ಚಳಿಕಾಯಿಸಲೆಂದು ಪಕ್ಕದಲ್ಲೇ ಬಿದ್ದಿದ್ದ ಮರದ ಕೊಂಟಿಗೆ ಉಕ್ಕಡ ಹಾಕಿ, ಏನನ್ನೋ ಯೋಚಿಸುತ್ತ ಒಮ್ಮೆ ಮಲೆ ಮಾದೇಶ್ವರನ ದೇವಸ್ಥಾನದ ರಾಜಗೋಪುರದ ಕಡೆಗೆ ಕಣ್ಣಾಡಿಸಿ ಎದ್ದು ನಿಂತು ಅತ್ತ ತಿರುಗಿ, ಪಾಪ ಎಷ್ಟೋ ವರ್ಷುದ್ ಮೇಲೆ ಎಡ್ತಿ-ಮೊಗೀನ್ ಜೊತೆ ನೆಗ್ನೆಗ್ತಾ ಇದ್ದ, ಸಂಗ್ಡ ಯಾರು ಇಲ್ಲ ಅಂತ ಅವನ್ನ ಈ ಅಡವಿಗೆ ಕರ್ಕುಂಬಂದಿ ಕಿರ್ಬುದ್ಬಾಯಿಗೆ ಆಕ್ಬುಟ್ನಲ್ಲಪ್ಪ ಮಾದಪ್ಪ ಸಣ್ಣಕ್ಕಿನ ನೀನೆ ಕಾಪಾಡಪ್ಪ; ಅವನಿಗೆ ಏನೂ ಆಗ್ದೇ ಇರ್ಲಪ್ಪ! ಎಂದು ಎರಡೂ ಕೈ ಜೋಡಿಸಿ ದುಃಖದಿಂದ ಬೇಡಿಕೊಂಡನು.
ಮಹಾದೇವ್ ಪೊನ್ನಾಚಿ ಬರೆದ ಈ ಭಾನುವಾರದ ಕತೆ “ನಾಳೆ ಇಲ್ಲದ ಬವಣೆ” ನಿಮ್ಮ ಓದಿಗೆ
ಮೊಗ್ಗಿನ ಕೊಂಬು ಬಾಡಾಗಿಲ್ಲೇ ಮೊಗ್ಗಿನ ಕೊಂಬು ಬಾಡಾಗಿಲ್ಲೇ
ಗೊರು ಗೊರುಕಾ ಗೊರುಕಾನಾ|ಗೊರು ಗೊರುಕಾ ಗೊರುಕಾನಾ
ಹೂವಿನ ಕೊಂಬು ಮುರಿಯಾಗಿಲ್ಲೆ
ಹೂವಿನ ಕೊಂಬು ಮುರಿಯಾಗಿಲ್ಲೇ
ಗೊರು ಗೊರುಕಾ ಗೊರುಕಾನಾ|ಗೊರು ಗೊರುಕಾ ಗೊರುಕಾನಾ
ಮೊಗ್ಗು ಮೊಗರೆಲ್ಲ ನಿನ್ನದಯ್ಯೋ
ಮೊಗ್ಗು ಮೊಗರೆಲ್ಲಾ ನಿನ್ನದಯ್ಯೋ
ಗೊರು ಗೊರುಕಾ ಗೊರುಕಾನಾ|ಗೊರು ಗೊರುಕಾ ಗೊರುಕಾನಾ||
-ಹೀಗೆ ಹಾಡಿಯ ಪದವನ್ನು ಹಾಡುತ್ತಾ ತಡರಾತ್ರಿ ದಟ್ಟಡವಿಯ ಕಾನಿನಲ್ಲಿ ಇಬ್ಬರೂ ಹೆಜ್ಜೆ ಹಾಕುತ್ತಿದ್ದರೂ. ಇನ್ನೇನು ಕೋತ್ಗಲ್ಲಡಿ ಬಂಡೆಗಳು ಹತ್ತಿರವಾಗುತ್ತಿದ್ದಂತೆ ಗಾಳಿ ಒಂದೇ ಸಮನೆ ರೊಯ್ ಎಂದು ಬೀಸಲು ಸುರುವಾಯಿತು ಎತ್ತ ನೋಡಿದರೂ ಗವ್ ಎನ್ನುವ ಕತ್ತಲು, ಜೀರುಂಡೆಗಳ ಜೇಂಕಾರ ಒಂದೆಡೆಯಾದರೆ ಮಳೆ ಬರುವ ಮುನ್ಸೂಚನೆಯಂತಿತ್ತು, ಬಿದಿರು ಮೆಳೆಗಳು ಗಾಳಿಗೆ ಮುರಿದ ಕಟಕಟ ಸದ್ದಿಗೆ ಹೆದರಿ ಉಗುಳು ನುಂಗುತ್ತಾ ಹೆಜ್ಜೆ ಕಿತ್ತಿಡದೇ ಬಿದಿರು ಮೆಳೆಗಳನ್ನೇ ದೀರ್ಘವಾಗಿ ನೋಡುತ್ತ ನಿಂತವನ ಕಡೆಗೆ ಮಂಕಾಗಿ ಉರಿವ ಸೂಟೆಯನ್ನು ತಂದು ಶಿವಣ್ಣ ಕೇಳಿದ ‘ಯಾಕ್ಲ ಅಂಗೆ ನಿತ್ಗುಂಡೆ, ಏನೂ ಇಲ್ಲ ಭಯ ಪಡ್ಬೇಡ ಬಾ ನಾನಿವ್ನಿ. ಬಿದ್ರೇ ಕಣ ಬಾ. ನಡಿ-ನಡಿ ಬೇಗ, ಇನ್ನೊಂದ್ ನಾಲ್ಕಜ್ಜೆ’ ಅಷ್ಟೇ, ಕಲ್ಲಡಿಗೆ ವಂಟೋದ್ರೆ ಆಮೇಲ್ ಮಳೆ ಬಂದ್ರು ಏನು ತೊಂದ್ರೆ ಇಲ್ಲ ಇಂಗೆ ಲೇಟ್ ಮಾಡ್ದ್ರೆ ಮಳೆ ಜೋರಾಯ್ತದೆ ಸೂಟೆ ಬೇರೆ ಯಾಕ ಈಗೆ ಉರ್ಯೂದಿಲ್ಲ ಇನ್ನ ಮಳೆ ಬಂದ್ರೆ ಕೆಟ್ಟೇ ಓಯ್ತದೆ. ಆಮೇಲ್ ಯತ್ತಾಗಂತ ಓಡೂದು ಈ ಕತ್ಲೇಲಿ. ಆನೆ-ಗೀನೆ ಬಂದ್ರೆ ಅಷ್ಟೇ ಕತೆ, ಬರೂವಾಗ ಶಂಕ್ರಣ್ಣ ಏಳ್ತು ಒಂದ್ರಾತ್ರೀಗ್ ಆಗು ಅಷ್ಟು ಸೀಮೆಣ್ಣೆ, ವಲ್ಲಿ ಬಟ್ಟೆ, ಅಮೇಲೆ ಎರ್ಡಾಳ್ಗೆ ಆಗು ಅಷ್ಟು ಉರ್ದವ್ರೆ ಕಾಳು, ರಾಗಿ ಅಸೀಟೆಲ್ಲ ಇದ್ದಾತಂತೆ ಅಲ್ಲೆ. ಯಂಗಿದ್ರು ಕಾರ್ದುಡಿ, ಉಣ್ಸೆಣ್ಣು, ಉಪ್ಪೆಲ್ಲ ನಾನೇ ಓದಪ ದೊಡ್ಡಬ್ಗೇಲಿರು ವಂಗೆ ಮರ್ದಡೀಲಿ ಬಿಂದ್ಗೇಲೆ ಕಟ್ಟಿ ಮಡ್ಗಿದ್ದೆ, ಅಂಗೆ ಎತ್ಗುಂಡ್ವಂಟೋಗುವ ಕಾರೆ ಸೊಪ್ಪು ಉಳಿ ಸಾರ್ ಮಾಡಿ ಮುದ್ದೆ ಜಡ್ಕುಣೂವ, ತಿಂದು ಮಲ್ಗ್ಬುಟ್ಟು ಮಸ್ಲೇಲೆ ಎದ್ದಿ ಹಸ ಉಡ್ಕುವ, ಹಸ ಏನಾರ ಸಿಕ್ಬುಟ್ರೆ ನಾಳೆ ಒತ್ಮುಳ್ಗೂಕು ಮುಂಚೆ ನಿಂಗೇನೇನ್ ಬೇಕ ಎಲ್ಲ ಸೌರುಸ್ಗುಂಡು ಓಗಿ ಊರ್ ಸೇರ್ಗುಣುವ, ಇಲ್ಲ ಅಂದ್ರೆ ಮಾದಯ್ಯಂಗೆ ಏಳವ್ನಿ ನಾಳೆ ಒತ್ಮುಳ್ಗೂಕು ಮುಂಚೆ ನಾವೇನಾರು ಬರ್ಲಿಲ್ಲ ಅಂದ್ರೆ ಅಲ್ಲೆಲ್ಲಾರ ಒಂದು ಎರಡೂ ಪಾಯ್ನ್ಟು ಟವರ್ ಸಿಕ್ದ್ರೆ ಪೋನ್ ಮಾಡ್ತೀನಿ, ಪೋನ್ ಮಾಡ್ಲಿಲ್ಲ ಅಂದ್ರೂ ನೀನೆ ಅಸೀಟು, ಸೀಮೆಣ್ಣೆ, ಕಾರ್ದುಡಿ ಸಾಮಾನೆಲ್ಲ ಎತ್ಗುಂಡ್ಬಂಬುಡು ಅಂತ ಬತ್ತಾನೆ. ಈಗಿರೂದ್ರಲ್ಲೇ ನಾಳೆ ಮೊದ್ದಾನ್ಕಂಟ ಅಜ್ಜೆಸ್ಟ್ ಮಾಡ್ಬೇಕು ಬೇಗ್ ಬೇಗ್ನೆ ಅಜ್ಜೆ ಆಕುʼ ಎಂದನು. ಸಣ್ಣಕ್ಕಿ ಭಯವಾಗಿದ್ದರೂ ಇಲ್ಲದಂತೆ ‘ಏ ಬಯ್ಯ ಏನಿಲ್ಲ, ಜಾಸ್ತಿ ಸದ್ದಾಯ್ತಲ್ಲ ಒಂದಪ ಅತ್ಲಾಗ್ ನೋಡ್ದೆ ಅಷ್ಟೇ. ನಾನು ಕಾಡು-ಮೇಡೆಲ್ಲ ಸುತ್ತವ್ನಿ, ಏನೂ ನಿನ್ನಷ್ಟು ಗೊತ್ತಿಲ್ಲ ಅಷ್ಟೇ ನಂಗೇನ್ ಗೊತ್ತಿಲ್ವೆ ಬಿದ್ರ್ಮೆಳೆ ಸದ್ದು. ಇವತ್ತೆ ಏನ್ ವಸ್ದಾಗಿ ಕೇಳ್ತಿದ್ದಾನೆ ಅಲ್ಲಿ, ಸೇಂದಾಗ್ ಏಳ್ದೆ ನೀನು. ತತ್ತಾ ಇಲ್ಲಿ ಒಂದ್ ಬೀಡಿಯʼ ಎಂದದ್ದು ಕೇಳಿ ಶಿವಣ್ಣ ಬೀಡಿ ಕೊಟ್ಟು ಸಣ್ಣಗೆ ನಕ್ಕು ಮುಂದೆ ನಡೆದನು. ಕಡ್ಡಿ ಗೀರಿ ಬೀಡಿ ಎಳೆಯುತ್ತ ಸಣ್ಣಕ್ಕಿ ಶಿವಣ್ಣನನ್ನೇ ಹಿಂಬಾಲಿಸಿದ ಸ್ವಲ್ಪ ಹೊತ್ತಲ್ಲೇ ಅಬ್ಬಿಗೆಯ ಬಳಿ ಬರುತ್ತಿದ್ದಂತೆಯೇ ಬಿಂದಿಗೆಯಲ್ಲಿ ಕಟ್ಟಿಟ್ಟಿದ್ದ ಸಾಮಗ್ರಿಗಳನ್ನು ಹೊರತೆಗೆದ ಶಿವಣ್ಣ ಕಟ್ಟಿದ್ದ ಲುಂಗಿಯೂರಿ ಎಲ್ಲವನ್ನೂ ಲುಂಗಿಗೆ ಸುತ್ತಿಕಟ್ಟಿ ಕಂಕುಳಿಗೆ ಇಳಿಬಿಟ್ಟ. ಹಳ್ಳದಲ್ಲಿ ಬಿಂದಿಗೆ ತೊಳೆದು ನೀರು ತುಂಬಿಸಿ ಸಣ್ಣಕ್ಕಿಯ ಹೆಗಲಿಗಿಟ್ಟು ಅವನನ್ನು ಮುಂದೆ ಬಿಟ್ಟು ದಾರಿ ಕಾಣುವ ಹಾಗೆ ಸೂಟೆಯ ಮೇಲೆತ್ತಿಡಿದು ಹೆಜ್ಜೆ ಹಾಕಿದ. ಬಂಡೆಗಳ ಬಳಿ ಬರುತ್ತಿದ್ದಂತೆಯೇ ಸೂಟೆಗೆ ಹೆದರಿ ಬಂಡೆಯ ಬಳಿಯಲ್ಲಿದ್ದ ಕರಡಿಯೊಂದು ಚೀರುತ್ತ ಓಡಿ ಹೋಗುತ್ತಿರುವುದ ನೋಡಿ ಶಿವಣ್ಣ “ಯಲಾ-ಯಲಾ ಇಡ್ಡೀರ್ಲ ಇಡ್ಡೀರ್ಲ” ಎಂದು ಗಹಗಹಿಸಿದವನನ್ನ ನೋಡಿ ಸಣ್ಣಕ್ಕಿ “ಅಯ್ಯೋ” ನನ್ನಳೇನ್ ಮಗಂದೇ ಇಲ್ಗಿಂಟ ಬಂದ್ಯೆ, ಅಸೀಟ್ ಸಾಮಾನೆಲ್ಲ ಆಳ್ಮಾಡಿದ್ರೆ ಊಟ-ಗೀಟ ಏನಿಲ್ಲ, ಇವತ್ ನೀರೆ ಗಟ್ಟಿ ನಮ್ಗೆ, ಏನಣ್ಣ ಮಾಡುದು ಊಟಕ್ಕೆ, ಹೋಗ್ ನೋಡು ಅದರ್ಪಡೆ ಅಡ್ಗಾ ಏನೇನ್ ಮಾಡಿದ್ದಾತಪ್ಪ” ಎಂದು ಬಿಂದಿಗೆಯನ್ನು ಅಲ್ಲೇ ಕೆಳಕ್ಕಿರಿಸಿ ತುಸುಹೊತ್ತು ಕುಳಿತನು. ಶಿವಣ್ಣ ಬಂಡೆಯ ಒಳಾಂಗಣಕ್ಕೆ ನುಗ್ಗಿ ಕಟ್ಟಿಗೆ, ಸೀಮೆ ಎಣ್ಣೆ, ವಲ್ಲಿ ಬಟ್ಟೆಯ ಸಹಾಯದಿಂದ ಇನ್ನೆರಡು ಸೂಟೆ ತಯಾರಿಸಿ ಬೆಳಕ ಹಚ್ಚಿ ಶಂಕ್ರಣ್ಣ ಹೇಳಿದ್ದ ಜಾಗದಲ್ಲಿ ಹುಡುಕಿದ್ದ ಕರಡಿ ಅದಾಗಷ್ಟೇ ಆಹಾರಕ್ಕೆ ಹುಡುಕಿ ಹಿಟ್ಟು ಮತ್ತು ಕಾಳಿನ ಬಳಿ ಬಂದಿತ್ತು ಎನಿಸುತ್ತದೆ ಅಷ್ಟರಲ್ಲಿ ಇವರು ಬಂಡೆಯ ಬಳಿ ಬಂದಿದ್ದರಿಂದ ಏನನ್ನೂ ತಿನ್ನದೆ ಮಣ್ಣನ್ನಷ್ಟೇ ಬಗೆದು ಓಡಿ ಹೋಗಿತ್ತು. “ಎಲ್ಲ ಅದೇ ಕಳೋ ಇನ್ನೊಂದ್ ಅತ್ನಿಮ್ಷ ಲೇಟಾಗಿದ್ರು ತಿಂದಾಕಿರೂದು.. ನಮ್ಪುಣ್ಯ ಸೆಂದಾಗದೆ, ಒಲೆ ಒಡ್ಡು, ಇಲ್ಲೆ ಒಂದಷ್ಟು ಸೌದೆ ಅದೇ” ಎಂದನು. ಶಿವಣ್ಣನ ಮಾತಿನಂತೆ ಸ್ವಲ್ಪ ಹೊತ್ತಿನಲ್ಲೇ ಸಣ್ಣಕ್ಕಿ ಒಲೆಯ ಒಡ್ಡಿ ಬೆಂಕಿ ಹಚ್ಚಿದನು. ಅಷ್ಟರಲ್ಲಿ ಶಿವಣ್ಣನ ಪೋನಿಗೆ ಮೆಸೇಜ್ ಬಂದಂತೆ ಸದ್ದಾದದ್ದು ಕೇಳಿ ಟವರ್ ಸಿಕ್ಕತೇನ ಕಳಣ್ಣ ಇಲ್ಲಿ, ಕೊಡಿಲ್ಲಿ ಮನೆಗೊಂದ್ ಪೋನ್ ಮಾಡ್ಗುಂಡ್ ಕೊಡ್ತಿನಿ ಎಂದ ಸಣ್ಣಕ್ಕಿಯ ಮಾತಿಗೆ ತನ್ನ ಚಡ್ಡಿ ಜೇಬಿನಿಂದ ಮೊಬೈಲ್ ತಗೆಯಲು ಮುಂದಾದ ಶಿವಣ್ಣ. ಅದೇ ಸಮಯಕ್ಕೆ ಮಾದಯ್ಯ ಕರೆ ಮಾಡಿದ್ದ ಅಟೆಂಡ್ ಮಾಡುವ ಹೊತ್ತಿಗೆ ಎರಡೇ ರಿಂಗಿಗೆ ಪೋನ್ ಕಟ್ಟಾಗಿತ್ತು, ಮತ್ತೆ ಮಾಡಲು ನೆಟ್ವರ್ಕ್ ಸಮಸ್ಯೆ ಆಗಿತ್ತು. ಬಂಡೆಯ ಮೇಲೆ ಹತ್ತಿದರೂ ನೆಟ್ವರ್ಕ್ ಸಿಗದಿದ್ದಾಗ ಮಾದಪ್ಪುನ್ ಬೆಟ್ದ್ಲೂ ಟವರ್ ಇಲ್ವೇನಪ್ಪ, ಇಸ್ಟ್ದಪ ಎರ್ಡ್ ಪಾಯ್ನ್ಟಾದ್ರು ಸಿಕ್ಕೂದು. ಇವತ್ತು ತಮಾಯ ಸಿಕ್ಕೂದೆ ಇಲ್ಲ. ಮಾದಯ್ಯ ಏನುಕ್ ಮಾಡಿದ್ದ ಈಗ, ಹಸ ಏನಾರು ಅಟ್ಟೀಗ್ ಬಂದ್ಬುಡ್ತ? ಯಂಗೆ ಹ್ಞೂಂ… ಅದೇನ ಆಗ್ಲಿ ಅನೀಕೆ ನೋಡುವ, ಇಂದ ಅತ್ತಾಗೆಲ್ಲಾರ ಉಡ್ಕೂ ಟವರ್ ಸಿಕ್ಕಾತೇನ ಎಂದು ಪೋನನ್ನು ಸಣ್ಣಕ್ಕಿಗೆ ಕೊಟ್ಟು ಮಡಿಕೆಯ ತೊಳೆದು ಯಸರುಕ್ಕಿಗೆ ನೀರಿಟ್ಟು ಮುದ್ದೆ ಜಡಿಯುವ ಇಟ್ಟಿನ ದೊಣ್ಣೆ ಹುಡುಕಿ ತೂ ಇದೆಲ್ಲ ಇಟ್ಟ್ನ್ದೊಣ್ಯೇ ಇಲ್ಲ ಕಳ ಇರು ತರ್ಕುಂಡ್ ಬತ್ತೀನಿ” ಎಂದು ಮಚ್ಚಿನ ಜೊತೆ ಹೊರಡುತ್ತಿದ್ದವನನ್ನು ಸಣ್ಣಕ್ಕಿ “ನಾನೆ ತರ್ಕುಂಡ್ ಬತ್ತೀನಿ ನೀನ್ ಇಲ್ಲೆ ಇರು, ಅಂಗೆ ಯಲ್ಡುಕ್ ಬರೂವಂಗದೆ ಅಬ್ಗೇ ದಿಕವೇ ಓಗ್ಬಂಬುಡ್ತೀನಿ ನೀರ್ನ ಆ ಓಡ್ಗೆ ಊಯ್ಕ ಇನ್ನೊಂದ್ ಬಿಂದ್ಗೆ ತಂದ್ಬುಡ್ತೀನಿ” ಎಂದು ನೀರನ್ನು ಕಾಲಿ ಮಾಡಿ ಬಿಂದಿಗೆ ಹಾಗು ಮಚ್ಚನ್ನು ಜೊತೆಗೆ ತೆಗೆದುಕೊಂಡು “ಪೋನೆತ್ಗುಂಡೆ ಓಯ್ತೀನಿ ಒಂದ್ ಪದ ಹಾಕೊಡು” ಇಂದ ಎಂದು ಪೋನಿನಲ್ಲಿ ಹಾಡು ಹಾಕಿಸಿಕೊಂಡು ತನ್ನ ಚಡ್ಡಿ ಜೇಬಲ್ಲಿಟ್ಟು ಸೂಟೆಯಿಡಿದು ಅಬ್ಬಿಗೆಯತ್ತ ಹೊರಟನು. ಶಿವಣ್ಣ ಪಕ್ಕದಲ್ಲೇ ಇದ್ದ ಗಿಡವೊಂದರಲ್ಲಿ ಕಾರೆ ಸೊಪ್ಪಾದರೂ ಬಿಡಿಸೋಣವೆಂದು ಆಕಾಶದತ್ತ ಒಮ್ಮೆ ತಲೆಯೆತ್ತಿ ನೋಡಿ “ಬೇಗ್ನೇ ಬಂಬುಡೋ ಲೇಟ್ ಮಾಡ್ಬೇಡ ಮಳೆ ಏನು ಬರೂವಂಗಿಲ್ಲ ಮೋಡ ಕಳ್ದೋಯ್ತು ಚುಕ್ಕಿಗುಳ್ ಕಾಣ್ತವೆ, ಅಬ್ಗೇಲಿ ಆನೆ-ಗೀನೆ ಇರ್ತವೆ ನೋಡ್ಗುಂಡ್ ಓಗು, ಹ್ಞೂಂ… ಅಂಗೇ ಆ ಫಾರೆಸ್ಟ್ನೋರು ರಾತ್ರಿಯೆಲ್ಲ ತಿರ್ಗಾಡ್ತಿರ್ತಾರೆ ಆ ತಲ್ಕೆಟ್ ಡಿಎಫ್ ಇನ್ನೇನ ರಿಟರ್ಡ್ ಆಯ್ತೀನಿ ಇಂತೆ ಟೈಮ್ ಲಿ ಯಾವ್ದಾನ ಒಳ್ಳೆ ಕೇಸೊಂದು ಸಿಕ್ಬುಟ್ರೆ ನಂಗೂ ಒಳ್ಳೇ ಗೌರವ ಸಿಕ್ತದೆ, ಕಾಡ್ದಿಕ ಹೋಗೂರ್ಮೇಲೆ ಒಂದ್ ಕಣ್ಣಿಟ್ಟಿರಿ ಅಂತ ದೊಡ್ಡೋರ್ ಜೊತೆ ಮೊನ್ನೆದಿನ ಮಾತಾಡ್ತಿದ್ನಂತೆ ಹುಷಾರು ಕಳೋ! ಆಮೇಲ್ ಅವ್ರು ಕಣ್ಗೇನಾರ ನಮ್ಮೇಲ್ ಬಿದ್ದು, ನಮ್ಮಾನ್ ಎತ್ಗುಂಡೋಗ್ ಕೂಡ್ಗೀಡ್ಬುಟ್ರೆ, ಆಯ್ಕುಂಡ್ ತಿನ್ನು ಕೋಳಿ ಕಾಲ್ಮುರ್ದಂಗೆ ಆಗೋಯ್ತದೆ ಅಷ್ಟೇ, ಕಳ್ಳ ಅವ್ನು ಕನಿಕರ ಅನ್ನೂದೆ ಇಲ್ಲ ಯಾರ್ಮ್ಯಾಲೆ ಯಾವ್ ಕೇಸಾರು ಹಾಕ್ಬುಡ್ತಾನೆ” ಎಂದದ್ದು ಕೇಳಿ “ಸರಿ-ಸರಿ ಅಂಗೇನೂ ಆಗೂದಿಲ್ಲ ಬುಡು ಅಂದ್ಸೆಂದ್ವಾಗಿ ಕಾಡ್ಲಿದ್ದೂರ್ನ ಊರಿನ್ಕಡೆ ಕಳ್ಸುದ್ರು, ಇವಾಗ ಅಲ್ಲಿರೂಕು ಬುಡ್ದೆ ಇನ್ನಿಲ್ಲಿಗ್ ಕಳ್ಸಾರು. ಆ ನಮ್ಮಪ್ಪ ಮುನ್ಸ್ವಾಮಿ ಅವ್ನೇ ಬುಡು ಎಲ್ಲ ನೋಡ್ಗುಂತಾನೆ. ನಾವಾನ ಯಾರ್ಗೇನ್ ಅನ್ನಾಯ ಮಾಡಿದ್ದಾವು? ನಮ್ಕಷ್ಟಕ್ಕೆ ಅಲ್ವ ಈ ಅಡವಿಗೆ ಬಂದುದ್ದು ಸುಮ್ನೆ ಬಂದ್ವೇ ಅಲ್ಲಿ, ನಮಗಾದ್ರೂ ಈ ಕಾಡ್ಬುಟ್ರೆ ಇನ್ನೇನ್ ಗೊತ್ತು ನಾವು ಅವ್ರೇಳ್ದಂಗೆ ಊರ್ಕಡಿಕೆ ಓಗಿವ ಅಲ್ವೇ, ಹಸ-ಕರ ಮೇಸೂಕು ಬರುವಂಗಿಲ್ಲ ಅಂದ್ರೆ ಇನ್ನೆಲ್ಲೋಗಿ ಸಾಯುವ ಹೇಳು ನಮ್ಗೆ ಅನ್ನಾಯ ಮಾಡ್ದ್ರೆ ಯಾವತ್ತು ಅವ್ರು ಉದ್ಧಾರ ಆಗೂದಿಲ್ಲ. ಈಗ ಮಾಡಿರು ಅನ್ನಾಯಕೆ ಅದ್ಯಾವ್ ಕರ್ಮ ತಿಂದಾನ ಅವ್ನು ನೋಡುವೆ ಇರು” ಎಂದು ಮಾತನಾಡುತ್ತಲೇ ಅಬ್ಬಿಗೆಯತ್ತ ಹೆಜ್ಜೆ ಹಾಕಿದನು. ಇತ್ತ ಶಿವಣ್ಣ ಕಾರೆ ಸೊಪ್ಪು ಬಿಡಿಸಿ, ಪಕ್ಕದಲ್ಲಿದ್ದ ಅರ್ಧ ಮಡಿಕೆಯ ಚಿಪ್ಪಿಗೆ ನೀರು, ಹುಣಸೆ ಹಣ್ಣು ಹಾಕಿ ಹುಳಿ ಕಲಸುತ್ತ ಒಲೆಯ ಕೆಂಡಕ್ಕೆ ಬೀಡಿ ಇಡಿದ.
ಇನ್ನೇನು ಹೆಸರುಕ್ಕು ಬಂದಾಗಿತ್ತು.
