ನಮ್ಮೂರಿನ್ ಗೌರೀಗೆ ಪೂಜೆ ಮಾಡ್ತಿದ್ದಿದ್ದು ವಸಿ ಜನ್ವೇಯಾ. ಆದ್ರೆ ಗಣೇಶುನ್ನ ಬಿಡಾಕೇಂತ್ಲೇ ಊರಿನ್ ಜನ್ವೆಲ್ಲಾ ಮೇಲ್ ಬಿದ್ದು ಕಾದ್ಕಂಡು ಕುಂತಿರ್ತಿದ್ವಿ. ಐದನೇ ದಿನ ಸಂಜೀ ಹೊತ್ನಾಗೆ, ಗೌರಮ್ಮುಂಗೆ ಮಡ್ಲು ತುಂಬಿ, ಮಗುನ್ನ ಮುಂದಿಟ್ಗಂಡು, ಅವ್ವನ್ನ ಹಿಂದ್ ಕುಂಡ್ರಿಸಿ ಮೆರೋಣಿಗೆ ಹೊಂಡುತಿತ್ತು. ರಾಮ ದ್ಯಾವ್ರ ಗುಡೀಗ್ಳಿಂದ ನಮ್ಮನೆ ಆಸಿ, ಕೆರೆ ಏರಿ ಕಡೆ ಊರ ಗಂಡಸರು, ಹೆಂಗಸರು, ಚಳ್ಳೆ ಪಿಳ್ಳೆಗ್ಳು ಜೈಕಾರ ಹಾಕ್ಕಂಡು ಗಣಪತಿ ಬಾಪ್ಪ ಮೋರ್ಯಾ ಅಂತ ಕಿರುಚ್ಕಂಡು ಅವುರ್ ಹಿಂದಿಂದ್ಲೇ ಸಾಗುಸ್ಕಂಡು ಹೋಗ್ತಿದ್ವಿ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಗಣೇಶ ಚತುರ್ಥಿಯ ಆಚರಣೆಯ ಕುರಿತು ಹೇಳುತ್ತಲೇ ಈ ಸರಣಿ ಇಲ್ಲಿಗೆ ಮುಕ್ತಾಯವಾಗುತ್ತದೆ
ಗೌರಮ್ಮನ ಹಬ್ಬ – ಗಣಪತಿ ಹಬ್ಬ ಅಂಬ್ತ ಬ್ಯಾರೇ ಅನ್ನಾಕಿಲ್ಲ ಯಾರೂವೇ. ಗೌರಮ್ಮ ಗಣಪ್ಪನ ಹಬ್ಬ, ಗೌರಿಗಣೇಶ ಅಂಬ್ತಾಲೇ ಕರ್ಯಾದು. ನಮ್ಮೂರ್ನಾಗೆ ಹಬ್ಬವ ಮಾಡ್ತಿದ್ದಿದ್ದು ನೆಪ್ಪು ತೆಗೆಯಾಕೇಂತ ಹೋದೇಟ್ಗೆ, ಹಳೇ ಮೂಟೇಯಾ ಅಟ್ಟದ ಮ್ಯಾಗ್ಳಿಂದ ಇಳ್ಸಾವಾಗ, ಹಳೆ ಚೆಂಚಿ ತೂತು ಬಿದ್ದು ಸಂದೀ ಒಳುಗ್ಲಿಂದ ದಪದಪಾಂತ ಸಾಮಾನು ಮೈಮ್ಯಾಗೇ ಬೀಳೋ ಅಂಗೆ ನೆಪ್ಪುಗ್ಳು ಮೈಮ್ಯಾಗೆ ಬೀಳ್ತವೆ. ಅಂಗೇಯಾ ಅದುಕ್ಕೆ ಅಂಟ್ಕಂಡಿರಾ ಧೂಳೂ ದೆಕ್ಲು ಅಂದ್ರೆ ಬ್ಯಾಡ್ದಿರಾ ನೆಪ್ಪುಗ್ಳೂ ಬೀಳ್ತವೆ.
ರಾಮ ದ್ಯಾವ್ರ ಗುಡೀನಾಗೆ
ಊರಾಗ್ಳ ಗೌರಿ ಗಣೇಶ ಕುಂಡ್ರುಸ್ತಿದ್ದಿದ್ದು ರಾಮ ದ್ಯಾವ್ರ ಗುಡೀ ಒಳ್ಗೆ. ಊರೋರೆಲ್ಲ ಚಂದಾ ಎತ್ತಿ ಒಂದು ನಾಕು ಅಡಿ ಗಣಪ್ಪ ಮತ್ತೀಗ ಒಂದೂವರಡಿ ಗೌರಮ್ಮುನ್ನ ತಂದು ಕುಂಡ್ರುಸ್ತಾರೆ. ಹಬ್ಬುದ್ ದಿಸ ಪೂಜೇ ಮಾಡಾರು ನಾಕೂ ಮತ್ತೊಂದು ಆಟೇಯಾ. ಅದೇನ್ ಆಟು ಮಜಾ ಇಲ್ಲ. ಮಜಾ ಇರಾದೇ ಗೌರಿ ಗಣಪ್ಪುನ್ನ ಸಾಗಾಕಾದ್ರಾಗೆ.(ವಾಪಸ್ ಕಳಿಸುವುದು, ಕೆರೆಗೆ ಬಿಡುವುದು)
ಸಾಗಾಕಾ ಖುಷಿ
ಕೆರೆ ಮಣ್ಣಿಂದ ಇಬ್ರೂವೇ ಬಂದಿರ್ತಾರಾ, ತಿರ್ಗಾ ಕೆರೇ ಒಳಿಕ್ಕೇ ಬುಟ್ಟು ಬರ್ಬೇಕಲ್ಲ. ಅವುರ್ ಮನೆ ಅಂದ್ರೆ ಅದೇ ಅಲ್ಲುವೆ. ಅದೇ ಕೈಲಾಸ. ತವರು ಮನೆ ಅಂದ್ರೆ ನಮ್ಮಂತ ನರಮನುಸ್ಯರ ಮನೆಗ್ಳು. ನಾಕು ಜಿನ ಇದ್ದು ಹೋಗೋ ಖುಸಿ.
ಗೌರಿ ಗಣೇಶ ಹಬ್ಬುಕ್ಕೆ ಹೊಸ ಬಟ್ಟೆ ಕಾಯಮ್ಮಿರಲಿಲ್ಲ. ಬಂದ್ರೆ ಬಂತು ಇಲ್ದೋದ್ರೆ ಇಲ್ಲ. ಐದ್ನೇ ಕ್ಲಾಸಾಗಿದ್ದಾಗ ಒಂದು ದಪ ನಮ್ಮಮ್ಮ ಅವ್ರ್ ಅಣ್ಣುನ್ ಮನೇಗೋಗಿದ್ದಾಗ, ಅವ್ರ ಅಂಗ್ಡೀಗ್ಳಿಂದ ಗಿಣಿ ಹಸ್ರು ಬಣ್ಣುದ್ ಲಂಗದ ಬಟ್ಟೆ ತಂದಿತ್ತು. ಅದ್ರ ಮ್ಯಾಗೆ ಎಲೆ ಹಸ್ರು ಬಣ್ಣುದ್ ಹುವ್ವ ಇದ್ವು. ಅದೂ ಅಣ್ಣುನ್ ಮಗ್ಳು ಮೆಗಾ ಸ್ಲೀವ್ಸು ಇಕ್ಸಿದ್ಲು, ಬಲೆ ಚೆಂದಾಕಿತ್ತು ಅಂಬ್ತ ನಮ್ಮೂರಿನ್ ಟೇಲರ್ರು ಮೂರ್ತಿಗೇಳಿ ಮದುಲ್ನೇ ದಪ ನಂಗೂ ನಮ್ಮಕ್ಕುಂಗೂ ಮೆಗಾ ಸ್ಲೀವ್ಸು(ವಸಿ ತುಂಡು ತೋಳು) ಇಕ್ಸಿತ್ತು. ಅದ್ನ ಏಸು ವರ್ಸ ಹಾಕ್ಕಂಡು ಉಜ್ಜಾಡಿದ್ನೋ ಸಿವುಂಗೇ ಗೊತ್ತು.
