“ಹೊಸ್ತಿಲಿಗೆ ಕಾಲು ತಾಗಿ ಎಡವಿದರೆ ಸೀದಾಸೀದಾ ರಸ್ತೆಗೆ ಬೀಳುವಂತೆ ಕಾಂಪೌಂಡಿನವರೆಗೂ ಮನೆಯನ್ನು ವಿಸ್ತರಿಸಿಕೊಂಡು, ಅದರ ಮೇಲೆ ಅಡುಗೆ ಕೋಣೆಯಂಥ ಪುಟ್ಟ ರೂಮುಳ್ಳ ಎರಡು ಮನೆ ಕಟ್ಟಿಸಿ, ಮತ್ತದರ ಮೇಲೊಂದು ಬ್ರಹ್ಮಚಾರಿಗಳು ವಾಸಮಾಡತಕ್ಕಂಥ ಸಣ್ಣ ಮನೆ ಕಟ್ಟಿಸುವವರ ಸಂಖ್ಯೆಯೇ ಹೆಚ್ಚು. ಅಕ್ಕಪಕ್ಕದ ಮನೆಯವರ ಖಾಸಗೀತನಕ್ಕೆಲ್ಲ ಜಾಗವೇ ಇಲ್ಲದಂಥಾ ಮನೆಗಳವು. ಮನೆಯ ಮುಂದೆ ಮರವಿದ್ದರೆ ಸಂತೋಷಪಡುವ ಬದಲು, ಅದರ ಮುಂದೆ ತಮ್ಮ ಮನೆಯ “ಸೌಂದರ್ಯ”! ಕಾಣುವುದಿಲ್ಲವೆಂಬ ಕಾರಣಕ್ಕೆ ಮರ ಕಡಿಸುವ ಮೂರ್ಖರಿರುವುದು ಇಂಥ ಪಟ್ಟಣಗಳಲ್ಲಿ ಮಾತ್ರವೇ ಅನ್ನಿಸುತ್ತೆ.” ರೂಪಶ್ರೀ ಕಲ್ಲಿಗನೂರ್ ಅಂಕಣ

 

ಕಳೆದ ಒಂದು ವರ್ಷದಲ್ಲಿ ಕನ್ನಡ, ಮಲಯಾಳಂ, ಹಿಂದಿ, ಇಂಗ್ಲೀಷ್, ಕೊರಿಯನ್, ಆಫ್ಘನ್ ಅಂತ ಹಲವಾರು ಭಾಷೆಯ, ಹತ್ತು ಹಲವು ಚಿತ್ರಗಳನ್ನು ನೋಡಿದ್ದೆವು. ಶಾಲಾದಿನಗಳು ಮುಗಿಯುವವರೆಗೆ ಕನ್ನಡದ ಅತ್ಯಂತ ಅಪಭ್ರಂಶ, ತೀರ ಪೇಲವ ಅನ್ನಿಸುವಂಥ ಕೆಲ ಚಿತ್ರಗಳನ್ನು ಬೈ ಮಿಸ್ಟೇಕ್ ನೋಡಿದ್ದ ನನಗೆ ಥಿಯೇಟರಿಗೆ ಹೋಗಿ ಚಲನಚಿತ್ರಗಳನ್ನು ನೋಡುವಲ್ಲಿ ಯಾವತ್ತಿಗೂ ಆಸಕ್ತಿ ಕಡಿಮೆಯೆ. ಹಾಗಾಗಿ ಚಿತ್ರಮಂದಿರಕ್ಕೆ ಎಲ್ಲರೂ ಹೊರಟು ನಿಂತಾಗ ಅವಕಾಶ ಸಿಕ್ಕರೆ ಮನೆಯಲ್ಲೇ ಉಳಿದುಬಿಡುತ್ತಿದ್ದೆ. ಆದರೆ ಕಲಾ ಶಾಲೆಗೆ ಸೇರಿದ ಮೇಲಂತೂ ಕಮರ್ಷಿಯಲ್ ಚಿತ್ರಗಳ ಮೇಲೆ ಇದ್ದ ಚೂರುಪಾರು ಪ್ರೀತಿಯೂ ಕರಗಿ, ಕಲಾತ್ಮಕ ಚಿತ್ರಗಳತ್ತ ನನ್ನೊಲವು ಬೆಳೆಯಿತು. ನಾನೋದಿದ ಕಲಾಶಾಲೆಗಳಿಂದ ಜಪಾನ್, ಕೊರಿಯನ್, ಆಫ್ಘನ್ ಚಿತ್ರಗಳನ್ನು ನೋಡಲು ಆರಂಭಿಸಿದ್ದು. ಅಂದಿನಿಂದ ಇಂದಿನವರೆಗೆ ನನ್ನ ಕಾಮನ್ ಸೆನ್ಸ್ ಹೆಚ್ಚಿಸಿ ಬದುಕನ್ನು ಬಂದಂತೆ ಎದುರಿಸುವ ರೀತಿಯನ್ನು ಪುಸ್ತಕಗಳೊಟ್ಟಿಗೆ ಇಂಥ ಚಿತ್ರಗಳೂ ಹೇಳಿಕೊಟ್ಟಿವೆ.

