ಈಗ ಹಗಲಿನಲ್ಲಿ ಮತ್ತು ರಾತ್ರಿ ಕೂಡಾ ಜನನಿಬಿಡ ಪೇಟೆಯ ಮಧ್ಯೆ, ಝಗಮಗಿಸುವ ಕಾಂಕ್ರೀಟ್ ರಂಗಸ್ಥಳದಲ್ಲಿ ನಡೆಯುವ ಆಟಗಳು ಅಂಥಾ ತೀವ್ರ ಅನುಭವದಿಂದ ರೈಸುವುದೇ ಇಲ್ಲ. ಕತ್ತಲು ಮತ್ತು ಕಾಡುಮೇಡುಗಳ ಹಿನ್ನೆಲೆಯೇ ಯಕ್ಷಗಾನ, ಭೂತಕೋಲ, ನಾಗಮಂಡಲ ಮುಂತಾದವುಗಳಿಗೆ ಸೊಬಗಿನ ಮುಖವೊಂದನ್ನು ಒದಗಿಸುತ್ತದೆ. ಯಕ್ಷಗಾನಕ್ಕೆ ಹೋಗುವ ಮಾರ್ಗದಲ್ಲಿ ಕಾಡಿನ ದಾರಿಯಲ್ಲಿ ಸೂಡಿ ಬೀಸುತ್ತಾ, ಸುತ್ತಲೂ ಇರಬಹುದಾದ ಹಲವು ಜೀವಾದಿಗಳಿಗೆ ಹೆದರಿಸುವಂತೆ (ಅಥವಾ ತಾವೇ ಹೆದರಿ) ಗಟ್ಟಿ ಗಂಟಲಲ್ಲಿ ಹರಟುತ್ತಾ ಹಳ್ಳಿಗರು ನಡೆದುಹೋಗುವ ಹೊತ್ತು ರಸಗಳಿಗೆ.
ಕತ್ತಲಲ್ಲಿ ಕಾಣುವ ಹಲವು ಸೊಬಗಿನ ಕುರಿತು ಬರೆದಿದ್ದಾರೆ ವಿಜಯಶ್ರೀ ಹಾಲಾಡಿ
ಇರುಳು ಮತ್ತು ಇರುಳಿನ ಮೈಗಂಟಿರುವ ಗಾಢಕತ್ತಲು ನನಗೂ ಅಂಟಿಕೊಂಡಿದೆ; ಒಳಗನ್ನು ತುಂಬಿಕೊಂಡಿದೆ. ಕಡುಕತ್ತಲ ಮಡಿಲಲ್ಲಿ ಮಗುವಾಗುತ್ತೇನೆ, ಮಂಡಿಯೂರುತ್ತೇನೆ, ಸುಖ-ದುಃಖ ಮಾತಾಡುತ್ತ ಹಗುರಾಗುತ್ತೇನೆ. ನನ್ನೊಂದಿಗೆ ನನ್ನ ಸಂವಾದವೂ ಕತ್ತಲಾಳದಲ್ಲೇ ಸಾಗುತ್ತದೆ. ನಿಜವೆಂದರೆ ಪ್ರತೀ ದಿನವೂ ಸಂಜೆ ಕಳೆದು ರಾತ್ರಿಯಾಗುವುದನ್ನೇ ಕಾಯುತ್ತಿರುತ್ತೇನೆ! ದೀಪಗಳನೆಲ್ಲ ಆರಿಸಿ ಕಡುಕತ್ತಲಿನಲ್ಲಿ ಏನನ್ನಾದರೂ ಜಾನಿಸುತ್ತ ನಿರಾಳ, ನಿರಾಳವಾಗುತ್ತೇನೆ, ಮರುಬೆಳಗಿನ ಚಿಂತೆಯನ್ನು ಮರೆತುಬಿಟ್ಟು ಕತ್ತಲಿನ ಪದರ ಪದರಗಳಲ್ಲಿ ಕಾಡು, ಚಳಿ, ಮಳೆಯನ್ನು ಸಾಕ್ಷಾತ್ಕರಿಸಿಕೊಳ್ಳುತ್ತ ಅಲೆದು ಬರುತ್ತೇನೆ. ಆ ಹೊತ್ತಿನಲ್ಲಿ ಬಾಲ್ಯದ, ಇಡೀ ಬದುಕಿನ ಸವಿಯೆಲ್ಲ ಸುಪ್ತಮನದೊಳಗೆ ಹಾದುಹೋಗುತ್ತವೆ. ಈ ಕತ್ತಲಿನಾಳದಲ್ಲಿಯೇ ನಾಯಿಗಳ ಮಾತು ಕಿವಿತುಂಬುತ್ತದೆ. ಕತ್ತಲು ನಾಯಿಯೊಂದಿಗೆ ಸಂಭಾಷಿಸುತ್ತಿದೆಯೋ ಅಥವಾ ನಾಯಿಯೇ ಕತ್ತಲೊಂದಿಗೆ ಹರಟೆಗಿಳಿದಿದೆಯೋ ಇಲ್ಲವೇ ನಾನೇ ಅವರಿಬ್ಬರೊಂದಿಗೆ ಸಂವಾದ ನಡೆಸುತ್ತಿರುವೆನೋ ಒಂದೂ ತಿಳಿಯದೆ, ಇಡೀ ಕತ್ತಲ ಜಗವೇ ಏಕತ್ರವಾಗಿ ನಾನದರೊಳಗೆ ಬೆರೆತುಹೋಗಿ ಇನ್ನಿಲ್ಲದ ನೆಮ್ಮದಿ, ಸುಖಕ್ಕೆ ಕಾರಣವಾಗುತ್ತದೆ.