ನಮ್ಮೂರಿನ್ ಗೌರೀಗೆ ಪೂಜೆ ಮಾಡ್ತಿದ್ದಿದ್ದು ವಸಿ ಜನ್ವೇಯಾ. ಆದ್ರೆ ಗಣೇಶುನ್ನ ಬಿಡಾಕೇಂತ್ಲೇ ಊರಿನ್ ಜನ್ವೆಲ್ಲಾ ಮೇಲ್ ಬಿದ್ದು ಕಾದ್ಕಂಡು ಕುಂತಿರ್ತಿದ್ವಿ. ಐದನೇ ದಿನ ಸಂಜೀ ಹೊತ್ನಾಗೆ, ಗೌರಮ್ಮುಂಗೆ ಮಡ್ಲು ತುಂಬಿ, ಮಗುನ್ನ ಮುಂದಿಟ್ಗಂಡು, ಅವ್ವನ್ನ ಹಿಂದ್ ಕುಂಡ್ರಿಸಿ ಮೆರೋಣಿಗೆ ಹೊಂಡುತಿತ್ತು. ರಾಮ ದ್ಯಾವ್ರ ಗುಡೀಗ್ಳಿಂದ ನಮ್ಮನೆ ಆಸಿ, ಕೆರೆ ಏರಿ ಕಡೆ ಊರ ಗಂಡಸರು, ಹೆಂಗಸರು, ಚಳ್ಳೆ ಪಿಳ್ಳೆಗ್ಳು ಜೈಕಾರ ಹಾಕ್ಕಂಡು ಗಣಪತಿ ಬಾಪ್ಪ ಮೋರ್ಯಾ ಅಂತ ಕಿರುಚ್ಕಂಡು ಅವುರ್ ಹಿಂದಿಂದ್ಲೇ ಸಾಗುಸ್ಕಂಡು ಹೋಗ್ತಿದ್ವಿ. ಗಂಡುಸ್ರು ಜೈಕಾರ ಹಾಕ್ಕಂಡು ಬತ್ತಿದ್ರೆ, ಹೆಂಗುಸ್ರು ಗೌರಮ್ಮುನ್ ಪದ ಹಾಡ್ಕಂಡು ಬತ್ತಿದ್ರು. ಹೋಗಿ ಬಾರವ್ವ ತಾಯಿ ಗೌರಮ್ಮ ಅಂಬ್ತ ಪಿರೂತಿಯಿಂದ ಮನೆ ಮಗುಳ್ನ ಕಳಿಸೋರು.
ಪೆಟ್ಲಂಗೋವಿ
ನಮ್ಮ ವಾನರ ಸೈನ್ಯ ಸುಮ್ಕೆ ಇರ್ತಿತ್ತಾ. ಪೆಟ್ಲಂಗೋವಿಯಾ(ಬಿದಿರಿನ ನಳಿಕೆ) ಆಕಾಸುಕ್ಕೇ ಕೋವಿ ತರ ಗುರಿ ಮಡಗಿ ಡಂ ಅಂಬ್ಸಾಟ. ಹಬ್ಬುಕ್ಕೆ ಮೂರು ದಿಸ ಮುಂಚಿತ್ವಾಗೇ ಪೆಟ್ಲಂಗೋವಿ ರೆಡಿ ಇಕ್ಕಂತಿದ್ವಿ.
ಪೊದೆ ಗುಡ್ಡ ಹುಡೀಕ್ಕಂಡು ಹೋಗಿ ಸವರಿ ಬಿದಿರು ಕಡ್ಡಿ ಕತ್ತರಿಸ್ಕಂಡು ಬರೋದು. ಈ ಕಡ್ಡಿಗ್ಳು ಒಳಗೆ ಹಳ್ಳ ಇರ್ತವೆ. ಕಡ್ಡಿನಾಗೆ ಗಂಟುಗ್ಳು ಇರ್ತವೆ. ಒಂದೊಂದು ಗಂಟಿಗೂ ನಡುವಲ ಆರೋ ಎಂಟೋ ಅಂಗುಲ ಜಾಗ ಇರ್ತವೆ. ಮ್ಯಾಗುಲ್ದು, ಕೆಳುಗಲ್ದು ಗಂಟು ಕತ್ರಿಸಿದ್ರೆ ಕೊಳವೆ ರೆಡಿ ಆಗ್ತಿತ್ತು. ಆ ತೂತಿನ ಒಳುಕ್ಕೆ ಹೋಗೋ ತರುಕ್ಕೆ ಇನ್ನೊಂದು ಸಣ್ಣ ಕಡ್ಡಿಯಾ ಮಚ್ಚು ತಕಂಡು ಗೆಬರಿ ಇಟ್ಕಮ್ತಿದ್ವಿ.
ಅದಾದ್ ಮ್ಯಾಗೆ ಬಣ್ಣ ಬಣ್ಣುದ್ ಚಿನ್ನಾರಿ ಪೇಪರ್ ಹುಡುಕಾಟ. ಹೊಸ್ದು ಕೇಳೀರೇ ಕೊಡ್ಸ್ಯಾರೆ? ಹೋದ ದಪುದ್ದೇ ಅಲ್ಲೆಲ್ಲೋ ಬಿದ್ದಿರ್ತೈತೆ. ಹುಡಿಕ್ಕೋ ಹೋಗಮ್ಮಿ ಅನ್ನಾರಾ. ತಕಳಪ್ಪ ರಾಶಿ ಹಳೆ ಸಾಮಾನಿನ್ ತೊಪ್ಪೇಲಿ (ತಿಪ್ಪೇನೇ ಅನ್ನಬೌದು)ಸರಬರಾಂತ ನಮ್ ಹುಡುಕಾಟ. ಸಿಕ್ದೀರೆ, ಎಲ್ಲಿ ಬಿಸಾಕಿದೀರೋ ಅಂಬ್ತ ಬೈಗುಳ. ಇನ್ಯಾರ್ದಾರಾ ಹುಡುಗ್ರುತಾವ ಗಿಂಜಕಂಡು ವಸಿ ಸಾಲ ತಕಂಬಾದು. ಬ್ಯಾರೇನನ್ನ(ಸೀಬೆಕಾಯಿ, ನೇರಳೆಹಣ್ಣು, ಪೆನ್ಸಿಲ್ಲು, ರಬ್ರು) ಕೊಡೋ ಮಾತಿನ್ ಮೇಲೆ ಸಾಲ ಸಿಗ್ತಿತ್ತು. ಅದ್ನ ತಂದು ಪೆಟ್ಲಂಗೋವಿನ ಸಿಂಗಾರ ಮಾಡಿ ಮಡಗಿದ್ರೆ ಅರ್ಧ ಕೆಲ್ಸ ಮುಗ್ದಂಗೆ.
