುಗಿಯರು ಸೇರಿ ವಾತಾವರಣ ತುಂಬ ಹಿತವಾಗಿತ್ತು. ಕರ್ನಾಟಕ ಕಾಲೇಜಿನ ಎದುರು ಸಾಲು ಸಾಲಾಗಿದ್ದ ಚಹದಂಗಡಿಯೊಂದರಲ್ಲಿ ನಾನೂ ಸಹ ಗೆಳೆಯರೊಂದಿಗೆ ಬಿಸಿ ಬಿಸಿ ಮಿರ್ಚಿ ಮತ್ತು ಹಬೆಯಾಡುವ ಖಡಕ್ ಚಹದ ಸ್ವಾದವನ್ನು ಆಸ್ವಾದಿಸುತ್ತಿದ್ದೆ.

ಅದೇ ಸಮಯದಲ್ಲಿ ಕೆಲವು ಹುಡುಗಿಯರು ಮಳೆಯಿಂದ ತಪ್ಪಿಸಿಕೊಳ್ಳಲು ತುಂಬ ಅವಸರದಿಂದ ರಸ್ತೆ ದಾಟಿ ಬಂದರು. ಆ ಹುಡುಗಿಯರ ಗುಂಪಿನಲ್ಲಿ ಕೆಂಪು ಚೂಡಿದಾರ್ ಧರಿಸಿದ್ದ, ಹಾಲುಬಿಳುಪಿನ ಬಣ್ಣದ, ನಗುಮೊಗದ ಸುಂದರ ಹುಡುಗಿಯೊಬ್ಬಳಿದ್ದಳು. ಅವಳು ನೇರವಾಗಿ ನನ್ನ ಬಳಿ ಬಂದವಳೇ ತುಂಬ ಮಧುರವಾಗಿ “ಏನ್ರೀ, ಸಿ.ಬಿ.ಟಿ.ಗೆ ಹೋಗುವ ಬಸ್ಸು ಇನ್ನೂ ಬಂದಿಲ್ಲವೇ?” ಎಂದು ಕೇಳಿದಳು. ಅವಳು ಕೇಳುವುದು ಹೆಚ್ಚೋ? ನಾನು ಹೇಳುವುದು ಹೆಚ್ಚೋ? ನನಗಾದ ಖುಷಿಗಂತೂ ಮಿತಿಯೇ ಇರಲಿಲ್ಲ. ಸ್ವಲ್ಪ ದೂರದಲ್ಲಿ ನನ್ನ ಗೆಳೆಯರು ಸ್ವಲ್ಪ ಅಸೂಯೆ ಮತ್ತು ಸ್ವಲ್ಪ ಮೆಚ್ಚುಗೆಯಿಂದ ನಮ್ಮತ್ತ ನೋಡುತ್ತಿದ್ದರು.

ನನಗಿಂತ ಎರಡು ವರ್ಷ ದೊಡ್ಡವಳಾದ ಆ ಹತ್ತೊಂಬತ್ತರ ಹರೆಯದ ಸುಂದರಿ ತಾನಾಗಿಯೇ ನನ್ನ ಪರಿಚಯ ಮಾಡಿಕೊಂಡ ಆ ದಿನವನ್ನು ಮರೆಯಲು ಸಾಧ್ಯವೇ? ನನ್ನ ಪ್ರಥಮ ಆಕರ್ಷಣೆಯಾದ ಆ ಚೆಲುವೆ ತುಂಬ ಸ್ನೇಹಮಯಿ ಮತ್ತು ಸಹೃದಯಿ. ಉತ್ತರ ಕನ್ನಡ ಜಿಲ್ಲೆಯವಳಾದ ಆಕೆ ತುಂಬ ಸುಂದರವಾಗಿ ಗ್ರಂಥಸ್ಥ ಕನ್ನಡ ಮಾತಾಡುತ್ತಿದ್ದಳು. ಸಮಾನ ಅಭಿರುಚಿಯ ಕಾರಣದಿಂದ ನಾವಿಬ್ಬರೂ ಒಳ್ಳೆಯ ಸ್ನೇಹಿತರಾದೆವು.

ಆ ದಿನಗಳಲ್ಲಿ ಈ ಚೆಲುವೆಯ ದೆಸೆಯಿಂದ ಉತ್ತರ ಕನ್ನಡ ಜಿಲ್ಲೆಯ ಹುಡುಗಿಯರೆಂದರೆ ತುಂಬ ಒಳ್ಳೆಯವರು ಎಂಬ ಅಭಿಪ್ರಾಯ ನನ್ನಲ್ಲಿ ಮೂಡಿತ್ತು! ದುರ್ದೈವವಶಾತ್ ಈ ಚೆಲುವೆಯ ತಂದೆ ಬ್ಯಾಂಕ್ ಉದ್ಯೋಗಿಯಾಗಿದ್ದರಿಂದ ಉತ್ತರ ಭಾರತದ ಕಡೆ ವರ್ಗವಾಗಿ ಹೋದರು. ನನ್ನ ಮತ್ತು ಅವಳ ಸ್ನೇಹ ಕೆಲವೇ ತಿಂಗಳುಗಳಲ್ಲಿ ಮುಗಿದುಹೋದದ್ದು ತೀರ ವಿಷಾದದ ಸಂಗತಿ.

ಚಹಕ್ಕೆ ಆಹ್ವಾನ ನೀಡುವುದು ಪ್ರೀತಿ ಮತ್ತು ವಿಶ್ವಾಸದ ಹೆಗ್ಗುರುತು. ಬರೀ ಉಭಯ ಕುಶಲೋಪರಿ ನಡೆಸಿ ಚಹಕ್ಕೆ ಆಹ್ವಾನಿಸದಿದ್ದರೆ ಅವರ ನಡುವಿನ ಸಂಬಂಧ ಕೆಡುತ್ತಿದೆ ಅಥವಾ ಕೆಟ್ಟಿದೆಯೆಂದೇ ತಿಳಿಯಬೇಕು. ಉತ್ತರ ಕರ್ನಾಟಕದಲ್ಲಿ ಯಾರಾದರೂ ಚಹಕ್ಕೆ ಕರೆದಾಗ ಹೋಗದಿದ್ದರೆ ಅದು ಕರೆದವರಿಗೆ ಅವಮಾನ ಮಾಡಿದಂತೆ.

