ಈ ಬಗೆಯ ಸವಾಲು ಸೆಟ್ಲಮೆಂಟಿಗೆ ಬಂದ ಮೇಲೆ ಒಂದು ಹಂತದಲ್ಲಿ ಬದಲಾಯಿತು. ಕಾರಣ ಈ ಸೆಟ್ಲಮೆಂಟುಗಳಲ್ಲಿ ಕ್ರಿಮಿನಲ್ ಟ್ರೈಬ್ಸ್ ಎಂದು ಯಾವುದನ್ನು ಕರೆಯುತ್ತಿದ್ದರೋ ಆ ಸಮುದಾಯಗಳು ಒಟ್ಟಿಗೆ ಬಾಳುವುದಕ್ಕೆ ಆರಂಭಿಸಿದವು. ಅಂತೆಯೇ ಬ್ರಿಟಿಷರ ಕಣ್ಗಾವಲು, ಹಾರುವ ಹಕ್ಕಿಯನ್ನು ಪಂಜರದೊಳಿಟ್ಟಂತಹ ಸ್ಥಿತಿ -ಹೀಗೆ ಏನೆಲ್ಲವು ಸೆಟ್ಲಮೆಂಟಿನಲ್ಲಿದ್ದರೂ ಗ್ರಾಮೀಣ ಭಾಗದಲ್ಲಿದ್ದ ಅವಮಾನದ ಸ್ವರೂಪ ಇಲ್ಲದಾಯಿತು. ಸೆಟ್ಲಮೆಂಟಿನ ಪ್ರತ್ಯೇಕ ಶಾಲೆಗಳಲ್ಲಿ ಈ ಸಮುದಾಯವನ್ನು ಮೌಲ್ಯಮಾಪನ ಮಾಡಲು ಇತರೆ ಸಮುದಾಯದ ಮಕ್ಕಳು ಇರಲಿಲ್ಲ. ಹೀಗಾಗಿ ಶಿಕ್ಷಣಕ್ಕಾಗಿ ಶಾಲೆಗೆ ಕಡ್ಡಾಯವಾಗಿ ಹೋಗಲೇಬೇಕಾದ ಒತ್ತಡವೂ ಈ ಸಮುದಾಯದ ಮೇಲೆ ಬಿತ್ತು.
ಡಾ.ಅರುಣ್ ಜೋಳದ ಕೂಡ್ಲಿಗಿ ಬರೆಯುವ ‘ಗಂಟಿಚೋರರ ಕಥನಗಳು’ ಸರಣಿಯ ಹದಿಮೂರನೆಯ ಕಂತು.
ಗಂಟಿಚೋರ ಸಮುದಾಯದ ಶೈಕ್ಷಣಿಕ ಸ್ಥಿತಿಗತಿಗೂ ಅವರ ಬದುಕಿನಲ್ಲಾದ ಪಲ್ಲಟಗಳಿಗೂ ಒಂದಕ್ಕೊಂದು ಸಂಬಂಧವಿದೆ. ಮುಖ್ಯವಾಗಿ ಈ ಸಮುದಾಯ ಕ್ರಿಮಿನಲ್ ಟ್ರೈಬ್ ಎಂದು ಹಣೆಪಟ್ಟಿ ಕಟ್ಟಿಕೊಂಡು ಸೆಟ್ಲಮೆಂಟ್‌ಗೆ ಬಂದಾಗ ಈ ಸಮುದಾಯದ ಶಿಕ್ಷಣದ ಸ್ವರೂಪ ಬದಲಾಯಿತು. ಈತನಕ ತುಡುಗುತನದಲ್ಲಿದ್ದ ಕಾರಣ ಈ ಸಮುದಾಯ ಗ್ರಾಮೀಣ ಪ್ರದೇಶದಲ್ಲಿ ಅವಮಾನಕ್ಕೆ ಒಳಗಾಗುತ್ತಿತ್ತು. ಈ ಅವಮಾನವೇ ಶಾಲೆಯ ಕಡೆ ಈ ಸಮುದಾಯದ ಮಕ್ಕಳನ್ನು ಮುಖಮಾಡದಂತೆ ಮಾಡಿತ್ತು. ಲಕ್ಷ್ಮಣ್ ಗಾಯಕವಾಡ ಅವರ ಆತ್ಮಕಥೆ ಉಚಲ್ಯಾದಲ್ಲಿ ಈ ಸೂಕ್ಷ್ಮಗಳನ್ನು ದಾಖಲಿಸಿದ್ದಾರೆ. ಗಂಟಿಚೋರ ಸಮುದಾಯದ ಮಕ್ಕಳು ಶಾಲೆಗೆ ಹೋದಾಗ ಶಾಲೆಯಲ್ಲಿ ಏನೇ ಕಳವಾದರೂ ಯಾರೇ ಕದ್ದರೂ ಈ ಮಕ್ಕಳಿಗೆ ಶಿಕ್ಷೆ ಕೊಡುವ ವಾತಾವರಣವೊಂದು ಸ್ವತಂತ್ರ್ಯ ನಂತರದ ಶಾಲೆಗಳ ವಾತಾವರಣದಲ್ಲಿತ್ತು. ಇದರ ಪರಿಣಾಮ ಗ್ರಾಮೀಣ ಭಾಗದಲ್ಲಿ ಈ ಸಮುದಾಯ ಶಿಕ್ಷಣಕ್ಕೆ ತೆರೆದುಕೊಳ್ಳುವುದು ದೊಡ್ಡ ಸವಾಲಾಗಿತ್ತು.
