Advertisement
ಛಡಿ ಚಂ ಚಂ….: ಜುಲೇಖಾ ಬೇಗಂ ಜೀವನ ವೃತ್ತಾಂತ

ಛಡಿ ಚಂ ಚಂ….: ಜುಲೇಖಾ ಬೇಗಂ ಜೀವನ ವೃತ್ತಾಂತ

ಗಂಟಲಿನಿಂದ ಅದೆಷ್ಟೇ ಉಸಿರೆಳೆದರೂ, ನಾಲಗೆಯನ್ನು ಹೊರಳಿಸಿ ಉರುಳಿಸಿದರೂ ಊಹೂಂ, ಹಾಲು ಹಣ್ಣು ಬರಲೊಲ್ಲದು. ಅವರೂ ಹಿಡಿದ ಪಟ್ಟು ಬಿಡುವಂತೆ ಕಾಣಲಿಲ್ಲ. ಪಕ್ಕದಲ್ಲಿ ಪುಂಡಿ ಸೊಪ್ಪನ್ನು ಬಿಡಿಸಿಟ್ಟಿದ್ದರು. ಆ ಪುಂಡಿ ಕೋಲು ದಪ್ಪವಾಗಿರುತ್ತದೆ. ಮುಂದೇನು ಆಗಿರಬಹುದು ಹೇಳಿ? ಅನುಮಾನವೇ ಬೇಡ, ಬೆನ್ನಿಗೆ ಎರಡೇಟು ಬಾರಿಸಿದರು. ಚುರ್ ಎಂದು ಬಿದ್ದ ಏಟಿಗೆ ಕಣ್ಣಲ್ಲಿ ನೀರು ಜಿನುಗಿಸಿತು. ಅಳುತ್ತಲೇ ‘ಹಾ..ಲು, ಹ..ಣ್ಣು’ ಎಂದೆ. ‘ಇತ್ತ ಕಡೆ ನೋಡಿ ಇನ್ನೊಮ್ಮೆ ಹಾಗೇ ಹೇಳುʼ ಎಂದರು.
ಕೀರ್ತಿ
ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಏಳನೆಯ ಕಂತು

ನಾಟಕದ ಕಂಪೆನಿಯ ತಿರುಗಾಟ ಈಗಿನ ರೀತಿ ಇರಲಿಲ್ಲ. ಒಂದು ಊರಲ್ಲಿ ಕಂಪೆನಿ ಟೆಂಟ್ ಹಾಕಿತು ಅಂದರೆ ತಿಂಗಳಾನುಗಟ್ಟಲೆ ಅಲ್ಲೇ ಉಳಿಯಬೇಕಿತ್ತು. ಒಬ್ಬೊಬ್ಬ ಕಲಾವಿದರು ಒಂದೊಂದು ಮನೆಯಲ್ಲಿ ಬಾಡಿಗೆಯಿರಬೇಕಿತ್ತು. ಖಾಲಿ ಮನೆಗಳಲ್ಲಿ ಒಂದೆರಡು ತಿಂಗಳ ವಾಸ. ಊಟ, ತಿಂಡಿಯ ವ್ಯವಸ್ಥೆ ಕಂಪೆನಿ ಕಡೆಯಿಂದಲೇ ಆಗುತ್ತಿತ್ತು. ಬೆಳಗಾಗುತ್ತಿದ್ದಂತೆ ಕಂಪೆನಿಯ ಬೋರ್ಡಿಂಗ್‌ನಲ್ಲಿ ಡಬ್ಬಿ ಇಟ್ಟು, ಬರಬೇಕಿತ್ತು. ರಾತ್ರಿ ಊಟಕ್ಕೆ ರೊಟ್ಟಿ, ಅನ್ನ, ಸಾರು, ಪಲ್ಯ ಇದ್ದರೆ, ಬೆಳಗಿನ ಹೊತ್ತಿಗೆಂದು ಮೊಸರು, ತರಕಾರಿ ಸೇರಿಸಿದ ಪಚಡಿ, ರೊಟ್ಟಿ. ಹಾಂ, ಡಬ್ಬಿ ಅಂದೆ. ಮದುವೆ ಆಗದ ತರುಣಿ ತರುಣರೆಲ್ಲ ಅಲ್ಲೇ ಹೋಗಿ ಊಟ ಪೂರೈಸುತ್ತಿದ್ದರು. ಕುಟುಂಬ ಇರುವವರೆಲ್ಲ ಈ ಡಬ್ಬಿಗಳ ಮೊರೆ ಹೋಗುತ್ತಿದ್ದರು.

