Advertisement
ಕಾರವಾರದ ಆ ದಿನಗಳು: ರಂಜಾನ್ ದರ್ಗಾ ಸರಣಿ

ಕಾರವಾರದ ಆ ದಿನಗಳು: ರಂಜಾನ್ ದರ್ಗಾ ಸರಣಿ

‘ನಮ್ಮ ಕಷ್ಟ ಸುಖದಲ್ಲಿ ಇವರು. ಇವರ ಕಷ್ಟ ಸುಖದಲ್ಲಿ ನಾವು. ನಮ್ಮ ನಡುವೆ ಧರ್ಮಗಳು ಅಡ್ಡ ಬರುವುದಿಲ್ಲ. ಧರ್ಮಗಳ ಗೋಜಿಗೆ ನಾವು ಹೋಗುವುದಿಲ್ಲ. ಅವುಗಳ ಪಾಡಿಗೆ ಅವು ಇರುತ್ತವೆ. ನಮ್ಮ ಪಾಡಿಗೆ ನಾವು ಇರುತ್ತೇವೆ. ಕೆಲಸ ಮಾಡುವವರಿಗೆ ಎಲ್ಲ ಧರ್ಮಗಳು ಒಂದೇ. ಕೆಲಸವಿಲ್ಲದವರಿಗೆ ಮತ್ತು ಕೆಲಸವಿಲ್ಲದೆ ಬದುಕಬೇಕೆನ್ನುವವರಿಗೆ ಧರ್ಮಗಳು ಬೇರೆ ಬೇರೆಯಾಗಿ ಕಾಣುತ್ತವೆ. ಆ ಅವರು ಉಗ್ರರೂಪ ತಾಳಿ ಅನ್ಯ ಧರ್ಮೀಯರನ್ನು ಕೊಲ್ಲುತ್ತಾರೆ ಇಲ್ಲವೆ ಅವರಿಂದ ಕೊಲೆಗೀಡಾಗುತ್ತಾರೆ. ಅವರ ಉಸಾಬರಿ ನಮಗೇಕೆ’ ಎಂದ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 100ನೇ ಕಂತು ನಿಮ್ಮ ಓದಿಗೆ

1991ರಲ್ಲಿ ಪ್ರಜಾವಾಣಿಯ ಬಾತ್ಮೀದಾರನಾಗಿ ಕಾರವಾರಕ್ಕೆ ವರ್ಗವಾಯಿತು. 1983ರಲ್ಲಿ ಪ್ರಜಾವಾಣಿ ಸೇರಿದ್ದ ನನಗೆ ಅದು ಮೊದಲನೆಯ ವರ್ಗವಾಗಿತ್ತು. ಸುದ್ದಿ ಸಂಪಾದಕರು ಮೊದಲಿಗೆ ಬೇರೊಬ್ಬ ಸಹೋದ್ಯೋಗಿಗೆ ಕೇಳಿದಾಗ ಆತ ಏನೇನೊ ನೆಪ ಹೇಳಿ ತಪ್ಪಿಸಿಕೊಂಡ. ಇನ್ನೊಬ್ಬ ಸಹೋದ್ಯೋಗಿ ಕೂಡ ತಪ್ಪಿಸಿಕೊಂಡಳು. ಸುದ್ದಿ ಸಂಪಾದಕರು ನನಗೆ ಕೇಳಿದರು. “ಆ ಕರಾವಳಿ ನಗರ ದಾಟಿ ಬೇರೆ ಯಾವುದಾದರೂ ಸ್ಥಳವಿದ್ದರೂ ಹೋಗುವುದಾಗಿ ತಿಳಿಸಿದೆ. ನಾನು ಮೂರು ವಿಚಾರಗಳಲ್ಲಿ ನನಗೆ ಸ್ಪಷ್ಟತೆ ಇತ್ತು. ಪ್ರಮೋಷನ್, ಅಪ್ರಿಷಿಯೇಷನ್, ಟ್ರಾನ್ಸ್ಫರ್ ವಿಚಾರವಾಗಿ ಎಂದೂ ಯೋಚಿಸಬಾರದು. ಈ ಬಯಕೆಗಳು ನನ್ನನ್ನು ದುರ್ಬಲ ಮಾಡಿ ಆತ್ಮಗೌರವಕ್ಕೆ ಧಕ್ಕೆ ತರುತ್ತವೆ ಎಂಬುದು ನನಗೆ ಖಚಿತವಾಗಿತ್ತು. ಅಂತೂ ವರ್ಗವಾಯಿತು. ಆಗ ಕಾರವಾರದಲ್ಲಿ ನನ್ನ ಸಮಾಜವಾದಿ ಗೆಳೆಯ ಪುರುಷೋತ್ತಮ ಬಾತ್ಮೀದಾರನಾಗಿದ್ದ. ಆತ ಹಬ್ಬುವಾಡಾದಲ್ಲಿ ಇದ್ದ ಮನೆಯನ್ನೇ ಬಾಡಿಗೆಗೆ ಹಿಡಿದೆ. ಅದು ನಮ್ಮ ಸಹೋದ್ಯೋಗಿ ಅರುಣ ಹಬ್ಬು ಅವರ ಮನೆಯಾಗಿತ್ತು.

