Advertisement
ಊರು ಕೇರಿ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ

ಊರು ಕೇರಿ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ

ಒಮ್ಮೊಮ್ಮೆ ಈ ನೆಲದ ಋಣದ ಕುರಿತು ಯೋಚಿಸುತ್ತೇನೆ. ಅಷ್ಟು ಗಾಢವಾದ ಋಣವೇ ಅದು? ಎಲ್ಲಿದ್ದರೂ ಊರಿನತ್ತ ಕೈಬೀಸಿ ಕರೆಯುವ ಮೋಹನ ಮುರಳಿಯ ಸೆಳೆತ ನಿಜವಾಗಿಯೂ ತೀವ್ರವಾದದ್ದೇ ಹೌದು. ಅದಲ್ಲದಿದ್ದರೆ ಹೋಗುವ ಯಾವುದೇ ಪರಿಸ್ಥಿತಿಯಲ್ಲಿ ಇಲ್ಲದಿದ್ದರೂ ಮನೆಗೆ ಹೋಗ್ಬೇಕು, ನನ್ನನ್ನು ಊರಿಗೆ ಬಿಟ್ಟು ಬಾ ಅಂತ ಮತ್ತೆ ಮತ್ತೆ ಅಪ್ಪ ಹೇಳುತ್ತಿರಲಿಲ್ಲ. ನನಗಂತೂ ಬಾಲ್ಯಕ್ಕೆ ಜಿಗಿಯಬೇಕು ಅಂತ ಅನ್ನಿಸಿದ ಕೂಡಲೇ ನನ್ನೆಲ್ಲಾ ಕೆಲಸವನ್ನು ಬಿಟ್ಟು ಇಲ್ಲಿಗೆ ಬಂಡುಬಿಡುವುದು ಇತ್ತೀಚಿನ ನನ್ನಿಷ್ಟದ ಕೆಲಸಗಳಲ್ಲಿ ಒಂದಾಗಿ ಹೋಗಿದೆ.
ರವೀಂದ್ರ
ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ “ಇನ್ನೊಂದು ಬದಿ”ಹತ್ತನೆಯ ಬರಹ

ಅತ್ತ ಪೂರ್ಣವಾಗಿ ಹಳ್ಳಿಯೂ ಅಲ್ಲದ ಇತ್ತ ಪೇಟೆಯೆಂದೂ ಹೇಳಲಾಗದ ಊರು. ಹೋಗಲು ಸರಿಯಾದ ವ್ಯವಸ್ಥೆ ಇಲ್ಲ. ಸುತ್ತಮುತ್ತಲ ಎಲ್ಲಾ ಊರುಗಳು ನಗರಪಾಲಿಕೆಯ ವ್ಯಾಪ್ತಿಗೆ ಬಂದ ಕೆಲವೇ ವರ್ಷಗಳಲ್ಲಿ ತನಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡು ‘ನಗರ’ವಾಗಿ ಬೆಳೆಯುತ್ತಿದ್ದರೆ ಈ ಊರು ಮಾತ್ರ ನಗರಪಾಲಿಕೆಯ ವ್ಯಾಪ್ತಿಯಲ್ಲಿದ್ದರೂ ಬೇರೆ ಊರುಗಳ ತುಲನೆಯಲ್ಲಿ ಇನ್ನೂ ಇಪ್ಪತ್ತು ವರ್ಷಗಳಷ್ಟು ಹಿಂದೆಯೇ ಉಳಿದುಕೊಂಡಿದೆ. ಸುಧಾರಣೆಯಾಗುವ ನಿಟ್ಟಿನಲ್ಲಿ ನಡೆದ ಪ್ರಯತ್ನಗಳೂ ಕಡಿಮೆ. ಇಪ್ಪತ್ತು ವರ್ಷ ಹಿಂದೆ ನಡೆದುಹೋಗುತ್ತಿದ್ದ ವ್ಯಕ್ತಿ ಈಗ ಹಳಬನಾದರೂ ಅದೇ ಕಾಲು ಹಾದಿ ಬದಲಾಗದೇ, ಹುಲ್ಲೂ ಬೆಳೆಯದೇ ಊರಿಗೂ ರಸ್ತೆಗೂ ನಡುವಿನ ಅರ್ಧ ಕಿಲೋಮೀಟರ್ ಅಂತರವನ್ನು ತನ್ನ ಹೆಗಲ ಮೇಲೆ ಈಗಲೂ ಹೊತ್ತುಕೊಂಡಿದೆ. ಇದರಿಂದ ಹಲವಾರು ಉಪಯೋಗಗಳು ಉಂಟೆಂದು ಕಂಡದ್ದರಿಂದಲೇ ಬಹುಶಃ ಆ ಊರಿನವರು ಇನ್ನೂ ರಸ್ತೆ ಬೇಕೇ ಬೇಕು ಅಂತ ಪಟ್ಟು ಹಿಡಿಯದೇ ಇರುವುದು ಅನ್ನುವುದು ನನ್ನ ಸ್ಪಷ್ಟ ಅಭಿಪ್ರಾಯ.