ಈ ಬಗೆಯ ಸವಾಲು ಸೆಟ್ಲಮೆಂಟಿಗೆ ಬಂದ ಮೇಲೆ ಒಂದು ಹಂತದಲ್ಲಿ ಬದಲಾಯಿತು. ಕಾರಣ ಈ ಸೆಟ್ಲಮೆಂಟುಗಳಲ್ಲಿ ಕ್ರಿಮಿನಲ್ ಟ್ರೈಬ್ಸ್ ಎಂದು ಯಾವುದನ್ನು ಕರೆಯುತ್ತಿದ್ದರೋ ಆ ಸಮುದಾಯಗಳು ಒಟ್ಟಿಗೆ ಬಾಳುವುದಕ್ಕೆ ಆರಂಭವಾದವು ಅಂತೆಯೇ ಬ್ರಿಟೀಷರ ಕಣ್ಗಾವಲು, ಹಾರುವ ಹಕ್ಕಿಯ ಪಂಜರದೊಳಿಟ್ಟಾಗಿನ ಹಿಂದೆ ಏನೆಲ್ಲವು ಸೆಟ್ಲಮೆಂಟಿನಲ್ಲಿದ್ದರೂ ಗ್ರಾಮೀಣ ಭಾಗದಲ್ಲಿದ್ದ ಅವಮಾನದ ಸ್ವರೂಪ ಇಲ್ಲದಾಯಿತು. ಸೆಟ್ಲಮೆಂಟಿನ ಪ್ರತ್ಯೇಕ ಶಾಲೆಗಳಲ್ಲಿ ಈ ಸಮುದಾಯವನ್ನು ಮೌಲ್ಯಮಾಪನ ಮಾಡಲು ಇತರೆ ಸಮುದಾಯದ ಮಕ್ಕಳು ಇರಲಿಲ್ಲ. ಹೀಗಾಗಿ ಶಾಲೆಗೆ ಕಡ್ಡಾಯವಾಗಿ ಹೋಗಲೇಬೇಕಾದುದು ಸಹ ಈ ಸಮುದಾಯದ ಶಿಕ್ಷಣಕ್ಕೆ ಒತ್ತು ಬಿತ್ತು. ಇದರಿಂದಾಗಿ ಗಂಟಿಚೋರ ಸಮುದಾಯವು ಶಿಕ್ಷಣಕ್ಕೆ ತೆರೆದುಕೊಳ್ಳುವಲ್ಲಿ ಸೆಟ್ಲಮೆಂಟು ಒಂದು ಬಗೆಯಲ್ಲಿ ವರವೂ ಆಯಿತು. ಇದೀಗ ಗೋಕಾಕ, ಬೆಳಗಾಂ, ಹುಬ್ಬಳ್ಳಿ, ಗದಗ ಮೊದಲಾದನಗರದಲ್ಲಿ ನೆಲೆಸಿದ ಗಂಟಿಚೋರರು ಸೆಟ್ಲಮೆಂಟುಗಳಲ್ಲಿ ಶಿಕ್ಷಣ ಪಡೆದವರೇ ಆಗಿದ್ದಾರೆ.
ಸಾಂಪ್ರದಾಯಿಕ ಶಿಕ್ಷಣದ ಸ್ವರೂಪ:
ಗಂಟಿಚೋರ ಸಮುದಾಯದ ಹಿರಿಯರ ಜತೆ ಮಾತನಾಡಿದಾಗ ಈ ಸಮುದಾಯದ ಬಗ್ಗೆ ಇರುವ ಅಧ್ಯಯನಗಳನ್ನು ಗಮನಿಸಿದಾಗ ಈ ಸಮುದಾಯದ ಸಾಂಪ್ರದಾಯಿಕ ಶಿಕ್ಷಣದ ಬಗ್ಗೆ ಒಂದು ಅರಿವು ಬರುತ್ತದೆ. ಮುಖ್ಯವಾಗಿ ಈ ಸಮುದಾಯದ ಸಾಂಪ್ರದಾಯಿಕ ಶಿಕ್ಷಣ ಅಥವಾ ಅನೌಪಚಾರಿಕ ಶಿಕ್ಷಣ ಅದು ತುಡುಗುತನಕ್ಕೆ ಸಂಬಂಧಿಸಿದ್ದಾಗಿದೆ. ಈ ಸಮುದಾಯದ ಮಕ್ಕಳು ಶಾಲಾ ಶಿಕ್ಷಣ ಕಲಿಯದೆ, ತಮ್ಮ ಸಮುದಾಯದ ಪ್ರವೃತ್ತಿಯಾಗಿದ್ದ ಕಳ್ಳತನ ಅಥವಾ ತುಡುಗುತನವನ್ನು ಕಲಿಯಬೇಕಾಗಿತ್ತು. ಇದೇನು ಉದ್ದೇಶಪೂರ್ವಕ ಶಿಸ್ತುಬದ್ಧ ಕಲಿಕೆಯ ಕ್ರಮವಾಗಿರಲಿಲ್ಲ ಬದಲಾಗಿ ಈ ಸಮುದಾಯದ ದಿನಬದುಕಿನ ಭಾಗವಾಗಿಯೇ ಈ ಶಿಕ್ಷಣ ಮಕ್ಕಳಲ್ಲಿ ಕರಗತವಾಗುತ್ತಿತ್ತು. ಹಾಗಾಗಿ ಗಂಟಿಚೋರರ ಸಾಂಪ್ರದಾಯಿಕ ಶಿಕ್ಷಣವೆಂದರೆ ಅದು ಮರಳಲ್ಲಿ ಅಕ್ಷರ ತಿದ್ದುವ ಕಲಿಕೆಯಾಗಿರಲಿಲ್ಲ, ಈ ಸಮುದಾಯದ ಮಕ್ಕಳು ಹಿರಿಯರು ಪೋಲಿಸರ ಕೈಲಿ ಸಿಕ್ಕಿಕೊಂಡರೆ ಹೊಡೆತ ಬೀಳದಂತೆ ಮೈ ಮರವಾಗಬೇಕೆಂದು ಅದೇ ಸುಡುವ ಮರಳಲ್ಲಿ ಹೊರಳಾಡುತ್ತಿದ್ದರು. ಇದನ್ನು ಲಕ್ಷ್ಮಣ ಗಾಯಕವಾಡ ಅವರು ತಮ್ಮ ಆತ್ಮ ಕಥನದಲ್ಲಿ ಉಲ್ಲೇಖಿಸುತ್ತಾರೆ.
