ಅಮ್ಮನ ಈ ಸ್ವಾಭಾವ ಗೊತ್ತಿದ್ದ ನನಗೆ ತೊಂಡೆ ಚಪ್ಪರ ಗಾಳಿಗೆ ಹೀಗೆ ಮೂರು ಕಾಲಲ್ಲಿ ನಿಂತದ್ದು ನೋಡಿ ದಿಗಿಲಾಯಿತು. ನಾನು ಕೃಷಿ ಕೆಲಸವನ್ನು ಬಿಟ್ಟು ಬಹಳ ವರ್ಷಗಳೇ ಆಗಿಹೋಗಿವೆ. ಹಾಗಾಗಿ ಅಷ್ಟು ದೊಡ್ಡ ಚಪ್ಪರವನ್ನು ಅಪ್ಪನ ಹಾಗೆ ಹಿಡಿದು ನಿಲ್ಲಿಸಿ ಸರಿ ಮಾಡುವ ವಿಶ್ವಾಸ ನನಗೆ ಇರಲಿಲ್ಲ. ಅಮ್ಮನ ಮುಖ ನೋಡಿದೆ. ಬದುಕಿನ ಆಧಾರವೇ ಕಳೆದುಕೊಂಡ ಹಾಗೆ ಕೂತಿದ್ದು ನೋಡಿ ಬೇಸರ ಆಯ್ತು. ಸಮಾಧಾನದ ಮಾತು ಹೇಳುವ ಅಂತ ಅನ್ನಿಸಿದರೂ ಮಾತು ಹೊರಡದೆ ಅಮ್ಮನ ಹತ್ತಿರ ಸುಮ್ಮನೆ ಕುಳಿತೆ.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ “ಇನ್ನೊಂದು ಬದಿ”ಯ ಎರಡನೆಯ ಬರಹ
ಮೊನ್ನೆ ಸುರಿದ ಭಾರೀ ಗಾಳಿಮಳೆಗೆ ಅಮ್ಮ ಹಿತ್ತಲಿನಲ್ಲಿ ಮಾಡಿದ್ದ ತೊಂಡೆ ಚಪ್ಪರ ಮೂರು ಕಾಲಿನಲ್ಲಿ ಪಶ್ಚಿಮದ ಕಡೆ ವಾಲಿ ನಿಂತುಬಿಟ್ಟಿತು. ನಿಂತಿದೆ ಅಂದರೆ ಈಗಲೋ ಆಗಲೋ ಬೀಳಬಹುದೆನ್ನುವ ಅವ್ಯಕ್ತ ಭಯವನ್ನು ಹೊತ್ತುಕೊಂಡು. ಇಡೀ ಚಪ್ಪರವನ್ನು ಹಬ್ಬಿಕೊಂಡಿದ್ದ ಬಳ್ಳಿಗಳು ಈ ಗಾಳಿಮಳೆಯ ಹೊಡೆತಕ್ಕೆ ಅಸ್ತವ್ಯಸ್ತವಾಗಿ ಮುಂಜಾನೆಯ ಎಳೆ ಬಿಸಿಲಿನಲ್ಲಿ ತಲೆಗೆ ಕೈಹಾಕಿ ಹೇನು ಹುಡುಕುತ್ತಾ ನಿಂತ ಹುಡುಗಿಯ ಕೆದರಿದ ಕೂದಲಿನ ಹಾಗೆ ಕಾಣುತ್ತಿತ್ತು. ಅರ್ಧಂಬರ್ಧ ಹಣ್ಣಾಗಿದ್ದ ಕೆಂಪುಹಸಿರು ಕಾಯಿಗಳು ಕೆಳಗೆಲ್ಲಾ ಬಿದ್ದು ನಡೆಯುವಾಗ ಕಾಲಿಗೆ ಸಿಕ್ಕಿ ಪಿಚಿಕ್ ಅಂತ ಬೆರಳುಗಳ ಸಂಧಿಯಿಂದ ತೊಂಡೆಹಣ್ಣಿನ ರಸ ಹಾರುತ್ತಿತ್ತು. ಆಗಷ್ಟೇ ಹೂವರಳಿ ಕಾಯಾಗಿದ್ದ ಮರಿ ತೊಂಡೆಕಾಯಿಗಳೂ ಸಾಕಷ್ಟು ಪ್ರಮಾಣದಲ್ಲಿ ಅಕಾಲಿಕ ಸಾವಿಗೀಡಾಗಿದ್ದವು. ಮೇಲೆಯಿಂದ ಹಾರಿ ಬಂದು ಚಪ್ಪರದ ಮೇಲೆ ಕೂತು ಹೂಬಿಟ್ಟ ಎಳೆಯ ಕಾಯಿಗಳನ್ನು ತಿನ್ನುತ್ತಾ ಕಾಲಿನಿಂದ ಕೆದರಿ ಹಾನಿ ಮಾಡುವ ನವಿಲುಗಳನ್ನು ತಡೆಯಲೆಂದು ಹರಡಿದ್ದ ನೈಲನ್ ಬಲೆ ಬಿರುಗಾಳಿಗೂ ಅಲ್ಲಾಡದೇ ನಿಂತ ಚಪ್ಪರದ ಒಂದು ಉದ್ದ ಕಂಬಕ್ಕೆ ಸಿಕ್ಕಿಬಿದ್ದಿತ್ತು.