ಕಳೆದ ಸಲ ಈ ಊರಿಗೆ ಹೋಗಿದ್ದಾಗ ಸಿಕ್ಕಿದ ಪ್ರಭಾಕರನೊಂದಿಗೆ ಸುಮ್ಮನೆ ಹರಟುತ್ತಾ ನಿಂತಿದ್ದೆ. ಅದೂ ಇದೂ ಅಂತ ಕುಶಲ ಪಂಚಾಯ್ತಿ ನಡೆಸಿ ಕೊನೆಗೆ ಮಾತು ಊರಿನ ರಸ್ತೆಯ ಕುರಿತೂ ಬಂತು. “ಓ… ಅದಾ, ಬಿಡು ಮಾರಯಾ. ಆಗುವ ಕಾಲಕ್ಕೆ ಆದೀತು. ಮತ್ತೆ ಹೀಗೆಯೇ ಎಷ್ಟು ದಿನ ಇರ್ತದೆ ಅಂತಿಯಾ? ಆದ್ರೆ ಸದ್ಯಕ್ಕಂತೂ ಆಗುವ ಲಕ್ಷಣ ಕಾಣ್ತಾ ಇಲ್ಲ. ಇದಕ್ಕೇ ಎಲ್ಲರೂ ಸೆಟ್ ಆಗಿದ್ದಾರೆ. ಆದ್ರೆ ಮೊನ್ನೆ ಒಂದು ವಿಷ್ಯ ಆಯ್ತು ನೋಡು… ಅದ್ರ ಬಗ್ಗೆ ಕೇಳು…” ಆಗುವ ಕಾಲಕ್ಕೆ ಆದೀತು ಅಂತ ನೀವು ಸುಮ್ಮನಿದ್ದುದರಿಂದಲೇ ಇನ್ನೂ ಆಗದೇ ಇರೋದು ಅನ್ನುವ ಮಾತು ನಾಲಗೆಯ ತುದಿವರೆಗೆ ಬಂದ್ರೂ ಅದ್ಯೇನೋ ಹೊಸ ವಿಷ್ಯದ ಬಗ್ಗೆ ಹೇಳಿದ್ರಿಂದ ಕುತೂಹಲ ಕೆರಳಿ ಕೇಳಿದೆ,

“ಎಂಥದು ಮಾರಯಾ ಅದು”

” ಮತ್ತೆಂತದ್ದಲ್ಲ, ಮೊನ್ನೆ ನಮ್ಮ ಮನೆಗೆ ನನ್ನ ಅಪ್ಪನ‌ ಗೆಳೆಯರೊಬ್ಬರು ಬಂದಿದ್ರು, ಯಾವುದೇ ಸೂಚನೆ ಕೊಡದೇ…”

“ಸರಿ, ಅದ್ರಲ್ಲೆಂತ ವಿಶೇಷವೋ…”

