Advertisement
ಬದುಕಿನ ಬಣ್ಣಗಳು: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ

ಬದುಕಿನ ಬಣ್ಣಗಳು: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ

ಆದರೆ ಈ ಸಮುದ್ರವನ್ನು ಬೊಗಸೆಯಲ್ಲಿ ತುಂಬಿಕೊಳ್ಳಲು ಸಾಧ್ಯವಿಲ್ಲ ಅನ್ನುವ ಅರಿವು ನನಗೆ ಯಾವತ್ತೋ ಆಗಬೇಕಿತ್ತು. ಸುಮ್ಮನೆ ದಡದಲ್ಲಿ ಕಾಯುತ್ತಾ ಕುಳಿತೆ. ಅವಳಿಗೆ ಕನಸಿತ್ತು ಸ್ಪಷ್ಟವಾದ ಗುರಿಯಿತ್ತು. ತನ್ನ ಸುತ್ತ ಇರುವ ಮಿತಿಗಳನ್ನು ಮೀರುವ ತುಡಿತವಿತ್ತು. ಅವಳ ಪಾತ್ರ ವಿಶಾಲವಿತ್ತು. ನಾನು ಒಡ್ಡಿದ ಬೊಗಸೆಗೆ ಹೆಚ್ಚು ಹೊತ್ತು ನಿಲ್ಲಲಾರಲು ಅನ್ನುವುದು ಗೊತ್ತಾಗಬೇಕಿತ್ತು. ಬರಿದೇ ಭ್ರಮೆಗಳಲ್ಲಿ ಕಾಲ ಕಳೆದೆ ಅಂತ ಈಗ ಅನ್ನಿಸುತ್ತಿದೆ.
ರವೀಂದ್ರ
ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ “ಇನ್ನೊಂದು ಬದಿ”ಎಂಟನೆಯ ಬರಹ

ಸಮುದ್ರದ ಅಲೆಗಳು ನಿರಂತರವಾಗಿ ದಡ ಮೀರಿ ಮರಳನ್ನು ಸ್ಪರ್ಶಿಸಿ ಮರಳಿ ಸಮುದ್ರ ಸೇರುತ್ತಿತ್ತು. ಆದರೆ ಅಲ್ಲಿಯೂ ಹೆಚ್ಚು ಹೊತ್ತು ನಿಲ್ಲಲಾಗದೇ ಮತ್ತೆ ತೀರದ ಬಳಿ ಓಡಿ ಬಂದು ಏನನ್ನೋ ಪಿಸು ನುಡಿದು ಮರಳುತ್ತಿತ್ತು. ತೀರದ ಮರಳು ಏನನ್ನೋ ನೆನೆದು ಅಲ್ಲಿಯೇ ನಾಚಿ ನೀರಾಗುತ್ತಿತ್ತು. ಮತ್ತೆ ಮತ್ತೆ ಅಲೆ ಬಂದು ತೋಯಿಸಲಿ ಅನ್ನುವ ಉತ್ಕಟ ಬಯಕೆಗಾಗಿ ಒಣಗುತ್ತಾ ಅಲೆಯ ಬರುವಿಕೆಗಾಗಿ ಕಾಯುತ್ತಿತ್ತು. ಈ ವ್ಯವಹಾರದಲ್ಲಿಯೇ ಕಣ್ಣು ನೆಟ್ಟಿದ್ದ ನನಗೆ ಸೂರ್ಯ ಪಡುವಣದಲ್ಲಿ ಪೂರ್ತಿಯಾಗಿ ಇಳಿದು ಹೋದದ್ದು ಅರಿವಾಗಲೇ ಇಲ್ಲ. ಅಕಸ್ಮಾತ್ತಾಗಿ ಅತ್ತ ನೋಡಿದ ನನ್ನ ಕಣ್ಣುಗಳಿಗೆ ರಾಚಿದ್ದು ಸೂರ್ಯ ಬಾನಂಚಿನಲಿ ಕಲಸಲು ಮರೆತು ಹೋದ ಕೆಂಬಣ್ಣಗಳ ರಾಶಿ.