ಕೆಲಸದ ನಿಮಿತ್ತ ಬೇರೆ ಊರಿನಲ್ಲಿದ್ದುಕೊಂಡು ವಾರಕ್ಕೊಮ್ಮೆ ಊರಿಗೆ ಹೋಗುತ್ತಿದ್ದ ನಾನು ಆ ದಿನ ಮನೆಗೆ ಹೋಗಿದ್ದೆ. ಆದರೆ ಎಂದಿನ ಸ್ವಾಗತ ಸಿಗದೇ ಮನೆಯೊಳಗೆ ಕಾಲಿಟ್ಟರೆ ಯಾರದ್ದೋ ಅಪರಿಚಿತ ಮನೆಗೆ ಬಂದ ಹಾಗೆ ಅನ್ನಿಸಿತು. ಸುರಿದ ಗಾಳಿ ಮಳೆ ಸಾಕಷ್ಟು ಆವಾಂತರ ಮಾಡಿತ್ತು ಅನ್ನುವುದು ಹೊರಗೆ ನೋಡಿದರೆ ಗೊತ್ತಾಗುತ್ತಿತ್ತು. ಮನೆಯ ಮೆಟ್ಟಿಲ ಮೇಲೆ ಮಳೆನೀರು ಬೀಳಬಾರದೆಂದು ಮಾಡಿಗೆ ಸೇರಿಸಿ ಇಟ್ಟಿದ್ದ ತಗಡ್ ಶೀಟ್ ಹಾರಿ ಅಂಗಳದಲ್ಲಿ ಬಿದ್ದಿತ್ತು. ಅಂಗಳದಲ್ಲಿ ಚೆಲ್ಲಾಪಿಲ್ಲಿಯಾಗಿ ಎಷ್ಟೊಂದು ತೆಂಗಿನಕಾಯಿಗಳು ಬಿದ್ದಿವೆ. ಅಮ್ಮ ಇನ್ನೂ ನೋಡಿರಲಿಕ್ಕಿಲ್ಲ. ಹೊರಗೆ ಇನ್ನೂ ಮಳೆ ಸುರಿಯುತ್ತಿತ್ತು. ಹೆಗಲ ಬ್ಯಾಗನ್ನು ಹಾಲಿನಲ್ಲಿಟ್ಟು ಅಮ್ಮನನ್ನು ಕರೆಯುತ್ತಾ ಒಳಗೆ ಹೋದರೆ ಅವಳು ಒಲೆಯ ಮುಂದೆ ಕೂತು ಚಹಾ ಕುಡಿಯುತ್ತಿದ್ದಾಳೆ.