“ಇನ್ ಟೂ ದ ವೈಲ್ಡ್” (Into the wild)  ಮತ್ತು “ಕ್ಯಾಸ್ಟ್ ಅವೇ” (Cast Away) ಕಳೆದ ವರ್ಷ ನೋಡಿದ, ನಂತರದಲ್ಲಿ ಬಹಳೇ ಕಾಡಿದ ಎರಡು ಚಿತ್ರಗಳು. ಯಾವುದೇ ಸೆನ್ಸಿಬಲ್ ಮನುಷ್ಯನಿಗೆ ಎಂದೂ ಕಾಡುವ ಶಕ್ತಿ ಆ ಎರಡು ಚಿತ್ರಗಳಿಗಿವೆ. ಅದರಲ್ಲೂ “ಇನ್ ಟೂ ದ ವೈಲ್ಡ್” ಕ್ಲೈಮ್ಯಾಕ್ಸ್ ನೋಡಿದ ಮೇಲೆ ನನ್ನ ಗಂಟಲುಬ್ಬಿ ಬಂದಿತ್ತು. ಬಹಳ ದಿನ ಅದರ ಗುಂಗಿನಲ್ಲೇ ಇದ್ದೆ. ಯಾಕೆಂದರೆ “ಇನ್ ಟೂ ದ ವೈಲ್ಡ್” ನ ನೈಜ ಘಟನೆಯ ನಾಯಕ ಕ್ರಿಸ್ ಆಗಷ್ಟೇ ತನ್ನ ಪದವಿಯನ್ನು ಮುಗಿಸಿರುತ್ತಾನೆ. ಎಲ್ಲರಂತೆ ಅವನೂ ಒಂದು ಕೆಲಸಕ್ಕೆ ಸೇರಿಕೊಂಡು, ತನ್ನ ಗೆಳತಿಯೊಂದಿಗೆ ಬಾಳು ಹಂಚಿಕೊಂಡು ಸುಖದಿಂದ ಇದ್ದುಬಿಡಬಹುದಿತ್ತು. ಆದರೆ ಕೃತಕತೆ, ನಾಟಕೀಯತೆಗಳೇ ತುಂಬಿದ ಯಾಂತ್ರಿಕ ಬದುಕನ್ನು ಬದುಕಲು ಅವನಿಗೆ ಸುತಾರಾಂ ಇಷ್ಟವಿರಲಿಲ್ಲ. ತನ್ನ ಬಳಿಯಿದ್ದ ಎಲ್ಲ ಹಣವನ್ನೂ ಚಾರಿಟೇಬಲ್ ಟ್ರಸ್ಟ್ ಒಂದಕ್ಕೆ ಬರೆದು, ಟ್ರಾವೆಲಿಂಗ್ ಬ್ಯಾಗನ್ನು ಹೆಗಲಿಗೇರಿಸಿಕೊಂಡು ದಿಕ್ಕು ದೆಸೆ ನೋಡದೆ ಹೊರಟೇ ಬಿಡುತ್ತಾನೆ. ಪ್ರಕೃತಿಯ ನಡುವೆ ತಾನೂ ಅದರ ಭಾಗದಂತೆ ಬದುಕಲಾರಂಭಿಸುತ್ತಾನೆ. ತನ್ನ ಸುತ್ತಲಿನ ಪ್ರಾಣಿಗಳಂತೆ ಹಸಿಹಸಿ ಮಾಂಸವನ್ನು ತಿನ್ನುತ್ತಾ, ಹಿಂದೆಲ್ಲಾ ಎಲ್ಲ ಕಾಲದಲ್ಲೂ ರಕ್ಷಿಸುತ್ತಿದ್ದ ತನ್ನ ಮೈಯನ್ನು ಚಳಿ, ಮಳೆ, ಗಾಳಿಗೆ ಒಡ್ಡಿ ತಾನು ತಾನಾಗಿರಲಾರಂಭಿಸುತ್ತಾನೆ. ತನ್ನ ಜೊತೆಯಲ್ಲಿದ್ದ ಸಸ್ಯದ ಕುರಿತ ಪುಸ್ತಕ ತೆಗೆದು ಯಾವ ಸಸ್ಯವನ್ನು ತಿನ್ನಲು ಯೋಗ್ಯವೆಂದು ನೋಡಿಕೊಂಡು ಅಲ್ಲಿನ ಗಿಡ-ಗಂಟೆಗಳ ಎಲೆಯನ್ನೇ ತಿಂದು ಬದುಕುತ್ತಾನೆ. ಒಂದುಕಡೆಯಿಂದ ಮತ್ತೊಂದೆಡೆಗೆ ಸಾಗುತ್ತಿದ್ದ ಅವನ ಪ್ರಯಾಣದಲ್ಲಿ ಕೆಲವರೊಂದಿಗೆ ಬಾಂಧವ್ಯ ಬೆಳೆಯುವ ಮುನ್ಸೂಚನೆ ಸಿಗುತ್ತದೆ. ಎಲ್ಲಿಗೂ, ಯಾವುದಕ್ಕೂ ತನ್ನನ್ನು ಕಟ್ಟಿಹಾಕಿಕೊಳ್ಳಲು ಸಿದ್ಧವಿಲ್ಲದ ಕ್ರಿಸ್, ಅವರ ಪ್ರೀತಿಯನ್ನು ಒಂದಿಷ್ಟು ಭಾರದ ಹೃದಯದಿಂದಲೇ ನಿರಾಕರಿಸಿ, ತನ್ನನ್ನು ಅಲ್ಲಿಂದ ಬಿಡಿಸಿಕೊಂಡು ಮತ್ತೆ ಮುಂದಿನ ಪಯಣಕ್ಕೆ ಅಣಿಯಾಗುತ್ತಾನೆ. ಹೀಗೆ ಸರ್ವೇ ಸಾಮಾನ್ಯವಾಗಿರುವ ಯಾಂತ್ರಿಕ ಬದುಕಿಗೆ ತನ್ನನ್ನು ಈಡುಮಾಡಿಕೊಳ್ಳದೇ, ಯಾವುದೇ ನಿರ್ಬಂಧ ಹೊರೆಸದ ಪ್ರಕೃತಿಯ ಜೊತೆ ತಾನೂ ಒಬ್ಬನಾಗಿದ್ದುಬಿಡಬೇಕೆಂದು ಬಯಸುವ ಕ್ರಿಸ್ ಎದುರಾಗುವ ಯಾವುದೇ ತೊಂದರೆಗಳಿಗೆ ಹೆದರದೇ, ಬದುಕಿನ ಭಾಗವೆಂಬಂತೆ ಅವನ್ನು ಸಹಜವಾಗಿ ನೋಡುತ್ತಾ ಮುಂದುವರೆಯುತ್ತಿರುತ್ತಾನೆ. ಆದರೆ ತಿನ್ನಬಹುದಾದ ಸಸ್ಯವೊಂದನ್ನು ಪತ್ತೆಹಚ್ಚುವಲ್ಲಿ ಎಡವುವ ಕ್ರಿಸ್, ವಿಷಕಾರಿ ಸಸ್ಯದ ಎಲೆಗಳನ್ನು ತಿಂದು, ಒದ್ದಾಡಿ ಪ್ರಾಣ ಬಿಡುತ್ತಾನೆ.

ಬರೀ ಕಟ್ಟಡಗಳ ಕಡಲಲ್ಲೇ ಮುಳುಗೆದ್ದಿರುವಂತೆ ತೋರುವ ಅಮೇರಿಕಾದಲ್ಲಿ ಕ್ರಿಸ್ ನಂತಹ ಹುಡುಗನೊಬ್ಬ ಹಾಗೆ ಕೃತಕತೆಯಿಂದಲೇ ತುಂಬಿತುಳುಕುವಂಥ ಬದುಕಿನಿಂದ ಬಿಡುಗಡೆ ಬಯಸಿ, ಪ್ರಕೃತಿಯ ಮಡಿಲನ್ನು ಸೇರಲು ಇನ್ನಿಲ್ಲದ ಸಾಹಸಗಳನ್ನು ಮಾಡುತ್ತಾನೆ. ಅದು ಕೇವಲ, ಅಲ್ಲಿನ ಒಬ್ಬ ಹುಡುಗನ ಕಥೆಯಲ್ಲ. ಹೀಗೆ ಅನಾಮತ್ತು ಪ್ರಕೃತಿಯನ್ನು ತುಳಿದು, ಅದರ ಮೇಲೆ ಸಿಮೆಂಟು, ಇಟ್ಟಿಗೆಯ ಸೌಧಗಳನ್ನು ಕಟ್ಟುತ್ತಿರುವ ನಗರಗಳಲ್ಲಿ ಕ್ರಿಸ್ ನಂತಹ ಸಾವಿರಾರು ಹುಡುಗರು ಸಿಕ್ಕೇ ಸಿಗುತ್ತಾರೆ. ಮನುಷ್ಯ ಮತ್ತು ಪ್ರಕೃತಿ ಬೇರೆಬೇರೆಯಲ್ಲ. ನಾವು ಅದರ ಭಾಗ. ಅದಕ್ಕೇ ಹೊರಗಿನ ಶುದ್ಧ ತಂಗಾಳಿ ಹಾಗೂ ನಾವೇ ತಯಾರಿಸಿರೋ ಏಸಿ ಗಾಳಿಯಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕೆಂದಾದಾಗ ಶುದ್ಧ ನೈಸರ್ಗಿಕ ಗಾಳಿಯೇ ಎಲ್ಲರ ಆಯ್ಕೆಯಾಗಿರುತ್ತದೆ.

(“ಇನ್ ಟೂ ದ ವೈಲ್ಡ್” ಚಿತ್ರಕತೆಯ ಸ್ಪೂರ್ತಿ ಕ್ರಿಸ್)

ಎಲ್ಲರಂತೆ ಅವನೂ ಒಂದು ಕೆಲಸಕ್ಕೆ ಸೇರಿಕೊಂಡು, ತನ್ನ ಗೆಳತಿಯೊಂದಿಗೆ ಬಾಳು ಹಂಚಿಕೊಂಡು ಸುಖದಿಂದ ಇದ್ದುಬಿಡಬಹುದಿತ್ತು. ಆದರೆ ಕೃತಕತೆ, ನಾಟಕೀಯತೆಗಳೇ ತುಂಬಿದ ಯಾಂತ್ರಿಕ ಬದುಕನ್ನು ಬದುಕಲು ಅವನಿಗೆ ಸುತಾರಾಂ ಇಷ್ಟವಿರಲಿಲ್ಲ. ತನ್ನ ಬಳಿಯಿದ್ದ ಎಲ್ಲ ಹಣವನ್ನೂ ಚಾರಿಟೇಬಲ್ ಟ್ರಸ್ಟ್ ಒಂದಕ್ಕೆ ಬರೆದು, ಟ್ರಾವೆಲಿಂಗ್ ಬ್ಯಾಗನ್ನು ಹೆಗಲಿಗೇರಿಸಿಕೊಂಡು ದಿಕ್ಕು ದೆಸೆ ನೋಡದೆ ಹೊರಟೇ ಬಿಡುತ್ತಾನೆ. ಪ್ರಕೃತಿಯ ನಡುವೆ ತಾನೂ ಅದರ ಭಾಗದಂತೆ ಬದುಕಲಾರಂಭಿಸುತ್ತಾನೆ. ತನ್ನ ಸುತ್ತಲಿನ ಪ್ರಾಣಿಗಳಂತೆ ಹಸಿಹಸಿ ಮಾಂಸವನ್ನು ತಿನ್ನುತ್ತಾ, ಹಿಂದೆಲ್ಲಾ ಎಲ್ಲ ಕಾಲದಲ್ಲೂ ರಕ್ಷಿಸುತ್ತಿದ್ದ ತನ್ನ ಮೈಯನ್ನು ಚಳಿ, ಮಳೆ, ಗಾಳಿಗೆ ಒಡ್ಡಿ ತಾನು ತಾನಾಗಿರಲಾರಂಭಿಸುತ್ತಾನೆ.

“ಕ್ಯಾಸ್ಟ್ ಅವೇ” ಚಿತ್ರವೂ ನೈಜ ಘಟನೆಯಾಧಾರಿತ ಚಿತ್ರವೇ. ಚಕ್ ನೋಲ್ಯಾಂಡ್ ಅನ್ನುವವನೊಬ್ಬ ತನ್ನ ಕೆಲಸದ ನಿಮಿತ್ತ ವಿಮಾನದಲ್ಲಿ ಪ್ರಯಾಣಿಸುವಾಗ, ಆ ವಿಮಾನ ಅಪಘಾತಕ್ಕೊಳಗಾಗಿ ದ್ವೀಪವೊಂದರ ದಡಕ್ಕೆ ಬಿದ್ದು, ಕುಡಿಯಲು ಸಿಹಿ ನೀರೂ ಸಿಗಲಾರದ ಸಮುದ್ರ ತಟದಲ್ಲಿ ನಾಲ್ಕು ವರ್ಷಗಳನ್ನು ಒಬ್ಬಂಟಿಯಾಗಿ ಕಳೆಯುತ್ತಾನೆ. ಅದರ ಮುನ್ನಾದಿನಗಳಲ್ಲಿ ಬೇಕೆನ್ನಿಸಿದ ಯಾವುದೇ ವಸ್ತುವನ್ನು ಕೊಂಡುಕೊಳ್ಳಬಲ್ಲವನಾಗಿದ್ದ ಆತ ಏನೇನೂ ಇಲ್ಲದ ಜಾಗದಲ್ಲಿ ಹೇಗೆ ನಾಲ್ಕು ವರ್ಷ ಬದುಕುತ್ತಾನೆ? ಮನುಷ್ಯನೊಬ್ಬ ತನ್ನುಳಿವಿಗಾಗಿ, ಹಸಿವಿಗಾಗಿ ಏನೇನು ಮಾಡಬಲ್ಲ ಅಥವಾ ಮಾಡಬಹುದು ಅನ್ನುವುದಕ್ಕೆ ಅವನ ಬದುಕೇ ಸ್ಪೂರ್ತಿ.

