ಸಮುದ್ರದೆದುರು ನಾವೆಲ್ಲರೂ ಗುಬ್ಬಚ್ಚಿಗಳು ಅನ್ನೋಹಾಗೆ ಹಾರಾಡೋ ಹಕ್ಕಿಗಳು, ಒಮ್ಮೆ ನೀಲಿ ಮತ್ತೊಮ್ಮೆ ಕೆಂಪಾದ ಆಕಾಶ, ಕನಸಿನಲೋಕಕ್ಕೆ ಜಾರುಬಂಡಿಯಾಗೋ ನುಣುಪು ಪಾಚಿ ಕಟ್ಟೆಗಳು, ಎಲ್ಲಿಯೂ ಕಾಣದ ಆದಿವಾಸಿಗಳು, ಹೂವು ಮುಡಿದು ಓಡಾಡೋ ತಮಿಳು-ಬೆಂಗಾಳಿ ಹೆಣ್ಮಕ್ಕಳು, ಎಂದಿನಂತೆ ಏನೇನೋ ಧಾವಂತಹೊತ್ತ ಚಡಪಡಿಸೋ ಗಂಡಸರು, ವೆಜ್ಜು-ನಾನ್ವೆಜ್ಜು, ಬೇಕಾದ್ದು, ಬೇಡ ಎಂದದ್ದೂ, ಪುಟ್ಟ ಪುಟ್ಟ ಹಳ್ಳಿಗಳು, ಬೆರಳುಗಳು ಬೆಸಗೊಂಡಂತೆ ಇಷ್ಟಿಷ್ಟೇ ದೂರದಲ್ಲಿ ಅಂಟಿಕೊಂಡಿರೋ ಚಿಕ್ಕ ಚಿಕ್ಕ ದ್ವೀಪಗಳು, ಊಹಾತೀತ ಸೂರ್ಯಾಸ್ತ, ಭೂಮಿಯೊಂದಿಗಿನ ರೋಮ್ಯಾನ್ಸ್‌ಗಾಗಿಯೇ ಹುಟ್ಟೋ ಸೂರ್ಯ ಇದು ಅಂಡಮಾನ್!
‘ಕಂಡಷ್ಟೂ ಪ್ರಪಂಚ’ ಪ್ರವಾಸ ಅಂಕಣದಲ್ಲಿ ಅಂಡಮಾನ್ ಪ್ರವಾಸದ ಕುರಿತು ಬರೆದಿದ್ದಾರೆ ಅಂಜಲಿ ರಾಮಣ್ಣ
ಗಾಳಿಯಲ್ಲಿ ತೇಲುತ್ತಾ, ಮೋಡಗಳ ತೆರೆಯಿಂದ ಕೆಳಗೊಮ್ಮೆ ಕಣ್ಣೂ ಹಾಯಿಸಿದಾಗ ಅಂಡಮಾನಿನ ಮೊದಲ ನೋಟ! ಜಗತ್ತಿನ ಸೌಂದರ್ಯ ಎಷ್ಟು ಅಗಾಧ, ಆಯುಷ್ಯ ಏಕಿಷ್ಟು ಅಲ್ಪ ಅಂತ ಮೊದಲ ಬಾರಿಗೆ ಅನಿಸಿತ್ತಾಗ. ಚಂದದ ದ್ವೀಪಕ್ಕೆ ಪಾದ ಸ್ಪರ್ಶವಾದಾಗ ಸುಡೋ ಬಿಸಿಲಿದ್ದರೂ ತಣ್ಣನೆ ಗಾಳಿಯ ಸ್ವಾಗತ, ಪೋರ್ಟ್ ಬ್ಲೇರ್ ವಿಮಾನ ನಿಲ್ದಾಣದ ಹೆಸರು ವೀರ್ ಸಾವರ್ಕರ್ ಅಂತ ಓದಿದಾಗ ಚುಚ್ಚೋ ಬಿಸಿಲೂ ತಂಪಾಯ್ತು ಮನಕ್ಕೆ. ಇಂಟರ್ನೆಟ್, ಚರಿತ್ರೆ, ಭೂಗೋಳಗಳ ಪುಸ್ತಕಗಳಿಂದ ಸಂಗ್ರಹಿಸಿದ್ದ ವಿಷಯಗಳ ಪ್ರಿಂಟ್ ಔಟ್ ಬ್ಯಾಗ್‌ನಿಂದ ಕೈಗೆ ಬಂತು. ಕಿರಿದಾದ, ಸಪಾಟಾದ, ಸಿಂಹಕಟಿಯಂತಹ ಬಳುಕಿನ ಟಾರ್ ರಸ್ತೆಗಳ ಗುಂಟ ಹಾದು ಮೊದಲೇ ಕಾದಿರಿಸಿದ್ದ ಹೋಟೆಲ್ ಹೊಕ್ಕು ಮುಖಕ್ಕೆ ಅಂಡಮಾನೀ ನೀರಿನ ತುಂತುರು ಹರಿಸಿ, ಅಲೆಮಾರಿಯಾಗೋಕ್ಕೆ ಸಿದ್ಧಳಾದೆ, ಜೊತೆಯಲ್ಲಿ ಗೈಡ್ ಯಶ್ ನನ್ನ ಮಾತಿನ ಕೊರೆತಕ್ಕೆ ರೆಡಿಯಾದ!