ಹೊರಗೆ ದಟ್ಟ ಮೋಡ ಕವಿದಿದ್ದರಿಂದ ಮನೆಯೊಳಗೆ ಕತ್ತಲು ಆವರಿಸಿಕೊಂಡಿತ್ತು. ಹೋಗಿ ಲೈಟ್ ಹಾಕಿದೆ. ಕೋಣೆ ಬೆಳಗಿದ ಅನಿರೀಕ್ಷಿತ ಬೆಳಕಿಗೆ ತನ್ನ ಯೋಚನೆಗಳಿಂದ ಎಚ್ಚೆತ್ತ ಅಮ್ಮ ನನ್ನನ್ನು ನೋಡಿ ನೀನ್ಯಾವಾಗ ಬಂದೆ ಅಂತ ಕಣ್ಣಲ್ಲೇ ಕೇಳಿದರು. “ಆವಾಗ್ಲೇ ಬಂದೆ. ನೀನ್ಯಾಕೆ ಲೈಟ್ ಹಾಕದೆ ಕತ್ಲಲ್ಲಿ ಕೂತಿದ್ದೆ? ಅದೂ ಒಲೆಯ ಮುಂದೆ. ಕಟ್ಟಿಗೆ ನೋಡು ಹೊರಗೇ ಉರಿತಿದೆ. ಬರೀ ಹೊಗೆ. ಚಾ ಕುಡಿತಿದ್ದಿಯಾ?”. ಹಾಗೆಲ್ಲಾ ಅಮ್ಮ ಒಬ್ಬಳೇ ಕೂತು ಯಾವತ್ತೂ ಟೀ ಕುಡಿಯುವವರೇ ಅಲ್ಲ. ಒಂದು ಚೊಂಬು ಟೀ ಮಾಡಿ ಎರಡು ಲೋಟ ಸಮೇತ ಅಪ್ಪ ಮಲಗಿದ ಕೋಣೆಗೆ ಹೋಗಿ ಅವರಿಗೂ ಕೊಟ್ಟು ತಾನೂ ಕುಡಿಯುತ್ತಾ ಮಾತಾಡ್ತಾ ಕೂತ್ಕೊಳ್ಬೇಕು ಅಥವಾ ಟಿವಿ ಹಾಕಿ ಧಾರವಾಹಿ ಹಾಕ್ಕೊಂಡು ನಿನ್ನೆ ದಿನ ಏನಾಗಿತ್ತು ಅಂತ ಒಮ್ಮೆ ರೀಕ್ಯಾಪ್ ಮಾಡ್ಕೊಂಡು ಕತೆಯನ್ನು ಅಪ್ಪನಿಗೆ ಹೇಳ್ಬೇಕು. ಅವರು ಹೂಂಗುಡುತ್ತಾ ಇದ್ದ ಹಾಗೆ ಟೀ ಖಾಲಿಯಾಗ್ಬೇಕು. ಇಲ್ಲದಿದ್ರೆ ಅವರಿಗೆ ಟೀ ಕುಡಿಯುವ ಅಭ್ಯಾಸ ಇಲ್ಲ.
ಆದ್ರೆ ಇವತ್ಯಾಕೋ ಒಬ್ಬಳೇ ಟೀ ಕುಡಿಯುತ್ತಾ ಮಂಕಾಗಿ ಕೂತಿದ್ದಳು. ಹೊರಗೆ ಇನ್ನೂ ಮೋಡ ಕವಿದಿದ್ದ ಕಾರಣ ಇರಬೇಕು ಕಣಕಣದಲ್ಲೂ ಒಂದು ತರಹದ ಉದಾಸೀನತೆ ತುಂಬಿಕೊಂಡಿತ್ತು. ಮಾತು ಬೇಕಿರಲಿಲ್ಲ ಅವಳಿಗೆ. ನನ್ನನ್ನು ನೋಡುತ್ತಾ “ತೊಂಡೆ ಚಪ್ಪರ ಬಿದ್ದಿದೆ” ಅಂತ ಹೇಳಿ ಮತ್ತೆ ಮೌನಕ್ಕೆ ಜಾರಿದಳು. ಅಲ್ಲಿಯತನಕ ನನ್ನ ಆಫೀಸಿನ ಯಾವುದೋ ಕೆಲಸದ ವಿಷಯಗಳೇ ಒಂದಕ್ಕೊಂದು ಡಿಕ್ಕಿ ಹೊಡೆಯುತ್ತಿದ್ದವು. ಹಾಗಾಗಿ ಈ ತೊಂಡೆ ಚಪ್ಪರ ನನ್ನ ಭಾವಕೋಶವನ್ನು ಅಷ್ಟು ಬೇಗನೇ ಪ್ರವೇಶಿಸಲಿಲ್ಲ. ಹೊರಗೆ ಹೋಗಿ ನೋಡಿದರೆ ಅಂಗಳಕ್ಕೆ ತಾಗಿರುವ ಗದ್ದೆಯಲ್ಲಿ ಅಮ್ಮನ ಬದುಕಿನ ಲವಲವಿಕೆಯ ಭಾಗವೇ ಆಗಿದ್ದ ದಟ್ಟ ಹಸುರಿನ ತೊಂಡೆಚಪ್ಪರ ಇನ್ನೊಂದು ಗಾಳಿ ಮಳೆಗೆ ಸರಿಯಾಗಿ ಬೀಸಿ ಬಂದರೆ ಬೀಳುವ ಹಾಗಿತ್ತು.

