Advertisement
ತಬ್ಬಿಬ್ಬಿನ ಚಳಿ, ರಾಜಕೀಯ, ಸುಧಾರಣೆ: ಡಾ. ವಿನತೆ ಶರ್ಮ ಅಂಕಣ

ತಬ್ಬಿಬ್ಬಿನ ಚಳಿ, ರಾಜಕೀಯ, ಸುಧಾರಣೆ: ಡಾ. ವಿನತೆ ಶರ್ಮ ಅಂಕಣ

ಹೀಗೆಲ್ಲಾ ಚಳಿಯೆನ್ನುವುದು ಮನುಷ್ಯರಿಗೆ ಅನಿಸಿದರೆ ಇನ್ನು ಹೂ, ಹಣ್ಣು, ದುಂಬಿ, ಚಿಟ್ಟೆ ಹಕ್ಕಿಗಳಿಗೆ ಏನನ್ನಿಸಬಹುದು? ನಮ್ಮನೆಯಲ್ಲಿ ತರಾವರಿ ಹೂಗಳು ನಲಿದಾಡುತ್ತಿವೆ. ಇವುಗಳಲ್ಲಿ ಕೆಲವು ಬೇಸಿಗೆಯಲ್ಲಿ ಆ ಬಿರುಬಿಸಿಲಿನ ತಾಪಕ್ಕೆ ಮುದುಡಿ ಅದೆಲ್ಲೂ ಅಡಗಿರುತ್ತವೆ. ಸ್ವಲ್ಪ ಬಿಸಿಲು ಕಡಿಮೆಯಾಗಿ ತಂಪು ಬಂತೆಂದರೆ ಇವಕ್ಕೆ ಬಲು ಖುಷಿ. ಹಾ ನಾವಿದ್ದೀವಿ ಎನ್ನುತ್ತಾ ಗಿಡಗಳ, ಬಳ್ಳಿಗಳ, ಮರಗಳ ಮುಡಿಯೇರುತ್ತವೆ. ಇನ್ನೂ ಕೆಲವು ಹೂ, ಹಣ್ಣುಗಳಿಗೆ ತಬ್ಬಿಬ್ಬು. ಏಕೆಂದರೆ ನಮ್ಮ ರಾಣಿರಾಜ್ಯದಲ್ಲಿ ಇರುವುದು ಹೆಚ್ಚುಕಡಿಮೆ ಭಾರತದ ತಾಪಮಾನ, ಹವಾಮಾನ. ಅಲ್ಲಿನ ವಸಂತಮಾಸ, ಬೇಸಿಗೆ ಇಲ್ಲೂ ಸಲ್ಲುತ್ತದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