ತಿರುಗಾಟ ಎಂದರೆ ನಾಟಕ ಪ್ರದರ್ಶನವಷ್ಟೇ ಅಂತನಿಸಬಹುದು. ಇಲ್ಲ, ಅದರ ಹಿಂದೆ ನನ್ನ ಬದುಕಿನ ಬಹುಮುಖ್ಯ ಅಧ್ಯಾಯಗಳೆಲ್ಲ ಬೆರೆತಿವೆ. ಮರದ ಒಂದು ಪೆಟ್ಟಿಗೆಯ ತುಂಬ ಸ್ಟೌವ್, ಪಾತ್ರೆ, ಡಬ್ಬಿಗಳು, ಸೌಟು, ತಟ್ಟೆ, ಲೋಟ ಹೀಗೆ ಮನೆಯ ಅಡುಗೆಗೆ ಬೇಕಾದ ಸಾಮಾನುಗಳನ್ನು ಒಪ್ಪವಾಗಿ ಜೋಡಿಸುತ್ತಿದ್ದೆವು. ಹಾಸಿಗೆ, ಚಪ್ಪಲಿಗಳು, ಪೊರಕೆಯನ್ನೆಲ್ಲ ಸುತ್ತಿ ಕಟ್ಟಲಾಗುತ್ತಿತ್ತು. ಟೆಂಟ್ ಹಾಕಿದ ಊರಿನಲ್ಲಿ ಮನೆ ಬಾಡಿಗೆಗೆಂದು ಗೊತ್ತುಮಾಡಿಕೊಳ್ಳುವುದು ನಮಗೇನು ಹೊಸತಾಗಿರಲಿಲ್ಲ. ಎರಡು ದಿನ ಅದನ್ನು ಮನೆಗೆ ಹೊಂದುವಂತೆ ಸೆಟ್ ಮಾಡುತ್ತಿದ್ದೆವು. ಆದರೆ, ಎಂಟ್ಹತ್ತು ದಿನಗಳವರೆಗೆ ಮಾತ್ರ ಕ್ಯಾಂಪ್ ಇದ್ದಾಗೆಲ್ಲ ಕ್ಯಾರಿಯರ್ ಅಂದರೆ ಊಟಕ್ಕೆ ಅಗತ್ಯವಿದ್ದ ಡಬ್ಬಿ, ಲೋಟ, ತಟ್ಟೆಯನ್ನು ಮಾತ್ರ ತೆಗೆದಿಟ್ಟುಕೊಳ್ಳುತ್ತಿದ್ದೆವು. ಹಾಗಿದ್ದಾಗ ನಮ್ಮ ಮರದ ಪೆಟ್ಟಿಗೆಯನ್ನೆಲ್ಲ ನಾಟಕದ ಟೆಂಟ್‌ನಲ್ಲೇ ಇರಿಸಲಾಗುತ್ತಿತ್ತು.

ಇದಿಷ್ಟೇ ಅಲ್ಲ, ಇನ್ನು ದೊಡ್ಡ ಜಾತ್ರೆ, ಕಾಡು ಪ್ರದೇಶ ಅಲ್ಲೆಲ್ಲ ನಾಟಕ ಮಾಡುತ್ತಿದ್ದೆವು. ಆಗ ವಿಸ್ತಾರವಾಗಿರುವ ಜಾಗದಲ್ಲಿ ಟೆಂಟ್ ಕಟ್ಟಿ, ಆ ಟೆಂಟ್‌ನಲ್ಲೇ ಎಲ್ಲಾ ಕಲಾವಿದರಿಗೂ ಉಳಿಯುವುದಕ್ಕೆಂದು ಸಣ್ಣ ಸಣ್ಣ ಕೋಣೆಗಳನ್ನು ನೀಡುತ್ತಿದ್ದರು. ಗೋಡೆಯ ನಿರ್ಮಾಣಕ್ಕೆ ಮಣ್ಣೇ ಬೇಕಿಲ್ಲ, ಪ್ರತ್ಯೇಕಿಸುವುದಕ್ಕೆ ತೆಳುವಾದ ಬಟ್ಟೆಯೇ ಸಾಕು ಎಂದು ಅರ್ಥವಾಗಿದ್ದು ಅಲ್ಲಿಯೇ.