ಬಾತ್ಮೀದಾರನಾಗಿ ಇದು ನನ್ನ ಮೊದಲ ಅನುಭವವಾಗಿತ್ತು. ಪುರುಷೋತ್ತಮ ಅಲ್ಲಿ ಒಳ್ಳೆಯ ಹೆಸರು ಪಡೆದಿದ್ದ. 1976ರಲ್ಲಿ ಎಂ.ಎ. ಪರೀಕ್ಷೆ ಮುಗಿದ ಕೂಡಲೆ ಯಲ್ಲಾಪುರದ ವೈದ್ಯಹೆಗ್ಗಾರ ಗ್ರಾಮದ ಅನಂತ ವೈದ್ಯನ ಜೊತೆ ನಾವು ಕೆಲ ಗೆಳೆಯರು ವೈದ್ಯಹೆಗ್ಗಾರಕ್ಕೆ ಹೋಗಿದ್ದೆವು.

ಬಯಲುಸೀಮೆ ವಿಜಯಪುರದ ನನಗೆ ಆ ಹಳ್ಳಿ ಬಹಳ ಹಿಡಿಸಿತ್ತು. ಬೆಟ್ಟಗಳ ಮಧ್ಯೆ ಇರುವ ಆ ಹಳ್ಳಿಯನ್ನು ಹಳ್ಳ ದಾಟಿ ಹೋಗಿದ್ದು ಇನ್ನೂ ನೆನಪಿದೆ. ಆ ಪ್ರದೇಶದ ಸಿದ್ದಿ ಜನರು, ಆಫ್ರಿಕಾದ ನೆನಪು ತರುತ್ತಿದ್ದರು. ಅವರ ಪೂರ್ವಜರು ಅಬ್ಸೀನಿಯಾದಿಂದ ಬಾಡಿಗೆ ಸೈನಿಕರಾಗಿ ಬಂದವರು. ಆದಿಲಶಾಹಿ ಸೈನ್ಯದಲ್ಲಿ, ನಂತರ ಕಿತ್ತೂರ ಸೈನ್ಯ ಮುಂತಾದ ಕಡೆಗಳಲ್ಲಿ ಸೇವೆ ಸಲ್ಲಿಸಿದವರು. ಬಹುಶಃ ಕಿತ್ತೂರ ಪತನದ ನಂತರ ಯಲ್ಲಾಪುರದ ಕಾಡು ಸೇರಿರಬಹುದು. ಆ ಸಂದರ್ಭದಲ್ಲಿ ಅವರ ಬದುಕು ಕೃಷಿ ಕೂಲಿಕೆಲಸಕ್ಕೆ ಸೀಮಿತವಾಗಿತ್ತು. ಅದೇ ಮುಂದುವರಿದಿತ್ತು. ಅವರಲ್ಲಿ ಒಬ್ಬನೇ ಒಬ್ಬ ಯುವಕ ಪೊಲೀಸ್ ಆಗಿದ್ದು ಐತಿಹಾಸಿಕ ಸಾಧನೆಯಾಗಿತ್ತು. ಮಾರ್ಗರೆಟ್ ಆಳ್ವಾ ಅವರು ಕೇಂದ್ರ ಸಚಿವೆ ಆಗಿದ್ದಾಗ, ಯಲ್ಲಾಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಿದ್ದಿ ಯುವಕ ಯವತಿಯರಿಗೆ ಸ್ಪೋರ್ಟ್ಸ್‌ನಲ್ಲಿ ಅವಕಾಶ ಸಿಕ್ಕಿತು. ಹೀಗೆ ಅವರು ಬೆಳಕಿಗೆ ಬರಲು ಆರಂಭವಾಯಿತು. ಆ ಒಂದು ಕಪ್ಪು ಜನಾಂಗದವರು ಇಲ್ಲಿಗೆ ಬಂದು ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಆಗಿದ್ದರು!

ಆ ಸಂದರ್ಭದಲ್ಲಿ ಅಂಕೋಲಾ, ಕಾರವಾರ ಮುಂತಾದ ಕಡೆ ಸುತ್ತಿದೆವು. ದಿನಕರ ದೇಸಾಯಿ ಅವರ ಚಳವಳಿಯ ತಾಣವಾದ ಅಂಕೋಲಾ ನನ್ನನ್ನು ವಿಶೇಷವಾಗಿ ಆಕರ್ಷಿಸಿತು. ಕಾರವಾರದಲ್ಲಿ ಸಮುದ್ರ ತೀರವನ್ನು ಮೊದಲ ಬಾರಿಗೆ ನೋಡಿದ ನೆನಪು. ಮಳೆಯಲ್ಲಿ ಸ್ವಲ್ಪ ತೊಯ್ಸಿಕೊಂಡು ಅದಾವುದೋ ಹಳೆಯ ಲಾಜಿಂಗು ಹೊಕ್ಕು ರಾತ್ರಿಯಿಡೀ ತಿಗಣಿ ಒರೆಯುತ್ತ ನಿದ್ದೆಗೆಟ್ಟಿದ ನೆನಪು. ಇಂಥ ನೆನಪುಗಳನ್ನೆಲ್ಲ ತುಂಬಿಕೊಂಡು ಪ್ರಜಾವಾಣಿ ಬಾತ್ಮೀದಾರನಾಗಿ ಕಾರವಾರಕ್ಕೆ ಹೋದೆ.

