ವ್ಯಕ್ತಿಯೊಬ್ಬನಲ್ಲಿ ಒಡಮೂಡುವ ಭಾವನೆಗಳನ್ನು ಇನ್ನೊಂದು ಜೀವಿಗೆ ಸಂವಹಿಸುವ ಬಗೆಯಲ್ಲಿ ಆಯಾ ಪ್ರದೇಶದ ಸಾಂಸ್ಕೃತಿಕ ಅಂಶಗಳು ಪ್ರಧಾನ ಭೂಮಿಕೆಯಲ್ಲಿರುತ್ತವೆ ಎನ್ನುವುದೂ ಅಷ್ಟೇ ನಿಜವಾದ ಸಂಗತಿ. ವಿಸ್ತಾರವಾದ ಈ ಪ್ರಪಂಚದಲ್ಲಿ ಸಾಸ್ಕೃತಿಕ ಅಂಶಗಳು ಅನೇಕ ರೂಪಗಳಲ್ಲಿರುವುದು ಸಾಧ್ಯವಿದೆ. ಹೀಗಿರುವಾಗ ಹತ್ತಾರು ಸಾವಿರ ಮೈಲಿ ದೂರವಿರುವ ಪುಟ್ಟ ದೇಶದ ಚಲನಚಿತ್ರವೊಂದನ್ನು ನೋಡಿದಾಗ, ಇಗೋ ಇಲ್ಲೇ ನಮ್ಮ ಅಕ್ಕಪಕ್ಕದಲ್ಲಿರುವ ಮಧ್ಯಮ ವರ್ಗದ ಸಂಸಾರದಲ್ಲಿ ಹೀಗೆ ನಡೆಯಬಹುದು ಎನ್ನಿಸುವ ಹಾಗಿದ್ದರೆ ನಿಜಕ್ಕೂ ಸೋಜಿಗವಲ್ಲದೆ ಮತ್ತೇನು?
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್’ನಲ್ಲಿ ಇಸ್ರೇಲ್‌ನ ʻಬ್ರೋಕನ್ ವಿಂಗ್ಸ್ʼಸಿನಿಮಾದ ವಿಶ್ಲೇಷಣೆ
ಕಳೆದ ಶತಮಾನದ ಕೊನೆಯಲ್ಲಿ ಚಲನಚಿತ್ರ ನಿರ್ಮಾಣದಲ್ಲಿ ತಕ್ಕಮಟ್ಟಿಗೆ ಪ್ರಗತಿ ತೋರಿದ್ದ ಇಸ್ರೇಲ್‌ನ ಚಿತ್ರೋದ್ಯಮ ೨೧ನೇ ಶತಮಾನದಲ್ಲಿ ಬೆರಗು ಮೂಡಿಸುವ ಪ್ರತಿ ಮತ್ತು ಯಶಸ್ಸು ಕಂಡಿದೆ. ಇಪ್ಪತ್ತನೆ ಶತಮಾನದಲ್ಲಿ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರಶಸ್ತಿಯನ್ನು ಗಳಿಸಿರುವ ಚಿತ್ರಗಳು ಹಲವಾರು. ಇವುಗಳಲ್ಲಿ ಲೇಟ್ ಮ್ಯಾರೇಜ್(ಡೋವರ್ ಕೋಸಾಶ್ವಿಲ್ಲಿ), ವಾಕ್ ಆನ್ ವಾಟರ್(ಐಟಾನ್ ಫಾಕ್ಸ್), ಬೋಫೋರ್ಟ್(ಜೋಸಫ್ ಸೆಡರ್), ಬ್ಯಾಂಡ್ಸ್ ವಿಸಿಟ್) (ಎರಾನ್ ಕೋಲಿರಿನ್), ಸಿನಾನಿಮ್ಸ್(ನಾದವ್ ಲಪಿಡ್). ಅಜಮಿ(ಅಶದ್ ನೀ) ಮುಂತಾದ ಚಿತ್ರಗಳನ್ನು ಹೆಸರಿಸಬಹುದು. ಇವುಗಳ ಸಾಲಿಗೆ ಸೇರುವ ಚಿತ್ರ ನೀರ್ ಬರ್ಗ್ಮನ್ ನಿರ್ದೇಶನದ ʻಬ್ರೋಕನ್ ವಿಂಗ್ಸ್ʼ.
ಇದು ಅವರ ನಿರ್ದೇಶನದ ಮೊದಲ ಚಿತ್ರ! ಚಿತ್ರ 2002 ರಲ್ಲಿ ಟೋಕಿಯೋ ಚಲನಚಿತ್ರೋತ್ಸವ ಗ್ರಾಂಡ್ ಪ್ರಿ ಪ್ರಶಸ್ತಿ ಮತ್ತು 2003ರ ಬರ್ಲಿನ್ ಚಲನಚಿತ್ರೋತ್ಸವದಲ್ಲಿ ಮೂರು ಪ್ರಶಸ್ತಿಗಳೂ ಸೇರಿದಂತೆ ಒಟ್ಟು ಹದಿನಾಲ್ಕು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೀಬ್ರೂ, ಅರೇಬಿಕ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರಗಳೂ ನಿರ್ಮಾಣವಾಗುವ ಇಸ್ರೇಲ್ ಪ್ರಪಂಚದ ಮಧ್ಯ ಪೂರ್ವ ದೇಶಗಳಲ್ಲಿಯೇ ಅತಿ ಹೆಚ್ಚಿನ ಪ್ರಶಸ್ತಿಗಳನ್ನು ಗಳಿಸಿದ ದೇಶವೆನ್ನುವುದು ತಿಳಿದಾಗ ಅದರ ಹಿರಿಮೆ ಅರಿವಾಗುತ್ತದೆ.
