ನಾನು ಕೆಲಸದ ಸಲುವಾಗಿ ಆಗಾಗ ಮಾತನಾಡುತ್ತಿದ್ದ ಬಾಂಗ್ಲಾದೇಶ ಮೂಲದ ಸಹೋದ್ಯೋಗಿಯೊಬ್ಬರ ಮನೆ ಕೂಡಾ ಸಂಪೂರ್ಣವಾಗಿ ಸುಟ್ಟಿತ್ತು. ಪತಿ ಮತ್ತು ಮೂವರು ಮಕ್ಕಳೊಡನೆ ಮನೆ ಬಿಟ್ಟು ಬರುವಾಗ ಎರಡು ಮೂರು ಸೂಟ್ಕೇಸಿನಷ್ಟು ಬಟ್ಟೆ ಮತ್ತು ಅತೀ ಅವಶ್ಯಕವಾದ ವಸ್ತುಗಳನ್ನು ಮಾತ್ರ ತರಲು ಅವರಿಗೆ ಸಾಧ್ಯವಾಗಿದ್ದು. ವಿಮೆ ಕೂಡಾ ತಕ್ಕಮಟ್ಟಿಗೆ ಸಿಗಬಹುದು. ಕಳೆದುಕೊಂಡಿದ್ದನ್ನು ಸಂಪಾದಿಸಲೂಬಹುದು. ಆದರೆ ಹಣದೊಟ್ಟಿಗೆ ಬೆವರು ಮತ್ತು ಪ್ರೀತಿಯನ್ನು ಬೆರೆಸಿ ಕಟ್ಟಿದ ಮನೆ, ಮನೆಗಾಗಿ ತಂದ ವಸ್ತುಗಳು, ಅಲ್ಲಿನ ಸಿಹಿ ನೆನಪುಗಳನ್ನು ಎಷ್ಟು ಹಣಕೊಟ್ಟರೂ ಹಿಂದುರುಗಿ ತರಲು ಸಾಧ್ಯವಿಲ್ಲ.
ಇತ್ತೀಚೆಗೆ ಕ್ಯಾಲಿಫೋರ್ನಿಯಾದಲ್ಲಿ ಕಾಣಿಸಿಕೊಂಡ ಬೆಂಕಿ ಮತ್ತು ಅದರ ಪರಿಣಾಮಗಳನ್ನು ಹತ್ತಿರದಿಂದ ಕಂಡ ಗಿರಿಧರ್ ಗುಂಜಗೋಡು ಬರಹ ನಿಮ್ಮ ಓದಿಗೆ
ಗಂಟೆ ಏಳೂವರೆಯಾಗಿದ್ದರೂ ಸೂರ್ಯನು ನೆಟ್ಟಗೆ ತನ್ನ ಮುಖವನ್ನೇ ತೋರದೇ, ಮೊದಲೇ ಆಲಸಿಯಾಗಿದ್ದ ನನ್ನನ್ನು ಮತ್ತೂ ಆಲಸಿಯಾಗುವಂತೆ ಪ್ರೇರೇಪಿಸುವಂತಹ ಮಬ್ಬು ಕವಿದಿದ್ದ ಆ ದಿನ ಬೆಳಗ್ಗೆ ಭಾರತದಲ್ಲಿರುವ ತಂಡದೊಟ್ಟಿಗೆ ಇರುವ ಮೀಟಿಂಗ್ ಅನ್ನು ಅರೆನಿದ್ದೆಯಲ್ಲಿಯೇ ಮುಗಿಸಿದ್ದೆ. ದಾರಿಯಲ್ಲಿ ತಿನ್ನಲು ಒಂದು ಬಾಳೆಹಣ್ಣನ್ನು ತೆಗೆದುಕೊಂಡು ಆಫೀಸಿನ ಕಡೆಗೆ ಹೆಜ್ಜೆ ಹಾಕಿದಾಗ ಹೊರಗಡೆ ಗಾಳಿ ಎಂದಿಗಿಂತಲೂ ತುಸು ಜೋರಾಗಿಯೇ ಬೀಸುತ್ತಿರುವುದು ಕಂಡುಬಂದಿತ್ತು. ಚಳಿಗಾಲದ ಸಮಯದಲ್ಲಿ ಇದು ತೀರಾ ಅಪರೂಪದ ಸಂಗತಿಯೇನೂ ಅಲ್ಲ. ಕರೆ ಮಾಡಿದ್ದ ಹೆಂಡತಿಯ ಜೊತೆ ಮಾತನಾಡುತ್ತಾ ಗಾಳಿ ಜೋರಾಗಿ ಬೀಸುತ್ತಿದ್ದ ವಿಷಯವನ್ನು ಸಹಜವಾಗಿಯೇ ಹೇಳಿದೆ. ಆಫೀಸಿಗೆ ತಲುಪಿದಾಗ ಹವಾಮಾನ ವರದಿಯಲ್ಲಿ ಬಿರುಗಾಳಿಯ ಕುರಿತು ಮುನ್ನೆಚ್ಚರಿಕೆ ಸಂದೇಶವನ್ನು ಓದಿದಾಗಲೂ ವಿಶೇಷವಾಗಿ ತಲೆಕೆಡಿಸಿಕೊಳ್ಳಲಿಲ್ಲ. ಹನ್ನೊಂದು ಗಂಟೆಯ ಹೊತ್ತಿಗೆ ಗಾಳಿಯ ಅಬ್ಬರ ಎಷ್ಟು ಜೋರಾಯಿತೆಂದರೆ, ನಾನು ಕೂರುವ ಜಾಗದ ಹಿಂದಿರುವ ಕಿಟಕಿಯಿಂದ ನೋಡಿದಾಗ ಕಾಣುವ ಎರಡು ಖರ್ಜೂರದ ಮರಗಳು ಗಾಳಿಗೆ ಜೋರಾಗಿ ತೂರಾಡುತ್ತಿದ್ದವು. ಆಗ ಸ್ನೇಹಿತರೊಬ್ಬರಿಗೆ ವಾಟ್ಸಾಪ್ ಮಾಡುತ್ತಾ ‘ಒಳ್ಳೆಯ ಗಾಳಿ ಬೀಸ್ತಾ ಇದೆ ಇಲ್ಲಿ, ಒಂದು ಕಪ್ ಬಿಸಿ ಕಾಫಿ ಕುಡಿಯುತ್ತಾ ಒಂದು ಒಳ್ಳೆಯ ವಾಕ್ ಮಾಡುವ ಮನಸ್ಸಾಗುತ್ತಿದೆ’ ಅಂದೆ. ಆ ಹೊತ್ತಿನಲ್ಲಿ ಕೂಡಾ ಮುಂದಾಗುವ ಒಂದು ಭೀಕರ ನೈಸರ್ಗಿಕ ವಿಪತ್ತಿಗೆ ಸಾಕ್ಷಿಯಾಗಲಿದ್ದೇನೆ ಎಂಬ ಚಿಕ್ಕ ಸುಳಿವು ಕೂಡಾ ನನಗಿರಲಿಲ್ಲ. ಮಧ್ಯಾಹ್ನ ಊಟ ಮುಗಿಸಿ ಬಂದಾಗ ನಾನಿರುವ ಜಾಗದಿಂದ ಸುಮಾರು ಅರವತ್ತೋ ಎಪ್ಪತ್ತೋ ಕಿಲೋಮೀಟರುಗಳಷ್ಟು ದೂರದಲ್ಲಿರುವ ಪ್ಯಾಲಿಸೇಡ್ಸ್ ಅನ್ನುವ ಜಾಗದಲ್ಲಿ ಕಾಡ್ಗಿಚ್ಚು ಬಂದಿರುವ ಬಗ್ಗೆ ಸುದ್ದಿ ಬಂದಿತ್ತು.
ಕುರುಚಲು ಗಿಡಗಳ ಬೆಟ್ಟಗುಡ್ಡಗಳು, ಪುಟ್ಟ ಪುಟ್ಟ ಕಣಿವೆಗಳು ಒಂದೆಡೆಯಾದರೆ ಹೆಸರಿಗೆ ತಕ್ಕಂತೆ ಶಾಂತವಾದ ಆದರೆ ಗಂಭೀರವಾಗಿ ಮೆಲ್ಲಗೆ ಭೋರ್ಗರೆಯುವ ಶಾಂತಸಾಗರ ಇನ್ನೊಂದೆಡೆ. ಇಂತಹ ಚಂದದ ಜಾಗಕ್ಕೆ ಮರುಳಾಗದವರು ವಿರಳ ಅನ್ನಬಹುದು. ಅದಕ್ಕೇ ಬಹಳ ಹಿಂದಿನಿಂದ ನೆಲೆಸಿದವರಿಗೆ ಮತ್ತು ದೊಡ್ಡದೊಡ್ಡ ಶ್ರೀಮಂತರಿಗೆ ಮಾತ್ರವೇ ಈ ಜಾಗ ದಕ್ಕುವುದು. ಇಂತಹ ಸುಂದರ ತಾಣದ ಯಾವುದೋ ಮೂಲೆಯಲ್ಲಿ ಹೊತ್ತಿದ ಚಿಕ್ಕ ಕಿಡಿ ಗಾಳಿಯ ಸಹಾಯದೊಂದಿಗೆ ದೊಡ್ಡದಾಗಿ ಆಗುತ್ತಾ ಆಗುತ್ತಾ ನೂರಾರು ಎಕರೆಗಳಿಗೆ ಹಬ್ಬಲು ಹೆಚ್ಚಿನ ಸಮಯ ಬೇಕಾಗಲಿಲ್ಲ. ಇದು ಕೂಡಾ ನನಗೆ ದೊಡ್ಡ ಅಚ್ಚರಿಯನ್ನೇನೂ ಉಂಟು ಮಾಡಲಿಲ್ಲ. ‘ಓಹ್!’ ಅನ್ನುವ ಚಿಕ್ಕ ಉದ್ಘಾರ ತಂದಿತಷ್ಟೇ.
