Advertisement
ದ ಗ್ರೇಟ್ ನೋಟ್ ಬುಕ್ ರಾಬರಿ!: ಪೂರ್ಣೇಶ್‌ ಮತ್ತಾವರ ಸರಣಿ

ದ ಗ್ರೇಟ್ ನೋಟ್ ಬುಕ್ ರಾಬರಿ!: ಪೂರ್ಣೇಶ್‌ ಮತ್ತಾವರ ಸರಣಿ

ಜೋಗಿ ಕಿಂದರಿ ಬಾರಿಸತೊಡಗಿದೊಡನೆ ಜಗತ್ತನ್ನೇ ಮೋಹಿಸುವ ಅದರ ನಾದಕ್ಕೆ ಇಲಿಗಳು ಅನ್ನದ ಮಡಕೆಯನ್ನು ಆಗಲಿ, ಟೋಪಿಯ ಗೂಡನ್ನು ತ್ಯಜಿಸಿ, ಅಂಗಿಯ ಜೇಬು, ಕಾಲು ಚೀಲಗಳನ್ನೆಲ್ಲಾ ಬಿಟ್ಟು ಹಾರುತ್ತಾ, ಓಡುತ್ತಾ, ನೆಗೆದು ಬಂದು ಅವನನ್ನೇ ಹಿಂಬಾಲಿಸಿ ಹೋಗುವಂತೆ ಹೌಸ್ ಮಾಸ್ಟರ್‌ರ ಹುಣಸೆ ಬರಲಿನ ಬಾರಿಸುವಿಕೆಗೆ ನಮ್ಮ ಗೆಳೆಯರು ಟ್ರಂಕ್ ಕಪಾಟುಗಳ ಒಳಗಿನಿಂದ, ಹಾಸಿಗೆ ದಿಂಬುಗಳ ಕೆಳಗಿನಿಂದ, ವೆಂಟಿಲೇಟರ್ ಸಂದಿಯಿಂದ, ಫ್ಯಾನ್ ರೆಕ್ಕೆಯ ಮೇಲಿನಿಂದ, ಟಾಯ್ಲೆಟ್ ರೂಮಿನ ಹೆಂಚಿನ ತಳದಿಂದ, ಮರ ಗಿಡಗಳ ಮರೆಯಿಂದ ನೋಟ್ ಬುಕ್‌ಗಳನ್ನು ಎತ್ತಿ ತರಲಾರಂಭಿಸಿದ್ದರು.
ಪೂರ್ಣೇಶ್‌ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿಯ ಮೂರನೆಯ ಬರಹ

ಈ ರಾತ್ರಿಗಳಿಗೂ ರಾಬರಿಗಳಿಗೂ ಅದೇನು ಅವಿನಾಭಾವ ಸಂಬಂಧವೋ! ಅಂತಹ ರಾತ್ರಿ ಒಂದರಲ್ಲೇ ನಮ್ಮ ಈ ಗ್ರೇಟ್ ನೋಟ್ ಬುಕ್ ರಾಬರಿಯೂ ನಡೆದದ್ದು.

ಅಂದು ರಾತ್ರಿ ನಮ್ಮ ಶಾಲಾ ವ್ಯಾನ್ ಸ್ವಲ್ಪ ತಡವಾಗಿಯೇ ಬಂದಿತ್ತೆನ್ನಬೇಕು. ಬಂದು ಶಾಲಾ ಆಫೀಸಿನ ಮುಂದೆ ನಿಂತ ಒಂದೆರಡು ನಿಮಿಷದಲ್ಲೇ ನಮ್ಮ ಡಾರ್ಮಿಟರಿ ಬಾಗಿಲು ಬಡಿದ ಸದ್ದಾಯಿತು. ತೆಗೆದು ನೋಡಿದರೆ ಶಾಲಾ ಡ್ರೈವರ್ ಅಂಕಲ್! ಬಹುಶಃ ಅದೆಲ್ಲೋ ಪೆಗ್ ಹಾಕಿ ಬಂದಿದ್ದರೆನಿಸುತ್ತೆ. ಹಾಗಾಗಿಯೇ ಬರುವುದು ತಡವಾಗಿತ್ತು..

ಸರಿ, ಬಂದವರು ತಾನು ಚಿಕ್ಕಮಗಳೂರಿನಿಂದ ನೋಟ್ ಬುಕ್‌ಗಳನ್ನು ತಂದಿರುವುದಾಗಿಯೂ ಅವುಗಳನ್ನೀಗಲೇ ಸ್ಟಾಕ್ ರೂಮಿಗೆ ಇಳಿಸಿ ಕೊಡಬೇಕೆಂದೂ ಕೇಳಿದರು.

ಈ ರೀತಿಯಾಗಿ ನಮ್ಮನ್ನೇ ಕೇಳಲು ನಮ್ಮ ಡಾರ್ಮಿಟರಿ ಶಾಲಾ ಆಫೀಸ್‌ನ ಹತ್ತಿರವೇ ಇದ್ದದ್ದು ಒಂದು ಕಾರಣವಾದರೆ, ವಿಶ್ವ, ನಟೇಶ, ಗಿರಿ, ಉದಯರಂತಹ ದೈತ್ಯರು ನಮ್ಮ ತರಗತಿಯಲ್ಲಿ ಇದ್ದದ್ದೂ, ಅಲ್ಲದೇ ಕಂಡವರಿಗೆ ಸಹಾಯ ಮಾಡುವ ಕೆಲಸದಲ್ಲಿ ನಾವು ಸದಾ ಮುಂದಿರುತ್ತಿದ್ದದ್ದು ಬಹು ಮುಖ್ಯ ಕಾರಣಗಳಾಗಿದ್ದವು..

ಸರಿ, ಇನ್ನೇನೂ ತಾನೇ ಮಾಡುವುದು. ಅದಾಗಲೇ ಬಹುಪಾಲು ಜನ ಮಲಗಿ ನಿದ್ದೆ ಹೋಗಿ ಆಗಿತ್ತು. ಎಚ್ಚರಿದ್ದು, ಆಗಲೇ ಮಲಗುವ ತಯಾರಿಯಲ್ಲಿದ್ದ ನಾವೇ ಒಂದು ಹದಿನೈದು ಇಪ್ಪತ್ತು ಜನ ಹುಡುಗರು ನೋಟ್ ಬುಕ್ ಅನ್ ಲೋಡ್ ಮಾಡಲು ತೆರಳಿದೆವು.

ತೆರಳಿದವರು ನಿಧಾನವಾಗಿ ಒಂದೊಂದೇ ಬಂಡಲ್‌ಗಳನ್ನು ಎತ್ತಿ ಸ್ಟಾಕ್ ರೂಮಿಗೆ ಇಡಲಾರಂಭಿಸಿದ್ದೆವು.

ನೋಟ್ ಬುಕ್ ಬಂಡಲ್‌ಗಳು ತುಸು ಹೆಚ್ಚು ಎನ್ನುವಂತೆಯೇ ಇದ್ದುದರಿಂದ ಸಾಕಷ್ಟು ಸಮಯ ತೆಗೆದುಕೊಳ್ಳುತಲಿತ್ತು. ಈ ನಡುವೆಯೇ ಡ್ರೈವರ್ ಅಂಕಲ್‌ರ ಗಮನ ತುಸು ದೂರದಲ್ಲಿ ನಿಂತು ಬೀಡಿ ಎಳೆಯುವುದರತ್ತ ಕೇಂದ್ರೀಕೃತವಾಯ್ತು. ಜೊತೆಗೆ, ಆಫೀಸ್ ಮುಂದಿನ ಬೀದಿ ದೀಪದ ಬೆಳಕು, ಸ್ಟಾಕ್ ರೂಮಿನ ಬೆಳಕು ಬಿಟ್ಟರೆ ಉಳಿದಂತೆ ಸುತ್ತಲೂ ಗಾಢ ಕತ್ತಲು ಆವರಿಸಿತ್ತು.

