ಯುವ ತಲೆಮಾರು ವಿದೇಶಗಳಲ್ಲಿ ನೆಲೆಗೊಳ್ಳುವಾಗ ಮನೆದೇವರ ಗೊಡವೆಯು ಯಾರಿಗೂ ಬೇಡವಾಗಿದೆ. ಆಧುನಿಕ ಯುಗವು ಬದಲಾವಣೆಯನ್ನು ಹೊಂದುತ್ತಿರುವ ಸಂದರ್ಭದಲ್ಲಿ ದೇವರು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದಾನೆಯೇ ಎಂಬ ಪ್ರಶ್ನೆಯನ್ನು ಎತ್ತಿಕೊಂಡು ಈ ಕಾದಂಬರಿಯನ್ನು ರಚಿಸಲಾಗಿದೆ. ಲಿಂಗ ಮತ್ತು ಜಾತಿಯ ಆಧಾರದಲ್ಲಿ ಗಂಡಸರನ್ನು ಶೋಷಕರನ್ನಾಗಿಯೂ ಹೆಂಗಸರನ್ನು ಶೋಷಿತರನ್ನಾಗಿಯೂ, ಕಲ್ಪಿಸಿ ಅಭ್ಯಾಸವಾಗಿರುವ ಹೊತ್ತಿನಲ್ಲಿ ಲೇಖಕರು ವಸ್ತುಸ್ಥಿತಿಯ ಎರಡೂ ಮಗ್ಗುಲಿಗೆ ಕಣ್ಣುಹಾಯಿಸಿದಂತೆ ಗೋಚರಿಸುತ್ತದೆ.
ಡಾ. ನಾ. ಮೊಗಸಾಲೆಯವರ ‘ಇದ್ದೂ ಇಲ್ಲದ್ದುʼ ಕಾದಂಬರಿಯ ಕುರಿತು ಡಾ. ಸುಭಾಷ್ ಪಟ್ಟಾಜೆ ಬರೆದ ಬರಹ ಇಲ್ಲಿದೆ.
ವಸ್ತು ಮತ್ತು ತಂತ್ರಗಳ ದೃಷ್ಟಿಯಿಂದ ನಾ. ಮೊಗಸಾಲೆ ಅವರ ‘ಇದ್ದೂ ಇಲ್ಲದ್ದು’ ಎಂಬ ಕಾದಂಬರಿಯು ಕನ್ನಡ ಸಾಹಿತ್ಯ ಜಗತ್ತಿನಲ್ಲಿ ಅತ್ಯಂತ ವಿಶಿಷ್ಟವಾಗಿದೆ. ಬದಲಾಗುತ್ತಿರುವ ಕಾಲದ ಲಯವನ್ನು ಹರಿದಾಸ ಮೇಷ್ಟ್ರು ಮತ್ತು ಅವರ ಮಗ ರಮಾನಂದನ ಪ್ರಜ್ಞೆಯಲ್ಲಿ ಸೆರೆ ಹಿಡಿಯುವ ಮಹತ್ವಾಕಾಂಕ್ಷೆ ಈ ಕಾದಂಬರಿಯದ್ದು. ಒಂದು ಕಾಲವನ್ನು ಹಲವು ನೆಲೆಗಳಿಂದ ಪ್ರವೇಶಿಸಿರುವುದರಿಂದ, ಅವುಗಳಿಂದ ಹುಟ್ಟುವ ಅರ್ಥಗಳಿಂದ ತುಂಬ ಬೇರೆಯಾದ ಅನುಭವ ಮತ್ತು ದರ್ಶನವು ದೊರಕುತ್ತದೆ. ಹಿರಿಯ ತಲೆಮಾರು ನಡೆಸಿದ ಬದುಕಿನ ಶೈಲಿಯ ಅರಿವು ಮತ್ತು ತಿಳುವಳಿಕೆಯನ್ನು, ಲೇಖಕರಾಗಿ ಗಳಿಸಿದ ಕಥನ ಕೌಶಲವನ್ನು ಏಕಕಾಲದಲ್ಲಿ ದುಡಿಸಿಕೊಂಡು ಶಿವಳ್ಳಿ ಬ್ರಾಹ್ಮಣರ ಬದುಕಿನ ಇತಿಹಾಸದ ದಾಖಲೆ ಮತ್ತು ರಚನೆಗಳ ಕುರಿತು ಹೊಸತಾಗಿ ಯೋಚಿಸುವಂತೆ ಮಾಡುವ ಕೃತಿಯನ್ನು ಲೇಖಕರು ನೀಡಿದ್ದಾರೆ.
ನಿರ್ದಿಷ್ಟ ಜಾತಿ ಮತ್ತು ಅದಕ್ಕೆ ಸಂಬಂಧಿಸಿದ ಆಚರಣೆಗಳನ್ನು ‘ಅವಶ್ಯಕ’ ಮತ್ತು ‘ಅನವಶ್ಯಕ’ ಎಂದು ವಿಂಗಡಿಸುವ ಕ್ರಮವು ಎರಡು ವರ್ಗಗಳ ನಡುವಿನ ಕಲಹಗಳಿಗೆ ಕಾರಣವಾಗಿರುವುದು ನಿಜವಾದರೂ ಈ ಕಾದಂಬರಿಯು ಒಂದು ದಳದ ಸಮರ್ಥನೆಯನ್ನಾಗಲೀ ಮತ್ತೊಂದು ದಳದ ಭರ್ತ್ಸನೆಯನ್ನಾಗಲೀ ಮಾಡುವುದಿಲ್ಲ. ಸಂಸ್ಕೃತಿಯ ಮೇಲಿರುವ ಗೌರವವನ್ನು ವ್ಯಕ್ತಪಡಿಸುವುದರೊಂದಿಗೆ ಪರಂಪರೆಯು ಕಳೆದುಹೋಗುತ್ತಿರುವ ವಿಷಾದ ಭಾವನೆಯು ಕೃತಿಯುದ್ದಕ್ಕೂ ವ್ಯಾಪಿಸಿಕೊಂಡಿದೆ.
ಕರಾವಳಿಯ ಬ್ರಾಹ್ಮಣರ ಪೈಕಿ ಶಿವಳ್ಳಿ, ಹವ್ಯಕ ಅಥವಾ ಕರ್ಹಾಡ ಸಮುದಾಯದ ಮನೆದೇವರಿಗೆ ಆಸ್ತಿಯು ಇರುತ್ತದೆ. ಮನೆಯ ಹಿರಿಯರಾದವರು ತಲತಲಾಂತರದಿಂದ ಪೂಜೆ ಮಾಡಿಕೊಂಡು ಬರುವ ಸಂಪ್ರದಾಯವಿದೆ. ಆ ಆಸ್ತಿಯನ್ನು ಮಾರಾಟ ಮಾಡುವಂತಿಲ್ಲ. ಆದರೆ ಇತ್ತೀಚಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಪಲ್ಲಟದಿಂದಾಗಿ ಆ ಪರಂಪರೆಯು ನಾಶವಾಗುವ ಸ್ಥಿತಿಯಲ್ಲಿದೆ. ಎಲ್ಲ ಮನೆಯ ದೇವರ ಸ್ಥಿತಿಯೂ ಅತಂತ್ರವಾಗಿದೆ. ಪೂಜೆ ಪುನಸ್ಕಾರ ಮುಂತಾದ ಸಂಸ್ಕಾರಗಳು ನಿಂತುಹೋಗುವ ಭೀತಿಯಲ್ಲಿದೆ. ಯುವ ತಲೆಮಾರು ವಿದೇಶಗಳಲ್ಲಿ ನೆಲೆಗೊಳ್ಳುವಾಗ ಮನೆದೇವರ ಗೊಡವೆಯು ಯಾರಿಗೂ ಬೇಡವಾಗಿದೆ. ಆಧುನಿಕ ಯುಗವು ಬದಲಾವಣೆಯನ್ನು ಹೊಂದುತ್ತಿರುವ ಸಂದರ್ಭದಲ್ಲಿ ದೇವರು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದಾನೆಯೇ ಎಂಬ ಪ್ರಶ್ನೆಯನ್ನು ಎತ್ತಿಕೊಂಡು ಈ ಕಾದಂಬರಿಯನ್ನು ರಚಿಸಲಾಗಿದೆ. ಈ ಸಮಸ್ಯೆಗೆ ಪರಿಹಾರವಿಲ್ಲ. ಹಾಗಿದ್ದರೆ ಮುಂದೇನು ಎಂಬ ಜಿಜ್ಞಾಸೆಯು ಇಲ್ಲಿ ವ್ಯಕ್ತವಾಗುತ್ತದೆ.
ಇಪ್ಪತ್ತು ವರ್ಷಗಳ ಹಿಂದೆ ದೇವರಮನೆ ಎಂಬ ಊರನ್ನು ತೊರೆದುಹೋದ ರಮಾನಂದನನ್ನು ಆತನ ಅತ್ತೆಯ ಮಗನಾದ ಗೋವಿಂದಾಚಾರ್ಯರು ಊರಿಗೆ ಬರಲು ಆಹ್ವಾನಿಸುತ್ತಾರೆ. ರಮಾನಂದನ ಮನೆಯಲ್ಲಿ ಪೂಜೆಯನ್ನು ಮಾಡಿಕೊಂಡಿದ್ದ ಕುಪ್ಪಣಾಚಾರ್ಯರು ತಮ್ಮ ಮಗನು ಆತ್ಮಹತ್ಯೆಯಿಂದ ನೊಂದು ದೇವರ ಪೂಜೆಯನ್ನು ನಿಲ್ಲಿಸುವ ನಿರ್ಧಾರಕ್ಕೆ ಬಂದುದರಿಂದ ರಮಾನಂದನಾದರೂ ಮನೆ ದೇವರ ತಲೆಗೆ ನೀರನ್ನು ಹಾಕುವಂತಾಗಲಿ ಎಂಬ ಕಳಕಳಿ ಅವರಿಗೆ ಇರುತ್ತದೆ. ಬಾಲ್ಯದ ಗೆಳತಿಯೂ, ಕ್ರೈಸ್ತಮತಕ್ಕೆ ಸೇರಿದವಳೂ ಆದ ಮೇರಿಯನ್ನು ಪ್ರೀತಿಸಿ ಮದುವೆಯಾಗಿ ಮನೆಯವರ ವಿರೋಧವನ್ನು ಕಟ್ಟಿಕೊಂಡ ರಮಾನಂದನು ಕೃಷಿವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ವಿದೇಶದಲ್ಲಿ ಉನ್ನತ ಹುದ್ದೆಯನ್ನು ಪಡೆದು ಅಲ್ಲೇ ನೆಲೆಸಿದ್ದಾನೆ. ‘ನಾನು ಸತ್ತರೆ ನನ್ನ ಉತ್ತರಕ್ರಿಯೆಯನ್ನೂ ಮಾಡಬಾರದು’ ಎಂದು ತಂದೆಯಿಂದ ಬೈಯಿಸಿಕೊಂಡು ಊರು ಮತ್ತು ಮನೆದೇವರ ಸಹವಾಸವೇ ಬೇಡವೆಂದು ಮಡದಿಯೊಂದಿಗೆ ನಗರದಲ್ಲಿ ನೆಲೆಸಿದ ರಮಾನಂದನು ಆಧುನಿಕ ಶಿಕ್ಷಣದ ಮೂಲಕ ಪ್ರಗತಿಪರ ನಿಲುವುಗಳನ್ನು ರೂಢಿಸಿಕೊಂಡವನು. ಭಾರತಿ ಎಂದು ಹೆಸರನ್ನು ಬದಲಿಸಿಕೊಂಡ ಮೇರಿಯೂ ವೈಚಾರಿಕ ನಿಲುವನ್ನು ಹೊಂದಿದವಳು. ಇವರ ಸಂಸಾರವು ಯಾವ ಗೊಂದಲ ಗೋಜಲುಗಳಿಲ್ಲದೆ ಸುಖಮಯವಾಗಿ ಸಾಗುತ್ತಿರುತ್ತದೆ. ಅವನು ಗೋವಿಂದಾಚಾರ್ಯನ ಕರೆಗೆ ಓಗೊಟ್ಟು ಊರಿಗೆ ಬರುತ್ತಾನೆ. ಹೀಗೆ ರಮಾನಂದನು ಆಕಸ್ಮಿಕವಾಗಿ ಊರಿಗೆ ಬರುವ ವೇಳೆಯಲ್ಲಿ ಲಾಕ್‌ಡೌನ್ ಘೋಷಣೆಯಾದ್ದರಿಂದ ಅವನು ಊರಿನಲ್ಲೇ ಉಳಿದುಕೊಳ್ಳಬೇಕಾಗುತ್ತದೆ. ಆಧುನಿಕತೆ-ಪುರಾತನ ಮೌಲ್ಯಗಳು ಮತ್ತು ನಗರ ಜೀವನ-ಗ್ರಾಮ್ಯ ಬದುಕಿನ ವ್ಯತ್ಯಾಸಗಳನ್ನು ಅವಲೋಕಿಸುವ ಅವಕಾಶವು ಇಲ್ಲಿಂದ ಸೃಷ್ಟಿಯಾಗುತ್ತದೆ. ತನ್ನ ಪೂರ್ವಜರ ಬದುಕು ಮತ್ತು ನಂಬಿಕೆಗಳಿಗೆ ಸಂಬಂಧಿಸಿದ ಶೋಧಕ್ಕೆ ರಮಾನಂದನು ಮಾನದಂಡವಾಗುತ್ತಾನೆ. ಲಾಕ್ ಡೌನ್ ಸಂದರ್ಭದ ಬಿಡುವಿನ ವೇಳೆಯಲ್ಲಿ ಆತನು ತನ್ನ ತಂದೆಯಾದ ಹರಿದಾಸ ಭಟ್ಟರು ಬರೆದಿಟ್ಟಿದ್ದ ದಿನಚರಿಯನ್ನು ಆಧರಿಸಿ ಬರೆದ ಮೂರು ತಲೆಮಾರಿನ ಕಥನವು ಕಾದಂಬರಿಯ ರೂಪದಲ್ಲಿ ಓದುಗರ ಕಣ್ಣೆದುರು ಮೂಡಿ ಬರುತ್ತದೆ.
