Advertisement
ಬಂದೇ ಬಿಟ್ಟ ಆಲ್ಫ್ರೆಡ್: ಡಾ. ವಿನತೆ ಶರ್ಮ ಅಂಕಣ

ಬಂದೇ ಬಿಟ್ಟ ಆಲ್ಫ್ರೆಡ್: ಡಾ. ವಿನತೆ ಶರ್ಮ ಅಂಕಣ

ನಾಲ್ಕು ದಿನಗಳ ಹಿಂದೆ ಅಂದರೆ ಮಂಗಳವಾರದಿಂದ ನಮ್ಮ ಸ್ಥಳೀಯ ನಗರಪಾಲಿಕೆಗಳು ನೂರಾರು ನಿರ್ಧಾರಗಳನ್ನು ತೆಗೆದುಕೊಂಡಿವೆ. ‘ಸೇಫ್ಟಿ ಫಸ್ಟ್’ ಎನ್ನುವ ಮಂತ್ರವನ್ನು ಜಪಿಸಿ ನಮ್ಮ ಯೂನಿವರ್ಸಿಟಿಗಳು, ಶಾಲೆಗಳು, ಅಂಗಡಿ ವಹಿವಾಟುಗಳು, ಕಚೇರಿಗಳು ಬಾಗಿಲು ಮುಚ್ಚಿದವು. ಅದಕ್ಕೆ ಮುನ್ನ ಮಂಗಳವಾರದಿಂದ ಎಲ್ಲಾ ಅಂಗಡಿ, ಸೂಪರ್ ಮಾರ್ಕೆಟ್‌ಗಳಲ್ಲಿ ಜನರ ನೂಕುನುಗ್ಗಲು. ಆಹಾರ ಪದಾರ್ಥ, ಕುಡಿಯುವ ನೀರು, ಟಾಯ್ಲೆಟ್ ಪೇಪರ್ ರೋಲ್, ಇತ್ಯಾದಿಗಳು ಕಣ್ಣುಮುಚ್ಚಿ ತೆರೆಯುವಷ್ಟರಲ್ಲಿ ಮಾಯ! ಬ್ರೆಡ್, ಹಾಲು, ಮೊಟ್ಟೆಗಳು ಸಿಕ್ಕುವುದೇ ಇಲ್ಲ ಅನ್ನೋ ಪರಿಸ್ಥಿತಿಯಲ್ಲಿ ನಾವು ಗುರುವಾರ ಅಲ್ಲಿಇಲ್ಲಿ ಹುಡುಕಾಡಿದ್ದಾಯ್ತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

ಆಂತೋನಿ ಅಂತ ಇತ್ತಂತೆ. ಬೇಡ, ಇದು ನಮ್ಮ ಪ್ರಧಾನಮಂತ್ರಿಯ ಹೆಸರು ಅಂತಂದುಕೊಂಡು ಅದನ್ನ ಕೈಬಿಟ್ಟು, ಹೊಸ ನಾಮಕರಣ ಮಾಡಿದರಂತೆ. ಯಾಕೆ ಆಲ್ಫ್ರೆಡ್ ಅನ್ನೋ ಹೆಸರನ್ನೇ ಆಯ್ದುಕೊಂಡರು ಅಂದರೆ ಉತ್ತರ ಸರಳವಾದದ್ದು. ಹೆಸರಿನ ಅಕ್ಷರ ಪಟ್ಟಿಯಲ್ಲಿ ಇದ್ದದ್ದು ಮೊದಲು ಆಂತೋನಿ, ಅದರ ಮುಂದಿನ ಹೆಸರು ಆಲ್ಫ್ರೆಡ್. ಸರಿ, ಆಂತೋನಿ ಹೋಗಿ ಆಲ್ಫ್ರೆಡ್ ಅಂಟಿಕೊಂಡಿತು.

ಈ ವಿಷಯ ಮೊನ್ನೆ ತಾನೇ ಗೊತ್ತಾಯ್ತು. ನಾನು ಈ ಅಂಕಣ ಬರಹವನ್ನು ಬರೆಯುತ್ತಿರುವಾಗ ನಾವೆಲ್ಲಾ Tropical Cyclone Alfred ಗುಂಗಿನಲ್ಲಿ, ಅಲ್ಲ ಅಲ್ಲ, ಅದರ ಸುಳಿಯಲ್ಲಿ ಸಿಲುಕಿ ಗಿರಕಿ ಹೊಡೆಯುತ್ತಿದ್ದೀವಿ. ಈ ಬುಧವಾರದಿಂದ South-East Queensland ಪಕ್ಕದ ಪೆಸಿಫಿಕ್ ಸಾಗರದಿಂದ ಸುಳಿಗಾಳಿ, ಸುಂಟರಗಾಳಿ ಬೀಸುತ್ತಿದೆ. ಇವತ್ತು ಶುಕ್ರವಾರ ಭಾರಿ ಗಾಳಿಯ ಜೊತೆ ಮಳೆ ಶುರುವಾಗಿದೆ.

ಆಸ್ಟ್ರೇಲಿಯಾದ ಇತಿಹಾಸ ದಾಖಲೆಗಳ ಪ್ರಕಾರ ಐವತ್ತು ವರ್ಷಗಳ ಬಳಿಕ ಇಂಥದ್ದೊಂದು ಭಾರಿ ಪ್ರಮಾಣದ ಸೈಕ್ಲೋನ್ ಕಾಣಿಸಿಕೊಳ್ಳುತ್ತಿದೆ. ಅದರ ಗಾತ್ರ, ಅದು ಉಂಟುಮಾಡುವ ಪರಿಣಾಮಗಳ ಅಂದಾಜು ಇನ್ನೂ ಯಾರಿಗೂ ಸ್ಪಷ್ಟವಾಗಿಲ್ಲ. ಪ್ರತಿದಿನವೂ, ಪ್ರತಿಗಂಟೆಯೂ Alfred ತನ್ನ ಚರ್ಯೆ ಬದಲಿಸುತ್ತಾ ನರ್ತನವಾಡುತ್ತಿದ್ದಾನೆ ಅಂದಷ್ಟೇ ನಮಗೆಲ್ಲಾ ಗೊತ್ತಿರುವುದು. ಅದು ರುದ್ರನರ್ತನವೋ, ತಾಂಡವವೋ, ಸೌಮ್ಯವೋ ಹೀಗೇ ಇರುತ್ತದೆ ಎಂದೆಲ್ಲಾ ಹೇಳಲಾರೆವು, ರೌದ್ರವನ್ನು ಊಹಿಸಿಕೊಂಡು ಅದನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳೋಣ ಎಂದು ಸರ್ಕಾರ ಹೇಳಿದ್ದನ್ನು ನಾವು ಪಾಲಿಸುತ್ತಿದ್ದೀವಿ. ಇತಿಹಾಸದ ಪುಟಗಳಲ್ಲಿ ಈ ಆಲ್ಫ್ರೆಡ್ ನುಸುಳುವಾಗ ಅದರೊಡನೆ ನಮ್ಮ ಜೀವನದ ಪುಟಾಣಿ ಒಂದು ತುಣುಕು ಕೂಡ ಸೇರಿಕೊಳ್ಳುತ್ತಿದೆ ಎಂದೆನಿಸಿ ರೋಮಾಂಚನವೂ ಆಗಿದೆ.

ಕೊನೆಯಿಲ್ಲದ ಅನಂತನೀಲ ಸಾಗರದೊಳಗೆ ಅದೆಲ್ಲೋ ಸುತ್ತಾಡುತ್ತಿದ್ದ ಆಲ್ಫ್ರೆಡ್ ಈ ವಾರದ ಮೊದಲಲ್ಲಿ ರಾಣಿರಾಜ್ಯಕ್ಕೆ ಬರಲಿದ್ದಾನೆ, ಅವನನ್ನು ಎದುರುಗೊಳ್ಳಲು ನಾವು ಸಜ್ಜಾಗಬೇಕು ಎಂದು ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಿದಾಗ ನಮ್ಮೆಲ್ಲರಲ್ಲೂ ಮಿಶ್ರಿತಭಾವನೆಗಳು. Alfred ನಿಧಾನವಾದರೂ ಸರಿ ಭಾರಿ ಗಮ್ಮತ್ತಾಗೇ ಗ್ರಾಂಡ್ ಆಗಿ ಬರುವಲಿದ್ದ. ರಾಣಿರಾಜ್ಯದ ಅಂಚಿನಲ್ಲಿರುವ ರಾಜಧಾನಿ ಬ್ರಿಸ್ಬೇನ್, ಅದರ ತಲೆಭಾಗದ ಸಮುದ್ರತೀರದ ಪ್ರದೇಶಗಳು ಮತ್ತು ಬ್ರಿಸ್ಬೇನ್ ನಗರದ ಕೆಳಗಿನ ಗೋಲ್ಡ್ ಕೋಸ್ಟ್, ಉತ್ತರ ನ್ಯೂ ಸೌತ್ ವೇಲ್ಸ್ ಪ್ರದೇಶಗಳಿಗೆ ಹಲೋ ಹೇಳಲಿದ್ದ.