ತೊಂಡೆ ಚಪ್ಪರ ನೋಡುತ್ತಿದ್ದ ಹಾಗೆ ನಾನು ಹೈಸ್ಕೂಲ್‌ನಲ್ಲಿದ್ದ ದಿನಗಳು ಕಣ್ಣೆದುರಿಗೆ ಬಂದವು. ಅಂಗಳಕ್ಕೆ ತಾಗಿಕೊಂಡಿದ್ದ ಅರ್ಧ ಎಕರೆ ಗದ್ದೆಯಲ್ಲಿ ಅಪ್ಪ ಅಮ್ಮ ಸೇರಿಕೊಂಡು ಎಷ್ಟೋ ವಿಧದ ತರಕಾರಿಗಳನ್ನು ಬೆಳೆಸುತ್ತಿದ್ದ ದಿನಗಳವು ಮತ್ತು ಅದರಿಂದ ಬರುತ್ತಿದ್ದ ಆದಾಯವೇ ನಮ್ಮ ಮನೆಯ ಬದುಕಿನ ಮುಖ್ಯ ಆಧಾರವಾಗಿತ್ತು. ಬಸಳೆ ಹರಿವೆ ಬೆಂಡೆಕಾಯಿ ತೊಂಡೆಕಾಯಿ ಹೀರೆಕಾಯಿ ಸೋರೆಕಾಯಿ ಕುಂಬಳಕಾಯಿ ಸೌತೆಕಾಯಿ ಪಡವಲಕಾಯಿ ಅಲಸಂಡೆ ಹೀಗೆ ನಮ್ಮ ಹಿತ್ತಲಲ್ಲಿ ಇಲ್ಲದ ತರಕಾರಿಯೇ ಇಲ್ಲ ಅನ್ನುವ ಮಟ್ಟಿಗೆ ಈ ತರಕಾರಿ ಕೃಷಿ ನಡೆಯುತ್ತಿತ್ತು. ಅಪ್ಪ ಪೇಟೆಗೆ, ಹಾಸ್ಟೇಲು ಕ್ಯಾಂಟಿನ್ಗಳಿಗೆ ಈ ತರಕಾರಿಗಳನ್ನು ಹಾಕಿದರೆ ಅಮ್ಮ ಇನ್ನೂ ಸೂರ್ಯ ಸರಿಯಾಗಿ ಉದಯಿಸುವ ಮೊದಲೇ ಬುಟ್ಟಿಯಲ್ಲಿ ಆಗಿ ಮಿಗುವಷ್ಟು ತರಕಾರಿಗಳನ್ನು ಹೊತ್ತುಕೊಂಡು ಎರಡು ಕಿಲೋಮೀಟರ್ ದೂರದಲ್ಲಿದ್ದ ಮಣಿಪಾಲದ ಎಂಐಟಿ ಕೆಎಂಸಿ ಕ್ವಾರ್ಟ್ರಸ್ ಮನೆಮನೆಗೆ ಹೋಗಿ ಮಾರಿ ಬಿಸಿಲಿನಲ್ಲಿ ಮನೆಗೆ ಬರುತ್ತಿದ್ದರು.
