ಆ ಮನೆಯ ಅಂಗಳದಲ್ಲಿ ಎಷ್ಟೊಂದು ದೊರೆಯಂತೆ ಮೆರೆದಿದ್ದವನು… ಎಷ್ಟು ಬಡಿದಾಡಿ ರಕ್ತ ಹರಿಸಿದ್ದವನು. ಈಗ ಅದೇ ಅಂಗಳವ ಹಾದು ಹೋಗುವ ಹಾದಿ ಹೋಕರತ್ತ ಕ್ಷೀಣ ದನಿ ಹೊರಡಿಸಿ ಕೈ ಒಡ್ಡಿ ತಿನ್ನಲು ಏನಾದರೂ ಕೊಡಿ ಎಂದು ಬೇಡುತ್ತಿದ್ದ. ಕೊಡುವವರು ಕೊಡುತ್ತಿದ್ದರು. ಅವನ ಮೂರನೇ ಹೆಂಡತಿ ಮೈಸೂರು ಸೇರಿದ್ದವಳು ತನ್ನ ಮಗಳ ಸಮೇತ ನಾಪತ್ತೆ ಆದವಳು ಮತ್ತೆ ಎಲ್ಲೂ ಕಂಡಿರಲಿಲ್ಲ. ಶಾಂತಿ ಮಾತ್ರ ಬಚಾವಾಗಿ ಗಂಡನ ಮನೆಯಲ್ಲಿ ಅನುಕೂಲವಾಗಿ ಇದ್ದಳು.
ಮೊಗಳ್ಳಿ ಗಣೇಶ್ ಬರೆಯುವ “ನನ್ನ ಅನಂತ ಅಸ್ಪೃಶ್ಯ ಆಕಾಶ” ಆತ್ಮಕತೆ ಸರಣಿಯ 39ನೇ ಕಂತು
ಅಂತೂ ಸುದ್ದಿ ಬಂದಿತ್ತು. ಅವನು ಸತ್ತಿದ್ದ ನಮ್ಮಪ್ಪ… ಸಾವಿನ ಸುದ್ದಿ ತಂದಿದ್ದವನು ಮಂಡ್ಯದ ನನ್ನ ಮನೆಗೂ ಬಂದು ಸೂತಕದ ವಿಷಯ ಮುಟ್ಟಿಸಿದ್ದ. ನಾನು ಮುಟ್ಟಿಸಿಕೊಳ್ಳಲಿಲ್ಲ. ಹೇಗೆ ಏನಾಗಿ ಸತ್ತ ಎಂದು ಸಲೀಸಾಗಿ ಕೇಳಿದ್ದೆ. ‘ಎಲ್ಲನು ಯೀಗ ಯೇಳುಕಾಗುದಿಲ್ಲ. ನಿಮ್ಮಕ್ಕ ಅವುರ್ಗೆ ಯೇಳಿವಿನಿ… ಯಿನ್ನೂ ಯಾರ್ಯಾರ್ಗೊ ಯೇಳ್ಬೇಕು… ವತ್ರಂಟೆಗೇ ಬಂದ್ಬುಡಪ್ಪ… ನೀನೆ ಹಿರಿಮಗ. ನಿಂತ್ಕಂದು ಕಾರ್ಯ ಮಾಡ್ಬೇಕು’ ಎಂದು ಹೇಳಿ ಹೊರಟು ಹೋದ. ಒಂದನಿಯ ಕನಿಕರವೂ ಮೂಡಲಿಲ್ಲ ಎದೆಯಲ್ಲಿ. ಹೆಂಡತಿ ಅಯ್ಯೋ ಎಂದಿದ್ದಳು. ಅವನಿಗೆ ಮರುಕ ತೋರಬೇಡ ಎಂದೆ. ‘ಸತ್ತಾಗ್ಲು ಕನಿಕರ ಬರೋದಿಲ್ಲುವೇ’ ಎಂದು ದಿಟ್ಟಿಸಿ ಕೇಳಿದಳು. ನನ್ನ ಉತ್ತರಕ್ಕೆ ಸಾಕ್ಷಿಯಾಗಲು ಎದುರಿಗೆ ಈಗ ನನ್ನ ತಾಯಿ ಇಲ್ಲಾ… ನನ್ನ ತಾಯಿಯನ್ನು ಇಂಚಿಂಚು ಕೊಂದುಬಿಟ್ಟವನ ಮೇಲೆ ನನಗೆ ದಯೆ ಬರೋದಿಲ್ಲ. ಒಳಗಿನ ಕಿಚ್ಚು ಆರಿಲ್ಲ. ಅದು ನಾನಿರುವ ತನಕವೂ ಒಳಗೆ ಉರಿಯುತ್ತಲೇ ಇರುತ್ತದೆ… ಎಂದೆ. ಪ್ರತಿಯಾಡಲಿಲ್ಲ. ಅಕ್ಕ ಹತ್ತಿರದಲ್ಲೇ ಇದ್ದ ಹಳ್ಳಿಯಿಂದ ದುಃಖಿಸುತ್ತ ಬಂದಳು. ಅವನು ಸತ್ತವನು ಇಬ್ಬರಿಗೂ ಅಪ್ಪ… ಎಷ್ಟೊಂದು ವ್ಯತ್ಯಾಸ.. ಅಂತೂ ಅವನು ಸತ್ತನಲ್ಲ ಎಂಬ ಸಂಭ್ರಮದ ಹಿಂಸೆಯೇ… ಇಲ್ಲ! ಅದನ್ನು ನಾನು ಹೇಳಲಾರೆ…
‘ಮಗಾ… ಶೋಭ ಮನೇಲಿರ್ಲಿ… ನಾನು ನೀನು ಊರಿಗೆ ಹೋಗುವ ನಡಿಯಪ್ಪಾ’ ಎಂದು ಸಂಜೆಯಲ್ಲೆ ಹೊರಡು ಎಂದು ಒತ್ತಾಯಿಸಿದಳು.
‘ನಾನ್ಯಾಕವ್ವಾ ಅವನ ಸಾವಿಗೆ…’
‘ಅಪ್ಪ ಅಲುವೇನಪ್ಪಾ…’
‘ಅಪ್ಪ… ಅಪ್ಪಾ ಅಪ್ಪಪ್ಪ… ಅವನು ಅಪ್ಪನಾಗಿದ್ದನೇ’
‘ಹಳೆದೆಲ್ಲ ಯೀಗ ಯಾಕಪ್ಪ… ಸತ್ತೋನು ಸತ್ತ…. ಮೂರಿಡಿ ಮಣ್ಣಾಕು’
‘ಮೂರಿಡಿಯ ಮಣ್ಣೇ… ಆ ಮೂರಿಡಿಯ ಮಣ್ಣಿಗೆ ಎಷ್ಟು ಬೆಲೆ ಇದೆ ಅನ್ನೋದು ನಿನಗೆ ಗೊತ್ತೇನಕ್ಕಾ…’
‘ನಿನ್ನಂಗೆ ವೋದಿ ಬರ್ದು ತಿಳ್ದೋಳಲ್ಲವಲ್ಲಪ್ಪಾ… ಯಾಕಪ್ಪ ಇಂಗೆ ಕೇಳಿಯೆ’
‘ಯಾರಾದರೂ ಒಬ್ಬರಾದರೂ ಒಂದು ದಿನವಾದರು ನೆಮ್ಮದಿಯಿಂದ ಇದ್ದರೇನವ್ವಾ… ಎಷ್ಟು ಕೋಟಲೆ ಕೊಟ್ಟ… ಸಾಲು ಸಾಲಾಗಿ ಕೊಂದುಬಿಟ್ಟ… ಅವನು ಮಣ್ಣಲ್ಲಿ ಮಣ್ಣಾಗುವ ಬದಲು ಬೂದಿಯಾಗಬೇಕು…’
‘ಅಂಗನ್ನಬೇಡಾ… ಜನ್ಮಕೊಟ್ಟವನು… ಅವನ ಜೊತೆ ಮಲಗಿ ನಮ್ಮವ್ವ ನಮಗೆ ಜೀವ ಕೊಟ್ಟವಳೇ’
‘ನಾನು ಅವನ ಸಾವಿಗೆ ಬರೋದಿಲ್ಲ’
‘ಕಠಿಣ ಆಗಬ್ಯಾಡ ಕನಪಾ… ಜನ ಆಡ್ಕೋತಾರೆ… ಅವರಪ್ಪನ ಮುಖ ನೋಡುಕೆ ಬರ್ಲಿಲ್ಲುವಂತೆ ಅನ್ನೊ ಮಾತು ಉಳ್ಕತದೆ’
‘ಹಾಗೇ ಆಗಲಿ… ತಂದೆಯಾದವನಿಗೆ ಇರಬೇಕಾದ ಯಾವ ಗುಣಗಳು ಅವನಲ್ಲಿ ಇರಲಿಲ್ಲ. ಪಾತಕಿ ಅವನು. ಅವನ ಶವದ ಮುಖ ನೋಡಲೂ ನನಗೆ ಇಷ್ಟ ಇಲ್ಲ. ಮಾವನ ಕರಕೊಂಡು ನೀನೇ ಹೋಗಿ ಬಾ… ಹೇಗಿದ್ರೂ ಆ ಶ್ರೀನಿವಾಸನೂ ಬಂದಿರ್ತಾನೆ… ಅವನ ಮುಸುಡಿಗೂ ಇವನ ಮೋರೆಗೂ ಹೊಂದಾಣಿಕೆ ಇದೆ. ಸರಿ ಹೋಯ್ತದೆ… ಹೋಗವ್ವ… ನಾನು ಬರೋದಿಲ್ಲ… ಅವನ ಬಗ್ಗೆ ನನಗೆ ಎಷ್ಟೊಂದು ತಿರಸ್ಕಾರ ಇದೆ ಎಂದು ಎಲ್ಲರಿಗೂ ತೋರಿಕೊಳ್ಳಲು ಇರುವುದು ಇದು ಒಂದೇ ಅವಕಾಶ. ಇದನ್ನು ಬಿಡಲಾರೆ… ಕಾಲಮಾನ ನ್ಯಾಯ ಹೇಳದೆ ಕೇಳದೆ ಆ ಒಂದು ನಿರ್ದಿಷ್ಟ ಗಳಿಗೆಯ ಕಾದು ಬಂದಿರುತ್ತವೆ. ನಾನು ಅವುಗಳ ಜೊತೆ ಹೋಗುವೆ… ಅಷ್ಟೇ… ನನ್ನ ಬಿಟ್ಟು ಬಿಡು…’
‘ಆಯ್ತಪ್ಪಾ… ವೋಗಿದ್ಬತ್ತಿನಿ.’
ಅಕ್ಕ ಅಷ್ಟು ಹೇಳಿ ಹೋದಳು. ಎಷ್ಟೇ ಆಗಲಿ ಹೆಣ್ಣು ಮಗಳು ಎಂದು ಮನೆಯಿಂದ ಹೊರ ಬಂದೆ. ‘ಎಲ್ಲಿಗೆ’ ಎಂದಳು ಹೆಂಡತಿ. ‘ನಿಂದು ಯಾವತ್ತೂ ಅಪಶಕುನದ ದನಿ… ಕಾಲೆತ್ತಿ ಹೊರಟಾಗಲೆಲ್ಲ ಎಲ್ಲಿಗೆ ಎಲ್ಲಿಗೆ ಎಲ್ಲಿಗೇ ಎಂದು ಕೇಳದೇ ಬಿಡೋದಿಲ್ಲ. ಹೋಗಬೇಕಾದಾಗ ನಿನ್ನನ್ನೂ ಜೊತೆಗೇ ಕರೆದುಕೊಂಡು ಹೋಗುತ್ತೇನೆ… ತಾಳ್ಮೆಯಿಂದಿರು’ ಎಂದು ರೇಗಿದೆ. ‘ತಡ ಯಾಕೆ ಮಾಡೋದೂ… ಈಗ್ಲೇ ನಿಂಜೊತೆಲೇ ಬರ್ತೀನಿ… ವಂಟೋಗೋಣ ನಡೀ… ಸಾಕಾಗಿ ಹೋಗಿದೆ… ಯಾರಿಗೆ ಬೇಕು ಈ ಸಂಸಾರ’ ಎಂದು ಸಿಟ್ಟಾದಳು.