ಇಸ್ರೇಲಿನ ಹೈಫಾದಲ್ಲಿ 1969 ರಲ್ಲಿ ಹುಟ್ಟಿದ ನೀರ ಬರ್ಗ್ಮನ್ ಕಲಾತ್ಮಕ ಭಾವಚಿತ್ರ ತೆಗೆಯುವುದರಲ್ಲಿ ಪರಿಣಿತ. ಕೆಲವು ಕಾಲ ಇಸ್ರೇಲಿ ರಕ್ಷಣಾ ವಿಭಾಗದಲ್ಲಿ ದಾಖಲಾಗಿದ್ದ ಅವನು ಟೆಲ್ ಅವೀವ್ ವಿಶ್ವ ವಿದ್ಯಾಲಯದಲ್ಲಿ ಪಡೆದ. ತರಬೇತಿಯಲ್ಲಿ ಅತ್ಯುತ್ತಮ ಚಿತ್ರಕಥೆಗಾಗಿ ಬಹುಮಾನ ಗಳಿಸಿದ. ಅನಂತರ 1992ರಲ್ಲಿ ಸ್ಯಾಮ್ ಸ್ಪೀಗಲ್‌ನ ಫಿಲ್ಮ್ ಮತ್ತು ಟೆಲಿವಿಷನ್ ಸಂಸ್ಥೆಯಲ್ಲಿ ಪದವಿ ಗಳಿಸಿದ.
ಮನುಷ್ಯನ ಮೂಲಭೂತ ಭಾವನೆಯ ಸೆಲೆಗಳಿಗೆ ಅವನ ಭೌಗೋಳಿಕ ನೆಲೆ ಯಾವ ಬಗೆಯ ತಡೆಯೊಡ್ಡುವುದಿಲ್ಲ ಎನ್ನುವುದು ಎಲ್ಲ ಕಾಲಕ್ಕೂ ನಿಜವಾಗಿರುವ ಸಂಗತಿ. ವ್ಯಕ್ತಿಯೊಬ್ಬನಲ್ಲಿ ಒಡಮೂಡುವ ಭಾವನೆಗಳು ಇನ್ನೊಂದು ಜೀವಿಗೆ ಸಂವಹಿಸುವ ಬಗೆಯಲ್ಲಿ ಆಯಾ ಪ್ರದೇಶದ ಸಾಂಸ್ಕೃತಿಕ ಅಂಶಗಳು ಪ್ರಧಾನ ಭೂಮಿಕೆಯಲ್ಲಿರುತ್ತವೆ ಎನ್ನುವುದೂ ಅಷ್ಟೇ ನಿಜವಾದ ಸಂಗತಿ. ವಿಸ್ತಾರವಾದ ಈ ಪ್ರಪಂಚದಲ್ಲಿ ಸಾಸ್ಕೃತಿಕ ಅಂಶಗಳು ಅನೇಕ ರೂಪಗಳಲ್ಲಿರುವುದು ಸಾಧ್ಯವಿದೆ. ಹೀಗಿರುವಾಗ ಹತ್ತಾರು ಸಾವಿರ ದೂರವಿರುವ ಪುಟ್ಟ ದೇಶದ ಚಲನಚಿತ್ರವೊಂದನ್ನು ನೋಡಿದಾಗ, ಇಗೋ ಇಲ್ಲೇ ನಮ್ಮ ಅಕ್ಕಪಕ್ಕದಲ್ಲಿರುವ ಮಧ್ಯಮ ವರ್ಗದ ಸಂಸಾರದಲ್ಲಿ ಹೀಗೆ ನಡೆಯಬಹುದು ಎನ್ನಿಸುವ ಹಾಗಿದ್ದರೆ ನಿಜಕ್ಕೂ ಸೋಜಿಗವಲ್ಲದೆ ಮತ್ತೇನು? ಇಂಥದೊಂದು ಭಾವನೆಯನ್ನು ಮೂಡಿಸಿದ್ದು ಇಸ್ರೇಲಿನ ನಿರ್ದೇಶಕ ನೀರ್ ಬರ್ಗ್ಮನ್‌ನ ಮೊದಲ ಪ್ರಯತ್ನದ ಹೀಬ್ರೂ ಭಾಷೆಯ ʻಬ್ರೋಕನ್ ವಿಂಗ್ಸ್ʼ ಚಿತ್ರ.
ತಮ್ಮ ದೇಶ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಪ್ಯಾಲೆಸ್ಟೇನ್ ಮತ್ತು ಇತರ ರಾಷ್ಟ್ರಗಳೊಂದಿಗೆ ಸದಾ ಒಂದಿಲ್ಲೊಂದು ಕಾರಣಕ್ಕೆ ಘರ್ಷಣೆಯಲ್ಲಿ ತೊಡಗಿ ಸಂಪೂರ್ಣವಾಗಿ ನಿರ್ನಾಮ ಹೊಂದುವ ಭಯ ಮತ್ತು ಆತಂಕಗಳಿಗೆ ಎದೆಯೊಡ್ಡುವ ಅನಿವಾರ್ಯತೆಯಲ್ಲಿರುವ ಇಸ್ರೇಲಿನ ರಾಜಕೀಯ ವಾತಾವರಣದ ಸೋಂಕಿಲ್ಲದೆ ಕೇವಲ ಮಾನವ ಸಂಬಂಧಗಳ ಸೂಕ್ಷತಮ ಪದರುಗಳನ್ನು ಚಿತ್ರ ಸಮರ್ಥವಾಗಿ ಪ್ರಸ್ತುತಪಡಿಸುತ್ತದೆ. ಈ ವಿಶೇಷತೆಗಾಗಿ ಅದು ಎಲ್ಲ ಭೌಗೋಳಿಕ ಸೀಮೆಗಳನ್ನು ಸುಲಭವಾಗಿ ದಾಟುತ್ತದೆ.
