ಸಮರಕಂದ್ ನಗರದ ರೇಗಿಸ್ತಾನ್ ಚೌಕ್ ಅತ್ಯಂತ ಸುಂದರವಾದ ಇಸ್ಲಾಮೀ ಶೈಲಿಯ ವರ್ಣರಂಜಿತ ಇಮಾರತುಗಳಿಂದ ಕೂಡಿದ ಪ್ರದೇಶವಾಗಿದೆ. ತೈಮೂರ ಲಂಗನ ಗೋರಿ ಕೂಡ ಇಲ್ಲೇ ಇದೆ. ಅದು ಎತ್ತರದ ಪ್ರದೇಶದಲ್ಲಿರುವುದರಿಂದ ಬಹಳಷ್ಟು ಮೆಟ್ಟಿಲುಗಳನ್ನು ಹತ್ತಿ ಹೋಗಬೇಕು. ಸುದೈವದಿಂದ ನಮ್ಮ ಗೈಡ್ ಗುಲ್‌ಚೆಹರಾ ಎಂಬ ಯುವತಿ ಸಮರಕಂದ್ ಇತಿಹಾಸವನ್ನು ಬಹಳ ಚನ್ನಾಗಿ ಬಲ್ಲವಳಾಗಿದ್ದಳು. ಆಕೆ ಸಮರಕಂದ್ ಇತಿಹಾಸದ ಮೇಲೆ ಸಂಶೋಧನೆ ಮಾಡಿದವಳಾಗಿದ್ದಳೆಂಬ ನೆನಪು. ಪ್ರತಿಯೊಂದು ಸ್ಥಳದ ಬಗ್ಗೆ ಆಕೆ ವಿವರಿಸುವ ರೀತಿ ನನಗಂತೂ ಬಹಳ ಉಪಯುಕ್ತವಾಯಿತು.
ರಂಜಾನ್‌ ದರ್ಗಾ ಬರೆಯುವ ‘ನೆನಪಾದಾಗಲೆಲ್ಲ’ ಸರಣಿಯ 45ನೇ ಕಂತು ಇಲ್ಲಿದೆ.

ನಾವು ಮರುದಿನ ಅಂದರೆ 1983ನೇ ಆಗಸ್ಟ್ 14ರಂದು ಉಜ್ಬೆಕಿಸ್ತಾನ್ ರಾಜಧಾನಿ ತಾಷ್ಕೆಂಟ್‌ನಿಂದ ಸಮರಕಂದ್‌ಗೆ ಹೋದೆವು. ಒಂದು ಗಂಟೆ ವಿಮಾನಯಾನದ ನಂತರ ಸಮರಕಂದ್ ತಲುಪಿದೆವು. ಮಧ್ಯ ಏಷ್ಯಾದ, ಬಹು ಸಂಖ್ಯಾತ ಮುಸ್ಲಿಮರಿರುವ ಆಗಿನ 5 ಸೋವಿಯತ್ ರಿಪಬ್ಲಿಕ್‍ಗಳಾದ ಕಜಾಖ್‌ಸ್ತಾನ, ಕಿರ್ಗಿಜ್‌ಸ್ತಾನ, ತಾಜಿಕಿಸ್ತಾನ್, ಟರ್ಕ್‌ಮೆನಿಸ್ತಾನ್ ಮತ್ತು ಉಜ್ಬೆಕಿಸ್ತಾನಗಳಲ್ಲಿ ಸಮರಕಂದ್ ನಗರಕ್ಕೆ ವಿಶೇಷವಾದ ಸ್ಥಾನಮಾನವಿದೆ.

ಆ ಕಾಲದಲ್ಲಿ ಸಮರಕಂದ್ ಐದೂ ರಿಪಬ್ಲಿಕ್‌ಗಳ ಇಸ್ಲಾಂ ಸಂಸ್ಕೃತಿಯ ಕೇಂದ್ರ ಸ್ಥಾನ ಕೂಡ ಆಗಿತ್ತು. ಬೃಹತ್ತಾದ ಪುರಾತನ ಕುರಾನ್ ಗ್ರಂಥ ಇಲ್ಲಿತ್ತು. ಈಗ ಅದು ತಾಷ್ಕೆಂಟಲ್ಲಿ ಇದೆ. ಮೂರನೇ ಖಲಿಫಾ ಉಸ್ಮಾನ್ ಅವರು ಈ ಗ್ರಂಥ ಪಠಣ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಸೌದಿ ಅರೇಬಿಯಾದಲ್ಲಿ ಜನಿಸಿದ ಉಸ್ಮಾನರನ್ನು ಮದೀನಾದಲ್ಲಿ ಕ್ರಿಸ್ತ ಶಕ 656ನೇ ಜೂನ್ 17ರಂದು ಕೊಲೆ ಮಾಡಲಾಯಿತು. ಅವರು ಬಳಸುತ್ತಿದ್ದ ಈ ಬೃಹತ್ ಗ್ರಂಥ ಈಗ ಸಮರಕಂದದಲ್ಲಿ ಇದೆ. ಈ ಗ್ರಂಥ ಇಡಲು ನಿರ್ಮಿಸಿದ ಬೃಹತ್ತಾದ ಕಲ್ಲಿನ ರಿಹಾಲ್ ಸಮರಕಂದದಲ್ಲಿದೆ.

