Advertisement
ಕಡುಬಿನ ಪುರಾಣ: ಭವ್ಯ ಟಿ.ಎಸ್. ಸರಣಿ

ಕಡುಬಿನ ಪುರಾಣ: ಭವ್ಯ ಟಿ.ಎಸ್. ಸರಣಿ

ಮಳೆಗಾಲದಲ್ಲಿ ಮಲೆನಾಡಿನ ಹಸು, ಎತ್ತುಗಳಿಗೆ ಹುರುಳಿಕಾಳು ಬೇಯಿಸಿ ಕೊಡುತ್ತಾರೆ. ಈ ಹುರುಳಿ ಬೇಯಿಸಿದ ನೀರಿಗೆ ಹುರುಳಿಕಟ್ಟು ಎನ್ನುತ್ತಾರೆ. ಇದರ ರುಚಿ ಬಲ್ಲವರೇ ಬಲ್ಲರು. ಕುದ್ದು ದಪ್ಪಗಾಗಿ ಹದಗೊಂಡ ಹುರುಳಿಕಟ್ಟಿಗೆ ಸಾಸಿವೆ, ಬೆಳ್ಳುಳ್ಳಿ, ಕರಿಬೇವು, ಒಣ ಮೆಣಸಿನ ಒಗ್ಗರಣೆ ಕೊಟ್ಟು, ಸ್ವಲ್ಪ ವಾಟೆಹುಳಿ ಅಥವಾ ಹುಣಸೆಹಣ್ಣು ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿದರೆ ಘಮಘಮಿಸುವ ಹುರುಳಿಕಟ್ಟಿನ ಸಾರು ತಯಾರಾಗುತ್ತದೆ. ಇದನ್ನು ಕಡುಬಿಗೆ ಕಲಸಿ ತಿಂದರೆ ಸ್ವರ್ಗಕ್ಕೆ ಮೂರೇ‌ ಗೇಣು.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿಯಲ್ಲಿ ಮಲೆನಾಡಿನ ಕಡುಬಿನ ಕುರಿತ ಬರಹ ನಿಮ್ಮ ಓದಿಗೆ

ಮಲೆನಾಡಿನ ಮನೆಗಳ ಬಗ್ಗೆ ಹೇಳಿದ ಮೇಲೆ ಇಲ್ಲಿನ ಮನೆಗಳಲ್ಲಿ ಮಾಡುವ ತಿಂಡಿ ತಿನಿಸುಗಳ ಬಗ್ಗೆ ಹೇಳಲೇಬೇಕು ಅನಿಸ್ತಾ ಇದೆ. ಇದೊಂದು ತಿಂಡಿ ಮಲೆನಾಡಿಗರ ಜೀವನಾಡಿ ಅಂದರೂ ತಪ್ಪೇನಿಲ್ಲ. ಮಲೆನಾಡಿನ ಪ್ರತಿ ಬೆಳಗು ಆರಂಭವಾಗುವುದು ಈ ತಿಂಡಿಯೊಂದಿಗೆ. ಅದುವೇ ಮಲೆನಾಡ್ ಕಡುಬು. ಗಣಪತಿಯನ್ನು ಮೋದಕ ಪ್ರಿಯ ಎನ್ನುತ್ತೇವೆ. ಮಲೆನಾಡಿನ ಜನರು ಕಡುಬು ಪ್ರಿಯರು. ಹಾಗೆಂದ ಮಾತ್ರಕ್ಕೆ ಇದೇನು ಬಹಳ ಸಾಮಗ್ರಿಗಳನ್ನು ಬಳಸಿ ಮಾಡುವ ದುಬಾರಿ ಭಕ್ಷ್ಯವಲ್ಲ. ಬಣ್ಣ, ತಳುಕು, ಬಳಕು ಇಲ್ಲವೇ ಇಲ್ಲ. ಇದು ಅಕ್ಕಿ ತರಿಯಿಂದ ಮಾಡುವ ಸರಳ, ಸುಲಭ, ಆರೋಗ್ಯಕರ ಕಡುಬು. ಮಲೆನಾಡಿನ ಪ್ರತಿ ಮನೆಯಲ್ಲಿ ಕಡುಬಿಗಾಗಿ ಮಾಡಿಟ್ಟ ಅಕ್ಕಿ ತರಿ ಒಂದು ಡಬ್ಬದಲ್ಲಿ ಇದ್ದೇ ಇರುತ್ತದೆ.