ಈ ಕಾದಂಬರಿಯಲ್ಲಿ ಸಾಮಾನ್ಯವಾಗಿ ಮೂರು ರೀತಿಯ ಪಾತ್ರಗಳು ಇವೆ. ಮೊದಲನೆಯದ್ದು ಜಾತಿ, ಲಿಂಗ ಸಮಾಜದ ಆಚಾರ ವಿಚಾರಗಳನ್ನು ಪ್ರಶ್ನಿಸದೆ ಅವುಗಳು ಸಹಜವೆಂಬಂತೆ ಒಪ್ಪಿಕೊಂಡು ಬದುಕಿದ ದೊಡ್ಡ ರಮಾನಂದ ಭಟ್ಟ ಮತ್ತು ಅವರ ತಲೆಮಾರು. ಎರಡನೆಯದ್ದು ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಒಪ್ಪಿಕೊಂಡು ಉದ್ಯೋಗಸ್ಥ ಬದುಕನ್ನು ನೆಚ್ಚಿಕೊಂಡು ಸಮಾಜಮುಖಿ ಚಟುವಟಿಗಳನ್ನು ಮಾಡಿದ ಹರಿದಾಸ ಮೇಷ್ಟ್ರ ತಲೆಮಾರು. ಮೂರನೇ ರೀತಿಯದ್ದು ಎಂದರೆ ಜಾತಿಧರ್ಮಗಳ ಗಡಿಯನ್ನು ಮೀರಿ, ಆದರ್ಶ ಮತ್ತು ವೈಚಾರಿಕತೆಯ ನೆಲೆಯಲ್ಲಿ, ಶಿಕ್ಷಣ ಮತ್ತು ಹೊಸ ರೀತಿಯ ಉದ್ಯೋಗದ ನೆರವಿನಿಂದ ದಾಟಲು ಯತ್ನಿಸುವ ರಮಾನಂದನ ತಲೆಮಾರು. ಈ ಕಾದಂಬರಿಯಲ್ಲಿ ಬರುವ ದೊಡ್ಡ ರಮಾನಂದರು ವರ್ತಮಾನದ ಪಾತ್ರವಲ್ಲ. ಅವರು ಸಂಸಾರಸ್ಥರಾಗಿದ್ದರೂ ತಮ್ಮ ಒಕ್ಕಲಿನವಳಾದ ಸುಂದರಿಯೊಂದಿಗೆ ಸಂಬಂಧವನ್ನು ಇಟ್ಟುಕೊಂಡವರು. ಸುಂದರಿಯ ಗಂಡನು ಆಕೆಯ ಬಯಕೆಗಳಿಗೆ ಸ್ಪಂದಿಸಲಾರದ, ಅವುಗಳನ್ನು ಈಡೇರಿಸಲಾರದ ವ್ಯಕ್ತಿ. ಹಾಗಾಗಿ ಸುಂದರಿಯೂ ಅತೃಪ್ತಳೇ. ದೊಡ್ಡ ರಮಾನಂದರ ಸಂಗವನ್ನು ತನ್ನ ಅನುಕೂಲ ಮತ್ತು ಲಾಭಕ್ಕಾಗಿ ಬಳಸಿಕೊಳ್ಳಬಲ್ಲ ಜಾಣೆ. ಆದರೆ ಕಾದಂಬರಿಯು ಇವರ ಪ್ರಣಯವನ್ನು ರಮ್ಯೀಕರಿಸದೆ ಅಥವಾ ವೈಭವೀಕರಿಸದೆ ಅದರ ಪರಿಣಾಮಗಳತ್ತ ಗಮನವನ್ನು ಹರಿಸಿದೆ. ಇಬ್ಬರು ಅತೃಪ್ತ ಜೀವಿಗಳ ಕಾಮದ ಅಭೀಪ್ಸೆಯನ್ನು ಶೋಧಿಸಿಕೊಂಡು ಹೋಗದೆ ಅದರ ಪರಿಣಾಮವನ್ನು ನಿರೂಪಿಸುತ್ತದೆ. ಆದ್ದರಿಂದ ಈ ಸಂಬಂಧದಿಂದ ಹುಟ್ಟಬಹುದಾದ ಸಾರ್ಥಕ್ಯ ಭಾವ ಅಥವಾ ಪಾಪಪ್ರಜ್ಞೆ ಈ ಕಾದಂಬರಿಯ ವಸ್ತುವಾಗುವುದಿಲ್ಲ. ಆದರೆ ಈ ಕಾದಂಬರಿಯು ರಮಾನಂದ ಮತ್ತು ಸುಂದರಿಯ ಸಂಬಂಧವನ್ನು ಮೀರಿ ಬೆಳೆಯುವುದರಿಂದ ಪ್ರತಿರೋಧವಲ್ಲದಿದ್ದರೂ ಪ್ರತಿಕ್ರಿಯೆಯ ಮಾದರಿಗಳನ್ನು ತರುವುದು ಲೇಖಕರಿಗೆ ಅನಿವಾರ್ಯವಾಗಿದೆ. ಆದ್ದರಿಂದ ಅವರ ನೋಟವು ಮನೆಯ ಆಚೆಗೂ ಹಾಯ್ದು ಒಟ್ಟು ವ್ಯವಸ್ಥೆಯ ಕಡೆಗೆ ವ್ಯಾಪಿಸುತ್ತದೆ.
ಸುಂದರಿಯ ಮೋಹದಲ್ಲಿ ಮುಳುಗಿ ವಿವೇಚನೆಯನ್ನು ಕಳೆದುಕೊಂಡು ಜಮೀನಿನ ಭಾಗಗಳನ್ನು ಆಕೆಗೆ ನೀಡಿದ ತಪ್ಪಿಗಾಗಿ ಮಠದವರಿಂದ ಛೀಮಾರಿಗೊಳಗಾಗುವ ದೊಡ್ಡ ರಮಾನಂದರು ರಾಧಕ್ಕನ ಔದಾರ್ಯದಿಂದಾಗಿ ಪಾರಾಗುತ್ತಾರೆ. ವಿಧವೆಯಾದ ಆಕೆಯು ತಾನು ಕೂಡಿಟ್ಟ ಮತ್ತು ಮಠದ ಚಾಕರಿಯಿಂದ ಒಟ್ಟು ಮಾಡಿಟ್ಟ ಒಂಭೈನೂರು ರೂಪಾಯಿಗಳನ್ನು ದೊಡ್ಡ ರಮಾನಂದರಿಗೆ ಕೊಟ್ಟು ಬಿಡುತ್ತಾಳಲ್ಲದೆ ಮಠದ ಜಮೀನನ್ನು ಕೊಳ್ಳಲು ಸಹಾಯವನ್ನು ಮಾಡುತ್ತಾಳೆ. ಅವನು ಮಠಕ್ಕೆ ಗೇಣಿಯನ್ನು ಕೊಡುವ ಜಮೀನಿನ ಅರ್ಧವನ್ನು ಆಕೆಯು ಕ್ರಯ ಸಾಧನೆಯ ಮೂಲಕ ತೆಗೆಸಿಕೊಡುತ್ತಾಳೆ. ಒಂಭೈನೂರು ರೂಪಾಯಿಗಳಿಗೆ ಎಷ್ಟು ಜಮೀನನ್ನು ಮಠವು ವಿಕ್ರಯಿಸಬಹುದೋ ಅಷ್ಟನ್ನು ಅವನಿಗೆ ಸಿಗುವಂತೆ ಮಾಡಿ ಒಂದು ಕುಟುಂಬವನ್ನು ಉದ್ಧರಿಸುತ್ತಾಳೆ.
ರಮಾನಂದನನ್ನು ಸುಂದರಿಯ ಮೋಹದಿಂದ ಬಿಡಿಸಿ ಆತನ ಸಂಸಾರವನ್ನು ಸರಿ ಮಾಡುವ ಸಂದರ್ಭದಲ್ಲಿ ಆತನ ಹೆಂಡತಿಯಾದ ಸೀತಮ್ಮನಿಗೆ ಹೇಳುವ ಕಿವಿಮಾತು ಗಮನಾರ್ಹವಾಗಿದೆ. “ಗಂಡ ಹೆಂಡತಿಯನ್ನು ಬಿಟ್ಟು ಹೊರಚಾಳಿಯನ್ನು ಬಯಸುವುದು ಹೆಂಡತಿಯಿಂದ ಅವನು ನಿರೀಕ್ಷಿಸದಿದ್ದ ಸುಖ ಸಿಕ್ಕದಿದ್ದಾಗ. ನಿನ್ನಂಥ ಹೆಣ್ಣು ಹಗಲಿಡೀ ದುಡಿದು ರಾತ್ರಿ ಚಾಪೆಗೆ ಬರುವಾಗ ತೀರಾ ಸುಸ್ತಾಗಿರುವುದು ಸಹಜ. ಆಗ ಗಂಡನೂ ಬೇಡ, ಮಕ್ಕಳೂ ಬೇಡ ಎಂದು ಹೆಣ್ಣಿಗೆ ಅನಿಸಿದರೆ ತಪ್ಪಿಲ್ಲ. ಆದರೆ ಗಂಡು ಹಾಗಿಲ್ಲ. ಅವನು ಸದಾ ಆಕ್ರಮಣ ಪ್ರವೃತ್ತಿಯವನು. ಅವನಿಗೆ ಹೆಣ್ಣಿನ ಮನಸ್ಸಿಗಿಂತ ದೇಹವೇ ಹೆಚ್ಚು ಇಷ್ಟ.”(ಪುಟ 119) ಎನ್ನುತ್ತಾ ತನ್ನ ಮಾತನ್ನು ಮುಂದುವರಿಸಿ “ಮನುಷ್ಯ ಭಾವಜೀವಿ. ಸಂತಾನದ ಉದ್ದೇಶಕ್ಕಿಂತ ಭಿನ್ನವಾದ ಸುಖ ಹೆಣ್ಣ ಗಂಡು ಸೇರುವಾಗ ಸಿಗುತ್ತದೆ ಎಂಬುದನ್ನು ಆತ ಕಂಡುಕೊಂಡಿದ್ದಾನೆ. ಆ ತಹತಹ ಅವನನ್ನು ಅವನ ಜೀವಮಾನವಿಡೀ ಆ ಸುಖಕ್ಕಾಗಿ ಕಾಡುತ್ತಿರುತ್ತದೆ. ಹಾಗಾಗಿ ಹೆಣ್ಣಾದವಳು ಗಂಡು ತನ್ನನ್ನು ಭೋಗಿಸುತ್ತಿದ್ದಾನೆ ಎಂದು ಸುಮ್ಮನೇ ಮಲಗಿ ಹೆಣದ ಹಾಗೆ ಬಿದ್ದುಕೊಂಡರೆ ಗಂಡಿಗೆ ನಿರೀಕ್ಷಿತ ಸುಖ ಸಿಗುವುದು ಕಷ್ಟ. ಅವನಿಗೆ ಸಂಭೋಗ ಸಮಯದಲ್ಲಿ ಹೆಣ್ಣಿನ ಸಹಭಾಗಿತ್ವ ಎಂದರೆ ಅವಳು ಗಂಡನ ಪಟ್ಟುಗಳಿಗೆ ಪ್ರತಿಯಾಗಿ ಅವನನ್ನು ಮೀರಿಸುವಂಥ ಪಟ್ಟುಗಳನ್ನು ನೀಡಬೇಕೆಂಬ ನಿರೀಕ್ಷೆ ಇರುತ್ತದೆ. ಆದರೆ ಅದನ್ನು ನಾವು ಬ್ರಾಹ್ಮಣರ ಹೆಂಗಸರು ನೀಡುವುದು ಕಡಿಮೆ ಎಂದೇ ನನ್ನ ಊಹೆ. ಪ್ರಾಯಶಃ ಬ್ರಾಹ್ಮಣೇತರ ಹೆಣ್ಣುಗಳು ಗಂಡುಗಳ ಜೊತೆ ಹೆಚ್ಚು ಸಹಕರಿಸುವುದರಿಂದ ಈ ಬ್ರಾಹ್ಮಣ ಮುಂಡೇವು ತಂತಮ್ಮ ಹೆಂಡಂದಿರನ್ನು ಬಿಟ್ಟು ಹೊರಚಾಳಿಗೆ ಒಳಗಾಗುತ್ತಾರೆ ಎಂದು ನನ್ನ ಯಜಮಾನರು ನನ್ನಲ್ಲಿ ಅನೇಕ ಬಾರಿ ಹೇಳಿದ್ದುಂಟು.” (ಪುಟ 120) ಎನ್ನುತ್ತಾಳೆ. ಲಿಂಗ ಮತ್ತು ಜಾತಿಯ ಆಧಾರದಲ್ಲಿ ಗಂಡಸರನ್ನು ಶೋಷಕರನ್ನಾಗಿಯೂ ಹೆಂಗಸರನ್ನು ಶೋಷಿತರನ್ನಾಗಿಯೂ, ಕಲ್ಪಿಸಿ ಅಭ್ಯಾಸವಾಗಿರುವ ಹೊತ್ತಿನಲ್ಲಿ ಲೇಖಕರು ವಸ್ತುಸ್ಥಿತಿಯ ಎರಡೂ ಮಗ್ಗುಲಿಗೆ ಕಣ್ಣುಹಾಯಿಸಿದ ವಿಚಾರವು ಮಖ್ಯವಾಗುತ್ತದೆ.