ನನ್ನ ಕಲಾ ಬದುಕಿನ ಮೊದಲ ಕ್ಯಾಂಪ್ ಮಾನವಿಯಲ್ಲಿ. ಭಾಗಮ್ಮನವರು ಮತ್ತೆ ಭಾನಾಪುರ ಲಕ್ಷ್ಮಿ ಇಬ್ಬರು ಗದಗಿನ ಕ್ಯಾಂಪ್ ಎಂದು ಅವ್ವನಲ್ಲಿ ಹೇಳಿ ಕರೆದುಕೊಂಡು ಹೋಗಿದ್ದರು. ಆದರೆ ಅವರು ಗದಗಿನಲ್ಲಿ ಕ್ಯಾಂಪ್ ಮುಗಿಸಿ, ಮಹೇಶ್ವರ ನಾಟ್ಯ ಸಂಘ, ನ್ಯಾಮತಿ ಕಂಪೆನಿ ಸೇರಿದ್ದರು. ಕಂಪೆನಿ ಆಗ ಮಾನವಿಯೆಡೆಗೆ ಪಯಣ ಬೆಳೆಸಿತ್ತು. ಎಂಟನೇ ವರ್ಷಕ್ಕೆ ನಾಟಕ ಕಂಪೆನಿಯೆಂಬ ಬೃಹತ್ ಜಗತ್ತಿಗೆ ನನ್ನ ಪುಟ್ಟ ಹೆಜ್ಜೆಗಳನ್ನು ಇಟ್ಟಿದ್ದೆ. ಅವ್ವ ಅಪ್ಪರ ಪ್ರೀತಿಯಿಂದ ಬದುಕು ಬಣ್ಣಗಟ್ಟಿದ್ದೇನೊ ನಿಜ, ಆದರೆ ನಾ ಕನಸುಗಟ್ಟುವ ಹೊತ್ತಿಗೆ ಈ ಬಣ್ಣದ ಬದುಕು ನನ್ನನ್ನು ಆವರಿಸಿತ್ತು. ಬಂದ ಹೊಸತರಲ್ಲಿ ಮನೆಜನರ ನೆನಪೆಲ್ಲ ಬಿಟ್ಟೂಬಿಡದೆ ಕಾಡಿತೆಂದು ಸುಳ್ಳು ಹೇಳಲಾರೆ. ರಾತ್ರಿ ಒಂಬತ್ತೂವರೆಗೆ ಮನೆ ಬಿಟ್ಟರೆ, ಹತ್ತೂವರೆಗೆಲ್ಲ ನಾಟಕ ಆರಂಭವಾಗುತ್ತಿತ್ತು. ಬೆಳಕಿನ ಕಿರಣಗಳಿನ್ನೂ ಮೂಡದ ಹೊತ್ತು, ಸರಿಸುಮಾರು ಮೂರುವರೆ ನಾಲ್ಕರ ಹೊತ್ತಿಗೆ ನಾಟಕದ ಪರದೆ ಎಳೆಯುತ್ತಿದ್ದರು. ಮನೆಗೆ ಬಂದು, ಹಾಸಿಗೆಗೆ ಬೆನ್ನಾಯಿಸಿದರೆ ಹತ್ತರ ಹೊತ್ತಿಗೆ ಎಚ್ಚರವಾಗುತ್ತಿತ್ತು. ಮತ್ತೆ ತಯಾರಿ, ನಾಟಕದಲ್ಲಿ ನರ್ತಿಸಬೇಕೆಂಬ ಆಸೆ ದಿನೇದಿನೇ ಹೆಚ್ಚಾಗುತ್ತಲಿತ್ತು.

