ನನ್ನ ಬಾಲ್ಯದ ಪುಟಗಳ ಮೇಲೆ ಅಚ್ಚೊತ್ತಿರುವ ಗಣೇಶನ ನೆನಪುಗಳು, ಬೆಳೆಯುತ್ತಾ ಬೆಳೆಯುತ್ತಾ ದೊಡ್ಡವರು ಎನಿಸಿಕೊಳ್ಳುವ ಹೊತ್ತಿಗೆ, ತೀವ್ರತೆಯನ್ನು ಕಳೆದುಕೊಳ್ಳತೊಡಗಿದ್ದವು. ಹಾಸ್ಟೆಲ್‌ನಲ್ಲಿ ಮನೆಯಲ್ಲಿ ಮಾಡುವಂತೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಗೆಳತಿಯರ ಮುಂದೆ ನಗೆಪಾಟಲಿಗೆ ಈಡಾಗುವ ಭಯವಿತ್ತು. ಆದರೆ ಗಣೇಶ ಆ ಹೊತ್ತಿಗೆಲ್ಲಾ ಗೆಳೆಯನಂತಾಗಿ ಹೋಗಿದ್ದ. ಎಂಥದ್ದೇ ಸಮಸ್ಯೆ ಎದುರಾದರೂ, ‘ವಿಘ್ನೇಶ್ವರ ಕಾಪಾಡು ತಂದೆ’ ಎಂದುಕೊಂಡರೆ ಸಾಕು ಅವ ಕಾಪಾಡೇ ಕಾಪಾಡ್ತಾನೆ ಎನ್ನುವುದೊಂದು ಬಲವಾದ ನಂಬಿಕೆಯಾಗಿ ಮನಸಿನಲ್ಲಿ ಆಳವಾಗಿ ಬೇರೂರಿತ್ತು. ಈಗಲೂ ಹಾಗೇ, ಸಮಸ್ಯೆ ಎಂದರೆ ಸಾಕು ಮೊದಲು ನಾಲಿಗೆ ನೆನೆಸಿಕೊಳ್ಳುವುದು ಅವನನ್ನೇ.
ತಮ್ಮ ಪಾಲಿಗೆ ಗೆಳೆಯನಂತೆ ಆಗಿರುವ ಗಣೇಶನ ಕುರಿತು ಆಶಾ ಜಗದೀಶ್ ಬರಹ ನಿಮ್ಮ ಓದಿಗೆ
ಈ ಬಾರಿ ‘ಸರಿಯಾಗಿ ಗೌರಿ ಹಬ್ಬದ ಹಿಂದಿನ ದಿನಕ್ಕೆ ಹೀಗಾಗಿಬಿಡುವುದಾ… ಎಂತ ಮಾಡಲಿ ಪೂಜೆ ಮಾಡಲಿಕ್ಕಾಗುವುದಿಲ್ಲವಲ್ಲ…’ ಎಂದು ಪೇಚಾಡಿಕೊಳ್ಳುವಂತಾಗಿದ್ದು ನಿಜ. ಹಾಗಂತ ಪ್ರಿಪೋನು ಮಾಡಿಕೊಳ್ಳುವುದು ಸಾಧ್ಯವಿಲ್ಲ, ಪೋಸ್ಟ್‌ಪೋನ್ ಮಾಡುವುದು ಸಾಧುವಲ್ಲ. ಇರುವುದನ್ನ ಇರುವಂತೆಯೇ ಒಪ್ಪಿಕೊಳ್ಳಬೇಕು. ನಮ್ಮನ್ನು ಸೃಷ್ಟಿಸಿದ ದೇವರಿಗೂ ಇದು ಗೊತ್ತಿರಲೇಬೇಕು ಅಲ್ಲವಾ… ದೇವರ ಕೋಣೆಗೆ ಪ್ರವೇಶ ಇರದಿರಬಹುದು ನನ್ನ ಮನಸಿನ ಕೋಣೆಗೆ ಅವ ಬಂದು ಕೂರುವುದನ್ನ ಯಾರಿಗೆ ತಾನೆ ತಡೆಯಲು ಸಾಧ್ಯ! ಎಷ್ಟು ವಿಚಿತ್ರ ಇದು ಅನಿಸಿ ಸಣ್ಣದಾಗಿ ನಗು ಬಂತು. ನನ್ನ ಮಟ್ಟಿಗೆ ಹೇಳುವುದಾದರೆ, ಸಣ್ಣ ವಯಸ್ಸಿನಲ್ಲಿ ನನ್ನ ಮನೆಯಲ್ಲಿ ಮುಟ್ಟು ಮೈಲಿಗೆಯನ್ನು ಪಾಲಿಸುವ ಬಗ್ಗೆ ಹೆಚ್ಚಾಗಿ ಹೇಳಿಕೊಟ್ಟದ್ದಾಗಲೀ, ಕಡ್ಡಾಯವಾಗಿ ಪಾಲಿಸುವಂತಾಗಲೀ ಹೇರಿದ್ದು ಬಹಳ ಕಡಿಮೆಯೇ. ಆದರೆ ಬೆಳೆಯುತ್ತಾ ಬೆಳೆಯುತ್ತಾ ಸಮಾಜ ನನ್ನಲ್ಲೊಂದು ಅಪಾರಾಧಿ ಪ್ರಜ್ಞೆಯನ್ನು ಮೂಡಿಸಿತೇನೋ ಅನಿಸುತ್ತದೆ ನನಗೆ. ಗೆಳತಿಯರನ್ನು ಆ ಸ್ಥಿತಿಯಲ್ಲಿ ನೋಡಿದ್ದೇನೆ. ಹೊರಗೆ ಕಟ್ಟೆಯ ಮೇಲೆ, ಗೋಣಿಚೀಲ ಹಾಸಿಕೊಂಡು, ಮೂರು ದಿನ ಮಲಗುತ್ತಿದ್ದುದು, ಐದು ದಿನವಾಗಿ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿ ಬಂದ ಮೇಲೆಯೇ ಮನೆಯೊಳಗೆ ಪ್ರವೇಶ… ಹೀಗೆ ನಾನಾ ಆಚರಣೆಗಳು. ಅಕ್ಕ ಪಕ್ಕದ ತಾಯಂದಿರು ಬಲವಂತವಾಗಿ ಮಾಡಿಸುತ್ತಿದ್ದುದನ್ನು. ನಿಧಾನಕ್ಕೆ ಅದಕ್ಕೆಲ್ಲ ನನ್ನ ಗೆಳತಿಯರೂ ಒಗ್ಗಿ ಹೋಗಿ, ಮುಂದೊಂದು ದಿನ ಅವರೂ ಅದನ್ನು ಉಪದೇಶದಂತೆ ಹೇಳುವಂತಾದ ಪರಿವರ್ತನೆಯನ್ನೂ. ಹೊರಗಿನಿಂದ ಅಂತಹ ವಿಚಾರಗಳನ್ನು ತಿಳಿದದ್ದೇ ಹೆಚ್ಚು. ಅವೇ ನಂತರ ತಪ್ಪಿತಸ್ಥ ಭಾವವಾಗಿ ಮನಸಿನಲ್ಲಿ ಉಳಿದಿವೆ ಅಂತನ್ನಿಸುತ್ತದೆ ನನಗೆ. ಆದರೆ ಗಣೇಶನಿಗೂ ನನಗೂ ಎಂತ ಮೈಲಿಗೆ. ಮನಸಿನ ತುಂಬಾ ಅವನೇ ಇರುವಾಗ ಮೈಲಿಗೆ ಎಂಥದ್ದು. ಮೈಲಿಗೆ ಅಂತಾಗಿದ್ದರೆ ಅವನನ್ನು ನೆನೆಯುವ ಮನಸೂ ಆಗದಂತೆ ಅವನೇ ತಡೆಯಬಹುದಿತ್ತು!
ನಮ್ಮ ಮನೆಯ ಬಲ ಬದಿಯ ಖಾಲಿ ಸೈಟಿನಲ್ಲಿ ನೆನ್ನೆಯಿಂದಲೂ ಸಣ್ಣ ಸಣ್ಣ ಮಕ್ಕಳ ಕಲರವ. ಎಲ್ಲರೂ ಸೇರಿ ಕೋಲು ಕಡ್ಡಿಗಳನ್ನು ಬಳಸಿ ಗಣೇಶನಿಗೊಂದು ಗೂಡು ಕಟ್ಟುತ್ತಿದ್ದಾರೆ. ಸಣ್ಣಗೆ ಮಳೆ ಬರುತ್ತಿದೆ. ಅದನ್ನು ಲೆಕ್ಕಿಸದೆ ಗೂಡು ಕಟ್ಟುವುದರಲ್ಲೇ ಮುಳುಗಿ ಹೋಗಿದ್ದಾರೆ. ನೀಲಿ ಬಣ್ಣದ ಪ್ಲಾಸ್ಟಿಕ್ ಕವರನ್ನು ಹೊದಿಸಿದ್ದಾರೆ. ಕೆಂಪು ಸೀರೆಯೊಂದನ್ನು ಇಳಿಬಿಟ್ಟಿದ್ದಾರೆ. ಕೇಸರಿ, ಬಿಳಿ ಬಣ್ಣದ ಚಾಪೆಯೊಂದನ್ನು ಹಾಸಿದ್ದಾರೆ. ಮಳೆ ಗಾಳಿಯಿಂದ ತಮ್ಮ ಗೂಡನ್ನು ರಕ್ಷಿಸಲಿಕ್ಕಾಗಿ ಗಂಟೆ ರಾತ್ರಿಯ ಹತ್ತಾದರೂ ಅಲ್ಲೇ ಕಾದು ಕುಳಿತಿದ್ದಾರೆ. ನಂತರ ಮನೆಯವರ ಬಲವಂತಕ್ಕೆ ಮನಸಿಲ್ಲದ ಮನಸಿನಿಂದ ಮನೆಗೆ ಎದ್ದು ಹೋಗಿದ್ದಾರೆ. ನಾಳೆ ಗಣೇಶನನ್ನು ತರುತ್ತಾರೆ ಅನಿಸುತ್ತದೆ. ಸಂಜೆಯಿಂದಲೂ ಕೂಗಾಟಗಳು ಜೋರಾಗಿವೆ. ‘ಗಣಪತಿ ಬಪ್ಪ ಮೋರಿಯ ಮಂಗಳ ಮೂರ್ತಿ ಮೋರಿಯ…’ ಅದರೊಟ್ಟಿಗೆ ನನ್ನ ನೆನಪುಗಳು ಬಾಲ್ಯಕ್ಕೆ ಜಾರುತ್ತಿವೆ.