ಬುಗುರಿ ಮರದತ್ರ ಮುಂದಿನ ಕೆಲಸ. ಊರಿನ್ ಹೈಕ್ಳೆಲ್ಲ ಅದ್ರಡೀಲೆ ಸೇರ್ಕಳಾರು. ಉದ್ದುಕಿರಾ ಮರ ಹತ್ತಾಕೆ ಬರೋರು ಹತ್ತಿದ್ರೆ, ನಾವು ಕೆಳುಗ್ಲಿಂದ ನಮಗೊಸಿ ಬುಗುರಿ ಗೊಂಚ್ಲು ಅಂಬ್ತ ಬೇಡ್ಕೊಂತಿದ್ವು. ಅವ್ರುಗೆ ಏನಾರಾ ಆಸೆ ಪಾಸೆ ತೋರ್ಸಿರೆ, ನಮ್ ಕಾಲ ಬುಡುದ್ ತಾವ ದೋಡ್ದ ರೆಂಬೆ ಮುರಿದು ಹಾಕೋರು. ಅದ್ರಾಗೆ ತೂಗಾಡೋ ಬುಗುರಿಕಾಯಿ ಗೊಂಚಲು ಕಿತ್ತು ಕಿತ್ತು ಲಂಗುದ್ ತುಂಬಾ ತುಂಬಿಕೊಳ್ಳೊದು. ಒಂದು ವಾರುದ್ ತಕಾನೂ ಹೊಡೀಬೇಕಲ್ಲ. ಬುಗುರೀ ಕಾಯಿಗ್ಳು ಕಾಶಿಹಣ್ಣಿನ ಗಾತ್ರದವು. ಗೊಂಚಲು ಅಂದ್ರೆಗಾನಿ ಒಂದು ಹೆಬ್ಬಿಟ್ಟಿನ್ ಗಾತ್ರ ಇರ್ತವೆ.
ಅವುನ್ನ ಪೆಟ್ಲಂಗೋವಿ ಒಳಿಕ್ಕಾಕಿ, ರೆಡಿ ಇಕ್ಕಂಡಿರ್ತಿದ್ದ ಇನ್ನೊಂದು ಸಣ್ಣ ಕಡ್ಡಿಯಾ ಜೋರಾಗಿ ತೂರ್ಸಿ ನೂಕಿದ್ರೆ ಡಂ ಅಂಬ್ತಿತ್ತು. ಹಬ್ಬುದ್ ಹಿಂದ್ಲ ದಿನವೇ ಸುರು ಆದ್ರೆ ಗಣಪ್ಪನ್ನ ಮುಳುಗ್ಸೋ ತಕಾನೂ ಡಂ ಡಂ ಡಮಾರ್ ದೀಪಾವಳಿ ಪಟಾಕಿ ತರ. ಗಿರಗಿಟ್ಲೆ ಕಾಯಿ ಕಾಲಿ ಆದೇಟ್ಗೆ ಸುಮ್ಮುನ್ ಕುಂತ್ಕಳಾ ಮಾತೇ ಇಲ್ಲ. ಪೇಪರ್ ತಕಂಡು ಒದ್ದೆಮುದ್ದೆ ಮಾಡಿ ಗಟ್ಟಿ ಒತ್ತಿ ಸಣ್ಣ ಉಂಡೆ ಮಾಡಿ ಇಟ್ಟು ಡಂ ಅನ್ಸೋದು. ಅವೂ ಒಂದೊಂದು ಟುಸ್ ಪಟಾಕಿ ಆದ್ರೆ ಒಂದೊಂದು ಡಂ ಅಂಬೋವು.
ಇದು ನಮ್ ಪಾಲಿಗೆ ಕೋವೀನೆ. ಅದೇ ಗತ್ತಿನಾಗೆ ನಾವು ಆಕಾಸುಕ್ಕೇ ಗುರಿ ಇಕ್ಕಿ ಮೆರೋಣಿಗೆ ಹಿಂದ್ಲೇ ಸಾಗ್ತಿದ್ವಿ.
ಚಿತ್ರಾನ್ನ ಮೊಸರನ್ನದ ಬುತ್ತಿ
ಗಣೇಸ ಗೌರಿ ಬಿಡಾಕೆ ಹೋಗೋದ್ಕೆ ನಮ್ಗಿದ್ದ ದೊಡ್ಡ ಆಕರ್ಷಣೆ ಅಂದ್ರೆ ನಮ್ ಜತ್ಗೆ ಬತ್ತಿದ್ದ ಚಿತ್ರಾನ್ನ ಮೊಸರನ್ನದ ಬುತ್ತಿ. ದೋಡ್ಡ ಕೊಳದಪ್ಪಲೆಗಳಲ್ಲಿ ತಕಂಡು ಬತ್ತಿದ್ರು. ಮುತ್ತುಗದೆಲೇದು ದೊನ್ನೆಗಳಾಗೆ ಚಿತ್ರಾನ್ನ ಮೊಸರನ್ನ ಪಕ್ಕಪಕ್ಕದಾಗೆ ಹಾಕಿ ಕೊಡ್ತಿದ್ರಾ, ಎಲ್ಡೂ ಏಕವಾಗಿ(ಬೆರಕೆ) ಚಿತ್ರಾನ್ನದ ಹುಳಿ, ಖಾರ ಜೊತ್ಗೆ ಮೊಸರನ್ನದ ಮಸ್ರೂ ಸೇರ್ಕಂಡು ಏಸು ರುಚಿ ಆಗ್ತಿತ್ತು ಅಂದ್ರೆ, ತಿಂದು ಮುಗುಸಿದ್ ಮ್ಯಾಕೂ ಅಂಗೈ ಮೂಗಿನ್ ತಾವ್ ತಂದು ವಾಸ್ನೆ ನೋಡ್ಕಂಡು ಖುಷಿ ಬೀಳೋದು. ತಿರ್ಗಾ ತಿರ್ಗಾ ತಿನ್ನೋ ಆಸೆ. ಒಂದೊಂದು ಕಿತ ಆಸೆ ಹೆಚ್ಚಿ, ಮನ್ಯಾಗೆ ಚಿತ್ರಾನ್ನ ಮಾಡ್ದಾಗ ಅಮ್ಮುನ್ನ ಕಾಡಿಸಿ, ಮೊಸರನ್ನಾನೂ ಮಾಡಿಸ್ಕಂಡು ಎಲ್ಡೂ ಬೆರ್ಸಿ ತಿಂತಿದ್ದಿದ್ದು ನೆಪ್ಪಾದ್ರೆ ಆಹಾ! ಈಗ್ಲೂ ಆ ರುಚಿ ನಾಲಗೇ ಮ್ಯಾಗೇ ಕುಂತದೆ. ನಮ್ಮಮ್ಮನೂ ಅಪ್ನೂ ಅಕ್ನೂ ಅಣ್ನೂ ಎಲ್ರೂವೇಯಾ ಚಿತ್ರಾನ್ನುಕ್ಕೆ ಹೋಳಿಗಿ ಸಾರು ಬುಟ್ಕಂಡು ಉಣ್ತಾರೆ. ಇಂಗೇಯಾ ನಾಲಗೇ ರುಚಿ ಅಂಬೋದು ಒಬ್ಬೊಬ್ಬ್ರುಗೆ ಒನ್ನೊಂದು ತರ ಇರ್ತದೆ. ಯಾರ್ಗೆ ಯಾವ್ದು ಖುಸೀನೋ ಅಂಗೇ ಉಣ್ಬೇಕು. ಅಂಗೇ ಬಾಳ್ವೆ ಮಾಡ್ಬೇಕು. ನಮ್ ಮನ್ಸಿಗೆ ಸೈ ಅನ್ಸುದ್ರೆ ಜೈ ಅನ್ನಾದೆ. ಅವ್ರೇನಂಬ್ತಾರೆ, ಇವ್ರೇನಂಬ್ತಾರೆ ಅಂತ ಕುಂತುಕಂಡಿದ್ರೆ ಆಟೇಯಾ ಬದುಕೇ ನವ್ದೂ ನವ್ದೂ ಸಾವಾಗ್ತದೆ.