ಹೌದು, ನನ್ನ ಮನಸ್ಸು ಕಲಾವಿದೆಯನ್ನೇ ಎದುರುನೋಡುತ್ತಿತ್ತು. ಆದರೆ, ಜೊತೆಯಲ್ಲಿರುವವರಿಗೆ ಅದೇ ಭಾವ ಇರಬೇಕಲ್ಲಾ! ಮೊದಮೊದಲು ಬೆಳಿಗ್ಗೆ ಹತ್ತಕ್ಕೇ ಏಳುತ್ತಿದ್ದೆ. ಅವರೂ ನೋಡುವಷ್ಟು ನೋಡಿ, ‘ಇಷ್ಟೊತ್ತೆಲ್ಲ ಮಲ್ಗಿದ್ರೆ ಪಾತ್ರಿ ತೊಳಿಯೋರ್ ಯಾರು?’ ಎನ್ನುತ್ತಾ ಕಸಗುಡಿಸುವುದನ್ನೂ ಕಲಿಸಿಕೊಟ್ಟರು. ‘ಈಕಿ ನಮ್ಮತ್ತಿ ಮಗ್ಳು’ ಅಂದಾಗ ನಾನೆಷ್ಟು ಸಂಭ್ರಮಿಸಿದ್ದೆ! ಅವೆಲ್ಲವೂ ಗಾಳಿಗೋಪುರ ಅಂತೆನಿಸಲು ಹೆಚ್ಚು ದಿನಗಳೇನು ಬೇಕಾಗಿರಲಿಲ್ಲ. ಹೊರಗಡೆ ಕಟ್ಟೆಯ ಕಡೆ ಮಲಗುವ ಜಾಗವೆಂದು ಭಾಗಮ್ಮನವರು ಕೈ ತೋರಿಸಿದ್ದಷ್ಟೇ. ಒಪ್ಪದ ಹೊರತು ಬೇರೆ ಮಾತಿಗೆಲ್ಲ ಅವಕಾಶವಿರಲಿಲ್ಲ. ಬೆಳಿಗ್ಗೆ ಎದ್ದು ನೋಡಿದರೆ, ಒಂದರ ಹಿಂದೆ ಒಂದರಂತೆ ಸುಮಾರು ಐನೂರು ಕೆಂಪು ಚೇಳುಗಳು ನಾ ಮಲಗಿದ್ದ ಜಾಗದ ಸುತ್ತ ಸಾಗುತ್ತಿತ್ತು. ಗಾಬರಿಗೊಂಡು, ಕಿಟಾರನೆ ಕಿರುಚಿದೆ. ‘ಗೋಳು ಶುರು ಆತು ನೋಡು’ ಎಂದು ಭಾಗಮ್ಮನವರು ರೇಗುತ್ತಿದ್ದರೆ, ಅವರ ಮಗಳು ಭಾನಾಪುರ ಲಕ್ಷ್ಮಿ ಮಾತ್ರ, ‘ಏನವ್ವ, ಯಾಕ್ ಆ ಹುಡ್ಗಿ ಮೇಲೆ ಸಿಟ್ಟಾಗ್ತಿ?’ ಎಂದು ಕೇಳಿದರು. ಮನೆ ಬಿಟ್ಟು ಬಂದಿದ್ದೆನಲ್ಲಾ, ಸದ್ಯಕ್ಕೆ ಪ್ರೀತಿಯ ಆಸರೆ, ನಂಬಿಕಸ್ತ ವ್ಯಕ್ತಿಯನ್ನು ಮನಸ್ಸು ಹುಡುಕುತ್ತಿತ್ತು. ಏನೆನ್ನಿಸಿತೋ, ಭಾನಾಪುರ ಲಕ್ಷ್ಮಿಯನ್ನೇ ‘ಅಕ್ಕ, ಅಕ್ಕ..’ ಎನ್ನುತ್ತಾ ಹೋಗಿ ತಬ್ಬಿದೆ. ಚೇಳು ನೋಡುತ್ತಿದ್ದಂತೆ ಅವರೂ ದಂಗುಬಡಿದಂತೆ ನಿಂತರು. ಅವ್ವ ಅಪ್ಪರ ಸಾಂಗತ್ಯ ಬೇಕೆನಿಸಿದ್ದು ಆಗಲೇ. ಮನೆಗೆ ಕಳಿಸಿಕೊಡಿ ಎಂದೂ ಗೋಗರೆದೆ. ‘ನಾಟಕದಲ್ಲಿ ಪಾರ್ಟ್ ಮಾಡಲ್ವಾ?’ ಎಂದು ಅವರಾಡಿದ ಮಾತೇ ಸಮಾಧಾನವೆನಿಸುತ್ತಿತ್ತು. ಬೈದದ್ದಕ್ಕೆ ಪಶ್ಚಾತ್ತಾಪ ಆಗಿಯೋ ಅಥವಾ ಬೇರೆಯವರ ಮನೆಯ ಹೆಣ್ಣೆಂಬ ಕಾರಣಕ್ಕೊ ಆ ಭಯಾನಕ ಘಟನೆ ನಡೆದ ದಿನದಿಂದ ಮನೆಯೊಳಕ್ಕೆ ಮಲಗಿಸಿಕೊಂಡರು.