“ಹೇಯ್ ಅಲ್ಲಿ ನೋಡೋ, ಬಾನು ರವಿಯ ವಿರಹದಲ್ಲಿ ಬೇಯುತ್ತಿದ್ದ ಹಾಗೆ ಕಾಣ್ತಿದೆ ಅಲ್ವಾ… ಕೆಂಪು ಬೇಸರ, ಏಕಾಂತದಲ್ಲಿ ಬೇಯುವ ಸಂಕೇತ…”

ಇಂಥದ್ದೇ ಒಂದು ಬೇಸಗೆಯ ಸಂಜೆಯಲ್ಲಿ ನನ್ನ ಕಿವಿಗೆ ಅವಳ ಬಿಸಿಯುಸಿರು ತಾಕುವಷ್ಟು ಹತ್ತಿರ ಕುಳಿತಿದ್ದೆ. ಸಮಯದ ಪರಿವೆಯೇ ಇಲ್ಲದೆ ಸಮುದ್ರ ನೋಡುತ್ತಾ ಕೂತಿರುತ್ತಿದ್ದ ದಿನಗಳು ಅವು. ನಾನು ಅವಳು ಮತ್ತು ಅಲೆಗಳ ಸದ್ದು ಎಲ್ಲವೂ ಒಂದೇ ನೂಲಿನಲ್ಲಿ ಪೋಣಿಸಿ ಹಾರವಾದ ಹಾಗೆ. ಅಂತಹ ಯಾವುದೋ ಒಂದು ಕ್ಷಣ ಅವಳು ಹೇಳಿದ್ದ ಮಾತುಗಳು ಇಂದೇಕೋ ಕಿವಿಯಲ್ಲಿ ಗುಂಯ್ಗುಡುತ್ತಿವೆ. ಅದು ಅವಳ ಅನುಭವದ ಮಾತುಗಳಾ? ಗೊತ್ತಿಲ್ಲ. ಆದರೆ ಆ ಕ್ಷಣಕ್ಕೆ ಅದ್ಯಾವುದೂ ನನ್ನ ತಲೆಯಲ್ಲಿ ಮೂಡಿರದ ಪ್ರಶ್ನೆಗಳು. ಸಂಜೆ ಬಾನನಲ್ಲಿ ಮೂಡಿದ್ದ ಆ ಕೆಂಪು ನನ್ನಲ್ಲಿ ಮಧುರ ಭಾವಗಳನ್ನು ಅವಳ ಸಾನಿಧ್ಯದಲ್ಲಿ ಹುಟ್ಟು ಹಾಕಿದ ಆ ಕ್ಷಣ ನಾನು ಬೇರೇನು ಹೇಳಿರಲು ಸಾಧ್ಯ? ಬೆನ್ನಿಗೆ ಬೆನ್ನು ತಾಗಿಸಿ ಕೂತಿದ್ದವಳನ್ನು ಮಡಿಲಲ್ಲಿ ಮಲಗಿಸಿ ಕೆಂದುಟಿಗಳನ್ನು ಚುಂಬಿಸಿ,

“ಸರಿಯಾಗಿ ನೋಡು, ಮಧ್ಯಾಹ್ನವೆಲ್ಲಾ ವಿರಹದ ಬೇಗೆಯಲ್ಲಿ ಬೆಂದ ಸೂರ್ಯ ಸಂಜೆಯ ಅಷ್ಟೂ ಹೊತ್ತು ಪ್ರಣಯದಲ್ಲಿ ತನ್ಮಯನಾಗಿದ್ದಾನೆ. ಥೇಟ್ ನನ್ನ ಹಾಗೆಯೇ. ಅದಕ್ಕೇ ಬಾನಿನ ಕೆನ್ನೆಗಳು ನಾಚಿಕೆಯಲ್ಲಿ ಕೆಂಪೇರಿವೆ ನಿನ್ನ ಹಾಗೆ. ಕೆಂಪು ಪ್ರಣಯದ ಸಂಕೇತ”

ತುಟಿಯನ್ನು ಒರೆಸುತ್ತಾ ಮತ್ತೆ ಬೆನ್ನು ಹಾಕಿದ ಅವಳು ಮುಳುಗುತ್ತಿರುವ ಸೂರ್ಯನನ್ನು ನೋಡುತ್ತಾ ನಿರ್ಲಿಪ್ತಳಾಗಿ ಕುಳಿತಳು. ಉತ್ತರ ಕೊಡುವ ಯಾವ ಇರಾದೆಯೂ ಅವಳಿಗೆ ಇದ್ದಂತಿಲ್ಲ. ನಮ್ಮ ನಡುವಿನ ಹೆಚ್ಚಿನ ಸಂಭಾಷಣೆಗಳು ಮಾತಿನಲ್ಲಿ ಮುಗಿದುದಕ್ಕಿಂತ ಮೌನದಲ್ಲಿ ಕೊನೆಯಾದದ್ದೇ ಹೆಚ್ಚು. ಸಾಗರ ಮೌನ ಅದು. ಇನ್ನೊಂದು ಭೇಟಿಯವರೆಗೂ ಅದರ ಕಾವು ಇರುತ್ತಿತ್ತು.

