Advertisement
ಬಣ್ಣ ಹಚ್ಚುವ ಆಸೆಯೂ… ನನ್ನ ಅರಣ್ಯರೋಧನವೂ: ಜುಲೇಖಾ ಬೇಗಂ ಜೀವನ ವೃತ್ತಾಂತ

ಬಣ್ಣ ಹಚ್ಚುವ ಆಸೆಯೂ… ನನ್ನ ಅರಣ್ಯರೋಧನವೂ: ಜುಲೇಖಾ ಬೇಗಂ ಜೀವನ ವೃತ್ತಾಂತ

ಒಂಬತ್ತು ವರ್ಷದವಳಾದ ನನ್ನ ಕೈ ಬೆರಳುಗಳು ಇನ್ಹೇಗೆ ಇರುತ್ತದೆ ಹೇಳಿ! ಎಳೆಯ ಕೈಗಳಿಂದಲೇ ಆದಷ್ಟು ತೊಳೆದೆ. ಅವರಿಗೆ ಸಮಾಧಾನ ನೀಡಲಿಲ್ಲ. ‘ಆಯ್ತು, ಪರವಾಗಿಲ್ಲ ಇನ್ನೊಂದು ಅವಕಾಶ’ ಎಂದು ನಾಟಕದ ಕರಪತ್ರ ಕೊಡುವುದಕ್ಕೆ ಮತ್ತೆ ಅಂಟಿಸುವುದಕ್ಕೆ ಹೋಗೆಂದರು. ಇರುವ ಕೆಲಸಗಳನ್ನು ಬೇಗ ಮುಗಿಸಿ, ಸಮಯ ಹೊಂದಿಸಿಕೊಂಡು ಹೋಗುತ್ತಿದ್ದೆ. ‘ನಮ್ ನಾಟ್ಕಕ್ ಬನ್ರಿ’ ಎಂದು ಕೂಗಿ, ಕರೆದು ಹೆಚ್ಚುವರಿ ಕೆಲಸಗಳನ್ನೂ ಮಾಡುತ್ತಿದ್ದೆ. ಗೌರಿ ಪಾತ್ರವನ್ನು ಕಂಡು ಕಂಡು, ಸಂಭಾಷಣೆಗಳೆಲ್ಲ ಬಾಯತುದಿಯಲ್ಲೇ ಇತ್ತು. ಅಷ್ಟೇ ಅಲ್ಲ, ಪಾತ್ರಕ್ಕೆ ಬೇಕಾದ ವೈಯ್ಯಾರವನ್ನೂ ಮಾಡುತ್ತಿದ್ದೆ.
ಕೀರ್ತಿ
ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಹತ್ತನೆಯ ಕಂತು

ಇವತ್ತಿಗೂ ಅನಿಸುತ್ತದೆ, ನನ್ನಷ್ಟು ಚೆನ್ನಾಗಿ ಕಸ ಗುಡಿಸುವವರು ಯಾರೂ ಇಲ್ಲವೇನೊ ಎಂದು. ಪಟ್ಟದಕಲ್ಲು ಬಸಯ್ಯನವರ ಕಂಪೆನಿಯಲ್ಲಿ ಕಸ ಗುಡಿಸಿದ್ದನ್ನು ನನ್ನ ಕೈಗಳು ಮರೆಯುವುದಾದರೂ ಹೇಗೆ! ಸರಿ, ಕಸ ಗುಡಿಸುವ ಕೆಲಸಕ್ಕೆ ಉಳಿದ ಕೆಲಸಗಾರರು ಸಾಥ್ ನೀಡುವುದನ್ನು ಕಂಡ ಮೇಲೆ ಫ್ಲೋರಿನಾ ಬಾಯಿ ಸುಮ್ಮನಿರಲಿಲ್ಲ. ಗ್ರೀನ್ ರೂಂನ ಬಟ್ಟೆಗಳನ್ನು ಒಗೆಯುವ ಕೆಲಸ ವಹಿಸಿದರು. ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿತ್ತು. ಬೆನ್ನು ಬಗ್ಗಿಸಿ, ಕುರ್ಚಿ ಎತ್ತಿ ಕಸ ಗುಡಿಸುವ ಕೆಲಸಕ್ಕೆ ಒಗ್ಗಿಹೋಗಿದ್ದೆ. ಅಂಥದ್ದರಲ್ಲಿ ಇದ್ದಕ್ಕಿದ್ದಂತೆ, ಕಲಾವಿದರು ಎಣ್ಣೆ, ಬಣ್ಣ ಒರೆಸಿಟ್ಟ ಬಟ್ಟೆಯನ್ನು ತೊಳೆಯುವುದೆಂದರೆ ಸಾಮಾನ್ಯವೇ?

ಹಾವೇರಿಯಲ್ಲಿ ಒಂದು ದೊಡ್ಡ ಕೆರೆಯಿದೆ. ಎಲ್ಲ ಬಟ್ಟೆಗಳನ್ನು ಗಂಟು ಕಟ್ಟಿ, ಒಂದು ಸಾಬೂನು ಜೊತೆಗಿಟ್ಟು ಕೊಡುತ್ತಿದ್ದರು. ಹತ್ತು ಗಂಟೆಯ ಹೊತ್ತಿಗೆ ಹೊರಡುತ್ತಿದ್ದೆ. ನೆತ್ತಿಯನ್ನೇ ಸುಡುವಷ್ಟು ಬಿಸಿಲು. ಆ ಬಟ್ಟೆಗಳಿಗೆಲ್ಲ ಸೋಪೆಲ್ಲವನ್ನು ಹಚ್ಚಿಟ್ಟು, ಅಲ್ಲಿದ್ದ ಹೆಣ್ಣು ದೇವರ ಗುಡಿ ಮುಂದೆ ಕಣ್ಣೀರಿಡುತ್ತಾ ಕೂರುತ್ತಿದ್ದೆ. ಕಪ್ಪು, ಬಿಳಿ, ಹಳದಿ ಮತ್ತು ಕೆಂಪು ಬಣ್ಣಗಳನ್ನು ಎಣ್ಣೆಯಿಂದ ಮಿಶ್ರಣ ಮಾಡಿಯೇ ಹಾಕಿಕೊಳ್ಳುತ್ತಿದ್ದರು. ಈ ಬಣ್ಣಗಳನ್ನೆಲ್ಲ ಮದ್ರಾಸಿನಿಂದ ತರಿಸಿಕೊಳ್ಳುತ್ತಿದ್ದರು. ಒಂದೇ ಸಲಕ್ಕೆ ನಾಲ್ಕೈದು ಕೆಜಿಗಳಷ್ಟು ಖರೀದಿ ಮಾಡುತ್ತಿದ್ದರು. ಕಲಾವಿದರೂ ಅಷ್ಟೇ ಅಗತ್ಯವಿರುವಷ್ಟೇ ಬಣ್ಣವನ್ನು ಐದು ಬೆರಳುಗಳಲ್ಲಿ ಕಲಿಸಿ, ಮುಖಕ್ಕೆ ಲೇಪಿಸಿಕೊಳ್ಳಬೇಕಿತ್ತು. ಅಭಿನಯ ಎಂಬುದು ಕಲಾವಿದೆ/ಕಲಾವಿದ ಎನಿಸಿಕೊಳ್ಳುವುದಕ್ಕೆ ಹೇಗೆ ಮಾನದಂಡವೊ, ಅದೇ ರೀತಿ ಬಣ್ಣ ಹಚ್ಚಿಕೊಳ್ಳುವ ಕಲೆಗಾರಿಕೆ ಕೂಡ ಮುಖ್ಯವೇ.