ಹದಿನೈದು ದಿನ ಕಳೆದಿತ್ತು. ಕಂಪೆನಿಯಲ್ಲಿ ಮುಂದಿನ ಬದಲಾವಣೆಯ ನಾಟಕ ‘ಸತ್ಯ ಹರಿಶ್ಚಂದ್ರ’ ಎಂದು ಆಗ ಸುದ್ದಿ. ಅಲ್ಲಿಯವರೆಗೂ ದಿನಾ ನಾಟಕ ನಡೆವ ಜಾಗಕ್ಕೆ ಹೋಗುವುದು, ಕೂರುವುದು, ಏಳುವುದು, ಮನಸ್ಸು ಬಂದಲ್ಲಿ ಆಚೀಚೆ ಓಡಾಡುವುದು ಅಭ್ಯಾಸವಾಗಿತ್ತು. ಈ ತಲೆಹರಟೆ ಹೆಚ್ಚಾದರೆ ಬಂದ ಉದ್ದೇಶವೇ ಕೊನೆಗೆ ಮರೆಯಬಹುದೆಂದು ಎವೆಯಿಕ್ಕದೆ ಬಣ್ಣ ಹಚ್ಚುವುದನ್ನೂ ನೋಡುತ್ತಿದ್ದೆ. ಸರಿ, ಕಂಪೆನಿಯಲ್ಲಿ ಸತ್ಯ ಹರಿಶ್ಚಂದ್ರ ನಾಟಕದ ಲೋಹಿತಾಶ್ವ ಪಾತ್ರ ಯಾರು ಮಾಡಬಹುದೆಂಬ ಚರ್ಚೆ. ‘ಮಲ್ಲವ್ವ ಮಾಡ್ತಾಳ’ ಎಂದು ಒಂದಷ್ಟು ಜನ ನನ್ನ ಹೆಸರನ್ನೇ ಸೂಚಿಸಿದ್ದರು. ಕಂಪೆನಿ ಮಾಲೀಕರು ಬಂದು, ‘ಲೋಹಿತಾಶ್ವನ ಪಾತ್ರ ಮಾಡ್ತಿ?’ ಎಂದಾಗ ನನಗಂತೂ ಸ್ವರ್ಗಕ್ಕೆ ಕಿಚ್ಚು ಹಚ್ಚುವುದಷ್ಟೇ ಬಾಕಿ. ಆಗಸದ ಬೆಳ್ಳಿ ಮೋಡಗಳನ್ನು ಮುಟ್ಟುವ ಹಕ್ಕಿಯಂತಾಗಿದ್ದೆ. ‘ಮಾಡ್ತೀನಿ.. ಮಾಡ್ತೀನಿ’, ಎಂಬ ಮಾತಿನಲ್ಲಿ ಸಂಭ್ರಮವೇ ತುಂಬಿತ್ತೆಂಬುದು ನಿಮಗರ್ಥವಾಗಬಹುದು.