ಪ್ರಿಯ ಓದುಗರೆ,

ಅದೇಕೋ ಚಳಿಗಾಲ ಬಂತೆಂದರೆ ಆಸ್ಟ್ರೇಲಿಯಾ ತುಂಬೆಲ್ಲಾ ಗೋಜಲು. ಪ್ರಕೃತಿಗೆ ಅಯೋಮಯ ಮನಸ್ಸು. ಉತ್ತರದ ಉಷ್ಣ ಮತ್ತು ಸಮಶೀತೋಷ್ಣ ಪ್ರದೇಶಗಳಲ್ಲಿ ಹಾ ಚಳಿಯಾ, ಇಲ್ಲವಲ್ಲ ಹಿತವಾದ ಬಿಸಿಲಿದೆ, ಅಂತಾರೆ ಜನ. ನಮ್ಮ ಬ್ರಿಸ್ಬೇನ್ ಸುತ್ತಮುತ್ತಲಂತೂ ಇನ್ನೂ ಶಾರ್ಟ್ಸ್ ಮತ್ತು ಟೀ-ಶರ್ಟ್‌ಗಳಲ್ಲಿ ಜನ ಕಂಗೊಳಿಸುತ್ತಿದ್ದಾರೆ. ಆದರೆ ಮಧ್ಯ ಆಸ್ಟ್ರೇಲಿಯಾದ ಪೂರ್ವತೀರದ ಸಿಡ್ನಿ ನಗರವಾಸಿಗಳನ್ನು ಕೇಳಿದರೆ ಅಯ್ಯೋ ಚಳಿಯಪ್ಪಾ ಅಂತಾರೆ. ಇನ್ನೂ ಸ್ವಲ್ಪ ದಕ್ಷಿಣಕ್ಕೆ ಹೋದರೆ ಮೆಲ್ಬೋರ್ನ್‌ನಲ್ಲಿ ಈಗಾಗಲೇ ನಮ್ಮ ಲಿನೆನ್ ಕಬೋರ್ಡ್‌ನಿಂದ ಎಲೆಕ್ಟ್ರಿಕ್ ಬ್ಲಾಂಕೆಟ್ ಹೊರಬಂದಿದೆ, ಎನ್ನುವವರಿದ್ದಾರೆ. ಹೀಗೆಲ್ಲಾ ಚಳಿಯೆನ್ನುವುದು ಮನುಷ್ಯರಿಗೆ ಅನಿಸಿದರೆ ಇನ್ನು ಹೂ, ಹಣ್ಣು, ದುಂಬಿ, ಚಿಟ್ಟೆ ಹಕ್ಕಿಗಳಿಗೆ ಏನನ್ನಿಸಬಹುದು? ನಮ್ಮನೆಯಲ್ಲಿ ತರಾವರಿ ಹೂಗಳು ನಲಿದಾಡುತ್ತಿವೆ. ಇವುಗಳಲ್ಲಿ ಕೆಲವು ಬೇಸಿಗೆಯಲ್ಲಿ ಆ ಬಿರುಬಿಸಿಲಿನ ತಾಪಕ್ಕೆ ಮುದುಡಿ ಅದೆಲ್ಲೂ ಅಡಗಿರುತ್ತವೆ. ಸ್ವಲ್ಪ ಬಿಸಿಲು ಕಡಿಮೆಯಾಗಿ ತಂಪು ಬಂತೆಂದರೆ ಇವಕ್ಕೆ ಬಲು ಖುಷಿ. ಹಾ ನಾವಿದ್ದೀವಿ ಎನ್ನುತ್ತಾ ಗಿಡಗಳ, ಬಳ್ಳಿಗಳ, ಮರಗಳ ಮುಡಿಯೇರುತ್ತವೆ. ಇನ್ನೂ ಕೆಲವು ಹೂ, ಹಣ್ಣುಗಳಿಗೆ ತಬ್ಬಿಬ್ಬು. ಏಕೆಂದರೆ ನಮ್ಮ ರಾಣಿರಾಜ್ಯದಲ್ಲಿ ಇರುವುದು ಹೆಚ್ಚುಕಡಿಮೆ ಭಾರತದ ತಾಪಮಾನ, ಹವಾಮಾನ. ಅಲ್ಲಿನ ವಸಂತಮಾಸ, ಬೇಸಿಗೆ ಇಲ್ಲೂ ಸಲ್ಲುತ್ತದೆ. ನಮ್ಮನೆಯ ದಾಳಿಂಬೆ ಗಿಡದ ತುಂಬೆಲ್ಲಾ ಹೊಸ ಚಿಗುರು. ಹೋದ ತಿಂಗಳು ಪುಟ್ಟ ಮಾವಿನ ಮರದಲ್ಲಿ ಮತ್ತೊಮ್ಮೆ ಹೊಸಎಲೆಗಳು ಮೂಡಿದ್ದವು. ಸೀಬೆ ಮರದಲ್ಲೂ ಕೂಡ. ಅತ್ತ ಬೇಸಿಗೆಯೂ ಅಲ್ಲ ಇತ್ತ ಚಳಿಗಾಲವೂ ಅಲ್ಲ ಎನ್ನುವ ಈ ಇಕ್ಕಟ್ಟಿನ ತಾಪಮಾನದ ಲಾಭ ಪಡೆಯುವವಳು ನಾನು. ಹೊಸ ಚಿಗುರು, ಹೂ ಸೌಂದರ್ಯ, ಇದೀಗ ಹಣ್ಣಾಗುತ್ತಿರುವ ನಾಟಿ raspberry, ಬಲಿಯುತ್ತಿರುವ ಅವರೆಕಾಯಿಗಳನ್ನು ಸವಿಯುತ್ತಿರುವೆ.