ರಸವು ಒಮ್ಮಿಂದೊಮ್ಮೆಲೇ ವಿರಸದ ನೆಲೆಗೆ ಹೊರಳಿದ ಹಾಗೆ ನನಗೆ ಅವಳ ನಿರ್ಲಿಪ್ತತೆ ಅರ್ಥವೇ ಆಗುವುದಿಲ್ಲ. ಜೊತೆಗೆ ನಾನೇ ಇಲ್ಲ ಅನ್ನುವ ಹಾಗೆ ಅವಳು ಕಳೆದುಹೋಗಿ ಏನನ್ನೋ ಹುಡುಕುವ ಹಾಗೆ ಉಳಿದುಬಿಡುತ್ತಾಳೆ. ಅವಳ ಜೊತೆಗಿದ್ದೂ ಏಕಾಂಗಿ ಭಾವ ನನ್ನ ಪಾಲಿಗೆ. ಕಡಲು ತನ್ನ ಒಡಲಿನ ಚಂಚಲತೆಯನ್ನು ನಮಗೆ ದಾಟಿಸುವಂತಿದ್ದರೆ ಈ ನಿಶ್ಚಲ ಬದುಕಿನಲ್ಲಿ ಏನೋ ಸಂಭವಿಸುತ್ತಿತ್ತು. ಅಮೃತಾ ಪ್ರೀತಮ್ ಕವಿತೆಯಂತೆ ಆ ಬಿರುಗಾಳಿಯನ್ನು ಬದುಕಲ್ಲಿ ತುಂಬಿಕೊಂಡು ನಮ್ಮ ನಮ್ಮ ಗಲ್ಲಿಗಳಿಗೆ ಹೊರಟುಬಿಡಬಹುದಾಗಿತ್ತು. ಪ್ರಖರ ಮಧ್ಯಾಹ್ನ ಮತ್ತು ತಣ್ಣಗಿನ ಸಂಜೆಗಳನ್ನು ಅವಳ ಸಹವಾಸದಲ್ಲಿ ಉತ್ಕಟವಾಗಿ ಕಳೆದುಬಿಡಬಹುದಾಗಿತ್ತು. ಬಯಸಿದ ಹಾಗೆ ಈ ಬದುಕನ್ನು ಸುಲಭವಾಗಿ ಬದುಕಿಬಿಡಬಹುದಾಗಿತ್ತು. ಸಮುದ್ರ ಸದಾ ಪುಟಿಯುವ ಚೈತನ್ಯ. ಅದು ಖಿನ್ನತೆಗೆ ಒಳಗಾಗಿ ಮೊರೆಯುವುದನ್ನು ಯಾವತ್ತೂ ನಿಲ್ಲಿಸುವುದಿಲ್ಲ. ಆದರೆ ಅಂತಹ ಯಾವ ಜಾದೂ ಸಂಭವಿಸಲಿಲ್ಲ ನಮ್ಮ ನಡುವೆ. ನೀನು ನಿರ್ಲಿಪ್ತಳಾಗಿ ಉಳಿದುಬಿಟ್ಟೆ; ಸಮುದ್ರ ನಮ್ಮಿಂದ ದೂರ ಸರಿಯಿತು. ಕಟ್ಟಿಕೊಂಡ ಕನಸುಗಳು ಅದೆಷ್ಟು ಬೇಗ ಬಣ್ಣ ಕಳೆದುಕೊಂಡು ಬಿಟ್ಟವು? ಯಾರನ್ನು ದೂರಲಿ ಈಗ?

