Advertisement
“ಡೆಸರ್ಟ್ಸ್‌” ಮಾತ್ರ ಬೇಡಪ್ಪ….: ದರ್ಶನ್‌ ಜಯಣ್ಣ ಸರಣಿ

“ಡೆಸರ್ಟ್ಸ್‌” ಮಾತ್ರ ಬೇಡಪ್ಪ….: ದರ್ಶನ್‌ ಜಯಣ್ಣ ಸರಣಿ

ಈ ಪ್ರಯಾಣದ ನಡುವೆಲ್ಲಾ ನನ್ನನ್ನು ಕಾಡಿದ ವಿಷಯ ಮಧ್ಯದಲ್ಲೆಲ್ಲೋ ಗಾಡಿ ಪಂಕ್ಚರ್ ಆದರೆ ಏನು ಮಾಡುವುದು? ಎಸಿ ಕೈಕೊಟ್ಟರೆ ಹೇಗೆ ಸಂಭಾಳಿಸುವುದು? ಮರಳ ಮಳೆ ಬಂದು ದಾರಿ ಕಾಣದಾದರೆ ಏನು ಗತಿ, ಇತ್ಯಾದಿ. ಹಾಗೇನೂ ಆಗದಿದ್ದರೂ ರಿಯಾದ್ ತಲುಪುವವರೆಗೂ ಮತ್ತು ಎರಡು ದಿನದ ನಂತರ ವಾಪಾಸು ಬರುವಾಗಲೂ ನನ್ನನ್ನು ಬಿಟ್ಟು ಬಿಡದೆ ಕಾಡಿದ ಪ್ರಶ್ನೆಗಳು ಇವು. ದಾರಿ ಅತ್ಯಂತ ಬ್ಯುಸಿಯಾಗಿದ್ದರೂ, ಅಲ್ಲಲ್ಲಿ ಹತ್ತಾರು ಕಿಲೋಮೀಟರ್‌ಗಳ ನಂತರವೇ ಪೆಟ್ರೋಲ್, ತಿಂಡಿ ತಿನಿಸು, ಪಂಕ್ಚರ್ ಅಂಗಡಿ ಮತ್ತು ಇನ್ನಿತರೆ ಅಂಗಡಿಗಳು ನಿಗದಿತ ಜಾಗದಲ್ಲಿ ಮಾತ್ರವೇ ಇರುವುದು ಪರಿಸ್ಥಿತಿಯನ್ನ ಇನ್ನಷ್ಟು ಬಿಗಡಾಯಿಸಿತ್ತು.
ದರ್ಶನ್‌ ಜಯಣ್ಣ ಬರೆಯುವ “ಸೌದಿ ಡೇಟ್ಸ್”‌ ಸರಣಿಯ ಮೂರನೆಯ ಬರಹ

ಒಮ್ಮೆ ಬೆಂಗಳೂರಿನ ಹೋಟೆಲ್ ಒಂದರಲ್ಲಿ ಊಟ ಮಾಡುವಾಗ ಅಲ್ಲಿನ ಸರ್ವರ್ ಒಬ್ಬರು “ದೆಸೆರ್ಟ್ಸ್ ಏನಾದ್ರು ಬೇಕಾ ಸಾರ್?” ಎಂದು ಕೇಳಿದಾಗ ನಾನು ತಮಾಷೆಗೆ “ಅಯ್ಯೋ ಬೇಡಾ ರೀ, ನೋಡಿ ನೋಡಿ ಸಾಗಾಗಿದೆ!” ಅಂದೆ, ಅವರಿಗೆ ಅರ್ಥವಾಗಲಿಲ್ಲ. ನನ್ನ ಹೆಂಡತಿಗೆ ಬಿಟ್ಟು ಮತ್ಯಾರಿಗೂ ಇದು ಅರ್ಥವಾಗಲಿಲ್ಲ ಅದು ಬೇರೆಯ ಮಾತು.