ಬೆಳಿಗ್ಗೆ ಎದ್ದೊಡನೆ ಬೆಂಕಿಯೊಲೆಯ ಮೇಲೆ ಕಾಫಿಯ ನಂತರ ಕಡುಬಿನ ಎಸರಿನ ಪಾತ್ರೆ ಇಡಲಾಗುತ್ತದೆ. ಅಂದರೆ ಕಡುಬಿನ ಹಿಟ್ಟು ಬೇಯಿಸಲು ಬೇಕಾದ ನೀರಿಟ್ಟು ಅದಕ್ಕೆ ಸ್ವಲ್ಪ ಉಪ್ಪು ಹಾಕ್ತಾರೆ. ನೀರು ಕುದಿಯುತ್ತಿದ್ದಂತೆ ಅಕ್ಕಿ ತರಿಯನ್ನು ಹಾಕಿ ಮರದ ಸಟ್ಟುಗದಿಂದ ಚೆನ್ನಾಗಿ ತಿರುವುತ್ತಾ, ಹಿಟ್ಟು ಚೆನ್ನಾಗಿ ಬೆಂದು ಕಡುಬಿನ ಹದಕ್ಕೆ ಬಂದಾಗ ಒಲೆಯಿಂದ ಇಳಿಸಿ, ಮರದಿಂದ ಮಾಡಲಾದ ಅಗಲವಾದ ಕಡುಬಿನ ಮರಿಗೆಗೆ ಹಾಕಿ ಆರಲು ಬಿಡುತ್ತಾರೆ.

ಹಿಟ್ಟು ಸ್ವಲ್ಪ ಆರಿದ ಮೇಲೆ ಒಂದು ಸಣ್ಣ ಪಾತ್ರೆಯಲ್ಲಿ ನೀರಿಟ್ಟುಕೊಂಡು ಕೈಗೆ ನೀರು ಹಚ್ಚಿಕೊಳ್ತಾ ಹಿಟ್ಟನ್ನು ಚೆನ್ನಾಗಿ ನಾದಬೇಕು. ನಂತರ ಕಡುಬಿನ ಉಂಡೆಗಳನ್ನು ಕಟ್ಟಲಾಗುತ್ತದೆ. ಅಷ್ಟರಲ್ಲಿ ಒಲೆಯ ಮೇಲೆ ಸರಗೋಲು ಎಂಬ ಪಾತ್ರೆಗೆ ನೀರು ಹಾಕಿ ಕುದಿಯಲು ಇಟ್ಟಿರುತ್ತಾರೆ. ಕಡುಬಿನ ಉಂಡೆಗಳನ್ನು ಕಟ್ಟುವಷ್ಟರಲ್ಲಿ ನೀರು ಕುದಿಯಲಾರಂಭಿಸುತ್ತದೆ. ಸರಗೋಲಿನಲ್ಲಿ ಎರಡು ಸ್ತರಗಳಿರುತ್ತವೆ. ಕೆಳಗಿನ ಸ್ತರದಲ್ಲಿ ನೀರು ಕುದಿಯುತ್ತಿದ್ದರೆ ಮೇಲಿನ ಸ್ತರದಲ್ಲಿ ಅಂತ್ರ ಎಂಬ ಹಬೆ ಮೇಲೆ ಬರಲು ರಂಧ್ರಗಳಿರುವ ತಟ್ಟೆಯಿರುತ್ತದೆ. ಅದರ ಮೇಲೆ ಕಟ್ಟಿದ ಕಡುಬಿನ ಉಂಡೆಗಳನ್ನು ಹಾಕಿ ಮೇಲಿನ ಮುಚ್ಚಳ ಮುಚ್ಚಿಟ್ಟರೆ ಇಪ್ಪತ್ತು ನಿಮಿಷಗಳಲ್ಲಿ ಕಡುಬು ಬೆಂದು, ತಿನ್ನಲು ತಯಾರಾಗುತ್ತದೆ. ಕಡುಬು ಬೇಯುವಷ್ಟರಲ್ಲಿ ಕಾಯಿ ಚಟ್ನಿಯೂ, ಬೆಣ್ಣೆ ಕಾಯಿಸಿ ತುಪ್ಪವೂ ತಯಾರಾಗುತ್ತದೆ. ಹಿಂದಿನ ರಾತ್ರಿ ಮಾಡಿದ ಸಾರು ಉಳಿದಿದ್ದರೆ ಅದೂ ಚೆನ್ನಾಗಿ ಕಡುಬಿನೊಂದಿಗೆ ಹೊಂದುತ್ತದೆ.