ಹಗಲಿನ ಬಿರುಬಿಸಿಲು, ಬೆವರು ಸೆಕೆಯ ಬಳಲಿಕೆ, ದುಗುಡದ ಘಟನೆಗಳು, ಕೆಲಸದ ಜಾಗದ ಒತ್ತಡ, ಮನೆಯ ಕೆಲಸಗಳು ಇವೆಲ್ಲವೂ ಕರಗಿಹೋಗಿ ಮರುಬೆಳಗು ಮೂಡುವವರೆಗೆ ಇರುಳ ಸಾಂಗತ್ಯ ನನ್ನದಾಗುತ್ತದೆ. ಆದರೆ ಬೆಳಗಾಗುವುದೇ ಬೇಡ, ಕಗ್ಗತ್ತಲ ಕರುಣೆ ಕಳೆಯುವುದೇ ಬೇಡವೆಂದು ಪ್ರತಿ ಸಲವೂ ಪ್ರಾರ್ಥಿಸುವುದು ಸತ್ಯ. ಹೌದು… ಇರುಳು, ಕತ್ತಲು ಹೀಗೆಲ್ಲ ಬೆರೆತುಹೋಗಿ ಬದುಕಿನ ಬವಣೆಗಳಿಗೆ ಒಂದು ಪರಿಹಾರವಾಗಿ ಪರಿಣಮಿಸಿದೆ. ಇದರೊಂದಿಗೆ ಮಳೆ, ಚಳಿ, ಕಾಡು ಕೂಡಾ ಅಂತರಂಗದ ಸ್ನೇಹಿತರಾಗಿ ಮನದೊಳಗೆ ಬೇರುಬಿಟ್ಟಿವೆ.
ಬಾಲ್ಯದ ರಾತ್ರಿಗಳು ಬಹಳ ಗಾಢವಾಗಿದ್ದವು. ಆ ಇರುಳುಗಳು ಇಂದಿಗಿಂತ ಹೆಚ್ಚೇ ಮಸಿ ಬಳಿದುಕೊಂಡಿರಬೇಕು! ನಿಸ್ಸಂಶಯವಾಗಿ ಅಂದಿನದು ದಪ್ಪ ಕತ್ತಲು! ಈಗ ಅಂಥ ಕರಿಕಪ್ಪಿನಲ್ಲಿ ಅದ್ದಿ ತೆಗೆದ ರಾತ್ರಿಗಳೇ ವಿರಳ. ಅಂದಿನ ರಾತ್ರಿಗಳಿಗಿದ್ದ ಈ ಗಾಢತೆಗೆ, ನಿರಾಳತೆಗೆ ನನ್ನ ವಯಸ್ಸು, ತಿಳಿಮನಸ್ಸು, ಬೆರಗು ಕಾರಣವಾಗಿತ್ತೋ ಅಥವಾ ಆ ಕಾಲದ ಹಳ್ಳಿಯ ನಿಸರ್ಗ ಸಹಜ ವಾತಾವರಣವೇ ಹಾಗಿತ್ತೋ ತಿಳಿದಿಲ್ಲ! ಅಜ್ಜಿಯ ಹಾಸಿಗೆಯ ಒತ್ತಿಗೆ ನನ್ನದೊಂದು ಪುಟಾಣಿ ಹಾಸಿಗೆ ಹಾಸಿಕೊಂಡು ನೆಲದಲ್ಲಿ ಮಲಗುತ್ತಿದ್ದ ದಿನಗಳವು. ಗದ್ದೆಬಯಲು, ತೋಟ, ಕಾಡುಗಳಿಂದ ಸುತ್ತುವರಿದ ನಮ್ಮ ಮುದೂರಿ ಮನೆಯೆದುರಿಗೆ ನುಣ್ಣನೆಯ ಅಂಗಳ; ಮಳೆಗಾಲ ಹೊರತುಪಡಿಸಿ ಉಳಿದೆಲ್ಲ ದಿನಗಳಲ್ಲಿ ಬಿಸಿಲಿನ ರಾಪು ಬಡಿಯದಂತೆ ತೆಂಗಿನ ಮಡ್ಲು, ಅಡಕೆಸೋಗೆಯ ಚಪ್ಪರ. ಮನೆಯ ಜಗಲಿ ಹಾಗೂ ಚಾವಡಿಯ ಬಹುಭಾಗಕ್ಕೆ ಉದ್ದಾನುದ್ದಕ್ಕೆ ತಳಿಕಂಡಿ. ಮಳೆ, ಚಳಿಗಾಲದಲ್ಲಿ ಹಿಮ (ಥಂಡಿ), ಸಿಬ್ರ್ (ಎರಚಲು), ಹನಿ (ಇಬ್ಬನಿ) ಎಲ್ಲವೂ ಮನೆಯೊಳಗೇ ನೇರ ಪ್ರವೇಶಿಸಿದ ಅನುಭವ!