ನನ್ನ ಬಾಲ್ಯದ ತುಂಬ ಗಣೇಶನೇ ಇದ್ದ. ಅದು ಹೇಗೆ ಅವನ ಮೇಲೆ ನಂಬಿಕೆ ಬೆಳೆಯಿತೋ ಗೊತ್ತಿಲ್ಲ. ಪ್ರೈಮರಿಯಲ್ಲಿ ಓದಿದ್ದ ಕೋಳೂರ ಕೊಡಗೂಸು ಪಾಠ ಮನಸಿನ ಮೇಲೆ ಎಂಥ ಪರಿಣಾಮ ಬೀರಿತ್ತು ಎಂದರೆ, ಭಕ್ತಿಯಿಂದ ಪೂಜಿಸಿದರೆ ದೇವರು ಒಲಿದೇ ಒಲಿಯುತ್ತಾನೆ ಎಂದು ಬಲವಾಗಿ ನಂಬಿಬಿಟ್ಟಿದ್ದೆ. ಗಣೇಶ ನನ್ನ ಅತ್ಯಂತ ಇಷ್ಟದ ದೇವರಾಗಿದ್ದ. ಕೂತು ಧ್ಯಾನ ಮಾಡುವುದು, ಒಬ್ಬೊಬ್ಬಳೇ ಅವನೊಂದಿಗೆ ಮಾತನಾಡುವುದು ಹೀಗೇ ಏನೇನೋ. ಈಗ ನೆನೆದರೆ ನಗು ಬರ್ತದೆ. ಅಲ್ಲದೆ ಆ ಮುಗ್ಧತೆ ಈಗ ಸಾಧ್ಯವೇ ಇಲ್ಲವಲ್ಲ ಅಂತ ನೋವೂ ಆಗ್ತದೆ. ಆಗ ಹಟ ಮಾಡಿ ಅಪ್ಪನಿಂದ ವುಡ್ ಪಲ್ಪಿನಿಂದ ಮಾಡಿದ ಗಣೇಶನ ಚಂದದ ಮೂರ್ತಿಯೊಂದನ್ನು ಕೊಡಿಸಿಕೊಂಡಿದ್ದೆ. ಹತ್ತಾರು ವರ್ಷಗಳ ಕಾಲ ಅದು ನನ್ನೊಂದಿಗೆ ನನ್ನ ಜೀವನದ ಒಂದು ಭಾಗವೇ ಆಗಿತ್ತು. ಅವನಿಗೆ ನೀರೆರೆಯುವುದು, ಕುಂಕುಮ ಗಂಧ ಹಚ್ಚಿ, ಹೂ ಮುಡಿಸಿ ಪೂಜೆ ಮಾಡುವುದು, ಪ್ರೀತಿಯಿಂದ ಮುದ್ದುಮಾಡುವುದು, ಮುದ್ದಿನಿಂದ ಮಾತಾಡುವುದು ನಿತ್ಯವೂ ನಡೆಯುತ್ತಿತ್ತು.
ಹೈಸ್ಕೂಲಿಗೆ ಬರುವ ಹೊತ್ತಿಗೆ ಸಂಕಷ್ಟಹರ ಚತುರ್ಥಿ ವ್ರತ ಆಚರಿಸಲು ಶುರು ಮಾಡಿದ್ದೆ. ಎಂಥ ಕಟ್ಟುನಿಟ್ಟಿನ ಉಪಾವಾಸ ಅದು. ಒಂದು ಹನಿ ನೀರನ್ನೂ ಬಾಯಿಗೆ ಹಾಕಿಕೊಳ್ಳುತ್ತಿರಲಿಲ್ಲ. ರಾತ್ರಿ ಚಂದ್ರೋದಯ ಆದ ಮೇಲೆಯೇ ಅನ್ನ ನೀರು ಬಾಯಿಗೆ ಬೀಳುತ್ತಿದ್ದದ್ದು. ಇನ್ನು ಗೌರಿ-ಗಣೇಶ ಹಬ್ಬ ಬಂತೆಂದರೆ ಸಂಭ್ರಮವೋ ಸಂಭ್ರಮ. ಭಕ್ತಿಪೂರ್ವಕವಾಗಿ ಪೂಜೆ ಪುರಸ್ಕಾರಗಳಾಗಿ, ವ್ರತ ಕತೆಯನ್ನೂ ಓದಿಯಾಗುತ್ತಿತ್ತು. ಜೊತೆಗೆ ಊರಿನ ತುಂಬಾ ಗಲ್ಲಿ ಗಲ್ಲಿಗಳಲ್ಲಿ ಬಂದು ಕೂತಿರುತ್ತಿದ್ದ ಅವನ ಚಂದ ಚಂದದ ರೂಪಗಳನ್ನು ಕಣ್ತುಂಬಿಕೊಳ್ಳುವ ತವಕ. ಜೊತೆಗೆ ಚೌತಿಯ ಉಢಾಳ ಚಂದ್ರ ಕಣ್ಣಿಗೆಲ್ಲಿ ಬಿದ್ದು ಅವಾಂತರ ಮಾಡ್ತಾನೋ ಎನ್ನುವ ಭಯ. ತಲೆ ಎತ್ತಿ ಆಕಾಶವನ್ನೇ ನೋಡದೆ, ಪಟಾಕಿಯ ಢಾಂ ಢೂಂ ಎಂಬ ಭಯಪಡಿಸುವ ಸದ್ದಿನ ನಡುವೆ, ಎಲ್ಲಿ ಲಕ್ಷ್ಮಿ ಪಟಾಕಿ ಇಟ್ಟಿದಾರೋ, ಎಲ್ಲಿ ಆನೆ ಪಟಾಕಿ ಇಟ್ಟಿದಾರೋ ಎಂದು ಹೆದರುತ್ತಲೇ ನೆಲ ನೋಡುತ್ತಾ, ಊರು ಸುತ್ತಿ ಗಣೇಶನನ್ನ ನೋಡಿ ಬರುತ್ತಿದ್ದೆವು. ಅಪ್ಪಿ ತಪ್ಪಿ ಆ ದುಷ್ಟ ಚಂದ್ರ ಕಣ್ಣಿಗೆ ಬಿದ್ದು ವ್ರತಭಂಗ ಮಾಡಿದರೆ ಸಾಕು, ಮನೆಗೆ ಬಂದು ಶಮಂತಕೋಪಖ್ಯಾನದ ಓದು, ಶ್ರವಣ ಆಗುತ್ತಿತ್ತು. ಆಗಲೇ ಮನಸಿಗೆ ಕೊಂಚ ಸಮಾಧಾನ. ಆದರೂ ಆ ವರ್ಷವಿಡೀ ಸಣ್ಣದೇನಾದರೂ ಅಪವಾದ ಬಂದೀತಾ ಎಂದು ಅನುಮಾನಿಸುತ್ತಲೇ ಕಳೆಯುವುದು ಆಗುತ್ತಿತ್ತು. ಹೇಗೋ ವರ್ಷ ನಿರಾತಂಕವಾಗಿ ಕಳೆಯಿತೆಂದರೆ ಗಣೇಶನದೇ ಪವಾಡ ಎಂದೆನಿಸಿ, ಬರುವ ವರ್ಷ ಮತ್ತಷ್ಟು ನಿಷ್ಟೆಯಿಂದ ಪೂಜೆ ಮಾಡುತ್ತೇನೆ, ಚೌತಿಯ ದಿನ ಕತ್ತಲಾಗುವ ಮುಂಚೆ ಮನೆ ಸೇರುತ್ತೇನೆ, ಯಾವುದೇ ಕಾರಣಕ್ಕೂ ಚಂದ್ರ ದರ್ಶನ ಮಾಡುವುದಿಲ್ಲ ಎನ್ನುವ ರೆಸಲ್ಯೂಷನ್ಸ್ ಮನಸಿನಲ್ಲೇ ರೆಡಿ ಇರುತ್ತಿದ್ದವು.
