ಶಾಲೆಗೆ ಹೋದೊಡನೆ ನಮ್ಮ ಕೊಪ್ಪೆ ತೆಗೆದು, ತೊಯ್ದು ತೊಪ್ಪೆಯಾದ ಯೂನಿಫಾರಂ ಲಂಗಗಳನ್ನು ಹಿಂಡಿ ಕೊಡವಿಕೊಂಡು ಹೋಗಿ ತರಗತಿಯಲ್ಲಿ ಕೂರುತ್ತಿದ್ದೆವು. ಇಡೀ ದಿನ ಸುತ್ತೆಲ್ಲ ಬಟ್ಟೆಯ ಹಸಿವಾಸನೆ ಹರಡಿರುತ್ತಿತ್ತು. ಜೋರಾಗಿ ಮಳೆ ಬರುವಾಗ ಮೇಷ್ಟ್ರು ಪಾಠ ಮಾಡುತ್ತಿರುವಾಗಲೂ ಗಲಾಟೆ ಮಾಡುತ್ತಿದ್ದೆವು. ಇನ್ನೂ ಶಿಕ್ಷಕರು ಬರದ ತರಗತಿಯಲ್ಲಿ ಮಳೆ ಸುರಿಯುವಾಗ ಮನಸೋ ಇಚ್ಛೆ ಕೂಗುತ್ತ ಮಳೆಯೊಂದಿಗೆ ಜುಗಲ್ ಬಂಧಿ ನಡೆಸುತ್ತಿದ್ದೆವು.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿಯಲ್ಲಿ ಮಳೆದಿನಗಳಲ್ಲಿ ಶಾಲಾಮಕ್ಕಳ ಸಂಭ್ರಮದ ಕುರಿತ ಬರಹ ನಿಮ್ಮ ಓದಿಗೆ
ಮತ್ತೆ ಮಳೆಯಾಗಿದೆ… ಚಿತ್ತದ ಭಿತ್ತಿಯಲ್ಲಿ ನೆನಪುಗಳ ಚಿತ್ರಮಾಲೆ ತನ್ನತಾನೇ ಮೂಡಿ ನಿಂತಿದೆ. ಈ ಬಾರಿ ಒಂದು ವಾರ ಮೊದಲೇ ಮಲೆನಾಡಿಗೆ ವರುಣನ ಆಗಮನವಾಗಿದೆ. ಬಿಸಿಲ ತಾಪದ ಕುರುಹು ಅಡಗುವಂತೆ ಮಂಜು, ಹಿಮಗಾಳಿ ಆವರಿಸುತಿದೆ. ಹಗಲು ಇರುಳಿನ ಪರಿವೆ ಇಲ್ಲದೆ ಒಂದೇ ಸಮನೆ ಜಡಿ ಮಳೆ ಸುರಿಯುತಿದೆ.
ಹಸಿರು ತುಂಬಿದ ತರುಲತೆ, ಹೂ, ಎಲೆ, ಬಳ್ಳಿಗಳು ವರುಣನಿಗೆ ನಾಚಿದ ಲಲನೆಯರಂತೆ ತಲೆ ತಗ್ಗಿಸಿ ತೊನೆಯುತಿವೆ. ಅಂಗಳದಲ್ಲಿ ಹರಿಯುತಿರುವ ನೀರಿನಲ್ಲಿ ಕುಣಿದು ಕುಪ್ಪಳಿಸಲು ಮಕ್ಕಳು ಅಮ್ಮನ ಕಣ್ತಪ್ಪಿಸಿ ಕಾಯುತ್ತಿವೆ.