ಸಣ್ಣಕ್ಕಿ ಹೋಗಿ ಅದಾಗಲೇ ತುಂಬಾ ಹೊತ್ತಾದರೂ ಸುಳಿವೇ ಇರಲಿಲ್ಲ. ಬಂಡೆಯ ಹೊರಕ್ಕೆ ಬಂದು ನಿಶ್ಶಬ್ದವಾಗಿದ್ದ ಕಾನನವ ಕುತೂಹಲದಿಂದ ನೋಡುತ್ತ ಒಮ್ಮೆ ಜೋರು ದನಿಯಲ್ಲಿ ‘ಲೋ ಸಣ್ಣಕ್ಕಿ ಎಂದು ಕೂಗಿದ ಸದ್ದಿಗೆ ಬೃಹದಾಕಾರವಾಗಿದ್ದ ಬಂಡೆಗಳ ಒಳಗಿನ ಪಕ್ಕೆಲಬುಗಳಲ್ಲಿ ಅಡಗಿದ್ದ ನಿಶಾಚರಿಗಳೆಲ್ಲ ಒಂದೇ ಸಮನೆ ಕರ್ಕಶ ದನಿಯಲ್ಲಿ ಕೂಗುತ್ತ ಹೊರ ಹಾರಿದವೂ ಕೆಲ ನಿಮಿಷಗಳಲ್ಲಿ ಕಾಡು ಮತ್ತದೇ ಮೌನಮುರಿಯಿತು, ಆದರೆ ಅತ್ತ ಕಡೆಯಿಂದ ಯಾವುದೇ ಮರು ಉತ್ತರವೂ ಬರಲಿಲ್ಲ. ಮತ್ತೊಮ್ಮೆ, ಮಗದೊಮ್ಮೆ ಕೂಗಿದರೂ ಉತ್ತರ ಬರದ ಕಾರಣ ‘ತೂ ಎಲ್ಲೋದ್ನಪ್ಪ ಈ ನನ್ಮಗ ಇವನ್ನ ಕಟ್ಗುಂಡು ಒಳ್ಳೆ ಕಥೆ ಆಯ್ತು ನಂಗೆ, ಆ ಶಂಕ್ರಣ್ಣ-ರಂಗಣ್ಣನ್ನಾದ್ರು ಕರ್ಕುಂಬಂದಿದ್ರೇ ಇಸ್ಟೊತ್ಗೆ ಬರು ದಾರೀಲೇ ಹಸ ಉಡೀಕೊಟ್ಟಿರೂರು ಇಂತ ಟೈಮ್ ಲೇ ಅವರೂ ಊರಲ್ಲಿಲ್ಲ. ಬೇರೆ ಯಾರ್ನಾರ ಕರ್ಕುಂಡಾದ್ರು ಬರ್ಬೇಕಿತ್ತು, ಎಲ್ಲ ನನ್ನ ಕರ್ಮ ಬುಡು. ಒಂದ್ ಬೀಸು ನಾನೆ ಓಗಿ ನೋಡ್ಗುಂಬಂಬುಡೂವ” ಎಂದು ಒಲೆಯಿಂದ ಸೌದೆಳನ್ನು ಹೊರಕ್ಕೆಳೆದು ಬೆಂಕಿ ಕಮ್ಮಿ ಮಾಡಿ ಸೂಟೆಯನ್ನ ಮೂತಿಗಿಡಿದು ಬೀಡಿ ಹತ್ತಿಸಿ ಕಿತ್ತಡಿಯಿಟ್ಟ.
ಅಬ್ಬಿಗೆಯ ಬಳಿ ಬರುತ್ತಿದ್ದಂತೆಯೇ ಹಳ್ಳದ ದಂಡೆಯಲ್ಲಿ ಇಟ್ಟ ಬಿಂದಿಗೆ ಮತ್ತು ಮಚ್ಚು ಕಾಣಿಸಿದವೂ. ಅದನ್ನು ನೋಡಿದ ಶಿವಣ್ಣ ಮತ್ತೊಮ್ಮೆ ‘ಲೋ ಸಣ್ಣಕ್ಕಿ ಎಲ್ಲಿದ್ದಾಯ್ಲ’ ಎಂದು ಕೂಗಿದ. ಮರು ಉತ್ತರ ಬರಲೇ ಇಲ್ಲ. ಆದರೆ ತನ್ನ ಪೋನಿನ ರಿಂಗ್ಟೋನ್ ಮಾತ್ರ ಕೇಳಿಸಿತು. “ಹೋ ಬಡ್ಡಿಗಂಡ ಎಡ್ತಿ ಜೊತೆ ಮಾತಾಡುಕ್ ಟವರ್ ಇರು ಜಾಗ ಉಡೀಕುಂಡು ಹೋಗಿರ್ಬೇಕು ಈ ರಾತ್ರೀಲಿ ಇವ್ನಿಗ್ ಬಂದಿರು ಸುಮಾನ ನೋಡ್ದ್ಯ” ಎಂದು ನಗುತ್ತ “ಹ್ಞೂಂ… ಪಾಪ ಮಾತಾಡ್ಗುಂಡ್ ಬರ್ಲಿಬುಡು” ಎಂದು ಬಿಂದಿಗೆಗೆ ನೀರು ತುಂಬಿಸಿ ಅಬ್ಬಿಗೆಯ ಪಕ್ಕದಲ್ಲಿಯೇ ಇದ್ದ ಕಿರುಬಿದಿರ ಊಟೆಯಲ್ಲಿ ಹಿಟ್ಟಿನ ದೊಣ್ಣೆ ತರಿದು ತಂದು, ಮತ್ತೊಮ್ಮೆ ಕೂಗಿದ. ಮತ್ತೆ ಪೋನಿನ ರಿಂಗ್ಟೋನ್ ಅಷ್ಟೇ ಕೇಳಿಸಿತು. ಮತ್ತೆ ಮತ್ತೆ ಕೂಗಿದಾಗಲೆಲ್ಲ ಅತ್ತ ಕಡೆಯಿಂದ ರಿಂಗ್ಟೋನ್ ಅಷ್ಟೇ ಕೇಳಿಸುತ್ತಿತ್ತೇ ವಿನಃ ಸಣ್ಣಕ್ಕಿಯ ಮರು ಉತ್ತರವಾಗಲಿ ಸೂಟೆಯ ಬೆಳಕಾಗಲಿ ಕೇಳಿಸಲೂ ಇಲ್ಲ ಕಾಣಿಸಲೂ ಇಲ್ಲ. ಮತ್ತೊಮ್ಮೆ ಮಗದೊಮ್ಮೆ ಕೂಗುತ್ತ ಪೋನಿನ ರಿಂಗ್ಟೋನ್ ಬರುತ್ತಿದ್ದ ಕಡೆಗೆ ಹೆಜ್ಜೆ ಹಾಕಿ ಹೋದವನಿಗೆ ಅದು ಆ ಹಕ್ಕಿಯ ಕೆಲಸವೇ ಇರಬಹುದೆಂದು ಖಾತ್ರಿಯಾಯಿತು. “ಕಜ್ಜಗಲೆ” ಪಕ್ಷಿ ,ಆ ಹಕ್ಕಿ ಯಾವುದಾದರೂ ಶಬ್ದ ಅಥವಾ ಧ್ವನಿಯನ್ನ ಕೇಳಿದರೆ ಅದೇ ತರಹವಾಗಿ ಅನುಕರಣೆ (ಮಿಮಿಕ್ರಿ) ಮಾಡುತ್ತದೆ ಕೆಲಸಮಯದಲ್ಲಿ ಮನುಷ್ಯರಂತೆಯೂ ಮಾತನಾಡಿ ಜನರ ದಾರಿ ತಪ್ಪಿಸುತ್ತದೆ. ಅದನ್ನು ಸೂಕ್ಷ್ಮವಾಗಿ ಗಮನಿಸಿದ ಶಿವಣ್ಣನಿಗೆ ಎಲ್ಲಿಲ್ಲದ ಕೋಪ ಬಂದು ಅಯ್ಯೋ ನನ್ನಳೇನ್ ಮುಗ್ನು ಕಜ್ಗ್ಲೆ , “ಗೂದೇಗ್ಬಂತಂತೆ ಬರ್ಸಿಡ್ಲು” ಎಂಬ ಗಾದೆ ಮಾತಿನೊಂದಿಗೆ “ನಮ್ ಕಷ್ಟ ನಮ್ಗೆ ಅಂದ್ರೆ ನಿನ್ ಸೆಲ್ಲಾಟ ನೋಡ್ದ್ಯೇ ಇಲ್ಲಿ,” ಎಂದು ಬೈದುಕೊಂಡು ಮತ್ತದೇ ದಾರಿಗೆ ಬಿದ್ದು ತುಸು ದೂರ ನಡೆದು ಬ್ಯಾಲದ ಮರದ ಹಾದಿಯಲ್ಲಿ ಸೂಟೆ ನಂದಿರುವ ಕರಕಲು ವಾಸನೆ ಬರುತ್ತಿರುವುದ ಗಮನಿಸಿ ಮೆಲ್ಲಗೆ ಅತ್ತ ಹೆಜ್ಜೆ ಹಾಕಿದ, ಸೂಟೆ ಇನ್ನೇನು ಆರುವ ಸ್ಥಿತಿಯಲ್ಲಿ ಬಿದ್ದಿತ್ತು, ಹಾಗೆ ಸಣ್ಣಕ್ಕಿಯ ಎಡಗಾಲಿನ ಒಂದು ಚಪ್ಪಲಿ ಸಹಾ ಬಿದ್ದಿತ್ತು ಗಾಬರಿ ಒಮ್ಮೆಲೆ ಗವ್ವನೆ ಕಣ್ಣಿಗತ್ತಿತು. ಒತ್ತಾರೆ ಮನೆ ಬಿಡುವಾಗ ಶಂಕ್ರಣ್ಣ ಶಿವಣ್ಣನ ಬಳಿ ಎಚ್ಚರಿಕೆಯೊಂದನ್ನ ನೀಡಿದ್ದರು. ಅಬ್ಬಿಗೆಯ ನಿಜರಿನಲ್ಲಿರುವ ಬ್ಯಾಲದ ಮರದ ಹಾದಿಯಲ್ಲಿ ಕಿರುಬ ಒಂದಿದೆ, ಅಬ್ಬಿಗೆಯ ಕಡೆ ನಡೆದು ಹೋಗುವಾಗ ಹುಷಾರು! ಎಂದಿದ್ದರು ಅದು ನೆನಪಾಗಿ ಶಿವಣ್ಣ ನಿಂತಲ್ಲಿಯೇ ಕುಸಿದ. ಏನೇನೋ ಯೋಚಿಸುತ್ತ ಸ್ವಲ್ಪ ಸಮಯದ ನಂತರ ಎದ್ದು ರಾತ್ರಿಯಿಡೀ ಹುಡುಕಿ ಇನ್ನೇನೂ ಬೆಳಗಿನ ಜಾವದ ಹೊತ್ತಾಗಿತ್ತು. ಎಲ್ಲೂ ಏನೂ ಸುಳಿವಿಲ್ಲದಿದ್ದರಿಂದ ಒಬ್ಬಂಟಿಯಾಗಿ ಏನು ಮಾಡುವುದೆಂಬುದು ತೋಚದೆ, ಬೆಳಗಾಗಲಿ ಏನಾದರೂ ಮಾಡೋಣವೆಂದು ಹೋದ ದಾರಿಯಲ್ಲೇ ಹಿಂದಿರುಗಿ ಅಬ್ಬಿಗೆಯ ಬಳಿ ಬಂದು ದಡದಲ್ಲಿದ್ದ ಬಿಂದಿಗೆ, ದೊಣ್ಣೆ ಮತ್ತು ಮಚ್ಚನ್ನು ತೆಗೆದುಕೊಂಡು ಬಂಡೆಯ ಕಡೆಗೆ ನಡೆದನೂ.