ಚಿತ್ರದ ಕಥಾವಸ್ತು ತೀರ ಸರಳ ಮತ್ತು ಸುಸಂಬದ್ಧ. ನಾಲ್ಕು ಮಕ್ಕಳೊಂದಿಗೆ ಇಸ್ರೇಲಿನ ಚಿಕ್ಕ ನಗರವೊಂದರಲ್ಲಿ ವಾಸಿಸುವ 43 ವರ್ಷದ ವಿಧವೆ ಡಾಫ್ನಾಗೆ ಆಸ್ಪತ್ರೆಯೊಂದರಲ್ಲಿ ಮಿಡ್ ವೈಫ್‌ನ ಕೆಲಸ. ಹೆಣ್ಣು ಮಕ್ಕಳಲ್ಲಿ ಹದಿನೇಳರ ಮಾಯಾಗೆ ಬಾರ್ ಚಿಕ್ಕ ವಯಸ್ಸಿನ ತಂಗಿ. ಗಂಡು ಮಕ್ಕಳಲ್ಲಿ ಕಾಲೇಜಿಗೆ ಹೋಗುತ್ತಿರುವ ತಾಯಿರ್‌ಗೆ ಹತ್ತು ವರ್ಷದ ತಮ್ಮ ಇಡೋ. ಮಾಯಾ ಒಂಬತ್ತು ತಿಂಗಳ ಹಿಂದೆ ಜೇನಿನಿಂದ ಕಡಿಸಿಕೊಂಡು ತೀರಿಕೊಂಡ ತಂದೆಯ ಬಗ್ಗೆ ಪದ್ಯವೊಂದನ್ನು ಬರೆದು ರಾಗ ಸಂಯೋಜನೆ ಮಾಡಿರುತ್ತಾಳೆ. ಅದನ್ನು ಪ್ರಸ್ತುತ ಪಡಿಸಲು ಉತ್ತಮ ವೇದಿಕೆಯ ಹುಡುಕಾಟ ಅವಳದು. ಓದಿನಲ್ಲದೆ ಬೇರೆ ವಿಷಯಗಳಲ್ಲೂ ಹೆಚ್ಚು ಆಸಕ್ತಿ ಇಲ್ಲದ ಯೇರ್ ಮನೆಯವರೆಲ್ಲರ ವಿಷಯದಲ್ಲೂ ಉತ್ಸಾಹ ಕಮ್ಮಿ. ಮಾಯಾಗೆ ತಾನು ಸಿದ್ಧಪಡಿಸುತ್ತಿದ್ದ ಹಾಡಿಗೆ ತಕ್ಕ ಭೂಮಿಕೆ ಒದಗದಿರುವುದಕ್ಕೆ ಅಮ್ಮನೂ ಕಾರಣಳೆಂದು ಅವಳ ಮೇಲೆ ಸಿಟ್ಟು. ಸಾಹಸ ಪ್ರವೃತ್ತಿಯ ಇಡೋ ಒಮ್ಮೆ ಮೇಲಿನಿಂದ ಹಾರಿ ಬಿದ್ದು ಅಪಘಾತಕ್ಕೊಳಗಾಗಿ ಕೋಮಾ ಸ್ಥಿತಿ ತಲುಪುತ್ತಾನೆ. ಆಸ್ಪತ್ರೆಯಲ್ಲಿ ಡಾಫ್ನಾಳಿಗೆ ಡಾಕ್ಟರೊಬ್ಬರ ಅನುಕಂಪ ದೊರೆಯುತ್ತದೆ. ಇದೇ ಸಂದರ್ಭದಲ್ಲಿ ಅವಕಾಶದ ನಿರೀಕ್ಷೆಯಲ್ಲಿರುವ ಮಾಯಾ ದೂರದ ಟೆಲ್ ಅವೀವ್‌ಗೆ ಹೋಗುತ್ತಾಳೆ. ಅಲ್ಲಿ ಸಫಲಳಾಗಿ ಹಿಂತಿರುಗುವ ಅವಳಿಗೆ ತಾಯಿಯ ಮೇಲಿನ ಪ್ರೀತಿ ಕಾಡುತ್ತದೆ. ಅವರಿಬ್ಬರೂ ಮಧ್ಯ ದಾರಿಯಲ್ಲೆ ಭೇಟಿಯಾಗಿ ಬರುವಾಗ ಇಡೋಗೆ ಪ್ರಜ್ಞೆ ಮರಳಿತೆಂಬ ಸುದ್ದಿ ತಿಳಿದು ಸಂತೋಷಪಡುತ್ತಾರೆ.
