ಪರಪಂಚ
ನನ್ನಪ್ಪ ಗುಂಪಿನೊಳಗಿದ್ದೂ ಗುಮ್ಮನಂತೆ
ಮಾತಿನೊಳಗಿದ್ದೂ ಮೌನಿಯಂತೆ
ಪಾಲ ಬಿಟ್ಟರೆ
ಚಾವಡಿ ಚಾವಡಿ ಬಿಟ್ಟರೆ
ಬಸತೀ ಮರದ ಕೆಳಗೆ
ಅಂಡೂರಿ ಕೂತು
ಅಡ್ಡಾಡುವವರ ಕಾಣುತ್ತಿದ್ದಾನೆ
ದೊಡ್ಡಾಳು
ನಮ್ಮೂರ ಕೋಮುದಳ್ಳುರಿಯಲ್ಲಿ
ಅಟ್ಟಿಯಟ್ಟಿಯ
ಗಂಡಾಳುಗಳ ಗೋರುತ್ತಿದ್ದ
ಪೋಲೀಸಿನವಗೆ
ಚಂಗು ಚಂಗನೆ ಚಿಮ್ಮಿ ದಂಗುದೊಡಿಸಿದ್ದ
ನಿಜದೆದ್ದಾಳು
ಕರಕುರುಚಲು ಗಡ್ಡ
ಕೆತ್ತಿದ ತೆವರಂತಹ ಮೀಸೆ
ಬಲಿತ ಪೊರೆ ಹೊದ್ದ
ಕಣ್ಣಗುಡ್ಡೆಗಳು
ಕಾಲದ ಕಂಗಳ
ಅಟಾಟೋಪಕೆ ಸಿಕ್ಕ
ರಸಾಲಗದ್ದೆಯಂತಹ ತಲೆಗೂದಲು
ಅದೇನ
ಪ್ರೀತಿಯೋ ಜಿಗುಪ್ಸೆಯೋ
ಗರಿಗರಿ ಅಂಗಿ
ಟ್ರಂಕಿನಲ್ಲಿ ಮೆದೆ ಬಿದ್ದಿದ್ದರೂ
ಉಡುವುದು ಮಾತ್ರ ಸವಸವಕಲನ್ನೇ
ಹೊಸವಕ್ಕೆ
ಅದುರದುರುವ ಆತನಸ್ತ
ಕಂಡು ನಿಜ
ಟಾಣಿಕ್ಕಿನಾಸಾಮಿ ಎನಿಸಿದರದು
ಮಿಥ್ಯ
ಪ್ಯಾಕಿಟ್ಟ ಕಚ್ಚಿ
ಸುಕ್ಕ ಮುಕ್ಕಳಿಸಿದರೂ
ಹಾಳಾದ್ದು ನಿಲುವಲ್ಲುದು
ನನ್ನಪ್ಪ
ರಾಮ ಸೀತಾಫಲ
ಒರಟು ಹುಳೀಹಸಿ
ಬೆಳಗೋಡಿ ಕಪ್ಪೇರಿದರೆ
ರಪ್ಪೆನಿಸುವ ಹಿಗ್ಗು ನಮಗೆ
ಆತ ಬರಿಗೈನವನಲ್ಲ
ನಿದ್ದೆ ಚಿತ್ತಲ್ಲಿ
ಅಪ್ಪಿ ತಪ್ಪಿ ನನ್ನ ಕೈಯೋ
ಕಾಲೋ ಸಿಕ್ಕರೆ ಹರೋಹರ
ಎಂದೆನ್ನುವ ಚಟಾಕು
ನಿಲ್ಲಿಸಿದ ಇಲಿ ಹೆಗ್ಗಣಗಳ
ಹೃದಯಗಳೆಷ್ಟೋ
ಹೀಗೆ ತೇರಿನಬ್ಬ
ಅವ್ವನವ್ವನಲ್ಲಿ ಉಂಡು ಕೊಂಡು
ಹಿಂಡಾಗಿ ಹರಿದಾಗ
ಕಾದು ಕಸಬರಳಲ್ಲೇ ಕುಟ್ಟಿದ್ದ