ಕಿವಿ ಸೋಲುವವರೆಗೂ ಧೋಗುಟ್ಟಿ, ಕೆಂಪು ಜಲಪಾತಗಳನ್ನು ಸೃಷ್ಟಿಸಿ ಮಳೆ ಸುರಿಯುವ ಸಮಯದಲ್ಲಿಯೂ ಮತ್ತಷ್ಟು ಗಾಢಕತ್ತಲು; ಹಗಲಿಗೂ ಆವರಿಸಿಕೊಳ್ಳುತ್ತಿದ್ದ ‘ಮಳೆಕತ್ತಲುʼ! ಮಳೆ ರಾತ್ರಿಗಳಲ್ಲಿ ಅಜ್ಜಿಯ ಪಕ್ಕ ಮಲಗುವಾಗ ಕತ್ತಲ ಸಾಮ್ರಾಜ್ಯವೇ ರಕ್ಷಣೆಯ ಕೋಟೆಯಂತಿತ್ತು. ಮನೆಯೆದುರಿನ ಗದ್ದೆಗಳಿಂದ ಕೇಳಿಬರುವ ಕಪ್ಪೆ, ಕೀಟ ಸಂಗೀತ ರಾತ್ರಿಯೊಂದಿಗೆ ಹದವಾಗಿ ಬೆರೆತು, ಸುಂದರ ಕೊಲಾಜನ್ನೇ ಸೃಷ್ಟಿಸಿತ್ತು. ಚಳಿಯ ರಾತ್ರಿಗಳಲ್ಲಂತೂ ತಟಪಟ ಹನಿ ಮನೆಯದುರಿನ ತೆಂಗಿನ ಮರಗಳಿಂದ ರಾತ್ರಿಯಿಡೀ ತೊಟ್ಟಿಕ್ಕುತ್ತ ಮೃದು ಸಂಗೀತವಾಗುತ್ತಿತ್ತು.
ಬೆಳಗ್ಗೆದ್ದು ನೋಡಿದಾಗ ಅಂಗಳದ ಹಲವು ಕಡೆ ನೆಲ ಪೂರ್ತಿಯಾಗಿ ಚಂಡಿ (ಒದ್ದೆ)! ಆ ಕಾಲದ ಚಳಿಯೂ ತೀವ್ರವಾಗಿತ್ತು. ಎರಡೆರಡು ರಗ್ಗುಗಳನ್ನು ಹೊದ್ದರೂ ಮಾತು ಕೇಳದ ಚಳಿಗೆ ಹೆದರಿ ಅಜ್ಜಿಯೊಬ್ಬರನ್ನೇ ಚಾವಡಿಯಲ್ಲಿ ಬಿಟ್ಟು, ನಾವೆಲ್ಲ ಒಳಕೋಣೆಗಳನ್ನು ಸೇರಿಕೊಳ್ಳುತ್ತಿದ್ದೆವು. ನಾನು ಅಮ್ಮನೊಂದಿಗೆ ಪಡಸಾಲೆಯಲ್ಲಿ ಮಲಗುತ್ತಿದ್ದವಳು ಇನ್ನೂ ಜೋರು ನಡುಕವೆನಿಸಿದರೆ, ದೊಡ್ಡಕ್ಕನೊಂದಿಗೆ ಅಡುಗೆಮನೆಯ ಒಲೆಯೆದುರಿನ ಜಾಗಕ್ಕೆ ಪಲ್ಲಟಗೊಳ್ಳುತ್ತಿದ್ದೆ.
ಅಕ್ಕಿಮುಡಿ ಸಂಗ್ರಹಿಸಲು ಬಳಸುತ್ತಿದ್ದ ‘ಆಚೆ ಒಳ’ ಎಂದು ಕರೆಯುವ ಕೋಣೆಯಲ್ಲಿ ಎರಡನೇ ಅಕ್ಕ ಮಲಗುತ್ತಿದ್ದರು. ನಮ್ಮ ದೊಡ್ಡಬೆಕ್ಕು, ಬೀಚು, ಮ್ವಾಳ ಬೆಕ್ಕುಗಳು ಕೂಡಾ ಚಳಿ ತಡೆಯಲಾಗದೆ ಒಲೆ ಮುಂದೆ, ಅಕ್ಕಿಮುಡಿ ಎಡಕಿನಲ್ಲಿ ಅಥವಾ ಉಪ್ಪರಿಗೆಯ ಅಟ್ಟದಲ್ಲಿ ಬೆಚ್ಚಗೆ ನಿದ್ದೆ ಹೊಡೆಯುತ್ತಿದ್ದವು. ಆದರೆ ಅಜ್ಜಿ ಮಾತ್ರ ರಗ್ಗು, ಕಂಬಳಿ ಹೊದೆದು ತಮ್ಮ ಮಾಮೂಲು ಜಾಗದಲ್ಲೇ ಮಲಗುತ್ತಿದ್ದುದು. ತನ್ನ ಮಗ ದೂರದ ಊರನಲ್ಲಿದ್ದುದರಿಂದ ಇಡೀ ಮನೆಯನ್ನು ನಿರ್ವಹಿಸುವ, ಕಾಯುವ ಜವಾಬ್ದಾರಿ ತಮ್ಮದೇ ಎಂಬ ಆಲೋಚನೆ, ಕಾಯಕ ಶೈಲಿ ಅವರದಾಗಿತ್ತು. ಏಪ್ರಿಲ್-ಮೇ ತಿಂಗಳ ತೀರಾ ಸೆಕೆಗಾಲದ ರಾತ್ರಿಗಳಲ್ಲಿ ಮಾತ್ರ ಮನೆಯೆದುರಿನ ‘ಕೊಟ್ಟಿಗೆ’ ಎಂದು ಕರೆಯುವ ಜಾಗದಲ್ಲಿ, ಕೆಲವೊಮ್ಮೆ ನಕ್ಷತ್ರ-ಬೆಳದಿಂಗಳ ಅಡಿ ಅಂಗಳದಲ್ಲಿಯೂ ಮಲಗುತ್ತಿದ್ದುದುಂಟು. ಹಾಗೆ ಅಂಗಳದಲ್ಲೇ ಆಗಲಿ, ಮನೆಯ ಹೊರಗಿನ ಒಂದು ಹೊಚ್ಚಹೊಸ ಜಾಗದಲ್ಲೇ ಆಗಲಿ ಮಲಗುವುದು ಕನಸಿನ ಲೋಕಕ್ಕೆ ಪಯಣಿಸಿದಂತೆ. ಸುತ್ತಮುತ್ತಲ ಮನೆಯ ನಾಯಿಗಳ ಕೂಗು, ಕಬ್ಬಿನಗದ್ದೆಗೆ ಕದ್ದು ಬಂದು ಕಬ್ಬು ತಿಂದ ಖುಷಿಯಲ್ಲಿ ಬೊಬ್ಬೆಯಿಡುವ ನರಿಗಳ ಊಳು ಮೊದಲಾದುವೆಲ್ಲ ನನ್ನಂಥ ಮಕ್ಕಳ ಕಿವಿಗೆ ತಂಪೆರೆಯುತ್ತಿತ್ತು.