‘ಡೇಟ್ ಇನ್ನೂ ಫಿಕ್ಸ್ ಆಗಿಲ್ಲ… ಆ ಡೇಟ್ ನನ್ನ ಕೈಯಲ್ಲಿ ಇಲ್ಲ… ಬಂದಾಗ ತಂತಾನೆ ಎಲ್ಲ ತೇಲಿ ಹೋಯ್ತದೆ… ಹುಚ್ಚು ಹೊಳೆ ತುಂಬಿ ಹರಿಯಲು ಬಹಳ ದಿನ ಕಾಯಬೇಕಿಲ್ಲ. ಕೊಂಚ ತಡೀ… ಇನ್ನು ಸ್ವಲ್ಪ ಸಮಯ’ ಎಂದು ಲಟಲಟನೆ ಮೆಟ್ಟಿಲು ಇಳಿದು ಕತ್ತೆ ಮೊಪೆಡ್ ಏರಿ ದಿಕ್ಕಿಲ್ಲದೆ ದಿಕ್ಕು ಹುಡುಕುವಂತೆ ಗಾಡಿ ಓಡಿಸಿದೆ. ಕತ್ತಲೆಯ ದಾರಿ. ಹಳ್ಳಿಗಳ ಒಳ ರಸ್ತೆ. ತಿರುವು ಮುರುವು. ಗಾಡಿ ಸ್ಕಿಡ್ಡಾಗಿ ಉರುಳಿತು. ಏನೂ ಆಗಲಿಲ್ಲ. ಹಿಂತಿರುಗಿದೆ. ಸುಮ್ಮನೆ ಮಲಗಿಬಿಟ್ಟಿದ್ದೆ. ನಿದ್ದೆ ಮಾತ್ರೆ ಇದ್ದರಷ್ಟೇ ಗಡದ್ದಾಗಿ ನಿದ್ದೆ ಬರುತ್ತಿದ್ದುದು. ಮರುದಿನ ಒಂದು ಗಂಟೆಯ ಬಿಸಿಲ ಝಳದಲ್ಲಿ ಎದ್ದಿದ್ದೆ. ಹೆಂಡತಿ ಎಬ್ಬಿಸಲು ಹೆಣಗಾಡಿ ಸಾಕಾಗಿ ಮಲಗಿರಲಿ ಎಂದು ಬಿಟ್ಟಿದ್ದಳು. ಸ್ನಾನ ಮಾಡಿ ಫ್ರೆಶ್ ಆದೆ. ತಲೆ ಇನ್ನೂ ಚುರುಕಾಗಬೇಕಾಗಿತ್ತು. ಅದಕ್ಕೇನು ಕಷ್ಟ ಇರಲಿಲ್ಲ. ನಿಶೆ ಮಾಡಿ ಮನೆಗೆ ಬಂದರೆ; ಅಕ್ಕ ಅಪ್ಪನ ಮಣ್ಣು ಮಾಡಿ ಬಂದು ಕೂತಿದ್ದಾಳೆ.
‘ಆಯ್ತೇನವ್ವಾ ಎಲ್ಲಾ’
‘ಆಗ್ಲೇ ಬೇಕಲ್ಲಪ್ಪ ಸತ್ತವನ ಹೆಣ ತೆಂಕ್ಲಿಗೊ ಬಡಗ್ಲಿಗೊ…’
‘ಸ್ವಲ್ಪ ತಕೋತಿಯೇನವ್ವಾ…’
‘ಏನಪ್ಪಾ… ಅದೇ… ಕೊಡಪ್ಪಾ… ಸತ್ತೋರ ಮನೇಲಿ ಅದೆಲ್ಲ ಮಾಡ್ಲೆ ಬೇಕಲ್ಲಾ… ನಮ್ಮಪ್ಪ ಅಷ್ಟೊಂದು ಕುಡೀತಿದ್ದ… ಕೊಡೂ; ಸತ್ತ ಅಂತಾ ಕುಡ್ದು ಮಾತಾಡ್ತೀನಿ’
‘ತಕಳವ್ವಾ… ನಿದಾನ್ಕೆ ತಕಬೇಕು… ನೀರು ಕುಡಿದಂತೆ ಅಲ್ಲ. ತಾತ ಒಬ್ಬುನ್ನ ಬಿಟ್ರೆ ನಮ್ಮ ವಂಶದೆಲಿ ಎಲ್ಲರೂ ಕುಡೀತಿದ್ರಲ್ಲಾ…’
ಅಪ್ಪನ ಹೆಸರಲ್ಲಿ ಮೂರು ತೊಟ್ಟು ಬಿಟ್ಟು ನೆಲಕ್ಕೆ… ‘ಕುಡೀ… ನಿನ್ನಾತ್ಮ ನೋಡ್ತಿದ್ದದೊ ಏನೊ ಕುಡೀ’ ಎಂದು ತನ್ನ ತಂದೆಯ ಆತ್ಮದತ್ತ ಮೂಲೆಯ ಕತ್ತಲತ್ತ ನೋಡಿ ಸಲೀಸಾಗಿ ಕುಡಿದಳು. ಸಿಟ್ಟಾಗಿ ನನ್ನ ಹೆಂಡತಿ ರೂಂ ಬಾಗಿಲು ಹಾಕಿಕೊಂಡಿದ್ದಳು. ನಿಧಾನಕ್ಕೆ ಅಕ್ಕನ ನಾಲಿಗೆ ತೊಡರಿದಂತಾಗಿ ಒಂದು ಗಾಂಭೀರ್ಯ ದನಿಗೆ ರೂಪಾಂತರವಾಯಿತು. ತೇಗಿದಳು. ಗಂಡೆಂಗಸಂತೆ ಕಂಡಳು. ಮೂಲಾಜಿಲ್ಲದ ಅಕ್ಕ ನನ್ನ ಮೇಲೆ ಅಷ್ಟೇ ಪ್ರೀತಿ ಗೌರವ ವಾತ್ಸಲ್ಯ ಇಟ್ಟುಕೊಂಡಿದ್ದವಳು.
‘ಅಲ್ಲಿ ಅವನು ಯಾಕೆ ಬರ್ಲಿಲ್ಲ ಅಂತಾ ಕೇಳಿದ್ರೇನವ್ವಾ’
‘ಕೇಳ್ದೆ ಇರ್ತರೇನೂ… ಎಲ್ರೂ ಕೇಳುದ್ರು… ನಿಂತಮ್ಮ ಬರ್ಬೇಕಿತ್ತು. ಬಂದು ಮೂರಿಡಿ ಮಣ್ಣ ಹಾಕಿದ್ರೆ ಸತ್ತವನ ಪಾಪ ಕಳೀತಿತ್ತು ಅಂದ್ರು’
‘ಅದ್ಕೇ ನಾನು ಬರ್ಲಿಲ್ಲಕನವ್ವಾ’ ಎಂದು ನಕ್ಕುಬಿಟ್ಟೆ.
‘ನಗಬ್ಯಾಡ… ತಪ್ಪು… ಪಾಪಿ ಸತ್ತಾಗಲೂ ಮಣ್ಣು ಮಾಡ್ತರೆ… ಪುಣ್ಯವಂತ ಸತ್ತರೂ ಬೂಮಿಗೇ ಆಕ್ತರೆ… ಯಾಕಪ್ಪ ನಗಬೇಕೂ…’
‘ಅವನು ಮಾಡಿಕೊಂಡ ದುರಂತಗಳಿಗೆ ನಗು ಬಂತು ಕಣವ್ವಾ’
‘ಅವನ ವಿಧಿ ಅಂಗಿತ್ತು. ನಾವಾಗಿದ್ದು ನಾವು ಮಾಡ್ಕೋದಲ್ಲ… ಇದೆಲ್ಲನು ಮಾಡಿ ಅನುಬೌಸಿ ಬಾ ಅಂತಾ ಮೊದ್ಲೆ ಯೇಳಿ ಕಳ್ಸಿರ್ತನೇ…. ಅದ್ಕೆ ಅವನು ಅಂತಾ ಸಾವಕಂಡ… ಅವ್ನು ಎಂದಾದ್ರೂ ನೆಮ್ದಿಲಿ ಇದ್ನೇ… ಮೆರೆದಾ ಮೆರದಾ… ಉರುದೋಗುವಂಗೆ ಮೆರ್ದ. ಇವತ್ತಿದ್ದನೇ… ಅವುನು ಯಂಗೆ ಸತ್ತ ಅನ್ನುದಾ ನೆನಿಸ್ಕಂದ್ರೆ ಕರುಳು ಕಿತ್ತು ಬಂದಂಗಾಯ್ತದೇ…’
‘ತಕಳವ್ವಾ… ನಾವೆಲ್ಲ ಒಂದಿನ ನಾಲ್ಕು ಜನರ ಹೆಗಲ ಮೇಲೆ ಪಯಣ ಮುಗೀಸೋರೇ… ಕೊನೆ ಪಕ್ಷ ನಾಲ್ಕು ಜನ ಹೊತ್ತುಕೊಂಡು ಹೋಗೋಕೆ ಅವನ ಪಾಲಿಗೆ ಇದ್ರಲ್ಲಾ’
‘ವೋಯ್ತಿವಿ ಸರೀ… ಹುಟ್ಟನ್ನ ತಡೀಬೌದು… ಸಾವ ತಡಿಕಾಗುದಿಲ್ಲಾ… ಸಾವು ಎಲ್ಲಿರ್ತದೆ ಯೇಳೂ… ಯಂಗೆ ಬತ್ತದೆ ಅನ್ನುದು ಗೊತ್ತಿದ್ದದೇ’
‘ನೀನೆ ಹೇಳವ್ವಾ… ಸಾವಿನ ಮನೆಯಿಂದ ಬಂದಿದ್ದೀಯೆ!’
‘ನಮ್ಮ ಸಾವು ನಮ್ಮ ಕೈಯ್ಲೆ ಇರ್ತದೆ ಕನಪಾ’
‘ಚ್ತತ್, ಸಾವಿನ ಮಾತೇ ಬ್ಯಾಡ ಬಿಡವ್ವಾ…’
‘ಮೊಗಾ, ಅವ್ನು ಇನ್ನೂ ಬದ್ಕಿರ್ತಿದ್ದ. ಪಡಸಾಲೆಗೆ ಆಕುಬುಟ್ಟಿದ್ರು. ಯಾರೂ ಅನ್ನ ನೀರು ಕೊಡ್ಲಿಲ್ಲ….’ ಅಕ್ಕ ಕಥೆಯಂತೆ ತನ್ನ ಅಪ್ಪನ ಸಾವಿನ ಒಂದೊಂದು ವಿವರಗಳನ್ನೂ ಹೇಳುತ್ತಿದ್ದಳು. ಮನಸ್ಸು ಸುಮ್ಮನೆ ಕೇಳಿಸಿಕೊಳ್ಳುತ್ತಿತ್ತು. ‘ಅವನಿಗೆ ಎಲ್ಲ ಇತ್ತು. ಆದರೆ ಯಾವುದನ್ನೂ ಉಳಿಸ್ಕಲಿಲ್ಲ’ ಅನ್ನುತ್ತ ಅಕ್ಕ ಕಣ್ಣೀರ ಒರೆಸಿಕೊಂಡಳು. ಅಪ್ಪ ಅಪ್ಪ ಎಂದು ಬಾಲ್ಯದ ಮುಗ್ಧ ತನ್ನ ತಂದೆಯ ಬಗ್ಗೆ ಆರಾಧನಾ ಭಾವದಲ್ಲಿ ಏನೇನೊ ಹೇಳುತ್ತಿದ್ದಳು. ಅದು ನಿಜವಿತ್ತು. ಪಾಳೆಯಗಾರನಂತೆಯೇ ಇದ್ದ. ಎಂತಹ ಕ್ರೂರ ಸಾವು… ದೀನವಾದ ಭಿಕ್ಷೆಯ ಕ್ಷಣಗಳು…