ಮೊನ್ನೆ ಹಿರಿಯ ಸ್ನೇಹಿತರೊಬ್ಬರ ಮನೆಗೆ ಹೋಗಿದ್ದಾಗ ಅಲ್ಲಿಗೆ ಬಂದ ವ್ಯಕ್ತಿಯೊಬ್ಬರು, ಹಳ್ಳಿಗೆ ಏನೆಲ್ಲ ಮಾಡಬೇಕಿದೆ ಅಂತ ಮಾತನಾಡುತ್ತಿದ್ದ ನಮ್ಮನ್ನು ಅರ್ಧದಲ್ಲಿ ತಡೆದು “ಅಯ್ಯೋ ಬೆಂಗ್ಳೂರಿಗೇ ಏನೂ ಮಾಡಿಲ್ಲ, ಇನ್ನು ಹಳ್ಳಿಗೆಲ್ಲ ಏನು ಮಾಡ್ತಾರೆ” ಎಂದರು. ನಾನು ಅಚ್ಚರಿಯಿಂದ “ಇನ್ನೂ ಏನು ಕಡಿಮೆಯಿದೆ ಬೆಂಗ್ಳೂರಿಗೆ” ಅಂತ ಕೇಳಿದವಳಿಗೆ “ಇನ್ನೂ ತುಂಬಾ ಡೆವಲಪ್ ಮೆಂಟ್ ಆಗಬೇಕಿದೆ” ಅಂದ ಅವರ ಮಾತು ಹಳ್ಳಿಗಳ ಬಗ್ಗೆ ಮಾತನಾಡುತ್ತಿದ್ದವರಿಗೆ ನಗರ ನಿವಾಸಿಗಳ ಮನಸ್ಥಿತಿ ಹೇಗಿದೆ ಎಂಬುದರ ಸ್ಯಾಂಪಲ್ ಸಿಕ್ಕಿತ್ತು. ನಿಜಕ್ಕೂ ಬೆಂಗಳೂರಿನಲ್ಲಿ ಏನೂ ಆಗಿಲ್ಲವೇ? ಮನುಷ್ಯನ ಬೇಕುಗಳ ಪಟ್ಟಿ ಎಂದಿಗೂ ಮುಗಿಯೋದಿಲ್ಲ ಅನ್ನಿಸುತ್ತೆ. ಏನೆಲ್ಲ ಇದ್ದರೂ ವ್ಯವಸ್ಥೆಯ ಬಗ್ಗೆ ಕೂತು ದೂರುವವರೊಮ್ಮೆ “ಕ್ಯಾಸ್ಟ್ ಅವೇ” ಚಿತ್ರವನ್ನು ನೋಡಲೇಬೇಕು. ಎಲ್ಲ ಇದ್ದಾಗ, ನಾವು ಮಾಡುವ ತಪ್ಪಿನ ಅರಿವು ನಮಗೆ ಆಗುವುದೇ ಇಲ್ಲ.  ಚಕ್‍ ಕೂಡ ಹಾಗೆಯೇ ಇದ್ದವನು. ನಾಲ್ಕು ವರ್ಷಗಳ ವನವಾಸ ಮುಗಿಸಿಕೊಂಡು ಬಂದ ಸಂತೋಷದ ಕೂಟದಲ್ಲಿ, ಜನ ತಿಂದುಂಡು, ಕೊನೆಗೆ ಎಲ್ಲರೂ ಹೊರಟ ಮೇಲೆ, ಊಟದ ಟೇಬಲ್ಲಿನ ಮೇಲೆ ತಟ್ಟೆಗಳ ತುಂಬ ಉಳಿದಿದ್ದ ಆಹಾರವನ್ನು ಕಂಡ ಅವನು ತೀವ್ರವಾಗಿ ಬೇಸರಿಸಿಕೊಳ್ಳುತ್ತಾನೆ. ಏಕೆಂದರೆ ಆ ನಾಲ್ಕು ವರ್ಷಗಳಲ್ಲಿ ಆಹಾರದ ಮಹತ್ವವೇನೆಂಬುದು ಅವನಿಗೆ ಅರಿವಾಗಿರತ್ತೆ.

(“ಕ್ಯಾಸ್ಟ್ ಅವೇ” ಚಿತ್ರದ ಒಂದು ದೃಶ್ಯ)