`ಈಗ ದಾದಾನ ಕಳ್ಳತಂಡದಲ್ಲಿ ಅಣ್ಣಾ, ಭಾವ ಇವರೂ ಸೇರಿದರು. ಅವರಿಗೆ ನೌಕರಿ ಮಾಡುವ ಇಚ್ಚೆ ಇತ್ತು. ಆದರೆ ಗಂಟಿಚೋರರಾದ ನಮಗೆ ಯಾರೂ ಕೆಲಸ ಕೊಡುತ್ತಿರಲಿಲ್ಲ. ಹೊಲಗೆಲಸವೂ ಸಿಗುತ್ತಿರಲಿಲ್ಲ. ಈ ಗಂಟುಚೋರರು ಹಗಲು ಕೆಲಸ ಮಾಡಿ, ರಾತ್ರಿ ಕಳ್ಳತನ ಮಾಡುತ್ತಾರೆಂಬ ವದಂತಿ ಎಲ್ಲೆಡೆ ಹಬ್ಬಿತ್ತು. ಹೀಗಾಗಿ ಅವರಿಗೂ ದಾದಾನಂತೆ ತರಬೇತಿ ನೀಡಿ ತಯಾರು ಮಾಡಲಾಯಿತು.
ನಮ್ಮಲ್ಲಿ ಕಳ್ಳತನದ ಶಿಕ್ಷಣ ನೀಡಲು ಕೆಲವು ತಂಡಗಳಿವೆ. ಇವುಗಳನ್ನು ನಾಲ್ಕು ಗುಂಪುಗಳನ್ನಾಗಿ ಮಾಡಬಹುದು. 1. ಕಿಸೆಗಳ್ಳತನ, 2. ಚಪ್ಪಲಿ ಮತ್ತು ಗಂಟುಚೋರತನ, 3. ವಂಚನೆ(ನಕಲಿ ಬಂಗಾರದ ಬದಲಿಗೆ ಅಸಲಿ ಬಂಗಾರವನ್ನು ಆರಿಸುವುದು) 4. ಠಕ್ಕತನ. ತಂದೆತಾಯಿಯರು ಹೊಡೆದು ಬಡಿದು ಈ ಶಿಕ್ಷಣ ನೀಡುತ್ತಾರೆ. ಅಥವಾ ಆಯಾ ತಂಡದವರಿಂದ ಶಿಕ್ಷಣ ನಡೆಯುತ್ತದೆ. (ಉಚಲ್ಯಾ:2011:16)
ಗಾಯಕವಾಡ ಅವರು ಹೇಳುವಂತೆ ಮಕ್ಕಳಿಗೆ ಕಳವಿನ ತರಬೇತಿ ನೀಡಿ ಅವರನ್ನು ಭವಿಷ್ಯದ ಕಳ್ಳನನ್ನಾಗಿ ಮಾಡಲಾಗುತ್ತಿತ್ತು. ಹೀಗೆ ಶಿಕ್ಷಣದ ಗ್ರಹಿಕೆಯೇ ಈ ಸಮುದಾಯದಲ್ಲಿ ಅದು ತುಡುಗು ಕಲಿಸುವುದು ಎಂದಾಗಿತ್ತು. ಇದೊಂದು ಪ್ರಾಯೋಗಿಕ ಕಲಿಕೆಯಾಗಿತ್ತು. ಕಳ್ಳತನ ಮಾಡುತ್ತಲೇ ಇದನ್ನು ಕಲಿಯಬೇಕಿತ್ತು. ಒಂದು ಪಕ್ಷ ಕಲಿಕೆಯ ಸಂದರ್ಭದಲ್ಲಿಯೇ ಸಿಕ್ಕಿಹಾಕಿಕೊಂಡರೆ ಅಂತವರಿಗೆ ಸಿಕ್ಕಿಹಾಕಿಕೊಳ್ಳದ ಹಾಗೆ ಕಳ್ಳತನ ಮಾಡುವುದು ಮುಂತಾಗಿ ಕಲಿಸಲಾಗುತ್ತಿತ್ತು. ಸಿಕ್ಕಿಹಾಕಿಕೊಂಡ ಮಕ್ಕಳನ್ನು ಜನರು ಸೇರಿ ತುಂಬಾ ಹೊಡೆಯುತ್ತಿದ್ದರೆ ಹಿರಿಯರು ಮಧ್ಯಪ್ರವೇಶಿಸಿ ಪಾಪ ಹುಡುಗ ಬಿಡಿ ಏನೋ ಹೊಟ್ಟೆಪಾಡಿಗೆ ಮಾಡಿದ್ದಾನೆ ಎಂದು ಕರುಣೆ ಹುಟ್ಟಿಸಿ ಬಚಾವು ಮಾಡುವ ಪದ್ಧತಿಯೂ ಇತ್ತು. ಇದನ್ನು ನೋಡಿದರೆ ಗಂಟಿಚೋರ ಸಮುದಾಯದ ಸಾಂಪ್ರದಾಯಿಕ ಶಿಕ್ಷಣವೆಂದರೆ ಇದುವೇ ಆಗಿತ್ತು. ಈ ಸಾಂಪ್ರದಾಯಿಕ ಶಿಕ್ಷಣ ಸಂಪೂರ್ಣ ಬದಲಾಗಿದೆ. ಇಲ್ಲವೇ ಇಲ್ಲವೆನ್ನುವಷ್ಟು ಸ್ಥಗಿತವಾಗಿದೆ. ಕಾರಣ ಈ ಕಲಿಕೆಗೆ ಕಾರಣವಾದ ತುಡುಗು ವೃತ್ತಿಯನ್ನು ತ್ಯಜಿಸಿದಂತೆಲ್ಲಾ ಈ ವೃತ್ತಿಯ ಸಾಂಪ್ರದಾಯಿಕ ಕಲಿಕೆ ಸಹಜವಾಗಿ ಇಲ್ಲವಾಗಿದೆ.
ಆಧುನಿಕ ಶಿಕ್ಷಣದ ಚಾರಿತ್ರಿಕ ಹಿನ್ನೆಲೆ:
ಗಂಟಿಚೋರ ಸಮುದಾಯದ ಮಕ್ಕಳು ಅನೌಪಚಾರಿಕವಾಗಿ ತುಡುಗುತನದ ಶಿಕ್ಷಣ ಕಲಿಯುತ್ತಿದ್ದ ಸಂಪ್ರದಾಯ ಬದಲಾದದ್ದು ಸಾರ್ವಜನಿಕ ಶಿಕ್ಷಣ ಪದ್ಧತಿ ಜಾರಿಗೆ ಬಂದ ನಂತರ. ಅದರಲ್ಲೂ ಸ್ವಾತಂತ್ರ್ಯಾ ನಂತರದಲ್ಲಿ ನಿಧಾನಕ್ಕೆ ಈ ಸಮುದಾಯದ ಮಕ್ಕಳು ಸಾರ್ವಜನಿಕ ಶಿಕ್ಷಣಕ್ಕೆ ಹೊಂದಿಕೊಳ್ಳತೊಡಗಿದರು. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಆರಂಭಿಕ ಶಾಲೆಗಳು ದೇವಸ್ಥಾನಗಳಲ್ಲಿ ಆರಂಭವಾದ ಕಾರಣ ಮೇಲುಜಾತಿ ಮಕ್ಕಳು ಮೊದಲ ಹಂತದಲ್ಲಿ ಶಿಕ್ಷಣಕ್ಕೆ ತೆರೆದುಕೊಂಡವು. ಕಾಲಾನಂತರದಲ್ಲಿ ಶಾಲೆ ದೇವಸ್ಥಾನದಿಂದ ಬೇರ್ಪಟ್ಟು ಸಾರ್ವಜನಿಕ ಕಟ್ಟಡಗಳು ಆರಂಭವಾದಂತೆ `ಸಾಲಿಗುಡಿ’ ಎನ್ನುವ ಕಲ್ಪನೆ ನಿಧಾನಕ್ಕೆ ಬದಲಾಗಿ `ಶಾಲೆ’ ಎನ್ನುವ ಪ್ರತ್ಯೇಕ ಅಸ್ತಿತ್ವವೊಂದು ರೂಪುಗೊಂಡಿತು. ಹೀಗೆ ಶಾಲೆ ಸಾರ್ವಜನಿಕ ಸ್ಥಳವಾಗಿ ಮಾನ್ಯತೆ ಪಡೆದು, ಈ ಮಾನ್ಯತೆ ಜನಸಾಮಾನ್ಯರ ಅರಿವಿಗೆ ಬರಲು ಒಂದೆರಡು ದಶಕಗಳೇ ಕಳೆದಿವೆ. ಆ ನಂತರದಲ್ಲಿ ನಿಧಾನಕ್ಕೆ ಬುಡಕಟ್ಟು ಸಮುದಾಯದ ಮಕ್ಕಳು ಶಾಲೆಗೆ ಸೇರಿ ವಿದ್ಯಾಭ್ಯಾಸ ಮಾಡುವ ಹೊಸ ನೆಲೆಯೊಂದು ರೂಪುಗೊಂಡಿತು.