ಇದೋ ನಮ್ಮ ಗೆಳೆಯರ ಪಾಲಿಗೆ ಶೇಕ್ಸ್‌ಪಿಯರನ ನಾಟಕದಲ್ಲಿ ಮ್ಯಾಕ್ ಬೆತ್‌ನಿಗೆ ತನ್ನ ಹೆಂಡತಿ ರಾಜನನ್ನು ಹತ್ಯೆಗೈಯಲು ಹುರಿದುಂಬಿಸುವಂಥ, ಬೈಬಲ್ಲಿನ ಆ್ಯಡಮ್, ಈವರಿಗೆ ಹಣ್ಣು ತಿನ್ನುವಂತೆ ಹಾವಿನ ರೂಪದ ಸೈತಾನ ಪ್ರೇರೇಪಿಸುವಂತ ಸಂದರ್ಭವನ್ನು ಸೃಷ್ಟಿಸಿ ನೋಟ್ ಬುಕ್ ಎತ್ತಿಕೊಳ್ಳಲು ಪ್ರಲೋಭನೆಯನ್ನು ನೀಡಿತ್ತು.

ಸರಿ, ಒಬ್ಬರಿಗೊಬ್ಬರಿಗೆ ತಿಳಿಯದಂತೆ, ಒಂದೊಂದೇ ನೋಟ್ ಬುಕ್‌ಗಳನ್ನು ಎತ್ತಿಟ್ಟುಕೊಳ್ಳಲಾರಂಭಿಸಿದ್ದರು.

ಬೆಳಗಾಯಿತು…. ಅಷ್ಟರಲ್ಲೇ ಒಬ್ಬೊಬ್ಬರು ನಿಧಾನವಾಗಿ ತಾವು ರಾತ್ರಿ ನೋಟ್ ಬುಕ್ ಎತ್ತಿದ ಚಾಕಚಕ್ಯತೆಯ ಬಗ್ಗೆ ಬಾಯಿ ಬಿಡಲಾರಂಭಿಸಿದರು. ಅಲ್ಲದೇ ತಾವು ಎತ್ತಿರುವ ನೋಟ್ ಬುಕ್‌ಗಳ ಲೆಕ್ಕದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳಲಾರಂಭಿಸಿದರು.

ಇನ್ನೂ, ಈ ಮೊದಲು ನಾನು ಓದಿದ್ದ ಸಂತ ಜೋಸೆಫರ ಶಾಲೆಯಲ್ಲಿನ ಅತಿಯಾದ ನೀತಿಬೋಧೆಯ ಪ್ರಭಾವದಿಂದಲೋ ಎಂಬಂತೆ ಒಂದೂ ನೋಟ್ ಬುಕ್ ಎತ್ತದ ನಾನು ಮತ್ತು ನನ್ನಂತೆಯೇ ನೋಟ್ ಬುಕ್ ಎತ್ತದ ಇತರೆ ಗೆಳೆಯರು
“ಅಯ್ಯೋ ನಾವೂ ಎತ್ತಿಕೊಳ್ಳಲಿಲ್ಲವಲ್ಲ..!” ಎಂದು ಪಶ್ಚಾತಾಪದ ದನಿಯಲ್ಲಿ ಮರುಗಲಾರಂಭಿಸಿದ್ದರೆ, ರಾತ್ರಿ ಬೇಗನೆ ನಿದ್ರೆಗೆ ಜಾರಿದ್ದ ಗೆಳೆಯರು, “ಅಯ್ಯೋ ನಾವೂ ಕೂಡ ರಾತ್ರಿ ಎಚ್ಚರವಾಗಿದ್ದಿದ್ದರೆ..!” ಎಂದು ಕೈ ಕೈ ಹಿಸುಕಿಕೊಂಡರು.

ಸುಮಾರು ಹನ್ನೆರಡು ಗಂಟೆಯ ವೇಳೆಗೆ ತರಗತಿಯ ಪ್ರತಿಯೊಬ್ಬರಿಗೂ ಸರದಿಯಂತೆ ಪ್ರಾಂಶುಪಾಲರ ಕೊಠಡಿಯಿಂದ ಬುಲಾವ್ ಬರಲಾರಂಭಿಸಿತ್ತು. ಆರಂಭದಲ್ಲಿ ಒಂದಿಬ್ಬರನ್ನು ಕರೆದಾಗ “ಏನುಕ್ಕೋ ಕರೆದಿರಬೇಕು..” ಎಂದುಕೊಂಡಿದ್ದೆವು. ಆದರೆ, ಯಾವಾಗ ಪ್ರತಿಯೊಬ್ಬರಿಗೂ ಬುಲಾವ್ ಬರಲಾರಂಭಿಸಿತೋ, “ಓss, ಇದು ನೋಟ್ ಬುಕ್ ವಿಚಾರವೇ..” ಎಂದು ಖಚಿತವಾಗತೊಡಗಿತ್ತು.

ಇನ್ನೂ, ಪ್ರಾಂಶುಪಾಲರ ಕೊಠಡಿಗೆ ಹೋಗಿ ಬಂದ ಪ್ರತಿಯೊಬ್ಬ ಗೆಳೆಯರೂ ಗುಸು ಪಿಸು ದನಿಯಲ್ಲಿ, ನೋಟ್ ಬುಕ್ ಬಗ್ಗೆ ಕೇಳಿದರೆಂದೂ ಅದಕ್ಕೆ ತಾನು “ನನಗೇನು ಗೊತ್ತಿಲ್ಲ ಅಂದೆ!” ಎಂದು ರಾಬರಿ ರಹಸ್ಯವನ್ನು ಕಾಪಾಡಿದವರಂತೆ ಮಾತನಾಡುತ್ತಿದ್ದರು.

ಹೀಗೆ ಎಲ್ಲರ ಸರದಿ ಮುಗಿಯುವ ವೇಳೆಗೆ ಗೊತ್ತಾದ ವಿಷಯವೆಂದರೆ ನಾವು ಎಣಿಸಿದಂತೆ ಅದು ಕೇವಲ ನೋಟ್ ಬುಕ್ ಎತ್ತಿಟ್ಟುಕೊಂಡ ಪ್ರಸಂಗವಾಗಿರಲಿಲ್ಲ. ಬದಲಿಗೆ, ತಂದಿಳಿಸಿದ ಸಾವಿರಾರು ನೋಟ್ ಬುಕ್‌ಗಳಲ್ಲಿ ಅರ್ಧಕ್ಕರ್ಧ ಖಾಲಿಯಾಗಿಸಿದ “ದ ಗ್ರೇಟ್ ನೋಟ್ ಬುಕ್ ರಾಬರಿ”ಯೇ ಆಗಿ ಹೋಗಿತ್ತು.

ಅದಕ್ಕಿಂತಲೂ ಆಘಾತಕಾರಿಯಾಗಿದ್ದ ಮತ್ತೊಂದು ವಿಷಯವೆಂದರೆ ಈ ರಾಬರಿ ತನಿಖೆಯ ಜವಾಬ್ದಾರಿಯನ್ನು ನಮ್ಮ ಹೌಸ್‌ ಮಾಸ್ಟರ್‌ಗೆ ವಹಿಸಲಾಗಿತ್ತು ಮತ್ತು ಊಟದ ವಿರಾಮದ ನಂತರ ತನಿಖೆ ಇನ್ನೂ ಚುರುಕುಗೊಳ್ಳಲಿತ್ತು!