ಮೂಲೆ ಹಿಡಿದಿದ್ದ. ನೋಡಿಕೊಳ್ಳಲು ಯಾರೂ ಇರಲಿಲ್ಲ. ಆಗ ನನ್ನ ಗಮನಕ್ಕೂ ಬಂದಿತ್ತು. ಯಾರ ಕಡೆಯಿಂದಲೊ ಹಣ ಬೇಕೆಂದು ಹೇಳಿ ಕಳಿಸಿದ್ದ. ಹಾಗೆ ಬಂದಿದ್ದವನ ಮತ್ತೆಂದೂ ನನ್ನತ್ತ ಬರದಂತೆ ಎಚ್ಚರಿಸಿ ಕಳಿಸಿದ್ದೆ. ಭಿಕ್ಷೆ ಬೇಡಿಕೊಂಡು ಸಾಯಲಿ ಅವನು ಎಂದಿದ್ದೆ. ಎದ್ದು ತಿರುಗಾಡದ ಸ್ಥಿತಿಯಲ್ಲಿ ಬಿದ್ದಿದ್ದ. ಏನಾದರೂ ಖರ್ಚಿಗೆ ಹಣ ಬೇಕೇ ಬೇಕಿತ್ತು. ಕುಡಿಯದೆ ಇರಲು ಅವನಿಗೆ ಸಾಧ್ಯವಿರಲಿಲ್ಲ. ಅವರು ಇವರು ಯಾರ್ಯಾರೊ ಅವನ ಗುಟುಕು ಜೀವವ ಉಳಿಸಿಕೊಂಡಿದ್ದರು. ಕೊನೆಗೆ ಯಾರೂ ಹತ್ತಿರ ಸುಳಿಯುತ್ತಿರಲಿಲ್ಲ. ಅನ್ನ ನೀರೇ ಸಿಗದಂತಾಗಿತ್ತು. ಮನೆ ಮುಂದೆಯ ಅಂಗಳ ಅವನನ್ನು ಖಂಡಿತ ದಿಟ್ಟಿಸಿ ನೋಡಿರುತ್ತದೆ. ಆ ಮನೆಯ ಅಂಗಳದಲ್ಲಿ ಎಷ್ಟೊಂದು ದೊರೆಯಂತೆ ಮೆರೆದಿದ್ದವನು… ಎಷ್ಟು ಬಡಿದಾಡಿ ರಕ್ತ ಹರಿಸಿದ್ದವನು. ಈಗ ಅದೇ ಅಂಗಳವ ಹಾದು ಹೋಗುವ ಹಾದಿ ಹೋಕರತ್ತ ಕ್ಷೀಣ ದನಿ ಹೊರಡಿಸಿ ಕೈ ಒಡ್ಡಿ ತಿನ್ನಲು ಏನಾದರೂ ಕೊಡಿ ಎಂದು ಬೇಡುತ್ತಿದ್ದ. ಕೊಡುವವರು ಕೊಡುತ್ತಿದ್ದರು. ಅವನ ಮೂರನೇ ಹೆಂಡತಿ ಮೈಸೂರು ಸೇರಿದ್ದವಳು ತನ್ನ ಮಗಳ ಸಮೇತ ನಾಪತ್ತೆ ಆದವಳು ಮತ್ತೆ ಎಲ್ಲೂ ಕಂಡಿರಲಿಲ್ಲ. ಶಾಂತಿ ಮಾತ್ರ ಬಚಾವಾಗಿ ಗಂಡನ ಮನೆಯಲ್ಲಿ ಅನುಕೂಲವಾಗಿ ಇದ್ದಳು. ನಮ್ಮ ಅಪ್ಪ ಅಂತಹ ಸ್ಥಿತಿಯಲ್ಲಿ ಭಿಕ್ಷೆ ಬೇಡಬೇಕೇ ಎಂದು ತನ್ನ ಮನೆಗೆ ಕರೆದುಕೊಂಡು ಹೋಗಿ ಆಸ್ಪತ್ರೆಗೆ ತೋರಿಸಿ ಆರೈಕೆ ಮಾಡಿದ್ದಳಾದರೂ; ಅಕ್ಕ ಸಾಕಷ್ಟು ಹಣವನ್ನು ಅವರಿವರ ಮೂಲಕ ಕಳಿಸಿಕೊಟ್ಟಿದ್ದರೂ ಅವನಿಗೆ ಏನೂ ಸಿಕ್ಕಿರಲಿಲ್ಲ. ಅವನ ತಮ್ಮಂದಿರು ಇದ್ದೂ ಇಲ್ಲವಾಗಿದ್ದರು. ಮತ್ತೆ ಕಾಯಿಲೆ ಬಿದ್ದಿದ್ದ. ಒಂದೆರಡು ತಿಂಗಳ ತನಕ ಏನೂ ಇಲ್ಲದೆ ಮೂಳೆ ಚಕ್ಕಳವಾಗಿ ಕೈ ಒಡ್ಡುತ್ತ ಅಲ್ಲೇ ಬಿದ್ದಿದ್ದ. ಶಾಂತಿ ರುಚಿಯಾದ ಬಿರಿಯಾನಿ ಮಾಡಿಕೊಂಡು ನನ್ನ ಅಪ್ಪನಿಗೆ ಹೊಟ್ಟೆ ತುಂಬ ಉಣಿಸಬೇಕು ಎಂದು ಬಂದು; ಮಲಗಿದ್ದವನ ಎತ್ತಿ ಗೋಡೆಗೆ ಒರಗಿಸಿ ಒಂದೊಂದು ತುತ್ತಾಗಿ ಅನ್ನವ ಮಿದ್ದಿಸಿ ಬಾಯಿಗೆ ಇಟ್ಟು ಉಣ್ಣಿಸುತ್ತಿದ್ದಂತೆಯೇ… ಜೀವ ಬಂತು ಎಂಬಂತೆ ಆಸೆಗಣ್ಣಲ್ಲಿ ಆ ಘಮ್ಮೆನ್ನುವ ಬಿರಿಯಾನಿಯ ಗಬಗಬನೆ ನುಂಗುತ್ತಿದ್ದಂತೆಯೆ ಗಾಳಿ ಸಿಕ್ಕಿಕೊಂಡು… ಬಾಯಿಗೆ ನೀರು ಬಿಡು ಎಂದು ಆತನೆ ಕೈಸನ್ನೆ ಮಾಡಿ ಕೇಳಿದ್ದ. ಹಿಂದಕ್ಕೆ ಒರಗಿಸಿಕೊಂಡು ಶಾಂತಿ ಬಾಯಿಗೆ ನೀರು ಬಿಟ್ಟು… ‘ಅಣ್ಣಾ, ನಿಧಾನ… ಕುಡೀ… ಏನೂ ಆಗಲ್ಲ ಕುಡಿ ಅಣ್ಣಾ’ ಎನ್ನುತ್ತಿದ್ದಂತೆಯೇ ಅವನ ಹೊಟ್ಟೆ ಬೊರ್ರೆಂದು ಊದಿಕೊಂಡು ಕಣ್ಣು ತೇಲಿಸುತ್ತ ಜೀವ ಬಿಟ್ಟಿದ್ದ. ಮಗಳು ಬಾಯಿ ಬಡಿದುಕೊಂಡಿದ್ದಳು. ಅದು ನಮ್ಮ ಮನೆಯ ಹೆಣ್ಣು ಮಕ್ಕಳ ಸಂಪ್ರದಾಯ. ಹಾಗೆ ಹೆಣ್ಣು ಮಕ್ಕಳು ಬಾಯಿ ಬಡಿದುಕೊಂಡರೆ ಕೈಲಾಸದಲ್ಲಿರುವ ಶಿವನಿಗೆ ಸುದ್ದಿ ಮುಟ್ಟಿಸಿದಂತೆ. ಶಿವನ ಕಡೆಯವರು ಬಂದು ತಂದೆಯ ಆತ್ಮವ ಕರೆದುಕೊಂಡು ಹೋಗುತ್ತಾರಂತೆ. ಶ್ರೀನಿವಾಸನೆ ತಂದೆಗೆ ಮೊದಲ ಹೆಗಲು ಕೊಟ್ಟಿದ್ದ. ಅಕ್ಕನೂ ಶಾಂತಿ ತಂಗಿಯೂ ಒಂದಿಷ್ಟು ಹೆಗಲು ಕೊಟ್ಟು ಅಪ್ಪನ ಶವವ ಹೊತ್ತಿದ್ದರು.
ಆ ಕ್ಷಣವ ಅಕ್ಕ ನೆನೆಯುತ್ತಿದ್ದಳು. ‘ಛೇ’ ಎಂಬ ಉದ್ಗಾರ ಗೊತ್ತಿಲ್ಲದೆ ನನ್ನ ಬಾಯಿಂದ ಬಂದಿತ್ತು. ಎಲ್ಲೋ ಒಂದಿಷ್ಟು ಮರುಕ ಮಿಡಿದಿತ್ತು. ಛೇ; ನಾಲ್ಕು ಜನ ಶವ ಹೊತ್ತು ಸಾಗುವಾಗ ಆ ಹೊರೆಗೆ ನಾನು ಕೂಡ ನಾಲ್ಕು ಹೆಜ್ಜೆ ಹೊತ್ತು ಸಾಗಬೇಕಿತ್ತು ಎನಿಸಿ ಭಾವುಕನಾಗಿದ್ದೆ. ನನ್ನದೆಲ್ಲ ಇದೇ ಕಥೆ. ಆಗಿ ಹೋದ ನಂತರ ಅದಕ್ಕಾಗಿ ಪರಿತಪಿಸುವುದು… ಆ ಅವಕಾಶ ಒಳ್ಳೆಯದೊ, ಕೆಟ್ಟದ್ದೊ ಎಂದು ಲೆಕ್ಕಿಸದೇ ಆ ಕ್ಷಣಕ್ಕೆ ಭಾಗಿಯಾಗಿ ಸಾಕ್ಷಿಯಾಗಬೇಕಿತ್ತು ಎಂದು ಯಾವತ್ತೂ ಮೊದಲೇ ಹೊಳೆದಿರುವುದಿಲ್ಲ. ಮೀರಿದ ನಂತರವೆ; ಮೀರುವ ಮೊದಲಿನ ಕ್ಷಣಗಳು ಕಾಡುತ್ತವೆ. ಅಕ್ಕ ಸುಸ್ತಾಗಿ ಬೇಸರದಲ್ಲಿ ಮಲಗಿದ್ದಳು. ಮರುದಿನ ಹಳ್ಳಿಗೆ ಹೋಗಿದ್ದಳು. ಅವನ ತಿಥಿಗೂ ನಾನು ಹೋಗಿರಲಿಲ್ಲ. ನನಗೊಬ್ಬ ಅಪ್ಪ ಇದ್ದ ಎಂಬುದೇ ಯಾವತ್ತೊ ಅಳಿಸಿಹೋಗಿತ್ತು. ನನ್ನ ಸಂಸಾರದ ಚಿಂತೆ ನನಗಾಗಿತ್ತು. ಅಷ್ಟರಲ್ಲಿ ಅನಂತಮೂರ್ತಿ ಅವರು ಬೆಂಗಳೂರಿನ ಮನೆಗೆ ಬಂದು ಹೋಗು ಎಂದು ಪತ್ರ ಬರೆದಿದ್ದರು. ನನ್ನ ಪರವಾಗಿ ಕಂಬಾರರ ಜೊತೆ ವಾದಿಸಿದ್ದರು. ಆದರೆ ನಾನು ಮಣಿದಿರಲಿಲ್ಲ. ಹೀಗೇ ಇದ್ದು ಬಿಡುವೆ ಎಂದು ಹಠ ಹಿಡಿದಿದ್ದೆ. ಸಿ.ಜಿ.ಕೆ. ಹುಡುಕಿಕೊಂಡು ನನ್ನ ಬಾಡಿಗೆ ಮನೆಗೆ ಬಂದರು. ವಿಚಾರಿಸಿದರು. ನನಗೆ ನನ್ನ ಹೆಂಡತಿಗೆ ಮಗುಗೆ ಸಾಕಷ್ಟು ಬಟ್ಟೆ ತಂದಿದ್ದರು. ಇವೆಲ್ಲ ಯಾಕೆ ತಂದಿರಿ ಎಂದೆ. ಸಂತೈಸಿದರು. ಟೆಲಿಗ್ರಾಂ ಕಳಿಸಿದ್ದೆ. ನೀನು ಹಂಪಿಗೆ ಹೋಗೇ ಇಲ್ಲವಲ್ಲಾ… ಕಂಬಾರರು ನನಗೆ ಪ್ರಾಮಿಸ್ ಮಾಡಿದ್ದಾರೆ. ಎಂ.ಪಿ.ಪ್ರಕಾಶ್ ಕಂಬಾರರಿಗೆ ಕ್ಲಾಸ್ ತೆಗೆದುಕೊಂಡಿದ್ದರಂತೆ. ಅಂತಹ ಪ್ರತಿಭಾವಂತನಿಗೆ ಕೆಲಸ ಕೊಡದೆ ಯಾರ್ಯಾರಿಗೊ ಅವಕಾಶ ಕೊಟ್ಟಿದ್ದೀಯೆ ಎಂದು ಬೈಯ್ದರಂತೆ. ಕಂಬಾರರು ಕನ್ವಿನ್ಸ್ ಆಗಿದ್ದಾರೆ. ಅಲ್ಲಿ ಹೋಗಿ ಸೇರಿಕೊ… ಅದು ನಿನಗೆ ತಕ್ಕ ನೆಲೆಯಾಗುತ್ತೆ… ಎಂದು ತಂದೆಯಂತೆ ಬುದ್ಧಿ ಹೇಳಿದರು. ಸತ್ತು ಅವನು ನಮ್ಮಪ್ಪ ಇನ್ನೂ ವಾರ ಆಗಿರಲಿಲ್ಲ. ಅಷ್ಟರಲ್ಲಿ ಬಂದು ನನ್ನ ಮೇಲೆ ಇಷ್ಟು ಕಾಳಜಿ ಮಾಡುವ ಸಿ.ಜಿ.ಕೆ ಕಂಡು ಗೌರವ ಬಂತು. ಪ್ರಕಾಶ್ ಅವರ ಒತ್ತಡ ಬಲವಾಗಿ ಕೆಲಸ ಮಾಡಿತ್ತು. ಒಂದಲ್ಲ, ಹತ್ತಲ್ಲ… ನೂರಾರು ದಿಕ್ಕಿನಿಂದ ಕಂಬಾರರಿಗೆ ಒತ್ತಡ ಉಂಟಾಗಿ ಸೋತು ಕೊನೆಗೆ ಕರೀಗೌಡ ಬೀಚನಹಳ್ಳಿ ಅವರನ್ನು ಅದೇ ನನ್ನ ಮಂಡ್ಯದ ಮನೆಗೆ ಕಳಿಸಿದ್ದರು. ಅವತ್ತು ನಾನು ಮನೆಯಲ್ಲಿ ಇರಲಿಲ್ಲ. ಬೆಂಗಳೂರಿಗೆ ಹೋಗಿದ್ದೆ. ಮಂಡ್ಯದಲ್ಲೇ ಅವರ ಸಂಬಂಧಿ ಚಂದ್ರಕಾಂತ್ ಅವರ ಮನೆಯಲ್ಲಿದ್ದರು. ಮರುದಿನ ಅವರು ಮತ್ತೆ ಮನೆಗೆ ಬಂದರು.