ಗಂಟಿಚೋರ ಸಮುದಾಯ ನೆಲೆಸಿರುವ ಮುಂಬೈ ಕರ್ನಾಟಕದ ಭಾಗದಲ್ಲಿ ಬೇರೆಯದೇ ಸ್ಥಿತಿ ಇತ್ತು. ಕಾರಣ ಈ ಭಾಗದಲ್ಲಿ ಹೆಚ್ಚು ಜಮೀನ್ದಾರರು ಇದ್ದ ಕಾರಣ ಗಂಟಿಚೋರರಂತಹ ಪುಟ್ಟ ಸಮುದಾಯ ಶಿಕ್ಷಣ ಪಡೆಯುವುದು ಕಷ್ಟವಿತ್ತು. ಈ ಮಾತು ಗ್ರಾಮೀಣ ಪ್ರದೇಶದ ಗಂಟಿಚೋರ್ಸ್ ಸಮುದಾಯಕ್ಕೆ ನೇರವಾಗಿ ಅನ್ವಯವಾಗುತ್ತದೆ. ಆದರೆ ಸೆಟ್ಲಮೆಂಟ್‌ವಾಸಿ ಗಂಟಿಚೋರರ ಪರಿಸ್ಥಿತಿ ಇದಕ್ಕೆ ವಿರುದ್ಧವಾಗಿತ್ತು. ಕಾರಣ ಸೆಟ್ಲಮೆಂಟುಗಳಲ್ಲಿ ಬ್ರಿಟೀಷರೇ ಕಡ್ಡಾಯ ಶಿಕ್ಷಣವನ್ನು ತಂದಿದ್ದರು. ಹೀಗಾಗಿ ಅನಿವಾರ್ಯ ಈ ಸಮುದಾಯದ ಮಕ್ಕಳು ಶಾಲೆಗೆ ಸೇರಿ ಶಿಕ್ಷಣ ಪಡೆಯಬೇಕಾಯಿತು.
ಗಂಟಿಚೋರ ಸಮುದಾಯದ ಮಕ್ಕಳು ಶಾಲೆಗೆ ಹೋದಾಗ ಶಾಲೆಯಲ್ಲಿ ಏನೇ ಕಳವಾದರೂ ಯಾರೇ ಕದ್ದರೂ ಈ ಮಕ್ಕಳಿಗೆ ಶಿಕ್ಷೆ ಕೊಡುವ ವಾತಾವರಣವೊಂದು ಸ್ವತಂತ್ರ್ಯ ನಂತರದ ಶಾಲೆಗಳ ವಾತಾವರಣದಲ್ಲಿತ್ತು. ಇದರ ಪರಿಣಾಮ ಗ್ರಾಮೀಣ ಭಾಗದಲ್ಲಿ ಈ ಸಮುದಾಯ ಶಿಕ್ಷಣಕ್ಕೆ ತೆರೆದುಕೊಳ್ಳುವುದು ದೊಡ್ಡ ಸವಾಲಾಗಿತ್ತು.
ಆರಂಭಕ್ಕೆ ಸಾಂಪ್ರದಾಯಿಕ ವೃತ್ತಿಯ ಅನೌಪಚಾರಿಕ ಶಿಕ್ಷಣಕ್ಕೆ ಕಾಲಿಟ್ಟಾಗಲೂ ಈ ಸಮುದಾಯದ ಮಕ್ಕಳು ತುಂಬಾ ಅವಮಾನವನ್ನು ಅನುಭವಿಸಬೇಕಾಯಿತು. ಈ ಜಾತಿಯ ಅವಮಾನದ ಕಾರಣಕ್ಕೆ ಈಗಲೂ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣದ ಪ್ರಮಾಣ ನಗರದ ಪ್ರಮಾಣಕ್ಕೆ ಹೋಲಿಸಿಕೊಂಡರೆ ತುಂಬಾ ಕಡಿಮೆ ಇದೆ. ಕಾರಣ ಆರಂಭಕ್ಕೆ ಶಾಲೆ ಪ್ರವೇಶಿಸಿದಾಗ ಜಾತಿನಿಂದನೆಗೆ ಒಳಗಾಗಬೇಕಿತ್ತು. ಲಕ್ಷ್ಮಣ್ ಗಾಯಕವಾಡ ಅವರು ದಾಖಲಿಸುವ ಸಂಗತಿ ಕುತೂಹಲಕಾರಿಯಾಗಿದೆ.