ಹಾಗಾಗಿಯೇ ಅದ್ಯಾವಾಗ ಊಟದ ವಿರಾಮ ಬಂದಿತೋ ಬಹುತೇಕರು ಊಟ ಮಾಡುವುದನ್ನೂ ಬಿಟ್ಟು ಸಾಕ್ಷ್ಯ ನಾಶಮಾಡುವ ಅಂದರೆ ಎತ್ತಿಟ್ಟು ಕೊಂಡಿದ್ದ ನೋಟ್ ಬುಕ್‌ಗಳನ್ನು ಕದ್ದಿಡುವ ‘ಕಾಯಕ’ದಲ್ಲಿ ನಿರತರಾದರು. ಇದಕ್ಕೆ ಅವರಿವರನ್ನದೆ ಎಲ್ಲರೂ ಕೈ ಕೈ ಜೋಡಿಸಿದ್ದೂ ಆಯ್ತು.
ಅಷ್ಟರಲ್ಲಾಗಲೇ ಎರಡನೇ ಹಂತದ ತನಿಖೆ ನಮ್ಮ ಡಾರ್ಮಿಟರಿ ಮತ್ತು ಶಾಲಾ ಆಫೀಸ್ ನಡುವಿನ ಹೊರಾಂಗಣದಲ್ಲಿ ಶುರುವಾಗಲಿತ್ತು. ಮೊದಲ ಹಂತದ ತನಿಖೆ ವೈಯಕ್ತಿಕ ಸಂದರ್ಶನ ಮಾದರಿಯಲ್ಲಿ ಶಾಂತವಾಗಿ, ಘನತೆವೆತ್ತ ರೀತಿಯಲ್ಲಿ ನಡೆದಿದ್ದರೆ ಎರಡನೆಯದು ಅದಕ್ಕೆ ತದ್ವಿರುದ್ಧ ಶೈಲಿಯದಾಗಿತ್ತು. ಅದರ ಬಗ್ಗೆ ಹೇಳದಿದ್ದರೇ ಒಳಿತಿತ್ತೇನೋ!

ಏಕೆಂದರೆ, ಮೊದಲೇ ಹೇಳಿದಂತೆ ತನಿಖೆಯ ಜವಾಬ್ದಾರಿ ಹೊತ್ತವರು ನಮ್ಮ ಹೌಸ್ ಮಾಸ್ಟರ್ ಆಗಿದ್ದರು!!

ಅವರೋ “ಛಡೀ ಚಂ ಚಂ, ವಿದ್ಯಾ ಘಂ ಘಂ”

“ಸ್ಪೇರ್ ದ ರಾಡ್ ಆ್ಯಂಡ್ ಸ್ಪಾಯ್ಲ್ ದ ಚೈಲ್ಡ್”

ತರಹದ ಗಾದೆ ಸಾಲುಗಳನ್ನು ಬಲವಾಗಿ ನಂಬಿ, ಅಕ್ಷರಶಃ ಪಾಲಿಸುವವರಾಗಿದ್ದರು. ಅಲ್ಲದೇ, ಹೊಡೆತ ನೀಡುವುದರ ಬಗೆಗಿನ ಸಣ್ಣಪುಟ್ಟ ಪಟ್ಟುಗಳನ್ನೂ ಆಳವಾಗಿ ಬಲ್ಲವರಾಗಿದ್ದು ಪಿಎಚ್ ಡಿ ಕೊಡಬಹುದಾದಷ್ಟು ಸಂಶೋಧನೆ ನಡೆಸಿದ್ದರು!

ಅದಕ್ಕೆಂದೇ, ತಾನು ಹೊಡೆದರೆ ಸಾಮಾನ್ಯ ಕೋಲುಗಳು ಮುರಿದೇ ಮುರಿಯುತ್ತವೆಂಬ ಖಾತ್ರಿಯಿಂದಾಗಿ ಸರಿಯಾದ ಹುಣಸೆ ಬರಲಿನ ಕೋಲುಗಳನ್ನು ತರಿಸಿಟ್ಟಿರುತ್ತಿದ್ದರು. ಇನ್ನೂ ತನ್ನ ಹೊಡೆತದಿಂದ ಬಾಸುಂಡೆ ಬಂದೇ ಬರುತ್ತದೆಂಬ ಖಾತ್ರಿಯಿಂದಾಗಿ ಕೈ ಕಾಲಿಗೆ ಹೊಡೆಯ ಹೋಗದೆ ಬೇರಾರಿಗೂ ತೋರಿಸಲಾಗದ ಕುಂಡೆಯ ಭಾಗಕ್ಕೆ ಸರಿಯಾಗಿ ಬಾರಿಸುವುದನ್ನು ರೂಢಿಸಿಕೊಂಡಿದ್ದವರಾಗಿದ್ದರು.

ಹೀಗಾಗಿಯೇ ಅವರ ಆಗಮನವಾದೊಡನೆ ಸೂಜಿ ಬಿದ್ದರೂ ಕೇಳುವಷ್ಟು ನಿಶಬ್ದ ಆವರಿಸಿ ನೋಟ್ ಬುಕ್ ಎತ್ತಿದವರು, ಎತ್ತದವರು ಹೀಗೆ ಎಲ್ಲರೂ ನಡುಗಲಾರಂಭಿಸಿದ್ದೆವು.

ಅಚ್ಚರಿ ಎಂಬಂತೆ ಅಷ್ಟರಲ್ಲಾಗಲೇ ಅವರ ಕೈಯಲ್ಲಿ ನೋಟ್ ಬುಕ್ ಎತ್ತಿದವರ ಲಿಸ್ಟ್ ರೆಡಿ ಇತ್ತು! ಎಷ್ಟಾದರೂ ಈ ರಾಬರಿಯ ವಿಚಾರದಲ್ಲಿ ನಾವು ಅಬೋಧ ಅಮಾಯಕರೇ ಆಗಿದ್ದೆವು. ಕಾಕೋರಿ ಟ್ರೈನ್ ರಾಬರಿಯ ಕಥೆಯನ್ನು ಇತಿಹಾಸದಲ್ಲಿ ಓದಿ ರೋಮಾಂಚಿತರಾಗಿದ್ದು ಬಿಟ್ಟರೆ ಒಂದೆರಡು ಸಿನಿಮಾಗಳಲ್ಲಿ ಈ ಬಗ್ಗೆ ನೋಡಿದ್ದೆವು. ಆವಾಗಲೂ ನಾವ್ಯಾರು ರಾಬರಿಗಳು ಪೂರ್ವಯೋಜಿತ ಸಂಚಿನ ಭಾಗವಾಗಿ ನಡೆಯುತ್ತವೆ ಎಂಬುದನ್ನು ಅರಿತಿರಲಿಲ್ಲ. ಮೇಲಾಗಿ, ಇಂತಹದೊಂದು ಸಾಹಸಕ್ಕೆ ಕೈ ಹಾಕಬೇಕೆಂದು ನಾವು ಯೋಚಿಸಿಯೂ ಇರಲಿಲ್ಲ.