(ಸಮರಕಂದ್  ನಗರ)

ಸಮರಕಂದ್ ತೈಮೂರಲಂಗನ ರಾಜಧಾನಿಯಾಗಿತ್ತು. ಟರ್ಕಿ ಮತ್ತು ಮಂಗೋಲ್ ಮೂಲದ ಹಿನ್ನೆಲೆಯುಳ್ಳ ತೈಮೂರಲಂಗನೇ ತೈಮೂರಿ ರಾಜವಂಶದ ಮೂಲ ಪುರುಷ. (ತೈಮೂರ್ ಎಂದರೆ ಲೋಹ ಮತ್ತು ಆತ್ಮಗೌರವ ಎಂಬ ಅರ್ಥಗಳಿವೆ. ಮೊಘಲ್ ವಂಶದ ಮೂಲ ಪುರುಷನಾದ ಬಾಬರನ ಅಜ್ಜನ ಅಜ್ಜ ಈ ತೈಮೂರ್. ಮೊಘಲ್ ಶಬ್ದ ಮಂಗೋಲ ಮೂಲದಿಂದ ಬಂದಿದೆ. ಬಾಬರನ ತಾಯಿಯ ಮೂಲ ಮಂಗೋಲ್ ಚಂಗೇಜ್‌ಖಾನನ ಮನೆತನದಲ್ಲಿದೆ.)

ರಾಜಧಾನಿ ಸಮರಕಂದ್ ಜಗತ್ತಿನ ಐತಿಹಾಸಿಕ ಸುಂದರ ನಗರಗಳಲ್ಲಿ ಒಂದಾಗಿದೆ. ನಗರದ ರೇಗಿಸ್ತಾನ್ ಚೌಕ್ ನಮ್ಮನ್ನು ಇತಿಹಾಸದ ಕಾಲಘಟ್ಟಕ್ಕೆ ಒಯ್ಯುವಂಥ ವಾತಾವರಣ ನಿರ್ಮಿಸುತ್ತದೆ. ಸಮರ್ಥ ರಾಜ ತೈಮೂರಲಂಗ್ ಭಯಂಕರ ದಾಳಿಕೋರನೂ ಆಗಿದ್ದ. ಮಧ್ಯ ಏಷ್ಯಾದ ಬಹಳಷ್ಟು ಭಾಗ ಆತನ ಆಳ್ವಿಕೆಗೆ ಒಳಪಟ್ಟಿತ್ತು. ತೈಮೂರ, ತನ್ನ ಭೀಕರ ಸೈನ್ಯದ ಮೂಲಕ ಟರ್ಕಿಯ ಏಷ್ಯಾ ಭಾಗದ ಅನಾಟೋಲಿಯದಿಂದ ಹಿಡಿದು ಭಾರತದವರೆಗೆ ಮತ್ತು ರಷ್ಯಾದಿಂದ ಸಿರಿಯಾವರೆಗೆ ದಾಳಿ ಮಾಡಿದ್ದ.

(ಅನಾಟೋಲಿ ಪ್ರದೇಶ ಟರ್ಕಿಯ ಏಷ್ಯಾದ ಭಾಗದಲ್ಲಿದೆ. ಟರ್ಕಿಯ ಉಳಿದ ಭಾಗ ಐರೋಪ್ಯ ಪ್ರದೇಶಕ್ಕೆ ಸಂಬಂಧಿಸಿದೆ. ಟರ್ಕಿಯ ರಾಜಧಾನಿ ಅಂಕಾರಾ ಅನಾಟೋಲಿ ಪ್ರದೇಶದಲ್ಲೇ ಇದೆ. ಈ ಪ್ರದೇಶಕ್ಕೆ ‘ಏಷ್ಯಾ ಮೈನರ್ʼ ಎಂದೂ ಕರೆಯುತ್ತಾರೆ. ಆರ್ಯರು ಎಲ್ಲರಿಗಿಂತ ಮೊದಲು ಭಾರತಕ್ಕೆ ಬಂದದ್ದು ಇದೇ ಪ್ರದೇಶದಿಂದ. ಅನಾಟೋಲಿ, ಟರ್ಕಿ ಮತ್ತು ಸಂಸ್ಕೃತ ಭಾಷೆಗಳು ಕೂಡ ಇಂಡೋ ಯುರೋಪಿನ್ ಭಾಷಾ ಕುಟುಂಬಕ್ಕೆ ಸೇರಿದವುಗಳಾಗಿವೆ. ಜಗತ್ತಿನ ಎಲ್ಲ ಭಾಷಾ ಕುಟುಂಬಗಳಲ್ಲಿ ಇಂಡೋ ಯುರೋಪಿನ್ ಭಾಷಾ ಕುಟುಂಬ ಅತ್ಯಂತ ದೊಡ್ಡದು. ಗ್ರೀಕ್, ಲ್ಯಾಟಿನ್, ಜರ್ಮನಿ, ಫ್ರೆಂಚ್, ಇಂಗ್ಲಿಷ್, ರಷ್ಯನ್ ಹಾಗೂ ಇತರ ಸ್ಲಾವ್ ಭಾಷೆಗಳು, ಟರ್ಕಿ, ಉಜ್ಬೆಕ್, ಪಾರ್ಸಿ, ಸಂಸ್ಕೃತ ಮುಂತಾದ ಭಾಷೆಗಳೆಲ್ಲ ಸಹೋದರಿ ಭಾಷೆಗಳೇ ಆಗಿವೆ. ಇರಾನ್ ಶಬ್ದದ ಮೂಲ ‘ಆರ್ಯನ್’ನಲ್ಲಿದೆ. ಇರಾಕ್ ಶಬ್ದದ ಮೂಲ ‘ಆರ್ಯಕ’ದಲ್ಲಿದೆ. ಅವೆರಡೂ ದೇಶಗಳು ಒಂದಾಗಿದ್ದಾಗ ಆ ಒಟ್ಟು ಪ್ರದೇಶಕ್ಕೆ ಪರ್ಸಿಯಾ ಎಂದೇ ಕರೆಯುತ್ತಿದ್ದರು. ಇರಾನ್‌ನಲ್ಲಿ ಸಂಸ್ಕೃತ ಭಾಷೆ ಮಾತನಾಡುವ ನಿರಕ್ಷರಿ ಬುಡಕಟ್ಟೊಂದು ಇತ್ತೆಂದು ನಾಲ್ಕೂವರೆ ದಶಕಗಳ ಹಿಂದೆ ಭಾಷಾವಿಜ್ಞಾನದ ವಿದ್ಯಾರ್ಥಿಯಾಗಿದ್ದಾಗ ಓದಿದ ನೆನಪು.)