ನೀವು ಮೂಡಲಮನೆ ಎಂಬ ಧಾರಾವಾಹಿ ಕೇಳಿರುತ್ತೀರಿ. ಅದರಲ್ಲಿ ಅಭಿನಯಿಸುತ್ತಿದ್ದ ಮುರುಗೋಡು ರೇಣಮ್ಮ ಎಂಬ ಕಲಾವಿದರು ಚಂದ್ರಮತಿಯ ಪಾತ್ರ ಮಾಡುತ್ತಿದ್ದರು. ಅಂದರೆ ನಾನು, ಅವರು ಅಮ್ಮ ಮಗನ ಲೆಕ್ಕ. ನಾಟಕದ ರಿಹರ್ಸಲ್ ಆರಂಭವಾಯಿತು. ‘ಹಾಲು, ಹಣ್ಣು’ ಪದಗಳು ಹಾಗೇ ಸಂಭಾಷಣೆಯಲ್ಲಿ ಬಂದುಹೋಗುತ್ತಿತ್ತು. ಚೂಟಿಯಾಗಿದ್ದೆ ನಿಜ, ಆದರೆ ‘ಅ’ ಮತ್ತು ‘ಹ’ ಕಾರಗಳನ್ನು ಹಾಗೇ ಉಚ್ಛರಿಸಬೇಕೆಂದೂ ತಿಳಿದಿರದ ವಯಸ್ಸು ನನ್ನದು. ಹತ್ತು ಹದಿನೈದು ಸಲ ರೀಡಿಂಗ್ ನಡೆದಿರಬಹುದು. ಆಲು, ಅಣ್ಣು ಅಂತಲೇ ಹೇಳುತ್ತಿದ್ದೆ. ಒಂದೊಂದು ರೀಡಿಂಗ್ ಮುಗಿಸಿ, ಸರಿ ಹೇಳದಿದ್ದಾಗ ಅವರ ಕಣ್ಣು ಕೆಂಗಟ್ಟುತ್ತಿತ್ತು. ಇತ್ತ ನನ್ನೊಳಗು ಮುಂದೆ ನಡೆಯಬಹುದಾದ್ದನ್ನು ಎಚ್ಚರಿಸುತ್ತಿತ್ತು. ಗಂಟಲಿನಿಂದ ಅದೆಷ್ಟೇ ಉಸಿರೆಳೆದರೂ, ನಾಲಗೆಯನ್ನು ಹೊರಳಿಸಿ ಉರುಳಿಸಿದರೂ ಊಹೂಂ, ಹಾಲು ಹಣ್ಣು ಬರಲೊಲ್ಲದು. ಅವರೂ ಹಿಡಿದ ಪಟ್ಟು ಬಿಡುವಂತೆ ಕಾಣಲಿಲ್ಲ. ಪಕ್ಕದಲ್ಲಿ ಪುಂಡಿ ಸೊಪ್ಪನ್ನು ಬಿಡಿಸಿಟ್ಟಿದ್ದರು. ಆ ಪುಂಡಿ ಕೋಲು ದಪ್ಪವಾಗಿರುತ್ತದೆ. ಮುಂದೇನು ಆಗಿರಬಹುದು ಹೇಳಿ? ಅನುಮಾನವೇ ಬೇಡ, ಬೆನ್ನಿಗೆ ಎರಡೇಟು ಬಾರಿಸಿದರು. ಚುರ್ ಎಂದು ಬಿದ್ದ ಏಟಿಗೆ ಕಣ್ಣಲ್ಲಿ ನೀರು ಜಿನುಗಿಸಿತು. ಅಳುತ್ತಲೇ ‘ಹಾ..ಲು, ಹ..ಣ್ಣು’ ಎಂದೆ. ‘ಇತ್ತ ಕಡೆ ನೋಡಿ ಇನ್ನೊಮ್ಮೆ ಹಾಗೇ ಹೇಳುʼ ಎಂದರು. ಅದನ್ನೇ ನುಡಿದೆ. ಮೊದಲು ತಿಂದ ಏಟಿನ ಪಾಠ ಹೇಗೆ ತಾನೆ ಮರೆಯಲಿ?