ರಾಬರಿಗಳ ಮಾತಿರಲಿ, ನಾವು ಕಂಡವರ ಪೆನ್ನು ಪೆನ್ಸಿಲ್‌ಗಳನ್ನು ಕೂಡ ಕದ್ದು ಅನುಭವ ಇಲ್ಲದ ಅಡ್ಡಕಸುಬಿಗಳಾಗಿದ್ದೆವು. ಆರನೇ ತರಗತಿಯಲ್ಲಾದರೂ ನನ್ನ ಆ ವಸ್ತು ತೆಗೆದುಕೊಂಡ ಈ ವಸ್ತು ತೆಗೆದುಕೊಂಡ ಎಂಬ ಸಣ್ಣ ಪುಟ್ಟ ದೂರುಗಳು ಇರುತ್ತಿದ್ದವು. ಆದರೆ, ದೊಡ್ಡವರಾಗುತ್ತಾ ಎಲ್ಲರ ವಸ್ತುಗಳು ಎಲ್ಲರವೂ ಆದಂತ ವಸ್ತುಗಳೇ ಆಗಿರುತ್ತಿದ್ದವು. ಮತ್ತೊಬ್ಬರ ಪೇಸ್ಟು, ಸೋಪು, ಕೆಲವೊಮ್ಮೆ ಬಟ್ಟೆ, ಮಿಗಿಲಾಗಿ ಟ್ರಂಕ್ ಒಳಗಿನ ತಿಂಡಿ-ತಿನಿಸುಗಳು ಹೀಗೆ ಎಲ್ಲವೂ ಬೇಕೆಂದಾಗ ಎತ್ತಿ ಬಳಸಲು ಅಡ್ಡಿ ಇರದವಾಗಿದ್ದವು. ಯಾರಾದರೂ ಆಕ್ಷೇಪ ವ್ಯಕ್ತಪಡಿಸ ಬಂದರೆ “ಆರನೇ ಕ್ಲಾಸ್ ಜೂನಿಯರ್ ಮೆಂಟಾಲಿಟಿ ಇನ್ನೂ ಹೋಗಿಲ್ಲ” ಎಂಬ ಹೀಯಾಳಿಕೆಗೆ ಗುರಿಯಾಗಬೇಕಿತ್ತು.

ಹೀಗೆ “ಎಲ್ಲಾ ವಸ್ತುಗಳು ನಮ್ಮವೇ” ಎಂಬ ಭಾವವಿದ್ದಾಗ, ತೆಗೆದುಕೊಂಡರೆಂದು ಅದರ ಮೂಲ ಓನರ್ ಕಿಂಚಿತ್ತೂ ದುಃಖ ಪಡದಿದ್ದಾಗ ಕಳ್ಳತನದ ಮಾತೆಲ್ಲಿಯದು!

ಆದರೀಗ, ರಾಬರಿಯ ಅದ್ಯಾವ ಹಿನ್ನೆಲೆ ಇರದೇ ಸಂದರ್ಭ ಸೃಷ್ಟಿಸಿದ ಪ್ರಲೋಭನೆಗೆ ಒಳಗಾಗಿ ಇಂತಹದ್ದೊಂದು “ಗ್ರೇಟ್ ನೋಟ್ ಬುಕ್ ರಾಬರಿ”ಯ ಭಾಗವಾಗಿಬಿಟ್ಟಿದ್ದೆವು. ಈ ನಮ್ಮ ಅಡ್ಡಕಸುಬಿತನದ ಪರಿಣಾಮವಾಗಿಯೇ ಅದ್ಯಾರೋ ನಡೆದುದೆಲ್ಲವನ್ನು ಸುಲಭವಾಗಿ ಬಾಯಿಬಿಟ್ಟು, ಪ್ರಾಕ್ಟಿಕಲ್ ನಡೆಸುವ ಮುನ್ನವೇ ಮೌಖಿಕ ಸಂದರ್ಶನದ ಹಂತದಲ್ಲೇ ನಮ್ಮೆಲ್ಲರ ರಿಪೋರ್ಟ್ ಕಾರ್ಡ್‌ಗಳನ್ನು ನಮ್ಮ ಹೌಸ್ ಮಾಸ್ಟರ್ ರೆಡಿ ಮಾಡುವಂತಾಗಿತ್ತು.

ಹೀಗೆ ಎಲ್ಲರ ಸರದಿ ಮುಗಿಯುವ ವೇಳೆಗೆ ಗೊತ್ತಾದ ವಿಷಯವೆಂದರೆ ನಾವು ಎಣಿಸಿದಂತೆ ಅದು ಕೇವಲ ನೋಟ್ ಬುಕ್ ಎತ್ತಿಟ್ಟುಕೊಂಡ ಪ್ರಸಂಗವಾಗಿರಲಿಲ್ಲ. ಬದಲಿಗೆ, ತಂದಿಳಿಸಿದ ಸಾವಿರಾರು ನೋಟ್ ಬುಕ್‌ಗಳಲ್ಲಿ ಅರ್ಧಕ್ಕರ್ಧ ಖಾಲಿಯಾಗಿಸಿದ “ದ ಗ್ರೇಟ್ ನೋಟ್ ಬುಕ್ ರಾಬರಿ”ಯೇ ಆಗಿ ಹೋಗಿತ್ತು.

ಅಲ್ಲದೇ ರಿಪೋರ್ಟ್ ರೆಡಿ ಮಾಡಿದವರಿಗೆ ಈ ಸಂದರ್ಭ ತಮ್ಮ ಪಿಎಚ್ ಡಿ ಸಂಶೋಧನೆಗಳ ಪ್ರಯೋಗಕ್ಕೆ ಸದಾವಕಾಶವನ್ನು ಒದಗಿಸಿದಂತಾಗಿತ್ತು.
“ಇಂತಹ ಸದಾವಕಾಶವನ್ನು ಸುಖಾ ಸುಮ್ಮನೆ ಕಳೆದುಕೊಳ್ಳುವುದೇಕೆ” ಎಂದು ಅವರಿಗೆ ಅನ್ನಿಸಿರಲೂಬಹುದು.

ಸರಿ, ಪ್ರಯೋಗ ಶುರು ಹಚ್ಚಿಕೊಂಡರು.

ಈ ಹಿಂದೆ ಸಾಮಾನ್ಯವಾಗಿ ವಿಶ್ವ, ನಟೇಶರಂತ ದೈತ್ಯರಿಗೆ ಒಂದೂ ಪೆಟ್ಟು ಹೊಡೆಯದೆ “ಇಷ್ಟು ದೊಡ್ಡವರಾಗಿ ಹೀಗೆ ಮಾಡಲು ನಾಚಿಕೆಯಾಗಬೇಕು..” ಎಂಬ ಬೈಗುಳ, ಗದರಿಕೆಯಲ್ಲೇ ಅಪಮಾನದ ಶಿಕ್ಷೆ ಮುಗಿಸುತ್ತಿದ್ದರು. ಇಲ್ಲವೇ ಅವರ ಜೊತೆಗೆ ತಪ್ಪು ಮಾಡಿರುತ್ತಿದ್ದ ನಮ್ಮಂತ ಸಣ್ಣ ದೇಹದವರನ್ನು ಹಿಡಿದು ಸರಿಯಾಗಿ ಬಾರಿಸಿ ”ನಿಮ್ಮನ್ನೂ ಹೀಗೆಯೇ ಸದೆಬಡಿಯಬಲ್ಲೆ” ಎಂಬ ಪರೋಕ್ಷ ಸಂದೇಶವನ್ನಷ್ಟೇ ಅವರಿಗೆ ರವಾನಿಸುತ್ತಿದ್ದರು.

ಆದರೆ ಇಂದು, “ಸೇನಾಧಿಪತಿಯನ್ನೇ ಮೊದಲು ಹೊಡೆದುರುಳಿಸಿದರೆ ಉಳಿದ ಸೈನಿಕರು ಗಲಿಬಿಲಿಗೊಂಡು ದಿಕ್ಕಾಪಾಲಾಗುತ್ತಾರೆ” ಎಂಬ ತಮ್ಮ ಮತ್ತೊಂದು ಸಂಶೋಧನಾ ಸೂತ್ರದ ಪ್ರಯೋಗಕ್ಕೆ ಮುಂದಾಗಿದ್ದರು.

ಅದರ ಪರಿಣಾಮವಾಗಿ ಮೊದಲು ವಿಶ್ವನನ್ನು ಮುಂದೆ ಕರೆದು ಏಕಾಏಕಿ ಥಳಿಸಲಾರಂಭಿಸಿದರು.