ಸಮರಕಂದ್ ನಗರದ ರೇಗಿಸ್ತಾನ್ ಚೌಕ್ ಅತ್ಯಂತ ಸುಂದರವಾದ ಇಸ್ಲಾಮೀ ಶೈಲಿಯ ವರ್ಣರಂಜಿತ ಇಮಾರತುಗಳಿಂದ ಕೂಡಿದ ಪ್ರದೇಶವಾಗಿದೆ. ತೈಮೂರ ಲಂಗನ ಗೋರಿ ಕೂಡ ಇಲ್ಲೇ ಇದೆ. ಅದು ಎತ್ತರದ ಪ್ರದೇಶದಲ್ಲಿರುವುದರಿಂದ ಬಹಳಷ್ಟು ಮೆಟ್ಟಿಲುಗಳನ್ನು ಹತ್ತಿ ಹೋಗಬೇಕು. ಸುದೈವದಿಂದ ನಮ್ಮ ಗೈಡ್ ಗುಲ್‌ಚೆಹರಾ ಎಂಬ ಯುವತಿ ಸಮರಕಂದ್ ಇತಿಹಾಸವನ್ನು ಬಹಳ ಚನ್ನಾಗಿ ಬಲ್ಲವಳಾಗಿದ್ದಳು. ಆಕೆ ಸಮರಕಂದ್ ಇತಿಹಾಸದ ಮೇಲೆ ಸಂಶೋಧನೆ ಮಾಡಿದವಳಾಗಿದ್ದಳೆಂಬ ನೆನಪು. ಪ್ರತಿಯೊಂದು ಸ್ಥಳದ ಬಗ್ಗೆ ಆಕೆ ವಿವರಿಸುವ ರೀತಿ ನನಗಂತೂ ಬಹಳ ಉಪಯುಕ್ತವಾಯಿತು.

ಇತಿಹಾಸ ಮತ್ತು ಇತಿಹಾಸದ ಘಟನೆಗಳಿಗೆ ಸಂಬಂಧಿಸಿದ ಜನಪದ ಕತೆಗಳ ಜೊತೆ ಕ್ರಾಂತಿಕಾರಿ ದೃಷ್ಟಿಕೋನವನ್ನು ಆಕೆ ಹೊಂದಿದ್ದಳು. ತೈಮೂರಲಂಗನ ಸಮಾಧಿ ಸ್ಥಳವನ್ನು ಬಹಳ ಆಕರ್ಷಕವಾಗಿ ನಿರ್ಮಿಸಲಾಗಿದೆ. ಆತ ಭಯಂಕರ ದಾಳಿಕೋರ, ಕುಂಟನಾಗಿದ್ದನೆಂದು ಇತಿಹಾಸಕಾರರು ಹೇಳುತ್ತಾರೆ. ಸೋವಿಯತ್ ಸರ್ಕಾರ ಅವನ ಗೋರಿಯನ್ನು ಅಗೆದು ಅಸ್ಥಿಪಂಜರವನ್ನು ಪರೀಕ್ಷಿಸಿ ಆತ ಕುಂಟನಾಗಿದ್ದ ಎಂಬುದನ್ನು ಖಚಿತಪಡಿಸಿಕೊಂಡಿತು ಎಂದು ಆಕೆ ಹೇಳಿದಳು.

 (ತೈಮೂರಲಂಗನ ಪ್ರತಿಮೆ, ಸಮರಕಂದ)

ತೈಮೂರಲಂಗನ ಸಮಾಧಿ ಇರುವ ಬೃಹತ್ ಇಮಾರತಿನ ಮುಂದಿನ ಫಲಕದಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಕೂಡ ‘ಗೋರಿ ಎ ಅಮೀರ್’ (ರಾಜನ ಗೋರಿ) ಎಂದು ಬರೆದದ್ದು ನೋಡಿ ಆಶ್ಚರ್ಯವಾಯಿತು. ಪರ್ಸಿಯನ್ ಮತ್ತು ಉಜ್ಬೆಕ್ ಭಾಷೆಯಲ್ಲಿ ‘ಅಮೀರ್’ ಎಂದರೆ ರಾಜ ಎಂದೂ ಅರ್ಥವಾಗುತ್ತದೆ. ಗೋರಿ ಶಬ್ದವನ್ನು ಕನ್ನಡದಲ್ಲೂ ಬಳಸುತ್ತೇವೆ. ಈ ‘ಗೋರಿ’ ಎಲ್ಲಿಂದ ಎಲ್ಲಿಗೆ ಬಂದಿದೆ ಎಂಬುದು ತಿಳಿದು ಭಾಷಾವಿಜ್ಞಾನದ ವಿದ್ಯಾರ್ಥಿಯಾದ ನನಗೆ ಆಶ್ಚರ್ಯದ ಜೊತೆ ಖುಷಿಯೂ ಆಯಿತು. ಭಾಷೆಯೊಂದು ನಿರಂತರವಾಗಿ ಬೆಳೆಯುತ್ತದೆ ಎಂದರೆ ಅದು ಜೀವಂತವಾಗಿದೆ ಎಂದೇ ಅರ್ಥ. ಸಂಸ್ಕೃತ, ಹಿಂದಿ, ಮಾರಾಠಿ, ಕೊಂಕಣಿ, ತೆಲಗು, ತಮಿಳ್, ಉರ್ದು, ಪರ್ಸಿಯನ್, ಅರಬಿ, ಇಂಗ್ಲಿಷ್, ಪೋರ್ತುಗೀಜ್ ಮುಂತಾದ ಭಾಷೆಗಳ ಶಬ್ದ ಸಂಪತ್ತಿನಿಂದ ಕನ್ನಡ ಶಕ್ತಿಶಾಲಿಯಾದ ಭಾಷೆಯಾಗಿದೆ. ವಿಜ್ಞಾನ, ಎಂಜಿನಿಯರಿಂಗ್, ವೈದ್ಯಕೀಯ ವಿಜ್ಞಾನ ಮೊದಲು ಮಾಡಿ ಯಾವುದೇ ವಿಷಯವನ್ನು ಕನ್ನಡದಲ್ಲಿ ಕಲಿಸಬಹುದು ಎಂಬ ಸತ್ಯವನ್ನು ನಮ್ಮ ರಾಜಕೀಯ ನಾಯಕರು ಯಾವಾಗ ಅರ್ಥ ಮಾಡಿಕೊಳ್ಳುವರೋ ಗೊತ್ತಿಲ್ಲ. ಉಜ್ಬೆಕ್ ಭಾಷೆಯಲ್ಲಿ ಮಧ್ಯಯುಗದಲ್ಲೇ ಅನೇಕ ವಿಜ್ಞಾನಿಗಳು ಮಹತ್ವದ ಗ್ರಂಥಗಳನ್ನು ಬರೆದಿದ್ದಾರೆ ಎಂಬುದು ಕೇಳಿ ನನಗೆ ಆಶ್ಚರ್ಯವೆನಿಸಿತು.