ಗವ್ ಎನ್ನುವ ನಿಶ್ಶಬ್ದ ಕಾನನದಿ ಎತ್ತಿಂದಲೋ ಗೋಳಿಕ್ಕುತ್ತಿದ್ದ ಗುಳ್ಳೇನರಿಗಳ ಸದ್ದು, ಎದೆನಡುಕ ಹುಟ್ಟಿಸುವ ಹಾಗೆ ಪುರ್ ಎಂದು ಹಾಗಾಗ್ಗೆ ಪಕ್ಕದಲ್ಲೇ ಹಾರಿ ಹೋಗುವ ಗುಡುಗಾಡಕ್ಕಿಗಳು, ಅಬ್ಬಿಗೆಗೆ ನೀರಿಗೆ ಬಂದಿರುವ ಆನೆಗಳ ಗೀಳಿನ ಜೊತೆ-ಜೊತೆಗೆ ತಣ್ಣಗೆ ಬೀಸುತ್ತಿದ್ದ ತಂಗಾಳಿ ಒಮ್ಮೆಲೇ ಶಿವಣ್ಣನ ಮೈ ಸವರಿ ಬಿಗಿದಪ್ಪಲು ಯತ್ನಿಸಿತ್ತು. ಚಳಿಕಾಯಿಸಲೆಂದು ಪಕ್ಕದಲ್ಲೇ ಬಿದ್ದಿದ್ದ ಮರದ ಕೊಂಟಿಗೆ ಉಕ್ಕಡ ಹಾಕಿ, ಏನನ್ನೋ ಯೋಚಿಸುತ್ತ ಒಮ್ಮೆ ಮಲೆ ಮಾದೇಶ್ವರನ ದೇವಸ್ಥಾನದ ರಾಜಗೋಪುರದ ಕಡೆಗೆ ಕಣ್ಣಾಡಿಸಿ ಎದ್ದು ನಿಂತು ಅತ್ತ ತಿರುಗಿ, ಪಾಪ ಎಷ್ಟೋ ವರ್ಷುದ್ ಮೇಲೆ ಎಡ್ತಿ-ಮೊಗೀನ್ ಜೊತೆ ನೆಗ್ನೆಗ್ತಾ ಇದ್ದ, ಸಂಗ್ಡ ಯಾರು ಇಲ್ಲ ಅಂತ ಅವನ್ನ ಈ ಅಡವಿಗೆ ಕರ್ಕುಂಬಂದಿ ಕಿರ್ಬುದ್ಬಾಯಿಗೆ ಆಕ್ಬುಟ್ನಲ್ಲಪ್ಪ ಮಾದಪ್ಪ ಸಣ್ಣಕ್ಕಿನ ನೀನೆ ಕಾಪಾಡಪ್ಪ; ಅವನಿಗೆ ಏನೂ ಆಗ್ದೇ ಇರ್ಲಪ್ಪ! ಎಂದು ಎರಡೂ ಕೈ ಜೋಡಿಸಿ ದುಃಖದಿಂದ ಬೇಡಿಕೊಂಡನು. ಕೋತ್ಗಲ್ಲಡಿ ಬಂಡೆಗಳು ಮಲೆ ಮಾದೇಶ್ವರ ವನ್ಯ ಜೀವಿ ವಿಭಾಗಕ್ಕೆ ಸೇರಿದ್ದು ಮಹದೇಶ್ವರ ಬೆಟ್ಟದಿಂದ ಕಾಡು ಹಾದಿ, ಕಾಲ್ನಡಿಗೆಯಲ್ಲಿ ಎಂಟು ಮೈಲಿ ಹಾಗೆ ಅಣೇಹೊಲದಿಂದ ಏಳು ಮೈಲಿ ದೂರವಿದೆ. ಹಾಗಾಗಿ ಆ ಜಾಗಕ್ಕೆ ಮಾದಪ್ಪನ ಗೋಪುರ ಚೆನ್ನಾಗಿಯೇ ಕಾಣುತ್ತದೆ. ದನ ಮೇಯಿಸುವವರು, ಜೇನು ಕೀಳುವವರು ಹಾಗೂ ಸೌದೆಗೆ ಬಂದವರು, ಬೇರಾವುದೇ ಕೆಲಸಕ್ಕೆ ಊರಿನಿಂದ ಕಾಡಿಗೆ ಹೋದವರು ಮರಳಿ ಊರಿಗೆ ಹೋಗಲು ತಡರಾತ್ರಿಯಾದರೆ ಅವತ್ತಿನ ಆ ರಾತ್ರಿಯನ್ನು ಈ ಎರಡು ಬೃಹದಾಕಾರದ ಬಂಡೆಗಳ ನಡುವಲ್ಲೇ ಕಳೆದು ಮರುದಿನ ಮುಂಜಾನೆ ಊರಿನ ಕಡೆಗೆ ನಡೆಯುವರು. ರಾತ್ರಿ ಕಳೆಯಲು ಬೇಕಾಗುವ ಸಾಮಗ್ರಿಗಳನ್ನೆಲ್ಲ ಬರುವಾಗ ಜೊತೆಯಲ್ಲೇ ತಂದಿರುತ್ತಾರೆ. ಉಳಿದರೆ ಬಂಡೆಯ ಒಳಗೇ ಅಥವಾ ಪಕ್ಕದಲ್ಲೇ ಎಲ್ಲಾದರೂ ಪ್ಲಾಸ್ಟಿಕ್ ಅಥವಾ ವಾಹನಗಳ ಟ್ಯೂಬ್ನ ಸಹಾಯದಿಂದ ಗಟ್ಟಿಯಾಗಿ ಕಟ್ಟಿ ಮಣ್ಣಲ್ಲಿ ಹೂತಿಟ್ಟು ಸೇಕರಿಸಿಟ್ಟುಕೊಳ್ಳುತ್ತಾರೆ. ಊರಿನವರು ಯಾರೇ ಬಂದರೂ ಸಹಾ ಆ ಸಾಮಗ್ರಿಗಳನ್ನು ಉಪಯೋಗಿಸಿಕೊಳ್ಳಬಹುದು. ಯಾರೋ ಯಾಕೆ ಕಾಡುಗಳ್ಳ ವೀರಪ್ಪನ್ ಕೂಡ ತನ್ನ ಸಹಚರರೊಂದಿಗೆ ಈ ಮಾರ್ಗವಾಗಿ ಬಂದರೆ ಯಾರಾದರೂ ದನ ಕಾಯುವವರು ಆ ರಾತ್ರಿ ಇಲ್ಲಿದ್ದರೆ ಅವರನ್ನು ಹೆದರಿಸಿ ಊಟ ಮಾಡುವುದಲ್ಲದೆ ದಿನಸಿ ಸಾಮಗ್ರಿಗಳನ್ನೆಲ್ಲ ಕಸಿದು ಹೋಗುತ್ತಿದ್ದನಂತೆ.