ಇನ್ನೊಮ್ಮೆ ಹೀಗಾಗಿತ್ತು. ‘ಉತೃಷ್ಟೋ ಉತ್ಕೃಷ್ಟೋ ಗೋವಿಂದ ಉತ್ಕೃಷ್ಟೋ ಗರುಡಧ್ವಜ’ ಎನ್ನುವ ಶ್ಲೋಕದ ಸಾಲುಗಳಿವೆಯಲ್ಲಾ, ಅದನ್ನು ‘ಉತ್ಕುಟ್ಟೋ ಉತ್ಕುಟ್ಟೋ’ ಎನ್ನುತ್ತಿದ್ದೆ. ಕೇಳುವಷ್ಟು ಕೇಳಿ, ಕೊನೆಗೆ ಬೇಸತ್ತು ಹೋಗಿ, ‘ಇಲ್ಲ, ನಿಮ್ಮವ್ವನ ಕುಟ್ಟೋ, ನಿಮ್ಮವ್ವನ ಕುಟ್ಟೋ’ ಎನ್ನುತ್ತಿದ್ದರು. ನನ್ನದು ಮತ್ತದೇ ಉತ್ಕುಟ್ಟೋ ರಾಗ! ಕಪಾಳಕ್ಕೆ ಒಂದೇಟು ಬಿತ್ತು. ‘ಉತ್ಕೃಷ್ಟೋ’ ಪದ ಸುಲಲಿತವಾಯಿತು.

ಸತ್ಯ ಹರಿಶ್ಚಂದ್ರ ನಾಟಕದಲ್ಲಿ ವಿಶ್ವಾಮಿತ್ರ ಹರಿಶ್ಚಂದ್ರನನ್ನು ರಾಜ್ಯದಿಂದ ಹೊರಗಟ್ಟುವ ಪ್ರಸಂಗವಿದೆ. ಆಗ ನಕ್ಷತ್ರಿಕನನ್ನು ಅವರ ಜೊತೆಯಲ್ಲಿ ಕಳುಹಿಕೊಡುತ್ತಾರೆ. ಕಾಡಿನ ಮಧ್ಯೆ ಹೋಗುವಾಗ ಮತ್ತೆ ವಿಶ್ವಾಮಿತ್ರ ಬಂದು ನಕ್ಷತ್ರಿಕನನ್ನು ಎಚ್ಚರಿಸಿ, ಹರಿಶ್ಚಂದ್ರನಿಗೆ ತೊಂದರೆ ಕೊಡೆಂದು ಹೇಳುತ್ತಾನೆ. ನಕ್ಷತ್ರಿಕ ತನಗೆ ಹಸಿವಾಗಿದೆ, ಏನಾದರೂ ತಿನ್ನಲು ಕೊಡಿ ನಡೆಯಲು ಆಗುತ್ತಿಲ್ಲ ಎಂದು ಹೇಳುತ್ತಿದ್ದ. ಪಾತ್ರವಾಗಿ ಅವನು ಹೇಳುವ ಮಾತು, ನಿಜದಲ್ಲಿ ನನ್ನ ಮನಸಿನ ಮಾತೇ ಆಗಿತ್ತು. ನನಗಾದರೂ ಹಸಿವಾಗುತ್ತಿದೆ ಎಂದು ಹೇಳುವ ದೃಶ್ಯ ಇರಬಾರದಿತ್ತಾ! ಹಸಿವು ನೀಗುವುದಕ್ಕೆ ಅವನಿಗೆ ಹಣ್ಣನ್ನು ನೀಡಿದಾಗ, ತಿನ್ನುವುದನ್ನೇ ನೋಡುತ್ತಿದ್ದೆ.