ಹಳ್ಳಿಯ ಅಥವಾ ಹಸಿರಿನಿಂದ ಸಮೃದ್ಧಿ ಹೊಂದಿರೋ ಜಾಗದಲ್ಲಿನ ಜನರು ಎಲ್ಲೆಲ್ಲೋ ಓಡಾಟಕ್ಕೆಂದು ಊರೂರಿಗೆ ಹೋಗುವ ಪರಿಪಾಠ ಕಡಿಮೆ. ಆದರೆ ಪಟ್ಟಣ ವಾಸಿಗಳಿಗೆ ತಾವು ರಚಿಸಿಕೊಂಡಿರುವ ಚಕ್ರವ್ಯೂಹದಲ್ಲಿ ಇರಲೂ ಆಗದೇ ಅದರಿಂದ ಹೊರಬರಲೂ ಆಗದೇ ಅಲ್ಲೇ ಒದ್ದಾಡುತ್ತಿರುತ್ತಾರೆ. ಟ್ರಾಫಿಕ್ಕಿನ ಸಮರೋಪಾದಿಯಲ್ಲಿ, ತಾನೂ ಒಂದಾಗಿ, ಕಾರ್ಬನ್ನಿನ ಪ್ರತಿರೂಪವಾದಂಥ ಕಲುಷಿತ ಗಾಳಿಯನ್ನು ಒಳಗೆಳೆದುಕೊಳ್ಳುತ್ತಾ, ಪೇಲವ ಮುಖ ಹೊತ್ತು ಆಫೀಸಿಗೆ ಹೋಗಿ, ವಾಪಾಸ್ಸು ಮನೆಗೆ ಬರುವಷ್ಟರಲ್ಲಿ ಜೀವ ಅರ್ಧವಾಗಿ ಹೋಗಿರುತ್ತೆ. ಅದದೇ ಕಟ್ಟಡ, ಅದದೇ ಟ್ರಾಫಿಕ್ಕಿನಿಂದ ಮೆತ್ತಗಾದವರು ಹುಯ್ಯೆಂದು ಪ್ರವಾಸಿ ತಾಣಗಳಿಗೆ ಓಟ ಕಿತ್ತುತ್ತಾರೆ. ಓದಿದಷ್ಟೂ ಹೊಂದಿಕೊಳ್ಳುವ ಗುಣದಿಂದ ದೂರವಾಗುತ್ತಿರುವ ಜನ ಆಯಾ ಪ್ರದೇಶಕ್ಕೆ ತಕ್ಕಂತೆ ಇರುವುದನ್ನೂ ಕಲಿಯುವುದಿಲ್ಲ. ಹೋದಲ್ಲೆಲ್ಲ ನೂಡಲ್ಸ್, ಗೋಬಿ ಮಂಚೂರಿಯನ್ನೇ ಕೇಳುತ್ತಾರೆ. ಒಂದಷ್ಟು ಜನರ ನೈಜ ಜಾಣ್ಮೆಯಿಂದ ಪ್ರವಾಸಿಗರ ಇಂಥ ಹುಚ್ಚಾಟಗಳಿಗೆ ಒತ್ತು ಸಿಗದಿದ್ದರೂ, ದುಡ್ಡಿಗಾಗಿ ಏನನ್ನಾದರೂ ಮಾಡಿಬಿಡುವ ಜನರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. “ನಮ್ಮಲ್ಲಿಗೆ ಬರೋ ಕೆಲವು ಬೆಂಗ್ಳೂರ್ ಜನ ಬೇರೇದ್ದೆ ಯೋಚ್ನೆ ಮಾಡ್ಕಂಡ್ ಇಲ್ಲಿಗ್ ಬಂದಿರ್ತಾರೆ. ಕುಡಿಯೋದು, ಇಲ್ಲಿ ಮೀನುಗಳ್ನ ಹಿಡಿದು ಅಲ್ಲೇ ಸುಟ್ಟು ತಿನ್ನೋದು, ನಾನ್ ವೆಜ್ ಮಾಡ್ತೀರಾ ಅನ್ನೋದು ಅಂತೆಲ್ಲ ಕೇಳ್ತಿರ್ತಾರೆ. ನಾನದಕ್ಕೆ ಸುತಾರಾಂ ಒಪ್ಪಂಗಿಲ್ಲ. ಅದರಲ್ಲೂ ಯಾರೊಬ್ಬರೂ ಪ್ಲಾಸ್ಟಿಕ್ ಹಾಳೆಗಳನ್ನು ಎಲ್ಲೆಲ್ಲೋ ಬಿಸಾಡದಂತೆ ನೋಡಿಕೊಳ್ತೇನೆ. ಇಲ್ಲಿಗೆ ಬರೋರು ನಮ್ಮನೆ ಜನಾ ಥರಾನೆ ಇದ್ರೆ ನಮ್ಗೆ ಖುಷಿ. ನಮ್ಮನೆಯವ್ರಾಗ್ಲೀ, ನಮ್ಮೂರ್ ಜನಾ ಆಗಲೀ ತಮ್ಮೂರನ್ನ ಹಾಳುಗುಂಡಿ ಮಾಡಲ್ಲ. ಅದಕ್ಕೆ ಅವ್ರನ್ನ ನಮ್ಮಂತೆ ಇರೋದಾದ್ರೆ ಮಾತ್ರವೇ ಬನ್ನಿ, ಇಲ್ಲವಾದ್ರೆ ಬೇಡ ಅಂತ ಹೇಳಿಬಿಡ್ತೇವೆ” ಅಂತ ಶಿರಸಿಯ ಹೋಂ ಸ್ಟೇ ಮಾಲೀಕರೊಬ್ಬರು ಹೇಳುತ್ತಾರೆ.

ಬರೀ ಕಟ್ಟಡಗಳ ಕಡಲಲ್ಲೇ ಮುಳುಗೆದ್ದಿರುವಂತೆ ತೋರುವ ಅಮೇರಿಕಾದಲ್ಲಿ ಕ್ರಿಸ್ ನಂತಹ ಹುಡುಗನೊಬ್ಬ ಹಾಗೆ ಕೃತಕತೆಯಿಂದಲೇ ತುಂಬಿತುಳುಕುವಂಥ ಬದುಕಿನಿಂದ ಬಿಡುಗಡೆ ಬಯಸಿ, ಪ್ರಕೃತಿಯ ಮಡಿಲನ್ನು ಸೇರಲು ಇನ್ನಿಲ್ಲದ ಸಾಹಸಗಳನ್ನು ಮಾಡುತ್ತಾನೆ. ಅದು ಕೇವಲ, ಅಲ್ಲಿನ ಒಬ್ಬ ಹುಡುಗನ ಕಥೆಯಲ್ಲ. ಹೀಗೆ ಅನಾಮತ್ತು ಪ್ರಕೃತಿಯನ್ನು ತುಳಿದು, ಅದರ ಮೇಲೆ ಸಿಮೆಂಟು, ಇಟ್ಟಿಗೆಯ ಸೌಧಗಳನ್ನು ಕಟ್ಟುತ್ತಿರುವ ನಗರಗಳಲ್ಲಿ ಕ್ರಿಸ್ ನಂತಹ ಸಾವಿರಾರು ಹುಡುಗರು ಸಿಕ್ಕೇ ಸಿಗುತ್ತಾರೆ. ಮನುಷ್ಯ ಮತ್ತು ಪ್ರಕೃತಿ ಬೇರೆಬೇರೆಯಲ್ಲ. ನಾವು ಅದರ ಭಾಗ.