ಅಮ್ಮನ ತರಕಾರಿಯ ಬುಟ್ಟಿ ತುಂಬಿಸುವ ಸಲುವಾಗಿ ಹಿಂದಿನ ದಿನ ಸಂಜೆಯಿಂದಲೇ ತಯಾರಿ ನಡೆಸಬೇಕಿತ್ತು. ತರಕಾರಿಗಳನ್ನು ಗಿಡದಿಂದ ತೆಗೆದು ತಂದು ತೊಳೆದು ಇಷ್ಟು ರೂಪಾಯಿಗೆ ಇಷ್ಟು ಅಂತ ಕಟ್ಟು ಕಟ್ಟುವ ಕೆಲಸ ಅಕ್ಕತಂಗಿಯರ ಜೊತೆಗೆ ನನಗೆ ಬೀಳುತ್ತಿತ್ತು. ತರಕಾರಿ ಹೆಚ್ಚಿದ್ದ ದಿನಗಳಲ್ಲಿ ಬುಟ್ಟಿಯನ್ನು ಮಣಿಪಾಲದವರೆಗೆ ಹೊತ್ತುಕೊಂಡು ಹೋಗುವ ಜವಾಬ್ದಾರಿ ಕೆಲವೊಂದು ಸಲ ನನ್ನ ತಲೆಗೆ ಬೀಳುತ್ತಿತ್ತು. ಆಗೆಲ್ಲಾ ಬುಟ್ಟಿ ಹೊತ್ತುಕೊಂಡು ಹೋಗುವ ನನ್ನನ್ನು ಯಾರಾದ್ರೂ ನೋಡ್ತಾರೆ ಅನ್ನುವ ಮುಜುಗರದಿಂದ ಕೆಲಸ ಕೊಟ್ಟ ಅಮ್ಮನ ಮೇಲಿನ ಸಿಟ್ಟಿನಿಂದ ಆ ದಿನ ಮನೆಯಲ್ಲಿ ಯಾರೂ ಮಾತಾಡಿಸಿದ್ರೂ ಉರಿದು ಬೀಳುತ್ತಿದ್ದೆ. ಹನುಮಂತ ಅಂತ ತಂಗಿಯರು ಮುಖ ಊದಿಸಿ ತಮಾಷೆ ಮಾಡದೇ ಬಿಡುತ್ತಿರಲಿಲ್ಲ.
ಚಪ್ಪರದ ಬಳ್ಳಿಯಲ್ಲಿ ಅಡಗಿ ಇರುವ ಕಾಯಿಗಳು ಒಂದೇ ಸಲಕ್ಕೆ ಸಿಕ್ಕುವುದಿಲ್ಲ. ಅದಕ್ಕೆ ಸ್ವಲ್ಪ ವಿಶೇಷವಾದ ನೋಟ ಬೇಕು. ಎಲೆಗಳನ್ನು ನಾಜೂಕಾಗಿ ಎತ್ತಿ ನೋಡಿ ಕಾಯಿ ಹುಡುಕುವ ಸಹನೆ ಬೇಕು. ಅಕ್ಕತಂಗಿಯರ ಜೊತೆಯಲ್ಲಿ ನಾನು ಚಪ್ಪರಕ್ಕೆ ಎಷ್ಟು ಸುತ್ತು ಹಾಕಿ ಇನ್ನೇನು ಉಳಿದಿಲ್ಲ ಅಂತ ಅಂದುಕೊಂಡರೂ ಅಮ್ಮ ಹೋಗಿ ಮತ್ತೆ ಒಂದು ಪ್ರದಕ್ಷಿಣೆ ಹಾಕಿದರೆ ನೂರು ಕಾಯಿಗಳಾದರೂ ಮತ್ತೆ ದಕ್ಕುತ್ತಿದ್ದವು. ಮನೆಯೊಡತಿಗೆ ಮಾತ್ರ ಹಾಲು ಬಿಟ್ಟುಕೊಡುವ ಹಟ್ಟಿಯ ವಿಧೇಯ ದನದ ಹಾಗೆ ಕಾಣುತ್ತಿತ್ತು ಈ ಚಪ್ಪರ ನನಗೆ. ಸಂಜೆ ಇನ್ನೇನು ಎಲ್ಲಾ ತರಕಾರಿ ತೆಗೆದು ತೊಳೆದಿಟ್ಟು ತೊಂಡೆಕಾಯಿ ಮಾತ್ರ ತೆಗೆಯುವುದಿತ್ತು. ಆಗ ಒಂದು ಆವಾಂತರ ನಡೆದುಬಿಟ್ಟಿತು. ಎಲ್ಲಿತ್ತೋ ಏನೋ. ಸುದ್ದಿಯೇ ಇಲ್ಲದ ಹಾಗೆ ಒಮ್ಮಗೇ ಸುರಿದ ಗಾಳಿಮಳೆಗೆ ತೊಂಡೆ ಚಪ್ಪರ ಹೆಚ್ಚು ಹೊತ್ತು ತಾಳಿಕೊಳ್ಳದೇ ಮೂರು ಕಾಲಿನ ಮೇಲೆ ಒಂದು ಕಡೆ ವಾಲಿಕೊಂಡು ತನ್ನ ಶರಣಾಗತಿ ಸೂಚಿಸಿತು. ಅವಳ ಪಾಲಿಗೆ ಅಕ್ಷಯ ಪಾತ್ರೆಯಂತಿದ್ದ ಚಪ್ಪರ ಬಹಳ ಕಷ್ಟದಿಂದ ನಾಲ್ಕು ಹೆಜ್ಜೆ ನಡೆದು ಏದುಸಿರುಬಿಡುತ್ತಾ ನಿಂತ ತುಂಬು ಗರ್ಭಿಣಿಯ ಹಾಗೆ ನಿಂತುಬಿಟ್ಟಿತು.
ಕಣ್ಣೆದುರೇ ಚಪ್ಪರ ಬೀಳುತ್ತಿದ್ದರೂ ಏನೂ ಮಾಡಲಾಗದ ಅಸಹಾಯಕತೆಯಿಂದ ಅದನ್ನು ನೋಡುತ್ತಾ ನೋಡುತ್ತಾ ಅಮ್ಮ ಮೆಟ್ಟಿಲ ಮೇಲೆ ಮಾತಿಲ್ಲದೆ ಕೂತು ಬಿಟ್ಟರು. ಗದ್ದೆಯ ಮಣ್ಣು ತೆಗೆದು ಸಣ್ಣ ಗುಂಡಿ ಮಾಡಿ ನೆಟ್ಟ ತೊಂಡೆಯ ಕಾಂಡ ಚಿಗುರುವುದನ್ನು ಬೆಳೆಯುವುದನ್ನು, ಕೊಟ್ಟ ಆಧಾರವನ್ನು ಹಿಡಿದು ಮಾಡಿದ ಚಪ್ಪರಕ್ಕೆ ಹಬ್ಬುವ ಅದರ ಬೆಳವಣಿಗೆಯ ಎಲ್ಲಾ ಹಂತಗಳನ್ನೂ ಹತ್ತಿರದಿಂದ ಕಾಣುವ ಪೋಷಿಸುವ ಅಮ್ಮನಿಗೆ ಅದರ ಜೊತೆಗೆ ಕರುಳಬಳ್ಳಿಯ ಸಂಬಂಧ. ಅವರನ್ನು ಆ ಪರಿಸ್ಥಿತಿಯಲ್ಲಿ ನೋಡಿಯೇ ಆ ಮಳೆಯಲ್ಲಿ ಓಡಿ ಹೋಡಿ ಯಾವುದೋ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಅಪ್ಪನನ್ನು ಕರೆದುಕೊಂಡು ಬಂದೆ. ಅಪ್ಪ ನಾನು ಸೇರಿ ಆ ಮಳೆಯಲ್ಲಿಯೇ ಸಿಕ್ಕಿದ ಆಧಾರಗಳನ್ನು ಕೊಟ್ಟು ಹಗ್ಗದಲ್ಲಿ ಬಿಗಿದು ಬೇರೊಂದು ಮರಕ್ಕೆ ಕಟ್ಟಿ ಮತ್ತೆ ಅದನ್ನು ನಾಲ್ಕು ಕಾಲಿನಲ್ಲಿ ನಿಲ್ಲಿಸುವಲ್ಲಿ ಸಫಲರಾದೆವು. ಮುಂದೆ ಅದು ತನ್ನ ಮೊದಲ ವೈಭವದಲ್ಲಿ ಅಲ್ಲದಿದ್ದರೂ ಬಹಳ ಕಾಲ ಕಾಯಿಗಳನ್ನು ಸಮೃದ್ಧವಾಗಿ ಕೊಟ್ಟಿತು. ಅಮ್ಮನಿಗೂ ಸಮಾಧಾನ ಆಗಿತ್ತು.