ಒಂದೊಮ್ಮೆ ಚೋಳ ದೊರೆಗಳಿಂದ ಆಳಿಸಿಕೊಂಡು, ನಂತರ ಎರಡನೇ ಮಹಾಯುದ್ಧದವರೆಗೂ ಬ್ರಿಟೀಷರ ದಬ್ಬಾಳಿಕೆ ಸಹಿಸಿಕೊಂಡು, ಆಮೇಲಿನ ಮೂರು ವರ್ಷಗಳು ಜಪಾನಿಯರ ದೌರ್ಜನ್ಯಕ್ಕೆ ಸೊರಗಿ ಹೋಗಿದ್ದ ಅಂಡಮಾನ್ ನಿಕೋಬಾರ್ ದ್ವೀಪ ಸಮೂಹ ಭಾರತದ ಭೂಭಾಗವೆನಿಸಿದ್ದರೂ ಬರ್ಮಾ- ಭೂಮ್ಯಂಚಿಗೆ ಬಹಳ ಹತ್ತಿರ. ಪ್ರಾದೇಶಿಕ ಸೊಗಡನ್ನು, ತನ್ನದೇ ಬುಡಕಟ್ಟು ಭಾಷೆಯನ್ನೂ ಕಾಲದ ಹೊಡೆತಕ್ಕೆ ಸಿಕ್ಕು ಕಳೆದುಕೊಂಡು ನಾಗರೀಕ ಪ್ರಪಂಚದ ಸೋಗಿಗೆ ಒಗ್ಗಿಕೊಳ್ಳುತ್ತಿರುವ ಈ ನಾಡು ಸದ್ಯಕ್ಕಂತೂ ಪೂರ್ತಿ ಪೂರ್ತಿ ಹಿಂದಿ, ಬೆಂಗಾಲಿ ಮತ್ತು ತಮಿಳು ರಾಜ್ಯ.
ಬಂಗಾಳಕೊಲ್ಲಿಯ ಮೂಗುಬಟ್ಟಿನ ವಜ್ರದಂತಿರುವ ಈ ದ್ವೀಪದಲ್ಲಿ ಹತ್ತು ಹೆಜ್ಜೆಗಿಂತ ಹೆಚ್ಚಿನ ದೂರ ಹೋಗಬೇಕೆಂದರೆ ದೋಣಿಯ ಆಸರೆ ಬೇಕೇಬೇಕಾಗಿರುವಷ್ಟು ಸಮುದ್ರ. ಬೇಯಿಸಿ ಬೆವರಲ್ಲಿ ತೋಯಿಸುವ ಬಿಸಿಲು, ಮುಂಗುರುಳನ್ನು ಅಕ್ಕರೆಯಿಂದ ಮುದ್ದಿಸೋ ತಣ್ಣನೆ ಗಾಳಿ, ಹೇಳದೆ ಕೇಳದೆ ಧುತ್ತೆಂದು ಪ್ರತ್ಯಕ್ಷ ಆಗೋ ನೆಂಟನಂಥ ಮಳೆ, ನಾಲ್ಕೂ ದಿಕ್ಕುಗಳಿಂದಲೂ ಎದ್ದೆದ್ದು ಬರುವ ಅಲೆಗಳು, ತೆರೆಗಳ ಮೇಲೆ ಸಾಗಿ ಬರೋ ಮೀನು ಮಕ್ಕಳು. ಹತ್ತಿರಕ್ಕೆ ಹೋದರೆ ಕಾಲ್ಬೆರಳುಗಳಿಗೆ ನವಿರಾಗಿ ಮುತ್ತಿಡೋ ನೊರೆ, ದೂರದಲ್ಲೆಲ್ಲಿಂದಲೋ ಹಡಗು “ನಾ ಬರ್ತೀನಿ” ಅಂತ ಕೂಗ್ಹಾಕೋ ಸೈರನ್ನು, ಮತ್ತೊಂದ್ಕಡೆ ಜಲಕ್ರೀಡಾ ಸಾಹಸಿಗಳ ಭಾರೀ ಜೋಶ್, ಬೊಡ್ಡೆಯಲ್ಲೇ ಮುರಿದು ಹರಿದು ಕೈಗೆ ಸಿಗೋ ಕಪ್ಪೆಚಿಪ್ಪು, ಶಂಖ, ಬಣ್ಣದ ಕಲ್ಲು, ಮೃದು ತರಿ ಮರಳು, ಫೋಟೋಗೆ ವಿಧ ವಿಧ ಪೋಸ್ ಕೊಡ್ತಿರೋ ನಾಜೂಕು ಜನಗಳು, “ಹೇ, ಅಲ್ಲ್ನೋಡು..” ಅಂತ ಕಿರುಚಿ ಓಡೋ ಅಷ್ಟು ಏಡಿ-ಸಿಗಡಿಗಳು.
ಸಮುದ್ರದೆದುರು ನಾವೆಲ್ಲರೂ ಗುಬ್ಬಚ್ಚಿಗಳು ಅನ್ನೋಹಾಗೆ ಹಾರಾಡೋ ಹಕ್ಕಿಗಳು, ಒಮ್ಮೆ ನೀಲಿ ಮತ್ತೊಮ್ಮೆ ಕೆಂಪಾದ ಆಕಾಶ, ಕನಸಿನಲೋಕಕ್ಕೆ ಜಾರುಬಂಡಿಯಾಗೋ ನುಣುಪು ಪಾಚಿ ಕಟ್ಟೆಗಳು, ಎಲ್ಲಿಯೂ ಕಾಣದ ಆದಿವಾಸಿಗಳು, ಹೂವು ಮುಡಿದು ಓಡಾಡೋ ತಮಿಳು-ಬೆಂಗಾಳಿ ಹೆಣ್ಮಕ್ಕಳು, ಎಂದಿನಂತೆ ಏನೇನೋ ಧಾವಂತಹೊತ್ತ ಚಡಪಡಿಸೋ ಗಂಡಸರು, ವೆಜ್ಜು-ನಾನ್ವೆಜ್ಜು, ಬೇಕಾದ್ದು, ಬೇಡ ಎಂದದ್ದೂ, ಪುಟ್ಟ ಪುಟ್ಟ ಹಳ್ಳಿಗಳು, ಬೆರಳುಗಳು ಬೆಸಗೊಂಡಂತೆ ಇಷ್ಟಿಷ್ಟೇ ದೂರದಲ್ಲಿ ಅಂಟಿಕೊಂಡಿರೋ ಚಿಕ್ಕ ಚಿಕ್ಕ ದ್ವೀಪಗಳು, ಊಹಾತೀತ ಸೂರ್ಯಾಸ್ತ, ಭೂಮಿಯೊಂದಿಗಿನ ರೋಮ್ಯಾನ್ಸ್‌ಗಾಗಿಯೇ ಹುಟ್ಟೋ ಸೂರ್ಯ ಇದು ಅಂಡಮಾನ್!
ಹನುಮಂತ ಒಂದೊಮ್ಮೆ ಲಂಕೆಗೆ ಇಲ್ಲಿಂದಲೇ ಹಾರಬೇಕೆಂದಿದ್ದನಂತೆ. ಆಮೇಲ್ಯಾಕೋ ಧನುಷ್ಕೋಡಿನ ಆಯ್ಕೆ ಮಾಡಿಕೊಂಡ್ನಂತೆ, ಅಂದಿನಿಂದ ಮಲಯ ಭಾಷೆಯ ‘ಹಂಡುಮಾನ್’ (ಹನುಮಂತ) ಅಂಡಮಾನ್ ಹೆಸರಾಯ್ತಂತೆ.
ಪೋರ್ಟ್‌ಬ್ಲೇರ್‌ನಿಂದ ದೊಡ್ಡ ಹಡಗಿನ ಯಾನ 60 ನಿಮಿಷದ್ದು. ಆಹಾ, ಒಳಗಿನ ವಾಸ್ಗೋಡಿಗಾಮ ಬಹಳ ಎಂಜಾಯ್ ಮಾಡ್ತಾನೆ. ಬಯಸಿದ ನೀರಿನಲ್ಲಿ ಪಯಣಿಸುತ್ತಾ ಕಾಣದ ಭೂಮಿಯನ್ನು ಹುಡುಕೋದು! ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಮಹಿಳಾ ಬಂಧಿಗಳನ್ನು ಬ್ರಿಟೀಷರು ನೇಣುಗಂಬಕ್ಕೆ ಏರಿಸುತ್ತಿದ್ದದ್ದು ಇಲ್ಲಿ. ಈಗ ಪಾಳುಬಿದ್ದ ಜಾಗ ನೋಡಿದರೆ ಕರುಳಲ್ಲಿ ರಂಧ್ರಕೊರೆದಂತೆ. ಇಲ್ಲೇ ಸಾವರ್ಕರ್‌ನ ಖಾಸ ಗೆಳೆಯ ಸೆಗಾರ್ ಖಾನ್ ಕೂಡ ನೇಣಿಗೆ ಕೊರಳು ಕೊಟ್ಟದ್ದು. ಈ ಜಾಗದಲ್ಲಿ ನಾವು ಒಮ್ಮೆ ಚರಿತ್ರೆಯ ಪುಟಗಳ ಅಕ್ಷರಗಳಾಗೋದಂತೂ ನಿಜ.
ಅಂಡಮಾನಿನ ಮೊದಲ ರಾಜಧಾನಿ ರಾಸ್ ದ್ವೀಪ. 1941ರ ಭೂಕಂಪ ಮತ್ತು ನಂತರದ ಸುನಾಮಿಯ ಹೊಡೆತದಿಂದ ಈಗುಳಿದಿರೋದು ಪಳಿಯುಳಿಕೆ ಮಾತ್ರ. ಜಪಾನಿಯರ ದಬ್ಬಾಳಿಕೆಯಲ್ಲಿ ಸುಭಾಶ್ಚಂದ್ರ ಭೋಸ್ ಮೊದಲ ಬಾರಿಗೆ ನಮ್ಮ ಧ್ವಜ ಹಾರಿಸಿದ್ದು ಇಲ್ಲೇ. ಬೇಕರಿ, ಪ್ರಿಂಟಿಂಗ್ ಪ್ರೆಸ್, ಆಸ್ಪತ್ರೆ, ಪವರ್ ಹೌಸ್ ಹೀಗೇ ಮತ್ತೂ ಏನೇನೋ ಜಾಗಗಳು ಇಂದು ಪಾಳು. ಭಾರತೀಯ ನೌಕಾಪಡೆಯ ಸಂರಕ್ಷಣೆಯಲ್ಲಿರುವ ಆ ಸ್ಥಳದ ಪ್ರತಿ ಹಾಳುಗೋಡೆಗೂ ಒಂದೊಂದು ಕಥೆಯಿದ್ದು ಇಂದಿಗೂ ಎಂದಿಗೂ ಜೀವಂತವಿರುವಂತೆ ತೋರುತ್ತೆ.