“ಇರದೇ ಮತ್ತೆ, ಅಲ್ಲ ಮಾರಾಯಾ ಅವರನ್ನು ನಾನು ಯಾವತ್ತೂ ಕಂಡಿಲ್ಲ. ನಾನು ಬಿಡು, ಅಪ್ಪನೇ ಅವರನ್ನು ಭೇಟಿಯಾಗಿ ವರ್ಷ ಇಪ್ಪತ್ತಾಯ್ತಂತೆ. ಆಗ ಯಾವತ್ತೋ ಒಮ್ಮೆ ಬಂದಿದ್ರಂತೆ ನಮ್ಮ ಈ ಮನೆಗೆ. ಅಪ್ಪನಿಗೂ ಆಶ್ಚರ್ಯ! ಕೇಳಿಯೇ ಬಿಟ್ರು… ಅದು ಹೇಗೆ ನಿಮಗೆ ನಮ್ಮ ಮನೆಯ ದಾರಿ ಸಿಕ್ಕಿತು ಅಂತ. ಅದಕ್ಕವರು,

‘ಅಲ್ಲಾ ಮುಕುಂದ, ನನಗೂ ಸಂಶಯ ಇತ್ತು ದಾರಿಯ ಬಗ್ಗೆ. ಆದರೂ ಯಾರತ್ತಾದ್ರೂ ಕೇಳೋಣ ಅಂತ ಬರ್ತಿದ್ರೆ… ಅರೇ! ಯಾವುದೂ ಬದಲಾಗಿಲ್ಲ. ಅದೇ ಕಾಲು ದಾರಿ, ನಡುವೆ ಹರಿಯುವ ತೋಡು, ನೀರು ಸ್ವಲ್ಪ ಕಮ್ಮಿ ಇರ್ಬಹುದು ಅಷ್ಟೇ. ತೋಡಿನ ದಂಡೆಯಲ್ಲಿ ನಿಮ್ಮ ತೋಟಕ್ಕೆ ತಾಗಿಕೊಂಡು ಇದ್ದ ಆ ಆಲದ ಮರ ಕೂಡಾ ಅಲ್ಲಿಯೇ ಇದೆ. ಊರಂದ್ರೆ ನಿಮ್ಮದು ಕಣಯ್ಯ…’ ಅಂತ ಹೇಳಿ ಜೋರಾಗಿ ನಕ್ಕುಬಿಟ್ರು. ಏನೂ ಹೇಳಲಾಗದ ಸ್ಥಿತಿ ನನ್ನದು ಮತ್ತು ಅಪ್ಪನದೂ… ಹ್ಹಹ್ಹಹ್ಹ….”

ಗೆಳೆಯನ ಮಾತಿನಲ್ಲಿ ಇದ್ದದ್ದು ವಿನೋದವೋ ವಿಷಾದವೋ ಅನ್ನುವುದು ತಿಳಿಯಲಾಗಲಿಲ್ಲ ನನಗೆ. ಆದರೂ ಅವನಪ್ಪನ ಗೆಳೆಯರು ಹೇಳಿದ್ದರಲ್ಲಿ ಯಾವುದೇ ಉತ್ಪ್ರೇಕ್ಷೆ ಇರಲಿಲ್ಲ ಬಿಡಿ. ಎಲ್ಲರೂ ಇಷ್ಟು ವರ್ಷಗಳಲ್ಲಿ ಉಪೇಕ್ಷಿಸಿದ ಹಾಗೆಯೇ ನಾವೂ ಆ ವಿಚಾರವನ್ನು ಬೆಳೆಸದೇ ಬೇರೆ ವಿಷಯಗಳತ್ತ ಹೊರಳಿದೆವು‌.