ಕೆರೆ ಏರಿ ಮ್ಯಾಗೆ
ನಮ್ಮೂರ ಕೆರೆ ಮಳೆ ಬಂದಾಗೆಲ್ಲಾ ಕೋಡಿ ಬೀಳತಿರಲಿಲ್ಲ. ಅಪರೂಪುಕ್ಕೆ ಬೀಳ್ತಿತ್ತು. ಕೋಡಿ ಬಿದ್ದಾಗ ನೀರು ಹರ್ಕಂತಾ ಅಂಗೇ ಸಂತೆಕುಂಟೆ ಆಸಿ ದೊಡ್ಡಮಾಲೂರು ಕೆರೆಗೆ ಕೂಡ್ತಿತ್ತು. ನಮ್ಮೂರ ಕೆರೆಗೆ ಹುಂಜೂರು ಹಳ್ಳುದ್ ನೀರು, ಕೊಂಡವಾಡಿ ಕೆರೆ ನೀರು, ಅಳ್ಳೀಮರದಳ್ಳಿ ಕೆರೆ ನೀರು ಬಂದು ಸೇರ್ಕಂತಿತ್ತು.
ನಮ್ಮೂರು ಕೆರೆ ಕಟ್ಟೆ ಚಿಕ್ದೇಯಾ. ಒಂದು ಹತ್ತನ್ನೆಲ್ಡು ಅಡಿ ಅಗ್ಲ ಆಟೇ. ಏಕ ಒಂದು ಫರ್ಲಾಂಗು ಇತ್ತು. ಅಲ್ಲಿ ಜನ ಎಲ್ಲಾ ನಿಂತ್ಕಂಡ್ರೆ ಗಟ್ಟಿಮುಟ್ಟಾಗಿರಾ ಹರೇದ್ ಹುಡುಗ್ರು ಒಂದತ್ತು ಜನ ನೀರಿಗಿಳಿದು ಗಣಪ್ಪ ಗೌರಮ್ಮುನ್ನ ಮುಳುಗ್ಸೋರು. ಕೆರೆ ಬುಡದಾಗೆ ಒಂದು ಕಡೆ ತೂಬು ಇಕ್ಕಿದ್ರು. ಅದ್ಕೆ ಒಂದು ಕಬ್ಬಿಣದ್ ಕೊಂಡಿ ಇತ್ತು. ಅದ್ನ ಎಳುದ್ರೆ ಸಾಕು ಕೊಂತ (ಕಟ್ಟಿಗೆನಾಗೆ ಮಾಡಿದ್ದು) ಬಂದು ತೂಬಿಗೆ ಸರಿಯಾಗಿ ಕುಂತು ತೂತು ಮುಚ್ಚೋಗೋದು. ಕೆರೆ ನೀರ್ನ ಬೇಸಾಯುಕ್ಕೆ ಬಿಡ್ಬೇಕಾರೆ ತೂಬು ತೆಗೆದು ಬಿಡೋರು.
ದ್ಯಾವ್ರ್ನ ಮುಳುಗ್ಸಿ ಬುತ್ತಿ ಕರುಗ್ಸಿ ಊರ್ ಕಡೆ ಹೊಂಟ್ರೆ ಏನೋ ಕಳಕಂಡಂಗೆ ಬ್ಯಾಸ್ರ. ನಮ್ಮೂರು ಹೆಣ್ಣುಮಗುಳ್ನ ಬಿಟ್ಟು ಬಂದ ಸಂಕಟ.
ಅಕ್ಕತಂಗೀರ ಹಬ್ಬ- ಹೆಣ್ಣುಮಕ್ಕಳ ಹಬ್ಬ
ನಮ್ಕಡೆ ಗೌರೀ ಅಂದ್ರೆ ಹೆಣ್ಣುಮಕ್ಕಳ ಹಬ್ಬವೆ. ತೌರು ಮನೇಗ್ಳಿಂದ ಅರ್ಸಣ ಕುಂಕ್ಮ ಬತ್ತದೆ, ಉಡುಗೋರೆ ತಕಾ ಬತ್ತಾರೆ ಅಂಬೋದೇ ಖುಸಿ. ಆಗಿನ್ ಕಾಲ್ದಾಗೆ ಹೆಣ್ಣುಮಕ್ಕಳ ತಾವ ಕಾಸೆಲ್ಲಿರ್ತಿತ್ತು. ಇಂಗೇ ಗೌರಿ ಹಬ್ಬದಾಗೆ ಬರಾ ಕಾಸ್ನ ಕೂಡಿಕ್ಕಿ ಏನಾರಾ ಗುರ್ತಿಗೆ ತಕಂಬ್ತಿದ್ರು. ಸಕ್ತಿ ಇದ್ದಷ್ಟು ಕಾಸು ಕೊಟ್ರೆ, ಅದುಕ್ಕೆ ತಕ್ಕಂಗೆ ಸ್ಟೀಲ್ ಪಾತ್ರೆನೋ, ಪಗಡೇನೋ, ಬೆಳ್ಳಿ ಸಾಮಾನೋ ತಕಂತಿದ್ರು. ನಮ್ಮತ್ತೆ ಒಬ್ರು ನಮ್ ತಾತ ಕೊಡ್ತಿದ್ದ ಕಾಸಿಗೆ ವರ್ಸೊರ್ಸಾನೂ ಒಂದೊಂದು ಸಣ್ದು ಬೆಳ್ಳಿ ಕಪ್ಪು ತಕಳ್ತಾ ಆರು ಕಪ್ಪು ಕೂಡಿಸಿದ್ರಂತೆ.