ಐವತ್ತು ವರ್ಷಗಳ ಹಿಂದೆ Alfred ಹಿರೀಕರು ಯಾರು ಬಂದಿದ್ದರೋ ಗೊತ್ತಿಲ್ಲ. ನಮ್ಮ ರಾಜಧಾನಿಯ ಬಾಗಿಲು ತಟ್ಟಲಿರುವ ಅವನನ್ನು ಹಾಗೆಹೀಗೆ ಕಾಟಾಚಾರದಿಂದ ಸ್ವಾಗತಿಸಿದರೆ ಸರಿಹೋದೀತೆ? ಆಲ್ಫ್ರೆಡ್ ವಿಶಿಷ್ಟತೆಗೆ ಮನ್ನಣೆ ಕೊಟ್ಟು ಕೇಂದ್ರ ಸರಕಾರವು ನೂರಾರು ಆಸ್ಟ್ರೇಲಿಯನ್ ಡಿಫೆನ್ಸ್ ಫೋರ್ಸ್ ಸೈನಿಕರನ್ನು South-East Queensland ಮತ್ತು ಉತ್ತರ NSW ಗೆ ಕಳಿಸಿಕೊಟ್ಟಿದೆ. ಎರಡೂ ರಾಜ್ಯಗಳ ಸರ್ಕಾರಕ್ಕೆ ಸಂಪೂರ್ಣ ಸಹಕಾರವಿದೆ ಎಂದು ಪ್ರಧಾನಿ ಅಲ್ಬಾನೀಸಿ ಹೇಳಿದ್ದಾರೆ. ಈ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು, ಪೊಲೀಸ್ ಕಮಿಷನರ್‌ಗಳು ಜನರಿಗೆ ಧೈರ್ಯ ಹೇಳುತ್ತಾ ತಾವು ಕೈಗೊಂಡಿರುವ ಸುರಕ್ಷತಾ, ಭದ್ರತಾ ಕ್ರಮಗಳನ್ನು ವಿವರಿಸುತ್ತಿದ್ದಾರೆ.

ಕ್ವೀನ್ಸ್‌ಲ್ಯಾಂಡ್ ರಾಜ್ಯ ಸರ್ಕಾರದ ಸಹಸ್ರಾರು ಪೋಲೀಸರು, ಎಮರ್ಜೆನ್ಸಿ ಸೇವಾ ಸಿಬ್ಬಂದಿ, ಆಯಾ ಸ್ಥಳೀಯ ನಗರಪಾಲಿಕೆಗಳು, ರೆಡ್ ಕ್ರಾಸ್ ಸಂಸ್ಥೆಯ ಸ್ವಯಂಸೇವಕರು ಇನ್ನೂ ಅನೇಕ ನೂರಾರು ಮಂದಿ ಈ ವಾರ ಪೂರ್ತಿ ಬಿಡುವಿಲ್ಲದಂತೆ ದುಡಿಯುತ್ತಿದ್ದಾರೆ. ಬುಧವಾರದಿಂದಲೇ ಶುರುವಾಗಿರುವ ಗಾಳಿ, ಮಳೆ ಅಬ್ಬರಕ್ಕೆ ಸಿಲುಕಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳಿಸಲಾಗಿದೆ. ಪ್ರಮಾದವಿದೆ ಎನ್ನುವ ಸ್ಥಳಗಳಲ್ಲಿರುವ ಜನರ ಮನೆಗಳಿಗೆ ಹೋಗಿ ಸೈನಿಕರು, ಪೋಲೀಸರು ಜನರನ್ನು ಎಚ್ಚರಿಸುತ್ತಿದ್ದಾರೆ. ಈಗಾಗಲೇ ಸಾವಿರಾರು ಮನೆಗಳು ವಿದ್ಯುಚ್ಛಕ್ತಿ ಇಲ್ಲದೇ, ಇಂಟರ್ನೆಟ್ ಸಂಪರ್ಕ ಇಲ್ಲದೆ ಒದ್ದಾಡುತ್ತಿದ್ದಾರೆ. ಅನೇಕರ ಮನೆ ಮಾಡಿನ ಮೇಲೆ, ಕಾರ್ ಮೇಲೆ, ಗ್ಯಾರೇಜುಗಳ ಮೇಲೆ ಮರಗಳು ಬಿದ್ದು ಹಾನಿಯಾಗಿದೆ.