ಅಣೇಹೊಲದ ಸೋಲಿಗರ ಸಣ್ಣಕ್ಕಿ ಯಲಚೀಕೆರೆಯ ರಂಗಿಯನ್ನು ಮದುವೆಯಾಗಿ ನಾಲ್ಕೂವರೆ ವರ್ಷ ಕಳೆದಿತ್ತು ಎಷ್ಟೇ ಆಸ್ಪತ್ರೆ, ಸುತ್ತಿದರೂ ಮಕ್ಕಳಾಗುವ ಯಾವುದೇ ಲಕ್ಷಣಗಳೂ ಕಂಡಿರಲಿಲ್ಲ. ಕೋಣನಕೆರೆಯ ಮಕ್ಕಳ ಮಾರಮ್ಮನಿಗೆ ಹರಕೆ ಮಾಡಿಕೊಂಡರೆ ಮಕ್ಕಳಾಗುವುದೆಂದು ಯಾರೋ ಹೇಳಿದ್ದನ್ನು ಕೇಳಿ ನೋಡೋಣವೆಂದು ಮುಂದಿನ ವರ್ಷ ನಿನ್ನ ಕೊಂಡೋತ್ಸವದಲ್ಲಿ ಕೆಂಡ ಮೆಟ್ಟುತ್ತೇನೆಂದು ಹರಕೆ ಮಾಡಿಕೊಂಡರು. ಪವಾಡದಂತೆ ಅದಾಗಿ ಕೆಲವೇ ತಿಂಗಳುಗಳಲ್ಲಿ ರಂಗಿ ಬಸರಿಯಾದಳು. ಒಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಆ ಮಗುವಿಗೆ ಅದೇ ಅಮ್ಮನ ಗುಡಿಯಲ್ಲೇ ಮಾರವ್ವ ಎಂದು ನಾಮಕರಣವೂ ಮಾಡಿ ಅದೇ ವರ್ಷ ಕಟ್ಟಿದ್ದ ಹರಕೆಯನ್ನೂ ತೀರಿಸಿದ್ದರೂ. ಕಣ್ಣ ಮುಂದೆಯೇ ಮಗಳು ಆಡುತ್ತಾ ಬೆಳೆಯುತ್ತಿದ್ದಳು. ಹೀಗೆ ಸಂತೋಷದಿಂದಿದ್ದ ಕುಟುಂಬದಲ್ಲಿ ಕೆಲ ದಿನಗಳಿಂದ ಮಗಳಿಗೆ ಏನೋ ಉಸಿರಾಟದ ತೊಂದರೆ ಇರುವುದಾಗಿ ಆಸ್ಪತ್ರೆಯ ಔಷಧಿಗಳು ಕೊಡಿಸಿದರು. ಗುಣವಾಗದಿದ್ದಾಗ ನಾಟಿ ಮದ್ದು ಕುಡಿಸಲು ತೀರ್ಮಾನಿಸಿ ಅದಕ್ಕೆ ಕೆಲವು ಗಿಡಮೂಲಿಕೆಗಳ ಅವಶ್ಯಕತೆ ಇದ್ದಿದುರಿಂದ ಸಣ್ಣಕ್ಕಿಗೆ ಕಾಡು-ಮೇಡಿನ ಬಗ್ಗೆ ಅಷ್ಟಾಗಿ ಅನುಭವ ಇಲ್ಲದ ಕಾರಣ ಶಿವಣ್ಣನಿಗೆ ತರಲು ಹೇಳಿದ್ದ. ಅದೇ ಸಮಯಕ್ಕೆ ಶಿವಣ್ಣನ ಮನೆಯ ಹಸು ಮೂರು ದಿನದಿಂದ ಹಟ್ಟಿಗೆ ಬಂದಿರಲಿಲ್ಲ. ಹಾಗಾಗಿ ಒಮ್ಮೆ ನೋಡಿಯೇ ಬರೋಣವೆಂದು ಶಂಕ್ರಪ್ಪ ಹಾಗೂ ರಂಗಣ್ಣನ್ನ ಸಹಾಯ ಕೇಳಲು ಮನೆಯ ಬಳಿ ಹೋದಾಗ ಅವರು ಗೌಡರ ತೋಟದ ಕೆಲಸದ ವಿಷಯವಾಗಿ ಕೊಳ್ಳೇಗಾಲಕ್ಕೆ ಹೋಗಲು ತಯಾರಾಗಿದ್ದರಂತೆ. ಹಾಗಾಗಿ ಜೊತೆಗೆ ಯಾರು ಇಲ್ಲವೆಂದು ಸಣ್ಣಕ್ಕಿಯನ್ನ ತೊಣೆಗೆ ಕರೆತಂದಿದ್ದ ಅಷ್ಟೇ. ಉಕ್ಕಡದ ಕಿಡಿ ಕೈಮೇಲೆ ಹಾರಿ ಶಿವಣ್ಣ ಯೋಚನೆಯಿಂದ ವಾಸ್ತವಕ್ಕೆ ಬಂದ.
ಅದಾಗಲೇ ಮೂಡಣದಲಿ ಸೂರ್ಯ ಉದಯಿಸುತ್ತಿದ್ದ ಹಕ್ಕಿ-ಪಕ್ಷಿಗಳ ಕಲರವ ಜೋರಾಗಿತ್ತು. ಇತ್ತ ಉಕ್ಕಡ ಹಾಕಿದ್ದ ಮರದ ಕೊಂಟು ಪೂರ್ತಿಯಾಗಿ ಬೆಂದು ಬೂದಿ ಮುಚ್ಚಿ ಹೊಗೆಯಷ್ಟೇ ಆಡುತ್ತಿತ್ತು. ಮುದ್ದೆ ಜಡಿಯಲು ಇಟ್ಟ ಯಸರುಕ್ಕೂ, ಕಲಸಿದ್ದ ಹುಳಿ ಎಲ್ಲವೂ ಹಾಗೇ ಇದ್ದವು. ಎಲ್ಲಿಂದಲೋ ಗಂಟೆ ಸದ್ದಾಗುತ್ತಿರುವುದನ್ನು ಕೇಳಿ ಶಿವಣ್ಣ ಏನೋ ನೆನಪಾಗಿ ಬೇಗನೆ ಎದ್ದು ಉಕ್ಕಡಕ್ಕೆ ನೀರು ಹಾಕಿ ಎತ್ತಲೋ ನಡೆದನು.
ಅಬ್ಬಿಗೆಯ ಹಾದಿಯಲ್ಲಿಯೇ ಹೆಜ್ಜೆ ಹಾಕಿ ಸ್ವಲ್ಪ ಹೊತ್ತಿಗೆ ಕಾಡರೆ ಮುನಿಸ್ವಾಮಿಯ ಬಯಲು ಆಲಯದ ಬಳಿ ಬಂದು ಹುಣಸೆ ಮರದ ಕೆಳಗೆ ಕುಳಿತ ಅಷ್ಟರಲ್ಲಿ ಹಳ್ಳಕ್ಕೆ ನೀರು ತರಲು ಹೋಗಿದ್ದ ತಂಬಡಿ ಮಾರಪ್ಪ ಬಂದರು ತಿಂಗಳ ಮರುಪೂಜೆಗೆಂದು ನೆನ್ನೆ ರಾತ್ರಿಯೇ ಇವರೂ ಬಂದಿದ್ದದಂತೆ, (ಹಾಡಿಯ ಜನರೆಲ್ಲರೂ ಸೇರಿ, ವರ್ಷಕ್ಕೊಮ್ಮೆ ಮಾಡುವ ಹಬ್ಬ ಮುಗಿದ ಒಂದು ತಿಂಗಳ ಅಂತರದಲ್ಲಿ ಸಾಂಪ್ರದಾಯಿಕವಾಗಿ ಯಾರಾದರೂ ಒಬ್ಬರು ಅಥವಾ ಇಬ್ಬರು ಬಂದು ಇನ್ನೊಮ್ಮೆ ಪೂಜೆ ಸಲ್ಲಿಸುವುದಕ್ಕೆ ಮರುಪೂಜೆ ಎಂಬ ಹೆಸರು) ಶಿವಣ್ಣನನ್ನು ನೋಡಿ ಹಸ ಸಿಕ್ತ್ಲ ಎಂಬ ಪ್ರಶ್ನೆಗೆ ಅಯ್ಯೋ ಹಸೀನ್ ಕಥೆ ಅಂಗಿರ್ಲಿ ಸಣ್ಣಕ್ಕಿ ಕಾಣ್ತಿಲ್ಲ ಎಂದು ನಡೆದುದ್ದೆಲ್ಲವ ವಿವರಿಸಿದನು. ತಂಬಡಿ ಬಾ ಮುನಿಸ್ವಾಮಿತವ ಪ್ರಸಾದ ಒಡ್ಡೂವ ಏನಾಗಿದ್ದಾತ ಎಂದು ಆಲಯದ ಬಳಿ ಹೊರಟರು ತಂಬಡಿಯ ಸಹಾಯಕ್ಕೆ ಬಂದಿದ್ದ ದುಂಡುಮಾದನೂ ಅಲ್ಲಿದ್ದ ಅವನಿಗೂ ವಿಷಯ ತಿಳಿಸಿ ಆತನ ಬಳಿ ಪೋನ್ ಕೇಳಿ ಆಲಯದ ಹಿಂದೆಯಿದ್ದ ಅರೆಯ ಬಳಿ ಹೋಗಿ ತನ್ನ ನಂಬರಿಗೊಮ್ಮೆ ಕರೆ ಮಾಡಿದ ಸ್ವಿಚ್ಡ್ ಆಫ್ ಬರುತ್ತಿತ್ತು. ಅಷ್ಟರಲ್ಲಿ ತಂಬಡಿ ದೇವರನ್ನು ಅಲಂಕರಿಸಿ ಹಣ್ಣು, ಕಾಯಿ ಇಟ್ಟು ಪ್ರಸಾದ ಒಡ್ಡಿದರೂ, ಪ್ರಸಾದ ಬಲಕ್ಕೆ ಕೊಟ್ಟಿತ್ತು, ಕೆಲ ಗಳಿಗೆಯಲ್ಲೇ ತಂಬಡಿಯ ಮೈಮೇಲೆ ಮುನಿಸ್ವಾಮಿ ಬಂದು ನೀವು ಮನೆ ತಲುಪುವಷ್ಟರಲ್ಲಿ ನಿನ್ನ ಮನೆಯ ಗೌರಿ ಹಾಗೂ ಆ ಬಾಲಕ ಇಬ್ಬರೂ ಸಿಗುತ್ತಾರೆ. ಈಗ ಹಿಂದಿರುಗದೇ ನಡಿ ಮಗೂ ಎದರಬೇಡ ನಾನಿದ್ದೀನಿ ಎಂದು ಎರಡು ನಿಂಬೆ ಹಣ್ಣನ್ನು ಹೊಟ್ಟೆಗೆ ಉಜ್ಜುತ್ತ ಬೇವಿನ ಎಸಳು ಹಾಗೂ ಗಿರಿ ಉಂಡೆಗಳ ಜೊತೆ ಕೈಗಿಟ್ಟಿತು. ಕೋತ್ಗಲ್ಲಡಿಯಿಂದ ಸ್ವಲ್ಪ ದೂರದಲ್ಲೇ ಈ ಬಯಲು ಆಲಯವಿದೆ. ಇಲ್ಲಿ ಪ್ರತೀ ವರ್ಷವೂ ಡೊಡ್ಡಣೆ, ಅಣೇಹೊಲ, ಕೋಣನಕೆರೆ, ಯಲಚೀಕೆರೆ, ಈಚಲಕೆಬ್ಬೆ ಹಾಗೂ ಮಲೆ ಮಾದೇಶ್ವರ ಬೆಟ್ಟದ ಸುತ್ತ-ಮುತ್ತಲಿನ ಬುಡಕಟ್ಟು ಸಮುದಾಯದವರೆಲ್ಲರೂ ಸೇರಿ ವರ್ಷಕ್ಕೊಮ್ಮೆ ಮಾಡುವ ಹಬ್ಬಗಳಲ್ಲಿ ತಾವು ಕಷ್ಟಪಟ್ಟು ಬೆಳೆದು ಒಕ್ಕಣೆ ಮಾಡಿದ ಫಸಲನ್ನು ಮನೆ ತುಂಬಿಸಿಕೊಳ್ಳುವಾಗ ಈ ಸಂಭ್ರಮದ ಅಂಗವಾಗಿ ಬೆಳೆದ ಆಹಾರ ಪದಾರ್ಥಗಳ ಒಂದು ಭಾಗವನ್ನು ವೃಕ್ಷ, ಕಲ್ಲು, ವನ್ಯಮೃಗ, ನೀರು ಮುಂತಾದವುಗಳಿಗೆ ಎಡೆ ಇಟ್ಟು ಅರಣ್ಯದಲ್ಲೇ ಸಿಗುವ ಕಚ್ಚಾ ಧೂಪ, ಕಾಡು ಸಾಂಬ್ರಾಣಿ, ಹೂವು, ಹಣ್ಣುಗಳನ್ನಿಟ್ಟು ಪೂಜೆ ಸಲ್ಲಿಸಿ, ಬಳಿಕ ಗಿರಿಜನರೆಲ್ಲರೂ ಸಂಭ್ರಮದಿಂದ ಹಾಡಿ-ಕುಣಿದು ಕೊನೆಗೆ ಸಾಮೂಹಿಕವಾಗಿ ಭೋಜನ ಸವಿಯುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ರೂಢಿ. ಹಲವು ತಲೆಮಾರುಗಳಿಂದಲೂ ಈ ಭಾಗದಲ್ಲಿ ರೊಟ್ಟಿ ಹಬ್ಬ, ಮುನಿಸ್ವಾಮಿ ಹಬ್ಬ, ಮಾರಿ ಹಬ್ಬವನ್ನು ಚಾಚೂತಪ್ಪದೇ ಆಚರಿಸಿಕೊಂಡು ಬರಲಾಗುತ್ತಿದೆ.
ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲು ಇವರಿಗೆ ಸಾಧ್ಯತೆಗಳು ಕಡಿಮೆ ಇರುವುದರಿಂದ ವಿಶಿಷ್ಟ ಆಚರಣೆಗಳಿಗೆ ಒತ್ತು ನೀಡುವ ಇವರು ಹಾಡಿಯೊಳಗಿರುವ ಗಿಡ, ಮರ, ಕಲ್ಲುಗಳಿಗೆ ಪೂಜೆ ಸಲ್ಲಿಸಿ ಹಬ್ಬ ಆಚರಿಸುತ್ತಿದ್ದರು. ಮೊದಲು ಕಾಡು ಪ್ರಾಣಿಗಳಿಗೆ ಎಡೆ ಇಟ್ಟು ಅವು ತಿಂದು ಹೋದ ನಂತರ ಹಾಡಿಯ ಜನರೆಲ್ಲರೂ ಸಹಭೋಜನ ಮಾಡುತ್ತಿದ್ದರು.
“ಪ್ರಕೃತಿ ಆರಾಧನೆ” ಇವರಿಗೆ ಪೂಜನೀಯ ಭಾವನೆ ತಂದಿದ್ದು. ಇವರು ತಿನ್ನುವ ಆಹಾರವನ್ನು ವನ್ಯಜೀವಿಗಳಿಗೂ ನೀಡುವುದರಿಂದ ಅವುಗಳಿಂದ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂಬ ನಂಬಿಕೆ ಇಂದಿಗೂ ಗಟ್ಟಿಯಾಗಿದೆ. ಪೂರ್ವಜರ ಕಾಲದಿಂದ ಸಂಪ್ರದಾಯಕ್ಕೆ ಬದ್ಧವಾಗಿ ಹಬ್ಬ ಆಚರಿಸುತ್ತಿದ್ದು, ಸಂಪ್ರದಾಯ ಪಾಲನೆಯಿಂದ ಮುಂದಿನ ಪೀಳಿಗೆಯ ಮಕ್ಕಳು ಅರಣ್ಯದೊಳಗೆ ಸ್ವಚ್ಛಂದವಾಗಿ ಯಾವುದೇ ಅವಘಡಗಳಿಗೆ ತುತ್ತಾಗದೆ ಓಡಾಡಿ ಕೊಂಡಿರುತ್ತಾರೆ ಎಂಬ ನಂಬಿಕೆ ಇವರದ್ದು.
ಕೆಲವು ವರ್ಷಗಳ ಹಿಂದೆ ಆದಿವಾಸಿ ಬುಡಕಟ್ಟು ಸೋಲಿಗರ ಹಲವು ಹಾಡಿಗಳು ಇಲ್ಲೇ ಇದ್ದವೂ. ಕರ್ನಾಟಕ ಸರ್ಕಾರ ಹಾಗೂ ಅರಣ್ಯ ಇಲಾಖೆಯವರ ಕಟ್ಟು-ನಿಟ್ಟಿನ ಕ್ರಮಗಳಿಂದ ಕ್ರಮೇಣ ಇವರೆಲ್ಲರೂ ಊರಿನ ಕಡೆ ಸ್ಥಳಾಂತರವಾದರು, ಆದರೂ ವಾಡಿಕೆಯಂತೆ ಪ್ರತಿ ವರ್ಷವೂ ಇಲ್ಲಿಗೆ ಬಂದು ಅರಣ್ಯಾಧಿಕಾರಿಗಳ ವಿರೋಧದ ನಡುವೆಯೂ ಹೇಗೋ ಅನುವು ಮಾಡಿಕೊಂಡು ಹಬ್ಬಗಳನ್ನು ಆಚರಿಸುತ್ತಾರೆ.
ಕೊನೆಗೂ ಶಿವಣ್ಣ ಸ್ವಲ್ಪ ಅರಾಮವಾಗಿ ನಿಟ್ಟುಸಿರು ಬಿಟ್ಟ, ರಾತ್ರಿಯಿಂದ ಏನೂ ತಿಂದಿರದ ಕಾರಣ ತುಂಬಾ ಹಸಿವಾಗಿತ್ತು. ಆಲಯದಲ್ಲಿ ನೀಡಿದ ಪ್ರಸಾದ ತಿಂದು ಸ್ವಲ್ಪಮಟ್ಟಿಗೆ ಸಮಾಧಾನವಾಗಿ ಕೈ ಮುಗಿದು ಮೂವರು ಅಲ್ಲಿಂದಲೇ ಹಾಗೆ ಮಾತನಾಡುತ್ತ ಊರಕಡೆಗೆ ನಡೆದರು. ಇನ್ನೇನು ಹೆಬ್ಬಿದರು ಹಳ್ಳ, ಹೊಂಗೆ ಹಳ್ಳದ ಮಾರ್ಗವಾಗಿ ಹುಣಸೇ ಕೊಂಬಿನ ಹಳ್ಳ ಹತ್ತಿರವಾಗುತ್ತಿದ್ದಂತೆಯೇ ದೊಡ್ಡಕೆರೆಗೆ ಹೋಗುವ ಕಾಲು ದಾರಿಯ ತಿರುವಿನ ಬಳಿ ವೇಗವಾಗಿ ಬಂದ ಅರಣ್ಯಾಧಿಕಾರಿಗಳ ಜೀಪೊಂದು ಸರ್ರನೆ ಬಂದು ಇವರ ಮುಂದೆ ನಿಂತಿತು, ಜೀಪಿನಿಂದ ಇಳಿದ ಇಬ್ಬರು ಗಾರ್ಡ್ ಗಳು ನೋಡ-ನೋಡುತ್ತಿದ್ದ ಹಾಗೆಯೇ ಸದಾಸುಮ್ಮನೆ ಏನೂ ಕಾರಣವೇ ಹೇಳದೆಯೇ ಶಿವಣ್ಣನ ಹೆಗಲು ಪಟ್ಟಿಗೆ ಕೈ-ಹಾಕಿ ಹೊಲಸು ಪದಗಳಲ್ಲಿ ಬೈಯುತ್ತಾ ತಂಬಡಿ ಹಾಗೂ ಸಂಗಡಿಗ ದುಂಡುಮಾದನ ಸಮೇತ ಜೀಪಿಗೆ ತುಂಬಿಕೊಂಡು ಬಂದದಾರಿಯಲ್ಲೇ ಜೀಪನ್ನು ತಿರುವಿ ಹೊರಟೇ ಬಿಟ್ಟರೂ.
ಮಲೆ ಮಾದೇಶ್ವರ ಬೆಟ್ಟದ ಫಾರೆಸ್ಟ್ ಆಫೀಸಿನ ಕಾಂಪೌಂಡ್ ಒಳಗಡೆ ಸಣ್ಣಕ್ಕಿ ಕೈ-ಕಾಲು ಕಟ್ಟಿದ ಸ್ಥಿತಿಯಲ್ಲಿ ಅರೆ ಬೆತ್ತಲಾಗಿ ಅಧಿಕಾರಿಗಳು ಕೊಟ್ಟ ಬಾಸುಂಡೆಗಳ ಬಳುವಳಿಯ ಜೊತೆಗೆ ಅಸಹಾಯಕನಾಗಿ ಬಿದ್ದಿದ್ದ, ಸಣ್ಣಕ್ಕಿಯ ಹೆಂಡತಿಯ ಜೊತೆಗೆ ಸಂಬಂದಿಕರು ಆಕ್ರಂದನ ಅದಾಗಲೇ ಮುಗಿಲು ಮುಟ್ಟಿತ್ತು. ಊರಿನವರೆಲ್ಲ ಫಾರೆಸ್ಟ್ ಆಫೀಸಿನ ಮುಂದೆ ಅದಾಗಲೇ ದೌಡಾಯಿಸಿ ಕುತೂಹಲದಿಂದ ನೋಡುತ್ತಿದ್ದರು. ಪ್ರಶ್ನೆ ಮಾಡಿದವರಿಗೆಲ್ಲಾ ನೆನ್ನೆ ತಡರಾತ್ರಿ ಸಣ್ಣಕ್ಕಿ ಹಾಗೂ ಇನ್ನೂ ಮೂವರು ಬೇಟೆಗೆಂದು ಕಾಡಿಗೆ ತೆರಳಿದ್ದಾಗ ಗಸ್ತಿನಲ್ಲಿದ್ದ ವಾಚರ್ ಗಳ ಕೈಗೆ ಇವನೊಬ್ಬ ಬಂದೂಕಿನ ಜೊತೆ ಸಿಕ್ಕಿಬಿದ್ದನಂತೆ ಎಂಬ ಕಥೆ ಕಟ್ಟಿದರು, ಊರಿನ ಗೌಡ ಹಾಗೂ ಕೆಲವು ಮೇಲ್ಜಾತಿಯ ಮುಖಂಡರುಗಳು, ಡಿಎಫ್ಓಹಾಗೂ ರೇಂಜರ್ ಜೊತೆಗೆ ಆತ್ಮೀಯವಾಗಿ ಮಾತನಾಡುತ್ತಾ ಕಛೇರಿಯ ಒಳಗೆ ಅಧಿಕಾರಿಯ ನಿವೃತ್ತಿಯ ಸಲುವಾಗಿ ಗೌರವ ಸನ್ಮಾನ ಸಮಾರಂಭ ಏರ್ಪಡಿಸುವುದರಲ್ಲಿ ನಿರತರಾಗಿದ್ದರು. ಶಿವಣ್ಣ ಹಾಗೂ ಸಂಗಡಿಗರನ್ನು ಕರೆತಂದ ಜೀಪು ಇನ್ನೇನು ಕಛೇರಿ ಮುಂಭಾಗದಲ್ಲಿ ಬಂದಿದ್ದೆ ತಡ ಅವರಿಗೂ ಮನಸೋ ಇಚ್ಛೆ ಹೊಡೆದು ಅರ್ಧ ಬೆತ್ತಲಾಗಿಸಿ ಡಿಎಫ್ಓ, ರೇಜರ್, ಗಾರ್ಡ್ ಗಳು ಹಾಗೂ ಸಿಬ್ಬಂದಿ ವರ್ಗದವರ ಜೊತೆಗೆ ಊರಿನ ಕೆಲವು ಮುಖಂಡರುಗಳ ಸಮಾಗಮದಲ್ಲಿ ಶಿವಣ್ಣ, ಸಣ್ಣಕ್ಕಿ, ತಂಬಡಿ ಹಾಗು ದುಂಡು ಮಾದನ ಕೈಯಲ್ಲಿ ಬಂದೂಕುಗಳನ್ನು ಇರಿಸಿ ಅವರ ಮುಂದೆ ಗಂಧದ ಮರ, ಜಿಂಕೆಯ ಮಾಂಸವನ್ನಿಟ್ಟು ಸುತ್ತಲೂ ನಿಂತು ವೀರಾವೇಶದಿಂದ ಪೋಟೋಗೆ ಪೋಸ್ ಕೊಡುತ್ತಿದ್ದರೆ, ಇದಾವುದರ ಅರಿವೇ ಇಲ್ಲದ ಸಣ್ಣಕ್ಕಿಯ ಪುಟ್ಟ ಕಂದಮ್ಮ ಸಣ್ಣಕ್ಕಿ ಆಗಾಗ ಹಾಡುತ್ತಿದ್ದ ಪದವನ್ನು ಪಿಸು ದನಿಯಲ್ಲಿ ಒಳಗೊಳಗೇ ಗುನುಗುತ್ತಾ ಪ್ರಜ್ಞೆ ತಪ್ಪಿತ್ತು.
ದೊಡ್ಡ ಸಂಪಿಗೆ ನನ್ನೊಡೆಯ ದೊಡ್ಡ ಸಂಪಿಗೆ ನನ್ನೊಡೆಯ
ಗೊರು ಗೊರುಕಾ ಗೊರುಕಾನಾ| ಗೊರು ಗೊರುಕಾ ಗೊರುಕಾನಾ
ಕಾತು ಕಾಪಾಡಿ ಮಡಗೂನಯ್ಯ ಕಾತು ಕಾಪಾಡಿ ಮಡಗೂನಯ್ಯ
ಗೊರು ಗೊರುಕಾ ಗೊರುಕಾನಾ|ಗೊರು ಗೊರುಕಾ ಗೊರುಕಾನಾ
ಇನ್ನಿಂತ ವರ್ಷ ಬಾರನಯ್ಯೋ ಇನ್ನಿಂತ ವರ್ಷ ಬಾರನಯ್ಯೋ
ಗೊರು ಗೊರುಕಾ ಗೊರುಕಾನಾ|ಗೊರು ಗೊರುಕಾ ಗೊರುಕಾನಾ||
ಮರುದಿನ ಮುಂಜಾನೆಯ ಪತ್ರಿಕಾ ವರದಿಯಲ್ಲಿ ಪೋಟೋದ ಜೊತೆಗೆ ಕಾಡುಗಳ್ಳ ವೀರಪ್ಪನ್ ಉಪಟಳ ಅವನ ಹತ್ಯೆಯ ನಂತರ ಕಮ್ಮಿಯಾಗಿದ್ದರೂ ಸಹಾ ಇನ್ನೂ ಕೆಲವು ದುಷ್ಕರ್ಮಿಗಳು ಕಾಡಿನಲ್ಲಿ ಮತ್ತೆ ಅಟ್ಟಹಾಸವನ್ನ ಮೆರೆಯುತ್ತಲೇ ಇದ್ದಾರೆ ನೆನ್ನೆ ತಡರಾತ್ರಿ ಮಲೆ ಮಾದೇಶ್ವರ ವನ್ಯಜೀವಿ ವಿಭಾಗಕ್ಕೆ ಸೇರಿದ ಕೋತ್ಗಲ್ಲಡಿ ಅರಣ್ಯ ಪ್ರದೇಶದಲ್ಲಿ ಗಂಧದ ಮರ ಹಾಗೂ ಜಿಂಕೆ ಮಾಂಸದ ಕಳ್ಳ ಸಾಗಣೆ ಮಾಡುತ್ತಿದ್ದು, ಊರಿನ ಸ್ಥಳಿಯರಿಂದಲೇ ಈ ವಿಷಯವನ್ನು ತಿಳಿದ ಅರಣ್ಯಾಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ದಾವಿಸಿ ಮಾಲು ಸಮೇತ ನಾಲ್ವರನ್ನು ಬಂಧಿಸುವುದರಲ್ಲಿ ಯಶಸ್ವಿಯಾದರು. ನಿವೃತ್ತಿಯ ಸಮಯದಲ್ಲೂ ಛಲ ಬಿಡದೆ ಇಂತಹಾ ಸಾಹಸಕ್ಕೆ ಕೈ ಹಾಕಿದ ಡಿಎಫ್ಓ ಗೆ ಮೇಲಾಧಿಕಾರಿಗಳು ಅಭಿನಂದನೆಗಳನ್ನು ಸಲ್ಲಿಸಿದರು ಎಂಬ ಶುದ್ಧಿ ಬಿತ್ತರಿಯಾಗಿತ್ತು.

ಇತ್ತಕಡೆ ಶಿವಣ್ಣನ ಮನೆಯ ಹಸು ಕಾಡರೆ ಮುನಿಸ್ವಾಮಿಯ ಬಯಲು ಆಲಯದ ಮುಂದೆ ನೆನ್ನೆ ಎಡೆಯಿಟ್ಟು ಹೋಗಿದ್ದ ರೊಟ್ಟಿ ಪ್ರಸಾದವನ್ನು ನಾಲಿಗೆ ಚಪ್ಪರಿಸುತ್ತಾ ತಿನ್ನುತ್ತಿದ್ದರೆ ಮುನಿಸ್ವಾಮಿ ಹಾಡಿಯ ಮಕ್ಕಳು ಇನ್ಯಾವಾಗ ಬಂದು ದೀಪ ಹಚ್ಚಿ ಎಡೆ ಇಡುತ್ತಾರೋ ಎಂಬ ದಿನಗಣನೆಯ ಲೆಕ್ಕಾಚಾರದಲ್ಲೇ ದಾರಿನೋಡುತ್ತಾ ಮೌನ ಮುರಿದಿದ್ದರು.

ಮಹಾದೇವ್ ಪೊನ್ನಾಚಿ (ಮಹಾದೇವ ಸ್ವಾಮಿ.ಸಿ), ಮೂಲತಃ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ ಪೊನ್ನಾಚಿಯವರು. ಪ್ರಸ್ತುತ ವೃತ್ತಿ,ಬೆಂಗಳೂರಿನ ಪ್ರಸಿದ್ದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ. “ಕಾಣದೆ ಉಳಿದ ಮೌನವೆ ನೀನು”, “ನಾಳೆ ಇಲ್ಲದ ಬವಣೆ” (ಕಥಾಸಂಕಲನಗಳು), ‘ಖಾಸಗಿ ಕನಸುಗಳು ಮಾರಾಟಕ್ಕಿವೆ” ಎಂಬ ಕಾದಂಬರಿ, ಎರಡು ಪುಸ್ತಕಗಳು ಮುದ್ರಣದ ಹಂತದಲ್ಲಿವೆ… ಆಂದೋಲನ, ಜಾನಪದ ತಿಜೋರಿ, ಸಾತ್ವಿ ಮತ್ತು ಕುಮಾರದೊರೆ, ಪತ್ರಿಕೆಗಳಲ್ಲಿ ಹಲವಾರು ಲೇಖನಗಳು ಪ್ರಕಟಣೆಯನ್ನು ಕಂಡಿವೆ. ಬುಕ್ ಬ್ರಹ್ಮ ಸ್ವಾಂತಂತ್ರ್ಯೋತ್ಸವ ಕಥಾ ಸ್ಪರ್ಧೆ-2024ರಲ್ಲಿ ಅವರ ‘ಅಳಿದವರು ಕಂಡಂತೆ ಉಳಿದವರ ಕಥೆ” ಮೆಚ್ಚುಗೆ ಬಹುಮಾನ ಪಡೆದಿದೆ.