ಹೀಗೆ ಎಣ್ಣೆ, ಬಣ್ಣ ಬೆರೆತುಹೋದ ಬಟ್ಟೆಯನ್ನು ತುಸು ಹೊತ್ತು ನೆನೆಸಿಟ್ಟರೆ ಒಗೆಯುವುದಕ್ಕೆ ಸುಲಭ ಎಂದು ಹೇಳಿಕೊಟ್ಟಿದ್ದರು. ಅದೂ ಅಲ್ಲದೆ, ಈಗಿನ ರೀತಿ ಲಿಕ್ವಿಡ್, ಸೋಪಿನ ಪುಡಿ ಎಲ್ಲ ಆಗಿರಲಿಲ್ಲ. ಹತ್ತೇ ನಿಮಿಷ ಬಟ್ಟೆ ನೆನೆಸಿಟ್ಟರೆ ಸಾಕು, ಎಂಥಾ ಕಠಿಣ ಕಲೆಯನ್ನೂ ತೊಳೆದುಹಾಕುತ್ತದೆ ಅಂತೆಲ್ಲ ಈಗ ಜಾಹೀರಾತು ನೀಡುತ್ತಾರಲ್ಲಾ, ಆಗೇನಾದರೂ ಇದ್ದಿದ್ದರೆ ಎಂದು ಅಪರೂಪಕ್ಕೆ ಆಲೋಚಿಸುತ್ತೇನೆ. ಯಾವುದನ್ನು ಕಷ್ಟ ಎಂದು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುತ್ತೇವೊ ಅಥವಾ ಏನೋ ಭಯಂಕರ ಎಂದು ಕಣ್ಣರಳಿಸುತ್ತೇವೊ ಮುಂದೊಮ್ಮೆ ಅದೆಲ್ಲವೂ ಎಷ್ಟು ಸರಳ ಎಂದನಿಸುತ್ತದೆ, ಹಾಗಂದುಕೊಳ್ಳುತ್ತಾ ನನಗೆ ನಾನೇ ಸುಮ್ಮನಾಗುತ್ತೇನೆ.

ಒಗೆದ ಬಟ್ಟೆಯನ್ನು ಒಣಗಿಸಿ, ಮಡಚಿಟ್ಟು ತರುವ ಹೊತ್ತಿಗೆ ಹೊಟ್ಟೆ ತಾಳ ಹಾಕುತ್ತಿತ್ತು. ಈಗಾದರೆ ಹಸಿವಾಗುವುದಕ್ಕೂ ಮುನ್ನವೇ ಹೊಟ್ಟೆಯನ್ನು ಶಾಂತಗೊಳಿಸುತ್ತೇವೆ. ಆ ದಿನಗಳನ್ನು ಈ ಹೊತ್ತಿಗೂ  ಮತ್ತೆ ಮತ್ತೆ ನೆನೆಯುತ್ತೇನೆ. ಕಾವೇರಿದ ಬಿಸಿಲಲ್ಲಿ ಬಟ್ಟೆ ಒಗೆದು, ಎರಡು ಕಿಲೋಮಿಟರ್ ನಡೆದು ಬರುವಷ್ಟೊತ್ತಿಗೆ ಜೀವಕ್ಕೆ ಸುಸ್ತು ಬಡಿದಿರುತ್ತಿತ್ತು, ಹಸಿವು ಉತ್ತುಂಗ ಸ್ಥಿತಿಗೆ ತಲುಪಿರುತ್ತಿತ್ತು. ಏನಾದರೊಂದು ಕೊಟ್ಟರೆ ಕಣ್ಣಿಗೊತ್ತಿ ತಿನ್ನುತ್ತಿದ್ದೆ.