ಹಾಗಾಗಿ ಅಮ್ಮನ ಈ ಸ್ವಾಭಾವ ಗೊತ್ತಿದ್ದ ನನಗೆ ತೊಂಡೆ ಚಪ್ಪರ ಗಾಳಿಗೆ ಹೀಗೆ ಮೂರು ಕಾಲಲ್ಲಿ ನಿಂತದ್ದು ನೋಡಿ ದಿಗಿಲಾಯಿತು. ನಾನು ಕೃಷಿ ಕೆಲಸವನ್ನು ಬಿಟ್ಟು ಬಹಳ ವರ್ಷಗಳೇ ಆಗಿಹೋಗಿವೆ. ಹಾಗಾಗಿ ಅಷ್ಟು ದೊಡ್ಡ ಚಪ್ಪರವನ್ನು ಅಪ್ಪನ ಹಾಗೆ ಹಿಡಿದು ನಿಲ್ಲಿಸಿ ಸರಿ ಮಾಡುವ ವಿಶ್ವಾಸ ನನಗೆ ಇರಲಿಲ್ಲ. ಅಮ್ಮನ ಮುಖ ನೋಡಿದೆ. ಬದುಕಿನ ಆಧಾರವೇ ಕಳೆದುಕೊಂಡ ಹಾಗೆ ಕೂತಿದ್ದು ನೋಡಿ ಬೇಸರ ಆಯ್ತು. ಸಮಾಧಾನದ ಮಾತು ಹೇಳುವ ಅಂತ ಅನ್ನಿಸಿದರೂ ಮಾತು ಹೊರಡದೆ ಅಮ್ಮನ ಹತ್ತಿರ ಸುಮ್ಮನೆ ಕುಳಿತೆ. ಅವರಿಗೂ ಮಾತು ಬೇಡವಾಗಿತ್ತು. ನನ್ನ ಕೈಯಿಂದ ಈ ಕೆಲಸ ಆಗುವುದಿಲ್ಲ ಅಂತ ಅವಳಿಗೂ ಗೊತ್ತು. ನನ್ನನ್ನು ನೋಡುತ್ತಾ ಸುಮ್ಮನೆ ಅವಳಷ್ಟಕ್ಕೆ ಮಾತಾಡುತ್ತಾ ಹೋದಳು ನನ್ನ ಉತ್ತರದ ನಿರೀಕ್ಷೆ ಇಲ್ಲದೇ.
“ಅವರು ಯಾವ ಚಪ್ಪರವನ್ನೂ ಹೀಗೆ ಇರಲು ಬಿಟ್ಟಿರಲಿಲ್ಲ. ಎಂಥಹ ಗಾಳಿಮಳೆಯನ್ನೂ ತಡೆಯುವ ಹಾಗೆ ಚಪ್ಪರ ಕಟ್ಟುತ್ತಿದ್ದರು. ಬಳ್ಳಿಗಳು ಬೆಳಿತಾ ಹೋದ ಹಾಗೆ ಮತ್ತೆ ಯಾವ ದಿಕ್ಕಿನಲ್ಲಿ ಹೇಗೆ ಆಧಾರಕೊಟ್ಟು ಚಪ್ಪರ ದೊಡ್ಡದು ಮಾಡ್ಬೇಕು ಅನ್ನುವುದೂ ಅವರಿಗೆ ಗೊತ್ತಿತ್ತು. ಎಲ್ಲೋ ಕೆಲವು ಸಲ ಗಾಳಿಗೆ ಚಪ್ಪರ ವಾಲಿಕೊಂಡ್ರೂ ಯಾವುದೋ ಆಧಾರಗಳನ್ನೆಲ್ಲಾ ಕೊಟ್ಟು ಮತ್ತೆ ನಿಲ್ಲಿಸ್ತಿದ್ರು. ಅವರು ಈ ಮನೆಯ ಜವಾಬ್ದಾರಿ ಹೊತ್ತುಕೊಂಡಷ್ಟು ದಿನ ಯಾವುದೇ ಆಧಾರ ತಪ್ಪಲು ಬಿಡಲಿಲ್ಲ. ಚಪ್ಪರ ಬೀಳಲು ಬಿಡಲಿಲ್ಲ. ಎಲ್ಲಾ ಬಳ್ಳಿಗಳು