ಗೌರಿ ಹಬ್ಬ ಅಂದೇಟ್ಗೆ ಹೆಣ್ಣುಮಕ್ಕಳಿಗೆ ತವರ್ಮನಿ ನೆಪ್ಪು. ಅಣ್ತಮ್ಮದಿರು ಗೌರಿ ಬಾಗಿನ ತಕಂಡು, ನಾಗರ ಪಂಚಮಿ ಹಬ್ಬುದ್ ಬಾಬ್ತು ಬೆನ್ನು ತೊಳೆಸಿಕೊಣಾದು ಬಾಕಿ ಇರ್ತಿತ್ತಲ್ಲ. ಅದ್ಕೂ ಸೇರ್ಸಿ ಆಗ್ತೈತೆ ಅಂಬ್ತ ಹಬ್ಬುಕ್ಕೆ ವಾರುದ್ ಮುಂಚಿತವಾಗಿ ಬತ್ತಿದ್ರು. ಅಕ್ತಂಗೀರೂ ಸುತ ಅವುರ್ಗೆ ಇಷ್ಟಾ ಆಗಿರಾ ತಿಂಡಿ ಮಾಡ್ಕಂಡು ಕಾಯ್ಕಂಡು ಕುಂತಿರ್ತಿದ್ರು. ತೌರೂರ್ನಿಂದ ಬರೋ ಒಂದೋ ಎಲ್ಡೋ ಬಸ್ಸಿನ್ ಕಡೇಗೇ ಕಣ್ಣು ಅಂಟುಸೋರು. ರಸ್ತೆ ಕಾಣಾಗಂಟ ಕುತ್ಗೆ ನಿಮುರ್ಸ್ಕಂಡು ನಿಂತ್ಕಂತಿದ್ಳು ನಮ್ಮಮ್ಮ. ಎಂಟು ಹೆಣ್ಣುಮಕ್ಕಳ ತುಂಬಿದ ಸಂಸಾರದ ಸೊಸೆ ಆಗಿ ಇತ್ಲಾಗೆ ಅವುಳ್ ಕರ್ತವ್ಯಾ ಏನಿತ್ತೂ ಅದ್ನೂ ಚಾಚೂ ತಪ್ಪದೆ ಪಾಲಿಸ್ಕಂತಾ ಬಂದಿದ್ಲು. ಗೌರಿ ಹಬ್ಬಕ್ಕೆ ಹದಿನೈದು ದಿನ ಮುಂಚೆಲೇ ತವರಿನ ಆಶೀರ್ವಾದ ಹೊತ್ಕಂಡು ಬಾಗಿನ ಮನೆ ತುಂಬುತ್ತಿತ್ತು. ಇಲ್ಲಿಂದ ಅತ್ತೆದೀರ ಮನೆಗೂ ಹೋಗುತ್ತಿತ್ತು. ಕೊಡೋದು ಈಸ್ಕಳಾದು ಈ ಕುಸೀನಾಗೆ ಮನೆತನುದ್ ನಂಬಿಕೆ, ರಕ್ತದಾಗೆ ಹರಿಯಾ ಪಿರೂತಿ, ಸಮ್ಮಂದಗಳು ಸೇರ್ಕಣಾ ದಾರಿ ಎಲ್ಲಾ ಆಗಿನ್ ಕಾಲ್ದಾಗೆ ಈ ಹಬ್ಬಗಳಾಗೇ ಇದ್ವು.
ನಮ್ಮ ತಾತ ಗಟ್ಟಿಗಿರಾವರ್ಗೂ ಗೌರಿ ಹಬ್ಬದ ಅರ್ಸಣ ಕುಂಕ್ಮ ತಕ್ಕಂಡು ಎಲ್ಲಾ ಮಕ್ಕುಳ್ಗೂ ಕೊಟ್ಟುಬರಾರು. ಆಮ್ಯಾಕಾಮ್ಯಾಕೆ ನಮ್ಮಪ್ಪ ತಕೋ ಹೋಗೋರು. ನಮ್ಮಪ್ಪುಂಗೂ ಮರೆವು ಜಾಸ್ತಿ. ಆದ್ರೂ ನಮ್ಮಮ್ಮ ಗ್ಯಪ್ತಿ ಮಡಿಕ್ಕಂಡು ಉಸಾರಾಗಿ ನೋಡ್ಕಳಾರು. ಅಪ್ಪುಂಗೆ ಗ್ಯಪ್ತಿ ಮಾಡ್ಸಿ, ಎಲ್ಲಾ ಹೊಂದುಸ್ಕೊಟ್ಟಿ ಕಳ್ಸೋರು. ಒನ್ನೊಂದು ಸಾರೆ ಅಮ್ಮನೂ ಜೊತ್ಯಾಗೆ ಹೋಗ್ತಿತ್ತು. ಗೌರಿ ಹಬ್ಬ ಅತ್ಗೆ ನಾದ್ನೀರ್ನ ಒಟ್ಟಿಗೇ ಕೂಡ್ಸ್ತಿತ್ತು. ನಮ್ಮಮ್ಮ ನಾಕು ಜನ ಗಂಡುಮಕ್ಕಳ ನಡೂಕೆ ಒಬ್ಳೇ ಹೆಣ್ಣುಮಗಳು. ನಮ್ಮಪ್ಪ ಎಂಟು ಜನ ಹೆಣ್ಣುಮಕ್ಕಳ ಸಾಲ್ನಾಗೆ ಒಬ್ನೇ ಗಂಡುಮಗ. ಇಬ್ರೂ ಎಲ್ಡೂ ಕಡೆ ಸಮ್ಮಂದಗಳ್ನ ತೂಗುಸ್ಕಂಡು ಹೋಗ್ತಿದ್ರು.
