Advertisement
ಮಳೆ ಜಿನುಗಿಗೆ ಅರಳುವ ಜೀವನಪ್ರೀತಿ: ಭವ್ಯ ಟಿ.ಎಸ್. ಸರಣಿ

ಮಳೆ ಜಿನುಗಿಗೆ ಅರಳುವ ಜೀವನಪ್ರೀತಿ: ಭವ್ಯ ಟಿ.ಎಸ್. ಸರಣಿ

ಮಳೆಗಾಲ ಮಲೆನಾಡಿನ ವಸುಂಧರೆಯನ್ನು ಸಿಂಗರಿಸಿದೆ. ಮಂಜು ಆವರಿಸಿದ ಬೆಟ್ಟ ಗುಡ್ಡಗಳು, ಮಳೆಯಲ್ಲಿ ಮಾತ್ರ ಗೋಚರಿಸುವ ಸೀತಾಳೆಯಂತಹ ವನಸುಮಗಳು, ಬಗೆಬಗೆಯ ಅಣಬೆಗಳು, ದಾರಿಯುದ್ದಕ್ಕೂ ಮನಸೆಳೆಯುವ ಸಣ್ಣ ಸಣ್ಣ ಜಲಪಾತಗಳು, ತುಂಬಿ ಹರಿಯುವ ನದಿ ತೊರೆಗಳು ಮಲೆನಾಡನ್ನು ಭೂ ಲೋಕ ಸ್ವರ್ಗವಾಗಿಸಿವೆ. ದೂರದೂರುಗಳಿಂದ ಪ್ರವಾಸಿಗರು ಮಳೆಗಾಲದಲ್ಲಿ ಮಲೆನಾಡಿನ ದೃಶ್ಯ ವೈಭವ ಸವಿಯಲು ಬರುತ್ತಿದ್ದಾರೆ. ಅನೇಕ ರೆಸಾರ್ಟ್‌ಗಳು, ಹೋಂ ಸ್ಟೇಗಳು ತಲೆಎತ್ತಿವೆ. ಮಲೆನಾಡು ತನ್ನ ಮೊದಲ ನೀರವ, ನಿರ್ಜನ ಭವ್ಯತೆಯನ್ನು ಕಳೆದುಕೊಳ್ಳುವ ಭೀತಿಯೂ ಇದೆ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿಯಲ್ಲಿ ಮಳೆಗಾಲದ ಕುರಿತ ಬರಹ ನಿಮ್ಮ ಓದಿಗೆ

ಮಲೆನಾಡು ಈಗ ನಿಜಕ್ಕೂ ಮಳೆಯ ಬೀಡಾಗಿದೆ. ಶಾಲಾ ಮಕ್ಕಳಿಗೆ ಸರಣಿ ರಜೆಗಳ ಸುರಿಮಳೆಯಾಗಿದೆ.
ಹಸುಳೆಯಂತೆ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಬಂದ ಮಳೆರಾಯ ಈಗ ವರ್ಷ ಭೈರವನಂತೆ ನರ್ತಿಸುತ್ತಿದ್ದಾನೆ. ಹಗಲಿಗೂ, ಇರುಳಿಗೂ ಹೆಚ್ಚೇನೂ ವ್ಯತ್ಯಾಸವಿಲ್ಲ. ಬಿರುಗಾಳಿಯೂ ಮಳೆರಾಯನಿಗೆ ಜತೆಯಾಗಿದೆ. ಕಾರ್ಮುಗಿಲು ಆವರಿಸಿದ ಅಂಬರದಲ್ಲಿ ರವಿ, ತಾರೆ, ಚಂದ್ರರು ಅವಿತು ಕುಳಿತಿದ್ದಾರೆ. ಆಗಾಗ ಸಿಡಿಲು, ಗುಡುಗು, ಮಿಂಚುಗಳ ಸದ್ದಿಗೆ ಅವನಿ ಎದೆ ನಡುಗಿದೆ.