ಇದೆಲ್ಲ ಮುಗಿದು ಕೊನೆಯಲ್ಲಿ ಲೋಹಿತಾಶ್ವ ಹಾವು ಕಚ್ಚಿ ತೀರಿಹೋಗುತ್ತಾನೆ. ಚಂದ್ರಮತಿ ಸ್ಮಶಾನಕ್ಕೆ ಕರೆತಂದರೆ ಹಣ ನೀಡಬೇಕೆಂದು ಹರಿಶ್ಚಂದ್ರನೇ ಹೇಳುವುದು, ನನ್ನ ಬಳಿ ದುಡ್ಡಿಲ್ಲವೆಂದಾಗ ಕೊರಳಲ್ಲಿರುವ ತಾಳಿ ಮಾರಿ ತಾ ಎಂದು ಹೇಳುವುದು, ನಂತರ ತಾವು ಗಂಡ ಹೆಂಡತಿಯ ಸತ್ಯ ತಿಳಿಯುವುದು, ಆದರೂ ದುಡ್ಡು ನೀಡಲೇಬೇಕೆಂಬ ನಿಯಮ ಪಾಲನೆ, ನಂತರ ಚಂದ್ರಮತಿ ಏನಾದರೂ ಮಾಡಿ ತರುತ್ತೇನೆಂದು ಹೇಳಿಹೊರಟಿರುತ್ತಾಳೆ. ಅಲ್ಲಿಯೇ ಕೊಲೆಯಾಗಿ ಬಿದ್ದಿದ್ದ ರಾಜ್ಯದ ರಾಜಕುಮಾರನೆಂದು ತಿಳಿಯದೆ ತನ್ನ ಲೋಹಿತಾಶ್ವನೇ ಎಂದು ಅಪ್ಪಿ, ಕಣ್ಣೀರ್ಗರೆಯುತ್ತಾಳೆ. ಸೈನಿಕರು ಇದನ್ನು ಕಂಡು, ಇವಳೇ ಕೊಲೆಗಡುಕಿ ಎಂದು ವಧಾಸ್ಥಾನಕ್ಕೆ ಕರೆದುಕೊಂಡು ಹೋಗುತ್ತಾರೆ. ಶಿರಚ್ಛೇದನಕ್ಕೆಂದು ತಂದ ಕೊಡಲಿಯೇ ಹಾರವಾಗಿ, ಶಿವ ಪಾರ್ವತಿಯರು ಪ್ರತ್ಯಕ್ಷಗೊಂಡು ನಿಜ ಕತೆ ಅರುಹಿ, ಇಲ್ಲಿಗೆ ಸತ್ಯ ಪರೀಕ್ಷೆ ಮುಗಿಯಿತು ಎನ್ನುತ್ತಾರೆ. ನಂತರ ವಿಶ್ವಾಮಿತ್ರರು ತಮ್ಮ ಕಮಂಡಲದಿಂದ ನೀರು ಪ್ರೋಕ್ಷಣೆ ಮಾಡುವ ತನಕ ಕಡಿಮೆಯೆಂದರೂ ಒಂದೂವರೆ ಗಂಟೆ ಕಳೆಯುತ್ತಿತ್ತು.

ನಾಟಕದ ಹಿಂದಿರುವ ಜಂಗಲ್ ರಸ್ತೆಯ ಪರದೆಯಡಿ ಮಲಗಿ ಗೊರಕೆ ಹೊಡೆಯುತ್ತಿದ್ದೆ. ಮಹಲು, ಉದ್ಯಾನವನ ಹೀಗೆ ಆಯಾ ದೃಶ್ಯಕ್ಕೆ ತಕ್ಕಂತೆ ಪರದೆಗಳನ್ನು ಕಟ್ಟಿರುತ್ತಾರೆ. ಒಂದೊಂದು ಪರದೆಗೂ ನಿರ್ದಿಷ್ಟ ಅಂತರವಿರುತ್ತದೆ. ಇದೆಲ್ಲ ನನಗೆ ಗೊತ್ತಿದೆ, ಆದರೆ ಬಂದ ನಿದ್ರೆಗೆ ಗೊತ್ತಿಲ್ಲವಲ್ಲಾ. ಪ್ರೋಕ್ಷಣೆ ಮಾಡಿದರೂ ಮಲಗಿಯೇ ಇದ್ದದ್ದನ್ನು ಕಂಡು, ನಿಂತಿದ್ದ ಚಂದ್ರಮತಿ ಹೆಬ್ಬೆಟ್ಟನ್ನು ಒತ್ತಿ ಹಿಡಿದರು. ಕಿರುಚಿ ಎದ್ದಾಗ, ‘ಮಾತಾಡು.. ನಿನ್ ಮಾತು ಆಡು’ ಎಂದ ಅವರು ನನಗೀಗಲೂ ನೆನಪಿದ್ದಾರೆ. ಧ್ವನಿ ಕೇಳುತ್ತಿತ್ತೇ ಹೊರತು ಒಂಚೂರು ಬಾಯಾಡುತ್ತಿರಲಿಲ್ಲ. ಎದ್ದು, ‘ಅಪ್ಪ, ಅಮ್ಮ’ ಎಂದು ಅವರನ್ನು ತಬ್ಬಿದೆ.

(ಹಿಂದಿನ ಕಂತು: ಹೊಸ ಬದುಕಿಗೆ ಬಿದ್ದ ಬುನಾದಿ)

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