‘ನಡೆಯಪ್ಪಾ… ಜೊತೆಲೇ ಕರ್ಕಂಡು ಬಾ ಎಂದು ಆದೇಶ ಮಾಡಿದ್ದಾರೆ ಕಂಬಾರ ಸಾಹೇಬರು… ನೀನು ಈಗ್ಲೇ ರೆಡಿಯಾಗು’ ಎಂದು ಒತ್ತಾಯಿಸಿದರು. ‘ಸಾರ್; ಅಷ್ಟು ಸುಲಬಾನೇ… ನನ್ನ ರೆಕಾರ್ಡ್ಸ್ ಎಲ್ಲಿವೆ ಅಂಬುದೇ ಮರ್ತು ಹೋಗಿದೇ… ಎಲ್ಲಿ ಹಳೆ ಪೇಪರ್ ಜೊತೆ ಸುತ್ತಿ ಕುಡಿದ ಅಮಲಲ್ಲಿ ಬಿಸಾಡಿದ್ದೇನೊ… ಗೊತ್ತಿಲ್ಲಾ… ಡೂಪ್ಲಿಕೇಟ್ ರೆಕಾರ್ಡ್ಸ್‌ನಾದರೂ ತಕೋಬೇಕಲ್ಲಾ’ ಎಂದೆ. ಹೆಂಡತಿ ಹೊರಬಂದವಳೇ; ‘ಅವೆಲ್ಲ ಇಲ್ಲಿ ಫೈಲಲ್ಲಿವೆ. ಎತ್ತಿಟ್ಟಿದ್ದೀನಿ… ತಕೊಳಿ… ಇವತ್ತೇ ಹೊರಡಿ’ ಎಂದಳು. ‘ಹೆಂಡತಿ ಮಾತ್ನಾದ್ರೂ ಕೇಳಿ’ ಎಂದರು ಗೌಡರು. ಸರಿ ಎನಿಸಿತು. ಅಮಲಿನಲ್ಲಿ ಎಲ್ಲೋ ಸುಟ್ಟು ಹಾಕಿರಬೇಕು ಎಂಬ ಅನುಮಾನ ಯಾವಾಗಲೊ ಬಂದಿತ್ತು. ಎಲ್ಲ ದಾಖಲೆಗಳು ವಪ್ಪವಾಗಿ ಇದ್ದವು… ಚಿನ್ನದ ಮೆಡಲು, ರ್ಯಾಂಕ್ ಸರ್ಟಿಫಿಕೇಟ್, ಪದವಿ ಪತ್ರ ಆಳಮೂಳ ಎಲ್ಲವ ನೋಡಿದಂತೆಯೇ ಸ್ವಮರುಕದಿಂದ ಕಂಪಿಸಿದೆ. ಇವುಗಳಿಗಾಗಿ ನಾನು ಎಷ್ಟೊಂದು ಕಷ್ಟಪಟ್ಟಿದ್ದೆ… ಎಷ್ಟೊಂದು ನರಳಿದ್ದೆ… ಕನಸು ಕಂಡಿದ್ದೇ… ಕೊನೆಗೂ ಇವು ನನ್ನ ಕೈ ಹಿಡದವೊ… ಆ ಎಲ್ಲ ಹಿರಿಯರ ಆಶೋತ್ತರವೊ ಬಲಭಾಗಕ್ಕೆ ಬಂದವಲ್ಲಾ ಎಂದು ಸಿದ್ಧನಾದೆ.
‘ಸಾರ್ ನೀವು ಬೆಂಗಳೂರಿಂದ ಬನ್ನಿ… ನಾನು ಮೈಸೂರಿಂದ ರಾತ್ರಿ ಬಸ್ಸು ಹತ್ತಿ ಬರುವೆ. ಅಲ್ಲಿ ನಾಗವಾರರ ಕಂಡು ಬರಬೇಕಾಗಿದೆ’ ಎಂದೆ. ‘ಹಾಗೇ ಆಗಲಿ… ತಪ್ಪಿಸಬಾರದು. ಖುದ್ದು ಕಂಬಾರರೇ ನನ್ನನ್ನು ಅಫಿಶೀಯಲ್ ಆಗಿ ಕಳಿಸಿದ್ದಾರೆ… ಅಧಿಕೃತವಾಗಿ ಇವತ್ತಿಂದಲೇ ನೀವು ಕನ್ನಡ ವಿಶ್ವವಿದ್ಯಾಲಯದ ನೌಕರ ಎಂದು ತಿಳಿಯಿರಿ… ನಾಳೆ ಹಂಪಿಯಲ್ಲಿ ಕಂಡು ಒಟ್ಟಾಗಿ ಕಂಬಾರರ ಛೇಂಬರಿಗೆ ಹೋಗುವ’ ಎಂದು ಒಂದಿಷ್ಟು ಹಣವ ನನ್ನ ಜೇಬಿಗೆ ಹಾಕಿದರು. ಮರು ಮಾತಾಡಲಿಲ್ಲ. ನಾಗವಾರರ ಮನೆಗೆ ಬಂದೆ. ‘ಕಾಲ ಹಿಂದೆ ಮುಂದೆ ಆಗುತ್ತೆ… ತಡವಾಗುತ್ತೆ… ಅಯೋಗ್ಯರಿಗೆ ಹೇಗೊ ಎಲ್ಲ ಸಲೀಸಾಗಿ ತಕ್ಷಣ ಸಿಕ್ಕಿಬಿಟ್ಟಿರುತ್ತದೆ. ನೀನು ಇಷ್ಟು ತಡವಾಗಿ ನೌಕರಿಗೆ ಸೇರಬೇಕಾಯ್ತಲ್ಲಾ’ ಎಂದು ವಿಷಾದ ಪಟ್ಟರು.
ಬಂದೆ ಹಂಪಿಗೆ. ಬೀಚನಹಳ್ಳಿ ಬರುವುದು ತಡವಾಗಿತ್ತು. ಕಂಬಾರರ ಛೇಂಬರಿಗೆ ಪ್ರವೇಶಿಸಿದೆ. ‘ಬಾ… ಬಾ… ಅರ್ಜೆಂಟಾಗಿ ನಾನು ಬೆಂಗಳೂರಿಗೆ ಹೋಗಬೇಕಿತ್ತು. ನೀನು ಬಂದಿರುವುದು ತಿಳೀತು. ಕೂರು. ಆರಾಮಿದ್ದೀಯಾ… ಸಂಸಾರ… ಅಯ್ಯಯ್ಯಯ್ಯೊ…. ಎಷ್ಟು ಜನವಯ್ಯ ನಿನಗೆ ಕೆಲಸ ಕೊಡಿ ಎಂದು ಹಕ್ಕೊತ್ತಾಯ ಮಾಡೋರು. ನಾನೆಂದೂ ಕಂಡಿಲ್ಲಪ್ಪಾ ಇಷ್ಟೊಂದು ಇನ್‌ಫ್ಲುಯೆನ್ಷಿಯಲ್ ಫೆಲೋನಾ… ಆಯ್ತಯ್ಯಾ… ನಾನು ಮೊದಲು ಬನ್ರೀ ನಮ್ಮಲ್ಲಿ ಸೇರ್ಕೊಳಿ ಅಂತಾ ಕರೆದಿದ್ದೆ… ಬೆಂಗಳೂರು ಕಛೇರಿಲಿ… ನೆನಪಿದೆಯಾ… ತಡ ಆಯ್ತು. ಏನೇನೊ ಆಯ್ತು ಹೋಯ್ತು… ಮತ್ತೆ ಕಾಲಾವಕಾಶ ಬಂತು. ನೀನು ಆಗ ಬಂದಿದ್ರೆ ಈಗ ಇಲ್ಲಿ ಪ್ರಾಧ್ಯಾಪಕ ಆಗ್ತಿದ್ದೆ. ಎಲ್ಲವನ್ನೂ ಎಲ್ಲರಿಗೂ ಬಡಿಸಿಬಿಟ್ಟಿರುವೆ. ಆಗ್ಲೆ ಬಂದಿದ್ರೆ ಮೊದಲೇ ನಿನ್ನ ತಟ್ಟೆಗೆ ಬೇಕಾದ್ದೆಲ್ಲ ಬಡಿಸ್ತಿದ್ದೆ. ಕೊನೆಗೆ ಬಂದಿದ್ದೀಯೆ. ಖಾಲಿ ಖಾಲಿ ಪಾತ್ರೆಗಳೀಗ. ತಳದಲ್ಲಿ ಉಳಿದಿದ್ದನ್ನೆ ತಂದು ಬಡಿಸುವೆ… ಹೋಗು ಯಾವ ವಿಭಾಗದಲ್ಲಿ ಕೆಲಸ ಮಾಡಲು ಆಸಕ್ತಿ ಇದೆಯೊ ಅಲ್ಲಿ ಹೋಗು ಕೂರು. ಅಲ್ಲಿಗೇ ನಿನಗೆ ಆದೇಶ ಪತ್ರ ಕಳಿಸುವೆ. ನೀನು ಇವತ್ತಿನಿಂದ ಇಲ್ಲಿ ಒಬ್ಬ ಅಧ್ಯಾಪಕ ಎಂದು ತಿಳಿ… ನೀನು ಯಾವ ಮಹಾ ಸಂಶೋಧನೆಯನ್ನೂ ಮಾಡಬೇಕಾದ್ದಿಲ್ಲ. ಇಲ್ಲಿ ವರ್ಷಕ್ಕೆ ಎರಡೇ ಎರಡು ಒಳ್ಳೆಯ ಕಥೆಗಳ ಬರೆದು ಪ್ರಕಟಿಸು. ಅಷ್ಟೇ ಸಾಕು. ಅದು ಕನ್ನಡ ವಿಶ್ವವಿದ್ಯಾಲಯ ತನ್ನ ನೌಕರನ ಹೆಮ್ಮೆಯ ಕೆಲಸ ಎಂದು ಪರಿಗಣಿಸುತ್ತದೆ.’ ಎಂದು ಚಹಾ ಕುಡಿಸಿದರು. ನಿರಾಳನಾಗಿದ್ದೆ. ಯಾವ ವಿಭಾಗ ಇಷ್ಟ ಎಂದು ಮತ್ತೆ ಕೇಳಿದರು. ಪುರುಷೋತ್ತಮ ಬಿಳಿಮಲೆ ಜಾನಪದ ವಿಭಾಗದ ಮುಖ್ಯಸ್ಥರಾಗಿದ್ದರು. ಆಗ ಅವರಿಗೂ ಕಂಬಾರರಿಗೂ ಸಂಬಂಧ ತುಂಡಾಗಿತ್ತು. ಅದು ಗೊತ್ತಿರಲಿಲ್ಲ. ಬಿಳಿಮಲೆ ಅವರ ಜೊತೆ ಕೆಲಸ ಮಾಡುವೆ ಎಂದೆ.