ಕ್ಯಾಲಿಫೋರ್ನಿಯಾ ಜಾಗತಿಕವಾಗಿ ತಂತ್ರಜ್ಞಾನದ ರಾಜಧಾನಿಯಾಗಿ, ಇಂಗ್ಲಿಷ್ ಸಿನಿಮಾ ಜಗತ್ತಿನ ಕೇಂದ್ರವಾದ ಹಾಲಿವುಡ್ಗಾಗಿ ಎಷ್ಟು ಪ್ರಸಿದ್ಧವೋ ಇಲ್ಲಿನ ಕಾಡ್ಗಿಚ್ಚಿನಿಂದಾಗಿ ಜಾಗತಿಕವಾಗಿ ಕುಪ್ರಸಿದ್ಧವೂ ಹೌದು. ಕರ್ನಾಟಕಕ್ಕಿಂತ ಸುಮಾರು ಎರಡೂಕಾಲು ಪಟ್ಟು ದೊಡ್ಡದಿರುವ ಈ ರಾಜ್ಯದಲ್ಲಿ ವರ್ಷಕ್ಕೆ ಸರಾಸರಿ 7500ರಷ್ಟು ಕಾಡ್ಗಿಚ್ಚಿನ ಪ್ರಕರಣಗಳು ವರದಿಯಾಗುತ್ತವೆಯೆಂದರೆ ಅದೆಷ್ಟು ಸಾಮಾನ್ಯವೆನ್ನುವುದನ್ನು ಊಹಿಸುವುದು ಕಷ್ಟವಲ್ಲ. ಹಾಗಾಗಿ ನಾನು ಕೂಡಾ ಅಷ್ಟೇನೂ ತಲೆಕೆಡಿಸಿಕೊಳ್ಳಲಿಲ್ಲ. ಸಂಜೆ ಐದುಗಂಟೆಗೆ ಕೆಲಸ ಮುಗಿಸಿ ಸಹೋದ್ಯೋಗಿ ಗೆಳೆಯನೊಟ್ಟಿಗೆ ಆಫೀಸಿನ ಎದುರಿನ ರೆಸ್ಟೋರಂಟಿನಲ್ಲಿ ತಿಂಡಿತಿಂದು ಸಂಜೆ ಐದುವರೆಯ ಸುಮಾರಿಗೆ ಮೆಟ್ರೋ ನಿಲ್ದಾಣದೆಡೆಗೆ ಹೆಜ್ಜೆಯಿಡತೊಡಗಿದಾಗ ನಿಧಾನಕ್ಕೆ ಪರಿಸ್ಥಿತಿಯ ಗಂಭೀರತೆಯ ಬಗ್ಗೆ ಅರಿವಾಗತೊಡಗಿತ್ತು. ಗಾಳಿ ಎಷ್ಟು ಜೋರಾಗಿತ್ತೆಂದರೆ ನಡೆಯಲು ಕೂಡಾ ಕಷ್ಟವಾಗುತ್ತಿತ್ತು. ಅದಾಗಲೇ ದಾರಿಯಲ್ಲಿ ಒಂದೆರಡು ಮರಗಳು ಉರುಳಿ ಬಿದ್ದಿದ್ದವು. ರೈಲು ಹತ್ತುವ ಕೆಲವೇ ಕ್ಷಣ ಮೊದಲು ನಾವಿದ್ದ ಜಾಗದಿಂದ ಬರೀ 10-15 ಕಿಲೋಮೀಟರುಗಳಷ್ಟು ದೂರವಿರುವ ನನ್ನ ಆಫೀಸಿರುವ ಪ್ಯಾಸಡಿನಾ ಮತ್ತು ವಾಸವಾಗಿರುವ ಆರ್ಕೇಡಿಯಾ ನಗರಗಳ ಉತ್ತರ ಭಾಗದಲ್ಲಿ ವಿಶಾಲವಾಗಿ ಮೈಚಾಚಿರುವ ಸ್ಯಾನ್ ಗೇಬ್ರಿಯಲ್ ಗುಡ್ಡಗಳ ಸಾಲಿನಲ್ಲಿರುವ ಈಟನ್ ಕೆನ್ಯಾನ್ (ಕಣಿವೆ) ಭಾಗದಲ್ಲಿ ಕಾಡ್ಗಿಚ್ಚು ಬಂದಿದೆ, ಅಗತ್ಯ ಬಿದ್ದರೆ ಮನೆಬಿಟ್ಟು ಸುರಕ್ಷಿತ ಜಾಗಗಳಿಗೆ ತೆರಳಬೇಕು ಅನ್ನುವ ಎಚ್ಚರಿಕೆಯ ಸಂದೇಶ ರಿಂಗಣಿಸಲು ಶುರುವಾಗಿತ್ತು. ಕೂಡಲೇ ಸುದ್ದಿಗಾಗಿ ತಡಕಾಡಿದಾಗ ಪ್ಯಾಲಿಸೇಡ್ಸ್, ಈಟನ್ ಅಲ್ಲದೇ ಇನ್ನೂ ಮೂರು ಕಡೆಗಳಲ್ಲಿ ಕಾಡ್ಗಿಚ್ಚು ಹಬ್ಬಿತ್ತು ಅನ್ನುವ ಸುದ್ದಿಯಿತ್ತು. ನಕ್ಷೆಯಲ್ಲಿ ನೋಡಿದಾಗ ಆ ಜಾಗಗಳಿಗೆಲ್ಲಾ ಹತ್ತಾರು ಮೈಲಿಗಳ ಅಂತರವಿದೆ, ಹಾಗಾದರೆ ಇದರಲ್ಲಿ ಯಾರದ್ದಾದರೂ ಕೈವಾಡವಿರಬಹುದೇ ಅನ್ನುವ ಯೋಚನೆ ಕೂಡಾ ಮನಸ್ಸಿಗೆ ಬಂದಿತ್ತು (ಗಾಳಿಯ ತೀವ್ರತೆಗೆ ಬೆಂಕಿಹೊತ್ತಿದ ಎಲೆ-ಕಡ್ಡಿಗಳ ಮೂಲಕ ಅಷ್ಟು ದೂರ ಹಬ್ಬಿರುವುದೆಂಬ ವಿಷಯ ಒಂದೆರಡು ದಿನ ಕಳೆದ ಮೇಲೆ ಗೊತ್ತಾಯಿತಷ್ಟೇ).