ಗಾಢಕತ್ತಲ ಆಳದಿಂದ ಸ್ವರ ಹೊರಡಿಸುತ್ತಿದ್ದ ಗುಮ್ಮಗಳಂತೂ ವಿಚಿತ್ರ ಭಯ, ಕುತೂಹಲವನ್ನು ಹುಟ್ಟಿಸುತ್ತ ಮೆದುಳ ಕೋಶಗಳಲ್ಲಿ ಸೇರಿಹೋಗಿಬಿಟ್ಟವು. ಅಂದಿನ ಇರುಳುಗಳಿಗೆ ವಿಶೇಷ ಗಾಢತೆ, ನಿಗೂಢತೆಯನ್ನು ಬಳಿದದ್ದೇ ಈ ಗುಮ್ಮಗಳು! ಅವುಗಳ ಪ್ರಶ್ನೋತ್ತರ ಎಂಥವರ ಗಮನವನ್ನೂ ಸೆಳೆದು ನಿದ್ದೆಯಿಂದ ಎದ್ದು ಕೂರುವಂತೆ ಮಾಡುತ್ತಿತ್ತು. ಮತ್ತೊಂದು ಇರುಳ ಹಕ್ಕಿ ಕುರುಡುಗುಪ್ಪಟೆ (ನೈಟ್ ಜಾರ್) ಕೂಡಾ ಇಳಿಸಂಜೆ, ರಾತ್ರಿಯ ಹೊತ್ತು ಹಾಡಿಯ ಬದಿಯಿಂದ ದನಿ ಮೊಳಗಿಸುತ್ತಿತ್ತು. ಬಿಟ್ಟು ಬಿಟ್ಟು ಕೂಗುವ ಇದರ ಹಾಡು ಧ್ಯಾನಸ್ಥ ಸ್ಥಿತಿಗೆ ಕರೆದೊಯ್ಯುವುದರಲ್ಲಿ ಸಂಶಯವಿಲ್ಲ.
ಇರುಳು, ಕತ್ತಲು ಹೀಗೆಲ್ಲ ಬೆರೆತುಹೋಗಿ ಬದುಕಿನ ಬವಣೆಗಳಿಗೆ ಒಂದು ಪರಿಹಾರವಾಗಿ ಪರಿಣಮಿಸಿದೆ. ಇದರೊಂದಿಗೆ ಮಳೆ, ಚಳಿ, ಕಾಡು ಕೂಡಾ ಅಂತರಂಗದ ಸ್ನೇಹಿತರಾಗಿ ಮನದೊಳಗೆ ಬೇರುಬಿಟ್ಟಿವೆ.
ಉತ್ಸಾಹ ಚಿಮ್ಮಿಸುತ್ತಿದ್ದ ಇನ್ನೂ ಕೆಲವು ರಾತ್ರಿಗಳೆಂದರೆ ಯಕ್ಷಗಾನಕ್ಕೆಂದು ನಡೆದುಹೋಗುತ್ತಿದ್ದ ಆ ಗಳಿಗೆ! ಹಾಡಿ(ಕಾಡು)ಯ ಪರಿಮಳ ಹೀರುತ್ತ, ಇರುಳ ಸದ್ದುಗಳನ್ನು ಕಿವಿತುಂಬಿಕೊಳ್ಳುತ್ತ ಕಾಡಿನ ದಾರಿಯಾಗಿ ಆಟ (ಯಕ್ಷಗಾನ)ಕ್ಕೆ ಪಯಣಿಸುವುದೇ ಒಂದು ರೂಪಕ. ಆಟದ ಗತ್ತು, ಧಿಗಣ, ಮಂಡಿ, ಕುಮ್ಚೆಟ್ಟು, ಕುಣಿತಗಳಿಗೆ ಹೊಸ ಆಯಾಮವನ್ನು ಈ ಗಾಢರಾತ್ರಿಗಳೇ ತಂದುಕೊಡುತ್ತವೆ. ಈಗ ಹಗಲಿನಲ್ಲಿ ಮತ್ತು ರಾತ್ರಿ ಕೂಡಾ ಜನನಿಬಿಡ ಪೇಟೆಯ ಮಧ್ಯೆ, ಝಗಮಗಿಸುವ ಕಾಂಕ್ರೀಟ್ ರಂಗಸ್ಥಳದಲ್ಲಿ ನಡೆಯುವ ಆಟಗಳು ಅಂಥಾ ತೀವ್ರ ಅನುಭವದಿಂದ ರೈಸುವುದೇ ಇಲ್ಲ. ಕತ್ತಲು ಮತ್ತು ಕಾಡುಮೇಡುಗಳ ಹಿನ್ನೆಲೆಯೇ ಯಕ್ಷಗಾನ, ಭೂತಕೋಲ, ನಾಗಮಂಡಲ ಮುಂತಾದವುಗಳಿಗೆ ಸೊಬಗಿನ ಮುಖವೊಂದನ್ನು ಒದಗಿಸುತ್ತದೆ. ಯಕ್ಷಗಾನಕ್ಕೆ ಹೋಗುವ ಮಾರ್ಗದಲ್ಲಿ ಕಾಡಿನ ದಾರಿಯಲ್ಲಿ ಸೂಡಿ ಬೀಸುತ್ತಾ, ಸುತ್ತಲೂ ಇರಬಹುದಾದ ಹಲವು ಜೀವಾದಿಗಳಿಗೆ ಹೆದರಿಸುವಂತೆ (ಅಥವಾ ತಾವೇ ಹೆದರಿ) ಗಟ್ಟಿ ಗಂಟಲಲ್ಲಿ ಹರಟುತ್ತಾ ಹಳ್ಳಿಗರು ನಡೆದುಹೋಗುವ ಹೊತ್ತು