ಇದನ್ನು ಹೇಳಿದ ಕಾರಣವೆಂದರೆ ಸೌದಿಗೆ ಬಂದು ಐದು ತಿಂಗಳಿಗೆ ಸೆಕೆಂಡ್ ಹ್ಯಾಂಡ್ ಕಾರ್ ಒಂದನ್ನು ಖರೀದಿಮಾಡಿದ್ದೆ. ಇಲ್ಲಿ ನಮ್ಮ ಡ್ರೈವಿಂಗ್ ಲೈಸೆನ್ಸ್ ‘ವ್ಯಾಲಿಡ್ʼ ಇಲ್ಲವಾದ್ದರಿಂದ, ಮೊದಲಿಂದ ಲರ್ನಿಂಗ್ ಮತ್ತು ಡ್ರೈವಿಂಗ್ ಲೈಸೆನ್ಸ್ ಮಾಡಿಸಬೇಕಿತ್ತು. ಅದಕ್ಕಾಗಿ 20-22 ಕ್ಲಾಸು ಡ್ರೈವಿಂಗ್ ತರಬೇತಿ ಪಡೆಯಬೇಕು, ಅದರ ನಂತರ ಪರೀಕ್ಷೆ.
ಇದನ್ನು ಮಾಡಿಸುವುದರೊಳಗೆ ಮತ್ತು ಪಾಸ್ ಆಗುವುದರೊಳಗೆ ಜನ್ಮ ಜಾಲಾಡುತ್ತಾರೆ (ಲೋಕಲ್‌ನವರಿಗೆ ಈ ಪ್ರಕ್ರಿಯೆ ಸುಲಭ). ವಾಹನ ಚಾಲನೆ ಕಷ್ಟ ಅಲ್ಲದಿದ್ದರೂ ಇಲ್ಲಿಯ ರೀತಿ, ನೀತಿ, ತರಬೇತಿ ನಿಮ್ಮ ‘ಈಗೋ’ವನ್ನ ಸಂಪೂರ್ಣವಾಗಿ ಭಸ್ಮವಾಗಿಸದೇ ಬಿಡುವುದಿಲ್ಲ. ಹಾಗಾಗಿ ನನಗೆ ಲೈಸೆನ್ಸ್ ಸಿಕ್ಕಿ ಕಾರು ಕೊಂಡಮೇಲೆ ನಾನು ಆಕಾಶದಲ್ಲಿದ್ದೆ!

ಇನ್ನೊಂದು ಮಾತು ಹೇಳಬೇಕು. ಇಲ್ಲೆಲ್ಲಾ ಭಾರತದಂತೆ ಅಥವಾ ಇತರೆ ಐರೋಪ್ಯ ರಾಷ್ಟ್ರಗಳಂತೆ, ಜಪಾನ್ ಕೊರಿಯಾ ದೇಶಗಳಂತೆ, ಸಾರ್ವಜನಿಕ ಸಾರಿಗೆ ಇಲ್ಲ. ಕಾರ್ ಕಾರ್ ಎಲ್ನೋಡಿ ಕಾರ್ ಅನ್ನುವ ಪರಿಸ್ಥಿತಿ, ಕಾರ್ ಇದ್ದರೆ ಸ್ವರ್ಗ ಇಲ್ಲದಿದ್ದರೆ ನರಕ.

ಇಲ್ಲಿನ ಬಿಸಿಲಿಗೆ, ಉಷ್ಣಾಂಶಕ್ಕೆ, ಹೊರಗಡೆ ಕಾಲಿಡಲು ಆಗದು, ಹಾಗಾಗಿಯೇ ಬೇಸಿಗೆಯ ಐದಾರು ತಿಂಗಳುಗಳಲ್ಲಿ ವಾಕಿಂಗ್ ಜಾಗಿಂಗ್ ಎಲ್ಲ ಅಸಾಧ್ಯ. ಅಷ್ಟೇ ಏಕೆ? ಕೆಲವು ಅಪಾರ್ಟ್ಮೆಂಟ್ ಕಟ್ಟಡಗಳಲ್ಲಿ ಕಿಟಕಿಗಳನ್ನೂ ಯಾರೂ ಆವಾಗ ತೆಗೆಯುವುದಿಲ್ಲ. ಬ್ರಹ್ಮಾಂಡ ಬಿಸಿಲಿದ್ದರೂ ಇಲ್ಲಿರುವವರಿಗೆಲ್ಲಾ ಯಾವಾಗಲೂ Vitamin-D ಕೊರತೆ ಯಾವಾಗಲೂ ಕಾಡುತ್ತದೆ. ಹಾಗಾಗಿ ವಾರ್ಷಿಕ ತಪಾಸಣೆಯಲ್ಲಿ ಡಬ್ಬಗಟ್ಟಲೆ ಸಪ್ಲಿಮೆಂಟ್ಸ್ ಕೊಡುತ್ತಾರೆ.