(ತೈಮೂರಲಂಗನ ಗೋರಿ)

ಸಮರ್ಥ ರಾಜ ತೈಮೂರಲಂಗ್ ಭಯಂಕರ ದಾಳಿಕೋರನೂ ಆಗಿದ್ದ. ಮಧ್ಯ ಏಷ್ಯಾದ ಬಹಳಷ್ಟು ಭಾಗ ಆತನ ಆಳ್ವಿಕೆಗೆ ಒಳಪಟ್ಟಿತ್ತು. ತೈಮೂರ, ತನ್ನ ಭೀಕರ ಸೈನ್ಯದ ಮೂಲಕ ಟರ್ಕಿಯ ಏಷ್ಯಾ ಭಾಗದ ಅನಾಟೋಲಿಯದಿಂದ ಹಿಡಿದು ಭಾರತದವರೆಗೆ ಮತ್ತು ರಷ್ಯಾದಿಂದ ಸಿರಿಯಾವರೆಗೆ ದಾಳಿ ಮಾಡಿದ್ದ.

ತೈಮೂರಲಂಗ್, ಸಮರಕಂದದಿಂದ ದಂಡೆತ್ತಿ ಹೊರಟು ಡಿಸೆಂಬರ್ 1398ರಲ್ಲಿ ದೆಹಲಿ ತಲುಪಿ ದಾಳಿ ಮಾಡಿದ. ಆಗ ತುಘಲಕ್ ರಾಜಮನೆತನದ ಸುಲ್ತಾನ ನಾಸೀರುದ್ದೀನ್ ಮಹಮೂದ್ ಶಾ ದೆಹಲಿ ಆಳುತ್ತಿದ್ದ. ತುಘಲಕ್ ರಾಜವಂಶದಿಂದ (1320 – 1424) 11 ಜನ ಆಳಿದರು. ಮೊದಲನೆಯವನು ಘಿಯಾಸುದ್ದೀನ್ ತುಘಲಕ್. ಕೊನೆಯವನು ಸುಲ್ತಾನ ನಾಸೀರುದ್ದೀನ್ ಮಹಮೂದ್ ಶಾ ತುಘಲಕ್.