ಮುಂದಾಲೋಚನೆಯಿದ್ದರೆ ಮೊದಲ ದಿನ ಸಾರಿಗೆ ತಯಾರಿ ಮಾಡಿಟ್ಟು ಮಲಗಿದರೆ ಕಡುಬು ಬೇಯುವಷ್ಟರಲ್ಲಿ ಬೆಳಗಿನ ತಿಂಡಿ ಮತ್ತು ಮಧ್ಯಾಹ್ನದ ಊಟಕ್ಕೆ ಸೇರಿಸಿ ಒಂದೇ ಸಾರು ಮಾಡಿಬಿಡಬಹುದು. ತರಕಾರಿ ಸಾರಿನೊಂದಿಗೆ ರುಚಿಯಿರುತ್ತದೆ. ಆದರೆ ಮೀನು ಮತ್ತು ಮಾಂಸದ ಸಾರಿನೊಂದಿಗೆ‌ ಒಂದೆರಡು ಕಡುಬು ಹೆಚ್ಚೇ ಹೊಟ್ಟೆ ಸೇರುತ್ತದೆ. ಅದಕ್ಕೆ ಮಲೆನಾಡಿನಲ್ಲಿ ನೆಂಟರು ಬಂದರೆ ಕಡುಬು ಕೋಳಿಸಾರು ವಿಶೇಷ ಅಡುಗೆ. ಮಳೆಗಾಲದಲ್ಲಿ ಮೀನು ಸಿಕ್ಕರೆ ಮೀನಿನ ಸಾರು ಆಗುವಷ್ಟರಲ್ಲಿ ಕಡುಬು ತಯಾರಾಗಿರುತ್ತದೆ. ಇನ್ನೂ ದೇವರ ಹರಕೆ ಎಂಬ ಆಚರಣೆಯಲ್ಲಿ ಸಹ ಕಡುಬು ಇರಲೇಬೇಕು. ಹಿರಿಯರಿಗೆ ಬೇರೆ ಭಕ್ಷ್ಯಗಳ ಜೊತೆಗೆ ಕಡುಬು, ಮಾಂಸ, ಮೀನಿನ ಖಾದ್ಯಗಳನ್ನು ಎಡೆಯಿಡಲಾಗುತ್ತದೆ. ಖಟ್ಲೆ ಮನೆ ಎನ್ನುವ ತೀರಿಕೊಂಡವರ ಸಮಾರಾಧನೆಯಲ್ಲಿಯೂ ಕಡುಬಿಗೆ ಪ್ರಮುಖ ಸ್ಥಾನ.

ಇಂತಿಪ್ಪ ಕಡುಬು ನನಗೂ ಬಲುಪ್ರಿಯವಾದ ತಿಂಡಿ. ಚಿಕ್ಕವಳಿರುವಾಗ ಅಮ್ಮ, ಅಜ್ಜಿ ಕಡುಬು ಮಾಡುವುದನ್ನು ತದೇಕಚಿತ್ತದಿಂದ ನೋಡುತ್ತಿದ್ದೆ. ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಮೂರು ಹೊತ್ತು ಅನ್ನ ತಿನ್ನದೆ‌ ಕಡುಬನ್ನೇ ತಿಂದಿದ್ದೂ ಇದೆ.