ಹಾಗಿದ್ದಾಗ, ಕಾರು ಬಂದಮೇಲೆ ನಾನಿರುವ ಜುಬೈಲ್ ಇಂಡಸ್ಟ್ರಿಯಲ್ ನಗರದಿಂದ ಸೌದಿಯ ರಾಜಧಾನಿ ರಿಯಾದಿಗೆ ಹೋಗುವುದೆಂದು ನಾನು ನನ್ನ ಹೆಂಡತಿ ತೀರ್ಮಾನಿಸಿದೆವು. ಸೆಪ್ಟೆಂಬರ್ ಕಡೆಯ ವಾರ ಬಿಸಿಲು ಅಥವಾ ಟೆಂಪರೇಚರ್ 40 ರ ಆಸುಪಾಸಿನಲ್ಲಿತ್ತು. ಮೊದಲ ಬಾರಿಗೆ ರಿಯಾದಿಗೆ ಹೋಗುತ್ತಿರುವುದರಿಂದ ದಾರಿಗಾಗಿ ಗೂಗಲ್ ಮ್ಯಾಪ್ಸ್‌ನ ಮೊರೆಹೋದೆ. ನಮ್ಮ ಮನೆಯಿಂದ ಎಡ ಬಲ ಎಡ ಬಲ ಅಂತ ಹೇಳಿದ ಅದು ಒಂದು ನಾಲ್ಕೈದು ಕಿಲೋಮೀಟರ್ ಬಂದಮೇಲೆ “ಕಂಟಿನ್ಯೂ ಸ್ಟ್ರೈಟ್ ಫಾರ್ ಅನದರ್ 475 ಕಿಲೋಮೀಟರ್” ಅಂದು ಬಿಡೋದಾ?!

ನಾನೂ ನನ್ನ ಹೆಂಡತಿ ಮೊದಲಿಗೆ ಆಶ್ಚರ್ಯವಾದರೂ ನಂತರ ನಗಲಾರಂಭಿಸಿದೆವು. ಕೇರಳದ ಟೂರಿಗೆ ಹೋದಾಗ ಮುನ್ನಾರ್, ಅಲೆಪ್ಪಿ, ತೆಕಡಿ ಭಾಗದಲ್ಲಿ ಅಲಪ್ಪಿಯ ಬಳಿ ಬಂದಾಗ ನಮ್ಮ ಡ್ರೈವರ್ “ಇಡೀ ಕೇರಳದಲ್ಲಿ ಇದೊಂದೇ ರೋಡ್ ಸಾರ್ ಇಷ್ಟು ದೂರ ನೇರ ಇರೋದು” ಅಂದಿದ್ದ. ಅವನನ್ನು ಇಲ್ಲಿಗೆ ತಂದು ಬಿಟ್ಟರೆ ಹೇಗೆ ಎಂದು ನಾವು ಯೋಚಿಸಿದೆವು. ಅದರ ಜೊತೆಗೆ ಇನ್ನು 475 ಕಿಲೋಮೀಟರ್ ಗೂಗಲ್ ನೋಡಬೇಕಾಗಿಲ್ಲ, ಮೊಬೈಲ್ ಚಾರ್ಜ್‌ಲ್ಲಿ ಇಡಬೇಕಾಗಿಲ್ಲ, ಕಳೆದು ಹೋಗುವ ಸಾಧ್ಯತೆಯಿಲ್ಲ ಎಂಬ ಸಮಾಧಾನ ಆಯ್ತು.