ಪೋರ್ಟ್ ಬ್ಲೇರ್ ನಿಂದ 90 ನಿಮಿಷಗಳ ಕ್ರೂಜ಼್ ದೂರದ ಹ್ಯಾವ್ಲಾಕ್ ದ್ವೀಪ ಸಮೂಹದ ಅತೀ ದೊಡ್ದ ದ್ವೀಪ! ಗೋವಿಂದ, ಬಿಜಯ, ಶಾಮ, ಕೃಷ್ಣ, ರಾಧ ಹೆಸರುಗಳ 5 ಸಣ್ಣ ಹಳ್ಳಿಗಳ ಹ್ಯಾವ್ಲಾಕ್ ದ್ವೀಪ ನಿಜಕ್ಕೂ ಯಾರೋ ಮಾಯಗಾರನ ಕಲ್ಪನೆಯಂತಿದೆ. ದೊಡ್ಡ ಬಿಂದಿ ಇಟ್ಟು ಓಡಾಡೋ ಬೆಂಗಾಳಿ ಹೆಂಗಸರನ್ನು ಇಲ್ಲಿ ನೋಡೋದೂ ಸೊಗಸು. ನೀರಿನ ಜೊತೆಗಿನ ಯಾವ ಆಟಕ್ಕೂ ಇಲ್ಲಿದೆ ಅವಕಾಶ, ಅನುಕೂಲ. ಇಲ್ಲಿನ ಸಮುದ್ರದ ಅಲೆಗಳು ಥೇಟ್ ನಮ್ಮ ಮನಸಿನ ಹಾಗೆ ಅನಿಸುತ್ತೆ. ನಿಲ್ಲೋಕೆ ಹೊತ್ತಿಲ್ಲ. ಮೇಲೋ ಕೆಳಗೋ, ಒಳಗೋ ಹೊರಗೋ ನಿರಂತರ ಅಲೆಯಾಗೋದು ಅಷ್ಟೆ. ಒಂದೊಮ್ಮೆ ಏಷ್ಯಾ ಖಂಡದ ಅತ್ಯುತ್ತಮ ದಂಡೆ ಎಂದು ಗುರುತಿಸಲಾಗಿದ್ದ ಏಕೈಕ ಬಿಳಿ ಮರಳಿನ ರಾಧನಗರ ಬೀಚ್‌ನಲ್ಲಿ ಸೂರ್ಯಾಸ್ತ ನೋಡುತ್ತ ಮೈಮರೆಯುವುದೇ ಸ್ವರ್ಗವೇನೋ! ಎಲಿಫೆಂಟಾ, ವ್ಯಾಂಡೂರ್ ಮತ್ತು ಚಿಡಿಯಾಟಾಪ್ ಬೀಚ್‌ಗಳೂ ಬಲು ಸೊಗಸು.
ಬಂಗಾಳಕೊಲ್ಲಿಯ ಮೂಗುಬಟ್ಟಿನ ವಜ್ರದಂತಿರುವ ಈ ದ್ವೀಪದಲ್ಲಿ ಹತ್ತು ಹೆಜ್ಜೆಗಿಂತ ಹೆಚ್ಚಿನ ದೂರ ಹೋಗಬೇಕೆಂದರೆ ದೋಣಿಯ ಆಸರೆ ಬೇಕೇಬೇಕಾಗಿರುವಷ್ಟು ಸಮುದ್ರ. ಬೇಯಿಸಿ ಬೆವರಲ್ಲಿ ತೋಯಿಸುವ ಬಿಸಿಲು, ಮುಂಗುರುಳನ್ನು ಅಕ್ಕರೆಯಿಂದ ಮುದ್ದಿಸೋ ತಣ್ಣನೆ ಗಾಳಿ, ಹೇಳದೆ ಕೇಳದೆ ಧುತ್ತೆಂದು ಪ್ರತ್ಯಕ್ಷ ಆಗೋ ನೆಂಟನಂಥ ಮಳೆ…
ಪೋರ್ಟ್ ಬ್ಲೇರ್‌ನಿಂದ 110 ಕಿಲೋಮೀಟರ್‌ಗಳು ದಕ್ಷಿಣಕ್ಕೆ ಸಮುದ್ರದ ನಡುವೆ ಪಯಣಿಸಿದರೆ ಅಲ್ಲೊಂದು ಸ್ವಪ್ನಲೋಕ ಅದು ಬರತಾಂಗ್ ದ್ವೀಪ. ಹಾದಿಯುದ್ದಕ್ಕೂ ಜೊತೆಯಾಗೋ ಹಸಿರು, ರಾಧೆಯೊಬ್ಬಳು ಶಿರಾಡಿ ತಿರುವಿನಲ್ಲಿ ತನ್ನ ಕೃಷ್ಣನನ್ನು ಕೂಗಿ ಹುಡುಕುತ್ತಿದ್ದಾಳೆ ಅನ್ನಿಸಿಬಿಡುತ್ತೆ. ಆದಿವಾಸಿಗಳ ಸರಹದ್ದಿನೊಳಗೆ ಎರಡು ಗಂಟೆಗಳ ಕಾಲ ಕೌತುಕದ ಪ್ರಯಾಣ. ಅಲ್ಲಲ್ಲಿ ಆದಿವಾಸಿಗಳ ದರ್ಶನ. ಅವರ ಸುರಕ್ಷತೆಗಾಗಿ ಪ್ರವಾಸಿಗರನ್ನು ಪೋಲೀಸ್ ಎಸ್ಕಾರ್ಟ್‌ನಲ್ಲೇ ಕರೆದೊಯ್ಯಲಾಗುತ್ತೆ. ಈ ಯಾನದ ಕೊನೆಯಲ್ಲಿ ಸಿಕ್ಕೋದು ಸಮುದ್ರದೊಳಗೊಂದು ಗುಹೆ. ಸಾಗರದೊಳಗೇ ಭಗ್ಗ್ ಎಂದು ಯಾವಾಗ ಬೇಕಾದರೂ ಏಳುವ ಜ್ವಾಲಾಮುಖಿ ಸೃಷ್ಟಿಸಿದ ಸುಣ್ಣದಂತಹ ಕಲ್ಲಿನಿಂದಾದ ಗುಹೆ. ಭೂಮಿಯ ಆಧಾರವೇ ಇಲ್ಲದೆ ನೂರಾರು ಅಡಿಗಳಷ್ಟೆತ್ತರಕ್ಕೆ ಆಜಾನುಬಾಹುವಾಗಿ ನಿಂತಿದೆ. 20 ದಿನಗಳಿಗೊಮ್ಮೆ ಆಕಾರ ಬದಲಾಯಿಸೋ ಸೋಜಿಗ.
ಹತ್ತಿರದಲ್ಲೇ ಪುಟಾಣಿ ಗಿಣಿ ದ್ವೀಪ. ಹೆಸರೇ ಹೇಳುವಂತೆ ಅಲ್ಲೆಲ್ಲಾ ಲೆಕ್ಕಕ್ಕೆ ಸಿಗದಷ್ಟು ಹಸಿರು ಗಿಣಿಗಳ ಹಾರಾಟ. ಅದ ನೋಡಲು ಮತ್ತೊಮ್ಮೆ ದೋಣಿ ಪಯಣ, ಮೊಸಳೆಗಳಿವೆ ಅನ್ನೋ ಎಚ್ಚರಿಕೆ ಗಂಟೆಯೊಂದಿಗೆ. ನಿಜಕ್ಕೂ ಗುಂಡಿಗೆಯ ಗಟ್ಟಿತನಕ್ಕೊಂದು ಪರೀಕ್ಷೆ. ಗೆದ್ದು ನಿಂತಾಗ ವರ್ಣನಾತೀತ ಉಲ್ಲಾಸ. ಸೌಂದರ್ಯ ಏಕಿಷ್ಟು ಸುಂದರವಾಗಿರುತ್ತೆ ಅಂತನಿಸಿಬಿಡುತ್ತೆ.
ಸಾವಿರಾರು ವರ್ಷಗಳ ಹಿಂದೆ ಆಫ್ರಿಕಾದಿಂದ ಗುಳೆಯೆದ್ದು ಬಂದಿಲ್ಲಿ ನೆಲೆಸಿದ ಮೂಲ ಆದಿವಾಸಿಗಳಿವರು. ಪ್ರಕೃತಿಯ ನೂರಾರು ಗುಟ್ಟುಗಳನ್ನು ಬಲ್ಲ ನಿಪುಣರು ಜರಾವ ಆದಿವಾಸಿಗಳು. ನೋಡಲು ತಕ್ಷಣದಲ್ಲಿ ನೀಗ್ರೋಗಳಂತೆ ಕಾಣುವ ಜನ. ಅತೀ ಸುಂದರಿಯರೆಂದೆನಿಸಿಕೊಂಡಿರೋ ಜರವ ಮಹಿಳೆಯರ ಮೇಲೆ ನಾಗರೀಕ ಸಮಾಜದ ಲೈಂಗಿಕ ದೌರ್ಜನ್ಯದಿಂದಾಗಿ ಇಂದು ವಿನಾಶದ ಅಂಚಿಗೆ ಬಂದಿದೆ. ಈ ಜನಾಂಗವನ್ನು ಪ್ರವಾಸಿಗರಿಂದ, ಮತ್ತಿತರ ಕಳ್ಳ ಕಣ್ಣುಗಳಿಂದ ಸರ್ಕಾರ ರಕ್ಷಿಸುತ್ತಿದೆ. ಬರತಾಂಗ್ ದ್ವೀಪಕ್ಕೆ ಜರವ ಸಮುದಾಯದ ಸರಹದ್ದಿನಿಂದ ಪ್ರವೇಶ ನಿಷೇಧಿಸಬೇಕು ಎನ್ನುವ ಸುಪ್ರೀಂ ಕೋರ್ಟಿನ ಆದೇಶವಿದ್ದರೂ ಯಾರೂ ಪಾಲಿಸುತ್ತಿಲ್ಲ. ಹಾಗಾಗಿ ಈ ಆದಿವಾಸಗಳ ದರ್ಶನ ನಾನು ಭೇಟಿ ಮಾಡಿದಾಗ ಲಭ್ಯವಿತ್ತು.