`ನಾನು ಹೊಸದಾಗಿ ಶಾಲೆಗೆ ಹೋಗಲಾರಂಭಿಸಿದೆ. ನನಗಿದೆಲ್ಲಾ ಹೊಸ ಅನುಭವ. ತೋಳದ ಗುಂಪಿನಲ್ಲಿ ಕುರಿ ನುಸುಳಿದಂತಾಗಿತ್ತು ನನ್ನ ಸ್ಥಿತಿ. ಉಚಲ್ಯಾ ಲಕ್ಷ್ಯಾ ಶಾಲೆಗೆ ಬಂದನೆಂದು ಕೆಲ ವಿದ್ಯಾರ್ಥಿಗಳು ಕಲ್ಲು ಹೊಡೆದರೆ, ಕೆಲವರು `ಲಕ್ಷ್ಯಾ ಏಡಿಸಾರು ಹೇಗಿರುತ್ತೆ?’ ಎಂದು ಚೇಷ್ಟೆ ಮಾಡುತ್ತಿದ್ದರು. ಆದರೂ ನಾನು ಶಾಲೆಗೆ ಹೋಗುತ್ತಿದ್ದೆ. ಸುಮಾರು ಮೂರ್ನಾಲ್ಕು ವಾರ ಕಳೆದಿರಬೇಕು. ಅಷ್ಟರಲ್ಲಿ ನಮ್ಮಲ್ಲಿ ಕೆಲವರಿಗೆ ವಾಂತಿ ಪ್ರಾರಂಭವಾಯಿತು. ಲಕ್ಷ್ಯಾ ಶಾಲೆಗೆ ಹೊರಟದ್ದರಿಂದಲೇ ನಮ್ಮ ಮಕ್ಕಳಿಗೆ ವಾಂತಿ ಬೇಧಿ ಬಂತೆಂದು ಆರೋಪಿಸಿದರು. ಅಪ್ಪನನ್ನು ಕರೆದು ತಾಕೀತು ಮಾಡಿದರು. ನಾನು ಮನೆಯಲ್ಲೇ ಉಳಿದೆ. ಆದರೆ ಮರುದಿನ ಕೆಲವು ಹುಡುಗರು ಬಂದು ನನ್ನನ್ನು ಹೊತ್ತೊಯ್ದರು. ಈ ವಿಷಯ ನಮ್ಮ ಜಾತಿ ಜನರನ್ನು ಕೆರಳಿಸಿತು. ಪಂಚಾಯ್ತಿ ಸೇರಿತು. ಒಂದೋ ಮಾರ್ತಾಂಡ ಊರು ಬಿಡಬೇಕು, ಇಲ್ಲವೆ ಮಗನ ಶಾಲೆ ಬಿಡಿಸಬೇಕು-ಎಂದು ಠರಾವು ಮಾಡಿದರು. ನಮ್ಮಲ್ಲಿ ಪಂಚರ ನಿರ್ಧಾರ ಒಪ್ಪದಿದ್ದರೆ ಬಹಿಷ್ಕಾರ ಹಾಕುತ್ತಾರೆ. ಯಾರೂ ಮುಟ್ಟಿಸಿಕೊಳ್ಳುವುದಿಲ್ಲ. ಲಗ್ನಕ್ಕೆ ಆಮಂತ್ರಣವಿಲ್ಲ, ಮದುವೆ ಸಂಬಂಧವಿಲ್ಲ.
ಹೀಗಾಗಿ ಅಪ್ಪ ಕುಲಕರ್ಣಿ ಮಾಸ್ತರನನ್ನು ಭೇಟಿಯಾದ. ಮಗನ ಹೆಸರು ತೆಗೆಯಲು ಸೂಚಿಸಿದ. ಆಗ ಮಾಸ್ತರು ನಮ್ಮ ಗಲ್ಲಿಗೆ ಬಂದು `ಮಾರ್ತಾಂಡನ ಮಗ ಶಾಲೆಗೆ ಹೋಗ್ತಾನಂತ. ಪಟಗಿ ರೋಗ ಬಂತು ಅಂತೀರಲ್ಲ, ಊರ ಮಕ್ಕಳೆಲ್ಲಾ ಶಾಲೆಗೆ ಹೊಕ್ಕಾರ ಊರಾಗ ಎಲ್ರಿಗೂ ಪಟಗಿ ರೋಗ ಬಂದಾತೇನು? ಎಂದು ಪ್ರಶ್ನಿಸಿದರು. ತುಕರಾಮ ಅದಕ್ಕ ಹೇಳಿದ ` ಅವರ ಜಾತಿಯಾಗಿನ ಮಂದೀಗ ಕಲಿಯಾ ಅಧಿಕಾರ ಐತಿ, ಆದರ ನಮಗಿಲ್ಲ’ ಅಂದ. ಈ ಮಾತನ್ನು ಒಪ್ಪದ ಮಾಸ್ತರರು ಡಾಕ್ಟರರನ್ನು ಕರೆಯಿಸಿ ಎಲ್ಲರಿಗೂ ಔಷಧಿ ಕೊಡಿಸಿದ. ಆನಂತರ ವಾಂತಿಬೇದಿ ಕಡಿಮೆಯಾಯಿತು. ಪಂಚರಿಗೆ ತಿಳುವಳಿಕೆ ಬಂದು ನನ್ನ ಶಾಲೆ ಮತ್ತೆ ಪ್ರಾರಂಭವಾಯಿತು(ಉಚಲ್ಯಾ:2011:20).