ಕಡುಕೋಪಿಷ್ಟ
ನಾ ಉಚ್ಚೆಯಿಂದ ಅಜ್ಜಿಹೋದದ್ದು
ಲೆಕ್ಕವೇ ಇಲ್ಲ
ಹೊತ್ತವನಲ್ಲ
ಹೆತ್ತವಳಂತೆ ಹೊಣೆಗಾರಿಕೆಯ
ನಿಭಾಯಿಸಿದವನೂ ಅಲ್ಲಿ
ಅಕ್ಕಂದಿರ ಅಷ್ಟಿಷ್ಟು ಅಸಹನೆಗೆ
ಇದಿಷ್ಟೇ ಮೂಲ
ನಿಚ್ಚ ಸ್ವದೇಹದೊಡನೇ
ಕಾದಾಡಿ ಬೆವರ
ಬಸಿಯುತ್ತಿದ್ದ ಅಂದಿನ
ಗಾರೇಮೇಸ್ತ್ರಿ ಶ್ರಮಜೀವಿ
ಜೇಬು ಹೊಕ್ಕ ಮರಳುಗಳ
ಒದರಿ ಚೆಲ್ಲಿ
ಲೆಕ್ಕ ಚುಕ್ತ ಮಾಡುತ್ತಿದ್ದ
ಚಿತ್ರಗಳು ಇನ್ನೂ
ಅಂತೆಯೇ ಹರಳುಗಟ್ಟಿವೆ
ನನ್ನಪ್ಪ
ನನ್ನೊಳಗೆ
ಛಲ ನಿಯತ್ತು
ಸ್ವಾಭಿಮಾನ ಬಿತ್ತಿದ ನನ್ನವ್ವ
ಇಷ್ಟೆಲ್ಲಾ ಮಾಡಿ
ಅವ್ವಳೆದುರು ಸೋತು
ಮಂಕಾಗಿ
ಪಾಲ ಬಿಟ್ಟರೆ
ಚಾವಡಿ ಚಾವಡಿ
ಬಿಟ್ಟರೆ ಬಸದೀ ಮರದ
ಕೆಳಗೆ ಅಂಡೂರಿ ಕೂತು
ಹಬ್ಬಹರಿದಿನಕ್ಕೆಂದು ಬರುವ
ಮಕ್ಕಳನ್ನೇ ಕಾಣುತ್ತಿದ್ದಾನೆ
ನನ್ನ ಯಣುದ್ ಮ್ಯಾಲ
ಇಡದ್ನ ಈಗ್ಲೆ ಇಡಕಾಗ್ದ
ಎಂದುಸುರಿ
ಮಕ್ಕಳ ಕೈಯನ್ನೇ
ದಿಟ್ಟಿಸುತ್ತಿದ್ದಾನೆ
ನನ್ನಪ್ಪ
ಕುಡಿದರೆ ತೊಂಬತ್ತು
ಹೆಚ್ಚಾದರೆ ನೂರೆಂಬತ್ತು
ಉಂಡರೆ ಉಂಡ
ಮಲಗಿದರೆ ಮಲಗಿದ

ಡಾ. ದಿಲೀಪ್ ಎನ್ಕೆ ಚಾಮರಾಜನಗರದ ಕೊಳ್ಳೇಗಾಲದವರು. ಋತುಮಾನಕ್ಕಷ್ಟೇ ಪ್ರೀತಿ (ಕವನ ಸಂಕಲನ), ಬಲಿಷ್ಠ (ಕಥಾ ಸಂಕಲನ), ಚೆಗ್ಗಿ- ಮಾರಿಕುಣಿತದ ಸೊಲು (ಕವನ ಸಂಕಲನ) ಇವರ ಪ್ರಕಟಿತ ಕೃತಿಗಳು. “ಕನ್ನಡ ದಲಿತ ಕಥಾಸಾಹಿತ್ಯ : ಅಕ್ಷರಸ್ಥ ದಲಿತರ ತಲ್ಲಣಗಳು” ಇವರ ಪಿ.ಎಚ್.ಡಿ ಮಹಾಪ್ರಬಂಧ