ಕಡುಬು ಹಳ್ಳಿಯ ಬಿಡುವಿಲ್ಲದ ದಿನಚರಿಗೆ ಹೊಂದುವ ತಿಂಡಿ. ಏಕೆಂದರೆ ಹಳ್ಳಿಯ ಗೃಹಿಣಿಯರು ಮನೆಕೆಲಸಗಳನ್ನು ಬೆಳಿಗ್ಗೆ ಒಂಬತ್ತರೊಳಗೆ ಮುಗಿಸಿ ಗದ್ದೆ ತೋಟಗಳತ್ತ ಸಾಗುವವರು. ಅವರಿಗೆ ಸಮಯ ಉಳಿಸುವ ಸಂಗಾತಿ ಕಡುಬು. ಮೊದಲ ದಿನ ಏನೂ ಸಿದ್ಧತೆ ಇಲ್ಲದಿದ್ದರೂ ಕಡುಬಿನ ಹಿಟ್ಟೊಂದು ಮನೆಯಲ್ಲಿದ್ರೆ ಧೈರ್ಯ ಇವರಿಗೆ. ಬೆಳಿಗ್ಗೆ ಬೇಗ ಕಡುಬು ಮಾಡಿ ಹಾಕಿಬಿಟ್ರೆ ಆಮೇಲೆ ಬೇರೆ ಅಡುಗೆನೋ, ಮಕ್ಕಳ ಕೆಲಸನೋ, ಗದ್ದೆ ತೋಟದ ಕಡೆಗೋ ಹೋಗಲು ನಿರಾಳವಾಗ್ತಾರೆ. ಕೊಟ್ಟಿಗೆಯಂತೂ ಎಲ್ಲಾ ಮನೆಗಳಲ್ಲಿ ಇರುವುದರಿಂದ ಬೆಳಿಗ್ಗೆ ಒಂದು ಗಂಟೆ ಅಲ್ಲೇ ಕಳೆಯಬೇಕಾಗುತ್ತದೆ. ಹೀಗಿರುವಾಗ ಯಾವುದೇ ತಕರಾರು ತೆಗೆಯದೆ ಒಲೆ ಮೇಲೇ ಸದ್ದಿಲ್ಲದೆ ಬೇಯುವ ಕಡುಬನ್ನು ದೂರಲು ಕಾರಣವೇ ಇವರಿಗಿಲ್ಲ. ಕಡುಬಿನ ಹಿಟ್ಟು ಬೇಯಿಸೋದು, ನಾದುವುದು, ಸಮಾನ ಗಾತ್ರದ ಉಂಡೆಗಳನ್ನು ಕಟ್ಟುವುದು ಒಂದು ಕಲೆ. ಕೆಲವು ಕೈಗಳಂತೂ ಇದರಲ್ಲಿ ಬಹಳ ಪಳಗಿ ಕಡುಬುಗಳನ್ನು ನಿಮಿಷ ಮಾತ್ರದಲ್ಲಿ ಮಾಡಿ ಅಚ್ಚರಿ ಮೂಡಿಸುವುದಿದೆ.

ಮಳೆಗಾಲದಲ್ಲಿ ಮಲೆನಾಡಿನ ಹಸು, ಎತ್ತುಗಳಿಗೆ ಹುರುಳಿಕಾಳು ಬೇಯಿಸಿ ಕೊಡುತ್ತಾರೆ. ಈ ಹುರುಳಿ ಬೇಯಿಸಿದ ನೀರಿಗೆ ಹುರುಳಿಕಟ್ಟು ಎನ್ನುತ್ತಾರೆ. ಇದರ ರುಚಿ ಬಲ್ಲವರೇ ಬಲ್ಲರು. ಕುದ್ದು ದಪ್ಪಗಾಗಿ ಹದಗೊಂಡ ಹುರುಳಿಕಟ್ಟಿಗೆ ಸಾಸಿವೆ, ಬೆಳ್ಳುಳ್ಳಿ, ಕರಿಬೇವು, ಒಣ ಮೆಣಸಿನ ಒಗ್ಗರಣೆ ಕೊಟ್ಟು, ಸ್ವಲ್ಪ ವಾಟೆಹುಳಿ ಅಥವಾ ಹುಣಸೆಹಣ್ಣು ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿದರೆ ಘಮಘಮಿಸುವ ಹುರುಳಿಕಟ್ಟಿನ ಸಾರು ತಯಾರಾಗುತ್ತದೆ. ಇದನ್ನು ಕಡುಬಿಗೆ ಕಲಸಿ ತಿಂದರೆ ಸ್ವರ್ಗಕ್ಕೆ ಮೂರೇ‌ ಗೇಣು.