ಪ್ಯಾಸು ಮಾಡ್ಸೋ ಸರಸ್ವತಿ
ಗಣೇಶನಬ್ಬದಾಗೆ ನಮ್ಮ ಮನ್ಯಾಗೆ ಸರಸೋತಿ ಪೂಜೆ ಮಾಡಾ ಪದ್ಧತಿ ಇತ್ತು. ನಮ್ಮಜ್ಜಿ ಯೋಳ್ತಿದ್ಲು, ನಿಂಗೆ ಬೋ ಕಷ್ಟ ಅನ್ಸೋ ಪುಸ್ತಕ ತಂದಿಕ್ಕಿ, ಪೂಜೆ ಮಾಡು ಮಗಾ. ಪರೀಕ್ಸೇಲಿ ಪ್ಯಾಸಾಗ್ತೀಯಾ ಅಂಬ್ತ. ನೇರ್ಪಾದ ಇಂಗ್ಲಿಷ್ ಮೇಷ್ಟ್ರಿಲ್ಲದ ಹಳ್ಳಿ ಶಾಲೆಗಳಾಗೆ, ನಮ್ಮಂತೋರಿಗೆ ಕಬ್ಬಿಣದ ಕಡಲೆ ಅಂದ್ರೆ ಅದು ಇಂಗ್ಲಿಷೇಯಾ. ಅದ್ಕೇ ಅದ್ನೇ ಇಕ್ಕಿ ಕೆನ್ನೆ ಬಡ್ಕಳಾದು. ಮನ್ಯಾಗಿರಾ ಎಲ್ರೂ ಸೈತ ತಾವು ಉಪ್ಯೋಗ್ಸೋ ಮುಖ್ಯವಾಗಿರಾ ಪುಸ್ತಕ ಇಕ್ಕಿ ಕೈ ಮುಗೀತಿದ್ರು. ಅಪ್ಪ ಲೆಕ್ಕಾಚಾರದ ಪುಸ್ತಕ ಇಕ್ಕೀರೆ, ಅಮ್ಮ ಅವ್ಳು ಬರ್ಕಂತಿದ್ದ ಹಾಡು, ರಂಗೋಲಿ ಪುಸ್ತಕಾವ ಬಲೆ ಬಕ್ತಿಯಿಂದ ತಂದಿಕ್ತಿದ್ಲು. ನಾವೂ ಪ್ಯಾಸಾಗೋ ನಂಬಿಕೆಲಿಂದ ಭಯ ಭಕ್ತಿಯಿಂದ ಬುಕ್ಕು ತಂದಿಕ್ಕಿ ಮಕ್ಕಳೆಲ್ಲಾ ಕಣ್ಣುಮುಚ್ಚಿ ಸರಸೋತಮ್ಮನ್ನ ಬೇಡ್ಕಂತಿದ್ವಿ. ಯಂಗಾರಾ ಮಾಡಿ ಇದೊಂದು ದಪ ಮುಂದ್ಲ ಕ್ಲಾಸ್ಗೆ ನೂಕವ್ವ ಅಂಬ್ತ. ಇಪ್ಪತ್ತೊಂದು ಗರಿಕೇನ ಕಟ್ಟಿರಾ ಕಟ್ಟನ್ನ ಕೈಲಿ ಹಿಡಕಂಡು, ಬೆನಕ ಬೆನಕ ಏಕದಂತ ಪಚ್ಚೆಕಲ್ಲು ಪಾಣಿಬಟ್ಲು ಮುತ್ತಿನಂತ ವಿನಾಯಕನಿಗೆ ಇಪ್ಪತ್ತೊಂದು ನಮಸ್ಕಾರಗಳು ಅಂತ ಒಕ್ಕೊರಲಾಗೆ ಅರಚಕಂತಿದ್ವಿ. ಗರಿಕೆ ತಕಂಡು ಗಣೇಶನ ಬದಲಿ ಸೆಗಣಿಯಲ್ಲಿ ಮಾಡಿಟ್ಟಿರುತ್ತಿದ್ದ ಪಿಳ್ಳೆರಾಯನ ಕಡೀಕ್ಕೆ ಗುರಿ ಇಕ್ಕಿ ಎಸೆಯೋದು. ಯಾರ ಗುರಿ ಸರಿಯಾಗಿ ಮುಟ್ತೈತೋ ಅವುರ್ಗೆ ಗಣಪನ ಆಶೀರ್ವಾದ ಗಟ್ಟಿ ಅಮ್ತಲೇ ನಮ್ಮ ಕುರುಡು ನಂಬ್ಕೆ. ಖುಷಿಯಲ್ಲಿ ದಬಾರಂತ ನೆಲದ ಮ್ಯಾಗೆ ಅಡ್ಡಬೀಳ್ತಿದ್ವು. ಕಣ್ಣು ಮಾತ್ರ ಗಣೇಶನ ಮುಂದೆ ತಟ್ಯಾಗಿರಾ ಹೊಗೆ ಆಡೋ ಕಡುಬು, ನುಚ್ಚಿನುಂಡೆ, ಸರಸ್ವತಿ ನೈವೇದ್ಯಕ್ಕೆ ಇಕ್ಕಿರೋ ಮೊಸರನ್ನದ ಕಡೇಲೇ ಇರ್ತಿತ್ತು.
ಆವಾಗ ಮೂರೊತ್ತೂ ಅನ್ನ ತಿಂತಿದ್ವಪ್ಪ. ಬೆಳಿಗ್ಗೆ ಕಡುಬು, ಉಂಡೆ, ಚಿತ್ರಾನ್ನ, ಮೊಸರನ್ನ. ಗೌರಮ್ಮನ ಹಬ್ಬದ ದಿನ್ವೂ ಚಿತ್ರಾನ್ನ, ಅನ್ನ ಸಾರು, ಹೋಳಿಗಿ. ಎಲ್ಡೂ ಜಿನ್ವೂ ಮೂರೊತ್ತೂ ಅನ್ನವೇಯಾ. ಅದಿಲ್ದೀರೂ ಸೈತ ಬೆಳುಗ್ಗೆ ತಿಂಡೀಗೆ ರೊಟ್ಟಿ, ಚಪಾತಿ, ದೋಸೆ, ಇಡ್ಲಿ ಕಮ್ಮಿನೇಯಾ. ಚಿತ್ರಾನ್ನ, ಜೀರಿಗೆ ಅನ್ನ, ಕೊಬ್ಬರಿ ಅನ್ನ, ಮೆಣಸಿನ ಅನ್ನ, ವಾಂಗಿಬಾತ್, ಆ ಬಾತು ಈ ಬಾತು ಅಂಬ್ತ ಬರೀ ಅನ್ನವೇಯಾ. ಮನ್ ತುಂಬಾ ಜನ ಇದ್ದಾಗ ಅದೇ ಸಲೀಸು. ತಿಂಡಿ ಪಂಡಿ ಅಂಬ್ತ ಕುಂತ್ರೆ ಹೆಣ್ಣುಮಕ್ಕಳು ಒಲೇ ಮುಂದ್ಲೇಯಾ. ಅನ್ನ ಯಾವತ್ತೂ ಬ್ಯಾಸ್ರ ಬಂದಿರ್ಲಿಲ್ಲ. ಇವಾಗ್ಲಂಗೆ ಅನ್ನ ತಿಂಬಾಕೆ ಮೀನಮೇಷ ಎಣುಸ್ತಿರ್ಲಿಲ್ಲ. ಅದ್ರಾಗೂ ಹೋಳಿಗೆ ಸಾರು ಮಾಡಿದ್ರೆ, ರಾತ್ರೆ ಅದುಕ್ಕೇಂತ್ಲೇ ಅನ್ನ ಜಾಸ್ತಿ ಮಾಡಿ, ತಂಗ್ಳು ಅನ್ನವಾ ತಂಗ್ಳು ಸಾರಿನೊಳಗಿಕ್ಕಿ ಬೆಳಗೆದ್ದು, ಗಟ್ಟಿ ಮಸ್ರು ಹಾಕ್ಕಂಡು ತಿಂತಿದ್ರೆ, ಕೈ ಜಿಡ್ಡು ಜಿಡ್ಡು. ಎಲ್ಡು ಮೂರು ಜಿನ ಹೋಳಿಗಿ ಸಾರು ಮಡಗಿ ತಿಂತಿದ್ವಿ. ತಂಗ್ಳು ಸಾರ್ಗೂ ಜಗ್ಳ, ಪೈಪೋಟಿ ಅಂದ್ರೆಗಾನಿ ಲೆಕ್ಕ ಹಾಕ್ಕಳಿ. ಇನ್ನೇಸು ಅದ್ರ ರುಚಿಗೆ ನಾವು ಮರುಗಿರ್ಬೋದು ಅಂತಾವ.