ಮಲೆನಾಡಮ್ಮನ ಮಡಿಲಿನಲಿ
ಕಾರ್ಮುಗಿಲೊಡಲಿನಲಿ
ಮನೆ ಮಾಡಿರುವೆನು ಸಿಡಿಲಿನಲಿ
ಮಿಂಚಿನ ಕಡಲಿನಲಿ

ಕುವೆಂಪು ಅವರ ಕವಿತೆಯ ಸಾಲುಗಳು ಮಳೆಯೊಂದಿಗೆ ಮಾರ್ದನಿಸುತಿವೆ. ಮಲೆನಾಡಿನ ಮಳೆಯ ರಮ್ಯ ಮೋಹಕತೆ ಎಷ್ಟೋ ಹೃದಯಗಳ ನೆಲದಲ್ಲಿ ಕವಿತ್ವದ ಬೀಜ ಮೊಳಕೆಯೊಡೆಯಲು ಕಾರಣವಾಗಿದೆ. ಮಳೆ ಹೊಯ್ದು ಇಳೆ ನಕ್ಕರೆ ರೈತನ ಬದುಕು ಹಸನಾಗುವುದು. ಮಲೆನಾಡಿನಲ್ಲಿ ಬೀಜ ಬಿತ್ತನೆ ಚುರುಕಾಗಿದೆ. ಬಿರುಸು ಮಳೆಯಲ್ಲೇ ನೇಗಿಲಯೋಗಿಯ ಕಾಯಕ, ಶ್ರದ್ಧೆಯಿಂದ ಸಾಗುತಿದೆ. ಜಗದ ಸಕಲ ಜೀವರಾಶಿಗೆ ಜೀವಜಲ ಬತ್ತದಂತೆ ಕಾಯುವ ವರುಣನ ಕೃಪೆ ಮಲೆನಾಡನ್ನು ಸದಾ ಪೊರೆಯುತಿದೆ. ಮಲೆನಾಡಿನ ಹಸಿರ ಸಿರಿ, ಚೆಲುವು ಮಳೆರಾಯನ ಕೊಡುಗೆ.

ಹೊರಗೆ ಧೋ ಎಂದು ಸುರಿವ ಮಳೆ ಒಮ್ಮೆ ಮನಕ್ಕೆ ಆಹ್ಲಾದವೆನಿಸಿದರೆ, ಮತ್ತೊಮ್ಮೆ ಏಕತಾನತೆಯಿಂದ ಬೇಸರ ಮೂಡಿಸುತ್ತದೆ. ರೈತಾಪಿ ಕೆಲಸಗಳಿಗೆ ಕಿರಿಕಿರಿ ಮಾಡುವ ಮಳೆಗೆ ಮಲೆನಾಡಿನ ಜನರು ಅಂಬರ್ ಒಡಿಯಾ, ಈ ಮಳಿಗೊಂದು ಏನ್ ರಣ ಹೊಡ್ದ್ಯದೇ ಅಂತ. ಬೆಳಗಿನಿಂದ ಒಂದೇ ಸಮನೇ ಜಪ್ತಾ ಅದೀಯಲ್ಲ. ಹಿಂಗಾದ್ರೆ ಜಾನ್ವಾರಗಳ್ನಾ ಹೊರಗ್ ಹೊರಡ್ಸಂಗದೀಯ, ಕೊಟ್ಟಿಗೀಲೇ ಕಟ್ಟೇ ಹುಲ್ಲ್ ಹಾಕಬಕು. ತ್ವಾಟಕ್ ಔಸದೀ ಹೊಡ್ಯಾಕಾದ್ರು ಈ ವಾರ ಬಿಟ್ತಾದ ಇಲ್ಲ… ಔಸದೀ ಹೊಡ್ಯೋ ಜನ ಸಿಗದೇ ಕಷ್ಟ… ಸಿಕ್ದಾಗ ಈ ಮಳಿಗೆ ಒಂದ್ ಗಳಿಗೀ ಪುರಸತ್ತ್ ಇಲ್ಲ… ಹಿಂಗೇ ಮಳೆ ಹೊಡ್ದರೆ ಅಡಕೆ ಮರಕ್ಕೆಲ್ಲಾ ಕೊಳೆ ರೋಗ ಬತ್ತದೆ. ಮೊದ್ಲೇ ಯಾವ ಮರದಲ್ಲೂ ಹೆಚ್ಗಿ ಕೊನೆ ಇಲ್ಲ. ತ್ವಾಟನೇ ನಂಬಕಂಡಿರೋ ನಮ್ ಕತೆ ಏನ್ ಆಗಬಕು ಹೇಳಿ… ಎಂತ ಮಾಡಾದೇನೋ ಮಾರ್ರಾ….
ಅಂತ ಬೈದುಕೊಳ್ತಾನೆ ಮಳೆಯ ಜೊತೆಜೊತೆಗೆ ತಮ್ಮ ಕೆಲಸ ಮಾಡ್ತಾ ಇರ್ತಾರೆ.