ನನ್ನ ಖುಷಿಯ ಜೊತೆಗೆ ಇತರೆ ಜನರ ಕುಶಲವನ್ನೂ ಗಮನಿಸಬೇಕಲ್ಲವೇ. ನಮ್ಮ ರಾಣಿರಾಜ್ಯದ ಕೆಳಗಿನ ನ್ಯೂ ಸೌತ್ ವೇಲ್ಸ್ ರಾಜ್ಯದ ಕೆಲವೆಡೆ ವಿಪರೀತ ಪ್ರವಾಹ-ನೆರೆ ಬಂದು ಜನರು ಕಂಗೆಟ್ಟಿದ್ದಾರೆ. ಪುನಃ ನೆರೆಯಿಂದ ರಾಡಿಗಟ್ಟಿರುವ ಮನೆ, ಅಂಗಡಿ, ಶಾಲೆಗಳನ್ನು ಬಿಟ್ಟು ಎಲ್ಲೆಲ್ಲೂ ಅರೆಬರೆ ಜೀವನ ಮಾಡುತ್ತಾ ದಿನ ತಳ್ಳುತ್ತಿರುವವರ ಕತೆ ಕೇಳುತ್ತಾ ಬೇಸರವಾಗುತ್ತದೆ. ನಮ್ಮೆಲ್ಲರ ದಿನನಿತ್ಯದ ಕತೆಗಳಿಗೆ ಬೇರೆಯಾಗಿ ನಿಲ್ಲುವುದು ಆ ದೇಶದ ಮೂಲಜನರ ಕತೆಗಳು. Northern Territory ಯ Alice Spring ಊರಿನಲ್ಲಿ ಮತ್ತೊಬ್ಬ ಅಬೊರಿಜಿನಲ್ ಯುವಕನ ಸಾವಾಗಿದೆ. ಅವ ಸತ್ತಿದ್ದು ಪೊಲೀಸ್ ಕಸ್ಟೋಡಿಯಲ್ಲಿ. ಅಲ್ಲಿನ ಸಮುದಾಯವು ಶೋಕಾಚರಣೆಯ ಜೊತೆಗೆ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಜೊತೆಜೊತೆಗೆ, ನಿನ್ನೆ ಸಿಡ್ನಿಯಲ್ಲಿ ನಡೆದ ಸಮಾರಂಭದಲ್ಲಿ ಆಸ್ಟ್ರೇಲಿಯನ್ ಯುದ್ಧಗಳಲ್ಲಿ ಸೇವೆ ಸಲ್ಲಿಸಿದ್ದ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೇಟ್ ದ್ವೀಪವಾಸಿ ಜನಪಂಗಡಗಳ ಯೋಧರಿಗೆ ಗೌರವ ಸಲ್ಲಿಸಿದ್ದಾರೆ. ಈಗಲೂ ಕೂಡ ಅವರ ಅನೇಕ ಯುದ್ಧ-ಯೋಧರ ಹೆಸರುಗಳನ್ನು ದಾಖಲಿಸಿಲ್ಲ. ಈ ಕೆಲಸ ಇಪ್ಪತ್ತೊಂದನೆ ಶತಮಾನದ ಕಾಲು ಭಾಗ ಕಳೆಯುತ್ತಿರುವ ಸಮಯದಲ್ಲಿ ಶುರುವಾಗಿದೆ. ಅವರನ್ನು ಸಮರ್ಪಕವಾಗಿ ಗುರುತಿಸಿ, ಗೌರವ ಸಲ್ಲಿಸಿ ಮರ್ಯಾದೆ ಸೂಚಿಸುವುದನ್ನು ಸಮಾಜ ಒಪ್ಪಿಕೊಳ್ಳುತ್ತಿದೆ. ಆಸ್ಟ್ರೇಲಿಯಾ ಮುಂದುವರೆಯುತ್ತಿದೆ.