ಈ ಕಾದಂಬರಿಯು ಶಿವಳ್ಳಿ ಬ್ರಾಹ್ಮಣರ ಬದುಕನ್ನು ಚಿತ್ರಿಸಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರವು ಸರಳವಾಗಿದೆ. ಬಂಟರ ಸಮುದಾಯದ ಬಗ್ಗೆ ‘ಉಲ್ಲಂಘನೆ’, ಹವ್ಯಕ ಬ್ರಾಹ್ಮಣರ ಬಗ್ಗೆ ‘ಮುಖಾಂತರ’ವನ್ನು ಬರೆದಂತೆ ಮೊಗಸಾಲೆಯವರು ಈ ಕಾದಂಬರಿಯ ಮೂಲಕ ಶಿವಳ್ಳಿ ಬ್ರಾಹ್ಮಣರ ಬದುಕಿನ ಕಥನವನ್ನು ಬರೆದಿದ್ದಾರೆ. ಆದರೆ ಇಲ್ಲಿ ಗಮನಿಸಬೇಕಾದ ಸೂಕ್ಷ್ಮಗಳು ಹಲವಾರು ಇವೆ. ಹವ್ಯಕ ಮತ್ತು ಕರ್ಹಾಡ ಬ್ರಾಹ್ಮಣರಲ್ಲಿ ಮಠ ಪರಂಪರೆಯಿಲ್ಲ. ಸ್ವಾಮೀಜಿಗಳು ಇದ್ದರೂ ಅವರು ಗೇಣಿಪದ್ಧತಿಯನ್ನು ಅನುಸರಿಸುತ್ತಿರಲಿಲ್ಲ. ಮಠದಲ್ಲಿ ಸೇವೆಯನ್ನು ಮಾಡುವ ರಾಧಕ್ಕನ ಪಾತ್ರವನ್ನು ತರುವುದಕ್ಕಾಗಿ ಶಿವಳ್ಳಿ ಬ್ರಾಹ್ಮಣರ ಬದುಕಿಗೆ ಒತ್ತು ನೀಡಲಾಗಿದೆ. ಶಿವಳ್ಳಿ ಬ್ರಾಹ್ಮಣರು ಕಾಮಸೂತ್ರವನ್ನು ಅಧ್ಯಯನ ಮಾಡಿದವರು. “ನನ್ನ ಗಂಡ ಗೋಪಾಲಾಚಾರ್ಯರು ಜ್ಯೋತಿಷ್ಯದಲ್ಲಿ ಎಷ್ಟು ದೊಡ್ಡ ವಿದ್ವಾಂಸರೋ ಅಷ್ಟೇ ಸಂಸ್ಕೃತದ ಅಭ್ಯಾಸಿಯೂ ಆಗಿದ್ದವರು. ಅವರಿಗೆ ಆಯುರ್ವೇದ ಶಾಸ್ತ್ರ, ಕಾಳಿದಾಸ, ಭವಭೂತಿ ಮೊದಲಾದ ಕವಿಗಳು ಬರೆದ ಕಾವ್ಯದ ಜೊತೆಗೆ ವಾತ್ಸ್ಯಾಯನ ಋಷಿಯ ಕಾಮಸೂತ್ರ ಇತ್ಯಾದಿಗಳ ಪರಿಚಯವೂ ಇತ್ತು” (ಪುಟ120) ಎಂಬ ಮಾತಿನೊಂದಿಗೆ ರಾಧಕ್ಕನು ಸೀತಕ್ಕನಿಗೆ ರತಿಕ್ರೀಡೆಯ ಸೂಕ್ಷ್ಮಗಳನ್ನು ವಿವರಿಸುವಲ್ಲಿ ಅದು ಸ್ಪಷ್ಟವಾಗುತ್ತದೆ. ಇದನ್ನು ಹೇಳಬೇಕಿದ್ದರೆ ಶಿವಳ್ಳಿ ಬ್ರಾಹ್ಮಣರ ಬದುಕನ್ನೇ ಆಯ್ದುಕೊಳ್ಳಬೇಕಾಗುತ್ತದೆ.
ದೊಡ್ಡ ರಮಾನಂದನ ಮಗ ಹರಿದಾಸ ಭಟ್ಟರು ನಿಷ್ಠಾವಂತರಾಗಿದ್ದು ಸಂಪ್ರದಾಯಸ್ಥ ಬದುಕನ್ನು ರೂಢಿಸಿಕೊಂಡವರು. ನೈತಿಕತೆಯ ಗಡಿಯನ್ನು ಮೀರದ ಆದರ್ಶವಾದಿ ಮೇಷ್ಟ್ರಾಗಿದ್ದ ಅವರು ಮನೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವುದರೊಂದಿಗೆ ಯುವಕಮಂಡಲವನ್ನು ಸ್ಥಾಪಿಸಿ ಅವರಲ್ಲಿ ಹೊಣೆಗಾರಿಕೆಯನ್ನು ತುಂಬುವ, ಭೂಮಸೂದೆಯ ಸಂದರ್ಭದಲ್ಲಿ ರೈತರ ಪರ ನಿಲ್ಲುವ ಸನ್ನಿವೇಶಗಳು ಬದಲಾಗುತ್ತಿರುವ ಕಾಲಗತಿಯ ಸೂಚನೆಯನ್ನು ಕೊಡುತ್ತವೆ. ಬದುಕಿನ ಬಗ್ಗೆ ಅಪಸ್ವರವನ್ನು ಎತ್ತದೆ, ತನ್ನ ಅನುಭವದ ಆಧಾರದಿಂದ ಕಂಡುಕೊಂಡ ಮೌಲ್ಯಗಳನ್ನು ಅಡಿಗಲ್ಲಾಗಿಟ್ಟುಕೊಂಡು ಗೌರವಯುತವಾಗಿ ಬಾಳುವ ಅವರು ಭೂಮಸೂದೆಯು ಜಾರಿಗೆ ಬಂದಾಗ ಯಾರನ್ನೂ ಒಕ್ಕಲೆಬ್ಬಿಸದೆ ಮಿಕ್ಕುಳಿದ ಜಾಗದಲ್ಲಿ ಕೃಷಿಯನ್ನು ಮಾಡಿ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸುತ್ತಾರೆ. ತಾನು ಕಷ್ಟದಲ್ಲಿದ್ದರೂ ಜಾತಿಬೇಧವೆಣಿಸದೆ ಊರಿನವರಿಗೆ ಸಹಾಯ ಮಾಡಿ ಬದುಕಿದವನ ಹಿರಿಮೆಯು ಅವರ ಸಹಕಾರಿ ಮನೋಭಾವದ ಮೂಲಕ ವ್ಯಕ್ತವಾಗುತ್ತದೆ. “ಅನೇಕ ಜಮೀನುದಾರರು ತಮ್ಮ ಭೂಮಿಯನ್ನು ಗೇಣಿಗೆ ನೀಡುವಾಗ, ‘ಗೇಣಿ ಚೀಟು’ ಎಂಬ ದಾಖಲೆಯನ್ನು ಒಕ್ಕಲುಗಳಿಗೆ ನೀಡಿ ಒಕ್ಕಲುಗಳು ಗೇಣಿ ನೀಡಿದಾಗ, ರಶೀದಿಯನ್ನು ನೀಡುವುದನ್ನು ರೂಢಿಸಿಕೊಂಡಿದ್ದರು. ಆದರೆ ಇನ್ನು ಕೆಲವು ಜಮೀನುದಾರರು ತಮ್ಮ ಜಮೀನನ್ನು ಗೇಣಿಗೆ ನೀಡುವಾಗ ಗೇಣಿ ಚೀಟಿನಂಥ ಯಾವುದೇ ದಾಖಲೆ ನೀಡದೆ, ಬಾಯ್ದೆರೆಯಲ್ಲೇ ‘ಇಂತಿಷ್ಟು ಗೇಣಿ ಕೊಡು’ ಎನ್ನುತ್ತಿದ್ದರು. ಅಂಥವರು ಗೇಣಿದಾರರು ಗೇಣಿ ಪಾವತಿಸಿದಾಗ ತಪ್ಪಿಯೂ ಒಕ್ಕಲುಗಳಿಗೆ ರಶೀದಿ ನೀಡುತ್ತಿರಲಿಲ್ಲ. ಭೂಮಸೂದೆಯು ಜಾರಿಯಾದಾಗ ಸರಕಾರವು ಪ್ರತಿಯೊಬ್ಬ ಗೇಣಿದಾರನೂ ಸರಕಾರಕ್ಕೆ, ತಾವು ಇಂಥವರ ಇಷ್ಟು ಜಮೀನನ್ನು ಇಷ್ಟು ವರುಷಗಳಿಂದ ಅನುಭವಿಸುತ್ತಿದ್ದೇನೆ, ಆ ಸಂಬಂಧ ಇಷ್ಟು ಗೇಣಿಯನ್ನು ವರ್ಷಂಪ್ರತಿ ತನ್ನ ಧಣಿಗೆ ನೀಡುತ್ತಿದ್ದೇನೆ ಎಂಬ ಡಿಕ್ಲರೇಶನನ್ನು ಸರಕಾರಕ್ಕೆ ಸಲ್ಲಿಸಬೇಕೆನ್ನುವುದನ್ನು ನಿಯಮವಾಗಿಸಿತ್ತು. ಇಂಥ ದಾಖಲೆ ಇರುವ ಮತ್ತು ದಾಖಲೆ ಇಲ್ಲದ ಗೇಣಿದಾರರು ತಮ್ಮ ಸ್ವಾಧೀನವಿರುವ ಜಮೀನುಗಳ ದಾಖಲೆಗಳನ್ನು ಡಿಕ್ಲರೇಶನ್ ಮೂಲಕ ಸರಕಾರಕ್ಕೆ ಸಲ್ಲಿಸದಿದ್ದರೆ, ಆ ಜಮೀನು ಭೂ ಮಾಲಕರಿಗೆ ಸೇರದೆ, ಸರಕಾರಕ್ಕೇ ಸೇರಬೇಕು ಎನ್ನುವ ನಿಯಮ ಆ ಕಾನೂನಿನಲ್ಲಿತ್ತು. ಯಾರೇ ಆಗಲಿ ಗೇಣಿದಾರರಾಗಿದ್ದ ಪಕ್ಷದಲ್ಲಿ ಪರಿಪೂರ್ಣವಾದ ದಾಖಲೆಗಳು ಇಲ್ಲದೇ ಇದ್ದರೆ, ಅಂಥ ಜಮೀನನ್ನು ಅದರ ಒಡೆಯರು ಪರಸ್ಪರ ಒಪ್ಪಂದದ ಮೂಲಕ ಗೇಣಿದಾರರಿಂದ ಬಿಡಿಸಿಕೊಳ್ಳಬಹುದಿತ್ತು ಎನ್ನುವ ವಿಚಾರಕ್ಕೆ ಆ ಕಾನೂನಲ್ಲಿ ಅವಕಾಶವೂ ಇತ್ತು.
ರಮಾನಂದನು ಆಕಸ್ಮಿಕವಾಗಿ ಊರಿಗೆ ಬರುವ ವೇಳೆಯಲ್ಲಿ ಲಾಕ್‌ಡೌನ್ ಘೋಷಣೆಯಾದ್ದರಿಂದ ಅವನು ಊರಿನಲ್ಲೇ ಉಳಿದುಕೊಳ್ಳಬೇಕಾಗುತ್ತದೆ. ಆಧುನಿಕತೆ-ಪುರಾತನ ಮೌಲ್ಯಗಳು ಮತ್ತು ನಗರ ಜೀವನ-ಗ್ರಾಮ್ಯ ಬದುಕಿನ ವ್ಯತ್ಯಾಸಗಳನ್ನು ಅವಲೋಕಿಸುವ ಅವಕಾಶವು ಇಲ್ಲಿಂದ ಸೃಷ್ಟಿಯಾಗುತ್ತದೆ. ತನ್ನ ಪೂರ್ವಜರ ಬದುಕು ಮತ್ತು ನಂಬಿಕೆಗಳಿಗೆ ಸಂಬಂಧಿಸಿದ ಶೋಧಕ್ಕೆ ರಮಾನಂದನು ಮಾನದಂಡವಾಗುತ್ತಾನೆ.
ಸೀತಾಪುರದ ಗೇಣಿದಾರರಲ್ಲಿ ಒಂದಷ್ಟು ಮಂದಿಯಲ್ಲಿ ಮೂಲ ದಾಖಲೆಗಳು ಇದ್ದರೆ, ಅನೇಕರಲ್ಲಿ ಯಾವ ದಾಖಲೆಗಳು ಇಲ್ಲದೆ ಅವು ಅಂಥವರ ಆತಂಕ ಮತ್ತು ಗೊಂದಲಕ್ಕೆ ಈ ಕಾನೂನು ಕಾರಣವಾಯಿತು. ಗೇಣಿಚೀಟು ಇಲ್ಲದೆಯೂ ಹತ್ತಾರು ವರುಷಗಳಿಂದ ‘ಬಾಯ್ದೆರೆ’ಯ ಒಕ್ಕಲಾಗಿದ್ದವರು ಈಗ ಈ ಕಾನೂನಿನ ಆಶ್ರಯದಲ್ಲಿ ತಾವು ಹೇಗೆ ಭೂಮಾಲಕರಾಗುವುದು ಎಂದು ಚಿಂತಿಸತೊಡಗಿದರು.” ಎಂಬ ವಿವರಗಳು ಇಲ್ಲಿ ಮುಖ್ಯವಾಗುತ್ತವೆ. ಭೂಮಸೂದೆಯ ಕುರಿತು ಇತರ ಕಾದಂಬರಿಗಳು ಮೇಲುಮಟ್ಟದ ತೇಲುಗ್ರಹಿಕೆಯಲ್ಲಿ ವ್ಯಕ್ತಪಡಿಸುವ ವಿವರಗಳು ಇಲ್ಲಿ ಆಳ ಮತ್ತು ವಿಸ್ತಾರವನ್ನು ಪಡೆದಿವೆ.
