ಮಕ್ಕಳನ್ನು ಮಕ್ಕಳಂತೇ ಬೆಳೆಸೋಣ. ನಮಗೆ ತೋಚಿದಷ್ಟು, ಅಥವಾ ಅವರ ಮುಗ್ಧತೆಗೆ ಧಕ್ಕೆ ಬಾರದಷ್ಟು ಉತ್ತರಿಸಲು ಸಾಧ್ಯವಾದಲ್ಲಿ ಉತ್ತರಿಸಬೇಕು. ನನ್ನ ಬಲವಾದ ವಿರೋಧವಿರೋದು ಬಾಲ್ಯದಲ್ಲಿಯೇ ವ್ಯಕ್ತಿ ಸ್ವಾತಂತ್ರ್ಯದ, ಪ್ರಗತಿಯ ಹೆಸರಲ್ಲಿ ಮಕ್ಕಳ ಮುಗ್ಧತೆಯನ್ನು ಕಸಿಯುವುದರ ಬಗ್ಗೆ. ಮಕ್ಕಳು ಬೆಳೆದಂತೆ ಅವರೊಂದಿಗಿನ ನಮ್ಮ ವರ್ತನೆಯೂ ಅದೇ ಹದದಲ್ಲಿ ಬದಲಾಗುತ್ತಾ ಹೋಗುತ್ತದೆ. ನನ್ನ ಮಕ್ಕಳು ಚಿಕ್ಕವರಿದ್ದಾಗ ಅವರ ಎಲ್ಲ ಪ್ರಶ್ನೆಗಳಿಗೆ ನಾನು ಅಥವಾ ನಾವಿಬ್ಬರೂ ಉತ್ತರಿಸಿಲ್ಲ. ಕೇಳಿದ್ದೆಲ್ಲವನ್ನೂ ಅವರಪ್ಪ ತೆಗೆಸಿಕೊಡಲು ಮುಂದಾಗುತ್ತಾರೆ, ಕೆಲವೊಂದಕ್ಕೆ ನನ್ನ ಬಲವಾದ ವಿರೋಧವಿರುತ್ತದೆ.
ಜಯಲಕ್ಷ್ಮಿ ಪಾಟೀಲ್ ಬರೆಯುವ “ಗರ್ದಿ ಗಮ್ಮತ್ತು” ಅಂಕಣದ ಐದನೆಯ ಬರಹ
೧. ನಮ್ಮ ಅಪ್ಪ ಹಾಕಿದ ಆಲದ ಮರದ ನೆಳಲಿನಲ್ಲಿ ಕುಳಿತು ಅವರು ಕೇಳುವ ಪ್ರಶ್ನೆಗಳಿಗೆ ಏಕೆ ತಣ್ಣೀರೆರಚುತ್ತೇವೆ?
ಉ: ಇಲ್ಲ, ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸದ ಅಥವಾ ಉತ್ತರಿಸಲಾಗದ ಎಲ್ಲವನ್ನೂ ‘ಅಪ್ಪ ನೆಟ್ಟ ಆಲದ ಮರ’ ಟೈಪ್ ಅಂತ ನನಗೆ ಅನಿಸೋದಿಲ್ಲ ನಳಿನಿ. ಬದಲಿಗೆ ನಮ್ಮ ಅಪ್ಪ ಅಮ್ಮ ಉತ್ತರಿಸಲಾಗದಂಥ ಎದುರಿಸಿದ ಸಮಸ್ಯೆಗಳೇ ಇನ್ನೊಂದು, ಮತ್ತೊಂದು ರೂಪದಲ್ಲಿ ಬಂದು ನಮ್ಮೆದುರು ನಿಂತು ನಮ್ಮನ್ನೂ ಅದೇ ಇಕ್ಕಟ್ಟಿಗೆ ಸಿಲುಕಿಸುತ್ತವೇನೋ ಅನಿಸುತ್ತದೆ. ಆದರೂ ನಮ್ಮ ಹಿರಿಯರಷ್ಟು ನಾವು ಮೌನ ವಹಿಸದಿದ್ದರೂ ತಕ್ಕ ಮಟ್ಟಿಗಿನ ಮೌನ ಅನಿವಾರ್ಯವಾಗುತ್ತದೆ ಎಲ್ಲಾ ಕಾಲಕ್ಕೂ. ಕಾರಣ, ಮಕ್ಕಳ ಕೆಲವು ಮುಗ್ಧ ಪ್ರಶ್ನೆಗಳ ಉತ್ತರಗಳು ನಾವು ಅಷ್ಟೇ ಮುಗ್ಧ ಅಥವಾ ಸರಳವಾಗಿ ಉತ್ತರಿಸಲಾಗದಂಥವುಗಳಾಗಿರುತ್ತವೆ. ಉತ್ತರ ಇರೋದಿಲ್ಲ ಅಂತಲ್ಲ, ನಮ್ಮ ಉತ್ತರ ಮಕ್ಕಳ ಮನಸಿನ ಮೇಲೆ ಯಾವ ಪರಿಣಾಮ ಬೀರಬಹುದು ಅನ್ನುವ ಅಳುಕು, ಈ ವಯಸ್ಸಿಗೆ ಆ ಉತ್ತರ ಸರಿಯಲ್ಲ ಎನ್ನುವ ಎಚ್ಚರಿಕೆ ಮಕ್ಕಳ ಪ್ರಶ್ನೆಗಳ ಮೇಲೆ ತಣ್ಣೀರೆರಚಲು ಕಾರಣವಾಗುತ್ತವೆ.
೨. ನಾವೇಕೆ ಅವರನ್ನು ಬಹುತೇಕ ಬಾರಿ ನಮ್ಮ ಪ್ರಬುದ್ಧತೆಯ ಮುಸುಕಿನಲ್ಲಿ ಉಸಿರು ಕಟ್ಟಿಸುತ್ತೇವೆ?
ಉ: ಅದು ಕೆಲವೊಮ್ಮೆ ನಮ್ಮ ಸಣ್ಣತನ, ಇನ್ನು ಕೆಲವೊಮ್ಮೆ ಮಕ್ಕಳ ಪ್ರಪಂಚದಷ್ಟು ಸರಳ ಸ್ವಚ್ಛವಾಗಿರದ ನಮ್ಮ ಗೊಂದಲಮಯ ಪ್ರಪಂಚದ ಜಂಜಾಟಗಳು ಪ್ರಬುದ್ಧತೆಯ ಮುಸುಗು ಹಾಕಿಕೊಳ್ಳುವಂತೆ ಮಾಡುತ್ತವೆ ಎನ್ನುವುದು ನಿಜವಾದರೂ ಅದೂ ಎಲ್ಲಾ ಹೊತ್ತಿನ ಸತ್ಯವಲ್ಲ ಅನ್ನುವುದೂ ಅಷ್ಟೇ ನಿಜ. ಇದನ್ನು ಒಂಥರದ ಎಸ್ಕೇಪಿಸಮ್ ಅನ್ನಬಹುದೇನೋ.

೩. ಸಂಸ್ಕೃತಿ-ಸಂಸ್ಕಾರಗಳ ಮಡಿವಂತಿಕೆಯ ನೆಪ ಹೇಳಿ “ಆಲೋಚನೆ”ಯೆಂಬ ಸುಂದರ ಪ್ರಕ್ರಿಯೆಯನ್ನು ಚಿಗುರಿನಲ್ಲೇ ಚಿವುಟಿ ಹಾಕುವುದು ಎಷ್ಟು ಸೂಕ್ತ?
ಅಥವಾ
ನಮ್ಮ ಬಾಲ್ಯ ಹಾಗೂ ಜೀವನದ ಅನುಭವಗಳು ನಮ್ಮನ್ನು ಮಕ್ಕಳಿಗೆ ಮುಕ್ತ ಪರಿಸರವನ್ನು ಒದಗಿಸುವುದರಿಂದ ಹಿಮ್ಮೆಟ್ಟಿಸುತ್ತವೆಯೇ? ಗೊಂದಲಕ್ಕೀಡು ಮಾಡುತ್ತವೆಯೇ?
ಉ: ಯಾವುದೇ ಆಗಲಿ ವಿಪರೀತವಾದಲ್ಲಿ ಕಷ್ಟವೇ. ಹಾಗಂತ ಅಬೋಧ ವಯಸ್ಸಿನ ನಮ್ಮ ಮಕ್ಕಳಿಗೆ ನಾವು ಇದು ಸರಿ ಇದು ಸರಿಯಲ್ಲ ಎಂದು ಹೇಳಿಕೊಡದೇ ಇನ್ನ್ಯಾರು ಹೇಳಿಕೊಡಲು ಸಾಧ್ಯ?!! ಅದರಿಂದ ಮಕ್ಕಳ ‘ಆಲೋಚನೆ’ಯ ಪ್ರಕ್ರಿಯೆ ಹೇಗೆ ಮೊಟಕುಗೊಳ್ಳುತ್ತದೆ?! ಇಲ್ಲ, ನೀವು ಮಕ್ಕಳನ್ನು ಹೊರಗೆ ಹೋಗದಂತೆ ರೂಮಲ್ಲಿ ಕೂಡಿ ಹಾಕಿ ತಡೆಯಬಹುದೇ ಹೊರತು ಅವರ ಆಲೋಚನೆಗಳನ್ನು ತಡೆಯಲು ಇಲ್ಲಾ ಚಿವುಟಿ ಹಾಕಲು ಸಾಧ್ಯವಿಲ್ಲ. ತುಂಬಾ ಮಡಿವಂತಿಕೆಯ ಮನೆಯಿಂದ ಬಂದ ಎಷ್ಟೋ ಎಷ್ಟೋ ಜನ ಪ್ರಗತಿಪರ ವಿಚಾರವಾದಿಗಳಾಗಿರುವುದರ ಉದಾಹರಣೆಗಳು ನಮ್ಮ ಸುತ್ತಮುತ್ತಲಲ್ಲೇ ನೋಡಲು ಸಿಗುತ್ತವೆ. ಹಾಂ ಕೆಲ ಕಾಲದ ಮಟ್ಟಿಗೆ ಸಂಸ್ಕೃತಿ/ಸಂಸ್ಕಾರದ ಹೆಸರಿನಲ್ಲಿ ಹೇರಲ್ಪಟ್ಟ ಒಂದಿಷ್ಟು ಆಚರಣೆಗಳು ನಮ್ಮನ್ನು ಹೀಗಿರುವುದೇ ಸರಿ ಎಂಬಂತೆ ಹಿಡಿದಿಡಬಹುದು. ಆದರೆ ಸ್ವಲ್ಪ ವಿಚಾರ ಮಾಡುವ ಶಕ್ತಿ ಇದ್ದರೂ ಸಾಕು ಅವುಗಳಲ್ಲಿ ಜೊಳ್ಳು ಯಾವುದು ಗಟ್ಟಿ ಕಾಳು ಯಾವುದು ಎನ್ನುವುದು ಅರಿವಾಗುತ್ತಲೇ ಜೊಳ್ಳು ವದರಿ, ಆರೋಗ್ಯಕರವಾದುದನ್ನು ಉಳಿಸಿಕೊಳ್ಳುತ್ತಾರೆ. ಸಂಸ್ಕೃತಿ ಎಂದರೇನು? ಸಮಾಜಕ್ಕೆ ಮಾರಕವಾಗದ ಸಭ್ಯ ನಡುವಳಿಕೆ. ಅದು ನಿರ್ದಿಷ್ಟ ಪರಿಸರದ ಭಾಷೆಯಾಗಿರಬಹುದು, ಉಡುಗೆ ತೊಡುಗೆಯಾಗಿರಬಹುದು, ಅಲ್ಲಿನ ಸುವ್ಯವಸ್ಥೆಗೆ ಮಾಡಿಕೊಂಡ ಕೆಲವು ಆರೋಗ್ಯಕರ ನಿಯಮಗಳಾಗಿರಬಹುದು. ಅವುಗಳನ್ನು ಪಾಲಿಸುವುದು ತಪ್ಪಲ್ಲ. ಆದರೆ ಹೀಗಿತ್ತು ಹೀಗೆಯೇ ಇರಬೇಕು ಎನ್ನುವ ಅಂಧಾನುಕರಣೆ ಏನಿದೆ ಅದು ಸರಿಯಲ್ಲ. ಈ ಸಂಸ್ಕೃತಿ ಎನ್ನುವುದು ಮೂಲ ಗುಣ ಕಳೆದುಕೊಳ್ಳದೇ ಕಾಲಕ್ಕೆ ತಕ್ಕಂತೆ ರೂಪ ಬದಲಾಯಿಸುತ್ತಿರುತ್ತದೆ.
೪. ಎಲ್ಲರ ಮೇಲೂ ಎಲೆಕ್ಟ್ರಾನಿಕ್ ಮಾಧ್ಯಮದ ಪ್ರಭಾವ ಈಗ ತುಂಬಾ ಹೆಚ್ಚಿರುವುದರಿಂದ ಮಕ್ಕಳನ್ನು ಅದರಿಂದ ದೂರವಿರಿಸುವುದು ಎಷ್ಟು ಮುಖ್ಯ ಅಥವಾ ಅದೀಗ ಮಕ್ಕಳ ಬದುಕಿಗೆ ಎಷ್ಟು ಅನಿವಾರ್ಯ?
ಉ: ಒಂದು ವಯಸ್ಸಿನವರೆಗೆ ಅಂದರೆ ೩-೪ ವರ್ಷದ ಮಕ್ಕಳಿಗೆ ಅದರ ಅವಶ್ಯಕತೆಯೇ ಇಲ್ಲ. ಆದರೂ ಮಕ್ಕಳು ಹಠ ಮಾಡುತ್ತಿದ್ದಾರೆ ಅವರನ್ನು ರಮಿಸಲು ಎಂದೋ, ಟಿವಿ, ಮೊಬೈಲ್ ತೋರಿಸಿದರೆನೇ ಊಟ ಮಾಡೋದು ಎಂದೋ ಅನ್ನುವುದು ಇತ್ತೀಚಿನ ಬಹುತೇಕರ ಮಾತು. ಆದರೆ ತಂದೆ ತಾಯಿ ಇಲ್ಲವೇ ಮನೆಯವರು ತಮ್ಮ ಕೆಲಸ ಮಾಡಿಕೊಳ್ಳಲು ಹುಡುಕಿಕೊಂಡ ದಾರಿಯೇ ಹೊರತು ಅದು ಮಕ್ಕಳದೇ ಬೇಡಿಕೆ ಆಗಿರುವುದಿಲ್ಲ. ತಂದೆ ತಾಯಿ ಇಬ್ಬರೂ ಹೊರಗೆ ದುಡಿಯುವವರಾಗಿದ್ದಲ್ಲಿ ಹಿತಮಿತವಾಗಿ ಮೊಬೈಲ್ ಬಳಕೆಯನ್ನು ಮಕ್ಕಳಿಗೆ ಹೇಳಿಕೊಡುವ ಅನಿವಾರ್ಯತೆ ಇದೆ. ಅದಕ್ಕಾಗಿ ಸ್ಮಾರ್ಟ್ ಫೋನೇ ಆಗಬೇಕು ಅಂತೇನಿಲ್ಲ. ದಂಪತಿ ಇಬ್ಬರೂ ಹೊರಗೆ ದುಡಿಯುವವರಿದ್ದು, ಮಕ್ಕಳನ್ನು ದಾಯಿಗಳಿಗೆ ಒಪ್ಪಿಸಿ ಹೋಗುವ ಅನಿವಾರ್ಯತೆ ಇದ್ದಲ್ಲಿ ಮನೆಯಲ್ಲಿ ಎಲ್ಲೆಡೆ ಸಿಸಿ ಕ್ಯಾಮೆರಾದ ಅಳವಡಿಕೆ ಉಪಯುಕ್ತವಾದುದು. ಕೆಲಸದ ಮೇಲಿದ್ದೂ ಮೊಬೈಲಿನಲ್ಲಿ ಮನೆಯಲ್ಲಿ ನಡೆಯುವ ಚಟುವಟಿಕೆಗಳನ್ನು ಗಮನಿಸಲು ಅದರಿಂದ ಸಾಧ್ಯವಿದೆ. ಏನಾದರೂ ಅನುಚಿತವಾದುದು ಕಂಡುಬಂದಲ್ಲಿ ನೆರೆಹೊರೆಯವರ ಸಹಾಯ ಕೇಳಿ ಆಗುವ, ಆಗುತ್ತಿರುವ ಅವಘಡಗಳನ್ನು ತಪ್ಪಿಸಲು ಇದರಿಂದ ಸಾಧ್ಯ.
೫. ಆರೋಗ್ಯಕರ ಮನಸ್ಥಿತಿಯನ್ನು ಮಕ್ಕಳಲ್ಲಿ ಬೆಳೆಸುವುದು ಹೇಗೆ?
ಉ: ಮನೆಯವರ ಆರೋಗ್ಯಕರ ನಡತೆಯ ಮೂಲಕ. ಮಕ್ಕಳು ಎಳೆಯವಲ್ಲಿ ಇತರರನ್ನು ನೋಡಿ ಕಲಿಯುತ್ತವೆ. ಅವರಿಗೆ ಎದುರಿಗೆ ಕಾಣುತ್ತಿರುವುದೆಲ್ಲವೂ ಹೊಸತೇ ಆಗಿರುತ್ತದಾದ್ದರಿಂದ ಒಂದೊಂದು ಮಾತು, ಪ್ರತಿಕ್ರಿಯೆ, ಘಟನೆಯನ್ನೂ ಕುತೂಹಲದಿಂದಲೇ ನೋಡುತ್ತದೆ ಮತ್ತು ಅವುಗಳ ಹಿತ ಅಹಿತಗಳನ್ನು, ಅಪಾಯ ಅನುಕೂಲಗಳನ್ನು ಗಮನಿಸದೆ ತನಗೆ ಇಷ್ಟವಾದುದ್ದನ್ನು ಅನುಸರಿಸುತ್ತದೆ. ಹೀಗಾಗಿ ಮನೆಯವರ ನಡುವಳಿಕೆ ಆರೋಗ್ಯಕರವಾಗಿರಬೇಕಾದುದು, ಸಹಜವಾಗಿರಬೇಕಾದುದು ತುಂಬಾ ಮುಖ್ಯ. ಅಪ್ಪ ಅಮ್ಮ ಪರಸ್ಪರ ದೂಷಿಸುತ್ತ ತಮ್ಮ ಜಗಳದ ನಡುವೆ ಮಕ್ಕಳನ್ನೂ ವೃಥಾ ಎಳೆದು ತಂದು, ನೋಡು ನಿಮ್ಮಮ್ಮ ಹಿಂಗೆ, ನಿಮ್ಮಪ್ಪ ಹಂಗೆ ಇತ್ಯಾದಿ ದೋಷಾರೋಪ ಮಾಡಿದರೆ ಮಕ್ಕಳು ಅದನ್ನು ನಿಜವೆಂದೇ ನಂಬುತ್ತವೆ ಮತ್ತು ಎದುರಿನವರ ಪ್ರತಿ ಅವರ ಮನದಲ್ಲಿ ಗೌರವ ಹುಟ್ಟುವುದೇ ಇಲ್ಲ. ಬದಲಿಗೆ ಸ್ವತಃ ಗಂದ ಹೆಂಡತಿ ಪರಸ್ಪರ ಗೌರವದಿಂದ ನಡೆದುಕೊಳ್ಳುವುದು, ಪ್ರೀತಿಯಿಂದ ಮಾತಾಡುವುದು, ಯಾವುದೇ ವಿಷಯವನ್ನಾಗಲಿ ಹೀಗಳೆಯದೇ ಸಮಾಧಾನದಿಂದ ಚರ್ಚಿಸುವುದನ್ನು ರೂಢಿಸಿಕೊಂಡಲ್ಲಿ ಮಗು ಅದನ್ನೇ ಅನುಸರಿಸುತ್ತದೆ. ಮಗುವಿನ ಆರೋಗ್ಯಕರ ಮನಸ್ಥಿತಿಗೆ ಇಂಥ ವಾತಾವರಣ ಅನುಕೂಲಕರ. ರಾತ್ರಿಯ ಮಿಲನದ ಸಮಯದಲ್ಲೂ ಅಷ್ಟೇ. ಮಕ್ಕಳಿಲ್ಲದ ಕೋಣೆಯನ್ನು ದಂಪತಿಗಳು ಆಯ್ಕೆ ಮಾಡಿಕೊಳುವುದು ಉತ್ತಮ. ಮಕ್ಕಳು ಮುಗ್ಧರು, ಅವರಿಗೇನೂ ಗೊತ್ತಾಗುವುದಿಲ್ಲ ಎಂದುಕೊಂಡು ಸಾಕಷ್ಟು ವಿಷಯಗಳಲ್ಲಿ ಅವರೆದುರೇ ಮುಂದುವರೆಯುವುದೇ ಮಕ್ಕಳ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಹೊರಗಡೆ ಆಟವಾಡುವ ಮಗುವನ್ನು ಕಣ್ಣಳತೆಯಲ್ಲೇ ಆಡಲು ಬಿಡುವುದು ಒಳ್ಳೆಯದು.