ಕಡುಬು ಮಲೆನಾಡಿನ ಎಷ್ಟು ಜನಪ್ರಿಯ ತಿಂಡಿ ಎಂದರೆ ಇದರೊಂದಿಗೆ ಹಲವು ನಾಣ್ಣುಡಿಗಳು ಹುಟ್ಟಿಕೊಂಡಿವೆ. ಮಕ್ಕಳು ಗಲಾಟೆ ಮಾಡ್ತ ಇದ್ರೆ ಅಮ್ಮಂದಿರು ಬೆನ್ನಿಗೆ ಎರಡು ಕಡಬು ಹೇರ್ಲಾ ನಿನಗೆ ಅಂತ ಬೈತಾರೆ. ಶಾಲೆಯಲ್ಲಿ ಯಾರಾದರೂ ಪೆಟ್ಟು ತಿಂದರೆ ಟೀಚರ್ ಕಡಬು ಕೊಟ್ರಾ… ಅಂತ ಹಂಗಿಸುವುದಿದೆ. ಯಾರಾದರೂ ನಿಧಾನವಾಗಿ ಮಾತಾಡಿ ಕೇಳಿಸದಿದ್ದರೆ ಗಂಟಲಲ್ಲಿ ಏನು ಕಡುಬು ಸಿಕ್ಕೊಂಡಿದೆಯಾ ಅಂತ ಬೈಯೋದು ಇದೆ.

ದೀಪಾವಳಿ ಮತ್ತು ಭೂಮಿ ಹುಣ್ಣಿಮೆಯ ಹಬ್ಬಗಳಲ್ಲಿ ಹಲಸಿನ ಹಣ್ಣಿನ ಕಡುಬು, ಕೆಸುವಿನ ದಂಟಿನ ಕಡುಬು ಅಂತ ಸ್ವಲ್ಪ ವಿಶೇಷವಾಗಿ ಮಾಡ್ತಾರೆ. ಆದರೆ ದಿನನಿತ್ಯ ಮಾಡುವ ಕಡುಬಿನ ರುಚಿಯ ಮೋಡಿಯೇ ಬೇರೆ.

ಕಡುಬಿನ ಹಿಟ್ಟನ್ನು ಮೊದಲೆಲ್ಲಾ ಮನೆಯ ಹೆಂಗಸರೇ ಬೀಸುಕಲ್ಲಿನಲ್ಲಿ ಬೀಸುತ್ತಿದ್ದರು. ಆಗ ಅವರು ಹಾಡುವ ಹಾಡು, ಕತೆಗಳು ಮಕ್ಕಳ ಮನ ಸೆಳೆಯುತ್ತಿದ್ದವು. ಒಂದಿಷ್ಟು ಹರಟೆ, ಮಾತುಕತೆಗಳಿಗೆ ಇದು ಸಮಯವನ್ನು ನೀಡುತ್ತಿತ್ತು. ಆದರೆ ಈಗ ಹಿಟ್ಟಿನ ಗಿರಣಿಯಲ್ಲಿ ತಿಂಗಳಿಗಾಗುವಷ್ಟು ಹಿಟ್ಟು ಮಾಡಿಸಿಕೊಳ್ತಾರೆ. ಕೆಲವರು ಮಿಕ್ಸಿಯಲ್ಲೂ ಮಾಡ್ಕೋತಾರೆ. ಮೊದಲೆಲ್ಲಾ ಕಟ್ಟಿಗೆ ಒಲೆ ಮೇಲೆ ಬೇಯುವ ದೊಡ್ಡ ದೊಡ್ಡ ಸರಗೋಲುಗಳು ಇರುತ್ತಿದ್ದವು. ಈಗ ವಿಭಕ್ತ ಕುಟುಂಬಗಳು ಹೆಚ್ಚಾಗಿರುವುದರಿಂದ ಸಣ್ಣ ಗಾತ್ರದ ನೋಡಲು ಆಕರ್ಷಕವಾದ ಮತ್ತು ಬೇಗನೆ ಗ್ಯಾಸ್ ಒಲೆ ಮೇಲೆ ಕಡುಬು ಬೇಯಿಸುವ ಆಧುನಿಕ ಕುಕ್ಕರ್‌ಗಳು ಬಂದಿವೆ. ಹಳ್ಳಿ ಬಿಟ್ಟು ಬೆಂಗಳೂರು ಸೇರಿರುವವರೂ ಸಹ ನನ್ನ ಗಂಡನಿಗೆ ಇಷ್ಟ,‌ ಮಗನಿಗೆ ಇಷ್ಟ ಅಂತ ಕಡುಬಿನ ಸರಗೋಲು ಕೊಂಡ್ಕಂಡು ಇಟ್ಟಿರುತ್ತಾರೆ. ಆಗಾಗ ಕಡುಬು ಮಾಡ್ತಾರಂತೆ. ಬೆಂಗಳೂರಿನ ಗಡಿಬಿಡಿ ಬದುಕಿನಲ್ಲೂ ಮಲೆನಾಡಿನ ತಂಪಾದ ನೆನಪನ್ನು ಈ ಸರಗೋಲು ತರಬಹುದೇನೋ.