ಅಲ್ಲಿನ ಪೋಲಿಸರೇ ಇವರುಗಳು ತಮ್ಮ ಭಾಷೆಯನ್ನು ಮರೆತು ಹಿಂದಿ ಕಲಿಯುವಂತೆ ಮಾಡಿದ್ದರು. ಒಬ್ಬೊಬ್ಬರ ಮೈಮೇಲೆ ಜೀನ್ಸ್ ದಾಳಿ ಇಟ್ಟಿದೆ. ಅವರೂ ನಮ್ಮ ಊಟ ಬಯಸಲು ಶುರುವಿಟ್ಟಿದ್ದಾರೆ. ಇದೆಲ್ಲಾ ನೋಡಿದಾಗ ನಗರೀಕರಣ ನಿಜಕ್ಕೂ ಹೊಸ ಹುಟ್ಟಲ್ಲ ಒಂದು ಸಾವು ಅನ್ನಿಸಿಬಿಡುತ್ತೆ.
ಸ್ವಾತಂತ್ರ್ಯ ಯೋಧರನ್ನು ಗಡಿಪಾರು ಮಾಡಿ ಬಂಧಿಸುತ್ತಿದ್ದ ಸೆಲ್ಲ್ಯೂಲಾರ್ ಜೈಲ್ ಈಗಿಲ್ಲಿ ರಾಷ್ಟ್ರೀಯ ಸ್ಮಾರಕ. ಬೆಳಕು-ಧ್ವನಿಯ ಮೂಲಕ ಚರಿತ್ರೆಯನ್ನು ತೆರೆದಿಡಲಾಗುತ್ತೆ. ಇಲ್ಲಿ ಇದ್ದವರು ಅನುಭವಿಸುತ್ತಿದ್ದ ಶಿಕ್ಷೆ ನಿಜಕ್ಕೂ ಭಯಾನಕ. ವೀರ್ ಸಾವರ್ಕರ್ ಇದ್ದ ಕೋಣೆ, ಇತರ ಯೋಧರು ನೇಣಿಗೆ ಕೊರಳೊಡ್ಡಿದ ಜಾಗಗಳನ್ನು ನೋಡಿದಾಗ ಹೃದಯ ಹರಿಯುವುದು ಖಂಡಿತ. ಹೊತ್ತಿಲ್ಲದಂತೆ ಎಲ್ಲೆಲ್ಲಿಯೂ ಸದಾಕಾಲವೂ ಅಲೆಯಾಗುವ ಸಮುದ್ರದ ನಟ್ಟನಡುವೆ ವೃತ್ತಾಕಾರದಲ್ಲಿ, ಏಳು ಕಕ್ಷೆಗಳಲ್ಲಿ ಕಟ್ಟಲಾಗಿದ್ದ ಸೆಲ್ಯುಲಾರ್ ಬಂಧಿಖಾನೆಗೆ ಅಂದಿದ್ದ ಹೆಸರು “ಕಾಲಾಪಾನಿ”. 222 ಕೋಣೆಗಳಿದ್ದ ಜೇಲಿನಲ್ಲಿ 600ಕ್ಕೂ ಹೆಚ್ಚು ಸ್ವಾತಂತ್ರ್ಯ ಸೇನಾನಿಗಳು ಕಣ್ಣೀರಾಗಿದ್ದಾರೆ. ಕಾಲು ಚಾಚಿ ಮಲಗುವುದಿರಲಿ ತಲೆ ಎತ್ತಿ ಕುಳಿತುಕೊಳ್ಳಲೂ ಆಗದ ಕೋಣೆಗಳಲ್ಲಿ ಮಿಣುಕು ಬೆಳಕು ಬೀರುವ ಗವಾಕ್ಷಿಗಳಿವೆ. ಕಣ್ಣು ತೆರೆದಿರುವಾಗಲೆಲ್ಲಾ ಅಲ್ಲಿದ್ದವರಿಗೆ ಕಾಣುತ್ತಿದ್ದದ್ದು ಸಮುದ್ರ ಮತ್ತು ಸಮುದ್ರ ಮಾತ್ರ.