ಫಿರೋಜ್ ಶಾ ತುಘಲಕ್ ಆಳ್ವಿಕೆ ಶಿಥಿಲವಾಯಿತು. ವಿವಿಧ ರಾಜ್ಯಗಳ ರಾಜ್ಯಪಾಲರ ಮತ್ತು ಸಾಮಂತರ ಮೇಲಿನ ಹಿಡಿತವನ್ನು ಕಳೆದುಕೊಳ್ಳತೊಡಗಿತು. ಅವರೆಲ್ಲ ತಮ್ಮ ತಮ್ಮ ಪ್ರದೇಶಗಳ ಮೇಲೆ ಹಿಡಿತ ಸಾಧಿಸುತ್ತ ತಾವೇ ರಾಜರೆಂದು ಘೋಷಿಸತೊಡಗಿದರು. ಫಿರೋಜ್ ಶಾ ತುಘಲಕ್ 1388ರಲ್ಲಿ ಮರಣಹೊಂದಿದ ಮೇಲೆ ತುಘಲಕ್ ರಾಜವಂಶದ ದೆಹಲಿ ಸುಲ್ತಾನಿ ಸಾಮ್ರಾಜ್ಯದಲ್ಲಿ ಆಂತರಿಕ ಯುದ್ಧ ಪ್ರಾರಂಭವಾಯಿತು. ಮುಮ್ಮಡಿ ನಾಸೀರುದ್ದೀನ ಮುಹಮ್ಮದ್ ಶಾ ತುಘಲಕ್ 1390ನೇ ಆಗಸ್ಟ್ 31ರಿಂದ 1394ನೇ ಜನವರಿ 20ರ ವರೆಗೆ ದೆಹಲಿ ಸುಲ್ತಾನನಾದ. ಆತನ ಸಾವಿನ ನಂತರ ಆತನ ಹಿರಿಯ ಮಗ ಅಲಾವುದ್ದೀನ್ ಸಿಕಂದರ ಶಾ 1394ನೇ ಜನವರಿ 23ರಿಂದ 1394ನೇ ಮಾರ್ಚ್ 8ರ ವರೆಗೆ ಆಳ್ವಿಕೆ ಮಾಡಿದ. ಆದರೆ ಅಕಾಲ ಮರಣದಿಂದಾಗಿ ಆತನ ತಮ್ಮನಾದ ಸುಲ್ತಾನ ನಾಸೀರುದ್ದೀನ್ ಮಹಮೂದ್ ಶಾ ತುಘಲಕ್ ಸಿಂಹಾಸನವೇರಿದ. ಮಾರ್ಚ್ 1394ರಿಂದ 1413ರ ಫೆಬ್ರುವರಿವರೆಗೆ ಆತ ದೆಹಲಿ ಸುಲ್ತಾನ ಆಗಿ ಆಳ್ವಿಕೆ ನಡೆಸಿದ. ಆತನ ಸಂಬಂಧಿ ಸುಸ್ರತ್ ಶಾ ಫಿರೋಜಾಬಾದ್‌ನಲ್ಲಿ ಸುಲ್ತಾನ ಆದ. ಆತ ದೆಹಲಿ ಸಿಂಹಾಸನಕ್ಕಾಗಿ ಬಂಡಾಯವೆದ್ದ. 1397ರ ವರೆಗೆ ಆಂತರಿಕ ಯುದ್ಧ ಮುಂದುವರಿಯಿತು. ನಂತರ ಮುಕ್ತಾಯಗೊಂಡರೂ ಸುಸ್ರತ್ ಶಾ ಸಮಸ್ಯೆಗಳನ್ನು ಸೃಷ್ಟಿಸುತ್ತಲೇ ಇದ್ದ. ಈ ಸಮಯ ಸಾಧಿಸಿ ತೈಮೂರಲಂಗ್ 1398ನೇ ಡಿಸೆಂಬರ್‌ನಲ್ಲಿ ದೆಹಲಿ ಮೇಲೆ ದಾಳಿ ಪ್ರಾರಂಭಿಸಿದ. ಉದಾರಮತಿಯಾಗಿದ್ದ ದೆಹಲಿ ಸುಲ್ತಾನ ನಾಸೀರುದ್ದೀನ್ ಮಹಮೂದ್ ಶಾ ತುಘಲಕ್ ತನ್ನ ಪ್ರಜೆಗಳನ್ನು ಧರ್ಮಭೇದವಿಲ್ಲದೆ ನೋಡಿಕೊಳ್ಳುತ್ತಿದ್ದ. ಆದರೆ ತೈಮೂರ್ ಜನಸಾಮಾನ್ಯರ ಮೇಲೆ ಕ್ರೂರವಾಗಿ ಹಲ್ಲೆ ಮಾಡುತ್ತ ದೆಹಲಿಯನ್ನು ಲೂಟಿ ಮಾಡಿದ. ಕೊನೆಗೆ ತನ್ನ ಸಾಮಂತ ಖಿಜ್ರಖಾನ್‌ಗೆ ದೆಹಲಿ ಆಡಳಿತದ ಜವಾಬ್ದಾರಿ ವಹಿಸಿದ ತೈಮೂರಲಂಗ್ ಸಮರಕಂದ್‍ಗೆ ವಾಪಸ್ ಹೊರಟ. ಅಲ್ಲಿಂದ ತುಘಲಕ್ ರಾಜವಂಶದ ಅಂತ್ಯವಾಗಿ ಖಿಜ್ರಖಾನ್‌ನ ಸಯ್ಯಿದ್ ರಾಜವಂಶದ ಪ್ರಾರಂಭವಾಯಿತು. ಈ ರಾಜವಂಶ 1451ರ ವರೆಗೆ ಆಳ್ವಿಕೆ ಮಾಡಿತು. ಸಯ್ಯಿದ್ ರಾಜವಂಶದ ನಂತರ ಲೋದಿ ರಾಜವಂಶದ ಆಳ್ವಿಕೆ ಪ್ರಾರಂಭವಾಯಿತು.
ಸಮರಕಂದ್ ಕೇಂದ್ರಭಾಗವಾದ ರೇಗಿಸ್ತಾನ್ ಚೌಕ (ಉಜ್ಬೆಕ್ ಭಾಷೆಯಲ್ಲಿ ರೇಗಿಸ್ತಾನ್ ಅಂದರೆ ಮನೋಹರವಾದ, ಸುಂದರ, ರಮಣೀಯ ಎಂದರ್ಥ.) ಈ ಪ್ರದೇಶ ಇತಿಹಾಸದ ಆಗರವಾಗಿದ್ದು ಇದರ ಐತಿಹಾಸಿಕ ಸಂಬಂಧ ಭಾರತದ ಜೊತೆಗಿದೆ.

ಸಮರಕಂದ್ ಐತಿಹಾಸಿಕವಾಗಿ ಪ್ರಾಮುಖ್ಯ ಪಡೆಯುವುದರ ಜೊತೆಗೇ ಮಸಾಲೆ ಪದಾರ್ಥಗಳು, ನೈಸರ್ಗಿಕ ಯುನಾನಿ ಔಷಧಿ, ಒಣಹಣ್ಣುಗಳು ಮತ್ತು ತಾಜಾ ಹಣ್ಣು ಹಂಪಲಗಳಿಗೂ ಪ್ರಸಿದ್ಧವಾಗಿದೆ.