ರಾತ್ರಿಯೆಲ್ಲಾ ಸುರಿದ ರಭಸದ ಗಾಳಿ ಮಳೆಗೆ ಕರೆಂಟ್ ಕಂಬಗಳು ಬಿದ್ದು ವಿದ್ಯುತ್ ಇಲ್ಲದೆ ಮನೆಗಳೊಳಗೆ ಕತ್ತಲು ಕವಿದಿದೆ. ಫ್ರಿಡ್ಜ್‌ನಲ್ಲಿಟ್ಟ ವಸ್ತುಗಳೆಲ್ಲಾ ಹೊರಬಂದು ಇನ್ನೂ ನಾಲ್ಕು ತಿಂಗಳು ತಂಗಳು ಪೆಟ್ಟಿಗೆಗೆ ರಜೆ ಘೋಷಿಸುತ್ತಿವೆ. ಕರೆಂಟ್ ಜೊತೆ ಜೊತೆಗೆ ಮಾಯವಾಗುವ ನೆಟ್ವರ್ಕ್‌ನಿಂದಾಗಿ ಮಲೆನಾಡಿನ ಹಳ್ಳಿಗಳು ಅಕ್ಷರಶಃ ಅಜ್ಞಾತ ಲೋಕಗಳಾಗುತ್ತಿರುವ ಅನುಭವ. ಮುರಿದು ಬೀಳುವ ಮರದ ರೆಂಬೆಕೊಂಬೆಗಳು, ಬುಡ ಸಮೇತ ಉರುಳುವ ಮರಗಳ ನಡುವೆ ಅಲ್ಲಲ್ಲಿ ಕಡಿತಗೊಂಡ ಕರೆಂಟ್ ಕಂಬ, ತಂತಿಗಳನ್ನು ಸರಿಪಡಿಸುವ ವಿದ್ಯುತ್ ಕೆಲಸಗಾರರ ಸಾಹಸ, ಕಾರ್ಯಕ್ಷಮತೆ ಯಾವ ಸೈನಿಕರಿಗೂ ಕಡಿಮೆಯಲ್ಲ. ಅವರ ಕೃಪೆಯಿಂದ ಆಗಾಗ ದರ್ಶನ ಕೊಡುವ ಕರೆಂಟ್ ನೋಡಿದ ಕೂಡಲೇ ಯಾವುದೋ ಪುಣ್ಯವೇ ಅವತರಿಸಿದಂತೆ ಧನ್ಯರಾಗುತ್ತಾರೆ ಮಲೆನಾಡಿನ
ಜನರು. ಅಲ್ಪ ಕಾಲ ಬಂದು ಹೋಗುವ ಈ ಕರೆಂಟ್ ಎಂಬ ಮರೀಚಿಕೆಯೊಂದಿಗೆ ಹೊಂದಿಕೊಂಡು ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕಾಗಿದೆ.
ಜೂನ್ ಮೊದಲ ವಾರದಲ್ಲಿ ರಭಸವಾಗುತ್ತಿದ್ದ ಮಳೆರಾಯ ಈ ಬಾರಿ ಬೇಸಿಗೆ ರಜೆಯ ಮಧ್ಯದಲ್ಲಿ ಪ್ರಾರಂಭವಾಗಿರುವುದರಿಂದ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗುವ ಶಾಲೆಗಳಿಗೆ ತೆರಳಲು ಹೊಸ ಪುಸ್ತಕಗಳಿಗೆ ಪ್ಲಾಸ್ಟಿಕ್ ಬೈಂಡ್ ಹಾಕಿ, ಹೊಸ ಕೊಡೆ, ರೈನ್ ಕೋಟ್ ಖರೀದಿಸಿ ಮಕ್ಕಳು ತಯಾರಾಗುತ್ತಿದ್ದಾರೆ.
ಮಳೆರಾಯನ ಆರ್ಭಟ ಹೀಗೆ ಮುಂದುವರೆದರೆ ಮರಳಿ ಶಾಲೆಗಳಿಗೆ ಅನಿವಾರ್ಯವಾಗಿ ರಜೆ ನೀಡಬೇಕಾಗುತ್ತದೆ. ಇದರಿಂದಾಗಿ ಹಿಂದುಳಿಯುವ ಪಾಠಗಳು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಒತ್ತಡಕ್ಕೆ ಕಾರಣವಾಗುತ್ತವೆ. ಇನ್ನೂ ಶೈಕ್ಷಣಿಕ ವರ್ಷದ ಆರಂಭದಲ್ಲೇ ನಡೆಯುವ ಕ್ರೀಡಾ ಚಟುವಟಿಕೆಗಳನ್ನು ನಡೆಸಲು ಅಡಚಣೆಯುಂಟಾಗುತ್ತದೆ. ಒಟ್ಟಿನಲ್ಲಿ ಸೆಪ್ಟೆಂಬರ್ ಅಂತ್ಯದವರೆಗೂ ಮಲೆನಾಡಿನ ಶಾಲಾ ಚಟುವಟಿಕೆಗಳ ಮೇಲೆ ಮಳೆರಾಯನ ಪ್ರಭಾವ ಹಲವು ಏರುಪೇರುಗಳನ್ನು ಉಂಟುಮಾಡುತ್ತಲೇ ಇರುತ್ತದೆ.