ಇದೀಗ ನಾವೆಲ್ಲಾ ಆಸ್ಟ್ರೇಲಿಯಾದಲ್ಲಿ National Reconciliation Week ಆಚರಿಸುತ್ತಿದ್ದೀವಿ. ಈ ಆಚರಣೆಗಳು ಮೇ ತಿಂಗಳ ೨೭ ರಿಂದ ಜೂನ್ ೩ ರ ತನಕ ನಡೆದಿವೆ. ಈ ವರ್ಷದ ಸಂದೇಶ ‘Bridging Now to Next’ – ನಮ್ಮೆಲ್ಲರ ಒಟ್ಟಾರೆ ಗತಕಾಲವನ್ನು ನೆನೆಸಿಕೊಂಡು, ಅವಲೋಕಿಸುತ್ತಾ ಜೊತೆಗೂಡಿ ಮುಂದೆ ಸಾಗೋಣ ಎಂದು ಆಸ್ಟ್ರೇಲಿಯನ್ First Nations ಮೂಲಜನರು ಹೇಳಿದ್ದಾರೆ. ಮೇ ೨೬ ರಂದು ವಾರ್ಷಿಕ Sorry Day. ಅದಾದ ನಂತರ, ೨೭ ರಂದು ನೆನೆಸಿಕೊಂಡಿದ್ದು ಮೂಲಜನರಿಗೆ ೧೯೬೭ Referendum ಮೂಲಕ ಕೊಟ್ಟ ಪೌರತ್ವ ಮತ್ತು ಮತಹಕ್ಕು. ೨೮ ರಂದು ಆಚರಿಸಿದ್ದು ದೇಶದಲ್ಲಿ ಚಲನೆಯನ್ನುಂಟು ಮಾಡಿದ ಐತಿಹಾಸಿಕ Harbour Bridge ವಾಕ್. ಮೇ ೨೯ ರಂದು ದೇಶದ Torres Strait Islanders ಅವರ ಧ್ವಜದ ಮಹತ್ವ. ಜೂನ ೩ ನೇ ತಾರೀಕು Mabo Day. Torres Strait Islanders ರಲ್ಲಿ ಒಬ್ಬರಾಗಿದ್ದ ಎಡ್ಡಿ ಮಾಬೋ ಎಂಬಾತನ ಸತತ ಪ್ರಯತ್ನದಿಂದ ಆಸ್ಟ್ರೇಲಿಯಾದಲ್ಲಿ ಯೂರೋಪಿಯನ್ನರು ಬರುವ ಮುಂಚೆ ಮೂಲಜನರಿದ್ದರು, ಈ ನೆಲ-ನಾಡುಗಳಲ್ಲಿ ಅವರು ಸಮೃದ್ಧಿ ಜೀವನ ನಡೆಸಿದ್ದರು ಎನ್ನುವುದು ಹೈ ಕೋರ್ಟ್ ತೀರ್ಪಿನ ಮೂಲಕ ರುಜುವಾಗಿತ್ತು.