ನೀವು ಗಮನಿಸಿರಬಹುದು, ನಾಟಕ ಆರಂಭವಾಗುವ ಮೊದಲು ಮೂರು ಬೆಲ್ ನೀಡುತ್ತಾರೆ. ಇವತ್ತಿನ ರಂಗಭೂಮಿಯಲ್ಲೂ ಈ ನಿಯಮವಿದೆ. ಅಂದಿನ ಕಂಪೆನಿಗಳಲ್ಲಿ ಫಸ್ಟ್ ಬೆಲ್ ಆದನಂತರ ಸಾಮ್ರಾಣಿ ಹೊಗೆಯನ್ನು ಹಾಕುತ್ತಾರೆ. ಅತ್ತ ಹೊಗೆ ಎಲ್ಲೆಡೆಯೂ ಹರಡುತ್ತಿರುವಾಗ, ನಾಟಕದ ಕಲಾವಿದರಿಗೆಲ್ಲ ಐದು ಪೈಸೆಯನ್ನು ಹಂಚಲಾಗುತ್ತಿತ್ತು. ಹಾರ್ಮೋನಿಯಂ, ತಬಲಾ ಮೇಷ್ಟ್ರಿಗೆ, ಪರದೆ ಎಳೆಯುವವರಿಗೆ, ಒಟ್ಟಿನಲ್ಲಿ ಗೇಟ್‌ ಕಾಯುವವರಿಂದ ಹಿಡಿದು ಅಭಿನಯಿಸುವ ಕಲಾವಿದರವರೆಗೆ ಎಲ್ಲರಿಗೂ ಚಹಾ ಕುಡಿಯುವುದಕ್ಕೆಂದು ಐದು ಪೈಸೆ ನೀಡುತ್ತಿದ್ದರು. ನಾ ಮಾತ್ರ ಕೊಟ್ಟ ದುಡ್ಡನ್ನು ಕೂಡಿಡುತ್ತಿದ್ದೆ. ಆ ತೋಟದ ಸ್ವಾಮಿಗಳ ಮಠದೆದುರೇ ಬ್ರೆಡ್ಡಿನಂಗಡಿ ಇತ್ತು. ಅಲ್ಲಿಗೆ ಹೋಗಿ ಐದು ಪೈಸೆ ಕೊಟ್ಟರೆ ಒಂದು ಲೋಟ ಹಾಲು ಜೊತೆಗೊಂದು ಬ್ರೆಡ್ಡು. ಆಹಾ! ಹಾಲಿಗದ್ದಿದ ಬ್ರೆಡ್ಡು ತಿನ್ನುತ್ತಿದ್ದರೆ, ಸುಖ ಸ್ವರ್ಗಕ್ಕೆ ಸಮವಾಗಿರುತ್ತಿತ್ತು ನೋಡಿ.

ಆವತ್ತೇನಾಗಿತ್ತು ಎಂದರೆ, ಹೀಗೆ ದುಡ್ಡು ಕೊಟ್ಟ ತಕ್ಷಣ ತಿಂದು ಬರಬೇಕು ಎಂದು ತೀರ್ಮಾನಿಸಿದ್ದೆ. ಅಷ್ಟರಲ್ಲಿ ಫ್ಲೋರಿನಾ ಬಾಯಿ ಅವರ ಮಗಳು ಬೇಬಿ ಆಡುವುದಕ್ಕೆಂದು ಜೊತೆಕೂಡಿದಳು. ನಾಟಕದ ಟೆಂಟ್ ಹಿಂಭಾಗ ಆಡುತ್ತಿದ್ದೆವು. ಒಂದೆರಡು ದಿನಗಳಿಂದ ಸಿನೆಮಾ ಥಿಯೇಟರ್‌ನಲ್ಲಿ ಜನರು ಜಮಾಯಿಸುತ್ತಿದ್ದಾರೆಂದು, ನಮ್ಮ ನಾಟಕದ ಟೆಂಟ್‌ನಲ್ಲಿ ಕುರ್ಚಿಗಳೆಲ್ಲ ಧೂಳು ಹೊಡೆಯುತ್ತಿವೆಯೆಂದು ಸುದ್ದಿ. ಎಲ್ಲರ ಬಾಯಲ್ಲೂ ಇದೊಂದೇ ವಿಷಯ ಕೇಳುತ್ತಿದ್ದದ್ದು. ಒಂದು ನಾಟಕಕ್ಕೆ ಹದಿನೈದು ಇಪ್ಪತ್ತು ಜನ ಸೇರಿದರೆ ಕಂಪೆನಿಯ ಸ್ಥಿತಿ ಶೋಚನೀಯವೇ ತಾನೆ? ಹಾಗಿದ್ದಾಗಲೂ ನಾವಿಬ್ಬರು ಬಳೆಚೂರಿನ ಆಟ ಆಡುತ್ತಿದ್ದೆವು. ಆಡುತ್ತಾ ಆಡುತ್ತಾ, ಮಣ್ಣನ್ನು ಗೆದರುತ್ತಾ ಗೆದರುತ್ತಾ ಲಿಂಬೆ ಹಣ್ಣೊಂದು ಸಿಕ್ಕಿತು! ಅರೇ, ಇನ್ನೇನಿರಬಹುದು ನೋಡೆಂದು ಬೇಬಿ ಹೇಳಿದಕ್ಕೆ ಮತ್ತೆ ಹುಡುಕಾಡಿದೆ. ತೆಂಗಿನ ಕಾಯಿ, ಮೆಣಸಿನ ಕಾಯಿ ಸಿಕ್ಕಿತು. ಯಾಕಾಗಿ ಇಲ್ಲಿಟ್ಟಿರಬಹುದು? ಇಟ್ಟವರು ಮತ್ತೆ ತೆಗೆದುಕೊಂಡು ಹೋಗಲು ಮರೆತರೋ ಹೇಗೆ? ಎಂದು ನಾ ಯೋಚಿಸುವ ಹೊತ್ತಿಗೆ ಈ ಬೇಬಿ ತನ್ನ ಅಮ್ಮನೊಂದಿಗೆ ಇಡೀ ಕಂಪೆನಿಯನ್ನೇ ಕರೆತಂದಿದ್ದಳು. ಯಾರೋ ದೃಷ್ಟಿ ಹಾಕಿರಬಹುದೆಂದು ಎಲ್ಲರ ಶಂಕೆ. ಗುಸುಗುಸು ಮಾತಿನ ನಡುವೆ, ಸಿಕ್ಕ ಎಲ್ಲವನ್ನೂ ನನಗೇ ಸುಡುವುದಕ್ಕೆ ತಿಳಿಸಿದರು. ಸುಟ್ಟ ಬಳಿಕ, ಕಂಪೆನಿಯ ಮಾಲೀಕರು ಸ್ವತಃ ನನ್ನ ತಲೆಯ ಮೇಲೆ ನೀರು ಹಾಕಿ, ಸ್ನಾನ ಮಾಡಿಸಿದರು. ‘ಯಾವ ತಾಯಿ ಹೆತ್ತ ಮಗಳೋ ಏನೊ, ಹೀಗೆ ಮಾಡಿದ್ದರಿಂದ ಅವಳಿಗೆ ತೊಂದರೆಯಾಗಬಾರದು’ ಎಂಬುದು ಅವರ ಭಾವವಾಗಿತ್ತು. ಕಾಕತಾಳಿಯವೆಂದರೆ, ಆವತ್ತು ನಾಟಕಕ್ಕೆ ಜನವೋ ಜನ! ಫುಲ್ ಕಲೆಕ್ಷನ್!