ನಮ್ಮ ಜೊತೆಗಿದ್ದ ಬಿಕಾನೇರ್ ರಾಜಕುಮಾರ ಭಾರಿ ಕಲ್ಲಂಗಡಿ ಹಣ್ಣೊಂದನ್ನು ಕೊಂಡ. ಅದು ಎಷ್ಟು ಭಾರವಾಗಿತ್ತೆಂದರೆ ಆತ ಅದನ್ನು ಹೊತ್ತು ಸುಸ್ತಾದ. ‘ಏನ್ರೀ ಫ್ಯೂಡಲ್ ನಿಮ್ಮನ್ನು ನಾವು ಎಷ್ಟೋ ಶತಮಾನಗಳಿಂದ ಹೊತ್ತುಕೊಂಡು ಬಂದೆವು. ರೈತರು ಬೆಳೆದ ಒಂದು ಕಲ್ಲಂಗಡಿಯನ್ನು ಹೊರಲಿಕ್ಕಾಗುವುದಿಲ್ಲವೆ’ ಎಂದು ತಮಾಷೆ ಮಾಡುತ್ತ ನಾನು ಕೂಡ ಆ ಭಾರವನ್ನು ಹೊರುತ್ತಿದ್ದೆ. ವ್ಯಾನ್ ಬಳಿ ಹೋಗುವವರೆಗೆ ಅದನ್ನು ಎಲ್ಲರೂ ಹೊರುತ್ತಿದ್ದರು. ಅಲ್ಲಿ ನೂರಾರು ಪ್ರಕಾರದ ದ್ರಾಕ್ಷಿ ಬೆಳೆಯುತ್ತಾರೆ. ಅವು ಪ್ರಸಿದ್ಧ ತಳಿಗಳಾಗಿವೆ. ಅಲ್ಲಿಯ ಜನರು, ಇಮಾರತುಗಳು, ವಿವಿಧ ಉತ್ಪನ್ನಗಳು ಸದಾ ನೆನಪಿನಲ್ಲಿ ಉಳಿಯುವಂಥವು.

ಗುಲ್‌ಚೆಹರಾ ನಮ್ಮನ್ನು ‘ಬೀಬಿಖನುಂ ಮಸೀದಿ’ಗೆ ಕರೆದುಕೊಂಡು ಹೋದಳು. ಅದೊಂದು ಬೃಹತ್ತಾದ ಮಸೀದಿ. ಬೀಬಿಖನುಂ ತೈಮೂರಲಂಗನ ಪಟ್ಟದರಸಿ. ಆತ ಭಾರತದಿಂದ ಮರಳಿ ಬರುವ ಮೊದಲೇ ಈ ಮಸೀದಿಯ ನಿರ್ಮಾಣ ಕಾರ್ಯ ಪೂರ್ತಿಗೊಳಿಸುವುದನ್ನು ನೋಡುವುದು ಆಕೆಯ ಬಯಕೆಯಾಗಿತ್ತು. ದಂಡಯಾತ್ರೆಗಾಗಿ ತೈಮೂರ ತನ್ನ ಬೃಹತ್ ಸೈನ್ಯದೊಂದಿಗೆ ದೆಹಲಿ ಕಡೆಗೆ ಹೊರಟ ಕೂಡಲೆ ಅವಳು ಈ ಮಸೀದಿಯ ನಿರ್ಮಾಣದ ಯೋಜನೆ ರೂಪಿಸಿದ್ದಳು. ಅವನು ವಾಪಸ್ ಸಮರಕಂದ್‌ಗೆ ಬರುವುದರೊಳಗಾಗಿ ಈ ಆಶ್ಚರ್ಯವನ್ನು ಅವನಿಗೆ ತೋರಿಸುವ ಉದ್ದೇಶ ಆಕೆಗಿತ್ತು ಎಂದು ಗುಲ್‌ಚೆಹರಾ ನಮಗೆಲ್ಲ ವಿವರಿಸಿದಳು. ಈ ವಿವರಣೆಯ ಸಂದರ್ಭದಲ್ಲಿ ಅವಳು ಜನಪದರ ಬದುಕಿನಲ್ಲಿ ಶತಮಾನಗಳಿಂದ ಉಳಿದುಕೊಂಡು ಬಂದ ದಂತಕಥೆಯೊಂದನ್ನು ಹೇಳಿದಳು.

(ಸಮರಕಂದ ಬೀಬಿಖನುಂ ಮಸೀದಿ)

