ವರ್ಷವಿಡೀ ಸಿಕ್ಕಾಪಟ್ಟೆ ಕುಗ್ಗಿ ಹೋದ ಆರ್ಥಿಕ ಮತ್ತು ಸಾಮಾಜಿಕ ಬದುಕುಗಳು ಕೊಂಚ ನಿಟ್ಟುಸುರಿಬಿಡುವ ಗಳಿಗೆ ಇದು. ಕ್ರಿಸ್‌ಮಸ್ ಮತ್ತು ಹೊಸವರ್ಷದ ನಡುವಿನ ಈ ದಿನಗಳು ಗೆದ್ದವರು ನೆಲಕ್ಕಿಳಿಯುವ, ಸೋತವರು ಮತ್ತೆ ಕನಸು ಚಿಗುರಿಸಿಕೊಳ್ಳುವ ಗಳಿಗೆ. ಬಿದ್ದೂ ಮೀಸೆ ಮಣ್ಣಾಗಿಲ್ಲ ಎಂಬಂತಹ ಮಾತುಗಳು ಎಲ್ಲರ ನಾಲಗೆಯ ಮೇಲೆ. ಇದು ಮತ್ತೆ ಏಳಲು ಅನಿವಾರ್ಯವೇನೋ. ಹೀಗೆಲ್ಲಾ ಯೋಚಿಸುತ್ತಾ ಇರುವಾಗ, ಊರ ತುಂಬಾ ಮಕ್ಕಳು ಮರಿಗಳನ್ನು ಎಳೆದುಕೊಂಡು ಪ್ರೀತಿಪಾತ್ರರಿಗೆ ಉಡುಗೊರೆಗಳನ್ನು ಕೊಳ್ಳುತ್ತಿರುವ ಮಂದಿ ಕಿಕ್ಕಿರಿಯುತ್ತಾರೆ. ಕ್ರಿಸ್‌ಮಸ್‌ಗೆ ಇನ್ನೆರಡು ದಿನವಿರುವಾಗಿನ ಆತುರ ಕಾತರ ಎಲ್ಲರ ಕಣ್ಣುಗಳಲ್ಲಿ. ಪೇಟೆಯ ಬಣ್ಣ ಬೆಳಕುಗಳನ್ನು ಕಣ್ಣಲ್ಲಿ ತುಂಬಿಕೊಂಡು ತಮ್ಮ ಲೋಕದಲ್ಲೇ ಮೈಮರೆತ ಮಕ್ಕಳು ಅವರ ಹಿಂದೆ ಕಾಲೆಳೆದುಕೊಂಡು ಓಡಾಡುತ್ತಾರೆ. ಅಂಗಡಿ ಕಿಟಕಿಗಳಲ್ಲಿ ಹಾಕಿರುವ ಕ್ರಿಸ್‌ಮಸ್ ಬೊಂಬೆ, ಅಲಂಕಾರಗಳನ್ನು ನೋಡುತ್ತಾ ಕಳೆದುಹೋಗುತ್ತಾರೆ. ಹೌದು, ಕಳೆದು ಹೋಗಲು ತಕ್ಕುದಾದ ಗಳಿಗೆಯಿದು ಎನಿಸುತ್ತದೆ.