ಕೆಲವೇ ಕಿಲೋಮೀಟರ್ ಬಂದಮೇಲೆ ಬೃಹತ್ ಮರಳ ರಾಶಿ, ಮರಳ ಕಡಲು ಎದಿರಾಯ್ತು. ಅದೆಷ್ಟು ಅನ್ನುವುದನ್ನು ಪದಗಳಲ್ಲಿ ಹೇಳಲು ಸಾಧ್ಯವಾಗದಷ್ಟು, ನೋಡುವವರೆಗೂ ಮರಳೇ, ಎರಡೂ ಕಡೆ, ಕಾಲು ಭಾಗ ರೋಡಿನ ಮೇಲೆ, ಗಾಳಿಯಲ್ಲಿ ಎಲ್ಲ ಕಡೆ. ಸ್ನೇಹಿತರ ಸಲಹೆಯಂತೆ ಮಧ್ಯಾಹ್ನ ಮೂರಕ್ಕೆ ಮನೆ ಬಿಟ್ಟದ್ದರಿಂದ ಬಿಸಿಲು ಸ್ವಲ್ಪ ಕಡಿಮೆ ಇತ್ತಾದರೂ ಅದು ಸಹಿಸಲು ಅಸಾದ್ಯವಾಗಿತ್ತು. ಕಾರಿನ ಏಸಿ ಪೂರ್ಣ ಕೆಲಸ ಮಾಡಲೇಬೇಕಿತ್ತು. ಬಿಸಿಲು ಸ್ವಲ್ಪ ಕಡಿಮೆಯಾಗುತ್ತಾ ಬರುತ್ತಿದ್ದ ಹಾಗೆ ಚಲಾವಣೆ ಸ್ವಲ್ಪ ಸಹ್ಯವಾಯ್ತು. ಹಲವು ಬಗೆಯ ಮರಳು, ಹಲವು ಬಣ್ಣದ್ದು, ಮಾದರಿಯದ್ದು, ಬೀಸುವ ಗಾಳಿಗೆ ಬೇಯುವ ಬಿಸಿಲಿಗೆ, ಸೃಷ್ಟಿಯ ಅಪೂರ್ವ ಕಲಾಕೃತಿಯಂತೆ ವಿನ್ಯಾಸಗೊಂಡ ಮರಳು, ಬೆಟ್ಟದಷ್ಟು, ಗುಡ್ಡದಷ್ಟು, ಗಗನಕ್ಕೆ ಮುಟ್ಟುವಷ್ಟು. ಹೀಗೇ ಸಂಜೆಯಾಗುವಾಗ, ಆಗಸದಲ್ಲಿ ಬಣ್ಣಗಳು ಮೂಡತೊಡಗಿದವು. ಸೂರ್ಯ ಸ್ವಲ್ಪ ಸಹನೆ ತಂದುಕೊಂಡಮೇಲೆ ಮರಳು ತನ್ನ ಬಣ್ಣ ಬದಲಾಯಿಸಲು ಶುರು ಹಚ್ಚಿತು. ದೂರದಲ್ಲಿ ಭೂಮಿ ಆಕಾಶ ಸೇರುವಲ್ಲಿ, ಮರಳು ಆಗಸ ಲೀನವಾಗಿ, ಕಡಲು ನೀಲಿಯಾಕಾಶದಂತೆ, ಆದರೆ ಅದರ ತದ್ವಿರುದ್ಧವಾದ ರೂಪ ಪಡೆದುಕೊಳ್ಳುತ್ತಿದ್ದು, ಸೂರ್ಯ ನಿಧಾನವಾಗಿ ಕಂತುತಿದ್ದ. ಅಲ್ಲಲ್ಲಿ ಅರಬ್ಬರು ಹೈವೇ ಬದಿಯಲ್ಲಿ, ಅಗಲವಾದ ರಸ್ತೆ ಇರುವಲ್ಲಿ, ಎಲ್ಲಂದರಲ್ಲಿ ತಮ್ಮ ಬೃಹತ್ ಕಾರುಗಳನ್ನು ನಿಲ್ಲಿಸಿ, ತಮ್ಮಲ್ಲಿದ್ದ ತಾವು ಯಾವತ್ತೂ ಒಯ್ಯುವ ಪ್ರಾರ್ಥನೆಯ ಕಿರು ಕಾರ್ಪೆಟ್ಟುಗಳನ್ನು ರಸ್ತೆ ಬದಿಗಳಲ್ಲಿ ಹಾಸಿ ಪಶ್ಚಿಮಾಭಿಮುಖವಾಗಿ (ಮೆಕ್ಕಾಗೆ ಮುಖಮಾಡಿ – ಸೂರ್ಯ ಮುಳುಗುವ ದಿಕ್ಕಿಗೆ) ಪ್ರಾರ್ಥನೆ ಮಾಡಲು ಶುರುಮಾಡಿದ್ದರು. ನಮಗೆ ಕಾರಿನ ‘ಏಸಿ’ಯ ಬಗ್ಗೆ ಭಯಂಕರ ತಕರಾರಿತ್ತು.