ಇದೊಂದು ಪ್ರಾತಿನಿಧಿಕ ಘಟನೆ. ಈ ಸಮುದಾಯದ ಮೊದಲ ತಲೆಮಾರು ಶಾಲೆ ಕಲಿತು ನೌಕರಿ ಹಿಡಿದು ನಿವೃತ್ತರಾದ ಕೆಲವರನ್ನು ಮಾತನಾಡಿಸಿದಾದ ಇಂತಹದ್ದೇ ಕಥೆಗಳನ್ನು ಹೇಳಿಕೊಂಡರು. ಈ ಸಮಸ್ಯೆ ಸೆಟ್ಲಮೆಂಟ್‌ನಲ್ಲಿ ನೆಲೆಸಿದ್ದ ಗಂಟಿಚೋರ ಸಮುದಾಯಕ್ಕೆ ಅನ್ವಯವಾಗುವುದಿಲ್ಲ. ಆದರೆ ಈ ಘಟನೆ ಗ್ರಾಮೀಣ ಭಾಗದ ಗಂಟಿಚೋರ ಸಮುದಾಯಕ್ಕೆ ಹೆಚ್ಚು ಅನ್ವಯವಾಗುತ್ತದೆ. ಹೀಗೆ ಯಾವುದೇ ಬುಡಕಟ್ಟು ಸಾರ್ವಜನಿಕ ಶಿಕ್ಷಣ ಪದ್ಧತಿಗೆ ಹೊಂದಿಕೊಳ್ಳುವ ಆರಂಭಕ್ಕೆ ಒಂದಲ್ಲ ಒಂದು ರೀತಿಯ ಸಂಘರ್ಷವನ್ನು ಮಾಡಿಕೊಂಡೇ ಬಂದಿದೆ. ಇಂತಹ ಸಂಘರ್ಷದ ಭಾಗವಾಗಿಯೇ ಗಂಟಿಚೋರ ಸಮುದಾಯ ಆಧುನಿಕ ಶಿಕ್ಷಣಕ್ಕೆ ತೆರೆದುಕೊಂಡಿತು. ಅದರ ಕೆಲವು ಅಂಕೆಸಂಖ್ಯೆಗಳನ್ನು ಈ ಕೆಳಗಿನಂತೆ ನೋಡಬಹುದು.
1961 ರ ಜನಗಣತಿಯಲ್ಲಿ 10 ನೇ ತರಗತಿಗಿಂತ ಕಡಿಮೆ ಓದಿದವರ ಸಂಖ್ಯೆ 3 ಗಂಡಸರಿಂದ ಈ ಸಮುದಾಯದ ಶಿಕ್ಷಣದ ಪಯಣ ಆರಂಭವಾದಂತೆ ಕಾಣುತ್ತದೆ. ಓದಲು ಬರೆಯಲು ಬರುವವರು ಗಂಡಸರಲ್ಲಿ 224 ರಷ್ಟಿದ್ದರೆ, ಮಹಿಳೆಯರಲ್ಲಿ ಕೇವಲ ಮೂವರಿದ್ದಾರೆ. ಇದು ಆರಂಭದಲ್ಲಿ ಗಂಡಸರು ಮೊದಲು ಶಿಕ್ಷಣಕ್ಕೆ ತೆರೆದುಕೊಂಡಿರುವುದನ್ನು ಸೂಚಿಸುತ್ತದೆ.
1971 ಈ ಸಂಖ್ಯೆ ರಲ್ಲಿ ಚೂರು ಬದಲಾಗಿದೆ. ಓದಲು ಬರೆಯಲು ಬರುವವರು ಗಂಡಸರಲ್ಲಿ 225 ರಷ್ಟಿದ್ದರೆ, ಹೆಂಗಸರಲ್ಲಿ ಹತ್ತು ವರ್ಷದಲ್ಲಿ ಮೂರರಿಂದ ಹತ್ತಕ್ಕೇರಿದೆ. ಅಂತೆಯೇ 10 ನೇ ತರಗತಿಯ ಒಳಗೆ ಓದಿದವರ ಸಂಖ್ಯೆ 41(ಗಂ) 13(ಹೆ) ಇರುವುದನ್ನು ಗಮನಿಸಬಹುದಾಗಿದೆ.
1981 ಈ ಸಂಖ್ಯೆ ಜನಗಣತಿಯಲ್ಲಿ ಸ್ವಲ್ಪ ಸುಧಾರಿಸಿಕೊಂಡಂತೆ ಕಾಣುತ್ತದೆ. 10 ನೇ ತರಗತಿಗಿಂತ ಕಡಿಮೆ ಓದಿದವರ ಸಂಖ್ಯೆ 418 (ಗಂ) 118(ಹೆ) ರಷ್ಟಿದೆ. ಅಚ್ಚರಿಯೆಂದರೆ ಈ ವರ್ಷ ಹತ್ತನೇ ತರಗತಿಗಿಂತ ಹೆಚ್ಚು ಓದಿದವರ ಸಂಖ್ಯೆಯೂ ದಾಖಲಾಗಿದೆ. 32 ಗಂಡಸರಿದ್ದರೆ, ಒಬ್ಬ ಮಹಿಳೆ 10 ನೇ ತರಗತಿಗಿಂತ ಹೆಚ್ಚು ಓದಿದ್ದಾಳೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಗಂಟಿಚೋರ ಸಮುದಾಯ ನಿಧಾನಕ್ಕೆ ಶಿಕ್ಷಣದಲ್ಲಿ ಒಂದೊಂದೆ ಹೆಜ್ಜೆ ಇಡುತ್ತಿರುವುದು ಕಾಣುತ್ತದೆ.