ಈ ಕಾದಂಬರಿಯು ಹಲವು ಕಾರಣಗಳಿಗಾಗಿ ಶಿವರಾಮ ಕಾರಂತರ ‘ಮರಳಿ ಮಣ್ಣಿಗೆ’, ‘ಚಿಗುರಿದ ಕನಸು’ ‘ಬೆಟ್ಟದ ಜೀವ’ ಮತ್ತು ‘ಮೈಮನಗಳ ಸುಳಿಯಲ್ಲಿ’ ಎಂಬ ಕಾದಂಬರಿಗಳನ್ನು ನೆನಪಿಗೆ ತರುತ್ತವೆ. ಕಥಾವಿನ್ಯಾಸ, ಪಾತ್ರಚಿತ್ರಣ, ಜೀವನದೃಷ್ಟಿ, ಸನ್ನಿವೇಶಗಳ ನಿರೂಪಣೆಗಳಲ್ಲಿ ಈ ಇಬ್ಬರು ಕಾದಂಬರಿಕಾರರ ನಡುವಿನ ಸಾಮ್ಯ ವ್ಯತ್ಯಾಸಗಳು ಗಾಢವಾಗಿವೆ. ಒಂದರ್ಥದಲ್ಲಿ ಮೊಗಸಾಲೆಯವರು ಶಿವರಾಮ ಕಾರಂತರ ಉತ್ತರಾಧಿಕಾರಿಯಾಗಿದ್ದಾರೆ. ಅವರ ಕಾದಂಬರಿಗಳಲ್ಲಿ ಕಾರಂತರ ವಾಸ್ತವವಾದದ ಪ್ರಭಾವವಿರುವುದು ನಿಜವಾದರೂ ಅವರಿಗೆ ತಮ್ಮದೇ ಅದ ಧೋರಣೆಗಳಿವೆ. ಕಾರಂತರು ನವೋದಯ ಕಾಲದವರಾದರೆ ಮೊಗಸಾಲೆಯವರು ನವ್ಯದಿಂದ ಅರಂಭಿಸಿ ದಲಿತ ಬಂಡಾಯದ ಹಾದಿಯನ್ನು ಹಾದು ಬಂದವರು. ಕಾರಂತರ ಆದರ್ಶವು ಈ ಕಾಲಕ್ಕೂ ಸಲ್ಲುವಂಥದ್ದೇ ಆದರೂ ಆ ಕಾಲದಲ್ಲಿದ್ದ ಆದರ್ಶದ ಪರಿಕಲ್ಪನೆಯು ಈಗ ಇಲ್ಲವಾಗುತ್ತಿದೆ. ಮನುಷ್ಯನಿಗೆ ಗುರಿ ಎನ್ನುವುದು ಹೇಗೆ ಬೇಕೋ ಹಾಗೆ ಬದುಕಿನಲ್ಲಿ ಒಂದು ಉದ್ದೇಶವೂ ಇರಬೇಕು ಎಂಬ ವಿಚಾರವನ್ನು ಓದುಗರಿಗೆ ಮತ್ತೆ ಮನದಟ್ಟು ಮಾಡಿಸುವ ಸಲುವಾಗಿ ‘ಚಿಗುರಿದ ಕನಸು’ ಕಾದಂಬರಿಯ ಪಾತ್ರಗಳ ಬಗ್ಗೆ ಚರ್ಚೆಯನ್ನು ಈ ಕಾದಂಬರಿಯಲ್ಲಿ ತರಲಾಗಿದೆ. ಶಂಕರನ ಪಾತ್ರದ ಮುಂದುವರಿಕೆಯಾಗಿ ಹರಿದಾಸ ಮೇಷ್ಟ್ರು ಕಾಣಿಸಿಕೊಳ್ಳುತ್ತಾರೆ. ಆದ್ದರಿಂದ ಕಾರಂತರ ಕಾದಂಬರಿಗಳಿಗಿಂತಲೂ ಅವರ ಧೋರಣೆಯ ಪ್ರಭಾವವಿದೆ ಎನ್ನುವುದು ಉಚಿತವಾಗಿದೆ.
ಕಾರಂತರಂತೆ ಮೊಗಸಾಲೆಯವರು ಕೂಡ ಜೀವನಾನುಭವಗಳಿಗೆ ನಿಷ್ಠರಾಗಿ ಬರೆಯುವವರು. ಈ ಕಾದಂಬರಿಯಲ್ಲಿ ಬರುವ ಕುಟುಂಬ ಯೋಜನೆ ಮತ್ತು ಯುವಕಮಂಡಲದ ಚಟುವಟಿಕೆಗಳಿಗೆ ಸಂಬಂಧಿಸಿದ ವಿವರಗಳಿಗೆ ಲೇಖಕರ ಅನುಭವಗಳೇ ಆಧಾರವಾಗಿವೆ.
ಈ ಕಾದಂಬರಿಯು ಏಕಕಾಲದಲ್ಲಿ ವ್ಯಕ್ತಿ, ಕುಟುಂಬ, ಸಮುದಾಯ ಮತ್ತು ಅವರು ಬದುಕುತ್ತಿರುವ ಒಟ್ಟೂ ಸಮಾಜದ ಕತೆಯನ್ನು ಹೇಳುತ್ತದೆ. ಕಾದಂಬರಿಯ ಒಟ್ಟು ಬಂಧದಲ್ಲಿ ಮೂರು ತಲೆಮಾರುಗಳ ಕತೆಯು ಒಂದಕ್ಕೊಂದು ಬೆಸೆದುಕೊಂಡು ನಿರ್ದಿಷ್ಟ ಕಾಲದೇಶಗಳ ಸ್ವರೂಪವೊಂದು ತನ್ನೆಲ್ಲ ಸಂಕೀರ್ಣತೆಯೊಂದಿಗೆ ನಮ್ಮೆದುರು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಮೊದಲ ಭಾಗವು ಕೌಟುಂಬಿಕ ವ್ಯವಸ್ಥೆಯೊಳಗಿನ ಇಕ್ಕಟ್ಟುಗಳ ಬಗ್ಗೆ ಗಮನವನ್ನು ಹರಿಸಿದ್ದರೆ ಉಳಿದ ಭಾಗಗಳು ಕುಟುಂಬವನ್ನು ಮತ್ತು ಅದನ್ನು ಮೀರಿದ ಮಾನವ ಪ್ರಯತ್ನವು ಕೆಲಸ ಮಾಡುವ ಪರಿಯನ್ನು, ಅವುಗಳಲ್ಲಿ ಹಾಸುಹೊಕ್ಕಿರುವ ಬಿಕ್ಕಟ್ಟುಗಳನ್ನು ಶೋಧಿಸಲು ಯತ್ನಿಸುತ್ತವೆ. ವ್ಯವಸ್ಥೆಯನ್ನು ಅದರ ಒಟ್ಟಂದದಲ್ಲಿ ಗ್ರಹಿಸುವ ಸಾಧ್ಯತೆಯನ್ನು ತೋರುವ ಕೃತಿಯು ವೈಯಕ್ತಿಕ ಆವರಣವನ್ನು ದಾಟಿ ಸಾಂಸ್ಕೃತಿಕ ಪರಿಧಿಯನ್ನು ಪ್ರವೇಶಿಸುತ್ತವೆ. ಸೀತಾಪುರದ ಜನಸಮುದಾಯದ ದೈನಂದಿನ ಜೀವನದ ಬದುಕಿನ ವಿವರಗಳಿಗೆ ಹೆಚ್ಚಿನ ಒತ್ತನ್ನು ನೀಡಿದ್ದರೂ ಸ್ವಾತಂತ್ರ್ಯೋತ್ತರ ಭಾರತದ ಹೊಸ ಪೀಳಿಗೆಗಳ ಬದಲಾದ ಆದ್ಯತೆ ಮತ್ತು ಆಶೋತ್ತರಗಳು ಸೀತಾಪುರದಂಥ ಸಣ್ಣ ಊರಿನಲ್ಲೂ ಪ್ರತಿಫಲಿಸುವ ಬಗೆಯನ್ನು ವಿವರಿಸುವ ಈ ಕಾದಂಬರಿಯು ಅಖಿಲಭಾರತ ವಿದ್ಯಮಾನಗಳಿಗೆ ಕುರುಡಾಗಿಲ್ಲ.
ಈ ಕಾದಂಬರಿಯಲ್ಲಿ ಶಿವಳ್ಳಿ ಬ್ರಾಹ್ಮಣರ ದೈನಂದಿನ ಬದುಕಿನ ಸುಖ ದುಃಖಗಳ, ಇಕ್ಕಟ್ಟು ಬಿಕ್ಕಟ್ಟುಗಳ ಚಿತ್ರಣವನ್ನು ನಿರೂಪಿಸಲಾಗಿದೆ. ಧರ್ಮವನ್ನು ನಿಷ್ಠೆಯಿಂದ ಅನುಸರಿಸುವವರತ್ತ ಲೇಖಕರ ದೃಷ್ಟಿಯು ಹರಿದಿದೆ. ಮನುಷ್ಯ ಪ್ರಯತ್ನ ಮತ್ತು ಸಾಧ್ಯತೆಗಳಲ್ಲಿ ಹೆಚ್ಚಿನ ನಂಬಿಕೆಯು ಬಂದಿದೆ. ಧರ್ಮವನ್ನು ಅರ್ಥ ಮಾಡಿಕೊಳ್ಳುವಲ್ಲಿ, ಮಾನವೀಯ ಮೌಲ್ಯಗಳ ಹುಡುಕಾಟದಲ್ಲಿ ಅವರ ಕಾದಂಬರಿಯು ತನ್ನ ಸ್ವರೂಪವನ್ನು ಕಂಡುಕೊಂಡಿದೆ. ಹುಳುಕುಗಳನ್ನು ಬಯಲಿಗೆಳೆಯುವುದಕ್ಕಿಂತ ಧರ್ಮಮೂಲದಲ್ಲಿರುವ ಇತ್ಯಾತ್ಮಕ ಮೌಲ್ಯಗಳನ್ನು ತಡವಿ ನೋಡುವ ಮನೋಭಾವವು ಎದ್ದು ಕಾಣುತ್ತವೆ. ಲೇಖಕರು ಶಿವಳ್ಳಿ ಬ್ರಾಹ್ಮಣರ ಕಷ್ಟನಷ್ಟಗಳನ್ನು ಚಿತ್ರಿಸುವಾಗ ಅವರ ಆಸೆಗಳನ್ನು, ಕನಸುಗಳನ್ನು, ಸಾಧ್ಯತೆಗಳನ್ನು ಅವರು ಅಲ್ಲಗೆಳೆಯುವುದಿಲ್ಲ. ಅವರ ಧರ್ಮಶ್ರದ್ಧೆ ಮತ್ತು ಅದು ಕೊಡುವ ಆತ್ಮವಿಶ್ವಾಸ, ಶಕ್ತಿಗಳನ್ನು ಸಿನಿಕತನದಿಂದ ನೋಡುವುದಿಲ್ಲ. ಒಂದು ಸಮುದಾಯದ ವಿರೋಧಾಭಾಸಗಳನ್ನು ಬಯಲಿಗೆಳೆಯುವುದಕ್ಕಿಂತ ಲೇಖಕರು ಆ ಸಮುದಾಯದ ದೈನಂದಿನ ಬದುಕಿಗೆ ಪ್ರಭೆಯನ್ನು ನೀಡುವಂಥ ಧಾರ್ಮಿಕ ಆಚರಣೆಗಳ ಅಗತ್ಯ ಮತ್ತು ಮಹತ್ವಗಳನ್ನು ನಿರೂಪಿಸುತ್ತಾರೆ. ಮಧ್ಯಮ ವರ್ಗದವರ ಕಷ್ಟಕಾರ್ಪಣ್ಯಗಳು ಮುಟ್ಟಬಹುದಾದ ಆಳಗಳನ್ನು ತೋರಿಸಿರುವ ಕಾದಂಬರಿಯು ದೈನ್ಯತೆಗಿಂತಲೂ ಬದುಕುವ ದಾರಿಗಳನ್ನು ಶೋಧಿಸುತ್ತದೆ.
ಇಲ್ಲಿ ಚಿತ್ರಿಸಿದ ರಾಧಕ್ಕನ ಪಾತ್ರವು ಅನನ್ಯ ಮಾದರಿ. ಜಟಿಲವೂ, ಸಂಕೀರ್ಣವೂ ಆದ ಲೈಂಗಿಕ ವಿಚಾರಗಳನ್ನು ಇಂಥ ಸೂಕ್ಷ್ಮವಾದ, ಪ್ರಬುದ್ಧವಾದ ಪಾತ್ರದ ಅನುಭವ, ಅವಲೋಕನ, ವಿಶ್ಲೇಷಣೆ ಮತ್ತು ಸ್ವ ವಿಮರ್ಶೆಯ ಬೆಳಕಿನಲ್ಲಿ ಶೋಧಿಸುವ ಲೇಖಕರು ತಮ್ಮ ದರ್ಶನಕ್ಕೆ ಒಂದು ಬಗೆಯ ಸ್ಪಷ್ಟತೆಯನ್ನೂ ಅಧಿಕೃತತೆಯನ್ನೂ ಗಳಿಸಿಕೊಳ್ಳುತ್ತಾರೆ.