ಇನ್ನೂ ಕೆಲವು ಸಾಹಸಿಗರು ರಾತ್ರಿಯ ವೇಳೆ ಗದ್ದೆ ಅಂಚಿಗೆ ಹೋಗಿ ಹತ್ತ್ ಮೀನು ಕಡಿತಿದಾರೆ. ಗರ್ಭ ಧರಿಸಿದ ಈ ಮೀನುಗಳು ದೊಡ್ಡ ದೊಡ್ಡ ಜಲಪಾತದಲ್ಲಿ ತಮ್ಮ ತತ್ತಿಗಳು ತೇಲಿ ಹೋಗಬಹುದೆಂದು, ಈ ಸಣ್ಣ ತೊರೆಗಳಲ್ಲಿ ನೀರು ಹರಿಯುವ ವಿರುದ್ಧ ದಿಕ್ಕಿನಲ್ಲಿ ಹತ್ತಿ ಬರುತ್ತವೆ. ಇವೇ ಮಲೆನಾಡಿಗರ ಬಾಯಲ್ಲಿ ನೀರೂರಿಸುವ ಹತ್ತ್ ಮೀನು. ಇವುಗಳನ್ನು ಬಲೆ ಹಾಕಿ, ಇಲ್ಲವೇ ಕತ್ತಿಯಿಂದ ಕಡಿದು ಮನೆಗೆ ತಂದು ಚೊಕ್ಕಗೊಳಿಸಿ ಹುಳಿ ಹಾಕಿ ರುಚಿಕರ ಸಾರು ಮಾಡುತ್ತಾರೆ. ಇನ್ನೂ ಇದರ ಜೊತೆಗೆ ಏಡಿಗಳೂ ಸಿಕ್ಕರೆ ಅವನ್ನು ತಂದು ಅಡುಗೆ ಮಾಡಿ ರುಚಿ ನೋಡ್ತಾರೆ. ಈ ಮೀನು ಮತ್ತು ಏಡಿಗಳನ್ನು ಹಿಡಿಯಲು ಪಳಗಿದ ನೈಪುಣ್ಯವಿರುವ ಕೈಗಳೇ ಬೇಕು.

ನೈಸರ್ಗಿಕವಾಗಿ ಈಗ ಮನೆ ಸುತ್ತ ಕೆಸುವಿನ ಸೊಪ್ಪು ಹುಲುಸಾಗಿ ಬೆಳೆದಿರುತ್ತದೆ. ಇದನ್ನು ಬೇಯಿಸಿ, ಖಾರ, ಹುಳಿ ಹಾಕಿ ಮಾಡುವ ಪಲ್ಯ ರೊಟ್ಟಿ ಜೊತೆಗೆ ಸವಿಯಲು ಆನಂದ. ಎಳೆ ಬಿದಿರನ್ನು ತಂದು ಕೊಚ್ಚಿ, ನೀರಿನಲ್ಲಿ ನೆನೆಸಿಟ್ಟು, ಕಹಿ ಅಂಶ ಬಸಿದು ತೆಗೆದು ಮಾಡುವ ಕಳಲೆ ಪಲ್ಯ ಆಹಾ ಬಾಯಲ್ಲಿ ನೀರೂರಿಸುತ್ತದೆ. ಇನ್ನೂ ಹಲಸಿನಹಣ್ಣು ಹೇರಳವಾಗಿ ಸಿಗ್ತಾ ಇರೋವಾಗ ಹಲಸಿನ ಹಣ್ಣಿನ ಮುಳಕ ಎಂಬ ಸಿಹಿ ತಿಂಡಿಯ ಘಮ ಮಳೆಯೊಂದಿಗೆ ಬೆರೆತು ಮುದ ನೀಡುತ್ತದೆ.