“ನನಗೆ ತಿಳಿದ ಹಾಗೆ ಹಲವಾರು ಜನರಿಗೆ ಇದ್ದ ಸ್ಥಿತಿಯನ್ನು ಕಾಯ್ದುಕೊಳ್ಳುವುದರಲ್ಲಿಯೇ ಅಪರಿಮಿತವಾದ ಆಸಕ್ತಿಯಿದೆ. ಅಷ್ಟಕ್ಕೂ ಬದಲಾವಣೆ ಅಂದ್ರೆ ಏನು? ಗದ್ದೆ ತೋಟ ಎಲ್ಲವನ್ನೂ ನೆಲಸಮ ಮಾಡಿ ಸೈಟ್ ಮಾಡಿ ಮಾರಿ ಐದು ಸೆಂಟ್ಸ್ ಜಾಗದಲ್ಲಿ‌ ಡುಪ್ಲೆಕ್ಸ್ ಮನೆ ಕಟ್ಟುವುದೋ…?” ಅನ್ನುವ ಪ್ರಶ್ನೆ ಕೆಲಸಕ್ಕಾಗಿ ಊರನ್ನು ಬಿಟ್ಟ ಸಂತೋಷನದ್ದು.

“ಹೀಗೇ ಇರ್ಲಿ ಮಾರಯಾ, ಹಾಗಾದರೂ ಸ್ವಲ್ಪ ಹಸಿರು ಉಳಿದೀತು. ಸುತ್ತಮುತ್ತಲ ಹಳ್ಳಿಯಲ್ಲಿ ರಸ್ತೆ ಬಂದು ಏನಾಯ್ತು? ಗದ್ದೆಗಳನ್ನೆಲ್ಲಾ ಸೈಟ್ ಮಾಡಿ ಮಾರಿ ಹಣ ಮಾಡ್ಕೊಂಡದ್ದು ಬಿಟ್ರೆ…” ಅಂತ ನನ್ನೊಂದಿಗೆ ಹೋದ ಸಾರಿ ಊರಿಗೆ ಬಂದಾಗ ಸಂತೋಷ್ ಹೇಳಿದಾಗ ನನಗೆ ಅಷ್ಟೇನೂ ರುಚಿಸಿರಲಿಲ್ಲ ಅವನ‌ ಮಾತು. ಈಗ ಯೋಚಿಸಿದರೆ ಅರೆ… ಹೌದಲ್ವಾ ಅನ್ನಿಸಿಬಿಡುತ್ತದೆ. ಯಾಕಿರಬಾರದು ಹೀಗೆಯೇ? ನಗರದ ಗಲಾಟೆಯಿಂದ, ವಾಹನಗಳ ಹೊಗೆಯಿಂದ ದೂರವಾಗಿರುವ ಇತಿಹಾಸ ಮತ್ತು ಈಗಿನ ಒಂದು ಸುಮಧುರ ನೆನಪಿನ ಕೊಂಡಿಯಾಗಿ. ಬದುಕನ್ನು ಅರಸಿ ನಗರಕ್ಕೆ ಮುಖ ಮಾಡಿರುವ ಯುವಕರಿಗೆ ಯಾವತ್ತೋ ಒಮ್ಮೆ ಗದ್ದೆ ಉಳುಮೆ ಮಾಡಬೇಕು ಅಂತ ಕೃಷಿಯತ್ತ ಹೊರಳಿದರೆ ಮತ್ತೆ ಇಲ್ಲಿ ಗತಕಾಲದ ಹಸಿರು ಮರಕಳಿಸಿ ಪ್ರಕೃತಿ ನಳನಳಿಸೀತು. ಬೊಗಸೆಯಲ್ಲಿ ಹಿಡಿಯಲಾಗದ ಬಾಲ್ಯದ ಬದುಕು ಮತ್ತೊಮ್ಮೆ ಇಲ್ಲಿ ಕಣ್ಣೆದುರು ನಲಿದೀತು.