ಈ ಘಟನೆಯಿಂದ ಉಳಿದವರಿಗೆ ಏನಾಯಿತೋ ಏನೊ, ಆದರೆ ಮಾಲೀಕರಿಗೆ ಮಾತ್ರ ನನ್ನ ಬಗೆಗಿನ ವಾತ್ಸಲ್ಯ ಹೆಚ್ಚಾಯಿತು. ನಾನವರನ್ನು ಅಪ್ಪ ಎಂದು ಕರೆಯುತ್ತಿದ್ದೆ. ಸಾಕೆನಿಸದೆ, ತೊಡೆಯ ಮೇಲೇರಿ ಕುಳಿತುಕೊಳ್ಳುತ್ತಿದ್ದೆ. ಕಂಪೆನಿಗೆ ಸೇರಿದಾಗಿಂದಲೂ ಅವರ ಕುರಿತು ನನಗೊಂದು ವಿಶೇಷ ಸಲುಗೆ. ಫ್ಲೋರಿನಾ ಬಾಯಿ ಇವೆಲ್ಲವನ್ನು ಸಹಿಸುತ್ತಲೇ ಇರಲಿಲ್ಲ. ‘ನೀನು ಕೆಲಸದವಳು. ಕೆಲಸದವಳು ಕೆಲಸದವಳ ರೀತಿಯಲ್ಲೇ ಇದ್ದರೆ ಚೆನ್ನ. ಮಾಲೀಕರಿಗೂ ನಿನಗೂ ಅಂತರವಿರಬೇಕು. ತಿಳೀತೇನು?’ ಎಂದು ಗದರುತ್ತಿದ್ದರು. ಭಯಸ್ಥಳಾಗುತ್ತಿದ್ದೆ ನಿಜ. ಆದರೇನಂತೆ, ಮಾಲೀಕರು ಬಂದೊಡನೆ, ‘ಕಾಕಾ’ ಎನ್ನಲು ಶುರುವಿಟ್ಟೆ. ಮತ್ತೆ ತೊಡೆಯ ಮೇಲೆ ಹತ್ತಿ, ಗತ್ತಿನಿಂದ ಕುಳಿತೆ.