ಅರಬ್ಬರಿಗೆ ಮರುಭೂಮಿ ದೈತ್ಯ ಶಕ್ತಿಯಾಗಿ, ಸವಾಲಾಗಿ, ತಾವೇ ಪಳಗಿಸಿಕೊಳ್ಳಬೇಕಾದ ಅನಿವಾರ್ಯತೆಯಾಗಿ, ತಂಪು ಕಾಲದಲ್ಲಿ ಚಂದ್ರ ತಾರೆಗಳ ಸಮ್ಮುಖದಲ್ಲಿ ತಾಯಿಯಾಗಿ, ಓಯಸಿಸ್‌ನ ನಡುವೆ ಬೆಳೆವ ಖರ್ಜೂರದ ಮರದ ನೆರಳಲ್ಲಿ, ನೀರಿನ ಬುಗ್ಗೆಯಲ್ಲಿ ಅಲ್ಲಾಹುವಿನ ಕರುಣೆಯಾಗಿ ಕಾಯುತ್ತದೆ ಅನ್ನಿಸುತ್ತದೆ. ಅಲೆಮಾರಿಯಾದ ಅವರನ್ನ ‘ಬೆಡ್ವಿನ್ʼ ಟ್ರೈಬ್ (Bedouin tribes) ಅನ್ನುತ್ತಾರೆ. ಇವುಗಳಲ್ಲಿ ನೂರಾರು ಸಹ ಪಂಗಡಗಳಿವೆ. ನಮ್ಮಲ್ಲಿ ಒಂದು ಧರ್ಮದ ಒಳಗಿರುವ ನೂರಾರು ಜಾತಿಗಳ ಹಾಗೆ.

ಒಂದು ಕಾಲದಲ್ಲಿ ಮರಳುಗಾಡಿನ ಹಡಗು ಎಂದು ಕರೆಯಲ್ಪಡುತ್ತಿದ್ದ ಒಂಟೆಗಳೇ ಇಲ್ಲಿ ಸಾಮಾನು ಸರಂಜಾಮುಗಳನ್ನು ಸಾಗಿಸಲು ನೆರವು ಕೊಟ್ಟು, ನಾಲ್ಕು ಕಾಸು ಸಂಪಾದಿಸಲು ನೆರವಾದದ್ದು. ಮಕ್ಕಳಿಗೆ ಹಾಲು, ಸತ್ತಾಗ ಮಾಂಸವಾಗಿ ಪೊರೆದದ್ದು ಮತ್ತು ಇನ್ನೂ ಹಲವೆಡೆಯಲ್ಲಿ ಪೊರೆಯುತ್ತಿರುವುದೂ. ಇಂದಿಗೂ ಸೌದಿಯ ಅಥವಾ ಮಧ್ಯ ಪ್ರಾಚ್ಯದ ಅರಬ್ಬರಲ್ಲಿ ಐದು ಪ್ರತಿಶತ ಜನ ಹೀಗೆಯೇ ಅಲೆಮಾರಿ ಬದುಕನ್ನು ನಡೆಸುತ್ತಾರಂತೆ!

