ಮನಸಿನಲ್ಲಿ ಯಾಕೋ ತಳಮಳ ಶುರುವಾಯಿತು. ಇವರಾರೋ ಫೋನ್ ನಂಬರ್ ಶೇರ್ ಮಾಡುತ್ತಿಲ್ಲ, ಐಡೆಂಟಿಟಿ ಶೇರ್ ಮಾಡುತ್ತಿಲ್ಲ, ಕೇವಲ ನನ್ನ ವಿವರ ಪಡೆದು, ಇಲ್ಲಿಗೆ ಕರೆಸಿಕೊಂಡಿದ್ದಾರೆ, ಈಗಲೂ ಕಾಯಿಸುತ್ತಿದ್ದಾರೆ ಎಂದುಕೊಳ್ಳುವಷ್ಟರಲ್ಲಿ ಯಾರೋ ಪುಸ್ತಕಗಳನ್ನು ಹೊತ್ತು ಬರುತ್ತಿರುವುದು ಕಾಣಿಸಿತು. “ಓಹ್, ಇವರೋ ಅಭಯಾ ತೊಟ್ಟ ಮಹಿಳೆ!” ತಮ್ಮ ಮುಖವೊಂದನ್ನ ಕಾಣುವಹಾಗೆ ಬಿಟ್ಟು ಇಡೀ ದೇಹಕ್ಕೆ ಅಭಯಾ ತೊಟ್ಟಿದ್ದಾರೆ. ಕಾರಿನಿಂದ ಹೊರಗಡೆ ಇಳಿದೆ. “ಬುಕ್ಸ್?” ಎಂದು ಕೇಳಿದರು. “ಎಸ್” ಎಂದೆ. ನಲವತ್ತು ರಿಯಾಲ್ ಕೊಡಲು ಹೇಳಿದರು, ಕೊಟ್ಟೆ. ಹಣಪಡೆದು ಪುಸ್ತಕಗಳನ್ನು ಕೊಟ್ಟು ಹೊರಟುಬಿಟ್ಟರು!
ದರ್ಶನ್ ಜಯಣ್ಣ ಬರೆಯುವ “ಸೌದಿ ಡೇಟ್ಸ್” ಸರಣಿಯ ಐದನೆಯ ಕಂತು
ಅದು ಕೊರೋನಾದ ಸಮಯ. ಸೌದಿಯಲ್ಲಿ ಅಷ್ಟಾಗಿ ಯಾರೂ ಹೊರಗಡೆ ಓಡಾಡುತ್ತಿರಲಿಲ್ಲ. ಮೊದಲೇ ಸಾರ್ವಜನಿಕ ಸಾರಿಗೆಯಿಲ್ಲ. ಎಲ್ಲರದ್ದೂ ಕಾರುಗಳಿವೆ, ಇಂಟರ್ನೆಟ್ ಇದೆ, ಅಮೆಜಾನ್, ನೆಟ್ಫ್ಲಿಕ್ಸ್, ಯೂಟ್ಯೂಬ್ ಮುಂತಾಗಿ ಜನ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಕೆಲವರು ಬಗೆಬಗೆಯ ಅಡುಗೆ ಮಾಡಿ ಖುಷಿಪಟ್ಟರೆ ಕೆಲವರು ಸಿನಿಮಾನೋಡಿ, ನಿದ್ದೆಮಾಡಿ ಸಮಯ ಸಾಗಿಸುತ್ತಾರೆ. ಇವರಲ್ಲಿ ಕೆಲವೇ ಕೆಲವರು ಒಂದಷ್ಟು ಪುಸ್ತಕಗಳನ್ನ ಓದುತ್ತಾರೆ.
ಸೌದಿಯಲ್ಲಿ ಭಾರತವನ್ನ ರೆಡ್ ಕೆಟಗರಿ ದೇಶವೆಂದು ಪರಿಗಣಿಸಿದ್ದರು. ಅಂದರೆ ಇಲ್ಲಿಂದ ಭಾರತಕ್ಕೆ- ಅಲ್ಲಿಂದ ಇಲ್ಲಿಗೆ ನೇರ ವಿಮಾನಗಳಿರಲಿಲ್ಲ! ಮೊದಲ ಅಲೆ ಮುಗಿದಮೇಲೆ ನಮ್ಮನ್ನ yellow ದೇಶ ಅಂತ ಪರಿಗಣಿಸಿದರು. ಇದರ ಪ್ರಕಾರ ನಾವು ಭಾರತಕ್ಕೆ ಬಂದರೆ ಹಿಂದಿರುಗುವಾಗ, ಕತಾರ್, ಮಾಲ್ಡೀವ್ಸ್ ಅಥವಾ ಸೆರ್ಬಿಯಾ ದೇಶಗಳಲ್ಲಿ 14 ದಿನಗಳ ಕಾಲ ಇದ್ದು, ಅಲ್ಲಿಂದ ಸೌದಿಗೆ ಬರಬೇಕಿತ್ತು. ಕಾರಣ ಈ ದೇಶಗಳಲ್ಲಿ ಕೊರೊನಾ ಕೇಸುಗಳು ಕಡಿಮೆಯಿದ್ದು ಸೌದಿ ಇವನ್ನು ಸುರಕ್ಷಿತ ದೇಶಗಳೆಂದು ನೋಟೀಸ್ ಹೊರಡಿಸಿತ್ತು. ಹೀಗಿರುವಾಗ ಭಾರತಕ್ಕೆ ನಾವು ಬಂದದ್ದು ಒಂದೂವರೆ ವರ್ಷಗಳಾದ ಮೇಲೆಯೇ, ಅದೊಂದು ದೊಡ್ಡ ಕಥೆ!