ರಸಗಳಿಗೆ. ಮನೆಮಂದಿ, ಅಕ್ಕಪಕ್ಕದವರು, ಆಟಕ್ಕೆಂದೇ ಆಗಮಿಸಿದ ನೆಂಟರಿಷ್ಟರು ಎಲ್ಲರೂ ಸೇರಿ ಆಟ ನೋಡಲೆಂದು ಕಾತುರದಿಂದ ನಡೆದುಹೋಗುವ ಸಂಭ್ರಮ ಆಗಿನ ಹಳ್ಳಿ ಹಳ್ಳಿಗಳಲ್ಲಿತ್ತು. ಎಲೆಯಡಿಕೆ ಜಗಿಯುವ ಬಾಯಲ್ಲಿ ನೂರಾರು ಮಾತುಗಳು, ವಿಷಯಗಳು. ಆಟದ ಗರಕ್ಕೆ ಹೋಗಿ ಅಲ್ಲಿ ಹಾಸಿದ ಸೊಪ್ಪೋ, ಹುಲ್ಲೋ ಅಥವಾ ಬರಿ ನೆಲದ ಮೇಲೇ ಕೊಂಡೊಯ್ದ ಹೊದೆವಸ್ತ್ರ ಟವೆಲ್ಲುಗಳನ್ನು ಬಿಡಿಸಿ ರಂಗಸ್ಥಳದೆದುರೇ ಕಾಲುನೀಡಿ ಚುರ್‍ಮುರಿ, ನೆಲಗಡಲೆ ತಿನ್ನುವಾಗಲೂ ಮುಂದುವರಿಯುವ ಪಟ್ಟಾಂಗ! ಆದರೆ ಈಗಿನ ಸಂದರ್ಭದಲ್ಲಿ ಚಿರತೆಗಳು ಹಳ್ಳಿಯ ಸಮೀಪಕ್ಕೆ ಬಂದು ತಿರುಗಾಡಿಕೊಂಡಿರುವಾಗ ಕಾಡುದಾರಿಯಲ್ಲಿ ನಡೆದುಹೋಗುವುದು ಹಗಲು ಹೊತ್ತಿನಲ್ಲೂ ಅಪಾಯಕಾರಿಯೆನಿಸಿದೆ! ಹಾಗೇ ಆಟಗಳೂ ಬಹುತೇಕ ಹಳೆಯ ಸ್ವಾರಸ್ಯ ಕೆಡಿಸಿಕೊಂಡು ಅಂದಿನ ನೆನಪುಗಳು ಮಾತ್ರ ಭದ್ರವಾಗಿ ಉಳಿದುಬಿಟ್ಟಿವೆ.
ಬೆಳಿಗ್ಗೆ ಆರರಿಂದ ರಾತ್ರಿ ಮಲಗುವ ಗಳಿಗೆಯವರೆಗೂ ತೆರೆದೇ ಇರುತ್ತಿದ್ದ ನಮ್ಮ ಮುದೂರಿ ಮನೆಯ ಬಾಗಿಲು ಮಳೆಗಾಲದ ಗವ್ವೆನ್ನುವ ರಾತ್ರಿಗಳಲ್ಲಿ ಮಾತ್ರ ‘ಸಾಂಚಿ’ಕೊಂಡಿರುತ್ತಿತ್ತು (ಸಾಂಚು- ಅರೆ ಮುಚ್ಚು) ಸಿಡಿಲು-ಮಿಂಚು-ಗುಡುಗಿನ ಆರ್ಭಟ, ಯಾವುದೋ ಮರ, ಗಿಡ, ಕೊಂಬೆ ಮುರಿದು ಬೀಳುವ ಶಬ್ದ, ಮಳೆನೀರಿನ ಭೋರ್ಗರೆತ ಇದೆಲ್ಲದರಿಂದಾಗಿ ಬಾಗಿಲು ತೆರೆದಿಟ್ಟರೆ, ಚಿಮಣಿದೀಪ ಆರಿಹೋಗಿ ಮನೆಯೆಲ್ಲ ಕತ್ತಲಾಗುತ್ತದೆನ್ನುವ ಕಾರಣಕ್ಕೆ ಬಾಗಿಲು ಹಾಕಿಕೊಳ್ಳುತ್ತಿದ್ದೆವು. ಸಿಬ್ರು (ಎರಚಲು) ಮನೆಯೊಳಗಾಗಲೀ, ಚಿಟ್ಟೆ (ಮನೆ ಮುಂದಿನ ದಂಡೆ)ಗಾಗಲೀ ಬಡಿಯದಂತೆ ಮಳೆಗಾಲ ಆರಂಭವಾಗುವುದಕ್ಕೆ ಮೊದಲೇ ತೆಂಗಿನ ಗರಿಗಳ ದಿಡ್ಕೆ (ತಟ್ಟಿ)ಯನ್ನು ಅಜ್ಜಿ ಹಾಕಿಸಿರುತ್ತಿದ್ದರು. ಅಂಥಾ ಮಳೆಯ ಥಂಡಿ ವಾತಾವರಣದಲ್ಲಿ ‘ಆಸಾಡಿ ಒಡ್ರ್’ ಎಂದು ಕರೆಯುವ ಆಷಾಡ ತಿಂಗಳಿನ ಗಾಳಿ, ಚಳಿಯಲ್ಲಿ ಬೆಚ್ಚಗೆ ಕುಳಿತು ಹಲಸಿನ ಹಪ್ಪಳ ತಿನ್ನುವಾಗ ‘ನಂಗೊಂದು ಚೂರು ಕೊಡು’ ಎಂದು ಕಾಡುತ್ತ ಬೆಕ್ಕುಗಳೂ ಜೊತೆಗೂಡುತ್ತಿದ್ದವು! ಆಗ ಅರ್ಧ ಭಾಗ ಹಪ್ಪಳ ಬೆಕ್ಕುಗಳ ಹೊಟ್ಟೆ ಸೇರುತ್ತಿತ್ತು!