ಆ ವಿಚಿತ್ರ ಬಿಸಿಲು, ಬೆವರು ಅಸಹನೀಯ ಎನಿಸಿತು. ದಿನಕ್ಕೆ ಮೂರು ಬಾರಿ ಸ್ನಾನ ಮಾಡಿದರೂ ಮತ್ತೆ ಮತ್ತೆ ಜೀವ ಸ್ನಾನ ಬಯಸುತ್ತಿತ್ತು. ಹಿತ್ತಲಿನಲ್ಲಿ ಸೇದೂ ಬಾವಿ ಇದ್ದದ್ದರಿಂದ ನೀರಿನ ತೊಂದರೆ ಇರಲಿಲ್ಲ. ಸ್ನಾನದ ಕೋಣೆಯಲ್ಲಿ ಚಿತ್ರ ವಿಚಿತ್ರ ಕಪ್ಪೆ ಮತ್ತು ಹಲ್ಲಿಗಳು ಬರುವುದು ಕಿರಿಕಿರಿ ಎನಿಸಿದರೂ ಕೆಲ ತಿಂಗಳುಗಳ ನಂತರ ರೂಢಿಯಾಯಿತು. ಮನೆಯ ಹಿತ್ತಲಿನ ಹಿಂದೆಯೆ ಬೆಟ್ಟದ ಸಾಲು ಇದ್ದದ್ದರಿಂದ ಕೇರೆ ಹಾವುಗಳು ಹೆಚ್ಚಾಗಿ ಹಿತ್ತಲಲ್ಲಿ ಭೇಟಿ ಕೊಟ್ಟು ಹೋಗುತ್ತಿದ್ದವು. ಕೆಲವೊಂದು ಸಲ ಹುಲಿ, ಚಿರತೆಗಳ ಹೆಜ್ಜೆ ಗುರುತುಗಳು ಕಾಣಿಸುತ್ತಿದ್ದವು. ಹಾಗೆ ಹೆಜ್ಜೆ ಗುರುತುಗಳು ಕಂಡಾಗ ಬೀದಿ ನಾಯಿಯೊಂದು ಕಡಿಮೆಯಾಗುತ್ತಿತ್ತು.

ಆ ಕಾಲದ ಕಾರವಾರದಲ್ಲಿ ಪುರುಷರು ಮಹಿಳೆಯರಿಗೆಲ್ಲ ಸೈಕಲ್ಲೇ ಪ್ರಮುಖ ವಾಹನವಾಗಿತ್ತು. ಬಹುಶಃ ರಾಜ್ಯದಲ್ಲಿ ಅಷ್ಟೊಂದು ಸೈಕಲ್ಲುಗಳನ್ನು ಬೇರೆ ಎಲ್ಲಿಯೂ ನೋಡಿದ ನೆನಪಿಲ್ಲ.

ನಾನೂ ಒಂದು ಸೈಕಲ್ ಕೊಂಡೆ. ಕಾರವಾರದಲ್ಲಿ ಸೈಕಲ್ ಮೇಲೆ ಓಡಾಡುವುದೇ ಖುಷಿ ಎನಿಸುತ್ತಿತ್ತು. ನಾನು ಹೋದ ಆರಂಭದಲ್ಲಿ ಅಲ್ಲಿನ ಬಜಾರದ ಅಟ್ಟದ ಮೇಲೆ ವಾರ್ತಾ ಇಲಾಖೆ ಕಚೇರಿ ಇತ್ತು. ಎದುರುಗಡೆ ಸ್ವಲ್ಪ ದೂರದಲ್ಲಿದ್ದ ಹೋಟೆಲಿಂದ ತೇಲಿ ಬರುವ ಹಾಡುಗಳು ಕೇಳಿಸುತ್ತಿದ್ದವು. ‘ಓ ಪೊಲೀಸರೆ ಅವನನ್ನು ಹಿಡಿಯಿರಿ, ಆತ ನನ್ನ ಹೃದಯವನ್ನು ಕದ್ದು ಓಡುತ್ತಿದ್ದಾನೆ’ ಎಂಬ ಹಿಂದಿ ಹಾಡನ್ನು ಆ ಹೋಟೆಲ್ ಮಾಲಿಕ ದಿನಕ್ಕೆ ಒಂದು ಬಾರಿಯಾದರೂ ಹಚ್ಚುತ್ತಿದ್ದ. ಕೆಳಗೆ ರಸ್ತೆ ಬದಿಯ ಹೆಮ್ಮರದ ಕೆಳಗೆ ಉಪ್ಪಿನಕಾಯಿ ಹಾಕಲು ಉಪಯೋಗಿಸುವ ಅಪ್ಪೆಮಿಡಿ ಮಾವಿನಕಾಯಿ ರಾಸಿಯಲ್ಲಿ ಆರಿಸಿಕೊಳ್ಳಲು ಜನ ಮುಗಿಬಿದ್ದುದು ಒಂದು ರೂಪಕವಾಗಿ ನನ್ನ ಮನದಲ್ಲಿ ಉಳಿದಿದೆ. ಆ ರಾಸಿಯ ಮುಂದೆ ಬ್ರಾಹ್ಮಣರು, ವಿವಿಧ ಜಾತಿಗಳ ಜನರು, ಮುಸ್ಲಿಮರು ಹೀಗೆ ಎಲ್ಲರೂ ಇದ್ದರು. ಎಲ್ಲ ತೆರನಾದ ಆಹಾರ ಸಂಸ್ಕೃತಿಯವರಿಗೆ ಇಷ್ಟವಾದದು ಅಪ್ಪೆಮಿಡಿ ಉಪ್ಪಿನಕಾಯಿ.