ಚಿಗುರಿದವು. ಕಾಯಿಬಿಟ್ಟವು. ಯಾರ ಕಣ್ಣು ಬಿತ್ತೋ ಏನೋ. ಅಂತಹ ಆಧಾರವೇ ಈಗ ಬಿದ್ದುಹೋಗಿದೆ. ಅವರೂ ನೋಡಿದ್ದಾರೆ ಮಲಗಿದಲ್ಲಿಯೇ ಚಪ್ಪರ ಬಿದ್ದುದನ್ನು. ಇಲ್ಲಿಂತಲೇ ಕೂತು ಅವರು ಹೇಳಿದರೂ ನಾನು ಕೊಟ್ಟ ಯಾವುದೇ ಆಧಾರ ಆ ಚಪ್ಪರವನ್ನು ಮತ್ತೆ ಮೊದಲಿನ ಹಾಗೆ ನಿಲ್ಲಿಸುವುದಿಲ್ಲ ಅಂತ ನನಗೆ ಗೊತ್ತಿದೆ”

ಹೊರಗೆ ಮಳೆ ನಿರಂತರವಾಗಿ ಸುರಿಯುತ್ತಲೇ ಇತ್ತು. ಹೀಗೆಯೇ ಸುರಿದರೆ ನಾಳೆ ಬೆಳಗ್ಗಿನ ಸೂರ್ಯೋದಯ ನೋಡುವುದು ಕಷ್ಟ ಅನ್ನುವ ಹಾಗೆ ಮುರಿದು ಬೀಳುವ ಶಬ್ದ ಹೊರಡಿಸುತ್ತಾ ತೊಂಡೆ ಚಪ್ಪರ ಈಗಲೋ ಆಗಲೋ ಅನ್ನುವಂತೆ ನಿಂತಿತ್ತು. ಯಾವುದೋ ಕೆಲಸಕ್ಕೆಂದು ಮರಹತ್ತಿ ಅಲ್ಲಿಂದ ಕೆಳಗೆ ಬಿದ್ದು ಏಳಲಾಗದ ಹಾಗೆ ಬೆನ್ನುಹುರಿಗೆ ಗಾಯ ಮಾಡಿಕೊಂಡಿದ್ದ ಅಪ್ಪ ಒಳಕೋಣೆಯ ಮಂಚದ ಮೇಲೆ ಮೌನದಲ್ಲಿ ನರಳುತ್ತಿದ್ದರು. ಮಾತು ಮುಗಿಸಿ ನನ್ನೆಡೆಗೆ ನೋಡಿದ ಅಮ್ಮನ ನೋಟದಲ್ಲಿ ತನ್ನ ಬದುಕಿನ ಒಂದೊಂದೇ ಆಧಾರಗಳು ಕುಸಿದು ಬೀಳುತ್ತಿರುವ ಅವ್ಯಕ್ತ ಭಯದಲ್ಲಿ ವಿಷಾದದಲ್ಲಿ ಮತ್ತೆ ಬದುಕಿನ ಆಧಾರಕ್ಕೆ ಹೊಸ ಹುಲ್ಲುಕಡ್ಡಿಯನ್ನು ಹುಡುಕುತ್ತಿರುವ ಹಾಗೆ ಕಂಡಿತು.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಮೂಲತಃ ಉಡುಪಿಯವರು. ಈಗ ಮಂಗಳೂರು ವಾಸಿ ಮುಸುಕು ತೆರೆದು, ತೂಗುದೀಪ, ಇರುವುದೆಲ್ಲವ ಬಿಟ್ಟು ಇವರ ಪ್ರಕಟಿತ ಕವನ ಸಂಕಲನಗಳು. ಪ್ರೇಮದ ಶರಧಿಗೆ, ಆಕಾಶಬುಟ್ಟಿ, ಒಲವ ಶ್ರಾವಣ ಇವರ ಭಾವಗೀತೆ ಸಿ ಡಿ ಗಳು