ಮಳೆಯನ್ನು ಬೈಯುವಂತೆ ಹೊಗಳಿ ರಮಿಸುವುದೂ ಸಹ ಮಲೆನಾಡಿನ ಜನರಿಗೆ ತಿಳಿದಿದೆ. ಮಘೆ ಮಳೆ ಬಂದ್ರೆ ಒಳ್ಳೇದು… ಮನೆ ಮಗ ಉಂಡರೆ ಒಳ್ಳೇದು ಅಂತ ಮಘಾ ನಕ್ಷತ್ರದ ಮಳೆ ಕುರಿತು ಗಾದೆ ಹೇಳ್ತಾರೆ. ಮಘೆ ಮಳೆ ರೈತರ ಬೆಳೆಗೆ ಪೋಷಣೆ ನೀಡುತ್ತದೆ. ಮನೆ ಮಗ ಉಂಡು ಪುಷ್ಟಿಯಾದಂತೆ ಎಂಬುದು ಅವರ ರಮ್ಯ ಕಲ್ಪನೆ.

ಮಳೆ ಸಮಯಕ್ಕೆ ಸರಿಯಾಗಿ ಎಷ್ಟು ಬೇಕೋ ಅಷ್ಟು ಸುರಿದರೆ ಬೆಳೆ ಚೆನ್ನಾಗಿರುತ್ತದೆ. ಆದರೆ ಅತಿವೃಷ್ಟಿಯಾದರೆ ವರ್ಷವಿಡೀ ಪಟ್ಟ ಶ್ರಮ ವ್ಯರ್ಥವಾಗುತ್ತದೆ. ಅಕಾಲದಲ್ಲಿ ಮಳೆ ಬಂದರೂ ಹಾನಿ. ಆದರೆ ಮಲೆನಾಡಿನ ರೈತವರ್ಗ ಎಲ್ಲಾ ಸವಾಲುಗಳನ್ನು ಎದುರಿಸುತ್ತಾ ತಮ್ಮ ನೇಗಿಲ ಕಾಯಕವನ್ನು ಮುಂದುವರಿಸುತ್ತಾ ಬಂದಿದ್ದಾರೆ. ಭತ್ತ, ಅಡಿಕೆ, ಕಾಫಿ, ಕಾಳುಮೆಣಸು ಮುಂತಾದವುಗಳು ಇಲ್ಲಿನ ಪ್ರಮುಖ ಬೆಳೆಗಳು. ಭತ್ತ ಬೆಳೆಯಲು ಹದಮಳೆ ಬೇಕು. ಅತಿಯಾದ ಮಳೆಯಿಂದ ಅಡಿಕೆ ಮರಗಳಿಗೆ ಕೊಳೆ ರೋಗ ಬರುತ್ತದೆ. ಇಳುವರಿಯೂ ಕಡಿಮೆಯಾಗುತ್ತದೆ. ಅತಿಯಾಗದ ಹಿತ ಮಿತ ಮಳೆ ಬಂದು ರೈತರ ಬಾಳು ಬೆಳಗಬೇಕು.

ಹಳ್ಳಿ ಬದುಕು, ಕೃಷಿ ಜೀವನ ಕಷ್ಟವೆಂದು ಮಲೆನಾಡನ್ನು ತೊರೆದು ಪಟ್ಟಣ ಸೇರುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಈ ಸಮಯದಲ್ಲಿ ನಾವಿರುವ ಪ್ರದೇಶ, ಜನಜೀವನ, ಪ್ರಕೃತಿಯನ್ನು ಮೊದಲಿಗಿಂತಲೂ ಹೆಚ್ಚು ಆಪ್ತವಾಗಿ ಕಾಣಬೇಕಾದ ಅಗತ್ಯವಿದೆ. ಮಲೆನಾಡಿನ ಭೌಗೋಳಿಕ ಶ್ರೀಮಂತಿಕೆ, ಜೀವವೈವಿಧ್ಯ, ಪ್ರಕೃತಿ ಸೌಂದರ್ಯವನ್ನು ಮನದುಂಬಿ ಆರಾಧಿಸಬೇಕು.