ಇವೆಲ್ಲ ಆಗುವ ಹೊತ್ತಿಗೆ ಹೆಚ್ಚು ಕಡಿಮೆ ಮೂರ್ನಾಲ್ಕು ತಿಂಗಳೇ ಕಳೆದಿರಬೇಕು. ಹಾವೇರಿಯಲ್ಲಿ ಕ್ಯಾಂಪ್ ನಡೆಯುತ್ತಿತ್ತು. ‘ಪಣಕ್ಕಿಟ್ಟ ಪ್ರಮಾಣ’ ನಾಟಕ. ಹಾರ್ಮೋನಿಯಂ ಮಾಷ್ಟ್ರು ಮತ್ತು ಕ್ಲಾರಿಯೋನೆಟ್ ಮಾಷ್ಟ್ರು ಪಕ್ಕ ನಾನು ಕೂತಿರುತ್ತಿದ್ದೆ. ಗೌರಿ ಎನ್ನುವ ಹಾಸ್ಯ ಪಾತ್ರ ನೋಡಿದ್ದೇ, ಬಹಳ ಆಸೆಯಾಯಿತು. ಸುಮ್ಮನಿರಲಾರದೆ, ನಾ ಮಾಡಬೇಕಿತ್ತು ಎಂದು ಆಸೆಯನ್ನೂ ಹೇಳಿಕೊಂಡೆ. ಮುಂದೇನಾಯಿತೆಂದು ಕೇಳಿದರೆ ಅರಣ್ಯ ರೋಧನವಾಯಿತಷ್ಟೇ. ಆ ಗೌರಿ ಪಾತ್ರ ಮಾಡುತ್ತಿದ್ದದ್ದು, ಉಷಾ ರಾಣಿ ಅವರು. ಎಷ್ಟೆಂದರೂ ನಾಟಕದಲ್ಲಿ ಅಭಿನಯಿಸಬೇಕು ಎಂದೇ ಮನೆಯನ್ನು, ಮನೆಜನರನ್ನು ಬಿಟ್ಟು ನಿರ್ಗತಿಕಳಂತೆ ಇಲ್ಲಿ ಬದುಕುತ್ತಿರುವುದಲ್ಲವೆ? ಎಲ್ಲರೆದುರು ಗೌರಿ ಪಾತ್ರ ನಾ ಮಾಡಬೇಕಿತ್ತು ಎಂದು ಮನದ ಅಭೀಪ್ಸೆಯನ್ನು ಹೇಳುತ್ತಲಿದ್ದೆ. ಕೇಳಿದವರೆಲ್ಲ, ‘ಮೊದ್ಲು ಕುರ್ಚಿಗುಂಡಿ ಕಸ ಹೊಡೆಯೋದು ಕಲಿ, ಬಣ್ಣದ ಬಟ್ಟಿ ಒಗಿಯೋದು ಅಭ್ಯಾಸ ಮಾಡ್ಕೊ. ಈ ಪಾರ್ಟ್ ಮಾಡೋಕೆ ನೀನಿನ್ನ ಹತ್ತು ಮಳೆಗಾಲ ಕಳೀಬೇಕು’ ಎಂದು ಅಣಕಿಸಲು ಶುರುವಿಟ್ಟರು.