ಆಸ್ಟ್ರೇಲಿಯನ್ ಮೂಲಜನರ ಬಗ್ಗೆ ಬರೆಯುತ್ತಿರುವಾಗ ಈ ವಾರದ ಮತ್ತೊಂದು ಸುದ್ದಿಯ ಕುರಿತು ಹೇಳಲೇಬೇಕು. ಅಬೊರಿಜಿನಲ್ ಜನರ ಐವತ್ತು ಸಾವಿರ ವರ್ಷಗಳಷ್ಟು ಬೆಲೆಯುಳ್ಳ ಐತಿಹಾಸಿಕ ಕಲ್ಲು-ಕಲೆ (rock art) ಈಗ ರಾಷ್ಟ್ರೀಯ ಸುದ್ದಿಯ ಕೇಂದ್ರವಾಗಿದೆ. ಕೇಂದ್ರ ಸರಕಾರವು Woodside’s North West Shelf ಎನ್ನುವ ಗ್ಯಾಸ್ ಘಟಕವನ್ನು ಮುಂದುವರೆಸಲು ಅನುಮತಿ ನೀಡಿದೆ. ಕಳೆದ ಕೆಲ ದಶಕಗಳಿಂದ ಪಶ್ಚಿಮ ಆಸ್ಟ್ರೇಲಿಯಾ (Western Australia) ರಾಜ್ಯದ Murujuga ಎಂಬ ಪ್ರದೇಶದಲ್ಲಿ Woodside Energy ಎನ್ನುವ ಕಂಪನಿ Karratha Gas Plant ಗ್ಯಾಸ್ ತಯಾರಿಕಾ ಘಟಕವನ್ನು ನಡೆಸುತ್ತಿದೆ. ಇದಕ್ಕೆ ೨೦೩೦ ರ ತನಕ ಅನುಮತಿಯಿತ್ತು. ಈಗ ೨೦೭೦ ರ ತನಕ-ಮುಂದಿನ ನಲವತ್ತು ವರ್ಷಗಳ ಕಾಲ- ಅದನ್ನು ಮುಂದುವರೆಸಲು ಸರ್ಕಾರ ಅನುಮತಿ ಕೊಟ್ಟಿದೆ. ಇದೇ ಪ್ರದೇಶದಲ್ಲಿ ಸಾವಿರಾರು ಕಲ್ಲು-ಕಲೆಯ ತುಣುಕುಗಳಿವೆ. ಇವು ಈಜಿಪ್ಟ್ ಪಿರಮಿಡ್‌ಗಳಿಗಿಂತಲೂ ಬಹು ಪುರಾತನವಾದವು. ಈ ಗ್ಯಾಸ್ ಘಟಕದಿಂದ ಅದರ ಸಮೀಪವೇ ಇರುವ ಕಲ್ಲು-ಕಲೆಗೆ ಘಾಸಿಯಾಗುವುದಿದೆ ಎಂದು ಪರಿಸರವಾದಿಗಳು, ಪುರಾತತ್ವ ಸಂಶೋಧಕರು, ಸ್ಥಳೀಯ ಅಬೊರಿಜಿನಲ್ Mardathoonera ಜನಸಮುದಾಯದ ಕೆಲವರು ಹೇಳುತ್ತಿದ್ದಾರೆ. ಸಮುದಾಯದ ಮುಖಂಡರಲ್ಲಿ ಒಬ್ಬಾಕೆ ರೆಲೀನ್ ಕೂಪರ್ ಸದ್ಯದಲ್ಲೇ ಈ ವಿಷಯವನ್ನು ಹೈ ಕೋರ್ಟ್‌ಗೆ ಮುಟ್ಟಿಸುತ್ತೀನಿ ಎಂದಿದ್ದಾರೆ. ಆದರೆ ಸರ್ಕಾರದ ಮಂತ್ರಿಗಳು ಮತ್ತು ಸ್ಥಳೀಯ ಅಬೊರಿಜಿನಲ್ ಕಾರ್ಪೋರೇಶನ್ ಮುಖಂಡರು ತಾವು ಕಲ್ಲು-ಕಲೆಗಳನ್ನು ಪರೀಕ್ಷಿಸಿದ್ದೀವಿ, ಅವೆಲ್ಲ ಉತ್ತಮ ಸ್ಥಿತಿಯಲ್ಲಿವೆ ಎಂದಿದ್ದಾರೆ.