ತೈಮೂರ ದಂಡಯಾತ್ರೆ ಮುಗಿಸಿಕೊಂಡು ಸಮರಕಂದದ ಸಮೀಪ ಬಂದಿದ್ದ. ಅದಕ್ಕಾಗಿ ಬೇಗ ಬೇಗ ಕೆಲಸ ಮುಗಿಸಲು ಕಟ್ಟಡ ಕಾರ್ಮಿಕರಿಗೆ ಮತ್ತು ವಾಸ್ತುಶಿಲ್ಪಿಗಳಿಗೆ ಬೀಬಿಖನುಂ ಒತ್ತಾಯಿಸುತ್ತಿದ್ದಳು ಮತ್ತು ಹುರಿದುಂಬಿಸುತ್ತಿದ್ದಳು. ಒಬ್ಬ ತರುಣ ವಾಸ್ತುಶಿಲ್ಪಿಗಳ ಮುಖ್ಯಸ್ಥನಾಗಿದ್ದ. ಆತ ರಾಣಿ ಬೀಬಿಖನುಂ ಮೇಲೆ ಮೋಹಗೊಂಡ. ಆತ, ಕೊನೆಯ ಮಿನಾರಿನ ಸೂಕ್ಷ್ಮ ಕೆಲಸಗಳನ್ನು ತಾನೇ ಮಾಡುತ್ತಿದ್ದ. ಆ ಮಿನಾರಿನ ಮೇಲೆ ಕಾರ್ಯನಿರತನಾದಾಗಲೇ ಕೂಗಿ ಹೇಳಿದ. ‘ನಾನು ನಿನ್ನನ್ನು ಪ್ರೀತಿಸುತ್ತೇನೆ. ನೀನು ನನ್ನನ್ನು ಮದುವೆಯಾಗುವುದಾದರೆ ಬೇಗ ಮಿನಾರಿನ ಕೆಲಸ ಮುಗಿಸುವೆ’ ಎಂದು ಹೇಳಿದ. ‘ಹಾಗೆಲ್ಲ ಹೇಳಬೇಡ. ಜನಾನಖಾನೆಯಲ್ಲಿರುವ ಯಾವುದೇ ಹೆಣ್ಣನ್ನು ಇಷ್ಟಪಟ್ಟರೂ ಅವಳ ಜೊತೆಗೇ ನಿನ್ನ ಮದುವೆ ಮಾಡಿಸುವೆ’ ಎಂದು ಹೇಳಿದರೂ ಆತ ತನ್ನ ಹಠ ಬಿಡಲಿಲ್ಲ. ಕೊನೆಗೆ ವಿವಿಧ ಬಣ್ಣಗಳಿಂದ ಅಲಂಕೃತವಾದ ತತ್ತಿಗಳನ್ನು ತಂದು ಅವನಿಗೆ ತೋರಿಸುತ್ತ, ಇವುಗಳ ಬಣ್ಣ ಬೇರೆ ಬೇರೆ ಇರಬಹುದು, ಆದರೆ ಒಳಗಿನ ತತ್ತಿಯ ರುಚಿ ಒಂದೇ ಎಂದು ಮನವೊಲಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಹತಾಶೆಗೊಂಡ ಬೀಬಿಖನುಂ ‘ಒಪ್ಪಿದೆ ಬೇಗ ಮುಗಿಸು’ ಎಂದು ಹೇಳಿದಳು. ಇನ್ನೇನು ಸ್ವಲ್ಪ ಇದ್ದ ಕೆಲಸವನ್ನು ಆ ಯುವ ವಾಸ್ತುಶಿಲ್ಪಿ ಖುಷಿಯಿಂದ ಮುಗಿಸಿದ. ಅಷ್ಟೊತ್ತಿಗೆ ದಂಡಯಾತ್ರೆಯ ಬಲದೊಂದಿಗೆ ತೈಮೂರಲಂಗ್ ಬಂದ. ಆ ಬೃಹತ್ ಮಸೀದಿಯನ್ನು ನೋಡಿ ಆಶ್ಚರ್ಯಚಕಿತನಾದ. ಆದರೆ ಬೀಬಿಖನುಂ ಬೇಸರದಲ್ಲಿದ್ದಳು. ತೈಮೂರ್ ಕಾರಣ ಕೇಳಿದ. ಆಕೆ ನಡೆದ ಸಂಗತಿಯನ್ನು ವಿವರಿಸಿದಳು. ಆ ಯುವ ವಾಸ್ತುಶಿಲ್ಪಿಯನ್ನು ತೈಮೂರ್ ದುರುಗುಟ್ಟಿ ನೋಡಿದ. ಖಡ್ಗವನ್ನು ಹಿರಿದು ನಿಂತ. ‘ಕೆಳಗೆ ಬಾ’ ಎಂದು ಕೂಗಿದ. ಆತ ಯುವಕ ಭಯಭೀತನಾಗಿ ಆ ಮಿನಾರ್ ಮೇಲೆಯೆ ಕುಳಿತ. ಆತ ಬಹಳ ಹತಾಶನಾಗಿದ್ದ. ಕೊನೆಗೆ ದೇವದೂತರು ಬಂದು ಅವನನ್ನು ಸ್ವರ್ಗಕ್ಕೆ ಕರೆದುಕೊಂಡು ಹೋದರು!

ಈ ಕಥೆಯಲ್ಲಿನ ಕೊನೆಯ ಸಾಲು ಮಾತ್ರ ದಂತಕಥೆಯಾಗಿರಬಹುದು. ಉಳಿದುದೆಲ್ಲವೂ ಕಾವ್ಯಾತ್ಮಕವಾಗಿದ್ದರೂ ಸತ್ಯವೇ ಇರಬಹುದು. ತೈಮೂರ್ ಆತನ ಕೊಲೆ ಮಾಡಿರಬಹುದು. ಆದರೆ ಜನಪದರು ಅದನ್ನು ಎಷ್ಟೊಂದು ಭಾವನಾತ್ಮಕವಾಗಿ ಉಳಿಸಿಕೊಂಡಿದ್ದಾರೆ. ರಾಜನ ದರ್ಪದ ಮುಂದೆ ಯುವಕನ ಆಕರ್ಷಣೆಯನ್ನು ಬೆಂಬಲಿಸಿ ಈ ಕಥೆ ಹೆಣೆದಿದ್ದಾರೆ. ಮನುಷ್ಯ ಭಾವನೆಗಳ ಮುಂದೆ ಯಾವ ರಾಜನ ದರ್ಪವೂ ನಡೆಯುವುದಿಲ್ಲ. ದೇವದೂತರು ಕೂಡ ಆತನ ಸಹಾಯಕ್ಕೆ ಇರುತ್ತಾರೆ ಎಂದು ಮುಂತಾದ ಸಂದೇಶಗಳನ್ನು ಜನಪದ ಕಥೆಗಾರನೊಬ್ಬ ಕಥೆ ಕಟ್ಟಿ ಕೊಟ್ಟಿದ್ದಾನೆ. ಅಲ್ಲಿನ ಜನ ಅದನ್ನು ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ.