ನೆತ್ತಿ ಕುದಿಸುವ ಬಿಸಿಲಿನಲ್ಲಿ ಬ್ರಿಟೀಷ್ ಅಧಿಕಾರಿಗಳು ಕೊಟ್ಟಾಗ ಕೊಡುವಷ್ಟು ನೀರನ್ನು ಕುಡಿದು ದಿನಕ್ಕೆ 18 ಗಂಟೆಗಳ ಕಾಲ ಮರದ ದಿಮ್ಮಿಗಳನ್ನು ಬೆನ್ನ ಮೇಲೆ ಹೊತ್ತು ತಂದು ಕತ್ತರಿಸಿ ಸಾಗಿಸಬೇಕಾದ ಕೆಲಸ ಸೇನಾನಿಗಳಿಗೆ. ಅಕ್ಕಪಕ್ಕದವರೊಡನೆ ಮಾತನಾಡುವುದು ನಿಷಿದ್ಧ. ಅಧಿಕಾರಿಗಳ ಮನೋಯಿಚ್ಛೆಯಂತೆ ಛಡಿ ಏಟುಗಳು, ಕಾದ ಮರಳಿನಲ್ಲಿ ಬೆತ್ತಲೆ ದೇಹಗಳ ಉಜ್ಜಾಟ ಇವು ಸೌಮ್ಯ ಸ್ವರೂಪದ ಶಿಕ್ಷೆಗಳೆನಿಸಿದ್ದರೆ, ಕೈಕಾಲುಗಳನ್ನು ಕಟ್ಟಿ ನಳಿಕೆಯ ಮೂಲಕ ಶ್ವಾಸಕೋಶಗಳಿಗೆ ಬಿಸಿ ಹಾಲನ್ನು ಹುಯ್ಯುವುದು ತೀವ್ರ ರೂಪದ ಶಿಕ್ಷೆಯಾಗಿತ್ತು.
ಇಂತಹ ಭಯಾನಕ ವಾತಾವರಣದಲ್ಲಿ ಜುಲೈ 4, 1911ರಿಂದ 1924ರವರೆಗೂ ಬಂಧಿಯಾಗಿದ್ದದ್ದು ವೀರ ಸಾವರ್ಕರ್. ಅದೇ ಸಮಯದಲ್ಲಿ ಸೆಗಾರ್ ಖಾನ್ ಜೊತೆಗೆ ನಿಕಟ ಸ್ನೇಹ ಬೆಳೆಯಿತು. ಆದರೆ ಅಲ್ಲೇ ಹತ್ತಿರದ ವೈಪರ್ ದ್ವೀಪದಲ್ಲಿ ಸೆಗಾರ್ ಖಾನ್‍ನನ್ನು ನೇಣಿಗೇರಿಸಿದ್ದನ್ನು ಕಣ್ಣಾರೆ ಕಂಡ ಸಾವರ್ಕರ್ ಹೆಚ್ಚು ಹೆಚ್ಚು ಅಂತರ್ಮುಖಿಯಾದದ್ದು. 1913ರಲ್ಲಿ ಕಾಲಾಪಾನಿಗೆ ಭೇಟಿಯಿತ್ತ ಮಹಾತ್ಮ ಗಾಂಧಿಯವರನ್ನು ಸಾವರ್ಕರ್ ಕೇಳಿದ ಒಂದೇ ಮಾತು “ಇಲ್ಲಿನ ಬಂಧಿಗಳಿಗೆ ಅಕ್ಷರ ಕಲಿಸಿಕೊಡಲು ಅನುಮತಿ ಕೊಡಿಸಿಕೊಡಿ” ಅಂತೂ ಅನುಮತಿ ಸಿಕ್ಕಿತ್ತು. ಸಾವರ್ಕರ್ ಜೊತೆಯವರನ್ನು ಸಾಕ್ಷರರನ್ನಾಗಿ ಮಾಡಿದ್ದಲ್ಲದೆ, ಈಗ ಜಗತ್ತಿನ 17 ಭಾಷೆಗಳಿಗೆ ಭಾಷಾಂತರಗೊಂಡಿರುವ “ಕಾಲಾಪಾನಿ” ಎನ್ನುವ ಕಥನವನ್ನೂ ರಚಿಸಿದ್ದು. ಕವಿ, ನಾಟಕಕಾರ, ವಿಮರ್ಶಕ, ಚಿಂತಕ ಎಂದೆಲ್ಲಾ ಹೆಸರು ಮಾಡಿದ್ದ ಸಾವರ್ಕರ್ ಇಲ್ಲಿದ್ದಾಗಲೇ ಇಂಗ್ಲಿಷ್ ಕಲಿತು ಹಲವು ಕೃತಿಯನ್ನು ರಚಿಸಿದ್ದು ಹಾಗು ಹಲವಾರು ಕವನಗಳನ್ನು ಭಾಷಾಂತರಗೊಳಿಸಿದ್ದು. ಲಂಡನ್‍ನಿಂದ ಪ್ರಕಟವಾಗುತ್ತಿದ್ದ ಮರಾಠಿ ಪಾಕ್ಷಿಕಕ್ಕೆ ಅಂಡಮಾನಿನ ಜೇಲಿನಿಂದ ಬರೆಯುತ್ತಿದ್ದ ಏಕೈಕ ಪತ್ರಕರ್ತ ವೀರ ಸಾವರ್ಕರ್.