ಆಲ್ಫ್ರೆಡ್ ಸುಲಭದ ಗುಕ್ಕಿಗೆ ಸಿಗುತ್ತಿಲ್ಲ. ನಮ್ಮ ಬ್ರಿಸ್ಬೇನ್ ನಗರಕ್ಕೆ ಗುರುವಾರ ಬಂದು ತಲುಪುತ್ತಾನೆ ಎಂದಿದ್ದ ಲೆಕ್ಕಾಚಾರ ಬದಲಾಗಿ ಅವನು ಸ್ವಲ್ಪ ದಕ್ಷಿಣಕ್ಕೆ ಸರಿದು ಮೊದಲು ಗೋಲ್ಡ್ ಕೋಸ್ಟ್ ಸೌಂದರ್ಯವನ್ನು ನೋಡಲು ಹೋಗಿದ್ದಾನೆ ಎಂಬ ಸುದ್ದಿ ಬಂತು. ಗುರುವಾರ, ಶುಕ್ರವಾರ ಸಾಕಷ್ಟು ಸೌಂದರ್ಯ ಆಸ್ವಾದನೆ ಮಾಡಿದ ಗುರುತುಗಳು ಚೆನ್ನಾಗೆ ಕಂಡುಬಂದಿವೆ. ಸಮುದ್ರತೀರಗಳು ಕೊಚ್ಚಿ ಹೋಗಿವೆ. ಸಣ್ಣಪುಟ್ಟ ತೊರೆಗಳು ಆರ್ಭಟಿಸಿವೆ. ಮರಗಳು ನೆಲಕಚ್ಚಿವೆ.

ನಾಲ್ಕು ದಿನಗಳ ಹಿಂದೆ ಅಂದರೆ ಮಂಗಳವಾರದಿಂದ ನಮ್ಮ ಸ್ಥಳೀಯ ನಗರಪಾಲಿಕೆಗಳು ನೂರಾರು ನಿರ್ಧಾರಗಳನ್ನು ತೆಗೆದುಕೊಂಡಿವೆ. ‘ಸೇಫ್ಟಿ ಫಸ್ಟ್’ ಎನ್ನುವ ಮಂತ್ರವನ್ನು ಜಪಿಸಿ ನಮ್ಮ ಯೂನಿವರ್ಸಿಟಿಗಳು, ಶಾಲೆಗಳು, ಅಂಗಡಿ ವಹಿವಾಟುಗಳು, ಕಚೇರಿಗಳು ಬಾಗಿಲು ಮುಚ್ಚಿದವು. ಅದಕ್ಕೆ ಮುನ್ನ ಮಂಗಳವಾರದಿಂದ ಎಲ್ಲಾ ಅಂಗಡಿ, ಸೂಪರ್ ಮಾರ್ಕೆಟ್‌ಗಳಲ್ಲಿ ಜನರ ನೂಕುನುಗ್ಗಲು. ಆಹಾರ ಪದಾರ್ಥ, ಕುಡಿಯುವ ನೀರು, ಟಾಯ್ಲೆಟ್ ಪೇಪರ್ ರೋಲ್, ಇತ್ಯಾದಿಗಳು ಕಣ್ಣುಮುಚ್ಚಿ ತೆರೆಯುವಷ್ಟರಲ್ಲಿ ಮಾಯ! ಬ್ರೆಡ್, ಹಾಲು, ಮೊಟ್ಟೆಗಳು ಸಿಕ್ಕುವುದೇ ಇಲ್ಲ ಅನ್ನೋ ಪರಿಸ್ಥಿತಿಯಲ್ಲಿ ನಾವು ಗುರುವಾರ ಅಲ್ಲಿಇಲ್ಲಿ ಹುಡುಕಾಡಿದ್ದಾಯ್ತು.