1991 ರ ಜನಗಣತಿಯಲ್ಲಿ, 10 ನೇ ತರಗತಿಗಿಂತ ಕಡಿಮೆ ಓದಿದವರ ಸಂಖ್ಯೆ 540 (ಗಂ) 321(ಹೆ) ರಷ್ಟಿದೆ. ಈ ವರ್ಷ ಹತ್ತನೇ ತರಗತಿಗಿಂತ ಹೆಚ್ಚು ಓದಿದವರ ಸಂಖ್ಯೆಯೂ ದಾಖಲಾಗಿದೆ. 110 ಗಂಡಸರಿದ್ದರೆ, 26 ಮಹಿಳೆಯರಿದ್ದಾರೆ. 2001 ರ ಜನಗಣತಿಯಲ್ಲಿ, 10 ನೇ ತರಗತಿಗಿಂತ ಕಡಿಮೆ ಓದಿದವರ ಸಂಖ್ಯೆ 1006 (ಗಂ) 786(ಹೆ) ರಷ್ಟಿದೆ. ಈ ವರ್ಷ ಹತ್ತನೇ ತರಗತಿಗಿಂತ ಹೆಚ್ಚು ಓದಿದವರ ಸಂಖ್ಯೆಯೂ ದಾಖಲಾಗಿದೆ. 198 ಗಂಡಸರಿದ್ದರೆ, 65 ರಷ್ಟು ಮಹಿಳೆಯರಿದ್ದಾರೆ.
2011 ರ ಜನಗಣತಿಯಲ್ಲಿ, ಶೈಕ್ಷಣಿಕ ದಾಖಲಾದವರು ಒಟ್ಟು 1,255 ರಲ್ಲಿ 647 (ಗಂ) 608(ಹೆ) ರಷ್ಟಿದೆ. ಒಟ್ಟು ಅಕ್ಷರಸ್ಥರು 1797 ರಷ್ಟಿದ್ದಾರೆ. ಅದರಲ್ಲಿ 1006 (ಗಂ) 921 (ಹೆ) ರಷ್ಟಿದೆ. ಈ ಅಂಕೆ ಸಂಖ್ಯೆಗಳನ್ನು ನೋಡಿದರೆ ಪ್ರತೀ ಹತ್ತು ವರ್ಷಕ್ಕೊಮ್ಮೆ ನಿಧಾನ ಗತಿಯಲ್ಲಿ ಶೈಕ್ಷಣಿಕ ಪ್ರಗತಿಯು ಗಂಟಿಚೋರ್ಸ್ ಸಮುದಾಯದಲ್ಲಿ ಆಗಿರುವುದನ್ನು ಕಾಣಬಹುದು.
ಅರಣ್ ಜೋಳದಕೂಡ್ಲಿಗಿ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಜೋಳದಕೂಡ್ಲಿಗಿಯವರು. ಜಾನಪದ ಎಂ.ಎ ಮತ್ತು ಕನ್ನಡ ಸಾಹಿತ್ಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿಗಳನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ಪಡೆದರು. ಅಲ್ಲಿಯೇ ಪಿಎಚ್.ಡಿ ಪದವಿ ಪಡೆದು, ಪ್ರಸ್ತುತ ಪೋಸ್ಟ್ ಡಾಕ್ಟರಲ್ ಉನ್ನತ ಸಂಶೋಧನೆಯಲ್ಲಿ ಮುಗಿಸಿದ್ದಾರೆ.ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಕಟಿತ ಕೃತಿಗಳು: ನೆರಳು ಮಾತನಾಡುವ ಹೊತ್ತು (ಕವಿತೆ, 2004) ಸಂಡೂರು ಭೂಹೋರಾಟ ( ಸಂಶೋಧನೆ, 2008) ಅವ್ವನ ಅಂಗನವಾಡಿ ( ಕವನಸಂಕಲನ, 2010), ಕನ್ನಡ ಜಾನಪದ ತಾತ್ವಿಕ ನೆಲೆಗಳು ( ಪಿಎಚ್.ಡಿ ಸಂಶೋಧನೆ, 2012), ಜಾನಪದ ಮುಖಾಮುಖಿ (ಸಂಶೋಧನೆ, 2013), ಜಾನಪದ ವರ್ತಮಾನ (ಸಂಶೋಧನೆ, 2013), ಕನಸೊಡೆದೆದ್ದೆ ( ವಿಮರ್ಶೆ, 2013) ಗಂಟಿಚೋರ್ ಸಮುದಾಯ (ಸಂಶೋಧನೆ, 2016) ತತ್ವಪದ ಪ್ರವೇಶಿಕೆ (ಪ್ರೊ.ರಹಮತ್ ತರೀಕೆರೆ ಅವರ ಜತೆ ಸಹ ಸಂಪಾದಕ, 2017) ಓದು ಒಕ್ಕಾಲು ( ಸಾಹಿತ್ಯ ವಿಮರ್ಶೆ, 2020) ಕೊರೋನಾ ಜಾನಪದ (ನವಜಾನಪದ ಕುರಿತ ಸಂಶೋಧನ ಲೇಖನಗಳ ಸಂಕಲನ, 2020) ನಡುವೆ ಸುಳಿವ ಹೆಣ್ಣು ( ಮಂಜಮ್ಮ ಜೋಗತಿ ಅವರ ಆತ್ಮಕಥನದ ನಿರೂಪಣೆ, 2020)
ಉತ್ತಮ ಮಾಹಿತಿ ನೀಡಿದ್ದೀರಿ.ಧನ್ಯವಾದಗಳು