ಮನುಷ್ಯರು ದೈನಂದಿನ ಬದುಕಿನಲ್ಲಿ ಸಹಜವಾಗಿಯೆ ಜಾತ್ಯತೀತರಾಗಿರುತ್ತಾರೆ. ಆದರೆ ಪ್ರಜ್ಞಾಪೂರ್ವಕವಾಗಿ ಅವರಲ್ಲಿ ದ್ವೇಷ ಸಂಸ್ಕೃತಿಯನ್ನು ಬೆಳೆಸಲಾಗುತ್ತದೆ ಎಂಬುದು ಇಂಥ ನೂರಾರು ಘಟನೆಗಳಿಂದ ನನಗೆ ಮನವರಿಕೆಯಾಗಿದೆ.

ಕಾರವಾರದಂಥ ಪ್ರದೇಶದಲ್ಲಿ ನಾವೆಲ್ಲ ಪತ್ರಿಕಾ ಮಿತ್ರರು ಬಹಳ ಆತ್ಮೀಯವಾಗಿ ಇದ್ದೆವು. ಸಂಯುಕ್ತ ಕರ್ನಾಟಕದ ಮೋಹನ ಹೆಗಡೆ, ತರುಣ ಭಾರತ ಪತ್ರಿಕೆಯ ಸತೀಶ್ ಕೋರಗಾವಕರ್ (ಅವರಿಗೆ ಎಲ್ಲರೂ ಭಾವಾಜಿ ಎಂದು ಕರೆಯುತ್ತಿದ್ದರು.) ಲೋಕಧ್ವನಿಯ ಚೇತನ ಜೋಷಿ, ಹಿಂದೂ ಪತ್ರಿಕೆಯ ಆರ್. ಎಸ್. ಹಬ್ಬು, ಟೈಮ್ಸ್ ಆಫ್ ಇಂಡಿಯಾದ ಎಂ.ಎಚ್. ನಾಯ್ಕ, ವಿವಿಧ ಪತ್ರಿಕೆಗಳಿಗೆ ಸುದ್ದಿ ಕಳಿಸುತ್ತಿದ್ದ ಗಂಗಾಧರ ಹಿರೇಗುತ್ತಿ, ಉದಯವಾಣಿಯ ಮೋಹನ ಭಟ್, ಅಶೋಕ ಹಾಸ್ಯಗಾರ, ರಾಮಾ ನಾಯ್ಕ ಮುಂತಾದವರು ಇದ್ದರು. ಅವರಲ್ಲಿ ಬಹಳಷ್ಟು ಜನ ಅರೆಕಾಲಿಕ ಪತ್ರಕರ್ತರಿದ್ದರು. ನಮ್ಮಲ್ಲಿ ಯಾರಿಗೂ ಸ್ಪರ್ಧಾ ಮನೋಭಾವ ಇರಲಿಲ್ಲ. ಯಾವುದೇ ಸುದ್ದಿ ಯಾರಿಗಾದರೂ ಗೊತ್ತಾದರೆ ಎಲ್ಲರಿಗೂ ಹೇಳುತ್ತಿದ್ದರು. ಸಾಯಂಕಾಲ ಬಿಡುವು ಸಿಕ್ಕಾಗ ಪಟ್ಟಣಕ್ಕೆ ಹತ್ತಿಕೊಂಡೇ ಇರುವ ಸಮುದ್ರ ತೀರಕ್ಕೆ ಹೋಗಿ ಸೂರ್ಯಾಸ್ತ ನೋಡುವ ಬಯಕೆ ಈಡೇರುತ್ತಿತ್ತು.

19ನೇ ಶತಮಾನದ ಉತ್ತರಾರ್ಧದಲ್ಲಿ ರವೀಂದ್ರನಾಥ ಟಾಗೋರ್ ಅವರ ಅಣ್ಣ ಇಲ್ಲಿ ಅಸಿಸ್ಟೆಂಟ್ ಕಲೆಕ್ಟರ್ ಆಗಿದ್ದರು. ಆಗ ತರುಣ ರವೀಂದ್ರನಾಥ ಅವರು ಕಾರವಾರಕ್ಕೆ ಬಂದಿದ್ದರು. ಕಾರವಾರದಲ್ಲಿ ಈಗಿನ ಜಿಲ್ಲಾಧಿಕಾರಿ ಕಚೇರಿಯ ಸ್ಥಳದಲ್ಲೇ ಅಸಿಸ್ಟೆಂಟ್ ಕಲೆಕ್ಟರ್ ಕಚೇರಿ ಇತ್ತು. ಅದರ ಎದುರುಗಡೆಯ ರಸ್ತೆಗೆ ಹತ್ತಿಕೊಂಡೇ ಸಮುದ್ರ ತೀರವಿದೆ. ಕಾರವಾರ ಸಮುದ್ರ ತೀರದಲ್ಲಿನ ಸೂರ್ಯಾಸ್ತದ ಸೌಂದರ್ಯೋಪಾಸನೆ ಮಾಡುವಾಗಲೇ ತಮಗೆ ಸೌಂದರ್ಯದ ಸಾಕ್ಷಾತ್ಕಾರವಾಯಿತು ಎಂದು ಟಾಗೋರ್ ಅವರು ಬರೆದಿದ್ದಾರೆ. ಬೆಳದಿಂಗಳ ರಾತ್ರಿಯಲ್ಲಿ ಅವರು ದೋಣಿಯಲ್ಲಿ ಸ್ವಲ್ಪ ದೂರದ ಚಿತ್ತಾಕುಲದವರೆಗೆ ಹೋಗಿದ್ದು, ಅಲ್ಲಿನ ರೈತನ ಮನೆಯಲ್ಲಿ ಊಟ ಮಾಡಿದ್ದು ಕೂಡ ಅವರು ದಾಖಲಿಸಿದ್ದಾರೆ. ತಮ್ಮ ಮೊದಲ ನಾಟಕ “ಪ್ರಕೃತಿರ್ ಪ್ರತಿರೋಧ್” ಅನ್ನು ಅವರು ಬರೆದದ್ದು ಕಾರವಾರದಲ್ಲಿ. ಅಲ್ಲಿಂದ ಮರಳಿ ಕೋಲ್ಕತ್ತಾಗೆ ಹೋದ ಮೇಲೆ ಅವರ ಮದುವೆಯಾಯಿತು.