ಈ ಎಲ್ಲಾ ಯೋಚನೆಯ ನಡುವೆ ಐದು ನಿಮಿಷ ಕಳೆದಿದ್ದು ಅರಿವಿಗೆ ಬರಲಿಲ್ಲ. ಅಷ್ಟರಲ್ಲಿ ಒಬ್ಬ ಮಹಿಳೆ ‘Holy cow, it’s so close!’ ಎಂದು ಅಕ್ಷರಶಃ ಕಿರುಚಿದ್ದು ಕೇಳಿತ್ತು. ನನ್ನ ಎಡಭಾಗದಲ್ಲಿನ ಕಿಟಕಿಯ ಮೂಲಕ ಗುಡ್ಡಗಳ ಕಡೆ ನೋಡಿದಾಗ ಒಂದರಲ್ಲಿ ಬೆಂಕಿ ಹೊತ್ತಿ ಉರಿಯುತ್ತಿರುವುದು ಕಂಡಿತ್ತು. ನನ್ನ ಮನೆಯ ಹತ್ತಿರದ ಸ್ಟೇಷನ್ನಿನಲ್ಲಿ ಇಳಿದಾಗ ಸರಿಯಾಗಿ ನಿಲ್ಲಲೂ ಸಾಧ್ಯವಾಗದಷ್ಟು ಜೋರಾಗಿ ಗಾಳಿ ಬೀಸುತ್ತಿತ್ತು. ತುರ್ತುವಾಹನಗಳ ಸೈರನ್ನುಗಳು ನಿರಂತರವಾಗಿ ಕೇಳುತ್ತಿದ್ದವು. ಒಂದು ಇಪ್ಪತ್ತು ಸೆಕಂಡುಗಳ ಕಾಲ ಕಾಡ್ಗಿಚ್ಚಿನ ವೀಡಿಯೋ ಮಾಡಿ ಮನೆಯ ಕಡೆ ಹೆಜ್ಜೆ ಇಡತೊಡಗಿದೆ. ಧೂಳು, ಕಸಕಡ್ಡಿಗಳು ಕಣ್ಣು ಮೂಗಿಗೆ ಬಡಿಯುತ್ತಿದ್ದವು. ಮನೆ ತಲುಪುವ ಮುನ್ನ ಕೊನೆಯ ಐವತ್ತು ಅಡಿಗಳಷ್ಟು ದೂರ ವಿದ್ಯುತ್ ತಂತಿಯ ಕಂಬಗಳ ಕೆಳಗೆ ನಡೆದು ಹೋಗಬೇಕಾಗಿತ್ತು. ಅಷ್ಟರವರೆಗೆ ಸಂಪೂರ್ಣವಾಗಿ ನಿರ್ಲಿಪ್ತನಾಗಿದ್ದ ನನ್ನೊಳಗೆ ಇದು ಚಿಕ್ಕ ವಿಪತ್ತಲ್ಲವೆನ್ನುವ ಅನ್ನುವ ಭೀತಿ ಮೆಲ್ಲಗೆ ಕಾಡಲು ಶುರುವಾಗಿತ್ತು. ಮನೆ ತಲುಪಿದಾಗ ಸುಮಾರು ಕಡೆ ಕರೆಂಟು ಹೋಗಿದೆ, ಇಂಟರ್ನೆಟ್ ಹೋಗಿದೆ ಅನ್ನುವ ವಿಚಾರ ಗೊತ್ತಾಯಿತು. ಆದರೆ ನಮ್ಮ ಅದೃಷ್ಟ ನಾವಿದ್ದ ಜಾಗದಲ್ಲಿ ಕರೆಂಟ್ ಹೋಗಿರಲಿಲ್ಲ. ಅದಾಗಲೇ ಸಾವಿರಕ್ಕೂ ಜಾಸ್ತಿ ಮನೆ ಮತ್ತು ಇತರೇ ಕಟ್ಟಡಗಳು ಸುಟ್ಟಿವೆ, ಕಾಡ್ಗಿಚ್ಚಿನ ವ್ಯಾಪ್ತಿ ನಾಲ್ಕೈದು ಸಾವಿರ ಎಕರೆಗಳನ್ನು ದಾಟಿದೆ ಅನ್ನುವ ಸುದ್ದಿ ಬಂದಿತ್ತು. ರಾತ್ರಿ ಮಲಗಿದವನಿಗೆ ಆಗಾಗ ಎಚ್ಚರವಾದಾಗ ಜೋರಾಗಿ ಗಾಳಿ ಬೀಸುತ್ತಿರುವ ಸದ್ದು ಕಿವಿಗೆ ಬಡಿಯುತ್ತಿತ್ತು.
ಮರುದಿನ ಬೆಳಗ್ಗೆ ಮನೆಯಿಂದ ಕೆಲಸ ಮಾಡಬಹುದೆಂಬ ಸಂದೇಶ ಬಂದಿದ್ದರೂ ಕೂಡಾ ಆಫೀಸಿಗೆ ಹೊರಟೆ. ಅದು ನಾನಿರುವ ಮನೆಗಿಂತಲೂ ಬೆಟ್ಟಕ್ಕೆ ಕೊಂಚ ದೂರದಲ್ಲಿದೆ ಅನ್ನುವುದು ಒಂದು ಕಾರಣವಾದರೆ, ಹೊರಗಿನ ಪರಿಸ್ಥಿತಿ ಹೇಗಿದೆ ಎಂದು ನೋಡಿ ಬರಬಹುದು ಅನ್ನುವುದು ಇನ್ನೊಂದು ಕಾರಣ. ಆದರೆ ಮನೆಯಲ್ಲಿದ್ದರೆ ಅಡಿಗೆ ಮಾಡಿಕೊಳ್ಳಬೇಕು, ಆಫೀಸಿನಲ್ಲಾದರೆ ಫುಡ್ಕೋರ್ಟಿನಲ್ಲಿ ಊಟ ತಿಂಡಿ ಮುಗಿಸಬಹುದು ಅನ್ನುವುದು ನಿಜವಾದ ಕಾರಣವಾಗಿತ್ತು. ಹೊರಗಡೆ ಕಾಲಿಟ್ಟಾಗ ಸುಟ್ಟ ಹುಲ್ಲು ಮತ್ತು ಮುಂಜಾನೆಯ ಇಬ್ಬನಿ ಮಿಶ್ರವಾದ ವಾಸನೆ ಮೂಗಿಗೆ ಅಡರುತ್ತಿತ್ತು. ಊರಕಡೆ ಕೆಲವೊಮ್ಮೆ ಹುಲ್ಲಿನ ಬೆಟ್ಟಗಳಿಗೆ ಬೆಂಕಿಬಿದ್ದಾಗಲೋ, ರಾತ್ರಿ ಅಡಿಕೆ ಸಿಪ್ಪೆಗೆ ಬೆಂಕಿ ಹಚ್ಚಿದಾಗಲೋ ಮರುದಿನ ಬೆಳಗ್ಗೆ ಇದೇ ತರದ ವಾಸನೆ ಬರುವ ಕಾರಣ ನನಗದು ಒಂತರಾ ಅದೇ ಅನುಭವ ಕೊಟ್ಟಿತು. ಮನೆ ಹೊರಗೆ ಮಾತ್ರವಲ್ಲದೇ ಇಡೀ ನಗರದಲ್ಲಿ ಅದೇ ವಾಸನೆ ತುಂಬಿಕೊಂಡಿತ್ತು. ನಾನಿದ್ದ ಆರ್ಕೇಡಿಯಾದಲ್ಲಿ ಅಷ್ಟೊಂದು ಹಾನಿಯಾಗಿದ್ದು ಅನುಭವಕ್ಕೆ ಬಾರದಿದ್ದರೂ ಪಕ್ಕದ ಪ್ಯಾಸಡಿನಾದ ವಾತಾವರಣ ಮಾತ್ರ ಸ್ಮಶಾನಸದೃಶವಾಗಿತ್ತು. ಗಾಳಿಯಿಂದ ರೈಲು ನಿಲ್ದಾಣದಲ್ಲೆಲ್ಲಾ ಕಲ್ಲು ಮಣ್ಣುಗಳು ಹಾರಿ ಬಂದು ಕಸದ ತೊಟ್ಟಿಯಂತೇ ಕಾಣುತ್ತಿತ್ತು. ರೈಲು ನಿಲ್ದಾಣದಿಂದ ಆಫೀಸಿಗೆ ಹೋಗುವ ದಾರಿಯ ಇಕ್ಕೆಲಗಳಲ್ಲೂ ಅರೆಮುರಿದ ಮತ್ತು ಬೇರು ಸಮೇತ ನೆಲಕ್ಕುರುಳಿದ ಮರಗಳನ್ನು ನೋಡುತ್ತಿದ್ದರೆ ನಾನು ಇಷ್ಟು ದಿನ ಓಡಾಡಿದ ಜಾಗ ಇದೇನಾ ಅನ್ನುವ ಅನುಮಾನ ಬರುವಂತಿತ್ತು.

ಮನೆ ತಲುಪುವ ಮುನ್ನ ಕೊನೆಯ ಐವತ್ತು ಅಡಿಗಳಷ್ಟು ದೂರ ವಿದ್ಯುತ್ ತಂತಿಯ ಕಂಬಗಳ ಕೆಳಗೆ ನಡೆದು ಹೋಗಬೇಕಾಗಿತ್ತು. ಅಷ್ಟರವರೆಗೆ ಸಂಪೂರ್ಣವಾಗಿ ನಿರ್ಲಿಪ್ತನಾಗಿದ್ದ ನನ್ನೊಳಗೆ ಇದು ಚಿಕ್ಕ ವಿಪತ್ತಲ್ಲವೆನ್ನುವ ಅನ್ನುವ ಭೀತಿ ಮೆಲ್ಲಗೆ ಕಾಡಲು ಶುರುವಾಗಿತ್ತು.
ಸಂಜೆಯ ಹೊತ್ತಿಗೆ ಗಾಳಿ ಕಮ್ಮಿಯಾಗಿದ್ದರೂ ಕೂಡಾ ಕಾಡ್ಗಿಚ್ಚು ಬೆಳೆಯುತ್ತಲೇ ಹೋಗುತ್ತಿತ್ತು. ಹಾಲಿವುಡ್ ನಗರಕ್ಕೂ ಹೊಸದಾಗಿ ಹಬ್ಬಿತ್ತು. ಜೊತೆಗೆ ಪ್ಯಾಲಿಸೇಡ್ಸ್ ಮತ್ತು ಈಟನ್ ಭಾಗಗಳಲ್ಲಿ ಬೆಂಕಿ ಸ್ವಲ್ಪವೂ ನಿಯಂತ್ರಣಕ್ಕೆ ಬಂದಿರಲಿಲ್ಲ. ಅಮೆರಿಕಾದಲ್ಲಿ ಹೆಚ್ಚಿನ ಕಡೆ ಇರುವುದು ಮರದ ಮನೆಗಳಾದ ಕಾರಣ ಬೆಂಕಿ ತಗುಲುವುದು ಬಹಳ ಸುಲಭ, ಹಾಗಂತ ಕ್ಯಾಲಿಫೋರ್ನಿಯಾ ಭೂಕಂಪದ ವಲಯದಲ್ಲಿ ಬರುವ ಕಾರಣ ಇಟ್ಟಿಗೆ ಮನೆಗಳನ್ನು ಕಟ್ಟಲೂ ಸಾಧ್ಯವಿಲ್ಲ. ಅದೂ ಅಲ್ಲದೇ ದಕ್ಷಿಣ ಕ್ಯಾಲಿಫೋರ್ನಿಯಾ ಭಾಗದಲ್ಲಿ ಮಳೆ ಸುರಿದು