ಇಷ್ಟು ನೇರ ಮತ್ತು ಸರಳ ಕಥಾವಸ್ತುವನ್ನು ಹೊಂದಿದ ಚಿತ್ರವನ್ನು ಯಾವ ರೀತಿಯ ಅತಿರೇಕಗಳಿಲ್ಲದೆ ನೋಡಿದ ಸೂಕ್ಷಪ್ರಜ್ಞೆಯವರಿಗೆಲ್ಲ ತನ್ನ ಆಶಯವನ್ನು ಮನದಟ್ಟು ಮಾಡಬೇಕಾದಾಗ ಅದರ ಸೂತ್ರ ಹಿಡಿದ ನಿದೇರ್ಶಕನ ಸಾಮರ್ಥ್ಯದ ಮಹತ್ವದ ಮಜಲು ಅದರ ಚಿತ್ರಕಥೆ. ಇದರಲ್ಲಿ ನೀರ್ ಬರ್ಗ್ಮನ್ ಸಾಕಷ್ಟು ನಾವೀನ್ಯತೆಯನ್ನು ಮೆರೆದಿದ್ದಾನೆ. ಅದೆಂದರೆ ನೂರಕ್ಕಿಂತ ಹೆಚ್ಚು ದೃಶ್ಯಗಳಿರುವ ಈ ಚಿತ್ರದಲ್ಲಿ ದೃಶ್ಯಗಳ ಅವಧಿ ಸರಾಸರಿ ಒಂದು ನಿಮಿಷಕ್ಕಿಂತ ಕಡಿಮೆ. ಕಾರಣ ಇಡೀ ಚಿತ್ರದ ಅವಧಿ 87 ನಿಮಿಷಗಳು. ಜೊತೆಗೆ ಅನೇಕ ಬಾರಿ ದೃಶ್ಯಗಳನ್ನು ಒಂದು ಘಟ್ಟದಲ್ಲಿ ಮುಕ್ತಾಯ ಮಾಡಿ ಇನ್ನೊಂದು ದೃಶ್ಯದ ನಂತರ ಮತ್ತೆ ಮುಂದುವರಿಸುತ್ತಾನೆ. ಅವನು ಅನುಸರಿಸಿರುವ ಇನ್ನೊಂದು ಸೂತ್ರವೆಂದರೆ ತೀರ ಅವಶ್ಯಕವಾದ ಪಾತ್ರಗಳ ತೀವ್ರತರ ಭಾವನೆಗಳು ವ್ಯಕ್ತಪಡಿಸುವಾಗ ಸಮೀಪ ಚಿತ್ರಿಕೆ (ಕ್ಲೋಸ್ ಶಾಟ್)ಗಳನ್ನು ಬಿಟ್ಟರೆ ಹೆಚ್ಚಾಗಿ ಮಧ್ಯಮ(ಮೀಡಿಯಂ) ಮತ್ತು ಬೆರಳೆಣಿಕೆಯಷ್ಟು ದೂರ(ಲಾಂಗ್) ಚಿತ್ರಿಕೆಗಳ ಬಳಕೆ.
ತಮ್ಮ ದೇಶ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಪ್ಯಾಲೆಸ್ಟೇನ್ ಮತ್ತು ಇತರ ರಾಷ್ಟ್ರಗಳೊಂದಿಗೆ ಸದಾ ಒಂದಿಲ್ಲೊಂದು ಕಾರಣಕ್ಕೆ ಘರ್ಷಣೆಯಲ್ಲಿ ತೊಡಗಿ ಸಂಪೂರ್ಣವಾಗಿ ನಿರ್ನಾಮ ಹೊಂದುವ ಭಯ ಮತ್ತು ಆತಂಕಗಳಿಗೆ ಎದೆಯೊಡ್ಡುವ ಅನಿವಾರ್ಯತೆಯಲ್ಲಿರುವ ಇಸ್ರೇಲಿನ ರಾಜಕೀಯ ವಾತಾವರಣದ ಸೋಂಕಿಲ್ಲದೆ ಕೇವಲ ಮಾನವ ಸಂಬಂಧಗಳ ಸೂಕ್ಷತಮ ಪದರುಗಳನ್ನು ಚಿತ್ರ ಸಮರ್ಥವಾಗಿ ಪ್ರಸ್ತುತಪಡಿಸುತ್ತದೆ.
ಚಿತ್ರದ ಮೊದಲನೆಯ ಮೇಲಿನಿಂದ ಚಿತ್ರೀಕರಿಸಿದ ದೃಶ್ಯದಲ್ಲಿ ರೈಲ್ವೆ ಸ್ಟೇಷನ್‌ನ ವಿವರಗಳನ್ನು ಬಿಂಬಿಸುವುದರ ಜೊತೆಗೆ ಕೋಲು ಮುಖದ, ನೀಳ ಕಾಯದ ಮಾಯಾ ತನ್ನ ಸಂಗಡಿಗರೊಂದಿಗೆ ಹಾಡುತ್ತಿರುವ ಮೆಲುನಡೆಯ ಹಾಡುವ ದನಿಯನ್ನು ಕೇಳುತ್ತೇವೆ. ಕ್ಲೋಸ್ ಶಾಟ್‌ನಲ್ಲಿ ಅಲ್ಲಿನ ಅಸಮರ್ಪಕ ವ್ಯವಸ್ಥೆಯ ಬಗ್ಗೆ ಅವಳು ಹೇಳುತ್ತಿರುವಂತೆಯೇ ನಿರ್ದೇಶಕ ಇತರ ಸಹಾಯಕ ಪಾತ್ರಗಳನ್ನೂ ಪರಿಚಯಿಸುತ್ತಾನೆ. ಅಷ್ಟರಲ್ಲಿಯೇ ತನ್ನ ಹವ್ಯಾಸವನ್ನು ಒಪ್ಪದ ತಾಯಿಯಿಂದ ಬುಲಾವು ಬಂದರೂ ಅವಳು ತನ್ನ ಅಸಹಾಯಕತೆಯನ್ನು ತಿಳಿಸುತ್ತಾಳೆ. ಹೀಗೆ ಎರಡೂ ಪಾತ್ರಗಳು ಬೇರೆ ಬಗೆಯ ಒತ್ತಡದಲ್ಲಿರುವುದು ಪ್ರಾರಂಭದಿಂದಲೇ ಸೂಚಿತವಾಗುತ್ತದೆ. ಅನಂತರ ಮಾಯಾ ಸೈಕಲ್ ಹತ್ತಿ ಹೊರಟಾಗ ನಮಗೆ ಢಾಳಾಗಿ ಕಾಣುವುದು ಅವಳು ಬೆನ್ನಿಗೆ ತೊಟ್ಟಿಕೊಂಡಿರುವ ಪ್ಲಾಸ್ಟಿಕ್ ರೆಕ್ಕೆಗಳು. ಮನೆಗೆ ತಲುಪಿದಾಗ ಸ್ಟಾರ್ಟ್ ಆಗದ ಕಾರ್‌ನಿಂದಾಗಿ ಇನ್ನೂ ಅಲ್ಲೆ ಇರುವ ಸ್ಥೂಲ ಕಾಯದ, ತುಂಬಿಕೊಂಡ ಚೌಕು ಮುಖದ ತಾಯಿ ಹೊರಡಲು, ಬೈದುಕೊಂಡೇ ಕಾರನ್ನು ತಳ್ಳಿ ಸಹಕರಿಸುತ್ತಾಳೆ.