ಇದು ಈ ದಿನಗಳಲ್ಲಿ ಬದಲಾಗಿದೆಯಾದರೂ ಊರಿನಿಂದ ಹೊರ ಬಂದೊಡನೆ ನಿಮಗೆ ಬೇರೆ ಬೇರೆ ಬಣ್ಣದ, ಎತ್ತರ, ದಪ್ಪ ಮುಂತಾದ ರೂಪವುಳ್ಳ ನೂರಾರು ಒಂಟೆಗಳ ಕ್ಯಾಂಪುಗಳು ಕಾಣಸಿಗುತ್ತವೆ. ಅವನ್ನು ಅರಬ್ಬನೋ, ಸುಡಾನಿಯೋ ಒಬ್ಬ, ನೋಡಿಕೊಳ್ಳುತ್ತಿರುತ್ತಾನೆ. ದೊರದಲೆಲ್ಲೋ ಅವನ ಹಳೆಯ ಪಿಕಪ್ ಕಾರ್ ಇದ್ದರೆ, ಮಧ್ಯದಲ್ಲಿ ಒಂದು ಟೆಂಟು, ಅದರ ಸುತ್ತ ಒಣಗಿದ ಹುಲ್ಲು, ಮತ್ತೊಂದು ನೀರಿನ ಟ್ಯಾಂಕಿ ಇರುತ್ತದೆ. ಸ್ವಲ್ಪ ಆಧುನಿಕತೆಯ ಸ್ಪರ್ಶ ಇದೆ ಎನ್ನುವುದು ಬಿಟ್ಟರೆ ಸಾವಿರಾರು ವರ್ಷಗಳಿಂದ ಅರಬ್ಬರ ಕುಟುಂಬಗಳ, ಅದರಲ್ಲೂ ಬೆಡ್ವಿನ್‌ಗಳ ಮೂಲ ಕಾಯಕ ಇದೇ. ತಂಪು ಮತ್ತು ನೀರಿದ್ದಲ್ಲಿ ಕ್ಯಾಂಪ್ ಮಾಡುವುದು, ಅಲ್ಲೊಂದೆರಡು ತಿಂಗಳು ಕುಟುಂಬ ಸಮೇತ ಇದ್ದು ಹವಾಮಾನ ಬದಲಾದೊಡನೆ ಮತ್ತೊಂದು ಕಡೆಗೆ ಹೋಗುವುದು ಅವರ ಅಂದಿನ ಜೀವನ ಪದ್ಧತಿಯಾಗಿತ್ತಂತೆ. ಒಂದು ಬೆಡ್ವಿನ್ (Bedouin) ಕುಟುಂಬದಲ್ಲಿ ನೂರಾರು ಜನ ಇರಬಹುದು. ಆದರೆ ಅವರೆಲ್ಲರೂ ರಕ್ತ ಸಂಬಂಧಿಗಳೇ ಆಗಿರುತ್ತಾರೆ, ಅಷ್ಟರ ಮಟ್ಟಿಗೆ ಒಂದು ಟ್ರೈಬ್ ಯಾವಾಗಲೂ ಒಟ್ಟಿಗೆ ಇರುತ್ತದೆ. ಅವರ ಜೊತೆಗೆ ಕುರಿ, ಮೇಕೆ, ಕೆಲವೊಂದು ಕಡೆ ಕೋಳಿ ಸಹ ಇರುತ್ತವೆ ಮತ್ತು ಅವೇ ಅವರಿಗೆ ಬೇಕಾದ ಅವಶ್ಯ ಆಹಾರ ಒದಗಿಸುತ್ತವೆ. ನಾವು ರಿಯಾದಿಗೆ ಹೋಗುವಾಗಲೇ ಮೊದಲಬಾರಿಗೆ ಇಂತಹ ಕ್ಯಾಂಪ್‌ಗಳನ್ನು ನೋಡಿದ್ದು. ಕೆಲವೊಂದರಲ್ಲಿ ಒಂಟೆ ಕಾಯುವವನ ಜೊತೆಗೆ ಒಂದೆರಡು ನಾಯಿಗಳೂ ಇದ್ದು, ಅವು ಈ ಇತರೆ ಸಾಕು ಪ್ರಾಣಿಗಳು ಆಚೀಚೆ ಹೋಗದಂತೆ ನೋಡಿಕೊಳ್ಳುತ್ತಿದ್ದವು.