ಆಸ್ಟ್ರೇಲಿಯನ್ ರಾಜಕೀಯ ಸುದ್ದಿಗಳ ಹಿನ್ನೆಲೆಯಲ್ಲಿ ಹೇಳುವುದಾದರೆ ಈ ಮೇ ತಿಂಗಳು ಕೆಲ ರೋಚಕ ಸನ್ನಿವೇಶಗಳನ್ನು ದಾಖಲಿಸಿದೆ. ಮೂರರಂದು ನಡೆದ ಆಸ್ಟ್ರೇಲಿಯನ್ ಕೇಂದ್ರ ಚುನಾವಣೆಯಲ್ಲಿ ಭಾರಿ ಬಹುಮತದಿಂದ ಗೆದ್ದು ಲೇಬರ್ ಪಕ್ಷ ಎರಡನೇ ಬಾರಿ ಸರ್ಕಾರದ ಚುಕ್ಕಾಣಿ ಹಿಡಿದಿದೆ. ವಿರೋಧಪಕ್ಷವಾಗಿದ್ದ ಲಿಬರಲ್ ಪಕ್ಷವು ತಾವು ಗೆದ್ದರೆ ತಮ್ಮ ಜೊತೆ ಇರುವ ಮಿತ್ರಪಕ್ಷಗಳನ್ನು ಸೇರಿಸಿಕೊಂಡು coalition ಮಿಶ್ರ ಸರ್ಕಾರವನ್ನು ರಚಿಸುವುದಾಗಿ ಹೇಳಿದ್ದರು. ಅವರಿಗೆ ಮುಖ್ಯ ಬೆಂಬಲ ಕೊಟ್ಟಿದ್ದು ನ್ಯಾಷನಲ್ಸ್ ಪಕ್ಷ. ಲಿಬರಲ್ ಹೀನಾಯ ಸೋಲನ್ನುಂಡ ಮೇಲೆ ಮಿಶ್ರ-ಮಿತ್ರರಲ್ಲಿ ಭಿನ್ನಾಭಿಪ್ರಾಯಗಳು ಬಂದು, ಆಸ್ಟ್ರೇಲಿಯನ್ನರಿಗೆ ಸ್ವಲ್ಪ ತಮಾಷೆಯಾಗಿ ಕಂಡಿದೆ. ಲಿಬರಲ್ ಪಕ್ಷವನ್ನು ರಿಪೇರಿ ಮಾಡಬೇಕು, ನಂಬಿಕೆ ಕಳೆದುಕೊಂಡು ಮತ ಕೊಡದ ಮಹಿಳಾ ಮತದಾರರಲ್ಲಿ ಮರುವಿಶ್ವಾಸ ತುಂಬಬೇಕು ಎಂದೆಲ್ಲ ಹೇಳುತ್ತಾ, ನಾಯಕತ್ವದ ಸುಧಾರಣೆಗೆ ಸೂಸನ್ ಲೇ ಆಯ್ಕೆಗೊಂಡಾಗ ನ್ಯಾಷನಲ್ಸ್ ಪಾರ್ಟಿಯ ಮುಖ್ಯಸ್ಥರಾದ ಡೇವಿಡ್ ಲಿಟಲ್ ಪ್ರೌಡ್ ಅವರಿಗೆ ಅಸಮಾಧಾನವಾಯ್ತು. ಅವರು ತಮ್ಮ ಬೆಂಬಲವನ್ನು ವಾಪಸ್ ತೆಗೆದುಕೊಂಡು ಲಿಬರಲ್-ನ್ಯಾಷನಲ್ಸ್ ಬೇರೆಬೇರೆಯಾದರು. ಕೆಲದಿನಗಳ ಕಾಲ ನಾವೆಲ್ಲಾ ಈ ಹಾವು-ಏಣಿ ಆಟವನ್ನು ನೋಡುತ್ತಾ ಪುಕ್ಕಟೆ ಮನರಂಜನೆ ಪಡೆದೆವು.

ವಾರದ ನಂತರ, ಎಲ್ಲರಿಗೂ ಗೊತ್ತಿದ್ದ ಹಾಗೆ ಲಿಬರಲ್-ನಾಶನಲ್ಸ್ ಮರುಲೆಕ್ಕಾಚಾರ ಹಾಕಿ, ಪುನಃ ತಾವು ಜೊತೆಯಾಗಿದ್ದೀವಿ, ನಾವು coalition ಪಕ್ಷ, ನಮ್ಮ ಒಟ್ಟಾರೆ ಗಮನವಿರುವುದು ವಿರೋಧಪಕ್ಷವಾಗಿ ತಾವು ಪ್ರಧಾನಿ ಆಂಟೋನಿ ಆಲ್ಬಾನೀಸಿ ಅವರ ಸರ್ಕಾರಕ್ಕೆ ಸರಿಯಾದ ಪೈಪೋಟಿ ಕೊಡುತ್ತಾ, ಅವರ ರೀತಿ-ನೀತಿಗಳ ಮೇಲೆ ನಿಗಾ ಇಡುವುದು ಎಂದಾಗ ಹೌದು, ಅದಲ್ಲದೆ ನೀವು ಆಸ್ಟ್ರೇಲಿಯನ್ ಜನತೆಗೆಂದು ಏನು ಮಾಡುವಿರಿ ಎನ್ನುವ ಪ್ರಶ್ನೆಯೆದ್ದಿತ್ತು. ಕೇಳಬೇಕು, ಪ್ರಶ್ನೆಗಳನ್ನು ಎತ್ತಬೇಕು. ಬದಲಾವಣೆಗೆ, ನ್ಯಾಯಕ್ಕೆ, ಸುಧಾರಣೆಗೆ ಪ್ರಶ್ನೆಗಳು ಅವಶ್ಯಕ.

About The Author

ಡಾ. ವಿನತೆ ಶರ್ಮ

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