ಉದಾಹರಣೆಯೆಂದು ಪರಿಗಣಿಸಬಹುದಾದ ಇದರಲ್ಲಿ ನಿರ್ದೇಶಕನ ದೃಷ್ಟಿಕೋನ, ಪಾತ್ರಗಳು ವ್ಯಕ್ತಪಡಿಸಬೇಕಾದ ಭಾವದ ಮಟ್ಟದ ಬಗ್ಗೆ ಇರುವ ಹಿಡಿತ ವ್ಯಕ್ತವಾಗುತ್ತದೆ. ಫೋಟೋಗ್ರಫಿಯಲ್ಲಿ ವಿಶೇಷತೆಯನ್ನು ಕಾಣದಿದ್ದರೂ ನೀರ್ ಬರ್ಗ್ಮನ್ ಇಂಥ ಭಾವ ತೀವ್ರತೆಯುಳ್ಳ ಕಡೆಯಲ್ಲೆಲ್ಲ ಮೆಲುದನಿಯ ಸ್ಟ್ರಿಂಗ್ ಇನ್‌ಸ್ಟ್ರುಮೆಂಟ್‌ನ ಹಿನ್ನೆಲೆ ಸಂಗೀತವನ್ನು ಯಶಸ್ವಿಯಾಗಿ ಬಳಸಿದ್ದಾನೆ.
ಡಾಫ್ನಾಗೆ ಮನೆಯಲ್ಲಿದ್ದರೂ ಆಸ್ಪತ್ರೆಯಲ್ಲಿದ್ದರೂ ಮಕ್ಕಳಿಗೆ ಕಾಲ ಕಾಲಕ್ಕೆ ಬೇಕಾಗುವ ಅಗತ್ಯಗಳ, ಅವುಗಳ ಪೂರೈಕೆಯ ಚಿಂತೆ. ಇದಕ್ಕಾಗಿ ಇಡೋ ಹಾಗೂ ಬಾರ್‌ರ ಯೋಗಕ್ಷೇಮಕ್ಕಾಗಿ ಮಾಯಾ ಮತ್ತು ತಾಯಿರ್‌ನ ಸಹಾಯ ಪಡೆಯುತ್ತಿರುತ್ತಾಳೆ. ಮನೆಯಲ್ಲಿನ ವಾತಾವರಣವೂ ಅಷ್ಟೇ. ಅಲ್ಲಿ ಪಾತ್ರಗಳ ಪರಸ್ಪರ ಸಂಬಂಧ ಮತ್ತು ಒಟ್ಟಾರೆ ನಡವಳಿಕೆಗಳು ಸರಳ ಸಂತೋಷದ ರೀತಿಯಲ್ಲಿರದೆ ಮೆಲು ಉದ್ವೇಗದ, ಆತಂಕ, ದುಗುಡದ ಛಾಯೆ ಕಾಣಿಸುತ್ತದೆ. ಒಮ್ಮೆ ಮಾಯಾ ಸಿಟ್ಟಿನ ಭರದಲ್ಲಿ ತಂದೆ ಸಾಯುವುದಕ್ಕೆ ಬದಲಾಗಿ ತಾಯಿ ಸತ್ತಿದ್ದಿದ್ದರೆ ಒಳ್ಳೆಯದಾಗುತ್ತಿತ್ತೆಂದು ಅವಳೆದುರಿಗೇ ಹೇಳುತ್ತಾಳೆ. ಈ ದೃಶ್ಯದಲ್ಲಿ ಸಾಮಾನ್ಯಕ್ಕಿಂತ ಸುಮಾರು ಒಂದು ಸೆಕೆಂಡ್‌ನಷ್ಟು ಹೆಚ್ಚಿನ ಅವಧಿಯ ಅವರಿಬ್ಬರ ಚಿತ್ರಿಕೆಗಳಿವೆ. ಇದರಲ್ಲಿ ತಮ್ಮ ಅಂತರಾಳದಲ್ಲಿ ಮುಳುಗಿ, ಭಾವದೊತ್ತಡವನ್ನು ನಿಯಂತ್ರಿಸುತ್ತ, ಬಿಗಿ ಹಿಡಿದ ಅವರ ಮುಖಭಾವಗಳು ತೀರ ಸಹಜವೆನ್ನಿಸಿ ಉದ್ದೇಶಿತ ಪರಿಣಾಮ ಬೀರುತ್ತದೆ. ಇಂಥ ಕಡೆಗಳೆಲ್ಲೆಲ್ಲ ನಿರ್ದೇಶಕ ನೀರ್ ಬರ್ಗ್ಮನ್ ಕೆಲವೇ ಪದಗಳಿರುವ ಮಾತುಗಳನ್ನು ಬಳಸಿದ್ದಾನೆ.