ಈ ಅನಿರೀಕ್ಷಿತ ಥಳಿತಕ್ಕೆ ಒಳಗಾದ ವಿಶ್ವ, “ಅಯ್ಯೋ..ಅಮ್ಮ..ಅಮ್ಮ.. ಅಪ್ಪ..ಆss ಆss” ಎಂದು ಅರಚುತ್ತಿದ್ದರೆ ಉಳಿದವರು ಥಳಿತಕ್ಕೆ ಒಳಗಾಗುವ ಮೊದಲೇ ಥರಗುಟ್ಟುತ್ತಾ, ಜರ್ಜರಿತರಾಗಿ ಹೋದರು. ಹೌಸ್ ಮಾಸ್ಟರ್‌ರ ಆಜ್ಞೆಗೂ ಕಾಯದೇ ಕದ್ದಿಟ್ಟಿದ್ದ ನೋಟ್ ಬುಕ್‌ಗಳನ್ನು ತರಲು ಚೆಲ್ಲಾಪಿಲ್ಲಿಯಾದರು!

ಒಂದು ಕ್ಷಣಕ್ಕೆ ಆ ದೃಶ್ಯ ಬೊಮ್ಮನಹಳ್ಳಿಯ ಕಿಂದರಿಜೋಗಿಯನ್ನು ನೆನಪಿಸುವಂತಿತ್ತು.

ಜೋಗಿ ಕಿಂದರಿ ಬಾರಿಸತೊಡಗಿದೊಡನೆ ಜಗತ್ತನ್ನೇ ಮೋಹಿಸುವ ಅದರ ನಾದಕ್ಕೆ ಇಲಿಗಳು ಅನ್ನದ ಮಡಕೆಯನ್ನು ಆಗಲಿ, ಟೋಪಿಯ ಗೂಡನ್ನು ತ್ಯಜಿಸಿ, ಅಂಗಿಯ ಜೇಬು, ಕಾಲು ಚೀಲಗಳನ್ನೆಲ್ಲಾ ಬಿಟ್ಟು ಹಾರುತ್ತಾ, ಓಡುತ್ತಾ, ನೆಗೆದು ಬಂದು ಅವನನ್ನೇ ಹಿಂಬಾಲಿಸಿ ಹೋಗುವಂತೆ ಹೌಸ್ ಮಾಸ್ಟರ್‌ರ ಹುಣಸೆ ಬರಲಿನ ಬಾರಿಸುವಿಕೆಗೆ ನಮ್ಮ ಗೆಳೆಯರು ಟ್ರಂಕ್ ಕಪಾಟುಗಳ ಒಳಗಿನಿಂದ, ಹಾಸಿಗೆ ದಿಂಬುಗಳ ಕೆಳಗಿನಿಂದ, ವೆಂಟಿಲೇಟರ್ ಸಂದಿಯಿಂದ, ಫ್ಯಾನ್ ರೆಕ್ಕೆಯ ಮೇಲಿನಿಂದ, ಟಾಯ್ಲೆಟ್ ರೂಮಿನ ಹೆಂಚಿನ ತಳದಿಂದ, ಮರ ಗಿಡಗಳ ಮರೆಯಿಂದ ನೋಟ್ ಬುಕ್‌ಗಳನ್ನು ಎತ್ತಿ ತರಲಾರಂಭಿಸಿದ್ದರು.

ತಂದವರೋ ಭಕ್ತರು ಪೀಠಾಧಿಪತಿಯ ಪಾದಕ್ಕೆ ಕಾಣಿಕೆ ಅರ್ಪಿಸಿ ಪ್ರತಿಯಾಗಿ ಆಶೀರ್ವಾದ ಪಡೆಯುವಂತೆ ಹೌಸ್ ಮಾಸ್ಟರ್‌ರ ಕಾಲ ಬುಡದಲ್ಲಿ ಪುಸ್ತಗಳನ್ನಿಟ್ಟು, ಡಾಕ್ಟರರ ಮುಂದೆ ಇಂಜೆಕ್ಷನ್‌ಗಾಗಿ ಮುಖ ಕಿವುಚಿಕೊಳ್ಳುತ್ತಲೇ ಕುಂಡೆ ತಿರುಗಿಸಿ ನಿಲ್ಲುವ ರೋಗಿಯಂತೆ ಪೆಟ್ಟಿಗಾಗಿ ಕಾಯ್ದು ನಿಲ್ಲುತ್ತಿದ್ದರು.

ಹೌಸ್ ಮಾಸ್ಟರರೋ ಯದ್ವಾತದ್ವಾ ಬಾರಿಸುತ್ತಿದ್ದರು. ಬಾರಿಸುತ್ತಿದ್ದರು ಎಂಬುದಕ್ಕಿಂತ ಬಡಿಯುತ್ತಿದ್ದರು ಅಥವಾ ಸದೆಬಡಿಯುತ್ತಿದ್ದರು ಎಂಬುದೇ ಸೂಕ್ತವೇನೋ.

ಹಲವರಿಗೆ ಆ ಕ್ಷಣದಲ್ಲಿ, “ಈ ಶಿಕ್ಷೆ ಗಿಂತಲೂ ಹಿಟ್ಲರನ ಗ್ಯಾಸ್ ಚೇಂಬರ್ ಶಿಕ್ಷೆಯೇ ಆಗಬಹುದಿತ್ತಲ್ಲ.. ಅದಾದರೂ ಅರ್ಧ ನಿಮಿಷದಲ್ಲಿ ಜೀವ ತೆಗೆದುಬಿಡುತ್ತಿತ್ತಲ್ಲ!” ಎನಿಸಿದ್ದು ಸುಳ್ಳಲ್ಲ.

ಪಾಪ ಸೇಠು, ಪುಸ್ತಕವನ್ನೇನೋ ಎತ್ತಿದ್ದವನು ಇಡುವುದೆಲ್ಲಿ ಎಂಬ ಗೊಂದಲಕ್ಕೆ ಸಿಲುಕಿಕೊಂಡಿದ್ದ. ಕೊನೆಗೆ, ಮರದ ಮೇಲೆ ಇಡುವುದೇ ಸೂಕ್ತ ಎಂದೂ ತೀರ್ಮಾನಿಸಿದ್ದ. ಆದರೆ ತನಗೆ ಮರ ಹತ್ತಲು ಬರುತ್ತಿರಲಿಲ್ಲವಲ್ಲ! ಇನ್ನೇನು ಮಾಡುವುದು, ಈ ವಿಚಾರದಲ್ಲಿ ಎಕ್ಸ್ಪರ್ಟ್ ಆಗಿದ್ದ ಗೆಳೆಯ ರಾಜುವಿಗೆ ದುಂಬಾಲು ಬಿದ್ದು ಡಾರ್ಮಿಟರಿಯ ಮುಂದಿದ್ದ ಹಲಸಿನ ಮರ ಹತ್ತಿಸಿ, ಪುಸ್ತಕಗಳನ್ನು ಕದ್ದಿರಿಸುವಲ್ಲಿ ಸಫಲನಾಗಿದ್ದ.

ಆದರೆ, ಯಾವಾಗ ಹೌಸ್ ಮಾಸ್ಟರ್ ಎಲ್ಲರ ಕುಂಡೆಗೆ ಕೊಡಲಾರಂಭಿಸಿದರೋ ಸೇಠು ಸಹಾಯಕ್ಕಾಗಿ ರಾಜುವಿನತ್ತ ಮುಖ ಮಾಡಿದ. ಮೊದಲೇ ಬೇಗ ಮಲಗಿದ ದೆಸೆಯಿಂದಾಗಿ ರಾಬರಿಯ ಭಾಗವಾಗದೆ ಬಚಾವಾಗಿ “ಬದುಕಿದೆಯ ಬಡ ಜೀವವೇ!” ಎಂದು ಮನದಲ್ಲೆಣಿಸುತ್ತಿದ್ದ ರಾಜು, ತನಗೆ ಸೇಠುವಿನ ಪುಸ್ತಕಗಳ ಬಗ್ಗೆ ಗೊತ್ತಿರುವುದಿರಲಿ, ಸೇಠುವೇ ಗೊತ್ತಿಲ್ಲವೇನೋ ಎಂಬಂತೆ ಮುಖ ಭಾವ ಮಾಡುತ್ತಾ ಮತ್ತೆಲ್ಲೋ ನೋಡಲಾರಂಭಿಸಿದ.