ಈಗ ಶಾಲಾ ಮಕ್ಕಳಿಗೆ ಶಾಲೆಯಲ್ಲೇ ಬಿಸಿಯೂಟ ಸಿಗುವುದರಿಂದ ಚಳಿ ಮಳೆಯ ನಡುವೆ ತಣ್ಣಗಾಗುವ ಊಟದ ಬಾಕ್ಸ್ ತರುವ ಧಾವಂತವಿಲ್ಲ. ನಾವು ಬಾಲ್ಯದಲ್ಲಿ ಶಾಲೆಗೆ ತೆರಳುವಾಗ ಮಳೆಯಲ್ಲೇ ಕುಣಿಯುತ್ತಾ ಸಾಗುತ್ತಿದ್ದೆವು. ಶಾಲೆಗೆ ತಲುಪುವಷ್ಟರಲ್ಲಿ ಸಾಕಷ್ಟು ನೆನೆದು ನಮ್ಮ ಬಟ್ಟೆ ಒದ್ದೆ ಮುದ್ದೆಯಾಗಿರುತ್ತಿತ್ತು. ಇಡೀ ದಿನ ಶಾಲೆಯಲ್ಲಿ ನಡುಗುತ್ತಾ ಕುಳಿತುಕೊಳ್ಳುತ್ತಿದ್ದೆವು. ನಮ್ಮ ಮನೆ ಶಾಲೆಗೆ ಹತ್ತಿರವಿದ್ದುದರಿಂದ ಮಧ್ಯಾಹ್ನ ಮನೆಗೇ ಹೋಗಿ ಊಟ ಮಾಡಿ ಬರುತ್ತಿದ್ದೆವು. ಆಗಲೂ ಮಳೆಯೊಂದಿಗೆ ಆಟ. ಸಂಜೆಯಂತೂ ಬೀಸುವ ಗಾಳಿ, ಧೋ ಎಂದು ಬರುವ ಮಳೆಗೆ ನಾವು ಹಿಡಿದ ಕೊಡೆಯಾಗಲೀ, ಪ್ಲಾಸ್ಟಿಕ್ ಕೊಪ್ಪೆಯಾಗಲೀ ಯಾವ ಲೆಕ್ಕಕ್ಕೂ ಬಾರದೆ ಸಂಪೂರ್ಣ ಮಳೆಯಲ್ಲಿ ನೆನೆದು ಬಟ್ಟೆಗಳಿಂದ ನೀರಿಳಿಸುತ್ತಾ ಮನೆಗೆ ಹೋಗುತ್ತಿದ್ದೆವು. ಬಟ್ಟೆ ಬದಲಿಸಿ ಮನೆಯ ಕಟ್ಟಿಗೆ ಒಲೆಯ ಮುಂದೆ ಕುಳಿತು ಕಾಫಿ ಹೀರುವ ಮಜವೇ ಬೇರೆ.
ಜೊತೆಗೆ ಹಲಸಿನ ಬೀಜ ಮತ್ತು ಗೇರು ಬೀಜಗಳನ್ನು ಒಲೆಯ ಕೆಂಡದಲ್ಲಿ ಸುಟ್ಟು ತಿನ್ನುವ ಗಮ್ಮತ್ತು. ಒಲೆ ಮುಂದೆ ಕುಳಿತು ಹೀಗೆ ಶಾಖ ತೆಗೆದುಕೊಳ್ಳುವುದಕ್ಕೆ ಮಲೆನಾಡಿನ ಭಾಷೆಯಲ್ಲಿ ಚಳಿ ಕಾಸುವುದು ಎನ್ನುತ್ತಾರೆ.
ಮಳೆಗಾಲ ಬಂತೆಂದರೆ ಬಾಲ್ಯದ ನೆನಪುಗಳು ಎದೆಯೊಳಗೆ ಬೆಚ್ಚನೆಯ ಭಾವ ಮೂಡಿಸುತ್ತವೆ. ನಾನು ಹುಟ್ಟಿ ಬೆಳೆದ ಪ್ರದೇಶದಲ್ಲಿಯೇ ಶಾಲಾ ಶಿಕ್ಷಕಿಯಾಗಿರುವುದರಿಂದ ಪ್ರತಿವರ್ಷ ಶಾಲೆ ಆರಂಭವಾದಾಗ ಬಾಲ್ಯವನ್ನು ನೆನೆಯುತ್ತಲೇ ಶಾಲೆಯತ್ತ ತೆರಳುತ್ತೇನೆ. ಮಳೆಯನ್ನೇ ಲೆಕ್ಕಿಸದಂತೆ ನಗುತ್ತಾ, ಕುಣಿಯುತ್ತಾ ಶಾಲೆಗೆ ಬರುವ ಮಕ್ಕಳೊಂದಿಗೆ ನಾನೂ ಮಗುವಾಗುತ್ತೇನೆ.