ಗಾಂಧಿ ಮತ್ತು ಪಟೇಲರ ಮನವಿಯಂತೆ 1924ರಲ್ಲಿ ಸಾವರ್ಕರ್‌ರನ್ನು ಪುಣೆಯ ಬಂಧಿಖಾನೆಗೆ ವರ್ಗಾಯಿಸಲಾಯಿತು. ಗಾಂಧಿಯ ಹತ್ಯೆಯಲ್ಲಿ ಒಂದೊಮ್ಮೆ ಹಿಂದು ಮಹಾಸಭೆಯ ಅಧ್ಯಕ್ಷರಾಗಿದ್ದ ಸಾವರ್ಕರ್‌ನ ಪಾತ್ರವೂ ಇದೆ ಎನ್ನುವ ಆಪಾದನೆಯಿಂದ ಸಾಕಷ್ಟು ಮನನೊಂದ ವೀರ 1966ರ ಫ಼ೆಬ್ರವರಿ 1ರಂದು ಆಮರಣಾಂತ ಉಪಾವಾಸ ಕೈಗೊಂಡು 26ನೇ ದಿನಾಂಕ ಬೆಳಗ್ಗೆ 10.30ಕ್ಕೆ ದೇಹತ್ಯಾಗ ಮಾಡಿ ಅಮರರಾಗಿದ್ದು ಇಂದಿನ ಇತಿಹಾಸ. ವೀರ ಸಾವರ್ಕರ್ ಬರೆದ ಕೊನೆಯ ಕವಿತೆಯ ಸಾಲೊಂದು ಹೇಳುತ್ತೆ “ಘಳಿಗೆಯಲಿ ಕ್ಷಣವೊಂದು ಕಳೆದು ಹೋದಂತೆ, ಓ ಗೆಳೆಯಾ, ಒಮ್ಮೆ ಕಳೆದದ್ದು ಮತ್ತೆಂದೂ ಬಾರದಂತೆ…….”
ನಾ ತೊಟ್ಟಿದ್ದ ಬಟ್ಟೆಯಿಂದ ಮರಳು ಉದುರುತ್ತಿತ್ತು, ನೀರು ಹನಿಯಾಗುತ್ತಿತ್ತು, ಎಂಥದ್ದೋ ಸಮುದ್ರದ ನಿಧಿ ಕೈಯಲ್ಲಿತ್ತು, ಕಿವಿಯಲ್ಲಿ ನೀರಿನ ಹಾಡು ಅಲೆಯಾಗಿತ್ತು, ಕಣ್ಣಲ್ಲಿ ನನಗಾಗಿ ಯಾರೋ ನಕ್ಕ ಬೆಳಕು ದೃಷ್ಟಿಯಾಗಿತ್ತು ಜೀವನಕ್ಕಾಗೋ ಅಷ್ಟು ಅನುಭವ ಕಟ್ಟಿಕೊಟ್ಟ ಅಂಡಮಾನಿಗೆ ವಿದಾಯ ಹೇಳುವ ಸಮಯವದಾಗಿತ್ತು. ಏಕಾಂತ ಅನ್ನೋ ಗೆಳೆಯನ ಸಖ್ಯ ಅನುಭವಿಸಿ ಬರಬೇಕಾದರೆ ಅಂಡಮಾನ್ ದ್ವೀಪವನ್ನೊಮ್ಮೆ ಆವಾಹಿಸಿಕೊಂಡು ಅಲ್ಲಿ ಅಲೆಮಾರಿಯಾಗಿ ಬರಲೇ ಬೇಕು.
ಅಂಡಮಾನಿನಲ್ಲಿ ಮರೆಯದೇ ಅನುಭವಿಸಬೇಕಾದ್ದು ಅಂದರೆ ಸ್ನೋರ್ಕ್ಲಿಂಗ್, ಸ್ಕೂಬ ಡೈವಿಂಗ್, ಜೆಟ್ ಸ್ಕೀ, ಪವರ್ ಕ್ರೂಜ಼ಿಂಗ್, ದೋಣಿ ಪಯಣದಲ್ಲಿ ಮಳೆ, ನೌಕಾಪಡೆಯ ಮ್ಯೂಸಿಯಂ ವಿಸಿಟ್, ಅಕ್ವೇರಿಯಂ ನೋಟ, ಆದಿವಾಸಿಗಳ ಜೀವನ ಕುರಿತ ಮ್ಯೂಸಿಯಂ ಮತ್ತು 1794 ಪ್ರಕಾರದ ಮರಗಳನ್ನು ಹೊಂದಿರುವ ಸಾ ಮಿಲ್ಲ್ ಭೇಟಿ. ವಾಹನ ಚಾಲನೆಯ ಲೈಸೆನ್ಸ್ ಇದ್ದರೆ ಕಾಡು ದಾರಿಗಳಲ್ಲಿ ವಾಹನ ಓಡಿಸಲು ಬಾಡಿಗೆಗೆ ಸಿಗುತ್ತೆ. ಹಾಂ, ಶಂಖ, ಕಪ್ಪೆಚಿಪ್ಪುಗಳಲ್ಲಿ ಮಾಡಿರುವ ಸಾಮಾನುಗಳನ್ನು, ಸರ ಬಳೆಗಳನ್ನು ಪ್ರವಾಸೋದ್ಯಮ ಇಲಾಖೆಯ ಮಳಿಗೆಯಿಂದ ಖರೀದಿ ಮಾಡೋದು ಮರೆಯದಿರಿ.
ಅಂಜಲಿ ರಾಮಣ್ಣ ಲೇಖಕಿ, ಕವಯಿತ್ರಿ, ಅಂಕಣಗಾರ್ತಿ, ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತೆ. ‘ರಶೀತಿಗಳು – ಮನಸ್ಸು ಕೇಳಿ ಪಡೆದದ್ದು’, ‘ಜೀನ್ಸ್ ಟಾಕ್’ ಇವರ ಲಲಿತ ಪ್ರಬಂಧಗಳ ಸಂಕಲನ.