ಮಳೆಗಾಲ ಮಲೆನಾಡಿನ ವಸುಂಧರೆಯನ್ನು ಸಿಂಗರಿಸಿದೆ. ಮಂಜು ಆವರಿಸಿದ ಬೆಟ್ಟ ಗುಡ್ಡಗಳು, ಮಳೆಯಲ್ಲಿ ಮಾತ್ರ ಗೋಚರಿಸುವ ಸೀತಾಳೆಯಂತಹ ವನಸುಮಗಳು, ಬಗೆಬಗೆಯ ಅಣಬೆಗಳು, ದಾರಿಯುದ್ದಕ್ಕೂ ಮನಸೆಳೆಯುವ ಸಣ್ಣ ಸಣ್ಣ ಜಲಪಾತಗಳು, ತುಂಬಿ ಹರಿಯುವ ನದಿ ತೊರೆಗಳು ಮಲೆನಾಡನ್ನು ಭೂ ಲೋಕ ಸ್ವರ್ಗವಾಗಿಸಿವೆ. ದೂರದೂರುಗಳಿಂದ ಪ್ರವಾಸಿಗರು ಮಳೆಗಾಲದಲ್ಲಿ ಮಲೆನಾಡಿನ ದೃಶ್ಯ ವೈಭವ ಸವಿಯಲು ಬರುತ್ತಿದ್ದಾರೆ. ಅನೇಕ ರೆಸಾರ್ಟ್‌ಗಳು, ಹೋಂ ಸ್ಟೇಗಳು ತಲೆಎತ್ತಿವೆ. ಮಲೆನಾಡು ತನ್ನ ಮೊದಲ ನೀರವ, ನಿರ್ಜನ ಭವ್ಯತೆಯನ್ನು ಕಳೆದುಕೊಳ್ಳುವ ಭೀತಿಯೂ ಇದೆ. ವ್ಯಾವಹಾರಿಕ ದೃಷ್ಟಿಯಿಂದ ಇಲ್ಲಿನ ಕಾಡು, ನೈಸರ್ಗಿಕ ಸೌಂದರ್ಯಕ್ಕೆ ಧಕ್ಕೆ ಬಾರದಂತೆ ಎಚ್ಚರಿಕೆ ವಹಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ.

ಇಷ್ಟು ಬರೆಯುವ ಹೊತ್ತಿಗೆ ರಾತ್ರಿ ಹನ್ನೊಂದು. ಮತ್ತೆ ವರ್ಷ ಭೈರವನ ಅಬ್ಬರ ಆರಂಭವಾಗಿದೆ.

ಕದ್ದಿಂಗಳು ಕಗ್ಗತ್ತಲು
ಕಾರ್ಗಾಲದ ರಾತ್ರಿ
ಸಿಡಿಲ್ಮಿಂಚಿಗೆ ನಡುಗುತಿದೆ
ಪರ್ವತ ವನಧಾತ್ರಿ

ಕುವೆಂಪು ಅವರ ಮಳೆಸಾಲುಗಳು ಎದೆಯೊಳಗೆ ಅನುರಣಿಸುತಿವೆ. ಮಳೆಯ ಮೋಹಕ ಭೀಷಣತೆ ಹೀಗೆ ಇರಲಿ. ಮಲೆನಾಡಿಗರ ಬವಣೆಗಳ ನಡುವೆ ನಿತ್ಯವೂ ಅರಳುವ ಜೀವನಪ್ರೀತಿಯ ಈ ಮಳೆಯ ಜಿನುಗು ನಿಲ್ಲದಿರಲಿ ಎಂಬುದೇ ಆಶಯ.

About The Author

ಭವ್ಯ ಟಿ.ಎಸ್.

ಭವ್ಯ ಟಿ.ಎಸ್. ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಕಾನುಗೋಡಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕತೆ, ಕವಿತೆ, ಲೇಖನಗಳನ್ನು ಬರೆಯುವುದು ಹವ್ಯಾಸ. ಹಲವು ಪ್ರಮುಖ ಪತ್ರಿಕೆಗಳು ಹಾಗೂ ವೆಬ್ ಮ್ಯಾಗಜೀನ್‌ಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. "ವಸುಂಧರೆ" ಇವರ ಪ್ರಕಟಿತ ಚೊಚ್ಚಲ ಕವನ ಸಂಕಲನ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