ಇಂತಹಾ ಸಂದರ್ಭದಲ್ಲಿ ಏನೆಲ್ಲ ಮಾಡಿ ಮುಗಿಸಿದರೂ ಸಮಯ ಇನ್ನೂ ಸಿಗುತ್ತಿತ್ತು. ಒಂದು ದಿನ ಹೀಗೆಯೇ ಫೇಸ್ಬುಕ್ market place ನೋಡುತ್ತಿರಬೇಕಾದರೆ ಒಂದಷ್ಟು ಪುಸ್ತಕಗಳು ಕಣ್ಣಿಗೆ ಬಿದ್ದವು. ಅವುಗಳಲ್ಲಿ ಭಾಗಷಃ ಇಂಗ್ಲಿಷ್ ನಾವೆಲ್ಗಳಿದ್ದವು. ಒಂದೆರಡು ನನಗೆ ಇಷ್ಟವಾಗಿದ್ದರಿಂದ ಅದನ್ನು ಪೋಸ್ಟ್ ಮಾಡಿದ್ದವರಿಗೆ ಮೆಸೇಜ್ ಕಳುಹಿಸಿದೆ. ಅವರಿಂದ ಬೇಗ ಪ್ರತಿಕ್ರಿಯೆ ಕೂಡ ಬಂದಿತು. ಅವರು ಮೆಸೆಂಜರ್ನಲ್ಲಿ ಮತ್ತಷ್ಟು ಪುಸ್ತಕಗಳ ಫೋಟೋ ಕಳುಹಿಸಿದರು. ಎಲ್ಲವೂ ಫ್ರೆಂಚ್ ಭಾಷೆಯ ಪುಸ್ತಕಗಳು, “pardon, no French” ಅಂದೆ! ಅವರು ಮತ್ತಷ್ಟು ಇಂಗ್ಲಿಷ್ ಪುಸ್ತಕಗಳನ್ನು ಕಳುಹಿಸಿದರು. ಅವುಗಳಲ್ಲಿ ಎರಡು ನನ್ನ ಗಮನ ಸೆಳೆದವು. ಒಂದು ಭಾರತೀಯ ಮೂಲದ ಕವಯಿತ್ರಿ ರೂಪಿ ಕೌರ್ ಅವರ “milk and honey” ಮತ್ತೊಂದು ಭಗವದ್ಗೀತೆಯ ಭಾಷ್ಯ, ಇಂಗ್ಲಿಷಿನಲ್ಲಿ. ಇವೆರಡೂ ನನಗೆ ಬೇಕೆಂದೆ. ಅವರು ಪ್ರತಿಯೊಂದಕ್ಕೆ ಹತ್ತು ರಿಯಾಲ್ ( 220 ರೂಪಾಯಿ) ಎಂದರು ಮತ್ತು ಬರುವಾಗ ಕ್ಯಾಶ್ ಸರಿಯಾಗಿ ತರುವುದಕ್ಕೆ ವಿನಂತಿಸಿಕೊಂಡರು.
ನಂತರ ಅವರ ಫೋನ್ ನಂಬರ್ ಕೇಳಿದೆ, ಅವರು ನಿರಾಕರಿಸಿ “ನೀವು ಬರುವ ಮುನ್ನ ಲೊಕೇಶನ್ ಶೇರ್ ಮಾಡುವೆ, ಅಲ್ಲಿಗೆ ಬಂದು ಮೆಸೇಜ್ ಮಾಡಿದರೆ ಪುಸ್ತಕ ಕೊಡುವೆ” ಎಂದರು. ಒಳ್ಳೆ ಕಥೆ ಎಂದುಕೊಂಡು ಹೊರಟೆ. ನನ್ನ ಮನೆಯಿಂದ ಅವರು ಕಳಿಸಿದ್ದ ಲೊಕೇಶನ್ 20 ಕಿಲೋಮೀಟರ್ ದೂರವಿತ್ತು. ಅಲ್ಲಿಗೆ ತಲುಪಿದಾಗ ಸಂಜೆಯಾಗಿತ್ತು. ಅದೊಂದು ಊರಿನ ಹೊರವಲಯದ ಸಾಮಾನ್ಯ ಸೌದಿಗಳೇ ವಾಸಿಸುವ ವಸತಿ ಸಮ್ಮುಛ್ಚಯವಾಗಿತ್ತು. ಮತ್ತೆ ಅವರಿಗೆ ಫೇಸ್ಬುಕ್ marketplace ನಲ್ಲಿ ಮೆಸೇಜ್ ಮಾಡಿದೆ. ಅವರು ನನ್ನ ಕಾರ್ ಮಾಡೆಲ್ ಕೇಳಿದರು, ಹೇಳಿದೆ. ಬಣ್ಣ ಕೇಳಿದರು, ಅದೂ ಹೇಳಿದೆ.