ಹೊಸಳಿಯನ ದರ್ಬಾರು
ಆವಾಗ ನಮ್ಮ ಮನೆಗ್ಳಾಗೆ ಗೌರಿ ಗಣೇಶ ಹಬ್ಬದಾಗೆ ಹೊಸಾ ಅಳಿಯಂಗೆ ಬಲು ಇಸೇಸ ಉಪಚಾರ. ಮಗಳು ಅಳಿಯ, ಬೀಗುರ್ನ ಹಬ್ಬಕ್ಕೆ ಕರೀತಿದ್ರು. ಅವರು ಬಂದಾಗ ಗಣೇಶ ಗೌರಿಗೆ ಬಡಿಸುತ್ತಾ ಇದ್ದ ಗೆಜ್ಜೆಬತ್ತಿಗೆ ಇಪರೀತ ಅಲಂಕಾರ ಮಾಡುತ್ತಾ ಕುಂತಕಂತಿದ್ರು. ಯಪ್ಪಾ ತಿಂಗ್ಳು ಮುಂಚೇಲೇ ಸುರು ಅಕ್ಕಂದ್ರ ದರ್ಬಾರು. ಇದೊಂದು ತರುಕ್ಕೆ ಪೈಪೋಟಿ ಆಗಿನ ಹೆಣ್ಣುಮಕ್ಕಳಿಗೆ. ಹತ್ತಿ ಕಾಯಿ ತಂದು, ನಾಜೂಕಾಗಿ ಬಿಡಿಸಿ, ಹತ್ತಿ ತೆಗ್ದು, ಅದ್ರಾಗೆ ದಪ್ಪ ಎಳೆ ಹೊಸೆದು, ಅದ್ರಾಗಿಂದಾ ಸಣ್ಣ ಎಳೆ ನಾಜೂಕಾಗಿ ಮಾಡಿಕ್ಕೋರು. ದಪ್ಪ ಹತ್ತಿ ಹೊಸೆದು ಅದರಾಗೆ ಏಳೆಡೆ ಸರ್ಪ, ಮೊಗ್ಗಿನ ಜಡೆ, ಕಮಲದ ಹುವ್ವ, ಮಲ್ಲಿಗೆ ದಿಂಡು, ಇಂಗೇ ನಾನಾ ರಕಮ್ಮು ಹತ್ತಿ ಸಾಮಾನು. ಅದುಕ್ಕೆ ಬಣ್ಣಬಣ್ಣದ ಸುನೇರಿ ಪೇಪರ್ನಾಗೆ ಸಿಂಗಾರ ಮಾಡಿ ಮಡಗುತ್ತಿದ್ರು. ಅಳಿಯುಂಗೆ, ಬೀಗರಿಗೆ ಹೆಚ್ಚುಗಾರಿಕೆ ತೋರೋದು ಈ ತರುಕ್ಕೆ. ಮದ್ವೇನಾಗೂ ಇಂತಾ ಹತ್ತಿ ಅಲಂಕಾರದ ಸಾಮಾನು ಮಾಡಿ ಮಾಡಿ ಪೇರಿಸಿಟ್ಟು, ಬೀಗ್ರಿಗೆ ಕೊಡೋಕೆ ಅಂಬ್ತಾಲೇ ಜೋಡಿಸ್ತಿದ್ರು.
ನಮ್ಮಜ್ಜಿ ಕಥೆ
ಹೊಸ ಅಳಿಯನ ಇಸ್ಯ ಬಂದ್ ಕೂಡ್ಲೆ ನಮ್ಮಜ್ಜಿ ಯೋಳ್ತಿದ್ದ ಕಥೆ ಒಂದು ಓಡೋಡ್ಕಂಡು ಬಂದು ಮನಸಾಗೇ ಕುಂತ್ಕಂತೈತೆ. ಒಂದು ದಪ ಹೊಸಳಿಯ ತನ್ನ ಕುಟುಂಬದೊಟ್ಟಿಗೆ ಅತ್ತೆ ಮನೀಗೆ ಬಂದ. ಊಟುಕ್ಕೆ ಕುಂತ. ಆಗೆಲ್ಲಾ ಕಡುಬು ಮಾಡಾದೂ ಬಲ್ ಜಾಣ್ಮೆ ಕೆಲ್ಸವೇಯಾ. ಮೂರ್ನಾಕು ಹೆಣ್ಣುಮಕ್ಕಳು ಕುಂತು ಹಿಟ್ಟು ಬೇಸಿ ಪುಟ್ಟ ಪುಟ್ಟ ಉಂಡೆ ಮಾಡಿ ಅದ್ನ ಬೆಳ್ಳುಗಳಾಗೆ ಒತ್ತಿ ಒತ್ತಿ ಬಟ್ಟಲನ್ನು ಕೈನಾಗೇ ನೇರ್ಪಾಗಿ ಮಾಡ್ತಿದ್ರು. ಲಟ್ಟಿಸ್ತಲೂ ಇರ್ಲಿಲ್ಲ. ಅದ್ರಾಗೆ ಈಸೇಸೆ ಕೊಬ್ರಿ ಹೂರಣ ತುಂಬ್ಸೋದು. ಕಿರುಬೆಟ್ಟಿನ್ ಗಾತ್ರದ ಕಡುಬುಗಳು ಪಟಪಟಾಂತ ತಯಾರಾಗ್ತಿದ್ವು. ತಟ್ಟೆ ಮ್ಯಾಗೆ ಗೋಪುರವಾಗಿ ರಾಶಿ ಬೀಳ್ತಿದ್ವು. ಪುಟಾಣಿ ಕಡುಬು ಮಾಡೋರು ಜಾಣ್ರು ಅಮ್ತಲೇ ಲೆಕ್ಕ. ಸ್ಯಾನೆ ಜನ ಸೇರ್ದಾಗ ಮಾಡೊವ್ರ ಸೊಂಟ ಮುರೀತಿತ್ತಲ್ಲ, ಆಗ ಯಾಸೆಟ್ಗೆ ಅಂಬ್ತ ಮನೆ ಗಂಡಸ್ರೂ ಕುಂತು ಕೈ ಜೋಡುಸ್ತಿದ್ರು.
ಆದ್ರೆ ಕಡುಬು ಸಣ್ಣೋವು ಅಂಬ್ತ ಬಡ್ಸಾವಾಗ ಯೋನ್ ಮಾಡೋರು ಎಣ್ಸಿ ಬಡುಸ್ತಿರ್ಲಿಲ್ಲ. ತಟ್ಟೆನಾಗಿರಾ ಕಡುಬ ಅಂಗೇ ಎಲೆಗೆ ಕೈಯಾಗೆ ನೂಕುತ್ತಿದ್ರು. ತುಪ್ಪದ ಮಿಳ್ಳೆ ಪಕ್ಕದಾಗಿಕ್ಕಿದ್ರೆ ಅದ್ರಾಗೆ ಕಡುಬ್ನ ಅದ್ದಿ ತಿನ್ನೋ ಮಜಾ. ಯಪ್ಪಾ ಯಾಪಾಟಿ ಕಡುಬ್ ಮಾಡೋರು. ಕಡುಬಿನ್ ಬೆಟ್ಟಾನೇ ಸೈ. ಆ ಬೆಟ್ಟ ಎಲ್ಲಾರ್ ಹೊಟ್ಟೆನಾಗೆ ಕರಗ್ತಿತ್ತು.