ಚಿತ್ರದಲ್ಲಿ ಸಂಭವಿಸುವ ಪಾತ್ರಗಳ ಪೋಷಣೆಗೆ ಹೊಂದಿಕೊಂಡ ಸಣ್ಣ ಸಣ್ಣ ಘಟನೆಗಳಿಗೆ ಡಾಫ್ನಾಳ ಪ್ರತಿಕ್ರಿಯೆ ತಕ್ಕಮಟ್ಟಿಗೆ ತೀವ್ರ ಸ್ವರೂಪದ್ದು. ಗಂಡನಿಲ್ಲದೆ ಇಡೀ ಸಂಸಾರ ನಿರ್ವಹಣೆಯ ಜವಾಬ್ದಾರಿ ಹೊತ್ತ ಆಕೆಯ ಆತಂಕ ಮತ್ತು ಹೆಚ್ಚಾಗಿ ನೋಟ ಹಾಗೂ ಕೆಲವೇ ಮಾತುಗಳಲ್ಲಿ ಪ್ರಕಟವಾಗುವ ಬಗೆ ಅತ್ಯಂತ ಸಹಜ ರೂಪದಲ್ಲಿದೆ. ಡಾಫ್ನಾಳಿಗಿಂತ ಮಾಯಾಳ ಪಾತ್ರ ಹೆಚ್ಚು ತೀವ್ರ ಸ್ವರೂಪದ್ದಾದರೂ ನಿರ್ವಹಣೆಯಲ್ಲಿ ಅದು ಇನ್ನಷ್ಟು ಕೆಳಸ್ತರದಲ್ಲಿ ಮತ್ತು ಹೆಚ್ಚು ಪರಿಣಾಮಕಾರಿ ಎನ್ನಿಸಲು ಅದರ ಪಾತ್ರಧಾರಿಯ ಸಾಮರ್ಥ್ಯ ಹಾಗೂ ನಿರ್ದೇಶಕನ ಕಲ್ಪನೆಗಳು ಒಂದಕ್ಕೊಂದು ಪೂರಕವಾಗಿರುವುದು ಕಾರಣ.
ತಾಯಿರ್ ಓದು ಮುಂದುವರಿಸಲೆಂದು ಡಾಫ್ನಾ ಅವನನ್ನು ಒಬ್ಬ ಸಲಹೆಗಾರ್ತಿಯ ಬಳಿಗೆ ಕಳಿಸಿದ ಪ್ರಯತ್ನ ವ್ಯರ್ಥವಾದರೂ ಅವನು ಅದನ್ನು ಹಗುರವಾಗಿ ಸ್ವೀಕರಿಸುವುದಲ್ಲದೆ ಸಾಕಷ್ಟು ಸಮಯವನ್ನು ಗೆಳತಿಯ ಜೊತೆ ಕಳೆಯುತ್ತಾನೆ. ಅದರ ಬೆನ್ನಿಗೇ ಇಡೋ ನೀರಿಲ್ಲದ ಸ್ವಿಮಿಂಗ್ ಪೂಲ್‌ನಲ್ಲಿ ಅಷ್ಟೆತ್ತರದಿಂದ ಧುಮುಕುವ ಆಭ್ಯಾಸ ಮಾಡುತ್ತಿದ್ದು, ಅದನ್ನು ಬಾರ್‌ನ ಸಹಾಯದಿಂದ ಹ್ಯಾಂಡಿ ಕ್ಯಾಮ್‌ನಲ್ಲಿ ದಾಖಲು ಪಡಿಸುವುದಕ್ಕೆ ಪ್ರಯತ್ನಿಸುತ್ತಿದ್ದಾಗ ಏಟು ಬಿದ್ದು ಪ್ರಜ್ಞೆ ಕಳೆದುಕೊಳ್ಳುತ್ತಾನೆ. ಇದಕ್ಕೆ ಜಿನುಗುವ ಮಳೆಯ ಜೊತೆಗೆ ಕತ್ತಲಿಳಿದು ಇಡೀ ಘಟನೆಗೆ ಗಂಭೀರತೆಯ ಹಿನ್ನೆಲೆ ಒದಗಿಸುತ್ತದೆ. ಒಬ್ಬಳೇ ಓಡಿ ಬರುವ ಅವಳು ಮನೆಯವರಿಗೆ ಸುದ್ದಿ ತಿಳಿಸಿದ ನಂತರ ಅವನನ್ನು ಆಸ್ಪತ್ರೆಗೆ ಸೇರಿಸಿದ ನಂತರ ಸಹಜವಾಗಿ ಮನೆಯವರೆಲ್ಲ ಹೆಚ್ಚಿನ ಒತ್ತಡಕ್ಕೆ ಒಳಗಾಗುತ್ತಾರೆ. ಇಂಥ ಸನ್ನಿವೇಶದಲ್ಲಿ ಹಾಡು ಇತ್ಯಾದಿಗೆಂದು ಒಳ್ಳೆಯ ವ್ಯವಸ್ಥೆಯಲ್ಲಿ ಸೇರಿಕೊಳ್ಳಲೆಂದು ಟೆಲ್ ಅವೀವ್‌ಗೆ ಹೋದ ಮಾಯಾಳ ಸಂಗಾತಿಯೊಬ್ಬ ಅಲ್ಲಿಗೆ ಬರುವುದಕ್ಕೆ ಕೊಟ್ಟ ಕರೆಯನ್ನು ಅವಳು ಇಡೋನ ಪರಿಸ್ಥಿತಿಯಿಂದಾಗಿ ಮಾನ್ಯ ಮಾಡುವುದಿಲ್ಲ. ಹಾಗೆಂದು ಸಂಗಾತಿಗೆ ತಿಳಿಸುವುದೂ ಇಲ್ಲ. ಇತ್ತ ಆಸ್ಪತ್ರೆಯಲ್ಲಿ ಡಾಫ್ನಾ ಇಡೋನನ್ನು ನೋಡಿಕೊಳ್ಳುವುದರಲ್ಲಿ ನಿರತಳಾಗಿದ್ದಾಗ ತಮ್ಮದೇ ಪ್ರತ್ಯೇಕ ಸಂಸಾರವಿರುವ ಹೆಂಡತಿ ಮತ್ತು ಮಗಳಿಬ್ಬರನ್ನೂ ಅಮೆರಿಕದಲ್ಲೆ ಬಿಟ್ಟು ಬಂದ ಡಾಕ್ಟರ್ ವ್ಯಾಲೆಂಟೈನ್‌ನ ಅನುಕಂಪ ಮತ್ತು ಸಾಂತ್ವನ ದೊರೆಯುತ್ತದೆ.