ಶಿವಳ್ಳಿ ಬ್ರಾಹ್ಮಣರ ಒಳಜೀವನವನ್ನು ಸೂಕ್ಷ್ಮಾತಿಸೂಕ್ಷ್ಮಗಳಲ್ಲಿ ಹಿಡಿದಿಡುವ ‘ಇದ್ದೂ ಇಲ್ಲದ್ದು’ ಎಂಬ ಕಾದಂಬರಿಯ ಮೂಲಕ ಮೂರು ತಲೆಮಾರುಗಳ ಬದುಕು ಅದರ ಆಶೋತ್ತರಗಳೊಂದಿಗೆ ನಮ್ಮೆದುರು ಬಿಚ್ಚಿಕೊಳ್ಳುತ್ತದೆ. ಇಲ್ಲಿನ ವಿವರಗಳು ಜೀವನ ವಿನ್ಯಾಸದ ಅವಿಭಾಜ್ಯ ನೇಯ್ಗೆಯಾಗಿ ಹೆಣೆದುಕೊಂಡಿವೆ. ತಮ್ಮ ಜೀವನದಲ್ಲಿ ಸಾಕಷ್ಟು ಕಷ್ಟ ಸುಖಗಳನ್ನುಂಡು ತಮ್ಮ ಸಾಧನೆಯಲ್ಲೂ ಏರಿಳಿತಗಳನ್ನು ಕಂಡು ಮಾಗುತ್ತಾ ಬೆಳೆಯುವ ವ್ಯಕ್ತಿಗಳು ಇಲ್ಲಿದ್ದಾರೆ. ಕಾದಂಬರಿಯ ಕೊನೆಗೆ ಬರುವಷ್ಟರಲ್ಲಿ ಅವರು ತಮ್ಮ ಸಾಧನೆ ಮತ್ತು ವ್ಯಕ್ತಿತ್ವದ ಪಕ್ವತೆಗಳಿಂದಾಗಿ ಸುತ್ತಲಿನವರ ಗಮನವನ್ನು ಸೆಳೆಯುತ್ತಾರೆ. ಅಪ್ಪ ಮಗನ ನಡುವಿನ ವೈದೃಶ್ಯವು ಕಾದಂಬರಿಯ ದರ್ಶನವನ್ನು ರೂಪಿಸುವ ಪ್ರಮುಖ ಅಂಶವಾಗುತ್ತದೆ. ಇಲ್ಲಿ ಭಾವುಕತೆಯ ಅಂಶ ಕಡಿಮೆಯಾಗಿದ್ದು ಪಾತ್ರಚಿತ್ರಣ, ಘಟನೆಗಳ ನಿರೂಪಣೆಯಲ್ಲಿ ಸರಳತೆಯು ಕಂಡು ಬರುತ್ತದೆ. ರಮಾನಂದನು ತನ್ನ ತಂದೆಯಾದ ದಾಸಮೇಷ್ಟ್ರ ದಿನಚರಿಯನ್ನು ಓದಿ ಅದಕ್ಕೆ ಕಥನದ ರೂಪವನ್ನು ಕೊಡುವಾಗ ಅವರ ಸಮಾಜಸೇವೆಯ ಬಗ್ಗೆ ಹೆಚ್ಚಿನ ಒತ್ತು ಕೊಟ್ಟಿದ್ದರಿಂದ ಆ ಕಥನಕ್ಕೆ ವೈಯಕ್ತಿಕ ವೃತ್ತಾಂತಕ್ಕಿಂತ ಹೆಚ್ಚಿನ ವ್ಯಾಪ್ತಿಯು ದೊರಕುತ್ತದೆ. ಮತ್ತೆ ವರ್ತಮಾನಕ್ಕೆ ಮರಳುವ ಕಾದಂಬರಿಯು ರಮಾನಂದನ ಮೇಲೆ ಮಾಡಿದ ಪರಿಣಾಮಗಳನ್ನು ಮತ್ತು ಅವುಗಳಿಂದ ಹುಟ್ಟಿದ ಜಿಜ್ಞಾಸೆಯನ್ನು ನಿರೂಪಿಸುತ್ತದೆ. ಕಾದಂಬರಿಯ ಕೊನೆಯಲ್ಲಿ ರಮಾನಂದನು ದೇವರಮನೆಯನ್ನು ಬಿಟ್ಟು ಹೋಗಲು ತಯಾರಾಗಿರುವ ಕುಪ್ಪಣ್ಣಾಚಾರ್ಯರಿಗೆ ಪತ್ರವನ್ನು ಬರೆಯುತ್ತಾನೆ. ಬೆಂಗಳೂರಿನಲ್ಲಿ ನೆಲೆಸಿರುವ ಆತನು ದೇವರಪೂಜೆಗೆ ಬದಲಿ ವ್ಯವಸ್ಥೆಯನ್ನು ಮಾಡಲು ಅಸಮರ್ಥನಾಗಿದ್ದಾನೆ. ಆದ್ದರಿಂದ ದೇವರ ಹೆಸರಿನಲ್ಲಿರುವ ಆ ಮನೆ ಮತ್ತು ಜಮೀನನ್ನು ಕಾನೂನು ಪ್ರಕಾರವಾಗಿ ಕುಪ್ಪಣ್ಣಾಚಾರ್ಯರಿಗೆ ಬರೆದುಕೊಡಲು ಆತನು ತಯಾರಾಗುತ್ತಾನೆ. ಒಂದುವೇಳೆ ಅವರು ಅದಕ್ಕೆ ಒಪ್ಪದೆ ವಿದಾಯವನ್ನು ಹೇಳುವುದಾದರೆ ಮನೆಯನ್ನು ಬಿಡುವ ಮೊದಲು ಮನೆದೇವರನ್ನು ಶಾಸ್ತ್ರದಲ್ಲಿ ಹೇಳಿದಂತೆ ಮನೆಯ ಬಾವಿ ಅಥವಾ ವಡಬಾಂಡೇಶ್ವರಕ್ಕೆ ಹೋಗಿ ಸಮುದ್ರಕ್ಕೆ ಹಾಕಬೇಕೆಂದು ಕೇಳಿಕೊಳ್ಳುತ್ತಾನೆ. ವಿದಾಯವನ್ನು ಹೇಳುತ್ತಿದ್ದರೆ ಮನೆಯ ಬೀಗದ ಕೈಯನ್ನು ಗೋವಿಂದಾಚಾರ್ಯರ ಮಗನಾದ ನರಸಿಂಹನಿಗೆ ಕೊಡಬೇಕು. ಮುಂದಿನ ನಿರ್ಧಾರ ಅವನಿಗೆ ಬಿಟ್ಟದ್ದು ಎನ್ನುವ ಮೂಲಕ ಯಾರ ಮೇಲೂ ಒತ್ತಡವನ್ನು ಹೇರದ ರಮಾನಂದನಂತೆ ಈ ಕಾದಂಬರಿಯು ಕೂಡ ತಾನಾಗಿ ಯಾವುದೇ ರೀತಿಯ ನಿರ್ಧಾರವನ್ನು ಕೈಗೊಳ್ಳದೆ ಎಲ್ಲ ತೀರ್ಮಾನಗಳನ್ನು ಓದುಗರ ಚಿಂತನೆಗೆ ಬಿಟ್ಟುಕೊಟ್ಟು ಸಂದಿಗ್ಧ ಪರಿಸ್ಥಿತಿಯಲ್ಲಿ ಮುಕ್ತಾಯಗೊಳ್ಳುತ್ತದೆ.
ಇಲ್ಲಿ ಯಾರ ಬದುಕೂ ಸುಖದ ಸುಪ್ಪತ್ತಿಗೆಯಾಗಿಲ್ಲ. ಬದುಕು ಎಲ್ಲರ ಪ್ರಜ್ಞಾಪೂರ್ವಕ ಆಯ್ಕೆಯಾಗಿದೆ. ಅದಕ್ಕಾಗಿ ಹಲವು ಬಗೆಯ ಕಷ್ಟಕಾರ್ಪಣ್ಯಗಳನ್ನು ಎದುರಿಸಬೇಕಾಯಿತು. ಸಾಧನೆ ಮತ್ತು ಜೀವನಾನುಭವಗಳಿಂದ ಇವರ ವ್ಯಕ್ತಿತ್ವಗಳು ಹದಗೊಂಡವು. ಈ ದೃಷ್ಟಿಯಿಂದ ನೋಡಿದರೆ ದಾಸಮೇಷ್ಟ್ರ ಪಾತ್ರವು ವಿಸ್ತೃತವಾದ, ಸಮೃದ್ಧವಾದ ವಿವರ ವರ್ಣನೆಗಳಲ್ಲಿ ಮೂಡಿ ಬಂದ ಪಾತ್ರವಾಗಿದೆ.
ಅವನಿಗೆ ಸಾರ್ಥಕ್ಯದ ಕ್ಷಣಗಳಿವೆ. ಆದರೆ ಇದು ಹರಿದಾಸ ಮೇಷ್ಟ್ರನ್ನು ಕುರಿತ ಕಾದಂಬರಿಯನ್ನಾಗಿ ಓದಬಾರದು. ಅವರು ಈ ಕಾದಂಬರಿಯ ಪ್ರಧಾನ ಪಾತ್ರ ಎಂಬುದು ನಿಜವಾದರೂ ಇವರೊಂದಿಗೆ ವೈದೃಶ್ಯದಲ್ಲಿ ನಿಲ್ಲುವ ಹಲವು ಪಾತ್ರಗಳು ಇವೆ. ಆ ಪಾತ್ರಗಳು ಸೂಚಿಸುವ ಬಹುಮುಖಿ ನೆಲೆಗಳ ಒಟ್ಟು ವಿನ್ಯಾಸದಲ್ಲಿ ಗ್ರಹಿಸಿದರೆ ಮಾತ್ರ ಈ ಕಾದಂಬರಿಯು ಇತರ ಕಾದಂಬರಿಗಳಿಗಿಂತ ಹೇಗೆ ಭಿನ್ನವಾಗಿದೆ ಎಂದು ತಿಳಿಯುತ್ತದೆ. ದಾಸಮೇಷ್ಟ್ರ ಚಿಂತೆ, ಚಿಂತನೆ ಮತ್ತು ಚಟುವಟಿಕೆಗಳು ಕಾದಂಬರಿಯ ಹೆಚ್ಚಿನ ಭಾಗವನ್ನು ಆವರಿಸಿಕೊಂಡಿದ್ದು ಅವರ ಸುತ್ತ ಜರಗುವ ವಿದ್ಯಮಾನಗಳು ಕೃತಿಯ ವಿನ್ಯಾಸವನ್ನು ರೂಪಿಸಿವೆ. ಅವರ ಆದರ್ಶ, ಕನಸು, ಶೋಧ ಮತ್ತು ಪ್ರಗತಿಪರ ಚಟುವಟಿಕೆಗಳನ್ನು ದಾಖಲಿಸುವುದರೊಂದಿಗೆ ಅವನಿಗಿಂತ ತೀರಾ ಭಿನ್ನ ನೆಲೆಗಳಲ್ಲಿರುವ ಪಾತ್ರಗಳನ್ನು ಅಷ್ಟೇ ಸಂಕೀರ್ಣವಾಗಿ ವಿವರಿಸುವ ಲೇಖಕರ ಕಥನ ಕೌಶಲವು ಗಮನವನ್ನು ಸೆಳೆಯುತ್ತದೆ.
ದಾಸಮೇಷ್ಟ್ರ ಅನುಭವಗಳನ್ನು ವಿಸ್ತಾರದ ಚೌಕಟ್ಟಿನಲ್ಲಿ ಚಿತ್ರಿಸುವ ಕಾದಂಬರಿಯು ದಾಸಮೇಷ್ಟ್ರನ್ನು ತನ್ನ ನಾಯಕನೆಂಬಂತೆ ಬಿಂಬಿಸುವುದಿಲ್ಲ. ಏಕಪಾತ್ರ ಅಥವಾ ನಾಯಕಪಾತ್ರ ಪ್ರಧಾನ ಕಾದಂಬರಿಗಳಿಗಿಂತ ಈ ಕಾದಂಬರಿಯು ಭಿನ್ನವಾಗಿದೆ. ಸೀತಾಪುರದಲ್ಲಿ ಬದುಕುವವರು ಏಕಶಿಲಾಕೃತಿಯಲ್ಲೆಂಬಂತೆ ಚಿತ್ರಿತರಾಗಿಲ್ಲ. ಯಾವ ಪಾತ್ರವನ್ನೂ ಜಾತಿ, ವರ್ಗ ಮತ್ತು ಲಿಂಗಮಾದರಿ ಎನ್ನುವಂತಿಲ್ಲ. ನಿರ್ದಿಷ್ಟ ಜಾತಿಯವರು ಧಾರಣ ಮಾಡುವ ರೂಢಿಗತ ಲಕ್ಷಣಗಳು ಇದ್ದರೂ ಅವುಗಳನ್ನು ಮೀರಿ ಅಪ್ಪಟ ಮನುಷ್ಯತ್ವವನ್ನು ಅನಾವರಣಗೊಳಿಸುವ ಆಸ್ಥೆಯು ಕಂಡು ಬರುತ್ತದೆ. ಅವರುಗಳ ನಡುವಿನ ಭಿನ್ನಾಭಿಪ್ರಾಯ ಮತ್ತು ಸಂಘರ್ಷಗಳು ಮನುಷ್ಯರ ನಡುವಿನ ಭಿನ್ನಾಭಿಪ್ರಾಯ ಮತ್ತು ಸಂಘರ್ಷಗಳೆಂಬಂತೆ ಚಿತ್ರಿತವಾಗಿವೆ. ಎಲ್ಲ ಬಗೆಯ ದ್ವಿದಳ ವರ್ಗೀಕರಣದ ಕಥನರೀತಿಯನ್ನು ಲೇಖಕರು ಉದ್ದೇಶಪೂರ್ವಕ ಕೈಬಿಟ್ಟಿದ್ದಾರೆ. ಆದ್ದರಿಂದ ಈ ಕಾದಂಬರಿಯು ಜಾತಿವಾದಿ ಕಥನವಾಗದೆ ಮಾನವೀಯ ಕಥನವಾಗುತ್ತದೆ. ಹಲವು ವ್ಯಕ್ತಿಗಳ, ಸಮುದಾಯದ ಸ್ಮೃತಿಗಳ, ಲೋಕಜ್ಞಾನದ ವಿಶಾಲವಾದ ಭಿತ್ತಿಯಲ್ಲಿ ಸೀತಾಪುರವೆಂಬ ಊರಿನ, ಸಮುದಾಯದ ಮೂರು ತಲೆಮಾರುಗಳಿಗೆ ಸಂಬಂಧಿಸಿದ ಅನುಭವಗಳನ್ನು ಆಧುನಿಕ ಬದುಕಿನ ಹಿನ್ನೆಲೆಯಲ್ಲಿ ನಿರೂಪಿಸುವ ಮಹತ್ವಾಕಾಂಕ್ಷೆಯು ಕಂಡುಬರುತ್ತದೆ. ಈ ಕಾದಂಬರಿಯು ಬ್ರಾಹ್ಮಣರ ಬದುಕಿನ ವೈವಿಧ್ಯಮಯ ಮುಖಗಳನ್ನು ಸಿನಿಕತನವಿಲ್ಲದ ಹದದಲ್ಲಿ ಅನಾವರಣಗೊಳಿಸುವ ಕಾದಂಬರಿಯು. ಅವರ ಬದುಕನ್ನು ಕೀಳಾಗಿ ಕಾಣುವುದಿಲ್ಲ. ಅವರ ಉದಾರವಾದಿ ಮನೋಭಾವವು ಕ್ರಿಯೆಯತ್ತಲೂ ಹೊರಳಿಕೊಳ್ಳುವುದು ಇತ್ಯಾತ್ಮಕ ಅಂಶವಾಗಿದೆ. ಕೊಂಚ ಒತ್ತಾಯ ಒತ್ತಡಗಳಿಲ್ಲದೆ ಬದಲಾವಣೆಯು ಉಂಟಾಗುವುದಿಲ್ಲ ಎಂಬ ವಿಚಾರವನ್ನು ಈ ಕೃತಿಯು ಮನಗಾಣಿಸುತ್ತದೆ.