ಇಂತಹುದೇ ಒಂದು ಮಳೆಯಲ್ಲಿ ನಾನಾಗ ಮೂರನೇ ತರಗತಿ ಇರಬೇಕು, ಅಪ್ಪ ನನಗಾಗಿ ಒಂದು ರೈನ್ ಕೋಟ್ ತಂದಿದ್ದರು. ತಂದ ಕೂಡಲೇ ಖುಷಿಪಟ್ಟು ಹಾಕಿಕೊಂಡು ನೋಡಿದೆ. ಆದರೆ ಆಗ ನನ್ನ ಗೆಳತಿಯರೆಲ್ಲಾ ಕಂಬಳಿಕೊಪ್ಪೆ ಹೋಲುವ ಪ್ಲಾಸ್ಟಿಕ್ ಕೊಪ್ಪೆ ಧರಿಸಿ ಅದರ ಎರಡೂ ಅಂಚನ್ನು ಗಟ್ಟಿಯಾಗಿ ಹಿಡಿದು ಮೈ ನೆನೆಯದಂತೆ ಮುಚ್ಚಿಕೊಂಡು ಬರುತ್ತಿದ್ದರು. ನನಗೆ ನನ್ನ ರೈನ್ ಕೋಟ್ ಗಿಂತ ಈ ಕೊಪ್ಪೆಯೇ ಆಪ್ಯಾಯಮಾನವೆನಿಸಿ ಮನೆಯಲ್ಲಿ ಅದೇ ಬೇಕೆಂದು ಹಟ ಹಿಡಿದು ಕುಳಿತೆ. ಸರಿ ಅಪ್ಪ ಬೇಸರಗೊಂಡು ಪ್ಲಾಸ್ಟಿಕ್ ತಂದು ಕೊಪ್ಪೆ ಮಾಡಿಕೊಟ್ಟರು.
ಅದನ್ನು ತೊಟ್ಟು ಗೆಳತಿಯರೊಂದಿಗೆ ಶಾಲೆಗೆ ಹೋಗುವಾಗ ಅದೇನೋ ಸಂಭ್ರಮ ಮನದೊಳಗೆ.
ಶಾಲೆಯ ದಾರಿಯುದ್ದಕ್ಕೂ ಅಲ್ಲಲ್ಲಿ ಹೊಂಡಗಳಲ್ಲಿ ನಿಂತ ನೀರಿಗೆ ಹಾರಿ ಕುಪ್ಪಳಿಸಿ ಸಾಗುವುದೇ ನಮ್ಮ ಆಟ. ರಸ್ತೆ ದಾಟುವ ಕಪ್ಪೆಗಳು ನಮ್ಮ ಸಂಗಾತಿಗಳು. ಹಾದುಹೋಗುವ ವಾಹನಗಳು ರಸ್ತೆಯಲ್ಲಿ ನಿಂತ ನೀರನ್ನು ಒಮ್ಮೆಲೆ ಮೈಗೆ ರಾಚಿ ಸಾಗುತ್ತಿದ್ದರೆ ಹೋ…. ಎಂದು ಕೂಗುತ್ತಿದ್ದೆವು. ಈಗಲಾದರೆ ಕೋಪವೇ ಬರುತ್ತದೆ. ಆದರೆ ಬಾಲ್ಯದಲ್ಲಿ ಎಲ್ಲವೂ ಚಂದವೇ.