ಸೇಠು ಇನ್ನೇನು ತಾನೇ ಮಾಡಿಯಾನು! “ನೆಸೆಸಿಟಿ ಈಸ್ ದ ಫಾದರ್ ಆಫ್ ಇನ್ವೆನ್ಷನ್‌” ಎನ್ನುವಂತೆ ತಾನೇ ಗಡಿಬಿಡಿಯಲ್ಲಿ ಮರ ಹತ್ತ ಹೊರಟು, ತನ್ನ ಮೈ ಕೈ ತರಚುವಿಕೆಯನ್ನೂ ಲೆಕ್ಕಿಸದೇ, ರಾಜುವಿನ ಎಕ್ಸ್ಪರ್ಟ್ ಗಿರಿಯನ್ನೂ ನಾಚಿಸುವಂತೆ ಮರ ಹತ್ತಿ ಪುಸ್ತಕ ತೆಗೆದಿದ್ದ.

ನಾವುಗಳು ಅವನ ಮೈ ಕೈ ತರಚಿ ರಕ್ತ ಸೋರುವುದನ್ನು ನೋಡಿ “ಛೇ! ಸೇಠುವಿಗೆ ಈ ರೀತಿ ಆಯಿತಲ್ಲ!” ಎಂದು ಕನಿಕರ ಪಡುತ್ತಿದ್ದರೆ ಅವನೋ ಆಶ್ಚರ್ಯ ಭರಿತನಾಗಿ, ಒಂದರ ಹಿಂದೆ ಒಂದರಂತೆ ನಾಲ್ಕಾರು ಹೆಣ್ಣು ಹಡೆದವಳೊಬ್ಬಳು ಮೊದಲ ಬಾರಿಗೆ ಗಂಡು ಮಗುವಾಯಿತೆಂದು ಕೇಳಿ ಭಯಾನಕ ಹೆರಿಗೆ ನೋವನ್ನೂ ಮರೆತು ಹರ್ಷ ವ್ಯಕ್ತಪಡಿಸುವಂತೆ, ನಾವ್ಯಾರು ಅವನು ಮರ ಹತ್ತಿದ್ದನ್ನು ನೋಡಲೇ ಇಲ್ಲವೇನೋ ಎಂಬಂತೆ, “ಏ ನಾನು ಮರ ಹತ್ತಿದೆ ಕಣ್ರೋ… ನಾನು ಮರ ಹತ್ತಿದೆ ಕಣ್ರೋ..” ಎನ್ನುತ್ತಾ ಸನ್ನಿವೇಶದ ಗಂಭೀರತೆಯನ್ನು ಮರೆತು, ಮೊದಲ ಬಾರಿಗೆ ಮರ ಹತ್ತಿದ ಸಂಭ್ರಮವನ್ನು ಸೆಲೆಬ್ರೇಟ್ ಮಾಡಲಾರಂಭಿಸಿದ್ದ!

ಇದೋ ನಮ್ಮ ಹೌಸ್ ಮಾಸ್ಟರರಿಗೆ ತನ್ನೆಲ್ಲಾ ಸಂಶೋಧನಾ ಪಟ್ಟುಗಳಿಗೆ ಮಾಡಿದ ಘನಘೋರ ಅವಮಾನ ಎನಿಸಿರಬೇಕು!

ಒಡನೆಯೇ ಡಾಕ್ಟರನೊಬ್ಬ ಪದೇ ಪದೇ ಅನೆಸ್ತೇಶಿಯ ನೀಡಿಯೂ ಪ್ರಜ್ಞೆ ತಪ್ಪದ ಪೇಶೆಂಟ್‌ಗೆ ಅಸಹನೆಯಿಂದ “ಸತ್ತರೆ ಸಾಯಲಿ..!” ಎಂಬಂತೆ ಹೈಡೋಸ್ ಚುಚ್ಚಿ ಹಾಗೆಯೇ ಆಪರೇಷನ್ ಮಾಡುವಂತೆ, ಮೂರು ಮತ್ತೊಂದು ಎಸೆತಗಳಲ್ಲಿ ಹತ್ತಾರು ರನ್‌ಗಳು ಬೇಕಿರುವಾಗ ದ್ರಾವಿಡನಂತ ದ್ರಾವಿಡನು ಕೂಡ ಈ ಬಾಲಿಗೆ ಹೀಗೆಯೇ ಹೊಡೆಯಬೇಕು ಎಂಬ ಕ್ರಿಕೆಟ್ ಬುಕ್‌ನ ಟೆಕ್ನಿಕಲ್ ಅಂಶಗಳನ್ನೆಲ್ಲಾ ಕೈಬಿಟ್ಟು, ಕಣ್ಣು ಮುಚ್ಚಿ ಸೆಹ್ವಾಗನ ರೇಂಜಿಗೆ ಬ್ಯಾಟ್ ಬೀಸುವಂತೆ, ಹೊಡೆಯುವುದರಲ್ಲಿನ ತನ್ನೆಲ್ಲಾ ಪಿಎಚ್ ಡಿ ಸಂಶೋಧನಾ ಪಟ್ಟುಗಳನ್ನು ಕೈಬಿಟ್ಟು ಮುಖ ಮೂತಿ ನೋಡದೆ ಯದ್ವಾತದ್ವಾ ಚಚ್ಚಿ ಬಿಸಾಕಿದರು!

ಪಾಪ ಶ್ರೀಧರ! ಅವನದು ಇನ್ನೊಂದು ಬಗೆಯ ವ್ಯಥೆ. ಎಷ್ಟಾದರೂ ಅವನು ಶಾಲಾ ಮಾಸ್ಟರರ ಮಗ.

ತನ್ನ ಅಪ್ಪ ಕಲಿಸಿದ “ಪ್ರಾಮಾಣಿಕತೆ ಫಲ ಕೊಡುತ್ತದೆ” ಎಂಬ ನೀತಿ ಪಾಠಗಳೆಲ್ಲಾ ತಕ್ಷಣವೇ ಅವನಿಗೆ ನೆನಪಾಗಿ ತನ್ನ ಜೀವನದ ಮೊದಲ ಬಹುಶಃ ಜೀವನದ ಕೊನೆಯ ರಾಬರಿಯಲ್ಲೂ ಪ್ರಾಮಾಣಿಕತೆ ಮೆರೆಯ ಹೊರಟಿದ್ದ.

ಡಜನ್‌ಗಟ್ಟಲೆ ತೆಗೆದುಕೊಂಡವರು ಕೂಡ ಒಂದೋ ಎರಡೋ ಬುಕ್‌ಗಳನ್ನು ತಂದಿಟ್ಟು ಶರಣಾಗತರಾಗುತ್ತಿದ್ದರೆ, ಶ್ರೀಧರ ತಾನು ತೆಗೆದುಕೊಂಡಿದ್ದ ಪೂರ್ತಿ ಅರ್ಧ ಡಜನ್ ಬುಕ್‌ಗಳನ್ನೂ ಸರ್‌ರ ಮುಂದೆ ಹಿಡಿದಿದ್ದ!

ಇವನ ಈ ಮಿತಿಮೀರಿದ ಪ್ರಾಮಾಣಿಕತೆಗೆ ವಿಶೇಷ ಫಲ ದೊರಕಿತ್ತೆಂಬುದನ್ನು ವಿಶೇಷವಾಗಿ ಹೇಳುವುದು ಬೇಡವೇನೋ! ಅದರ ಜೊತೆಗೆ “ನೀವು ಮುಂದೆ ದೊಡ್ಡ ಡಾನ್ ಆಗಲಿಕ್ಕುಂಟು” ಎಂಬ ಕಾಂಪ್ಲಿಮೆಂಟನ್ನೂ ಪಡೆದಿದ್ದ!