ಯಾಕೆ ಒಂದು ಹಂತದ ನಂತರ ಎಲ್ಲವೂ ನೀರಸವಾಗುತ್ತದೆ? ಮೊದಲಿನ ಕಾವು ಯಾಕೆ ಪ್ರೇಮದಲ್ಲಿ  ಉಳಿಯುವುದಿಲ್ಲ? ಅವಳಿರದೆ ಬದುಕಲು ಸಾಧ್ಯವೇ ಇಲ್ಲ ಅನ್ನುವ ಆ ಉತ್ಕಟತೆ ವರುಷಗಳು ಕಳೆದ ಹಾಗೇ ಯಾಕೆ ಸಡಿಲಗೊಳ್ಳುತ್ತದೆ? ಯಾಂತ್ರಿಕವಾಗಿ ಜೊತೆಗಿದ್ದುಬಿಡುವ ಆ ಅನಿವಾರ್ಯತೆಗೆ ಯಾಕೆ ಸಿಲುಕಿಕೊಳ್ಳುತ್ತೇವೆ? ಬಹುಶಃ ಪ್ರಶ್ನೆಗಳಷ್ಟೇ ಉಳಿದುಕೊಳ್ಳುತ್ತವೆ ತೆರೆದುಕೊಳ್ಳದ ಸಂಬಂಧಗಳಲ್ಲಿ. ಒಂಟಿಯಾಗಿಯೇ ಉಳಿಯುವ ಬದುಕು ಯಾವತ್ತೂ ಕಾಡುವ ಪ್ರಶ್ನೆಯೇ.

ಹತ್ತಿರವಿದ್ದೂ ದೂರ ನಿಂತು ಬಿಡುತ್ತೇವೆ ನಾವು ನಾವೇ ಕಟ್ಟಿಕೊಂಡ ಕೋಟೆಗಳಲ್ಲಿ. ನಮ್ಮ ಅವಶ್ಯಕತೆಗಳಿಗೆ ಎಷ್ಟುಬೇಕೋ ಅಷ್ಟು ಮಾತ್ರ ತೆರೆದುಕೊಳ್ಳುತ್ತಾ ಮತ್ತೆ ಆಮೆ ಚಿಪ್ಪಿನೊಳಗೆ ಕುಳಿತ ಹಾಗೆ ಕದವನ್ನು ಮುಚ್ಚಿಕೊಳ್ಳುತ್ತೇವೆ. ಒಬ್ಬರಿಗೊಬ್ಬರು ಪರಿಚಿತಗೊಳ್ಳುವ ಕ್ಷಣಗಳನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಾ ಅಪರಿಚಿತವಾಗಿಯೇ ಉಳಿದುಬಿಡುತ್ತೇವೆ. ಇಷ್ಟು ವರ್ಷಗಳಲ್ಲಿ ನಿನ್ನನ್ನು ಅರಿಯುವ ಯಾವ ಸಾಧ್ಯತೆಗಳನ್ನು ನಾನು ಬಳಸಿಕೊಂಡಿಲ್ಲ ಹೇಳು? ಆ ಮೂಲಕ ನಿನ್ನನ್ನು ಉಳಿಸಿಕೊಳ್ಳುವ ಆಸೆಯನ್ನು ಹೃದಯದಲ್ಲಿ ಸದಾ ಜೀವಂತವಾಗಿಟ್ಟುಕೊಂಡಿದ್ದೆ. ಆದರೆ ನೀನು ಬಾಗಿಲು ಹಾಕಿಕೊಂಡುಬಿಟ್ಟೆ. ಮುಚ್ಚಿದ ಬಾಗಿಲ ಹೊರಗೆ ಎಷ್ಟು ದಿನ ಅಂತ ಕಾಯಲಿ?

ಆದರೆ ಈ ಸಮುದ್ರವನ್ನು ಬೊಗಸೆಯಲ್ಲಿ ತುಂಬಿಕೊಳ್ಳಲು ಸಾಧ್ಯವಿಲ್ಲ ಅನ್ನುವ ಅರಿವು ನನಗೆ ಯಾವತ್ತೋ ಆಗಬೇಕಿತ್ತು. ಸುಮ್ಮನೆ ದಡದಲ್ಲಿ ಕಾಯುತ್ತಾ ಕುಳಿತೆ. ಅವಳಿಗೆ ಕನಸಿತ್ತು ಸ್ಪಷ್ಟವಾದ ಗುರಿಯಿತ್ತು. ತನ್ನ ಸುತ್ತ ಇರುವ ಮಿತಿಗಳನ್ನು ಮೀರುವ ತುಡಿತವಿತ್ತು. ಅವಳ ಪಾತ್ರ ವಿಶಾಲವಿತ್ತು. ನಾನು ಒಡ್ಡಿದ ಬೊಗಸೆಗೆ ಹೆಚ್ಚು ಹೊತ್ತು ನಿಲ್ಲಲಾರಲು ಅನ್ನುವುದು ಗೊತ್ತಾಗಬೇಕಿತ್ತು. ಬರಿದೇ ಭ್ರಮೆಗಳಲ್ಲಿ ಕಾಲ ಕಳೆದೆ ಅಂತ ಈಗ ಅನ್ನಿಸುತ್ತಿದೆ.