ಹಾsss ಎಂದು ಕಂಬಾರರು ಗಾಬರಿ ಆದರು. ನಿನ್ನ ಪಾಡಿಗೆ ಒಬ್ಬನೇ ಕೆಲಸ ಮಾಡು. ಲೇಖಕನ ಒಳಗೇ ಒಂದು ದೊಡ್ಡ ಲೋಕ ಇದೆಯಲ್ಲವೇ… ಅದರ ನಿಷ್ಠೆಯಲ್ಲಿ ಅದರ ಜೊತೆ ಸೃಜನಶೀಲವಾಗಿರು’ ಎಂದು ಎಚ್ಚರಿಸಿದರು. ಹಾಗೇ ಮಾಡಿದೆ. ಜಾನಪದ ವಿಭಾಗದಲ್ಲಿ ಹೋಗಿ ಕುಳಿತೆ. ಯಾರೂ ನನಗೆ ಅಪರಿಚಿತರಲ್ಲ. ಗೊತ್ತಿದ್ದವರೇ… ಗೆಳೆಯರು ಕಾಲ ಕಳೆದಂತೆಲ್ಲ ಬೇರೆ ಆಗುತ್ತಾರೆ ಎಂಬುದು ನನ್ನ ವಿಷಯದಲ್ಲಿ ಬಹಳ ಇತ್ತು. ಯಾವಲ್ಲಿ ಹೋಗಿ ಕೆಲಸ ಮಾಡಬಾರದು ಎಂದು ನಿರ್ಧರಿಸಿದ್ದೆನೊ ಅಲ್ಲಿಗೇ ಬಂದು; ಬೇಡವಾಗಿದ್ದವರ ಜೊತೆಯೇ ಬದುಕು ಕಟ್ಟಿಕೊಳ್ಳಬೇಕಾಗಿತ್ತು. ಬೇಕು ಎನಿಸಿದ್ದು ಸಿಕ್ಕಿರುವುದೇ ಇಲ್ಲ. ಆಯ್ಕೆ ಯಾರ ಕೈಯಲ್ಲಿದೆ? ನನ್ನನ್ನು ಮೀಸಲಾತಿ ಪಟ್ಟಿಯಲ್ಲಿ ಆಯ್ಕೆ ಮಾಡಿದ್ದರು. ಜಾತಿಯ ಪ್ರಮಾಣ ಪತ್ರವನ್ನೆ ಕೊಟ್ಟಿರಲಿಲ್ಲ. ಅದರ ಅವಶ್ಯಕತೆ ನನಗೆ ಇರಲಿಲ್ಲ. ಯಾರನ್ನು ಕೇಳಬೇಕು ಎನಿಸಿತು. ಹಾಗೆ ಕೇಳಿದರೆ ಅನುಮಾನ ಪಡುವ ಮಂದಿ. ಹಿಂದೆ ಆಗಿದ್ದೆಲ್ಲ ನೆನಪಾಯಿತು. ಅಂದರೆ ಅಷ್ಟೆಲ್ಲ ಮೆರಿಟ್ ಇತ್ತಲ್ಲಾ… ಅದೆಲ್ಲ ಏನು ಮತ್ತೆ? ನಾನು ಜನರಲ್ ಮೆರಿಟ್ಟಲ್ಲಿ ಆಯ್ಕೆ ಆಗಿರುವೆ… ನಿಮ್ಮಂತೆ ಮೀಸಲಾತಿಯಿಂದ ಬಂದವನಲ್ಲ ಎಂದಿದ್ದನು ಒಬ್ಬ ಹೊಸದರ ದಿನಗಳಲ್ಲೇ… ಆ ಮಹಾ ಮೂರ್ಖನಿಗೆ ಅಭಿನಂದನೆ ಹೇಳಿದ್ದೆ. ಹದಿನೈದು ದಿನ ಆಗಿತ್ತು. ಹೆಂಡತಿಯ ಮುಖ ನೋಡಲು ತುಡಿಯುತ್ತಿತ್ತು. ಸಂಬಳವ ಪಡೆದಿದ್ದೆ. ಅವಳ ಮುಂದೆ ಕೂತು ಕೈಗೆ ಆ ಹಣವ ಇಟ್ಟೆ. ನನ್ನ ಹೆಂಡತಿ ಎಂದೂ ಹಣದ ಆಸೆಯವಳೇ ಅಲ್ಲ. ಜೋಪಾನ ಎತ್ತಿಡಿ ಬೇಕಾಗುತ್ತದೆ ಎಂದಳು. ಅತ್ಯಂತ ಸರಳವಾದವಳು. ಬಡತನವೆ ಸಿರಿತನ ಎಂದು ನಂಬಿದ್ದವಳು.
ತಂದೆಯಾದವನಿಗೆ ಇರಬೇಕಾದ ಯಾವ ಗುಣಗಳು ಅವನಲ್ಲಿ ಇರಲಿಲ್ಲ. ಪಾತಕಿ ಅವನು. ಅವನ ಶವದ ಮುಖ ನೋಡಲೂ ನನಗೆ ಇಷ್ಟ ಇಲ್ಲ. ಮಾವನ ಕರಕೊಂಡು ನೀನೇ ಹೋಗಿ ಬಾ… ಹೇಗಿದ್ರೂ ಆ ಶ್ರೀನಿವಾಸನೂ ಬಂದಿರ್ತಾನೆ… ಅವನ ಮುಸುಡಿಗೂ ಇವನ ಮೋರೆಗೂ ಹೊಂದಾಣಿಕೆ ಇದೆ. ಸರಿ ಹೋಯ್ತದೆ… ಹೋಗವ್ವ… ನಾನು ಬರೋದಿಲ್ಲ…
ಸಂಸಾರವ ಕಟ್ಟಿಕೊಂಡು ಹೊಸಪೇಟೆಗೆ ಬಂದೆ. ಎಲ್ಲರಿಗೂ ಸಡಗರ. ನನಗೊ ಖುಷಿಯೇ ಇಲ್ಲ. ಕೆಲವೇ ದಿನಗಳಲ್ಲಿ ನಿರಾಶೆ ತಿರಸ್ಕಾರ ವಿಷಾದ ಮೈದುಂಬಿದವು. ಏನು ಕಾರಣ ಎಂದು ಕೇಳಿಕೊಂಡರೆ… ಅದೇ ರಾಮಾನುಜನ್, ಮೈಕೇಲ್ ನೆನಪಾಗುತ್ತಿದ್ದರು. ಹಠಬಿಡಲಿಲ್ಲ. ಫುಲ್‌ಬ್ರೈಟ್ ಫೆಲೋಷಿಪ್ ಒಂದು ಪ್ರತಿಷ್ಠಿತವಾದ ಸಂಶೋಧನಾ ಒತ್ತಾಸೆ. ದಾರಿ ಹುಡುಕಿದೆ. ಇಂಗ್ಲೆಂಡಿನ ಆ ಫೆಲೋಷಿಪ್‌ಗೆ ಬೇಕಿದ್ದ ಅಕಾಡಮಿಕ್ ಅರ್ಹತೆಗಳೆಲ್ಲ ಧಾರಾಳವಾಗಿ ನನಗಿದ್ದವು. ‘ಅಸ್ಪೃಶ್ಯತೆ ಹಾಗೂ ವರ್ಣಭೇದ’ ಎಂಬ ವಿಷಯದ ಬಗ್ಗೆ ಅಧ್ಯಯನ ಮಾಡಲು ಪ್ರಸ್ತಾವನೆಯ ಇಂಗ್ಲೀಷಿನಲ್ಲಿ ಸಿದ್ಧಪಡಿಸಿ ಎಲ್ಲ ಒಂಬತ್ತು ಪ್ರತಿಗಳನ್ನೂ ಪರಿಶೀಲಿಸಿಕೊಂಡು ವಿಶ್ವವಿದ್ಯಾಲಯದ ಮೂಲಕ ಫಾರ್ವರ್ಡ್ ಮಾಡಿಸಲು ಆಕಾಶ ಕೈಗೆ ಎಟುಕಿತು ಎಂದು ಹೋಗಿ ಉನ್ನತ ಅಧಿಕಾರಿಗಳ ಕಂಡೆ. ಅಷ್ಟೊತ್ತಿಗೆ ಕಂಬಾರರ ಅವಧಿ ಮುಗಿದಿತ್ತು. ಸೇಮ್ ಅದೇ ಘಟಿಸಿತು. ಮೈಸೂರಲ್ಲಿ ಆ ಸಂಸ್ಥೆಯ ನಿರ್ದೇಶಕ ಹೇಗೆ ತಿರಸ್ಕರಿಸಿದ್ದನೊ; ಅದೇ ಮಾತುಗಳಲ್ಲಿ ನಿರಾಕರಿಸಿದ. ‘ಯಾಕೆ ಸಾರ್’ ಎಂದೆ. ಆ ಮಹಾತ್ಮ ಮಹಾ ವಿದ್ವಾಂಸ. ಅತಿಸೂಕ್ಷ್ಮ ಬುದ್ಧಿಜೀವಿ. ಸಾಂಸ್ಕೃತಿಕ ವಲಯದ ವಕ್ತಾರರಲ್ಲಿ ಒಬ್ಬರು. ‘ಆಗೋದಿಲ್ಲಾರೀ… ನಿಮ್ಮನ್ನು ಇಲ್ಲಿ ಕೆಲಸ ಮಾಡಲು ಅವಕಾಶ ಕೊಟ್ಟಿರೋದು… ಫುಲ್‌ಬ್ರೈಟ್ ಅಂದರೆ ಏನು ಗೊತ್ತಾ… ಅದರ ಸ್ಪೆಲ್ಲಿಂಗ್ ಹೇಳ್ರಿ ನೋಡೋಣ’ ಎಂದು ಗುರಾಯಿಸಿದರು. ನಾನು ಸಿಡಿದರೆ ಬಾಂಬಿನಂತೆಯೇ ಸಿಡಿಯಬಹುದಿತ್ತು. ಮೀರುವಂತಿರಲಿಲ್ಲ. ಮತ್ತೆ ಬೀದಿಗೆ ಬೀಳಬೇಕಾಗುತಿತ್ತು. ಪ್ರೊಬೇಷನರಿ ಪಿರಿಯಡ್ ಮುಗಿದಿರಲಿಲ್ಲ. ಆಗಲೇ ಅಲ್ಲಿ ಹೋಗಿ ತಪ್ಪಿಸಿಕೊಂಡನೇ ಎಂದು ಹಳೆಯ ಶತ್ರುಗಳು ಮತ್ತೆ ಇಲ್ಲಿಗೆ ಆ ಖ್ಯಾತೆಗಳನ್ನು ರವಾನಿಸಿದ್ದರು. ಅವನ್ನೆಲ್ಲ ಕಾರ್ಯಗತಗೊಳಿಸಲು ತುದಿಗಾಲಲ್ಲಿ ಮಂದಿ ಇಲ್ಲೂ ನಿಂತಿದ್ದರು. ಅವರೆಲ್ಲ ಒಂದು ಕಾಲಕ್ಕೆ ನನ್ನ ಜೊತೆಯೇ ಇದ್ದವರು. ತಪ್ಪು ಹುಡುಕಲು ಸದಾ ಒಂದು ತಂಡವೇ ಸಿದ್ಧವಾಗಿತ್ತು. ಛೀ; ಇಲ್ಲೂ ತರತರದ ಬೇಟೆ… ಇಲ್ಲಿ ಹೆಚ್ಚು ಕಾಲ ನಿಲ್ಲಲಾರೆ ಎಂದು ಹತಾಶನಾದೆ. ಒಂದೇ ಸಲಕ್ಕೆ ಎಲ್ಲರಿಂದ ದೂರವಾದೆ. ನನಗೆ ನೋವಾಯಿತು ಎಂದರೆ; ತಂತಾನೆ ಒಂಟಿ ಆಗುವ ಸ್ವಭಾವ ದಡಕ್ಕನೆ ಬಂದು ಅಗುತಿಕೊಳ್ಳುತಿತ್ತು.
ಹಾಗೇ ಆಯಿತು. ಕೀಳರಿಮೆಯವರೆಲ್ಲ ಮೇಲರಿಮೆಯಲ್ಲಿ ಮೀಸೆ ತಿರುವಿ ನನ್ನ ತಾಳ್ಮೆ ಪರೀಕ್ಷೆ ಮಾಡುತ್ತಿದ್ದರು. ನಾನೇನು ಕಡಿಮೆ ಇರಲಿಲ್ಲ. ಅಯೋಗ್ಯರಿಗೆ ಅಲ್ಲಲ್ಲೆ ಸ್ಪಾಪ್‌ಪೇಮೆಂಟ್ ಕೊಟ್ಟು ಲೆಕ್ಕ ಚುಕ್ತ ಮಾಡುತ್ತಿದ್ದೆ. ಅಲ್ಲೇ ದಂಡಿಸಿ ಅಲ್ಲೇ ಪಶ್ಚಾತ್ತಾಪ ಪಟ್ಟು ಹೊಡೆದಿದ್ದನ್ನು ಮರೆಯುತ್ತಿದ್ದೆ. ಆದರೆ ಅವರಂತು ಏಳೇಳು ಜನ್ಮಗಳ ತನಕ ನೆನಪಿಟ್ಟು ಕಾಯುತ್ತೇವೆ ಎಂದು ಸಂಚು ಮಾಡಲು ಮುಂದಾಗುತ್ತಲೆ ಇದ್ದರು. ಹಿಂತಿರುಗಿ ನೋಡುವುದೇ ಬೇಡ ಎನಿಸಿತ್ತು. ವಿಚಿತ್ರ ರೀತಿಯಲ್ಲಿ ಹೊಡೆದಾಡುವ ಸ್ವಭಾವ ಬಂದುಬಿಟ್ಟಿತ್ತು. ಬಾಕ್ಸರ್‌ಗಳಲ್ಲಿ ಆಗ ನನ್ನ ಕಾಲದಲ್ಲಿ ಮೈಕ್ ಟೈಸನ್ ಅಗ್ರಗಣ್ಯ. ಅವನು ಎಷ್ಟು ಸಲೀಸಾಗಿ ಎದುರಾಳಿಗಳ ಹೊಡೆದುರುಳಿಸುತ್ತಿದ್ದ ಎಂದರೆ ನಾನು ಅವನಲ್ಲೇ ಪರಕಾಯ ಪ್ರವೇಶ ಮಾಡಿದಂತಾಗುತ್ತಿತ್ತು. ಅಂತಹ ಬಲಾಢ್ಯ ಅಪ್ಪರ್ ಕಟ್, ಲೋಯರ್ ಕಟ್‌ಗಳಲ್ಲಿ ಮುಗಿಸಿಬಿಡುತ್ತಿದ್ದ. ಕೊಂಚ ನೋಡಲು ಆತ ನಿಯಾಂಡರ್‍ಥಲ್ ಮಾನವನಿಗೆ ಹೋಲಿಕೆಯಾಗುತ್ತಿದ್ದ. ಅದಿರಲಿ; ಬೌದ್ಧಿಕವಾಗಿ ಎದೆ ಉಬ್ಬಿಸಿ ಬೀಗಿದವರ ಬೂಸಾ ಬುದ್ಧಿವಂತಿಕೆ ಎಷ್ಟು ಎಂದು ಅಲ್ಲೇ ಸದೆ ಬಡಿಯುತ್ತಿದ್ದೆ. ಪಂಚ್ ಮಾಡಿದೆ ಎಂದರೆ ಅಲ್ಲೇ ಆತ ಅಪ್ಪಚ್ಚಿ ಆಗಬೇಕು; ಹಾಗೆ ಹೊಡೆಯಬೇಕು ಎಂದು ಒಂದು ರೀತಿಯಲ್ಲಿ ಬೌದ್ಧಿಕ ಗೂಂಡಾಗಿರಿಗೆ ಇಳಿದೆ. ನನ್ನ ಸುತ್ತಣ ಪರಿಸರವೇ ಹಾಗೆ ಮಾಡಿಸಿತ್ತು.