ಕಾರವಾರ ಸಮುದ್ರ ತೀರದಿಂದ 8 ನಾಟಿಕಲ್ ಮೈಲು ದೂರದಲ್ಲಿ ಅಂಜದೀವ್ ದ್ವೀಪವಿದೆ. 1498ನೇ ಮೇ 20ರಂದು ವಾಸ್ಕೋಡಿ ಗಾಮಾ ಕೇರಳದ ಕ್ಯಾಲಿಕಟ್ ತಲುಪುವ ಮೊದಲು ಅಂಜದೀವ್‌ಗೆ ಭೇಟಿನೀಡಿದ್ದ. ದ್ವೀಪದಲ್ಲಿ ನಿರಂತರವಾಗಿ ಹರಿಯುವ ಸಿಹಿನೀರಿನ ಝರಿಗಾಗಿ ಹಡಗುಗಳು ಅಲ್ಲಿ ನಿಲ್ಲುತ್ತಿದ್ದವು. ಗಾಮಾ ಕೂಡ ಅಲ್ಲಿ ನೀರು ತುಂಬಿಕೊಂಡು ಕ್ಯಾಲಿಕಟ್ ಕಡೆ ಪ್ರಯಾಣ ಬೆಳೆಸಿದ. ಪೋರ್ಚುಗೀಸರ ಮೊದಲ ಮತ್ತು ಕೊನೆಯ ವಸಾಹತು ಇದೇ ಅಂಜದೀವ್ ಆಗಿತ್ತು. ಈ ಅಂಜದೀವ್ ಇಂದಿಗೂ ಗೋವಾದ ಭಾಗವಾಗೇ ಇದೆ. ಗೋವಾ ವಿಮೋಚನೆಯ ನಂತರ ಪೂರ್ಚುಗೀಸರು ಕೊನೆಯಲ್ಲಿ ಜಾಗ ಖಾಲಿ ಮಾಡಿದ್ದು ಇಲ್ಲಿಂದಲೆ.

ಚಿತ್ತಾಕುಲದ ಸದಾಶಿವಗಢದ ಮೇಲಿಂದ ಸಮುದ್ರವನ್ನು ಸೇರುವ ಕಾಳಿ ನದಿ ದೃಶ್ಯ ಅದ್ಭುತವಾಗಿದೆ. ಹುಣ್ಣಿಮೆ ದಿನ ಅಲ್ಲಿನ ಕಾಳಿ ಬ್ರಿಜ್ ಮೇಲೆ ನಿಂತು ನೋಡುವಾಗ ಸಮುದ್ರದಲ್ಲಿ ಸೂರ್ಯ ಮುಳುಗುವ ದೃಶ್ಯ ಮತ್ತು ಪೂರ್ವದಲ್ಲಿ ಚಂದಿರ ಕಾಣುವ ದೃಶ್ಯ ಮನಮೋಹಕವಾಗಿರುತ್ತದೆ. ಅಲ್ಲಿ ಬಾಗ್ದಾದ್‌ನಿಂದ ಬಂದ ಸೂಫಿ ಸಂತ ಕರಾಮತ್ ಅಲಿಯ ದರ್ಗಾ ಇದೆ. ಅದರ ಗುಂಬಜದ ಕಳಸದ ಮೇಲಿನ ದೀಪದ ಬೆಳಕು ಸ್ಥಳಿಯ ಮೀನುಗಾರರಿಗೆ ದೀಪಸ್ತಂಭದ ಹಾಗೆ ಅನಿಸುತ್ತದೆ. ಆ ಸಂತನ ಕೃಪೆಯಿಂದ ಇಲ್ಲಿಯವರೆಗೆ ಈ ಭಾಗದಲ್ಲಿ ಒಂದೂ ದೋಣಿ ದುರಂತ ಆಗಿಲ್ಲ ಎಂದು ಆ ಮೀನುಗಾರರು ಹೇಳುತ್ತಾರೆ. ಇತಿಹಾಸ ಮತ್ತು ಐತಿಹ್ಯಗಳಿಂದ ಕಾರವಾರ ನನ್ನ ಬದುಕಿನ ಭಾಗವಾಗಿ ಹೋಗಿದೆ.