ಬೋರ್ಡಿಂಗ್ ಮನೆಯ ದೊಡ್ಡ ಕಡಾಯಿಗಳನ್ನೆಲ್ಲ ತೊಳೆದರೆ ಪಾತ್ರ ಕೊಡುತ್ತೇವೆ ಎಂದು ಆಸೆ ತೋರಿದರು. ಆ ಪಾತ್ರೆಗಳಲ್ಲಿ ನೀರು ತುಂಬಿದರೆ ಬಹುಶಃ ನಾನೇ ಮುಳುಗಬಹುದಿತ್ತು. ‘ಬರೀ ತಲೆ ಮುಳುಗಿಸುತ್ತೀಯಾ, ಕೈ ಹಾಕಿ ಉಜ್ಜು’ ಎಂದರು. ಒಂಬತ್ತು ವರ್ಷದವಳಾದ ನನ್ನ ಕೈ ಬೆರಳುಗಳು ಇನ್ಹೇಗೆ ಇರುತ್ತದೆ ಹೇಳಿ! ಎಳೆಯ ಕೈಗಳಿಂದಲೇ ಆದಷ್ಟು ತೊಳೆದೆ. ಅವರಿಗೆ ಸಮಾಧಾನ ನೀಡಲಿಲ್ಲ. ‘ಆಯ್ತು, ಪರವಾಗಿಲ್ಲ ಇನ್ನೊಂದು ಅವಕಾಶ’ ಎಂದು ನಾಟಕದ ಕರಪತ್ರ ಕೊಡುವುದಕ್ಕೆ ಮತ್ತೆ ಅಂಟಿಸುವುದಕ್ಕೆ ಹೋಗೆಂದರು. ಇರುವ ಕೆಲಸಗಳನ್ನು ಬೇಗ ಮುಗಿಸಿ, ಸಮಯ ಹೊಂದಿಸಿಕೊಂಡು ಹೋಗುತ್ತಿದ್ದೆ. ‘ನಮ್ ನಾಟ್ಕಕ್ ಬನ್ರಿ’ ಎಂದು ಕೂಗಿ, ಕರೆದು ಹೆಚ್ಚುವರಿ ಕೆಲಸಗಳನ್ನೂ ಮಾಡುತ್ತಿದ್ದೆ. ಗೌರಿ ಪಾತ್ರವನ್ನು ಕಂಡು ಕಂಡು, ಸಂಭಾಷಣೆಗಳೆಲ್ಲ ಬಾಯತುದಿಯಲ್ಲೇ ಇತ್ತು. ಅಷ್ಟೇ ಅಲ್ಲ, ಪಾತ್ರಕ್ಕೆ ಬೇಕಾದ ವೈಯ್ಯಾರವನ್ನೂ ಮಾಡುತ್ತಿದ್ದೆ. ಹಾಗಾಗಿ, ಎಲ್ಲಾದರೂ ಥಟ್ಟನೆ ಅವಕಾಶ ಸಿಕ್ಕರೆ ಗಲಿಬಿಲಿಯಾಗಬಾರದೆಂದು ಸನ್ನದ್ಧಳಾಗಿದ್ದೆ. ಎಷ್ಟು ಕೆಲಸ ಮಾಡಿ ನನ್ನ ಶೃದ್ಧೆಯನ್ನು ಸಾಬೀತುಪಡಿಸಿದರೂ, ಪ್ರತಿಫಲ ದೊರೆಯಲೇ ಇಲ್ಲ; ಬರಿದೇ ಕೆಲಸ ಮಾಡಿಸಿಕೊಂಡು ತಮಾಷೆ ಕಂಡವರಿಗೆ ಕರುಣೆ ಉಕ್ಕಲೇ ಇಲ್ಲ. ಪಾತ್ರ ಮಾಡಬೇಕೆಂಬ ತಹತಹಿಕೆ ಮಾತ್ರ ನನ್ನೊಳಗೆ ಸದಾ ಉಸಿರಾಡುತ್ತಿತ್ತು.

‘ಪಣಕ್ಕಿಟ್ಟ ಪ್ರಮಾಣ’ ನಾಟಕದಲ್ಲಿ ಬರುವ ಯಶ್ವಂತ ಗೌಡನ ಪಾತ್ರವನ್ನು ಮುರುಡಯ್ಯನವರು ನಿರ್ವಹಿಸುತ್ತಿದ್ದರು. ಮುರುಡಯ್ಯನವರು ಕುಮಾರೇಶ್ವರ ಗವಾಯಿಗಳ ಶಿಷ್ಯರಾಗಿದ್ದರು. ಯಶ್ವಂತ ಗೌಡ ಮಿಲಿಟರಿಯಿಂದ ಮನೆಗೆ ಬಂದಿರುವ ದೃಶ್ಯದ ಅಭಿನಯಕ್ಕೆ ಕಲಾವಿದರೆಲ್ಲ ತಯಾರಾಗಿ ನಿಂತಿದ್ದರು. ನಾನು ಗ್ರೀನ್‌ ರೂಂನಿಂದ ಓಡಿ ಬಂದೆ!