ಶಾಲೆಗೆ ಹೋದೊಡನೆ ನಮ್ಮ ಕೊಪ್ಪೆ ತೆಗೆದು, ತೊಯ್ದು ತೊಪ್ಪೆಯಾದ ಯೂನಿಫಾರಂ ಲಂಗಗಳನ್ನು ಹಿಂಡಿ ಕೊಡವಿಕೊಂಡು ಹೋಗಿ ತರಗತಿಯಲ್ಲಿ ಕೂರುತ್ತಿದ್ದೆವು. ಇಡೀ ದಿನ ಸುತ್ತೆಲ್ಲ ಬಟ್ಟೆಯ ಹಸಿವಾಸನೆ ಹರಡಿರುತ್ತಿತ್ತು. ಜೋರಾಗಿ ಮಳೆ ಬರುವಾಗ ಮೇಷ್ಟ್ರು ಪಾಠ ಮಾಡುತ್ತಿರುವಾಗಲೂ ಗಲಾಟೆ ಮಾಡುತ್ತಿದ್ದೆವು. ಇನ್ನೂ ಶಿಕ್ಷಕರು ಬರದ ತರಗತಿಯಲ್ಲಿ ಮಳೆ ಸುರಿಯುವಾಗ ಮನಸೋ ಇಚ್ಛೆ ಕೂಗುತ್ತ ಮಳೆಯೊಂದಿಗೆ ಜುಗಲ್ ಬಂಧಿ ನಡೆಸುತ್ತಿದ್ದೆವು.
ಮಳೆ ನಿರಂತರವಾಗಿ ಸುರಿಸುರಿದು ಪಾಚಿಗಟ್ಟಿದ ನೆಲ ಮಲೆನಾಡಿನ ಎಲ್ಲಾ ಕಡೆ ನಿರ್ಮಾಣವಾಗಿರುತ್ತದೆ. ಇದರ ಮೇಲೆ ಜಾರದಂತೆ ನಡೆಯುವುದು ಒಂದು ಕಲೆ. ಇದು ಕರಗತವಾಗುವುದು ಸ್ವಲ್ಪ ಕಷ್ಟ. ಅಪ್ಪಿ ತಪ್ಪಿ ಇಂತಹ ನೆಲದಲ್ಲಿ ಜಾರಿ ಬಿದ್ದರೆ ಒಮ್ಮೆ ಸುತ್ತಲೂ ನೋಡಬೇಕಾಗುತ್ತದೆ. ಏಕೆಂದರೆ ಯಾರಾದರೂ ನೋಡಿದರೆ…. ಬಿದ್ದ ಮೈ ಕೈ ನೋವಿಗಿಂತ ನೋಡಿದರಲ್ಲಾ… ಅನ್ನುವ ಅವಮಾನದ ನೋವೇ ಹೆಚ್ಚು.
ಇನ್ನೂ ಈ ಗಾಳಿ ಮಳೆಯಲ್ಲಿ ಕೊಡೆ ಹಿಡಿದು ಹೋಗುವುದು ಯುದ್ಧವನ್ನು ಎದುರಿಸಿದಷ್ಟೇ ಕಷ್ಟ. ಏಕೆಂದರೆ ಯಾವ ದಿಕ್ಕಿನಲ್ಲಿ ಗಾಳಿ ಬೀಸುತ್ತದೆಯೋ ಅದಕ್ಕೆ ತಕ್ಕಂತೆ ನಾವು ಕೊಡೆಯನ್ನು ಭದ್ರವಾಗಿ ಹಿಡಿದಿರಬೇಕು. ಹೇಗೇಗೋ ಹಿಡಿದು ಆರಾಮವಾಗಿ ಹೋದರೆ ಕೊಡೆ ನಮ್ಮ ಕೈಯಿಂದ ಯಾವಾಗಲೋ ಹಾರಿ ಹೋಗಿರುತ್ತದೆ. ಇಲ್ಲವೇ ಹಿಡಿದ ಕೊಡೆ ಉಲ್ಟಾ ಮಡಚಿಕೊಂಡು ಅದನ್ನು ಸರಿಪಡಿಸಲು ಒದ್ದಾಡುವ ನಾವು ಸುತ್ತಲಿನವರಿಗೆ ಹಾಸ್ಯದ ವಸ್ತುಗಳಂತೆ ಕಾಣುತ್ತಿರುತ್ತೇವೆ.
ಹೀಗೆ ಮಳೆಯೊಂದಿಗೆ ಬೆರೆತ ಮಲೆನಾಡಿನ ಬಾಲ್ಯದ ನವಿರು ಅನುಭವಗಳು ಧರೆಯ ಸ್ಪರ್ಶಿಸಿದ ಮೊದಲ ಮಳೆಹನಿಯಷ್ಟೇ ತಾಜಾ ತಾಜಾವಾಗಿದ್ದು ಪ್ರತಿ ವರ್ಷದ ಮಳೆಗಾಲದಲ್ಲಿ ಮೈ ಮನಗಳನ್ನು ಪುಳಕಿತಗೊಳಿಸುತ್ತವೆ.