ನನ್ನ ಇಬ್ಬರೂ ಮಕ್ಕಳಿಗೆ ಮತ್ತು ಪತಿಗೆ ಕಡುಬು ಇಷ್ಟವಾದ ತಿಂಡಿ. ಅತ್ತೆ ಮತ್ತು ಮಾವ ಮೊದಲಿನಿಂದಲೂ ಕಡುಬನ್ನು ಮೆಚ್ಚುವವರೇ. ಮನೆಯಲ್ಲಿ ಭತ್ತದ ಗದ್ದೆಯ ನೆಟ್ಟಿ(ನಾಟಿ) ಅಡಿಕೆ ಕೊಯ್ಲು ಮೊದಲಾದ ಕೃಷಿಕೆಲಸಗಳ ದಿನಗಳಲ್ಲಿ ಸ್ವಲ್ಪ ಹೆಚ್ಚು ಕಡುಬುಗಳನ್ನು ಮಾಡಬೇಕಾಗುತ್ತದೆ‌. ಕೆಲಸಕ್ಕೆ ಬರುವ ಆಳುಗಳಿಗೆ ಇದು ಹೊಟ್ಟೆ ತುಂಬಿ, ಬಹಳ ಹೊತ್ತು ಹಸಿವು, ಆಯಾಸವಾಗದಂತೆ ಶಕ್ತಿ ತುಂಬುತ್ತದೆ.

ಕಾಲ ಬದಲಾದಂತೆ ನಮ್ಮ ಊಟ, ತಿಂಡಿ, ಉಡುಗೆ, ತೊಡುಗೆ ಬದಲಾವಣೆಗೆ ಒಳಪಡೋದು ಸಹಜ. ಆದರೆ ಕೆಲವು ವಿಷಯಗಳು ಬದಲಾಗಬಾರದು. ಮಲೆನಾಡಿನ ಸೊಗಡು ಮೈ ಮನಗಳಿಗೆ ಆಹ್ಲಾದ ನೀಡಬೇಕು ಅನ್ಸುತ್ತೆ. ಅವುಗಳಲ್ಲಿ ಕಡುಬು ಕೂಡ ಒಂದು. ಎಷ್ಟೇ ಹೊಸ ಹೊಸ ಅಡುಗೆಗಳು ಬಂದರೂ ಕಡುಬಿನ ರುಚಿ ಮಾಸದಿರಲಿ.

About The Author

ಭವ್ಯ ಟಿ.ಎಸ್.

ಭವ್ಯ ಟಿ.ಎಸ್. ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಕಾನುಗೋಡಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕತೆ, ಕವಿತೆ, ಲೇಖನಗಳನ್ನು ಬರೆಯುವುದು ಹವ್ಯಾಸ. ಹಲವು ಪ್ರಮುಖ ಪತ್ರಿಕೆಗಳು ಹಾಗೂ ವೆಬ್ ಮ್ಯಾಗಜೀನ್‌ಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. "ವಸುಂಧರೆ" ಇವರ ಪ್ರಕಟಿತ ಚೊಚ್ಚಲ ಕವನ ಸಂಕಲನ.

1 Comment

  1. Sulochana .G

    ಬಹಳ ಸೊಗಸಾಗಿ ಮೂಡಿದೆ ಮಲೆನಾಡ ಕಡುಬಿನ ಲೇಖನ..

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