ಈ ಪ್ರಯಾಣದ ನಡುವೆಲ್ಲಾ ನನ್ನನ್ನು ಕಾಡಿದ ವಿಷಯ ಮಧ್ಯದಲ್ಲೆಲ್ಲೋ ಗಾಡಿ ಪಂಕ್ಚರ್ ಆದರೆ ಏನು ಮಾಡುವುದು? ಎಸಿ ಕೈಕೊಟ್ಟರೆ ಹೇಗೆ ಸಂಭಾಳಿಸುವುದು? ಮರಳ ಮಳೆ ಬಂದು ದಾರಿ ಕಾಣದಾದರೆ ಏನು ಗತಿ, ಇತ್ಯಾದಿ. ಹಾಗೇನೂ ಆಗದಿದ್ದರೂ ರಿಯಾದ್ ತಲುಪುವವರೆಗೂ ಮತ್ತು ಎರಡು ದಿನದ ನಂತರ ವಾಪಾಸು ಬರುವಾಗಲೂ ನನ್ನನ್ನು ಬಿಟ್ಟು ಬಿಡದೆ ಕಾಡಿದ ಪ್ರಶ್ನೆಗಳು ಇವು. These are survival questions in a desert ಕೂಡ! ದಾರಿ ಅತ್ಯಂತ ಬ್ಯುಸಿಯಾಗಿದ್ದರೂ, ಅಲ್ಲಲ್ಲಿ ಹತ್ತಾರು ಕಿಲೋಮೀಟರ್‌ಗಳ ನಂತರವೇ ಪೆಟ್ರೋಲ್, ತಿಂಡಿ ತಿನಿಸು, ಪಂಕ್ಚರ್ ಅಂಗಡಿ ಮತ್ತು ಇನ್ನಿತರೆ ಅಂಗಡಿಗಳು ನಿಗದಿತ ಜಾಗದಲ್ಲಿ ಮಾತ್ರವೇ ಇರುವುದು ಪರಿಸ್ಥಿತಿಯನ್ನ ಇನ್ನಷ್ಟು ಬಿಗಡಾಯಿಸಿತ್ತು (ಮೊದಲ ಬಾರಿಗೆ ಹೀಗೆ ಅನ್ನಿಸಿತು!).

ನಾನೊಬ್ಬನೇ ಇದ್ದಿದ್ದರೆ ಇಷ್ಟು ತಲೆ ಕೆಡಿಸಿಕೊಳ್ಳಬೇಕಾದ ಅನಿವಾರ್ಯತೆ ಇರಲಿಲ್ಲ. ನನ್ನ ಹೆಂಡತಿ ಇದ್ದುದ್ದರಿಂದ ಹೀಗೆಲ್ಲಾ ಯೋಚಿಸತೊಡಗಿದ್ದೆ. ಮಹಿಳಾ ಸುರಕ್ಷತೆಯ ದೃಷ್ಟಿಯಿಂದ ಹೇಳುವುದಾದರೆ ಸೌದಿ ಪ್ರಪಂಚದಲ್ಲಿ ಬಹುಶಃ ಟಾಪ್ 5 ರಲ್ಲಿ ಬರಬಹುದು, ಕಾರಣ ಇಲ್ಲಿಯ ಕಠಿಣ ಕಾನೂನು ಮತ್ತು ಪಾಲನೆ. ಆದರೆ ಇಲ್ಲಿನ ಅಸಹನೀಯ ಹವಾಮಾನದ ದೃಷ್ಟಿಯಿಂದ ವಿಷಯ ಬೇರೆಯೇ. ಇಂತಹಾ ಪರಿಸ್ಥಿತಿಯಲ್ಲಿ ಇಲ್ಲಿ ನೆಲೆನಿಂತು ಬಣಗುಟ್ಟುವ ಮರಳಿನ ನಡುವೆ ಸಾಮ್ರಾಜ್ಯಗಳನ್ನು ಕಟ್ಟಿದ ಇವೇ ಬೆಡ್ವಿನ್‌ಗಳ ಬಗ್ಗೆ ಮುಂದೆ ವಿವರವಾಗಿ ಬರೆಯುವೆ.

About The Author

ದರ್ಶನ್ ಜಯಣ್ಣ

ಮೂಲತಃ ಹೊಸದುರ್ಗದ ಹುಟ್ಟೂರಿನವರು. ಬೆಂಗಳೂರಿನ (ಸೌದಿ ಅರೇಬಿಯಾ ಮೂಲದ) ಪೆಟ್ರೋಕೆಮಿಕಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. “ನಾನೊಬ್ಬ ನಾವಿಕ “ (ಕವನ ಸಂಕಲನಗಳು), “ಅಪ್ಪನ ರಾಲೀಸ್ ಸೈಕಲ್” (ಪ್ರಬಂಧಗಳು). ಇವರ ಬರಹಗಳು ಹಲವು ವೆಬ್‌ ಹಾಗೂ ಕನ್ನಡ ದೈನಿಕಗಳಲ್ಲಿ ಪ್ರಕಟವಾಗಿವೆ. ದೇಶ ಸುತ್ತುವುದು, ಚರಿತ್ರೆ ಮತ್ತು ಅರ್ಥಶಾಸ್ತ್ರ ಸಂಬಂಧಿ ವಿಷಯಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ.

1 Comment

  1. Sripal

    Superr maa … love to be on the highway to heaven

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