ವಿನಯ ವಿಮರ್ಶೆಗೆ ನನ್ನಲ್ಲಿ ಅವಕಾಶವೇ ಇರಲಿಲ್ಲ. ಸುಮ್ಮನೆ ಗೂಂಡಾಗಿರಿ ಅಲ್ಲಾ… ಅವರಲ್ಲಿ ಇದ್ದ ಮತೀಯ ಮೌಢ್ಯ ಜಾತಿ ನೀಚತೆಯನ್ನೆಲ್ಲ ಜಾಲಾಡಿ ಧ್ವಂಸಕ ಒರಟುತನವ ಉದ್ದೇಶ ಪೂರ್ವಕವಾಗಿ ಅಳವಡಿಸಿಕೊಂಡೆ. ಅಲ್ಲಿ ಮೈಸೂರಲ್ಲಿ ಎಲ್ಲ ಕಿರುಕುಳವ ಸಹಿಸಿಕೊಂಡಿದ್ದರಿಂದಲೇ ಎದುರಾಳಿಗಳು ಅಲ್ಲಿಂದ ನಾನು ಕಾಲುಕಿತ್ತು ರಾತ್ರೋ ರಾತ್ರಿ ಓಡಿ ಹೋಗುವಂತೆ ಆಗಿದ್ದು… ಇಲ್ಲೂ ಅದನ್ನೇ ಮಾಡುತ್ತಾರೆ. ನಾನು ವಾಪಸ್ಸು ಸರಿಯಾದ ಆಯುಧಗಳಿಂದ ಬಡಿದು ಬಿಸಾಡಬೇಕೆಂದು ಜಗತ್ತಿನ ವರ್ತಮಾನದ ಎಲ್ಲ ಅಧ್ಯಯನಗಳ ಓದಿಕೊಂಡು ದಾಳಿ ಮಾಡುತ್ತಿದ್ದೆ. ನನ್ನ ವಿಚಾರಗಳಿಗೆ ಸ್ಪಂದಿಸುತ್ತಿದ್ದವರು ವಿದ್ಯಾರ್ಥಿಗಳು ಮಾತ್ರ. ಕುಖ್ಯಾತನಾಗಿಬಿಟ್ಟೆ. ಸೃಜನಶೀಲವಾಗಿರು ಎಂದು ಕಂಬಾರರು ಹೇಳಿದ್ದಕ್ಕೆ ಬದಲಾಗಿ ಬಂಡುಕೋರನಂತಾಗಿದ್ದೆ. ಹೇಗೆ ನಡೆದುಕೊಳ್ಳುತ್ತಿರುವೆ ಎಂಬುದೇ ನನಗೆ ತಿಳಿಯುತ್ತಿರಲಿಲ್ಲ. ನಿನ್ನ ದಾಟಿ, ನೀತಿ, ಭಾಷೆ ಬದಲಿಸಿಕೊ ಎಂದು ಯಾರೂ ಕಿವಿ ಮಾತು ಹೇಳಲಿಲ್ಲ. ಆದರೆ ಆಗಾಗ ಫೋನಲ್ಲಿ ಎಚ್.ಎಸ್. ರಾಘವೇಂದ್ರರಾವ್ ನನ್ನ ಶೈಲಿಯ ವಿಚಾರ ಲಹರಿಯ ಬೆಂಬಲಿಸುತ್ತಿದ್ದರು. ಅಪ್ರಿಯ ಆ ಮಾದರಿ ಮೂಲತಃ ನನಗೆ ಬಂದದ್ದು ಲಂಕೇಶರಿಂದ. ಅದನ್ನು ಇನ್ನಷ್ಟು ತೀವ್ರತೆಯಲ್ಲಿ ಅಂಬೇಡ್ಕರ್ ವಿಚಾರಗಳ ಬೆರೆಸಿಕೊಂಡು ಪಂಚ್ ಮಾಡುತ್ತಿದ್ದೆ.
ಗೊತ್ತಿತ್ತು; ಇದು ಸಭ್ಯ ಕ್ರಮ ಅಲ್ಲ ಎಂದು. ನನಗೆ ಅನ್ಯ ಮಾರ್ಗ ಇರಲಿಲ್ಲ. ಮಿತ್ರರಂತೆ ನಟಿಸಿ ಶತ್ರುವಾಗಿದ್ದವರೇ ಹೆಚ್ಚು. ವಿದ್ವತ್ ಲೋಕದ ವಕ್ರತೆಯೆ ಅಂತಾದ್ದು. ಬೀದಿಯಲ್ಲಿ ಬಿದ್ದಿದ್ದಾಗ ಅಯ್ಯೋ ಎಂದು ಅವರ ಬಗ್ಗೆ ಕ್ರಾಂತಿಕಾರಿ ಮಾತಾಡಿ ಮಾನವೀಯತೆಯ ನಾಟಕ ಆಡುವುದು… ಹಾಗೆಯೇ ಬಿದ್ದವನು ಎದ್ದು ಸ್ವಾಭಿಮಾನದಿಂದ ತಲೆ ಎತ್ತಿದ ಕೂಡಲೆ ಅವನ ತಲೆದಂಡಕ್ಕೆ ಬೌದ್ಧಿಕ ಮಾನದಂಡಗಳ ಹುಡುಕಿ ಹೇಡಿಗಳಂತೆ ಮರೆಯಲ್ಲಿ ಬಾಣ ಬಿಡುವುದು…. ಯಾರಲ್ಲಿ ಹೇಳಿಕೊಳ್ಳಲಿ? ನನಗೇ ಗೊತ್ತಿಲ್ಲದೆ ಆ ಎಲ್ಲ ಪ್ರಕ್ಷುಬ್ಧತೆಗಳೂ ಬರಹದ ಹದ ಕೆಡಿಸುತ್ತಿದ್ದವು.
ಸಂಘರ್ಷವಿಲ್ಲದ ದಿನಗಳೇ ಇಲ್ಲ. ಎಲ್ಲ ಮುಸುಕಿನ ಗುದ್ದಾಟ. ಯಾರು ಹೊಡೆದರು, ಹೊಡೆಸಿದರು ಎಂಬುದೇ ಗೊತ್ತಾಗುತ್ತಿರಲಿಲ್ಲ. ನನ್ನನ್ನು ತುಂಡು ಮಾಡಿ ಬಿಸಾಡಲು ಕಾಯುತ್ತಲೇ ಇದ್ದರು. ನಾನೇನೂ ವೈಯಕ್ತಿಕವಾಗಿ ಅನ್ಯಾಯ ಮಾಡಿದವನಲ್ಲ. ಸಾಮಾಜಿಕ ನಡತೆಯಲ್ಲಿ ಸೌಜನ್ಯವನ್ನು ಕಾಯ್ದುಕೊಳ್ಳಲಿಲ್ಲ. ವಿಶ್ವಾಮಿತ್ರ ಸಿಟ್ಟು. ವಿನಾಯಿತಿಯನ್ನೆ ನೀಡುತ್ತಿರಲಿಲ್ಲ. ಪ್ರತಿ ರಾತ್ರಿ ಮಲಗುವಾಗಲೂ ನನ್ನನ್ನು ನಾನೇ ಅಳತೆ ಮಾಡಿಕೊಳ್ಳುತ್ತಿದ್ದೆ. ಇದೆಲ್ಲ ಸರಿ ಇಲ್ಲ… ಎಲ್ಲರಂತೆ ಇದ್ದು ಬಿಡುವ. ಅವರವರ ದಡ್ಡತನಕ್ಕೆ ನಾನ್ಯಾಕೆ ಪ್ರತಿಕ್ರಿಯಿಸಬೇಕೂ… ಬಹಿರಂಗದಲ್ಲಿ ಯಾರ ಬಗ್ಗೆಯೂ ಟೀಕಿಸಬಾರದು ಎಂದುಕೊಂಡರೂ ಆ ಸಂದರ್ಭ ಬಂತು ಎಂದರೆ ಸ್ವಯಂ ನಿಯಂತ್ರಣ ಜಾರಿ ಹೋಗುತಿತ್ತು. ನಾನು ನಿರ್ಲಕ್ಷ್ಯ ಮಾಡಿದಂತೆಯೆ ಅವರೂ ನನ್ನನ್ನು ನಿರಾಕರಿಸಿದರು. ನಾಟಕ ಆಡಲು ಬರುತ್ತಿರಲಿಲ್ಲ. ಅವರದೆಲ್ಲ ಪತ್ತೇದಾರಿ ನಿಗೂಢ ನಾಟಕ. ನಾನು ಹೇಳಿದ್ದಕ್ಕೆ ಹತ್ತು ಬಣ್ಣ ಕಟ್ಟಿ ಹೇಳುತ್ತಿದ್ದರು. ನನ್ನ ಬಗ್ಗೆ ಗಾಸಿಪ್ ಮಾಡದೆ ಇದ್ದರೆ ಅವರಿಗೆ ನಿದ್ದೆಯೇ ಬರುತ್ತಿರಲಿಲ್ಲ.