ಸರಿ, ಹೊಸಳಿಯನ ಕತೆ ನೋಡಾಮ. ಪುಟಾಣಿ ಕಡುಬೂಂತ ಒಂದೊಂದು ಗುಕ್ಕಿಗೆ ಒಂದು ಗುಳುಂ ಅನ್ನುಸ್ತಿದ್ದ. ಅದ್ನ ನೋಡಿ ಅವನಪ್ಪ, ಮೆಲ್ಲಗೆ ಮೊಣಕೈ ತಿವಿದು, ಒಂದು ಕಡುಬಾ ಎಲ್ಡು ಕಿತ ತಿನ್ನು ಅಂತ ಸೈಗೆ(ಸನ್ನೆ) ಮಾಡ್ದ. ಮಗರಾಯನೋ ಒಂದೆ ಸಲಕ್ಕೆ ಎರಡು ಕಡುಬು ತಿನ್ಕೋಬೇಕೂಂತ ಅರ್ಥ ಮಾಡ್ಕಂಡ. ಒಂದೇ ದಪುಕ್ಕೆ ಎಲ್ಡೆಲ್ಡು ಕಡುಬು ತಿಂಬಾಕೆ ಶುರು ಮಾಡ್ದ. ಅತ್ತೆಗೆ ಬಲು ಖುಷಿ. ನಾನ್ ಮಾಡಿರಾ ಕಡುಬು ಚೆನ್ನಾಗದೆ ಅಂತ ಸಲ್ಟಿ ಪಾಕೀಟು(ಸರ್ಟಿಫಿಕೇಟ್) ಸಿಕ್ತಲ್ಲ ಅಂಬೋ ಕುಸೀನಾಗೆ ಇನ್ನೊಸಿ ಕಡುಬು ತಂದು ಅಳಿಯನ ಎಲೆಗೆ ನೂಕೀಳು. ಅವರಪ್ಪುಂಗೆ ಅವಮಾನ ಆಗೋತು. ಥೋ ಎಂತಾ ಪೆದ್ದ ನನ್ನ ಮಗ ಅಂಬ್ತ ತಲೆ ಚಚ್ಕಂಡ. ತಿರ್ಗಾ ಜೋರಾಗಿ ತಿವಿದು, ಒಂದು ಕಡುಬಾ ಮೂರು ಸಲ ತಿನ್ನು ಅಂಬ್ತ ಸನ್ನೆ ಮಾಡ್ದ. ಪಾಪ ಮಗ ಈ ಕಿತ ಮೂರು ಕಡುಬಾ ಒಟ್ಟಿಗೇ ತಿಂಬಾಕೆ ಸುರು ಮಾಡ್ದ. ಅತ್ತೇಗೆ ಗಾಬ್ರಿ. ಬಂದಿರಾ ನಂಟ್ರು ಬಳಗ ಎಲ್ಲಾ ಬಾಯಿ ಬಿಟ್ಕಂಡು ಹೊಸಳಿಯನ್ನೇ ನೋಡ್ತಾ ಕುಂತೈತೆ. ಅಪ್ಪ ಅನ್ನುಸ್ಕೊಂಡೋಂಗೆ ಅವ್ಮಾನದಿಂದ ತಲೆತಗ್ಗಿಸಂಗಾಯ್ತು. ಯಾವತ್ತೂ ಕಡುಬೇ ಕಂಡಿಲ್ಲದೋರು ಅಂದ್ಕಂಬಾಕಿಲ್ವೇ ಬೀಗ್ರು. ಮೆಲ್ಲಕೆ ಬಾಯಿ ಬಿಟ್ಟು ಪಿಸುಗುಟ್ಟಿದನಂತೆ. ಆಗ ಪೆದ್ದುಮುಂಡೇದುಕ್ಕೆ (ಮಗರಾಯುಂಗೆ)ಅರ್ಥ ಆಯ್ತು. ನಾಚಿಕೆ ಆಗಿ ತಲೆತಗ್ಗಿಸಿದ್ನಂತೆ.
ನಮ್ಮಜ್ಜಿ ಈ ಕತೆ ಯೋಳ್ತಾ ಯೋಳ್ತಾ ಇದು ನಮ್ಗೆ ಗೊತ್ತಿರಾ ಕುಟುಂಬದಾಗೇ ನಡೆದಿರಾದು ಅಂತಾ ಯೋಳುತ್ತಿತ್ತು. ನಾವೂ ಯಾರಿರಬೋದು ಅಂತ ಹೊಸಳಿಯನ ಜಾಗದಾಗೆ ಐದಾರು ಮಖಗಳ್ನ ನಿಲ್ಲುಸ್ಕಂಡು ಬಿದ್ದು ಬಿದ್ದು ನಗಾಡ್ತಿದ್ವು.
ಒಟ್ನಾಗೆ ಹೆಣ್ಣುಮಕ್ಳಿಗೆ ಆಷಾಡದಾಗೇ ಮನ್ಸಾಗೆ ಒಂದ್ರಾಶಿ ತೌರಿನ್ ನೆಪ್ಪು, ಬಿಟ್ಟೂ ಬಿಡದಿರಾ ಸ್ರಾವಣದ ಮಳೆ ತರಾ ಕಾಡ್ತವೆ. ಗೌರಿ ಮುಗುದ್ ಮ್ಯಾಗೆ ಗೌರಮ್ಮನ್ನ ಗಂಡನ ಮನೆಗೆ ಸಾಗಾಕಿ, ತಾವೂ ತವರು ಮರ್ತು, ಗಂಡನ ಮನೇ ಭಾರವ ಹೊತ್ತು ಆ ಜಗತ್ನಾಗೇ ಮುಳಿಗೋಗ್ತಾರೆ.
ಸರಣಿ ಮುಕ್ತಾಯ…

ಸುಮಾ ಸತೀಶ್ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದವರು. ಬರವಣಿಗೆಯ ಜೊತೆಗೆ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯ ಜೊತೆಗೆ ಏಕಪಾತ್ರಾಭಿನಯ ಇವರ ಹವ್ಯಾಸ. ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು , ಅವನಿ ( ಕವನ ಸಂಕಲನ), ವಚನ ಸಿರಿ (ಆಧುನಿಕ ವಚನಗಳು), ಹಾದಿಯಲ್ಲಿನ ಮುಳ್ಳುಗಳು ( ವೈಚಾರಿಕ ಲೇಖನ ಸಂಕಲನ), ಬಳಗ ಬಳ್ಳಿಯ ಸುತ್ತ (ಸಂ. ಕೃತಿ), ಶೂನ್ಯದಿಂದ ಸಿಂಹಾಸನದವರೆಗೆ ( ವ್ಯಕ್ತಿ ಚಿತ್ರಣ), ಭಾವಯಾನ ( ಸಂ. ಕೃತಿ), ಮನನ – ಮಂಥನ ( ವಿಮರ್ಶಾ ಬರೆಹಗಳು), ವಿಹಾರ (ಆಧುನಿಕ ವಚನಗಳು), ಕರ್ನಾಟಕದ ಅನನ್ಯ ಸಾಧಕಿಯರು ಭಾಗ 6 (ಡಾ. ಎಚ್. ಗಿರಿಜಮ್ಮನವರ ಬದುಕು – ಬರೆಹ) ಇವರ ಪ್ರಕಟಿತ ಕೃತಿಗಳು.