ಟ್ರಾಪಿಕಲ್ ಸೈಕ್ಲೋನ್ ಆಲ್ಫ್ರೆಡ್ ಬ್ರಿಸ್ಬೇನ್‌ಗೆ ಬರುತ್ತಿರುವುದೇ ಒಂದು ದೊಡ್ಡ ಸುದ್ದಿ. ಇಲ್ಲಿಯವರೆಗೂ ಒಂದು ಸೈಕ್ಲೋನ್ ಆಸ್ಟ್ರೇಲಿಯಾದ ಯಾವುದೇ ರಾಜ್ಯ ರಾಜಧಾನಿ ನಗರವನ್ನು ಭಾದಿಸಿದ ಉದಾಹರಣೆ ಇಲ್ಲವಂತೆ. ಹಾಗಾಗಿ ನಮ್ಮ ಬ್ರಿಸ್ಬೇನ್ ನಗರಮಂದಿಗೆ, ಬ್ರಿಸ್ಬೇನ್ ಮೇಲಿರುವ Moreton Bay Council ಜನರಿಗೆ ಕುತೂಹಲ, excitement. ಜೊತೆಗೆ ಆತಂಕ, ಉದ್ವೇಗ, ಚಿಂತೆ. ಕಟ್ಟಡ ಸುತ್ತಮುತ್ತ ಯಾವುದೇ ಚಿಕ್ಕಪುಟ್ಟ ಸಾಮಾನುಗಳು ಇಲ್ಲದಂತೆ ಜಾಗ್ರತೆ ವಹಿಸಿ ಎಂದು ಸರ್ಕಾರ ಹೇಳಿದೆ. Alfred ಅಬ್ಬರಿಸಿದರೆ ಎಲ್ಲವೂ ಎಲ್ಲರೂ ಹಾರಿಹೋಗುವುದೇ ಹೌದು ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ಗಾಜಿನ ಕಿಟಕಿಗಳಿಗೆ ಗಟ್ಟಿ ಟೇಪ್ ಹಾಕಿ ಬಂಧಿಸಿದವರು, ಗಿಡಗಳ ಪಾಟ್‌ಗಳನ್ನು ತಂದು ಮನೆಯೊಳಗೇ ಇಟ್ಟುಕೊಂಡವರು, ಅಂಗಳದಲ್ಲಿರುವ worm farm ಗೆ ಹಗ್ಗ ಕಟ್ಟಿ ಭದ್ರಪಡಿಸಿದವರು… ಏನೇನೋ ಕಸರತ್ತುಗಳು ನಡೆದಿವೆ.

ಈ ಮಧ್ಯೆ ಎರಡು ಮೂರು ದಿನಗಳಿಂದ ಮನೆಯೊಳಗೇ ಸೇರಿಕೊಂಡಿರುವವರು ತಾವು ಅಂಗಡಿಗಳಿಗೆ ಮುತ್ತಿಗೆ ಹಾಕಿ ಕೊಂಡಿದ್ದ ಆಹಾರವನ್ನೆಲ್ಲ ತಿಂದು ಖಾಲಿ ಮಾಡಿ ಈಗ ಪುನಃ ಆಹಾರಕ್ಕಾಗಿ ಎಡತಾಕುತ್ತಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಜೋಕಾಗಿದೆ.

ನಾವೂ ಕೂಡ ಮನೆಯ ಕಟ್ಟಡಕ್ಕೆ ಆತುಕೊಂಡಿದ್ದ ಕೆಲ ಮರಗಳ ರೆಂಬೆಕೊಂಬೆಗಳನ್ನು ಮೊಟಕುಮಾಡಿದ್ದೀವಿ. ಅವೇನಾದರೂ ಪಕ್ಕದ ಮನೆ ಕಡೆ ವಾಲಿ ಮುರಿದುಬಿದ್ದರೆ ಅವರ ಕಾರು ನೆಲಕಚ್ಚುವುದು ಗ್ಯಾರಂಟಿ ಎಂದು ಚಿಂತೆಯಾಗಿತ್ತು. ಹಿತ್ತಲಲ್ಲಿರುವ ಬಾಳೆಮರಕ್ಕೆ ಹಗ್ಗ ಕಟ್ಟಿ ಅದನ್ನು ಹತ್ತಿರದ ಮರವೊಂದಕ್ಕೆ ಆನಿಸಿದ್ದೀವಿ. ಮನೆ ಸುತ್ತ ಇರುವ ಸಾಮಗ್ರಿಗಳನ್ನು ಸಾಗಿಸಿ, ಶುಚಿಯಾಗಿಸಿ ತೆರವು ಮಾಡಿದ್ದೀವಿ. ಬೀಳುತ್ತಿರುವ ಮಳೆಯಿಂದ ಎಲ್ಲವೂ ಮತ್ತಷ್ಟು ಶುಭ್ರವಾಗಿದೆ. ‘ತೆರೆದಿದೆ ಮನೆ ಓ ಬಾ ಅತಿಥಿ’ ಎನ್ನುತ್ತಾ Alfred ನ ನಾಟ್ಯವನ್ನು ನೋಡಲು ಕಾತರದಿಂದ ಕಾಯುತ್ತಿದ್ದೀವಿ. ಮನೆಯೊಳಗೆ ಕುಡಿಯುವ ನೀರಿನ ಸಂಗ್ರಹ, ಟಾರ್ಚ್ ಮತ್ತು ಕ್ಯಾಂಡಲ್‌ಗಳು ಇವೆ. ಅಕ್ಕಪಕ್ಕ ಇರುವ ಆಕಾಶ ಚುಂಬಿಸುವ ಉದ್ದನೆ gum tree ಗಳು ನಮ್ಮ ಮನೆ ಸೂರಿನ ಮೇಲೆ ಬೀಳದಿರಲಿ ದೇವರೇ ಎಂದು ಪ್ರಾರ್ಥಿಸುತ್ತಿದ್ದೀವಿ. ಇವತ್ತು ಶುಕ್ರವಾರ ರಾತ್ರಿ, ನಾಳೆ ಶನಿವಾರ ಪೂರ್ತಿ ಕ್ಷಣ ಎನಿಸುವುದೇ ಆಗಿದೆ.

ಮರೆತು ಹೋಗಿತ್ತು. ಮಾರ್ಚ್ ತಿಂಗಳ ಮೊದಲಲ್ಲಿ ಸಿಡ್ನಿ ನಗರದಲ್ಲಿ ಎಂದಿನಂತೆ Mardi Gras ಹಬ್ಬ ನಡೆಯಿತು. ನಾಳೆ ಮಾರ್ಚ್ ೮ ನೇ ತಾರೀಕು ಎಂದಿನಂತೆ ಮತ್ತೊಂದು ಅಂತಾರಾಷ್ಟ್ರೀಯ ಮಹಿಳಾ ದಿನ ಬಂದಿದೆ. ಆದರೆ ನಮ್ಮಲ್ಲಿ ಎಲ್ಲಾ ಕಾರ್ಯಕ್ರಮಗಳು ರದ್ದಾಗಿವೆ. ಪ್ರತಿವರ್ಷವೂ ಬರುವ ಅವನ್ನೇನು ನೋಡುತ್ತೀರಿ, ಐವತ್ತು ವರ್ಷಗಳ ನಂತರ ನಾನು ಬಂದಿದ್ದೀನಿ, ನನ್ನನ್ನು ನೋಡಿ ಕಣ್ತುಂಬಿಕೊಳ್ಳಿ, ಎಂದು Tropical Cyclone Alfred ಹೇಳುತ್ತಿದ್ದಾನೆ. ಅದನ್ನು ಅಲ್ಲಗೆಳೆಯಲಾದೀತೇ?!

About The Author

ಡಾ. ವಿನತೆ ಶರ್ಮ

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