“ಸುಮ್ಮನೆ ನಡೆದುಹೋಗುತ್ತಿರುವಾಗ ಮೂಗಿಗೆ ಬಡಿದ ಯಾವುದೋ ವಿಶಿಷ್ಟ ವಾಸನೆ, ಯಾವುದೋ ಸಮಾರಂಭಕ್ಕೆ ಮರಕ್ಕೆ ಕಟ್ಟಿದ ಲೌಡ್ ಸ್ಪೀಕರ್‌ನಿಂದ ತೇಲಿ ಬರುವ ಎಂದೋ ಕೇಳಿದ ಹಾಡು, ನೀರು ನಿಂತ ಮಳೆಗಾಲದ ಗದ್ದೆಗಳಲ್ಲಿ ಹಠಾತ್ತನೇ ಕೇಳುವ ಕಪ್ಪೆಯ ಗುಟುರ್ ಗುಟುರ್…. ನೆನಪುಗಳನ್ನು ಕಾಡಿ ಮನಸ್ಸು ಬಾಲ್ಯದತ್ತ ಜಿಗಿದು ಓಡುವುದು. ಈ ಎಲ್ಲಾ ಸಂಗತಿಗಳು ಬಾಲ್ಯದ ಯಾವುದೋ ಘಟನೆಗಳ ತರಂಗಾಂತರಕ್ಕೆ ಸರಿಹೊಂದಿ ಮನಸ್ಸು ತಕ್ಷಣ ಬಾಲ್ಯದ ಆ ಕ್ಷಣಗಳಿಗೆ ನೇರಾನೇರಾ ಮುಖಾಮುಖಿಯಾಗುತ್ತದೆ. ಈ ರೀತಿಯಲ್ಲಿ ಬಾಲ್ಯಕ್ಕೆ ಹೋಗಲು ಅಷ್ಟರಮಟ್ಟಿಗಿನ ಸಂಗತಿಗಳು ಘಟಿಸಲೇಬೇಕು. ಅಲ್ಲದೇ ಹೋದರೆ ಅಂದಿನ ಜಗತ್ತನ್ನು ಇಂದಿನ ಕನ್ನಡಿಯ ಮೂಲಕ ನೋಡಲು ಸಾಧ್ಯವಾಗುವುದಿಲ್ಲ. ದಿನೇ ದಿನೇ ನಡೆಯುವ ಅದೆಷ್ಟೋ ಬದಲಾವಣೆಗಳು ನಮ್ಮಿಂದ ಅಂದಿನ ಸುಂದರ ನೆನಪುಗಳನ್ನು ಬಚ್ಚಿಡುತ್ತವೆ. ಇದನ್ನು ಯಾಕೆ ಹೇಳಿದೆನೆಂದರೆ ಈ ಬದಲಾಗದ ಊರಿನಿಂದ ನಮಗಾಗುವ ಮಹತ್ತರವಾದ ಉಪಯೋಗವೆಂದರೆ ಅದು ಇಂದಿಗೂ ಹಿಂದಿಗೂ ನಡುವೆ ಬೆಸೆಯುವ ನೆನಪುಗಳ ಸೇತುವೆಯಾಗಿ ನಿಲ್ಲುವುದರ ಮೂಲಕ…” ಇಷ್ಟು ಹೇಳಿ ಮತ್ತೆ ಊರಿನ‌ ಬಗ್ಗೆ ಕುತೂಹಲ ತಾಳುವಂತೆ ಮಾಡಿ ಬೆಂಗಳೂರು ಹೊರಟು ನಿಂತಿದ್ದ ಸಂತೋಷ್.

ಬದುಕು ಕಟ್ಟಿಕೊಳ್ಳಲು ಕೆಲಸದ ನಿಮಿತ್ತ ಊರು ಬಿಟ್ಟ ನನ್ನಂತಹ ಎಷ್ಟೋ ಮಂದಿಯದ್ದು ಅಲ್ಲಿಯೂ ಇಲ್ಲದ ಇಲ್ಲಿಯೂ ಸಲ್ಲದ ಸ್ಥಿತಿ! ನಿಂತಲ್ಲಿಯೇ ನೆಲೆ ನಿಲ್ಲುವ, ಇದೇ ಇನ್ನು ನಮ್ಮ ಊರು ಅಂದುಕೊಂಡರೂ ಈ ನಿರ್ಧಾರ ಹೆಚ್ಚು ದಿನ ನಿಲ್ಲದೇ ಯಾವುದೋ ಅವ್ಯಕ್ತ ಮೋಹದತ್ತ ಸೆಳೆದು ಹೆಚ್ಚುಕಡಿಮೆ ನನ್ನನ್ನು ಊರಿಗೆ ದೂಡಿಕೊಂಡೇ ಹೋಗುತ್ತದೆ. ಊರೆಂದರೆ ತೀರದ ಸೆಳೆತ. ಆಗ ಈ ಊರಿಗೆ ಇನ್ನೂ ರಸ್ತೆಯಾಗಿಲ್ಲ, ಕುಗ್ರಾಮವಾಗಿ  ಮುಖ್ಯವಾಹಿನಿಯಿಂದ ಸಂಬಂಧ ಕಡಿದುಕೊಂಡ ಊರು ಅನ್ನುವ ಯಾವುದೇ ಯೋಚನೆಗಳು ಬರದೇ ಊರನ್ನು ಪ್ರೀತಿಯಿಂದ ಅಪ್ಪಿಕೊಳ್ಳುತ್ತೇನೆ.