ಕ್ರಿಸ್‌ಮಸ್ ಆಚರಣೆ ಧರ್ಮದಿಂದ ಎಷ್ಟು ದೂರ ಹೋಗಿದೆ ಎಂದು ಒಂದು ಕಡೆ ಖುಷಿಯಾಗುತ್ತದೆ. ಆದರೆ, ಅದನ್ನು ಅತ್ತ ಜಗುತ್ತಿರುವ ಒತ್ತಡಗಳು ಮತ್ತು ಲಾಭಕೋರತನ ನೋಡಿ ಅನುಮಾನವಾಗುತ್ತದೆ. ಈ ಹಬ್ಬದ ಮತ್ತು ಬಿಡುವಿನ ಹೊತ್ತಲ್ಲಿ ಯಾಕೋ ಮನಸ್ಸು ಅಂತರ್ಮುಖಿಯಾಗುತ್ತದೆ. ಕಾಡು ಕಡಲು ಊರು ಸುತ್ತಲು ಸೂಕ್ತ ಹೊತ್ತಿದು. ಮನಸ್ಸು ಬಹಿರ್ಮುಖವಾಗಿ ನಲಿಯಬೇಕಾದ ಹೊತ್ತಿದು. ಆದರೂ ಯಾವ ಸಮಜಾಯಿಷಿಗೂ ಮನಸ್ಸು ಬಗ್ಗುತ್ತಿಲ್ಲ. ಇಡೀ ವರ್ಷದ ಆಗುಹೋಗು ಮತ್ತು ಸದ್ಯದ ಅನಿರ್ದಿಷ್ಟತೆ ಎಲ್ಲವನ್ನೂ ಅನುಮಾನಿಸುವಂತೆ ಮಾಡುತ್ತದೆ.
ಮುಂದಿನ ವರ್ಷ ಎರಡನೇ ಮಗುವನ್ನು ಎದುರು ನೋಡುತ್ತಿರುವ ಗೆಳೆಯನೊಬ್ಬ ತನ್ನ ಕುಟುಂಬದೊಡನಿರಲು ಹೋಗಿದ್ದಾನೆ. ದಾರಿಯಲ್ಲಿ ಅವನ ಹೆಂಡತಿಯ ಅಜ್ಜಿಯ ಜತೆ ಎರಡು ದಿನ ಕಳೆಯಲು ಯೋಚಿಸಿದ್ದಾರೆ. ೯೩ ವರ್ಷದ ಮುದುಕಿ. ತುಂಬಾ ಸ್ವಾಭಿಮಾನಿ. ಒಬ್ಬಂಟಿಯಾಗಿದ್ದಾಳಂತೆ. ಹತ್ತಿಪ್ಪತ್ತು ವರ್ಷಗಳ ಮುಂಚೆಯೇ ಗಂಡ ಸತ್ತಿದ್ದಾನೆ. ಸಹಬಾಳ್ವೆ ಅನ್ನುವುದು ಆಕೆಗೆ ಮರೆತೇ ಹೋಗಿದೆಯಂತೆ. ನನ್ನ ಗೆಳೆಯನ ಮಗಳನ್ನು ತುಂಬಾ ಪ್ರೀತಿಸುತ್ತಾಳಂತೆ. ತನ್ನ ಮನೆಯ ಪಕ್ಕದ ಬೀದಿಯ ಅಂಗಡಿಯಿಂದ ಇವರಿಗೆ ಉಡುಗೊರೆ ತಂದಿಟ್ಟಿರುತ್ತಾಳಂತೆ. ಮರೆತು ಮತ್ತೆ ಮತ್ತೆ ಅದೇ ಉಡುಗೊರೆ ಕೊಡುತ್ತಾಳಂತೆ. ಅವಳಿಗೆ ಬೇಜಾರಾಗಬಾರದೆಂದು “ಚೆನ್ನಾಗಿದೆ! ಚೆನ್ನಾಗಿದೆ!” ಎಂದು ನಕ್ಕು ಹೊರಡುತ್ತಾರಂತೆ. ಹಣ್ಣು ಹಣ್ಣು ಮುದುಕಿಯಾಗಿರುವ ಆಕೆಯ ಮೈತುಂಬಾ ಚರ್ಮ ಸುಕ್ಕುಗಟ್ಟಿದೆಯಂತೆ. ಆ ಸುಕ್ಕುಗಳ ನಡುವೆ ಆಕೆಯನ್ನು ಹುಡುಕಬೇಕು ಎಂದು ಹೇಳಿ ಈ ಗೆಳೆಯ ನಗುತ್ತಾನೆ. ಇದೆಲ್ಲಕ್ಕಿಂತ ಹೆಚ್ಚಾಗಿ ಅವಳ ಸಿಗರೇಟಿನ ಚಟದ ಬಗ್ಗೆ ಇವನ ಆತಂಕ. ತನ್ನ ಹದಿಮೂರನೇ ವಯಸ್ಸಲ್ಲಿ ಆಕೆ ಸೇದಲು ತೊಡಗಿದ್ದಂತೆ. ಎಂಬತ್ತು ವರ್ಷದ ರೂಢಿ ಸುಲಭದಲ್ಲಿ ಹೋಗುವಂತಹುದಲ್ಲ ಎಂದು ತಮ್ಮ ಪ್ರಯತ್ನಗಳ ಪಟ್ಟಿಮಾಡುತ್ತಾನೆ.
ಆಕೆಯ ಪುಟ್ಟ ಮನೆಯ ತುಂಬಾ ಸಿಗರೇಟಿನ ವಾಸನೆಯಂತೆ. ಯಾರಿರಲಿ ಬಿಡಲಿ ತನ್ನ ಸಿಗರೇಟನ್ನು ಆಕೆ ಬಿಡುವುದಿಲ್ಲವಂತೆ. ಇವನ ಬಸುರಿ ಹೆಂಡತಿಗೆ ಸಿಗರೇಟಿನ ಹೊಗೆ ಒಳ್ಳೆಯದಲ್ಲ. ಮತ್ತು ಎರಡು ವರ್ಷದ ಪುಟ್ಟ ಮಗಳು ಬೇರೆ. ಇವನಿಗೆ ಅತೀವ ಹಿಂಜರಿಕೆ. ಇವನ ಹೆಂಡತಿಗೆ ತನ್ನ ಅಜ್ಜಿಯ ಬಗ್ಗೆ ಅತೀವ ಅಕ್ಕರೆ. ಏನು ಮಾಡುವುದು. ಹೇಗೋ ಇದ್ದು ಬಿಡುತ್ತೇನೆ. ಮಗಳನ್ನು ಆದಷ್ಟು ಹೊರಗೆ ಓಡಾಡಿಸಿಕೊಂಡಿರುತ್ತೇನೆ ಅನ್ನುತ್ತಾನೆ. ತನ್ನ ಹೆಂಡತಿ ಮತ್ತು ತಾನು ಹದಿನೈದು ವರ್ಷ ಸಿಗರೇಟು ಸೇದಿ ಒಂದೆರಡು ವರ್ಷದಿಂದ ಬಿಟ್ಟಿದ್ದೇವೆ ಎಂದು ಹೇಳಿ ಅರ್ಥಗರ್ಭಿತವಾಗಿ ನಗುತ್ತಾನೆ. ಊರಿಂದ ಬಂದಾಗ ಅವನಿಂದ ಇನ್ನಷ್ಟು ರಸವತ್ತಾದ ಕತೆಗಳಿರುತ್ತವೆ ಎಂದು ನೆನಪಾಗಿ ಮುಗುಳ್ನಗುತ್ತೇನೆ.