ಮನಸಿನಲ್ಲಿ ಯಾಕೋ ತಳಮಳ ಶುರುವಾಯಿತು. ಇವರಾರೋ ಫೋನ್ ನಂಬರ್ ಶೇರ್ ಮಾಡುತ್ತಿಲ್ಲ, ಐಡೆಂಟಿಟಿ ಶೇರ್ ಮಾಡುತ್ತಿಲ್ಲ, ಕೇವಲ ನನ್ನ ವಿವರ ಪಡೆದು, ಇಲ್ಲಿಗೆ ಕರೆಸಿಕೊಂಡಿದ್ದಾರೆ, ಈಗಲೂ ಕಾಯಿಸುತ್ತಿದ್ದಾರೆ ಎಂದುಕೊಳ್ಳುವಷ್ಟರಲ್ಲಿ ಯಾರೋ ಪುಸ್ತಕಗಳನ್ನು ಹೊತ್ತು ಬರುತ್ತಿರುವುದು ಕಾಣಿಸಿತು. “ಓಹ್, ಇವರೋ ಅಭಯಾ ತೊಟ್ಟ ಮಹಿಳೆ!” ತಮ್ಮ ಮುಖವೊಂದನ್ನ ಕಾಣುವಹಾಗೆ ಬಿಟ್ಟು ಇಡೀ ದೇಹಕ್ಕೆ ಅಭಯಾ ತೊಟ್ಟಿದ್ದಾರೆ. ಕಾರಿನಿಂದ ಹೊರಗಡೆ ಇಳಿದೆ. “ಬುಕ್ಸ್?” ಎಂದು ಕೇಳಿದರು. “ಎಸ್” ಎಂದೆ. ನಲವತ್ತು ರಿಯಾಲ್ ಕೊಡಲು ಹೇಳಿದರು, ಕೊಟ್ಟೆ. ಹಣಪಡೆದು ಪುಸ್ತಕಗಳನ್ನು ಕೊಟ್ಟು ಹೊರಟುಬಿಟ್ಟರು!
ನಾನು ಕಾರಿನ ಒಳಗೆ ಬಂದವನೇ ಪುಸ್ತಕಗಳ ಮೇಲೆ ಕಣ್ಣಾಡಿಸಿದೆ. ಎಲ್ಲವೂ ಹೊಸದರಂತೆ ಇದ್ದವು. ನನಗೆ ಅವರ ಓದಿನ ವಿಸ್ತಾರ ನೋಡಿ ಆಶ್ಚರ್ಯವಾಯಿತು. ಫ್ರೆಂಚ್ ಪುಸ್ತಕಗಳನ್ನು ಓದುವವರಾದರೆ ಆ ಮಹಿಳೆ ಸೌದಿಯವರಲ್ಲ, ಬಹುಶಃ ಟ್ಯುನೀಸಿಯ, ಮೊರೊಕ್ಕೊ, ಅಲ್ಜೀರಿಯಾ, ಲಿಬಿಯಾ ದೇಶದ ಮುಸ್ಲಿಮ್ ಆಗಿರಬೇಕು. ಒಂದು ಕಡೆ ಭಗವದ್ಗೀತೆ ಮತ್ತೊಂದು ಕಡೆ “milk and honey” ಎಂಬ sensuous ಪುಸ್ತಕ, ಅವುಗಳ ಮಧ್ಯೆ ಕೆಲವು ಇಂಗ್ಲಿಷ್ ನಾವೆಲ್ಗಳು!

ಮೂಲತಃ ಹೊಸದುರ್ಗದ ಹುಟ್ಟೂರಿನವರು. ಬೆಂಗಳೂರಿನ (ಸೌದಿ ಅರೇಬಿಯಾ ಮೂಲದ) ಪೆಟ್ರೋಕೆಮಿಕಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. “ನಾನೊಬ್ಬ ನಾವಿಕ “ (ಕವನ ಸಂಕಲನಗಳು), “ಅಪ್ಪನ ರಾಲೀಸ್ ಸೈಕಲ್” (ಪ್ರಬಂಧಗಳು). ಇವರ ಬರಹಗಳು ಹಲವು ವೆಬ್ ಹಾಗೂ ಕನ್ನಡ ದೈನಿಕಗಳಲ್ಲಿ ಪ್ರಕಟವಾಗಿವೆ. ದೇಶ ಸುತ್ತುವುದು, ಚರಿತ್ರೆ ಮತ್ತು ಅರ್ಥಶಾಸ್ತ್ರ ಸಂಬಂಧಿ ವಿಷಯಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ.