ಅವುಗಳ ತಹತಹಿಕೆ ನೋಡುವಾಗಲೇ ಅಲ್ಲೆಲ್ಲೋ ಗೂಡಿರುವ ಸಂಶಯ ಇನ್ನಷ್ಟು ದಟ್ಟವಾಯಿತು. ಮುಳ್ಳುಗಳೇ ತುಂಬಿ ಹೋಗಿದ್ದ ಆ ಪೊದೆಯಲ್ಲಿ ಗೂಡು ಹುಡುಕುವುದು ಸುಲಭವಿರಲಿಲ್ಲ. ಅಷ್ಟರಲ್ಲೇ ತಾಯಿ ಹಕ್ಕಿಯೊಂದು ಮುಳ್ಳುಗಳೆಡೆಯಿಂದ ಹೊರಬಂತು. ಸಣ್ಣ ರೆಂಬೆಯೊಂದು ಕವಲೊಡೆಯುವ ಮಧ್ಯಕ್ಕೆ ಆಧಾರವಾಗಿ‌ ಕಟ್ಟಿದ ಗೂಡೊಂದು ಕಂಡಿತು. ಅದಾಗಲೇ ಸಣ್ಣ ಕಡಲೆಯಾಕೃತಿಯ ಸಣ್ಣ ಮೊಟ್ಟೆಗಳಿದ್ದವು. ನಮಗ್ಯಾರಿಗೂ ಇನ್ನಷ್ಟು ಹತ್ತಿರ ಸರಿಯಲು ಮನಸ್ಸಾಗಲಿಲ್ಲ. ಅಷ್ಟರಲ್ಲೇ ಶರೀಫ “ಹೇಯ್ ಇದೆಲ್ಲಾ ನಮ್ಮನ್ನು ಭೂತ ಆಕರ್ಷಿಸಿ, ಕೊಲ್ಲಲು ಮಾಡುವ ಉಪಾಯ” ಎಂದು ಮತ್ತೊಮ್ಮೆ ಹೆದರಿಸಿಬಿಟ್ಟ. ಮರುಕ್ಷಣವೇ ನಮ್ಮಲ್ಲಿ ಕೋತಿಯಾತ್ಮಗಳು ಬಂದು‌ ನೆಲೆಸಿದವು.
ಮುನವ್ವರ್ ಜೋಗಿಬೆಟ್ಟು ಬರೆಯುವ ಪರಿಸರ ಕಥನ

 

ನಮ್ಮ ಊರ ದಾರಿಗೆ ಪೇಟೆಯಿಂದ ಕಾಲುಗಂಟೆಗೊಮ್ಮೆ ಬಸ್ಸು. ಒಂದು ಕಾಲಕ್ಕೆ ಖಾಲಿ ರಸ್ತೆ, ಅಪರೂಪಕ್ಕೊಂದು ವಾಹನ ನೋಡುತ್ತಿದ್ದ ನಮಗೆ ‘ಯಾಕಾದರೂ ಈ ಕುಗ್ರಾಮಕ್ಕೆ ಬಂದು ತುಲುಪಿದ್ದೆವಾ’ ಎಂದು ನಮ್ಮನ್ನೇ ನಾವು ಹಳಿದುಕೊಳ್ಳುತ್ತಿದ್ದೆವು. ಆ ದಿನಗಳಲ್ಲಿ ಅಪರೂಪಕ್ಕೆ ನಾಲ್ಕೈದು ವಾಹನ ನಮ್ಮೂರ ದಾರಿಯಲ್ಲಿ ಬಂದರೆ ಮುಗಿಯಿತು. ಬಸ್ಸು ಬಿಟ್ಟರೆ ಹೆಸರು ಗೊತ್ತಿರುವ ಎರಡು ಜೀಪು, ನಾಲ್ಕೈದು ಬೈಕು. ಅದು ಬಿಟ್ಟರೆ ಬೆಳಗ್ಗೆ ಮತ್ತು ಸಂಜೆಗೆ ಕ್ರಮ ತಪ್ಪಿಸದೆ ಕಾನೂರಿನ ಹೆಗ್ಗಡತಿಯ ತಿಮ್ಮನಂತೆ ಗಡಂಗಿಗೆ ಈಚಲ ಕಳ್ಳು ಒಯ್ಯುತ್ತಿದ್ದವರೊಬ್ಬರ ಸೈಕಲ್. ನುಣುಪು ಮಾಡಿದ ಅಡಿಕೆಯಂತೆ ತಲೆಯ ಒಂದೂ ಕೂದಲು ಉಳಿಸದೆ ಬೋಳಿಸಿಕೊಂಡ ವ್ಯಕ್ತಿ ಆತ. ಸೈಕಲೇ ಅವನನ್ನು ಹೊತ್ತು ತರುವಂತಹ ಮೂಳೆಚಕ್ಕಳ ಮನುಷ್ಯ. ‘ನಮಸ್ಕಾರ’ ಎಂದು ಕೈಮುಗಿದರೆ ‘ಈ ಪರಿಚಯವೇ ಇಲ್ಲದ ಮಕ್ಕಳು ಯಾಕಾದರೂ ನಮಸ್ಕಾರ ಮಾಡಿಯಾರು’ ಎಂಬ ಪೂರ್ವಾಪರಗಳನ್ನು ಗಣನೆಗೆ ತೆಗೆದುಕೊಳ್ಳದೆ ನಮಸ್ಕರಿಸುತ್ತಿದ್ದ ನಿಷ್ಕಪಟಿ.

ಒಮ್ಮೆ ನಮ್ಮೂರ ದಾರಿಯಲ್ಲಿ ಅವನು ಮೂಗಿನ ಮಟ್ಟ ಹೆಂಡ ಕುಡಿದು ಯದ್ವಾತದ್ವಾ ಸೈಕಲ್ ಹೊಡೆದುಕೊಂಡು ‘ಟಣ ಟಣ’ ಬೆಲ್ಲು ಹೊಡೆಯುತ್ತಾ ಬರುತ್ತಿದ್ದನಂತೆ. ದಾರಿ ಮಧ್ಯೆ ಇಳಿಜಾರಿನಲ್ಲಿ ಯಾರೋ ನಮಸ್ಕಾರ ಮಾಡಿದ್ದಾರೆ. ಕುಡಿದ ಅಮಲಿನಲ್ಲಿ ಎರಡೂ ಕೈ ಬಿಟ್ಟು ಹಾಯುವ ಗೂಳಿಯಂತೆ ತಲೆಬಗ್ಗಿಸಿ ನಮಸ್ಕಾರಕ್ಕೂ ಪ್ರತಿಸ್ಪಂದನೆ ಮಾಡಿದ್ದಾನೆ. ಪರಿಣಾಮವೇನಾಯಿತೆಂದರೆ, ನಿಯಂತ್ರಣ ತಪ್ಪಿದ ಸೈಕಲ್ ಕಮರಿಗೆ ಅಪ್ಪಳಿಸಿದೆ. ಅಲ್ಪ ಸ್ವಲ್ಪ ನೀರು ಹರಿಯುತ್ತಿದ್ದ ಆ ಗುಳಿಗೆ ಆತ ಅಂಗಾತ ಬಿದ್ದಿದ್ದಾನೆ. ತಲೆಗೂ ಮುಖಕ್ಕೂ ಗಾಯವಾಗಿ ರಕ್ತ ಸುರಿಯುತ್ತಿರಬೇಕಾದರೆ, ಆ ಗುಂಡಿ ನೀರಲ್ಲಿ ಮುಖ ತೊಳೆದಿದ್ದಾನೆ. ಆಗಲೇ ಹೆಂಡದಮಲು ಇಳಿದು ಜೋರಾಗಿ ಬೊಬ್ಬಿಟ್ಟವನನ್ನು ಆಸ್ಪತ್ರೆಗೆ ಕೊಂಡು ಹೋದರಂತೆ.

ಹೀಗಂತ ಕಥೆ ಹೇಳುತ್ತಾ ಶರೀಫ ಅದೇ ಇಳಿಜಾರು ಕಡೆಗಿನ ಸ್ಥಳವನ್ನು ತೋರಿಸುತ್ತಿದ್ದ. ಅವನ ಬಾಲಂಗೋಚಿಗಳಾಗಿ ನಾವೂ ಹಿಂಬಾಲಿಸುತ್ತಿದ್ದೆವು. ಅಲ್ಲೇ ಕೆಳಗಿನ ಝರಿಯಲ್ಲಿ ನಿಂತು ಹರಿವ ನೀರಿಗೆ ಗಾಳವೂ ಹಾಕಿದ್ದೆವು. ನಡುನಡುವೆ ಈಚಲು ಕಳ್ಳಿನ ವ್ಯಾಪಾರಿಯ ಅವಸ್ಥೆ ಇನ್ನೊಮ್ಮೆ ಹೇಳಿಸಿಕೊಂಡು ನಗುತ್ತಲೇ ಇದ್ದೆವು. ಆ ಬಳಿಕ ಆತ ಸೈಕಲ್ ಕೈ ಬಿಟ್ಟು ನಮಸ್ಕರಿಸುವ ದುಸ್ಸಾಹಸಕ್ಕೆ ಇಳಿಯಲೇ ಇಲ್ಲವಂತೆ.

ಆ ದಿನ ಬರೀ ಕೆಂಪು ನೀರು. ಮಧ್ಯಾಹ್ನದಿಂದ ಸಂಜೆವರೆಗೂ ಗಾಳ ಹಾಕಿದ್ದೇ ಬಂತು. ಮೀನು ಸಿಕ್ಕಿತೋ, ಇಲ್ಲವೋ ನೆನಪಿಲ್ಲ. ಎಲ್ಲಾ ಮುಗಿದು ತಿರುಗಿ ಬರುತ್ತಿದ್ದೆವು. ಸ್ವಲ್ಪ ಮುಂದೆ ನಡೆದು ಬರಬೇಕಾದರೆ ಬ್ರಾಹ್ಮಣರೊಬ್ಬರ ಪಾಳು ಬಿದ್ದ ತೋಟ ಕಾಣಿಸಿತು. ದೂರದಲ್ಲಿ ಮೈ ನೆರೆದ ಪೇರಳೆ ಮರದ ತುಂಬಾ ಜಾತ್ರೆಗೆ ಹಾಕಿದ ಬಲ್ಬುಗಳಂತೆ ಹಣ್ಣುಗಳು ಜೀಕುತ್ತಿದ್ದವು. ಹಣ್ಣಾದ ಪೇರಳೆ ಕಂಡದ್ದೇ ತಡ, ಎಲುಬು ಸಿಕ್ಕ ನಾಯಿಯಂತೆ ಬನಿಯನ್ ಒದ್ದೆಯಾಗುವಷ್ಟು ಜೊಲ್ಲು ಸುರಿಸಿ ಬಿಟ್ಟೆವು. “ಏನ್ಮಾಡೋಣ, ಬೇಲಿ ಹಾರಿ ಒಳಗೇ ಹೋಗಣವೇ” ಎಂದು ದನಗಳಿಂತಲೂ ಕೀಳಾಗಿ ಗುಂಪಿನೊಂದಿಗೆ ಕೇಳಿಕೊಂಡೆ. ಅಷ್ಟರಲ್ಲೇ ಶರೀಫ “ಅಯ್ಯೋ, ಅದರೊಳಗೆ ಹೋಗಲಾಗುವುದಿಲ್ಲ, ಆ ತೋಟವನ್ನು ಭಟ್ರು ಕಲ್ಲುರ್ಟಿಗೆ ಕೊಟ್ಟಿದ್ದಾರಂತೆ” ಎಂದು ಹೆದರಿಸಿ ಬಿಟ್ಟ. “ಹೌದಾ” ಎಂದು ಹುಬ್ಬೇರಿಸಿಕೊಂಡು ನಾವೆಲ್ಲ ಹೆದರಿಬಿಟ್ಟೆವು. “ಇನ್ನೇನು, ಮೊನ್ನೆ ಜಮೀಲಾಳ ಮಗ ಹೋಗಿದ್ದ ಅಲ್ವಾ, ಅವನು ಪೇರಳೆ ತಿಂದು ಹುಚ್ಚು ಹಿಡಿದು ಹಾವಿನಂತೆ ನೃತ್ಯ ಮಾಡಿದನಂತೆ” ಎಂದು ಬೆಲ್ಲಿ ಡ್ಯಾನ್ಸ್ ಮಾಡುವಂತೆ ಕುಣಿದು ನಟನೆಯನ್ನೂ ಮಾಡಿ ತೋರಿಸಿದ. ಇರುವ ಧೈರ್ಯದಲ್ಲಿ ೯೫ ಶೇಕಡಾವೂ ಹೊರಟು ಹೋಗಿತ್ತು. ಸಂಜೆ ಬೇರೆ. ಒಂದು ಕಡೆ ಹೊಟ್ಟೆ ಹಸಿವು, ಹಣ್ಣಿನ ಬಣ್ಣ ನಮ್ಮನ್ನು ಮುಂದೆ ಹೋಗಲು ಬಿಡಲೇ ಇಲ್ಲ. ಅಷ್ಟರಲ್ಲೇ ನಾನು ಕುತರ್ಕವನ್ನೊಂದು ಮುಂದಿಟ್ಟೆ. “ಆ ಮರದಲ್ಲಷ್ಟು ಹಕ್ಕಿ, ಬಾವಲಿಗಳೆಲ್ಲಾ ಇವೆಯಲ್ವಾ, ಅದೂ ಅಲ್ಲದೆ ದನವೆಷ್ಟು ಬೇಲಿ ಹಾರಿದೆ. ಅವುಗಳಿಗೊಂದಕ್ಕೂ ಕಲ್ಲುರ್ಟಿ ಮೈ ಮೇಲೆ ಬರ್ಲಿಲ್ವಾ?” ಅಂಥ. ಅದೇಕೋ ಅವರ ಮರ್ಮಕ್ಕೆ ತಾಗಿರಬೇಕು. “ಹೋ ಹೌದಲ್ವಾ? ಒಮ್ಮೆ ಟ್ರೈ ಮಾಡೋಣ” ಅನ್ನುತ್ತಾ ಗೊತ್ತಿದ್ದ ಧಾರ್ಮಿಕ ಮಂತ್ರವನ್ನು ಜಪಿಸುತ್ತಾ ಬೇಲಿ ಹಾರಿ ತೋಟದೊಳಕ್ಕೆ ಬಂದೆವು. ಕಳ್ಳತನಕ್ಕೆ ಯಾವ ದೇವ ಸಹಾಯಕ್ಕೆ ನಿಂತಾನು.

ಹಾರುವಾಗ ಅಲ್ಲೇ ಬಿದ್ದಿದ್ದ ಬೇಲಿ ಮುಳ್ಳೊಂದು ಗುಂಪಿನಲ್ಲಿದ್ದವನಿಗೆ ಚುಚ್ಚಿತು. ಅವನು ಮುಳ್ಳೆದುಕೊಂಡು ಸುಧಾರಿಸಿಕೊಳ್ಳುವ ಮೊದಲೇ ಯಾರೋ ಒಬ್ಬ ‘ನೋಡು ನೋಡು, ಮೊದಲ ಭೂತದ ಉಪದ್ರ ಪ್ರಾರಂಭಾಯಿತಲ್ವಾ’ ಅಂದು ಮತ್ತಷ್ಟು ಹೆದರಿಸಿಬಿಟ್ಟ. ಈಗ ಹೇಗೂ ಬೇಲಿ ಹಾರಿದ್ದಾಗಿದೆ. “ಸಮುದ್ರಕ್ಕಿಳಿದವನಿಗೆ ಚಳಿ ಯಾಕೆ” ಎಂದು ಪೇರಳೆ ಮರಕ್ಕೆ ಸಮೀಪಿಸಿದೆವು.

ಹತ್ತಿರದಲ್ಲೊಂದು ಪಾಳು ಬಾವಿ ಹೆದರಿಕೆ ಹುಟ್ಟಿಸುತ್ತಿತ್ತು. ನಕ್ಷತ್ರ ಎಣಿಕೆಯಷ್ಟು ಪೇರಳೆ ಹಣ್ಣು. ಬಿಡಲಾಗುತ್ತದೆಯೇ…. ಕೈಯಲ್ಲಿ, ಬಾಯಲ್ಲಿ, ಬನಿಯನ್ನು, ಪ್ಯಾಂಟ್ ಕಿಸೆಯಲ್ಲೆಲ್ಲಾ ತುರುಕಿಸಿಕೊಂಡು ಭೂತದ ಹೆದರಿಕೆಯಲ್ಲೇ ಹೊರಡಲನುವಾದೆವು. ಇನ್ನೇನು ನಮ್ಮ ಮನುಷ್ಯ ರೂಪದ ವಾನರಸಂಗ, ಬೇಲಿ ಹಾರಬೇಕೆನ್ನುವಾಗ ಒಂದು ಗುಂಪು ಗಿಜಗಾರ್ಲು ಹಕ್ಕಿಗಳು ಕಾರೆ ಗಿಡದ ಹತ್ತಿರ ಅಂಗನವಾಡಿ ಮಕ್ಕಳಂತೆ ರಂಪ ಎಬ್ಬಿಸತೊಡಗಿದವು.

ಗಿಜಗಾರ್ಲು ಹಕ್ಕಿಗಳೆಂದರೆ ಗುಂಪು ಹಕ್ಕಿಗಳು. ಅಷ್ಟೇನೂ ಅಂದವಲ್ಲದಿದ್ದರೂ, ಚೊಕ್ಕವಾಗಿ ಗೂಡು ಕಟ್ಟುವ ಕಲೆ ಅವುಗಳಿಗಿದೆ. ರಜೆ ದಿನಗಳಲ್ಲಿ ನಾವೆಲ್ಲಾ ಒಟ್ಟಾಗಿ ಕುಳಿತು ಪಿರಿಪಿರಿ ಮಾಡುತ್ತಿದ್ದರೆ ಉಮ್ಮ “ನಿವ್ಯಾಕೆ ಬಜಕರೆ ಹಕ್ಕಿಯಂತೆ ಮಾಡುವುದು” ಎಂದು ಗದರಿಸುವುದಿದೆ. ಬಜಕರೆ ಅಂದರೆ ಬ್ಯಾರಿ ಬಾಷೆಯಲ್ಲಿ ‘ತರಗೆಲೆ’ ಅಂತ. ಅವುಗಳ ಮೈ ಬಣ್ಣ ತರಗೆಲೆಗೆ ಹೋಲುವುದರಿಂದಲೋ, ಅಥವಾ ಅವುಗಳ ಚರಿಪಿರಿಗೆ ಒಣಗಿದ ತರಗಲೆಯ ಸದ್ದಿದ್ದರಿಂದಲೋ ಹಿರಿಯರು ಆ ಹೆಸರು ಈ ಹಕ್ಕಿಗಿಟ್ಟದ್ದಿರಬೇಕು. ಹಕ್ಕಿ ಎಂದ ಕೂಡಲೇ ನಮ್ಮ ಸುಪ್ತ ಪ್ರಜ್ಞೆ ಜಾಗೃತವಾಯಿತು. ಜನ ವಿಹೀನ ಸ್ಥಳ, ಹೊಟ್ಟೆ ತುಂಬುವಷ್ಟು ಹಣ್ಣು, ನೀರು ಬೇಕೆಂದರೆ ಹತ್ತಿರದಲ್ಲೊಂದು ಪಾಳುಬಾವಿ. ಎಲ್ಲಾ ಲೆಕ್ಕಕ್ಕೆ ತೆಗೆದುಕೊಂಡು ಶರೀಫ “ಇಲ್ಲೊಂದು ಗೂಡು ಇರಲೇ ಬೇಕು” ಎಂದು ಅನುಭವಿಯಂತೆ ಹೇಳಿಕೆ ಕೊಟ್ಟ. ನಮಗೂ ಹಾಗನಿಸಿತು. ಕಾರೆಗಿಡಕ್ಕೆ ಸುತ್ತುವರಿದ್ದ ಹಕ್ಕಿಗಳ ಕಡೆ ನಮ್ಮ ಹೆಜ್ಜೆಗಳು ಸಮೀಪಿಸಿದವು. ಅವುಗಳ ಗಲಭೆ ತಾರಕಕ್ಕೇರಿತು. ಅದು ಬಹುಶಃ ಅಪಾಯದ ಲಕ್ಷಣವೆಂದು ತೋರಿಸಿಕೊಳ್ಳುವ ಪರಿ.

ಅವುಗಳ ತಹತಹಿಕೆ ನೋಡುವಾಗಲೇ ಅಲ್ಲೆಲ್ಲೋ ಗೂಡಿರುವ ಸಂಶಯ ಇನ್ನಷ್ಟು ದಟ್ಟವಾಯಿತು. ಮುಳ್ಳುಗಳೇ ತುಂಬಿ ಹೋಗಿದ್ದ ಆ ಪೊದೆಯಲ್ಲಿ ಗೂಡು ಹುಡುಕುವುದು ಸುಲಭವಿರಲಿಲ್ಲ. ಅಷ್ಟರಲ್ಲೇ ತಾಯಿ ಹಕ್ಕಿಯೊಂದು ಮುಳ್ಳುಗಳೆಡೆಯಿಂದ ಹೊರಬಂತು. ಸಣ್ಣ ರೆಂಬೆಯೊಂದು ಕವಲೊಡೆಯುವ ಮಧ್ಯಕ್ಕೆ ಆಧಾರವಾಗಿ‌ ಕಟ್ಟಿದ ಗೂಡೊಂದು ಕಂಡಿತು. ಅದಾಗಲೇ ಸಣ್ಣ ಕಡಲೆಯಾಕೃತಿಯ ಸಣ್ಣ ಮೊಟ್ಟೆಗಳಿದ್ದವು. ನಮಗ್ಯಾರಿಗೂ ಇನ್ನಷ್ಟು ಹತ್ತಿರ ಸರಿಯಲು ಮನಸ್ಸಾಗಲಿಲ್ಲ. ಅಷ್ಟರಲ್ಲೇ ಶರೀಫ “ಹೇಯ್ ಇದೆಲ್ಲಾ ನಮ್ಮನ್ನು ಭೂತ ಆಕರ್ಷಿಸಿ, ಕೊಲ್ಲಲು ಮಾಡುವ ಉಪಾಯ” ಎಂದು ಮತ್ತೊಮ್ಮೆ ಹೆದರಿಸಿಬಿಟ್ಟ. ಮರುಕ್ಷಣವೇ ನಮ್ಮಲ್ಲಿ ಕೋತಿಯಾತ್ಮಗಳು ಬಂದು‌ ನೆಲೆಸಿದವು. ಚಂಗನೆ ಬೇಲಿ ಬದಿಯ ಮರವೇರಿ ಈಚೆ ಕಡೆಗೆ ಜಿಗಿದೆವು. ಹಾರುವ ರಭಸಕ್ಕೆ ನನ್ನ ಕಾಲು ಉಳಿಕಿದಂತಾಯಿತು. ನೋವು ಪರಿಗಣಿಸುವ ಸಮಯವಲ್ಲದ ಕಾರಣ “ಬದುಕಿದೆಯಾ ಬಡ ಜೀವವೇ” ಎಂದು ಆಳೆತ್ತರದ ಪೊದೆ ಗುಂಡಿ ನೋಡದೆ ಭೂತದ ಭಯದಲ್ಲಿ ಹೌಹಾರಿ ರಸ್ತೆಗಿಳಿದು ಓಡುತ್ತಲೇ ಮನೆ ಸೇರಿದೆವು.

ಮರುದಿನ ಬಾತಿದ್ದ ಕಾಲಿನಿಂದ ಸಣ್ಣಗೆ ಜ್ವರ ಸುಡುತ್ತಿತ್ತು. ಯಾವುದೋ ಕಾಡುಬೇರು ಅರೆದ ಎಣ್ಣೆ ತಿಕ್ಕಿದ್ದರ ಫಲವಾಗಿ ನೋವು ಒಂದು ವಾರ ಕಾಯಿಸಿ ಹೊರಟಿತು. ಆ ಬಳಿಕ ವಾರ ಕಳೆದರೂ ಭೂತ ಯಾರಿಗೂ ಮೈ ಮೇಲೆ ಬರಲಿಲ್ಲ. ಈ ಮಧ್ಯೆ ಸಮಯ ಸಿಕ್ಕಾಗಲೆಲ್ಲಾ ಶರೀಫ ಮೈ ಮೇಲೆ ಬಂದಂತೆ ನಟಿಸಿ, “ಸತ್ಯ ಹೇಳು, ಯಾರೆಲ್ಲಾ ಪೇರಳೆ ಕದ್ದವರು” ಎಂದು ಉಚ್ಚ ಸ್ವರದಲ್ಲೇ ಭೂತ ಹಿಡಿದವರಂತೆ ಹೆದರಿಸುತ್ತಿದ್ದ.

ಈಚೆಗೆ ಮಳೆಗಾಲಕ್ಕೂ ಸ್ವಲ್ಪ ದಿನ‌ ಹಿಂದೆ ಮೊದಲಡಿಯ ಜಲಪಾತ ನೋಡಿ ಬರೋಣವೆಂದು ಮನೆಯಲ್ಲಿ ಸುಮ್ಮನೆ ಪ್ರಸ್ತಾಪಿಸಿದ್ದೆ. “ಅಲ್ಲಿಗೆ ಈಗ ದಾರಿ ಎಲ್ಲಿದೆ, ಎಲ್ಲಾ ಕುರುಚಲು ಕಾಡು ಬೆಳೆದು ಬಿಟ್ಟಿದೆ…” ಎಂದು ಉಮ್ಮ ಪ್ರತಿಕ್ರಿಯಿಸಿದ್ದರು. ಆದರೂ ಕೂತೂಹಲ ತಡೆಯದೆ ‘ಒಮ್ಮೆಯಾದರೂ ನನಗೆ ಹೋಗಿ ನೋಡಿ ಬರಲೇಬೇಕು’ ಎಂದು ಉತ್ತರಿಸಿದ್ದೆ. ಆ ದಿನ ಬೆಳಗ್ಗೆ ಅಂತೂ ನನ್ನ ಹುಚ್ಚು ಕುತೂಹಲಕ್ಕೆ ತಂಗಿ ಮತ್ತು ಅತ್ತಿಗೆ ಜೊತೆಯಾದರು. ಅತ್ತಿಗೆ ಕೈಯಲ್ಲಿ ಸಣ್ಣ ಮಗು, ಅವನನ್ನು ಕರೆದುಕೊಂಡು ಹೋಗುವಂತೆಯೂ ಇಲ್ಲ, ಬಿಟ್ಟು ಬರುವುದಂತೂ ಸಾಧ್ಯವೇ ಇರಲಿಲ್ಲ. ‘ಇಲ್ಲೇ ಹತ್ತಿರವಲ್ವಾ, ಹೇಗೂ ಚಿಕ್ಕಪ್ಪನಂತೆ ಮಗನೂ ಕಾಡುಪ್ರೇಮಿಯಾಗಲಿ’ ಎಂದು ಅತ್ತಿಗೆಯ ವಾದ. ಅಮ್ಮ ಮಗುವನ್ನು ಕರೆದುಕೊಳ್ಳುವುದು ಬೇಡವೆಂದರೂ ಕೇಳದೆ ಜೊತೆಗೆ ಕರೆದುಕೊಂಡೇ ಹೊರಟೆವು.

ಹೀಗಂತ ಕಥೆ ಹೇಳುತ್ತಾ ಶರೀಫ ಅದೇ ಇಳಿಜಾರು ಕಡೆಗಿನ ಸ್ಥಳವನ್ನು ತೋರಿಸುತ್ತಿದ್ದ. ಅವನ ಬಾಲಂಗೋಚಿಗಳಾಗಿ ನಾವೂ ಹಿಂಬಾಲಿಸುತ್ತಿದ್ದೆವು. ಅಲ್ಲೇ ಕೆಳಗಿನ ಝರಿಯಲ್ಲಿ ನಿಂತು ಹರಿವ ನೀರಿಗೆ ಗಾಳವೂ ಹಾಕಿದ್ದೆವು. ನಡುನಡುವೆ ಈಚಲು ಕಳ್ಳಿನ ವ್ಯಾಪಾರಿಯ ಅವಸ್ಥೆ ಇನ್ನೊಮ್ಮೆ ಹೇಳಿಸಿಕೊಂಡು ನಗುತ್ತಲೇ ಇದ್ದೆವು.

ಪ್ರಯಾಣದ ಆರಂಭದಲ್ಲಿ ಹಿಮಾಲಯ ಹತ್ತಿ ಬರುವಷ್ಟು‌ ಉಮೇದು‌ ನಮಗೆ. ಹೊರಟೆವು ನೋಡಿ. ಹಿಂದಿದ್ದ ಕಾಲುದಾರಿ ಮುಳ್ಳು ಗಿಡಗಳಿಂದ ಮುಚ್ಚಿಯೇ ಹೋಗಿದ್ದವು. ದಾರಿ ಮಾಡಿಕೊಂಡು ಹೋಗುವುದಷ್ಟೇ ಸದ್ಯಕ್ಕಿದ್ದ ದಾರಿ. ಅದಕ್ಕಾದರೂ ಕತ್ತಿಯೂ ಕೈಯಲ್ಲಿರಲಿಲ್ಲ. ಲಂಟಾನ ಗಿಡಗಳು, ಪೊದೆಗಳನ್ನು ಕೋಲಿನಿಂದ ಹೊಡೆದುಕೊಂಡೇ ಸಾಗಿದೆವು. ಕೆಲವು ಕಡೆ ಸಲೀಸು ದಾರಿಯೂ ಇದ್ದವು. ಇನ್ನೇನು ಜಲಪಾತಕ್ಕೆ ಕೂಗಳತೆಯ ದೂರವಿದೆ ಅನ್ನುವಷ್ಟರಲ್ಲಿ ದಾರಿ ಸಂಪೂರ್ಣ ಮುಚ್ಚಿ ದಟ್ಟ ಮುಳ್ಳುಗಳಿಂದಾವೃತವಾಗಿತ್ತು. ಒಂದು ಅಡಿ ಮುಂದಿರಿಸಿದರೂ ಅರ್ಧ ಗ್ರಾಂ ಚರ್ಮ ಮುಳ್ಳುಗಳಿಗೆ ಬಲಿಯರ್ಪಿಸಬೇಕಿತ್ತು. “ಥತ್ ನರ ಭಕ್ಷಕ ಮುಳ್ಳುಗಳೆಂದು” ಹಳಿಯುತ್ತ ಒತ್ತಾಯಪೂರ್ವಕವಾಗಿ ದಾರಿ ಮಾಡಿಕೊಂಡೆವು.

ಒಂದೊಂದು ಮುಳ್ಳು ಚುಚ್ಚುವಾಗಲೂ ಅತ್ತಿಗೆಯ ಕೈಲ್ಲಿದ್ದ ಮಗು ಕಿಟಾರನೆ ಕಿರುಚುತ್ತಿದ್ದ. ಈ ಅಧ್ವಾನಕ್ಕೆಲ್ಲಾ ನಾನೇ ಕಾರಣನಾದುದಕ್ಕೆ ಪ್ರಾಯಶ್ಚಿತಃವೆಂಬಂತೆ ಅವಳ ಕಂಕುಳದಲ್ಲಿದ್ದ‌ ಮಗುವನ್ನೂ ನಾನು ಎತ್ತಿಕೊಂಡೆ. ಹಾಗೆಯೇ ಮುಂದುವರಿದೆವು.‌ ಕಾಡು ಇನ್ನಷ್ಟು ದಟ್ಟವಾಗತೊಡಗಿತು. ಮಗುವನ್ನು ಸಂತೈಸುವುದು ನನ್ನ ಕೆಲಸವಾಯಿತು. ಇನ್ನೇನು ಹೋಗಲೇ ಸಾಧ್ಯವಿಲ್ಲದಷ್ಟು ಕಾಡು ಅಗಮ್ಯವಾಯಿತು. ಹೊರಟ ಉಮೇದೆಲ್ಲವೂ ಜರ್ರೆಂದು ಇಳಿದೇ ಹೋಗಿತ್ತು. ನಾನು ಸೋತು ಹಿಂತಿರುಗಿದೆ. ಅತ್ತಿಗೆ, ಮತ್ತು ತಂಗಿ ಇಬ್ಬರೂ ಸೋತಂತಿದ್ದರು. ಇನ್ನು ಜಲಪಾತಕ್ಕೆ ಐದೇ ನಿಮಿಷದ ದಾರಿ, ಒಂದಡಿ ಇಡುವಷ್ಟೂ ದಾರಿ ಸಲೀಸಿರಲಿಲ್ಲ. ನಾಲ್ಕೈದು ಹಕ್ಕಿಗಳು ಜಲಪಾತದ ಮೇಲೆ ಗಿರಕಿ ಹೊಡೆಯುತ್ತಿದ್ದವು. ಕಾಲುಗಳಲ್ಲಿ ಚರ್ಮ ಕಿತ್ತು ರಕ್ತ ಹರಿಯುತ್ತಿತ್ತು. ಜಲಪಾತದಲ್ಲಿ ಅಲ್ಪ ಸ್ವಲ್ಪ ನೀರಿರುವುದು ಖಾತ್ರಿ ಇತ್ತು. ನೀರು ಹರಿವ ಕ್ಷೀಣ ಸ್ವರವೂ ಕೇಳಿಸುತ್ತಿತ್ತು. ಒಂದಷ್ಟು ಹಕ್ಕಿಗಳ ಚಿಲಿ-ಪಿಲಿಯೂ ಕೇಳಿಸುತ್ತಿತ್ತು.

ಕಣ್ಣಾರೆ ನೋಡುವ ಯಾವ ಶಕ್ತಿಯೂ ನಮಗುಳಿದಿರಲೇ ಇಲ್ಲ. ಅಲ್ಲೇ ಸ್ವಲ್ಪ ಹೊತ್ತು ಕುಳಿತುಕೊಂಡು ದಣಿವಾರಿಸಿಕೊಂಡೆವು. ಅಷ್ಟರಲ್ಲೇ ಹಳೆಯ ನೆನಪುಗಳೆಲ್ಲ ಹಾದು ಹೋದವು. ದೂರದ ಗಿಡವೊಂದರ ಕೊಂಬೆಯಲ್ಲೊಂದು ಗೂಡೊಂದು ಕಂಡಿತು. ಹತ್ತಿರ ಹೋಗಿ ನೋಡಿದರೆ, ಗುಳೆ ಹೊರಟು ಹೋಗಿದ್ದ ಗಿಜಗಾರ್ಲು ಹಕ್ಕಿಗಳ ಗೂಡು. ಹತ್ತಿರದಲ್ಲೇ ನೀರಿನ ಬುಗ್ಗೆ, ಕಾಡು ತುಂಬಾ ಹಣ್ಣುಗಳು. ಇಷ್ಟೆಲ್ಲಾ ಸವಲತ್ತುಗಳಿದ್ದರೆ ಅವು ಗೂಡು ಕಟ್ಟದಿರುತ್ತದೆಯೇ! ನಾನು ಅವುಗಳ ಬಗ್ಗೆ ಸ್ಚಲ್ಪ‌ ಪಾಠವನ್ನೂ ಮಾಡಿದೆ. ಅವರಿಗೆ ಅದನ್ನು ಕೇಳಿಸಿಕೊಳ್ಳುವ ಆಸಕ್ತಿ ಉಳಿದಿರಲಿಲ್ಲ. ಮಗುವನ್ನೆತ್ತಿ ಭುಜದ ಮೇಲೆ ಕುಳ್ಳಿರಿಸಿ ಮತ್ತೆ ಮುಳ್ಳು ಪೊದೆ ತಪ್ಪಿಸಿ ಹಳೆಯದೊಂದು ಬಳಸು ದಾರಿಯಲ್ಲಿ ಪೊದೆಗಳನ್ನು ಮೂಲೆಗೆ ಸರಿಸುತ್ತಾ ಮನೆಯ ದಾರಿ ಹಿಡಿದೆವು.

**********

ಈಗ್ಗೆ ವಾರದ ರಜೆಯಲ್ಲಿ ಊರಿಗೆ ಹೋಗಿದ್ದೆ. ಏನೋ ಸಸ್ಯಹಾರದ ವಿಷಯದಲ್ಲಿ ತಂಗಿಗೂ ನನಗೂ ಶೀತಲ ಯುದ್ಧ ನಡೆಯುತ್ತಿತ್ತು. ಅಷ್ಟರಲ್ಲಿ ಅಕ್ಕ ಬಂದು ಸೇರಿಕೊಂಡು ಸಸ್ಯಹಾರವೇ ಆರೋಗ್ಯಕ್ಕೆ ಒಳ್ಳೆಯದೆಂದು ತಂಗಿಯ ವಕಾಲತ್ತು ವಹಿಸಿಕೊಂಡಳು. ಅಷ್ಟರಲ್ಲೇ, “ಸಸ್ಯಹಾರವನ್ನು ಇಷ್ಟಪಡದ ನೀನು ಯಾವ ಸೀಮೆಯ ಪರಿಸರಪ್ರೇಮಿ” ಎಂದು ತಂಗಿ ಖಾರವಾಗಿಯೇ ಹರಿ ಹಾಯ್ದಳು. ಆ ಕೂಡಲೇ, “ನೀವೆಲ್ಲಾ ಸಸ್ಯ ತಿಂದು ಅರಣ್ಯ ನಾಶ ಮಾಡುವವರು, ನಾನಾದರೆ ಸಸ್ಯವನ್ನು ತಿಂದು ಮುಗಿಸುವವುಗಳನ್ನು ತಿಂದು ಹಾಕಿ ಸಮತೋಲನ ಕಾಪಾಡುವವನು” ಎಂದು ನನ್ನನ್ನೇ ಸಮರ್ಥಿಸಿಕೊಂಡೆ. ಅಷ್ಟರಲ್ಲಿ ಎಲ್ಲಿತ್ತೋ ಗೊತ್ತಿಲ್ಲ, ಒಂದಷ್ಟು ಗುಂಪು ಹಕ್ಕಿಗಳು ಬಹಳ ಜೋರಾಗಿಯೇ ಗಲಾಟೆ ಆರಂಭಿಸಿದ್ದವು. ನಾನು ವಾದ ನಿಲ್ಲಿಸಿ, “ಅದ್ಯಾವ ಹಕ್ಕಿ” ಎಂದು ಕೇಳಿದೆ.

“ಅದು ಗಿಜಗಾರ್ಲು ಹಕ್ಕಿ, ನೀನು ಬಂದಿದ್ದೀಯಲ್ಲ ನೋಡು, ಅದಕ್ಕೇ ಪರಿಸರ ಪ್ರೇಮಿಯನ್ನು ಹುಡುಕುತ್ತಾ ಬಂದಿದೆ” ಎಂದು ತಂಗಿ ಪ್ರತಿವಾದ ಹೂಡಿದಳು. ಅಂಥೂ ಅವಳು ನನಗೆ ಬೈಯ್ದದ್ದೋ, ಹೊಗಳಿದ್ದೋ ನನಗಂಥೂ ಅರ್ಥವಾಗಲೇ ಇಲ್ಲ. ಹಕ್ಕಿಯ ಸ್ವರ ಕೇಳಿಸಿಕೊಳ್ಳುತ್ತಾ ಮನೆಯ ಹೊರಗೆ ಬಂದೆ. ಒಂದು‌ ಗುಂಪು ಗಿಜಗಾರ್ಲು ಹಕ್ಕಿಗಳು ಮನೆಯ ಹಿತ್ತಲಿನ ಮರದಲ್ಲಿ ಕುಳಿತು ಗದ್ದಲವೆಬ್ಬಿಸುತ್ತಿದ್ದವು. ಹೊರಗಿನ್ನೂ‌ ಮಳೆ ಬಿಟ್ಟು ಬಿಸಿಲು ಕಾಯುತ್ತಿತ್ತು. ಮನೆಯ ಹೊರಗೆ ಬಂದು ಹಕ್ಕಿಗಳ ಆಟೋಟಾಪಗಳನ್ನು ನೋಡುತ್ತಾ ನಿಂತೆ. ಕಂದು ಬಣ್ಣದ ಹಕ್ಕಿಗಳು ಗುಂಪಾಗಿ ಕುಳಿತು ಪಂಚಾಯತಿ ನಡೆಸುತ್ತಿದ್ದವು. ಒಂದು ಬಾಯ್ಮುಚ್ಚುವ ಮೊದಲೇ ಇನ್ನೊಂದು ಬೊಬ್ಬೆ ಹಾಕುತ್ತಿತ್ತು. ಥೇಟ್ ಲಾಸ್ಟು ಬೆಂಚಿನ ಅಶಿಸ್ತಿನ ಹುಡುಗರಂತೆ ಒಟ್ಟಿಗೆ ಬೊಬ್ಬೆ ಹೊಡೆಯುತ್ತಿದ್ದವು.

ಅವುಗಳ ಮೈ ಬಣ್ಣ ಅಷ್ಟು ಆಕರ್ಷಕವಲ್ಲ, ಕಪ್ಪುಕಣ್ಣು ವಾಚಾಳಿ ಬುದ್ಧಿಯೇ ಅವುಗಳ ವಿಶೇಷತೆ. ಅತ್ತಿಂದಿತ್ತ ಹಾರುತ್ತಾ ಗುಂಪು ಕೂಡುತ್ತಾ ನನ್ನಲ್ಲಿ ಸುಮ್ಮನೆ ಕುತೂಹಲ ಹುಟ್ಟಿಸುತ್ತಲೇ ಇದ್ದವು. ಈ ಮಧ್ಯೆ ಗುಂಪು ಹಕ್ಕಿ ಹಲಸಿನ ಮರದಿಂದ ಹಾರಿ ಬಂದು ಸಪೋಟ ಮರದಲ್ಲಿ ಕುಳಿತಿತು. ಅದೊಂದು ಹಕ್ಕಿಯನ್ನು ತದೇಕ ಚಿತ್ತದಿಂದ ವೀಕ್ಷಿಸತೊಡಗಿದೆ. ನಾಲ್ಕು ಬಾರಿ ಕೆಳಗಿನ ರೆಂಬೆಯಿಂದ ಮೇಲಿನದ್ದಕ್ಕೆ ಜಿಗಿದು ಆಟವಾಡುತ್ತಾ ತಕ್ಷಣ ಗಾಬರಿಗೊಂಡಂತೆ ವಿಚಿತ್ರವಾಗಿ ಕಿರುಚಿಕೊಳ್ಳತೊಡಗಿತು. ನೋಡುತ್ತೇನೆ, ಬಾಯಿಯಲ್ಲಿ ಹಸಿರು ಬಣ್ಣದ ದೊಡ್ಡ ಹುಳು ಮಿಸುಕಾಡುತ್ತಿದೆ. ಅಷ್ಟಕ್ಕೆ ಹಕ್ಕಿಯ ಸುತ್ತ ಇತರ ಹಕ್ಕಿಗಳು ದೌಡಾಯಿಸಿದವು. ಹಕ್ಕಿ ಹುಳವನ್ನು ಹೊತ್ತು‌ಕೊಂಡು ಇನ್ನೊಂದು ಮರಕ್ಕೆ ಹಾರಿತು. ಅದರ ಹಿಂದೆಯೇ ಉಳಿದವೂ ಹಾರಿದವು. ಜೊತೆಯಾಗಿ ಗಲಾಟೆಯೆಬ್ಬಿಸುತ್ತಾ ನಿಮಿಷದಲ್ಲಿ ಹುಳವನ್ನು ತಿಂದು ಹಾಕಿರಬೇಕು.

ನನ್ನ ಪ್ರಕಾರ ಆ ಹಕ್ಕಿ ಸ್ವಲ್ಪ ಜಿಪುಣ ಹಕ್ಕಿ. ಅದಕ್ಕೇ ಗುಂಪಿಗೆ ಸಿಗದಂತೆ ಇನ್ನೊಂದು ಮರಕ್ಕೆ ಹಾರಿದ್ದು. ಹಂಚಿ ತಿನ್ನುವ ಬುದ್ಧಿ ಕಾಗೆಗೆ ಮಾತ್ರ ಇರಬೇಕೆಂದು ಅಂದಾಜು ಮಾಡಿದೆ. ಹೀಗೆ ಬೆಳಗಿನ ಬಿಸಿಲು ತೀಕ್ಷ್ಣವಾಗುವವರೆಗೂ ಅಲ್ಲೆಲ್ಲಾ ಆ ಗುಂಪು ಅಡ್ಡಾಡಿತು. ನನಗೂ ಅವುಗಳನ್ನು ನೋಡಿ ಕುತ್ತಿಗೆ ನೋವು ಬಂದಿದ್ದರಿಂದ ಒಳ ಬಂದು ಬಾಗಿಲು ಹಾಕಿಕೊಂಡು ಓದಲು ಕುಳಿತೆ. ನಾನು ಮತ್ತೆ ನೋಡಲಿಕ್ಕಾಗಿ ಹೊರ ಬರಲೆಂದೋ, ನಾಲ್ಕೈದು ಬಾರಿ ಹಕ್ಕಿಗಳು ವೃತಾ ಗಲಾಟೆಯೆಬ್ಬಿಸುತ್ತಿದ್ದವು. ಅರ್ಧ ತಾಸಿನ ತರುವಾಯ ಗುಂಪೇ ಹಾರಿ ಹೋದಾಗ ಅಲ್ಲೆಲ್ಲಾ ನಿರಾಳತೆಯ ಮೌನವೊಂದು ಆವರಿಸಿತು.

ಮೊನ್ನೆ ಮೊನ್ನೆ ಆಫೀಸಿಗೆ ಹೊರಟಾಗಲೂ ದಾರಿಮಧ್ಯೆ ಗಿಜಗಾರ್ಲು ಹಕ್ಕಿಗಳೆರಡು ಅಡ್ಡಾಡುತ್ತಿದ್ದದನ್ನು ನೋಡಿದ್ದೆ. ಅಲ್ಲೇ‌ ಬಿರಿದು ನಿಂತಿದ್ದ ಚಂದದ ಕಾಡು ಹೂವುಗಳನ್ನು ಅವು ಸಂಶೋಧಿಸುತ್ತಿದ್ದಿದಿರಬೇಕು. ನಾನು ಸ್ವಲ್ಪ ಹೊತ್ತು ಅವುಗಳನ್ನೇ ನೋಡುತ್ತಾ‌ ನಿಂತೆ. ಅವುಗಳು ನನ್ನನ್ನು ನೋಡಿ ಬೆಚ್ಚಿ ಬಿದ್ದವೋ ಏನೋ, ಒಮ್ಮೆಲೆ ಹಾರುತ್ತಾ ಲೈಟು ಕಂಬದ ಮೇಲೆ ಕುಳಿತವು.‌ ನಾನು ಲೈಟು ಕಂಬದ ಕೆಡೆಗೆ ದಿಟ್ಟಿಯಿಟ್ಟೆ. ಅರೇ! ನನ್ನ ಮನದಲ್ಲಿದ್ದ ಜಿಜ್ಞಾಸೆಗೆ ಸ್ಪಷ್ಟ ಉತ್ತರವೊಂದು ಅಲ್ಲಿತ್ತು.

ಕಂಬದ ತುದಿಯಲ್ಲಿ ಬಲ್ಪಿರಿಸಲು ಬಾಗಿದ್ದ ಕವಚದ ಗಾಜು ಒಡೆದಿತ್ತು. ಬಲ್ಬಿನ ಸುತ್ತಲೂ ಸಾಕಷ್ಟು ಸ್ಥಳವೂ ಇತ್ತು. ಅದರರೊಂದು‌ ಅಂಚಿಗೆ ಮಳೆ ಬೀಳದಂತೆ ತಡೆಯಾಗುವ ರೀತಿಯಲ್ಲಿ ಗಿಜಗಾರ್ಲು ಮಳೆಗಾಲದ ಗೂಡು ನಿರ್ಮಿಸಿತ್ತು. ಅಷ್ಟರಲ್ಲೇ ಆಕಾಶ ಹರಿದಂತೆ ಜೋರು ಮಳೆ. ಛತ್ರಿಯಿಲ್ಲದ ನಾನು ಒದ್ದೆಯಾಗುತ್ತಾ ಗೋಡೆಯೊಂದರ ಬದಿಗೆ ಸರಿದು ನಿಂತೆ. ಆದರೆ ಜೋಡಿ ಹಕ್ಕಿಗಳು ಮಾತ್ರ ಏನೂ ಆಗೇ ಇಲ್ಲವೆಂದು ಹೋಲ್ಡರಿನ ಅಡಿಯಲ್ಲಿ ಕಟ್ಟಿದ್ದ “ಝೆಡ್” ಸುರಕ್ಷಾ ಗೂಡಿನೊಳಕ್ಕೆ ಹಾರಿ ಬೆಚ್ಚಗೆ ಕುಳಿತು ಕೊಂಡವು. “ಭಲೇ! ಬಾಯಿ ಬಡುಕನೇ” ಎಂದು ಗಿಜಗಾರ್ಲು ಹಕ್ಕಿಯ ಕಡೆಗೊಮ್ಮೆ ಕೈ ಬೀಸಿ ನನಗರಿವಿಲ್ಲದೆ ಗಲ್ಲದ ಮೇಲೆ ನೆಟಿಗೆ ಮುರಿದೆ.