ಎಂಟು ತಿಂಗಳುಗಳ ಮೇಲಾಗಿತ್ತು, ಲಾಸ್ ಎಂಜಿಲಿಸ್ ಕೌಂಟಿಯ ಒಳಹೊರಗೂ ಇರುವ ವಿಸ್ತಾರವಾದ ಬೆಟ್ಟಗುಡ್ಡಗಳಲ್ಲಿನ ಹುಲ್ಲು ಪೂರ್ತಿಯಾಗಿ ಒಣಗಿ ಹೊಂಬಣ್ಣಕ್ಕೆ ತಿರುಗಿತ್ತು. ಜೊತೆಗೆ ಬಿಡದೇ ಬೀಸುತ್ತಿದ್ದ ಬಿರುಗಾಳಿ… ಒಟ್ಟಿನಲ್ಲಿ ಪರಿಸ್ಥಿತಿ ಎಲ್ಲಾ ರೀತಿಯಿಂದಲೂ ವಿರುದ್ಧವಾಗಿತ್ತು. ಎರಡು ದಿನಗಳ ಹಿಂದೆ ಬಿರುಗಾಳಿಯ ಮುನ್ಸೂಚನೆ ಸಿಕ್ಕಿದಾಗಲೇ ಈ ತರಹದ ಒಂದು ಘಟನೆಯನ್ನು ಊಹಿಸಿ ಇಲ್ಲಿನ ಅಗ್ನಿಶಾಮಕ ವ್ಯವಸ್ಥೆ ಮುಂದೆ ಬಂದೊದಗಬಹುದಾದ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿತ್ತು. ಆದರೆ ಈ ರೀತಿ ಕಂಡು ಕೇಳರಿಯದ ದುರಂತ ಸಂಭವಿಸಬಹುದು ಅನ್ನುವುದು ಊಹಾತೀತವಾಗಿತ್ತು. ಲಾಸ್ ಎಂಜಿಲಿಸ್ ಮಹಾನಗರದ ಇತಿಹಾಸದಲ್ಲೇ ಭೀಕರವಾದ ವಿಪತ್ತು ಬಂದು ಕಾಲಬುಡದಲ್ಲಿ ನಿಂತಿತ್ತು. ನೆನಪಿಡಿ, ಲಾಸ್ ಎಂಜಿಲಿಸ್ಸಿನ ಅಗ್ನಿಶಾಮಕ ವ್ಯವಸ್ಥೆ ಜಗತ್ತಿನಲ್ಲೇ ಅತ್ಯುತ್ತಮ ಅಗ್ನಿಶಾಮಕ ವ್ಯವಸ್ಥೆಗಳಲ್ಲಿ ಒಂದು. ಆದರೆ ಒಂದೇ ಬಾರಿಗೆ ಬೇರೆ ಬೇರೆ ಜಾಗಗಳಲ್ಲಿ ನಿಯಂತ್ರಣಕ್ಕೆ ಸಿಗದಂತೆ ಕಿಚ್ಚು ಹಬ್ಬಿದಾಗ ಮಾತ್ರ ಬೇರೆ ದಾರಿ ಕಾಣದೆ ಅಕ್ಕಪಕ್ಕದವರಲ್ಲಿ ಸಹಾಯ ಕೇಳತೊಡಗಿದರು. ಕೂಡಲೇ ಕ್ಯಾಲಿಫೋರ್ನಿಯಾದ ಇತರ ಭಾಗಗಳಿಂದ, ಪಕ್ಕದ ರಾಜ್ಯಗಳಾದ ನೆವಾಡಾ, ಓರಗನ್ ಮತ್ತು ಅರಿಝೋನಾಗಳಿಂದ ಅಲ್ಲದೇ ನೆರೆಯ ಕೆನಡಾ ಮತ್ತು ಮೆಕ್ಸಿಕೋದಿಂದಲೂ ಅಗ್ನಿಶಾಮಕ ವಾಹನ ಮತ್ತು ಸಿಬ್ಬಂದಿಗಳು ಬರತೊಡಗಿದರು.
ನಮಗೆ ಯಾವ ಕ್ಷಣದಲ್ಲಾದರೂ ಸ್ಥಳ ಬಿಡಬೇಕಾಗಿ ಬರಬಹುದೆಂಬ ಎಚ್ಚರಿಕೆ ಅದಾಗಲೇ ಎರಡು ಬಾರಿ ಬಂದಿತ್ತು, ನಾವು ಸಜ್ಜುಗೊಂಡಿದ್ದೆವು. ನಾವಿರುವ ಭಾಗದಲ್ಲಿ ವಾಸಿಸುವ ಎಂಟು ನೂರಕ್ಕೂ ಅಧಿಕ ಭಾರತೀಯರಿರುವ ಒಂದು ವಾಟ್ಸಾಪ್ ಗ್ರೂಪಿದೆ. ಅಲ್ಲಿ ಪರಿಸ್ಥಿತಿಯನ್ನು ಎದುರಿಸಲು ಸಿದ್ಧತೆ ನಡೆಯತೊಡಗಿತ್ತು. ಪ್ಯಾಸಡಿನಾದ ದೇವಾಲಯದ ಭಟ್ಟರು ಯಾರೇ ಯಾವಾಗಲೇ ಬಂದರೂ ಉಳಿಯಲು ಮಂದಿರ ಬಾಗಿಲು ತೆರೆದಿದೆ ಎಂಬ ಆಹ್ವಾನವಿತ್ತರು. ಸಿಕ್ಖರ ಒಡೆತನದ ದಿನಸಿ ಅಂಗಡಿ, ಬಂದವರಿಗೆ ಉಚಿತ ಆಹಾರ ಕೊಡುವ ಭರವಸೆಯಿತ್ತಿತು, ಸರಕಾರದ ಮಾಹಿತಿಗಳನ್ನು ತಲುಪಿಸುವುದು, ಪರಿಹಾರ ಕಾರ್ಯದ ಮಾಹಿತಿಗಳನ್ನು ಮುಖ್ಯ ಅಡ್ಮಿನ್ ರಿಯಾಝ್ ಅವರು ಎಲ್ಲರಿಗೂ ತಲುಪಿಸುತ್ತಿದ್ದರು. ನನ್ನ ಸಮುದಾಯದ ಗ್ರೂಪಿನಲ್ಲಿ, ಕನ್ನಡ ಸಂಘದ ಗ್ರೂಪಿನಲ್ಲಿ ಕೂಡಾ ಮನೆಬಿಡಬೇಕಾಗಿ ಬಂದರೆ ನಮ್ಮಲ್ಲಿಗೆ ಬನ್ನಿ ಅನ್ನುವ ಆಹ್ವಾನ, ಸಂಕಟದಲ್ಲಿರುವ ಯಾರಿಗೇ ಆಗಲಿ ನಮ್ಮಿಂದಾಗುವ ಸಹಾಯ ಮಾಡುತ್ತೇವೆ ಅನ್ನುವ ಭರವಸೆಗಳು ಬರತೊಡಗಿದ್ದವು. ಒಟ್ಟಿನಲ್ಲಿ ಜಾತಿ ಮತ ಪ್ರದೇಶಗಳ ಬೇಧವಿಲ್ಲದೇ ಭಾರತೀಯರು ಒಂದಾಗಿದ್ದರು. ಭಾರತೀಯರಿಗೆ ಮಾತ್ರವಲ್ಲ, ಸಂಕಟದಲ್ಲಿರುವ ಯಾರಿಗೇ ಆಗಲಿ ಸಹಾಯ ಮಾಡುತ್ತೇವೆ ಅನ್ನುವ ಮಾತುಗಳು ಕೇಳಿಬರುತ್ತಿತ್ತು. ಹಾಗೇ ಸಹಾಯಗಳು ಹರಿದುಬಂದವು ಕೂಡಾ.
ನಮ್ಮದೇ ಆಫೀಸಿನಲ್ಲಿ ಮೂರು ಜನರ ಮನೆ ಬೆಂಕಿಗೆ ಆಹುತಿಯಾಗಿತ್ತು. ಅದರಲ್ಲಿ ನಾನು ಕೆಲಸದ ಸಲುವಾಗಿ ಆಗಾಗ ಮಾತನಾಡುತ್ತಿದ್ದ ಬಾಂಗ್ಲಾದೇಶ ಮೂಲದ ಸಹೋದ್ಯೋಗಿಯೊಬ್ಬರ ಮನೆ ಕೂಡಾ ಸಂಪೂರ್ಣವಾಗಿ ಸುಟ್ಟಿತ್ತು. ಪತಿ ಮತ್ತು ಮೂವರು ಮಕ್ಕಳೊಡನೆ ಮನೆ ಬಿಟ್ಟು ಬರುವಾಗ ಎರಡು ಮೂರು ಸೂಟ್ಕೇಸಿನಷ್ಟು ಬಟ್ಟೆ ಮತ್ತು ಅತೀ ಅವಶ್ಯಕವಾದ ವಸ್ತುಗಳನ್ನು ಮಾತ್ರ ತರಲು ಅವರಿಗೆ ಸಾಧ್ಯವಾಗಿದ್ದು. ಆಫೀಸಿನಿಂದ ಸಹೋದ್ಯೋಗಿಗಳು ಮತ್ತು ಅವರ ಬಂಧುಗಳು ಸಂಗ್ರಹಿಸಿಕೊಟ್ಟ ಹಣ ಅವರಿಗೆ ಒಂದು ಒಂದುವರೆ ವರ್ಷಗಳ ಬಾಡಿಗೆ ಮನೆಯಲ್ಲಿರಲು ಸಾಕಾಗುತ್ತದೆ. ವಿಮೆ ಕೂಡಾ ತಕ್ಕಮಟ್ಟಿಗೆ ಸಿಗಬಹುದು. ಕಳೆದುಕೊಂಡಿದ್ದನ್ನು ಸಂಪಾದಿಸಲೂಬಹುದು. ಆದರೆ ಹಣದೊಟ್ಟಿಗೆ ಬೆವರು ಮತ್ತು ಪ್ರೀತಿಯನ್ನು ಬೆರೆಸಿ ಕಟ್ಟಿದ ಮನೆ, ಮನೆಗಾಗಿ ತಂದ ವಸ್ತುಗಳು, ಅಲ್ಲಿನ ಸಿಹಿ ನೆನಪುಗಳನ್ನು ಎಷ್ಟು ಹಣಕೊಟ್ಟರೂ ಹಿಂದುರುಗಿ ತರಲು ಸಾಧ್ಯವಿಲ್ಲ. ನಿನ್ನೆಯವರೆಗೆ ನಳನಳಿಸುತ್ತಿದ್ದ ಮನೆಯನ್ನು ಕೇವಲ ಬೂದಿಯ ರಾಶಿಯನ್ನಾಗಿ ನೋಡುವ ನೋವನ್ನು ನಾನು ಕಲ್ಪನೆ ಮಾಡಿಕೊಂಡಾಗ ನನ್ನ ಮನಸ್ಸು ವ್ಯಾಕುಲಗೊಳ್ಳುತ್ತದೆ. ನನ್ನ ಸಹೋದ್ಯೋಗಿಯ ಕುಟುಂಬದ ತರಹದ ಸಾವಿರಾರು ಕುಟುಂಬಗಳಿವೆ. ಒಂದೊಂದು ಕುಟುಂಬದ ಹಿಂದೆಯೂ ಒಂದೊಂದು ನೋವಿನ ಕಥೆಯಿದೆ.