“ಸ್ಥಾವರ ನೀನು. ಇದ್ದಲ್ಲಿಯೇ ಮತ್ತೆ ಮತ್ತೆ ಕಟ್ಟುವುದರಲ್ಲಿ ಅದೇನು ಹುಮ್ಮಸ್ಸು ನಿನಗೆ. ಬೇರಿಳಿಸಿ ನಿಲ್ಲುವ ಮರ ನೀನು. ನಿನ್ನ ರೆಂಬೆಯಲ್ಲಿ ಗೂಡು ಕಟ್ಟಿ ನಿಲ್ಲುವ ಹಕ್ಕಿ ನಾನಲ್ಲ ಅಂತ ಅನ್ನಿಸುತ್ತಿದೆ ಯಾಕೋ”

ಅಂದಿದ್ದಳು ದಿಗಂತದತ್ತ ನೋಡುತ್ತಾ ಇಂತಹುದೇ ಒಂದು ಶ್ಯಾಮಲ ಸಂಜೆಯಲ್ಲಿ. ಬಹುಶಃ ಅವಳು ನಿರ್ಧಾರ ಮಾಡಿಕೊಂಡು ಬಂದ ಹಾಗಿತ್ತು. ಒಡೆಯದ ಒಗಟಾಗಿ ಕೊನೆಗೂ ದೂರವೇ ಉಳಿದುಬಿಟ್ಟಳು. ಹಾರುವುದು ಅಂದರೇನು? ಎಂದೋ ಒಂದು ದಿನ ಬಂದು ನೆಮ್ಮದಿಯಿಂದ  ಕೂರಲಾದರೂ ಒಂದು ಸೂರು ಬೇಕೇ ಬೇಕಲ್ವಾ? ಸದಾ ಕೇರಿಯರ್ ಕೇರಿಯರ್ ಅಂತ ಕಾಣದ  ದಿನಗಳ ಬಗ್ಗೆ ಯೋಚಿಸುತ್ತಾ ಈ ಕ್ಷಣವನ್ನು, ಕಳೆದುಕೊಳ್ಳುತ್ತಿರುವ ವಾಸ್ತವವನ್ನು ಅರ್ಥಮಾಡಿಕೊಳ್ಳುವಲ್ಲಿ ಯಾಕೆ ಸೋಲುತ್ತಿದ್ದೇವೆ?

ಬೇರುಗಳನ್ನು ಆಳವಾಗಿ ನೆಲಕ್ಕಿಳಿಸದ ಹೊರತು ನಮಗೆ ಎಲ್ಲಿದೆ ಅಸ್ತಿತ್ವ? ಜಂಗಮ ಆಗುವ ಮೊದಲು ಸ್ಥಾವರ ಆಗಬೇಕಾದ ಅಗತ್ಯ ಇದೆ. ಆದರೆ ಇದೆಲ್ಲವನ್ನು ಅವಳಿಗೆ ಹೇಳಿದ್ರೆ ಸಿನಿಕ ನೀನು ಅಂತ ನಗುತ್ತಾಳೆ ಅಂತ ಗೊತ್ತು. ಕಾಲ್ ಮಾಡಿದಾಗ ಕವಿತೆ ಬರೀತಾ ಕೂತಿದ್ದೆ ಅಂದ್ರೆ, ಯಾಕೆ ಟೈಮ್ ವೇಸ್ಟ್ ಮಾಡ್ತಿಯಾ ಹೋಗಿ ಕಾರ್ ಆದ್ರೂ ತೊಳಿಬಾರದಾ? ಅನ್ನುವ ಅವಳ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರ ಇರುವುದಿಲ್ಲ. ನಾನು ಅವಳ ಆಯ್ಕೆ ಅಲ್ಲ ಅನ್ನುವುದನ್ನು ಅವಳು ಕಂಡುಕೊಂಡ ಹಾಗೆ ನನಗ್ಯಾಕೆ ಸಾಧ್ಯವಾಗಲಿಲ್ಲ?