ಹೀಗೆ ಹೇಳುತ್ತಾ ಹೋದರೆ ಮೊದಲಿನಿಂದ ಕೊನೆಯವರೆಗೂ ಬರೀ ಗೋಳಿನ ಕಥೆಗಳೇ..

ಸರಿ, ಈ ರೇಂಜಿಗೆ ಪೆಟ್ಟು ಕೊಟ್ಟಿದ್ದಕ್ಕೆ ಬೇರೆ ಯಾರಾದರೂ ಆಗಿದ್ದರೆ ಹುಡುಗರಿಗೆ ಏನಾದರೂ ಹೆಚ್ಚುಕಮ್ಮಿ ಆಗಿದೆಯೇ ಎಂದು ಯೋಗಕ್ಷೇಮ ವಿಚಾರಿಸುತ್ತಿದ್ದರು ಅಥವಾ ಹಾಳಾಗಿ ಹೋಗಲಿ ಎಂದು ಸುಮ್ಮನಿದ್ದು ಬಿಡುತ್ತಿದ್ದರು.

ಆದರೆ, ನಮ್ಮ ಹೌಸ್ ಮಾಸ್ಟರ್ ಅಷ್ಟಕ್ಕೇ ಸಮಾಧಾನಿತರಾಗುವವರಲ್ಲವಲ್ಲ.

ಮುಂದುವರೆದು, ಎಲ್ಲಾ ಹುಡುಗರಿಂದ ಪೋಸ್ಟ್ ಕಾರ್ಡ್‌ಗಳನ್ನು ತರಿಸಿ, “ಮುಂದಿನ ವಾರ ಪೋಷಕರ ಸಭೆ ಇರಲಿದ್ದು ತಾವುಗಳು ಕಡ್ಡಾಯವಾಗಿ ಹಾಜರಿರಬೇಕು” ಎಂಬ ಸಾರಾಂಶವುಳ್ಳ ಪತ್ರವನ್ನು ತಾವೇ ಡಿಕ್ಟೇಟ್ ಮಾಡುತ್ತಾ, ಬಹುತೇಕ ಫ್ರೆಂಚ್, ಲ್ಯಾಟಿನ್, ಜರ್ಮನ್ ಪದಗಳಿಂದ ಕೂಡಿದ್ದ ಅವರ ಇಂಗ್ಲಿಷನ್ನು ಬರೆಯುವಲ್ಲಿ ಹುಡುಗರು ಎಡವಬಹುದೆಂದು ಒಂದೊಂದು ಕಠಿಣ ಪದಗಳ ಸ್ಪೆಲ್ಲಿಂಗ್‌ಗಳನ್ನು ಹೇಳಿಕೊಡುತ್ತಾ, ಅವುಗಳ ಅರ್ಥ ವಿವರಿಸುತ್ತಾ ಬರೆಸಿ, ವಿಳಾಸವನ್ನು ಸರಿಯಾಗಿ ಬರೆದಿರುವರೋ ಎಂಬುದನ್ನು ಮತ್ತೊಮ್ಮೆ ದೃಢಪಡಿಸಿಕೊಂಡು ತಮ್ಮ ಕಣ್ಣ ಮುಂದೆಯೇ ಶಾಲಾ ಅಂಚೆ ಡಬ್ಬಕ್ಕೆ ಹಾಕಿಸಿದ್ದರು.

ಹೀಗೆ ಅಂಚೆ ಡಬ್ಬಕ್ಕೆ ಪತ್ರಗಳನ್ನು ಹಾಕಿದ್ದ ಗೆಳೆಯರೋ ತಮ್ಮ ಪೋಷಕರು ಬರುವ ಗಳಿಗೆಯನ್ನು ನೆನೆನೆನೆದು ಮೈನಡುಕ ಹೆಚ್ಚಿಸಿಕೊಂಡು, ನಿದ್ದೆ ಕಳೆದುಕೊಂಡಿದ್ದರು. ಆಗಾಗ ಪತ್ರ ಬರೆದು “ಬಂದು ಹೋಗಿ, ಬಂದು ಹೋಗಿ” ಎಂದು ಅಪ್ಪ ಅಮ್ಮನನ್ನು ಪೀಡಿಸುತ್ತಿದ್ದವರು, ಪ್ರತಿವಾರ ಅಪ್ಪ ಅಮ್ಮ ಬರಲಿ ಎಂದು ಆಶಿಸುತ್ತಿದ್ದವರು ಇದೀಗ
“ಅಪ್ಪ ಅಮ್ಮ ಇನ್ಯಾವತ್ತೂ ನಮ್ಮ ಶಾಲೆಯ ಕಡೆ ಬಾರದಿರಲಿ” ಎಂದು ದೇವರ ಮೊರೆ ಹೋಗಿದ್ದರು.

ಆ ದಿನವೂ ಬಂದೇ ಬಿಟ್ಟಿತು.

ಬರೆದರೆ ಅದೊಂದು ಘನಘೋರ ಅಧ್ಯಾಯ ಆದೀತು!

ಹಾಗಾಗಿ, ಹೆಚ್ಚು ವಿವರಗಳನ್ನು ನೀಡದೆ ನಿಮ್ಮ ಕಲ್ಪನೆಗೆ ಬಿಡುವುದೊಳಿತು.

ಅದರಲ್ಲೂ ಮುಖ್ಯ ಪಾತ್ರಧಾರಿಗಳಾಗಿದ್ದ ನಮ್ಮ ಗೆಳೆಯರ ಪಾಲಿಗೆ ರೌದ್ರ, ಭಯಾನಕ, ಭೀಭತ್ಸ, ಕರುಣಾ ರಸಗಳಷ್ಟೇ ಮೇಳೈಸಿದ್ದ ಮೆಲೋಡ್ರಾಮವಾಗಿತ್ತದು.

ಎಷ್ಟಾದರೂ ಬಂದ ಪೋಷಕರು ತಮ್ಮ ಮಕ್ಕಳ ‘ಘನ ಕಾರ್ಯ’ವನ್ನು ಮೆಚ್ಚಿ ಸುಮ್ಮನಿರುತ್ತಾರೆಯೇ.

“ನಿಮ್ಮ ಮಕ್ಕಳ ಬಗ್ಗೆ ನಾವು ಬಹಳ ಕಾಳಜಿ ತೆಗೆದುಕೊಳ್ಳುತ್ತೇವೆ” ಎಂಬುದನ್ನು ತೋರಿಸಲು ಶಿಕ್ಷಕರು ಎರಡು ಕೊಟ್ಟರೆ “ನಮಗೂ ನಿಮ್ಮ ಕಾಳಜಿಯ ಬಗ್ಗೆ ಗೌರವ ಇದೆ” ಎಂಬುದನ್ನು ತೋರಿಸಲು ಪೋಷಕರು ನಾಲ್ಕು ಕೊಡುತ್ತಿದ್ದರು.

ಹೀಗೆ, ಅಕ್ಷರಶಃ ಸ್ಪರ್ಧೆಗೆ ಬಿದ್ದವರಂತೆ ಶಿಕ್ಷಕರೂ ಪೋಷಕರೂ ಸರದಿಯಲ್ಲಿ ಬಾರಿಸುತ್ತಾ ನಮ್ಮ ಗೆಳೆಯರನ್ನು ಹಣ್ಣುಗಾಯಿ ನೀರುಗಾಯಿ ಮಾಡಿ ಬಿಸಾಕಿದರು.
ಅದೂ ಸಾಲದೆಂಬಂತೆ ಪೋಷಕರ ಸಮ್ಮುಖದಲ್ಲಿ ಮತ್ತೊಮ್ಮೆ ಕ್ಷಮಾಪಣಾ ಪತ್ರವನ್ನು ಬರೆಸಿಕೊಂಡು ಸಭೆಗೆ ಕೊನೆ ಸಾರಿದರು.
ಈ ನಡುವೆ ವಿಶ್ವನ ಮನೆಯಿಂದ ಮಾತ್ರ ಪೋಷಕರು ಬಂದಿರಲಿಲ್ಲ.