ಇಷ್ಟೆಲ್ಲಾ ಅನಾಹುತದ ನಂತರ ವಿಪತ್ತು ನಿರ್ವಹಣೆ, ಪರಿಹಾರ ಕಾರ್ಯಗಳು ಹೇಗಿದ್ದವು ಅಂತ ಕೇಳಿದರೆ ನಾನು ಅತ್ಯುತ್ತಮವೆಂದೇ ಹೇಳುತ್ತೇನೆ. ಅಗ್ನಿಶಾಮಕದಳದ ದಕ್ಷತೆ, ತುರ್ತು ಸಂದೇಶ ಕಳುಹಿಸಿ ಜನರನ್ನು ಎಚ್ಚರಿಸುವುಸುದು, ಅಗತ್ಯವಿದ್ದೆಡೆ ಮಾತ್ರ ಜನರ ಮನೆ ತೆರುವು ಮಾಡಿಸುವುದು ಹೀಗೆ ಪ್ರತಿ ವ್ಯವಸ್ಥೆಯೂ ಯೋಚಿಸಲೂ ಆಗದಷ್ಟು ಉತ್ತಮವಾಗಿತ್ತು. ಆದ ದುರಂತದ ಪ್ರಮಾಣಕ್ಕೆ ಹೋಲಿಸಿದಾಗ ಸಾವಿನ ಸಂಖ್ಯೆ ಕಮ್ಮಿಯೇ. ಇಲ್ಲಿ ಕೂಡಾ ಲೋಪ ದೋಷಗಳು ಸಾಕಷ್ಟೇ ಕಾಣಬಹುದು. ಆದರೆ ಘಟನೆಯ ತೀವ್ರತೆಗೆ ಹೋಲಿಸಿದರೆ ಅದನ್ನು ನಿರ್ವಹಿಸಿದ ರೀತಿ ಅತ್ಯುತ್ತಮವೆಂದೇ ಹೇಳುತ್ತೇನೆ.

ಲಾಸ್ ಎಂಜಿಲಿಸ್ಸಿನ ಕಾಡ್ಗಿಚ್ಚು ಒಂದು ವಾರದಲ್ಲಿ ಬಹುತೇಕ ನಿಯಂತ್ರಣಕ್ಕೆ ಬಂದರೂ ಸಾಮಾಜಿಕ ಜಾಲತಾಣಗಳಲ್ಲಿ ಬಂದ ಕಾಡ್ಗಿಚ್ಚು ಮಾತ್ರ ನಿಯಂತ್ರಣಕ್ಕೆ ಬಂದಿರಲಿಲ್ಲ. ಸಾಕಷ್ಟು ಸುಳ್ಳು ಸುದ್ದಿಗಳು, ಅತಿರಂಜಿತ ಸುದ್ದಿಗಳು ಹರಿದಾಡುತ್ತಿದ್ದವು. ಯಾವುದೋ ಘಟನೆಗಳಿಗೆ ಇನ್ಯಾವುದೋ ಘಟನೆಗಳನ್ನು ಹೋಲಿಸಿ, ತಾವೇ ನ್ಯಾಯಾಧೀಶರಾಗಿ ತೀರ್ಪುಕೊಟ್ಟು, ಏನೇನೋ ಸುಳ್ಳುಸುದ್ದಿ ಹಬ್ಬಿಸಿ ತಮ್ಮೊಳಗಿನ ನಂಜನ್ನು ಕಾರಿಕೊಳ್ಳುತ್ತಿದ್ದರು. ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಲ್ಪಟ್ಟ ಚಿತ್ರಗಳು ಕೋತಿಗೆ ಹೆಂಡ ಕುಡಿಸಿಬಿಟ್ಟಂತೆ ಮಾಡಿದ್ದವು. ಈತರಹ ವರ್ತನೆ ಇದೇ ಮೊದಲಲ್ಲ, ಕೊನೆಯೂ ಅಲ್ಲ. ಇಲ್ಲಿ ತಾವು ಮತ್ತು ತಮ್ಮವರು ಮಾತ್ರ ಸುಭಗರು ಎಂದು ಯಾರೂ ಹೇಳಿಕೊಳ್ಳಲು ಸಾಧ್ಯವಿಲ್ಲ. ಎಲ್ಲರ ಕೈ ಕೂಡಾ ಕೊಳಕಾಗಿದೆ. ಒಟ್ಟಾರೆಯಾಗಿ ಲಾಸ್ ಎಂಜಿಲಿಸ್ ಮಹಾನಗರದಲ್ಲಿನ ಈ ದುರಂತ ನನಗೆ ನೇರವಾಗಿ ಬಾಧಿಸದಿದ್ದರೂ ಕೂಡಾ ನನ್ನ ಕಾಲ್ಬುಡದಲ್ಲಿ ಜರುಗಿದ ಘಟನೆಯಾದುದರಿಂದ ಒಂದು ನೈಸರ್ಗಿಕ ವಿಪತ್ತು ಹೇಗಿರುತ್ತದೆ ಮತ್ತು ಇಂತಹ ಸಂದರ್ಭದಲ್ಲಿ ನಾವು ಹೇಗೆ ನಡೆದುಕೊಳ್ಳಬೇಕು ಮತ್ತು ಹೇಗೆ ನಡೆದುಕೊಳ್ಳಬಾರದು ಎಂಬುದನ್ನು ನನಗೆ ತೋರಿಸಿಕೊಟ್ಟಿತು.

ಊರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗುಂಜಗೋಡು. ಸದ್ಯ ಮೈಸೂರಿನಲ್ಲಿ ವಾಸ. ಓದು, ತಿರುಗಾಟ, ಚದುರಂಗ ಇತ್ಯಾದಿ ಇಷ್ಟದ ಆಸಕ್ತಿಗಳು. ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

ಲೇಖನ ಹಿಡಿಸಿತು. ಘಟನೆಯನ್ನು ಸೊಗಸಾಗಿ ವಿವರಿಸಿದ್ದೀರಾ.