ಮಕ್ಕಳನ್ನು ಮಕ್ಕಳಂತೇ ಬೆಳೆಸೋಣ. ನಮಗೆ ತೋಚಿದಷ್ಟು, ಅಥವಾ ಅವರ ಮುಗ್ಧತೆಗೆ ಧಕ್ಕೆ ಬಾರದಷ್ಟು ಉತ್ತರಿಸಲು ಸಾಧ್ಯವಾದಲ್ಲಿ ಉತ್ತರಿಸಬೇಕು. ನನ್ನ ಬಲವಾದ ವಿರೋಧವಿರೋದು ಬಾಲ್ಯದಲ್ಲಿಯೇ ವ್ಯಕ್ತಿ ಸ್ವಾತಂತ್ರ್ಯದ, ಪ್ರಗತಿಯ ಹೆಸರಲ್ಲಿ ಮಕ್ಕಳ ಮುಗ್ಧತೆಯನ್ನು ಕಸಿಯುವುದರ ಬಗ್ಗೆ. ಮಕ್ಕಳು ಬೆಳೆದಂತೆ ಅವರೊಂದಿಗಿನ ನಮ್ಮ ವರ್ತನೆಯೂ ಅದೇ ಹದದಲ್ಲಿ ಬದಲಾಗುತ್ತಾ ಹೋಗುತ್ತದೆ. ನನ್ನ ಮಕ್ಕಳು ಚಿಕ್ಕವರಿದ್ದಾಗ ಅವರ ಎಲ್ಲ ಪ್ರಶ್ನೆಗಳಿಗೆ ನಾನು ಅಥವಾ ನಾವಿಬ್ಬರೂ ಉತ್ತರಿಸಿಲ್ಲ. ಕೇಳಿದ್ದೆಲ್ಲವನ್ನೂ ಅವರಪ್ಪ ತೆಗೆಸಿಕೊಡಲು ಮುಂದಾಗುತ್ತಾರೆ, ಕೆಲವೊಂದಕ್ಕೆ ನನ್ನ ಬಲವಾದ ವಿರೋಧವಿರುತ್ತದೆ. ಅದರರ್ಥ ಮಕ್ಕಳ ಹಕ್ಕು ಕಸಿಯುತ್ತೇನೆ, ಅವರ ಆಸೆಗೆ ತಣ್ಣೀರೆರಚುತ್ತೇನೆ, ನನ್ನ ಪ್ರಬುದ್ಧತೆಯಡಿಯಲ್ಲಿ (ಇಂಥದ್ದನ್ನು ಮಕ್ಕಳಿಗೆ ಕೊಡಿಸಲು ಸಕಾಲವಲ್ಲ ಎನ್ನುವಂಥ ಪ್ರಬುದ್ಧತೆ ಅಥವಾ ಇನ್ಯಾವುದೋ ಆದರೂ ಸರಿಯೇ) ಉಸಿರು ಕಟ್ಟಿಸುತ್ತೇನೆ ಎಂದಲ್ಲ. ಮಕ್ಕಳಿಗೆ ‘ಇಲ್ಲ’ ಎನ್ನುವುದರ ಪರಿಚಯವೂ ಆದಲ್ಲಿ ಮುಂದೊಮ್ಮೆ ಅವರು ಅವರು ಕಾಣಲೇಬೇಕಾಗುವ ಅನೇಕಾನೇಕ ‘ಇಲ್ಲಗಳಿಗೆ’ ಅವರು ಎದೆಗುಂದದೇ ಇರುವಂತಾಗಲು ಸಣ್ಣ ತರಬೇತು ಅದು ನನ್ನ ಪ್ರಕಾರ. ಇದರಿಂದ ನನಗೆ ಸಂತೋಷವಾಗುತ್ತೆ ಅಂತಲ್ಲ, ಆದರೆ ಗಿಲ್ಟ್ ಕಾಡೊಲ್ಲ. ಹಾಗಂತ ನನ್ನ ಮಕ್ಕಳು ಅವರ ವಿರುದ್ಧದ ನನ್ನ ನಿರ್ಧಾರಗಳನ್ನು ಖುಷಿಯಿಂದ ಸ್ವೀಕರಿಸುತ್ತಾರೆ ಅಂತಲ್ಲವೇ ಅಲ್ಲ! ಆಗೆಲ್ಲ ಈ ಅಮ್ಮ ಅವರುಗಳಿಗೆ ‘ಖಡೂಸ್’ ಎನಿಸುತ್ತಾಳೆ. ಮುನಿಸಿಕೊಳ್ಳುತ್ತಾರೆ, ಎರಡುಮೂರುದಿನ ದುಮುದುಮು ಅಂತಾರೆ. ಮತ್ತೆ ಯಥಾ ಪ್ರಕಾರ ಎಲ್ಲ ಮರೆತು ‘ಅಮ್ಮಾ’ ಎನ್ನುತ್ತಾ ಹತ್ತಿರವಾಗುತ್ತಾರೆ.

ಮಕ್ಕಳು ಮಕ್ಕಳಾಗಿದ್ದಾಗ ಮಕ್ಕಳಾಗೇ ಇರಲಿ. ‘ಮಕ್ಕಳ ಮುಗ್ಧತೆ’ಗೆ ಧಕ್ಕೆ ಬಾರದಿರಲಿ. ಆದರೆ ಒಂದು ಜಾಗೃತಾವಸ್ಥೆಯನ್ನು ಅವರ ಮನದಲ್ಲಿ ಸಹಜವಾಗಿ ರೂಢಿಸಿ. ಮುಗ್ಧತೆ ವಯೋಸಹಜವಾಗಿ ಕರಗಿಸುತ್ತ ಆ ಜಾಗದಲ್ಲಿ ಪ್ರೌಢಿಮೆ ನೆಲೆಯೂರಿಸುವ ಕೆಲಸವನ್ನು ಕಾಲಕ್ಕೆ ಬಿಡಿ.

ಲೇಖಕಿ, ರಂಗ ಕಲಾವಿದೆ ಜಯಲಕ್ಷ್ಮಿ ಪಾಟೀಲ್ ಉತ್ತರ ಕರ್ನಾಟಕದ ಬಿಜಾಪುರ ಜಿಲ್ಲೆಯ ನಿಂಬಾಳದವರು. ನೀಲ ಕಡಲ ಭಾನು’ (ಕವನ ಸಂಕಲನ) ‘ಹೇಳತೇವ ಕೇಳ’ (ಮಹಿಳಾ ದೌರ್ಜನ್ಯದ ವಿರುದ್ಧದ ಲೇಖನ ಸಂಗ್ರಹದ ಪುಸ್ತಕದ) ‘ಮುಕ್ಕು ಚಿಕ್ಕಿಯ (ಕಾದಂಬರಿ) ವಿಜಯ್ ತೆಂಡೂಲ್ಕರ್ ಅವರು ಬರೆದ ಮರಾಠಿ ಮೂಲದ ನಾಟಕ ‘ಬೇಬಿ’ (ಅನುವಾದಿತ ನಾಟಕ) ಇವರ ಪ್ರಕಟಿತ ಕೃತಿಗಳು. ‘ಜನದನಿ’ (ಲೈಂಗಿಕ ದೌರ್ಜನ್ಯಗಳ ವಿರುದ್ಧ ಹೋರಾಡುತ್ತಿರುವ ಸಂಸ್ಥೆ) ಸಂಸ್ಥಾಪಕಿ. ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳಂಥ ಸಾಮಾಜಿಕ ಪಿಡುಗನ್ನು ತೊಲಗಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿಯನ್ನುಂಟು ಮಾಡುವ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