ಇನ್ನೂ ಹೈಸ್ಕೂಲಿನ ಓದಿನ ದಿನಗಳಲ್ಲೇ ಬಹಳಷ್ಟು ಯೋಚಿಸುತ್ತಿದ್ದ ನಾನು ಸರಿಯಾಗಿ ಮನೆಯೇ ಇಲ್ಲದ ಜನರ ಬವಣೆಯ ಕುರಿತು ಚಿಂತಿಸುತ್ತಿದ್ದೆ. ಆದರೂ ಮಳೆ ಬಂದರೇನೇ ಬೆಳೆ, ಬೆಳೆಗೆ ಸಂಬಂಧಿಸಿದ ವಿವಿಧ ಕೆಲಸ ಕಾರ್ಯಗಳು, ಎಲ್ಲರ ಹೊಟ್ಟೆಗೂ ಅನ್ನ ಎಂಬ ಜ್ಞಾನವನ್ನು ಮನೆಮುಂದಿನ ಸಾಲು ಸಾಲು ಗದ್ದೆಗಳೇ ಅಯಾಚಿತವಾಗಿ ಕೊಡಮಾಡಿದ್ದವು. ಮಳೆಗಾಲದಲ್ಲಿ ಒಮ್ಮಿಂದೊಮ್ಮೆಗೇ ಬದಲಾಗುವ ಪ್ರಕೃತಿ ಕಾಡು, ಗುಡ್ಡಗಳಲ್ಲಿ ಸದಾ ತಿರುಗಾಡುವ ನನ್ನಂಥ ಹಳ್ಳಿಮಕ್ಕಳಿಗೆ ಸ್ವಲ್ಪ ರೇಜಿಗೆಯನ್ನು ತಂದುಕೊಡುತ್ತಿತ್ತು. ಆದರೆ ಮಳೆಗೆ ಭೂಮಿಯಿಂದ ಜಿಗಿದೇಳುವ ನೆಲಸಂಪಿಗೆ ಮತ್ತು ಹೆಸರೇ ಗೊತ್ತಿಲ್ಲದ ಅನೇಕ ಹೂವುಗಳು, ಅಣಬೆಗಳು, ಕಡುಹಸಿರು ಚಿಮ್ಮುವ ಮರಗಿಡಗಳು, ಈ ಕಾಲದ ನಿಸರ್ಗದ ವಿಶೇಷವಾಗಿ ಮನತಣಿಸುತ್ತಿದ್ದವು.
ಎಳೆ ಹರೆಯದ ನಂತರದ ದಿನಗಳಲ್ಲಿ ಇರುಳು, ಕತ್ತಲು, ಥಂಡಿ, ಮಳೆ ಈ ಎಲ್ಲವೂ ನನಗೆ ಜೀವವೇ ಆಗಿಬಿಡಲು ಪ್ರಮುಖ ಕಾರಣ ಮೈಗ್ರೇನ್. ಕೆಲಸಕ್ಕೆ ಸೇರಿದ ಒಂದೇ ಒಂದು ವರ್ಷದಲ್ಲಿ ಈ ವಿಚಿತ್ರ ತಲೆನೋವು ಹಾಜರಿ ಹಾಕಿತು. ಮೊದಲಿನಿಂದಲೂ ಒಳಗೊಳಗೇ ಅಡಗಿದ್ದ ಒತ್ತಡ, ನೋವು ನಿರಾಸೆಗಳು ಮೈಗ್ರೇನ್ ರೂಪದಲ್ಲಿ ಪ್ರಕಟವಾಗಿರಬಹುದು. ಬೆಳಗಿನಿಂದ ತಲೆಭಾರ, ಕಿವಿನೋವು, ಏನೂ ಬೇಡವೆನಿಸಿ ಮಲಗಿಬಿಡುವ ಎಂಬಂಥಹಾ ಆಲೋಚನೆಗಳು. ದಿನದ ಸೂರ್ಯನೊಂದಿಗೆ ಏರುವ ತಲೆನೋವು ಸಂಜೆ ಉತ್ತುಂಗಕ್ಕೆ ತಲುಪಿ ವಾಂತಿಯಾಗಿ, ಹೈರಾಣಾಗಿಸಿ, ಬೆಳಕನ್ನೇ ನೋಡಲಾಗದೆ ಊಟ ತಿಂಡಿಯೂ ಮಾಡಲಾಗದೆ ಚಾಪೆ ಹಿಡಿದು ಮಲಗಿದ ಮೇಲೇ ಹತೋಟಿಗೆ ಬರುವುದು. ಆದರೆ ಮರುಬೆಳಿಗ್ಗೆ ಮತ್ತೆ ಮೊದಲಿನದ್ದೇ ಚಕ್ರ! ಯಾವ ಔಷಧಿಗಳಿಗೂ ಬಗ್ಗದ ಮೈಗ್ರೇನ್ ಕ್ರಮೇಣ ತನ್ನ ಜೊತೆಗಾರರನ್ನು ಕರೆತಂದಿತು. ಸ್ಪಾಂಡಿಲೈಟಿಸ್-ಕುತ್ತಿಗೆ ನೋವು, ಸೈನೋಸೈಟಿಸ್ ಅಂದರೆ ತಲೆಯೊಳಗಿನ ಇನ್ಫೆಕ್ಷನ್, ಗಂಟಲು, ಕಿವಿನೋವು, ಶೀತ ಎಲ್ಲವೂ ದಾಳಿಯಿಡಲಾರಂಭಿಸಿ ಅಸಹಾಯತೆ. ಬಿಸಿಲು, ಬೆಳಕನ್ನು ನೋಡಿದ ಕೂಡಲೇ ಭಯವಾಗುವ ಪರಿಸ್ಥಿತಿ. ತುಸು ಸೆಕೆಯನ್ನೂ ಸಹಿಸಲಾಗದ ಮನಸ್ಥಿತಿಯಲ್ಲಿ ಸಹಜವಾಗಿಯೇ ಕತ್ತಲು, ಚಳಿ, ಮಳೆ ಮತ್ತು ರಾತ್ರಿಯ ಶಾಂತ ಪರಿಸರ ಇಷ್ಟವಾದವು. ದುಡಿದು ದಣಿದು ಬಂದ ಜೀವಕ್ಕೆ ಕತ್ತಲ ಕರುಣೆಯೊಂದೇ ಮದ್ದಾಯಿತು. ನಾವಿದ್ದ ಹೊಳೆನರಸೀಪುರದ ಕೊರೆಯುವ ಚಳಿ ಉಳಿದವರೆಲ್ಲರಿಗೂ ದೊಡ್ಡ ಸಮಸ್ಯೆಯಾಗಿ ಕಂಡರೆ ನನಗೆ ಖುಷಿ! ಅಲ್ಲಿನ ಸದಾ ಮೋಡ ಕವಿದ ವಾತಾವರಣವೂ ಮೈಗ್ರೇನ್ ಕಾರಣದಿಂದಾಗಿ ನನಗೆ ಪ್ರಿಯವಾಯಿತು! ಮೊದಲೇ ಕತ್ತಲಿನೊಂದಿಗೆ ಇದ್ದ ಗೆಳೆತನ ಮತ್ತಷ್ಟು ಗಾಢವಾಯಿತು. ಆದರೆ ಎಂಟು ವರ್ಷಗಳ ಬಳಿಕ ಹುಟ್ಟಿ ಬೆಳೆದ ದಕ್ಷಿಣ ಕನ್ನಡ ಜಿಲ್ಲೆಗೆ ಮರಳಿದಾಗ ಇಲ್ಲಿನ ಸೆಕೆ, ಬಿಸಿಲಿನ ವಾತಾವರಣಕ್ಕೆ ಮೈಗ್ರೇನ್ ಕೆರಳಿ, ರುದ್ರರೂಪ ತಾಳಿ ಕಗ್ಗತ್ತಲ ಇರುಳ ಮೊರೆ ಹೋಗುವುದೊಂದೇ ನನ್ನ ಮುಂದಿರುವ ಮೊದಲ ಮತ್ತು ಕೊನೆಯ ಆಯ್ಕೆಯೂ ಆಯಿತು!
ಪ್ರತಿ ಹಗಲಿಗೊಂದು ರಾತ್ರಿಯಿದೆ ಎನ್ನುವುದೇ ನನ್ನ ದಿನದಿನದ ಪುಳಕ. ಆ ರಾತ್ರಿಗಾಗಿ, ಅದರ ಚೆಲುವಿಗಾಗಿ ಬೆಳಗಿನಿಂದ ಕಾಯುತ್ತಿರುತ್ತೇನೆ. ಕತ್ತಲೆಂದರೆ ಹಲವರಿಗೆ ಭಯ. ಅದಲ್ಲದೆ ಅನೇಕ ಸಮಾಜಘಾತುಕ ಚಟುವಟಿಕೆಗಳೂ ಎಲ್ಲೋ ಕತ್ತಲಾಳದಲ್ಲಿಯೇ ನಡೆಯುತ್ತಿರುತ್ತವೆ. ನಾವು ಹೆಣ್ಣುಮಕ್ಕಳಂತೂ ಕತ್ತಲಲ್ಲಿ ಒಬ್ಬೊಬ್ಬರೇ ತಿರುಗಾಡುವುದು ನಮ್ಮ ದೇಶದಲ್ಲಿ ಬಹುಮಟ್ಟಿಗೆ ಅಸಾಧ್ಯವಾಗಿಯೇ ಉಳಿದುಬಿಟ್ಟಿದೆ. ಇವೆಲ್ಲವೂ ಕತ್ತಲಿನ ಇನ್ನೊಂದು ಮುಖ ಹೌದಾದರೂ, ದುಡಿದು ಬಂದ ಜೀವಗಳಿಗೆ ಕತ್ತಲೇ ತಾಯಿ. ಹೆಚ್ಚಿನ ಪ್ರಾಣಿ ಪಕ್ಷಿಗಳು ನಿದ್ದೆಹೋಗುವ ಸಮಯ. ಇನ್ನೊಂದಷ್ಟು ಕಾಡಿನ ಪ್ರಾಣಿಗಳು ತಮ್ಮ ಆಹಾರ ಅರಸುವ ಹೊತ್ತು. ಇಂಥಹಾ ಕತ್ತಲ ಇರುಳುಗಳಲ್ಲಿ ನಾಯಿಗಳ ಸಂಗೀತಕ್ಕಾಗಿ ಕಿವಿ ತೆರೆದು ಕೂರುತ್ತೇನೆ. ಅನೇಕರಿಗೆ ನಾಯಿಗಳ ಬೊಗಳು ಕಿರಿಕಿರಿಯೆನಿಸಿದರೆ ನನಗೆ ಆತ್ಮೀಯ ಜೀವದ ಹಿತನುಡಿಯಂತೆನಿಸುತ್ತದೆ ಅಥವಾ ಕತ್ತಲ ನಿಗೂಢತೆ ನಾಯಿಯ ಮೂಲಕ ಅನಾವರಣಗೊಂಡಂತೆನಿಸುತ್ತದೆ. ಕೀಟ, ಕಪ್ಪೆಗಳ ಸದ್ದು ಕೂಡಾ ಹೀಗೇ. ಗುಮ್ಮನ ದನಿ ಕೇಳುವ ಅದೃಷ್ಟ ಸಣ್ಣ ಪೇಟೆಯೊಂದರಲ್ಲಿ ವಾಸಿಸುವ ನಮಗೆ ಇಲ್ಲ. ಆದರೆ, ಸಾಮಾನ್ಯವಾಗಿ ಸಂಜೆಯ ನಡಿಗೆಯನ್ನು ರಾತ್ರಿಗೆ ಮುಂದೂಡುತ್ತೇನೆ. ಇಕ್ಕೆಲದ ಕಾಡುಗಳ ಸುಗಂಧವನ್ನು ಹೀರಿಕೊಳ್ಳುತ್ತಾ ‘ಮತ್ತಷ್ಟು ದೂರ ಹೋಗಿಬರುವ’ ಎಂದು ಗಂಡನಲ್ಲಿ ಬೇಡಿಕೆ ಸಲ್ಲಿಸುತ್ತೇನೆ.
‘ನಿಶಾಚರಿ’ ಎಂಬ ಹೆಮ್ಮೆಯ ಬಿರುದು ನನಗೀಗಾಗಲೇ ದೊರೆತಿದೆ! ರಾತ್ರಿ ಓದು, ಬರವಣಿಗೆಯಲ್ಲಿ ತೊಡಗಿದ್ದರೆ ಅಥವಾ ಸುಮ್ಮನೇ ಕುಳಿತಿದ್ದರೂ ತೂಕಡಿಸುತ್ತಲಾದರೂ ಇನ್ನೂ ಸ್ವಲ್ಪ ಹೊತ್ತು ʼಎಚ್ಚರಿರಬೇಕುʼ; ರಾತ್ರಿ ಮುಗಿಯಬಾರದು, ನನ್ನನ್ನು ಅಗಲಬಾರದು ಎಂಬ ಪ್ರತಿದಿನದ ತಹತಹ. ಹಾಗೇ ಪ್ರತಿವರ್ಷ ‘ಒಂದು ಹದಿನೈದು ದಿನದ ಮಟ್ಟಿಗಾದರೂ ಚಳಿ ಬರಲಿ’ ಎಂಬ ಪ್ರಾರ್ಥನೆ. ಮಳೆಗಾಲವಂತೂ ಮೋಸ ಮಾಡದೆ ವಾಡಿಕೆಯಂತೆ ಆಗಮಿಸಿದರೂ ಈಗೀಗ ಅತಿವೃಷ್ಟಿ, ಅಕಾಲ ವೃಷ್ಟಿ ಮುಂತಾದವು ಕಾಡತೊಡಗಿವೆ. ಯಾವುದು ಏನೇ ಆದರೂ ದಿನದಿನದ ಕತ್ತಲ ಕರುಣೆಯಂತೂ ಕೊನೆಗಳಿಗೆಯವರೆಗೆ ಕೈ ಹಿಡಿದು ಕಾಯುತ್ತದೆಂಬ ದೊಡ್ಡ ಭರವಸೆ ನನ್ನದು!
ವಿಜಯಶ್ರೀ ಹಾಲಾಡಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯ ಮುದೂರಿಯವರು. ಓದು, ಬರೆಹ, ನಿಸರ್ಗ, ಹಕ್ಕಿಗಳನ್ನು ಗಮನಿಸುವುದು, ಫೋಟೋಗ್ರಫಿ, ಕಾಡಿನ ತಿರುಗಾಟ ಇವರ ಆಸಕ್ತಿಗಳು. ಬೀಜ ಹಸಿರಾಗುವ ಗಳಿಗೆ(ಕವಿತೆ), ಓತಿಕ್ಯಾತ ತಲೆಕುಣ್ಸಿ(ಮಕ್ಕಳ ಕವಿತೆ), ಅಲೆಮಾರಿ ಇರುಳು(ಕಿರುಕವಿತೆ), ಪಪ್ಪುನಾಯಿಯ ಪೀಪಿ(ಮಕ್ಕಳ ಕವಿತೆ), ಸೂರಕ್ಕಿ ಗೇಟ್(ಮಕ್ಕಳ ಕಾದಂಬರಿ), ಜಂಬಿಕೊಳ್ಳಿ ಮತ್ತು ಪುಟ್ಟವಿಜಿ(ಮಕ್ಕಳಿಗಾಗಿ ಅನುಭವಕಥನ) ಪ್ರಕಟಿತ ಕೃತಿಗಳು