ಯಾವ ಉತ್ತರ ಕೊಟ್ಟರೂ ಗೂಡುಕಟ್ಟಿ ನಿಲ್ಲುವ ಹಕ್ಕಿ ಇದಲ್ಲ ಅನ್ನುವುದು ಗೊತ್ತಾದ ಮೇಲೆ ತುಟಿಗಳನ್ನು ಹೊಲಿದುಕೊಂಡೆ. ಬಹಳಷ್ಟು ಒಳ್ಳೆಯ ಸಂಗತಿಗಳು ಬೇಗನೇ ತನ್ನ ಆಯುಷ್ಯವನ್ನು ಮುಗಿಸಿಕೊಂಡು ಬಿಡುತ್ತವೆ. ಕಳೆದುಹೋಯ್ತು ಅನ್ನತ್ತಾ ಕೊರಗುವುದರಲ್ಲಿ ಅರ್ಥವಿಲ್ಲ. ಆಲ್‌ರೈಟ್ ಮುಂದಕ್ಕೋಗೋಣ ಅನ್ನುವ ಮನಸ್ಥಿತಿ ಬೇಕು ಅಂತ ಗೊತ್ತಿದ್ದರೂ ವಿರಹದ ಕ್ಷಣಗಳನ್ನು ಗೆಲ್ಲುವುದು ಅಷ್ಟು ಸುಲಭವಲ್ಲ. ಆದರೂ ಸಂಬಂಧಗಳು ಕಳಚಿ ಬೀಳುವುದಕ್ಕೆ ದೊಡ್ಡ ವಿಷಯಗಳೇ ಬೇಕಾಗಿಲ್ಲ ಅನ್ನುವುದು ಮಾತ್ರ ನನ್ನ ಅನುಭವಕ್ಕೆ ಬಂತು.

ಎಲ್ಲೋ ಬದುಕು ಕಟ್ಟಿರಬಹುದು. ಜಂಗಮವಾಗುತ್ತಾ ಅವಳ ನೆನಪುಗಳೂ ಮಾಸಿರಬಹುದು. ಇಷ್ಟು ವರ್ಷಗಳ ಬಳಿಕ ಈ ದಡದಲ್ಲಿ ಮತ್ತೆ ಸಿಕ್ಕಿದರೆ ಅವಳಿಗೆ ಹೇಗೆ ಅನ್ನಿಸಬಹುದು ಅಂತ ದಿಗಂತದಂಚನ್ನು ನೋಡಿದೆ. ಅಲ್ಲಿ ಸೂರ್ಯನಿರದ ಸಂಜೆ ಬಾನು ನಿಧಾನವಾಗಿ ಕತ್ತಲೆಗೆ ಜಾರುತ್ತಿತ್ತು. ಕೆಂಬಣ್ಣವೆಲ್ಲಾ ಒಂದರಲ್ಲೊಂದು ಬೆರೆತು ಗಾಢ ಕಪ್ಪುಬಣ್ಣ ಆವರಿಸುತ್ತಿತ್ತು. ಕೆಂಪು ಬಣ್ಣ ಕ್ಷಣಿಕವಾದದ್ದು. ಕಪ್ಪುಬಣ್ಣ ಒಂದೇ ಶಾಶ್ವತ ಅಂತ ಯಾಕೋ ಬಲವಾಗಿ ಅನ್ನಿಸಲಾರಂಭಿಸಿತು. ನಿರೀಕ್ಷೆಗಳಿಲ್ಲದ ನೋಟಕ್ಕೆ ಬಹುಶಃ ಬದುಕಿನ ಸತ್ಯ ಗೋಚರಿಸುತ್ತದೇನೊ. ಕಪ್ಪು ವಿರಹದ ಸಂಕೇತ?

ಅಂದು ಕೊನೆಯ ಬಾರಿಗೆ ಮರಳಿನಲ್ಲಿ ನಮ್ಮಿಬ್ಬರ ಹೆಸರುಗಳನ್ನು ಬೆಸೆದು ದೊಡ್ದದಾದ ಹೃದಯವನ್ನು ಕೆತ್ತಿದ್ದಳು. ಜೊತೆಯಲ್ಲಿ ಹೆಜ್ಜೆ ಹಾಕಿ ದಡವನ್ನು ಬಿಟ್ಟಾಗ ಯಾಕೋ ಹಿಂತಿರುಗಿ ನೋಡುವ ಮನಸ್ಸಾಗಿರಲಿಲ್ಲ. ನೋಡಿದ್ದರೆ ಸಮುದ್ರದ ಅಲೆ ಮರಳ ರಾಶಿಯನ್ನು ಚುಂಬಿಸುವ ಆತುರದಲ್ಲಿ ಆ ಹೃದಯದರಮನೆಗೆ ಲಗ್ಗೆ ಹಾಕಿದ್ದೂ ಅರಿವಿಗೆ ಬರುತ್ತಿತ್ತೋ ಏನೋ.