ಈಗಲೂ ಕರ್ನಾಟಕ ಕಾಲೇಜಿನ ಮುಂದೆ ಚಹಾ ಕುಡಿಯುವಾಗ ಅವಳು ನೆನಪಾಗುತ್ತಾಳೆ. ಮಳೆಗಾಲದ ಸಂಜೆಗಳಲ್ಲಿ ಅವಳ ನೆನಪನ್ನು ನವೀಕರಿಸಲೆಂದೇ ನಾನು ಕರ್ನಾಟಕ ಕಾಲೇಜಿನ ಹತ್ತಿರ ಹೋಗಿ ಚಹ ಕುಡಿಯುವುದಿದೆ. ಅದೇ ಮಳೆಗಾಲದ ದಿನಗಳು, ಅದೇ ಕರ್ನಾಟಕ ಕಾಲೇಜು, ಅದೇ ಜಿಟಿಜಿಟಿ ಮಳೆ, ಅದೇ ಥಂಡಿಗಾಳಿ, ಅದೇ ತರಹೇವಾರಿ ಹುಡುಗಿಯರು, ಅದೇ ಚಹದಂಗಡಿ, ಅದೇ ಹಬೆಯಾಡುವ ಖಡಕ್ ಚಹ ಆದರೆ ಅವಳು ಮಾತ್ರ ಅಲ್ಲಿಲ್ಲ! ಅವಳ ನೆನಪಾಗಿ ನಾನು ಸ್ವಲ್ಪ ಭಾವೋದ್ವೇವಕ್ಕೊಳಗಾದೆ ಅನಿಸುತ್ತದೆ. ಇರಲಿ, ಈಗ ಮತ್ತೆ ಚಹದ ವಿಷಯಕ್ಕೆ ಬರೋಣ.

ಚಹ ಮತ್ತು ಕಾಫಿಯ ಭಿನ್ನಾಭಿಪ್ರಾಯ

ಧಾರವಾಡದಲ್ಲಿ ಶ್ರೀಧರ ಭಟ್ಟ ಮತ್ತು ಶ್ರೀಕಾಂತ ಪಾಟೀಲ ಎಂಬ ನನ್ನ ಇಬ್ಬರು ಮಿತ್ರರಿದ್ದರು. ಶ್ರೀಧರ ಭಟ್ಟ ಶಿರಸಿಯವನಾದರೆ ಶ್ರೀಕಾಂತ ಪಾಟೀಲ ಬಾಗಲಕೋಟೆಯವನು. ಶಿರಸಿಯ ಭಟ್ಟ ಕಾಫಿ ಎಂದರೆ ಜೀವ ಬಿಡುತ್ತಿದ್ದ. ಬಾಗಲಕೋಟೆಯ ಪಾಟೀಲ ಚಹ ಎಂದರೆ ಬಿದ್ದು ಸಾಯುತ್ತಿದ್ದ. ಚಹ ಮತ್ತು ಕಾಫಿಯ ವಿಷಯದಲ್ಲಿ ಇಬ್ಬರಿಗೂ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದವು. ಭಟ್ಟ ಕಾಫಿ ಕುಡಿಯುವವನೆಂದು ಪಾಟೀಲನಿಗೆ ಅಸಡ್ಡೆಯಾದರೆ, ಪಾಟೀಲ ಚಹ ಕುಡಿಯುವವನೆಂದು ಭಟ್ಟನಿಗೆ ತಾತ್ಸಾರ.

ಒಂದು ಬಾರಿ ಬಾಗೇವಾಡಿ ಭವಾನಿಯ ಚಹದಂಗಡಿಯಲ್ಲಿ ಕಾಫಿ ಮತ್ತು ಚಹದ ವಿಚಾರದಲ್ಲಿ ಶಿರಸಿಯ ಭಟ್ಟ ಮತ್ತು ಬಾಗಲಕೋಟೆಯ ಪಾಟೀಲನ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಆ ಏರಿಯಾದಲ್ಲೇ ತುಂಬ ಸುಂದರಿಯೆಂದು ಖ್ಯಾತಿ ಪಡೆದ (ಆ ಏರಿಯಾದ ಹೆಂಗಸರು ಈ ಮಾತನ್ನು ಖಂಡಿತ ಒಪ್ಪುವುದಿಲ್ಲ!) ಬಾಗೇವಾಡಿ ಭವಾನಿಯ ಮಾತಿಗೂ ಸಹ ಕ್ಯಾರೇ ಎನ್ನದೆ ಜಗಳವಾಡುತ್ತಿದ್ದರು. ಗುರುವಾದ ಹಿರೇಮಠ ಮಾಸ್ತರರು ಸರಿಯಾದ ಸಮಯಕ್ಕೆ ಮಧ್ಯ ಪ್ರವೇಶ ಮಾಡಿ ಇವರಿಬ್ಬರ ಜಗಳ ಬಿಡಿಸಿ ಸಮಾಧಾನ ಪಡಿಸಿದರು. ಇಲ್ಲದಿದ್ದರೆ ಬಾಗೇವಾಡಿ ಭವಾನಿಯ ಚಹದಂಗಡಿಯಲ್ಲಿ ಅಂದು ದೊಡ್ಡ ಅನಾಹುತವೇ ನಡೆದು ಹೋಗುತ್ತಿತ್ತು. ಭಟ್ಟ ಮತ್ತು ಪಾಟೀಲನ ನಡುವೆ ಚಹ ಮತ್ತು ಕಾಫಿಯ ವಿಷಯದಲ್ಲಿ ಆಗಾಗ ಇಂತಹ ಜಗಳಗಳು ನಡೆಯುವುದು ಸಾಮಾನ್ಯವಾಗಿತ್ತು.

ಭಟ್ಟ ಮತ್ತು ಪಾಟೀಲ ಇಬ್ಬರೂ ಒಳ್ಳೆಯ ಮಿತ್ರರೇ. ಇಬ್ಬರೂ ಒಂದೇ ವಿದ್ಯಾರ್ಥಿನಿಲಯದ ಒಂದೇ ರೂಮಿನಲ್ಲಿ ವಾಸಿಸುತ್ತಿದ್ದರು. ಇಬ್ಬರೂ ಸೇರಿ ಸಿನಿಮಾ ನೋಡಲು ಹುಬ್ಬಳ್ಳಿಗೆ ಹೋಗುತ್ತಿದ್ದರು. ಇಬ್ಬರೂ ಸೇರಿಯೇ ಸಿಗರೇಟು ಸೇದುತ್ತಿದ್ದರು. ಇಬ್ಬರೂ ಸೇರಿಯೇ ಕರ್ನಾಟಕ ಕಾಲೇಜಿನ ಮುಂದೆ ನಿಂತು ಹುಡುಗಿಯರಿಗೆ ಲೈನು ಹೊಡೆಯುತ್ತಿದ್ದರು. ಆದರೆ ಚಹ ಮತ್ತು ಕಾಫಿಯ ವಿಚಾರದಲ್ಲಿ ಮಾತ್ರ ಇಬ್ಬರಿಗೂ ತುಂಬ ಭಿನ್ನಾಭಿಪ್ರಾಯಗಳಿದ್ದವು. ಇಂದಿಗೂ ಈ ಭಿನ್ನಾಭಿಪ್ರಾಯ ಬಗೆಹರಿದಿಲ್ಲ.

ನಾಗರಾಜನೆಂಬ ನನ್ನ ಹಿರಿಯ ಮಿತ್ರ ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದರಲ್ಲಿ ತುಂಬ ವರ್ಷಗಳಿಂದ ರಸಾಯನಶಾಸ್ತ್ರದಲ್ಲಿ ಪಿ.ಹೆಚ್.ಡಿ. ಮಾಡುತ್ತಿದ್ದ. ಪಿ.ಹೆಚ್.ಡಿ. ಮಾಡುವ ಸಂಶೋಧನಾ ವಿದ್ಯಾರ್ಥಿಗಳಂತಹ ಸುಖಜೀವಿಗಳು ಮತ್ತೊಬ್ಬರಿಲ್ಲ. ಪಿ.ಹೆಚ್.ಡಿ.ಯ ಹೆಸರಿನಲ್ಲಿ ಐದಾರು ವರ್ಷಗಳ ಕಾಲ ವಿಶ್ವವಿದ್ಯಾಲಯದಲ್ಲಿ ಆರಾಮವಾಗಿ ಜೀವನ ಸಾಗಿಸುತ್ತಾರೆ. ಸಾಮಾನ್ಯವಾಗಿ ವಿಶ್ವವಿದ್ಯಾಲಯವೇ ಇವರ ಜಗತ್ತಾಗಿರುತ್ತದೆ. ಹೊರಗಿನ ಪ್ರಪಂಚಕ್ಕೂ ತಮಗೂ ಯಾವುದೇ ಸಂಬಂಧವಿರದಂತೆ ಹಾಯಾಗಿ ಬದುಕುತ್ತಿರುತ್ತಾರೆ. ಅನೇಕ ಜನ ಪಿ.ಹೆಚ್.ಡಿ. ಮಾಡುವ ಸಂಶೋಧನಾರ್ಥಿಗಳಿಗೆ ಅದನ್ನು ಮುಗಿಸುವ ಮನಸ್ಸೇ ಇರುವುದಿಲ್ಲ.

ಪಿ.ಹೆಚ್.ಡಿ. ಮುಗಿದರೆ ವಿಶ್ವವಿದ್ಯಾಲಯದಿಂದ ಹೊರಬರಬೇಕಾಗುತ್ತದೆ. ಮೈಗಳ್ಳರಾದ ಈ ಸಂಶೋಧನಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಹೊರಬರುವುದೂ ಬೇಕಿಲ್ಲ, ಕಷ್ಟಪಟ್ಟು ಕೆಲಸ ಮಾಡುವುದೂ ಬೇಕಿಲ್ಲ. ಎಲ್ಲ ಸಂಶೋಧನಾ ವಿದ್ಯಾರ್ಥಿಗಳಿಗೂ ಈ ಮಾತು ಅನ್ವಯಿಸುವುದಿಲ್ಲವಾದರೂ ಬಹುತೇಕ ಸಂಶೋಧನಾ ವಿದ್ಯಾರ್ಥಿಗಳು ಇಂತಹವರೇ ಇದ್ದಾರೆ. ಇಂತಹ ಮೈಗಳ್ಳರೇ ಮುಂದೆ ಬುದ್ಧಿಜೀವಿಗಳಾಗಿ ರೂಪುಗೊಳ್ಳುತ್ತಾರೆ.

ಇರಲಿ, ಮತ್ತೆ ನಾಗರಾಜನ ವಿಷಯಕ್ಕೆ ಬರೋಣ. ನಾಗರಾಜ ಚಹಾಪ್ರೇಮಿ, ಪಿ.ಹೆಚ್.ಡಿ. ಮಾಡುವವನಾದರೂ ಅಹಂಕಾರಿಯಲ್ಲ. ಒಂದಾದ ಮೇಲೊಂದರಂತೆ ಕಪ್ಪುಗಟ್ಟಲೇ ಚಹ ಕುಡಿಯುತ್ತ ವಿಶ್ವವಿದ್ಯಾಲಯದ ರಾಜಕೀಯ, ಲಂಪಟರೂ, ಜಾತಿವಾದಿಗಳೂ ಆದ ಪ್ರಾಧ್ಯಾಪಕರು, ಜೊಲ್ಲುಪಾರ್ಟಿಗಳಾದ ಪಿ.ಹೆಚ್.ಡಿ. ಗೈಡುಗಳು, ಸುಂದರಿಯರಾದ ಪಿ.ಹೆಚ್.ಡಿ. ವಿದ್ಯಾರ್ಥಿನಿಯರು ಮತ್ತು ಮೈಗಳ್ಳರಾದ ಪಿ.ಹೆಚ್.ಡಿ. ವಿದ್ಯಾರ್ಥಿಗಳ ಕುರಿತ ಕಥೆಗಳನ್ನು ತುಂಬ ರಸವತ್ತಾಗಿ ಹೇಳುತ್ತಿದ್ದ.

ಈ ಮಹಾಶಯನಿಗೂ ಪಿ.ಹೆಚ್.ಡಿ. ಮುಗಿಸುವ ಮನಸ್ಸಿರಲಿಲ್ಲ. ಆದರೆ ಅದನ್ನವನು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳುತ್ತಿದ್ದ. ನಾಗರಾಜನ ಏಕೈಕ ದೌರ್ಬಲ್ಯವೆಂದರೆ ಚಹ. ಆಗಾಗ ಅವನಿಗೆ ಹಲವು ಕಪ್ಪುಗಳಷ್ಟು ಚಹ ಕುಡಿಸಿದರೆ ಸಾಕು ವಿಶ್ವವಿದ್ಯಾಲಯದ ರಂಜನೀಯ ಕಥೆಗಳು ಲೀಲಾಜಾಲವಾಗಿ ಹೊರಬರುತ್ತಿದ್ದವು.

ನಾಗರಾಜ ಕೊನೆಗೂ ಪಿ.ಹೆಚ್.ಡಿ. ಮುಗಿಸಲೇಬೇಕಾದ ದುರ್ಬರ ಪ್ರಸಂಗ ಒದಗಿ ಬಂದಿತು. ಪಿ.ಹೆಚ್.ಡಿ.ಯ ಕಾಲಾವಧಿಯನ್ನು ವಿಸ್ತರಿಸಲು ಕೋರಿ ಕಲ್ಲು ಕರಗುವಂತೆ ರೋಧಿಸಿದರೂ ಯಾರೂ ಇವನ ವಿಷಯದಲ್ಲಿ ಕರುಣೆ ತೋರಿಸಲಿಲ್ಲ. ಪಿ.ಹೆಚ್.ಡಿ. ಪಡೆದ ದಿನ ಯಾರಾದರೂ ಸಂತಸ ಪಡುತ್ತಾರೆ, ಆದರೆ ನಾಗರಾಜನಿಗೆ ಅದು ತುಂಬ ದುಃಖದ ದಿನ! ಅಂದು ರಾತ್ರಿಯಿಡಿ ಚಹದ ಮೇಲೆ ಚಹ ಕುಡಿಯುತ್ತ ಹೆಂಡತಿ ಸತ್ತವನಂತೆ ಗೋಳಾಡಿದ. ನಾನೂ ಸಹ ಚಹ ಕುಡಿಯುತ್ತ ಅವನ ದುಃಖದಲ್ಲಿ ಭಾಗಿಯಾದೆ.

ಬೆಂಗಳೂರಿನ ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದರಲ್ಲಿ ಪಿ.ಹೆಚ್.ಡಿ. ಮಾಡುವ ಸುಂದರ ಹುಡುಗಿಯೊಬ್ಬಳು ಇತ್ತೀಚೆಗೆ ನನಗೆ ಪರಿಚಯವಾಗಿದ್ದಳು. ನಾನು ಲೋಕಾಭಿರಾಮವಾಗಿ ಮಾತನಾಡುತ್ತಾ ಪಿ.ಹೆಚ್.ಡಿ. ಮಾಡುವ ಸಂಶೋಧನಾ ವಿದ್ಯಾರ್ಥಿಗಳ ಕುರಿತು ಲೇವಡಿ ಮಾಡಿದೆ. ಆ ಹುಡುಗಿ ನಾನು ಅವಳನ್ನು ಉದ್ದೇಶಿಸಿಯೇ ಈ ಮಾತು ಹೇಳಿದ್ದೆಂದು ತಿಳಿದು ತುಂಬ ಕೋಪಗೊಂಡಳು. ನಾನು ಹುಡುಗಿಯರಿಗೆ ಯಾವತ್ತೂ ಸಹ ಬೈದವನಲ್ಲ, ಬಯ್ಯುವುದೂ ಇಲ್ಲ ಎಂದು ಪರಿಪರಿಯಾಗಿ ತಿಳಿ ಹೇಳಿದರೂ ಸಹ ಅವಳ ಕೋಪ ಕಡಿಮೆಯಾಗಲಿಲ್ಲ.

ಹುಡುಗಿಯರ ವಿಷಯದಲ್ಲಿ ನಾನು ತೀರ ಅನನುಭವಿ. ನನಗೆ ಆ ಸುಂದರ ಪಿ.ಹೆಚ್.ಡಿ. ಹುಡುಗಿಯನ್ನು ಹೇಗೆ ಸಮಾಧಾನ ಪಡಿಸಬೇಕೆಂದು ತಿಳಿಯದೆ ಕಂಗಾಲಾದೆ. ಇಂತಹ ವಿಷಯಗಳಲ್ಲಿ ತಜ್ಞನಾದ ಡಾ.ನಾಗರಾಜನ (ಈಗಾಗಲೇ ಅವನಿಗೆ ಪಿ.ಹೆಚ್.ಡಿ. ದೊರೆತಿರುವುದರಿಂದ ಇನ್ನು ಮುಂದೆ ಡಾ.ನಾಗರಾಜ ಎಂದೇ ಕರೆಯುತ್ತೇನೆ) ಸಲಹೆ ಕೇಳಿದೆ.

ಸ್ನೇಹಭಂಗದ ನೆವ
ತಾಸುಗಟ್ಟಲೆ ಚಹ

ಪಿ.ಹೆಚ್.ಡಿ. ಕುರಿತು ಲೇವಡಿ ಮಾಡಿದ ನನ್ನನ್ನು ಡಾ. ನಾಗರಾಜ ಚೆನ್ನಾಗಿ ತರಾಟೆಗೆ ತೆಗೆದುಕೊಂಡ. ಇನ್ನು ಅವಳನ್ನು ಮರೆಯುವುದೇ ಲೇಸೆಂದು ತಿಳಿ ಹೇಳಿದ. ಡಾ. ನಾಗರಾಜ ಇನ್ನು ಮುಂದೆ ಪಿ.ಹೆಚ್.ಡಿ. ಮಾಡುವ ಹುಡುಗಿಯರ ಜೊತೆ ಹೇಗಿರಬೇಕೆಂದು ಎರಡೂವರೆ ಗಂಟೆಗಳ ಕಾಲ ಗುರುಸ್ಥಾನದಲ್ಲಿ ಕುಳಿತು ಉಪನ್ಯಾಸ ನೀಡಿದ. ಈ ಪಿ.ಹೆಚ್.ಡಿ. ಹುಡುಗಿಯ ಸ್ನೇಹಭಂಗದ ನೆವ ಮಾಡಿಕೊಂಡು ತಾಸುಗಟ್ಟಲೆ ಚರ್ಚಿಸುತ್ತ ಡಾ.ನಾಗರಾಜ ಮತ್ತು ನಾನು ಸಾಕಷ್ಟು ಚಹ ಕುಡಿದೆವು.

ವಿಜಯಪುರ ಜಿಲ್ಲೆಯ ಹಳ್ಳಿಯೊಂದರಿಂದ ಬಂದಿದ್ದ ಮಲ್ಲೇಶ ಎಂಬ ಮಿತ್ರನ ಊರಿಗೆ ಜಾತ್ರೆಗೆಂದು ಹೋಗಿದ್ದೆವು. ಅಲ್ಲಿಯ ಜನರ ಅತಿಥಿ ಸತ್ಕಾರ ಕಂಡು ನಾವೆಲ್ಲಾ ದಂಗಾದೆವು. ಏಕೆಂದರೆ ದೊಡ್ಡ ದೊಡ್ಡ ಲೋಟಗಳಲ್ಲಿ ಮಜ್ಜಿಗೆ ಕೊಡುವಂತೆ ಚಹ ಕೊಡುತ್ತಿದ್ದರು. ಮಿರ್ಚಿ, ಮಂಡಕ್ಕಿ ಮತ್ತು ಚಹದ ಸಮಾರಾಧನೆ ಅವಿರತವಾಗಿ ನಡೆದಿತ್ತು. ಡಾ||ನಾಗರಾಜನಿಗಂತೂ ಚಹ ಕುಡಿದಂತೆಲ್ಲ ಆ ಹಳ್ಳಿಯ ಜನರ ಮೇಲೆ ಪ್ರೀತಿ ಹೆಚ್ಚಾಗುತ್ತ ಹೋಯಿತು. ಮನೆಯ ಹಿತ್ತಲಿನಲ್ಲಿ ದೊಡ್ಡ ಹಂಡೆಯಲ್ಲಿ ಚಹ ಮಾಡುತ್ತಿದ್ದರು. ಡಾ||ನಾಗರಾಜನಂತೂ ಪದೇ ಪದೇ ಹಿತ್ತಲಿಗೆ ಹೋಗುವುದು ಬರುವುದು ಮಾಡುತ್ತಿದ್ದ. ಅಲ್ಲಿಯ ಅಡುಗೆಯವರೊಂದಿಗೆ ಸ್ನೇಹ ಬೆಳೆಸಿಕೊಂಡು ಪದೇ ಪದೇ ಚಹ ಕುಡಿಯುತ್ತ ಆನಂದದಿಂದ ಕಾಲ ಕಳೆಯುತ್ತಿದ್ದ.