ಮನುಷ್ಯ ಎಷ್ಟು ಎತ್ತರದ ಅಪಾರ್ಟ್ ಮೆಂಟಿನಲ್ಲಿ ವಾಸ್ತವ್ಯ ಹೂಡಿದರೂ, ಅವನ ಜೀವಿತಕ್ಕೆ ಈ ಮಣ್ಣಿನೆದೆಯಲ್ಲಿ ಬೆಳೆವ ವಸ್ತುಗಳೇ ಬೇಕಾಗುತ್ತವೆ ಹೊರತು ಲ್ಯಾಪ್ ಟಾಪಿನ ಕೀಬೋರ್ಡ್ ಕುಟ್ಟಿಕುಟ್ಟಿ ಅನ್ನ ಸಿದ್ಧಮಾಡಲಾಗುವುದಿಲ್ಲ. ಮನುಷ್ಯನಿಗೆ ಭೂಮಿಯ ನಂಟು ಬೇಕೇಬೇಕು. ನಾವು ಅದರ ನಂಟಿನಿಂದ ದೂರವಾದಷ್ಟು ರೋಗಗಳಿಗೆ ಹತ್ತಿರವಾಗುತ್ತ ಹೋಗುತ್ತೇವೆ. ಉತ್ತರ ಕರ್ನಾಟಕದ ಮೂಲದವಳಾದ ನನಗೆ ಬಿಸಿಲೆಂದರೆ ಒಂದಿಷ್ಟೂ ಆಗಿಬರುವುದಿಲ್ಲ. ಚಿಕ್ಕವಳಿದ್ದಾಗಿಂದಲೂ  ಊರಿಗೆ ಹೋದಾಗಲೊಮ್ಮೆ ಅಲ್ಲಿನ ಬಿಸಿಲಿಗೆ ನನ್ನ ದೇಹ ತತ್ತರಿಸಿ, ಎರಡು ದಿನ ಮಲಗಿ, ಅಲ್ಲಿಯ ವೈದ್ಯರನ್ನ ಕಂಡು ಬರೋದು ರೂಢಿಯೇ ಆಗಿತ್ತು. ಹಾಗಂತ ನಾನು ಊರಿಗೆ ಹೋಗೋ ಅವಕಾಶವನ್ನ ಎಂದಿಗೂ ಬಿಟ್ಟುಕೊಡುವುದಿಲ್ಲ. ಅಲ್ಲಿನ ಜನ ನಿಜಕ್ಕೂ ನಮಗೆ ಸ್ಪೂರ್ತಿದಾಯಕರು. ಎಷ್ಟೇ ಬಡತನವಿದ್ದರೂ ಬಂದವರಿಗೆ ರೊಟ್ಟಿ-ಪಲ್ಯವನ್ನು ತಿನ್ನಿಸದೇ ಕಳುಹಿಸೋದಿಲ್ಲ. ಹಾಗಂತ ದುಡ್ಡಿದ್ದವರು ದುಂದು ವೆಚ್ಚವನ್ನೂ ಮಾಡೋದಿಲ್ಲ. ಒಂದು ಇಪ್ಪತ್ತೆಂಟು ಎಕರೆಯುಳ್ಳ ನನ್ನ ದೊಡ್ಡಮ್ಮನ ಮನೆಯಲ್ಲಿ, ಒಬ್ಬ ಸೊಸೆಯನ್ನ ಮನೆಯ ಕೆಲಸಕ್ಕೆ ಬಿಟ್ಟು ಮಿಕ್ಕೆಲ್ಲರೂ ಹೊಲದಲ್ಲಿ ದುಡಿಯುತ್ತಾರೆ. ಸರಳೀಕೃತ ಬದುಕು ಅವರದ್ದು. ಎಲ್ಲವನ್ನೂ ತಾವು ನಂಬುವ ದೇವರ ಮೇಲೆ ಎಲ್ಲ ಭಾರ ಹಾಕಿ ವರಕ್ಕೆಂದು ಕಾದು ಕುಳಿಕೊಳ್ಳುವುದಿಲ್ಲ. ಇರುವುದಲ್ಲಿ ಬದುಕನ್ನು ಎಷ್ಟೆಲ್ಲ ಚಂದವಾಗಿಸಿಕೊಳ್ಳಬಹುದೆಂದು ಅವರನ್ನು ನೋಡಿ ಕಲಿಯಬೇಕು.