ನನ್ನ ಪತ್ರಿಕಾವೃತ್ತಿಯ ಬಹು ತೃಪ್ತಿಯ ಕಾಲ ಅದಾಗಿತ್ತು. ಅಲ್ಲಿಯ ಪತ್ರಿಕಾ ಮಿತ್ರರು, ಇತರ ಗೆಳೆಯರು, ಯಕ್ಷಗಾನ, ತಾಳಮದ್ದಳೆ, ಹಡಗಿನಲ್ಲಿ ದೂರದವರೆಗೆ ಸಮುದ್ರಯಾನ, ಭಾರಿ ಮಳೆ, ಗಾಳಿ, ಮಳೆಗಾಲದಲ್ಲಿ ಬೆಟ್ಟದ ಸಾಲಿನ ಉದ್ದಕ್ಕೂ ಸೃಷ್ಟಿಯಾಗುವ ಜಲಪಾತಗಳು, ಬೆಟ್ಟದ ಮೇಲಿನವರೆಗೂ ಮೇಯಲು ಹೋಗುವುದಕ್ಕೆ ತಕ್ಕುದಾದ ಪುಟ್ಟ ಶರೀರ ಹೊಂದಿರುವ ಮಲೆನಾಡು ಗಿಡ್ಡ ತಳಿಯ ಹಸುಗಳು. ಅನೇಕ ಯೋಜನೆಗಳಿಂದ ನಲುಗಿದ ಜನರು, ಅವರಿಗಾಗಿ ಸುದ್ದಿಯ ಮೂಲಕ ಹೋರಾಡಬೇಕೆಂಬ ಛಲ, ಮುಖ್ಯವಾಗಿ ನಾಡವರು ಮತ್ತು ಇತರರು ಬ್ರಿಟಿಷರ ವಿರುದ್ಧ ಹೋರಾಡಿದ ರೋಮಾಂಚನಕಾರಿ ಪ್ರಸಂಗಗಳು ಮುಂತಾದ ಕಾರಣಗಳಿಗಾಗಿ ಕಾರವಾರ ದಿನಗಳು ನನ್ನ ಮನದಲ್ಲಿ ಮನೆ ಮಾಡಿವೆ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಗೆ ಅವಕಾಶ ಸಿಕ್ಕಾಗಲೆಲ್ಲ ಹೋಗುತ್ತೇನೆ.

ನಾನು ಹೋದ ಮರುವರ್ಷ ಸಂಭವಿಸಿದ ಕೋಮುಗಲಭೆ ನನ್ನ ಮನಸ್ಸನ್ನು ಘಾಸಿಗೊಳಿಸಿತು. 1992ನೇ ಏಪ್ರಿಲ್ 1 ರಂದು ಹನುಮ ಜಯಂತಿಯ ದಿನ ಭಟ್ಕಳದ ನಗರ ದೇವತೆ ಹನುಮಂತನ ರಥೋತ್ಸವದ ವೇಳೆ ಮುಸ್ಲಿಂ ಡಾಕ್ಟರರೊಬ್ಬರ ಮನೆಯ ಹಿಂದಿನಿಂದ ರಥದ ಮೇಲೆ ಕೋಮುವಾದಿಗಳು ಮೂರು ಕಲ್ಲು ಎಸೆದು ಪ್ರಚೋದಿಸಿದರು. ಆ ಚಿಕ್ಕ ಕಲ್ಲುಗಳು ರಥದ ಕಡೆಗೆ ಬಂದರೂ ಯಾರಿಗೂ ತಾಗಲಿಲ್ಲ. ಅದೇ ನೆಪದಲ್ಲಿ ಕೂಮುಗಲಭೆ ಶುರುವಾಗಿ ಒಂದು ವರ್ಷದವರೆಗೆ ನಡೆಯಿತು. ಈಸ್ಟ್ ಇಂಡಿಯಾ ಕಂಪನಿ ಇದ್ದಾಗಿನ ಸಣ್ಣ ಘಟನೆಯೊಂದನ್ನು ಬಿಟ್ಟರೆ, ಅಲ್ಲಿ ಎಂದೂ ಕೋಮುಗಲಭೆ ನಡೆದಿದ್ದಿಲ್ಲ. ಗಲಭೆ ವೇಳೆ ತೆಂಗಿನ ತೋಟಗಳ ಗುಡಿಸಲುಗಳಲ್ಲಿ ವಾಸಿಸುತ್ತಿದ್ದ ಬಡ ಕೂಲಿಕಾರರನ್ನೂ ಬಿಡಲಿಲ್ಲ. ಅಲ್ಲಿನ ಬೆಟ್ಟ ಪ್ರದೇಶದ ಮೇಲೆ ಪುಟ್ಟ ಪುಟ್ಟ ಮನೆಗಳನ್ನು ಕಟ್ಟಿಕೊಂಡಿದ್ದ ಕೂಲಿಕಾರರ ಮನೆಗಳನ್ನೂ ಧ್ವಂಸ ಮಾಡಿದರು. ಅಲ್ಲಿಯ ವಿವಿಧ ಮನೆ ಗೋಡೆಗಳ ಮೇಲೆ ಅರ್ಧ ಸುಟ್ಟಿದ್ದ ಕ್ಯಾಲೆಂಡರ್‌ಗಳಲ್ಲಿ ಮೆಕ್ಕಾ, ಲಕ್ಷ್ಮೀ, ಗಣಪತಿ, ಜೀಸಸ್ ಮುಂತಾದ ಚಿತ್ರಗಳಿದ್ದವು!

ಬ್ರಿಟಿಷ್ ಸರ್ಕಾರ ಇದ್ದಾಗ ಆ ಹನುಮಂತ ದೇವರ ಶಿಥಿಲಗೊಂಡ ರಥವನ್ನು ಮೆರವಣಿಗೆಯಲ್ಲಿ ಒಯ್ಯುವುದನ್ನು ನಿಷೇಧಿಸಿತು. ಆಗ ಭಟ್ಕಳದ ಪಟೇಲರು ಅದರ ಜಬಾಬ್ದಾರಿಯನ್ನು ವಹಿಸಿಕೊಂಡು ರಥ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿದರು. ಅಂದಿನಿಂದ ಇಂದಿನವರೆಗೂ ರಥೋತ್ಸವದ ಸಂದರ್ಭದಲ್ಲಿ ಆ ಮುಸ್ಲಿಂ ಪಟೇಲರ ಮನೆಗೆ ದೇವಸ್ಥಾನದವರು ಪಂಚವಾದ್ಯಗಳೊಂದಿಗೆ ಹೋಗಿ ಆಮಂತ್ರಣ ನೀಡುವ ಪದ್ಧತಿ ಇಂದಿಗೂ ಮುಂದುವರಿದಿದೆ. ಆದರೆ ಗಲಭೆ ಸಂದರ್ಭದಲ್ಲಿ ಹಿಂದು ಸಮಾಜದ ಮೇಲ್ಜಾತಿ ನಾಯಕರು ಸಭೆ ಸೇರಿ ಇನ್ನು ಮುಂದೆ ಆ ಪದ್ಥತಿಯನ್ನು ನಿಲ್ಲಿಸಲು ನಿರ್ಧರಿಸುವಾಗ, ಸಭೆಯಲ್ಲಿದ್ದ ನಾಮಧಾರಿ ಸಮಾಜದ ಹಿರಿಯ ವ್ಯಕ್ತಿ ಮಾಸ್ತೆಪ್ಪ ಗೌಡರು ಅದನ್ನು ವಿರೋಧಿಸಿದರು. ಹೀಗಾಗಿ ಆ ಸಂಪ್ರದಾಯ ಮುಂದುವರಿಯಿತು. ಧರ್ಮ ತನ್ನಷ್ಟಕ್ಕೆ ತಾನೇ ಇರುವಂಥದ್ದಲ್ಲ. ಎಲ್ಲ ಕಡೆಗಳಲ್ಲಿ ಒಂದೇ ರೀತಿಯಲ್ಲಿ ಇದ್ದು ದೈನಂದಿನ ಬದುಕನ್ನು ನಿಯಂತ್ರಿಸುವಂಥದ್ದಲ್ಲ. ಅದು ತನ್ನ ಕಾಲ ಮತ್ತು ಸಮಾಜೋ ಆರ್ಥಿಕ ಹಾಗೂ ದೈನಂದಿನ ಬದುಕಿನಿಂದ ಉಂಟಾದ ಸ್ಥಳೀಯ ಸಂಪ್ರದಾಯ ಮತ್ತು ಪರಂಪರೆಯನ್ನು ಒಳಗೊಂಡಿರುತ್ತದೆ. ಒಂದು ಪ್ರದೇಶದ ಜನರು ವಿವಿಧ ಧರ್ಮ, ಜಾತಿ ಮತ್ತು ಉಪಜಾತಿಗಳಲ್ಲಿ ಹರಿದು ಹಂಚಿ ಹೋಗಿದ್ದರೂ ಸುಪ್ತಪ್ರಜ್ಞೆಯಲ್ಲಿ ತಮ್ಮ ಕಾಲದಲ್ಲಿ ಪ್ರಚಲಿತವಿರುವ ಸಾಮಾಜಿಕ ಸಂಸ್ಕೃತಿಯೊಂದನ್ನು ರೂಢಿಸಿಕೊಂಡಿರುತ್ತಾರೆ. ದೈನಂದಿನ ಬದುಕಿಗೆ ಧಕ್ಕೆ ಆಗದಂತೆ ನಡೆದುಕೊಳ್ಳಲು ಯೋಗ್ಯವಾಗುವ ಹಾಗೆ ಧರ್ಮದ ರೀತಿ ರಿವಾಜುಗಳನ್ನು ಹೊಂದಾಣಿಕೆ ಮಾಡಿಕೊಂಡಿರುತ್ತಾರೆ. ಆದರೆ ಧನ ಮತ್ತು ಅಧಿಕಾರದಾಹಿಗಳು ಧರ್ಮದ ಅನುಕೂಲಕರ ವ್ಯಾಖ್ಯಾನದೊಂದಿಗೆ ದ್ವೇಷ ಸಂಸ್ಕೃತಿಯನ್ನು ಹಬ್ಬಿಸುವಲ್ಲಿ ತಲ್ಲೀನರಾಗಿರುತ್ತಾರೆ. ಧಾರ್ಮಿಕವಾಗಿ ಜನರನ್ನು ಪ್ರಚೋದಿಸುತ್ತಾರೆ. ಎಲ್ಲ ಧರ್ಮಗಳಲ್ಲಿನ ಕೋಮುವಾದಿಗಳು ಮಾಡುವುದು ಇದನ್ನೇ. ಆಗ ಎರಡೂ ಕಡೆಯ ಅಮಾಯಕ ಬಡವರು ಸಾಯುತ್ತಾರೆ. ಆ ಸತ್ತವರ ಕುಟುಂಬಗಳು ಹಾಳಾಗಿಹೋಗುತ್ತವೆ.

ಭಟ್ಕಳದಲ್ಲಿ ಆದದ್ದು ಇದೇ. ಆ ಗಲಭೆಯಲ್ಲಿ 10 ಜನ ಕೆಳಜಾತಿಗಳ ಹಿಂದುಗಳು ಮತ್ತು 10 ಜನ ಬಡ ಮುಸ್ಲಿಮರು ಸತ್ತರು. ನವಾಯತರ ಅಡಕೆ ತೋಟಗಳು ರಾತ್ರೋರಾತ್ರಿ ನೆಲ ಕಚ್ಚಿದವು. ಮಹಿಳೆಯರ ಮೇಲೆ ಅತ್ಯಾಚಾರಗಳಾದವು. ಅನೇಕರು ಗಾಯಗೊಂಡು ಆಸ್ಪತ್ರೆ ಸೇರಿದರು. ಇಡೀ ಉತ್ತರ ಕನ್ನಡ ಕೋಮುವಾದಿ ರಾಜಕೀಯಕ್ಕೆ ಬಲಿಯಾಯಿತು!