ಸಂಜೆಯಾಯಿತು.

ಇನ್ನೇನು ನಮ್ಮ ಡಾರ್ಮಿಟರಿ ಸಾವಿನ ಮನೆಯಂತೆ ವಿಷಾದ ಗೃಹವಾಗಿ ಹೋಗಿತ್ತೆಂದೂ, ಗೆಳೆಯರೆಲ್ಲರೂ ವಿಷಣ್ಣ ವದನರಾಗಿ ಮೂಲೆ ಸೇರಿದ್ದರೆಂದೂ ನೀವು ಯೋಚಿಸಬಹುದು.

ಹಿಂದೆ ಡಿಡಿ ನ್ಯಾಷನಲ್‌ನಲ್ಲಿ ಯಾರಾದರೂ ಗಣ್ಯರು ನಿಧನ ಹೊಂದಿದರೆ ಸಂತಾಪ ಸೂಚಿಸಲೆಂದು ದಿನಪೂರ್ತಿ ಹಾಕಿರುತ್ತಿದ್ದ ಪಿಟೀಲು ಸದ್ದಿನ ಮ್ಯೂಸಿಕನ್ನೂ ಹಿನ್ನೆಲೆಯಲ್ಲಿ ನೀವು ಕಲ್ಪಿಸಿಕೊಳ್ಳಬಹುದು!

ಆದರೆ, ಶೋಕತಪ್ತತೆ ಆವರಿಸುವುದಿರಲಿ, ಎಲ್ಲರ ಸಹಜ ನಿರೀಕ್ಷೆಗಳನ್ನು ಹುಸಿ ಗೊಳಿಸುವಂತೆ ಡಾರ್ಮಿಟರಿಯಲ್ಲಿ ಮಿನಿ ಪಾರ್ಟಿಯೊಂದು ಅರೇಂಜ್ ಆಗಿ, ಸಡಗರ ಸಂಭ್ರಮ ಮನೆಮಾಡಿತ್ತು!

ವಿಷಯ ಏನೆಂದರೆ, ಅಂದು ವಿಶ್ವ ಪತ್ರ ಪೋಸ್ಟ್ ಮಾಡಿದವನು ನನ್ನನ್ನೂ ಜೊತೆಗೆಳೆದುಕೊಂಡು ಶಾಲಾ ಕಾಂಪೌಂಡ್ ಎದುರಿನ ಅಂಗಡಿಗೆ ಓಡಿದ್ದ. ಅಲ್ಲಿಂದ ಮನೆಗೆ ಫೋನ್ ಮಾಡಿ, “ಅಪ್ಪ, ಮೀಟಿಂಗ್ ಇದೆ ಅಂತ ಶಾಲೆಯಿಂದ ಲೆಟರ್ ಕಳ್ಸಿದ್ದಾರೆ. ನೀನು ಸುಮ್ನೆ ಮೀಟಿಂಗಿಗೆ ಬರಕ್ಕೆ ಹೋಗಬೇಡ. ಬಂದ್ರು ಸೈನ್ ಹಾಕಿಸ್ಕೊಂಡು ವಾಪಸ್ ಕಳುಸ್ತಾರೆ. ಮೊದಲೇ ಇಲ್ಲೆಲ್ಲಾ ಇಂಗ್ಲೀಷಲ್ಲೇ ಮಾತಾಡೋದು. ನಿನಗೆ ಅದು ಅರ್ಥನೂ ಆಗಲ್ಲ. ಸುಮ್ನೆ ಬಂದು ಹೋಗೋ ದುಡ್ಡನ್ನ ಮನಿಯಾರ್ಡರ್ ಮಾಡು. ಆ ದುಡ್ಡಲ್ಲಿ ನೋಟ್ ಬುಕ್ ಆದ್ರೂ ತಗೋ ಬಹುದು..” ಎಂದೆಲ್ಲಾ ಕಥೆ ಹೇಳಿದ್ದ.

ಅದರಿಂದಾಗಿಯೇ, ಅಂದು ಉಳಿದವರೆಲ್ಲರ ಪೋಷಕರು ಬಂದು ಅವರು ಹೊಡೆತ ಎಣಿಸುತ್ತಿದ್ದರೆ ಇವನು ಮಾತ್ರ ಪೋಷಕರು ಬರದೆ ಹಾಯಾಗಿ ದುಡ್ಡೆಣಿಸುತ್ತಿದ್ದ.

ಈ ಖುಷಿಯಲ್ಲಿಯೇ ವಿಶ್ವ ಅಂದು ಸಂಜೆ ಡಾರ್ಮಿಟರಿಯಲ್ಲಿ ಹಾಲ್ಕೋವಾ, ಮೈಸೂರು ಪಾಕ್, ಬಿಸ್ಕತ್ತುಗಳ ಮಿನಿ ಪಾರ್ಟಿಯೊಂದನ್ನು ಅರೇಂಜ್ ಮಾಡಿದ್ದ.

ಪಾರ್ಟಿಯಲ್ಲಿ ವಿಶ್ವ ತನ್ನ ಹೆಚ್ಚುಗಾರಿಕೆಯನ್ನು ಉಳಿದವರೆದುರು ಹೇಳಿಕೊಳ್ಳುತ್ತಿದ್ದರೆ, ಉಳಿದವರು ಕೂಡಾ ತಾವು ಪೆಟ್ಟುತಿಂದ ಬಗೆಯನ್ನು ಅದಕ್ಕಿಂತಲೂ ಹೆಚ್ಚು ರೋಮಾಂಚನಕಾರಿಯಾಗಿ ವರ್ಣಿಸುತ್ತಾ ಹಗುರಾಗುತ್ತಿದ್ದರು!

ಆ ವರ್ಣನೆಯೋ ಇಂದಿಗೂ ನಿಂತಿಲ್ಲ. ನಮ್ಮ ಬ್ಯಾಚ್‌ನ ಆಲ್ ಟೈಮ್ ಫೇವರಿಟ್ ಫ್ಲಾಶ್ ಬ್ಯಾಕ್ ಆಗಿ ಓಡುತ್ತಲೇ ಇದೆ..!

(ಹಿಂದಿನ ಕಂತು: ‘ಕಂಪ್ಯೂಟರ್’ಗೇ ಪಾಠ ಕಲಿಸಿದ ‘ಮೃತ್ಯು!’)

About The Author

ಪೂರ್ಣೇಶ್ ಮತ್ತಾವರ

ಪೂರ್ಣೇಶ್ ಮತ್ತಾವರ ಮೂಲತಃ ಚಿಕ್ಕಮಗಳೂರಿನವರು. ಮೂಡಿಗೆರೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿನ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ, ಸಂಘಟನೆಗಳಲ್ಲಿ ಸಕ್ರಿಯ. "ದೇವರಿದ್ದಾನೆ! ಎಚ್ಚರಿಕೆ!!" ಇವರ ಪ್ರಕಟಿತ ಕಥಾ ಸಂಕಲನ. ಕತೆಗಳು, ಲೇಖನಗಳು, ಮಕ್ಕಳ ಪದ್ಯಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಪರಿಸರದ ಒಡನಾಟದಲ್ಲಿ ಒಲವಿದ್ದು, ಪಕ್ಷಿ ಛಾಯಾಗ್ರಹಣದಲ್ಲೂ ಆಸಕ್ತಿ ಹೊಂದಿದ್ದಾರೆ..

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