ಇಡೋನ ಪರಿಸ್ಥಿತಿಯಲ್ಲಿ ಬದಲಾವಣೆ ಇರುವುದಿಲ್ಲ. ಆದರೆ ಮಾಯಾಳಿಗೆ ಹಾಡುವಿಕೆಯನ್ನು ಕುರಿತು ತನ್ನೊಳಗಿನ ಒತ್ತಡವನ್ನು ತಡೆಯಲಾಗುವುದಿಲ್ಲ. ದೃಢ ಮನಸ್ಸಿನಿಂದ ಸ್ನೇಹಿತನಿರುವ ಟೆಲ್ ಅವೀವ್‌ಗೆ ಹೊರಡುತ್ತಾಳೆ. ದಾರಿಯಲ್ಲೆ ಒಮ್ಮೆ ಫೋನ್ ಮಾಡಿ ಇಡೋ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಾಳೆ. ಇನ್ನಷ್ಟು ಗಂಭೀರಳಾಗಿಯೇ ಪ್ರಯಾಣ ಮಾಡಿದ ಅವಳು ಸ್ನೇಹಿತನೊಂದಿಗೆ ಸಂಪರ್ಕ ಪಡೆಯುವುದರಲ್ಲಿ ಯಶಸ್ವಿಯಾಗುತ್ತಾಳೆ. ಚಿತ್ರದ ಕಥನದ ಭಾಗವಾಗಿರುವ ಇವುಗಳನ್ನು ಮೀರಿದ ಸೂಕ್ಷ ಸ್ವರೂಪದ ಸನ್ನಿವೇಶ ಅವಳು ಭಾವ ಪರವಶಳಾಗಿ ನಿಧಾನ ಗತಿಯ ಮೆಲುದನಿಯಲ್ಲಿ ಹಾಡುವುದನ್ನು ರೆಕಾರ್ಡ್ ಮಾಡುವ ಮುಂಚಿನ ದೃಶ್ಯದಲ್ಲಿದೆ. ಅಲ್ಲಿನ ಮೇಲ್ವಿಚಾರಿಣಿ ಅವಳ ತಂದೆಯನ್ನು ಕುರಿತು ಪ್ರಶ್ನೆ ಮಾಡಿದಾಗ ಜೇನಿನಿಂದ ಕಡಿಸಿಕೊಂಡು ಸತ್ತ ಅವನ ಸಾವಿನ ಬಗ್ಗೆ ಮತ್ತು ಮಾಯಾಳಿಗೆ ತಂದೆಯ ಬಗ್ಗೆ ಇರುವ ಪ್ರೀತಿಯಾಳದ ಅರಿವು ನಮಗಾಗುತ್ತದೆ. ಹಾಡುವುದು ಮುಗಿಯುತ್ತಿದ್ದಂತೆಯೇ ಸ್ನೇಹಿತ ಕೂಗುತ್ತಿದ್ದರೂ ಗಮನಿಸದೆ ಹೊರನಡೆಯುವ ಅವಳು ಈ ಅಂಶವನ್ನು ಮತ್ತಷ್ಟು ಮನದಟ್ಟು ಮಾಡಿಸುತ್ತಾಳೆ. ಇದನ್ನು ಅಲ್ಪ ಅವಧಿಯ ದೂರ ಚಿತ್ರಿಕೆಯಲ್ಲಿಯೇ ಉದ್ದೇಶಿತ ಪರಿಣಾಮವನ್ನು ಉಂಟುಮಾಡುವಲ್ಲಿ ನಿರ್ದೇಶಕ ಸಫಲನಾಗುತ್ತಾನೆ.