ಬಚಾವಾದೆ ಎಂದುಕೊಂಡರೂ ಯಾವಾಗ ಯಾವ ಸಂಚಿನಿಂದ ನನ್ನನ್ನು ಕೆಲಸದಿಂದ ಕಿತ್ತು ಬಿಸಾಡುವರೊ ಎಂಬ ಆತಂಕ ಇದ್ದೇ ಇತ್ತು. ಅದನ್ನು ಮರೆಯಲೆಂದು ಬೌದ್ಧಿಕ ಬರಹ ಓದು ಎರಡನ್ನೂ ಚಟ ಮಾಡಿಕೊಂಡೆ. ಗುಣಮಟ್ಟದ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ನೋವ ಮರೆಯಬೇಕು ಕುಡಿಯಬೇಕು ಎಂದು ಒಂದು ಕಾಲಕ್ಕೆ ಹೇಳುತ್ತಿದ್ದೆ. ಬದಲಾಗಿ ಈಗ ಅದೇ ನೋವು ಅಪಮಾನಗಳಿಗೆ ಬರಹ ಒಂದೇ ಮದ್ದು ಎಂದು ನನಗೆ ಆಳವಾಗಿ ತಿಳಿಯದೇ ಇರುವ ಸಂಗತಿಗಳನೆಲ್ಲ ಮುಟ್ಟಿ ಬರೆದೆ. ಅಂತಹ ಬರಹಗಳೆಲ್ಲ ಆ ಹೊತ್ತಿನ ಧಾವಂತದ ಉಸಿರಾಟ ಮಾತ್ರ ಆಗಿತ್ತು. ನನ್ನ ಅಸ್ತಿತ್ವ ಅದರಲ್ಲಿ ಅಡಗಿತ್ತು. ಯಾವ ಕಾರಣಕ್ಕೂ ಯಾವುದರ ಬಗ್ಗೆಯೂ ಆರಾಧನಾ ಭಾವವೇ ಇರಲಿಲ್ಲ. ಭಗ್ನತೆಯೆ ನನ್ನ ಸಾಕ್ಷಾತ್ಕಾರ ಎಂದು ಹೇಳಿಕೊಂಡಿದ್ದೆ. ಉಪಕರಿಸಿದ್ದವರಿಗೆ ಒಂದು ಪತ್ರವನ್ನೂ ಬರೆದಿರಲಿಲ್ಲ. ಹಲವರು ‘ನೋಡಿದೆಯಾ ಇವನಾ’ ಎಂದು ಬೇಸರ ಮಾಡಿಕೊಂಡಿದ್ದರು. ಕೃತಜ್ಞತೆ ಇಲ್ಲದವನು ಎಂದು ಬೆನ್ನ ಹಿಂದೆ ಮಾತಾಡಿದ್ದರು. ನನ್ನ ಬರಹದ ದಾಳಿಕೋರತನವ ಕಂಡಿದ್ದವರು ಕೊನೆಗೆ ನಾನು ಏನನ್ನೇ ಬರೆದರೂ ಓದುವುದು ಬೇಡ ಎಂದು ಬಹಿಷ್ಕರಿಸಿದರು. ಅಷ್ಟೇ ಜನ ಕದ್ದು ಓದಿ ಓದಿ ಒಳಗೇ ಕುದಿಯುತ್ತಿದ್ದರು. ಅನ್‌ಪ್ರೆಡಿಕ್ಟಬಲ್ ಪರ್ಸನಾಲಿಟಿ ನಿನ್ನದು ಎಂದು ಹಿರಿಯರು ಏನೂ ಹೇಳಲಾಗದೆ ಅಂತರ ಕಾಯ್ದುಕೊಂಡರು. ನಿಜ. ಯಾವ ಕ್ಷಣದಲ್ಲಿ ನಾನು ಹೇಗಿರುತ್ತೇನೆ ಎಂಬುದು ನನಗೂ ಗೊತ್ತಾಗುತ್ತಿರಲಿಲ್ಲ. ಆ ಸೆಮಿನಾರಿಗೆ ಹೋಗಿ ಸ್ನೇಹಿತರ ಮಾತ ಆಲಿಸಿ ತ್ಯಾಂಕ್ಸ್ ಹೇಳಿ ಬರೋಣ ಎಂದು ಮುಂಗಡ ಎಚ್ಚರಿಕೆ ತೆಗೆದುಕೊಂಡು ಹೋಗಿದ್ದರೂ; ಅಲ್ಲಿ ಇನ್ನೇನೊ ಆಗಿ ವಿರುದ್ಧವಾಗಿ ಮಾತಾಡಿ ನೋಯಿಸಿ ಬಿಡುತ್ತಿದ್ದೆ. ಬಿರುಕುಗಳೇ ನನ್ನ ದಾರಿಯಲ್ಲಿ ಹೆಜ್ಜೆ ಹೆಜ್ಜೆಗೂ ಮೂಡುತ್ತಿದ್ದವು.
ಏನೋ ನೆರಳು ಬಂತು. ಎದುರೇ ನಿಂತಂತಿತ್ತು. ಆ ಮರದ ಕೊಂಬೆಯ ನೆರಳೇ… ಹೋಲಿಕೆ ಮಾಡಿ ಅಳೆದೆ. ಇಲ್ಲವಲ್ಲಾ… ಈ ಬಳ್ಳಾರಿ ಬಿಸಿಲಿಗೆ ಬಂದು ಬಿಸಿಲು ನೆರಳು ಮರೀಚಿಕೆಗಳೇ ವಿಚಿತ್ರ ಆಗಿಬಿಟ್ಟಿವೆ ಎನಿಸಿತು. ಅಬ್ಬರಿಸುತ್ತಿತ್ತು ಜೂನ್ ಬಿಸಿಲು. ನಿಂತು ಮಾತಾಡಿಸುವಂತೆ ಆ ನೆರಳು ವರ್ತಿಸಿತು. ಅವತ್ತು ಅಪರೂಪಕ್ಕೆ ಕುಡಿದಿದ್ದೆ. ಬಿಟ್ಟೇ ಬಿಟ್ಟಿದ್ದೆ. ಏನೊ ಹಳೆಯ ಜಾಢ್ಯ ಎಳೆದಿತ್ತು. ತಾಯಿ ನೆನಪಾದಳು. ತಾಯ ಚಿತೆ ತಲೆಯಲ್ಲಿ ಉರಿಯತೊಡಗಿತು. ಬೆವೆತು ಹರಿಯುತ್ತಿದ್ದೆ. ಧಾರಾಕಾರ ಕೆಂಡದ ಬಿಸಿಲು ಉರಿಯುತ್ತಿತ್ತು. ಎಷ್ಟು ಸಲ ಈ ಮುಷ್ಠಿಕಾಳಗ… ಕಿಬ್ಬರಿಯ ಮೂಳೆಗಳೆಲ್ಲ ಸಡಿಲವಾಗಿವೆ… ಬೆನ್ನಮೂಳೆ ಮುರಿದಂತಿದೆ… ಕುತ್ತಿಗೆ ಒಂದೇ ಸಮನೆ ನೋವಿನ ಉರುಳು ಹೆಣೆದು ಕಟ್ಟಿ ತೂಗು ಹಾಕಿ ಎಳೆದಂತಿದೆಯಲ್ಲಾ… ಏನಿದೀ ವ್ಯರ್ಥ ಬಾಳುವೆ… ಸಂಸಾರದಲ್ಲಿ ನಾನು ಸುಖಿಯೇ… ಏನನ್ನೂ ಹೆಂಡತಿಗೆ ಹೇಳುವುದೇ ಇಲ್ಲ. ಯಾಕೆ ಇಷ್ಟು ಮೌನ… ನೀನು ನಗೋದನ್ನೇ ನೋಡಿಲ್ಲವಲ್ಲಾ ಎಂಬಂತೆ ಹತಾಶೆ, ಭಯ, ನಿರೀಕ್ಷೆಯ ಕಣ್ಣುಗಳ ಹೆಂಡತಿ ನನ್ನತ್ತ ಬೀರುತ್ತಿದ್ದಳು. ಆಗಲೂ ನನ್ನ ಕಣ್ಣ ಒಳಗೆ ನನ್ನೊಳಗಿನ ನೋವು ಕಾಣಿಸಿಬಿಡಬಹುದೇನೊ ಎಂದು ದೃಷ್ಟಿಯ ಅತ್ತ ಹೊರಳಿಸಿ ಆಯಾಸವಾಗುತ್ತಿದೆ ಎಂದು ಕಣ್ಣುಗಳ ಮುಚ್ಚಿ ಉಜ್ಜಿಕೊಂಡು ಫಿಲಸಾಫಿಕಲ್ ವಿಚಾರಗಳತ್ತ ಉಪಾಯದಲ್ಲಿ ಸೆಳೆದೊಯ್ದು ಅದನ್ನೆ ಒಂದು ಪ್ರಸಂಗವನ್ನಾಗಿ ಪರಿವರ್ತಿಸಿ ಯಾವುದಾವುದೊ ಲೋಕಕ್ಕೆ ಅವಳನ್ನು ಕರೆದೊಯ್ಯುತ್ತಿದ್ದೆ.
ಬೇಕಾದ್ದೆಲ್ಲವನ್ನು ತರಿಸಿಕೊಂಡು ಕೊಡಬಹುದಿತ್ತು… ಅವಳನ್ನು ಈಗಲೂ ನಾನು ಇಡೀಯಾಗಿ ಅರ್ಥಮಾಡಿಕೊಂಡಿಲ್ಲ. ಬಹಳ ಕಾಲದ ತನಕ ಕರಿಮಣಿ ಸರದಲ್ಲೇ ಇದ್ದಳು. ಚಿನ್ನದ ಒಡವೆಗಳೆಂದರೆ ಅರ್ಥಹೀನ ಎನ್ನುತ್ತಿದ್ದಳು. ಮೆರೆದವಳಲ್ಲ. ನಾಲ್ಕು ಜನರ ಜೊತೆ ಬೆರೆತವಳಲ್ಲ. ಯಾವ ಸ್ನೇಹಿತೆಯರೂ ಇಲ್ಲ. ಗಂಡ ಮಕ್ಕಳ ಬಿಟ್ಟರೆ ಪ್ರಪಂಚವೆ ಇಲ್ಲ. ಬುದ್ಧಿಜೀವಿಗಳ ಮಡದಿಯರು ಅದಾಗಲೇ ಹೈಟೆಕ್ ಆಗಿ ನನ್ನ ಹೆಂಡತಿಯ ಹಳ್ಳಿಗಮಾರ್ ಎಂದು ಹಂಗಿಸಿ ನಗುತ್ತಿದ್ದರು. ನನ್ನೆಲ್ಲ ಸಂಕಟಗಳ ಆಲಿಸಿ ಅತ್ತುಬಿಡುವಂತೆ ಏನಾಯ್ತು ಹೇಳಿ ಎಂದು ಕೈ ಹಿಡಿದುಕೊಳ್ಳುತ್ತಿದ್ದಳು. ನನಗೆ ಏನೇ ಕಷ್ಟ…. ನನ್ನನ್ನು ಯಾರೂ ಮುಟ್ಟಲಾರರು… ನಾನು ಅಸ್ಪೃಶ್ಯ ಅಲ್ಲವೇ… ಚಿಂತೆ ಬೇಡ ಎಂದು ಮರೆಸಿಬಿಡುತ್ತಿದ್ದೆ.
ಈ ಹೆಣಗಾಟಗಳಲ್ಲೆ ಮತ್ತೆ ಹೆಂಡತಿ ಗರ್ಭಿಣಿ ಆಗಿದ್ದಳು. ಹೊಟ್ಟೆಯ ಮೇಲೆ ಕೈಯಾಡಿಸಿದೆ. ಮಗು ಗರ್ಭದಲ್ಲಿ ಆಡುತ್ತಿರಲೇ ಇಲ್ಲ. ‘ಗಂಡು ಕೂಸುಗಳು ಮಬ್ಬಾಗಿ ತೆಪ್ಪಗೆ ಹೊಟ್ಟೆಲಿ ಇರ್ತಾವಂತೆ… ಹೊರಕ್ಕೆ ಬಂದ ಮೇಲೆಯೆ ಮೀಸೆ ಮೇಲೆ ಕೈಯಾಡಿಸಿ ಅಬ್ಬರಿಸುತ್ತವಂತೆ. ಈ ಸಲ ಗಂಡು ಮಗು ಆಗಬಹುದು… ಅಲ್ಲವೇ’ ಎಂದು ವಿಶ್ವಾಸದಲ್ಲಿ ಕೇಳಿದ್ದಳು. ನನ್ನ ಬಾಯಿಂದ ಮಾತೇ ಹೊರಡಲಿಲ್ಲ. ‘ಹೇಳ್ರೀ… ಎಂತದಾಗುತ್ತೆ ಅಂತಾ’ ಎಂದು ಎಳೆದು ಕಾಡಿದಳು. ಗೊತ್ತಿಲ್ಲ ಕಣೆ ಎಂದಿದ್ದೆ. ತುಂಬುಗರ್ಭಿಣಿಯ ಕರೆದುಕೊಂಡು ಅಕ್ಕನ ಮನೆಗೆ ಹೋದೆ. ಮಂಡ್ಯದ ನರ್ಸಿಂಗ್ ಹೋಂ ಒಂದರಲ್ಲಿ ಸಿಸೇರಿಯನ್ ಆಯಿತು. ಅನುಕೂಲವಾಗಿದ್ದೆ. ಯಾರ ಸಹಾಯವು ಬೇಕಿರಲಿಲ್ಲ. ಆಗ ಕುಡಿಯುವುದ ಬಿಟ್ಟಿದ್ದೆ. ಮತ್ತದೇ ಹೆಣ್ಣು ಮಗು ಹುಟ್ಟಿತ್ತು. ಹೆಂಡತಿಗೆ ಬಹಳ ನಿರಾಸೆಯಾಗಿತ್ತು. ಮಗುವಿನ ಮುಖವ ನೋಡಿದೆ. ಒಂದು ಕ್ಷಣ ಮನಸ್ಸು ಇಸ್ಸೀ ಎನಿಸಿತು. ಆ ಮುದ್ದಾದ ಮಗುವಿನ ಕಣ್ಣುಗಳು ಆ ನಮ್ಮಪ್ಪನ ಕಣ್ಣುಗಳಂತೆ ಕಂಡವು. ಬಾಯಿಗೆ ಏನೂ ಬರಲಿಲ್ಲ. ಬೇಜಾರೇನಪ್ಪಾ ಎಂದು ಅಕ್ಕ ಕೇಳಿದಳು. ‘ಸಾಧ್ಯವೇ ಇಲ್ಲಾ… ಇನ್ನೂ ಹತ್ತು ಜನ್ಮ ಎತ್ತಿ ಬಂದರೂ ಎಲ್ಲ ಜನ್ಮದಲ್ಲೂ ನನಗೆ ಹೆಣ್ಣು ಮಕ್ಕಳೇ ಹುಟ್ಟಲಿ’ ಎಂದೆ. ಹೆಂಡತಿಯ ತಲೆ ಸವರಿದೆ. ಅನುಮಾನ ಇತ್ತು. ನನಗೆ ಗಂಡು ಮಕ್ಕಳು ಆಗುವುದಿಲ್ಲ ಎಂದನಿಸಿತ್ತು. ಮತ್ತೆ ಹಸುಗೂಸ ದಿಟ್ಟಿಸಿದೆ. ನನ್ನ ಅಕ್ಕನ ರೂಪ ಪ್ರತಿಫಲಿಸಿತು. ಸರಿಬಿಡು ಮತ್ತೇ… ಜೀನ್ಸ್ ಎಲ್ಲಿ ಹೋಗುತ್ತೆ; ಹೇಗೊ ವಂಶವಾಹಿ ರೂಪ ಸಾಗಿ ಬಂದಿರುತ್ತದೆ… ನನ್ನ ಅಪ್ಪನ ರೂಪ ಒಂದಿಷ್ಟು ನನ್ನ ಅಕ್ಕನಲ್ಲಿ ಇದೆಯಲ್ಲಾ… ಅದು ಎಲ್ಲೊ ನನ್ನ ಮಗಳಿಗೂ ತುಳುಕಿ ಬಂದಿದೆ ಎಂದು ಸುಮ್ಮನಾದೆ.