ಜಾತ್ರೆ ಮುಗಿಸಿ ಧಾರವಾಡಕ್ಕೆ ಮರಳಿ ಬರುವಾಗ ಮಾತ್ರ ಡಾ||ನಾಗರಾಜ ತುಂಬ ಭಾವೋದ್ವೇಗಕ್ಕೋಳಗಾದ ಆ ಹಳ್ಳಿಯ ಜನರನ್ನು, ಅವರ ಆತಿಥ್ಯವನ್ನು, ಅವರ ಊರಿನ ಜಾತ್ರೆಯನ್ನು, ಅವರ ಊರಿನ ಅಡುಗೆಯವರನ್ನು ಮತ್ತು ವಿಶೇಷವಾಗಿ ಅವರು ಕೊಟ್ಟ ಚಹವನ್ನು ಹಾಡಿ ಹೊಗಳಿದ. ಕೊನೆಗೆ ಡಾ||ನಾಗರಾಜ ತಾನು ಬದುಕಿರುವವರೆಗೂ ಪ್ರತಿ ವರ್ಷ ಈ ಊರಿನ ಜಾತ್ರೆಗೆ ತಪ್ಪದೆ ಬರುವೆನೆಂದು ಘೋಷಣೆ ಮಾಡಿದ. ಹೀಗೆ ಘೋಷಣೆ ಮಾಡುವ ಮೂಲಕ ಆ ಹಳ್ಳಿಯ ಜನರ ಪ್ರೀತಿಗೆ ಪಾತ್ರನಾದ.

ವಧು ಪರೀಕ್ಷೆಗೂ ಉಪ್ಪಿಟ್ಟು, ಚಹ ಅಥವಾ ಅವಲಕ್ಕಿ, ಚಹಕ್ಕೂ ಬಿಡಿಸಲಾಗದ ನಂಟಿದೆ. ನಮ್ಮ ಉತ್ತರ ಕರ್ನಾಟಕದಲ್ಲಿ ವಧು ಪರೀಕ್ಷೆಗೆ ಹೋದಾಗ ಮೆನುವಿನಲ್ಲಿ ಏನು ಬೇಕಾದರೂ ಬದಲಾಗಬಹುದು ಆದರೆ ಉಪ್ಪಿಟ್ಟು ಅಥವಾ ಅವಲಕ್ಕಿಯೊಂದಿಗೆ ಚಹ ಖಾಯಂ. ತುಂಬ ವರ್ಷಗಳಿಂದ ಇದೊಂದು ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ. ಇದರ ಕುರಿತು ಸಂಶೋಧನೆ ಮಾಡಲು ರಸಾಯನಶಾಸ್ತ್ರಜ್ಞನೂ, ಚಹಾಪ್ರೇಮಿಯೂ ಆದ ಡಾ||ನಾಗರಾಜನಿಗೆ ಸೂಚಿಸಿದ್ದೇನೆ. ಬಹುಶಃ ಮುಂದಿನ ಐದಾರು ವರ್ಷಗಳಲ್ಲಿ ಇದರ ಕುರಿತು ಖಚಿತ ಮಾಹಿತಿ ಲಭ್ಯವಾಗುವ ಸಂಭವವಿದೆ.

ನನ್ನ ಹಿರಿಯ ಮಿತ್ರ ವಿನೋದನ ಮನೆಯವರೆಲ್ಲಾ ಸೇರಿ ಅವನಿಗೆ ಮದುವೆ ಮಾಡಲು ತೀರ್ಮಾನಿಸಿದ್ದರು. ಸರಿ, ವಿನೋದನಿಗೆ ತಕ್ಕ ಹುಡುಗಿಯನ್ನು ಆರಿಸಲು ಕನ್ಯಾನ್ವೇಷಣೆ ಶುರುವಾಯಿತು. ತುಂಬ ಒಳ್ಳೆಯವನೂ, ಸೃಜನಶೀಲ ಸ್ವಭಾವದವನೂ ಆದ ನನಗೆ ಆಗಾಗ ವಧು ಪರೀಕ್ಷೆಯಂತಹ ಸತ್ಕಾರ್ಯಕ್ಕೆ ಹೋಗಲು ಬುಲಾವುಗಳು ಬರುತ್ತಿರುತ್ತವೆ. ಹೊಸ ಹೊಸ ಅನುಭವಗಳಿಗಾಗಿ ಹಾತೊರೆಯುವ ನಾನು ಇಂತಹ ಆಹ್ವಾನಗಳನ್ನು ವಿನಯದಿಂದಲೇ ಸ್ವೀಕರಿಸುತ್ತೇನೆ.

ವಿನೋದ ಮಹಾಶಯ ನಡೆಸಿದ ಬಹುತೇಕ ವಧು ಪರೀಕ್ಷೆಗಳಲ್ಲೂ ನಾನು ಹಾಜರಿದ್ದೆ. ಕೆಲವು ಸಲ ವಿನೋದನಿಗೆ ವಧು ಹಿಡಿಸದಿದ್ದರೆ, ಇನ್ನು ಕೆಲವು ಸಲ ವಧುವಿಗೆ ವಿನೋದ ಹಿಡಿಸುತ್ತಿರಲಿಲ್ಲ. ಮತ್ತೆ ಕೆಲವು ಸಲ ವಧು-ವರರು ಪರಸ್ಪರ ಇಷ್ಟಪಟ್ಟರೂ ಅವರಿಬ್ಬರ ಮನೆಯವರಿಗೆ ಹೊಂದಾಣಿಕೆಯಾಗುತ್ತಿರಲಿಲ್ಲ. ಕೆಲವು ವಿಶೇಷ ಸಂದರ್ಭಗಳಲ್ಲಿ ವಧು-ವರ ಮತ್ತು ಅವರಿಬ್ಬರ ಮನೆಯವರು ಇಷ್ಟಪಟ್ಟರೂ ಅವರಿಬ್ಬರ ಮನೆದೇವರುಗಳ ವಿಷಯದಲ್ಲಿ ತಗಾದೆ ಏರ್ಪಟ್ಟು ಸಂಬಂಧ ಮುರಿದು ಬೀಳುತ್ತಿತ್ತು. ಹೀಗಾಗಿ ವಿನೋದನ ಮದುವೆ ವಿಳಂಬವಾಗುತ್ತಲೇ ಹೋಯಿತು.