ನಾವೆಲ್ಲ ಪತ್ರಕರ್ತರು ಕಾರವಾರದಿಂದ ಪದೆ ಪದೆ ಭಟ್ಕಳಕ್ಕೆ ಹೋಗುತ್ತಿದ್ದೆವು. ಒಂದು ಸಲ ಭಟ್ಕಳ ಸಮೀಪ ರಸ್ತೆ ಬದಿಯ ಬಯಲಲ್ಲಿ ಇಬ್ಬರು ಆ ಬಿಸಿಲಲ್ಲಿ ಚೀರೇ ಕಲ್ಲನ್ನು ಕಡಿಯುತ್ತಿದ್ದರು. ವ್ಯಾನ್ ನಿಲ್ಲಿಸಿ ಅವರ ಬಳಿ ಹೋದೆವು. ಆ ಲ್ಯಾಟರೈಟ್ ಕಲ್ಲನ್ನು ಅವರು ದೊಡ್ಡ ಸೈಜಿನ ಇಟ್ಟಿಗೆ ಹಾಗೆ ಕಡಿಯುತ್ತಿದ್ದರು. ಅವರ ಬಟ್ಟೆ ಮತ್ತು ಮುಖ ಕೆಂಪು ಹುಡಿಯಿಂದ ತುಂಬಿತ್ತು. ಭಟ್ಕಳ್ ಗಲಭೆ ಕುರಿತು ಅವರಿಗೆ ಕೇಳಿದೆವು. ಅವರಲ್ಲಿನ ಒಬ್ಬಾತ ಹೇಳಲು ಪ್ರಾರಂಭಿಸಿದ. ‘ಈತ ಮುಸ್ಲಿಂ, ನಾನು ಹಿಂದೂ. ನಾವಿಬ್ಬರು ಗೆಳೆಯರು. ಅನೇಕ ವರ್ಷಗಳಿಂದ ಈ ಚೀರೆಕಲ್ಲು ಕಡಿಯುವ ಕೆಲಸ ಮಾಡುತ್ತ ಬಂದಿದ್ದೇವೆ. ಆ ದೂರದಲ್ಲಿ ಕಾಣುವ ಜೋಡಿ ಗುಡಿಸಲು ನಮ್ಮಿಬ್ಬರಿಗೆ ಸೇರಿದ್ದು. ಅಗೋ ಆ ಹಳ್ಳದಲ್ಲಿ ಬಟ್ಟೆ ತೊಳೆಯುವವರು ನಮ್ಮ ಹೆಂಡಂದಿರು. ಆ ಗಿಡದ ಕೆಳಗೆ ಆಟವಾಡುವವರು ನಮ್ಮ ಮಕ್ಕಳು. ನಮಗೆ ಅಡುಗೆ ಎಣ್ಣೆ ಕಡಿಮೆ ಬಿದ್ದರೆ ಇವನ ಮನೆಯಿಂದ ತರುತ್ತೇವೆ. ಉಪ್ಪು ಕಡಿಮೆ ಬಿದ್ದರೆ ನಮ್ಮ ಮನೆಯಿಂದ ಒಯ್ಯುತ್ತಾರೆ. ಹೀಗೆ ನಾವು ಯಾವುದಕ್ಕೂ ಕೊರತೆ ಇಲ್ಲದಂತೆ ಬದುಕುತ್ತಿದ್ದೇವೆ. ನಮ್ಮ ಕಷ್ಟ ಸುಖದಲ್ಲಿ ಇವರು. ಇವರ ಕಷ್ಟ ಸುಖದಲ್ಲಿ ನಾವು. ನಮ್ಮ ನಡುವೆ ಧರ್ಮಗಳು ಅಡ್ಡ ಬರುವುದಿಲ್ಲ. ಧರ್ಮಗಳ ಗೋಜಿಗೆ ನಾವು ಹೋಗುವುದಿಲ್ಲ. ಅವುಗಳ ಪಾಡಿಗೆ ಅವು ಇರುತ್ತವೆ. ನಮ್ಮ ಪಾಡಿಗೆ ನಾವು ಇರುತ್ತೇವೆ. ಕೆಲಸ ಮಾಡುವವರಿಗೆ ಎಲ್ಲ ಧರ್ಮಗಳು ಒಂದೇ. ಕೆಲಸವಿಲ್ಲದವರಿಗೆ ಮತ್ತು ಕೆಲಸವಿಲ್ಲದೆ ಬದುಕಬೇಕೆನ್ನುವವರಿಗೆ ಧರ್ಮಗಳು ಬೇರೆ ಬೇರೆಯಾಗಿ ಕಾಣುತ್ತವೆ. ಆ ಅವರು ಉಗ್ರರೂಪ ತಾಳಿ ಅನ್ಯ ಧರ್ಮೀಯರನ್ನು ಕೊಲ್ಲುತ್ತಾರೆ ಇಲ್ಲವೆ ಅವರಿಂದ ಕೊಲೆಗೀಡಾಗುತ್ತಾರೆ. ಅವರ ಉಸಾಬರಿ ನಮಗೇಕೆ’ ಎಂದ. ನಾವು ದಂಗಾದೆವು.

About The Author

ರಂಜಾನ್ ದರ್ಗಾ

ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ.  ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