ಶಾಶ್ವತವಾದ ಕಪ್ಪಿಗೆ ಮರಳುವ ಮುನ್ನ ನಮ್ಮ‌ ಬದುಕು ಸುಳ್ಳು ಬಣ್ಣಗಳಲ್ಲಿ ಹೇಗೆ ಕಳೆದು ಹೋಗುತ್ತದೆ ಅನ್ನುವ ಸತ್ಯ ಗೋಚರಿಸಿ ಮನಸ್ಸು ಕಂಪಿಸಿತು. ಸಂಬಂಧಗಳೂ ಇದಕ್ಕೆ ಹೊರತಲ್ಲ ಅಲ್ವಾ? ಹೊರಗೆ ನೀರವ ಮೌನದಲ್ಲಿ ಕಡಲು ತನ್ನಷ್ಟಕ್ಕೇ ಭೋರ್ಗರೆಯುತ್ತಿತ್ತು. ಬಣ್ಣಗಳು ಕಳೆದು ಹೋದ ಮನಸ್ಸನ್ನು ಕಪ್ಪು ಆವರಿಸುತ್ತಿತ್ತು. ಯಾವುದೇ ಪ್ರತಿರೋಧ ತೋರದೇ ಕಣ್ಮುಚ್ಚಿ ಕುಳಿತಾಗ ಅಲೆ ಬಂದು ಕುಳಿತ ದಡದ ಮರಳನ್ನು ಹಿತವಾಗಿ ಸ್ಪರ್ಶಿಸಿತು.

ದಡ ಸೇರದ ಬಂಧವೊಂದು ಸದಾ ಸಿಹಿಯಾದ ಕನಸಾಗಿ ಬದುಕಿನಲ್ಲಿ ಮತ್ತೆಮತ್ತೆ ಕಾಡುವುದುಂಟು. ಏಕಾಂತದ ಸಂಜೆಗಳಲ್ಲಿ ಹೀಗೆ ಯಾವತ್ತಾದರೊಮ್ಮೆ ನೆನಪು ಉಕ್ಕಿದಾಗ ಕಿವಿಯಲ್ಲಿ ನಿಲ್ಲದೆ ಮೊರೆವ ಸಮುದ್ರ, ಎದೆಯಲ್ಲಿ ಅಲೆಗಳ ಹಿತವಾದ ತುಯ್ದಾಟ ಮತ್ತು ಅವಳು ಎದ್ದು ನಡೆದ ಹೆಜ್ಜೆಗುರುತುಗಳು ಬಿಡದೆ ಕಾಡುವುದುಂಟು. ಬದುಕು ಕೊಟ್ಟ ಕೊಡುಗೆಗಳ ಬಗ್ಗೆ ಒಂದು ಸಾರ್ಥಕ ಭಾವವಿರುವ ಈ ಗಳಿಗೆಯಲ್ಲಿ ವಿರಹದ ನೆನಪೂ ನೋಯಿಸದೆ ಮಂದಹಾಸವೊಂದು ಜಿನುಗಿ ಅವಳಿಗೆ ಶುಭವನ್ನು ಹಾರೈಸುತ್ತದೆ.

About The Author

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಮೂಲತಃ ಉಡುಪಿಯವರು. ಈಗ ಮಂಗಳೂರು ವಾಸಿ ಮುಸುಕು ತೆರೆದು, ತೂಗುದೀಪ, ಇರುವುದೆಲ್ಲವ ಬಿಟ್ಟು ಇವರ ಪ್ರಕಟಿತ ಕವನ ಸಂಕಲನಗಳು. ಪ್ರೇಮದ ಶರಧಿಗೆ, ಆಕಾಶಬುಟ್ಟಿ, ಒಲವ ಶ್ರಾವಣ ಇವರ ಭಾವಗೀತೆ ಸಿ ಡಿ ಗಳು

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