ಇನ್ನೊಬ್ಬ ಗೆಳೆಯನ ತಂದೆ ಹಾಗು ತಂದೆಯ ಸಂಗಾತಿ ಉತ್ತರದ ಬೀಚುಗಳ ಊರಲ್ಲಿ ಇರುವುದಂತೆ. ಅಲ್ಲಿಗೆ ಕ್ರಿಸ್‌ಮಸ್ ನಂತರ ಹೋಗಿ ತಂದೆಯನ್ನು ಭೇಟಿ ಮಾಡಬೇಕೆಂದು ಲೆಕ್ಕಾಚಾರ ಹಾಕಿದ್ದಾನೆ. ಚಿಕ್ಕವನಿದ್ದಾಗ ಇವನ ತಂದೆ ಸಣ್ಣಪುಟ್ಟ ಕಳ್ಳತನ ಮಾಡುತ್ತಿದ್ದನಂತೆ. ದೊಡ್ಡ ದರೋಡೆ ಎಲ್ಲ ಅಲ್ಲವಂತೆ. ಅವನಿಗೆ ಅಷ್ಟೆಲ್ಲಾ ತಾಕತ್ತಿರಲಿಲ್ಲ ಎಂದು ಹಲ್ಕಿರಿಯುತ್ತಾನೆ. ಕ್ಲೀನರ್ ಬಟ್ಟೆ ತೊಟ್ಟು ಹೋಗಿ ಪಬ್‌ಗಳಲ್ಲಿರುವ ಜೂಜು ಮಿಷನ್‌ನಿಂದ ದುಡ್ಡು ದೋಚಿಕೊಂಡು ಬರುತ್ತಿದ್ದರಂತೆ. ಸಿಕ್ಕಿ ಹಾಕಿಕೊಂಡು ಜೈಲಾಗಿದೆಯಂತೆ. ಆಗಲೇ ಅಪ್ಪ ಅಮ್ಮ ಬೇರಾದರಂತೆ. ಇದನ್ನು ಅವನು ಯಾರದೋ ಕತೆಯೆಂಬಂತೆ ಹೇಳುತ್ತಾನೆ. ಹೇಗೆ ಸಾಧ್ಯ ಅನಿಸುತ್ತದೆ. ಆದರೆ ಹಾಗೆ ಹೇಳಲು ಬೇಕಾದ ತಂದೆಯ ಬಗೆಗಿನ ಮನಸ್ಸಿನ ನಿರಾಳ ಅವನಲ್ಲಿ ಕಾಣುತ್ತದೆ. ನನ್ನ ತಲೆಯೊಳಗಿನ ಎಷ್ಟೋ ಹಳೆಯ ಗೊಂದಲಗಳ ಅರಿವು ಮಾಡಿ ಕೊಡುತ್ತದೆ.
ತನ್ನ ಹೆಂಡತಿಗೆ ಈ ವರ್ಷ ಏನು ಕೊಡಲಿ ಎಂದು ಜೋರಾಗಿ ಪ್ರಶ್ನಿಸಿಕೊಳ್ಳುತ್ತಾನೆ. ತನ್ನೆರಡು ಪುಟ್ಟ ಮಕ್ಕಳಿಗೆ ಕೊಳ್ಳುವುದು ಸುಲಭ. ಮಕ್ಕಳೇ ಇದು ಬೇಕೆಂದು ಕೇಳದಿದ್ದರೆ ತನಗೆ ಆಡಬೇಕನಿಸದ ಆಟಿಕೆಗಳನ್ನೇ ಅವರಿಗೂ ತಂದು ಬಿಡುತ್ತೇನೆ ಎಂದು ನಗುತ್ತಾನೆ. ಆದರೆ, ವರ್ಷ ಕಳೆದಂತೆ ಹೆಂಡತಿಗೆ ಮಾತ್ರ ಉಡುಗೊರೆ ಕೊಳ್ಳುವುದು ಕಷ್ಟವಾಗುತ್ತಿದೆ ಎಂದು ಪಿಸುಗುಡುತ್ತಾನೆ. ಅದು ಏನನ್ನು ಸೂಚಿಸುತ್ತದೆ ಎಂದು ನಾನು ಕೆಣಕಿದರೆ ತುಸು ಗಡುಸಾಗಿ ಬಿಡುತ್ತಾನೆ. “ಇಲ್ಲ! ಇಲ್ಲ! ಏನು ಕೊಡಬೇಕೆಂದು ಗೊತ್ತಿದೆ. ಆದರೆ ಒಂದೆರಡು ಆಯ್ಕೆ ಇದೆ, ನಿರ್ಧರಿಸಿಲ್ಲ ಅಷ್ಟೆ” ಎಂದು ಸಮಜಾಯಿಷಿ ಹೇಳುತ್ತಾನೆ. ನನಗೆ ಹೇಳುವುದಕ್ಕಿಂತ ತನಗೆ ತಾನೇ ಹೇಳಿಕೊಂಡ ಸ್ವಗತದಂತಿರುತ್ತದೆ ಅವನ ಮಾತುಗಳು.
ಒಂದು ಧಾರ್ಮಿಕ ಹಬ್ಬವನ್ನು ತಮಗೆ ಬೇಕಾದಂತೆ ಬಗ್ಗಿಸುವಕೊಳ್ಳುವ ಪರಿ ನೋಡಿ ಒಮ್ಮೊಮ್ಮೆ ಆಶ್ಚರ್ಯವಾಗುತ್ತದೆ. ಹಾಗೆ ಉಡುಗೊರೆಗಳ ಮೂಲಕ ಹತ್ತಿರದವರ ಬಗೆಗಿನ ತಮ್ಮ ಪ್ರೀತಿಯನ್ನು ಎಕ್ಸ್‌ಟರ್ನಲೈಸ್ ಮಾಡಿಕೊಳ್ಳುವುದು ನಮಗೆ ಆಗಿ ಬಂದಿಲ್ಲ ಎಂದು ಮನವರಿಕೆಯಾಗುತ್ತದೆ.
ಅದು ಮುಖ್ಯವೇ ಅಥವಾ ಮುಖ್ಯವಲ್ಲವೇ ಎಂಬ ಚರ್ಚೆ ಅನಗತ್ಯ ಎಂದೂ ಅರಿವಾಗುತ್ತದೆ. ಸಾಯುವವರೆಗೂ ಹೊಗೆಸೊಪ್ಪು ಕಡ್ಡಿಪುಡಿ ತಿನ್ನುತ್ತಿದ್ದ, ನಾನು ಚಿಕ್ಕಂದಿನಲ್ಲಿ ನೋಡುತ್ತಿದ್ದ ಮುದುಕಿಯರು, ಅವರ ನಗುಗಳು, ನಕ್ಕಾಗ ಕಾಣುವ ಕಪ್ಪುಗಟ್ಟಿ ಕರಗಿ ಸಣ್ಣಗಾದ ಹಲ್ಲುಗಳು ಎಲ್ಲಾ ನೆನಪಾಗುತ್ತವೆ. ಅವರೆಲ್ಲಾ ಇಲ್ಲಿ ಬಂದು ಇದ್ದಿದ್ದರೆ ಹೇಗಿರುತ್ತಿದ್ದರು? ಮಕ್ಕಳು ಮರಿಗಳನ್ನೆಲ್ಲಾ ಹೇಗೆ ನೋಡಿಕೊಳ್ಳುತ್ತಿದ್ದರು? ಏನೆಲ್ಲಾ ಉಡುಗೊರೆ ಕೊಳ್ಳುತ್ತಿದ್ದರು ಎಂದು ಲೆಕ್ಕ ಹಾಕುತ್ತಾ ಮತ್ತೆ ಅಂತರ್ಮುಖಿಯಾಗುತ್ತೇನೆ. ಪೇಟೆ ಬೀದಿಯ ಮೇಲೆ ಬಿದ್ದೂ ಬೀಳದ ಹಾಗೆ ಸಣ್ಣಹನಿಯ ಮಳೆ ಹಾದು ಹೋಗುತ್ತದೆ.

Merry Christmas From Melbourne, Australia
ಆಸ್ಟ್ರೇಲಿಯಾದ ನಿವಾಸಿಯಾಗಿರುವ ಅನಿವಾಸಿ ಕನ್ನಡ ಬರಹಗಾರ, ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ.ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಕ್ಷೇತ್ರಗಳಲ್ಲಿ ಅತೀವ ಆಸಕ್ತಿ ಉಳ್ಳವರು. ‘ಮುಖಾಮುಖಿ’ ಹಾಗೂ ‘ತಲ್ಲಣ’ ಇವರಿಗೆ ಹೆಸರು ತಂದುಕೊಟ್ಟ ಚಲನಚಿತ್ರಗಳು.