(ವಿಜಾಪುರದ ಗೋಲಗುಂಬಜ್)

ಯುನೆಸ್ಕೋ ಬೀಬಿಖನುಂ ಮಸೀದಿಯನ್ನು ‘ಪಾರಂಪರಿಕ ಕಟ್ಟಡ’ ಎಂದು ಗುರುತಿಸಿದೆ. ಆದರೆ ಅದಕ್ಕಿಂತಲೂ ಅದ್ಭುತವಾದ ಮತ್ತು ಎತ್ತರದ ‘ನವಾಬ್ ಮಸೀದಿ’ ವಿಜಾಪುರದಲ್ಲಿದೆ. ನಮ್ಮ ಸರ್ಕಾರಗಳಿಗೆ ಇವುಗಳ ಬಗ್ಗೆ ಪ್ರಜ್ಞೆಯೆ ಇಲ್ಲ. ಗೋಳಗುಮ್ಮಟ, ಇಬ್ರಾಯಿಂ ರೋಜಾ ಮತ್ತು ಜುಮ್ಮಾ ಮಸೀದಿಯಂಥ ಇಮಾರತುಗಳಿಗೇ ‘ಪಾರಂಪರಿಕೆ ಕಟ್ಟಡ’ದ ಮಾನ್ಯತೆ ದೊರೆತಿಲ್ಲ ಅಂದ ಮೇಲೆ ಉಳಿದ ಕಟ್ಟಡಗಳ ಬಗ್ಗೆ ಹೇಳಿ ಪ್ರಯೋಜನವಿಲ್ಲ.

(ವಿಜಾಪುರದ ನವಾಬ್ ಮಸೀದಿ)

ವ್ಯಾಟಿಕನ್‌ನಲ್ಲಿರುವ ಸೇಂಟ್ ಪೀಟರ್ ಬೆಸಿಲಿಕಾ ಗುಮ್ಮಟ ವಿಜಾಪುರದ ಗೋಳಗುಮ್ಮಟಕ್ಕಿಂತ ಸ್ವಲ್ಪ ದೊಡ್ಡದಾಗಿದೆ ಎಂದು ಹೇಳುತ್ತಾರೆ. ಆದರೆ ಗೋಳಗುಮ್ಮಟದಲ್ಲಿ ಇರುವ ವಿಸ್ಪರಿಂಗ್ ಗ್ಯಾಲರಿ ಇಲ್ಲ. ಏಳು ಬಾರಿ ಪ್ರತಿಧ್ವನಿ ಕೂಡ ಆಗುವುದಿಲ್ಲ. ಇವೆಲ್ಲ ನಮ್ಮ ಗೋಳಗುಮ್ಮಟದ ವೈಶಿಷ್ಟ್ಯಗಳು. ಆದರೆ ವೈಶಿಷ್ಟ್ಯಗಳನ್ನು ಜಗತ್ತಿಗೆ ಅರಿವಾಗುವ ಹಾಗೆ ತಿಳಿಸುವಲ್ಲಿ ನಾವು ಸೋತಿದ್ದೇವೆ.

ಸೋವಿಯತ್ ಸರ್ಕಾರ ಎಲ್ಲ ಐತಿಹಾಸಿಕ ಕಟ್ಟಡಗಳನ್ನು ಅದ್ಭುತವಾಗಿ ರಕ್ಷಣೆ ಮಾಡಿದೆ. ಅವೆಲ್ಲ ಹೊಸ ಕಟ್ಟಡಗಳ ಹಾಗೇ ಕಾಣುತ್ತವೆ. ಹಳೆ ಕಟ್ಟಡಗಳ ಯಥಾಸ್ಥಾಪನೆ ಪ್ರಯೋಗ ಭಾರತಕ್ಕಂತೂ ಅನುಕರಣೀಯವಾಗಿದೆ. ಅವರು ಅಷ್ಟೊಂದು ಸೂಕ್ಷ್ಮವಾಗಿ ಈ ಕಾರ್ಯ ಮಾಡಿದ್ದಾರೆ. ಅಲ್ಲದೆ ಅದರ ಹಾಳಾದ ರೂಪ ತೋರಿಸಲು ಒಂದು ಕಡೆ ಸ್ವಲ್ಪ ಮಟ್ಟಿಗೆ ಹಾಗೇ ಬಿಟ್ಟಿರುತ್ತಾರೆ. ಈ ರೀತಿಯಲ್ಲಿ ಪುರಾತನ ವಾಸ್ತುಶಿಲ್ಪ ಉಳಿಸಿಕೊಳ್ಳುವ ವ್ಯವಸ್ಥೆ ನಮ್ಮಲ್ಲೂ ಆಗಬೇಕಿದೆ. ಹಿಂದೊಮ್ಮೆ ಹಂಪಿಯಲ್ಲಿ ಉಗ್ರನರಸಿಂಹ ಮೂರ್ತಿಯ ಯಥಾಸ್ಥಾಪನೆ ಮಾಡಲು ಯತ್ನಿಸಲಾಗಿತ್ತು. ಆದರೆ ಶಿವರಾಮ ಕಾರಂತರಂಥವರು ವಿರೋಧ ವ್ಯಕ್ತಿಪಡಿಸಿದ್ದಕ್ಕೆ ಮುಂದುವರಿಯಲಿಲ್ಲ ಎಂದು ಬಹಳ ವರ್ಷಗಳ ಹಿಂದೆ ಕೇಳಿದ ನೆನಪು. ರಿಸ್ಟೋರೇಷನ್ ಬಗ್ಗೆ ಗುಲ್‌ಚಹರಾ ಚೆನ್ನಾಗಿ ವಿವರಿಸಿದಳು. ಅದಕ್ಕೆ ಸಂಬಂಧಿಸಿದ ಶಿಲ್ಪಿಗಳ ಜೊತೆ ಚರ್ಚೆಗೆ ಅವಕಾಶ ಮಾಡಿಕೊಟ್ಟಳು.

(ಮುಂದುವರಿಯುವುದು)