ಸಾಮಾನ್ಯವಾಗಿ ವಧುವಿನ ಮನೆಯವರು ವರನ ಕಡೆಯವರಿಗೆ ತುಂಬ ಆದರ ತೋರಿಸುತ್ತಾರೆ. ನಮ್ಮ ಉತ್ತರ ಕರ್ನಾಟಕದ ಪದ್ಧತಿಯಂತೆ ಹೋದ ಕೂಡಲೇ ಉಪ್ಪಿಟ್ಟು, ಚಹ ಅಥವಾ ಅವಲಕ್ಕಿ, ಚಹ ಕೊಡುತ್ತಾರೆ. ವಧು ಪರೀಕ್ಷೆಯ ನೆವದಲ್ಲಿ ಹತ್ತು ಹಲವು ಪ್ರಚಲಿತ ವಿಷಯಗಳ ಕುರಿತು ಗಹನವಾದ ಚರ್ಚೆ ನಡೆಯುತ್ತದೆ. ವಧು-ವರರ ಮನೆಯವರು ತಮ್ಮ ತಮ್ಮ ಮನೆತನದ ಇತಿಹಾಸವನ್ನು ಸಾಕಷ್ಟು ವರ್ಣರಂಜಿತವಾಗಿ ಹೇಳಿ ಸಮಾಧಾನಪಟ್ಟುಕೊಳ್ಳುತ್ತಾರೆ. ಕೊನೆಗೆ ವಧುವನ್ನು ತೋರಿಸುವ ಕಾರ್ಯ ನಡೆಯುತ್ತದೆ. ಕೆಲವು ಸಲ ವಧು-ವರರಿಗೆ ಕೆಲವು ನಿಮಿಷಗಳ ಕಾಲ ಏಕಾಂತದಲ್ಲಿ ಮಾತನಾಡುವ ಅವಕಾಶ ನೀಡುತ್ತಾರೆ. ಇದು ವಧು ಪರೀಕ್ಷೆಯ ಕ್ಲೈಮ್ಯಾಕ್ಸ್. ಇಂತಹ ಸಂದರ್ಭಗಳಲ್ಲಿ ಆರಾಮವಾಗಿ ಕುಳಿತು ಬಿಸಿ ಬಿಸಿ ಚಹದ ಸ್ವಾದವನ್ನು ಆಸ್ವಾದಿಸುತ್ತ ವಧು ಪರೀಕ್ಷೆಯ ಪ್ರಹಸನವನ್ನು ನೋಡುವುದು ನನಗೆ ತುಂಬ ಸಂತೋಷ ನೀಡುತ್ತದೆ.

ಸಕ್ಕರೆ ರಹಿತ ಕಹಿ ಚಹ

ಒಂದು ಸಲ ವಿನೋದ, ಡಾ.ನಾಗರಾಜ ಮತ್ತು ನಾನು ಸೇರಿ ವಿನೋದನಿಗೆ ಕನ್ಯೆ ನೋಡಲು ದಾವಣಗೆರೆಗೆ ಹೋಗಿದ್ದೆವು. ಅಂದು ಮೊದಲ ನೋಟದಲ್ಲೇ ವಿನೋದನಿಗೆ ಕನ್ಯೆ ಇಷ್ಟವಾದಳು. ಕನ್ಯೆಗೂ ವಿನೋದ ಮಹಾಶಯ ಇಷ್ಟವಾದ. ಈ ಸಂದರ್ಭದಲ್ಲಿ ಒಂದು ಅಚಾತುರ್ಯ ನಡೆದು ಹೋಯಿತು. ನಾನು ಚಹಕ್ಕೆ ಸಕ್ಕರೆ ಹಾಕಿಲ್ಲವೆಂದು ಬಾಯಿತಪ್ಪಿ ಹೇಳಿಬಿಟ್ಟೆ. ಕೆಲವು ಕ್ಷಣ ಎಲ್ಲರೂ ಪೆಚ್ಚಾದರು. ವಿನೋದನಂತೂ ನನ್ನನ್ನು ದುರುಗುಟ್ಟಿಕೊಂಡು ನೋಡತೊಡಗಿದ.
ಈ ಸಮಯದಲ್ಲಿ ಡಾ.ನಾಗರಾಜ ಮಧ್ಯ ಪ್ರವೇಶ ಮಾಡಿ ಸಕ್ಕರೆ ಹಾಕದ ಚಹದ ಉಪಯೋಗಗಳ ಕುರಿತು, ಸಕ್ಕರೆ ಖಾಯಿಲೆಯ ಕುರಿತು ರಸಾಯನಶಾಸ್ತ್ರದ ದೃಷ್ಟಾಂತಗಳೊಡನೆ ಅರ್ಧಗಂಟೆಯ ಕಾಲ ತಜ್ಞ ವಿವರಣೆ ನೀಡಿದ. ಡಾ. ನಾಗರಾಜನ ಉಪನ್ಯಾಸ ಎಷ್ಟು ಚೆನ್ನಾಗಿ ಪ್ರಭಾವ ಬೀರಿತೆಂದರೆ ಅಂದು ಎಲ್ಲರೂ ಸಕ್ಕರೆ ರಹಿತ ಕಹಿ ಚಹವನ್ನೇ ಕುಡಿದರು.

ವಧು ಪರೀಕ್ಷೆ ಮುಗಿದ ಕೂಡಲೇ ವಿನೋದ ಮತ್ತು ಡಾ.ನಾಗರಾಜ ದಾವಣಗೆರೆಯ ಒಂದು ಚಹದಂಗಡಿಗೆ ನನ್ನನ್ನು ಕರೆದುಕೊಂಡು ಹೋದರು. ಅಲ್ಲಿ ಸಿಗುವ ವಿವಿಧ ಬಗೆಯ ಚಹ ತರಿಸಿ ಕೊಟ್ಟರು. ಚಹ ಕುಡಿಯುತ್ತ ವಿನೋದ ಮತ್ತು ಡಾ.ನಾಗರಾಜ ಅರ್ಧ ಗಂಟೆ ನನ್ನ ಟೀಕೆ ಮಾಡಿದರು. ವಿನೋದನಂತೂ, “ರಾಜಾs ಅವರ ಮನ್ಯಾಗs ಸಕ್ಕರಿs ಮುಗಿದಿರಬೇಕು. ಅದನ್ನs ನೀನು ದೊಡ್ಡದು ಮಾಡಿ ವೈನಿ ಮತ್ತು ಆಕೀs ಮನಿಯವರ ಮರ್ಯಾದಿs ಕಳೀತಿಯಲ್ಲೋs…” ಎಂದು ಹಲುಬಿದ.