ಒಮ್ಮೊಮ್ಮೆ ಈ ನೆಲದ ಋಣದ ಕುರಿತು ಯೋಚಿಸುತ್ತೇನೆ. ಅಷ್ಟು ಗಾಢವಾದ ಋಣವೇ ಅದು? ಎಲ್ಲಿದ್ದರೂ ಊರಿನತ್ತ ಕೈಬೀಸಿ ಕರೆಯುವ ಮೋಹನ ಮುರಳಿಯ ಸೆಳೆತ ನಿಜವಾಗಿಯೂ ತೀವ್ರವಾದದ್ದೇ ಹೌದು. ಅದಲ್ಲದಿದ್ದರೆ ಹೋಗುವ ಯಾವುದೇ ಪರಿಸ್ಥಿತಿಯಲ್ಲಿ ಇಲ್ಲದಿದ್ದರೂ ಮನೆಗೆ ಹೋಗ್ಬೇಕು, ನನ್ನನ್ನು ಊರಿಗೆ ಬಿಟ್ಟು ಬಾ ಅಂತ ಮತ್ತೆ ಮತ್ತೆ ಅಪ್ಪ ಹೇಳುತ್ತಿರಲಿಲ್ಲ. ನನಗಂತೂ ಬಾಲ್ಯಕ್ಕೆ ಜಿಗಿಯಬೇಕು ಅಂತ ಅನ್ನಿಸಿದ ಕೂಡಲೇ ನನ್ನೆಲ್ಲಾ ಕೆಲಸವನ್ನು ಬಿಟ್ಟು ಇಲ್ಲಿಗೆ ಬಂಡುಬಿಡುವುದು ಇತ್ತೀಚಿನ ನನ್ನಿಷ್ಟದ ಕೆಲಸಗಳಲ್ಲಿ ಒಂದಾಗಿ ಹೋಗಿದೆ. ಅದೇ ಅಂಗಳ, ಅದೇ ಮನೆ, ಅದೇ ಗದ್ದೆಬಯಲು, ಸಂಜೆ ಗದ್ದೆಯಂಚಿನಲಿ ಕೂರುವ ಬೆಳ್ಳಕ್ಕಿಗಳ ಸಾಲು. ಅಷ್ಟಕ್ಕೂ ನನ್ನ ಊರೆಂದರೆ ಬರಿಯ ಊರೇ? ಅದು ನೇರಾನೇರಾ ಬಾಲ್ಯಕ್ಕೆ ಹಿಡಿದ ಕನ್ನಡಿಯ ಪ್ರತಿಬಿಂಬವೇ.

About The Author

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಮೂಲತಃ ಉಡುಪಿಯವರು. ಈಗ ಮಂಗಳೂರು ವಾಸಿ ಮುಸುಕು ತೆರೆದು, ತೂಗುದೀಪ, ಇರುವುದೆಲ್ಲವ ಬಿಟ್ಟು ಇವರ ಪ್ರಕಟಿತ ಕವನ ಸಂಕಲನಗಳು. ಪ್ರೇಮದ ಶರಧಿಗೆ, ಆಕಾಶಬುಟ್ಟಿ, ಒಲವ ಶ್ರಾವಣ ಇವರ ಭಾವಗೀತೆ ಸಿ ಡಿ ಗಳು

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