ಹಳ್ಳಿಗೆ ಕರೆದೊಯ್ದು ಬಿಟ್ಟು ಬಿಸಿಲನಾಡಿಗೆ ಹಿಂತಿರುಗಿದೆ. ಒಂದೇ ತಿಂಗಳಲ್ಲಿ ವಿಪರೀತ ಬೇಧಿ ಆಗಿ ಒಂದು ತಿಂಗಳ ಮಗು ಸಾವಿನ ಕಿರುಬೆರಳ ಹಿಡಿದುಕೊಂಡಿತ್ತು. ಸಾವು ಸಲೀಸಾಗಿ ಎತ್ತಿಕೊಂಡು ಹಾರಿಬಿಡುತ್ತಿತ್ತು. ಮಂಡ್ಯದ ಅದೇ ನರ್ಸಿಂಗ್ ಹೋಂಗೆ ಹೋಗಿ ವೈದ್ಯರಾದ ಜಗದೀಶ್ ಅವರನ್ನು ಕಂಡಿದ್ದರು. ನಮ್ಮ ಸೀಮೆಯ ಖ್ಯಾತ ಮಕ್ಕಳ ವೈದ್ಯರಾಗಿದ್ದರು. ಅವರ ಮಡದಿ ಡಾ.ಅನುಪಮ ಅವರು ಕೂಡ ವೈದ್ಯರು. ಅಪ್ಪಟ ಮಂಡ್ಯ ಸೀಮೆಯ ಒಕ್ಕಲು ಮನೆತನದ ಉದಾರ ಮಾನವತಾ ಸುಂದರಿ. ಗಂಡ ಹೆಂಡಿರಿಬ್ಬರು ಆ ಕೂಡಲೆ ಬೆಂಗಳೂರಿನ ಸುಸಜ್ಜಿತ ಆಸ್ಪತ್ರೆಗೆ ದಾಖಲಿಸಿ ಮಗು ಬದುಕುವಂತೆ ಮಾಡಿದ್ದರು. ಡೀ ಹೈಡ್ರೇಶನ್‌ನಿಂದಾಗಿ ನನ್ನ ಎರಡನೇ ಮಗು ಅಕಸ್ಮಾತ್ ಮಾಂತ್ರಿಕವಾಗಿ ಬದುಕಿ ಉಳಿದಿತ್ತು. ಈ ಹಳ್ಳಿಯಲ್ಲಿ ನನ್ನ ಕೂಸ ಬಿಟ್ಟರೆ ಹೀಗೇ ಆಗೋದು ಎಂದು ಹಸಿ ಬಾಣಂತಿಯ ಕಟ್ಟಿಕೊಂಡು ಹೊಸಪೇಟೆಗೆ ಬಂದಿದ್ದೆ. ಮಗುವಿನ ಎಳೆ ಕರುಳುಗಳೆಲ್ಲ ನಂಜಾಗಿ ಆಹಾರವೇ ಸೇರುತ್ತಿರಲಿಲ್ಲ. ಹಾಲು ಕುಡಿಸಬೇಡಿ ಎಂದರು… ಆ ಕಷ್ಟವು ನನ್ನ ಹೆಂಡತಿಗೆ ಮಾತ್ರ ಗೊತ್ತು.
ನರಳುತ್ತಲೇ ಹೇಗೊ ದ್ರವ ಆಹಾರದಲ್ಲಿ ಮಗು ಬದುಕಿ ಉಳಿಯಿತು. ನನಗದೇ ಚಿಂತೆಯಾಗಿತ್ತು. ವಿಶ್ವವಿದ್ಯಾಲಯದ ಯಾವ ಕಿರುಕುಳಗಳೂ ನೆನಪಿಗೆ ಬರುತ್ತಿರಲಿಲ್ಲ. ಈ ಮಗು ಉಳಿಯಲಾರದು… ಇದನ್ನು ಏನು ಮಾಡುವುದು ಎಂದು ಹೆಂಡತಿ ಕಣ್ಣೀರಿಲ್ಲದೆ ದಿನ ಕಳೆಯುತ್ತಿರಲಿಲ್ಲ. ಹಗಲು ರಾತ್ರಿ ಕೂಸು ಹೊಟ್ಟೆಯ ಹುಣ್ಣುಗಳಿಂದ ಬರೀ ಅಳುಅಳುವಿನಲ್ಲೇ ಕೊಂಚ ನಿದ್ದೆಗೆ ಜಾರಿ ಮತ್ತೆ ಎಚ್ಚರವಾಗಿ ಅರಚುತಿತ್ತು. ಯಾರಿಗಾದರೂ ಈ ಮಗು ಇಲ್ಲದವರಿಗೆ ಈ ಮಗುವ ಕೊಟ್ಟುಬಿಡೋಣವೇ ಎಂದು ಹೆಂಡತಿ ಕಠಿಣವಾಗಿ ಕೇಳಿದಳು. ಅವಳ ನೋವು ಅಷ್ಟಿತ್ತು. ‘ತಾಳು; ಇನ್ನು ಒಂದು ತಿಂಗಳು ನೋಡುವ’ ಎಂದು ಮುಂದೂಡುತ್ತಲೇ ಇದ್ದೆ. ರೋಸಿ ಹೋಗಿದ್ದ ಹೆಂಡತಿ; ‘ರೀ… ಈ ಮಗುವ ಆ ಕಾಲುವೆಯ ಬಳಿ ರೈಲ್ವೆ ಕ್ರಾಸಿಂಗ್ ಗೇಟ್ ಇದೆಯಲ್ಲಾ… ಅಲ್ಲೊಂದು ಮರ ಇದೆ. ಅದರ ಕೆಳಗೆ ಬಟ್ಟೆ ಸುತ್ತಿ ಮಲಗಿಸಿ ಬಂದು ಬಿಡುವೆ… ನನ್ನಿಂದ ಸಾಧ್ಯವಿಲ್ಲ’ ಎಂದಳು. ‘ಆಯ್ತು’ ಎಂದೆ. ‘ನಾಳೆ ಹಾಗೆ ಮಾಡೋಣವೇ’ ಎಂದು ಕೇಳಿದಳು… ‘ಸರಿ ಹಾಗೆ ಅಲ್ಲಿ ಇಟ್ಟು ಬರೋಣ… ಅದೇ ಮುಂಜಾವಿಗೆ ಅಲ್ಲಿ ಕೂಲಿಗಳಿಗೆ ಹೋಗುವ ಜನ ಮಗುವ ಎತ್ತಿಕೊಂಡು ಹೋದರೆ ಹೋಗಬಹುದು… ಅಕಸ್ಮಾತ್ ಇಲ್ಲ ಎಂದರೆ. ನಾಯಿಗಳು ಕಚ್ಚಿಕೊಂಡು ಹೋದರೆ…’ ಎಂದು ಹೆದರಿಸಿದ ಕೂಡಲೇ ‘ಹಾsss ಬ್ಯಾಡಾ ಬ್ಯಾಡಾ… ಅಯ್ಯೋ… ಬೇಡವೆ ಬೇಡ ನನ್ನ ಜೀವವ ಬಸಿದು ಈ ಮಗುವ ಕಾಪಾಡ್ತೀನಿ’ ಎಂದು ಎದೆಗೆ ಒತ್ತಿಕೊಂಡಳು. ಸಾರ್ಥಕ ಹೆಂಡತಿ ಎನಿಸಿತ್ತು. ಆ ಮಗುವಿಗೆ ವಂದನ ಎಂದು ಹೆಸರಿಟ್ಟೆ. ನಾನು ಯಾರಿಗೂ ತಲೆ ಬಾಗಿದವನಲ್ಲ. ನಮಸ್ಕರಿಸಿ ವಂದಿಸಲು ನನ್ನ ಜೀವನದಲ್ಲಿ ಸಾಕಷ್ಟು ಜನರೇ ಸಿಗಲಿಲ್ಲ ಎಂಬ ಕೊರತೆ ನನ್ನ ಮಗಳಿಗೆ ಬಾರದಿರಲಿ… ಅವಳಿಗೆ ವಿನಮ್ರತೆ, ವಂದಿಸುವ ಗುಣ ಇರಲಿ ಎಂದು ಅಂತಹ ಒಂದು ಹೆರಸಿಟ್ಟೆ. ಅವಳ ಹೆಸರನ್ನು ಕರೆಯುವಾಗಲೆಲ್ಲ ನನ್ನ ಬಾಯಲ್ಲಿ ‘ವಂದನಾ’ ಎಂಬ ಸೊಲ್ಲು ಮೂಡಲಿ ಎಂಬ ಆಸೆಯೂ ಇತ್ತು. ಆ ದನಿಯಲ್ಲಿ ನಾನು ನನ್ನ ಕೈ ಹಿಡಿದು ನಡೆಸಿದವರಿಗೆಲ್ಲ ಗೌರವ ಸಲ್ಲಿಸುತ್ತಿರುತ್ತೇನೆ. ಅದು ಯಾರಿಗೂ ತಿಳಿಯದು ನನಗೆ ಮಾತ್ರ ಅರಿವಾಗುತ್ತದೆ.
ಅಂತೂ ವಂದನಾ ಮಗಳ ಅತ್ಯಂತ ಜೋಪಾನ ಕಾಪಾಡಿದೆವು. ಬಹಳ ದಿಟ್ಟತನ, ಧೀರತನ, ಅಸಾಧ್ಯವ ಸಾಧಿಸುವ ಹಠ ಅವಳಿಗೆ ಹೇಗೆ ಬಂತೊ ಗೊತ್ತಿಲ್ಲ. ಬೆಳೆಯುತ್ತ ಬಂದಂತೆ ತನ್ನ ತಾಯಿಯ ರೂಪ ಧರಿಸಿರುವಂತೆ ಕಂಡಳು. ಬೆಳಕು ಎಂದು ಕಟ್ಟಿದ್ದ ಹಿರಿಮಗಳ ಹೆಸರ ಹೆಂಡತಿ ತನಗೆ ಬೇಕಾದಂತೆ ಚಂದನಾ ಎಂದು ಬದಲಿಸಿಕೊಂಡಳು. ಚಂದ್ರನ ಬೆಳದಿಂಗಳನ್ನು ಆ ಮಗಳಲ್ಲಿ ಕಾಣಲು ಮುಂದಾದಳು. ಸಾಕು ಎರಡೇ ಮಕ್ಕಳು ಎಂದುಕೊಂಡಿದ್ದೆ. ಆದರೆ ಸಿರಿ ಹುಟ್ಟಿದ್ದಳು. ನಮಗೆ ಬೇಕಿರಲಿಲ್ಲ. ಗರ್ಭಪಾತಕ್ಕೆ ಹೆಂಡತಿ ಮುಂದಾಗಿದ್ದಳು. ನಾನು ಬಿಡಲಿಲ್ಲ. ಆದರೆ ಹೆಣ್ಣೇ ಹುಟ್ಟುವುದು ಎಂಬ ವಿಚಿತ್ರ ಅನುಮಾನ. ತಡೆದೆ. ಅದರ ಜೀವವ ಕೊಲ್ಲಲು ನಾನು ಬಿಡುವುದಿಲ್ಲ ಎಂದು ಜಗಳ ಮಾಡಿದೆ. ಸಿರಿ ಹುಟ್ಟಿದ್ದಳು. ಎಲ್ಲರಿಗೂ ನಿರಾಸೆ. ನಾನು ಅವರ ಮುಂದೆ ಮುಖ ತೋರಿಸಲಾರದೆ ವಿನೀತನಾದೆ… ಹೆಣ್ಣನ್ನೆ ಹೆತ್ತ ನನಗೆ ನೋವಿಗೆ ಬದಲು ಹೆಮ್ಮೆಯೇ ಮೂಡಿತು.
ಕಥೆಗಾರ, ಕವಿ ಮತ್ತು ಕಾದಂಬರಿಕಾರ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.