ಡಾ.ನಾಗರಾಜ, “ದೋಸ್ತಾs ಇದನೆಲ್ಲಾ ಮನಸ್ಸಿಗೆ ಹಚಕೋಬ್ಯಾಡೋs ಅವಂಗs ಪುಸ್ತಕಾs ಮತ್ತ ಕ್ರಿಕೆಟುs ಇವೆರಡು ಬಿಟ್ರ ಬ್ಯಾರೆ ಏನೂs ಗೊತ್ತಿಲ್ಲ. ಬೆಂಗಳೂರನ್ಯಾಗ ಪಿ.ಹೆಚ್.ಡಿ. ಮಾಡೂ ಹುಡುಗಿ ಸಂಗ್ತೀ ಹೆಂಗ ಮಾತಾಡಬೇಕನ್ನೂದೂs ಗೊತ್ತಿಲ್ಲದ ಎಳಸು…” ಎಂದೆಲ್ಲ ಸಮಾಧಾನ ಪಡಿಸಿದ. ಡಾ. ನಾಗರಾಜ ಬೆಂಗಳೂರಿನ ಪಿ.ಹೆಚ್.ಡಿ. ಹುಡುಗಿಯ ಸ್ನೇಹಭಂಗದ ಕಥೆಯನ್ನು ವಿನೋದನಿಗೆ ಹೇಳಿದ. ಇದನ್ನು ಕೇಳಿ ವಿನೋದನ ಸಿಟ್ಟು ಇಳಿದು ಹೋಯಿತು. ವಿನೋದ “ಹೋಗ್ಲಿ ಬಿಡು ಅಳಿಯಾs ಈಗೇನು ರಗಡs ಮಂದಿ ಹುಡುಗೇರು ಪಿ.ಹೆಚ್.ಡಿ. ಮಾಡ್ತಾರs ಅಕೀs ಇಲ್ಲಂದ್ರ ಮತ್ತೊಬ್ಬಾಕೀs. ಈಗೇನು ಜಿಲ್ಲಾಕೊಂದು ಯೂನಿವರ್ಸಿಟಿ ಆಗ್ಯಾವು…” ಎಂದು ಮರಳಿ ನನಗೇ ಸಮಾಧಾನ ಪಡಿಸಿದ.

ಡಾ||ನಾಗರಾಜ ಮತ್ತು ವಿನೋದ ಇಬ್ಬರೂ ಸೇರಿ ಮುಂದೆ ಒಂದು ಗಂಟೆಯ ಕಾಲ ಹುಡುಗಿಯರೊಂದಿಗೆ ಹೇಗಿರಬೇಕೆಂದು ನನಗೆ ಜಂಟಿಯಾಗಿ ಉಪದೇಶ ನೀಡಿದರು. ವಧು-ವರರು ಪರಸ್ಪರ ಒಪ್ಪಿದ್ದರಿಂದ ಮುಂದಿನ ಎಲ್ಲ ಕಾರ್ಯಗಳು ಸಾಂಗವಾಗಿ ನಡೆದವು. ವಿನೋದ ಮಹಾಶಯ ಸಕ್ಕರೆ ರಹಿತ ಚಹ ಕೊಟ್ಟ ದಾವಣಗೆರೆಯ ಹುಡುಗಿಯನ್ನೇ ಮದುವೆಯಾಗಿ ತುಂಬ ಅಲ್ಲದಿದ್ದರೂ ತಕ್ಕಮಟ್ಟಿಗೆ ಸುಖವಾಗಿಯೇ ಇದ್ದಾನೆ.

ನನ್ನ ಇನ್ನೊಬ್ಬ ಹಿರಿಯ ಮಿತ್ರ ಮಂಜುನಾಥ. ಇವನು ಎಲ್ಲ ವಿಷಯದಲ್ಲೂ ವಿನೋದನೊಂದಿಗೆ ಸ್ಪರ್ಧೆ ನಡೆಸುತ್ತಾನೆ. ವಿನೋದ ಮದುವೆಯಾಗಿದ್ದರಿಂದ ತಾನೂ ಸಹ ಮದುವೆಯಾಗಲೇಬೇಕೆಂದು ತೀರ್ಮಾನಿಸಿದ. ಸರಿ, ವಧು ಪರೀಕ್ಷೆ ಆರಂಭವಾಯಿತು. ತುಂಬ ಒಳ್ಳೆಯ ಸ್ನೇಹಿತರಾದ ಡಾ. ನಾಗರಾಜ ಮತ್ತು ನನಗೆ ವಧು ಪರೀಕ್ಷೆಗೆ ಸಾಥ್ ಕೊಡಲು ಬುಲಾವು ಬಂದಿತು.

ಮಂಜುನಾಥನಿಗೆ ಕನ್ಯಾ ನೋಡುವ ನೆವದಲ್ಲಿ ಡಾ. ನಾಗರಾಜ ಮತ್ತು ನಾನು ಮಂಜುನಾಥನೊಂದಿಗೆ ಸೇರಿ ಹಲವು ಊರುಗಳಿಗೆ ಪ್ರವಾಸ ಮಾಡುವಂತಾಯಿತು. ಒಂದು ಬಾರಿ ನಮ್ಮ ಉತ್ತರ ಕರ್ನಾಟಕದಿಂದ ತುಂಬ ದೂರವಿರುವ ಹಾಸನ ದೇಶಕ್ಕೆ ಕನ್ಯಾ ನೋಡಲು ಹೋಗುವ ಪ್ರಸಂಗ ಬಂದಿತು. ಮಂಜುನಾಥ ಮತ್ತು ಅವನ ದೊಡ್ಡ ಕುಟುಂಬ ಹಾಸನ ದೇಶಕ್ಕೆ ಹೊರಟು ನಿಂತಿತ್ತು. ಸುದೀರ್ಘ ಪಯಣದ ನಂತರ ಅಂತೂ ಇಂತೂ ಹಾಸನ ದೇಶ ತಲುಪಿದೆವು. ಮೊದಲ ದಿನ ಪ್ರಯಾಣದ ಆಯಾಸವನ್ನು ಪರಿಹರಿಸುವ ಸಲುವಾಗಿ ವಿಶ್ರಾಂತಿ ಪಡೆದೆವು.

ಮರುದಿನ ಪ್ರಶಸ್ತ ಸಮಯ ನೋಡಿಕೊಂಡು ಮಂಜುನಾಥನ ದೊಡ್ಡ ಕುಟುಂಬ ವಧುವಿನ ಮನೆಗೆ ಲಗ್ಗೆಯಿಟ್ಟಿತು. ಹಾಸನ ದೇಶದವರು ತುಂಬ ಗೌರವದಿಂದ ನಮ್ಮನ್ನೆಲ್ಲ ಬರಮಾಡಿಕೊಂಡರು. ಸಾಕಷ್ಟು ಆದರದಿಂದ ಉಪಚರಿಸಿದರು. ವಧುವಿನ ಮನೆಯವರು ಚಹದ ಬದಲಾಗಿ ಕಾಫಿ ಕೊಟ್ಟಿದ್ದು ಗಂಡಿನ ಕಡೆಯವರಿಗೆ ಹಿಡಿಸಲಿಲ್ಲ. ಚಹಪ್ರೇಮಿಗಳಾದ ಅವರಿಗೆ ಕಾಫಿ ಕೊಟ್ಟದ್ದು ಒಂಚೂರೂ ಇಷ್ಟವಾಗಲಿಲ್ಲ. ಕಾಫಿಯನ್ನು ಕುಡಿಯುವಾಗ ಅವರ ಮುಖಭಾವ ಗಮನಿಸಿದರೆ ಇದು ಗೊತ್ತಾಗುತ್ತಿತ್ತು. ತುಂಬ ಗೆಲುವಾಗಿರುತ್ತಿದ್ದ ಡಾ. ನಾಗರಾಜ ಸಹ ಕೆಟ್ಟ ಮುಖ ಮಾಡಿಕೊಂಡು ಕಾಫಿ ಕುಡಿಯುತ್ತಿದ್ದ.