ಹಲವು ಬಗೆಯ ಜೀವನ ಕ್ರಮಗಳನ್ನು, ಮನಸ್ಥಿತಿಗಳನ್ನು, ಜೀವನದೃಷ್ಟಿಗಳನ್ನು ಮುಖಾಮುಖಿಯಾಗಿಸುವ ಕಾದಂಬರಿಯು ಕೆಲವು ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತದೆ. ಯಾವ ಬಗೆಯ ಬದುಕು ಹೆಚ್ಚು ಅರ್ಥಪೂರ್ಣವಾದದ್ದು? ಬದುಕಿನಲ್ಲಿ ತರತಮ ಎಂಬುದು ಇದೆಯೇ? ಜೀವನ ನಿಜಕ್ಕೂ ಸಫಲವಾಗುವುದು ಹೇಗೆ? ವ್ಯವಸ್ಥೆಯ ಒಳಗೆ ಇದ್ದುಕೊಂಡೇ ಹಳ್ಳಿಯನ್ನು ಉದ್ಧಾರ ಮಾಡಿದ ಆದರ್ಶ ದೊಡ್ಡದೋ? ದೇವರು ದಿಂಡಿರ ಬಗ್ಗೆ ಆಸಕ್ತಿಯನ್ನು ಗಮನಿಸದೆ ಮೇರಿಯ ಕೈಹಿಡಿದ ರಮಾನಂದನ ಆದರ್ಶ ದೊಡ್ಡದೋ? ಎಂಬ ಪ್ರಶ್ನೆಗಳು ಸರಳವಲ್ಲ. ಅವುಗಳಿಗೆ ಸರಳ ಉತ್ತರವೂ ಇಲ್ಲ.
ಸಿದ್ಧ ಮಾನದಂಡವಿಲ್ಲದೆ ಆರಂಭಗೊಳ್ಳುವ ಇಲ್ಲಿನ ಕಾದಂಬರಿಯಲ್ಲಿ ಆತ್ಮಶೋಧನೆ, ದ್ವಂದ್ವಗಳಿದ್ದರೂ ಪ್ರತಿಮೆ ಸಂಕೇತಗಳಿಲ್ಲ. ಸಾಂಪ್ರದಾಯಿಕ ಶಿವಳ್ಳಿ ಸಂಸ್ಕೃತಿಯ ಹಿನ್ನೆಲೆಯಲ್ಲಿ ಬದುಕುತ್ತಿರುವ ಹಳ್ಳಿಯ ಜನರ ಸ್ಥಿತಿಗತಿಗಳನ್ನು ಆಪ್ತವಾಗಿ ಚಿತ್ರಿಸುವ ಕೃತಿಯಲ್ಲಿ ಸುಧಾರಣೆಯ ಆವೇಶವಾಗಲೀ ಸಮಾಜದ ಅಂಧಶ್ರದ್ಧೆಗಳ ಬಗ್ಗೆ ಆಕ್ರೋಶವಾಗಲೀ ಇಲ್ಲ. ಮಧ್ಯಂತರದಲ್ಲೇ ಆರಂಭಗೊಂಡು ಹಿನ್ನೋಟ ತಂತ್ರದ ಮೂಲಕ ವಿಷಯಗಳನ್ನು ನಿರೂಪಿಸುತ್ತಾ ಒಂದು ಕಾಲದ ಜೀವನಕ್ರಮವನ್ನು ಹಿಡಿದಿಡುವ ಕಾದಂಬರಿಯು ಮಾನವೀಯ ಸಂಬಂಧಗಳ ಸೂಕ್ಷ್ಮ ರೂಪವನ್ನು ವಿಶ್ಲೇಷಿಸುತ್ತದೆ. ಗಂಡು ಹೆಣ್ಣೆಂಬ ಭೇದವಿಲ್ಲದೆ ತಮಗೊದಗಿದ ಕಷ್ಟಕರ ಪರಿಸ್ಥಿತಿಯ ನಡುವೆ ಸಿಕ್ಕು ಅಸಹಾಯಕರಾದವರು ಸ್ವೀಕರಿಸುವ ದಿಟ್ಟ ನಿಲುವು, ಸಮಸ್ಯೆಗಳನ್ನು ಎದುರಿಸುವ ರೀತಿಯು ಮುಖ್ಯವಾಗುತ್ತದೆ.
ಈ ಕಾದಂಬರಿಯು ಮಾನವ ಸಮುದಾಯದ ಅಸ್ತಿತ್ವದ ಆಧಾರವಾದ ಪ್ರೀತಿ ನಂಬುಗೆಗಳ ಕುರುಹುಗಳ ಪ್ರತೀಕವಾಗಿದೆ. ಬದುಕು ಅನುಭವವೇ ಹೊರತು ಸಿದ್ಧಾಂತವಲ್ಲ ಎಂದು ಸಾರುವ ಕೃತಿಯು ಔಪಚಾರಿಕ ಧೋರಣೆ, ವ್ಯವಸ್ಥೆಗಳನ್ನು ಬದಿಗೆ ಸರಿಸಿ ಬದುಕಿಗೆ ಕಣ್ಣಾಗುವ ಮೌಲ್ಯಗಳತ್ತ ತುಡಿಯುತ್ತವೆ. ಹಿಂದಿನ ತಲೆಮಾರಿನ ಬದುಕಿನ ಅಧ್ಯಯನದ ಮೂಲಕ ಶಾಶ್ವತವಾದ ಜೀವನಸೂತ್ರಗಳನ್ನು ಕಂಡುಕೊಂಡಿರುವ ಕಾದಂಬರಿಯು ಸಂಪ್ರದಾಯ ನಿಷ್ಠ ಬ್ರಾಹ್ಮಣ ಸಮಾಜವನ್ನು ಅತ್ಯಂತ ಕಾಳಜಿಯಿಂದ, ನಿಷ್ಠೆಯಿಂದ ಚಿತ್ರಿಸುತ್ತಾ ಅದರಲ್ಲಿನ ಒಳಿತನ್ನು ಸ್ವೀಕರಿಸುವುದರೊಂದಿಗೆ ಜಡತ್ವವನ್ನು ಪ್ರಶ್ನಿಸುತ್ತದೆ.
ತನ್ನ ಮಗನಾದ ರಮಾನಂದನು ಕ್ರೈಸ್ತ ಮತಕ್ಕೆ ಸೇರಿದ ಹುಡುಗಿಯನ್ನು ಮದುವೆಯಾದಾಗ ದಾಸಮೇಷ್ಟ್ರ ಹೃದಯದಲ್ಲಿ ಸಂಕುಚಿತ ಮನಸ್ಸಿನ ಶೂನ್ಯವನ್ನು ಮೀರಿದ ಬದಲಾವಣೆಯು ಕಾಣಿಸಿಕೊಳ್ಳದಿರುವುದು ವಿಷಾದನೀಯವಾಗಿದೆ. ಏನೇ ಇದ್ದರೂ ಆಧುನಿಕ ಯುಗದಲ್ಲಿ ಹೆಣ್ಣು ತನ್ನ ಅಸ್ಮಿತೆಯ ಅರಿವು, ಸಾಧನೆಗಳಲ್ಲಿ ಸಾಧಿಸಿದ ಪ್ರಗತಿ ಮತ್ತು ಕ್ರಿಯಾಶಕ್ತಿಯನ್ನು ರೂಢಿಸಿಕೊಂಡ ನಿದರ್ಶನಗಳಿವೆ. ಅವಳ ಸಾಮಾಜಿಕ ಪರಿಸರಗಳಲ್ಲಿ ನಡೆದ ಶಿಕ್ಷಣದ ಪ್ರಸಾರ ಸಾಮಾಜಿಕ ಸಮಾನತೆಯ ಸ್ವೀಕಾರ ಮತ್ತು ಗಂಡಸಿನ ಪ್ರೋತ್ಸಾಹ ಈ ಬದಲಾವಣೆಯ ಹಿಂದಿನ ಪ್ರೇರಣೆಯಾಗಿದೆ. ತನ್ನ ಅಂತರಂಗದಲ್ಲಿ ನಡೆದ ಮಹತ್ವದ ಬದಲಾವಣೆಯಿಂದಾಗಿ ಅವಳು ತನ್ನ ವ್ಯಕ್ತಿತ್ವದ ವಿಕಾಸದೆಡೆಗೆ ಗಮನ ಕೊಡುವಂತಾಗಿದೆ. ಮೊದಲು ಮೂಕ ಸ್ವರೂಪವನ್ನು ಹೊಂದಿದ್ದ ಪ್ರತಿಕ್ರಿಯೆಯು ಈಗ ಕೃತಿಗಳ ಮೂಲಕ ಆಕಾರವನ್ನು ಪಡೆದಿರುವ ಸೂಚನೆ ಇದೆ.
ಲೇಖಕರ ವಾಸ್ತವವಾದಿ ಶೈಲಿಯು ಕಠೋರವಾದ ನೋವು ಮತ್ತು ಮಿತಿಯಿಲ್ಲದ ದುಃಖಗಳಿಂದ ಕೂಡಿದ ಮನುಷ್ಯ ಪ್ರಪಂಚದ ಸ್ಥಿತಿಗಳನ್ನು ಕರಾರುವಾಕ್ಕಾಗಿ ಹಿಡಿದಿಡುತ್ತದೆ. ವ್ಯವಸ್ಥೆಯೊಳಗೆ ಜನರು ನಲುಗುವ ರೀತಿ, ಅದನ್ನು ಮೆಟ್ಟಿ ನಿಲ್ಲುವ ವ್ಯಕ್ತಿಯ ಘನತೆ, ಸ್ವಾಭಿಮಾನಗಳನ್ನು ವಿವೇಚಿಸುವ ಲೇಖಕರ ಮಾನವೀಯ ದೃಷ್ಟಿಕೋನವು ಮನುಷ್ಯರಲ್ಲಿನ ಉತ್ತಮಿಕೆಯ ಸಾಧ್ಯತೆಗಳೆಡೆಗೆ ಗಮನ ಹರಿಸುತ್ತದೆ. ಹಳೆಯ ಮತ್ತು ಹೊಸ ತಲೆಮಾರುಗಳನ್ನು ಪ್ರತಿನಿಧಿಸುವ ಪಾತ್ರಗಳು ವ್ಯವಸ್ಥೆಯನ್ನು ಸಮರ್ಥಿಸದೆ ಬದುಕಿನೊಡನೆ ಹೋರಾಡಿ ಗೆಲ್ಲುತ್ತಾರೆ. ಇಲ್ಲಿ ಒತ್ತು ಇರುವುದು ಅವರ ವಿವೇಕ, ವಾಸ್ತವ ಪ್ರಜ್ಞೆ, ಬದುಕುಳಿಯುವ ಸಾಹಸ, ಹೃದಯವಂತಿಕೆ ಮತ್ತು ವ್ಯಕ್ತಿತ್ವ ನಿರ್ಮಾಣದ ಮೇಲೆ.