ಆಸ್ಪತ್ರೆಯಲ್ಲಿ ಇಡೋಗೆ ಪ್ರಜ್ಞೆ ಇನ್ನೂ ಬಾರದೆ ಹೋಗುವುದರಿಂದ ಒಮ್ಮೆ ಡಾಫ್ನಾ ಉದ್ವೇಗಭರಿತಳಾಗಿ ವರ್ತಿಸುತ್ತಾಳೆ. ಇದನ್ನು ಅವನನ್ನು ನೋಡಿಕೊಳ್ಳುವ ಡಾಕ್ಟರ್ ಅನುಕಂಪದಿಂದ ನಿಭಾಯಿಸುತ್ತಾನೆ. ಇಡೋಗೆ ಬ್ಯಾಸ್ಕೆಟ್ ಬಾಲ್ ಬಗ್ಗೆ ಇರುವ ಅತಿಯಾದ ಒಲವು ತಾಯಿರ್‌ಗೆ ತಿಳಿದಿರುತ್ತದೆ. ಡಾಕ್ಟರ್ ಸಲಹೆಯಂತೆ ಅವನು ಆಸ್ಪತ್ರೆಯಲ್ಲಿಯೇ ಉತ್ಸಾಹ ಮತ್ತು ಆವೇಶ ತುಂಬಿದ ಆ ಆಟದ ವೈಖರಿಯನ್ನು ಕಾರ್ಯರೂಪಕ್ಕಿಳಿಸಿ ಅಣಕು ಮಾಡುತ್ತಾನೆ. ಅವನು ಹಾಗೆ ಮಾಡುತ್ತಿರುವಾಗ ಡಾಕ್ಟರ್ ವ್ಯಾಲಂಟೈನ್ ಇಡೋನ ಪ್ರತಿಕ್ರಿಯೆಗೆ ಕಾಯುತ್ತಿರುತ್ತಾನೆ
ತನ್ನ ಕೆಲಸ ಪೂರೈಸಿ ಊರಿಗೆ ವಾಪಸಾಗುವ ಮಾಯಾಳಿಗೆ ಅಲ್ಲೊಂದು ಕಡೆ ತಾಯಿಯ ನೆನಪು ಉಕ್ಕೇರುತ್ತದೆ. ಮನೆಗೆ ಫೋನ್ ಮಾಡಿ ಅವಳನ್ನು ತಾನಿರುವ ಸ್ಥಳಕ್ಕೆ ಬರಲು ಹೇಳುತ್ತಾಳೆ. ಇಬ್ಬರೂ ಭೇಟಿಯಾಗಿ ಅದೇ ಹಳೆಯ ಕಾರಿನಲ್ಲಿ ಹಿಂದಿರುಗುವಾಗ ಮಧ್ಯೆ ಡಾಕ್ಟರ್‌ನಿಂದ ಇಡೋಗೆ ಪ್ರಜ್ಞೆ ಬಂದ ಸುದ್ದಿ ತಿಳಿಯುತ್ತದೆ. ತಾಯಿ ಮಗಳಿಬ್ಬರೂ ಇದರಿಂದ ಸಹಜವಾಗಿಯೇ ನಿರಾಳವಾಗುತ್ತಾರೆ. ಹಿಂದಿನ ಕಷ್ಟದ ಮತ್ತು ಆತಂಕದ ದಿನಗಳನ್ನು ಮರೆತದ್ದನ್ನು ಸೂಚಿಸುವಂತೆ, ಮತ್ತೆ ಸ್ಟಾರ್ಟ್ ಆಗದ ಹಳೆಯ ಕಾರನ್ನು ಅಲ್ಲಿಯೇ ಬಿಟ್ಟು ಹೊರಡುತ್ತಾರೆ. ಅವರು ಹೆಜ್ಜೆ ಹಾಕುತ್ತಿದ್ದಂತೆ ರಾತ್ರಿ ಕಳೆದು ಬೆಳಗಾಗುತ್ತದೆ. ಅನಂತರ ತಿಳಿಬೆಳಕಿನಲ್ಲಿ ಅವರ ಒಂದೆರಡು ದೂರ ಚಿತ್ರಿಕೆಗಳು ಹೊಸ ಬಾಳಿಗೆ ಸಜ್ಜಾದ ಅವರು ವಾಹನವೊದರ ಕಡೆ ಉತ್ಸಾಹದಿಂದ ಓಡುವುದರ ಮೂಲಕ ಬಿಂಬಿಸುತ್ತವೆ. ಸಾಮಾನ್ಯವೆಂದು ಮೇಲುನೋಟಕ್ಕೆ ಕಾಣುವ ವಸ್ತು ಮತ್ತು ದೃಶ್ಯ ಮಾಧ್ಯಮದ ಎಲ್ಲ ಪರಿಕರಗಳನ್ನು ಬಳಸಿಕೊಂಡು ಶಕ್ತ ನಟವರ್ಗದ ಸಹಾಯದಿಂದ ಮೆಚ್ಚುಗೆ ಮತ್ತು ಮನ್ನಣೆಗೆ ಪಾತ್ರವಾದ ನಿರ್ದೇಶಕನ ಪ್ರತಿಭೆಗೆ ನಮಗರಿಯದೆ ತಲೆದೂಗುತ್ತೇವೆ.
ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ. ಪಿ. ಟಿ. ಸಿ. ಎಲ್.ನಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತ. ಸಾಹಿತ್ಯ, ನಾಟಕ ಮತ್ತು ದೃಶ್ಯಮಾಧ್ಯಮದಲ್ಲಿ ಆಸಕ್ತಿ. ಅದರಲ್ಲಿಯೂ ಸಣ್ಣ ಕಥೆ, ಅನುವಾದ, ಚಲನಚಿತ್ರ ವಿಮರ್ಶೆ ಮುಂತಾದವುಗಳ ಬಗ್ಗೆ ಹೆಚ್ಚಿನ ಗಮನ. ಹಾರು ಹಕ್ಕಿಯನೇರಿ(ಚಲನಚಿತ್ರ) ನಿರ್ದೇಶನವೂ ಇದರಲ್ಲಿ ಸೇರಿದೆ. ಚಿತ್ರಕಥೆಯ ಸ್ವರೂಪ ಮತ್ತು ಪ್ರತಿಫಲನ, ಬಿಡುಗಡೆ(ಕಥಾ ಸಂಕಲನ) ಅವರ ಇತ್ತೀಚಿನ ಪ್ರಕಟಣೆಗಳು.