ಇದೇ ಸಮಯದಲ್ಲಿ ವಧುವಿನ ಜೊತೆಗಿದ್ದ ಹುಡುಗಿಯರಲ್ಲೊಬ್ಬಳು ವಿಶೇಷವಾಗಿ ನನ್ನ ಗಮನ ಸೆಳೆದಳು. ಆ ಹುಡುಗಿಯರ ಗುಂಪಿನಲ್ಲಿ ಅವಳೇ ಸುಂದರವಾಗಿದ್ದಳು. ಆ ಹುಡುಗಿ ಒಂದಾನೊಂದು ಕಾಲದ ನನ್ನ ಟ್ಯೂಷನ್ ಮೇಟಾದ ಶಿಲ್ಪಾಳಂತಿದ್ದಳು. ನಾನು ಆ ವಿಷಯವನ್ನು ಮಂಜುನಾಥನಿಗೂ ಹೇಳಿದೆ. ಅದು ಅವನಿಗೆ ಹಿಡಿಸಿದಂತೆ ಕಾಣಲಿಲ್ಲ. ಅಂತೂ ಇಂತೂ ವಧು ಪರೀಕ್ಷೆ ತುಂಬ ಯಾಂತ್ರಿಕವಾಗಿ ಮುಗಿಯಿತು.

ಹಾಸನ ದೇಶದಿಂದ ವಧು ಪರೀಕ್ಷೆ ಮುಗಿಸಿ ಮರಳಿದ ಬಳಿಕ ಮಂಜುನಾಥನ ಮನೆಯವರು ಕಾಫಿ ಕುಡಿಯುವ ಹಾಸನ ದೇಶದ ಹುಡುಗಿ ತಮ್ಮ ಮನೆಗೆ ಸೊಸೆಯಾಗಿ ಬರುವುದು ಬೇಡ ಎಂದು ತೀರ್ಮಾನಿಸಿದ್ದರಿಂದ ಆ ಸಂಬಂಧ ಮುರಿದು ಬಿತ್ತು. ನಾನು ವಧುವಿನ ಜೊತೆಗಿದ್ದ ಡಿಟ್ಟೋ ಶಿಲ್ಪಾಳ ಕುರಿತು ಮೆಚ್ಚಿ ಮಾತನಾಡಿದ್ದು ಮಂಜುನಾಥ ಮತ್ತು ಆತನ ಕುಟುಂಬದವರಿಗೆ ಇಷ್ಟವಾಗಿರಲಿಲ್ಲ.

ಡಿಟ್ಟೋ ಶಿಲ್ಪಾಳ ದೆಸೆಯಿಂದ ತುಂಬ ಒಳ್ಳೆಯ ಹುಡುಗನೆಂದು ಹೆಸರು ಪಡೆದ ನನಗೆ “ಈ ಹುಡುಗ ಈಗ ಮೊದಲಿನ ಹಾಗೆ ಒಳ್ಳೆಯವನಾಗುಳಿದಿಲ್ಲ! ಕನ್ಯಾ ನೋಡಲು ಹೋದಾಗ ಸುಮ್ಮನೆ ಚಹಾ ಕುಡಿದು ಬರುವುದು ಬಿಟ್ಟು ಕನ್ಯೆಯ ಜೊತೆಗಿರುವ ಹುಡುಗಿಯರ ಕುರಿತೆಲ್ಲ ಮಾತನಾಡುತ್ತಾನೆ…” ಎಂಬ ಗಂಭೀರ ಸ್ವರೂಪದ ಕಮೆಂಟುಗಳು ಬರತೊಡಗಿದವು.

ಹಾಸನ ದೇಶದ ಡಿಟ್ಟೋ ಶಿಲ್ಪಾಳ ಘಟನೆಯ ನಂತರ ನನಗೆ ಮತ್ತು ಡಾ. ನಾಗರಾಜನಿಗೆ ಕನ್ಯಾನ್ವೇಷಣೆಗೆ ಸಾಥ್ ಕೊಡಲು ಬುಲಾವುಗಳು ಬರುತ್ತಿಲ್ಲ. ಇದು ನಮ್ಮಿಬ್ಬರಿಗೂ ತುಂಬ ಬೇಸರ ಮೂಡಿಸಿತ್ತು. ನಾನು ಮತ್ತು ನಾಗರಾಜ ಸಾಕಷ್ಟು ಚಹ ಕುಡಿದು ಬಹುಬೇಗ ಈ ಬೇಸರವನ್ನು ಪರಿಹರಿಸಿಕೊಂಡೆವು.

ಚಹದ ಮಹಿಮೆಯೇ ಅಂತಹುದು ಅದರ ಕುರಿತು ಬರೆಯ ಹೊರಟರೆ ಮುಗಿಯುವುದೇ ಇಲ್ಲ. ಚಹಕ್ಕೆ ಸಂಬಂಧಿಸಿದ ಸ್ವಾರಸ್ಯಕರ ಪ್ರಸಂಗಗಳು ಪುಂಖಾನುಪುಂಖವಾಗಿ ಹೊರಬರುತ್ತಲೇ ಇರುತ್ತವೆ. ಇಲ್ಲಿ ಪ್ರಸ್ತಾಪಿಸಿದ ಪ್ರಸಂಗಗಳು ಕೇವಲ ಝಲಕುಗಳಷ್ಟೇ. ಚಹದ ಕುರಿತ ಪ್ರಸಂಗಗಳೆಲ್ಲವನ್ನೂ ದಾಖಲಿಸ ಹೊರಟರೆ ಅದೊಂದು ಹೆಬ್ಬೊತ್ತಿಗೆಯಾದೀತು. ಚಹದ ಕುರಿತು ನನಗಿರುವ ಪ್ರೀತ್ಯಾದರ ಅಪಾರ. ನನಗಂತೂ ಚಹದ ಕುರಿತು ಮಾತನಾಡುವುದು ಮತ್ತು ಚಹದ ಕುರಿತು ಬರೆಯುವುದೆಂದರೆ ಹಬೆಯಾಡುವ ತಾಜಾ ಚಹ ಕುಡಿದಷ್ಟೇ ಆನಂದ ನೀಡುತ್ತದೆ.