ಇತ್ತೀಚೆಗೆ ಓದಿದ ಲೇಖನವೊಂದರಲ್ಲಿ ನಾವು ಭೂಮಿಯ ಸಂಪರ್ಕದಿಂದ ದೂರವಾಗುತ್ತಿರುವುದೇ ನಾವೆಲ್ಲ ಈಗ ಈಡಾಗುತ್ತಿರುವ ಚಿತ್ರ ವಿಚಿತ್ರ ಕಾಯಿಲೆಗಳಿಗೆ ಮೂಲ ಕಾರಣವೆಂದು ಹೇಳಿದ್ದಾರೆ. ಚಪ್ಪಲಿ, ಶೂಗಳು ಬಂದಾಗಿನಿಂದ ಯಾರೂ ಬರಿಗಾಲಿನಲ್ಲಿ ಮಣ್ಣಮೇಲೆ ನಡೆಯಲು ಇಷ್ಟಪಡುವುದಿಲ್ಲ. ಒಂದೇನು, ಎರಡೇನು?… ಮನೆಯೊಳಗೆ, ಹೊರಗೆ, ಬಾತ್ ರೂಮಿಗೆ, ಬೀಚಿಗೆ… ಬಟ್ಟೆಗಳಿಗೆ, ಅವುಗಳ ಬಣ್ಣಗಳಿಗೆ ತಕ್ಕಂತೆ ಹೊಂದುವಂತೆ ಹಲವು ಚಪ್ಪಲಿಗಳನ್ನು ತಂದಿಟ್ಟುಕೊಳ್ಳುವ ಜನರಿದ್ದಾರೆ. ಆದರೆ ಬರೀ ಪಾದಗಳಲ್ಲಿ ಮಣ್ಣಮೇಲೆ, ಹುಲ್ಲಿನ ಮೇಲೆ ನಿಂತಾಗ ಆಗುವ ಅದ್ಭುತ ಆನಂದ ಅನುಭವಿಸಿದವರಿಗೇ ಗೊತ್ತು. ಅದು ನಿಜವೇ ಅಲ್ಲವೆ? ಪಟ್ಟಣದಲ್ಲೊಂದು ಸೈಟು ಸಿಕ್ಕರೆ ಮುಗೀತು. ತಮಗೆ ಬೇಕಾದಷ್ಟು ವಿಶಾಲವಾಗಿ ಮನೆಯನ್ನು ಕಟ್ಟಿಸಿಕೊಂಡು, ಮುಂದೆ ಕೈದೋಟವನ್ನು ಮಾಡಿಕೊಂಡು, ಅಲ್ಲೇ ತಮಗೆ ಬೇಕಾದ ತರಕಾರಿಗಳನ್ನು ಬೆಳೆಸಿಕೊಂಡು ನೆಮ್ಮದಿಯ ಬದುಕ ಬದುಕುವ ಜನ ತೀರ ಕಡಿಮೆಯೇ. ಹೊಸ್ತಿಲಿಗೆ ಕಾಲು ತಾಗಿ ಎಡವಿದರೆ ಸೀದಾಸೀದಾ ರಸ್ತೆಗೆ ಬೀಳುವಂತೆ ಕಾಂಪೌಂಡಿನವರೆಗೂ ಮನೆಯನ್ನು ವಿಸ್ತರಿಸಿಕೊಂಡು, ಅದರ ಮೇಲೆ ಅಡುಗೆ ಕೋಣೆಯಂಥ ಪುಟ್ಟ ರೂಮುಳ್ಳ ಎರಡು ಮನೆ ಕಟ್ಟಿಸಿ, ಮತ್ತದರ ಮೇಲೊಂದು ಬ್ರಹ್ಮಚಾರಿಗಳು ವಾಸಮಾಡತಕ್ಕಂಥ ಸಣ್ಣ ಮನೆ ಕಟ್ಟಿಸುವವರ ಸಂಖ್ಯೆಯೇ ಹೆಚ್ಚು. ಅಕ್ಕಪಕ್ಕದ ಮನೆಯವರ ಖಾಸಗೀತನಕ್ಕೆಲ್ಲ ಜಾಗವೇ ಇಲ್ಲದಂಥಾ ಮನೆಗಳವು. ಮನೆಯ ಮುಂದೆ ಮರವಿದ್ದರೆ ಸಂತೋಷಪಡುವ ಬದಲು, ಅದರ ಮುಂದೆ ತಮ್ಮ ಮನೆಯ “ಸೌಂದರ್ಯ”! ಕಾಣುವುದಿಲ್ಲವೆಂಬ ಕಾರಣಕ್ಕೆ ಮರ ಕಡಿಸುವ ಮೂರ್ಖರಿರುವುದು ಇಂಥ ಪಟ್ಟಣಗಳಲ್ಲಿ ಮಾತ್ರವೇ ಅನ್ನಿಸುತ್ತೆ. ಹಳ್ಳಿಯ ಕಡೆಗಳಲ್ಲೂ ಇಂಥ ಜನರಿದ್ದಾರೆಂದು ನಿಮಗೆ ಗೊತ್ತಿದ್ದರೆ ಅದರಂಥ ದುರಂಥ ಮತ್ತೊಂದಿಲ್ಲ ಬಿಡಿ. ಸಂಗೀತ ಮತ್ತು ಚಿತ್ರಕಲಾವಿದರಿಗಂತೂ  ಇಂಥ ವಾತಾವರಣ ಅಷ್ಟೇನೂ ಅಪ್ಯಾಯವಲ್ಲ. ಮೂರೂ ಹೊತ್ತು ಸೀರಿಯಲ್ ನೋಡುವವರ ಮನೆಯ ಪಕ್ಕ ಹಾಡುಗಾರನೊಬ್ಬನ ಮನೆಯಿದ್ದರೆ ಏನು ಗತಿ? ನಮಗೆ ಆರಾಮಿಲ್ಲದಾಗ ಅಪ್ಪನೋ ಅಮ್ಮನೋ ಬಂದು ಒಂದಿಷ್ಟು ಮೈ, ಕೈ ಸವರಿ, ಹಣೆಯ ಮೇಲೆ ಕೈಯಾಡಿಸಿದ ಮೇಲೆ ಅನಾರೋಗ್ಯದಿಂದ ಶೀಘ್ರ ಗುಣಹೊಂದುತ್ತೇವೆ. ಪ್ರಕೃತಿಗೆ ಅಷ್ಟು ಶಕ್ತಿಯಿದೆ. ಮನುಷ್ಯ ಪ್ರಕೃತಿಯ ಭಾಗವೇ ಹೊರತು, ಉದ್ಭವ ಮೂರ್ತಿಯಲ್ಲ. ಈಗಾಗಲೇ ಹಲವಾರು ಜನ ಯುವಕ ಯುವತಿಯರು ಊರು ಸೇರಿದ್ದಾರೆ. ಇಲ್ಲಿಯೇ ಓದಿದವರು ಹಳ್ಳಿಗೆ ಹೋಗಲು ಹಂಬಲಿಸಿದರೆ, ಹಳ್ಳಿಯವರಿಗೆ ಇಲ್ಲಿಗೆ ಬರಲು ಆಸೆ! ಮುಂದುವರಿಯುವ ಅಥವಾ ಅಭಿವೃದ್ಧಿ ಹೊಂದುವ ಧಾವಂತದಲ್ಲಿ ಪ್ರಕೃತಿಯನ್ನೇ ತುಳಿದು ಅದರ ಮೇಲೆ ಕಟ್ಟುತ್ತಿರುವ ಮಹಲುಗಳು ನಮ್ಮ ಭವಿಷ್ಯದ ಗೋರಿಗಳೆಂದು ಹೇಗಾದರೂ ಅರ್ಥೈಸಬೇಕು ಈ ಜನಗಳಿಗೆ?