ಭಾಷೆಯನ್ನು ಸೂಕ್ಷ್ಮವಾಗಿ ಬಳಸುವ ಲೇಖಕರು ಸಮಾಜದ ಕ್ರೂರ ವಾಸ್ತವವನ್ನು ನಿರ್ಲಿಪ್ತವಾಗಿ, ಉರಿಯುವ ವಿಷಾದದ ನೆಲೆಯಲ್ಲಿ ಮಂಡಿಸುತ್ತಾ ಕೃತಿಗೆ ಹೊಸ ಅರ್ಥಗಳನ್ನು ಒದಗಿಸುತ್ತಾರೆ. ತಮ್ಮದೇ ರೀತಿಯಲ್ಲಿ ಕತೆಗಳನ್ನು ಹೇಳುತ್ತಾ ಬದುಕಿನ ವ್ಯಂಗ್ಯವೈರುಧ್ಯಗಳತ್ತ ಗಮನವನ್ನು ಸೆಳೆಯುತ್ತಾರೆ. ಒಡೆದ ಕನ್ನಡಿಯ ಚೌಕಟ್ಟಿನಲ್ಲಿ ಹಲವು ಬಿಂಬಗಳನ್ನು ಮೂಡಿಸುವ ಇವರ ನೈಪುಣ್ಯತೆ ಕಾದಂಬರಿಯ ಬಂಧಕ್ಕೆ ವಸ್ತುದ್ರವ್ಯವನ್ನು ಬೆಸೆಯಲು ಸಹಾಯ ಮಾಡುತ್ತದೆ. ಋಣಾತ್ಮಕ ನೆಲೆಯನ್ನು ಮೀರಿ ವಿಶೇಷ ಅರ್ಥವಂತಿಕೆಯನ್ನು ಪಡೆದುಕೊಳ್ಳುವ ಕೃತಿಯು ಮಾನವನ ವಿಚ್ಛಿದ್ರಕಾರಿ ಪ್ರವೃತ್ತಿಯನ್ನು, ಮೌಲ್ಯಗಳ ಕಡೆ ತೋರುವ ತಿರಸ್ಕಾರಗಳನ್ನು ವಿಷಾದ ಬೆರೆತ ಧಾಟಿಯಲ್ಲಿ ವಿವರಿಸುತ್ತಾ ಬದುಕಿನ ಕ್ರೂರ ವಾಸ್ತವಗಳನ್ನು ನಿರೂಪಿಸುತ್ತದೆ. ಚಿಕ್ಕಪುಟ್ಟ ಪದಗಳಲ್ಲೇ ಸನ್ನಿವೇಶವನ್ನು ಸೃಷ್ಟಿಸುವ ಕಾದಂಬರಿಯು ವ್ಯಕ್ತಿಗತ-ಸಾಮಾಜಿಕ ಅನುಭವಗಳನ್ನು ಹಿಡಿದಿಡುತ್ತದೆ. ಮೊದಲ ಓದಿಗೇ ಸುಲಭವಾಗಿ ತೆರೆದುಕೊಳ್ಳುವ ಕೃತಿಯು ಎಲ್ಲೂ ಉದ್ವೇಗಕ್ಕೊಳಗಾಗದಿರುವುದರಿಂದ ಸಂಯಮವನ್ನು ರೂಢಿಸಿಕೊಂಡಿದೆ. ಕಥನಕ್ಕೆ ತಕ್ಕಂತೆ ಅದರ ಸ್ತರ ಮತ್ತು ಕೇಂದ್ರವನ್ನು ಆಯ್ದುಕೊಳ್ಳುವ ಜಾಣ್ಮೆಯು ಲೇಖಕರಿಗೆ ಇರುವುದರಿಂದ ಕಾದಂಬರಿಯ ಓಟಕ್ಕೆ ತಡೆ ಉಂಟಾಗುವುದಿಲ್ಲ. ವಿಪುಲ ವಿವರಣೆಗಳಿಂದ ಕೂಡಿದ ಬರಹಗಳಲ್ಲಿ ಲೇಖಕರ ಒಲವು ನಿಲುವುಗಳು ಪ್ರತಿಫಲಿಸುತ್ತವೆ. ಜ್ವಲಂತ ವಿದ್ಯಮಾನವನ್ನು ಹಿನ್ನೆಲೆಯಾಗಿಟ್ಟುಕೊಂಡು ಬದುಕಿನ ದುರಂತದತ್ತ ಬೊಟ್ಟು ಮಾಡುವ ಕೃತಿಯು ಕುರೂಪಗೊಂಡ ಬದುಕಿನ ರೀತಿನೀತಿ, ಜೀವನದೃಷ್ಟಿ, ಮೌಲ್ಯ, ಭಾವನೆ, ಇಳಿಮುಖವಾಗುತ್ತಿರುವ ಮನುಷ್ಯನ ಮನಸ್ಸು, ಆಧುನಿಕ ಜನಾಂಗದ ವಿರೋಧಾಭಾಸಗಳನ್ನು ಅನಾವರಣಗೊಳಿಸುತ್ತದೆ. ದಾಂಪತ್ಯದ ಅರ್ಥ, ಕಷ್ಟ ನಿಷ್ಠುರದಿಂದ ಕೂಡಿದ ಬಾಳುವೆಯ ಚೆಲುವು, ವಾತ್ಸಲ್ಯದ ಹಿಂದಿನ ಜೀವನದರ್ಶನ, ಮತ್ತು ಜೀವನಪ್ರೀತಿಯನ್ನು ಜೀವದ್ರವ್ಯವಾಗಿಸಿಕೊಂಡ ಕಾದಂಬರಿಯು ಸಣ್ಣಪುಟ್ಟ ಸಂಗತಿಗಳ ಮೂಲಕ ಸತ್ಯದ ಸಾಕ್ಷಾತ್ಕಾರವನ್ನು ಮಾಡುತ್ತದೆ.
ಪಾತ್ರದ ಅನುಭವ ಮತ್ತು ವಿಚಾರಗಳ ಚಿತ್ರಣ ಓದುಗನ ಮನಸ್ಸಿನಲ್ಲಿ ಮೂಡಿ ಕ್ರಮೇಣ ಕತೆಯ ರೂಪದಲ್ಲಿ ಬೆಳೆಯುವಾಗ ಅದರೊಳಗಿನ ಪದ ಸಂಪತ್ತು, ಧ್ವನಿ, ಸತ್ವಯುತವಾದ ಭಾಷೆ, ಖಚಿತವಾದ ನುಡಿಗಟ್ಟು, ನಿರೂಪಣೆಗಳು ವಿಶೇಷವಾಗಿ ಕಂಗೊಳಿಸುತ್ತವೆ. ಸುತ್ತಲಿನ ಜಗತ್ತನ್ನು ತೀವ್ರವಾಗಿ ನೋಡಿದ್ದರ, ಹಿಂದಿನ ತಲೆಮಾರಿನವರ ಬದುಕನ್ನು ಅರಿತುಕೊಂಡದ್ದರ ಫಲವಾಗಿ ಮೂಡಿದ ಕಾದಂಬರಿಯು ತನ್ನೆಲ್ಲ ಸ್ಪಷ್ಟತೆ ಮತ್ತು ಚೆಲುವಿನೊಂದಿಗೆ ಬದುಕಿನ ವಿವರಗಳನ್ನು ದಾಖಲಿಸುತ್ತದೆ. ಕೌಟುಂಬಿಕ ಸಮಸ್ಯೆ, ಗಂಡು ಹೆಣ್ಣಿನ ಸಂಬಂಧ, ಹೆಣ್ಣಿನ ದುಃಖ, ಮುಗ್ಧರ ವಂಚನೆ, ಸಮಾಜದ ದಬ್ಬಾಳಿಕೆಗೆ ಸಿಲುಕಿ ನೊಂದವರ, ತಿರಸ್ಕೃತರ ಯಾತನೆಗಳನ್ನು ಚಿತ್ರಿಸುತ್ತಾ ಅವುಗಳನ್ನು ಮೀರಲು ಅಗತ್ಯವಾದ ಮಾನವೀಯ ಸಾಧ್ಯತೆಗಳನ್ನು ಶೋಧಿಸುತ್ತದೆ. ಸಾಂಸಾರಿಕ ವಿರಸದಲ್ಲಿ ಹುಟ್ಟಿಕೊಳ್ಳುವ ನರಕದ ಅನುಭವಕ್ಕಿಂತ ಬೇರೆಯಾದ ಅನುಭವಗಳೂ ಸೇರಿಕೊಳ್ಳುವುದರಿಂದ ಕಾದಂಬರಿಯು ತನ್ನೆಲ್ಲ ಸಂಕೀರ್ಣತೆಯೊಂದಿಗೆ ಮನಸ್ಸನ್ನು ತಟ್ಟುತ್ತದೆ.
ಇವುಗಳಲ್ಲಿ ಮುಖ್ಯವಾದದ್ದು ರಮಾನಂದ ಮತ್ತು ಮೇರಿಯ ಜಗತ್ತು. ಹಲವರು ಕಳೆದುಕೊಂಡಿರುವ ಪ್ರೀತಿ, ಮುಗ್ಧ ಪ್ರಪಂಚ ಅವರ ಮನಸ್ಸುಗಳಲ್ಲಿ ಇನ್ನೂ ಜೀವಂತವಾಗಿದೆ. ಮದುವೆಯಾದ ಹೊಸತರಲ್ಲಿ ಪ್ರೀತಿಸುವಷ್ಟೇ ತೀವ್ರವಾಗಿ ಮಧ್ಯವಯಸ್ಸಿನಲ್ಲೂ ತನ್ನ ಗಂಡನನ್ನು ಪ್ರೀತಿಸುವ ಆಕೆಯು ನಿರ್ವ್ಯಾಜ್ಯ ಪ್ರೇಮ ಅಂತಃಕರಣಗಳ ಪ್ರತೀಕವಾಗುತ್ತಾಳೆ. ಪ್ರೇಮ, ಮದುವೆ ಗೆಳೆತನಗಳ ಸುತ್ತ ಹೆಣೆದಿರುವ ವಿಚಾರಗಳಲ್ಲಿ ವ್ಯಕ್ತವಾಗುವ ಲಿಂಗಭೇದ, ಅಸಮಾನತೆಗಳು ತೋರಿಕೆಯ ತೆಳು ಸ್ವರೂಪದಲ್ಲೇ ತೀವ್ರ ಪರಿಣಾಮವನ್ನುಂಟು ಮಾಡುತ್ತವೆ. ಮಿತವಾದ ಹರಹಿನಲ್ಲೇ ಅರ್ಥಪೂರ್ಣವಾದ ವಿಚಾರಗಳನ್ನು ಗಾಢವಾಗಿ ಹೇಳಬಲ್ಲ ಲೇಖಕರ ಧಾಟಿಯಲ್ಲಿ ಅಬ್ಬರವಿಲ್ಲದಿದ್ದರೂ ವ್ಯಂಗ್ಯದಿಂದ ಚುಚ್ಚುವ ಸಾಮರ್ಥ್ಯವಿದೆ. ಸಾಮಾಜಿಕ ಸಮಸ್ಯೆಗಳಿಗೆ ಅರ್ಥಪೂರ್ಣ ಪರಿಹಾರಗಳನ್ನು ಶೋಧಿಸುವಲ್ಲಿ ಲೇಖಕರ ಕನಸು, ತಲ್ಲಣ ಮತ್ತು ಅಪೇಕ್ಷೆಗಳು ಸೂಚಿತವಾಗುತ್ತದೆ. ಒಂದೇ ಆಶಯಕ್ಕೆ ಬಂಧಿತರಾಗದೆ ಸಮಸ್ಯೆಯ ಹಲವು ಮಗ್ಗುಲುಗಳನ್ನು ಗಮನಿಸುವ ಲೇಖಕರು ಗಂಡಿನ ಬವಣೆಗೆ ಮಾತ್ರ ಮೀಸಲಾಗದೆ ಹೆಣ್ಣು ಮತ್ತು ಹಲವು ಜಾತಿಗೆ ಸೇರಿದ ಎಲ್ಲರ ಸಮಸ್ಯೆಗಳನ್ನು ಹಲವು ನೆಲೆಗಳಲ್ಲಿ ತೋರಿಸುತ್ತಾರೆ. ಹೆಣ್ಣಿನ ಸಂಕಷ್ಟಗಳ ಬಗ್ಗೆ ಮಾತ್ರ ಬರೆಯುತ್ತಾ ಸರಳೀಕೃತ, ಏಕಮುಖಿಯಾದ ಪುರುಷವಿರೋಧಿ ನೆಲೆಗಳನ್ನು ಮುಟ್ಟಲು ಹಾತೊರೆಯದೆ ಬದುಕಿನ ವಿರಸದ ಕ್ಷಣಗಳನ್ನು, ಸಂಪ್ರದಾಯದ ಸಂಕೋಲೆಗಳನ್ನು ಮೀರುವ ದಿಟ್ಟ ಗಂಡು ಹೆಣ್ಣುಗಳನ್ನು ಕಡೆದಿಡುತ್ತಾರೆ.