ನನ್ನ ಮನೆಯಲ್ಲಿ ಗಣೇಶನನ್ನ ಕೂರಿಸುವ ಪದ್ಧತಿ ಇರಲಿಲ್ಲ. ಆದರೆ ನನ್ನ ಗಣೇಶನ ಮೂರ್ತಿಗೆ ಪೂಜೆ ತಪ್ಪುತ್ತಿರಲಿಲ್ಲ. ಆ ದಿನಗಳು ಮತ್ತೆ ಬರಲಾರವು ಅನಿಸುತ್ತದೆ. ಗಣೇಶನನ್ನು ಕೂರಿಸುವವರ ವ್ರತಾಚರಣೆ ಬಹಳ ಕಟ್ಟುನಿಟ್ಟಾಗಿರುತ್ತಿತ್ತು. ಒಂದು ದಿನ, ಮೂರು ದಿನ, ಐದು ದಿನ ಹೀಗೆ ತಮ್ಮ ಸಾಮರ್ಥ್ಯ ಮತ್ತು ಅವಕಾಶಗಳಿಗೆ ತಕ್ಕಂತೆ ಗೌರಿ-ಗಣೇಶರನ್ನು ಮನೆಯಲ್ಲಿ ಇರಿಸಿಕೊಂಡು ನಂತರ ನೀರಿಗೆ ಬಿಡುತ್ತಿದ್ದರು. ಅಷ್ಟು ದಿನವೂ 21 ಬಗೆಯ ಹೂ-ಪತ್ರೆಗಳ ಸಮರ್ಪಣೆ, 21 ಬಗೆಯ ನೈವೇದ್ಯ ಸಮರ್ಪಣೆ, ನಿಷ್ಠೆಯಿಂದ ಪೂಜೆ, ಪ್ರಸಾದ ವಿನಿಮಯ ನಡೆಯುತ್ತಿತ್ತು. ಕೆಲವರು ಇಪ್ಪತ್ತೊಂದು ಗಣೇಶ ದರ್ಶನ ಮಾಡುವ, ಪ್ರತಿ ಗಣೇಶನಿಗೂ ಇಪ್ಪತ್ತೊಂದು ನಮಸ್ಕಾರಗಳನ್ನು ಮಾಡುವ ಹರಕೆ ಹೊತ್ತಿರುತ್ತಿದ್ದರು. ಅಂಥವರು ಊರೆಲ್ಲ ಸುತ್ತಿ ಗಣೇಶ ದರ್ಶನ ಮಾಡಿ ಬರುತ್ತಿದ್ದರೆ, ಕೆಲ ಹರೆಯದ ಹುಡುಗ ಹುಡುಗಿಯರು ಗಣೇಶನ ನೆಪದಲ್ಲಿ ತಮ್ಮ ಇಷ್ಟದ ಹುಡುಗ ಅಥವಾ ಹುಡುಗಿಯ ಮನೆಗೆ ಹೋಗಿ ಬಂದು ಎಂಥದೋ ಸಾಹಸ ಮಾಡಿದೆವೆಂದು ತಮ್ಮ ಗೆಳೆಯರೆದುರು ಬೀಗುತ್ತಿದ್ದರು.
ಹೀಗೆ ನನ್ನ ಬಾಲ್ಯದ ಪುಟಗಳ ಮೇಲೆ ಅಚ್ಚೊತ್ತಿರುವ ಗಣೇಶನ ನೆನಪುಗಳು, ಬೆಳೆಯುತ್ತಾ ಬೆಳೆಯುತ್ತಾ ದೊಡ್ಡವರು ಎನಿಸಿಕೊಳ್ಳುವ ಹೊತ್ತಿಗೆ, ತೀವ್ರತೆಯನ್ನು ಕಳೆದುಕೊಳ್ಳತೊಡಗಿದ್ದವು. ಹಾಸ್ಟೆಲ್‌ನಲ್ಲಿ ಮನೆಯಲ್ಲಿ ಮಾಡುವಂತೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಗೆಳತಿಯರ ಮುಂದೆ ನಗೆಪಾಟಲಿಗೆ ಈಡಾಗುವ ಭಯವಿತ್ತು. ಆದರೆ ಗಣೇಶ ಆ ಹೊತ್ತಿಗೆಲ್ಲಾ ಗೆಳೆಯನಂತಾಗಿ ಹೋಗಿದ್ದ. ಎಂಥದ್ದೇ ಸಮಸ್ಯೆ ಎದುರಾದರೂ, ‘ವಿಘ್ನೇಶ್ವರ ಕಾಪಾಡು ತಂದೆ’ ಎಂದುಕೊಂಡರೆ ಸಾಕು ಅವ ಕಾಪಾಡೇ ಕಾಪಾಡ್ತಾನೆ ಎನ್ನುವುದೊಂದು ಬಲವಾದ ನಂಬಿಕೆಯಾಗಿ ಮನಸಿನಲ್ಲಿ ಆಳವಾಗಿ ಬೇರೂರಿತ್ತು. ಈಗಲೂ ಹಾಗೇ, ಸಮಸ್ಯೆ ಎಂದರೆ ಸಾಕು ಮೊದಲು ನಾಲಿಗೆ ನೆನೆಸಿಕೊಳ್ಳುವುದು ಅವನನ್ನೇ. ಇಷ್ಟೊಂದು ಧಾವಂತದ ಬದುಕಿನಲ್ಲೂ ಅವ ಹಾಸುಹೊಕ್ಕಾದ. ಮದುವೆಯಾಗಿ, ಮಕ್ಕಳಾಗುವವರೆಗೂ ಒಂದು ಮಟ್ಟಿಗೆ ಪೂಜೆ ವ್ರತಗಳು ನಿರಂತರ ಮತ್ತು ನಿರಾತಂಕವಾಗಿ ಸಾಗಿದವು. ಮಕ್ಕಳು ಹುಟ್ಟಿ ಬಾಣಂತನಗಳು, ಹಾಲೂಡಿಸುವಿಕೆಯಿಂದಾಗಿ ಉಪವಾಸಗಳು ಕಡಿಮೆಯಾದವು. ವ್ರತಗಳ ತೀವ್ರತೆಯೂ ಕಡಿಮೆಯಾಗತೊಡಗಿತು. ಆದರೆ ಗಣೇಶ ಮಾತ್ರ ಮನಸಿನಲ್ಲಿ ಹಾಗೇ ಅಚ್ಚಳಿಯದೆ ಉಳಿದ.
ಇತ್ತೀಚಿನ ವರ್ಷಗಳಲ್ಲಿ ನಿಸರ್ಗ ಪ್ರಿಯ ಗಣೇಶನನ್ನು ಮಾಡುವ ಎಂದು ಚಿಂತಿಸಿದೆವು. ಅರಶಿಣದಿಂದ ಗಣೇಶನನ್ನು ಮಾಡಿ, ಪೂಜಿಸಿ ಸಂಜೆ ನೀರಿಗೆ ಬಿಡುತ್ತಿದ್ದೆವು. ಈಗ ಮಕ್ಕಳಿಗೂ ಅವನೆಂದರೆ ಇಷ್ಟ. ಈ ಬಾರಿ ಎಲ್ಲರೂ ಸೇರಿ ಮಣ್ಣಿನ ಗಣಪನನ್ನ ಮಾಡಿ ಕೂರಿಸಬೇಕು ಎಂದುಕೊಂಡಿದ್ದೆವು… ‘ಮುಂದಿನ ಬಾರಿಯಾದರೂ ಮಣ್ಣಿನ ಗಣಪನನ್ನು ಮಾಡಿ ಪೂಜಿಸುವ ಅವಕಾಶ ಮಾಡಿಕೊಡು’ ಎಂದು ಅವನನ್ನೇ ಕೇಳಿಕೊಳ್ಳಬೇಕು…

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿ. ಕತೆ, ಕವಿತೆ, ಪ್ರಬಂಧ ಬರೆಯುವುದು ಇವರ ಆಸಕ್ತಿಯ ವಿಷಯ.ಮೊದಲ ಕವನ ಸಂಕಲನ “ಮೌನ ತಂಬೂರಿ.”