ಫ್ಲೋರಿನಾ ಬಾಯಿ ಬಣ್ಣ ಹಚ್ಚಿಕೊಳ್ಳುವ ಮುನ್ನ ಹುಬ್ಬೆಲ್ಲವನ್ನೂ ಬೋಳಿಸಿಕೊಳ್ಳುತ್ತಿರುವುದನ್ನು ಕಂಡಿದ್ದೆ. ಆವರೆಗೂ ಬ್ಲೇಡು ಹರಿತವಿರುತ್ತದೆ ಎಂಬ ವಿಷಯವನ್ನೂ ತಿಳಿಯದ ನಾನು ಹುಬ್ಬು ಬೋಳಿಸತೊಡಗಿದೆ. ರಕ್ತ ಒಸರಿತು. ಹತ್ತಿ ಇಟ್ಟೆ. ಮೇಲಿನಿಂದ ನನಗೆ ತೋಚಿದಂತೆ ಹುಬ್ಬು ಬರೆದೆ. ವಿಭೂತಿಯನ್ನೆಲ್ಲ ಮುಖಕ್ಕೆ ಬಳಿದುಕೊಂಡೆ. ಕಾಲ ಯಾರಿಗಾಗಿ ನಿಲ್ಲುತ್ತದೆ! ಸಮಯ ಮೀರುವುದರೊಳಗೆ, ದೃಶ್ಯಕ್ಕೆ ಪರದೆ ಎಳೆಯುವ ಹೊತ್ತಿಗೆ ನಾನಲ್ಲಿರಬೇಕು ಎಂದೇ ಮೇಕಪ್ ಮಾಡಿಕೊಂಡು ಹೊರಟೆ.

ಪರದೆ ಎಳೆದರು. ನಾನು ಜನರಿಗೆಲ್ಲ ಕಾಣುವಂತಹ ಜಾಗದಲ್ಲಿ ಸ್ಟೇಜಿನ ಎದುರು ಭಾಗದಲ್ಲಿ ಬಲಗಾಲು ಮುಂದಿಟ್ಟು, ಸೊಂಟವನ್ನು ಕೊಂಚ ಬಾಗಿಸಿ, ಎಡಗೈಯನ್ನು ಸೊಂಟದಲ್ಲಿಟ್ಟು ಠೀವಿಯಿಂದ ನಿಂತೆ. ಬಣ್ಣ ಹಚ್ಚಿ ನಿಂತಾಗ ನನ್ನ ಖುಷಿಯನ್ನು ಪದಗಳಲ್ಲಿ ಪೋಣಿಸಿಟ್ಟು ಖಂಡಿತಾ ಒಪ್ಪಿಸಲಾರೆ. ಆದರೆ ವೇದಿಕೆಯೆದುರು ಕೂತ ಹಾರ್ಮೋನಿಯಂ ಮಾಷ್ಟ್ರು ಉರುಳಾಡಿ ನಗುತ್ತಿದ್ದರು. ಮುರುಡಯ್ಯನವರು ಪಾತ್ರ ಮರೆತು, ನನ್ನ ವಿಚಿತ್ರ ಭಂಗಿ ನೋಡಿ ನಕ್ಕಿದ್ದರು. ಅಷ್ಟೇ ಏನೂ ಇಡೀ ಕಂಪೆನಿಯಲ್ಲಿ ನಗುವಿನ ಕೇಕೆ ನನಗೂ ಕೇಳಿಸುತ್ತಿತ್ತು.

(ಹಿಂದಿನ ಕಂತು: ನಾನೆಂಬ ‘ನನ್ನ’ನ್ನು ಅಳಿಸುವ ಆಧ್ಯಾತ್ಮಿಕ ಜಗತ್ತು)

About The Author

ಕೀರ್ತಿ ಬೈಂದೂರ್

ಕನ್ನಡ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಂದೋಲನ ಪತ್ರಿಕೆಯ ಹಾಡುಪಾಡು ಪುಟದಲ್ಲಿ ಇವರ ಅನೇಕ ಲೇಖನಗಳು ಪ್ರಕಟಗೊಂಡಿವೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