ಈ ಕೃತಿಯ ಲೇಖಕರು ದೈನಂದಿನ ಬದುಕಿನಲ್ಲಿ ಘಟಿಸುವ ಅದೆಷ್ಟೋ ಸಂಗತಿಗಳನ್ನು ಕೇಳಿ ತಿಳಿದೋ ಅವಲೋಕಿಸಿಯೋ ಪರಕಾಯ ಪ್ರವೇಶ ಮಾಡಿಯೋ ಕತೆಗಳ ಮೂಲಕ ಸಹಜವಾಗಿ ನಿರೂಪಿಸಿದ್ದಾರೆ. ಕಂಡು ಅನುಭವಿಸಿದ ಸಂಗತಿಗಳನ್ನು ಪ್ರಾಮಾಣಿಕವಾಗಿ ವಿವರಿಸಿದ್ದಾರೆ. ಸ್ವಂತ ಬದುಕಿನ ಬಗ್ಗೆ ಹೊಸ ತಿಳಿವನ್ನು ಹುಟ್ಟಿಸುವ ಉದ್ದೇಶವು ಸಫಲವಾಗಿದೆ. ವರ್ತಮಾನದ ಬದುಕಿನ ತೆರೆಯ ಹಿಂದೆ ನೇತಾಡುತ್ತಿರುವ ಸುಖ ದುಃಖದ ಅದೃಶ್ಯ ಚಿತ್ರಗಳು ಲೇಖಕರ ಕೈಚಳಕದಿಂದ ಕಲಾತ್ಮಕ ರೂಪುತಳೆದು ಕಣ್ಣೆದುರು ಮೂಡಿಬಂದಿವೆ. ಜನಜೀವನದೊಂದಿಗೆ ನಿಕಟ ಸಂಬಂಧವನ್ನು ಹೊಂದಿದ ಲೇಖಕರು ಬದುಕಿನ ಕುರಿತು ಸಕಾರಾತ್ಮಕ ನೋಟದಿಂದ ಮನುಜವರ್ಗವನ್ನು ಕುರಿತ ಮುಖ್ಯ ಸೂತ್ರಗಳನ್ನು ಸಾಧಿಸುತ್ತಾರೆ. ಕಾದಂಬರಿಯ ವಸ್ತುವಿನಂತೆ ಕಥನಕ್ರಮವೂ ಜನರ ಬಾಳುವೆಯಿಂದ ಮೂಡಿಬಂದಿದೆ. ಸಂಪ್ರದಾಯಸ್ಥರಿಂದ ಆಧುನಿಕರವರೆಗೆ, ವಿವಾಹಿತೆಯರಿಂದ ವಿಧವೆಯರವರೆಗೆ ಈ ಜಗತ್ತು ಹರಡಿಕೊಂಡಿದೆ. ವ್ಯವಸ್ಥೆಯ ಹುಯಿಲಿನಲ್ಲಿ ಸಿಲುಕಿ ಪಡಿಪಾಟಲು ಪಡುತ್ತಿರುವ ಜೀವಗಳ ನಾಡಿಮಿಡಿತವನ್ನು ಸೂಕ್ಷ್ಮವಾಗಿ ಹಿಡಿದಿಡುತ್ತಾ ತಣ್ಣಗಿನ ಆದರೆ ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ವ್ಯವಸ್ಥೆಯ ಒಳಗಿದ್ದುಕೊಂಡೇ ಯಾರ ಅರಿವಿಗೂ ಬಾರದೆ ಚೌಕಟ್ಟನ್ನು ಮೀರುತ್ತಾ ಪ್ರತಿರೋಧಗಳ ನಡುವೆಯೂ ತಮ್ಮತನವನ್ನು ಕಾಯ್ದುಕೊಳ್ಳುವ ಪಾತ್ರಗಳು ಇಲ್ಲಿವೆ. ಜೀವನವೆಂಬುದು ಅಸಂಖ್ಯ ಬಣ್ಣ, ವಾಸನೆಗಳಿಂದ ಕೂಡಿರುವುದೆಂಬ ಸಂಕೀರ್ಣಗ್ರಹಿಕೆಯೂ, ಮಾನವೀಯ ಸಂಬಂಧಗಳ ಹಿಂದೆ ಹಲವು ಬಗೆಯ ಒತ್ತಡಗಳಿರುತ್ತವೆ ಎಂಬ ತಿಳುವಳಿಕೆಯೂ, ಯಾವುದೇ ವ್ಯಕ್ತಿಯ ಬದುಕಿನ ಸಾಫಲ್ಯದ ಪ್ರಶ್ನೆಯು ಎಲ್ಲಾ ಜೀವಿಗಳ ಮತ್ತು ವರ್ಗಗಳ ಸಂಬಂಧಗಳ ಪ್ರಶ್ನೆಗಳೇ ಆಗಿರುತ್ತವೆ ಎಂಬ ಅರಿವೂ ಇಲ್ಲಿ ಕೆಲಸ ಮಾಡಿದೆ.
ವೃತ್ತಿಯಲ್ಲಿ ವೈದ್ಯರಾಗಿರುವ ಲೇಖಕರಿಗೆ ಗ್ರಾಮೀಣ ಬದುಕಿನಲ್ಲಿ ಅಡಗಿರುವ ರೋಗ ರುಜಿನಗಳನ್ನು ಚಿಕಿತ್ಸಕ ದೃಷ್ಟಿಯಿಂದ ನೋಡುವ ಮೂಲಕ ಪಾತ್ರಗಳ ಅಂತರಂಗವನ್ನು ಹೊಕ್ಕು ಅವರ ನೋವಿಗೆ ಸ್ಪಂದಿಸಲು, ಬದುಕಿನ ಅರ್ಥವನ್ನು ಕಂಡುಕೊಳ್ಳಲು ಸಾಧ್ಯವಾಗಿದೆ. ಪಾತ್ರಗಳಲ್ಲಿ ಉಕ್ಕುವ ಮಾನವೀಯ ಸಂವೇದನೆಗಳು ಲೇಖಕರೊಳಗಿನ ಜೀವನ ಪ್ರೀತಿಯಿಂದ ಮೂಡಿ ಬಂದಿವೆ. ಕೃತಿಯೊಳಗಿನಿಂದಲೇ ತತ್ವ ಅರಳಿ ಜೀವನದ ರೀತಿಯಾಗುವ ಕ್ರಮವು ಪರಿಣಾಮಕಾರಿಯಾಗಿದೆ. ಆವೇಶದಿಂದ ತೊಯ್ದ ಮಾತುಗಳ ಹಂಗುತೊರೆದ ಕೃತಿಯು ಮಾನವನ ಅಲ್ಪತನ, ಆಕ್ರಮಣಕಾರಿ ಪ್ರವೃತ್ತಿ, ವ್ಯಕ್ತಿತ್ವದ ಬಿರುಕುಗಳು, ಸ್ವಾರ್ಥಪ್ರೇರಿತ ಸುಲಿಗೆ, ಕ್ರೌರ್ಯಗಳ ಹಿಂದೆ ಅಡಗಿದ ಕೆಟ್ಟತನಗಳನ್ನು ಬಯಲಿಗೆಳೆಯುತ್ತವೆ. ವಾಸ್ತವದ ನೆಲೆಯಲ್ಲಿ ಬದುಕನ್ನು ವಿಶ್ಲೇಷಿಸುತ್ತಾ ಅದರೊಳಗಿನ ಜೀವನಿಷ್ಠೆ, ಮೌಲ್ಯಗಳನ್ನು ಗುರುತಿಸುತ್ತದೆ. ಓದುಗರನ್ನು ಚಿಂತನೆಯೆಡೆಗೆ ಕೊಂಡೊಯ್ಯುವುದರೊಂದಿಗೆ ಬದುಕಿನ ವಿಸ್ತಾರವನ್ನು ಅರಿಯುವಂತೆ ಮಾಡುತ್ತವೆ.
ಬಾಂಧವ್ಯದ ಸುಖವು ಇಲ್ಲವಾಗುತ್ತಿರುವುದರ ಕುರಿತು ಗಾಢ ವಿಷಾದವನ್ನು ಕಟ್ಟಿಕೊಡುವ ಕಾದಂಬರಿಯು ಶಿವಳ್ಳಿ ಬ್ರಾಹ್ಮಣರ ಬದುಕನ್ನು ಇತ್ಯಾತ್ಮಕ-ಕ್ರಿಯಾತ್ಮಕ ರೂಪದಲ್ಲಿ ದಾಖಲಿಸುತ್ತದೆ. ಅನ್ಯಾಯಕ್ಕೊಳಗಾದವರು ಸಮಾಜಕ್ಕೆ ಕೊಡುವ ಪ್ರತಿಕ್ರಿಯೆ ಮತ್ತು ಸ್ವತಂತ್ರ ಅಸ್ತಿತ್ವವನ್ನು ಸ್ಥಾಪಿಸುವ ವಿಧಾನವು ಮುಖ್ಯವೆನಿಸುತ್ತದೆ. ಕೆಲವೊಂದು ಸಮಸ್ಯೆಗಳ ಪರಿಹಾರವು ಸರಳವೆನಿಸುತ್ತಿದ್ದರೂ ಅವರ ಅನುಭವ ಲೋಕವು ಆಧುನಿಕ ಸಮಾಜವು ಎದುರಿಸುತ್ತಿರುವ ದೈನಂದಿನ ಆಗುಹೋಗುಗಳು, ಭಾವನಾತ್ಮಕ ತಳಮಳಗಳನ್ನು ಸ್ಪರ್ಶಿಸುತ್ತದೆ. ನೈತಿಕ ಅಧಃಪತನದ ಕಡೆ ಬೊಟ್ಟು ಮಾಡುತ್ತದೆ. ಹಳ್ಳಿಯ ಬದುಕನ್ನು ವೈಭವೀಕರಿಸುವ ರಚನೆಗಳೇ ತುಂಬಿಕೊಳ್ಳುತ್ತಿರುವ ಸಂದರ್ಭದಲ್ಲಿ ಈ ಕೃತಿಯು ಅಲ್ಲಿನ ಶ್ರೀಮಂತರ ಆಷಾಢಭೂತಿತನ, ಮಧ್ಯಮ ವರ್ಗದವರ ತಲ್ಲಣ ಮತ್ತು ಬಡವರ ಸಂಕಷ್ಟಗಳನ್ನು ಚಿತ್ರಿಸುತ್ತಾ ಬದುಕಿನ ವಿವಿಧ ಮುಖಗಳನ್ನು ಪರಿಚಯಿಸುತ್ತದೆ. ಇದು ಶಿವಳ್ಳಿ ಸಮುದಾಯದ ಕತೆಯಾದರೂ ಇಡೀ ಸಮಾಜದ ಸಂವೇದನೆಯಾಗಿ ರೂಪುಗೊಂಡಿದ್ದು ಬದುಕಿನ ವೈಯಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕ ನೆಲೆಗಳನ್ನು ಗ್ರಹಿಸುವಲ್ಲಿ ಯಶಸ್ವಿಯಾಗಿವೆ. ಸರಳವಾದ ರಚನಾಕ್ರಮ, ನೇರವಾದ ನಿರೂಪಣೆಗಳ ಮೂಲಕ ರೂಢವಾಗಿರುವ ಭಾವನೆಗಳನ್ನು ಕಲಕಿ ಜೋಡಿಸುವ ಪ್ರಯತ್ನವಿದೆ. ಹಿತಮಿತವಾದ ಬರವಣಿಗೆ-ಆಡಂಬರವಿಲ್ಲದ ನಿರೂಪಣೆಯು ಗಮನವನ್ನು ಸೆಳೆಯುತ್ತದೆ. ಗಟ್ಟಿ ಪಾತ್ರಗಳು, ಸಾಂದ್ರ ಅನುಭವ, ಬದುಕಿನ ಸಮಸ್ಯೆಗಳು, ಹುರುಳಿಲ್ಲದ ವಿಚಾರಗಳ ವಿರುದ್ಧ ಎತ್ತುವ ಪ್ರಶ್ನೆಗಳು, ಬದುಕಿನ ತತ್ವಗಳು ಮುಖ್ಯವಾಗುತ್ತವೆ. ಪಳಗಿದ ಬರವಣಿಗೆಯಲ್ಲಿ ಪ್ರಬುದ್ಧ ಮನಸ್ಸನ್ನು ಕಾಣುತ್ತೇವೆ. ಚಮತ್ಕಾರಿಕ ತಿರುವಿಲ್ಲದ ನೇರ ಕಥನ, ಆರೋಗ್ಯಪೂರ್ಣ ಜೀವನ ದೃಷ್ಟಿ ಎಲ್ಲ ವರ್ಗದ ಓದುಗರಿಗೂ ಆಪ್ತವೆನಿಸುವಂತೆ ಮಾಡುತ್ತವೆ. ಪ್ರಚಲಿತ ಸಾಮಾಜಿಕ ವ್ಯವಸ್ಥೆಯ ಅನ್ಯಾಯಗಳನ್ನು ಧ್ವನಿಸುವ ಕಾದಂಬರಿಯು ಈ ಹೊತ್ತಿನಲ್ಲೂ ಅರ್ಥಪೂರ್ಣವೆನಿಸುತ್ತವೆ.
(ಕೃತಿ: ಇದ್ದೂ ಇಲ್ಲದ್ದು (ಕಾದಂಬರಿ), ಲೇಖಕರು: ಡಾ. ನಾ. ಮೊಗಸಾಲೆ, ಪ್ರಕಾಶಕರು: ಸಾಹಿತ್ಯ ಪ್ರಕಾಶನ ಹುಬ್ಬಳ್ಳಿ, ಪುಟಗಳು: 77, ಬೆಲೆ: 263/-)
ಡಾ. ಸುಭಾಷ್ ಪಟ್ಟಾಜೆ ‘ಕನ್ನಡ ಮತ್ತು ಮಲಯಾಳಂ ಸಣ್ಣಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು: ಒಂದು ತೌಲನಿಕ ಅಧ್ಯಯನ’ ಎಂಬ ಸಂಶೋಧನ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದು, ಪ್ರಸ್ತುತ ಶೇಣಿಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹವ್ಯಾಸಿ ಕತೆಗಾರರಾದ ಇವರ ಕತೆ, ಕವಿತೆ, ಲೇಖನ ಮತ್ತು 200ಕ್ಕೂ ಮಿಕ್ಕಪುಸ್ತಕ ವಿಮರ್ಶೆಗಳು ಕನ್ನಡ ನಾಡಿನ ಪ್ರಸಿದ್ಧ ದಿನ ಪತ್ರಿಕೆ, ಮಾಸ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಬಿತ್ತರಗೊಂಡಿವೆ. ‘ಗೋಡೆ ಮೇಲಿನ ಗೆರೆಗಳು’ (ಕಥಾ ಸಂಕಲನ) ‘ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್’ ಹಾಗೂ ‘ಕಥನ ಕಾರಣ’ (ಸಂಶೋಧನ ಕೃತಿ) ಇವರ ಪ್ರಕಟಿತ ಕೃತಿಗಳು.