ಅಲ್ಲಿನ ಜನ ನಿಜಕ್ಕೂ ನಮಗೆ ಸ್ಪೂರ್ತಿದಾಯಕರು. ಎಷ್ಟೇ ಬಡತನವಿದ್ದರೂ ಬಂದವರಿಗೆ ರೊಟ್ಟಿ-ಪಲ್ಯವನ್ನು ತಿನ್ನಿಸದೇ ಕಳುಹಿಸೋದಿಲ್ಲ. ಹಾಗಂತ ದುಡ್ಡಿದ್ದವರು ದುಂದು ವೆಚ್ಚವನ್ನೂ ಮಾಡೋದಿಲ್ಲ. ಒಂದು ಇಪ್ಪತ್ತೆಂಟು ಎಕರೆಯುಳ್ಳ ನನ್ನ ದೊಡ್ಡಮ್ಮನ ಮನೆಯಲ್ಲಿ, ಒಬ್ಬ ಸೊಸೆಯನ್ನ ಮನೆಯ ಕೆಲಸಕ್ಕೆ ಬಿಟ್ಟು ಮಿಕ್ಕೆಲ್ಲರೂ ಹೊಲದಲ್ಲಿ ದುಡಿಯುತ್ತಾರೆ. ಸರಳೀಕೃತ ಬದುಕು ಅವರದ್ದು. ಎಲ್ಲವನ್ನೂ ತಾವು ನಂಬುವ ದೇವರ ಮೇಲೆ ಎಲ್ಲ ಭಾರ ಹಾಕಿ ವರಕ್ಕೆಂದು ಕಾದು ಕುಳಿಕೊಳ್ಳುವುದಿಲ್ಲ. ಇರುವುದಲ್ಲಿ ಬದುಕನ್ನು ಎಷ್ಟೆಲ್ಲ ಚಂದವಾಗಿಸಿಕೊಳ್ಳಬಹುದೆಂದು ಅವರನ್ನು ನೋಡಿ ಕಲಿಯಬೇಕು.

ಇದ್ದಲ್ಲಿಯ ಮರಗಳನ್ನು ಕಡಿದು, ಮತ್ತೆಲ್ಲೋ ಸಸಿಗಳನ್ನು ನೆಟ್ಟರೆ ಯಾವುದೂ ಸರಿದೂಗುವುದಿಲ್ಲ. ಮಣ್ಣಿನ ಸತ್ವಕ್ಕೆ ಸರಿಯಾಗಿ, ಅಲ್ಲಲ್ಲಿನ ವಾತಾವರಣಕ್ಕೆ ಪೂರಕವಾಗಿ ಒಂದೊಂದುಕಡೆ ಒಂದೊಂದು ಜಾತಿಯ ಗಿಡ-ಮರ ಬೆಳೆಯುತ್ತದೆ. ಮರುಭೂಮಿಯಲ್ಲೋ, ಉತ್ತರ ಕರ್ನಾಟಕದ ಬರಿಯ ಒಡಲಲ್ಲೋ ಸುಮ್ಮಸುಮ್ಮನೇ ಮರ ಬೆಳೆಸುತ್ತ ಹೋದರೆ ಮುಂಗಾರು ವ್ಯತ್ಯಯವಾಗತ್ತೆ. ಎಲ್ಲವೂ ಅಲ್ಲೋಲಕಲ್ಲೋಲವಾಗುತ್ತದೆ. ಬೇಸಿಗೆಯಲ್ಲಿ ಜೋರುಮಳೆ ಸುರಿದರೆ ಸಂತೋಷಕ್ಕಿಂತ ಗಾಬರಿ ಹೆಚ್ಚಾಗುತ್ತದೆ. ಮುಂಗಾರಿನ ಮಳೆ ಆಗಲೇ ಬರಬೇಕು. ಇಲ್ಲವಾದಲ್ಲಿ ನಮ್ಮ ಗ್ರಹಚಾರ ಕೆಡುತ್ತಿದೆ ಅಂತಲೇ ಪರಿಗಣಿಸಬೇಕು.

ತಿಂಗಳ ಹಿಂದೆ ಶಿರಸಿಗೆ ಹೋಗಿ ವಾಪಸ್ಸು ಬರುವಾಗ ಬರುವಾಗ “ಫ್ಲ್ಯಾಟ್ ಬೇಕಿದ್ದವರು ಇಲ್ಲಿ ಸಂಪರ್ಕಿಸಬಹುದು” ಎಂಬ ಬೋರ್ಡ್ ಒಂದನ್ನು ಕಂಡು ನಿಜಕ್ಕೂ ಬೇಸರವೆನ್ನಿಸಿತು. ಅದಕ್ಕೊಂದು ಕಲ್ಲೊಗೆದು ಹರಿದು ಹಾಕಿಬಿಡುವಷ್ಟು ಸಿಟ್ಟೂ ಬಂದಿತ್ತು. ಇಲ್ಲಿಗೆ ವಿಶ್ರಾಂತಿಗೆಂದು ಬಂದು ಹೋಗುವ ಜನರನ್ನು ಅಲ್ಲೊಂದು ಮನೆ ಕಟ್ಟಿಸಿಕೊಳ್ಳಲು ಪ್ರೇರೇಪಿಸುವ ಹುನ್ನಾರವದು. ಅಂತಹ ಹಸುರು ನೆಲದ ಮೇಲೂ ರೊಕ್ಕ ಮಾಡುವವರ ಕಣ್ಣು ಬಿದ್ದಿದೆಯಲ್ಲ; ಇವರು ತಮ್ಮ ಮುಂದಿನ ಪೀಳಿಗೆಗೆ ಬರೀ ಸಿಮೆಂಟಿನ ಗೋರಿಗಳನ್ನು ಬಿಟ್ಟುಹೋಗಬೇಕೆಂದು ಪಣತೊಟ್ಟಿದ್ದಾರೋ ಹೇಗೆ? ನಿಜಕ್ಕೂ ಅರ್ಥವಾಗುತ್ತಿಲ್ಲ.